Friday, December 16, 2011

ತಿಂಗಳಿಗೊಂದು ಪುಟ #೧


ವೃತ್ತ  -  ಊರು 


ಎಕ್ಸ್. ಕೆ. ಮರಸರ ಹಡಪದ್ ವರ್ಣಿಸಿದ ಊರು :

ಊರು ಶುರುವಾಗುವದು ಎಲ್ಲಿಂದ ಎನ್ನುವದು ಅಥವಾ ಊರು ಎಲ್ಲಿ ಮುಕ್ತಾಯಗೊಳ್ಳುತ್ತದೆ ಎನ್ನುವದರ ಸಲುವಾಗಿ ಸರ್ಕಾರಿ ದಾಖಲೆಗಳು ಇದ್ದರೂ , ಪ್ರತಿ ವರ್ಷ ಊರು ಬದಲಾಗುತ್ತ , ಉದ್ದವಾಗುತ್ತಾ , ಅಗಲವಾಗುತ್ತಾ , ಹಿಗ್ಗುತ್ತಾ ಹೋಗಿದ್ದರಿಂದ ಊರಿನ ಗಡಿ ಯಾವುದು ಎನ್ನುವದರ ಕುರಿತು ಸ್ಪಷ್ಟ ಮಾಹಿತಿ ಕೊಡುವದು ಕಷ್ಟವಾಗುತಿತ್ತು.  ನಾಗರಿಕತೆಯ ಲಕ್ಷಣಗಳು ಪ್ರಾರಂಭವಾದಾಗ ಊರಿನ ಉಗಮವಾಗುತಿತ್ತು ಹಾಗೂ ಅದೇ ನಾಗರಿಕತೆಯ ಲಕ್ಷಣಗಳು ಊರಿನ ಕೊನೆಗೂ ಇರುತ್ತಿದ್ದವು. ಕೆಲವೊಮ್ಮೆ ಇದು ಅದಲು ಬದಲು ಆಗುತ್ತಿದ್ದವು. ಕೊನೆ ಮೊದಲಾಗೂ ಮೊದಲು ಕೊನೆಯಾಗೂ ಇರುತ್ತಿದ್ದವು. ಊರು ಬೆಳೆಯುತಿತ್ತು ಅಥವಾ ಜನರು ಬೆಳೆಯುತ್ತಿದ್ದರು. ಜನ ಬೆಳೆದಂತೆ ಊರು ಬೆಳೆಯಿತು. ಊರಿಗೆ ತನ್ನದೇ ಆದ ಗುಣ ಲಕ್ಷಣಗಳು ಇದ್ದವು ಹಾಗೂ ಅದನ್ನು ಆ ಊರಿನ ಜನ ಇಲ್ಲವೆಂಬಂತೆ ಕಡೆಗಣಿಸಿದ್ದರು. ಈ ಊರು ಬೇರೆ ಊರುಗಳಂತೆ, ತನ್ನದೇ ಆದ ಅಕ್ಷಾಂಕ್ಷ , ರೇಖಾಂಕ್ಷಗಳನ್ನು ಹೊಂದಿತ್ತು. ಇಲ್ಲಿನ ಜನ ಅದರ ಪರಿವೆಯೇ ಇಲ್ಲದೇ, ತಮ್ಮದೇ ಅಕ್ಷಾಂಕ್ಷ ಗಳಲ್ಲಿ ಬೇರೆ ಬೇರೆಯವರ ರೇಖಾಂಕ್ಷಗಳಲ್ಲಿ ಬದುಕುತ್ತಿದ್ದರು. ಇವರು ಅವರ ರೇಖೆಗಳಲ್ಲಿ , ಅವರು ಇವರ ರೇಖೆಗಳಲ್ಲಿ ಒಬ್ಬರನ್ನೊಬ್ಬರನ್ನು ಹುಡುಕುತ್ತಾ , ಸಿಕ್ಕರೂ ಸಿಕ್ಕಿದುರ ಪರಿವೆ ಇಲ್ಲದೇ , ಮನಸು ಮನಸುಗಳ ನಡುವೆ ಸಮಭಾಜಕ ವೃತ್ತ ನಿರ್ಮಿಸಿ ಬದುಕುತ್ತಿದ್ದರು.
ಊರಿನ ಒಳಗೆ ಪ್ರವೇಶಿಸಲು ರಸ್ತೆಯಿತ್ತು, ಆ ರಸ್ತೆ ಬೇರೆ ಯಾವುದೋ ಒಂದು ಊರಿನಿ೦ದ ಪ್ರಾರಂಭವಾಗಿ , ಇನ್ಯಾವುದೋ ಊರಿಗೆ ಹೋಗಿ ಈ ಊರಿಗೆ ಬಂದು ಇಲ್ಲಿನ ಮೂಲಕ  ಮತ್ಯಾವುದೋ ಊರಿಗೆ ಹೋಗುತಿತ್ತು. ಈ ರಸ್ತೆ ಬಹಳ ವಿಸ್ಮಯಕಾರಿಯಾಗಿಯೂ , ನಿಗೂಢವಾಗಿಯು ಇತ್ತು, ರಸ್ತೆ ಎಲ್ಲಿಗೂ ಹೋಗದೇ ಚಲಿಸುತಿತ್ತು. ರಸ್ತೆ ನೀವು ಇದ್ದಲ್ಲೇ ಇರುತಿತ್ತು , ನೀವು ಹೋದಲ್ಲೇ ಹೋಗುತಿತ್ತು. ಆದರೂ ಅದಕ್ಕೆ ಚಲನೆಯಿಲ್ಲದ ಚಲನೆ ಇತ್ತು. ಇಂತ ರಸ್ತೆಯೊಂದು ಈ ಊರಿಗೂ ಇತ್ತು. ಮುಖ್ಯ ರಸ್ತೆ ಊರನ್ನು  ಸಮವಲ್ಲದ ಎರಡು ಭಾಗವಾಗಿ ವಿಭಜಿಸಿತ್ತು. ಸಮವಲ್ಲದ ಎರಡು ಭಾಗಗಳಲ್ಲಿ ಅಸಮ ಮನಸ್ಕ ಜನ ವಾಸವಾಗಿದ್ದರು. ಮುಖ್ಯ ರಸ್ತೆಯ ಮರಿ ರಸ್ತೆ , ಮಕ್ಕಳು ರಸ್ತೆ  ಹಾಗೂ ಅವುಗಳ ಸಂಬಂಧಿ ರಸ್ತೆಗಳು ಸಂಪೂರ್ಣ ಊರನ್ನ ಆವರಿಸಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ಮುಚ್ಚಿದ , ಆಳವಿರದ ಕಾಲುವೆಗಳಿದ್ದವು ಮತ್ತು ಅವುಗಳಲ್ಲಿ ಸಾರಾಯಿ ಪಾಕಿಟುಗಳು ಇದ್ದವು. ಇನ್ನು ಹಲವು ಕಡೆ ಎರಡು ಕಾಲಿನ , ನಾಲ್ಕು ಕಾಲಿನ ಪ್ರಾಣಿಗಳ ವಿಸರ್ಜನೆಗಳಿದ್ದವು. ರಸ್ತೆ ಇಳುಕಲಿನಲ್ಲಿ ಜನರನ್ನು , ವಾಹನಗಳನ್ನು ಓಡುವಂತೆಯೂ , ಏರಿನಲ್ಲಿ ನಿಧಾನವಾಗುವಂತೆಯೂ , ತಿರುವಿನಲ್ಲಿ ಹುಷಾರಾಗಿ ಹೋಗುವಂತೆಯೂ ಮಾಡುತಿತ್ತು.  ರಸ್ತೆಯ ಬಡತವನ್ನು ,ಸಿರಿತನವನ್ನೂ ಇಟ್ಟುಕೊಂಡು ಪ್ರತಿ ವರ್ಷ ರಾಜಕಾರಣಿಗಳು ಓಟು ಕೇಳುತಿದ್ದರು. ರಸ್ತೆಯಮೈ ಮೇಲೆ ಅಲ್ಲಲ್ಲಿ ಗುಳ್ಳೆಗಳು  ಎದ್ದು ಒಡೆದಿದ್ದವು.
 ಇಂತಹ ರಸ್ತೆಯನ್ನು ಜನ ಹೋಗಲು , ಬರಲು , ಅಡ್ಡಾಡಲು , ತಿರುಗಾಡಲು , ನಿಂತುಕೊಳ್ಳಲು ಹಾಗೂ ಇನ್ನೂ ಹಲವಾರು ಕೆಲಸಗಳಿಗೆ ಬಳಸುತಿದ್ದರು. ಊರಿನಲ್ಲಿ ಸಾವುಗಳು , ಮರಣಗಳು ಸಂಭವಿಸುತ್ತಿದ್ದವು. ಇಂತಹ ಸಂದರ್ಭಗಳಲ್ಲಿ ಜನ ಹೆಣವನ್ನು ಊರ ಹೊರಗಿರುವ ಸ್ಮಶಾನಕ್ಕೆ ಒಯ್ಯುತ್ತಿದ್ದರು. ಹಾಗೆ ಆದಾಗ ಊರಿನ ಜನ ಕೆಲವೊಮ್ಮೆ ಅಳುತಿದ್ದರು. ಊರಿಗೆ ಅಥವಾ ಊರಿನಿ೦ದ  ಜನ ಬರುತಿದ್ದರು , ಜನ ಹೋಗುತಿದ್ದರು , ದನ ಕರುಗಳು ಇದ್ದವು , ಹಾಗೂ ಸಾಯುತ್ತಿದ್ದವು. ಊರಿನಲ್ಲಿ ಹಲವಾರು ನಾಯಿಗಳು ಇದ್ದವು. ಅವು ಯಾವತ್ತೂ ಓಡುತ್ತಾ ಅಥವಾ ಮಲಗುತ್ತಾ ಅಥವಾ ಬೊಗಳುತ್ತಾ ಇದ್ದವು. ಊರಿನಲ್ಲಿ ಮಣ್ಣು ಕಪ್ಪು , ಕಂದು , ಅರೆ ಬಿಳಿ ಮತ್ತು ಹೇಳಲಿಕ್ಕಾಗದ ಇನ್ನೂ ಕೆಲವು ಬಣ್ಣಗಳಲ್ಲಿ ಇತ್ತು.  ಊರಿನ ಸುತ್ತ ದಟ್ಟವಾದ ಕಾಡು ಬೆಳೆದಿತ್ತು. ಊರಿನ ಗಡಿ ಬೆಳೆದಂತೆ ಕಾಡಿನ ಗಡಿ ಕಡಿಮೆಯಾಗುತ್ತಿತ್ತು. ಜನರು ಊರಿನ ಮೇಲೆ ಊರು ಕಾಡಿನ ಮೇಲೆ ಕಾಲ ಕಾಲಕ್ಕೆ ಅವ್ಯಾಹಿತವಾಗಿ ಅತ್ಯಾಚಾರ ಮಾಡಿಕೊಂಡು , ಸ್ವಲ್ಪ ದಿನಕ್ಕೆ ಮೊದಲಿನಂತೆ ಆಗಿ ಬದುಕುತ್ತಾ ಸಾಯುತ್ತಾ ಇದ್ದವು. ಊರಿನ ಮೇಲೆ ಎಲ್ಲ ಕಡೆ ಇರುವಂತೆ ಆಕಾಶವಿತ್ತು. ಕೆಲವೊಮ್ಮೆ ಧೋ ಎಂದು ಆಕಾಶ ಊರಿನ ಮೇಲೆ ಸ್ಖಲಿಸುತ್ತಿತ್ತು.  ಪ್ರತಿ ಮಳೆಗಾಲದ ಪ್ರಾರಂಭವನ್ನೂ ಊರು ಪ್ರಥಮ ರಾತ್ರಿಗೆ ಕಾಯುವ ವಧುವಿನಂತೆ ಕಾಯುತ್ತಿತ್ತು. ಮಿಲನದ ಪ್ರತಿ ಕೊನೆಗೆ ಊರು ಘಮ ವನ್ನು ಸೂಸುತ್ತಿದ್ದಳು. ಕೆಲವೊಮ್ಮೆ ಆಕಾಶದ ದಾಹ ಹೆಚ್ಚಾದಾಗ ಆಗಸದ ಅಬ್ಬರ ಜಾಸ್ತಿಯಾಗುತ್ತಿತ್ತು. ಆಗಲೂ ಊರು ಮೌನವಾಗಿ ಸಹಿಸುತ್ತಿತ್ತು. ಕೊಚ್ಚಿ ಹೋಗುವದು ಊರು ಆಗಿದ್ದರೂ ಜನ ಅಳುತ್ತಿದ್ದರು. 

Wednesday, October 19, 2011

ಬೆತ್ತಲು

ಕಟ ಲಟ ಪಟ ಚಟ
ಸದ್ದುಗದ್ದಲದ ಆಸ್ಪತ್ರೆಯ ಸ್ಟ್ರೆಚರ್ನ ಮೇಲೆ ,
ಕ೦ಡೂ ಕಾಣದ ಬಿಳಿಯ ಹೊದಿಕೆಯ ಒಳಗೆ
ಶಬ್ಧವಿಲ್ಲದೇ ಮಲಗಿದ್ದಾಳೆ 
ವಿಠೋಬಾನ ಮಗಳು.
ಅಲ್ಲಿ ,
ಗಿರಾಕಿಗಳಿಲ್ಲದ , ವಿಠೋಬಾನ ಭಜ್ಜಿ ಥಣ್ಣಗಾಗುತ್ತಿವೆ .
ಇಲ್ಲಿ,
ಉಸಿರಿಲ್ಲದೇ ವಿಠೋಬಾನ ಮಗಳು ಥಣ್ಣಗಾಗಿದ್ದಾಳೆ.
******
ಶ್! ನನಗೂ ಗೊತ್ತು 
ವಿಠೋಬಾನ ಭಜ್ಜಿ ಸ್ವಲ್ಪ ಉಪ್ಪಾಗಿದೆ ,
ಸುಮ್ಮನಿರಿ ದಮ್ಮಯ್ಯ .
ಆಸ್ಪತ್ರೆಯ ಬಿಲ್ಲಿನಲ್ಲೆ ಭಜ್ಜಿ ಕಟ್ಟಿ ಕೊಟ್ಟಿದ್ದಾನೆ.
ಒಂದೆರಡು ಹನಿ ಕಣ್ಣೀರು 
ಕಟ್ಟಿದ ಬಿಲ್ಲಿನ ಮೇಲೆ ಬಿದ್ದಿರಲಿಕ್ಕೂ ಸಾಕು..!
*********
ಸಿಡಿಮಿಡಿಗೊಳ್ಳುತ್ತಿದ್ದಾರೆ ಆಸ್ಪತ್ರೆಯ ಸಿಸ್ಟರ್ ಗಳು ,
ಭಜ್ಜಿ ಅಂಗಡಿಯ ವಿಠೋಬಾನ ಬಳಿ 
ಭಕ್ಷಿಸು ಸಿಗಲಾರದು.
ಯಾಕಾದಾರೂ ಬರುತ್ತಾವೋ ಇಂತವು !!
*******
ವಿಠೋಬಾನ ಮಗಳಿಗೆ 
ಹೃದಯದಲ್ಲಿ ತೂತಾಗಿತ್ತ೦ತೆ .
ಥೋ! ಮಾರಾಯ ನೋಡಬೇಕಿತ್ತು
ತೂತು ಕೆನ್ನೆ ಮೇಲಿನ ಮಚ್ಚೆಯಷ್ಟು ಸಣ್ಣದೆ?
ಸತ್ತು ಹೋದರೆ ಬೇರೊಬ್ಬಳ ಹುಡುಕಬೇಕು .
 ಮಾತುಗಳು ಸಾಯುವದೆ ಇಲ್ಲ
ದೇಹ ಸಾಯುತ್ತವೆ.!
****
ಒಳಗೆ ,
ಪೂರ್ತಿಯಾಗಿ ಸತ್ತಿದ್ದಾಳೆ
ವಿಠೋಬಾನ ಮಗಳು , ಐದು ಅಡಿ ಉದ್ದಕ್ಕೆ
ಹೊರಗೆ ,
ಆರು ಅಡಿ ಉದ್ದಕ್ಕೆ ಇಂಚಿಂಚಾಗಿ ಸಾಯುತ್ತಿದ್ದಾನೆ
ವಿಠೋಬ . 
ಚಿಂತೆಯಿಲ್ಲ ಬಿಡಿ , 
ಚಿತೆಗೆ ಸಾಕಾಗುವಷ್ಟು ಬಿಲ್ಲುಗಳು ಇನ್ನೂ ಬಾಕಿ ಇವೆ
ಬರ್ರನೇ ಉರಿಯುತ್ತವೆ
ಒಳಗೂ , ಹೊರಗು..!

Saturday, September 17, 2011

ಶ್ರೀ ಕ್ಷೇತ್ರ ಬಾಲ ಮಹಾತ್ಮೆ

ಸೊಂಟ , ಬೆನ್ನು ಮೂಳೆ (ಬೆನ್ನಿನೊಟ್ಟಿಗೆ) ಹಾಗೂ ಪೃಷ್ಟ ಸೇರುವ , ಸೇರಿ ನಿರ್ಮಿಸುವ , ಹೌದೊ ಅಲ್ಲವೊ ಎಂಬಂತೆ ಇರುವ ತ್ರಿಕೋನದಲ್ಲಿ , ತ್ರಿಕೋನದ ತುತ್ತ ತುದಿಯ ಬಿಂದುವಿನಲ್ಲಿ , ಆ ಬಿಂದುವಿನಿಂದ ಭೂಮಿಗೆ ಸಮಾನಾಂತರವಾಗಿ , ಕಾಲು ಮತ್ತು ಬೆನ್ನಿಗೆ ಲಂಬವಾಗಿ ಮೊಸರುದ್ದೀನರಿಗೆ ಬಾಲವೊಂದು ಬೆಳೆದಿತ್ತು.

**************************************************************************
ಪ್ರಿಯ ಓದುಗರೇ ,
ನಿಮಗೆ ಪಾತ್ರ ಪರಿಚಯವಾಗಲಿ ಎಂದು ಒಂದಷ್ಟು ಮಾಹಿತಿ ಕೊಡುತ್ತೇನೆ. ಶ್ರೀಯುತರಾದ ಮೊಸರುದ್ದೀನರು ಅವರ ಪರಮ ಪೂಜ್ಯರಿಗೆ ಪ್ರಥಮ ಹಾಗೂ ಕೊನೆಯ ಪುತ್ರ ರತ್ನರು. ಶ್ರೀಯುತರ ಜನನವಾದದ್ದು ಶಿಮೊಗ್ಗ ಜಿಲ್ಲೆಯ ನಾಗರ ತಾಲ್ಲೂಕಿನ ಹಳ್ಳಿಯೊಂದರಲ್ಲಿ. ಬಹುಕಾಲದಿಂದ ಪುತ್ರೋತ್ಸವದ ನಿರಿಕ್ಷೆಯಲ್ಲಿ ಇದ್ದ ಕುಟುಂಬದಲ್ಲಿ ಶ್ರೀದೇವರ ಮೊಸರು ಪ್ರಸಾದ ತಿಂದು ಜನಿಸಿದ ಕುಲೋದ್ದಾರಕನಿಗೆ ಮೊಸರು ಪ್ರಸಾದದ ನೆನಪಿಗಾಗಿ ಮೊಸರುದ್ದೀನ ಎಂದು ನಾಮಕರಣ ಮಾಡಲಾಯಿತು ಎಂದು ಅವರ ಪರಮಪೂಜ್ಯರು ಆಗಾಗ ಹೇಳುವದುಂಟು. ಪ್ರಾಯ ಹತ್ತುವ ತನಕ ತವರಿನಲ್ಲೇ ವ್ಯಾಸಂಗ ಮಾಡಿದ ಮೊಸರುದ್ದೀನರು ತದನಂತರ 'ಉನ್ನತ' ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಸದ್ಯ ಸಿ,ಎ. ಪ್ರಾಕ್ಟೀಸ್ ನಡೆಸುತ್ತಿರುವ ಇವರು ಗಾಂಧಿಬಜ಼ಾರಿನ ಸಂದಿಯೊಂದರಲ್ಲಿ ಮನೆ ಮಾಡಿಕೊ0ಡು ಆಗಾಗ ಸಂದಿಯೊಳಗೆ ಇಣುಕುವ ಕೆಲಸ ಮಾಡುತ್ತಾರೆ. ಇವಿಷ್ಟೂ ವ್ಯಕ್ತಿ ಪರಿಚಯ. ಇನ್ನು ರೂಪ ಪರಿಚಯಕ್ಕೆ  ಬಂದರೆ ಇವರಿಗೂ ಕಣ್ಣು , ಕಿವಿ , ಬಾಯೀ ನಾಲಗೆ ಇತ್ಯಾದಿಗಳನ್ನು ಒಳಗೊಂಡ ನವರಂಧ್ರಗಳಿವೆ. ಉಳಿದವರಿಗಿಂತ ಭಿನ್ನವಾದದ್ದೆಂದರೆ ಹಿಂಭಾಗದಲ್ಲಿ ಬೆಳೆಯುತ್ತಿರುವ ಬಾಲ
ಮೊಸರುದ್ದೀನರು ಸದಾ ಕಾಲ ಚಟುವಟಿಕೆಯಲ್ಲಿ ನಿರತರಾಗಿರುವ ವ್ಯಕ್ತಿ. ಅವರ ಬಲಗೈ ಆಗಾಗ ಮೂಗಿನೊಳಗೆ ತೆರಳಿ , ದೇಹಕ್ಕೆ ಪ್ರಾಣವಾಯು ಸಂಚರಿಸಿದ  ಮಾರ್ಗವು ಸದಾಕಾಲ ಪರಿಶುದ್ದವಾಗಿರುವಂತೆ ನೋಡಿಕೊಳ್ಳುತ್ತದೆ. ಈಕೆಲಸ   ಮುಗಿದ ತಕ್ಷಣ ಬಲಗೈ ಕಿರುಬೆರಳನ್ನು ನೇರವಾಗಿಸಿ ಉಳಿದೆಲ್ಲ ಬೆರಳುಗಳನ್ನ ಮಡಚಿ , ಕೈಯನ್ನು  ಡ್ರಿಲ್ ಮಶಿನಿನ ಹಾಗೆ ಕಿವಿಯಾಳಕ್ಕೆ ಇಳಿ ಬಿಡುತ್ತಾರೆ. ಒಳಗಿಳಿದ ಬೆರಳನ್ನು ಹಾಗೂ ತಲೆಯನ್ನು ಒಂದು ನಾದಬದ್ದವಾದ ರೀತಿಯಲ್ಲಿ ವಿಶಿಷ್ಟವಾಗಿ ಕುಣಿಸುತ್ತಾರೆ. ಇಂತಹ ಸಮಯದಲ್ಲಿ ಅವರ ಕಣ್ಣು ಅರೆ ತೆರೆದಿರುತ್ತದೆ. ಮೂಗಿನ ಹೊಳ್ಳೆಗಳು ಸ್ವಲ್ಪ ಅಗಲವಾಗುತ್ತವೆ. ದವಡೆ ಬಿಗಿದಿರುತ್ತದೆ.

ಹಲವು ಸೆಕೆಂಡುಗಳ ಕಾಲ ಇದೆ ಕ್ರಿಯೆ ಮುಂದುವರಿಸಿ ನಂತರ ಯಾವುದೋ ಒಂದು ಲುಪ್ತ ಕಾಲದಲ್ಲಿ ಬೇಚೈನುಗೊಂಡವರಂತೆ ತಟ್ಟನೆ ಕಿರು ಬೆರಳನ್ನು ಹೊರಕ್ಕೆ ಎಳೆದು , ಬೆಳಕಿಗೆ ಅಡ್ಡವಾಗಿ ಹಿಡಿದು , ಉಗುರಿನ ತುದಿಗೆ ಸ್ಪಾಂಜಿನಂತಹ ಅರೆ ತೇವ ಮಿಶ್ರಿತವಾದದ್ದು ಏನಾದರೂ  ಇದೆಯ ಎಂದು ಪರೀಕ್ಷಿಸುತ್ತಾರೆ. ತದನಂತರ ಕೈಯನ್ನು ಜೇಬಿನೊಳಗೆ ಇಳಿಬಿಟ್ಟು ಬೆರಳುಗಳನ್ನ ಶುಚಿಗೊಳಿಸುತ್ತಾರೆ. ಇತ್ತೀಚಿಗೆ ಈ ಕೆಲಸ ಮಾಡುವಾಗ ಬಾಲ ಅಲ್ಲಾಡುತ್ತಿದೆ ಎಂಬ ಶಂಕೆ ಅವರಿಗೆ ಬಲವಾಗ ಹತ್ತಿದೆ. ಮೊಸರುದ್ದೀನರ ಎಡಗೈ ಸಧ್ಯಕ್ಕೆ ಆಗಾಗ ಬಾಲದ ಯೋಗಕ್ಷೇಮ ನೋಡಿಕೊಳ್ಳುತ್ತದೆ. ಅದರ ಜೊತೆಗೆ ಎಡಗೈಗೆ ತನ್ನದೇ ಆದ ಕೆಲಸವನ್ನು ಮೊಸರುದ್ದೀನರು ವಹಿಸಿಕೊಟ್ಟಿದ್ದಾರೆ. ಬಹುವಾಗಿ ಬೆವರುವ ಬೇಸಿಗೆಯ ದಿನಗಳಲ್ಲಿ ಮೊಸರುದ್ದೀನರು  ಎಡಗೈ ಕಂಕುಳವನ್ನು ಮುಚ್ಚಿದ ಅಂಗಿಯ ಭಾಗವನ್ನು ಎಡಗೈ ಹೆಬ್ಬೆರಳು ಹಾಗೂ ತೋರುಬೆರಳಿನಿಂದ ಎಳೆದು ಎರಡು ಭುಜಗಳನ್ನು ಮೇಲಕ್ಕೆ ಎತ್ತಿ ಉಫ್..! ಎಂದ ಕಾಲರಿನ ಭಾಗದಿಂದ ಕಂಕುಳದ ಕಡೆಗೆ ಗಾಳಿ ಕಳುಹಿಸುತ್ತಾರೆ. ಹೀಗೆ ಹಲವು ಬಾರಿ ಮಾಡಿದ ನಂತರ ಕುತ್ತಿಗೆಯನ್ನು ತಿರುಗಿಸಿ ಲಟಕ್ಕನೆ ಸದ್ದು ಮಾಡುತ್ತಾರೆ.

**************************************************************************

 ಮೊಸರುದ್ದೀನರಿಗೆ ಬಾಲ ಯಾವತ್ತಿನಿಂದ ಬೆಳೆಯಿತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಒಂದು ದಿನ ಮುಂಜಾನೆ ಹೊಟ್ಟೆಯನ್ನು ಚಾವಣಿಯತ್ತ ಮಾಡಿ , ಬೆನ್ನನ್ನು ಬೆಡ್ಗೆ  ಒತ್ತಿ ಮಲಗಿದ್ದ ಮೊಸರುದ್ದೀನರಿಗೆ , ಬೆನ್ನಿನ ತಳ ಭಾಗದಲ್ಲಿ ಒಮ್ಮೆಗೇ ಸಾವಿರ ಸಾವಿರ ಸೂಜಿಗಳು ಚುಚ್ಚಿದಂತಾಗಿ ಅಮ್ಮಾ..! ಎಂದು ನರಳಿದರು. ಹೀಗೆ ಒಮ್ಮೆಲೇ ಸಂಕಟ ಕೊಡತೊಡಗಿದ ಆ ಭಾಗವನ್ನು ಸವರಿ ಮುದ್ದು ಮಾಡಲು ತಮ್ಮ ಪ್ರಿಯ ಎಡಗೈ ಅನ್ನು , ಸೂಜಿ ಚುಚ್ಚಿದಂತೆ ಭಾಸವಾಗುತ್ತಿದ್ದ ಭಾಗಕ್ಕೆ , ಶಬ್ದವೇದಿಯಂತೆ ನೂಕಲಾಗಿ , ಮೊಸರುದ್ದೀನರ ಕೈಗೆ ಮೊದಲೇ ಹೇಳಿದ ತ್ರಿಕೋನದ ಭಾಗದಲ್ಲಿ ಕೊಳವೆಯಾಕಾರದ ರಚನೆ ಸಿಕ್ಕು ಒಮ್ಮೆಲೇ ಬೆಚ್ಚಿಬಿದ್ದರು. ಮತ್ತೊಮ್ಮೆ, ಮಗದೊಮ್ಮೆ ಕೈಯನ್ನು ಅತ್ತ ಕಡೆ ಕಳುಹಿಸಿ ಪರೀಕ್ಷಿಸಿದರು. ಆ ಕ್ಷಣಕ್ಕೆ ಮೊಸರುದ್ದೀನರಿಗೆ ಬಂದ ಯೋಚನೆಯೆಂದರೆ, ಜನಿವಾರ ಹಾಗೂ ಉಡಿದಾರಗಳು ಮಿಲನವಾಗಿ ,  ಪ್ರಣಯದ ತುದಿಯಲ್ಲಿ ತಮ್ಮ ತಮ್ಮ ಸ್ಥಾನಗಳಿಂದ  ಪಲ್ಲಟವಾಗಿ ಅಲ್ಲಿ ಬಂದು ಕುಳಿತಿವೆಯೇ? ಹಾಗೇನಾದರೂ ಆಗಿದ್ದರೂ ಅವಕ್ಕೆ ಸ್ಪರ್ಶದ ಅರಿವು ಬಂದಿದ್ದು ಹೇಗೆ? ಅಥವಾ ತಾನು ಹುಟ್ಟಿದ ಲಾಗಾಯ್ತಿನಿಂದ ಇರುವ ಉಡಿದಾರ ಹಾಗೂ ಹಾಕಿದಾಗಿನಿಂದ  ಬದಲಾಯಿಸದೇ ಇದ್ದ ಜನಿವಾರ ಇವೆರಡು ಹಲವಾರು ವರ್ಷಗಳಿಂದ  ದೇಹದಲ್ಲೇ ಇದ್ದು , ತನ್ನ ಶರೀರಕ್ಕೆ ಇವು ತನ್ನದೇ ಅವಯವಗಳು ಎಂದು ಗೊಂದಲ ಉಂಟಾಗಿ , ಅವು ತನ್ನ ದೇಹದ ಭಾಗಗಳೆ ಆಗಿವೆಯೇ? ಹೀಗೆಲ್ಲ ಚಿಂತಿಸುತ್ತಿರುವಾಗಲೇ ಮತ್ತೊಮ್ಮೆ ಸೂಜಿ ಚುಚ್ಚಿದ ಅನುಭವವಾಯಿತು. ಈ ಬಾರಿ ತಡ ಮಾಡದೇ ಮೊಸರುದ್ದೀನರು ಹೊಟ್ಟೆಯನ್ನು ಸ್ವಲ್ಪ ಮೇಲಕ್ಕೆ ಎತ್ತಿ , ನಿಧಾನವಾಗಿ ಮತ್ತೆ ತ್ರಿಕೋನದ ಕಡೆಗೆ ಕೈಯನ್ನು ಕಳುಹಿಸಿದರು. ಈ ಬಾರಿ ಕೈ ತ್ರಿಕೋನದ ಭಾಗದಲ್ಲಿ ಅಹೋ ರಾತ್ರಿ ಉದ್ಭವವಾಗಿದ್ದ ಕೊಳವೆಯಾಕಾರದ ರಚನೆಯನ್ನು ಸವರಿ ಅದರ ಲಕ್ಷಣಗಳನ್ನು ಮೆದುಳಿಗೆ ರವಾನಿಸಿತು. ಈಗ ನಿಜಕ್ಕೂ ಮೊಸರುದ್ದೀನರು  ಕಂಗಾಲಾದರೂ.ಇದ್ದಕ್ಕಿದ್ದಂತೆ ಇದು ಬಂದದ್ದಾದರೂ ಹೇಗೆ? ತನ್ನದೇ ದೇಹದ ಭಾಗವೊಂದು ಇನ್ನೊಂದರ ಜೊತೆಗೆ ಅಕ್ರಮ ಸಂಬಂಧ ಬೆಳೆಸಿ , ತನಗೆ ಗೊತ್ತಾಗದಂತೆ ನಡೆಸಿದ ಕ್ರಿಯೆಯ ಫಲವೇ ಇದು? ಛೇ! ಹಾಗೆ ಇರಲಾರದು. ಆದರೂ ತನ್ನ ಅರಿವು ಇಲ್ಲದೇನೆ , ಗಾಳಿ ಬೆಳಕು ಪ್ರವೇಶಿಸದ , ಸದಾ ಕಾಲ ಒತ್ತಡ ಅನುಭವಿಸುವ , ಅರೆ ತೇವದ ಆ ಜಾಗದಲ್ಲಿ ಇದು ಬೆಳೆದಿದ್ದಾದರೂ  ಹೇಗೆ? ಇಷ್ಟಕ್ಕು ತಾನು ಅತ್ತ ಕಡೆ ತನ್ನ ಕೈ ಕಳುಹಿಸದೇ ಏಷ್ಟು ದಿನಗಳಾದವು?  ಸರಿ ಬೆಳೆಯುವದೇನೊ ಬೆಳೆದಿದೆ , ಆದರೆ ಇದಕ್ಕೆ ಏನಂತ ಕರೆಯುವದು? ಕ್ಲಿಷ್ಟ ಪದ ಕೋಶ ದಲ್ಲಿ ಇದೆಯೇ? ಎಂದೆಲ್ಲ ವಿಚಾರಗಳು ಮು ತ್ತಿಮೊಸರುದ್ದೀನರು  ಕಂಗಾಲಾದರು.

**************************************************************************

  ಈ ಒಂದು ಚಿಂತೆಯಲ್ಲೇ ನಿತ್ಯವಿಧಿಗಳನ್ನು ಆತುರಾತುರವಾಗಿ ಮುಗಿಸಿ ,ಯಾವುದಕ್ಕೂ ಎಸ್.ಬಿ.ಟಿ. ಯನ್ನು ಒಮ್ಮೆ ಕೇಳಿಯೆ ಬಿಡುವ   ಎಂದು ದೂರವಾಣಿ ಕರೆ ಮಾಡಿದರು.
:ಹೇಲ್ಲೋ"
"ಹ್ವಾಯ್"
ನಾನು ಮೊಸರು"
ನಾನು ಹಾಲು..!
"ತ್ತೋ.! ನಾನಾ ಮೊಸರುದ್ದೀನ.
ಒಹೋಹೋ ಏನಾ ಬೆಳಿಗ್ಗೆ ಬೆಳಿಗ್ಗೆ..
" ಹ್ಮ್..! ಮಾರಾಯ ಇಲ್ಲಿ ಏನೋ ಆಗಿದೆ.
ಎಲ್ಲಿ
ಇಲ್ಲಿ
ತತ್.! ನನಗೆ ಹೇಗೆ ಗೊತ್ತಗಬೇಕು ಇಲ್ಲಿ ಅಂದರೆ?
ಮೊಸರುದ್ದೀನರು  ನಾಚಿದರು. ಹೇಳಲಿಕ್ಕೆ  ಸಂಕೋಚ
ಮೌನ... ಮೌನ.. ಉಸಿರಾಟ..
ಕೊನೆಗೂ ಮೊಸರುದ್ದೀನರು  ವಿವರಿಸಿದರು.
 ಎಸ್.ಬಿ.ಟಿ. " ನೋಡು , ಮೊಸರು ,ಈಗ ತೊಂದರೆ ಇರುವದು ಅದು ಯಾಕೆ ಬಂತು , ಹೇಗೆ ಬಂತು ಅಂತ ಅಲ್ಲ. ಅದಕ್ಕೆ ಏನಂತ ಹೇಳಬೇಕು ಎಂದು"
ಹ್ಮ್
ಅದು ಹೇಗಿದೆ?
ಹಾಗೆ ಇದೆ.
ದಪ್ಪವಾಗಿದೆಯೋ?
ಇಲ್ಲ
ಉದ್ದವಾಗಿದೆಯೋ?
ಇಲ್ಲ.! ಸುಮಾರು 12 ಸೆ.ಮಿ.
ಮೆತ್ತಗಿದೆಯೋ
ಹೌದು..
ತುದಿ ಚೂಪು ಇದೆಯೋ?
ಇಲ್ಲ ಕೈ ಬೆರಳಿನಂತೆ ಇದೆ.
ಯಾವ ಆಕೃತಿ?
ಕೊಳವೆಯಂತೆ ಅನ್ನಿಸುತ್ತದೆ.
ಅನ್ನಿಸುವದೇನು? ನೋಡಿಲ್ಲವೊ?
ಇಲ್ಲ. ಹಿಂದೆ ಇದೆ . ನೋಡುವದು ಹೇಗೆ?
ಸರಿ. ಕನ್ನಡಿ ನೆಲಕ್ಕೆ ಇಟ್ಟು ತುದಿ ಕಾಲಲ್ಲಿ ಕುಳಿತು ನೋಡಲಿಕ್ಕೆ ಪ್ರಯತ್ನಿಸು. ತಾತ್ಕಾಲಿಕವಾಗಿ ಅದಕ್ಕೆ ಬಾಲ ಎನ್ನೋಣ. ಅಲ್ಲವೇ
ಸರಿ ಮುಂದೆ ?
ಅರೆ..! ಮುಂದಿನದಕ್ಕೆ ಏನಾಯ್ತು?
ಹಾಗಲ್ಲ ಮಾರಾಯ ಮುಂದಿನ ಕಥೆ ಏನು?
ಚಿಂತನೆ.. ವಿಚಾರ.. ಮೌನ ,.... ಉಸಿರಾಟ..
ಡಾಕ್ಟರ್ ಗೆ ತೋರ್ಸು.

**************************************************************************

ಬಹುವಿಧ ಚಿಂತನೆಯ ನಂತರ ಮೊಸರುದ್ದೀನರು ಬಾಲದ ವಿಚಾರವಾಗಿ  ಜ್ಯೊತಿಷಿಯೊಬ್ಬರ ಕಾಣಲು ತೀರ್ಮಾನಿಸಿದರು. ಈ  ನಡುವೆ ಮೊಸರುದ್ದೀನರನ್ನು ಕಾಡಿದ ಸಂಗತಿ ಅವರ ಮದುವೆಯ ವಿಷಯ. ವಧುವರಾನ್ವೇಷಣೆಗೆ ಜಾಹೀರಾತು ಕೊಡುವದು ಹೇಗೆ? ಹೆಸರು :ಮೊಸರುದ್ದೀನ ಕೆಲಸ ಮಾಡಲಿಕ್ಕೆ ತಯ್ಯಾರೂ. ...... ಎತ್ತರ 5.5 ದಪ್ಪ ಸ್ವಲ್ಪ ಇರುವ ಸಿ.ಎ. ಪ್ರಾಕ್ಟಿಸ್ ಮಾಡುತ್ತಿರುವ ಸುಂದರವಾದ ಬಾಲವುಳ್ಳ ಗಂಡಿಗೆ , ಬಾಲವಿರುವ ಯಾ ಇಲ್ಲದಿರುವ ಅನುರೂಪಳಾದ ಕನ್ಯೆ ಬೇಕಾಗಿದ್ದಾಳೆ. ಹೀಗೆ ಕೊಟ್ಟರೆ ಸರಿಯಾದೀತೋ ? ಬಾಲ ತನ್ನ ದೇಹಕ್ಕೆ ತೂಕ ಕೊಟ್ಟಂತೆ , ವ್ಯಕ್ತಿತ್ವಕ್ಕೂ ತೂಕ ಕೊಡುತ್ತಿದೆಯೇ? ಆದರೂ ಸುಂದರ ಬಾಲ ಎಂಬ ಶಬ್ದ ಪ್ರಯೋಗ ಸರಿಯಾದೀತೇ? ತಾನು ಅದನ್ನು ನೋಡೆ ಇಲ್ಲ. ಮುಂದೆ ಪತ್ನಿಯಾಗಿ ಬರುವವಳಿಗೆ ಅದು ಇಷ್ಟವಾದಿತೆ? ಸದ್ಯಕ್ಕೆ ಬಾಲ ಅಷ್ಟು ಉದ್ದ ಇಲ್ಲ. ಆದರೆ ಕಾಲ ಕಳೆದಂತೆ ಅದು ಬೆಳೆದು ದೊಡ್ಡದಾಗಿ ಉದ್ದವಾದರೆ ಪ್ಯಾಂಟ್ ಹೊಲಿಸು ವಾಗಅದಕ್ಕೂ ಒಂದು ಕೊಳವೆಯಾಕರದ ಜೇಬು ಇಡಬೇಕೆ. ಆದರೆ ಬಾಲ ಬೆಳೆದರೆ ಕುಳಿತುಕೊಳ್ಳುವುದಾದರೂ ಹೇಗೆ? ಬಾಲ ಕೊಳವೆಯಾಕಾರದಲ್ಲಿ ಇರುವದರಿಂದ , ಕುಳಿತುಕೊಂಡರೆ ಬಸ್ ಸ್ಟಾಪಿನಲ್ಲಿ ಸರಳಿನ ಮೇಲೆ ಕುಳಿತ ಹಾಗೆ ಆಗುವದಿಲ್ಲವೇ? ಹೀಗೆ ಯೋಚನೆಗಳು ಬೃಹದಾಕಾರವಾಗಿ ಬೆಳೆದು ಮೊಸರುದ್ದೀನನ್ನು ಜ್ಯೋತಿಷಿಗಳ ಬಳಿ ಎಳೆದು ತಂದವು.

**************************************************************************
ಜ್ಯೋತಿಷಿಗಳ ಜೊತೆ ನಡೆದ ಮಾತುಕತೆಯ ಸಂಕ್ಷಿಪ್ತ ವರದಿ.
ಹತ್ತು ಹಲವು ಗಿಣಿತ-ಗುಣಿತ ತರ್ಕ ಕವಡೆ , ಪಂಚಾಗದ ನಂತರ ಮೊಸರುದ್ದೀನರ ಬಳಿ ಹೀಗೆ ಹೇಳಿದರು.
"ಮೊಸರುದ್ದೀನರಿಗೆ ಈ ಬಾಲ ಬಂದಿದ್ದು ಅವರ ಪೂರ್ವಜರ ಪಾಪ ಕರ್ಮದಿಂದ. ಮೊಸರುದ್ದೀನರ ವಂಶಕ್ಕೆ ಈ ಶಾಪ ಬಂದಿದ್ದು ಶ್ರೀ ಆಂಜನೇಯನಿಂದ. ಮಹಾಭಾರತದಲ್ಲಿ ಭೀಮಸೇನ ಸೌಗಂಧಿಕಾ ಪುಷ್ಪ ತರಲು ಹೋದಾಗ ಶ್ರೀ ಆಂಜನೇಯ ಸ್ವಾಮಿ , ಕಪಿಯ ವೇಷದಲ್ಲಿ ದಾರಿಗೆ ಅಡ್ಡವಾಗಿ ಮಲಗಿದ ಕಥೆ ಗೊತ್ತೇ ಇದೆ.  ಅವತ್ತು ಭೀಮಸೇನನಿಗೆ ಶ್ರೀ ಆಂಜನೇಯ ಸ್ವಾಮಿ ಬಾಲವನ್ನು ಸರಿಸುವ ಸಲುವಾಗಿ ಅಲ್ಲೇ ಹತ್ತಿರಕ್ಕೆ ಬಹಿರ್ದೇಸೆಗೆ ಬಂದಿದ್ದ ಮೊಸರುದ್ದೀನರ ಪೂರ್ವಜರು , ಕೂಲಿಗಾಗಿ 'ನೀರು' ಯೊಜನೆಯಡಿ ಭೀಮಸೆನನಿಗೆಶ್ರೀ ಆಂಜನೇಯ ಸ್ವಾಮಿ ಬಾಲ ಎತ್ತುವ ಯತ್ನದಲ್ಲಿ ಸಹಕರಿಸಿದ್ದರು.ಹೀಗಾಗಿ ಕೋಪಗೊಂಡ ಹನುಮಂತ ದೇವರು ಶ್ರೀಯುತರ ವಂಶದವರಿಗೆ ಬಾಲ ಬರಲಿ ಎಂದು ಶಾಪ ಕೊಟ್ಟಿದ್ದರು. ಕೊನೆಗೆ ಪೂರ್ವಜರ ಮೇಲೆ ಕರುಣೆ ತೋರಿ , ಅವರ ವಂಶದಲ್ಲಿ ಯಾರಾದರೊಬ್ಬರಿಗೆ ಬಾಲ ಬರಲಿ ಎಂದು ಮಾಫಿ ಕೊಟ್ಟಿದ್ದರು. ಆ ಶಾಪದ ಫಲವೇ ಈ ಬಾಲ.

**************************************************************************
ಹೀಗೆ ತ್ರಿಕೋನದಲ್ಲಿ ಬಾಲ ಹೊತ್ತ ಮೊಸರುದ್ದೀನರು ಮಾರ್ಕೆಟಿನ ಸಲೀಮ ಭಾಯ್ ಹತ್ತಿರ ಮೂಲವ್ಯಾಧಿ ಮೊಳಕೆ ತೆಗೆಯುವ ಚಿಕಿತ್ಸೇಯಿಂದ ಆದಿಯಾಗಿ ಎಲ್ಲ ಪೂಜೆ ಪುನಸ್ಕಾರವನ್ನು ಮಾಡಿ ಯಾವುದೂ ಫಲಿಸದೇ , ಡಾಕ್ಟರರನ್ನು ಭೇಟಿಯಾಗಲಾಗಿ ಅವರು ಆಮೂಲಾಗ್ರ ಬುಡ ತಪಾಸಣೆ ನಡೆಸಿ , ಬಾಲವನ್ನು ಬೇರು ಸಮೇತ  ಕಿತ್ತು ಹಾಕಲು ಶಸ್ತ್ರಚಿಕಿತ್ಸೆಯ ದಿನಾಂಕ ನಿಗದಿ ಪಡಿಸಿದರು.

***************************************************************************

ಶಸ್ತ್ರಚಿಕಿತ್ಸೆಯ  ದಿನ ಬೆಳಿಗ್ಗೆ ಮತ್ತೆ ತ್ರಿಕೋನದಲ್ಲಿ ಸೂಜಿ ಚುಚ್ಚಿದಂತೆ ಭಾಸವಾಗಿ , ಮೊಸರುದ್ದೀನರು  ಕೈ ಆಡಿಸಲಾಗಿ , ಬಾಲದ ನೀರಿಕ್ಷೆಯಲ್ಲಿದ್ದವರಿಗೆ ಖಾಲಿ ಜಾಗದ ಅನುಭವವಾಯಿತು.

***       ***       ****    *Sunday, September 11, 2011

ಆಭಾಸ

ಜಿಟೀ ಜಿಟಿ ರಿಪಿ ರಿಪಿ ಪಿರಿ ಪಿರಿ
ಗಾಂಧೀ ಬಜಾರಿನಲ್ಲಿ ಮುಸ್ಸಂಜೆಯಲ್ಲೊಂದು ಮಳೆ ,
ಹೆಚ್.ಎನ್. ಫ್ಲೈ ಓವರ್ ದಾಟಿ ಬಂದ ಕನಸುಗಳು
ರೋಟೀ ಘರ್ ನಲ್ಲಿ ಬೈ ಟೂ ಟೀ ಕುಡಿಯುತ್ತವೆ..!
ಸೊಪ್ಪು ಮಾರುವ ಮುದುಕಿಯ 
ಪುಟ್ಟ ಮೊಮ್ಮಗು , ತೂತು ಕನಸಿನ ಕೊಡೆಯಲ್ಲಿ
ಮಳೆಯ ನೋಡುತಿದೆ..!
ಒಬ್ಬಂಟಿಯಾದರೆ ಫುಟ್‍ಪಾತ್ ಕಡೆ 
ಹೋಗಲೇ ಬೇಡಿ ,
ಮಳೆಯ ನೋಡುತ್ತಾ
ಜೋಡಿಗಳು ಕುಳಿತಿವೆ, ಆದರೂ ಆಯಿತು
ನಿಮಗೂ ಅಸೂಯೆ.!
ನೆನೆದಿದ್ದು , ಗೊಂಬೆ ಮಾರುವ ಹುಡುಗನ 
ಗೊಂಬೆಗಳಷ್ಟೇ ಅಲ್ಲ , 
ಕೆನ್ನೆ ಮೇಲೆ ಇಳಿದ ಕನಸು , ಜೇಬಿನಲ್ಲಿದ್ದ 
ಪುಡಿ ಕಾಸನ್ನು ಒದ್ದೆ ಮಾಡಿದೆ..
ಯಾರೋ ಹೇಳಿದ್ದು ನೆನಪಾಗುತ್ತಿದೆ ,
ಮತ್ತೆ ಮಳೆ ಬರಲಿ , ನೆನಪಾಗಿದ್ದು ಮಾತಾಡೀತು..

Wednesday, August 31, 2011

ಅರ್ಥವಿಲ್ಲದ ೩ ತುಂಡುಗಳು

ಏಳು ಹದಿನೈದರ ಕ್ಯಾಬ್ ಇವತ್ತೂ ಲೇಟ್
ಡ್ರೈವರ್ ನ ಕಣ್ಣ ಕೆಳಗೆ ಸತ್ತ ಕನಸಿನ
ಕಪ್ಪು ಕಾಮನಬಿಲ್ಲು ,
ಜ್ಯಾಮ್ ಆದ ಟ್ರಾಫಿಕ್ ತೆವಳುತ್ತ ಬದುಕುತ್ತದೆ
ಇ೦ಡಿಕಾದ ಒಳಗೆ ಕುಳಿತವರ
ಟು ಡು ಲಿಸ್ಟ್ ಬೆಳೆಯುತ್ತಿದೆ..!

ರೆಡ್ ಸಿಗ್ನಲ್ ಅಡಿಯಲ್ಲಿ
 ಮುನ್ನುಗ್ಗಲು ನಿಂತ ಚಕ್ರಗಳು
 ಕ್ಯಾಬ್ ನ ಒಳಗಿಂದ ಪೋಲಿ ನೋಟ
ಓ ದೇವರೆ
ಪಕ್ಕದ ಸ್ಕೂಟೀ ಹುಡುಗಿಗೆ ಹೆಲ್ಮೆಟ್ ತೆಗೆಯಲಿ..!
 
ಇಕ್ಕಟ್ಟಾದ ಇ೦ಡಿಕಾದ ಒಳಗೆ ,
 ಟ್ರಾಫಿಕ್ ನ  ಕುಣಿಕೆಗೆ ಸಮಯ
ಶವವಾಗುತ್ತದೆ , ಮನಸು ಭುಸುಗುಡುತ್ತದೆ
ಅರ್ಥವಿಲ್ಲದ ಕವಿತೆಗಳು ಹುಟ್ಟುತ್ತವೆ,

Saturday, August 20, 2011

ಬೆಡ್ ಷಿಟ್

ಯುಡಿ ರೆಸಿಡೆನ್ಸಿ ಯ ಅಚ್ಚ ಬಿಳಿ ಬೆಡ್ ಷಿಟ್ ಗಳು   
ಮೆತ್ತನೆಯ ಹೊದಿಕೆಯ ಮೇಲೆ  
ಕಳೆದು ಹೋದ ಕಲೆಗಳು..!  
ಕಂಡರು ಕಾಣಿಸದ ಕಲೆಗಳ ಹಿಂದೆ  
ಮರೆಯಾದ ಕನಸುಗಳೆಷ್ಟೋ?  ಲೆಕ್ಕವಿಲ್ಲ;  
ಹೊರಳಾಡಿದ ದೇಹಗಳ  
ತೂಕಕ್ಕೆ ಇಡಬೇಕು , ಅರ್ಥವಿರದ ಕ್ರಿಯೆಯು ಅರ್ಥಗಳ ಸೃಷ್ಟಿಸುತ್ತ ,
ಸುಕ್ಕುಗಟ್ಟಿಸುತ್ತವೆ  ಬೆಡ್ ಷಿಟ್ ನ ಪದರಗಳ 
ಬಸಿದ ಬೆವರುಗಳ   
ಈ  ಬೆಡ್ ಷಿಟ್ ಗಳು  
ಮಲಗಿಸುತ್ತಲೇ ಇವೆ , ಒಂದಾದ ಮೇಲೊಂದು ದೇಹಗಳ   
ದೇಹಗಳ ಮೇಲೊಂದು ದೇಹಗಳ , ಮಗ್ಗುಲು ಮಗ್ಗುಲಿನ ಮನಸುಗಳ  
ಪ್ರತಿ ವಿಸರ್ಜನೆಗೂ ಹೊರಗಾಗುತ್ತದೆ  ಬೆಡ್ ಷಿಟ್ ,  
ಯಾರದೋ ಸುಖಕ್ಕೆ ಸಾಕ್ಷಿಯಾಗುತ್ತದೆ ,  
ತಣಿದವರು ಹೊರ ನಡೆದೊಡೆ ,ಮತ್ತೆ  
ಸಿದ್ಧವಾಗುತ್ತದೆ , ಹೊಸ ದೇಹಕ್ಕೆ , ಹೊಸ ಹೊರಳಾಟಕ್ಕೆ ,  
ಕಾಲನಡಿಯಲ್ಲಿ ಸುಕ್ಕುಗಳ ಮರೆಸಿ ,
ಬರಮಾಡಿಕೊಳ್ಳುತ್ತದೆ ಕಂಡು ಕಾಣದ ಹಳೆ ಕಲೆ ನಡುವೆ...!

Monday, July 11, 2011

ಅಂತರಂಗ

ಕತೆ ಬರೆಯಬೇಕಿತ್ತು ,  ಪಾತ್ರವೊಂದು ಕಳೆದಿದೆ
ಸಿಕ್ಕರೆ ತಂದು ಕೊಡಿ , ಪ್ಲೀಸ್ ,
ಅಂತಿಂಥ ಪಾತ್ರವಲ್ಲವದು .
 ಎದೆಯಲ್ಲೊಂದು ಗಾಯವಿದೆ , ದಟ್ಟ ನೀಲಿಯಿದೆ
ಮನಸಿಟ್ಟು ನೋಡಿ , ಕಂಡರು ಕಾಣಿಸಿತು..
 *******
ಲೋಳೆ ಮನಸಿನ ತುಂಬಾ ,
ಬೇಡವೆಂದರೂ  ಕವಿತೆಗಳೇ ಹುಟ್ಟುತ್ತವೆ
 ಕತೆಯಾಗದ ಪಾತ್ರಗಳು ,
ಕನ್ನೆಯಾಗಿಯೇ ಉಳಿದಿವೆ..!
ರಾತ್ರಿಯೆ ಬೇಕಿಲ್ಲ ಬೆತ್ತಲಾಗಲು,
ಕತೆಯಾಗಿಸಲು ಮನಸಿದ್ದರೆ ಸಾಕು..!
 ****** 
ಹುಡುಕಿದರು ಸಿಗಲಾರದು ಆ ಪಾತ್ರದಂತಹ ಪಾತ್ರ
ಎಲ್ಲಾ ಪಾತ್ರಗಳು ಹೀಗಲ್ಲ
ಯಾರೋ ಹೇಳಿದಂತೆ ,
ಇನ್ಯಾರಿಗೋ ಕುಣಿಯುವ  ಪಾತ್ರಗಳು ;
 ಕ್ರಿಯೆಗೆ ಮೊದಲೇ ಸ್ಖಲಿಸುವ ಮನಸುಗಳು,
ಕೃತಕ ಬೆಳಕಿನಲಿ ನೈಜವಾಗುವ ಪಾತ್ರಗಳು..
******
ಹಗಲು ಆಗಲೇ ಬಾರದೇನೋ ,
ಪಾತ್ರಗಳು ಮುಖವಾಡಗಳಾಗುತ್ತವೆ ,
 ಮುಖವಾಡಗಳು , ಮಾತಾಗುತ್ತವೆ ,
ನಗೆಯಾಗುತ್ತವೆ , ಅಳುವಾಗುತ್ತವೆ ,
ನಟಿಸುವ ಭಾವಗಳಾಗುತ್ತವೆ..!
ಕತೆ ಮರೆತುಹೋಗುತ್ತದೆ
 ಪಾತ್ರವೊಂದು ಪರದೇಸಿಯಾಗುತ್ತದೆ..!
 **** 
ಕತೆಯಾಗದ ಪಾತ್ರದ 
ಕತೆಯೊಂದ ಬರೆಯಬೇಕಿದೆ ,
ಸಿಕ್ಕರೆ ಹೇಳಿ , 

Monday, June 13, 2011

ಅಂತರ್ಲೋಕ..!

ಹೊತ್ತಲ್ಲದ ಹೊತ್ತಲ್ಲಿ 
ಹೊತ್ತು ಸಾಯುವ ಹೊತ್ತಲ್ಲಿ 
ಒಳಗೊಳಗೆ ಒಳಲೋಕ ಹೊರಗಾಗುತ್ತವೆ,
ಮುಗ್ದ ಮನುಸುಗಳ ಮೇಲೆ 
ನೆನಪುಗಳ ಅತ್ಯಾಚಾರ ;ಶೃಂಗದ ಉತ್ತುಂಗದಲ್ಲಿ
ಸ್ಖಲಿಸಿದ ವೀರ್ಯಕ್ಕೆ 
ಕನಸುಗಳ ಕಟ್ಟುವ ಶಕ್ತಿಯೆ ಇಲ್ಲ..!

ಈ ಲೋಕದೊಳಗೆ 
ಬಂದವರೆಷ್ಟು ? ಹೋದವರೆಷ್ಟು ?
ಇದ್ದವರೆಷ್ಟು? ಸತ್ತವರೆಷ್ಟು?
ಯಾರಿಗೂ ಲೆಕ್ಕವಿಲ್ಲ
ಲೆಕ್ಕ ಹಾಕಿದರೆ ಲೆಕ್ಕ ಗಂಟು ,
ಕಗ್ಗಂಟು; ಪ್ರತಿ ಎಳೆಗೂ ಸಂಬಂದಗಳ ನಂಟು ,
ನೆನಪುಗಳ ಅಂಟು 
ನೆನಪಿಡಿ ,
 ಈ ಲೋಕದಲ್ಲಿ 
ವಿಚ್ಛೇದನಗೊಂಡ ನೆನಪುಗಳಿಗೆ
ಕೂರಲು ಜಾಗವೇ ಇಲ್ಲ.!
ಕೊನೆಯ ಕೊನೇ ಆತ್ಮಹತ್ಯೆ 
ಇಲ್ಲ ಕೊಲೆ!
ಲೋಕ ಅಂದು ಕೊಂಡಂತಲ್ಲ
ಮನಸಿನ ಮೂಲೆ ಮೂಲೆಗೂ 
ಕಾದು ಕುಳಿತಿವೆ  ರಕ್ಕಸ ನೆನಪುಗಳು
ಸಮಯ ಸಿಕ್ಕರೆ ಸಾಕು ,
ಹೊಂಚು ಹಾಕಿ ಕೊಲೆ , ಕಗ್ಗೊಲೆ;
ಸುಳಿವೇ ಇಲ್ಲದಂತೆ 
ಖತಂಗೊಳ್ಳುವ ಖೂನಿಗಳು 
ಪ್ರತಿ ಖೂನಿಗೂ
 ಬೇಚೈನುಗೊಳ್ಳುತ್ತದೆ ಮನಸು!
ಸುಲಭವಲ್ಲ
 ಬದುಕುವದು  ಈ ಲೋಕದಲ್ಲಿ.!

Sunday, May 15, 2011

ಈ ಕವಿತೆಗಳು -೩

ಈ ಕವಿತೆಗಳು
ನೆನಪುಗಳ ಖೂನಿಗೆ
ಸುಪಾರೀ ತೆಗೆದುಕೊಂಡ ಅಕ್ಷರಗಳು ..!

ಸಂಬಂದಗಳ ಗೋರಿಯ ಮೇಲೆ
ಕವಿತೆಗಳ ಮಾಲೆ.!

ಬರೆಯಬೇಕೆ೦ದ ಕವಿತೆಯೊಂದು
ಮರೆತು ಹೋಗಿದೆ
ಈಗ ಮನತುಂಬಾ
ಸೂತಕದ ವಾಸನೆ.!

ಶ್..! ಸುಮ್ಮನೇ ಇರಿ,
ಕವಿತೆಗಳ ತಿರುವಿನಲ್ಲಿ
ನೆನಪೊಂದು ಬಿಕ್ಕುತ್ತಿದೆ.!

ಹುತ್ತಗಟ್ಟಿದ ಕವಿತೆಗಳ ಒಳಗೆ
ನೆನಪುಗಳ ಪುಳ-ಪುಳ..!

ಯ್ಯೊ ! ದೇವರೇ  ಈ ಕವಿತೆಯ ತುಂಬಾ
ಇದೆಂತ ಸುಟ್ಟ ವಾಸನೆ?
ಉರಿಯುತ್ತಿರಬೇಕು ಕಾದ ನೆನಪುಗಳು..!

ನೆನಪೊತ್ತರ ಶಸ್ತ್ರಕ್ರಿಯೆ;ಕವಿತೆಗಳ
ಪ್ರತಿ ಪ್ಯಾರಾ
ಕತ್ತರಿಸಿದ ಸಂಬಂದ!

ತಥ್.! ಜಾಸ್ತಿ ಆಗಿವೆ ಕವಿತೆಗಳು
ನೆನಪುಗಳಿಗೆ ಫ್ಯಾಮಿಲೀ ಪ್ಲಾನಿಂಗ್
ಮಾಡಿಸಬೇಕು.

Tuesday, May 10, 2011

ಈ ಕವಿತೆಗಳು - ೨

ಒಂದಷ್ಟು ಒದ್ದೆ ನೆನಪುಗಳು ; ಒಣಗಿಸಲೆಂದು
ಅಕ್ಷರಗಳ ಕ್ಲಿಪ್ ಹಾಕಿ ಜೋತಾಡಿಸಿದ್ದೆ
ನೋಡಿದವರು ಕವಿತೆಗಳೆ೦ದರು..!

ಗರ್ಭಪಾತವಾಗಿದೆ ,
ನನ್ನ ಮನಸಿಗೆ , ಅವಳ ಕನಸಿಗೆ
ನೋಡುತ್ತೀರಿ , ಹುಟ್ಟುತ್ತವೆ
ಸಾವಿರ-ಸಾವಿರ ಅನಾಥ ಕವಿತೆಗಳು..!!

ಈ ನೆನಪುಗಳು 
ಅದೆಲ್ಲಿಗೋ  ಸಾಲು-ಸಾಲು
ಮೆರವಣಿಗೆ ಹೊರಟಿದ್ದವು
ಕವಿತೆಗೆಂದಾಯಿತೆಂದು ತಂದಿಟ್ಟಿದ್ದೇನೆ..!

ಕೊಳೆತ ಸಂಬಂಧಗಳ ಸುತ್ತಲಿನ 
ಕವಿತೆಗಳ ಮೈ ತುಂಬಾ  , ಅನುಮಾನದ ವಾಸನೆ!


ಕವಿತೆಗಳ ಚಿತೆಯಲ್ಲಿ
ನೆನಪುಗಳ
ಸಾಮೂಹಿಕ ಆತ್ಮಹತ್ಯೆ..!

ತಥ್.! ಹೇಳುವರು ಕೇಳುವರು ಯಾರು ಇಲ್ಲ
ಹೊತ್ತಲ್ಲದ ಹೊತ್ತಿನಲ್ಲಿ
ಈ ಕವಿತೆಗಳು ನೆನಪುಗಳೊಟ್ಟಿಗೆ
ಚಕ್ಕಂದವಾಡುತ್ತವೆ.!

ಮಾರಾಯರೆ , ಈ ಕವಿತೆಗಳಿಗೆಂದರೆ
ವಾರಸುದಾರರಿಲ್ಲದ ನೆನಪುಗಳು

Wednesday, May 4, 2011

ಈ ಕವಿತೆಗಳು

ಮಧ್ಯರಾತ್ರಿ ನಿದ್ರೆ ಊಳಿಡುವಾಗ
ಸಟಕ್ಕನೆ ಎದ್ದು , ನಿನ್ನ ನೆನಪುಗಳನ್ನ ಸಂಭೋಗಿಸುತ್ತೇನೆ ;
ಅಕ್ಷರಗಳ ಸ್ಖಲನದಲ್ಲಿ  ಕವಿತೆಗಳು  ಹುಟ್ಟುತ್ತವೆ.!
****            *****   *****
ಚಾಯ್ ದುಕಾನಿನಲ್ಲಿ ಕುದಿ ಕುದಿ  ಡಿಕಾಕ್ಶನ್
ಸರ್ರ್  ಸರ್ರ್ ನೇ ಕುಡಿದು ಬಿಡುತ್ತೇನೆ
ಇದೇನು ಬಿಸಿಯಲ್ಲ ! ಅಲ್ಲಿದೆ ನೋಡಿ
ಕವಿತೆಯಾಗಿ ಉರಿಯುತ್ತಿರುವ ನೆನಪುಗಳು
****            *****   *****
ಹೃದಯ ಬಾಡಿಗೆಗೆ ಇದೆ ಎಂದು
ಬೋರ್ಡ್ ಹಾಕಿದ್ದೆ
ಒಂದು ರಾಶಿ ಕವಿತೆಗಳು ಕೇಳಿಕೊಂಡು ಬಂದವು..!
****            *****   *****
ಸ್ವಲ್ಪ ಇರ್ರ್ರಿ ಮಾರಾಯ್ರೆ ,
ನೆನಪುಗಳನ್ನ ಕಾಲನ ಕುಕರ್ ನಲ್ಲಿ  ಇಟ್ಟಿದ್ದೇನೆ
ಕವಿತೆಗಳ ಉಂಡು ಹೋಗಿರಿ.!

Wednesday, April 27, 2011

ರಸ್ತೆ

ಕತೆಯೆಂದುಕೊಂಡು ಓದುವ ಕತೆಯಲ್ಲವೇನೋ ? ಇದು ಏನು ಎನ್ನುವುದರ ಬಗ್ಗೆ ನನಗೂ ಸಂಶಯವಿದೆ. ಬೆಂಗಳೂರಿನಿ೦ದ , ಹೈದರಾಬಾದಿಗೆ ವರ್ಗವಾದ ನಂತರ ನಾನು ಹುಬ್ಬಳ್ಳಿ - ರಾಯಚೂರು ಮಾರ್ಗವಾಗಿ ಹೈದರಾಬಾದಿಗೆ ಓಡಾಡುವಂತಾಯಿತು. ಇಂತಹದೇ ಒಂದು ಓಡಾಟದಲ್ಲಿ ನನಗೆ ಸಿಕ್ಕಿದ ಡೈರಿಯ ಕೆಲವು ಪುಟಗಳನ್ನ ನಾನು ಕತೆಯನ್ನಾಗಿ ನಿರೂಪಿಸಲು ಹೊರಟಿದ್ದೇನೆ. ಇಲ್ಲಿನ ಪಾತ್ರಗಳಿಗೆ ಹೆಸರು ಕೊಟ್ಟವನು ನಾನಾದರೂ ಪಾತ್ರಗಳು ನನ್ನವಲ್ಲ. ಪಕ್ಕದ ಸೀಟ್ ನವರ ಡೈರಿ ಓದಿದ ಪಾಪ ಪ್ರಜ್ಞೆ ಹಂಚಿಕೊಳ್ಳುತ್ತ....

ಕಥಾನಾಯಕ  : ಹೆಚ್. ಕೆ. ಕಮಲನಾಥ ಕಾರಣಿಶ್ವರ ಶರ್ಮ
ಕಥಾನಾಯಕಿ : ಸುಪ್ರಜಾ ಹೆಗಡೆ
.
ನನಗೆ ರಸ್ತೆಗಳೆಂದರೆ ಹೆದರಿಕೆ. ರಸ್ತೆಗಳು ನನ್ನನ್ನು ಭಯಪಡಿಸುತ್ತಿದ್ದವು. ರಸ್ತೆಗಳು ನನ್ನನ್ನು ಆತಂಕಗೊಳಿಸುತಿದ್ದವು. ಎಲ್ಲೋ ಆರಂಭವಾಗಿ ಮತ್ತೆಲ್ಲೋ ಸೇರಿ , ಸರಕ್ಕನೆ  ತಿರುವಿಕೊಂಡು , ಅಗಾಧವಾಗಿ ಹರವಿಕೊಂಡು , ಕೆಲವೊಮ್ಮೆ ಎಡಕ್ಕೆ , ಕೆಲವೊಮ್ಮೆ ಬಲಕ್ಕೆ ಮತ್ತೊಮ್ಮೆ ನೇರವಾಗಿ , ಅಂಕಾಗಿ , ಡೊಂಕಾಗಿ , ಅಂಕು- ಡೊಂಕಾಗಿ , ವೇಗವಾಗಿ , ನಿಧಾನವಾಗಿ , ಸಣ್ಣಗಾಗಿ , ದೊಡ್ಡದಾಗಿ , ಉದ್ದವಾಗಿ , ಅಗಲವಾಗಿ , ಏರಾಗಿ , ಏರು ಪೇರಾಗಿ, ಏರು ಪೇರು ಇಳಿಜಾರಾಗಿ , ತಗ್ಗು ದಿಣ್ಣೆಯಾಗಿ , ಹೀಗೆ ಹಲವಾರು ಸ್ವರೂಪ ಹೊಂದಿದ ರಸ್ತೆಗಳು ನನ್ನನು ದಿಗಿಲುಗೊಳಿಸುತ್ತಿದ್ದವು. ಇಲ್ಲಿಂದ ಹೊರಟು ಮತ್ತೆಲ್ಲೋ ತಲುಪಿಸಿ , ಮತ್ತೆ ರೂಪಾಂತರ ಹೊಂದಿ ಇನ್ನೆಲ್ಲೋ ತಟ್ಟನೆ ಕೊನೆಯಾಗುವ ರಸ್ತೆಗಳು ನನಗೆ ಕಳವಳವನ್ನುಂಟು ಮಾಡುತಿದ್ದವು. ಕೆಲವೊಮ್ಮೆ ಎಲ್ಲ ರಸ್ತೆಗಳು ಒಂದು ಕಡೆ ಒಂದಾಗುತ್ತಿದ್ದವು. ಹಲವು ರಸ್ತೆಗಳು ಒಂದಾಗಿ , ಒಂದು ಎರಡಾಗಿ , ಎರಡು ಮತ್ತೆ ಮತ್ತೇನೋ ಆಗಿ ಓಡಾಡುತ್ತಿದ್ದವು.
ರಸ್ತೆ  ಓಡುತಿತ್ತು. ರಸ್ತೆ ನಿಧಾನವಾಗುತಿತ್ತು. ರಸ್ತೆ ಬಳುಕುತಿತ್ತು. ರಸ್ತೆ ಮಲಗಿತ್ತು. ರಸ್ತೆ ಕಿರಿದಾಗಿ ಕೊನೆಗೊಮ್ಮೆ ಇಲ್ಲವಾಗುತಿತ್ತು.
ಇಂತಹ ರಸ್ತೆಗಳ ಮೇಲೆ ಜನರಿರುತ್ತಿದ್ದರು. ಹಲವರು ನಡೆಯುತ್ತಿದ್ದರು. ಕೆಲವರು ನಿಂತಿದ್ದರು.  ದನ ಕರುಗಳು ಇರುತಿದ್ದವು. ನಾಯಿ ಕೆಲವೊಮ್ಮೆ ಓಡುತಿತ್ತು. ಬಾಲ ಅಲ್ಲಾಡಿಸುತ್ತಿತ್ತು.  ಪ್ರಾಣಿಯೊಂದು ಮಲಗಿತ್ತು.  ಬಸ್ಸು ಕಾರು ಲಾರಿಯ೦ತ ವಸ್ತುಗಳು  ಬರ್ರನೇ ಓಡುತ್ತಿದ್ದವು.
ನಿಮಗೆ ಅಚ್ಚರಿಯೆನಿಸಬಹುದು ರಸ್ತೆ ನನ್ನನ್ನು ಭಯಪಡಿಸುತ್ತಿತ್ತು. ರಸ್ತೆ ನನ್ನ ನೆನಪಿಗೆ ನನ್ನ ನೂಕುತ್ತಿತ್ತು.
ರಸ್ತೆ ನನಗೆ ನೆನಪಿಸುತಿತ್ತು. ಸಂಬಂಧವನ್ನ ನೆನಪಿಸುತಿತ್ತು.. ನನ್ನ ಅವಳ ಸಂಬಂಧ. ಅವಳ ನನ್ನ ಸಂಬಂದ.
ಕೆಲವೊಮ್ಮೆ ರಸ್ತೆ ನುಣುಪಾಗಿತ್ತು.  ನುಣುಪುರಸ್ತೆ ಮೇಲೆ ಪಾದಗಳು ಪಯಣಿಸುತ್ತಿದ್ದವು. ಕೆಲವು ಪಾದಗಳು ನುಣುಪು. ಕೆಲವು ಒರಟು. ಹಲವು ರಸ್ತೆಯಷ್ಟೇ  ಬಿರುಕು. ಕೆಲವೊಮ್ಮೆ ರಸ್ತೆ ಉಬ್ಬಾಗಿರುತ್ತಿತ್ತು. ಉಬ್ಬು ರಸ್ತೆಯ ಮೇಲೆ ಜನ ದನ ಹುಷಾರಿಯಲ್ಲಿ ಓಡಾಡುತ್ತಿದವು. ಕೆಲವು ರಸ್ತೆಯ ತಿರುವುಗಳಲ್ಲಿ , ರಸ್ತೆಯ ಇಕ್ಕೆಲಗಳಲ್ಲಿ , " ಮುಂದೆ ತಿರುವು ರಸ್ತೆ ಇದೆ" ಎಂಬ ಎಚ್ಚರಿಕೆಯ ಫಲಕವೋ , ಇಲ್ಲ ಡೊಂಕು ರಸ್ತೆಯ ಸೂಚಿಸುವ ಹಾವಿನಂತ ರಚನೆಯೊ ಇರುತ್ತಿತ್ತು. ಹಲವರು ಎಚ್ಚರಿಕೆಯ ಎಚ್ಚರದಿಂದ ನಡೆಯುತ್ತಿದ್ದರೂ. ಇನ್ನೂ ಹಲವರಿಗೆ, ಕೆಲವರ ನಡಿಗೆಯೇ ಎಚ್ಚರಿಕೆಯಾಗಿತ್ತು. ರಸ್ತೆಯನ್ನ ಎಡಕ್ಕೆ , ಬಲಕ್ಕೆ , ಮುಂದಕ್ಕೆ , ಹಿಂದಕ್ಕೆ, ಅಡ್ಡವಾಗಿ , ಉದ್ದವಾಗಿ ದಾಟುವರಿದ್ದರು.
ಇಂತಹದೇ ಒಂದು ತಿರುವಿನ ರಸ್ತೆಯನ್ನು ನಾನು ದಾಟುತ್ತಿರುವಾಗಲೇ ಅವಳು ಎದುರಾಗಿದ್ದು. ಪರಿಚಯ  ಪ್ರಾರಂಭವಾಗಿದ್ದು ರಸ್ತೆಯಲ್ಲಿ , ತಿರುವಿನ ರಸ್ತೆಯಲ್ಲಿ. ರಸ್ತೆಯ ತಿರುವಿನಲ್ಲಿ. ನನ್ನ ತಿರುವಿನಲ್ಲಿ ಅವಳ ತಿರುವಿನಲ್ಲಿ ನಮ್ಮಿಬ್ಬರ ತಿರುವಿನಲ್ಲಿ.  ರಸ್ತೆಯಲ್ಲಿ ಎಚ್ಚರಿಕೆಯ ಫಲಕವಿತ್ತು. ನಾನು ಅಲಕ್ಷಿಸಿದ್ದೆ.
ನಾವಿಬ್ಬರು ರಸ್ತೆಯ ಮಧ್ಯದಲ್ಲಿ ಭೇಟಿಯಾದಾಗ ನಮ್ಮಿಬ್ಬರ ಎರಡೂ ಕಡೆ ಭರ್ರನೆ ವಾಹನಗಳು ಹಾದು ಹೋಗಿದ್ದವು. ರಸ್ತೆಯ ಧೂಳು ನಮ್ಮಿಬ್ಬರ ಮೇಲೂ ಬಿದ್ದಿತ್ತು. ನನಗಿಂತ ಮೊದಲು ಅವಳು ಧೂಳನ್ನು ಕೊಡವಿಕೊಂಡಳು. ಬಲಕ್ಕೆ ಹೊರಟವನನ್ನು ಎಡಕ್ಕೆ ಎಳೆದಳು. ಸೆಳೆದಳು..!
ನಾವಿಬ್ಬರು ಓದುತ್ತಿದ್ದುದು ನ್ಯಾಷನಲ್ ಕಾಲೇಜಿನಲ್ಲಿ. ನನಗಿಂತ ಒಂದು ವರ್ಷಕ್ಕೆ ಚಿಕ್ಕವಳು.
**    **    **   **   **    **   **    **
ಪ್ರಿಯ ಓದುಗರೇ, ಇಲ್ಲಿಗೆ ಇವರ ಪರಿಚಯ ಆಯಿತು. ಮುಂದೆ ಅವರ ಪ್ರೇಮ ಹೇಗೆ ಬೆಳೆಯಿತು ಎಂದೆಲ್ಲ ಬಹುವಾಗಿ ಡೈರಿಯಲ್ಲಿ ವರ್ಣಿಸಲಾಗಿದೆ. ಅವಳ ಸಕಲ ರೂಪರಾಶಿಯನ್ನು ವರ್ಣಿಸಲಾಗಿದೆ. ಅದನ್ನೆಲ್ಲ ನಾನು ಇಲ್ಲಿ ಫೋಕಸ್ ಮಾಡಲು ಹೋಗದೇ , ನಿಮ್ಮ ನಿಮ್ಮ ಕಲ್ಪನಾ ಶಕ್ತಿಗೆ ಬಿಡುತ್ತೇನೆ.
 **    **    **   **   **    **   **    **
ಡೈರಿಯ ಮುಂದುವರಿಕೆ:
ನಾನು ಪ್ರೀತಿಸುತ್ತೇನೆ. ಕೆಲವೊಮ್ಮೆ ಅತಿಯಾಗಿ. ಮತ್ತೊಮ್ಮೆ ಮಿತಿಯಾಗಿ. ಪ್ರೀತಿ ಯಾತಕ್ಕೆ ಎಂಬುದು ಗೊತ್ತಿಲ್ಲ. ಆ ದಿನಗಳಲ್ಲಿ ನಾನು ಬರೆಯುತ್ತಿದ್ದೆ.  ನಾಡಿನ ಎಲ್ಲ ಪತ್ರಿಕೆಗಳಲ್ಲಿ ನನ್ನ ಕತೆಗಳು , ಲೇಖನಗಳು , ಕವನಗಳು ಪ್ರಕಟಗೊಳ್ಳುತ್ತಿದ್ದ್ಡವು. " ಬರಹ" ಎಂಬ ಕಾವ್ಯನಾಮದ ಮೂಲಕ ನಾನು , ನನ್ನ ಮುಚ್ಚಿಟ್ಟು ಬರೆಯುತ್ತಿದ್ದೆ.
ಅವಳಿಗೆ ಹುಚ್ಚಿತ್ತು.  ಬರೆಯುವ ಹುಚ್ಚು , ಪ್ರಕಟಗೊಳಿಸುವ ಹುಚ್ಚು.  ನನಗೆ ಹಸಿವಿತ್ತು. ಉತ್ಕಟ ಹಸಿವು. ಬದುಕಬೇಕೆಂಬುದು ನನ್ನ ಹಸಿವಿನ ಶಮನಕ್ಕೊ? ಗೊತ್ತಿಲ್ಲ.
ಹಸಿವು ನನ್ನ ಆವರಿಸಿ , ಅಮುಕಿ , ಅವುಚಿ , ತಬ್ಬಿ , ಉಬ್ಬಿ , ಬಸಿದು ಬೆವರಿಸುತ್ತಿರುವಾಗ ಅವಳು ಸಿಕ್ಕಿದ್ದಳು.
ಅವಳಿಗೆ ಬಣ್ಣವಿತ್ತು.
ಬಣ್ಣ ಕಾಡುವ ಕಡು ಬಣ್ಣವಾಗಿತ್ತು.
ನನ್ನ ಕನಸಿನಲ್ಲಿ ನಾನು ಚೆಲ್ಲಿದ ಪ್ರತಿ ಬಣ್ಣವೂ , ಅವಳ ರೂಪ ಪಡೆಯುತ್ತಿದ್ದವು. ರೂಪಕ್ಕೆ ಪ್ರೀತಿಯಿತ್ತು. ಒಲವಿತ್ತು.
ನಮ್ಮಿಬ್ಬರ ನಡುವಿನ ಕುಂಡ  ಕೆಂಡದಲ್ಲಿತ್ತು.
ಕುಂಡ , ಕೆಂಡವಾಗಿ , ಕೆಂಡ ಕಾದು ಕೆಂಪಾಗಿ , ಕೆಂಪು ಶಾಖವಾಗಿ , ಶಾಖ ಸುಡುವಿಕೆಯಾಗಿ , ಸುಡುವಿನ ಉರುವಲು ನಾವಿಬ್ಬರಾಗಿ , ನಾವಿಬ್ಬರು ಸುಟ್ಟ ಜಳವಾಗುತ್ತಿದ್ದೆವು.
ಅವಳ ಹಸಿವಿಗೆ ಹೊಟ್ಟೆಇತ್ತು , ಕಾಲಿತ್ತು , ಕೈ ಇತ್ತು , ಕಿವಿಯಿಟ್ಟು, ಬಿಸಿಯಿತ್ತು , ಆಸೆಯಿತ್ತು , ..!
ಅವತ್ತು ನಾವಿಬ್ಬರು ನಮ್ಮಿಬ್ಬರ ಹಸಿವಿನ ತುದಿಯಲ್ಲಿ ಇರುವಾಗ ಅವಳೇ ಕೇಳಿದಳು.
" ಬರೆಯುವೆಯಾ?"
" ಬರೆಯುತ್ತಿದ್ದೇನೆ.! " ನಾನು
" ಯಾರು ?"
"ನಾನು?"
" ಮತ್ತೆ ನಾನು ?" ಅವಳು
" ನೀನು ನನ್ನವಳು"
" ನಿನ್ನ ನೀನು , ನನ್ನ ನಾನು ಆಗಲಾರದಾ?"
"ಅಂದರೆ"? ಹುಬ್ಬೇರಿಸಿದೆ
" ನೀನು ನಾನಾಗಿ ಬರೆಯುವೆಯ?"
" ನಿನ್ನ ಹೆಸರಲ್ಲಿ ನಾನು ಬರೆಯಬೇಕೆ?" ನಾನು
"ಪ್ಲೀಸ್" ಅವಳ ಕಣ್ಣಿನಲ್ಲಿ ತೆಳ್ಳಗಿನ ನೀರಿನ ಪೊರೆ.
ನೀರು ಕರಗಿಸುತ್ತದೆ.!  ನಾನು ಕರಗಿದೆ.

ಅವತ್ತಿನಿಂದ ನಾನು ಅವಳ ಹೆಸರಿನಲ್ಲಿ ಬರೆಯಲಾರಂಭಿಸಿದೆ. ಪ್ರತಿ ಬರಹ ಉತ್ಕಟವಾಗಲಿ ಎಂದು ಅವಳು ಬಯಸಿದಳು.
ಅಂಗಾತನೆ ಬಿದ್ದ ಹಾಸಿಗೆಯ ಮೇಲೆ ಬೋರಲು ಬಿದ್ದ ನನ್ನ ಬೆನ್ನ ಮೇಲೆ ಇಡುತ್ತಿದ್ದ ಅವಳ ಪ್ರತಿ ಹೆಜ್ಜೆಯು ನನ್ನ ಬೆನ್ನಿಂದ ಇಳಿದು ಎದೆಯೊಳಗೆ ತಲುಪಿ , " ಬರಹ" ನನ್ನು ಕೊಲ್ಲುತಿತ್ತು.
ಪ್ರತಿ ಮಿಲನವೂ  ಅವಳ ಪೂಜೆಯಾಗಿ , ಪ್ರತಿ ಪೂಜೆಯು ಅವಳಿಗಾಗಿ ಬರೆದ ಪದವಾಗಿ ,  ಪ್ರತಿ ಪದವು ಪದ್ಯವಾಗಿ , ಪದ್ಯವಲ್ಲದ್ದು ಗದ್ಯವಾಗಿ , ಗದ್ಯವಲ್ಲದ್ದು ಕಾವ್ಯವಾಗಿ , ಕಾವ್ಯವಲ್ಲದ್ದು ನವ್ಯವಾಗಿ ಬರೆದವೆಲ್ಲವೂ ಅವಳಿಗೆ ಜನಪ್ರಿಯತೆ ಕೊಟ್ಟವು.
ಅವಳ ಹೆಜ್ಜೆ , ಹೆಜ್ಜೆಯೊಳಗಿನ ಗೆಜ್ಜೆ , ಗೆಜ್ಜೆಯೊಳಗಿನ ಲಜ್ಜೆ , ಲಜ್ಜೆಯೊಳಗಿನ ಸಂಜ್ಞೆ ಎಲ್ಲಕ್ಕೂ ಸೇರಿ ನನ್ನ ಅಕ್ಷರ ಪೂಜೆ..!
ಎಲ್ಲ ಕಡೆ ಅವಳ ಹೆಸರು ಪ್ರಕಟವಾಗ ತೊಡಗಿತು. " ಬರಹ" ಎಂಬ ಜಾಗದಲ್ಲಿ " ಸುಪ್ರಜಾ ಹೆಗಡೆ " ಎಂಬ ಹೆಸರು ಜನಿಸಿತ್ತು.
ದಿನಗಳು ನಮ್ಮ ಹಿಂದೆ ಹಿಂದೆ ಸರಿದಂತೆ ಅವಳ ಕೀರ್ತಿ ಮುಂದೆ ಮುಂದೆ ನಡೆಯಿತು. ಮಿಲನ ಕಡಿಮೆಯಾದವು.
ನನ್ನೊಳಗಿನ ಬರಹನ ಒಡಲು ಮೊಗೆ ಮೊಗೆದು ಖಾಲಿಯಾಗುತ್ತಾ ಬಂದಿತು. ನಾನು ಬರಿದಾದಂತೆ ಅವಳ ಬರಹಗಳ ಉತ್ಕಟತೆ ಮಾಯವಾಗತೊಡಗಿತು. ಓದುಗ ಅವಳನ್ನು  ದೂರ ಸರಿಸ ತೊಡಗಿದ.  ಪ್ರತಿ ಕಟು ವಿಮರ್ಶೆಗೆ  ಅವಳು ನನ್ನನ್ನು ದೂರ ಸರಿಸುತ್ತಿದ್ದಳು. ಅವಳ ಖುಷಿ ಪಡಿಸಲು , ಪತ್ರಿಕೆಗೆಗಳಿಗೆ ಅವಳ ಕತೆಗಳ ಹೊಗಳಿ ಪತ್ರಗಳನ್ನ ಬರೆಯತೊಡಗಿದೆ. ಅವಳ ಹೆಸರಿನಲ್ಲಿ ನಾನು ಬರೆದ ಕತೆಗಳು ಮತ್ತೆ ನಮ್ಮ ಮನೆ ಬಾಗಿಲಿಗೆ ಬಂದು ಅಣಕಿಸುತ್ತಿದ್ದವು. ಹಾಗೆ  ಆದಾಗಲೆಲ್ಲ ಅವಳು ನನ್ನನು ಸೇರಿಸುತ್ತಿರಲಿಲ್ಲ.  ಅವಳ ಸೇರದೇ ನನಗೆ ಬರೆಯಲು ಆಗುತ್ತಿರಲಿಲ್ಲ. ಅವಳ ಆಸೆಗೆ ಬರೆದೆ. ಬರೆದ ಪದಗಳು ಅನಾಥವಾದವು. ನನ್ನದೇ ಪದಗಳು , ನನ್ನದೇ ಮನೆಯಲ್ಲಿ , ನನ್ನ ಎದುರಿಗೆ ಸಾಯತೊಡಗಿದವು.
ಒಂದು ಖಾಲಿ ದಿನ ನಡುರಸ್ತೆಯಲ್ಲಿ ಅವಳು ತಿರುಗಿ ನಡೆದಳು. ತೇಪೆ ಹಾಕಿದ ರಸ್ತೆ ತುಂಬಾ ಕಲೆಗಳು.
" ಪ್ರಜಾ ನಮ್ಮಿಬ್ಬರ ರಸ್ತೆಯಲ್ಲವೇ ಇದು?" ನಾನು
" ನಮ್ಮಿಬ್ಬರದಲ್ಲ ನಿನ್ನದು" ಅವಳು
" ಮತ್ತೆ ನೀನು?" ಕಣ್ಣಲ್ಲಿ ಮಡುಗಟ್ಟಿದ್ದು ನೀರು
" ನಾನು ದಾರಿಹೋಕಳು,"
ಹಾಗಾದರೆ ನಡೆದಿದ್ದು ಸಾಕಯೈತೆ ? ಬಾ ನಿನ್ನ ಎತ್ತಿ ಕೊಂಡು ಹೋಗುವೆ"
" ನಡೆದು ಸಾಕಾಗಿಲ್ಲ. ರಸ್ತೆ ಮುಗಿದಿದೆ. ನನ್ನ ನಡೆಯುವಿಕೆಗೆ ಆಯಾಸವಿಲ್ಲ. ಪಯಣ ಮುಂದುವರೆಸಲು ಬೇರೊಂದು ರಸ್ತೆ ಬೇಕಿದೆ"
" ಬೇರೊಂದು ರಸ್ತೆ ನಾನೇ ಆಗಬಾರದೇಕೆ?" ನಾನು ಆಸೆ ,
" ಒಂದೇ ರಸ್ತೆಯಲ್ಲಿ ಗುರಿ ತಲುಪಲು ಆಗದು , ಹಾಗೆ ತಲುಪುವಷ್ಟು ಸಣ್ಣ ಗುರಿಯೂ ನನ್ನದಲ್ಲ"
ಅವಳು  ಬೇರೊಂದು ರಸ್ತೆ  ಹಿಡಿದಳು.  ಭರ್ರನೆ ಸಾಗಿದ ವಾಹನದ ಧೂಳು ನನ್ನ ಮೇಲೆ ಬಿದ್ದಿತ್ತು. ಅವಳ ಮೇಲೆ ಬೀಳಲು ಅವಳು ಇರಲಿಲ್ಲ.  ತಿರುವಿನ ರಸ್ತೆ ಎಚ್ಚರಿಕೆ ಎಂಬ ಫಲಕ ಅವತ್ತಿನಂತೆ ಇವತ್ತು ಇತ್ತು.
**    **    **   **   **    **   **    ** 

ಪ್ರಿಯ ಓದುಗರೇ ಇಷ್ಟರಲ್ಲಿ ನಿಮಗೆ ನಮ್ಮ ಕಥಾನಾಯಕನ ಡೈರಿಯ ಉದ್ದೇಶ ಅರ್ಥವಾಗಿರಬಹುದು. ಏನು ನಡೆದಿರಬಹುದು ಎಂಬ ಸ್ಥೂಲ ಕಲ್ಪನೆಯೂ ಸಿಕ್ಕಿರಬಹುದು.  ನಿಮ್ಮಲ್ಲಿ ಕೆಲವರಿಗೆ ಅವನ ಕುರಿತು ವಿಷಾದವು ಅನುಕಂಪವೂ ಮೂಡಿರಬಹುದು. ಯಾರದು ತಪ್ಪು ಯಾರದು ಸರಿ ಎಂದು ನಾನು ಹೇಳಲಾರೆ.
ಡೈರಿ ಓದಿದ ನಂತರ ನಾನು ಕೆಲವು ಟಿಪ್ಪಣಿ ಮಾಡಿರುವೆ. ನಿಮಗೆ ಅದರ ಕುರಿತು ಏನಾದರೂ ಅನ್ನಿಸಿದರೆ ದಯಮಾಡಿ ನನಗೆ ತಿಳಿಸ ತಕ್ಕದ್ದು ಎಂದು ನನ್ನ ವಿನಯ ಪೂರ್ವಕ ಆಗ್ರಹ.
ಟಿಪ್ಪಣಿ ೧ :
ಸಂಬಂದ ಎಂದರೇನು? ಅದರ ಗುಣ ಲಕ್ಷಣಗಳೇನು? ಅದು ಹೇಗಿದೆ? ಅದಕ್ಕೆ ಆಕಾರವಿದೆಯೇ? ಇದ್ದಾರೆ ಅದು ಚಪ್ಪಟೆಯೋ? ಉಬ್ಬೋ? ತಗ್ಗೊ?  ಅದು ಗುಂಡಾಗಿದೆಯೆ? ಒರಟಾಗಿದೆಯೆ? ಮೃದುವಾಗಿದೆಯೇ? ಅದಕ್ಕೆ ಜೀವವಿದೆಯೇ? ಇಲ್ಲವಾದರೆ ಸಂಬಂದ ಸತ್ತಿತು ಎನ್ನುವದಕ್ಕೆ ಅರ್ಥವಿದೆಯೇ?  ಇದೆ ಎಂದಾದರೆ ಯಾವತ್ತಾದರೂ ಒಂದು ದಿನ ಸಾಯಲೇ ಬೇಕಲ್ಲವೇ. ?
ಎರಡು ಮನಸ್ಸುಗಳ ಉತ್ಕಟತೆಗೆ ಸಂಬಂದ ಎನ್ನಬಹುದೇ? ಸಂಬಂಧ ಎನ್ನುವದು ಕಲ್ಪಿತವೇ? ಕಲ್ಪಿತ ಎನ್ನುವದಾದರೆ  ಎರಡು ಜೀವಗಳ ಅಕ್ಷಾಂಕ್ಷ ಹಾಗೂ ರೇಖಾ೦ಶಗಳನ್ನು ಸಂಬಂದ ಎನ್ನಬಹುದೇ?
ಈ ಸಂಬಂದ ಎನ್ನುವಾದು ಕಲ್ಪಿತ ಅಲ್ಲವಾದರೆ , ನಮ್ಮಿಬ್ಬರ ಬಂಧ ವೇ ಸಂಬಂದ ಎನ್ನುವಾದಾದ್ರೆ , ನಮ್ಮಿಂದ ನಿಮ್ಮೆಡೆಗೆ ಜಿಗಿಯಲು ಬಳಸುವ, ಸರ್ಕಸ್ಸಿನಂತ ಹಗ್ಗವೇ ಸಂಬಂದ ಎಂದಾದರೆ , ಒಂದಲ್ಲ ಒಂದು ದಿನ ಹಗ್ಗ ತುಂಡಾಗಲೇ ಬೇಕಲ್ಲವೇ? ಇಲ್ಲಾ ಅದೇ ಹಗ್ಗದಿಂದ ನಿಮ್ಮನ್ನ ಉಸಿರುಗಟ್ಟಿಸಿ ಸಾಯಿಸಲು ಬಹುದಲ್ಲವೇ?

ಟಿಪ್ಪಣಿ ೨ :
ಸಂಬಂದವೊಂದು ಮುಖವಾಡ ಧರಿಸಿ ಹುಟ್ಟುತ್ತದೆಯೋ? ಅಥವಾ ಮುಖವಾಡವೆ ಸಂಬಂದವಾಗುತ್ತದೆಯೋ? ಮೊದಲೊಂದು ಮುಖವಾಡ  ಅದರ ಮೇಲೆ ಮತ್ತೊಂದು ಮುಖವಾಡ  ಹೀಗೆ ಮುಖವಾಡದ ಮೇಲೆ ಮುಖವಾಡ  ಧರಿಸಿ , ಮುಖವಾಡಗಳ ಅಡಿಯಲ್ಲಿ ಮುಖವೇ ಮರೆತು ಹೋಗಿ ಕೊನೆಗೊಮ್ಮೆ ಸಹಿಸಲಸಾಧ್ಯವಾದಾಗ ಮುಖವಾಡಗಳ ಕಿತ್ತೊಗೆದಾಗ , ಕಿತ್ತೊಗೆಯುವ ರಭಸಕ್ಕೆ ಜನ ಸ್ತಬ್ದವಾದಾಗ ಮುಖವಾಡವಿಲ್ಲದ ಮುಖ ಹೇಸಿಗೆ ತಂದಿತು.
ಎಲ್ಲೋ ಓದಿದಂತೆ ಚೆಂದದ ಹೂವಿನ ದಳಗಳನ್ನು ಎಸಳು ಎಸಳುಗಳನ್ನು ಒಂದೊಂದಾಗಿ ಕಿತ್ತು ಎಸೆದಾಗ ಕೊನೆಗೊಮ್ಮೆ ಉಳಿಯುವ ನಗ್ನ ಹೂವಿನ ಭಗ್ನ ಕುರೂಪದಂತೆ ಮುಖವಾಡ ಕಿತ್ತು ಎಸೆದ ಮುಖಗಳೆಲ್ಲ ಅಸಹ್ಯವೇ?

ಉತ್ತರ ಸಿಗದ ಪ್ರಶ್ನೆಗಳು ಹಲವಾರು.

Monday, February 21, 2011

'ಸಾಫ್ಟ್' ಸಂಕಟಗಳು

ಇಂರ್ಟನೆಟ್ ಇದೆ , ಯಾರು ಅಲ್ಲ ದೂರ ,
ಆದರೆ ಯಾಕೋ ಗೊತ್ತಿಲ್ಲ ಯಾರೂ ಬರುತ್ತಿಲ್ಲ ಹತ್ತಿರ..!

*************************

 ಕೊಳೆತು ನಾರುತ್ತಿವೆ , ಸತ್ತು ಮಲಗಿದ ಸಂಬಂದಗಳು ,
ಸ್ವಚ್ಛಗೊಳಿಸಬೇಕಿದೆ ಹೃದಯವನ್ನು !

*************************

ಯಾರೋ ಹೇಳಿದ್ದರು ,
ಕುಟ್ಟುತ್ತಿರುವದು ಕೀ ಬೋರ್ಡನ ಕೀಗಳನ್ನಲ್ಲ
ಅಂಗಾತನೆ ಬಿದ್ದ ಭಾವನೆಗಳನ್ನ ..!

*************************

ಎಲ್ಲವೂ 'ಸಾಫ್ಟ' ಸಂಬಂದಗಳು ;
ಮನಸ್ಸಿನಲ್ಲಿರುವ ಯಾರೂ  ಇಳಿಯುತ್ತಿಲ್ಲ ,ಹೃದಯಕ್ಕೆ!

*************************
ಮನ ತುಂಬಾ ಸೂತಕ ,
ಕಣ್ಣು ಮುಚ್ಚದ ರಾತ್ರೆಗಳಲ್ಲಿ, ನೆನಪುಗಳ ಕೊಲೆ !

*********************
ಕ್ಷಮಿಸು ಹುಡುಗಿ ,
ಮಾನೀಟರ್ ನ ಪಿಕ್ಸೆಲ್ ಗಳಲ್ಲಿ ಮೂಡಿಸಿದ್ದ ನಿನ್ನ ಚಿತ್ರ
ಮೂಡಿಸಲಾಗುತ್ತಿಲ್ಲ ನಕ್ಷತ್ರಗಳ ಆಡಿಯಲ್ಲಿ..!

Tuesday, February 8, 2011

ಚಕ್ರ

ಚಲನೆ ೧ :
ಅವರಿಬ್ಬರು ಅಲ್ಲಿ ಕುಳಿತಿದ್ದಾರೆ. ಹತ್ತಿರ. ನಾವು ನೀವು ಭಾವಿಸಿದ್ದಕ್ಕಿಂತ ಹತ್ತಿರ. ಪರಸ್ಪರರ ಉಸಿರು ತಾಕುವಷ್ಟು ಸನಿಹ. ಮಾತುಗಳು ಉಸಿರುಗಳಾಗಿ , ಉಸಿರು ದೃಷ್ಟಿಗಳಾಗಿ , ದೃಷ್ಟಿ ಭಾವಗಳಾಗಿ ಭಾವಗಳೆಲ್ಲ ಅವಳ ಕಣ್ಣಿನಿಂದ ಅವನೆಡೆಗೆ ತೇಲಿ ಬರುತ್ತಿದ್ದವು.
" ತುಂಬಾ ಪ್ರೀತಿಸ್ತೀಯಾ ಶ್ರೀ?" ಅವಳು
"ಮ್" ಅವನು
" ಎಷ್ಟು?" ಅವಳು. ಅವಳಿಗೆ ತಿಳಿಯುವ ಕಾತುರ. ಪ್ರೀತಿಸಿದವ ಪ್ರೀತಿ ಮೊಗೆದು ಕೊಡಲೆಂಬ ಆತುರ.
" ಇಷ್ಟು" ಅವನು.  " ಆಳದಷ್ಟು , ಬೆಟ್ಟದಷ್ಟು , ಸಾಗರದಷ್ಟು , ಸಮುದ್ರದಷ್ಟು. ಬಿಗಿ ಹಿಡಿದ ಮುಷ್ಟಿ ಗಾತ್ರದ ಹೃದಯ ನೂಕುತ್ತಿರುವ ಬಿಸಿ ರಕ್ತದಷ್ಟು. ರಾತ್ರಿಗಳು ಎಣಿಸದ ಚುಕ್ಕಿಗಳಷ್ಟು. ನಿನ್ನ ಚಂದಮ ನನ್ನ ಎದೆಗೆ ಹಾದು ಬರುವಷ್ಟು. ಕೇಂದ್ರದ ಸುತ್ತ ಕೋಟೆ ಕಟ್ಟಿರುವ ಪರಮಾಣು ಲೆಕ್ಕವಿಲ್ಲದೇ ಹೊತ್ತು ಗೊತ್ತಿಲ್ಲದೇ
ಸುತ್ತಾಡುವಷ್ಟು.
" ಅರ್ಥವಾಗಲಿಲ್ಲ ಶ್ರೀ..!?" ಅವಳು
ಅವಳಿಗೆ ಅರ್ಥ ಮಾಡಿಕೊಳ್ಳುವ ಕಾತರ ,
" ಅರ್ಥ ಮಾತಿಗಲ್ಲ , ಅರ್ಥ ಕ್ರಿಯೆಗೆ. ಮಾತು ಕ್ರಿಯೆಯಾದಾಗ ಅದಕ್ಕೆ ಅರ್ಥ. " ಅವನು
 ಇವನಿಗೆ ಅರ್ಥ ಮಾಡಿಸುವ ಆತುರ
" ಅಂದರೆ?" ಅವಳು ಕಣ್ಣರಳಿಸಿದಳು.
ಅವನು ಮಾತು ಮುಗಿಸಿ ಕ್ರಿಯೆಗೆ ತೊಡಗಿದ. ಅವನ ತುಟಿಗೆ ಅವಳ ತುಟಿಯ ಶಬ್ದ ನುಂಗಿ ಹಸಿವು ತಣಿಸಿಕೊಳ್ಳುವ ಆಶೆ.
ದಾಹ.. ರಭಸ ಪ್ರವಾಹ..ಕಂಪಿಸುವ ದೇಹ..
ಉಬ್ಬು ತಗ್ಗುಗಳಲ್ಲಿ ಸ್ಪರ್ಶ ಮೀಟಿದಾಗ ಸುಖದ ತನನ೦..!
ಮಾತು ಮಂದಿರ... ಆಸೆ ಚಂದಿರ..
ಕ್ರಿಯೆ ಅದಕ್ಕೆ ಪ್ರತಿಕ್ರಿಯೆ...
ಒಳಗಿನ ಆಲಯ ... ಪ್ರವೇಶಿಸಿದಾಗ ಅದೇ ದೇವಾಲಯ..!!

ಚಲನೆ ೨ :
ಹಲವು ದಿನಗಳು ಹಿಂದೆ ಕುಳಿತಿವೆ.  ಕಾಲ ಓಡುತ್ತಿದೆ.
"ಶ್ರೀ" ಅವಳು
"ಮ್" ಅವನು
" ಹೇಳಲೇ?" ಅವಳು
" ಹೇಳು" ಅವನು
ಹಲವಾರು ಮುನ್ನುಡಿಯ ನಂತರ ಅವಳು ಹೇಳಿದಳು. ಅಲ್ಲ ತೋರಿದಳು.
ಅವನ ಕ್ರಿಯೆ.. ಅವಳ ಕ್ರಿಯೆ... ಇಬ್ಬರ ಕ್ರಿಯೆ.. ಇಬ್ಬರ ಕ್ರಿಯೆಗೂ ಸಾಕ್ಷಿಯಾಗಿ ಅವಳ ದೇಹ ಪ್ರತಿಕ್ರಿಯೆ ತೋರಿತ್ತು. ಅರ್ಥ ಸಿಕ್ಕಿತ್ತು. ಅಲ್ಲ ಅರ್ಥ ಒಳಗೆ ಬೆಳೆದಿತ್ತು. ತಿಂಗಳು ತುಂಬಿತ್ತು.
ಸಮೃದ್ದ ಭೂಮಿಯಲ್ಲಿ ಹದ ಸಮಯಕ್ಕೆ  ಬೀಜ ಬಿತ್ತಿದರೆ ಮೊಳಕೆ ಖಂಡಿತ.  ಆದರೆ ಬೆಳೆ ಬೆಳೆಸುವದು ಕಷ್ಟ.
ಬೆಳೆಸಲೆಂದು ಬಿತ್ತಿದರೆ ಬೆಳೆ ಇಲ್ಲದಿದ್ದರೆ ಕಳೆ..!
ಅವನಿಗೆ ಅದು ಕಳೆ. ಅವಳಿಗೆ ಬೆಳೆ.
ಬೇಡದ ಕಳೆ ಕೀಳಿಸುಎಂದ. ಪ್ರೀತಿಗೆ ಹಣದ ಮಾತನಾಡಿದ.
ಮಾತಿಗೆ ಮಾತು ಬೆಳೆಯಿತು.
ಕೊನೆಗೆ ಕಿತ್ತಿದ್ದು.. ಕೊಂದಿದ್ದು ಬೆಳೆಯನ್ನಲ್ಲ , ಕಳೆಯನ್ನಲ್ಲ.. ಕಟ್ಟಿದ್ದ ಗರ್ಭವನ್ನಲ್ಲ.. ಅವರ ಪ್ರೀತಿಯನ್ನ..
ಅವನು ಅವಳಿಂದ ಎದ್ದು ನಡೆದ..!

ಚಲನೆ ೩
ಕೆಲವು ದಿನಗಳ ನಂತರ ಅವಳ ಹೆಣ ಬಾವಿಯಲ್ಲಿ ತೇಲಾಡುತಿತ್ಟು.
" ನನ್ನ ಸಾವಿಗೆ ನಾನೇ ಕಾರಣ" ಎಂಬ ಅಂತಿಮ ಪತ್ರ.
ಅವನು ದುಃಖಿಸಿದ ಗೋಳಾಡಿದ ಕಣ್ಣೀರು ಧಾರೆ ಧಾರೆಯಾಗಿ ಹರಿಸಿದ. (?)
ಯತಾಪ್ರಕಾರ ಕೆಲವು ಕೋರ್ಟು ಕಛೇರಿಗಳು ನಡೆದವು. ಜನರು ಎಲ್ಲವನ್ನು ಕಾಲದ ಅಡಿಯಲ್ಲಿ ಮರೆತರು.

ಚಲನೆ ೧:
ಮತ್ತೆ ಅದೇ ಜಾಗ.
ಮತ್ತೆ ಅಲ್ಲಿ ಇಬ್ಬರು ಕುಳಿತಿದ್ದಾರೆ.
ಅವರಲ್ಲೊಬ್ಬ ಮತ್ತೆ ಅದೇ ಅವತ್ತಿನ ಅವನು..!!!
ಆದರೆ ಅವಳ ಬದಲು ಇನ್ನೊಬ್ಬಳು..!!!!
" ತುಂಬಾ ಪ್ರೀತಿಸ್ತೀಯಾ ಶ್ರೀ"? ಅವಳು
" ಮ್" ಅವನು
" ಎಷ್ಟು?" ಅವಳು
...........................
.................
..........
........
...

Tuesday, January 4, 2011

ಡಿ. ಪಿತಾಮಹ ಹೇಳಿದ ಕಥೆ

ಮತ್ತೆ ಸಂಜೆಯೊಂದು ಅನಾಥವಾಗಿ  ಸತ್ತು ಹೋಗುವ ಆತುರದಲ್ಲಿತ್ತು. ಸಂಜೆಗೊಂದು ಧಾವಂತ , ಆತುರ , ಕತ್ತಲನ್ನು ತಬ್ಬುವ ತವಕ. ಆ ಸಂಜೆಯೊಂದರ ಮಡಿಲಲ್ಲಿ ಕುಳಿತು ಸುಮ್ಮಗೆ ಟೀ ಹೀರುತ್ತಿದ್ದವನ ಹೆಸರು ಡಿ.ಪಿತಾಮಹ.
ಕುಳಿತಿರುವದು ಸಿಸಿಯೆಂಬ ಹೋಟೆಲಿನ ಎದುರುಗಡೆಯ ಮರದ ಬುಡದಲ್ಲಿ.
ಇಲ್ಲಿ ಮರವಿದೆ. ಮರಕ್ಕೊಂದು ಬುಡವಿದೆ.ಬುಡದ ಅಡಿಯಲ್ಲಿ ಬುಡದ ಬುಡಕ್ಕೆ ಕಟ್ಟಿಸಿದ ಕಟ್ಟೆಯಿದೆ.  ಕಟ್ಟೆಯ ಮೇಲೆ ಜನ.
ಇಲ್ಲಿ ಹಬೆಯಾಡುವ ಗ್ಲಾಸುಗಳಿವೆ. ಗ್ಲಾಸ್ಸುಗಳಲ್ಲಿ ಬಿಸ್ಸಿ- ಬಿಸ್ಸಿ ಟೀ. ಅದನ್ನು ಕುಡಿಯಲು ಜನ.
ಕೌಂಟರಿನಲ್ಲಿ ಕುಳಿತಿದ್ದವ ಸಂತೋಷ. ಟಕಟಕನೆ ಚೀಟಿಗಳನ್ನು ಕೊಡುತ್ತಾ ,  ದುಡ್ಡು ತೆಗೆದುಕೊಳ್ಳುತ್ತ , ಚಿಲ್ಲರೆ ಕೊಡುತ್ತಾ , ಅಸಹ್ಯವಾಗಿ ಕೈ ಚಾಚುವ ಹಸಿದ ಹೊಟ್ಟೆಗಳನ್ನ , ಹೊಟ್ಟೆಗಳ ಮನವನ್ನು ಸಂಭಾಲೀಸುತ್ತಾನೆ . ಅವನ ಎದುರಲ್ಲಿ ಜನ.
ಪಕ್ಕದಲ್ಲಿ ಸೈಬರ ಕೇಫೆ ಇದೆ. ನೆಲಮಾಳಿಗೆಯಲ್ಲಿ. ಆಳದಲ್ಲಿ ಕುಳಿತು ನೆಟ್ ಮೂಲಕ ಜಗವ ನೋಡುವ ಜನ. ನೆಲಮಾಳಿಗೆಯನ್ನು ತಲುಪಲು ಮೆಟ್ಟಿಲುಗಳು , ಅಲ್ಲಿಂದ ಹೊರ ಲೋಕಕ್ಕೆ ಬರಲು ಅವೇ ಮೆಟ್ಟಿಲುಗಳು..! ಅವುಗಳ ಮೇಲೆ ಜನ.
ಎದುರಿಗಿನ ರಸ್ತೆಯಲ್ಲಿ ವಾಹನಗಳು ಶರವೇಗದಿಂದ ಸಾಗುತ್ತವೆ. ಒಂದಕ್ಕೆ ಮತ್ತೊಂದನ್ನು ಹಿಂದಿಕ್ಕಿ ಮುನ್ನುಗ್ಗುವ ತವಕ. ಅವುಗಳ ಮೇಲೂ ಜನ.
ಡಿ.ಪಿತಾಮಹ. ಚಿಂತಿಸಿದ.
ಸುಡುವ ಜನ , ಸಿಡುಕುವ ಜನ , ತಲ್ಲಣಿಸುವ ಜನ , ತಬ್ಬುವ , ತಾಕೂವ , ಆತುಕೊಳ್ಳುವ , ಆತಂಕಗೊಳ್ಳುವ , ಬೆಚ್ಚುವ , ಬಿಚ್ಚುವ , ಕರಗುವ , ಕರಗಿಸುವ , ಕಾಯಿಸುವ , ಜನ.
ಜನಕ್ಕೆಲ್ಲ   ಮನ. ಜನರಂತೆ ಮನ.
ಡಿ.ಪಿತಾಮಹ. ಸುತ್ತಲು ದಿಟ್ಟಿಸಿದ.
ದೃಷ್ಟಿ ಮತ್ತೆ ಸೈಬರ್ ಕೆಫೆಗೆ ಇಳಿಯುವ , ಹತ್ತುವ ಮೆಟ್ಟಿಲುಗಳ ಮೇಲೆ.
ಅಚ್ಚರಿ.
ಆಳದ ನೆಲಮಾಳಿಗೆಗೆ ಇಳಿಯುವ ಮೆಟ್ಟಿಲುಗಳ ಮೇಲೆ ಯಾವತ್ತೂ ತೀರದ ಕುತೂಹಲ.
ಮತ್ತೆ ದಿಟ್ಟಿಸಿದ.
ಜನರು ಕೆಳಗಿನಿಂದ ಮೇಲಕ್ಕೆ ಬರುತ್ತಿದ್ದಾರೆ. ಸ್ವಲ್ಪ- ಸ್ವಲ್ಪವಾಗಿ , ತಲೆ , ಹಣೆ , ಕಣ್ಣು , ಬಾಯಿ ,ಕಟ್ಟು , ಎದೆ, ಕೈ , ಹೊಟ್ಟೆ , ಕಾಲು.... ಪೂರ್ತಿ ದೇಹ.
ಡಿ.ಪಿತಾಮಹ ಸಮೀಕರಿಸುತ್ತಾನೆ.  ಪರಿಚಯವೂ ಹೀಗೆ. ಅಲ್ಪವಾಗಿ - ಸ್ವಲ್ಪವಾಗಿ  ಕೊನೆಗೆ ಎಲ್ಲವಾಗಿ.
ಕೊನೆಯ ಕೊನೇ ಕಂಡ ಕ್ಷಣಗಳಲ್ಲಿ ಎಲ್ಲವೂ ಬಟಾಬಯಲು. ಕಲ್ಪನೆ ನಿಜವಾದಾಗ ಎಲ್ಲವೂ ಎದುರಲ್ಲಿ.
ಬೆತ್ತಲು... ಬೆತ್ತಲು... ನಗ್ನ..ನಗ್ನ..
ಇಳಿಯುವದು ಅಷ್ಟೇ. ಇಡೀ-ಇಡಿಯಾಗಿ ಸ್ವಲ್ಪ-ಸ್ವಲ್ಪವಾಗಿ ವಕ್ರ-ವಕ್ರವಾಗಿ , ದ್ವಂದ್ವವಾಗಿ.
ಎಳಿದಂತೆ ಎಲ್ಲವೂ ಮಾಯ.ಎಲ್ಲವು ಲೀನ.
ಮತ್ತೆ ಮನಸ್ಸು ಸಮೀಕರಿಸುತ್ತದೆ. ಇಳಿಯುವಾದೆಂದರೆ ಕರಗುವದೆ? ಅವರಲ್ಲಿ ಮಾಯವಾಗುವದೆ? ಬಣ್ಣ-ಬಣ್ಣವಾಗಿ , ಕಿರಣ-ಕಿರಣವಾಗಿ , ಕೊನೆಗೊಂದು ದಿನ ಬಿಂದುವಾಗುವದೆ? ಸಂಖ್ಯಾ - ಅಸಂಖ್ಯ ಬಿಂದುಗಳು ಸೇರಿ ರೇಖೆ , ವರ್ತುಲಾಗಳಾಗುವಂತೆ ಮನಸು - ಮನಸುಗಳ ಬಿಂದುಗಳು ಸೇರಿದರೆ ರೂಪವೊಂದು , ಆಕೃತಿಯೊಂದು ಮೂಡುವದೇ? ಮೂಡಿದ ರೂಪಕ್ಕೆ ಸಂಬಂದ ಎನ್ನಬಹುದೇ? ಅದಕ್ಕೊಂದು ಹೆಸರು ಕೊಡಬಹುದೇ?
ಕಣ್ಣು ಮತ್ತೆ ದಿಟ್ಟಿಸಿತು.
ಇಳಿದವರೆಲ್ಲ ಮೇಲಕ್ಕೆ ಹತ್ತಿ ಬರುತ್ತಿದ್ದಾರೆ. ಒಬ್ಬರು ಬೇಗ ಇನ್ನೊಬ್ಬರು ತಡ. ಒಟ್ಟಿನಲ್ಲಿ ಇಳಿದವರು ಮೇಲಕ್ಕೆ ಬಂದೆ ಬರುತ್ತಿದ್ದಾರೆ.

ಡಿ.ಪಿತಾಮಹ. ತರ್ಕಿಸೀದ.
ಹಾಗಾದರೆ ಇಳಿದ ಸಂಬಂದ ಗಳೆಲ್ಲಾ ಹೊರ ಬರಲೇ ಬೇಕೋ.? ಒಂದು ಪರಿಮಿತಿಯ ಅವಶ್ಯಕತೆಯ ನಂತರ ,  ಇಳಿದ , ತಬ್ಬಿದ , ಮನಸುಗಳು ಸಂಬಂದ ಗಳ ದಾಟಿ ಹೊರಗೆ ಬರಲೇ ಬೇಕೋ?
ಕೆಲವಕ್ಕೆ ಆತುರ ಕೆಲವಕ್ಕೆ ಸಂಯಮ.
ಒಟ್ಟಿನಲ್ಲಿ ಬಲಿತ ಸಂಬಂದ ಗಳು ಹೊರ ಬೀಳುತ್ತಿವೆ. ಪುಳ-ಪುಳನೆ ಮಳೆ ಬರುವ ಹಾದಿಯಲ್ಲಿ ಮಳೆ ಹುಳಗಳು  ಏಳುವಂತೆ , ಮನಸ್ಸಿನ ತುಂಬಾ ವಿಚಾರದ ಹುಳಗಳು ಹರಿದಾಡುತ್ತಿವೆ. ಬೇಕೆನಿಸುವಷ್ಟು , ಬೇಕಾದಷ್ಟು , ಬೇಡವೆನಿಸುವಷ್ಟು , ಬೇಡುವಷ್ಟು.
ಹಾಗಾದರೆ ಇಳಿದವೆಲ್ಲವೂ , ಇಳಿದ ಮನಸ್ಸುಗಳೆಲ್ಲವೂ ಸಂಬಂದಗಳೆ ಆಗಬೇಕೆ?
ಗೊತ್ತಿಲ್ಲ ಅಥವಾ ಇರಬಹುದೇನೋ?
ಬಿಂದು - ಬಿಂದು ಸೇರಿ ಆದ ಆಕೃತಿಗೆ ಹೆಸರಿಡುವಂತೆ ಮನಸ್ಸು ಮನಸ್ಸು ಸೇರಿ ಆಗುವ ಆಕೃತಿಗೆ ಹೆಸರು ಇಡುವದು ಅಷ್ಟು ಅಗತ್ಯವೇ?
ಇರಬೇಕು. ಇಲ್ಲವಾದರೆ ನನ್ನ , ನಿಹಾರಿಕಾಳ ಮನಸುಗಳ ಸಂಬಂದಕ್ಕೆ ಪ್ರೀತಿ ಎನ್ನುವ ಹೆಸರನ್ನು ಅವಳು ಕೊಡುತ್ತಿರಲಿಲ್ಲ. ಕೊಟ್ಟ ಹೆಸರು ಬಲಿತು ಎದೆಯೊಳಗೆ ಇಳಿಯುತ್ತಳಿರಲಿಲ್ಲ.
ಅವಳು ನನ್ನೊಳಗೆ ಇಳಿದಳೆ?
ನಾನು ಅವಲೊಳಗೇ ಹತ್ತಿದೆನೇ?
ಅಥವಾ ಒಟ್ಟಿಗೆ ಇಳಿದು ಎಲ್ಲ ಮುಗಿದ ಮೇಲೆ ಹತ್ತಿದೇವೆ?
ಸಮೀಕರಣ ನೆಲಮಾಳಿಗೆಯೊಂದಿಗೆ.
ಇಳಿದುದು ಅವಳೇ ಇರಬೇಕು. ಇಂಚು - ಅಂಚಾಗಿ , ಮುದ್ದೆ- ಮುದ್ದೆಯಾಗಿ , ಕಾದು  ಮಾಗಿದ ಕಿಚ್ಚೊಂದು ಕನವರಿಸಿ  , ಕವಳೋಡೆದು , ತೊನೇ - ತೊನೆದು
ಕರುಳ ಬಳ್ಳಿಯನ್ನು , ಜಗಿ ಹತ್ತಿ , ಕಣ್ಣುಗಳ ಮೂಲಕ ತಂಪನೆರೆದು ಮನದೊಳಗೆ ಬೇರು ಬಿಟ್ಟು , ಕನಸುಗಳ ಬೆಳೆದು , ಸುಖವ ಹೀರಿ, ತೊನೆದು ತೂಗಾಡಿ , ಝೇಂಕರಿಸಿ ಹೃದಯದೊಳಗೆ ಒಲವ ಕೆತ್ತಿದಂತೆ.
ನನಗೆ ಇದೇನೆಂದು ಗೊತ್ತಿರಲಿಲ್ಲ. ಅವಳಿಗೂ ಹೀಗೆ ಅಗಿತ್ತ?
ಕೇಳಿದೆ.
ಹೌದು ಎಂದಳು. ಪ್ರೀತಿಯಿದು ಎಂದಳು . ತಬ್ಬಿದಲು. ಆವುಚಿಕೊಂಡಳೂ. ಹಿಡಿದೆಳೆದು ಆವರಿಸತೊಡಗಿದಳು
ಉಸಿರು ಭಾರ , ಮಣ ಭಾರ. ಮನಸ್ಸು ಆಸೆಯ ವಿಗ್ರಹ. ಬಯಕೆಗೆ ಆಗ್ರಹ.. ಎಲ್ಲ ಮುಗಿದ ಮೇಲೆ ಹದವಾದ ಮಳೆ.!
ಮತ್ತೆ ಇದೇನು? ನಾನು
"ಪ್ರೀತಿ" ಅವಳು , ನಿಹಾರಿಕ.
ಮತ್ತೆ ಉಸಿರಿಗೆ ತೀರದದಾಹ.. ದಣಿವಿಗೆ ದೇಹ.
ಇಳಿಯುವದು .. ಹತ್ತುವದು.. ಮೆಟ್ಟಿಲುಗಳನ್ನು ಅಲ್ಲ .. ದೇಹಗಳನ್ನು... ಮನಸ್ಸುಗಳನ್ನು..ಕ್ರಿಯೆಗಳನ್ನ.
ಅರಳಿಸುತಿದ್ದೆ..ಅರಳುತ್ತಿದ್ದಳು... ಕೆರಳಿಸುತ್ತಿದ್ದಳು... ಕೆರಳುತ್ತಿದ್ದೆ..! ನಮ್ಮಿಬ್ಬರ ಜಗದಲ್ಲಿ , ಮನಸುಗಳೇ ನಕ್ಷತ್ರಗಳು.
ಇಳಿದಂತೆ , ಹತ್ತಿದಂತೆ ಕಾಲ ಉರುಳಿದಂತೆ ದೇಹದ , ಮಾನಸಿನ ಮೂಲೆ ಮೂಲೆಗಳು ಪರಿಚಯವಾದಂತೆ ಆಳ ಸಾಗರದಲ್ಲಿ ಅನುಮಾನದ ಅಲೆಯೊಂದು ಅಲೆ-ಅಲೆದು ಹುತ್ತವಾಗತೊಡಗಿತ್ತು.
 ಮನಸು ಮನಸುಗಳ ವೃತ್ತದಿಂದ ಬಿಂದುವೊಂದು ದೂರವಾಗಿ ರೂಪಿಸಿದ
ಆಕೃತಿಯ ಹೆಸರು.ಸಂಶಯ .
ದೇಹಗಳ ಎಡೆಯಲ್ಲಿ , ಮನಸ್ಸುಗಳ ಮೂಲೆಯಲ್ಲಿ ಮತ್ತೆ ಹುಡುಕಾಟ , ಹುಡುಕಾಟದ ಹೆಸರು ಕುರುಹು. ಪುರಾವೆ.
ನಿಹಾರಿಕಾ ಪ್ರಶ್ನಿಸಿದಳು " ಬೆರ್ಪಡಲು ಕಾರಣಕ್ಕೊಂದು ಪುರಾವೆ ಬೇಕೇ?"
ಅವಳ ಕಣ್ಣುಗಳು ತಣ್ಣಗೆ ಇದ್ದವು. ನಿರ್ಧಾರವಿತ್ತು
ನಾನು ಅವಳ ಕಣ್ಣುಗಲ್ಲಿ ಇಳಿಯಲು ಪ್ರಯತ್ನಿಸಿದೆ. ಕಣ್ಣು ಕೊರೆಯುತ್ತಿತ್ತು . ನನ್ನ ನಿಹಾರಿಕಾಳ ಕಣ್ಣುಗಳೇ ಎಂಬ ಅನುಮಾನ ಬರುವಷ್ಟು ತಣ್ಣಗೆ.
ನೆತ್ತಿಯೊಳಗಿ೦ದ ಜಲಲ ಧಾರೆಯೊಂದು ಇಳಿದು , ಹರಿದು ಎದೆಯೊಳಗೆ ಬಚ್ಚಿಟ್ಟ ಗೂಡನ್ನು ಕೊಚ್ಚಿ ಹೋಗುವಂತೆ  , ಕಾಲ ತುದಿಯ ಚಳುಕು , ಸಿಡಿಲಂತೆ ತಳಮಳಿಸಿ ಉಸಿರ ಬಿಸಿ ಮಾಡಿ, ಕಣ್ಣೊಳಗಿಂದ ನೀರ ಹನಿಯೊಂದು ಚಳ್ಳನೆ ಚಿಮ್ಮಿದಂತೆ.
ಮನಸ್ಸು ಬಿಕ್ಕಳಿಸಿ ಭೊರ್ಗರಿಯ ತೊಡಗಿತು.
ಮನಸಿನ ವರ್ತುಲವ ಕತ್ತರಿಸಿದಂತೆ. ಬಿಂದುವೊಂದರಲ್ಲಿ ತುಂಡರಿಸಿದಂತೆ. ಕತ್ತರಿಸಿದ ವರ್ತುಲಕ್ಕೂ ಒಂದು ರೂಪ. ರೇಖೆ. ರೇಖೆಯಲ್ಲಿ ಬಿಂದುಗಳಿವೆ.  ಎರಡು ಅಂಚುಗಳು ಇವೆ. ಆದರೆ ದೂರ ದೂರ. ಹತ್ತಿರವಿದ್ದು ಸೇರಲು ಆಗದಷ್ಟು.
ಡಿ.ಪಿತಾಮಹ ತಲೆ ಕೊಡವಿದ.
ನೆನಪುಗಳ ಕಳೇಬರ ಎದುರಿಗೆ. ಕಾಲನ ಚಿತೆಯೊಳಗೆ ಅರೆ ಬೆಂದ ನೆನಪುಗಳ ಕಳೇಬರ. ಒಳಗೆ ಸುಡಲು ಬಿಟ್ಟರೂ ಬೂದಿಯಾಗದ ನೆನಪುಗಳು.
ಮತ್ತೆ ದಿಟ್ಟಿಸಿದ.
ಟೀ ಖಾಲಿಯಾಗುತ್ತಾ ಬಂದಿತ್ತು. ಕೊನೆಯ ಗುಟುಕು. ಬಹುಶ: ಎಲ್ಲವೂ ಒಂದಲ್ಲ ಒಂದು ದಿನ ಖಾಲಿಯಾಗಲೇ ಬೇಕೇನೋ?
ನಾಳೆ ಮತ್ತೆ ಬೇರೆ ಟೀ ಗ್ಲಾಸ್. ಬೇರೆ ಟೀ.
ಇಳಿಯುವವರು ಇಳಿಯುತ್ತಿದ್ದಾರೆ.
ಹತ್ತುವವರು ಹತ್ತುತ್ತಿದ್ದಾರೆ.