Wednesday, October 24, 2012

ಪರಿಧಿ

ನಿಮಗೆ ಇದನ್ನ ಟೈಪಿಸಿ ಕೊಡೋಣ ಎಂದು ಬಹಳ ದಿನದಿಂದ ಅ೦ದು ಕೊ೦ಡಿದ್ದೆ . ಇಲ್ಲಿ ಪಾತ್ರಗಳಿಗೆ ಹೆಸರು ಕೊಡಲು ನನಗೆ ಸಾಧ್ಯವಾಗಲಿಲ್ಲ , ನಿಮಗೆ ಅನಿಸಿದ ಹೆಸರು ಕೊಟ್ಟು , ಬಿಳುಪಿನ ಹಿಂದಿನ ಕಪ್ಪು , ನೆನಪಿಗೆ ತಂದು ಓದಿಕೊಂಡರೆ ಅರ್ಥ ಕೊಟ್ಟಿತು  - ಲೇಖಕ


ಪತ್ರ -೧ 

ಸ್ಥಳ : ಮನೆ ನಂಬರ್ ೫೩ ಬಸವನಗುಡಿ 
ಜಾಗ : ಎರಡನೇ ಮಹಡಿಯ ಮೊದಲ ರೂಮು 

ಪತ್ರದ ಆರಂಭ "

ಕಾಲಿನಿಂದ ಕುತ್ತಿಗೆಯವರೆಗೆ ಬೆಳೆದು ನಿಂತ ದೇಹದ ಮೇಲ್ಭಾಗದಲ್ಲಿ ಎಲ್ಲರಿಗೂ ಮುಖ ಸ್ಥಾಪಿತವಾಗಿತ್ತು. ಆದರೆ ನಿನಗೆ ಮುಖವಿರುವ ಜಾಗದಲ್ಲಿ ಲೋಳೆ ಯಿತ್ತು. ಅದು ನಿನಗೆ ಮುಖವೂ ಮುಖವಾಡವೂ ಆಗಿ ಪಾತ್ರಗಳನ್ನ ಬದಲಿಸುತ್ತಿತ್ತು. ಆಕಾರಗಳನ್ನು ಹುಟ್ಟು ಹಾಕುತ್ತಿತ್ತು. ಲೋಳೆಯ ಒಳಗೆ ಕಣ್ಣು ಕಿವಿ , ಮೂಗು ನಾಲಗೆ , ಹುಬ್ಬು ರೆಪ್ಪೆ ಇವೆಲ್ಲ ಚರ್ಮದ ಸಹಾಯದಿಂದ ಅ೦ಟಿಕೊ೦ಡಿದ್ದವು . ನಿನ್ನ ಲೋಳೆ ಮುಖದ ಸ್ವರೂಪ ಆಗಾಗ ಬದಲಾಗುತ್ತಿತ್ತು ಅಂತೆಯೇ ಅದರ ಗುಣ . ಅದು ಅ೦ಟಿಕೊಳ್ಳುತ್ತ , ಅ೦ಟಿಸಿಕೊಳ್ಳುತ್ತ , ದೊಡ್ಡವಾಗಿ , ಉದ್ದವಾಗಿ , ಅಗಲವಾಗಿ , ಚಿಕ್ಕದಾಗಿ , ಸಣ್ಣದಾಗಿ , ಮೃದುವಾಗಿ , ಗಡುಸಾಗಿ ಬೆಳೆಯುತ್ತ ನಿನ್ನ ಆವರಿಸಿ ಕೊನೆಗೆ ಬೇರೆಯವರನ್ನ್ನು ಒಳಗೆ ಸೆಳೆದು ನು೦ಗುತ್ತಿತ್ತು . ಹೀಗೆ ಸಿಲುಕಿದವರಲ್ಲಿ ನಾನು ಒಬ್ಬಳಾಗಿದ್ದೆ. ನಿನ್ನ ಮುಖವೆಂಬ ಲೋಳೆಗೆ ಆಕರ್ಷಿತವಾಗಿ ಬರುವ ನಾವೆಲ್ಲ ಕೀಟಗಳಾಗಿದ್ದೆವು. ಕೀಟಗಳು ಲೋಳೆಗೆ ಅಂಟಿ ಒದ್ದಾಡಿ ಅಸುನಿಗುತ್ತಿದ್ದವು . ನೀನು ಬೇಟೆಯಾಡಲು ತಾಕತ್ತಿಲ್ಲದ ಮುದಿ  ಸಿ೦ಹವೊ೦ದು ಗವಿಯೊಳಗೆ ಮಿಕಗಳಿಗೆ ಕಾದಂತೆ  ಮತ್ತೆ ಅಂಟಿಕೊಳ್ಳುವ ಕೀಟಗಳಿಗೆ ಕಾಯುತ್ತಿದ್ದೆ.

( ಪತ್ರದ ಅಂಚಿನಲ್ಲಿ ನೀರಿನ ಹನಿ ಬಿದ್ದು ಒದ್ದೆಯಾಗಿ ಕಾಗದ ಒಣಗಿದ ಗುರುತು , ಕಾಗದ ಸ್ವಲ್ಪ ಬಣ್ಣ ಕಳೆದುಕೊಂಡಿತ್ತು , ಅಕ್ಷರಗಳು ಹಲವಾರು ಅಳಿಸಿ ಹೋಗಿದ್ದವು , ಹೀಗಾಗಿ ಕೆಲವು ಪ್ಯಾರಾಗಳನ್ನು ಇಲ್ಲಿ ಹಾಕುತ್ತಿಲ್ಲ. ಯಾರೋ ಹೆಣ್ಣು ನೋಡಲು ಬಂದ ದಿನದ ವಿವರಗಳು - ಲೇಖಕ )

ಮದುವೆಗೂ ಮೊದಲು ನೀನು ನಮ್ಮ ಮನೆಗೆ ಬರುತ್ತಿದ್ದೆ .ಅಪ್ಪನ ಮನೆಯಲ್ಲಿ ನಾನು , ನನ್ನ ಕಾಲಿಲ್ಲದ ದೇಹ , ಅಪ್ಪ , ಅಪ್ಪನ ಚಟಗಳು ಇವಿಷ್ಟೇ.  ಮದುವೆ ಆಗುವೆ ಎಂದೆ , ಅಪ್ಪ ಸರಿ ಎಂದರು. ಸಣ್ಣ ಮಾತುಕತೆ , ನಮ್ಮ ಮದುವೆ ಸಿದ್ಧವಾಗಿತ್ತು. ಕೈಗೆ ಹಚ್ಚಿದ ಮದರಂಗಿಯ ಬಣ್ಣ ಗೊತ್ತಿಲ್ಲದೇ ಕು೦ಟು ಕಾಲಿಗೆ ತಾಗಿ , ಅದು ಸಹ ಸಣ್ಣಗೆ ಕೆಂಪಾಗಿತ್ತು , ಉದ್ದ ಲಂಗದ ಒಳಗೆ ಅದು ಉದ್ದವಾದ೦ತೆ. ನಿನಗೆ ನೆನಪಿದೆಯ? ಪೇಪರಿನಲ್ಲಿ ನೀನು ಹಾಕಿಸಿದ ಮದುವೆಯ ಫೋಟೋದಲ್ಲಿ ನನಗಿಂತ , ನಿನಗಿಂತ  , ಎಲ್ಲರಿಗಿಂತ , ಹೆಚ್ಚು ಖುಷಿ ಪಟ್ಟು ದೊಡ್ಡದಾಗಿ ಕಾಣಿಸಿದ್ದು ನನ್ನ ಕು೦ಟು ಕಾಲು .! ಅವತ್ತಿನ ದಿನದವರೆಗೆ  ನೀನು ಘನವಾಗಿದ್ದೆ ಅಥವಾ ಘನವೆ೦ದು ನಾನು ತಿಳಿದಿದ್ದೆ . ನಿನ್ನ  ಲೋಳೆಯ ಮೊದಲ ಹೇಸಿಗೆ ನನಗೆ ಅರಿವಾದುದು ನಾವು ಮದುವೆಯಾದ ಮೇಲೆಯೇ . ನನ್ನ ಮದುವೆಯಾದ ನೀನು ಎಲ್ಲರಿಗು ದೇವರಾಗಿದ್ದೆ , ನನಗು , ಅಪ್ಪನಿಗೂ , ಸಮಾಜಕ್ಕೂ . ನನಗೆ ಕನಸುಗಳಿದ್ದವು , ಕನಸುಗಳಿಗೆ ಕಾಲುಗಳಿರುವದಿಲ್ಲ. ರೆಕ್ಕೆಗಳು ಮಾತ್ರ ಎಂದಿದ್ದಳು ಅಮ್ಮ , ಅವಳು ಇದ್ದಿದ್ದಿದರೆ ಇವತ್ತು ಚೀರುತ್ತಿದ್ದೆ ಕನಸುಗಳಿಗೆ ಇರುವದು ಕು೦ಟು ಕಾಲುಗಳು ಮಾತ್ರ . ನಾವೇ ಕಡಿದು ಕು೦ಟು ಮಾಡಿದ ಕಾಲುಗಳು , ನಾವೇ ಹಿಸುಕಿ ಕೊಂದ ರಕ್ತನಾಳಗಳು , ನರಗಳು ಕೆಂಪಾಗಿ , ದಟ್ಟ ನಿಲಿಯಾಗಿ ಚದುರಿದ ಕುಂಟು.
ಅವತ್ತು ನಮ್ಮಿಬ್ಬರ ಮೊದಲ ರಾತ್ರಿ . ನೀನು ಬೆವತಿದ್ದೆ , ನನ್ನ ಮದರಂಗಿ ಇನ್ನು ಕೆಂಪಾಗಿದ್ದವು , ಕು೦ಟು ದೇಹಕ್ಕೆ ಮಾತ್ರ , ಬಯಕೆಗಲ್ಲ . ನಿನ್ನ ಮುಖ ಬಿಳುಚಿತ್ತು ( ಆಗಿನ್ನೂ ಅದರ ಲೋಳೆಯ ಅನುಭವ ಆಗಿರಲಿಲ್ಲ ). ನನ್ನ ಪೂರ್ಣವಾಗದ ದೇಹದ ಪಕ್ಕ ನಿನ್ನ ಪೂರ್ಣವಾದ ದೇಹ , ಪುರ್ಣವಾಗದ ಮನಸು ಎರಡು ಇತ್ತು . ಎರಡು ತಣ್ಣಗೆ ! ನೀನು ಏನೇನೋ ಬಡಬಡಿಸಿದೆ . ನಿನ್ನ ನಾಲಗೆ ಸರಕ್ಕನೆ ಹೊರಗೆ ಒಳಗೆ ಓಡುತ್ತಿತ್ತು . ಸಮಯವಲ್ಲದ ಸಮಯವೆ೦ದೆ , ನನ್ನ ಪಕ್ಕ ಮಲಗಿದೆ. ನಿನ್ನ ಪೊರೆಯೊಳಗೆ ಲೋಳೆ ಪುಳ- ಪಿಳನೆ ಹರಿದಾಡುತ್ತಿತ್ತು . ರಾತ್ರಿ ಹಗಲಾದವು , ಹಗಲು ರಾತ್ರಿಯಾದವು , ದಿನ ಕಳೆಯುವಾ ಆಟದಲ್ಲಿ ನಮ್ಮಿಬ್ಬರ ದೇಹದ ಸ್ಪರ್ಶ ಅದಲು ಬದಲಾಗಲೇ ಇಲ್ಲ. ನಿನ್ನ ಸ್ಪರ್ಶದಲ್ಲಿ ಬಿಸಿಯಿರಲಿಲ್ಲ ಅಥವಾ ಅದು ನಿನಗೆ ಬಂದಿರಲೇ ಇಲ್ಲ. ನಿನ್ನ ಮುಖದಿಂದ ಸಣ್ಣಗೆ ಲೋಳೆ ಜಿನುಗತೊಡಗಿತ್ತು. ನನ್ನ ದೇಹಕ್ಕೆ ಜರೆದೆ , ಸುಖಕ್ಕೆ ಯೋಗ್ಯವಲ್ಲದ ದೇಹವಿದು ಎಂದೆ . ನನಗೆ ಕಾಲಲ್ಲಿ ಬಲವಿರಲಿಲ್ಲ, ನಿನಗೆ ದೇಹದಲ್ಲಿ ! ನಿನ್ನ ಲೋಳೆ ಕ್ಷಣ ಕ್ಷಣಕ್ಕೂ ಅಗಲವಾಗುತ್ತ , ಧಾರೆಯಾಗುತ್ತ ಇಳಿದು ನಿನ್ನ ಕೈ ಮೂಗು ಕಾಲು ಕುತ್ತಿಗೆ , ಎದೆ ತೊಡೆ , ಬೆನ್ನು ಸೊ೦ಟ ಎಲ್ಲವನ್ನು ಆವರಿಸಿ ನಿನ್ನ ಘನವನ್ನು ಕರಗಿಸಿತ್ತು. ನೀನು ಯಾವತ್ತಿಗೂ ಘನವಲ್ಲ ಎನ್ನುವದು ನನಗೆ ತಿಳಿಯಿತು ಹಾಗ್ ನಿನಗೆ ತಿಳಿದಿತ್ತು ಬೇಸರವಿಲ್ಲ ನನಗೆ , ಪಾಲಿಗೆ ಬಂದಿದ್ದು ಎಂದೆ , ನಿನಗೆ ಹೆದರಿಕೆಯಿತ್ತು , ನಿನ್ನ ಪ್ರಶ್ನೆ , ನಿನ್ನ ಅಸ್ತಿತ್ವದ ಪ್ರಶ್ನೆ . ಲೋಳೆಯಾದ ನಿನಗೆ ಘನವಾಗಬೇಕಿತ್ತು , ಮಗು ಕೊಡದ ದೇಹ ನಾನಾದೆ.!

ನೀನು ಕತೆಗಳನ್ನು ಬರೆಯುತ್ತಿದ್ದೆ. ನಿನ್ನ ಪ್ರತಿ ಕತೆಯನ್ನು ನೀನು ಬೇರೆ ಬೇರೆ ಹೆಸರಿನಲ್ಲಿ ಬರೆಯುತ್ತಿದ್ದೆ, ಮಾಸಿಕಗಳಲ್ಲಿ ಪ್ರಕಟವಾದ ನಿನ್ನ ಕತೆಗಳಿಗೆ ಮತ್ತೆ ನೀನು ಬೇರೆಯದೇ ಹೆಸರಿನಲ್ಲಿ ಪತ್ರ ಬರೆಯುತ್ತಿದ್ದೆ. ನಿನ್ನ ಲೋಳೆ ಮುಖದಿಂದ ಹೊರಟ ಹಲವಾರು ಕತೆಗಳು ನಿನ್ನಂತೆ ಬೇರೆ ಬೇರೆ ಸ್ವರೂಪ ಪಡೆದು , ನಿನ್ನದೇ ಹೊಗಳಿಕೆ ನಿನ್ನದೇ ತೆಗಳಿಕೆ ಪಡೆಯುತ್ತಿದ್ದವು . ನೀನು ಹೊಗಳುವರ ಜೊತೆ ಹೊಗಳುತ್ತಿದ್ದೆ , ತೆಗಳುವರ ಜೊತೆ ತೆಗಳುತ್ತಿದ್ದೆ. ನೀನು ಮೇಲಕ್ಕೆ ಏರಿದೆ ಅಥವಾ ಕೆಳಕ್ಕೆ ಇಳಿದೆ , ಗೆದ್ದೇ ಅಥವಾ ಸೋತೆ , ಹುಡುಕಿದೆ ಅಥವಾ ಕಳೆದೆ .! 

ನೀನು ನಿನ್ನದೇ ಪರಿಧಿಯಲ್ಲಿ ಸೃಷ್ಟಿಯಾಗಿದ್ದ ಬಿ೦ದುವಾಗಿದ್ದೆ , ನಿನ್ನ ಪರಿಧಿಯೊಳಗೆ  ನೀನು ಕೆಂದ್ರ , ತ್ರಿಜ್ಯಾ , ಜ್ಯಾ ಮು೦ತಾದವುಗಳಾಗಿದ್ದೆ.  ಒಂದೆ ಮನೆಯೊಳಗೇ ಬದುಕುವ ನಾವಿಬ್ಬರು ಬೇರೆ ಬೇರೆ ವೃತ್ತಗಳು . ನಿನ್ನ ಪರಿಧಿ , ನಿನ್ನ ವೃತ್ತ , ನಿನ್ನ ತ್ರಿಜ್ಯ , ನಿನ್ನ ಜ್ಯಾ ಇವೆಲ್ಲದರ ಹೊರಗೆ ನನ್ನ ಅರ್ಧ ವೃತ್ತ , ಪೂರ್ಣವಾಗದ , ಪೂರ್ಣವಾಗಲು ಕಾದ , ಕಾಯುವ ವೃತ್ತ , ನಿನಗೆ ಮನಸ್ಸುಗಳು ಮುಖ್ಯವಾಗಿರಲಿಲ್ಲ , ಹೊರ ಜಗತ್ತಿಗೆ ನೀನು ಆದರ್ಶನಾಗ ಬೇಕಿತ್ತು , ಕತೆಗಾರನಾಗಬೇಕಿತ್ತು , ಗೆದ್ದವನಾಗಬೇಕಿತ್ತು , ಯಾಕೆ ? ನಿನ್ನ ದೇಹದ ಕೊರತೆಗೆ? ಘನವಾಗಲು ಹೊರಟ ಹಾದಿಯಲ್ಲಿ ನಿನ್ನ ಲೋಳೆ ನನ್ನ ಮೇಲೆ ಬಸಿ ಬಸಿದು ಅದರೊಳಗೆ ನನ್ನ ಮುಳುಗಿಸಿ , ಸಿಲುಕಿಸಿ ಕಾಯಿಸಿ ಸಾಯಿಸಿತ್ತು ಅಥವಾ ಸಾಯ ಬೇಕೆಂಬ ಆಸೆಗೋಸ್ಕರ ಬದುಕಿಸಿತ್ತು . 

(ಕವರಿನಲ್ಲಿ ಇನ್ನು ಪುಟಗಳಿದ್ದವು , ಮತ್ತೆ ಟೈಪಿಸೋಣ  )

Monday, September 24, 2012

ತಿಂಗಳಿಗೊಂದು ಪುಟ #4


ವೃತ್ತ - ಹೆಸರು

 
ಎಕ್ಸ್ . ಕೆ . ಮರಸರ ಹಡಪದ್ ಅವರನ್ನ ಕಾಡಿದ ಹೆಸರಿನ ಅಸ್ತಿತ್ವ
 
 
ನಿಮಗೆ , ನಮಗೆ , ಅವರಿಗೆ , ಇವರಿಗೆ , ಇನ್ನೊಬ್ಬರಿಗೆ , ಮತ್ತೊಬ್ಬರಿಗೆ , ಅವನಿಗೆ , ಅವಳಿಗೆ , ಅದಕ್ಕೆ, ಇದಕ್ಕೆ ಹಾಗೂ ಈ ಪಟ್ಟಿಯಲ್ಲಿ ಸೇರಿಸಬಹುದಾದ ಇನ್ಯಾವುದಕ್ಕೆ ಆಗಲಿ ಎಲ್ಲ ಕಡೆ ಇರುವಂತೆ ಈ ಊರಿನಲ್ಲೂ ಸಹ ಹೆಸರು ಇದ್ದಿತ್ತು ಮತ್ತು ಪ್ರತಿಯೊಬ್ಬರೂ ಇನ್ನೊಬ್ಬರನ್ನು ಒಂದಲ್ಲ ಒಂದು ಹೆಸರಿನಿಂದಲೇ ಕರೆಯುತ್ತಿದ್ದರು , ಕೂಗುತ್ತಿದ್ದರು , ಬೆದರಿಸುತ್ತಿದ್ದರು , ಓಡಿಸುತ್ತಿದ್ದರು , ಆದರಿಸುತ್ತಿದ್ದರು , ಹೊಗಳುತಿದ್ದರು , ತೆಗಳುತ್ತಿದ್ದರು , ಪ್ರೀತಿಸುತ್ತಿದ್ದರು. ಹೆಸರು ಯಾಕೆ ಇರಬೇಕು ಎನ್ನುವದರ ಕುರಿತು ಯಾವತ್ತಿಗೂ ಚರ್ಚೆ ಆಗಿರಲಿಲ್ಲ ಅಥವಾ ಚರ್ಚೆ ಅವಶ್ಯಕ ಎಂದು ಯಾರಿಗೂ ಅನಿಸಿರಲಿಲ್ಲ. ಹೆಸರು ಎನ್ನುವದು ಊರಿನ ಅವಿಭಾಜ್ಯ ಅಂಗವೇ ಆಗಿತ್ತು. ಹೇಗೆ ಜೀವವಿರಲು ಶ್ವಾಸ , ಬಡಿತ , ಆಹಾರ , ನಿದ್ರೆ , ಚಲನೆ ಮುಂತಾದ ಪಟ್ಟಿ ಮಾಡಿದ ಚಟುವಟಿಕೆ ಇದ್ದವೋ , ಹಾಗೆ ಜೀವಕ್ಕೆ ಅಸ್ತಿತ್ವ ಇರಲು ಹೆಸರು ಅನಿವಾರ್ಯವೇ ಆಗಿತ್ತು . ಊರಿನ ಜನ ಜನಕ್ಕೆ ಹೆಸರು ಕೊಟ್ಟಿದ್ದರು , ದನಕ್ಕೆ ಹೆಸರು ಕೊಟ್ಟಿದ್ದರು. ಜನಕ್ಕೆ ಇದ್ದ ಹೆಸರು ಮನಕ್ಕೂ ಇತ್ತು ಜನ ಬೇರೆಯಾಗಿದ್ದರು ಅವರ ಮನ ಬೇರೆಯಾಗಿತ್ತು , ಹೀಗಾಗಿ ಜನರ ಹೆಸರು , ಮನದ ಹೆಸರು ಯಾವತ್ತಿಗೂ ಬೇರೆಯದೇ ಆಗಿರುತ್ತಿತ್ತು , ಅದು ಅನ್ವರ್ಥ ನಾಮವಾಗಿತ್ತು . ಜನ ಜನಕ್ಕೆ ಹೆಸರು ಇಡಲು ಸಂಭ್ರಮಿಸುತ್ತಿದ್ದರು. ಸಣ್ಣ ಜೀವವೊಂದು ಬಾಹ್ಯಕ್ಕೆ ತೆರೆದುಕೊಂಡಾಗ ಜನ ಅದಕ್ಕೆ ಹೆಸರಿಡಲು ಕಾತರಿಸುತ್ತಿದ್ದದು. ಜೀವದ ಜೀವಕ್ಕೆ ಕಾರಣಕರ್ತರು , ಕಾರಣಕರ್ತರ ಸುತ್ತಣ ಕಾರ್ಯಕರ್ತರು ಹೀಗೆ ಎಲ್ಲರು ಸೇರಿಕೊಂಡು ಜೀವದ ಅಸ್ತಿತ್ವವನ್ನು ನಿರ್ಧರಿಸುವ , ಜೀವಕ್ಕೆ ಒಂದು ಹೆಸರು ಕೊಡುವ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು , ಅಸ್ತಿತ್ವವೇ ಇಲ್ಲದ ಹೆಸರಿನಿಂದ ಅಸ್ತಿತ್ವ ಇರುವ ಜೀವರಾಶಿ ಜನಕ್ಕೆ ತನ್ನ ಅಸ್ತಿತ್ವ ಸಾರಬೇಕಿತ್ತು. ಹೀಗಾಗಿ ಹೆಸರು ಎನ್ನುವದು ಅಳಿವು ಮತ್ತು ಉಳಿವಿನ ಪ್ರಶ್ನೆಯೇ ಆಗಿತ್ತು , ಉಳಿವಿನ ಜೊತೆಗೆ ಹೆಸರು ಉಳಿಯುತ್ತಿತ್ತು ಹಾಗು ಕೆಲವೊಮ್ಮೆ ಅಳಿದ ಮೇಲೂ ಹೆಸರು ಅನಂತದಲ್ಲಿ ಲೀನವಾದ ಯಾಂತ್ರಿಕ ಯಂತ್ರದ ಹೆಸರನ್ನ ಜನ ಮನದಲ್ಲಿ ಉಳಿಸಿರುತ್ತಿದ್ದರು . ಹೀಗಾಗಿ ಹಲವು ಬಾರಿ ಅಸ್ತಿತ್ವದ ಮೂಲ ಹೆಸರು ಅಥವಾ ಭೌತಿಕ ದೇಹವೊ ಎನ್ನುವ ಪ್ರಶ್ನೆ ಒಂದಕ್ಕೊಂದು ಸುರುಳಿ ಸುತ್ತಿದ ಕಗ್ಗಂಟಾದ ಜನಿವಾರವೇ ಆಗಿತ್ತು . ಹೆಸರು ಹೊತ್ತ ಕ್ಷಣಿಕ ಭೌತಿಕ , ಭೌತಿಕದ ಮುಖವಾಣಿಯಾಗಿ ಅದರ ಅಸ್ತಿತ್ವವನ್ನು ಜನಕ್ಕೆ ಸಾರುವ ಹೆಸರು .....
.
ಸಾಮಾನ್ಯವಾಗಿ ಹೆಸರನ್ನು ಎರಡು ತೆರನಾಗಿ ವಿಭಾಗಿಸಿದ್ದರು . ಮೊದಲೆನೆಯದು ಜನ್ಮದಿಂದ ಬಂದ ಹೆಸರು ಇನ್ನೊಂದು ಜೀವನದಿಂದ ಬಂದ ಹೆಸರು. ಜನ್ಮದಿಂದ ಬಂದ ಹೆಸರಿನಲ್ಲಿ ಜನ್ಮ ಕೊಟ್ಟವರು ತಮ್ಮ ಕುಲದೇವರ ನೆನಪಿಗೋ ಅಥವಾ ತಮ್ಮ ಹಿರಿಯರ ನೆನಪಿಗೋ ಯಾವುದೋ ಒಂದು ಹೆಸರನ್ನು ಇಟ್ಟು ತಮ್ಮ ಕರ್ತವ್ಯ ಪೂರೈಸುತ್ತಿದ್ದರು. ಹೀಗೆ ಹೆಸರಿಡುವಾಗ ರೂಡಿಯಲ್ಲಿ ಇರುವ ಹಲವಾರು ಹೆಸರುಗಳು ಅಜ್ಜನಿಂದ ಮೊಮ್ಮಗನಿಗೂ , ಅಜ್ಜಿಯಿಂದ ಮೊಮ್ಮಗಳಿಗೂ ಪಿತ್ರಾರ್ಜಿತ ಆಸ್ತಿಯಂತೆ ಹ(ಹೆ)ಸ್ತಾ೦ತರವಾಗಿರುವ ಸಂದರ್ಭಗಳೇ ಜಾಸ್ತಿಯಾಗಿದ್ದವು. ಕೆಲವು ಹೆಸರುಗಳ೦ತೂ ಒಂದು ಕಾಲಚಕ್ರದಲ್ಲಿ ಪದೇಪದೇ ಪುನರಾವರ್ತನೆ ಹೊಂದಿ , ಪ್ರತಿ ಪುನರ್ ಮುದ್ರಣದಲ್ಲೂ ಬೇರೆ ಬೇರೆ ದೇಹವನ್ನು ಪಡೆದು , ಆಯಾ ದೇಹದ ಯಜಮಾನರಿ೦ದ ಆಳಿಸಿಕೊ೦ಡು , ಮತ್ತೆ ಮತ್ತೆ ಕರೆಸಿಕೊಂಡು ಎಲ್ಲರಲ್ಲೂ ಏಕತಾನತೆಯ ಭಾವವನ್ನು ಹುಟ್ಟು ಹಾಕಿ ತಥ್ ಇದೆಂತ ಹೆಸರು ಎಂಬ ಜಿಗುಪ್ಸೆ ಹುಟ್ಟು ಹಾಕಿದ್ದವು. ಇ೦ತ ಹಲವಾರು ಹೆಸರುಗಳು ತಮ್ಮ ವೈಭವದ ದಿನಗಳಲ್ಲಿ ಬಹುವಾಗಿ ಮೆರೆದಿದ್ದರು ಇಂದು ಗಂಗೆ ಎಂಬ ದನವೋ , ಭದ್ರ ಎಂಬ ಕೊಣವೋ , ಟಿಪ್ಪು ಎಂಬ ನಾಯಿಯೋ , ಮಾಳು ಎಂಬ ಬೆಕ್ಕೋ ಆಗಿ ಜೀವನವನ್ನು ಸಾಗಿಸುತ್ತಿದ್ದವು .ಹಲವಾರು ಸನ್ನಿವೇಶಗಳಲ್ಲಿ ನಾಯಿ , ಬೆಕ್ಕಿನ ಯಜಮಾನರು ಬೇರೆಯವರ ಎದುರಿಗೆ ಕಾಳಿ ಎಲ್ಲಿ ಹೊದ್ಯೇ ,ಎಂದೋ ತಥ್ ದರಿದ್ರ ಟಿಪ್ಪು ಎಂದೋ ಕೂಗಿ ಬೈದು ನಿಡುಸುಯ್ದು ಒಂದು ಕ್ಷಣ ಬಂದವರಿಗೆ ಗೊಂದಲ ಉಂಟು ಮಾಡುತ್ತಿದ್ದುದು ಇದೆ, ಆದರು ಸಾಕುಪ್ರಾಣಿಗಳಿಗೆ ಕೊಟ್ಟ ಹೆಸರುಗಳು ಆಯಾ ಯಜಮಾನರ ತೀರಾ ಖಾಸಗಿ ಹೆಸರುಗಳಾಗಿದ್ದರಿ೦ದ , ಊರಿನ ಇತರರಿಗೆ ಕಾಳಿ , ಟಿಪ್ಪು , ಪಂಡು ಮುಂತಾದ ಪ್ರಾಣಿ ನಾಮಧೆಯಗಳು ಅನಾಮಧೆಯಾಗಳಾಗಿಯೇ ಇದ್ದವು . ಹೀಗಾಗಿ ಹೆಸರು ಕೇವಲ ಮನುಷ್ಯನ ಅಸ್ತಿತ್ವದ ಸಾಹಸಕ್ಕೆ ಮಾತ್ರವೇ ಹೊರತು ಬೇರೆ ಯಾವ ಜೀವಕ್ಕೂ ಅಲ್ಲ ಎನ್ನುವದು ಸತ್ಯವಾದ ಮಾತು . ಪ್ರಾಣಿಗಳಲ್ಲಿ ಒಬ್ಬರೊಬ್ಬರ ಪರಿಚಯಕ್ಕೆ ಯಾವುದೇ ಹೆಸರು ಇರುವ ಲಕ್ಷಣಗಳು ಇರಲಿಲ್ಲ . ಹೆಸರಿಲ್ಲದ ಪ್ರಾಣಿಗಳು ತಮ್ಮಲ್ಲೇ ಗುರುಗುಡುತ್ತ , ಪರಚುತ್ತ , ತಿನ್ನುತ್ತ , ಮಲಗುತ್ತ ಇನು ಹಲವಾರು ಕ್ರಿಯೆಗಳಲ್ಲಿ ಭಾಗವಹಿಸಿ ತಮ್ಮ ಅಸ್ತಿತ್ವಕ್ಕಾಗಲಿ , ಹೆಸರಿಗಾಲಿ ತಲೆ ಕೆಡಸಿ ಕೊಳ್ಳದೆ ಹಾಯಾಗಿ ಬದುಕಿದ್ದವು .ಹೆಸರಿಲ್ಲದ ದನ , ಕರು , ನಾಯಿ , ಬೆಕ್ಕು , ಎಮ್ಮೆ , ಕೋಳಿ , ಕೋಣ ಮುಂತಾದ ಪ್ರಾಣಿಗಳು ಹೆಸರಿರುವ ಜನರ ಮನೆ , ಹಿತ್ತಲು , ತೋಟ , ಮರ , ಗದ್ದೆ , ಇತ್ಯಾದಿ ಕಡೆಗಳಿಗೆಲ್ಲ ನುಗ್ಗಿ , ಕೂಗಿ , ಹೊಲಸು ಮಾಡಿ ,ಬೊಗಳಿ , ತಿಂದು , ಮೇಯ್ದು , ಹೊರಳಾಡಿದಾಗೆಲ್ಲ , ಜನ ಆಯಾ ಹೆಸರಿಲ್ಲದ ಪ್ರಾಣಿಗಳ ಹೆಸರಿರುವ ಯಜಮಾನರನ್ನು , ಸರ್ವ ಶಾಪಿತ ಶಬ್ದ ಬಳಸಿ ಬೈಯುತ್ತಿದ್ದರು , ತೆಗಳುತ್ತಿದ್ದರು . ಬೈಯುವ ಕ್ರಿಯೆಗಳಲ್ಲಿ ಜನ ಇನ್ನೊಬ್ಬರ ನಿಜ ಹೆಸರಿನ ಜೊತೆಗೆ ಇನ್ನು ಹಲವಾರು ಹೆಸರುಗಳನ್ನು ಸೇರಿಸುತ್ತಿದ್ದುದು ಇದೆ . ಜನಕ್ಕೆ ಜನ್ಮದಿ೦ದ ಬ೦ದ ಹೆಸರಲ್ಲದೆ , ಬೆಳೆಯುತ್ತ ಬೆಳೆಯುತ್ತ ಹೊದ೦ತೆ ಇನ್ನು ಹಲವಾರು ಹೆಸರುಗಳು ಬರುತ್ತಿದ್ದವು , ಈ ಎಲ್ಲ ಹೆಸರುಗಳು ಅಡ್ಡ ಹೆಸರು ಎ೦ದು ಕರೆಯಲ್ಪದುತ್ತಿದ್ದವು. ಹೀಗೆ ಹುಟ್ಟುವಾಗ ಕೇವಲ ಒಂದು ಹೆಸರು ಮಾತ್ರ ಹೊ೦ದಿದ್ದ ಜನ ಸಾಯುವಾಗ ಹಲವಾರು ಹೆಸರುಗಳನ್ನು ಹೊ೦ದಿರುತ್ತಿದ್ದರು. ಹುಟ್ಟುವಾಗ ಕೇವಲ ಅಮ್ಮ ಎಂಬುದು ಮಾತ್ರ ಗೊತ್ತಿದ್ದರು , ಕೊನೆಯಲ್ಲಿ ಗೊತ್ತಿದ್ದ , ಗೊತ್ತಿಲ್ಲದ ಬೇಕಾದ ಬೇಡದ ಹಲವಾರು ಸ೦ಬ೦ಧಗಳು ಜೊತೆಗೆ ಇರುವಂತೆ , ಅಸಂಖ್ಯ ಸ೦ಬ೦ಧಗಳು ಬೇಕಿದ್ದೋ ಬೇಡದೆಯೋ ಸೇರಿ ಕೊನೆಗೆ ಜನ್ಮದಿ೦ದ ಬ೦ದ ಹೆಸರು ಕೇವಲ ಪುಸ್ತಕದ , ಕಾಗದದ ಹೆಸರು ಮಾತ್ರ ಆಗಿ ಇರುವ೦ತೆ ಭಾಸವಾಗುತಿತ್ತು .
 
ಹೆಸರು ಎನ್ನುವದು ಕೇವಲ ವ್ಯಕ್ತಿಯೊಬ್ಬನ ಅಸ್ತಿತ್ವ ಹಾಗು ಗುರುತಿನ ಭಾಗವಾಗದೇ ಅದು ಈ ಅಪರಿಮಿತ ಜಗತ್ತಿನ ಕಾಲಚಕ್ರದ ಅಗಣಿತ ಪ್ರಭಾವವನ್ನು ವಿವರಿಸುವ ಕಾಲಸೂಚಕವೂ ಆಗಿತ್ತು , ಹೀಗಾಗಿ ಗಣಪತಿ ಎನ್ನುವ ಹೆಸರೊಂದು ತನ್ನ ಜೀವಿತದ ಕಾಲಗಳಲ್ಲಿ ನಾನಾ ರೂಪಗಳನ್ನು ಧರಿಸಿ , ಹುಟ್ಟುವಾಗ ಗಣಪತಿಯೂ , ಬೆಳೆದಂತೆ ಗಪ್ಪತಿಯೂ, ಗೆಳೆಯರ ಜೊತೆ ಗಪ್ಯಾ , ಕಿರಿಯರೊಂದಿಗೆ ಗಪ್ಪಣ್ಣನೂ ಆಗಿ ಕಾಲ ಕಳೆದಂತೆ ಗಪ್ಪತಿ ಹೆಗಡೇರು , ಗಪ್ಪತಿ ಚಿಕ್ಕಪ್ಪ ಮು೦ತಾದ ಅವಸ್ಥೆಗಳನ್ನೆಲ್ಲ ದಾಟಿ ಇತರ ಹೆಸರುಗಳೋ೦ದಿಗೆ ಕ್ರಮಿಸಿ ಜೀವನದ ಗತಿಯೊ೦ದಿಗೆ ಓಡಿ , ಕಾಲನ ನೆನಪಿನ ಸುಕ್ಕುಗಳನ್ನ ಹೊ೦ದಿ ಗಪ್ಪಜ್ಜ ಎ೦ಬ ಹೆಸರನ್ನು ಪಡೆದು ಇಹ ಲೋಕದಿ೦ ಪ್ರಯಾಣ ಮುಗಿಸುತ್ತಿತ್ತು .
 
ಜನ ರೂಪ ಧರಿಸುತ್ತಿದ್ದರು , ಮುಖವಾಡ ಧರಿಸುತ್ತಿದ್ದರು. ಜನ ಜನರಾಗಿ ಯಾರಿಗೂ ಪರಿಚಯವಿರಲಿಲ್ಲ , ಜನ ಜನರಾಗದೆ , ಜನ ಹೆಸರಾಗಿ , ಹೆಸರು ಜನರಾಗಿ , ಜನ ಜನರನ್ನು ಕೇವಲ ಹೆಸರಿನ ಮೂಲಕವೇ ಗುರುತಿಸುವ ಪ್ರಪಂಚದಲ್ಲಿ ಹೆಸರು ಎನ್ನುವದು ಅನಿವಾರ್ಯವಾಗಿತ್ತು

Friday, August 31, 2012

ಪಿಸ್ತೂಲು ಮಾರುವ ಹುಡುಗಿ


ಕೆಂಪು ಸಿಗ್ನಲ್ ಬಳಿ
ಗುಳ್ಳೆ ಹಾರುವ ಪಿಸ್ತೂಲು ಮಾರುವ ಹುಡುಗಿ
ಕಾಯಬೇಕಿದೆ ಬದುಕು ಹಸಿರಾಗಲು..

ಕರಗಿದ್ದಷ್ಟೇ ಅಲ್ಲ , ಸೋಪು ನೀರಲ್ಲಿ
ಗುಳ್ಳೆಯಾಗುವ ಬದುಕು
ಬಣ್ಣ ಬಣ್ಣದ ಗುಳ್ಳೆ
ಚಿಕ್ಕ ಗುಳ್ಳೆ ಮರಿ ಕನಸು
ಅಪ್ಪ ಗುಳ್ಳೆ ಅಮ್ಮ ಗುಳ್ಳೆ
ಬದುಕ ಗುಳ್ಳೆ ನಿನ್ನೆ ಗುಳ್ಳೆ ನಾಳೆ ಗುಳ್ಳೆ
ಮೇಲಕ್ಕೇರಿ ಸಾಯುವ ಗುಳ್ಳೆ

ಅದೋ ನೋಡಿ ಮೇಲೆ ಹಾರಿ
ಟಪ್ ಒಡೆದ ದೊಡ್ಡ ಗುಳ್ಳೆ
ಗೊತ್ತೇ ಇಲ್ಲ ಇದ್ದರು ಇರಬಹುದು
ಪಿಸ್ತೂಲು ಮಾರುವ ಹುಡುಗಿಯ ಕನಸು..

ಥೋ ಯಾರಿಗೆ ಬೇಕು ಪಿಸ್ತೂಲು
ಐದು ರುಪಾಯಿ , ಸಂಜೆಗಾಯಿತು

ಒಡೆದ ಗುಳ್ಳೆ ಒಡೆದ ಹುಡುಗಿ
ಖಾಲಿಯಾಗದ ಪಿಸ್ತೂಲು ಖಾಲಿಯಾದ ಬದುಕು

ಮುಸ್ಸಂಜೆ ಮಳೆ


ಗಾಂಧೀ ಬಜಾರಿನಲ್ಲಿ ಅರ್ಧ ಸುರಿದ
ಮುಸ್ಸಂಜೆ ಮಳೆಗೆ 
ಸ್ವಲ್ಪ ಮಾತ್ರ ತೋಯುತ್ತವೆ
ಮುಕ್ಕಾಲು ಸತ್ತ
ಗಿರಾಕಿಗಳಿಲ್ಲದ ಹೂಗಳು.!

ಒಬ್ಬರಿಗೊಬ್ಬರಿಗೆ ಹೆದರುವ
ಒಂಟಿ ಜೋಡಿಗಳು , ರೋಟಿ ಘರ್ ನಲ್ಲಿ
ಒಂದಿಡಿ ಟೀ ಕುಡಿದು ; ಬೈ ಟೂಗೆ ಕಾತರಿಸುತ್ತವೆ !

ಸೊಪ್ಪು ಮಾರುವ ಮುದುಕಿಯ
ಪಯಣ ಮುಗಿಸಿದ ಕನಸುಗಳು
ಖಾಲಿಯಾಗದ ಸೊಪ್ಪಿನ ನಾಳೆಯ ವಾರಸುದಾರರು..!

ಓ ದೇವರೇ
ಇದೇಕೆ ಹೇಗೆ ?
ಬಸಿರು ನಿಲ್ಲುವದೆ ಇಲ್ಲ
ಹಸಿ ಹಸಿ ಅಕ್ಷರಗಳಿಗೆ ?

Friday, February 10, 2012

ತಿಂಗಳಿಗೊಂದು ಪುಟ #೩



ವೃತ್ತ - ನಾಯಿ 


ಎಕ್ಸ್. ಕೆ. ಮರಸರ ಹಡಪದ್  ಹೇಳಿದಂತೆ ಊರಿನ ನಾಯಿಗಳು :


 ಹಾಗೂ ಎಲ್ಲ ಊರಿನ೦ತೆ ಇಲ್ಲೂ ಸಹ ನಾಯಿಗಳಿದ್ದವು . ನಾಯಿಗಳು ಬೀದಿ ನಾಯಿಗಳಾಗಿದ್ದವು. ಸಾಕು ನಾಯಿಗಳಾಗಿದ್ದವು. ಕಾವಲು ನಾಯಿಗಳಾಗಿದ್ದವು. ಬೇಟೆ ನಾಯಿಗಳಾಗಿದ್ದವು .  ನಾಯಿಗಳು ನಾಯಿಗಳಾಗೆ ಇದ್ದು , ಬೇಟೆ , ಕಾವಲು , ಸಾಕು , ಬೀದಿ , ದರಿದ್ರ , ಕಳ್ಳ , ಹಡಬೆ ಮುಂತಾದ ವೇಷವನ್ನು ಧರಿಸುತ್ತಲು ಇದ್ದವು.  ಎಲ್ಲ ಊರಿನ ನಾಯಿಗಳಂತೆ ಇಲ್ಲಿನ ನಾಯಿಗಳಿಗೂ ಸಹ , ನಾಯಿಗಳಿಗೆ ಇರಬೇಕಾದ ಸರ್ವ ಗುಣಲಕ್ಷಣಗಳೂ , ಬಾಹ್ಯ ಸ್ವರೂಪವೂ , ಸ್ಥಾನವೂ ಅದರೊಟ್ಟಿಗಿನ ಮಾನವೂ , ಬೈಗುಳವು , ಹೊಗಳಿಕೆಯೂ , ತೆಗಳಿಕೆಯೂ , ತುಚ್ಚವೂ , ಹೆಮ್ಮೆಯೂ , ಪ್ರೀತಿಯೂ ಇನ್ನೂ ಇತ್ಯಾದಿಗಳು ಇದ್ದವು.  ಊರಿನ ನಾಯಿಗಳನ್ನು , ಅವುಗಳ ಸ್ಥಾನ ಹಾಗೂ ಮಾನಕ್ಕೆ ಅನುಗುಣವಾಗಿ ಎರಡು ವಿಭಾಗಗಳಾಗಿ ವಿಂಗಡಿಸಿದ್ದರು. ಮೊದಲನೆಯದು ಸಾಕಿದ ನಾಯಿ ಎರಡನೆಯದು ಸಾಕದ ನಾಯಿ. ಕೆಲವೊಮ್ಮೆ ಸಾಕಿದ ನಾಯಿ ಅದಕ್ಕೆ ನಿಶ್ಚಿತವಲ್ಲದ ಜಾಗೇ ಗಳಲ್ಲಿ ಅದು  'ನಿಶ್ಚಿತ'ವಾಗಿ ಪ್ರತಿ ದಿನವೂ ಮಾಡಲೇಬೇಕಾದ ಘನ ದ್ರವ ವಿಸರ್ಜನೆಯನ್ನು ಮಾಡಿದಾಗ ಸಾಕಿದ  ನಾಯಿಯಸಾಕುಜನ (?) 'ತಥೇರಿ ಬೀದಿ ನಾಯಿಗಿಂತ ಕನಿಷ್ಠ ಈ ದರಿದ್ರ'. ಎಂದು ಬೈಯುತ್ತಿದ್ದರು. ಹೀಗಾಗಿ ಊರಿನ ನಾಯಿಗಳು ತೋರಿಕೆಗೆ ಎರಡು ವಿಧವಾದರೂ , ಯಾವುದೋ ಒಂದು  ಸಂದರ್ಭದಲ್ಲಿ  ಆ ನಾಯಿಕುಲ ಈ ನಾಯಿಕುಲ ಎಲ್ಲವೂ ಒಂದೇ  ಎನ್ನುವ ಭಾವ ಕುಲೀನರೆಂದು ಬಿಂಬಿತವಾಗಿದ್ದ ಮನುಷ್ಯರಿಗೆ ಬರುತಿತ್ತು. ಇನ್ನೂ ಹಲವಾರು ಬಾರಿ ನಾಯಿಗಳನ್ನು ಜಾತಿ ನಾಯಿ ಹಾಗೂ ಕಂಟ್ರಿ  ನಾಯಿಗಳೆಂದು ವಿಭಜಿಸಿದ್ದರು.  ನಾಯಿಯನ್ನು ಜಾತಿ ನಾಯಿಗಳೆಂದು ಕರೆಯಬೇಕಾದರೆ ನಾಯಿಯ ಅಮ್ಮ ಹಾಗೂ ಅಪ್ಪ೦ದಿರ (!) ಬಗ್ಗೆ ಖಚಿತವಾದ ಮಾಹಿತಿ ನಾಯಿಯ ಸಾಕಿದವರಿಗೆ ಇರಬೇಕಿತ್ತು ಹಾಗೂ ಆ ಅಮ್ಮ ನಾಯಿ ಹಾಗೂ ನಾಯಿ ಪೀತಾಜಿ ಚಾಲ್ತಿಯಲ್ಲಿರುವ ಯಾವುದೋ ನಾಯಿ ಕುಲಕ್ಕೆ ಸೇರಿದವರೇ ಆಗಬೇಕಿತ್ತು.  ಸಾಮಾನ್ಯವಾಗಿ ಹೆಗಡೆರ ಮನೆಯ ಲಲ್ತಕ್ಕ , ದೊಡ್ಡ ಭಟ್ಟರ ಮನೆಯ ಗಪ್ಪಣ್ಣ , ದ್ಯಾವ ನಾಯ್ಕನ ಮಗ ಶಿರಿಯಪ್ಪ ಇಂತಹ ಜಾತಿ ನಾಯಿಯನ್ನು ಸಾಕುವದರಲ್ಲಿ ಹಾಗೂ ಸಾಕಿದ ನಾಯಿಯನ್ನು ಯಾವುದಾದರೊಂದು ಜಾತಿಗೆ ಸೇರಿಸುವದರಲ್ಲಿ ಪಳಗಿದ ಪಟುಗಳಾಗಿದ್ದರು. ಬಹುತೇಕ  ನಾಯಿಯ ಜಾತಿಯ ಬಗ್ಗೆ ಖಚಿತ ಜಾತಿಯುಳ್ಳ ಮನುಷ್ಯರಲ್ಲಿ ವಾಗ್ಯುದ್ಧ ನಡೆಯುತ್ತಿತ್ತು. ಕೊನೆಗೆ ಅವರು ಇವರ ನಾಯಿಯನ್ನೂ . ಇವರು ಅವರ ನಾಯಿಯನ್ನೂ ಕುಲ ಗೋತ್ರ ಗುಣ ಅವಗುಣ  ಲಕ್ಷಣಕ್ಕಿಂತ ಹೆಚ್ಚಾದ ಅವಲಕ್ಷಣ , ನಾಯಿಯ ಬಹಿರ್ದೆಸೆಯ ಕಾರ್ಯಕ್ರಮ  ಮುಂತಾದವುಗಳಲ್ಲದೇ  ನಾಯಿಗಳಿಗೆ ತೀರಾ ಖಾಸಗಿಯಾದ ವಿಚಾರಗಳವರೆಗೂ ಮಾತಿನ ಹೋರಾಟ ನಡೆಸುತ್ತಿದ್ದರು. ಆದರೆ ನಾಯಿಗಳು ಯಾವತ್ತೂ ಅವುಗಳ ಜಾತಿಯ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿರಲಿಲ್ಲ. ಅವು ಇಂತಹ ಜಗಳಗಳ ಸಂದರ್ಭಗಳಲ್ಲಿ ಮೂಸುತ್ತಿದ್ದ ಮಣ್ಣು , ವಸ್ತು ಅಥವಾ ಇನ್ಯಾವುದನ್ನೋ ಬಿಟ್ಟು ತಲೆಯೆತ್ತಿ , ಅವರವರ ಯಜಮಾನರನ್ನೂ , ಹಾಗೂ ಯಜಮಾನರಲ್ಲದವರನ್ನು ದಿವ್ಯ ನಿರ್ಲಕ್ಷ್ಯದ ದೃಷ್ಟಿಯಿಂದ ದಿಟ್ಟಿಸಿ , ಮುಂದಿನ ಅಥವಾ ಹಿಂದಿನ ಕಾಲನ್ನು ಎತ್ತಿ , ಹೊಟ್ಟೆಯ ಮುಂಭಾಗ ಅಥವಾ ಹಿಂಭಾಗಕ್ಕೆ ,ಆಂಗ್ಲ ಭಾಷೆಯ ಎಲ್ ಶೇಪ್ ನಲ್ಲಿ ಕೆರೆದುಕೊಳ್ಳುತ್ತಿದ್ದವು . ಸಾಮಾನ್ಯವಾಗಿ ಹೊಟ್ಟೆಯ ಹಿಂಭಾಗವನ್ನು ಕೆರೆದುಕೊಳ್ಳುವಾಗ ನಾಯಿಯ ಬಾಲ ಹಾಗೂ ಬಾಲದ ಆಸುಪಾಸು ನೆಲಕ್ಕೆ  ಸ್ಥಾಪಿತವಾಗಿರುತ್ತಿತ್ತು. ನಾಯಿ ಯಾರದ್ದೇ ಆದರೂ , ಯಾವ ಜಾತಿಯದೇ ಆದರೂ ಕೆರೆದುಕೊಳ್ಳುವ ಸಮಯದಲ್ಲಿ ನಾಯಿಯ ಕೂದಲು ಉದುರಿರುತಿತ್ತು. ಹಲವಾರು ಬಾರಿ ಜಾತಿ , ಕಂತ್ರಿ , ಬೀದಿ , ಅರೆ ಬೀದಿ , ಬೇಟೆ ಮುಂತಾದ ನಾಯಿಗಳ ರೋಮಗಳೆಲ್ಲಾ ಸೇರಿ  , ಗಾಳಿಗೆ ಹಾರಾಡಿ . ಊರಿನ ಸಮಸ್ತರ ಮನೆಯ ಮೇಲೂ ಪ್ರೋಕ್ಷಣೆ ಮಾಡಿ ನಾಯಿಗಳೆಲ್ಲ ಒಂದೇ ಜಾತಿ . ಕುಲ ಕುಲವೆಂದು ಹೊಡೆದಾಡದಿರಿ ಎಂಬ ಸಂದೇಶವನ್ನು ಸಾರುತ್ತಿದ್ದುದು ಇದೆ. 



ಈ ಮೊದಲೇ ಹೇಳಿದಂತೆ ಊರಿನ ನಾಯಿಗಳಲ್ಲಿ , ಸಾಕಿದ ನಾಯಿಗಳು ಸ್ವಲ್ಪವಾದರೂ ಸ್ಥಾನವನ್ನು , ಮಾನವನ್ನು ಹೊಂದಿದ್ದವು. ಆದರೆ ಸಾಕದ ನಾಯಿಗಳೂ ಸಹ ಸಾಕಿದ ನಾಯಿಗಳಂತೆ ಸ್ವಂತ ಅಸ್ತಿತ್ವ , ಬಾಲ , ದೇಹ , ಮಾನ , ಹಾಗೂ ನಾಯಿಗಿರಬೇಕಾದ , ಇದ್ದಿರಬಹುದಾದ , ನಮಗೆ ಗೊತ್ತಿದ್ದ ಅಥವಾ ಗೊತ್ತಿಲ್ಲದ ಇನ್ನೂ ಹಲವು , ಕೆಲವು ಸ್ವಭಾವ , ರಚನೆ , ಗುಣ ಹೊಂದಿವೆ ಎನ್ನುವದನ್ನು ಊರಿನ ಜನ ಬಹುವಾಗಿ ನಿರ್ಲಕ್ಷಿಸಿದ್ದರು. ಹೀಗಾಗಿ ಸಾಕದ ನಾಯಿಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ  ಸಾಕಿದ ನಾಯಿಗಳು ಇದ್ದ , ಇಲ್ಲದ ಮನೆಯಲ್ಲಿ  ಕೋಳಿ ಕದಿಯುವದು , ಯಾರನ್ನಾದರೂ ನೋಡಿ ಬೊಗಳುವದು ಅಥವಾ ಬಾಲ ಅಲ್ಲಾಡಿಸುವದು , ನೋಡುವದು , ಮನೆಯೊಳಗೆ ಲಬಕ್ಕನೆ ನುಗ್ಗುವದು , ಮನೆಯ ಮುಂದೆ ಮಲಗುವದು , ರಾತ್ರಿಯೆಲ್ಲ ಭೋರ್ಗರೆಯುವದು , ಹಿತ್ತಲಿನಲ್ಲಿ ವಿಸರ್ಜಿಸಲು ಬರಲಿಕ್ಕೆ ಸಾಧ್ಯವಿರುವದನ್ನೆಲ್ಲ ಹೊರಹಾಕುವದು , ಇದ್ದಕ್ಕಿದ್ದಂತೆ ಯಾವುದಾದರು ವಾಹನವನ್ನು ಅಟ್ಟಿಸಿಕೊಂಡು ಹೋಗುವದು ಮುಂತಾದ ಹತ್ತು ಹಲವು ಉಗ್ರ ಪ್ರತಿಭತನೆಗಳಲ್ಲಿ ತೊಡಗಿಕೊಂಡಿದ್ದವು. ಸಾಮಾನ್ಯವಾಗಿ ಇಂತಹ ಕೆಲಸಗಳನ್ನು ಮಾಡಿದರೆ ಆ ನಾಯಿಗೆ ಒಂದು ಗುರುತು , ತನ್ಮೂಲಕ ಅಸ್ತಿತ್ವ ಸಿಗುತ್ತಿತ್ತು. ಜನ ಸಾಕದ ನಾಯಿಯನ್ನು ಆಯಾ ನಾಯಿಯ ಪ್ರತಿಭಟನಾ ಕೆಲಸಗಳಿಂದಲೇ ಗುರುತಿಸುತ್ತಿದ್ದರು ಹಾಗೂ ಬೈಯುತ್ತಿದ್ದರು. ಕೇವಲ ಈ ರೀತಿಯ ಅಸ್ತಿತ್ವ ಅಥವಾ 'ಜನ'ಪ್ರೀಯತೆಗಾಗಿಯೆ ಸಾಕದ ನಾಯಿಗಳು ಹೀಗೆ ಮಾಡುತ್ತಿವೆಯೆಂದು , ಅವಕ್ಕೂ ಪ್ರಸಿದ್ಧಿಯ ಅಮಲು ಏರಿದೆಯೆಂದು ಜನ ಸಂಶಯ ಪಡುತ್ತಿದ್ದುದು ಇದೆ.  ಊರಿನ ಹೆಂಗಸರಲ್ಲಿ ಅನೇಕರು , ಮಿಕ್ಕಿದ ತಂಗಳನ್ನ , ದೋಸೆ ಅಥವಾ ನಾನಾ ಹೊಸರುಚಿಯನ್ನು ಸಾಕದ ನಾಯಿಗಳಿಗೆ ಪದೇ ಪದೇ ಕೊಡುತ್ತಿದ್ದುದು ಇದೆ. ಇಂತಹ ಹೆಂಗಸರು ಯಾವತ್ತು ಎಲ್ಲಿ ಕಂಡರೂ ನಾಯಿಗಳು , ಬಾಲವನ್ನು ಗಡಿಯಾರದ ಪೆಂಡಲಮ್ ಹಾಗೆ ಆಡಿಸಿ , ಕಿವಿಯನ್ನು ಹಿಂದಕ್ಕೆ ಮಡಚಿ , ಮುಂದಿನ ಕಾಲುಗಳನ್ನು ಸಾಧ್ಯವಾದಷ್ಟೂ ಮುಂದಕ್ಕೆ ಚಾಚಿ , ಹಿಂದಣ ಕಾಲು ಮತ್ತು ಮುಂದಿನ ಕಾಲಿನ ನಡುವಿನ ಅಂತರವನ್ನು ಜಾಸ್ತಿ ಮಾಡಿ , ದೇಹವನ್ನು ಹೆದೆಯೆರಿಸಿ ನಿಂತ ಬಿಲ್ಲಿನ ರಚನೆಗೆ ತಂದು , ಒಮ್ಮೆಲೇ ಅತ್ತಿತ್ತ ಜಿಗಿದು , ಕೋಯ್ಯ್ ಕುಯ್ಯಾ ಅನ್ನುವ ಹಾಗೆ ಕೇಳಿಸುವ ಶಬ್ದವನ್ನು ಉಂಟು ಮಾಡಿ ತಮ್ಮ ಗೌರವವನ್ನು ಸೂಚಿಸುತ್ತಿದ್ದವು. ಸಾಮಾನ್ಯವಾಗಿ ಈ ರೀತಿಯ ಗೌರವವನ್ನು ಜಾಸ್ತಿ ಪಡೆಯುವ ಮಹಿಳೆ ಕರುಣಾಮಯಿ ಎಂಬ ಭಾವನೆ ಬಂದರೂ , ಇವರು ಪಾಕ ಪ್ರಯೋಗ ನಿಷ್ಠರೆ ಎಂಬ ಅನುಮಾನವೂ ಬರುತ್ತಿತ್ತು. 
ಈ ಸಾಕದ ನಾಯಿಗಳು ಆಗಾಗ ಗುಂಪು ಘರ್ಷಣೆಯಲ್ಲಿ ತೊಡಗುತ್ತಿದ್ದುದು ಇದೆ. ಕೆಲವೊಮ್ಮೆ ಹಲವಾರು ನಿಮಿಷಗಳವರೆಗೆ ಪರಸ್ಪರರು ಕೇವಲ ಗುರ್ರ್ ಗರ್ರ್ರ್ ಗ್ರ್ರಿ ಎಂಬ ಏರಿಳಿತದ ಕಂಪನಗಳಲ್ಲಿ ಒಬ್ಬರನ್ನೊಬ್ಬರು ದೂಷಿಸಿಕೊಳ್ಳುತ್ತಿದ್ದುದು ಇದೆ,  ಆ ಸಮಯಗಳಲ್ಲಿ ಯಾವುದಾದರೂ ಒಂದು ಕಡೆ ಪರ ವಹಿಸಿ ಕಾದಾಡಲು ಬಂದ ಉಳಿದ ನಾಯಕರು , ಹೊತ್ತು ಎಷ್ಟಾದರೂ ಕೇವಲ ಬೊಗಳುವಿಕೆಯ ಜಗಳದಿಂದ ಬೇಸರಗೊಳ್ಳುತ್ತ ಅಲ್ಲೇ ಎಲ್ಲಾದರೂ ಮಲಗುತ್ತಿದ್ದವು. 
ಹೀಗೆ  ಊರಿನ ನಾಯಿಗಳಲ್ಲಿ ಬಣ್ಣ , ಆಕಾರ , ಗುಣ , ಸ್ವಭಾವ , ಸ್ಥಾನ ಮಾನ , ದನಿ , ಲಿಂಗ  ಗುರುತರವಾದ ವ್ಯತ್ಯಾಸಗಳಿದ್ದರೂ ,  ಊರಿನ  ನಾಯಿಗಳೆಲ್ಲ ಮಿಲನದ ಸಂದರ್ಬದಲ್ಲಿ ಪರಸ್ಪರ ವಿರುದ್ಧ ದಿಕ್ಕಿಗೆ ನಿಂತು , ಅದು ಪ್ರಕೃತಿ ಕೊಟ್ಟ ದೈವೀ ಕ್ರಿಯೆ ಎಂಬಂತೆ ರೂಪ ಸ್ವರೂಪಕ್ಕೆ ಒಂದಿನೀತು ಬೆಲೆ ಕೊಡದೇ ,  ನಡೆಸುತ್ತಿದ್ದವು ಹಾಗೂ ಬದುಕುತ್ತಿದ್ದವು.

ನಾಯಿಗಳು ಹಚಾ ಎಂದರೆ ಓಡುವದನ್ನೂ , ಕುರು ಕುರು ಅಥವಾ ತ್ಚು ತ್ಚು ಎಂದರೆ ಹತ್ತಿರ ಬರುವದು ಎನ್ನುವಷ್ಟು ವಿದ್ಯೆ ಕಲಿತು , ಖುಷಿಯ ದಿನಗಳಲ್ಲಿ ಆಕಾಶವನ್ನು ನೋಡಿ ಯಾವುದೋ ಅವ್ಯಕ್ತ ಶಕ್ತಿಯೊಂದನ್ನು ಗಮನಿಸಿದಂತೆ ಬೊಗಳುತ್ತಾ ,  ನಾಯಿ ಮತ ಒಂದೇ ಪಥ ಎನ್ನುವಂತೆ ಹೆಣ್ಣು ನಾಯಿಯೊಂದರ ಹಿಂದೆ ಹಲವಾರು ಗಂಡು ನಾಯಿಗಳು ಶಕ್ತಿಗನುಸಾರ ಹಿಂಬಾಲಿಸಿ ಹೋಗುತ್ತಾ , ಹಸಿವಾದಾಗ ತಿನ್ನುತ್ತಾ , ಯಾವತ್ತೂ ನಡೆಯದೆ ಓಡುತ್ತಾ , ಮಲಗುತ್ತಾ , ಮಲಗಿದಾಗ ಒಂದೇ ಕಣ್ಣು ತೆರೆದು ನೋಡುತ್ತಾ , ರಾತ್ರಿಯೆಲ್ಲ ಎಚ್ಚರವಿರುತ್ತ , ಬೊಗಳುತ್ತಾ , ಬೈಸಿಕೊಳ್ಳುತ್ತ , ಹೊಡೆಸಿಕೊಳ್ಳುತ್ತ ,  ತಿನ್ನುತ್ತಾ , ಕಡಿಮೆ ಕುಡಿಯುತ್ತಾ , ಅಲ್ಲಾಡುತ್ತಾ , ಬದುಕುತ್ತಾ ಸಾಯುತ್ತಾ ಇದ್ದವು .

Monday, February 6, 2012

ಕನ್ಯೆ ಕಾಡಿದ ಕ್ಷಣಗಳು .! - ೧


ಆಯತ , ಚೌಕ , ತ್ರಿಭುಜ , ವೃತ್ತ
ತಥ್ ! ಅರ್ಥವಾಗಲೇ ಇಲ್ಲ ಹತ್ತನೆಯ ಕ್ಲಾಸಿನ
ಪ್ರಮೇಯ ಹಾಗೂ ಹುಡುಗಿ.!

*******
ಪ್ಲಾಸಿ ಕದನ ಯಾವತ್ತಿಗೂ
ಮಧ್ಯಾನ್ಹದ ಪೀರಿಯಡ್ನಲ್ಲೇ,
ರಾಬರ್ಟ್ ಕ್ಲೈವ್ ಗೆದ್ಡೇ ಬಿಟ್ಟಿದ್ದ ,
ಯಾರೂ ,
ಅರ್ಥ ಮಾಡಿಸಲೇ ಇಲ್ಲ ,  ನೀನು
ಸೋತಿದ್ದು ಯಾಕೆಂದು..!

****
ಎಕಾನಮೀ ಕ್ಲಾಸ್ನಲ್ಲಿ ಕಲಿತ ಲೆಕ್ಕಾಚಾರ
ಬಯಕೆ ಆಸೆ ಎಲ್ಲ ಬೇರೆಯಂತೆ
ತಪ್ಪು ಯಾರದ್ದೂ ಗೊತ್ತಿಲ್ಲ ಕಣೇ ,
ಕ್ಲಾಸ್ ಮುಗಿದು , ನೀನು ಹೊರಟಾಗಲೇ
ಕೂಡಿಟ್ಟ ಪೈಸೆ
ಗುಲಾಬಿಗೆ ಸಾಕಾಗಿತ್ತು

*******
ಬರುವಷ್ಟೇ ಭಾಷೆ ಸಾಕಾಗಿತ್ತು ,
ಕನ್ನಡ ಕ್ಲಾಸೀನ ಲಘು , ಗುರು
 ಸಂದಿ ಸಮಾಸ  ಸಮಾನಾರ್ಥಕ ಪದ
ಥೊ ..!  ವಿರುದ್ದ ಪದದಲ್ಲಿ
 ನಿನ್ನ ಹೆಸರು

***********
ಕ್ಲಾಸ್ ಮುಗಿದಾಗ ಅರ್ಥವಾಗಿದ್ದು
ಯಾರೋ ಹೇಳಿದ್ದು
ನಿಜವಿರಬೇಕು  
ಜೀವಶಾಸ್ತ್ರಕ್ಕೆ ಬದಲು ಮನಶಾಸ್ತ್ರ
ಇರಬೇಕಿತ್ತು ..!


ವಿ. ಸೂ  : ಕಂಡ ಕೂಸುಗಳೆಲ್ಲಾ ಕಾಡಲೇ ಬೇಕು ಅಂತಿಲ್ಲ , ಕಾಡಿದ ಕನ್ಯೆಯರ ಮೇಲೆ ಲವ್ ಆಗಲೇ ಬೇಕು ಅಂತಿಲ್ಲ.   ಯಾವತ್ತೂ ಮಾತನಾಡಿಸದ  ಯಾವತ್ತಿಗೂ ನೆನಪಿನಲ್ಲಿ ಉಳಿಯುವ ಕೆಲವರ ಕುರಿತು ಒಂದಷ್ಟು ಲೈನ್ಸು ಈ ಫೆಬ್ರವರಿಯಿಂದ

Sunday, January 15, 2012

ತಿಂಗಳಿಗೊಂದು ಪುಟ #೨


ವೃತ್ತ  -  ಹೊಳೆ


ಎಕ್ಸ್. ಕೆ. ಮರಸರ ಹಡಪದ್ ಹೊಳೆಯ ಹತ್ತಿರ ಹೇಳಿದ ಮಾತುಗಳು 

ಅಲ್ಲಿ ಹೊಳೆಯ ಉಗಮವಾಗಿತ್ತು. ಹೊಳೆ ಹುಟ್ಟುತ್ತಿತ್ತು. ಪ್ರತಿದಿನವೂ ಜನಿಸುತ್ತಿತ್ತು. ಹೊಳೆಯ ಜನ್ಮಸ್ಥಾನದ ಬಗ್ಗೆ ಹಲವಾರು ಕಥೆಗಳಿದ್ದವು. ಹೊಳೆಯ ಜನ್ಮ ಎಲ್ಲಿಂದ ಎಲ್ಲಿ ಹೇಗೆ ಆಯಿತು ಎನ್ನುವದು ಅವರವರ ಕಲ್ಪನೆಯ ಶಕ್ತಿಗೆ ಬಿಟ್ಟಿದ್ದೆ ಆಗಿತ್ತು. ಹೊಳೆಯ ಜನ್ಮ ಹಾಗೂ ಊರಿನ ಹಲವರ ಜನ್ಮದ ಕಥೆಗಳು ಹುಟ್ಟುತ್ತಿದ್ದವು , ಸಾಯುತ್ತಿದ್ದವು ಹಾಗೂ ಬದಲಾಗುತ್ತ ಇದ್ದವು. ಇವೆಲ್ಲ ಕಥೆಗಳ ನಡುವಿನ ಏಕಮಾತ್ರ ಸಾಮ್ಯತೆ ಎಂದರೆ ಕಥೆಗಳಾವವೂ ನಿರ್ದಿಷ್ಟ ತೀರ್ಮಾನವನ್ನು ಕೊಡುತ್ತಿರಲಿಲ್ಲ. ಪ್ರತಿ ಕಥೆಯೂ 'ಯಾರಿಗೆ ಗೊತ್ತು ಮಾರಾಯ ನಮಗೆಲ್ಲ ಅದು ಎಂಥಕ್ಕೆ' ಎಂಬ ಮಹಾನ್ ವೇದಾಂತಿ ಮಾತಿನೊಂದಿಗೆ ಕೊನೆಯಾಗುತ್ತಿದ್ದವು. ಹೀಗಾಗಿ ಹಲವರ ಹಾಗೂ ಹೊಳೆಯ ಜನ್ಮಸ್ಥಾನ ಇವತ್ತಿನವರೆಗೂ ಅವರವರ ಇಷ್ಟಾನುಸಾರದ ಕಥೆಯೇ ಆಗಿತ್ತು. ಕೆಲವೊಮ್ಮೆ ಇಂತಹ ಕಥೆಗಳು ಹೊಳೆಯಂತೆಯೇ ಅನಿರೀಕ್ಷಿತ ತಿರುವುಗಳನ್ನ ಪಡೆದು , ಹರಿಯುವ ಹರಿವಿನ ಪಾತ್ರಗಳನ್ನೇ ಬದಲಿಸಿ , ಇನ್ಯಾವುದೋ ದಿಕ್ಕಿನತ್ತ ಸಾಗಿ , ವಿರುಡ್‌ದವಾಗಿ ಚಲಿಸಿ ಥಟ್ಟನೆ ಅಗಲವಾಗಿ ಯಾರು ಯಾರನ್ನೋ ಗಬಕ್ಕನೆ ನುಂಗಿ ಮುಂದಕ್ಕೆ ಚಲಿಸುತ್ತಿದ್ದವು. ಹೀಗಾಗಿ ಹೊಳೆಯ ಹರಿವು ಹಾಗೂ ಊರಿನಲ್ಲಿ ಹುಟ್ಟುತ್ತಿದ್ದ ಕಥೆಯ ಹರಿವುಗಳು ಯಾರೊಬ್ಬರ ನಿಯಂತ್ರಣಕ್ಕೂ ಒಳಪಟ್ಟಿರಲಿಲ್ಲ.


ಮೊದಲೇ ಹೇಳಿದಂತೆ ಹೊಳೆ ಹುಟ್ಟುವ ಜಾಗದ ಬಗ್ಗೆ ನಿಶ್ಚಿತ ಅಭಿಪ್ರಾಯ ಯಾರಿಗೂ ಇರಲಿಲ್ಲ ಹಾಗೂ ಎಲ್ಲರಿಗೂ ಇತ್ತು.  ಇನ್ನೂ ಹಲವರು ಹೊಳೆಗೆ ಜನ್ಮಸ್ಥಾನವಿಲ್ಲವೆಂದು , ಅಲ್ಲಿ ಕೇವಲ ಉಗಮವಿದೆಯೆಂದು ,ಆ ಉಗಮಕ್ಕೆ ಜಾಗವೇ ಇಲ್ಲವೆಂದೂ ,ಅನೂಹ್ಯವಾದ ಶಕ್ತಿಯೊಂದು ಅದನ್ನು ನಿಯಂತ್ರಿಸುತ್ತಿದೆಯೆಂದು , ಆ ಶಕ್ತಿಯೆ ಊರಿನ ಗಡಿಗಳನ್ನು ರಕ್ಷಿಸುತ್ತಿದೆಯೆಂದು , ಜ್ಞಾನ ವಿಜ್ಞಾನದ  ಯಾವೊಂದು ಪ್ರಮೆಯವು ಆ ಶಕ್ತಿಯನ್ನು ವರ್ಣಿಸಲಾರದೆಂದು   ನಮ್ಮ ನಿಮ್ಮಂಥವರಿಗೆ ಅರ್ಥವಾಗದ ತರ್ಕಕ್ಕೆ ಮೀರಿದ ವಿಷಯವನ್ನು ಮಂಡಿಸಿ  , ಕುತೂಹಲವನ್ನೂ , ಭಯವನ್ನೂ ಒಟ್ಟಿಗೆ ಉಂಟು ಮಾಡುತ್ತಿದ್ದರು.  ಹೀಗೆ ರಹಸ್ಯವೂ , , ಅಯೋಮಯವೂ  ಆದಂತಹ ಹುಟ್ಟನ್ನು ಹೊಂದಿದ ಹೊಳೆಗೆ ಅದರ ಅಸ್ತಿತ್ವದ ಕುರಿತು ಅಷ್ಟೇ ಭಯಾನಕ  ಗೊಂದಲವೂ ಇದ್ದಿತ್ತು. 

ಊರಿನಲ್ಲಿ ಮನುಷ್ಯರನ್ನು ಬಿಟ್ಟರೆ ಹೆಸರು ಅನ್ನುವದು ಬೇರೆಯವರಿಗೆ ಇದ್ದಿರಲಿಲ್ಲ ಅಥವಾ ಬೇರೆಯವುದಕ್ಕೂ ಹೆಸರು ಇರಬೇಕು ಅಥವಾ ಇರಬಹುದು ಎನ್ನುವ ವಿಚಾರವನ್ನೂ ಯಾರೂ ಮಾಡಿರಲಿಲ್ಲ.  ಅವರವರು ಸಾಕಿದ ಸಾಕು ಪ್ರಾಣಿಗಳಿಗೆ ಇಟ್ಟ ಹೆಸರುಗಳು ತೀರಾ ಖಾಸಗಿಯಾಗಿ ಇದ್ದುದರಿಂದ ಸಾಕು ಪ್ರಾಣಿಯನ್ನು ಸಾಕಿದ ಯಜಮಾನರಿಗಲ್ಲದೇ ಬೇರೆಯವರಿಗೆ ಅದರ ಹೆಸರು ಗೊತ್ತಾಗುವದು ಶಕ್ಯವಿದ್ದರೂ ಅದರ ಉಪಯೋಗವಿರಲಿಲ್ಲ. ಹೀಗಾಗಿ ರಾಮ್ ನಾಯ್ಕನ ಮನೆ ನಾಯಿ ಟಿಪ್ಪು ಬೇರೆಯವರಿಗೆ ರಾಮ್ ನಾಯ್ಕ ನಾಯಿಯೇ ಆಗಿತ್ತು. ಇದೆ ಪ್ರಕಾರವಾಗಿ ದೊಡ್ಡ ಭಟ್ಟರ ಮೇಲಿನ ತೊಟವೂ , ಸಣ್ಣ ಹೆಗಡೆರ ಅಡ್ಡೆರಿ ಗದ್ದೆಯು , ಕುಪ್ಪಯ್ಯನ ಗೌರಿ ದನವನ್ನು ಆಯಾ ಯಜಮಾನರ ಹೆಸರಿನಿಂದಲೆ  ಕರೆಯುವದು ಗುರುತಿಸುವದು ಬೈಯುವದು ಓಡಿಸುವದು ಹೀಗೆ ಹಲವಾರು ಕೆಲ್ಸವನ್ನು ಮಾಡುತಿದ್ದರು. ಆದರೆ ಹೊಳೆ ಯಾರದ್ದೂ ಆಗದೆ ಇದ್ದುದರಿಂದ ಅದನ್ನು ಯಾರ ಹೊಳೆಯೆಂದು ಹೇಳುವಾದಕ್ಕೂ ಸಾಧ್ಯವಿಲ್ಲ. ಬೇರೆ ಊರಿನ ಹೊಳೆಗಳಂತೆ ಇದಕ್ಕೆ ಯಾವುದೇ ಪುರಾಣದ ಕಥೆ ಅಥವಾ ಇತಿಹಾಸದ ಘಟನೆಯೊಟ್ಟಿಗು ಸಂಬಂಧ ಇಲ್ಲದೇ ಇದ್ದುದರಿಂದ ಹೊಳೆಯನ್ನು ಯಾವುದರ ಜೊತೆಗೂ ಜೋಡಿಸಿ ಹೆಸರು ಕೊಡುವಂತೆ ಇರಲಿಲ್ಲ.  ಹಲವಾರು ಬಾರಿ ಊರಿನ ಹೆಸರಿನೊಂದಿಗೆ ಹೊಳೆಯನ್ನು ಹೇಳಲು ಜನ ಪ್ರಯತ್ನಪಟ್ಟರೂ , ಹೊಳೆ ಈ ಊರನ್ನು ದಾಟಿ ಬೇರೆ ಊರಿಗು ಹರಿದು ಅಥವಾ ತೆವಳಿ ಹೋಗುವದರಿಂದ ಆಯಾ ಊರಿನ ಜನರಿಂದ ತೀವ್ರ ವಿರೋಧಕ್ಕೆ ಪಾತ್ರವಾಯಿತು. ಇಂತಹ ಹೆಸರೇ ಇಲ್ಲದ ಹೊಳೆಯಲ್ಲಿ ನೀರು ಇರುತ್ತಿತ್ತು ,ಇರಲಿಲ್ಲ ,  ತುಂಬುತಿತ್ತು , ತುಂಬುತ್ತಿರಲಿಲ್ಲ. 

 ಹೊಳೆ ಬೇರೆ ಹೊಳೆಗಳ ಹಾಗೆ ಅಥವಾ ಪುಸ್ತಕದಲ್ಲಿ ಕೊಡುವ ಹಾಗೆ ಜುಳು ಜುಳು ಎಂದು ಶಬ್ದ ಮಾಡುತ್ತಾ ಹರಿಯುತ್ತಿರಲಿಲ್ಲ. ಹೊಳೆ ಕೆಲವೊಮ್ಮೆ ಮೌನವಾಗಿ ತೆವಳುತ್ತಿತ್ತು ಇನ್ನೊಮ್ಮೆ ಜುಳು - ಜುಳು ಅಲ್ಲದ ಬೇರೆ ಒಂದು ಶಬ್ದ ಮಾಡುತ್ತಾ ಹರಿಯುತ್ತಿತ್ತು.  ಹೊಳೆಯ ಎರಡೂ ದಡಗಳು ಸಮಾನಾಂತ್ರವಾದ ರೇಖೆಗಳಂತೆಯೂ , ಯಾವತ್ತೂ  ಒಟ್ಟಾಗಲಾರದ ಚಿರ ವಿರಹಿ ಪ್ರೇಮಿಗಳಂತೆಯೂ ಬಾಳುತ್ತ ಹೊಳೆಯ ಮನಸ್ಥಿತಿಗೆ ತಕ್ಕಂತೆ ತಾವು ತಮ್ಮ ಆಕಾರಗಳನ್ನ ಬದಲಾಯಿಸುತ್ತಾ ಕೆಲವೊಮ್ಮೆ ಅತ್ತ ಹಲವೊಮ್ಮೆ ಇತ್ತವೂ ಹಾಗೂ ಇವೆಲ್ಲವೂ ಅಲ್ಲದ ಸಮಯದಲ್ಲಿ ಹೇಗಿದ್ದವೋ ಹಾಗೆಯೇ ಮಲಗಿರುತ್ತಿದ್ದವು.   ದಡ  ಊರಿನ ಹಲವರಂತೆ , ಹಲವರ ಮನಸ್ಸಿನಂತೆ , ಮನಸ್ಸಿನೊಟ್ಟಿಗಿನ ಹೃದಯದಂತೆ  ಹೊಳೆಯ ದಡಗಳು ಹೊರಗೊಂದು ರೂಪವನ್ನು ಹೊಂದಿದ್ದರೂ , ದಡದ ಬುಡದಲ್ಲಿ ಒಳಗೊಳಗೆ ಒಳದ ಆಳವನ್ನು ಪರೀಕ್ಷಿಸುವಂತೆ ಹರಿತವೂ , ಆಳವೂ ಆಗಿದ್ದವು.  ಹೊಳೆಯು ಉಕ್ಕಿ  ಹರಿಯುವಾಗ , ತುಂಬಿ ಬಿಕ್ಕಿಸುವಾಗ , ಸೊಕ್ಕಿ ತೊನೆಯುವಾಗ , ನಿರ್ಮಿಸಿದ ಅಗಲ ದಡಗಳು , ಹೊಳೆಯ ಮದ ಇಳಿದ ಮೇಲೂ ,  ಹೊಳೆಯ ಪಾತ್ರಕ್ಕೆ ತಕ್ಕಂತೆ ಸಣ್ಣವಾಗದೆ ಇದ್ದವು. 

  ದಡಗಳ ಮೇಲೆ ಜನ . ದನ . ನಾಯಿ . ಕುರಿ , ಪ್ರಾಣಿ , ಪಕ್ಷಿ ಹಾಗೂ ಇನ್ನಿತರ ಹಲವು ಜೀವ ಇರುವಂತವು  ಮಲ ವಿಸರ್ಜಿಸುತ್ತಿದ್ದವು.  ಊರ ಗಂಡಸರು ದಡದಲ್ಲಿ , ದಡದ ಪಕ್ಕ ಬೆಳಿದಿರುವ ಪೊದೆಗಳಿಗೆ ಮೂತ್ರ ವಿಸರ್ಜಿಸುತ್ತಿದ್ದರು. ಕೆಲವೊಮ್ಮೆ ಚಿಕ್ಕ ಮಕ್ಕಳು ಯಾವಾಗಾಲಾದರೊಮ್ಮೆ ದಡದ ಮೇಲೆ ನಿಂತು ಹೊಳೆಗೆ ಚುಳ್ಲ್ ಎಂದು ಮೂತ್ರ ವಿಸರ್ಜಿಸಿ , ಆ ಮೂತ್ರದ ರಭಸಕ್ಕೆ ನಿಧಾನವಾಗಿ ತೆವಳುತ್ತಿದ್ದ ಹೊಳೆಯ ನೀರಿನಲ್ಲಿ ಏಳುತ್ತಿದ್ದ ಅಲೆಗಳನ್ನು ನೋಡಿ ರೋಮಾಂಚನಗೊಳ್ಳುತ್ತಿದ್ದುದು  ಇದೆ. ಹೊಳೆಯನ್ನು ಜನ ಹಲವಾರು ಕೆಲಸಗಳಿಗೆ ಬಳಸುತ್ತಿದ್ದರು.  ಹೊಳೆಯ ಈ ದಡದಿಂದ ಆ ದಡಕ್ಕೆ ದಾಟಲು ಸಣ್ಣದಾದ ಸೇತುವೆಯೊಂದು ಇದ್ದಿತ್ತು. ಆ ಸೇತುವೆ ಮೇಲೆ ಜನ ಹಾಗೂ ನಾಯಿಗಳು ಓಡಾಡುತ್ತಿದ್ದವು. ಜನ್ರು ಆ ಕಡೆಯಿಂದ ಈ ಕಡೆಗೆ ಹೋಗುವಾಗ ಹೊಳೆಯನ್ನು ಹಲವಾರು ಬಾರಿ ಅಲಕ್ಷಿಸುತ್ತಿದ್ದರು. ಕೆಲವೊಮ್ಮೆ ವಿನಾಕಾರಣ ಥೂ ಎಂದು ಕ್ಯಾಕರಿಸಿ ಬಲವಂತವಾಗಿ ಗಂಟಲಲ್ಲಿ ಕಫವನ್ನು ಉತ್ಪಾದಿಸಿ ,  ಗಂಟಲು ಹಾಗೂ ನಾಲಗೆ ಸಂಧಿಸುವ ಜಾಗೆಯಲ್ಲಿ ನಿರ್ವಾತವನ್ನು ನಿರ್ಮಿಸಿ , ಲಬಕ್ಕನೆ ಕಫವನ್ನು ನಾಲಗೆಯ ತುದಿಗೆ ಎಳೆದು , ತುಟಿಯ ಒಳ ಬುಡ ಭಾಗಕ್ಕೆ ಆ ಕಫ ತಗಲುವ ಮೊದಲೇ , ಅದನ್ನು ತುಪಕ್ ಎಂದು ಹೊಳೆಗೆ ಉಗಿದು ಮುಂದಕ್ಕೆ ಸಾಗುತ್ತಿದ್ದರು. ಹೀಗೆ ಉಗುಳಿದ ಕಫ ಯಾ ಎಂಜಲು ಹೊಳೆಯಲ್ಲಿ ವಾಸವಾಗಿದ್ದ ಮೀನುಗಳಿಗೆ ಆಹಾರವಾಗುತಿತ್ತು. ಸ್ವಾತಿ ಮಳೆಯ ಸಮಯದಲ್ಲಿ , ಸಾಮಾನ್ಯವಾಗಿ ನಾಯಿಗಳು ಮೂಡಿಗೆ ಬಂದಾಗ ಈ ಹೊಳೆಯ ಗು೦ಟ ಮುಂದೆ ಸಾಗುತಿದ್ದ ಹೆಣ್ಣು ನಾಯಿಯ ಹಿಂದೆ ಹಲವಾರು ಗಂಡು ನಾಯಿಗಳು ಲುಟು -ಲುಟು ಎಂದು ಆಸೆಯಿಂದ ಹೋಗುತ್ತಿದ್ದವು. ಕೆಲವೊಮ್ಮೆ ಈ ನಾಯಿಗಳು ಹೊಳೆಯ ಸಣ್ಣಗಿನ ಶಬ್ದಕ್ಕೆ ಬೆಚ್ಚಿ , ಹೊಳೆಯ ಕಡೆ ತಿರುಗಿ ಬೋವ್ ಬೇಕ್ ಬ್ಯಾಕ್ ಎಂದು ಚಣ ಕಾಲ ಕೂಗಿ ಮತ್ತೆ ಓಡಿ ಹೋಗುತ್ತಿದ್ದವು. ಬಹುತೇಕ ಸಂದರ್ಭಗಳಲ್ಲಿ , ಹೊಳೆ ತುಂಬಿದ್ದರೂ ಅಥವಾ ತುಂಬದೇ ಇದ್ದರು ಜನ ಹೊಳೆಗೆ ಬಯ್ಯುತ್ತಿದ್ದರು. ಹೊಳೆಯಲ್ಲಿ ಮುಳುಗುವಷ್ಟು ನೀರು ಇಲ್ಲದೇ ಹೋದರು , ಜನ ಯಾರಿಗಾದರೂ ಬೈಯುವಾಗ ' ಹೊಳೆಗೆ ಬಿದ್ದು ಸಾಯಿ ' ಎನ್ನುತ್ತಿದ್ದರು. ಹೀಗೆ ಹೇಳುವಾಗ ಜನರ ಮನಸ್ಸಿನಲ್ಲಿ ಈ ಹೊಳೆಯೇ ಇದ್ದಿತ್ತೇ ಎನ್ನುವದು ಯಾರು ಕೆದಕಲು ಹೋಗದು ಪ್ರಶ್ನೆ. 

ಹೀಗೆ ಜನರಿಂದ , ಜನರ ಊರಿನಿಂದ ಹೊರಗೆ ಇದ್ದ ಹೊಳೆಯು ತನ್ನದೇ ಧ್ಯಾನದಲ್ಲಿ , ತನ್ನದೇ ಗುರಿಯಾದ ನದಿಯೊಂದನ್ನು ಕಲ್ಪಿಸಿಕೊಂಡು ಹರಿಯುತ್ತಾ , ಉರುಳುತ್ತ , ತೆವಳುತ್ತ , ಬತ್ತುತ್ತ , ಧುಮುಕುತ್ತಾ , ನುಗ್ಗುತ್ತಾ ಹಾಗೂ ಆವಿಯಾಗುತ್ತಾ ಕಾಲಚಕ್ರಗಳ ಪರಿವೆಯೇ ಇಲ್ಲದೇ , ಜೀವವಿಲ್ಲದ ನಿರಂತರ ಚಲನೆಯೊಂದಿಗೆ ಲಕ್ಷ್ಯದತ್ತ ಪ್ರಯಣಿಸುತ್ತಲೆ ಇದೆ , ಇತ್ತು ಹಾಗೂ ಇರುತ್ತದೆ.