Tuesday, December 24, 2013

ಝೂಂಡ ಕತೆಗಳು

 ಹಲವು ಝೂಂಡರ ಕೋರಿಕೆಯ ಮೇರೆಗೆ ಕೈ ಗೆ ಸಿಕ್ಕ ಝೂಂಡ ಕತೆಗಳನ್ನು ಒಂದೆಡೆಗೆ ಹೆಕ್ಕಿ ಇಟ್ಟಿದ್ದೇನೆ


                                      ಝೂಂಡ ಕತೆಗಳು  : ಕಟ್ಟುಪಾಡು


ಒಮ್ಮೆ ಝೂಂಡ ಶಿಸ್ಯರೆಲ್ಲ ಸೇರಿ ಪುಸ್ತಕವೊಂದನ್ನ ಬರೆಯಬೇಕೆಂದು ನಿರ್ಧರಿಸಿದರು. ಆದರೆ ಯಾವುದರ ಕುರಿತು ಪುಸ್ತಕ ಬರೆಯಬೇಕೆಂದು ಅವರಲ್ಲೇ ಭಿನ್ನಮತ ಮೂಡಿತು.
"ಬರೆಯುವದಾದರೆ ಝೂಂಡ ಧರ್ಮದ ಬಗ್ಗೆ ಬರೆಯೋಣ : ಶಿಸ್ಯ ೧
"ಇಲ್ಲ ಬರೆಯುವದಾದರೆ ಝೂಂಡ ದೇವರ ಬಗ್ಗೆ ಬರೆಯೋಣ " ಶಿಸ್ಯ ೨
" ಅದು ಹೇಗೆ ? ಧರ್ಮವಿದ್ದರೆ ತಾನೇ ದೇವರು , ಹಾಗಾಗಿ ಧರ್ಮದ ಬಗ್ಗೆ ಬರೆಯೋಣ ಶಿಸ್ಯ ೩
ಇಲ್ಲ, ದೇವರಿಗಾಗಿ ಧರ್ಮ. ಎಲ್ಲವನ್ನು ಸೃಷ್ಟಿಸಿದವ ದೇವರು ಹಾಗಾಗಿ ಝೂಂಡ ದೇವರ ಬಗ್ಗೆ ಬರೆಯೋಣ" ಶಿಸ್ಯ ೪
ಸಾಧ್ಯವೇ ಇಲ್ಲ ಧರ್ಮ ದೇವರನ್ನು ಸೃಷ್ಟಿಸ ಬಲ್ಲದು , ದೇವರಿಗೆ ಅಸ್ತಿತ್ವ ಬೇಕೆಂದರೆ ಧರ್ಮವಿರಬೇಕು , ಅದಕ್ಕಾಗಿಯೇ ಧರ್ಮದ ಬಗ್ಗೆ ಬರೆಯಬೇಕು " ಶಿಸ್ಯ ೫
ಕೊನೆಗೆ ಅವರು ಪುಸ್ತಕವನ್ನು ಬರೆಯಲೇ ಇಲ್ಲ !



                                          ಝೂಂಡ ಕತೆಗಳು : ಮುಕ್ತಿ


ಒಮ್ಮೆ ಝೂಂಡ ಗುರುಗಳು ಗಾಂಧೀ ಬಜಾರಿನ ಮಾರ್ಗವಾಗಿ ಎತ್ತಲೋ ಹೊರಟಿದ್ದರು.
ಇದ್ದಕ್ಕಿದಂತೆ ಅವರೆಡೆಗೆ ಗಡಿಬಿಡಿಯಲ್ಲಿ ಓಡಿ ಬಂದ ಅವರ ಶಿಸ್ಯನೊಬ್ಬ ಕೇಳಿದ :
' ಗುರುಗಳೇ ಮುಕ್ತಿ ಎಂದರೇನು ?'
'ಏನನ್ನೂ ಮಾಡದಿರುವದೇ ಮುಕ್ತಿ ' ಎಂದ ಗುರುಗಳು ಹೊರಟುಹೋದರು
ಇದಾದ ಹಲವು ವರ್ಷಗಳ ನಂತರ ಗುರುಗಳು ಮತ್ತೆ ಗಾಂಧೀ ಬಜಾರಿನ ಮಾರ್ಗವಾಗಿ ಬರಬೇಕಾಯಿತು .
ಮತ್ತೆ ಅವರ ಶಿಸ್ಯ ಅವರೆಡೆಗೆ ಗಡಿಬಿಡಿಯಲ್ಲಿ ಓಡಿ ಬಂದು ಕೇಳಿದ
' ಗುರುಗಳೇ ನಾನು ಹಲವಾರು ವರ್ಷ್ರಗಳಿಂದ ಏನನ್ನು ಮಾಡುತ್ತಿಲ್ಲ , ಆದರೂ ನನಗೇಕೆ ಮುಕ್ತಿ ಸಿಕ್ಕಿಲ್ಲ' .
' ಏಕೆಂದರೆ ನೀನು ಏನನ್ನು ಮಾಡುತ್ತಿಲ್ಲ "
ಗುರುಗಳು ಹೊರಟು ಹೋದ



                                            ಝೂಂಡ ಕತೆಗಳು : ಸತ್ಯ


ಝೂಂಡ ಗುರುಗಳು ಒಮ್ಮೆ ತಮ್ಮ ಶಿಸ್ಯ ಗಣಗಳೊಂದಿಗೆ ಚಹಾ ಕುಡಿಯುತ್ತಿದ್ದರು .
ಶಿಸ್ಯನೊಬ್ಬ ಕೇಳಿದ ' ಗುರುಗಳೇ ಎಲ್ಲವನ್ನು ಕಾಣಿಸುವ ಬೆಳಕಿರುವಾಗ ಝೂಂಡ ದೇವರು ಕತ್ತಲೆಯನ್ನೇಕೆ ಸೃಷ್ಟಿಸಿದ ?"
'ಕತ್ತಲೆಯಲ್ಲಿ ಮಾತ್ರ ನಕ್ಷತ್ರಗಳು ಕಾಣಿಸುತ್ತವೆ " ಗುರುಗಳು ಮೌನವಾಗಿ ಚಹಾ ಕುಡಿಯುವದ ಮುಂದುವರಿಸಿದರು


                                            ಝೂಂಡ ಕತೆಗಳು : ನಾವು


'ಗುರುಗಳೇ ಹಕ್ಕಿಗಳೇಕೆ ನೆಮ್ಮದಿಯಾಗಿವೆ ? ' ಶಿಸ್ಯ
'ಏಕೆಂದರೆ ಅವು ಮನುಷ್ಯರಾಗಿಲ್ಲ ' ಝೂಂಡ ಗುರುಗಳು
'ಪ್ರಾಣಿಗಳೇಕೆ ನೆಮ್ಮದಿಯಾಗಿವೆ ?'
'ಏಕೆಂದರೆ ಅವು ಮನುಷ್ಯರಾಗಿಲ್ಲ '
'ಮರಗಳೇಕೆ ನೆಮ್ಮದಿಯಾಗಿವೆ ?'
'ಏಕೆಂದರೆ ಅವು ಮನುಷ್ಯರಾಗಿಲ್ಲ '
'ಹಾಗಾದ್ರೆ ಮನುಷ್ಯರೇಕೆ ನೆಮ್ಮದಿಯಾಗಿಲ್ಲ ?'
'ಏಕೆಂದರೆ ಅವರು ಮನುಷ್ಯರಾಗಿಲ್ಲ ' ಗುರುಗಳು ಪುಸ್ತಕ ಓದುವದ ಮುಂದುವರೆಸಿದ



                                          ಝೂಂಡ ಕತೆಗಳು : ಚಕ್ರ


ಗುರುಗಳೇ ನಾನು , ಇವಳು ಮಾತನಾಡುವದೇ ಇಲ್ಲ
ಮದುವೆಯಾಗಲಿ ಎಲ್ಲ ಸರಿಯಾಗುತ್ತೆ
ಸರಿ ಎಂದ ಶಿಸ್ಯ.
ವರ್ಷಗಳು ಉರುಳಿದವು ಗುರುಗಳು ಮತ್ತೆ ಗಾಂಧೀ ಬಜಾರಿನ ಕಡೆ ಬಂದಿದ್ದರು .
ಗುರುಗಳೇ ಇವಳು ಮಾತ್ರ ಮಾತನಾಡುವದು
ಮಕ್ಕಳಾಗಲಿ ಎಲ್ಲ ಸರಿಯಾಗುತ್ತೆ " ಗುರುಗಳು
ಸರಿ ಎಂದ ಶಿಸ್ಯ.
ವರ್ಷಗಳು ಉರುಳಿದವು ಗುರುಗಳು ಮತ್ತೆ ಗಾಂಧೀ ಬಜಾರಿನ ಕಡೆ ಬಂದಿದ್ದರು .
ಗುರುಗಳೇ ಈಗ ಮಕ್ಕಳು ಮತ್ತು ಇವಳು ಮಾತ್ರ ಮಾತನಾಡುವದು "
ಮಕ್ಕಳು ಬೆಳೆದು ದೊಡ್ಡವರಾಗಿ ಅವರಿಗೂ ಮದುವೆಯಾಗಲಿ ಎಲ್ಲ ಸರಿಯಾಗುತ್ತೆ " ಗುರುಗಳು
ಸರಿ ಎಂದ ಶಿಸ್ಯ.
ವರ್ಷಗಳು ಉರುಳಿದವು ಗುರುಗಳು ಮತ್ತೆ ಗಾಂಧೀ ಬಜಾರಿನ ಕಡೆ ಬಂದಿದ್ದರು .
ಶಿಸ್ಯ ಆಗಲೋ ಈಗಲೋ ಎನ್ನುವಂತೆ ಹಾಸಿಗೆ ಮೇಲಿದ್ದ , ಅವನ ಮಾತನ್ನು ಕೇಳಿಸಿಕೊಳ್ಳಲು ಎಲ್ಲ ಸಿದ್ಧರಿದ್ದರು . ಆದರೆ ಶಿಸ್ಯನಿಗೆ ಮಾತನಾಡಲು ಆಗಲೇ ಇಲ್ಲ .


                                                ಝೂಂಡ ಕತೆಗಳು :ವಾಸ್ತವ


ಒಮ್ಮೆ ಝೂಂಡ ಶಿಸ್ಯನೊಬ್ಬ ಗಾಢ ನಿದ್ರೆ ಮಾಡಬೇಕೆಂದು ಮಂಚದ ಮೇಲೆ ಮಲಗಿದ . ಎಷ್ಟು ಹೊತ್ತಾದರೂ ಅವನಿಗೆ ನಿದ್ರೆಯೇ ಬರಲಿಲ್ಲ . ಬೇಸತ್ತ ಶಿಸ್ಯ ಹೊರಳಾಡುತ್ತಾ ಇರುವಾಗ ಮಂಚದಿಂದ ಕೆಳಗೆ ಬಿದ್ದು ಹೋದ . ಅವನು ಎಷ್ಟು ಜೋರಾಗಿ ಬಿದ್ದಿದ್ದನೆಂದರೆ ಅವನಿಗೆ ಏಳಲು ಆಗಲೇ ಇಲ್ಲ .

ಶಿಸ್ಯ ಹಾಗೆಯೇ ಮಲಗಿದ ಹಾಗೂ ಅವನಿಗೆ ಗಾಢ ನಿದ್ರೆ ಹತ್ತಿತು


                                                  ಝೂಂಡ ಕತೆಗಳು : ಜೀವನ


ಒಮ್ಮೆ ಝೂಂಡ ಶಿಸ್ಯನೊಬ್ಬ ಗಾಂಧೀ ಬಜಾರಿನ ಮಾರ್ಗವಾಗಿ ಮನೆಗೆ ಹೊರಟಿದ್ದ . ಹೋಗುವಾಗ ಇದ್ದಕ್ಕಿದ್ದಂತೆ ಅವನ ಕೈ ಚೀಲ ಕಳೆದು ಹೋಯಿತು . ಶಿಸ್ಯ ಕೈ ಚೀಲ ಹುಡುಕುತ್ತಿರುವಾಗ ಅವನ ಚಪ್ಪಲಿಗಳು ಕಳೆದು ಹೋದವು . ಇದೇನಿದು ಎಂದು ಚಪ್ಪಲಿ ಹುಡುಕುತ್ತಿರುವಾಗ ಅವನ ಅಂಗಿ ಕಳೆದು ಹೋಯಿತು. ಬೇಸರಗೊಂಡ ಶಿಸ್ಯ ಮನೆಗೆ ಹೊರಡುವದೆಂದು ನಿರ್ಧರಿಸಿ ಹೊರಟ , ಆದರೆ ಆ ವೇಳೆಗೆ ಮನೆಗೆ ಹೋಗುವ ದಾರಿ ಕಳೆದು ಹೋಗಿತ್ತು .ಏನು ಮಾಡುವದು ಎಂದು ಗೊತ್ತಾಗದೆ ಶಿಸ್ಯ ಅಲ್ಲಿಯೇ ಕುಳಿತಾಗ , ಅವನೇ ಕಳೆದು ಹೋದ.

ಶಿಸ್ಯ ಕಳೆದುದರಿಂದ ಅವನ ಬಗ್ಗೆ ಯಾವುದೇ ಮಾಹಿತಿ ಇಲ್ಲ . ಹೀಗಾಗಿಅವನ ಬಗ್ಗೆ ನಾವು ಮಾತನಾಡದಿರುವುದೇ ಲೇಸು

                                                 

                                                    ಝೂಂಡ ಕತೆಕಥಾಮೂಲ

ಝೂಂಡ ಕತೆಗಳನ್ನು ನಾನು ಬರೆಯಲು ಪ್ರಾರಂಭಿಸಲು ಸ್ಫೂರ್ತಿ ರಶಿಯಾದ ಬರಹಗಾರ ದನಿಯಲ್ ಖಾರ್ಮ್ಸ್ . ಬಹುತೇಕ ಝೂಂಡ ಕತೆಗಳು ಖಾರ್ಮ್ಸ್ ನ 'Today I wrote Nothing' ಎನ್ನುವ ಪುಸ್ತಕದ ಕತೆಗಳ ಭಾವಾನುವಾದ . ಖಾರ್ಮ್ಸ್ ಕತೆಗಳು / ಬರಹಗಳು ಯಾವುದೇ ತರ್ಕಕ್ಕೆ ಸಿಲುಕದ , ಯಾವುದೇ ಸಿದ್ದಾಂತಕ್ಕೆ ನಿಲುಕದವು . ಅವು ಅನಾಟಕೀಯವಾಗಿ ಆರಂಭವಾಗಿ ಅಷ್ಟೇ ಅನಾಟಕೀಯವಾಗಿ ಮುಗಿಯುತ್ತವೆ ಅಥವಾ ಇನ್ನು ಕತೆ ಇಲ್ಲದುದರಿಂದ ಅದು ಮುಗಿದಿದೆ ಎನ್ನುವ ಭಾಸ.

ಉದಾಹರಣೆಗೆ "ಭೇಟಿ " ಎನ್ನುವ ಕತೆ
ಹೀಗೆ ಒಂದು ದಿನ ಒಬ್ಬ ಮನುಷ್ಯ ಕೆಲಸಕ್ಕೆ ಹೊರಟಾಗ ರಸ್ತೆಯ ಮೇಲೆ ಅವನಿಗೆ ಇನ್ನೊಬ್ಬ ಮನುಷ್ಯ ಭೇಟಿಯಾದ . ಅವನು ತನ್ನ ಮನೆಯಿಂದ ಹೊರಟು ಒಂದು ತುಂಡು ಬ್ರೆಡ್ ಖರಿದಿಸಿ ಮನೆಯತ್ತಲೇ ತಿರುಗಿ ಹೊರಟಿದ್ದ.
ನಡೆದಿದ್ದು ಇಷ್ಟೇ

ಇಲ್ಲಿಗೆ ಕತೆ ಮುಕ್ತಾಯವಾಗುತ್ತದೆ

ನೀಲಿ ಟಿಪ್ಪಣಿ ಪುಸ್ತಕ ೧೬ ಎನ್ನುವ ಕತೆ :

ಇವತ್ತು ನಾನು ಏನು ಬರೆಯಲಿಲ್ಲ , ಆದರೂ ಪರವಾಗಿಲ್ಲ ..

ಇಷ್ಟೇ ಕತೆ .

ಇಲ್ಲಿ ನಾನು ನೀವು ಕಾತುರರಾಗಿ ಕಾಯುವಂತೆ ಯಾವುದೇ ರಸಾನುಭವದ ಘಟನೆಯಾಗಲಿ , ಯಾವುದೇ ರೋಚಕ ತಿರುವಾಗಲಿ ಇಲ್ಲ . ಖಾರ್ಮ್ಸ್ ನ ಬಹುತೇಕ ಕತೆಗಳು ಒಂದಕ್ಕೊಂದು ಕೊಂಡಿಯಾಗದ , ನಮಗೆ ಅರಿವಾಗುವ ವಿರೋಧಾಭಾಸ ಹುಟ್ಟಿಸುವ ಬರಹಗಳು , ಆದರೂ ಖಾರ್ಮ್ಸ್ ಇಷ್ಟವಾಗುತ್ತಾನೆ . ಮತ್ತೆ ಮತ್ತೆ ಓದುವಂತೆ ಪ್ರಚೋದಿಸುತ್ತಾನೆ. ಸಂಪ್ರದಾಯಿಕ ಕಥನ ಕ್ರಮಕ್ಕೆ ಬಹು ದೂರವಾಗಿ ಬರೆದ ಈತ ಯಾವ್ದೋ ಒಂದು ವಾಕ್ಯದಿಂದ ಕತೆಯನ್ನ ಆರಂಭಿಸಿ , ಯಾವುದೇ ತಿರುವಗಳನ್ನ ತುಂಬದೆಯೆ ನಡೆದಿದ್ದು ಹೆಚ್ಚು ಕಡಿಮೆ ಇಷ್ಟೇ ಎನ್ನುವಲ್ಲಿಗೆ ಕತೆಯನ್ನು ಮುಗಿಸುತ್ತಾನೆ . ಖಾರ್ಮ್ಸ್ ಬರೆದ ಕತೆಗಳು ಹಾಗೂ ಇರಾನಿ ಸಿನಿಮಾಗಳು ನನ್ನನ್ನು ಕಾಡುವದಕ್ಕೆ ಕಾರಣಗಳಿವೆ . ಇವೆರಡರಲ್ಲಿ ಕಾಣಸಿಗುವ ಸಾಮ್ಯತೆ ಎಂದರೆ ಇಲ್ಲಿ ಯಾವುದು ಅನಿರೀಕ್ಷಿತ ಘಟನೆಗಳು ಇಲ್ಲ . ಎಲ್ಲವು ಸರಳವಾಗಿ ನಡೆಯುತ್ತವೆ . ಆದರೆ ನಮ್ಮ ಅತಿ ವೇಗದ ಅತಿ ರಂಜನೀಯ ಬದುಕು ನಮ್ಮನ್ನು ಹೇಗೆ ತರಪೇತುಗೊಳಿಸಿದೆ ಎಂದರೆ ಪ್ರತಿ ವಾಕ್ಯದಲ್ಲೂ , ಸಿನಿಮಾದ ಪ್ರತಿ ಫ಼್ರೇಮಿನಲ್ಲು ನಾವು ರೋಚಕತೆಯನ್ನ , ತಿರುವುಗಳನ್ನು ನಿರೀಕ್ಷಿಸುತ್ತೇವೆ . ಖಾರ್ಮ್ಸ್ ಹಾಗೂ ಇರಾನಿ ಸಿನಿಮಾ ಎರಡು ನಮ್ಮನ್ನು ಪ್ರತಿ ಹಂತದಲ್ಲೂ ಬೇಸ್ತುಗೊಳಿಸುತ್ತವೆ .

ಖಾರ್ಮ್ಸ್ ಇಶ್ಟವಾಗುವದು ಇನ್ನೊಂದು ಕಾರಣಕ್ಕೆ , ನಮ್ಮ ಆಧುನಿಕ ಯುಗದ ಮೂಲ ಕಲ್ಪನೆಯಾದ ಪ್ರತಿ ವಸ್ತುವು ಪ್ರಯೋಜನಕ್ಕೆ ಬರಬೇಕು ಎನ್ನುವದನ್ನು ನಿರಾಕರಿಸುವದಕ್ಕೆ. ಇಂಜಿನಿಯರಿಂಗ ಓದಿದ್ದ ಖಾರ್ಮ್ಸ್ ಒಮ್ಮೆ ತನ್ನ ಮನೆಯಲ್ಲಿ ದೊಡ್ಡ ಗಾತ್ರದ ಯಂತ್ರವೊಂದನ್ನ ನಿರ್ಮಿಸಿದ್ದ. ಗುಜರಿ ವಸ್ತುಗಳಿಂದ ನಿರ್ಮಿಸಿದ್ದ ಅದು ಅವನ ಮನೆಯಲ್ಲಿ ಒಂದು ವಸ್ತುವಾಗಿ ಇತ್ತು ಅಷ್ಟೇ . ಇವನ ಮನೆಗೆ ಬಂದವರು 'ಯಂತ್ರ ಏನನ್ನು ಮಾಡುತ್ತದೆ ' ಎಂದು ಪ್ರಶ್ನಿಸಿದರೆ ಅವನು ಉತ್ತರಿಸುತ್ತಿದ್ದುದು ' ಅದು ಏನನ್ನು ಮಾಡುವದಿಲ್ಲ ಅದು ಯಂತ್ರ ಅಷ್ಟೇ '

ಖಾರ್ಮ್ಸ್ನ ಕತೆಗಳು ಅಷ್ಟೇ ಅಲ್ಲಿ ಏನಾದರು ಆಗಲೇಬೇಕು ಎನ್ನುವ ಯಾವ ನಿಯಮವು ಇಲ್ಲ . ಅವನ ದೃಷ್ಟಿಯಲ್ಲಿ ಕಲೆಗಳು ಅತ್ಯಂತ ಸುಂದರವಾದ ರೂಪಕಗಳು ಅಲ್ಲ . ಅವು ಕೇವಲ ನಿಜ ವಸ್ತುಗಳು . ವಸ್ತುಗಳು ವಸ್ತುಗಳು ಮಾತ್ರ . ಮನುಷ್ಯರು ಮನುಷ್ಯರು ಮಾತ್ರ. ಅವು ಸುಂದರವೂ ಅಲ್ಲ ಕುರೂಪಿಯೂ ಅಲ್ಲ.

“When verses are taken from a page and hurled at a window they should shatter glass,” Kharms once said

"ಒಂದು ಪದ್ಯವು ನಿಜವಾದ ವಸ್ತುವೇ ಆಗಿರಬೇಕು ಆಡು ಎಷ್ಟು ನಿಜವಾಗಿರಬೇಕು ಅಂದರೆ ಅದನ್ನು ಎತ್ತಿ ಬಿಸಾಕಿದರೆ ಕಿಟಕಿಯ ಗಾಜು ಒಡೆಯ ಬೇಕು "


                                                 ಝೂಂಡ ಕತೆಗಳು:  ಸಾಧನೆ


ಯಂತ್ರ ಕುಶಲಿಯಾಗಿದ್ದ ಝೂಂಡ ಶಿಸ್ಯನೊಬ್ಬ ಒಮ್ಮೆ ಗಾಂಧಿ ಬಜಾರಿನಲ್ಲಿ ಭಾರೀ ಗಾತ್ರದ ಇಟ್ಟಿಗೆಯ ಗೋಡೆಯೊಂದನ್ನ ಕಟ್ಟಬೇಕೆಂದು ನಿರ್ಧರಿಸಿದ.
ಇದನ್ನು ಹೇಗೆ ಮಾಡುವದು ಎನ್ನುವದರ ಕುರಿತು ಆತ ತುಂಬಾ ಚಿಂತಿಸಿದ ; ಇದಕ್ಕಾಗಿ ತರ್ಕಬದ್ಧವಾದ ಉಪಾಯಗಳನ್ನು ಹೂಡುತ್ತ ಹಲವಾರು ನಿದ್ರೆಗಳಿಲ್ಲದ ರಾತ್ರಿ ಕಳೆದ . ಕ್ರಮೇಣ , ಇವನ ವಿಚಾರಗಳನ್ನು ಅರಿತ ಹಲವಾರು ಚಿಂತಕರು ಮತ್ತು ಯಂತ್ರಕುಶಲಿಗಳ ಸಂಘವೇ ರೂಪುಗೊಂಡು ಅವರು ಈ ಗೋಡೆಯನ್ನು ಹೇಗೆ ಕಟ್ಟಬೇಕೆಂದು ತರ್ಕಗಳ ಸರಣಿ ಹೂಡಿ, ನಕ್ಷೆ ಸಿದ್ಧಪಡಿಸಿದರು . ಅವರ ತೀರ್ಮಾನದಂತೆ , ಎಲ್ಲರಿಗೂ ಅಚ್ಚರಿಯಾಗುವ ರೀತಿಯಲ್ಲಿ ಗೋಡೆಯನ್ನು ಜಾಸ್ತಿ ಟ್ರಾಫಿಕ್ ಇಲ್ಲದ ಇರುಳಿನಲ್ಲೆ ಕಟ್ಟಿ ಮುಗಿಸಬೇಕೆಂದೂ ಯೋಜಿಸಿಕೊಂಡರು . ಇದಕ್ಕಾಗಿ ಹಲವಾರು ಕಾರ್ಮಿಕರನ್ನು ಕಲೆ ಹಾಕಲಾಯಿತು . ಕೆಲಸದ ಹಂಚಿಕೆಯನ್ನು ಮಾಡಿಯಾಯಿತು . ನಗರದ ಅಧಿಕಾರಿಗಳ ಕಣ್ಣು ತಪ್ಪಿಸಿ ಯಾರ್ಯಾರು ಹೇಗೆ ಎಲ್ಲಿಲ್ಲಿ ಕೆಲಸ ಮಾಡಬೇಕು ಎನ್ನುವದ ಕುರಿತು ಸ್ಪಷ್ಟ ಆದೇಶವನ್ನು ಕಾರ್ಮಿಕರಿಗೆ ಕೊಡಲಾಯಿತು . ಇಷ್ಟು ಕರಾರುವಕ್ಕಾದ ಯೋಜನೆಯ ಫಲವಾಗಿ ಅವರು ಒಂದೇ ರಾತ್ರಿಯಲ್ಲಿ ಗೋಡೆ ಕಟ್ಟಿ ಮುಗಿಸಿದರು .
ಮಾರನೆಯ ದಿನ ಇಡಿಯ ಗಾಂಧಿ ಬಜಾರಿನಲ್ಲಿ ಗುಲ್ಲೋ ಗುಲ್ಲು .

ಆದರೆ ಅಷ್ಟು ಹೊತ್ತಿಗೆ ಈ ಗೋಡೆಯ ಮೂಲಯೋಜಕ ಮಾತ್ರ ಗಾಬರಿಯಿಂದ ಅಡಗಿಬಿಟ್ಟಿದ್ದ , ಕಾರಣ ಈ ಗೋಡೆಯಿಂದ ಏನು ಪ್ರಯೋಜನ ಎನ್ನುವದು ಮಾತ್ರ ಅವನಿಗೆ ಮರೆತುಹೋಗಿತ್ತು

                                           ಝೂಂಡ ಕತೆಗಳು :ಮಾಡುವದೇನು

ಒಂದು ದಿನ ಝೂಂಡ ಗುರುಗಳು ಏನನ್ನೂ ಮಾಡಲಿಲ್ಲ , ಗುರುಗಳನ್ನು ನೋಡಲು ಯಾವುದೇ ಶಿಸ್ಯರು ಬರಲಿಲ್ಲ ಹಾಗೂ ಗುರುಗಳು ಶಿಸ್ಯರನ್ನು ನೋಡಲು ಹೋಗಲಿಲ್ಲ . ಗುರುಗಳಿಗೆ ಪೆನ್ನು ಹಾಳೆ ಮತ್ತು ಪುಸ್ತಕ ಸಿಗದೇ ಇದ್ದ ಕಾರಣ ಅವರು ಏನನ್ನೂ ಬರೆಯಲಿಲ್ಲ ಹಾಗೂ ಓದಲಿಲ್ಲ . ಮಾಡಲಿಕ್ಕೆ ಏನು ಇರದ ಕಾರಣ ಇನ್ಯಾವದನ್ನು ಮಾಡಲಿಲ್ಲ ಏನನ್ನೂ ಮಾಡಲಿಕ್ಕಿರದ , ಯಾರೊಟ್ಟಿಗೂ ಇರದ ಕಾರಣ ಗುರುಗಳಿಗೆ ವಿಚಾರವನ್ನು ಮಾಡಬೇಕಾದ ಪ್ರಸಂಗ ಬರಲಿಲ್ಲ ಹಾಗೂ ಏನನ್ನು ವಿಚಾರ ಮಾಡದ ಕಾರಣದಿಂದ ಗುರುಗಳಿಗೆ ಸಂತೋಷವಾಗಲಿ ದುಃಖವಾಗಲಿ ಆಗಲಿಲ್ಲ.

ಗುರುಗಳು ಏನನ್ನು ಮಾಡದೆ ಇದ್ದುದರಿಂದ , ಗುರುಗಳು ಏನು ಮಾಡಿದರು ಎನ್ನುವದರ ಕುರಿತು ಝೂಂಡ ಶಿಸ್ಯರಲ್ಲಿ ಭಿನ್ನಭಿಪ್ರಾಯ ಹುಟ್ಟಿತು. ಗುರುಗಳು ಏನನ್ನು ಮಾಡಿರಬಹುದು ಎಂದು ಝೂಂಡ ಶಿಸ್ಯರು ಹಲವಾರು ವಿಧವಾಗಿ ಚರ್ಚೆ ಮಾಡಿದರು . ಗುರುಗಳೊಟ್ಟಿಗೆ ಏನೂ ನಡೆಯದ ಕಾರಣ , ಹಾಗೂ ಏನನ್ನು ಮಾಡದಿರುವುದರ ಚರ್ಚೆ ಮಾಡುತ್ತಿರುವದರಿಂದ ಕ್ರಮೇಣ ಶಿಸ್ಯರಿಗೆ ಯಾವ ವಿಷಯದ ಕುರಿತು ಚರ್ಚೆ ಮಾಡಬೇಕು ಎನ್ನುವದೇ ಮರೆತು ಹೋಯಿತು .

ದಯವಿಟ್ಟು ನಿಮಗೆ ಯಾರಾದರೂ ಒಂದಷ್ಟು ಜನ ವಿಷಯವಿಲ್ಲದೆ ಚರ್ಚೆ ಮಾಡುತ್ತಿದರೆ ಅವರಿಗೆ ಜ್ಞಾಪಿಸಿ ' ಗುರುಗಳು ಏನನ್ನು ಮಾಡದೆ ಇದ್ದುದರಿಂದ ಹಾಗೂ ಏನನ್ನು ಮಾಡದಿರುವ ಕಾರಣ ಏನು ಮಾಡಿದರು ಎಂದು ಚರ್ಚಿಸಲು ಕಾರಣವಿಲ್ಲ "


                                          ಝೂಂಡ ಕಥೆ : ಮುಕ್ತಿ

ಗುರುಗಳು ಗಾಂಧೀ ಬಜಾರಿನ ಕಡೆಗೆ ಹೊರಟಿದ್ದರು. ಎದುರಿಗೆ ಸಿಕ್ಕ ನಲವತ್ತಾರನೇ ಶಿಷ್ಯ ಕೇಳಿದ
"ಗುರುಗಳೇ , ಹೊರಟಿದ್ದೆಲ್ಲಿಗೆ ?"
"ಮನಸ್ಸು ತೋರಿದ ಕಡೆ " ಗುರುಗಳು ಮುನ್ನಡೆದರು 
ಸ್ವಲ್ಪ ಮುಂದೆ ಸಿಕ್ಕಿದ ಎಪ್ಪತ್ತಮೂರನೇ ಶಿಷ್ಯ ಕೇಳಿದ "ಗುರುಗಳೇ , ಹೊರಟಿದ್ದೆಲ್ಲಿಗೆ ?"
"ಹಾದಿ ತೋರಿದ ಕಡೆ " ಗುರುಗಳು ಮುನ್ನಡೆದರು
ಇನ್ನೂ ಸ್ವಲ್ಪ ಮುಂದೆ ಸಿಕ್ಕಿದ ಹದಿನಾಲ್ಕನೆಯ ಶಿಷ್ಯ ಕೇಳಿದ
"ಗುರುಗಳೇ , ಹೊರಟಿದ್ದೆಲ್ಲಿಗೆ ?"
"ಕಾಲು ಕರೆದೊಯ್ದಲ್ಲಿಗೆ " ಗುರುಗಳು ಸರಸರನೆ ನಡೆದರು
ಕೊಂಚ ದೂರದಲ್ಲಿ ಎರಡನೆಯ ಸಿಸ್ಯ ಸಿಕ್ಕಿದ
ಸಿಸ್ಯ ಗುರುಗಳನ್ನು ಏನನ್ನೂ ಕೇಳಲಿಲ್ಲ , ಗುರುಗಳು ಏನನ್ನೂ ಹೇಳಲಿಲ್ಲ .
ಸಿಸ್ಯ ಗುರುಗಳನ್ನು ಹಿಂಬಾಲಿಸಿದ.
ನೀವು ಗಾಂಧೀ ಬಜಾರಿನಲ್ಲಿ ಯಾರಾದರೂ ಸಿಸ್ಯನನ್ನೂ ನೋಡಿದರೆ ಅವನು ಎರಡನೆಯ ಸಿಸ್ಯನೇ ಹೌದು

                                             ಝೂಂಡ ಕಥೆ : ಸಂಭವನೀಯತೆ

ಸಿಸ್ಯನೊಬ್ಬನ ಬಳಿ ಮೇಕೆಯೊಂದಿತ್ತು . ಪ್ರತಿದಿನವೂ ಶಿಷ್ಯ ಯಾವುದಾದರೊಂದು ದಿಕ್ಕಿಗೆ ಅದನ್ನು ಕರೆದೊಯ್ದು ಹುಲ್ಲು ಮೇಯಿಸಿಕೊಂಡು, ಸಂಜೆಯಾಗುತ್ತಿದ್ದಂತೆ ಕೊಟ್ಟಿಗೆಗೆ ಕರೆದುಕೊಂಡು ಬರುತ್ತಿದ್ದ . ಚೆನ್ನಾಗಿ ತಿಂದುಂಡ ಮೇಕೆ ದಷ್ಟಪುಷ್ಟವಾಗಿ ಬೆಳೆಯತೊಡಗಿತು. ಹಾಗು ಅದನ್ನು ಮೇಯಸಲು ದೂರ ದೂರಕ್ಕೆ ಹೋಗುವದು ಅನಿವಾರ್ಯವಾಯಿತು . ದಿನಗಳು ಕಳೆದಂತೆ ಸಿಸ್ಯನಿಗೆ ವಯಸ್ಸಾಗತೊಡಗಿತು , ನಡೆದು ಮೇಕೆಯನ್ನು ಹಿಂಬಾಲಿಸಲು ಕಷ್ಟವಾದಂತೆ ಶಿಷ್ಯ ಒಂದು ಸೈಕಲ್ ಖರೀದಿಸಿದನು , ಅದೂ ಅಸಾಧ್ಯವಾದಂತೆ ಬೈಕ್ ಮೇಲೆ ಮೇಕೆಯನ್ನು ಹಿಂಬಾಲಿಸಲು ಪ್ರಾರಂಭಿಸಿದ. ಕೆಲವೇ ಸಮಯ ಅದೂ ಕಷ್ಟಕರವಾದಂತೆ ಶಿಷ್ಯ ಒಂದು ಕಾರನ್ನು ಖರೀದಿಸಿದ. ಗ್ರಾಮಾಂತರ ಪ್ರದೇಶದಲ್ಲಿ ರಸ್ತೆ ಸರಿಯಿಲ್ಲದುದರಿಂದ ಶಿಷ್ಯ ಕಾರು ಓಡಿಸಲು ಅನುಕೂಲಕರವಾಗುವಂತೆ ರಸ್ತೆಯನ್ನು ನಿರ್ಮಿಸಲು ಮುನ್ಸಿಪಾಲಿಟಿಗೆ ಪತ್ರ ಬರೆದ . ಸಿಸ್ಯನ ಅಹವಾಲನ್ನು ಕೇಳಿದ ಮುನ್ಸಿಪಾಲಿಟಿ , ಸರ್ವೇ ನಡೆಸಿ ಶಿಷ್ಯ ಕಾರಿನಲ್ಲಿ ಮೇಕೆಯನ್ನು ಹಿಂಬಾಲಿಸಲು ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಮಾಡಿತು . ಇದಾಗಿ ಸ್ವಲ್ಪ ದಿನಗಳ ನಂತರ , ಒಂದು ರಾತ್ರಿ ಶಿಷ್ಯ ಮೇಕೆಯನ್ನು ವಾಪಸ್ಸು ಕೊಟ್ಟಿಗೆಗೆ ಕರೆದುಕೊಂಡು ಬರುವಾಗ ಅಸಾಧ್ಯ ವೇಗದಿಂದ ಕಾರನ್ನು ಓಡಿಸಿ , ನಿಯಂತ್ರಣ ತಪ್ಪಿ ಅಫಘಾತದಲ್ಲಿ ಮೃತಪಟ್ಟನು .
ಸರಿ , ಮುನ್ಸಿಪಾಲಿಟಿ ಕಡೆಯಿಂದ ಅಫಘಾತದ ಬಗ್ಗೆ ಒಂದು ತನಿಖೆ ಮಾಡಲಾಯಿತು. ತನಿಖೆಯ ಪ್ರಕಾರವಾಗಿ ರಸ್ತೆಯ ತಪ್ಪು ವಿನ್ಯಾಸವೇ , ಅಫಘಾತಕ್ಕೆ ಕಾರಣವೆಂದೂ , ರಸ್ತೆಯನ್ನು ವಿನ್ಯಾಸ ಮಾಡಿದ ಇಂಜಿನಿಯರ ಅಫಘಾತಕ್ಕೆ ಕಾರಣವೆಂದು ಘೋಷಿಸಲಾಯಿತು . ಕೊನೆಗೆ ರಸ್ತೆ ವಿನ್ಯಾಸ ಮಾಡಿದ ಇಂಜಿನಿಯರ ಯಾರೆಂದು ನೋಡಲಾಗಿ , ಅವನು ಮತ್ಯಾರೂ ಆಗಿರದೆ ಸಿಸ್ಯನ ಮೇಕೆಯೇ ಆಗಿತ್ತು

ಝೂಂಡ ಕತೆ : ಅವಕಾಶ

ಶಿಷ್ಯನ ಮನೆಯ ಬಾಗಿಲು ಹಾಕಿತ್ತು. ಗುರುಗಳು ಬಂದು ಬಾಗಿಲು ತಟ್ಟಿದರು .
"ಯಾರು ? " ಶಿಷ್ಯ ಕೇಳಿದ
ಗುರುಗಳು ಮಾತನಾಡಲಿಲ್ಲ. ಮತ್ತೆ ಬಾಗಿಲು ತಟ್ಟಿದರು 
"ಯಾರು ? " ಶಿಷ್ಯ ಒಳಗಿನಿಂದಲೇ ಕೇಳಿದ .
ಗುರುಗಳು ಮಾತನಾಡಲಿಲ್ಲ. ಮಗದೊಮ್ಮೆ ಬಾಗಿಲು ತಟ್ಟಿದರು
"ಯಾರು ? " ಶಿಷ್ಯ ಪುನಃ ಕೇಳಿದ
ಗುರುಗಳು ಮುನ್ನಡೆದರು .
ಶಿಷ್ಯ ಬಾಗಿಲು ತೆರೆದಾಗ ಯಾರು ಇರಲಿಲ್ಲ . ಈಗ ಶಿಷ್ಯ ಗುರುಗಳನ್ನು ಹುಡುಕುತ್ತ ಅಲೆಯುತ್ತಿದ್ದಾನೆ

ಝೂಂಡ ಕತೆ : ಅರಿವು

ಝೂಂಡ ಗುರುಗಳು ಒಳಗೆ ಕುಳಿತು ಓದುತ್ತಿದ್ದರು . ಹೊರಗಿನಿಂದ ಬಂದ ಶಿಷ್ಯ ಬಾಗಿಲು ತಟ್ಟಿದ .
"ಯಾರು?" ಗುರುಗಳು ಕೂತಲ್ಲಿಂದಲೇ ಕೇಳಿದರು
"ನಾನು " ಎ೦ಬತ್ತನೇ ಶಿಷ್ಯ ಅವನ ಹೆಸರನ್ನು ಹೇಳಿದ 
"ಯಾರು?" ಗುರುಗಳು ಮತ್ತೆ ಕೇಳಿದರು
"ನಾನು " ಎ೦ಬತ್ತನೇ ಶಿಷ್ಯ ಅವನ ಹೆಸರು ಮತ್ತು ಪರಿಚಯ ಹೇಳಿದ
"ಯಾರು?" ಗುರುಗಳು ಮತ್ತೆ ಕೂಗಿದರು
ಶಿಷ್ಯ ಮತ್ತೆ ಅವನ ಹೆಸರು ಮತ್ತು ಪರಿಚಯ ಹೇಳಿದ .
"ಯಾರು ?" ಮರು ಪ್ರಶ್ನೆ ಗುರುಗಳಿಂದ
ಶಿಷ್ಯ ಮತ್ತೆ ಉತ್ತರಿಸಿದ
"ಯಾರು ? " ಗುರುಗಳು ಪುನಃ ಕೇಳಿದರು
"ಗೊತ್ತಿಲ್ಲ ಗುರುಗಳೇ " ಶಿಷ್ಯ ಉತ್ತರಿಸಿದ
ಗುರುಗಳು ಬಂದು ಬಾಗಿಲು ತೆರೆದರು

ಆಂಗ್ಲ ಝೂಂಡ ಕತಾನುವಾದ

ಝೂಂಡ ಗುರುಗಳು ಗಾಂಧೀ ಬಜಾರಿನ ಮಾರ್ಗವಾಗಿ ಎತ್ತಲೋ ಹೊರಟಿದ್ದರು ಎದುರಿಗೆ ಸಿಕ್ಕ ಹದಿನೇಳನೇ ಝೂಂಡ ಶಿಷ್ಯ ಗುರುಗಳನ್ನು ಕೇಳಿದ
" ಗುರುಗಳೇ ಕತ್ತಲು ಮೊದಲೋ ಬೆಳಕು ಮೊದಲೋ ?"
"ಬೆಳಕು" ಎಂದರು ಗುರುಗಳು 
"ಯಾಕೇ?" ಶಿಷ್ಯ ಪ್ರಶ್ನಿಸಿದ
"ಯಾಕೆಂದರೆ ಕತ್ತಲಲ್ಲಿ ಏನು ಕಾಣಿಸುವದಿಲ್ಲ " ಉತ್ತರಿಸಿ ಗುರುಗಳು ನಡೆದರು .

ಝೂಂಡ ಕತೆ : ಮುಕ್ತಿ

ಝೂಂಡ ಗುರುಗಳು ಗಾಂಧೀಬಜಾರಿನ ಮೂಲಕ ಎತ್ತಲೋ ಹೊರಟಿದ್ದರು. ಎದುರಿಗೆ ಸಿಕ್ಕ ಹತ್ತನೆಯ ಸಿಸ್ಯ ಗುರುಗಳನ್ನು ಗುರುತು ಹಿಡಿಯದೇ ಪ್ರಶ್ನಿಸಿದ : " ತಾವ್ಯಾರು?"
"ಗೊತ್ತಿಲ್ಲ" ಗುರುಗಳು ಉತ್ತರಿಸಿದರು.
ಓಹೋ! ಹಾಗಾದರೆ ತಾವು ಬಂದ್ದದು ಎಲ್ಲಿಂದ" ಸಿಸ್ಯ ಕೇಳಿದ
"ಗೊತ್ತಿಲ್ಲ " ಗುರುಗಳು
"ಅದೂ ಗೊತ್ತಿಲ್ಲವೇ! ಇರಲಿ , ತಾವು ಹೋಗುತ್ತಿರುವುದಾದರೂ ಎಲ್ಲಿಗೆ ಗೊತ್ತಿದೆಯೋ"
"ಗೊತ್ತು" ಉತ್ತರಿಸಿದ ಗುರುಗಳು ಹೊರಟು ಹೋದರು
ಸಿಸ್ಯ ನಿಗೆ ಜ್ಞಾನೋದಯವಾಯಿತು.


Monday, June 17, 2013

ಕೇಂದ್ರ


ಈ ಘಟನೆಯನ್ನು ನಾನು ಮರೆತು ಹೋಗಿದ್ದೇನೆ ಎಂದು ಅಂದುಕೊಂಡಿದ್ದರೂ , ಅವಾಗಾವಾಗ ಇದು ನನ್ನ ಮನಸ್ಸಿನಲ್ಲಿ ಹಾದು ಬರುತ್ತಿತ್ತು. ಈ ಘಟನೆಯನ್ನ ನಿಮಗೆ ಹೇಳುವುದೋ ಬೇಡವೋ ಎನ್ನುವುದರ ಬಗ್ಗೆ ನನ್ನೊಳಗೆ ಹಲವಾರು ಬಾರಿ ವಾದ ಪ್ರತಿವಾದ ವಿವಾದ ಮುಂತಾದವುಗಳನ್ನು ಆಗಿ ಕೊನೆಗೆ ಈ ಘಟನೆಯನ್ನು ನಿಮ್ಮ ಮುಂದಿಡಬೇಕೆಂದು ನಿರ್ಧರಿಸಿ ಹೇಳಹೊರಟಿದ್ದೇನೆ.
ಇಷ್ಟಕ್ಕೂ ಇದು ನನಗೆ ನೇರವಾಗಿ ಸಂಬಂಧಪಟ್ಟ ಘಟನೆಯಲ್ಲ . ಇದು ವಿಠೋಬಾ ನನಗೆ ಹೇಳಿದ ಘಟನೆ . ಹಾಗೆ ನೋಡಿದರೆ ಇದು ಅವನ ಜೀವನದಲ್ಲಿ ನಡೆದ ಘಟನೆ. ಹಾಗಾಗಿ ಇದು ನನ್ನ  ಜೀವನದಲ್ಲಿ ನೇರವಾಗಿ ನಡೆದ ಘಟನೆ ಅಲ್ಲ . ವಿಠೋಬಾ ಇವತ್ತು ಇಲ್ಲಿ ಎಲ್ಲೂ ಇಲ್ಲದುದರಿಂದಲೂ ಅಥವಾ ನೀವು ಅವನನ್ನು ಭೇಟಿಯಾಗುವ ಸಂಭವ ಇಲ್ಲದುದರಿಂದಲೂ ನಾನು ನಿಮಗೆ ಈ ಘಟನೆಯನ್ನು ಹೇಳುತ್ತಿದ್ದೇನೆ . ಈ ಮೂಲಕವಾದರೂ ನನ್ನ ಕಾಡುತಿದ್ದ ಘಟನೆಯನ್ನು ನಿಮಗೆ ವರ್ಗಾಯಿಸಿದಂತೆ ಆಗುತ್ತದೆ . ಮುಂದೆ ನೀವು ಸಹ ಯಾರಿಗಾದರು ಈ ಘಟನೆಯನ್ನ ಹೇಳಬೇಕೆಂದು ಕೊಂಡರೆ ಹೇಳಬಹುದು.
ನಾನು ಕೆಲಸ ಮಾಡುತ್ತಿದ್ದುದು ವೈಟ್ ಫೀಲ್ಡ ಭಾಗದ ಐ ಟಿ ಪಿ ಎಲ್ ನ ಹಿಂಬದಿಯಲ್ಲಿರುವ ಸಿಂಫೊನಿ ಟೆಲೆಕಾದಲ್ಲಿ . ಘಟನೆಯನ್ನ ನನಗೆ ಹೇಳಿದ ಜಾಗ ಅಷ್ಟು ಮುಖ್ಯವಲ್ಲದಿದ್ದರೂ , ಹೇಳಬೇಕೆಂದು ಅನ್ನಿಸಿದ್ದರಿಂದ ಹೇಳುತ್ತಿದ್ದೇನೆ. ಐ ಟಿ ಪಿ ಎಲ್ ನ ಹಿಂಭಾಗದ ಎರಡನೆ ಗೇಟ್ ನ ಎದುರಿಗಿರುವ ಬೃಹತ್ ಕಟ್ಟಡ ಸಮುಚ್ಛಯ ಸಿಂಫೊನಿ-ಟೆಲೆಕಾ ಕಂಪನಿಗೆ ಸೇರಿದ್ದು. ಬೃಹದಾಕಾರದ ೩ ಕಟ್ಟಡಗಳನ್ನು ಒಂದಕ್ಕೊಂದು ಸೇರಿಸಿ , ಹೊರಭಾಗದಿಂದ ನೋಡಿದರೆ ಏಕ ಕಟ್ಟಡದಂತೆ ಕಾಣಸಿಗುವ ಸಿಂಫೊನಿ-ಟೆಲೆಕಾದ ಈ ಸಮುಚ್ಚಯದ ಒಳ ಹೊಕ್ಕರೆ ಮಾತ್ರ ೩ ಕಟ್ಟಡಗಳು ಇರುವದು ಗೊತ್ತಾಗುತ್ತದೆ . ಈ ಮೂರು ಕಟ್ಟಡಗಳಿಗೆ ೩ ಬೇರೆ ಬೇರೆ ಲಿಫ್ಟ್ ಗಳು ಸದಾಕಾಲ ಜನರನ್ನು ಹೊತ್ತೊಯ್ಯುತ್ತಲೂ , ಕೆಳಗಿಳಿಸುತ್ತಲೂ ಮಾಡುತ್ತ ಇರುತ್ತಿದ್ದವು . ೩ ಕಟ್ಟಡಗಳು ಒಂದಕ್ಕೊಂದು ಒಳಭಾಗದಲ್ಲಿ ಸೇರಿದ್ದರಿಂದ , ಪ್ರತಿ ಮಹಡಿಯ ಜನರೂ ಇನ್ನೊಂದು ಮಹಡಿಯ ಲಿಫ್ಟ್ ಉಪಯೋಗಿಸುತ್ತಿದ್ದುದು ಸಾಮಾನ್ಯವಾಗಿತ್ತು . ಆದರೆ ಈ ಮೂರು ಲಿಫ್ಟ್ ಹೊರತು ಪಡಿಸಿದರೆ ಇನ್ನೊಂದು ಬೃಹದಾಕಾರದ ಲಿಫ್ಟನ್ನು ಸರ್ವೀಸ್ ಲಿಫ್ಟ್ ಎಂದು ಉಪಯೋಗಿಸುತ್ತಿದ್ದರು . ಕ್ಷಣ ಕ್ಷಣಕ್ಕೂ ಎಗರೆಗರಿ ಬೀಳುವಂತೆ ಭಾಸವಾಗುವ ಈ ಲಿಫ್ಟ್ನಲ್ಲಿ ಎಲ್ಲ ಮಹಡಿಗಳಿಗೂ ಬೇಕಾದ , ಸರಕುಗಳನ್ನು , ನೀರಿನ ಬಾಟಲ್ಗಳ , ಕ್ಯಾಂಟೀನ್ ಗೆ ಬೇಕಾದ ಸರಂಜಾಮುಗಳ ಒಯ್ಯಲು ,ಬಳಸುತ್ತಿದ್ದರು ಇದೇ ಕಾರಣದಿಂದ ಸದಾ ಕಾಲ ತೆಳ್ಳನೆಯ ಧೂಳುಮಯವಾದ ಈ ಲಿಫ್ಟ್ನಲ್ಲಿ ಉದ್ಯೋಗಿಗಳು ಓಡಾಡುತ್ತಿದ್ದುದು ವಿರಳ. ಲಿಫ್ಟ್ನಲ್ಲಿ ಜನರು ಇರುತ್ತಿದ್ದುದು ಕಡಿಮೆ ಎಂದೋ ಅಥವಾ ಬೇರೆಲ್ಲ ಲಿಫ಼್ಟ್ಗಳಿಗಿಂತ ದೊಡ್ಡದಾದ ವಿಶಾಲ ಲಿಫ್ಟ್ ಎಂದೋ ಒಟ್ಟಿನಲ್ಲಿ ನನಗೆ ಈ ಸರ್ವೀಸ್ ಲಿಫ್ಟ್ ಇಷ್ಟವಾಗುತ್ತಿತ್ತು ಅಂತೇಲೆ ನಾನು ದಿನವೂ ಬೆಳಿಗ್ಗೆ ಉಪಯೋಗಿಸುತ್ತಿದ್ದು ಇದೇ ಲಿಫ್ಟನ್ನು . ಬೆಳಗಿನ ಜಾಮದಲ್ಲಿ ನನ್ನೊಟ್ಟಿಗೆ ಈ ಲಿಫ್ಟ್ಗೆ ,ಬರುತ್ತಿದ್ದುದು ಕ್ಯಾಂಟಿನ್ನಲ್ಲಿ ಚಹಾ ಅಂಗಡಿ ಇಟ್ಟಿದ್ದ ವಿಠೋಬಾ . ಸಿಂಫೊನಿ-ಟೆಲೆಕಾದ ಕ್ಯಾಂಟಿನಲ್ಲಿ ವಿಠೋಬಾ ಒಂದು ಸಣ್ಣ ಚಹಾ ಅಂಗಡಿ ಹಾಕಿದ್ದ. ಪ್ರತಿ ತಿಂಗಳು ಕಂಪೆನಿಯಿಂದ ಇಂತಿಷ್ಟು ಎಂದು ಹಣ ಪಡೆದು ಎಲ್ಲ ಉದ್ಯೋಗಿಗಳಿಗೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಚಹಾ ಕೊಡುತ್ತಿದ್ದ ವಿಠೋಬಾ ಪ್ರತಿ ದಿನವೂ ನನ್ನ ಜೊತೆಯಲ್ಲಿಯೇ ಸರ್ವಿಸ್ ಲಿಫ್ಟ್ನಲ್ಲಿ , ಅವನ ಚಹಾ , ಪುಡಿ ಹಾಲು , ಕಾಫಿ ಪುಡಿ ಮುಂತಾದ ಚೀಲ ಹಿಡಿದು ಬರುತ್ತಿದ್ದ. ನಾನು ನಾಲ್ಕನೇ ಫ್ಲೋರ್ನಲ್ಲಿ ಇಳಿದು ನನ್ನ ಡೆಸ್ಕನತ್ತ ,ಹೋಗಿ , ಅವತ್ತಿನ ಕೆಲಸಗಳ ಬಗ್ಗೆ ಸಣ್ಣಗೆ ಕಣ್ಣು ಹಾಯಿಸಿ ಕ್ಯಾಂಟಿನ್ ಗೆ ಬರುವಷ್ಟರಲ್ಲಿ ವಿಠೋಬಾ ಬಿಸ್ಸಿ ಬಿಸ್ಸಿ ಚಹಾ ಕುದಿಸುತ್ತಾ ಇರುತ್ತಿದ್ದ. ಮುಂಜಾನೆಯಾದ್ದರಿಂದ ಹಾಗೂ ಆಫೀಸು ಪ್ರಾರಂಭವಾಗುವದಕ್ಕೆ ಇನ್ನು ಸ್ವಲ್ಪ ತಡವಿರುವದರಿಂದಲೂ , ನಾನು ಚಹಾ ಕುಡಿಯುತ್ತ ವಿಠೋಬಾನ ಜೊತೆಗೆ ಸ್ವಲ್ಪ ಹೊತ್ತು ಮಾತನಾಡುತ್ತ ನಿಂತಿರುತ್ತಿದ್ದೆ. ಇದು ಪ್ರತಿ ದಿನದ ಅಭ್ಯಾಸ.
ಇವತ್ತು ನಾನು ಹೇಳ ಹೊರಟಿರುವದು, ನಮಸ್ಕಾರ ಸಾರ್ ಎಂದು ಪ್ರತಿ ದಿನವೂ ಹೇಳುವ , ಚಹಾ ಮಾರುವ ಈ ವಿಠೋಬಾನ ಕತೆಯನ್ನೇ. ಇದನ್ನು ನೀವು ಕತೆಯೆಂದು , ಪ್ರಬಂಧವೆಂದು , ಲೇಖನವೆಂದು , ಯಾವುದಕ್ಕೂ ಬಾರದುದೆಂದು ಅಥವಾ ನಾನು ಹೇಳುವ ಹಾಗೆ ಘಟನೆಯೆಂದು ಒಟ್ಟಿನಲ್ಲಿ ಏನಾದರು ಅಂದು ಕೊಳ್ಳಬಹುದು.
ಅವತ್ತು ಚಹಾ ಸೇವಿಸುತ್ತಿರುವಾಗ , ಯಾವತ್ತಿಗೂ ನನ್ನೊಟ್ಟಿಗೆ ನಗುನಗುತ್ತ ಮಾತನಾಡುತ್ತಿರುವ ವಿಠೋಬಾ ಮಂಕಾಗಿ ಇದ್ದಾನೆ ಎನ್ನುವ ಭಾವ ನನಗೆ ಬೆಳೆಯತೊಡಗಿತು . ಇದು ಒಂದೆರಡು ದಿನದ ಮಾತಲ್ಲ , ಕಳೆದ ಹಲವಾರು ದಿನಗಳಿಂದ ವಿಠೋಬಾ ಅನ್ಯಮನಸ್ಕನಾಗೊಯೋ , ಹಾಂ ಹೂಂ ಎಂದೋ ಮಾತನಾಡುತ್ತ , ಯಾವುದೋ ಒಂದು ಚಿಂತೆಯಲ್ಲಿರುವಂತೆ ಭಾಸವಾದ್ದರಿಂದ , ನಾನು ಇವತ್ತು ವಿಠೋಬಾನನ್ನು ಕೇಳಲೇ ಬೇಕೆಂದು ಅಂದು ಕೊಳ್ಳುತ್ತಿರುವಾಗಲೇ , ವಿಠೋಬಾ " ಸಾರ್ ಎಂದು ದೈನ್ಯವಾಗಿ ಕರೆದ. . ವಿಠೋಬಾ ಯಾವುದೋ ವಿಷಯವನ್ನು ಮಾತನಾಡಬೇಕೆಂದು ಬಯಸುತ್ತಿದ್ದಾನೆ ಎನ್ನುವ ಅನುಮಾನ ಗಟ್ಟಿಯಾಗತೊಡಗಿತು . " ಬಾರೋ ಹೊರಗೆ ಹೋಗಿ ಬರೋಣ ಎಂದೆ "
ವಿಠೋಬಾ ಚಹಾ ಅಂಗಡಿಯನ್ನು ನೋಡಿಕೊಳ್ಳಲು ಅವನ ಸಹಾಯಕನಿಗೆ ಹೇಳಿ ನನ್ನೊಡನೆ ಹೊರಟ .
ಮುಂದೆ ನಡೆದ ಮಾತುಕತೆಯನ್ನ ವಿಠೋಬಾ ಹೇಳಿದ ಹಾಗೆ ನಿಮ್ಮ ಮುಂದೆ ಇಡುತ್ತಿದ್ದೇನೆ .
******************************************************************************************
ಸ್ವಪ್ನಗಳು ಸಾರ್ ! , ಕಾಡುವಂತೆ ಮತ್ತೆ ಮತ್ತೆ ಬೀಳುವ ಪುನರಾವರ್ತನೆಗೊಳ್ಳುವ ಸ್ವಪ್ನಗಳು. ಕಣ್ಣು ಮುಚ್ಚಿದರೆ ರಾತ್ರಿಯೆಲ್ಲ ಕಣ್ಣು ತೆರೆದೇ ಇರುವಂತೆ ಮಾಡಿಸುವ , ಮಾಡುವ ಸ್ವಪ್ನಗಳು.
"ಯಾಕಪ್ಪ ? ಯಾರಾದ್ರು ಹುಡುಗಿ ಬರ್ತಾ ಇದ್ದಳೊ? " ನಾನು ಇನ್ನು ವಿಷಯದ ಗಂಭೀರತೆಗೆ ಇಳಿದಿರಲಿಲ್ಲ .
ಸಿಂಪೋನಿ_ ಟೆಲೆಕಾದ ಈ ಗಾರ್ಡನ್ ನಿಂದ ನೋಡಿದರೆ ಐ ಟಿ ಪಿ ಎಲ್ ನ ಒಳಗೂ ಹೊರಗೂ ಜನ ಓಡಾಡುವದು ಕಾಣಿಸುತ್ತಿತ್ತು . ನನ್ನಂತ , ವಿಠೋಬಾನಂತಹ ಜನ. ಎತ್ತರದೆತ್ತರದ ಕಟ್ಟಡಗಳು ಗಾಜಿನ ಹೊರಮೈನಲ್ಲಿ , ಪಾರದರ್ಶಕ್ವಾಗಿಯೂ , ಅಪಾರದರ್ಶಕವಾಗಿಯೂ ಕಾಣಿಸುತ್ತ ಒಳಗೆ ದುಡಿಯುವ ಸಾವಿರಾರು ಕೈಗಳನ್ನು ಅವುಗಳ ದೇಹಗಳನ್ನು ಯಂತ್ರಗಳನ್ನ , ಯಂತ್ರಗಳoತವರನ್ನ ಅಸ್ಪಷ್ಟವಾಗಿ ತೋರಿಸುತ್ತ , ಮುಚ್ಚಿಡುತ್ತ ನಿಂತಿದ್ದವು.
ಸ್ವಪ್ನ ಹೆಣ್ಣಿನದಲ್ಲ ಸಾರ್ , ಸ್ವಪ್ನ ಯಾವುದರದ್ದು ಅಲ್ಲ. ಅಸ್ಪಷ್ಟ.
ಬಿ ಎ ಪದವಿಯನ್ನು ಅರ್ಧಕ್ಕೆ ಬಿಟ್ಟು , ನಿಗೂಢವಾಗಿ ಖೂನಿಯಾಗಿ ಹೋದ ಅಪ್ಪನ ಶವದ ಎದುರು ಕಣ್ಣೀರು ಸುರಿಸಲು ಹೆದರಿ , ಜೀವಭಯದಿಂದ ಮನೆಯಿಂದ ಬೆಂಗಳೂರಿಗೆ ಓಡಿ ಬಂದ ದಿನವೂ ಇದೇ ಸ್ವಪ್ನ ಸಾರ್ .
ಸ್ವಪ್ನ ! ಮತ್ತೆ ಮತ್ತೆ ಪುನರಾವರ್ತನೆಗೊಳ್ಳುವ ಸ್ವಪ್ನ !
ಆಟ !
ಸ್ವಪ್ನದಲ್ಲಿ ಆಟ !
ಮನುಷ್ಯರು ಮನುಷ್ಯರನ್ನು ಆಡುವ ಆಟ !
ದೊಡ್ಡದೊಂದು ವರ್ತುಲ , ಅದರೊಳಗೊಂದು ಚಿಕ್ಕ ವರ್ತುಲ , ಅದರೊಳಗೆ ಇನ್ನು ಚಿಕ್ಕದು ! ಒ0ದಕ್ಕಿಂತ ಒಂದು ಸಣ್ಣದಾಗುತ್ತ ಹೋಗಿ , ಒಂದನ್ನು ಇನ್ನೊಂದು ಆವರಿಸಿ ನುಂಗುವಂತೆ ತಬ್ಬಿ ನಿಂತ ವರ್ತುಲಗಳು ! ಎಲ್ಲಕ್ಕಿಂತ ಹೊರಗಿನ ವರ್ತುಲ ಭೂತಕಾಲವಾಗಿಯೂ , ಇನ್ನೊಂದು ಭವಿಷ್ಯವಾಗಿಯೂ , ಸಣ್ಣದಾದ ವರ್ತುಲ ವರ್ತಮಾನವಾಗಿಯೂ ಗೋಚರಿಸುತ್ತಿದ್ದವು ! ದಟ್ಟ ಭೂತ ಎಲ್ಲವನ್ನು ಆವರಿಸಿ ನಿಂತಿತ್ತು ! ವರ್ತುಲಗಳ ಚಕ್ರಕ್ಕೆ ಹೊಡೆಯುವ ಆಟ ! ನಾನು ಗುರಿಕಾರನಾಗಿಯೂ , ನಿಗೂಢವಾಗಿ ಖೂನಿಯಾಗಿ ಹೋದ ಅಪ್ಪ , ಉಬ್ಬಸ ಖಾಯಿಲೆಯಿಂದ ನನ್ನ ಬಾಲ್ಯದಲ್ಲೇ ತೀರಿಕೊಂಡ ಅಮ್ಮ, ಓಡಿಹೋದ ತಂಗಿ , ಇವರೆಲ್ಲ ಚಕ್ರಕ್ಕೆ ಹೊಡೆಯುವ ಬಾಣಗಳಾಗಿಯೂ ನಿಂತಿದ್ದವು ,!
ಜನ ! ಸುತ್ತ ಕಾತುರದ ಜನ !
ಅವರಿಗೆ ಆಟ ! ಮೋಜಿನ ಆಟ ! ನನ್ನ ಪ್ರತಿ ಗುರಿ , ವರ್ತಮಾನವನ್ನು , ಭವಿಷ್ಯವನ್ನು ತಪ್ಪಿ ಭೂತವನ್ನು , ಹೊಕ್ಕು , ಬಾಣಗಳಾದ - ಉಬ್ಬಸ ಖಾಯಿಲೆಯಿಂದ ನನ್ನ ಬಾಲ್ಯದಲ್ಲೇ ತೀರಿಕೊಂಡ ಅಮ್ಮ , ಕೊಲೆಯಾಗಿ ಹೋದ ಅಪ್ಪ , ಹೇರೂರು ಸಾಬಿಯೊಟ್ಟಿಗೆ ಓಡಿಹೋದ ತಂಗಿ , ಇವರೆಲ್ಲ ಸಿಕ್ಕಿ ಒದ್ದಾಡುತ್ತ , ಅವರಿಂದ ಸಣ್ಣಗೆ ಸೆಲೆಯೊಡೆದ ರಕ್ತ ಹನಿ ಹನಿಯಾಗಿ ನನ್ನ ವರ್ತಮಾನವನ್ನು , ಭವಿಷ್ಯವನ್ನು ಆವರಿಸಿದ್ದ್ಂತೆ , !
ಸ್ವಪ್ನದಲ್ಲಿ ನಾನು ಸೋಲುತ್ತಿದ್ದೆ ! ಸುತ್ತಲಿನ ಜನ ಕೇಕೆ ಹಾಕಿ ನಗುತ್ತಿದ್ದರು
ಸೋಲುವ ಆಟ ! ಸೋಲಲೆಂದೆ ಆಟ !
ಖಾಲಿಯಾದ ಬಾಣ- ಕೊಲೆಯಾಗಿದ ಅಪ್ಪ , ಉಬ್ಬಸ ಖಾಯಿಲೆಯಿಂದ ನನ್ನ ಬಾಲ್ಯದಲ್ಲೇ ತೀರಿಕೊಂಡ ಅಮ್ಮ, , ಓಡಿಹೋದ ತಂಗಿ , ! ದಟ್ಟವಾಗುತ್ತಿದ್ದ ಭೂತ !
ಕೊನೆಗೆ ನಾನೇ ಬಾಣವಾದೆ !
ಜನ ಅಟ್ಟಹಾಸ ಮಾಡಿದರು !
ಬೇಕಿಲ್ಲದ ಸ್ವಪ್ನ , ನಾನು ಎಚ್ಚರಗೊಳ್ಳಬೇಕು , ಆದರೆ ಸ್ವಪ್ನದ ಆಟ ಸೋಲುವ ಆಟ , ದಟ್ಟವಾಗಿ ಹಬ್ಬಿಕೊಳ್ಳುತ್ತಿರುವ ಭೂತ . ಪ್ರತಿ ಬಾರಿ ಸ್ವಪ್ನ ಮರುಕಳಿಸಿದಾಗಲೂ ನಾನು ಹಾಸಿಗೆಯಲ್ಲೇ ವಿಲ ವಿಲನೆ ಒದ್ದಾಡುತ್ತಿದೇನೆ ಎನ್ನುವ ಅನುಭವ,
ಖೂನಿಯಾದ ಅಪ್ಪ , ಅಪ್ಪ ಖೂನಿಯಾಗುವ ಹಿಂದಿನ ದಿನ ರಾತ್ರಿ ಓಡಿ ಹೋದ ತಂಗಿ , ಯಾವತ್ತು ಬದುಕಿ ಬಾರದಂತೆ ಖೂನಿಯಾಗಿ ಹೋದ ಅಪ್ಪ , ಬದುಕಿರುವದು ನಿಜವೋ ಇಲ್ಲವೋ ಎನ್ನುವಂತೆ ಗುರುತೇ ಸಿಗದಂತೆ ರಾತ್ರಿ ಓಡಿ ಹೋದ ತಂಗಿ.
ಅಪ್ಪನ ಖೂನಿಗೆ ಕಾರಣವೇನು ? ಅಪ್ಪ ಖೂನಿಯಾಗುತ್ತಾನೆ ಎಂದು ತಿಳಿದೆ ತಂಗಿ ಓಡಿ ಹೋದಳೆ ?
ಅಪ್ಪ ಖೂನಿಯಾದ ಎನ್ನುವ ಭಯಕ್ಕಿಂತ , ತಂಗಿ ಓಡಿ ಹೋದಳು ಎನ್ನುವ ಭಯಕ್ಕಿಂತ ಇವೆಲ್ಲುವುಗಳ ಹಿಂದಿನ ಅಸ್ಪಷ್ಟತೆ ನನ್ನ ಹೆದರಿಸಿ ಬಿಟ್ಟಿತ್ತು ಸಾರ್ ! ಸ್ಪಷ್ಟವಾಗದ ಆಕೃತಿಗಳು , ಯಾವುದೋ ವೃತ್ತದಲ್ಲಿ ನಾನು ಸುರುಳಿ ಸುರುಳಿಯಾಗಿ ಅಸ್ತಿತ್ವವೇ ಇಲ್ಲದ ಆಕೃತಿಯು ಬೆನ್ನಟ್ಟಿ ಬಂದಂತೆ , ನಾನು ವೃತ್ತದ ಪರಿಧಿಯೊಳಗೆ ಮತ್ತೆ ಮತ್ತೆ ಓಡುವಂತೆ , ಕೆಂದ್ರದಿಂದ ದೂರದಲ್ಲಿ ಇದ್ದೂ ಕೆಂದ್ರದಿಂದ ನಿಯಂತ್ರಿಸಲ್ಪಡುವ ವೃತ್ತದ ಪರಿಧಿಯಂತೆ ನಾನು , ಅಪ್ಪನ ಖೂನಿಯಾದ ರಾತ್ರಿ ಓಡಿದೆ , ಎಂದು ಒಂದು ಕ್ಷಣ ವಿಠೋಬಾ ಮೌನವಾದ.
ನಾನು ಸುಮ್ಮನೆ ಐ ಟಿ ಪಿ ಎಲ್ ನ ಬಿಲ್ಡಿಂಗ್ ಗಳಿಂದ ಕಾಣಸಿಗುವ ಗೋಚರವಾಗದೆ ಅಸ್ಪಷ್ಟವಾಗಿ ಗೋಚರವಾಗುತ್ತ , ಕಲ್ಪನೆಗಳನ್ನು ಹುಟ್ಟುಹಾಕುವ ಗಾಜಿನ ಹಿಂದಿರುವ ಆಕೃತಿಗಳನ್ನು ಗಮನಿಸುತ್ತ ನಿಂತೆ. ಗೋಚರವಾಗುವ ಆಕೃತಿಗಳು ಸ್ಪಷ್ಟ ಅಕಾರ ಪಡೆದುಕೊಂಡಿದ್ದವು . ಸಂಪೂರ್ಣವಾಗಿ ಕಾಣಸಿಗದ ಆಕೃತಿಗಳು ಕಲ್ಪನೆಯ ಸುಳಿಗೆ ಸಿಲುಕಿ , ಒಬ್ಬರ ತಲೆಗೆ ಇನ್ನೊಬ್ಬರ ಕಾಲು ಕೂಡಿಯೂ , ಮತ್ತೊಬ್ಬರ ಹೊಟ್ಟೆಗೆ ಯಾವುದೋ ಯಂತ್ರದ ಭಾಗವೊಂದು ಸೇರಿಯೊ ವಿಚಿತ್ರ ಆಕಾರಗಳು ನಿರ್ಮಾಣಗೊಂಡು ಭಯ ಹುಟ್ಟಿಸುತ್ತಿದ್ದವು.
ವಿಠೋಬಾ ತನ್ನ ಸ್ವಪ್ನದಿಂದ ನನಗೆ ಏನನ್ನು ಹೇಳಲು ಹೊರಟಿದ್ದಾನೆ? ಅಥವಾ ಮುಂದಿನ ಯಾವುದೋ ಕೆಲಸಕ್ಕೆ ನನ್ನ ಉಪಯೋಗ ಬೇಕೆಂಬ ಹೊಂಚಿಕೆಯೆ?
ವಿಠೋಬಾ ಮತ್ತೆ ಹೇಳತೊಡಗಿದ .
ಮೊನ್ನೆಯೂ ಈ ಸ್ವಪ್ನ ಬಂದಿತ್ತು ಸಾರ್. ಅರ್ಧ ನಿದ್ರೆಯಲ್ಲಿ , ಅರ್ಧಕ್ಕೆ ಬೀಳುವ , ಅರ್ಧ ಬದುಕಿನಿಂದ ಪ್ರಾರಂಭವಾದ ಅರ್ಧ ಸ್ವಪ್ನ . ಅತ್ತ ಬೆಳಗೂ ಅಲ್ಲದ ಇತ್ತ ರಾತ್ರಿಯೂ ಅಲ್ಲದ ಮೂರುವರೆ ಘಂಟೆಗೆ ಸರಿಯಾಗಿ ಸ್ವಪ್ನದಲ್ಲಿ ನಾನು ಮಿಸುಕಾಡುತ್ತಿರುವಾಗ , ಅರ್ಧ ಸ್ವಪ್ನದಲ್ಲಿ ಒದ್ದಾಡುತ್ತಿರುವಾಗ ,ಖೂನಿಯಾದ ಅಪ್ಪನ ಹೆಣವನ್ನು ,ಬಾಣದಂತೆ ಬಳಸುವ ಕ್ರೂರ ಸ್ವಪ್ನದಲ್ಲಿರುವಾಗ ಫೋನು ರಿಂಗಣಿಸಿತ್ತು ಸಾರ್ .
ಮಂದ ಬೆಳಕಿನ ಮಬ್ಬು ರಾತ್ರಿಯಲ್ಲದ ಹಗಲಿನ ಸಮಯದಲ್ಲಿ ಇದ್ದಕ್ಕಿದ್ದಂತೆ ಭೀಕರವಾಗಿ ಫೋನಿನ ಶಬ್ದ .
ವಿಠೋಬಾ ಏನ್ನನ್ನು ಹೇಳಲು ಹೊರಟಿದ್ದಾನೆ ಎನ್ನುವದು ಸ್ಪಷ್ಟವಾಗಿ ಅರಿವಾಗಲಿಲ್ಲ. ಒಂದಂತೂ ನಿಜ , ವಿಠೋಬಾ ನನಗೆ ಅರಿವಾಗದ ಏನನ್ನೋ  ಹೇಳಲು ಹೊರಟಿದ್ದಾನೆ. ವಿಠೋಬಾನ ಅಸ್ತಿತ್ವಕ್ಕೆ ಸವಾಲೆಸೆಯುವ , ವಿಠೋಬಾನ ಅಸ್ತಿತ್ವವನ್ನು ಬುಡ ಸಮೇತ ಅಲ್ಲಡಿಸಬಲ್ಲ , ವಿಠೋಬಾನ ಜೊತೆ ಜೊತೆಗೆ ಇರುವ ಸ್ವಪ್ನ  ವಿಠೋಬಾನನ್ನು ಹಣಿಯುತ್ತಿದೆ .
ಐ ಟಿ ಪಿಎಲ್ ನ ಬೃಹದಾಕರಾದ ಗಾಜಿನ ಹೊರಮೈ ಹೊಂದಿರುವ ಕಟ್ಟಡಗಳಲ್ಲಿ ಕಾಣಿಸುವ ಸ್ಪಷ್ಟವಿರುವ ಆಕೃತಿಗಳು  ಸ್ಪಷ್ಟ ಕಲ್ಪನೆಯನ್ನು ಮೂಡಿಸುತ್ತಿದ್ದವು, ಅಸ್ಪಷ್ಟ ಆಕೃತಿಗಳು ಒಂದಕ್ಕೊಂದು ಅಂಟಿಕೊಂಡು , ಅವ್ಯಕ್ತವಾದ ಭಯ ಉಂಟು ಮಾಡುತ್ತಿದ್ದವು. ವಿಠೋಬಾನ ಸ್ವಪ್ನ ಸ್ಪಷ್ಟವೇ ? ವಿಠೋಬಾನ ಅಪ್ಪ ಖೂನಿಯಾದದ್ದು , ಖೂನಿ ಮಾಡಿದವರು ಯಾರು ಎನ್ನುವದು  ಸ್ಪಷ್ಟವೇ ? ಖೂನಿ ಮಾಡಿದವರನ್ನು ಕಂಡು ಹಿಡಿಯಲು ನನ್ನ ಸಹಾಯವನ್ನು ಯಾಚಿಸುತ್ತಿದ್ದನೆಯೇ? ಅಥವಾ ಅವನ ಓಡಿ ಹೋದ ತಂಗಿಯ ಹುಡುಕಾಟಕ್ಕೆ ನನ್ನ ಅವಶ್ಯಕತೆಯಿದೆಯೇ ? 

"ಆ ಸಮಯದಲ್ಲಿ ಫೋನು ? ಅವೇಳೆಯಲ್ಲಿ ಫೋನು , ಮನಸ್ಸು ಕೇಡನ್ನೆ ಬಯಸುತ್ತದಲ್ಲವೇ? ವಿಠೋಬಾ " ಕೇಳಿದೆ

"ಮೊದಲು ನನಗೆ ಎಚ್ಚರವಾಗಲಿಲ್ಲ ಅಥವಾ ಎಚರವಾದರೂ ಸ್ವಪ್ನದ ಮುಂದುವರಿದ ಭಾಗವೇ ಎಂದು ಭಾಸವಾಗಿ ಮಲಗಿದ್ದೆ . ಆದರೆ ಫೋನಿನ ಶಬ್ದ ನನ್ನನು ಇದು ಸ್ವಪ್ನವಲ್ಲ ನಿಜ ಎನ್ನುವಂತೆ ಮಾಡಿತ್ತು. ಸಾರ್ ಅದೇ ಮೊನ್ನೆ ನೀವು ಕೊಡಿಸಿದ್ದರಲ್ಲ ಅದೇ ಬಿಳಿಯ ಬಣ್ಣದ ಫೋನು ."

ತಿಂಗಳುಗಳ ಹಿಂದೆ , ವಿಠೋಬಾ ಒಂದು ಲ್ಯಾಂಡ್ ಲೈನ್ ಫೋನನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಇದ್ದೇನೆ ಎಂದಾಗ , ನಾನೇ ಅವನಿಗೆ ನನ್ನ ಬಳಿಯಿದ್ದ ಉಪಯೋಗಿಸದೆ ಬಿದ್ದಿದ್ದ , ಅಚ್ಚ ಬಿಳಿಯ ಬಣ್ಣದ ಪ್ಯಾನ್ಸೋನಿಕ್ ಫೋನನ್ನ ಕೊಟ್ಟಿದ್ದೆ. ಇವಾಗ ವಿಠೋಬಾ ಫೋನನ್ನು ಉಪಯೋಗಿಸಿಕೊಂಡು ನನ್ನಿಂದ ಬೇರೆ ಏನನ್ನೋ ಎಳೆಯುವ ಆಟದಲ್ಲಿದ್ದಾನೆಯೆ? ಸ್ಪಷ್ಟವಾಗದ ಆಕೃತಿಗಳು ಗುಮಾನಿ ಮೂಡಿಸುತ್ತ ಹೋದವು.

"ಸಾರ್ ನೀವು ಕೊಟ್ಟಿದ್ದ ಫೋನಿನಲ್ಲಿ ಬಂದ ಮೊದಲ ಕರೆಯದು ಸಾರ್. ಹಗಲು ಅಲ್ಲದ ರಾತ್ರಿಯೂ ಅಲ್ಲದ ವೇಳೆಯಲ್ಲಿ , ನೀವು ಕೊಟ್ಟ ಬಿಳಿ ಬಣ್ಣದ ಪ್ಯಾನ್ಸೊನಿಕ್ ಫೋನ್ ಗೆ ಬಂದ ಕರೆ ಸಾರ್. ಭಯ ! ಅವೇಳೆಯಲ್ಲಿ ಬಂದ ಫೋನನ್ನು ತೆಗೆಯಲು ಭಯ ! ಕೆಟ್ಟ ಸುದ್ದಿ ಎಂದಲ್ಲ ಸಾರ್ ಸುದ್ದಿ ಎನ್ನುವ ಭಯ ! ಅವೇಳೆಯಲ್ಲಿ ಅಪ್ಪನನ್ನು ಖೂನಿ ಮಾಡಿದವರೆ ಹನ್ನೆರಡುವರೆ ವರ್ಷಗಳ ನಂತರ ಅವೇಳೆಯಲ್ಲಿ ಕರೆ ಮಾಡಿ ನನ್ನ ಅಸ್ತಿತ್ವವನ್ನು ಅಳಿಸುವ ಕೆಲಸಕ್ಕೆ ಕೈ ಹಾಕಿದ್ದರೆ ಎನ್ನುವ ಭಯ ! ಅಪ್ಪನನ್ನು ಕೊಲೆ ಮಾಡಿದ್ದು ತಾವೇ ಎಂದು ಹೇಳಿದರೆ , ನಾನು ಏನು ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಸೋತು ಹೋಗುವ ಭಯ ! ಅಥವಾ ಅಪ್ಪನನ್ನು ಖೂನಿ ಮಾಡಿದವರು   ಕ್ಷಮಿಸು ಎಂದರೆ , ನಾನು ಏನನ್ನು ಹೇಳಲಾಗದೆ ಶೂನ್ಯವಾಗುವ ಭಯ .
ಓಡಿ  ಹೋದ ತಂಗಿಯ ಗಂಡ ನನ್ನ ಕಿವಿಗೆ ಹತ್ತಿರದಲ್ಲಿ ನಾನೇ ನಿನ್ನ ಭಾವ ಎಂದರೆ ಎನ್ನುವ ಭಯ ! ಗುರುತೇ ಇಲ್ಲದ , ಪರಿಚಯವೇ ಇಲ್ಲದ ವ್ಯಕ್ತಿಯಿಬ್ಬ ಮೆದುಳಿಗೆ ಹತ್ತಿರದ , ಹೃದಯದ ಮೇಲ್ಭಾಗದ ಕಿವಿಯಲ್ಲಿ ಮೆಲ್ಲನೆ ಇಳಿಯುತ್ತ , ಭಾವ ಎಂದರೆ ಅವನನ್ನು ಭಾವ ಎಂದು ಒಪ್ಪಿಕೊಳ್ಳಬೇಕಾಗುವ ಯಾವತ್ತೂ ನೋಡಿಯೇ ಇರದ ವ್ಯಕ್ತಿ ,ತಂಗಿಯ ಗಂಡನೆನ್ನುವ ಸತ್ಯ ಗೊತ್ತಾದರೆ ಎನ್ನುವ ಭಯ .
ನೀವು ಕೊಟ್ಟಿದ್ದ ಬಿಳಿ ಬಣ್ಣದ ಪ್ಯಾನ್ಸೊನಿಕ್ ಫೋನ್ನಲ್ಲಿ ಸದ್ದು ರಿಂಗಣಿಸುತ್ತಿತ್ತು .
ಟ್ರಿನ್ ಟ್ರಿಣ್
ವಿಠೋಬಾ ಮಾತು ಕೇಳುತ್ತ ನಾನು ಮತ್ತೆ ಐ ಟಿ ಪಿ ಎಲ್ ನ ದೈತ್ಯ ಬಿಲ್ಡಿಂಗ್ ಕಡೆಗೆ ಗಮನ ಹರಿಸಿದೆ. ಸ್ಪಷ್ಟವಾಗದ ಆಕೃತಿಗಳು ಇನ್ನಷ್ಟು ಅಸ್ಪಷ್ಟ ಚಿತ್ರಣ ಕಟ್ಟುತ್ತಿದ್ದವು
ಫೋನು ಮತ್ತೆ ಮತ್ತೆ ಸದ್ದು ಮಾಡುತ್ತಿತ್ತು ಸಾರ್ . ನಾನು ಅದನ್ನೇ ದಿಟ್ಟಿಸುತ್ತಿದ್ದೆ , ಖೂನಿಯಾದ ಅಪ್ಪನ ಹೆಣವನ್ನು ದಿಟ್ಟಿಸಿದ ಹಾಗೆ , ತಂಗಿ ಓಡಿ ಹೋದಳು ಎಂದು ಗೊತ್ತಾದಾಗ ಪ್ರತಿ ದಿನವು ಅವಳು ಮಲಗುತ್ತಿದ್ದ ಜಾಗವನ್ನು ನೋಡುತ್ತ ಕುಳಿತ ಹಾಗೆ .
ಯಾಕೋ ಸ್ವಪ್ನ ಮತ್ತೆ ನೆನಪಿಗೆ ಬರತೊಡಗಿತು ಸಾರ್ ! ದೊಡ್ಡದೊಂದು ವರ್ತುಲ , ಅದರೊಳಗೊಂದು ಚಿಕ್ಕ ವರ್ತುಲ , ಅದರೊಳಗೆ ಇನ್ನು ಚಿಕ್ಕದು ! ಒದಕ್ಕಿಂತ ಒಂದು ಸಣ್ಣದಾಗುತ್ತ ಹೋಗಿ , ಒಂದನ್ನು ಇನ್ನೊಂದು ಆವರಿಸಿ ನುಂಗುವಂತೆ ತಬ್ಬಿ ನಿಂತ ವರ್ತುಲಗಳು ! ಎಲ್ಲಕ್ಕಿಂತ ಹೊರಗಿನ ವರ್ತುಲ ಭೂತಕಾಲವಾಗಿಯೂ , ಇನ್ನೊಂದು ಭವಿಷ್ಯವಾಗಿಯೂ , ಸಣ್ಣದಾದ ವರ್ತುಲ ವರ್ತಮಾನವಾಗಿಯೂ ಗೋಚರಿಸುತ್ತಿದ್ದವು ! ದಟ್ಟ ಭೂತ ಎಲ್ಲವನ್ನು ಆವರಿಸಿ ನಿಂತಿತ್ತು ! ವರ್ತುಲಗಳ ಚಕ್ರಕ್ಕೆ ಹೊಡೆಯುವ ಆಟ ! ನಾನು ಗುರಿಕಾರನಾಗಿಯೂ , , ಖೂನಿಯಾದ ಅಪ್ಪ , ಅಮ್ಮ , ಓಡಿಹೋದ ತಂಗಿ , ಇವರೆಲ್ಲ ಚಕ್ರಕ್ಕೆ ಹೊಡೆಯುವ ಬಾಣಗಳಾಗಿಯೂ ನಿಂತಿದ್ದೆವು ,!
ಸ್ವಪ್ನದಲ್ಲಿ ನಾನು ಸೋಲುತ್ತಿದ್ದೆ ! ಸುತ್ತಲಿನ ಜನ ಕೇಕೆ ಹಾಕಿ ನಗುತ್ತಿದ್ದರು
ಸೋಲುವ ಆಟ ! ಸೋಲಲೆಂದೆ ಆಟ !
ನಾನು ಫೋನು ಎತ್ತಲೇ ಇಲ್ಲ ಸಾರ್ . ಮಲಗಿದ್ದಾಗ ವಿಚಿತ್ರ ಜಂತುವೊಂದು ಪುಳ ಪುಳನೆ ಹಾಸಿಗೆಯಡಿಯಲ್ಲಿ ಹರಿದಾಡುವ ಅನುಭವ ಸಾರ್ .
ಫೋನು ಕೊನೆಯ ರಿಂಗ್ ಮಾಡಿ ನಿಶ್ಯಬ್ದವಾಯಿತು . ನಾನು ಬೆವತಿದ್ದೆ , ಅಚ್ಚ ಬಿಳಿಯ ಬಣ್ಣದ ಫೋನು ಸುಮ್ಮನೆ ಇತ್ತು . ಸೋಲುವ ಆಟದ ಸ್ವಪ್ನ .
ವೃತ್ತದ ಕೆಂದ್ರದಿಂದ ದೂರವಿರುವ ಪರಿಧಿಯ ನಿಯಂತ್ರಣ ಕೆಂದ್ರದ ಬಳಿಯೇ . ನಾನು ದೂರ ದೂರ ಹೋದಂತೆ ಭಾಸವಾದರೂ ನಾನು ಕೆಂದ್ರದ ಅಳತೆಯಲ್ಲಿಯೇ .
ಆಗ ಇದ್ದಕ್ಕಿದ್ದಂತೆ ಭಾಸವಾದ , ಮನಸ್ಸಿಗೆ ಹೊಳೆದುದು ನನ್ನ ಇಡಿ ಬದುಕಿನ ಉದ್ದೇಶವನ್ನೇ ನಿರರ್ಥಕಗೊಳಿಸಿತು ಸಾರ್ ! ಬೆಳಗಿನ ಜಾಮದವರೆಗೂ ನಾನು ಊಳಿಡುತ್ತಲೇ ಇದ್ದೆ ಸಾರ್. ಯಾವ ಉದ್ದೇಶಕ್ಕೆ ನಾನು ಬದುಕಿದ್ದೇನೋ ಅದು ಅದನ್ನೇ ಎದುರಿಸಲಾಗದ ಹೇಡಿ , ನಾನು ಸೋತೆ ಸಾರ್ " ವಿಠೋಬಾ ಬಿಕ್ಕತೊಡಗಿದ
ಸ್ಪಷ್ಟವಾಗದ ಆಕೃತಿಗಳು...
ಸಾರ್ ಅವತ್ತು ಅವೇಳೆಯಲ್ಲಿ ಫೋನ್ ಮಾಡಿದ್ದು , ಅಪ್ಪನ ಖೂನಿಯ ಹಿಂದಿನ ದಿನ ರಾತ್ರಿ ಓಡಿ ಹೋದ ನನ್ನ ತಂಗಿಯಾ ಸಾರ್ ? ನನ್ನ ಜೊತೆಗೆ  ರಕ್ತ ಹಂಚಿ ಹುಟ್ಟಿದವಳು ಎನ್ನುವ ನನ್ನ ತಂಗಿ ,  ಬದುಕಿದ್ದಾಳೆ ಎಂದು ನಾನು ಅಂದುಕೊಂಡ ತಂಗಿಯ ತಲುಪುವ ಏಕ ಮಾತ್ರ ಅವಕಾಶ ನಾನೇ ಕೈಯಾರೆ ಕೊಂದೆನಾ ಸಾರ್ ? ಹೇಳಿ ಸಾರ್ ದಯವಿಟ್ಟು ಹೇಳಿ , ಅವತ್ತು ಫೋನ್ ಮಾಡಿದ್ದು ನನ್ನ ತಂಗಿಯಾ ಸಾರ್
ವಿಠೋಬಾ ಇಷ್ಟು ಹೇಳಿದವನೇ ಗಳ ಗಳನೆ ಅಳತೊಡಗಿದ
ನಾನು ಮಾತನಾಡಲಿಲ್ಲ. ಅವತ್ತು ಫೋನ್ ಮಾಡಿದವಳು ಅವನ ತಂಗಿ ಹೌದು ಎನ್ನುವ ಧೈರ್ಯವಾಗಲಿ , ಅಲ್ಲ ಎನ್ನುವ ಆತ್ಮವಿಶ್ವಾಸವಾಗಲಿ ನನಗೆ ಬರಲಿಲ್ಲ .
ಐ ಟಿ ಪಿ ಎಲ್ ನ ಬಿಲ್ಡಿಂಗ್ ನಲ್ಲಿ ಮೂಡಿದ ಸ್ಪಷ್ಟ ಆಕೃತಿಗೂ ಯಾವುದೇ ಆಕಾರವಿರಲಿಲ್ಲ .


************************************************************
ಆಮೇಲೆ ಮಾರನೆಯ ದಿನದಿಂದ ವಿಠೋಬಾ ಕೆಲಸಕ್ಕೆ ಬರಲಿಲ್ಲ . ಅವನು ಎಲ್ಲಿ ಹೋದ ಎನ್ನುವದಕ್ಕೆ ಯಾವುದೇ ಮಾಹಿತಿ ಇರದೇ ನಾನು ಹುಡುಕುವ ಪ್ರಯತ್ನದಲ್ಲಿ ಸೋತೆ . ವಿಠೋಬಾ ನನಗೆ ಹೇಳಿದಾಗಿನಿಂದ ನನ್ನೊಳಗೆ ಇದ್ದ ಈ ಘಟನೆಗೆ ನೀವು , ಕಥೆ , ಲೇಖನ ಪ್ರಬಂಧ ಅಥವಾ ಯಾವುದು ಅಲ್ಲ ಎಂದು ಏನನ್ನು ಬೇಕಾದರು ಹೇಳಬಹುದು

Tuesday, May 14, 2013

ಬಕಿಟುಂ ಬಹು ವಿಧ ರೂಪಂ !

ಬೆಳಿಗ್ಗೆ ಎದ್ದ   ತಕ್ಷಣ  ಮೊಸರುದ್ದೀನ ಮಾಡುತ್ತಿದ್ದ ಕೆಲವೆಂದರೆ ಅಸ್ತವ್ಯಸ್ತವಾಗಿ ಬಿದ್ದಿದ್ದ ಚಾದರವನ್ನು ಮಡಚಿಡುವದು .  ಆಯತಾಕಾರದ ಚಾದರದ ಬಲ ಹಾಗೂ ಎಡದ ಎರಡೂ ತುದಿಗಳನ್ನು ಒದಕ್ಕೊಂದು ಸೇರಿಸಿ ಹಿಡಿದುಕೊಂಡು ಥಟ್ಟನೆ ಎದ್ದು ನಿಂತು , ಎರಡೂ ಕೈಗಳನ್ನು ತಲೆಯ ಮೇಲಕ್ಕೆ ಎತ್ತಿ ಚಾದರ ಅಂಚುಗಳು ಸಮನಾಗಿಯೇ ಎಂದು ನೋಡುತ್ತಿದ್ದ . ಇದ್ದಾದ ನಂತರ ಚಾದರವನ್ನು ಅರ್ಧ  ಭಾಗದಲ್ಲಿ ಮಡಚಿ , ಮತ್ತೆ ಕೈಗಳನ್ನು ಮೇಲಕ್ಕೆತ್ತುತ್ತಿದ್ದ . ಈ ಕ್ರಿಯೆಯನ್ನು ಹಲವಾರು ಬಾರಿ ಪುನರಾವರ್ತಿಸಿದ ನಂತರ ಚಾದರವನ್ನು ದಿಂಬಿನೆಡೆಗೆ ಸರಕ್ಕನೆ ಚಕ್ರವೆಸೆದಂತೆ ಎಸೆಯುತ್ತಿದ್ದ. ಚಾದರವನ್ನು ಮದಚಿದಷ್ಟೇ ಪ್ರೀತಿಯಿಂದ ಮೊಸರುದ್ದೀನ ಹಾಸಿಗೆ ಮಡಚುತ್ತಿರಲಿಲ್ಲ . ಹಾಸಿಗೆಯನ್ನು ಇದ್ದ ಸ್ವರೂಪದಲ್ಲಿಯೆ ಸುರುಳಿ ಸುತ್ತಿ , ಶರವೇಗದಲ್ಲಿ ಪಾಯಖಾನೆಗೆ ಓಡಿ , ಆಂಗ್ಲ ಶೈಲಿಯ ಕಮೋಡಿನಲ್ಲಿ ಭಾರತೀಯ ಪರಂಪರೆಯ ಕಾಯುವ ವೀರ ಯುವಕನಂತೆ ಕುಕ್ಕರುಗಾಲಿನಲ್ಲಿ ಕುಳಿತು ಬಹು ಎತ್ತರದ ಪ್ರದೇಶದಿಂದ , ಹೊಲಸಿನಿಂದ ತಾನು ಬಹು ಎತ್ತರದ ಪ್ರದೇಶದಲ್ಲಿ  ಇರುವವ ಎನ್ನುವ ಅವರ್ಚನಿಯ ಭಾವ ಹೊಳೆದು ವಿಸರ್ಜನಾ ಸುಖ ಅನುಭವಿಸುತ್ತಿದ್ದ . ಇಷ್ಟಾದರೂ ಅದರ ಆ ಭಾವನೆಯ ಜೊತೆ ಜೊತೆಗೆ ಈ  ವಿಸರ್ಜನೆ ತನ್ನ ಹೊಟ್ಟೆಯೊಳಗೆ ಸಂಗ್ರಹವಾಗಿತ್ತೆಂಬ ಯೋಚನೆ ಹೊಳೆದು ಬೆಚ್ಚಿ ಬೀಳುತ್ತಿದ್ದುದು ಇದೆ . ಪಾಯಖಾನೆಯ ಬಾಗಿಲಿಗೆ ಹಲ್ಲುಜ್ಜುವ ಹಲವಾರು ಸಲಕರಣೆಗಳನ್ನು ಇಟ್ಟುದದರಿಂದ ಮೊಸರುದ್ದಿನರು , ವಿಸರ್ಜನೆಯ ಬೆಚ್ಚಿ ಬೀಳುವ ಪರ್ವವಾದೊಡನೆ ಹಲ್ಲಿಜ್ಜಲು ಪ್ರಾರಂಭಿಸುತ್ತಿದ್ದನು . ಹೀಗೆ ಜೀರ್ಣ ಕ್ರಿಯೆಯ ಬುಡ ಹಾಗು ತುದಿಗಳೆರಡರ   ಸ್ವಚ್ಚತಾ  ಕಾರ್ಯ ಮುಗಿದೊಡನೆ ಬಚ್ಚಲು ಮನೆಯನ್ನು ಘನ ಗಾಂಭಿರ್ಯದಿಂದ ಪ್ರವೇಶಿಸುತ್ತಿದ್ದ

ಮೊಸರುದ್ದೀನನ ಬಚ್ಚಲು ಮನೆ ಎಂಬುದು ಒಂದು ಕತ್ತಲು ಬೆಳಕಿನ ಮಂದ ಮಾಯಾಲೋಕವೇ ಸರಿ . ಮೊಸರುದ್ದೀನನ  ಬಚ್ಚಲು ಮನೆಯೆಂದರೆ ಅದೊಂದು ಬಕೀಟುಗಳ  ಲೋಕ . ಅನಾದಿಕಾಲದಿಂದಲೂ  ಬಕಿಟು ಹಿಡಿಯುವ , ಬಕೀಟು ಸಂಗ್ರಹಿಸುವ  ಹುಚ್ಚಿನ ಮೊಸರುದ್ದೀನನ ಮನೆಯಲ್ಲಿ ತರಹೇವಾರಿ ಬಕೀಟುಗಳು ತಮ್ಮ ತಮ್ಮ ಆಯುಷ್ಯವನ್ನು ಕಳೆಯುತ್ತಿದ್ದವು . ವಿಸರ್ಜನ ಕ್ರಿಯೆಯಿಂದ ಬಚ್ಚಲು ಮನೆಯನ್ನು ಹೊಕ್ಕ ಮೊಸರುದ್ದೀನನಿಗೆ ಸುತ್ತ ಜೋಡಿಸಿಟ್ಟಿರುವ ಸಣ್ಣ , ಅಗಲ ದೊಡ್ಡ , , ಗಿಡ್ಡ ಉದ್ದನೆಯ , ತೆಳ್ಳನೆಯ , ದಪ್ಪನೆಯ , , ಬಣ್ಣವಿರುವ ಬಣ್ಣವಿಲ್ಲದ , ,ಹಿಡಿಕೆಯಿರುವ  ಹಿಡಿಕೆಯಿರದ ಹಲವರು ಬಕೀಟುಗಳು ಕಣ್ಣಿಗೆ ಬೀಳುತ್ತಲೆ ಅತ್ಯುತ್ಸಾಹ ಉಕ್ಕಿ ಬರುತ್ತಿತ್ತು

*****************************************************************
ಮೊಸರುದ್ದೀನನಿಗೆ ಬಕೀಟುಗಳ ಹುಚ್ಚು ಯಾವಾಗ ಪ್ರಾರಂಭವಾಯಿತು ಎನ್ನುವದರ , ಕುರಿತು ಖಚಿತ ಮಾಹಿತಿ , ಅಲಭ್ಯವಾಗಿದ್ದರೂ , ಅವರೊಡನೆ ಯಾವತ್ತು ವ್ಯವಹರಿಸಿದ , ಮಾತನಾಡಿದ ಎಲ್ಲರಿಗು ಮೊಸರುದ್ದಿನರು ಬಕೀಟು ಹಿಡಿಯುವದರಲ್ಲಿ ಪ್ರಚಂಡ ಪರಿಣಿತರು ಎನ್ನುವದ ಖಚಿತ ಪಡಿಸಿದ್ದರು . ಕೆಲಸಕ್ಕೆ ಸೇರುವದಕ್ಕೂ ಮೊದಲು ಬಕೀಟುಗಳ , ಸ್ವಯಂವರಾಪಹರಣ ಮಾಡುತ್ತಿದ್ದ ಮೊಸರುದ್ದೀನ , ಕೆಲಸಕ್ಕೆ ಸೇರಿದ ಮೇಲೆ ಪ್ರತಿ ತಿಂಗಳ ಮೊದಲ ಸಂಬಳದಲ್ಲಿ ಹೊಸ ಬಕೀಟು ತರುವ ಪರಿಪಾಠ ರೂಢಿಸಿಕೊಂಡಿದ್ದರು.ಗಾಂಧಿ ಬಜಾರಿನ ಪ್ಲಾಸ್ಟಿಕ್ ಸಾಮಾನುಗಳ ಮಾರುವ ಅಂಗಡಿಯ ಖಾಯಂ ಗಿರಾಕಿಯದ ಮೊಸರುದ್ದೀನರಿಗೆ , ಅಂಗಡಿಯ ಮಾಲೀಕ ಹೊಸ ಬಕೀಟು ಬಂದಾಗಲೆಲ್ಲ ಫೋನಾಯಿಸುತ್ತಿದ್ದುದು ಹೌದು . ಹಲವಾರು ಬಾರಿ ಮಾಲೀಕ ರಾತ್ರಿ ಅಂಗಡಿ ಮುಚ್ಚುವ ವೇಳೆಯಲ್ಲಿ ಫೋನಾಯಿಸಿ ಹೊಸ ಬಕೀಟ್ ಬಂದಿರುವ ವಿಚಾರ ತಿಳಿಸಿದಾಗಲೆಲ್ಲ , ರಾತ್ರಿಯಿಡಿ ಕಾಡು ಕುಳಿತ , ಸ್ವಪ್ನದಲ್ಲೂ ಬಕೀಟುಗಳ ಬಗ್ಗೆ , ಕನವರಿಸಿ , ಹೊಸ ಬಕೀಟಿನ ಕಲ್ಪನೆಯಲ್ಲಿ ಬೆಳಗಿನ ಜಾಮದವರೆಗೆ ನಿದ್ರೆಯಿಲ್ಲದೆ ಹೊರಳಾಡಿ ಬಳಲಿ ಬೆಂಡಾಗಿ ತಳ ಒಡೆದ ಬಕೀಟು ,ಆಗಿ  ಮಹಾದುರತೆಯಿಂದ ಮರುದಿನ ಬೆಳಿಗ್ಗೆ ಅಂಗಡಿಯ ಬಾಗಿಲಿನಲ್ಲಿ ಕಾದು  ಕೂರುತ್ತಿದ್ದುದುಪಪದೇ ಪದೇ ನಡೆಯುವ  ಸಾಮಾನ್ಯ ಘಟನೆ . . ಬಾಗಿಲು ತೆರೆದೊಡನೆ ಅಂಗಡಿಯ ಒಳಹೋಗುವ ಮೊಸರುದ್ದೀನನಿಗೆ ಅಂಗಡಿಯೊಳಗೆ ಥರ ಥರದ ಬಕಿಟುಗಳ ಕಂಡು ತಾನು ಪುರುಷ ಪುಂಗವನೆಂದು , ಬಕೀಟುಗಳೇಲ್ಲ ವಿರಹ ವೇದನೆಯಿಂದ ನರಳುತ್ತಿರುವ ಸುಕೋಮಲ ಲಲನಾಂಗಿಗಳೆಂದು ಭಾಸವಾಗಿ , ರಾತ್ರಿಯ ಸ್ವಪ್ನಗಳನ್ನೆಲ್ಲ ಅವುಗಳ ಮೇಲೆ ಸ್ಖಲಿಸುವ ಅತ್ಯುತ್ಸಾಹದಿಂದ ಮುನ್ನುಗ್ಗುತ್ತಿದ್ದ. ಮೊಸರುದ್ದೀನನ ಈ ನಡತೆಯ ಪರಿಚಯವಿದ್ದ ಮಾಲೀಕ , ಮೊದಲೇ ಎತ್ತಿಟ್ಟಿರುವ ಫಳ ಫಳ ಹೊಳೆಯುವ ಹೊಸ ಬಕೀಟನ್ನು ಎತ್ತಿ ಕೊಡುತ್ತಿದ್ದ .   ಇದು ಬಚ್ಚಲು ಮನೆಗೆ ಬಕೀಟುಳ  ಆಗಮದ ಹಿಂದಿನ ಬಹುತೇಕ  ಘಟನೆ.

ಬಚ್ಚಲು ಮನೆಗೆ ನುಗ್ಗಿದ ಕೂಡಲೆ ಮೊಸರುದ್ದೀನ ಬಕೀಟಾವಲೋಕನ ಮಾಡಿ ಅಂದಿನ ಕ್ರಿಯೆಗೆ ತಕ್ಕನಾದಒಂದು ಬಕೀಟನ್ನು ಆಯ್ಕೆ ಮಾಡುತ್ತಿದ್ದ . ಹೀಗೆ ಆರಿಸಿದ ಬಕೀಟನ್ನು ಹಗುರವಾಗಿ ಎತ್ತಿ , ಅದಕ್ಕೆ ಲೊಚ ಲೋಚನೆ ಮುದ್ದಿಟ್ಟು , ಸವರಿ , ತಬ್ಬಿ ಅದರೊಳಗೆ ೧ /೪ ಭಾಗ ನೀರನ್ನು ತುಂಬುತ್ತಿದ್ದ .  ತದನಂತರ ಅದರೊಳಗೆ ಬಲಗೈನ್ನು ಇಳಿ ಬಿಟ್ಟು , ಎಡಗೈ ನಲ್ಲಿ ಬಕೀಟನ್ನು ತಬ್ಬಿ ಹಿಡಿದು , ಗಲ್ಲವನ್ನು ಬಕಿಟಿನ ಮೇಲ್ಮೈಗೆ ಆನಿಸಿ , ಕಣ್ಣನ್ನು ಅರ್ಧ ತೆರೆದು  ಮುಚ್ಚಿ ಬಕಿಟಿನೊಳಗೆ ಇಳಿ ಬಿಟ್ಟ ಕೈಯನ್ನು ನಿಧಾನವಾಗಿ ತಿರುಗಿಸಲು ಪ್ರಾರಂಭಿಸುತ್ತಿದ್ದ. ಹಂತ ಹಂತವಾಗಿ ವೇಗವನ್ನು ವ್ರುದ್ದಿಸಿಕೊಳ್ಳುತ್ತ ಹೋಗಿದಂತೆ ೧/೪ ಭಾಗ ತುಂಬಿದ್ದ ನೀರು  ಅಲೆ ಅಲೆಯಾಗಿ ಸುಳಿ ಸುಳಿಯಾಗಿ ರಭಸದಿಂದ ಬಕೀಟಿನ ತಳದಲ್ಲಿ ಕೇಂದ್ರವೊಂದನ್ನು ನಿರ್ಮಿಸಿ , ಅದರೊಳಗಿನಿಂದ ಎದ್ದ ಪ್ರಾವಾಹವಾಗಿ ಚಿಮ್ಮಿ ಮೊಸರುದ್ದೀನನ ಗಲ್ಲಕ್ಕೆ ತಾಕಿದಾಗ , ನೀರನ್ನು ಥಟ್ಟನೆ ಎದ್ದು , ಉನ್ಮಾದ ತುಂಬಿದ  ದೃಷ್ಟಿಯಿಂದ ನೋಡುತ್ತಾ ಪ್ರವಾಹದೊಳಗೆ ತಾನೂ , ಸುಳಿಯಾಗುತ್ತ ತಾನು ಇಲ್ಲಿಯವೆರೆಗ್ ಹಿಡಿದಿರುವ ಎಲ್ಲ ಬಕೀಟುಗಳು ಬಿಂದುವಿನೊಳಗೆ  ಘನೀಕರಿಸಿವೆ ಎನ್ನುವಷ್ಟರಲ್ಲೇ ಮೊಸರುದ್ದೀನರಿಗೆ ಸಂಶಯವೊಂದು ಧುತ್ತನೆ ಬೆಳೇಯಲಾಗಿ ಮೊಸರುದ್ದೀನ ಬೆಚ್ಚಿ ಬಿದ್ದನು.

*****************************************************************
ಹೀಗೆ ಅಚಾನಕ್ ಆಗಿ ನಾನು ಮೊಸರುದ್ದಿನ ನಾಡವನಿಗೆ ಸಂದೇಹ ಬಂದಿತ್ತು ಎಂದು ಪ್ರಾರಂಭ ಮಾಡಿದ್ದು ನಿಮಗೂ ಈ ಮೊಸರುದ್ದಿನ ಎಂಬ ಹೆಸರುಳ್ಳ ಜೀವಿ ಯಾರು ಎಂಬ  ಸಂದೇಹ ಮೂಡಿಸಿರಲಿಕ್ಕೆ ಸಾಕು. ನಿಮಗೆ ಸಹ  ಸಂದೇಹ ಬಂದಿರುವಾಗ  ಇನ್ನು ನಮ್ಮ ಕಥಾನಾಯಕನಾದ ಮೊಸರುದ್ದಿನನಿಗೆ ಸಂದೇಹ ಬಂದಿರುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮೊಸರುದ್ದಿನನ ಬಗ್ಗೆ ಗೊತ್ತಿದ್ದ ಯಾವ ಜನಾಂಗಕ್ಕೆ ಸೇರಿದ ಜನರಾದರೂ ವಾದ ಮಾಡಿಯಾರು.   ಶ್ರೀಯುತ ಮೊಸರುದ್ದೀನರಿಗೆ  ಐತಿಹಾಸಿಕವಾಗಿ ಬಹು ಘನತೆಯುಳ್ಳ ಹಿನ್ನಲೆಯೇನೂ ಇಲ್ಲ. ಆದರೂ ಇರುವಂತಹ ಕೆಲವು ಹಿನ್ನಲೆಗಳು , ಆ ಹಿನ್ನಲೆಗಳ ಪರಿಚಯವಿದ್ದವರಿಗೆ , ಮೊಸರುದ್ದಿನ ಒಬ್ಬ ಬಹು ಘನತೆಯುಳ್ಳ ವ್ಯಕ್ತಿಯಂತೆ ತೋರಿದ್ದರೆ ಅಚ್ಚರಿಯೂ ಇಲ್ಲ. ಮೊಸರುದ್ದಿನರು ಮೂಲತಃ ಮೂಲದಿಂದ ಬಂದವರಾಗಿದ್ದರು ಸಧ್ಯಕ್ಕೆ ಗಾಂಧಿ ಬಜ಼ಾರಿನ ನಿವಾಸಿಯಾಗಿದ್ದಾರೆ.  ಇವರು ಹೇಳಲಿಕ್ಕೆ ಆಗುವಂತಹ ಕೆಲಸವನ್ನು ಮಾಡದಿದ್ದರೂ , ಇಲ್ಲಿ ಹೇಳಲಿಕ್ಕೆ ಆಗದ ಹಲವಾರು ಕೆಲಸಗಳನ್ನು  ಮಾಡಿದ್ದಾರೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಅಂಬೋಣ . ಇದು ಅವರ ಇತಿಹಾಸ ಹಾಗೂ ಪ್ರಸ್ತುತ ವಿಷಯ.
ಇನ್ನು ಬಾಹ್ಯ ಪರಿಚಯದ ವಿಷಯಕ್ಕೆ ಬಂದರೆ ಮೊಸರುದ್ದಿನರು ನೇರವಾಗಿ ನಿಂತರೆ ತಲೆಯವರೆಗೂ ಎಲ್ಲಿಯೂ ಅಂತರವಿಲ್ಲದೇ ಬೆಳೆದಿದ್ದಾರೆ. ಮೊಸರುದ್ದೀನರ ಕೈ ಸದಾ ಕಾಲ ದೇಹದ ಉಳಿದ ಭಾಗಗಳನ್ನು ಸವರಿ ಅವುಗಳ ಯೋಗಕ್ಷೇಮ ವಿಚಾರಿಸುತ್ತಾ ಕಾಲಹರಣ ಮಾಡುತ್ತದೆ. ಹೀಗೆ ಕೈ ಸಾಗುವ ಹಾದಿಯಲ್ಲಿ ಬೆಳೆದ  ಅರಳಿ ನಿಂತ ಮೂಗಿನ ಹೊಳ್ಳೆಗಳು , ಅಗಲಿಸಿ ಕುಳಿತ ಕಿವಿಯ ತೂತುಗಳು , ಬೆನ್ನು , ಹೊಟ್ಟೆ  ಮುಂತಾದ ದೇಹ ಸಂಬಂಧಿ ಅಂಗಾಂಗಗಳೆಲ್ಲಾ ,  ಅವುಗಳಿಗೆ ನಿರ್ದಿಷ್ಟಪಡಿಸಿದ್ದ ಜಾಗೆಗಳಲ್ಲಿ ಮೊಸರುದ್ದಿನನ ಹುಟ್ಟಿನಿಂದಲೂ ಬಾಳಿ ಬದುಕುತ್ತಾ ಇದ್ದವು. ಮೊಸರುದ್ದಿನನ ತಲೆ ಮೇಲೆ ಹುಲುಸಾಗಿ ಬೆಳೆದ ಕೂದಲುಗಳು ಆವಾಗಾವಾಗ ಮೊಸರುದ್ದಿನನಂತೆ ಬಣ್ಣ ಬದಲಿಸುತ್ತಿದ್ದವು. ಈ ತೆರನಾದ  ಬಾಹ್ಯ ಲಕ್ಷಣಗಳ ಯಜಮಾನರಾದ ಮೊಸರುದ್ದೀನ್ರಿಗೇ ಸಂದೇಹ ಬಂದಿತ್ತು.

ಮೊಸರುದ್ದಿನನ ಸಂಶಯಕ್ಕೆ ಲಿಖಿತ ಇತಿಹಾಸ ಇಲ್ಲದಿದ್ದರೂ , ಬಾಯಿಂದ ಬಾಯಿಗೆ ಹರಡಿರುವ ಹಲವಾರು ಜಾನಪದ ಇತಿಹಾಸವಂತೂ ಇದೆ. ಮೊಸರುದ್ದಿನನ ಯಾವತ್ತೂ ಅಜ್ಜಿಯಾದ ಪಾರೋತಿ ಕೊಂ ಜನ್ನ ನಾಡವರು ಆಗಾಗ ಹೇಳುವಂತೆ ಮೊಸರುದ್ದಿನನು ಹೊಟ್ಟೆಯಿಂದ ಬರುವಾಗ ಒಂದು ಕಾಲನ್ನು ಇನ್ನೊಂದರ ಮೇಲೆಕ್ಕೆ ಹಾಕಿಕೊಂಡಿದ್ದಾನೆಂದು , ಹೀಗಾಗಿ ಹುಟ್ಟಿದ ಮಗು ಗಂಡೇ ಅಥವಾ ಹೆಣ್ಣೆ ಎಂದು ಚಣಕಾಲ ಎಲ್ಲರಿಗೂ ಸಂದೇಹವಾಯಿತೆಂದು ,  ಆವಾಗಾವಾಗ ಹೇಳುವದುಂಟು.  ಆದರೆ ಈ ಘಟನೆಯಿಂದ ಮೊಸರುದ್ದಿನನ ಮನೆಯವರಿಗೆ ಆದ ಮುಜುಗರ ಅಷ್ಟಿಷ್ಟಲ್ಲ . ನಾಡವರ ಮನೆಯವರಿಗೆ ಮಗು ಜನಿಸುವ ಸಮಯವೆಂದು ಆಸ್ಪತ್ರೆಯ ಬಳಿ ಬಂದಿದ್ದ ಕೆಲಸದ ದ್ಯಾಮ್ಯ , ಹುಟ್ಟಿದ್ದು ಗಂಡೋ ಯಾ ಹೆಣ್ಣೊ ಎಂದು ಕೇಳಲಾಗಿ ಅಡ್ಡ ಬಂದಿದ್ದ ಕಾಲನ್ನು ಮಾತ್ರ ಗಮನಿಸಿದ್ದ ನರ್ಸಮ್ಮ 'ರೀ  ಅದೆಲ್ಲ ಗೊತ್ತಿಲ್ಲಾರಿ' ಎನ್ನಲಾಗಿ , ಸಂಜೆಯ ಲಾಸ್ಟ್ ಬಸ್ಗೆ ಮನೆಗೆ ಹೋಗುವ ಆತುರದಲ್ಲಿದ್ದ ದ್ಯಾಮ್ಯ ಬೇರೆ ಏನನ್ನು ವಿಚಾರಿಸದೇ  ಊರಿನಲ್ಲಿ ;ಹೋಯ್ ನಾವಡರಿಗೆ ಮಗು ಆಗಿತ್ತು, ಆದರೆ ಗಂಡಾ ಹೆಣ್ಣಾ ಅಂತ ಪಕ್ಕಾ ಮಾತ್ರ ಇಲ್ಲ್' ಎಂದು ಸಾರಿದ್ದನು. ಜನ್ನನ ಬಾಯಿಯಿಂದ ಈ ಆಘಾತಕಾರಿ ಸುದ್ದಿ ಕೇಳಿದ ಮನೆಯ ಜನ , ಊರ ಜನರ ನಂಬಿಕೆ ಸುಳ್ಳು ಮಾಡಲು ,   ಜನ್ನನ ಸುದ್ದಿಯಿಂದಾಗಿ ಹುಟ್ಟಿದ ತಪ್ಪು ತಿಳುವಳಿಕೆಯನ್ನುನಿವಾರಿಸಿ  ಮೊಸರು ನಾಡವ  ಪುರುಷ ಪುಂಗವ ಎಂದು ಸಾಬೀತು ಪಡಿಸಲು  ಮುಂದೆ ಹಲವಾರು ವರ್ಷಗಳ ಕಾಲ ಚಡ್ದಿಯಿಲ್ಲದೆ ಓಡಾಡುವ ಪ್ರಸಂಗ ಬಂದಿತ್ತು.  
ಹೀಗಾಗಿ ಮೊಸರುದ್ದಿನರು ತಮ್ಮ ಹುಟ್ಟಿನ ಜೊತೆ ಜೊತೆಗೆ ಸಂದೇಹವನ್ನೂ ಹುಟ್ಟು ಹಾಕಿದ ಅದಮ್ಯ ವ್ಯಕ್ತಿಯೆಂಬುದು ಗೊತ್ತಾಗುತ್ತದೆ.

*****************************************************************
ಬಕೀಟನ್ನೆ ದಿಟ್ಟಿಸುತ್ತಿದ್ದ ಇದ್ದಕ್ಕಿದ್ದಂತೆ ತಾನೂ ಒಂದು , ಬಕೀಟಾಗಿಯೂ ತನ್ನ ಸುತ್ತಲಿರುವ ಸರ್ವವೂ ಒಂದೊಂದು ಬಕೀಟಿನಂತೆಯೂ ಭಾಸವಾಗತೊಡಗಿತು. ತಾನು ಬಕಿಟಿಗಾಗಿಯೆ  , ಬಕೀಟು ಹಿಡಿಯುವದಕ್ಕಾಗಿಯೇ   ಹುಟ್ಟಿದ್ದೆನೆಂಬ  ಭಾವನಾತ್ಮಕ ಸಂಶಯ ಮೂಡಿ ಮೊಸರುದ್ದೀನತಿರುಗುತ್ತಿರುವ ನೀರನ್ನು ದಿಟ್ಟಿಸಿದ . ಆ ಕ್ಷಣದಲ್ಲಿ , ಅಖಿಲಾಂಡ ಕೋಟಿ ಬ್ರುಹ್ಮಾಂಡವನ್ನು ನಿರ್ಮಿಸಿದ ಭಗವಂತ ಸೃಷ್ಟಿ ಕಾರ್ಯವನ್ನು ಮಾಡಿದ್ದುಭೂಮಿಯೆಂಬ ಬಕೀಟಿನೊಳಗೆ  ಎನ್ನುವ ಸತ್ಯ ಹೊಳೆದು ತೀವ್ರತರನಾದ ಆನಂದಕ್ಕೆ ಈಡಾದ.  ಜೊತೆಜೊತೆಗೆ ದೇವದಾನವಾದಿಮಾನವರು , ತಾನು ಬಕೀಟಿನೊಳಗೆ ನೀರನ್ನು ತಿರುವಿದಂತೆ  ಸಮುದ್ರ ಮಥನವನ್ನುಮಾಡಿದ್ದು ಎನ್ನುವ ಕಲ್ಪನೆಯೇ ಅಳಿದುಳಿದ  ರೋಮ ರೋಮಗಳ ಅಂಚಿನಲ್ಲಿ ರೋಮಾಂಚನವನ್ನು ಉಂಟು ಮಾಡಿ , ತಾನು ಇಷ್ಟು ದಿನ ಎಲ್ಲರಿಗು , ಎಲ್ಲರೊಡನೆಯು ಹಿಡಿದ ಬಕೀಟು ಎಂಥ ಪುಣ್ಯಾ ಕಾರ್ಯವೆಂಬ ದಿವ್ಯಾ ಅನುಭವ ಪ್ರಾಪ್ತವಾಗಿ ಸುತ್ತಲೂ ದಿಟ್ಟಿಸಲಾಗಿ , ಸುತ್ತ ಹೊಳೆಯುವ ಬಕೀಟುಗಳಿಂದ ಸೃಷ್ಟಿಯಾಗಿದ್ದ ಮಾಯಲೋಕದಿಂದ , ಜಗವೆಲ್ಲವು ಬಕೀಟು ಎಂದು ತೋರಿ , ತಾನು ಸರ್ವರಿಗೂ ಬಕೀತು ಹಿಡಿಯುವ ಎನ್ನುವ ಗರ್ವಾನುಭವ ಉದ್ರೇಕಾದಿ ತಡೆಯಲಾರದ  ಪುಳಕದಿಂ ಬಚ್ಚಲು ಮನೆಯಿಂದ ಓಡಿ ಹೊರಬಂದು ಹೊಸ್ತಿಲಾಚೆ   ಚಂಗನೆ  ಜಿಗಿಯಲಾಗಿ , ಮುಂಜಾನೆ ಮನೆಯನ್ನು ಸ್ವಚ್ಚ ಮಾಡಲು ಬಂದಿದ್ದ ಮಾಯಕದ ಬಾಯಮ್ಮಳನ್ನು ಹಾಗೂ ಅವಳು ಹಿಡಿದಿರುವ  ಕೀಟು ನೋಡಿದೊಡನೆಯೇ , ಬಕೀತು ದೇವನಾದ ತನಗೆ ಬಕಿಟು ತಂದಿದ್ದ ಬಾಯಮ್ಮಳ ಅಪಾರ ಭಕ್ತಿಗೆ ಮೆಚ್ಚಿ ಉದ್ರೇಕಾತ್ಸೊಹದಿಂದ ಮೊಸರುದ್ದೀನ ಭಕ್ತೆಗೆ ವರ ಕರುಣಿಸಲು ಬಕೀಟು ಜೊತೆಗೂಡಿ ಬಾಯಮ್ಮಳನ್ನು ಸೇರಲು ತಬ್ಬಿದಾಗ , ಬಾಯಮ್ಮ ಬೆಚ್ಚಿ ಕಿಟಾರನೆ ಕಿರುಚಿ ಪೊರಕೆ ಸೇವೆ ಮಾಡಿ ಕೃಪೆಗೆ   ಪಾತ್ರಳಾದಳು.

*****************************************************************
ಹಲವಾರು ವರುಶಗಳಿಂದ ಮೊಸರುದ್ದೀನ ಬಕೀಟು ಹಿಡಿಯುತ್ತ ಸಂಗ್ರಹಿಸುತ್ತಾ ಬಕೀಟುಗಲ ಪ್ರೀತಿಸುತ್ತ ಬಂದಿದ್ದರು ಮೊದಲೆಲ್ಲ ಹೀಗೆ ಆಗುತ್ತಿರಲಿಲ್ಲ.  ಈ ಮೊದಲು ಮೊಸರುದ್ದೀನನಿಗೆಉಪಯೋಗ ವಿರುವ ಕೆಲವರು ಮಾತ್ರ ಬಕೀತಿನಂತೆ ಭಾಸವಾಗುತ್ತಿದ್ದರು ಅಥವಾ ಬಕೀಟಿನಂತೆ ಭಾಸವಾಗುವ ಕೆಲವರು ಮಾತ್ರ ಉಪಯೋಗಕ್ಕೆ ಬರುತ್ತಿದ್ದರು . ಹೀಗೆ ಭಾಸರಾದವರನ್ನು ತಬ್ಬಿ , ನೇವರಿಸಿ ಬಕೀಟು ಹಿಡಿಯುವಂತೆಯೆ ಹಿಡಿದು ಮೊಸರುದ್ದೀನ ತನ್ನ ಕೆಲಸ ಕಾರ್ಯ ಸಾಧಿಸಿ ಕೊಳ್ಳುತ್ತಿದ್ದ . ಆದರೆ ಇತ್ತೀಚಿಗೆ ಮೊಸರುದ್ದೀನನೊಳಗೆ ಬೆಳೆದ ಸಂಶಯ ನಾನಾ  ರೂಪ ತಾಳಿ ಸುತ್ತಲಿನ ಜನರೆಲ್ಲರೂ ಬಕೀಟಿನಂತೆಯೆ ಭಾಸವಾಗಿ , ಬಕೀಟುಗಳೇಲ್ಲ ಕೂಗಿ ಅಂಗಲಾಚಿ ತನ್ನಕರೆಯುತ್ತಿದ್ದಂತೆ ಅನ್ನಿಸಿ , ಅವರನ್ನು ಹಿಡಿಯಲಾಗಿ , ಜನ ಬೆಚ್ಚಿ ಬಿದ್ದು ಬಯ್ಗುಳ , ಕಪಾಲ ಮೋಕ್ಷ ಇನ್ನಿತರ ಏಟಿನ ಸೇವೆ ಮಾಡಲಾಗಿ  ಮೋಸರುದ್ದೀನ ಕಂಗಾಲಾದ .  
 

Tuesday, February 5, 2013

ಎರಡು ಕವನಗಳು

ಒಲವೆಂಬ ಪಸೆ 

ಕಾದಿದ್ದು ಸಾಕು 
ಎರವಲು ಕೊಡು 
ನಿನ್ನ ಅಲೆಮಾರಿ ತುಟಿಯ 
ಮೇಲೆ ಕುಳಿತ
ಪಿಸು ನುಡಿಯ !

ದಾಟಿ ಹೋಗುವ
ಪರಸ್ಪರ ಕಣ್ಣ ಗಡಿಯ ,
ಹಾವಿನಂತೆ ತಣ್ಣಗೆ
ಹರಿಯುವ ಸಂಜೆ
ಆಕಾಶಕ್ಕೊಂದು
ಸ್ವಪ್ನ ಎಸೆಯೋಣ !

ಕತೆ ಹೇಳುವೆ
ಕೇಳಿಸಿಕೋ
ಒಂದು ಚುಕ್ಕಿ ಒಂದು ಚಂದ್ರ
ಒಬ್ಬಳು ನೀನು ಒಬ್ಬನು ನಾನು
ಎಲ್ಲ ನಡೆಯಲಿ
ಒಂದಾನೊಂದು ಕಾಲದಲ್ಲಿ !


ಕೊಂಡಿಯಿಲ್ಲದ ತುಣುಕುಗಳು 

ಕದ್ದು ಸಾಗುವ ಭಾವಗಳ 
ಮೇಲೆ ; ನೆನಪುಗಳ ಖಟ್ಲೆ .
ಇಬ್ಬರ ಪದಗಳು 
ಬಂದಿಯಾಗಿವೆ ಕವನಗಳಲ್ಲಿ !

ಬಿಡಿ ಬಿಡಿ ಪದಗಳು 
ಹಿಂದಿಲ್ಲ ಮುಂದಿಲ್ಲ 
ಜಾರಿ ಹೋದರು 
ಕೇಳುವರಿಲ್ಲ ,!

ಅರ್ಧ ಟೀ ಅರ್ಧ ಬನ್ನು
ಪೂರ್ತಿಯಾಗದ ಕವಿತೆ,
ಬಿಟ್ಟ ಪದಗಳಲ್ಲಿ
ನಿನ್ನ ಭಾವ !

ಒಲವೆಂಬ ಪಸೆಗೆ
ಒದ್ದೆ ಒದ್ದೆ ಪದಗಳು
ಪುಳಕ್ಕನೆ ಮನಸ್ಸಿಂದ
ಜಾರುವ ಕವಿತೆಗಳು !