Sunday, June 5, 2022

ಗಾಯ

ಸಾನ್ಸನ್  ತನ್ನ  ವಿದ್ಯಾರ್ಥಿ ವೃ೦ದದಲ್ಲಿ    'ಮಿಸ್ ಕಾಸಾಬ್ಲಾಂಕಾ' ಎಂದೇ  ಪರಿಚಿತಳು. ಆ ಹೆಸರಿನ ಜೊತೆ ಜೊತೆಗೆ ಮೂಡಿ ಬರುವ  ಅಣಕಿಸುವ  ಅಪಹಾಸ್ಯದ  ನಗುವನ್ನು ನಿರ್ಲಕ್ಷಿಸುವದು  ಸಾಧ್ಯವಾದರೆ  ಮಿಸ್ ಕಾಸಾಬ್ಲಾಂಕಾ ಎನ್ನುವದು ಚಂದನೆಯ ಹೆಸರು. ಸಾನ್ಸನ್ ಸಾಧ್ಯವಾದಷ್ಟೂ ಆ ನಗುವನ್ನು ಗಮನಿಸದಿರಲು ಪ್ರಯತ್ನಿಸುತ್ತಾಳೆ. ಮೂವತ್ತೆರಡು ವರ್ಷದ ಸಾನ್ಸನ್ ಗೆ ಗಂಡನಾಗಲಿ  , ಪ್ರಿಯಕರನಾಗಲಿ  ಅಥವಾ ಒಬ್ಬ ಆಪ್ತ ಸ್ನೇಹಿತೆ ಸಹ ಇಲ್ಲ.  ಪದವಿ ಮುಗಿಸಿ , ತಾನು ಹುಟ್ಟಿ ಬೆಳೆದ ಸಣ್ಣ ಪಟ್ಟಣದಲ್ಲಿನ  ಎಜುಕೇಟರ್ ಸ್ಕೂಲಿನಲ್ಲಿ  ತಾತ್ಕಾಲಿಕವಾಗಿ ಇಂಗ್ಲಿಷ್ ಶಿಕ್ಷಕಿಯಾಗಿ  ಸೇರಿದ  ಅವಳ ನೌಕರಿ ಈಗ  ಖಾಯಂ ಆಗಿದ್ದರೂ  ಸಹ ಅವಳು ಮೊದಲಿನಂತೆ ಇಂಗ್ಲಿಷ್ ಟೀಚರ್ ಆಗಿಯೇ ಮುಂದುವರೆದಿದ್ದಾಳೆ.  ಕಳೆದ ಹತ್ತು ವರ್ಷದಲ್ಲಿ ಅವಳು ಕಾಸಾಬ್ಲಾಂಕಾ ಸಿನೆಮಾವನ್ನು  ಪ್ರತಿ ಬ್ಯಾಚಿನ ವಿದ್ಯಾರ್ಥಿಗಳಿಗೂ ಒಂದು ಸೆಮಿಸ್ಟರ್ ನಲ್ಲಿ  ಕಡಿಮೆಯೆ೦ದರೂ ಐದರಿಂದ ಆರು ಸಲ ತೋರಿಸಿದ್ದಾಳೆ.  ಪ್ರತಿಯೊಂದು ಬಾರಿ ಸಿನಿಮಾ ನೋಡಿದಾಗಲೂ ಆಯಾ  ಬ್ಯಾಚಿನ ವಿದ್ಯಾರ್ಥಿಗಳು ಹೇಗೆ  ಪ್ರತಿಕ್ರಿಯಿಸಬಹುದು ಎನ್ನುವದು ಅವಳಿಗೆ ಒಂದು ಸಿದ್ಧ ಮಾದರಿಯಂತಾಗಿರುವದರಿಂದ ಅದನ್ನು ಸಹಿಸಿಕೊಳ್ಳುವದು ಅವಳಿಗೆ ಕಷ್ಟಕರವು ಅಲ್ಲ . ಮೊದಲ  ಸಲ ಸಿನಿಮಾ ತೋರಿಸಿದಾಗ   ಅದು ಅವರ ಜೀವನದಲ್ಲಿ ಚೈನೀಸ್ ಅಡಿ  ಶೀರ್ಷಿಕೆ ಇಲ್ಲದೆ ನೋಡಿದ ಮೊತ್ತಮೊದಲ  ಅಮೇರಿಕನ್  ಸಿನಿಮವಾದ್ದರಿಂದ  ಬೆರಗುಗಣ್ಣಿನಿಂದ ನೋಡುತ್ತಿದ್ದರು.   ಅವರು  ಭಾಷೆಯನ್ನು ಗ್ರಹಿಸಲು ಕಷ್ಟಪಡುತ್ತಾ, ಅಲ್ಲಿ ಇಲ್ಲಿ ಒಂದೊಂದು ಶಬ್ದವನ್ನೋ , ವಾಕ್ಯವನ್ನೋ ಅರ್ಥಮಾಡಿಕೊಳ್ಳುತ್ತಿರುವದನ್ನು ಸಾನ್ಸನ್  ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಇಷ್ಟಾದರೂ ಒಟ್ಟಾರೆಯಾಗಿ ಸಿನಿಮಾವನ್ನು ಅರ್ಥೈಸಿಕೊಳ್ಳವುದರಲ್ಲಿ  ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಪ್ರತಿ ಸಲ   ಸಿನಿಮಾ ನೋಡಿದವರಲ್ಲಿ ಒಬ್ಬರೋ, ಇಬ್ಬರೋ   ಹುಡುಗಿಯರು ಕ್ಲಾಸ್ ಮುಗಿಯುವಷ್ಟರಲ್ಲಿ ಕಣ್ಣಿನಲ್ಲಿ ನೀರನ್ನು ತುಂಬಿಕೊಂಡಿರುತ್ತಿದ್ದರು.  ಆದರೆ ಬಹು ಬೇಗ ವಿದ್ಯಾರ್ಥಿಗಳಿಗೆ  ಸಿನಿಮಾದಲ್ಲಿ ಆಕರ್ಷಣೆ  ಮಾಯವಾಗುತ್ತಿತ್ತು. ಸಿನಿಮಾದಲ್ಲಿನ ಹುಡುಗಿಯರು  ಅತ್ತಾಗ ಇವರು ನಗುತ್ತಿದ್ದರು.  ತೆರೆಯ ಮೇಲೆ  ಗಂಡಸೊಬ್ಬ ಹೆಂಗಸಿಗೆ ಮುತ್ತಿಕ್ಕಿದಾಗ ಇವರು ಕೇಕೆ ಹಾಕುತ್ತಿದ್ದರು. ಕೊನೆ ಕೊನೆಗೆ ಇದು ಹೇಗಾಗುತ್ತಿತ್ತು ಎಂದರೆ ವಿದ್ಯಾರ್ಥಿಗಳ ಗದ್ದಲದ ನಡುವೆ  ಸಾನ್ಸನ್  ಒಬ್ಬಳೇ ಸಿನಿಮಾವನ್ನು ವೀಕ್ಷಿಸುತ್ತಿದ್ದಳು.  


ಅವತ್ತು ಬೆಳಗ್ಗೆಯ ಪಿರಿಯಡ್ ನಲ್ಲಿ  ಸಾನ್ಸನ್ ಅದೇ ಕೆಲಸವನ್ನು ಮಾಡುತ್ತಿದ್ದಾಗಲೇ  ಕ್ಲಾಸಿನ ಬಾಗಿಲನ್ನು ಯಾರೋ ತಟ್ಟಿದರು. ತಟ್ಟುವ ಸದ್ದನ್ನು ಇನ್ನು  ತಡೆಯಲಸಾಧ್ಯ ಎಂದೆನಿಸಿದಾಗ ಅವಳು ಸಿನಿಮಾವನ್ನು ನಿಲ್ಲಿಸಿದಳು.

"ನಿಮ್ಮ ಅಮ್ಮ ನಿಮಗೋಸ್ಕರ ಹೊರಗೆ ಕಾಯುತ್ತಿದ್ದಾಳೆ . ಅವರಿಗೆ ನಿಮ್ಮನ್ನು ನೋಡಬೇಕಂತೆ."  ಸಾನ್ಸನ್ ಕ್ಲಾಸಿನ ಬಾಗಿಲನ್ನು ತೆರೆದಾಗ ಅಟೆಂಡರ್ ಹೇಳಿದ.
"ಯಾಕಂತೇ ?"
"ಕಾರಣ ಹೇಳಿಲ್ಲ "
"ನಾನು ಇಲ್ಲಿ ಕ್ಲಾಸು ತೆಗೆದುಕೊಳ್ಳುತ್ತಿರುವದು  ಗೊತ್ತಾಗುತ್ತಿಲ್ಲವೇ?"
"ನಿಮಗೆ ಕಾಯುತ್ತಿರುವದು ನಿಮ್ಮ ಅಮ್ಮ "  ಅಟೆಂಡರ್  ಕ್ಲಾಸಿನ ಒಳಗೆ ಒಂದು ಹೆಜ್ಜೆ  ಇಟ್ಟು ಮತ್ತೆ ಹೇಳಿದ.
ಸಾನ್ಸನ್ ಅವನನ್ನು ಒಂದು ಕ್ಷಣ ದುರುಗುಟ್ಟಿಕೊಂಡು ನೋಡಿದಳು. ನಂತರ ನಿಟ್ಟುಸಿರು ಬಿಡುತ್ತ "ಸರಿ , ನಾನು ಬರುತ್ತಿದ್ದೀನಿ ಎಂದು ಹೇಳು. " ಕ್ಲಾಸಿನಲ್ಲಿ  ವಿದ್ಯಾರ್ಥಿಗಳು ತಲೆಯೆತ್ತಿ ನೋಡತೊಡಗಿದರು. ಅವರು  ತನ್ನ ಮಾತನ್ನು ಪಾಲಿಸುವದಿಲ್ಲ  ಎಂದು ತಿಳಿದಿದ್ದರೂ  ಸಿನಿಮಾವನ್ನು ಗಮನವಿಟ್ಟು ನೋಡುವಂತೆ  ಅವರಿಗೆ ಆದೇಶಿಸಿದಳು.

ಸ್ಕೂಲಿನ ಗೇಟಿನ ಹೊರಗೆ ಸಾನ್ಸನ್ ಳ ಅಮ್ಮ  ಪ್ರತಿ ದಿನ ಮಾರ್ಕೆಟಿಗೆ ಒಯ್ಯುತ್ತಿದ್ದ  ತನ್ನ ತಳ್ಳುಗಾಡಿಗೆ ಒರಗಿ ನಿಂತುಕೊಂಡಿದ್ದಳು.  ಗಾಡಿಯ ಮೇಲೆ ಒಂದು ಸ್ಟವ್ , ಒಂದು ಅಲ್ಯೂಮಿನಿಯಂನ ದೊಡ್ಡ ಬೋಗುಣಿ, ಒಂದಷ್ಟು ಮೊಟ್ಟೆಗಳು, ಮಸಾಲೆಪದಾರ್ಥ ತುಂಬಿರುವ ಬಾಟಲ್ಗಳು  ಮತ್ತು ಒಂದು ಮರದ ಸ್ಟೂಲು ಇದ್ದವು. ಕಳೆದ ನಲವತ್ತು ವರ್ಷಗಳಿಂದ ಅವಳ ಅಮ್ಮ ರೈಲ್ವೆ ನಿಲ್ದಾಣದ ಹತ್ತಿರವಿರುವ ಮಾರ್ಕೆಟಿನ ಬಳಿ ಬೇಯಿಸಿದ ಮೊಟ್ಟೆಯನ್ನು ಮಾರುತ್ತಿದ್ದಳು. ಸಾಕಷ್ಟು ವರ್ಷದಿಂದ  ಸ್ಟೂಲಿನ ಮೇಲೆ ಕುಳಿತೆ ಇರುವದಕ್ಕೋ ಏನೋ ಅವಳು ಈಗ ಬೆನ್ನು ಬಾಗಿದ   ಸಣ್ಣ ಮುದುಕಿಯಾಗಿದ್ದಳು.  ಅಪ್ಪನ  ಅಂತ್ಯಕ್ರಿಯೆಯ ದಿನ ನೀಡಿದ್ದೆ ಕೊನೆ,  ಕಳೆದ ಒಂದು ವರ್ಷದಲ್ಲಿ ಸಾನ್ಸನ್ ಅಮ್ಮನನ್ನು ಭೇಟಿಯಾಗಿರಲಿಲ್ಲ.  ಅವಳ ಅಮ್ಮನ ಕೂದಲು   ಬೆಳ್ಳಗಾಗುತ್ತ , ಉದುರುತ್ತಿದ್ದವು . ಮುಂದೊಂದು ದಿನ ಅವಳ  ಕೂದಲೂ  ಸಹ ಹೀಗೆಯೇ ಆಗಬಹುದೇನೋ . ಮುಂದೊಂದು ದಿನ ಅವಳ  ಕೂದಲೂ  ಸಹ ಹೀಗೆಯೇ ಆಗಬಹುದೇನೋ . ಅವಳಿಗೆ  ಅಂತಹ ಭಾವುಕತೆ ಇರಲಿಲ್ಲ.   
" ಅಮ್ಮ, ನನ್ನನ್ನು ಹುಡುಕಿಕೊಂಡು ಬಂದಿದ್ದಿಯಂತೆ?" ಸಾನ್ಸನ್ ಕೇಳಿದಳು.
"ಇಲ್ಲದಿದ್ದರೆ ನೀನು ಬದುಕಿದ್ದೀಯಾ ಎಂದು ನನಗೆ ತಿಳಿಯುವದು ಹೇಗೆ ?"
"ಯಾಕೆ ? ಹೇಗಿದ್ದರೂ ನನ್ನ ಬಗ್ಗೆ  ಒಬ್ಬರಲ್ಲ ಒಬ್ಬರು ಪ್ರತಿದಿನ ನಿನ್ನ ಬಳಿ ಬಂದು  ಏನಾದರು ಹೇಳುತ್ತಾರೆ ಅಂದುಕೊಂಡಿದ್ದೆ "
"ಅವರು ಸುಳ್ಳು  ಸುದ್ದಿ ಸಹ ಹೇಳಬಹುದಲ್ಲ"
 "ಖಂಡಿತ"
"ಆದರೆ ಬೇರೆಯವರು ನಿನ್ನ ಬಗ್ಗೆ ಮಾತನಾಡುವ ಹಾಗೆ ಆಗಿದೆ  ಎಂದಾದರೆ ಅದು ಯಾರ ಸಮಸ್ಯೆ ?"
"ನಿನ್ನದು"
"ನಾಚಿಕೆ ಅನ್ನುವ ಶಬ್ದ ಒಂದು ಇದೆ ಎನ್ನುವದು ಗೊತ್ತಾ  ನಿನಗೆ ?"
"ನೀನು ಇಲ್ಲಿಯವರೆಗೆ  ಬಂದಿದ್ದು ನಾನು ನಾಚಿಕೆಪಟ್ಟುಕೊಳ್ಳಬೇಕು ಎನ್ನುವದನ್ನು ಹೇಳುವದಕ್ಕೋಸ್ಕರವೇ ? "
"ಯಾವ ದೇವರ ಶಾಪದಿಂದ ನೀನು ನನ್ನ ಮಗಳಾಗಿ ಹುಟ್ಟಿದೆಯೇನೋ?" ಅವಳಮ್ಮ ಈಗ ಧ್ವನಿ ಎತ್ತರಿಸಿ ಮಾತನಾಡಲು ಪ್ರಾರಂಭಿಸಿದಳು. ಸುತ್ತಮುತ್ತ ಹೋಗುತ್ತಿದ್ದವರು ಇವರ ಕಡೆ ನೋಡಿ ಕುಹಕದ ನಗೆಯನ್ನು ಬೀರಿ ಸಾಗುತ್ತಿದ್ದರು.
"ಅಮ್ಮ ಬೇರೆ ಏನಾದರು ಹೇಳುವದಕ್ಕೆ ಇದೆಯೇ ?"
"ನಿನ್ನ ಬಗ್ಗೆ ಜನ ಮಾತನಾಡಿಕೊಳ್ಳುತ್ತಾರಲ್ಲ , ಅದು ಒಂದಲ್ಲ ಒಂದು ದಿನ ನನ್ನ ಉಸಿರು ಕಟ್ಟಿಸಿ ಸಾಯಿಸುತ್ತೆ "
"ಕೇವಲ ಜನರ ಮಾತು ಯಾರನ್ನು ಸಾಯಿಸುವದಿಲ್ಲ "
 "ಹಾಗಾದರೆ ನಿನ್ನ ಅಪ್ಪನನ್ನು ಸಾಯಿಸಿದ್ದು ಯಾವುದು ?"
"ಅಪ್ಪನ ಸಾವಿಗೆ ನಾನು ಒಬ್ಬಳೇ ಕಾರಣಳಲ್ಲ" ಸಾನ್ಸನ್ ಮರು ನುಡಿದಳು. ಎಷ್ಟೇ ಪ್ರಯತ್ನಿಸಿದರೂ ಗಂಟಲು ಒತ್ತರಿಸಿ ಬಂದ ಹಾಗೆ ಭಾಸವಾಯಿತು.
ಅವಳಪ್ಪ ನೀರಿನ ಮೀಟರ್  ನೋಡಿ  ಬಿಲ್  ಕೊಡುವ ಕೆಲಸದಲ್ಲಿದ್ದ.  ಹೊತ್ತಲ್ಲದ ಹೊತ್ತಿನಲ್ಲಿ ಇನ್ಯಾರದೋ ಮನೆಯ ಬಾಗಿಲನ್ನು ಬಡಿದು ಬಿಲ್ ಕೊಡುವಾಗ ಮತ್ತು ದರ ಏರಿದ ಬಿಲ್ ನೋಡಿ ಮನೆಯವರು ಕೂಗಾಡುವಾಗ  ಅವನಿಗೆ ಸದಾ  ಏರುತ್ತಿದ್ದ ನೀರಿನ ಬಿಲ್ ಗೆ ತಾನೇ ಹೊಣೆ ಎನ್ನುವ ಭಾವ ಮೂಡಿ ಆತಂಕಗೊಳ್ಳುತ್ತಿದ್ದ.   ಒಂದು ದಿನ ಕೆಲಸಕ್ಕೆ ಹೋಗಿ  ನಂತರ ಮಾಯವಾದ ಅವನನ್ನು ಕೆಲ ಹುಡುಗರು ಊರ ಹೊರಗಿನ ಕೆರೆಯಲ್ಲಿ ಶವವಾಗಿ ಪತ್ತೆ ಹಚ್ಚಿದ್ದರು. ಕೆರೆಯಲ್ಲಿ  ಅಂತಹ  ನೀರು ಇರಲಿಲ್ಲ. ಹೆಚ್ಚು ಎಂದರೆ ಸೊಂಟ ಮುಳುಗುವಷ್ಟು. ಅವನೇ ಕೆರೆಯಲ್ಲಿ ಮುಳುಗಿ ಸತ್ತಿರಬಹುದು. ಆದರೆ ಅದನ್ನು ಖಚಿತವಾಗಿ ಹೇಳಲು ಯಾರಿಗೂ ಸಾಧ್ಯವಿರಲಿಲ್ಲ.  ಆತ ಯಾಕೆ ಹಾಗೆ ಮಾಡಿದ ಎನ್ನುವದಕ್ಕೂ ಇಂತಹುದೇ ಎನ್ನಬಹುದಾದ  ಯಾವುದೇ ಕಾರಣವಿರಲಿಲ್ಲ.   ಸಾನ್ಸನ್ ಳ ಅಮ್ಮನ ಪ್ರಕಾರ ಸಾನ್ಸನ್ ಮದುವೆಯಾಗದೆ ಇರುವದೇ  ಇವಕ್ಕೆಲ್ಲ ಕಾರಣ.

"ನೀನು ಮೊದಲು ಕಾಲೇಜಿಗೆ ಹೋಗಿದ್ದೆಯಲ್ಲ, ಆ ದಿನಗಳನ್ನು ನೆನಪಿಸಿಕೋ.  ನಾನು ಮತ್ತು ನಿನ್ನಪ್ಪ ಈ ಪ್ರಪಂಚದಲ್ಲೇ ಮಹತ್ ಸಾಧನೆ ಮಾಡಿದವರ ಪಟ್ಟಿಗೆ ಸೇರಿದವರು ಎನ್ನುವಷ್ಟು ಖುಷಿ ಪಟ್ಟಿದ್ದೆವು. " ಅವಳ ಅಮ್ಮ ಹಳೆಯದನ್ನು ನೆನಪಿಸಿಕೊಂಡು ಇನ್ನೇನು ಅತ್ತೇ ಬಿಡುತ್ತಾಳೆ ಅನಿಸುತ್ತಿತ್ತು.
"ಅಮ್ಮ ಈ ವಿಷಯವನ್ನು ಈಗಾಗಲೇ ಸಾಕಷ್ಟು ಸಲ ಮಾತನಾಡಿ  ಆಗಿದೆ. ಮತ್ತೆ  ಅದನ್ನೇ ಕೆದಕುವದು ಬೇಡ."
"ಯಾಕೆ ? ನಾನು ಇಷ್ಟು ವರ್ಷ ಕಷ್ಟಪಟ್ಟು ನಿನ್ನನ್ನು ಬೆಳೆಸಿದ್ದು ಈಗ ನೀನು ನನ್ನ ಬಾಯಿ ಮುಚ್ಚಿಸಲು ಎಂದೇ ? "
"ಆಯಿತು. ನನ್ನದು ತಪ್ಪಾಯಿತು. ಸರಿನಾ ? ನಾನು ಈಗ ಹೋಗಬೇಕು " ಸಾನ್ಸನ್ ಹೇಳಿದಳು.
"ದಯವಿಟ್ಟು ಹೋಗಬೇಡ, ನಾನು ಹೇಳುವದನ್ನು ಸ್ವಲ್ಪ ಕೇಳು" ಅವಳಮ್ಮ  ಬೇಡಿಕೊಳ್ಳುವಂತೆ ಕೇಳಿದಳು.  
"ಅಮ್ಮ , ನಾನೀಗ ಕ್ಲಾಸ್ ತೆಗೆದುಕೊಳ್ಳುತ್ತಿದ್ದೇನೆ"  ಸಾನ್ಸನ್ ಸ್ವಲ್ಪ ಮೆದು ಧ್ವನಿಯಲ್ಲಿ ಹೇಳಿದಳು.
"ಹಾಗಾದರೆ ಇವತ್ತು ರಾತ್ರೆ ಮನೆಗೆ ಬಾ. ನಿನಗೊಂದು ಮುಖ್ಯವಾದ ವಿಷಯವನ್ನು ಹೇಳುವದಕ್ಕೆ ಇದೆ. "
"ಈಗಲೇ ಹೇಳಿಬಿಡು. ನನಗೆ ಇನ್ನು ೫ ನಿಮಿಷ ಸಮಯವಿದೆ. "
"ಐದು ನಿಮಿಷ ಸಾಕಾಗುವದಿಲ್ಲ. ಇದು ತ್ಸು ನ ಬಗ್ಗೆ " ಅಮ್ಮ ಸಾನ್ಸನ್ ಳ  ಹತ್ತಿರ ಬಂದು ಪಿಸುಗುಟ್ಟಿದಳು " ತ್ಸು ಡೈವೋರ್ಸ್ ತೆಗೆದುಕೊಂಡಿದ್ದಾನೆ "
ಸಾನ್ಸನ್ ಅವಳಮ್ಮನನ್ನು ಎವೆಯಿಕ್ಕದೆ ನೋಡಿದಳು.  ಅವಳಮ್ಮ ಸಾವಕಾಶವಾಗಿ ತಲೆದೂಗುತ್ತ  "ಈಗ ಅವನು ಒಬ್ಬಂಟಿ "
"ನೀನು  ಏನು ಹೇಳುತ್ತಿದ್ದೀಯ ಎಂದು ನನಗೆ ಅರ್ಥವಾಗುತ್ತಿಲ್ಲ" ಸಾನ್ಸನ್
"ಅವರಪ್ಪ ಅಮ್ಮ ನೀನು  ಅವನನ್ನು  ಒಪ್ಪಿ ಜೊತೆಗೆ ಹೋಗುತ್ತೀಯಾ ಎಂದು ಕೇಳುತ್ತಿದ್ದಾರೆ"
"ಅಮ್ಮ ನನಗೆ  ಸ್ವಲ್ಪವೂ ಅರ್ಥವಾಗುತ್ತಿಲ್ಲ "
"ಅದಕ್ಕೆ ಹೇಳಿದ್ದು ಐದು ನಿಮಿಷ ಸಾಲುವದಿಲ್ಲ. ರಾತ್ರೆ ಮನೆಗೆ ಬಾ. ಇಬ್ಬರೂ ಕೂತು ಮಾತನಾಡೋಣ. ಈಗ ಕ್ಲಾಸಿಗೆ ವಾಪಸು ಹೋಗು. " ಸಾನ್ಸನ್ ಏನಾದರು ಹೇಳುವದಕ್ಕೆ ಮೊದಲೇ ಅವಳಮ್ಮ ತಳ್ಳುಗಾಡಿಯನ್ನು ನೂಕಿಕೊಂಡು ಅಲ್ಲಿಂದ ಹೊರಟಿದ್ದಳು.  

 ಸಾನ್ಸನ್  ಕಾಸಾಬ್ಲಾಂಕಾ ಸಿನಿಮಾವನ್ನು ಮೊಟ್ಟಮೊದಲ ಬಾರಿಗೆ ನೋಡಿದ್ದು ಮತ್ತು  ತ್ಸು ಅವಳನ್ನು ಮದುವೆಯಾಗುವದಿಲ್ಲ ಎಂದು ಸಣ್ಣ ಕ್ಷಮಾಪಣಾ ಪತ್ರವನ್ನು ಅಮೆರಿಕದಿಂದ ಅವಳಿಗೆ ಕಳುಹಿಸಿದ್ದು ಎರಡೂ ಒಂದೇ ವರ್ಷ.  ಪತ್ರ ಬರುವದಕ್ಕೂ ಮೊದಲು ಅವಳು ತನ್ನ ವಿದ್ಯಾರ್ಥಿಗಳಿಗೆ  "ಸೌಂಡ್ ಆಫ್ ಮ್ಯೂಸಿಕ್" ಸಿನಿಮಾವನ್ನು ತೋರಿಸುತ್ತ , ಸಿನಿಮಾದಲ್ಲಿನ ಹಾಡಿನೊಟ್ಟಿಗೆ ತಾನೂ ಗುನುಗುತ್ತ ಯಾವುದೇ ಕ್ಷಣದಲ್ಲಾದರೂ ಅಮೆರಿಕಾಕ್ಕೆ ಹೋಗಿ ತ್ಸುನನ್ನು  ಸೇರಿಕೊಳ್ಳುವ  ಕನಸನ್ನು ಕಾಣುತ್ತಿದ್ದಳು.  ಪತ್ರ ಓದಿದ ನಂತರ ಅವಳು ಯಾವತ್ತೂ ಹಾಡಿದ್ದಿಲ್ಲ.

ಸಾನ್ಸನ್ ಮತ್ತೆ ಕ್ಲಾಸಿಗೆ ಮರಳಿ , ಕಿಟಕಿಯ ಕಟ್ಟೆಯನ್ನು ಹತ್ತಿ, ತನ್ನ ಅಮೇರಿಕನ್ ಟೀಚರ್ ಮಾಡುತ್ತಿದ್ದಂತೆ, ಕಾಲನ್ನು ಸಾವಕಾಶವಾಗಿ ಜೋತಾಡಿಸುತ್ತ ಕುಳಿತುಕೊಂಡಳು.  ಸಿನಿಮಾದ ಕೊನೆಯ ದೃಶ್ಯದಲ್ಲಿ ನಾಯಕ  ರಿಕ್ ಸುರಿಯುತ್ತಿದ್ದ ಮಳೆಯಲ್ಲಿ ಸಂಪೂರ್ಣವಾಗಿ ಒದ್ದೆಯಾಗಿ, ರೈಲನ್ನು  ಹತ್ತುವಾಗ ವಿದ್ಯಾರ್ಥಿಯೊಬ್ಬ ಕೂಗಿದ " ಇದೊಳ್ಳೆ ತಮಾಷೆ, ಅವನ ಕೋಟು ಮಾತ್ರ  ಒಂಟೆಯ ಚರ್ಮದ ಹಾಗೆ ಒಣಗಿದೆ."

 ಇಷ್ಟು ಸಲ ಸಿನಿಮಾವನ್ನು ನೋಡಿದ್ದರೂ ತಾನು ಈ ವಿಷಯವನ್ನು  ಗಮನಿಸಿಯೇ ಇಲ್ಲವಲ್ಲ ಎಂದು ಆಶ್ಚರ್ಯವಾಗೊಂಡಳು.  ಈ ವಿವರವನ್ನು ಗಮನಿಸಿದ ಹುಡುಗನ ಸೂಕ್ಷ್ಮ ಗ್ರಹಿಕೆಯನ್ನು ಶ್ಲಾಘಿಸಬೇಕು ಎಂದುಕೊಂಡವಳು ಕೊನೆ ಕ್ಷಣದಲ್ಲಿ ಮನಸ್ಸು ಬದಲಿಸಿ ಕ್ಲಾಸನ್ನು ಉದ್ದೇಶಿಸಿ "ಬದುಕಿನ ನಿಗೂಢತೆಯಿರುವದೇ ಘಟಿಸುವ ಘಟನೆಗಳಿಗೆಲ್ಲ ವಿವರಣೆ ಇಲ್ಲದಿರುವದರಲ್ಲಿ"
ಅವಳ ಮಾತು ಕೇಳಿ ಕ್ಲಾಸಿನಲ್ಲಿ ನಗೆಯ ಅಲೆ ಎದ್ದಿತು. ಈ ವಾಕ್ಯ, ಅದರೊಟ್ಟಿಗೆ  ಸಾನ್ಸನ್ ಗೆ  ಇನ್ನೊಂದು ಹೊಸ ಅಡ್ಡ ಹೆಸರು ಸೇರಿ ಬೇರೆ ಎಲ್ಲ ಕ್ಲಾಸಿಗೆ ಡಂಗುರ ಸಾರಲಾಗುತ್ತದೆ. ಅದು ಸಾನ್ಸನ್ ಳಿಗೂ ಗೊತ್ತಿತ್ತು ಮತ್ತು ಅವಳು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.  ಈಗಷ್ಟೆ ಹೈಸ್ಕೂಲು ಮುಗಿಸಿ ಬಂದ ಈ ವಿಧ್ಯಾರ್ಥಿಗಳಿ ಇನ್ನೇನು ಕೆಲ ವರ್ಷಗಳಲ್ಲಿ ಪದವಿ ಸಹ ಮುಗಿಸಿ ಇನ್ಯಾವುದೋ ಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಬಹುದೇನೋ. ಇಲ್ಲಿರುವವರಲ್ಲಿ ಬಹುತೇಕರು ಹಳ್ಳಿಗಾಡಿನಿಂದ ಬಂದವರು.  ಹೀಗಾಗಿ ಸ್ಕೂಲು ಗದ್ದೆಯಲ್ಲಿ ಕೆಲಸ ಮಾಡುವದನ್ನು ತಪ್ಪಿಸಿಕೊಳ್ಳುವ ಒಂದು ಅವಕಾಶಕ್ಕಾಗಿ ಅವರು ಇಲ್ಲಿ ಬಂದು ಸೇರಿದವರು.   ಇಲ್ಲಿ ಇಂಗ್ಲಿಷ್ ಒಂದು ವಿಷಯವಾಗಿ ಇಟ್ಟಿರುವದು ಕೇವಲ ಶೈಕ್ಷಣಿಕ ನಿಯಮವನ್ನು ಪಾಲಿಸಬೇಕು ಎಂದಷ್ಟೇ. ತಮ್ಮ  ಕ್ಷುಲ್ಲಕ ಬಯಕೆಗಳಲ್ಲಿ ವಿಹರಿಸುತ್ತಿರುವ  ಈ ಹುಡುಗರಿಗೆ ಸಾನ್ಸನ್ ಹೇಳುವದು ಯಾವತ್ತೂ ಅರ್ಥವಾಗುವದಿಲ್ಲ.

 ಎರಡು  ಪಿರಿಯಡ್ ಆದಮೇಲೆ ಸಾನ್ಸನ್ ತಲೆನೋವಿನ ನೆಪ ಹೇಳಿ ಅವತ್ತು ರಜೆ ತೆಗೆದುಕೊಳ್ಳುಲು ನಿರ್ಧರಿಸಿದಳು. ಅವಳು ಕೊಟ್ಟ ಈ ಕಾರಣವನ್ನು  ಯಾರೂ ನಂಬದಿದ್ದರೂ, ಯಾರು ಅವಳನ್ನು ಪ್ರಶ್ನಿಸಲಿಲ್ಲ.  ಅವರು ಅವಳನ್ನು ನೋಡುತ್ತಿದ್ದ ರೀತಿಯೇ ಹಾಗೆ , ಯಾರಿಗೂ ತೊಂದರೆಯನ್ನುಂಟು ಮಾಡದ,  ಸ್ವಲ್ಪವೇ ಸ್ವಲ್ಪ ನಿರುಪದ್ರವಿ ಹುಚ್ಚುತನ ತುಂಬಿಕೊಡಿರುವ ವ್ಯಕ್ತಿಯೊಬ್ಬನಿಂದ ಏಕತಾನದ ಬದುಕಿಗೆ ಒಂಚೂರು ಬದಲಾವಣೆ ಸಿಕ್ಕ ಹಾಗೆ.  ಸಾನ್ಸನ್, ಈ  ಪಟ್ಟಣದಲ್ಲಿ ಪದವಿ ಮುಗಿಸಿದವರಲ್ಲಿ ಅತ್ಯ೦ತ ಹೆಚ್ಚು ಓದಿದವಳು. ಈ ಪಟ್ಟಣದಲ್ಲಿ ಪದವಿಯನ್ನು ಮುಗಿಸಿ , ಬೀಜಿಂಗ್ ನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಇಬ್ಬರಲ್ಲಿ ಒಬ್ಬಳು ಮತ್ತು ಮರಳಿ ಬ೦ದವಳು ಅವಳು ಒಬ್ಬಳೇ.  ಇನ್ನೊಬ್ಬ ಅವಳ ಬಾಲ್ಯದ  ಗೆಳೆಯ, ಸಹಪಾಠಿ,  ಒಂದು ಕಾಲದ ಪ್ರಿಯಕರ , ಭಾವಿ ಪತಿ  ನಂತರ   ಸಾನ್ಸನ್ ಗಿಂತ ಸುಂದರವಾದ ಇನ್ನೊಬ್ಬಳನ್ನು ಮದುವೆಯಾಗಿ ಈಗ ಅಮೇರಿಕಾದಲ್ಲಿ ನೆಲೆಸಿರುವ ತ್ಸು.

 ಈಗ ಡೈವೋರ್ಸ್ ತೆಗೆದುಕೊಂಡಿದ್ದಾನೆ . ಹತ್ತು  ಸುದೀರ್ಘ ವರ್ಷಗಳ ನಂತರ .
 

ತನ್ನ ಬಾಡಿಗೆ ರೂಮಿನಲ್ಲಿ ಹಾಸಿಗೆಯ ಮೇಲೆ  ಕುಳಿತು ಸಾನ್ಸನ್  ಸೂರ್ಯಕಾಂತಿ ಬೀಜಗಳನ್ನು ಬಿಡಿಸತೊಡಗಿದಳು.  ಒಂದೊಂದಾಗಿ ಬಿಡಿಸಿದ ಬೀಜದ ಸಿಪ್ಪೆಗಳು ಮಂಚದ ಕೆಳಗೆ , ಹಾಸಿಗೆಯ ಮೇಲೆ, ರೂಮಿನ ನೆಲದ ಮೇಲೆ ರಾಶಿಯಾಗುತ್ತಿದ್ದವು.  ಬೀಜಗಳನ್ನು ಅಗಿಯುವಾಗ ಹೊರಡುವ ಕರಕರ ಶಬ್ದದ  ಏಕತಾನ ಲಹರಿ  ಅವಳ ತಲೆಯೊಳಗೆ ಉನ್ಮಾದವನ್ನುಂಟು ಮಾಡುತ್ತಿತ್ತು. ಬಾಯಲ್ಲಿ   ಸೂರ್ಯಕಾಂತಿ ಬೀಜದ ಹೇಳಲಾಗದ ಸವಿ.    ಗೋಂಗ್ಸ್ ನ  ಅ೦ಗಡಿಯಿಂದ ತಂದ ಈ ಸೂರ್ಯಕಾಂತಿ ಬೀಜ ಉಪ್ಪು ಮಿಶ್ರಿತ ಸಿಹಿ ಮತ್ತು ಅಂಗಡಿಯವರು ಸೇರಿಸುವ ಯಾವುದೋ ವಸ್ತುವಿನಿಂದ ಉತ್ಪತ್ತಿಯಾಗುವ ಹೌದೋ ಅಲ್ಲವೋ ಎನ್ನುವ ಕಹಿ ರುಚಿ ಮತ್ತು ಕಾಲೇಜಿನ ದಿನಗಳಲ್ಲಿ ಕೊಂಡು ತಂದಿದ್ದ ಒಂದು ಷೆಲ್ಫ್ ಪೂರ್ತಿ ತುಂಬುವಷ್ಟು ಇಂಗ್ಲಿಷ್ ಕಾದಂಬರಿಗಳು, ಪ್ರತಿಯೊಂದು ಒಂದು   ಜೀವಮಾನವಿಡೀ ಅಧ್ಯಯನಕ್ಕೆ ಸಾಕಾಗುವಂತಹ ಪುಸ್ತಕಗಳು ಸಾನ್ಸನ್ ಳ ಒಂಟಿ ಬದುಕನ್ನು  ಬಹುತೇಕ ಸಹಿಸಲಾಗುವಂತೆ ಮಾಡಿದ್ದವು. ಆದರೆ  ಇವತ್ತು ಬಾಯೊಳಗೆ ಅಗಿಯುತ್ತಿದ್ದ ಸೂರ್ಯಕಾಂತಿ ಬೀಜಗಳ ಕರಕರ ಪ್ರತಿಧ್ವನಿ ತಲೆಯೊಳಗೆ ಎಂದಿಗಿಂತ ಬೇರೆಯದಾಗಿ ಮೊಳಗುತ್ತಿತ್ತು. ತ್ಸುನ ಡೈವೋರ್ಸ ವಿಷಯ ಗಂಟಲೊಳಗೆ ಸಿಕ್ಕಿಕೊಂಡ ಮೀನಿನ ಮೂಳೆಯಂತೆ ಅತ್ತಲೂ ಹೋಗುತ್ತಿರಲಿಲ್ಲ ಇತ್ತಲೂ ಬರುತ್ತಿರಲಿಲ್ಲ.

ಬಹುಶ:  ಹೀಗೆ ಬಿಡಿಸಿ ಬಿಸಾಡಿದ   ಸೂರ್ಯಕಾಂತಿ ಬೀಜಗಳ ಸಿಪ್ಪೆಯ ನಡುವೆ ಕುಳಿತುಕೊಂಡು ತನ್ನ ಡೈವೋರ್ಸ ವಿಷಯವನ್ನು ಸಾನ್ಸನ್ ಚಿ೦ತಿಸುತ್ತಾಳೆ ಎಂದು  ಊಹಿಸುವದು ತ್ಸು ಗೆ ಸಾಧ್ಯವೇ ಇರಲಿಲ್ಲವೇನೋ. ಆದರೆ ಅವಳು ಪ್ರತಿದಿನ ಅವನನ್ನು ಧೇನಿಸುತ್ತಿದ್ದಳು. ಅವರಿಬ್ಬರ ನಿಶ್ಚಿತಾರ್ಥದ  ದಿನ ಅವಳು ತುಸು ಭಾವುಕಳಾಗಿ  ಹೇಳಿದಂತೆ  "ಪ್ರಪಂಚದಲ್ಲಿ ಸಮುದ್ರದ  ನೀರೆಲ್ಲ ಬತ್ತಿ ಹೋಗುವ ತನಕ ನಾನು ನಿನ್ನನ್ನು ನೆನಪಿಸಿಕೊಳ್ಳುತ್ತಿರುತ್ತೇನೆ. " ಅವತ್ತು ತ್ಸು ಸಹ ಹೀಗೆಯೇ ಏನೋ ಹೇಳಿರಬೇಕು.  ಮಿನ್ , ಅವರಿಬ್ಬರ ನಿಶ್ಚಿತಾರ್ಥದ ಏಕೈಕ ಸಾಕ್ಷಿ ಮತ್ತು  ಕಾನೂನು ರೀತ್ಯಾ  ಪೇಪರಿನ ಮೇಲಿನ ತ್ಸು ನ ಹೆಂಡತಿ ಅವರಿಬ್ಬರನ್ನು ಸಂತೋಷದಿಂದ ತಬ್ಬಿಕೊಂಡಿದ್ದಳು.  ಇವಾಗ ಮರಳಿ ನೋಡಿದರೆ ಅವೆಲ್ಲವೂ ವಿಚಿತ್ರವಾಗಿ ತೋರುತ್ತದೆ.  ಅವರ ನಡುವೆ ಯಾವುದೇ ಭಾಷೆ, ಆಣೆಗಳಿರಲಿಲ್ಲ. ಮಿನ್ ಮತ್ತು ತ್ಸು ನಡುವಿನ ತಾತ್ಕಾಲಿಕ ಕಾನೂನಿನ ಕಣ್ಣಿಗೆ ಕಾಣಿಸುವ, ಕೇವಲ ಪೇಪರಿನ ಮೇಲಿರಬೇಕಾದ ಮದುವೆಯ ಸಂದರ್ಭದಲ್ಲಿ ಮಾಡಿದ ಹಾಗೆ ಈ   ನಿಶ್ಚಿತಾರ್ಥ ಸಹ ಅವರ ಮೂವರ ನಡುವಿನ ಒಪ್ಪಂದವಾಗಿತ್ತು.

ಮಿನ್ ಕಾಲೇಜು ದಿನಗಳಲ್ಲಿ ಸಾನ್ಸನ್ ಭೇಟಿಯಾದ ಅತ್ಯಂತ ಸುಂದರಿ ಹುಡುಗಿ. ಅದಾಗಿ ಹತ್ತು ವರ್ಷಗಳ ನಂತರವೂ ಇಲ್ಲಿಯವರೆಗೆ ಸಾನ್ಸನ್ ನೋಡಿದ ಯುವತಿಯರಲ್ಲೇ ಅವಳು ಪರಮ ಸುಂದರಿ. ಕಾಲೇಜು ಸಮಯದಲ್ಲಿ ಅವರಿಬ್ಬರು  ಜೊತೆಗೆ ಇನ್ನೂ ನಾಲ್ಕು ಹುಡುಗಿಯರು  ಒಂದೇ ಹಾಸ್ಟೆಲಿನಲ್ಲಿ  ವಾಸವಾಗಿದ್ದರೂ  ಸಹ ಮೊದಲ ವರ್ಷದಲ್ಲಿ ಅವರಿಬ್ಬರ ನಡುವೆ ಅಂತಹ ಸ್ನೇಹವೇನು ಇರಲಿಲ್ಲ. ಮಿನ್ , ದೊಡ್ಡ ನಗರದಿಂದ ಬಂದವಳು. ಎಲ್ಲರೊಟ್ಟಿಗೆ ಮುಕ್ತವಾಗಿ  ಬೆರೆಯುವವಳು. ಬಯಸಿದ್ದನ್ನು ದಕ್ಕಿಸಿಕೊಳ್ಳುವ ಛಾತಿಯಿರುವಂತವಳು. ಸಾನ್ಸನ್ ಹಾಗಲ್ಲ ಸಣ್ಣ ಪಟ್ಟಣದದಿಂದ ಬಂದವಳು, ಸಾಧಾರಣ ರೂಪು. ಹೀಗಾಗಿ ಅವರಿಬ್ಬರೂ ಸ್ನೇಹಿತೆಯರಾಗುವದಕ್ಕೆ ಯಾವುದೇ ಕಾರಣಗಳಿರಲಿಲ್ಲ.

ಕಾಲೇಜಿನಲ್ಲಿ ಮೊದಲ ವರ್ಷ  ಕೊನೆ ಸಮೀಪಿಸಿದಾಗ  ತಿಯಾನಮೆನ್ ಚೌಕದಲ್ಲಿ ನಡೆದ ಘಟನೆಯಿಂದ  ಅವರ ಕಾಲೇಜಿನ ದೈನಂದಿನ ತರಗತಿಗಳು  ಭಂಗಗೊಂಡಿದ್ದವು.  ಮಿನ್, ಚೌಕದಲ್ಲಿ ನಡೆಯುವ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಳು. ಅವಳನ್ನು ಮಿಸ್ ತಿಯಾನಮೆನ್ ಎಂದು ಕಾಲೇಜಿನ ಹುಡುಗರು ಘೋಷಿಸಿದ್ದರು.  ಸ್ವಾತಂತ್ರ್ಯ ದೇವತೆಯ ಚಿತ್ರವಿರುವ ಟೀ ಶರ್ಟ್ ಧರಿಸಿಕೊಂಡು ಅವಳು ಪಾಶ್ಚಿಮಾತ್ಯ ವರದಿಗಾರರ ಕಡೆಗೆ ವಿಜಯದ ಸಂಕೇತ ಬೀರುವ ಪೋಸನ್ನು ಕೊಟ್ಟಿದ್ದಳು. ಆದರೆ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಿದ ನಂತರ ಮಿನ್ ಕಷ್ಟಕರ ದಿನಗಳನ್ನು ಎದುರಿಸಬೇಕಾಯಿತು. ಅವಳನ್ನು ಆಗಾಗ ತಪಾಸಣೆಗೆ ಕರೆಯುತ್ತಿದ್ದರು. ಅವಳನ್ನು ಜೈಲಿಗೆ ಹಾಕದಿದ್ದರೂ  ಸರ್ಕಾರ  ಕಾಲೇಜಿನ ನಂತರ  ಯಾವುದೇ ಕೆಲಸಕ್ಕೂ  ಕಾನೂನು ಪ್ರಕಾರ  ಅನರ್ಹಳು  ಎಂದು ಘೋಷಿಸಿತ್ತು. ಇವೆಲ್ಲ ಘಟನೆಗಳು ಮುಗಿದ ನಂತರ ಮಿನ್ ಮತ್ತೆ ಕಾಲೇಜಿಗೆ  ಮೊದಲಿನಂತೆ ಸುಂದರವಾಗಿ ಆದರೆ ಖಿನ್ನಳಾಗಿ , ಸೋತವಳಾಗಿ   ಮರಳಿದ್ದಳು. ಇಡೀ ಹಾಸ್ಟೆಲಿನಲ್ಲಿ ಸಾನ್ಸನ್ ಮಾತ್ರ ಅವಳನ್ನು ಮತ್ತೆ ಮಾತನಾಡಿಸುವ ಧೈರ್ಯ ತೋರಿದ್ದವಳು.  ಪ್ರತಿಭಟನೆಯಲ್ಲಿ ಭಾಗವಹಿಸದ ಕೆಲವೇ ಕೆಲವರಲ್ಲಿ ಸಾನ್ಸನ್  ಕೂಡ ಒಬ್ಬಳಾಗಿದ್ದಳು.  ಸಹಪಾಠಿಗಳೆಲ್ಲ ಪ್ರತಿಭಟನೆಯಲ್ಲಿ ತೊಡಗಿದ್ದರೂ ಸಾನ್ಸನ್  ಮತ್ತು ತ್ಸು ಮಾತ್ರ  ತರಗತಿಗೆ ಹಾಜರಾಗುತ್ತಿದ್ದರು. ಮುಂದೆ ಅಧ್ಯಾಪಕರೂ ತರಗತಿಗೆ ಬರುವದನ್ನು ನಿಲ್ಲಿಸಿದರು.  ಬಹುಶ: ಇದೆ ಸಮಯದಲ್ಲಿ ಇರಬೇಕು , ಅವರ ತಂದೆ ತಾಯಿ ಅಷ್ಟೇಕೆ  ಅವರ ಇಡೀ  ಪಟ್ಟಣವೇ ಇದನ್ನು ನಿರೀಕ್ಷಿಸಿದಂತೆ ಸಾನ್ಸನ್ ಮತ್ತು ತ್ಸು ನಡುವೆ ಪ್ರೀತಿ ಮೊಳೆತಿದ್ದುದು.

ಸಾನ್ಸ್ನನ್ ಗೆ ತಾನು ಮಿನ್ ಜೊತೆಗೆ ಸ್ನೇಹಭಾವದಿಂದ ವರ್ತಿಸಿದ್ದು ಘನ ಕಾರ್ಯವೆಂದು  ಯಾವತ್ತೂ ಅನಿಸಿರಲಿಲ್ಲ. ಅದು ಇನ್ನೊಬ್ಬರಿಗೆ ತಾನು ತೋರಿಸಬಹುದಾದ ಅನುಕಂಪ ಅಷ್ಟೇ.  ಆದರೆ ಅವಳ   ನಿರೀಕ್ಷೆಗೂ ಮೀರಿ ಮಿನ್ ಹತ್ತಿರವಾಗತೊಡಗಿದ್ದಳು. ಮೊದಮೊದಲು ಸಾನ್ಸನ್ ಗೆ ಕಸಿವಿಸಿಯಾಗುತ್ತಿತ್ತು.  ಇವೆಲ್ಲ ಘಟನೆ ನಡೆಯದಿರುತ್ತಿದ್ದರೆ ತಾನು ಮತ್ತು ಮಿನ್  ಸ್ನೇಹಿತೆಯರಾಗಿರುತ್ತಿರಲಿಲ್ಲ. ಹೀಗಾಗಿ ತಾನು ಪರಿಸ್ಥಿತಿಯ ಉಪಯೋಗ ಪಡೆದುಕೊಂಡೆ ಎನ್ನುವ ಭಾವ ಆಗಾಗ ಕಾಡುತ್ತಿತ್ತು.  ಆದರೆ ಹೀಗಾಗಬೇಕು ಎನ್ನುವದೇ ಪೂರ್ವನಿರ್ಧಾರಿತವಾಗಿದ್ದರೆ ಅವಳು ತಾನೇ ಏನು ಮಾಡಿಯಾಳು.?

ಕಾಲೇಜಿನಲ್ಲಿ ಅವರು ಅಂತಿಮ ವರ್ಷದಲ್ಲಿದ್ದಾಗ ಸರ್ಕಾರ ಒಂದು ವಿಚಿತ್ರ ನಿಯಮಾವಳಿಯನ್ನು ಘೋಷಿಸಿತು . ಅದರಂತೆ ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ಮಾಡಬೇಕಾದರೆ ಅಂತಹ ವಿದ್ಯಾರ್ಥಿಗಳ ಯಾರಾದರೊಬ್ಬರು ಸಂಬಂಧಿಕರು ಈ  ಮೊದಲೇ  ಅಮೇರಿಕಾದಲ್ಲಿ ನೆಲೆಸಿರಬೇಕು. ತಲೆ ಬುಡವಿಲ್ಲದ ಈ ನಿಯಮಕ್ಕೆ ಯಾವುದೇ ತಾರ್ಕಿಕ ಹಿನ್ನೆಲೆ ಇಲ್ಲದಿದ್ದರೂ ಸರ್ಕಾರಿ ನಿಯಮ ಎಂದ ಮೇಲೆ ಪಾಲಿಸಲೇಬೇಕು. ಅಮೆರಿಕಾಗೆ  ಓದಲು ಹೋಗಬೇಕು ಎನ್ನುವ ಮಿನ್  ಳ ಕನಸು  ಕ್ಷಣ ಮಾತ್ರದಲ್ಲಿ ನುಚ್ಚು ನೂರಾಯಿತು.  ಮಿನ್ ಳ ವಿಷಾದ ತುಂಬಿದ ಮುಖ ನೋಡಿ ಹೇಗಾದರೂ ಮಾಡಿ ಈ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಸಾನ್ಸನ್ ನಿರ್ಧರಿಸಿದಳು.

"ನಿನಗೇನು ತಲೆ ಕೆಟ್ಟಿದೆಯಾ ?"  ಸಾನ್ಸನ್ ತನ್ನ ಯೋಜನೆಯನ್ನು  ವಿವರಿಸಿದಾಗ ತ್ಸು  ಉದ್ಗರಿಸಿದ. ಅವಳ ಯೋಜನೆಯಂತೆ ತ್ಸು ಮೊದಲು ಅಮೇರಿಕಾದ ಯೂನಿವರ್ಸಿಟಿಗೆ ಅರ್ಜಿ ಹಾಕಿ ಸೇರುವದು ನಂತರ ತನ್ನ ಹೆಂಡತಿ ಎಂದು ಮಿನ್ ಳನ್ನು ಕರೆಯಿಸಿಕೊಳ್ಳುವದು.
 " ನನಗೆ ಅಮೇರಿಕಾದಲ್ಲಿ ಯಾವ ಸಂಬಂಧಿಕರೂ ಇಲ್ಲ" ತ್ಸು  ವಾದಿಸಿದ.
"ನಿನ್ನ ಅಜ್ಜನ ತಮ್ಮ ಯುದ್ಧದ ನಂತರ  ತೈವಾನ್ ಗೆ ಹೋಗಿಲ್ಲವೇ ? ಬಹುಶ: ಅವನು ಅಲ್ಲಿಂದ ಅಮೆರಿಕಾಕ್ಕೆ ಹೋಗಿರಬಹುದು. ಇಲ್ಲಿ ಕೇಳು , ಯಾವ ಸರ್ಕಾರಿ ಅಧಿಕಾರಿಯೂ ಅಮೆರಿಕಾಗೆ ಬಂದು ನಿನ್ನ ಸಂಬಂಧಿಕರು ಇದ್ದಾರೆಯೇ ಎಂದು ತಪಾಸಣೆ ಮಾಡುವದಿಲ್ಲ. ನಿನ್ನ ಅಜ್ಜನ ತಮ್ಮ ಅಮೇರಿಕಾದಲ್ಲಿ ಇದ್ದಾನೆ ಎನ್ನುವ ಒಂದು ಸರ್ಟಿಫಿಕೇಟ್ ಸಿಕ್ಕಿದರೆ ಸಾಕು . . "
"ಯಾರು ಅಂಥ ಸರ್ಟಿಫಿಕೇಟ್ ಕೊಡುತ್ತಾರೆ ?"
"ಆ ಕೆಲಸ ನನಗೆ ಬಿಡು. ನೀನು ಯೂನಿವರ್ಸಿಟಿಗೆ ಅರ್ಜಿ ಹಾಕುವದನ್ನು ಯೋಚಿಸು. " ಅವಳು ತ್ಸುನ ಕಣ್ಣಿನಲ್ಲಿ ಹಿಂಜರಿತವನ್ನು ಅದರ ಹಿಂದೆಯೇ  ಮಿಂಚಿನಂತೆ ಹಾದು  ಹೋದ ಭರವಸೆಯನ್ನು ಗಮನಿಸದಳು. "ನಿನಗೆ ಅಮೆರಿಕಾಗೆ ಹೋಗಬೇಕು ಎನ್ನುವ ಕನಸಿಲ್ಲವೇ? ಅಲ್ಲಿ ಚೆನ್ನಾಗಿ ಓದಿದರೆ ಇಲ್ಲಿನಂತೆ ಯಾವುದೋ ಬೇಜಾರಿನ  ಕೆಲಸವನ್ನು ಮಾಡುತ್ತಾ ಕಷ್ಟ ಪಡುವ ಅಗತ್ಯವಿಲ್ಲ. ಅಲ್ಲಿ ಯಾರೂ ನೀನು  ಸಣ್ಣ ಹಳ್ಳಿಯಿಂದ ಬಂದವನು, ಚಿಕ್ಕ ಪಟ್ಟಣದವನು ಎಂದು ಅಳೆಯುವದಿಲ್ಲ. "
"ಆದರೆ ಮಿನ್ ಳನ್ನು ಮದುವೆಯಾಗುವದು ಎಂದರೆ ?"
"ಯಾಕಿಲ್ಲ?" ಸಾನ್ಸನ್ ನುಡಿದಳು "ನೋಡು ನಾವು  ಇಬ್ಬರಿದ್ದೇವೆ. ನಿನಗೆ ನಾನು ನನಗೆ ನೀನು. ಅವಳಿಗೆ  ಯಾರೂ ಇಲ್ಲ.  ಅವಳ ಸಿಟಿ ಸ್ನೇಹಿತರೆಲ್ಲ  ಅವಳ ಕಷ್ಟಕಾಲದಲ್ಲಿ ದೂರವಾಗಿದ್ದಾರೆ.  ಅಲ್ಲದೆ ಇದು  ತಾತ್ಕಾಲಿಕ  ಅಷ್ಟೇ.
ತ್ಸು ಅವಳು ಹೇಳಿದಂತೆ ಪಾಲಿಸಲು ನಿರ್ಧರಿಸಿದ. ಸಾನ್ಸನ್ ಅವನನ್ನು ಇಷ್ಟಪಡಲು ಇದೂ ಒಂದು ಕಾರಣ - ಅವನಿಗೆ  ತನಗಿಂತ ಹೆಚ್ಚಾಗಿ ಸಾನ್ಸನ್ ಳ  ನಿರ್ಧಾರದ ಮೇಲೆ  ಯಾವಾಗಲೂ ಹೆಚ್ಚು ನಂಬಿಕೆ.  ಸಾನ್ಸನ್ ಳಿಗೆ  ಮಿನ್ ಳನ್ನು ಒಪ್ಪಿಸುವದು ಕಷ್ಟವಾಗಲಿಲ್ಲ.  ಹೇಗಿದ್ದರೂ ಅಮೇರಿಕ ಸೇರಬೇಕು  ಎನ್ನುವದು ಮೂವರ ಕನಸಾಗಿತ್ತು. ಅವಳು ತನ್ನ ಊರಿಗೆ ಹೋಗಿ ಲಂಚ ಕೊಟ್ಟು , ಕಾಡಿ ಬೇಡಿ ತ್ಸು ನ ಅಜ್ಜನ ತಮ್ಮ ಅಮೇರಿಕಾದಲ್ಲಿ ಇದ್ದಾನೆ ಎನ್ನುವದನ್ನು ದೃಢಪಡಿಸುವ  ಹಾಗೆ ಒಂದು ಸರ್ಟಿಫಿಕೇಟ್ ತಂದು ಕೊಟ್ಟಳು.  ಯಾವುದೇ ಅಡಚಣೆ ಇಲ್ಲದೆ ಅವರ ಎಲ್ಲ ಯೋಜನೆಗಳು ಪೂರ್ಣಗೊಂಡವು. ಪೆನ್ಸಿಲ್ವೇನಿಯಾದ ಕಾಲೇಜೊಂದರಲ್ಲಿ ತ್ಸು ಗೆ ಅಡ್ಮಿಷನ್ ಸಿಕ್ಕಿತು. ಕೆಲವೇ ದಿನಗಳಲ್ಲಿ ತ್ಸು ನ ಹೆಂಡತಿ ಎನ್ನುವ ಸರ್ಟಿಫಿಕೇಟಿನೊಡನೆ ಮಿನ್ ಹೊರಟಳು.  ಈ ಯೋಜನೆಯನ್ನು ಮತ್ತು ಇದರ ಅಡಿಪಾಯವಾಗಿ ನಿಂತಿದ್ದ ಪರಸ್ಪರರಲ್ಲಿದ್ದ ನಂಬಿಕೆಯನ್ನು ಇತರರಿಗೆ ವಿವರಿಸುವದು ಕಷ್ಟಕರವಾದ್ದರಿಂದ ಅವರು ಅದನ್ನು ಯಾರಿಗೂ ವಿವರಿಸುವ ಗೋಜಿಗೆ ಹೋಗಿಲ್ಲ.  ಈ ಪೂರ್ವನಿರ್ಧಾರಿತ ಯೋಜನೆ ಬೇರೆಡೆಗೆ ಸಾಗುವದು ಎನ್ನುವ ಯಾವ  ಸಂಶಯವೂ ಅವರಿಗೆ ಇರಲಿಲ್ಲ.  ಅವರ ಪರಸ್ಪರ ನಿರ್ಧರಿಸಿದಂತೆ   ಒಂದು ವರ್ಷವಾಗುವಷ್ಟರಲ್ಲಿ ಮಿನ್ ಬೇರೊಂದು ಕೆಲಸವನ್ನೋ , ಓದನ್ನೋ ನೋಡಿಕೊಳ್ಳುವದು; ತ್ಸು ಅವಳಿಗೆ ವಿಚ್ಛೇದನ ಕೊಡುವದು ಮತ್ತು ಅಲ್ಲಿಯವರೆಗೆ ಸಾನ್ಸನ ತ್ಸುಗಾಗಿ ಕಾಯುವದು .

ಅವರು ಅಮೆರಿಕಾಗೆ ತೆರಳುವ ಮೊದಲು ತಾನು ತ್ಸು ಜೊತೆಗೆ ದೈಹಿಕ ಸಂಪರ್ಕ ಬೆಳೆಸಬೇಕು ಎನ್ನುವ ವಿಚಾರ ಯಾವತ್ತೂ ಸಾನ್ಸನ್ ಳ ತಲೆಯಲ್ಲಿ ಬಂದಿರಲಿಲ್ಲ. ಹಾಗೆ ನೋಡಿದರೆ ಈ ವಿಷಯವಾಗಿ ತ್ಸುನನ್ನು  ಅವಳೇ ದೂರ ಇಟ್ಟಿದ್ದಳು. ಅವಳ ತಲೆಯಲ್ಲಿ ಯಾವತ್ತೋ   ಓದಿದ್ದ "ವುಮನ್ ಇನ್ ಲವ್ " ಪುಸ್ತಕದ ಸಾಲುಗಳು ಅಚ್ಚಳಿಯದಂತೆ ಕೂತಿದ್ದವು. ಪುಸ್ತಕದಲ್ಲಿ  ಹುಡುಗಿಯೊಬ್ಬಳು ಯುದ್ಧಕ್ಕೆ ಹೊರಟಿರುವ ತನ್ನ ಪ್ರಿಯಕರನ ಜೊತೆಗೆ ಮಲಗುವದನ್ನು ನಿರಾಕರಿಸುತ್ತಾಳೆ.  ಮುಂದೆ ಯುದ್ಧದಲ್ಲಿ  ಅವನು ಸಾವನ್ನು ಪ್ರತಿ ದಿನ ಎದುರು ನೋಡುತ್ತಿರವಾಗ  ಹಳೆಯ ನೆನಪಿನಿಂದಾಗಿ ದೇಹದ ಹಸಿವೆಯನ್ನು ತೀರಿಸಿಕೊಳ್ಳುವದು ಮಾತ್ರ  ಅವನ ಗುರಿಯಾಗಿಬಿಟ್ಟರೆ ಎನ್ನುವ ಭಯ ಅವಳನ್ನು ಕಾಡಿತ್ತು. ಆದರೆ ಈಗ ತ್ಸು ಹೊರಟಿರುವದು ಯುದ್ಧಕ್ಕಲ್ಲ. ಬದಲಾಗಿ ಸುಂದರ ಯುವತಿಯೊಟ್ಟಿಗೆ ಗಂಡನಂತೆ ವೈವಾಹಿಕ ಬದುಕನ್ನು ಬದುಕುತ್ತಿರುವ ನಾಟಕಕ್ಕೆ. ಗಂಡಸೊಬ್ಬನಿಗೆ ಅಪರಿಚಿತ ದೇಶದಲ್ಲಿ ಕೇವಲ ಒಂದು ರೂಮಿನ ಆಚೆಯಲ್ಲಿ ತನ್ನೊಟ್ಟಿಗೆ ಬದುಕುತ್ತಿರುವ , ತಿನ್ನುತ್ತಿರುವ , ಕುಡಿಯುತ್ತಿರುವ , ಮಲಗುತ್ತಿರುವ,  ಸುಂದರ ಯುವತಿಯೊಬ್ಬಳ ಮೇಲೆ ಪ್ರೇಮ ಅಥವಾ ಬಯಕೆ  ಹುಟ್ಟದಿರಲು ಸಾಧ್ಯವೇ?  ಪ್ರಶ್ನೆ ಯಾವತ್ತೂ ಉದ್ಭವವಾಗಿರಲಿಲ್ಲ.

ಮೊತ್ತ ಮೊದಲ ಬಾರಿಗೆ ಸಾನ್ಸನ್ ಳ ಕಣ್ಣು ಮುಂದೆ ತ್ಸು ಮತ್ತು ಮಿನ್  ದೇಹಗಳು ಒಂದಾದ ಹಾಗೆ ಕಾಣಿಸುವ ಚಿತ್ರಗಳು ಸುಳಿಯತೊಡಗಿದ್ದು , ತ್ಸು ಅವಳಿಗೆ ಒಂದು ಸಣ್ಣ ಪತ್ರದ  ಮುಖೇನ  ತಾನು ಮತ್ತು ಮಿನ್ ಗಂಡ ಹೆಂಡತಿಯರಾಗಿಯೇ ಮುಂದುವರೆಯಲು ನಿರ್ಧರಿಸಿದ್ದೇವೆ ಎಂದು ತಿಳಿಸಿದಾಗ.  ಅದೇ ಕೊನೆಯ ಪತ್ರ , ಅದಾದ ಮೇಲೆ ಅವಳಿಗೆ ಯಾರೂ ಪತ್ರ ಬರೆಯಲಿಲ್ಲ. ಸಿಗಲಾರದ ಉತ್ತರವೊಂದು ಸಿಗಬಹುದೇನೋ ಎನ್ನುವ ನಿರೀಕ್ಷೆಯಲ್ಲಿ,  ಅವಳ ಕಲ್ಪನೆಯಲ್ಲಿ  ಅವರಿಬ್ಬರನ್ನು ಬೆತ್ತಲೆಯಾಗಿ ಹಾಸಿಗೆಯ ಮೇಲೆ ಮಲಗಿಸಿ ಅವರ ಉನ್ಮತ್ತತೆಯನ್ನು ಅಳೆಯುವ ಪ್ರಯತ್ನ ಮಾಡಿದ್ದಳು.  ಮಿನ್ ಳ ನುಣುಪಾದ ಕೂದಲು ತ್ಸುನ ಬರಿ ದೇಹದ ಮೇಲೆಲ್ಲಾ ಹರಡಿರುವಂತೆ, ತ್ಸು ತನ್ನ ಮುಖವನ್ನು ಮಿನ್ ಳ ಎದೆಯಲ್ಲೂ ಹುದುಗಿಸಿರುವಂತೆ,  ಮಿನ್ ಳ ಎದೆಯತ್ತ    ಕುರೂಪಿಯಾದ ಹಂದಿಮರಿಯೊಂದು ನುಗ್ಗುತ್ತಿರುವಂತೆ  ಭಾಸವಾಗಿ ಅವಳು ಬೆಚ್ಚಿ ಬಿದ್ದಳು. ಅವಳು ಹೆಚ್ಚು ಹೆಚ್ಚು ಯೋಚಿಸಿದಂತೆಲ್ಲ ಅವರಿಬ್ಬರೂ ಇನ್ನೂ ಅಸಂಗತವಾಗಿ ತೋರುತ್ತಿದ್ದರು.  ಬಹುಶ: ಇದು ತಪ್ಪೇನೋ , ಆದರೆ ಮಿನ್ ಳ ಅಸಾಧಾರಣ ರೂಪಿಗೂ , ತ್ಸು ನ ಸಾಧಾರಣ ಮೈಕಟ್ಟಿಗೂ ತಾಳಮೇಳವಿರಲಿಲ್ಲ. ಅವರಿಬ್ಬರೂ ಪರಸ್ಪರರನ್ನು ಇಷ್ಟಪಟ್ಟಾರು ಎನ್ನುವ ಸಣ್ಣ ಸಂಶಯ ಸವ ಅವಳಿಗೆ ಯಾವತ್ತೂ ಇರಲಿಲ್ಲ.  ಮಿನ್ ಅತ್ಯಂತ ಆಕರ್ಷಕ ಯುವತಿ.  ಅವಳಿಗೆ ಹೋಲಿಸಿದರೆ ದೊಡ್ಡ ತಲೆಯ, ಬಡಕಲು ಮೈಕಟ್ಟಿನ ತ್ಸು ಯಾವ ಕಾರಣಕ್ಕೂ ತಾಳೆಯಾಗಲಾರ.    ಅವಳಿಗೆ ತನ್ನ ಮತ್ತು ತ್ಸು ನ ನಡುವಿನ ಪ್ರೀತಿಯಲ್ಲಿ ಅಗಾಧ ನಂಬಿಕೆಯಿತ್ತು ಮತ್ತು ತಮ್ಮಿಬ್ಬರ ಸ್ನೇಹಿತೆಯ ಬದುಕನ್ನು ರೂಪಿಸಲು ತಾವಿಬ್ಬರು ಮಾಡಬೇಕಿರುವ ತಾತ್ಕಾಲಿಕ ತ್ಯಾಗದ ಕುರಿತಾಗಿಯೂ ಅರಿವಿತ್ತು. ಆದರೆ ಬದುಕಿನ ವಿವರಿಸಲಾಗದ ಯಾವುದೋ ತಿರುವಿನಲ್ಲಿ ತ್ಸು ಮತ್ತು ಮಿನ್  ಈಗ ಪರಸ್ಪರರನ್ನು ಪ್ರೀತಿಸುತ್ತಿದ್ದರು ಮತ್ತು ಸಾನ್ಸನ್ ಳ ಕಲ್ಪನೆಯಲ್ಲಿ ಈಗ ತಾಳಮೇಳವಿಲ್ಲದ ದೈಹಿಕ ಸುಖವನ್ನು ಅವರು ಅನುಭವಿಸಲು ಪ್ರಯತ್ನಿಸುತ್ತಿದ್ದರು. ಕೆಲವೊಮ್ಮೆ ಅವಳು ಮಿನ್  ಸ್ಥಾನದಲ್ಲಿ ತನ್ನನ್ನು ಊಹಿಸಿಕೊಳ್ಳುತ್ತಿದ್ದಳು. ಅವಳ ಕಲ್ಪನೆಯಲ್ಲಿ ಅವಳು ಮತ್ತು ತ್ಸು ಒಬ್ಬರೊಬ್ಬರಿಗೆ ಹೇಳಿ ಮಾಡಿಸಿದ ಜೋಡಿಯಾಗಿದ್ದರು. ಬಾಲ್ಯದಿಂದಲೂ ತ್ಸು ಮತ್ತು ಸಾನ್ಸನ್ ಆಡುತ್ತ ಬೆಳೆದವರು. ಅವಳ ಅಮ್ಮನ ಟೀ ಗಾಡಿಯ ಪಕ್ಕದಲ್ಲೇ ತ್ಸು ನ ಅಪ್ಪನ ಹಣ್ಣಿನ ಗಾಡಿಯಿತ್ತು. ಪ್ರತಿ ಬಾರಿಯೂ ಕಲ್ಪನೆಯಲ್ಲಿ ಅವನೊಟ್ಟಿಗೆ ಅತ್ಯ೦ತ ಸುಂದರ ಕ್ಷಣಗಳನ್ನು ಕಳೆದ ಅವಳು ಕಲ್ಪನೆಯಿಂದ ಹೊರ ಬಂದಾಗ ನೋವಿನಿಂದ ತತ್ತರಿಸುತ್ತಿದ್ದಳು.

ಬೆಂಬಿಡದೆ ಕಾಡುವ ಈ ಕಲ್ಪನೆಗಳಿಂದ ತಪ್ಪಿಸಿಕೊಳ್ಳುವದಕ್ಕೋಸ್ಕರ   ಸಾನ್ಸನ್ ಸೂರ್ಯಕಾಂತಿ ಬೀಜವನ್ನು ತಿನ್ನಲು ಶುರುಮಾಡಿದ್ದಳು.  ಪ್ರತಿ ರಾತ್ರಿಯೂ ತಾಸುಗಟ್ಟಲೆ ಒಬ್ಬಳೇ ಕುಳಿತು ಮೌನವಾಗಿ ಒಂದೊಂದಾಗಿ ಸೂರ್ಯಕಾಂತಿ ಬೀಜದ ಸಿಪ್ಪೆ ತೆಗೆಯುತ್ತಿದ್ದಳು. ಮರುದಿನ ಎದ್ದ ಮೇಲೂ ಅವಳು ಮಾಡುತ್ತಿದ್ದ ಮೊದಲ ಕೆಲಸವೆಂದರೆ ಸೂರ್ಯಕಾಂತಿ ಬೀಜವಿರುವ ಡಬ್ಬಿಗೆ  ಕೈ ಹಾಕುವದು.  ಸೂರ್ಯಕಾಂತಿ ಬೀಜದ ಸಿಪ್ಪೆಯೊಡೆಯುವಾಗಿನ ಶಬ್ದ ಅವಳ ಕಿವಿಯನ್ನು ಹಾದು  ಮೆದುಳಿಗೆ ತಲುಪಿದಾಗ ಅವಳ ಕಲ್ಪನೆಗಳು ಸಾವಕಾಶವಾಗಿ  ಕರಗಿ ತ್ಸು ಮತ್ತು ಮಿನ್ ಳ ಬೆತ್ತಲೆ ಮೈಗೆ ಒಂದೊಂದಾಗಿ ಬಟ್ಟೆಗಳು ಮರಳಿ ಬರುತ್ತಿದ್ದವು ಮತ್ತು  ಅವರಿಬ್ಬರೂ ಅವಳಿಗೆ ಕೊಟ್ಟ ಮಾತನ್ನು ಮುರಿದಿದ್ದಾರೆ ಎನ್ನುವ ಸದಾಕಾಲದ ನೋವು ಅರ್ಥವನ್ನು ಕಳೆದುಕೊಳ್ಳುತ್ತಿತ್ತು.  ಸಾನ್ಸನ್ ಳ ಬಳಿಗೆ ಮರಳಿ ಬರುವದರ ಬಗ್ಗೆ ಅವಳಿಗೆ ಕೊಟ್ಟ ಭಾಷೆಯೊಂದಲೇ ಅಲ್ಲ , ಅವರಿಬ್ಬರೂ ಪರಸ್ಪರಿಗೆ ಹಾಕಿಕೊಂಡ ಆಣೆಗೆ ಈಗಲೂ ಅರ್ಥವಿದೆಯೇ ಎಂದು ಅವಳು ಯೋಚಿಸುತ್ತಿದ್ದಳು. ಅವರಿಬ್ಬರನ್ನೂ ಗಂಡ ಹೆಂಡತಿಯರನ್ನಾಗಿ ಮಾಡಿದ್ದು ತಾನೇ ಅಲ್ಲವೇ ? ಈಗ ಅವರಿಗೆ ಶಾಪ ಹಾಕುತ್ತಿರುವದು ತಾನೇ. ಕೈ ಮತ್ತೆ ಸೂರ್ಯಕಾಂತಿ ಬೀಜದತ್ತ ಚಾಚುತ್ತಿದ್ದವು.

ಇಷ್ಟೆಲ್ಲ ನಡೆದು ಹತ್ತು ವರ್ಷಗಳಾದ ಮೇಲೆ ಅವರಿಬ್ಬರೂ ವಿಚ್ಛೇದನ ಪಡೆಯಲು ಕಾರಣಗಳೇನಿರಬಹುದು?  ಹತ್ತು ವರ್ಷಗಳಲ್ಲಿ ಅವರಿಗೆ ಒಮ್ಮೆಯೂ ತನ್ನ  ಬಗ್ಗೆ ಅರಿವಾಗಲೇ ಇಲ್ಲವೇ ?

ಸೂರ್ಯಕಾಂತಿ ಬೀಜಗಳೆಲ್ಲ ಖಾಲಿಯಾದ ಮೇಲೆ ಅವಳು ಅಮ್ಮನನ್ನು ಭೇಟಿಯಾಗಿ ತ್ಸು ನ ಡೈವೋರ್ಸ್ ಬಗ್ಗೆ ಕೇಳಲು ನಿರ್ಧರಿಸಿದಳು.  ರೈಲು  ನಿಲ್ದಾಣದ ಬಳಿಯಿರುವ ಮಾರ್ಕೆಟ್ ಸಂಪೂರ್ಣ ನಗರಕ್ಕೆ ಒಂದೇ ಒಂದು  ಮಾರ್ಕೆಟ್. ಬೀಜಿಂಗ್ ಕಡೆಯಿಂದ ದಕ್ಷಿಣಕ್ಕೆ ಹೊರಡುವ ರೈಲುಗಳು ಕೆಲವೊಮ್ಮೆ ಇಲ್ಲಿ ಹತ್ತು ನಿಮಿಷ ನಿಲ್ಲುತ್ತವೆ. ಈ ಕ್ಷಣಕ್ಕಾಗಿಯೇ. ಆಸುಪಾಸಿನ ಬಹುತೇಕ ವ್ಯಾಪಾರಿಗಳು ಕಾಯುತ್ತಿದ್ದರು.  

ಸಾನ್ಸನ್ ಬಂದಾಗ ಆಗ ತಾನೇ ಮಧ್ಯಾಹ್ನದ ರೈಲು ಬಂದು ನಿಂತಿತ್ತು. ಕೆಲ ಜನರು ಮೈ ಮುರಿಯುತ್ತ ಹೊರ ಬಂದರು. ನಂತರ ಇನ್ನಷ್ಟು ಜನ. ಸಾನ್ಸನ್ ಅವಳಮ್ಮನನ್ನು ಗಮನಿಸುತ್ತಾ ನಿ೦ತಳು - ಗಾಡಿಯ ಮೇಲಿದ್ದ ಪಾತ್ರೆಯನ್ನು ಬಡಿಯುತ್ತ  ಅವಳ ಅಮ್ಮ "ಬನ್ನಿ, ಬನ್ನಿ.  ಬಿಸಿ, ಬಿಸಿ ಮೊಟ್ಟೆ , ಜಗತ್ತಿನ ಅತ್ಯಂತ  ರುಚಿ, ರುಚಿ ಮೊಟ್ಟೆ " ಕೂಗುತ್ತಿದ್ದಳು.

ಒಬ್ಬಳು ಹೆಂಗಸು ಗಾಡಿಯ ಬಳಿ ಬಂದು ನಿಂತು ಪಾತ್ರೆಯ ಮುಚ್ಚಳ ತೆಗೆದು ನೋಡಿದಳು. . ಅವಳೊಟ್ಟಿಗಿರುವ ಮಗು ಪಾತ್ರೆಯೊಳಗಿದ್ದ ದೊಡ್ಡ ಮೊಟ್ಟೆಯತ್ತ ಕೈ ತೋರಿಸಿತು. ಟೀ ಎಲೆ, ಮಸಾಲೆ  ಮತ್ತು ಸೋಯಾ ಸಾಸ್ ಪರಿಮಳಕ್ಕೆ ಇನ್ನಷ್ಟು ಜನ ಮೂಗರಳಿಸಿದರು. ಕೆಲವರು ಹತ್ತಿರ ಬಂದು ಕೊಳ್ಳುತ್ತಿದ್ದರು , ಇನ್ನು ಕೆಲವರು ಜಗತ್ತಿನ ಅತ್ಯಂತ ರುಚಿಕರವಾದ  ಮೊಟ್ಟೆಯನ್ನು  ತಿನ್ನುವ ಅವಕಾಶವನ್ನು ಬಿಡುತ್ತಿದ್ದೇವೆ ಎಂದು ಅರಿಯದೆಯೇ ಇನ್ನಿತರ ಮೊಟ್ಟೆ ವ್ಯಾಪಾರಿಗಳ ಬಳಿ ಸಾಗುತ್ತಿದ್ದರು.  ಸಾನ್ಸನ್ ಚಿಕ್ಕವಳಿದ್ದಾಗ ಅವಳಮ್ಮನ ಬಳಿ ಮೊಟ್ಟೆ ಕೊಳ್ಳದವರನ್ನು ನೋಡಿದಾಗ  ಅವಳಿಗೆ  ಅಸಾಧ್ಯ ಕೋಪ ಬರುತ್ತಿತ್ತು - ಬೇರೆ ಅಂಗಡಿಯವರು ಜಿಪುಣರು - ಅವಳ ಅಮ್ಮನಂತೆ ಟೀ ಗೆ ಸಾಕಷ್ಟು  ಎಲೆಯನ್ನು ಮತ್ತು ಮೊಟ್ಟೆಗೆ ಮಸಾಲೆ ಪದಾರ್ಥ ಹಾಕುತ್ತಿರಲಿಲ್ಲ. ಆದರೆ ಸಾನ್ಸನ್ ದೊಡ್ಡವಳಾದಂತೆಲ್ಲ ಅವಳ  ಕೋಪ ಕ್ರಮೇಣ ಅವಳಮ್ಮನ ಕಡೆಗೆ ತಿರುಗಿತ್ತು. ಅವಳಮ್ಮನ ಬಳಿ ಮೊಟ್ಟೆ ಕೊಳ್ಳುತ್ತಿದ್ದ ಆ ಎಲ್ಲ ಅಪರಿಚಿತ ಪ್ರಯಾಣಿಕರು ಬಹುತೇಕ  ಯಾವತ್ತೂ ಮರಳಿ ಬರುತ್ತಿರಲಿಲ್ಲ. ಅವಳಮ್ಮನನ್ನಾಗಲಿ ಮೊಟ್ಟೆಯನ್ನಾಗಲಿ ನೆನಪಿನಲ್ಲಿಟ್ಟುಕೊಳ್ಳುತ್ತಿರಲಿಲ್ಲ.  ಅವಳಮ್ಮ ಬೇರೆಲ್ಲರಿಗಿಂತ ಹೆಚ್ಚು ಖರ್ಚು ಮಾಡಿ ಟೀ ಎಲೆ, ಮಸಾಲೆ ಪದಾರ್ಥ ಮತ್ತು ಮೊಟ್ಟೆ ಕೊಳ್ಳುತ್ತಾಳೆ ಎನ್ನುವದನ್ನು ಅವರು ಯಾವತ್ತೂ ಗಮನಿಸುತ್ತಿರಲಿಲ್ಲ.

 
 ರೈಲು ಹೋದ ನಂತರ ಸಾನ್ಸನ್ ಒಂದು ಇಟ್ಟಿಗೆಯನ್ನು ಹುಡುಕಿ ಅಮ್ಮನ ಗಾಡಿಯ ಬಳಿ ಹಾಕಿಕೊಂಡು ಅದರ ಮೇಲೆ  ಕುಳಿತಳು. ಅವಳಮ್ಮ ಇನ್ನೊಂದಿಷ್ಟು ಮಸಾಲೆಯನ್ನು ಮತ್ತು ಮೊಟ್ಟೆಯನ್ನು ಪಾತ್ರೆಗೆ ಹಾಕುವದನ್ನು ಗಮನಿಸಿ . "ಇಷ್ಟೊಂದು ಬೆಲೆಯ ಮಸಾಲೆಯನ್ನು ಹೀಗೆ ಹಾಕುವದು ಸುಮ್ಮನೆ ದುಡ್ಡು ಖರ್ಚಿಗೆ ಅಲ್ಲವೇ ?"  ಎಂದು ಅಮ್ಮನನ್ನು ಪ್ರಶ್ನಿಸಿದಳು.
"ಮೊಟ್ಟೆಯನ್ನು ಹೇಗೆ ಬೇಯಿಸುವದು ಎಂದು ನೀನು ನನಗೆ ಉಪದೇಶ ಕೊಡಬೇಕಿಲ್ಲ. ಕಳೆದ ನಲವತ್ತು ವರ್ಷಗಳಿಂದ ನಾನು ಇದನ್ನೇ ಮಾಡುತ್ತಿರುವದು ಮತ್ತು ಇದೆ ಮೊಟ್ಟೆಯನ್ನು ನನಗೆ ತಿಳಿದ ಹಾಗೆ ಬೇಯಿಸುವ ಕೆಲಸದಿಂದ ನಿನ್ನನ್ನು ಬೆಳೆಸಿದ್ದು "
"ಹಾಗಲ್ಲ, ನಿನ್ನ ಮೊಟ್ಟೆ ಚೆನ್ನಾಗಿದೆ ಎಂದು ಜನಕ್ಕೆ ತಿಳಿದರೂ  ಅವರು  ಕೇವಲ ಮೊಟ್ಟೆಗೋಸ್ಕರ ಮರಳಿ ಇಲ್ಲಿಗೆ ಬರುವ ಸಂಭವ ಕಡಿಮೆ "
"ಅದಕ್ಕೆ  ಒಂದು ಸಲವಾದರೂ  ಅವರಿಗೆ ಜಗತ್ತಿನಲ್ಲೇ ಅತ್ಯಂತ ರುಚಿಯಾದ ಮೊಟ್ಟೆಯನ್ನು ಕೊಡುವ ತಿನ್ನಲು ಅವಕಾಶವೊಂದನ್ನು ಯಾಕೆ ಕೊಡಬಾರದು ?" ಅವಳಮ್ಮ ತುಸು ಗಟ್ಟಿಯಾಗಿಯೇ ನುಡಿದಳು. ಅಕ್ಕ ಪಕ್ಕದ ಕೆಲ ವ್ಯಾಪಾರಿಗಳು ಕಟ್ಟು  ತಿರುಗಿಸಿ, ಒಬ್ಬರೊಬ್ಬರಿಗೆ ಕಣ್ಣು ಹೊಡೆಯುತ್ತ  ಇವರನ್ನ  ನೋಡಿದರು. ಮಾರ್ಕೆಟಿನ ತುಂಬ ಕಣ್ಣು ಮತ್ತು ಕಿವಿಗಳೇ ತುಂಬಿದ್ದವು. ಬಹುಶ: ಸಂಜೆಯ ಹೊತ್ತಿಗೆ ಇಡೀ ಮಾರ್ಕೆಟಿಗೆ ಸಾನ್ಸನ್  ಮತ್ತು  ಅವಳಮ್ಮ ನಡುವೆ ವಾಗ್ವಾದ ನಡೆದಿದೆ ಎನ್ನುವದು ತಿಳಿಯುತ್ತದೆ.  ವಯಸ್ಸಾದ ಅಮ್ಮನಿಗೆ ಜೋರಾಗಿ ಮಾತನಾಡಿದ ಸಾನ್ಸನ್ ಬಗ್ಗೆ ಪ್ರತಿ ಮನೆಯಲ್ಲೂ ಚರ್ಚೆಯಾಗುತ್ತದೆ.  ಮಕ್ಕಳಿಗೆ ಅವಳಂತೆ ಆಗಬಾರದು ಎನ್ನುವ ಕಿವಿಮಾತು ಹೇಳಲಾಗುತ್ತದೆ.  ಅಮ್ಮನ ಮಾತನ್ನು ಕೇಳದ, ಅಮ್ಮನ ಜೊತೆಗೆ ಇರದೇ ಬೇರೆ ರೂಮು ಮಾಡಿಕೊಂಡಿರುವ ಅವಳ೦ತೆ  ಯಾವತ್ತೂ ವರ್ತಿಸಬಾರದು ಎಂದು ಹೇಳಲಾಗುತ್ತದೆ.

"ಅಮ್ಮ ನೀನ್ಯಾಕೆ ಈ ಕೆಲಸ  ಬಿಟ್ಟು ಆರಾಮವಾಗಿ ಇರಬಾರದು ?" ಸಾನ್ಸನ್ ತಗ್ಗಿದ ದನಿಯಲ್ಲಿ ಕೇಳಿದಳು.
"ನನಗೆ ಯಾರು ಊಟ ಹಾಕುತ್ತಾರೆ ? ವಯಸ್ಸಾದ ಬಡ ವಿಧವೆ "
"ನಾನು "
"ನೀನು? ನಿನಗೆ ನಿನ್ನನ್ನೇ ಹೇಗೆ  ನೋಡಿಕೊಳ್ಳುವದು ಎಂದು ಇನ್ನೂ ತಿಳಿದಿಲ್ಲ." ಅವಳಮ್ಮ ಹೇಳಿದಳು " ನಿನಗೆ ತ್ಸು ಥರ ಒಬ್ಬ ಜೊತೆಗಾರ ಬೇಕು "

ಸಾನ್ಸನ್ ನೆಲದ ಮೇಲೆ ಅಲುಗಾಡುತ್ತಿರುವ ತನ್ನ ನೆರಳನ್ನು ದಿಟ್ಟಿಸಿದಳು. ಅವಳ ಚಪ್ಪಲಿಯ ಬುಡದಲ್ಲಿ  ಮೊಟ್ಟೆಯ ಚಿಪ್ಪಿನ ಒಡಕಲುಗಳು ಅಲ್ಲಲ್ಲಿ ಬಿದ್ದಿದ್ದವು.  ಬಾಲ್ಯದಲ್ಲಿ ಅವಳು ಮತ್ತು  ಪಕ್ಕದ ಅಂಗಡಿಯಲ್ಲಿ ಹಣ್ಣುಗಳನ್ನು ಮಾರುವವನ ಮಗ ತ್ಸು ನ ಜೊತೆಗೆ ಆಟವಾಡಲು ಪ್ರಾರಂಭಿಸುವ ಮೊದಲು ಮೊಟ್ಟೆಯ ಚಿಪ್ಪುಗಳು ಮಾತ್ರ ಅವಳ ಆಟಿಕೆಯಾಗಿದ್ದವು.  ಈಗ ತ್ಸು ನ ಅಪ್ಪ ಅಮ್ಮ ನಿವೃತ್ತರಾಗಿದ್ದಾರೆ. ತ್ಸು ಅವರಿಗೆಂದು ಖರೀದಿಸಿಕೊಟ್ಟಿದ್ದ ಎರಡು ಬೆಡ್ರೂಮಿನ ದೊಡ್ಡ ಮನೆಯಲ್ಲಿದ್ದಾರೆ. ಈಗ ಪಕ್ಕದ ಅಂಗಡಿಯಲ್ಲಿ ಸಿಗರೇಟು ಮತ್ತು ಲೈಟರ್ ಮಾರಲಾಗುತ್ತದೆ. ಅಲ್ಲಿ ಸಿಗುವ  ಆಕರ್ಷಕ ಯುವತಿಯ ಚಿತ್ರವಿರುವ ಸಿಗರೇಟಿಗೆ ಉರಿ ತಾಕಿದ ತಕ್ಷಣ ಚಿತ್ರದಲ್ಲಿರುವ ಯುವತಿಯ ಬಟ್ಟೆಗಳು ಕ್ರಮೇಣ ಕರಗುತ್ತಿರುವಂತೆ ಭಾಸವಾಗುತ್ತಿತ್ತು.  ಕೆಲ ಕ್ಷಣಗಳ ನಂತರ ಅವಳು ಕೇಳಿದಳು " ತ್ಸು ನಿಗೆ ಏನಾಯಿತು ?"
"ಅವರ ಅಪ್ಪ ಅಮ್ಮ ನಿನ್ನೆ ಬಂದಿದ್ದರು. ನೀನು ಮರಳಿ ಅವನ ಜೊತೆಗೆ ಹೋಗುತ್ತೀಯಾ ಎಂದು ಕೇಳಿದರು "
"ಯಾಕೆ ?"
"ಗಂಡಸಿಗೆ ಹೆಂಗಸೊಬ್ಬಳು ಬೇಕು. ನಿನಗೆ ಒಬ್ಬ ಗಂಡ ಬೇಕು "
"ನಾನು  ಬೇಕಾದಾಗ ಬರುವ ಬದಲಿ ವಸ್ತುವಂತೆ  ಇರುವದೇನು ?"
"ಸುಮ್ಮನೆ ಹಠಮಾರಿಯಂತೆ ವರ್ತಿಸಬೇಡ ನೀನು ಚಿಕ್ಕವಳಲ್ಲ"
"ಅವನಿಗೆ ವಿಚ್ಚೇದನ ಯಾಕೆ ಆಯಿತಂತೆ ?"
"ಜನ ಮನಸ್ಸನ್ನು ಬದಲಿಸುತ್ತಾರೆ. ಸಾನ್ಸನ್, ನನ್ನನ್ನು ಕೇಳಿದರೆ ನೀನು ಯಾವ ಪ್ರಶ್ನೆ ಕೇಳದೆ ವಾಪಸು ಅವನ ಬಳಿ ಹೋಗುವದು  ಉತ್ತಮ "
"ಇದು ತ್ಸು ನ ಬಯಕೆಯಾ ಅಥವಾ ಅವನ ಅಪ್ಪ ಅಮ್ಮ ನ  ಐಡಿಯಾ?"
"ಯಾರದ್ದಾದರೇನು? ನೀನು ಒಪ್ಪಿದರೆ ಅವನು ನಿನ್ನನ್ನು ಮಾಡುವೆ ಆಗುತ್ತಾನೆ ಅಂಥ ಅವನ ಅಪ್ಪ ಅಮ್ಮ ಹೇಳಿದರು "
"ಅಂದರೆ ಪೂರ್ವ ನಿರ್ಧರಿತವಾದ ವಿವಾಹ "
"ಅಸಂಬದ್ಧ. ನೀನು ಅವನು ಇಬ್ಬರು ಜೊತೆಗೆ ಓಡಾಡಿಕೊಂಡು  ಬೆಳೆದಿದ್ದನ್ನು ನಾವೆಲ್ಲ ನೋಡಿದ್ದೇವೆ. " ಅಮ್ಮ ಹೇಳಿಳು "ಮದುವೆ ಆದ ಮೇಲೇ ಎಷ್ಟೊಂದು ಜನ ಪ್ರೀತಿಯಲ್ಲಿ ಬೀಳುವದು  "
ಕೊನೆಯ ವಾಕ್ಯವನ್ನು ಕೇಳಿ ಸಾನ್ಸನ್ ಳ  ಹೃದಯಕ್ಕೆ ಕುಟುಕಿದಂತಾಯಿತು. "ಇರಬಹುದು. ಆದರೆ ಆ ಥರದ ಪ್ರೀತಿ ನನಗೆ ಬೇಡ "
"ಹಾಗಾದ್ರೆ ಪ್ರೀತಿಯ ದೇವತೆಯಾದ ತಮಗೇನು ಬೇಕು? "
ಸಾನ್ಸನ್ ಉತ್ತರಿಸಲಿಲ್ಲ. ಪ್ರೀತಿಯೇನೆಂದರೆ ಒಬ್ಬ ಗಂಡಸನ್ನು ಕೇವಲ ಇಷ್ಟಪಡುವದಕ್ಕಿಂತ ಹೆಚ್ಚಿನದು.  ಮಾತು ಕೊಡುವದು ಎಂದರೆ ಏನು?  ಮಾತು ಕೊಡುವದು, ಉಳಿಸಿಕೊಳ್ಳುವದು  ಅಷ್ಟೇ.  ಕೊಟ್ಟ ಮಾತು, ಕೊಟ್ಟ ಮಾತಾಗಿಯೇ ಕೊನೆಯವರೆಗೂ ಪವಿತ್ರತೆಯನ್ನು ಉಳಿಸಿಕೊಂಡಿರುತ್ತದೆ . ಕಾಸಬ್ಲಾ೦ಕಾದ  ಮಹತ್ತರತೆಯೇ ಅದು. ಇಂತಹ ಅನುಭಾವದ ಪ್ರೀತಿ ಬದುಕನ್ನು ಅರ್ಥಪೂರ್ಣವಾಗಿ ಮಾಡುವದಲ್ಲವೇ? ಅವಳು ಮಿಸುಕಾಡಿದಳು.

ಬಹಳ ಹೊತ್ತಿನ ತನಕ ಇಬ್ಬರೂ  ಮಾತನಾಡಲಿಲ್ಲ. ಅವಳಮ್ಮ ಮೊಟ್ಟೆಯನ್ನು ತೆಗೆದುಕೊಂಡು ಚಮಚದಿಂದ ಅದರ ಚಿಪ್ಪನ್ನು ಸಾವಕಾಶವಾಗಿ ಒಡೆಯುವದನ್ನು ಗಮನಿಸಿದಳು. ಸಣ್ಣಗೆ ಬಿರುಕು ಬಿಟ್ಟ  ಒಡೆದ ಮೊಟ್ಟೆಯೊಳಗೆ ಮಸಾಲೆ ಪದಾರ್ಥಗಳು ತುಂಬಿಕೊಳ್ಳುತ್ತಿದ್ದವು. ಅದಾದ ಮೇಲೆ ಅವಳಮ್ಮ ಒಂದು ಮೊಟ್ಟೆಯನ್ನು ತೆಗೆದು ಮೌನವಾಗಿ  ಮಗಳಿಗೆ ಕೊಟ್ಟಳು. ಮೊಟ್ಟೆ ಬಿಸಿಯಾಗಿತ್ತು. ಆದರೆ ಸಾನ್ಸನ್ ಅದನ್ನು ಕೆಳಗಿಡಲಿಲ್ಲ.  ಸುಡುತ್ತಿರುವ ಚರ್ಮವನ್ನು ಸಹಿಸಿಕೊಳ್ಳುತ್ತ,   ಒಡೆದ ಚಿಪ್ಪಿನೊಳಗಿನಿಂದ  ದಟ್ಟನೆಯ ಮಸಾಲೆ  ಮತ್ತು  ಸೋಯಾ ಸಾಸ್  ಮೊಟ್ಟೆಯೊಳಗೆ ತೂರಿ   ನೋಡಿದಾಗ  ಭವಿಷ್ಯ ಹೇಳುವ ಒಡಕಲು ಚಿಪ್ಪಿನ  ಪುರಾತನ ಆಮೆಯಂತೆ  ಭಾಸವಾಗುತ್ತಿತ್ತು. ಅವಳು ಚಿಕ್ಕವಳಿದ್ದಾಗ ಒಂದು ಮೊಟ್ಟೆಯನ್ನು ಪಡೆಯಲು  ಅಮ್ಮನ ಬಳಿ ಘ೦ಟೆಗಟ್ಟಲೆ ಬೇಡಬೇಕಿತ್ತು. ಆದರೆ ತ್ಸು ಜೊತೆಗಿದ್ದಾಗಲೆಲ್ಲ ಅವರಮ್ಮ ಯಾವುದೇ ಹಿಂಜರಿಕೆಯಿಲ್ಲದೆ ತಕ್ಷಣ ಇಬ್ಬರಿಗೂ ಒಂದೊಂದು ಮೊಟ್ಟೆ ಕೊಡುತ್ತಿದ್ದಳು.  ತಾನು ಮತ್ತು ತ್ಸು ಪ್ರೇಮಿಸುವದಕ್ಕೆ ಮೊದಲೇ ಅವಳಮ್ಮ ತಮ್ಮಿಬ್ಬರ ನಡುವೆ ಯಾವುದೋ ಸಂಬಂಧದ ಎಳೆಯನ್ನು ಪೋಷಿಸಿದ್ದ ಇಂತಹ ಘಟನೆಗಳು ಅಮ್ಮನಿಗೆ ಈಗಲೂ ನೆನಪಿದೆಯೇ ಎಂದು ಕೇಳಬೇಕು ಎಂದುಕೊಂಡಳು.  

ಕೆಲವು ನಿಮಿಷಗಳು ಹೀಗೆಯೇ ಕಳೆದವು. ನಂತರ ರಸ್ತೆಯಾಚೆಗೆ ಇದ್ದಕ್ಕಿದ್ದ ಹಾಗೆ ಎರಡು ಜೀಪುಗಳು ವೇಗವಾಗಿ ಬಂದು ನಿಂತವು. ಸಾನ್ಸನ್ ನೋಡುತ್ತಿರುವಂತೆಯೇ ಜೀಪಿನಿಂದ ಪೊಲೀಸರು ಹೊರಬಂದು ಗೋಂಗ್ಸ್ ನ  ಅ೦ಗಡಿಯನ್ನು ಸುತ್ತುವರೆದರು. ಕೆಲವೇ ನಿಮಿಷದಲ್ಲಿ ಅಲ್ಲಿದ್ದ ಗಿರಾಕಿಗಳನ್ನು ಹೊರ ಕಳುಹಿಸಲಾಯಿತು. "ಏನಾಗುತ್ತಿದೆ ?" ಅಲ್ಲಿದ್ದ ಬೇರೆ ಅಂಗಡಿಯವರು ಪರಸ್ಪರರನ್ನು ಪ್ರಶ್ನಿಸಿಕೊಂಡರು.  ಸಾನ್ಸನ್ ಳ ಅಮ್ಮ ಎದ್ದು ನಿಂತು ಕತ್ತೆತ್ತಿ ನೋಡಿ, ಸೌಟನ್ನು ಸಾನ್ಸನ್ಳಿಗೆ ಕೊಟ್ಟು "ಇಲ್ಲೇ ಇರು , ಸ್ವಲ್ಪ ಸ್ಟವ್ ನೋಡುತ್ತಿರು " ಎಂದು ಹೇಳಿ  ಅಕ್ಕ ಪಕ್ಕದ ಒಂದಷ್ಟು ವ್ಯಾಪಾರಿಗಳ ಜೊತೆಗೆ ರಸ್ತೆ ದಾಟಿ ನಡೆದಳು.  ಸಾನ್ಸನ್ ಳಿಗೆ ಅವಳಮ್ಮ ಅಂಗಡಿಯ ಮುಂದೆ ಇಣುಕುತ್ತಿರುವದು ಕಾಣಿಸಿತು. ನಲವತ್ತು ವರ್ಷ ಇಲ್ಲೇ ಕಳೆದ ಮೇಲೂ  ಇನ್ನೊಬ್ಬರ ಅ೦ಗಡಿಯಲ್ಲಿ  ಏನಾಗುತ್ತಿದೆ ಎಂದು ತಿಳಿಯುವ ಕುತೂಹಲ ಯಾಕೆ ಅಮ್ಮನಿಗೆ ಎಂದು ಅನಿಸಿತು.  
ಹತ್ತು ನಿಮಿಷಗಳ ನಂತರ ಅವಳಮ್ಮ ವಾಪಸು ಬಂದಳು. "ಏನಾಗಿದೆ ಗೊತ್ತಿದೆಯೇ ? ಅವನ ಅಂಗಡಿಯಲ್ಲಿ ಅಫೀಮು ಸಿಕ್ಕಿದೆ "
"ಏನು ?"
"ಈಗ ಗೊತ್ತಾಯಿತಾ ಯಾಕೆ ಅವನದು ಅಂತಹ ಭಾರಿ ವ್ಯಾಪಾರ ಅಂಥ ?  ಅಲ್ಲಿ ಮಾರುವ  ಬೀಜಗಳು  , ದ್ರಾಕ್ಷಿ ಎಲ್ಲದಕ್ಕೂ ಅಫೀಮು ಹಾಕುತ್ತಿದ್ದನಂತೆ. ಅದಕ್ಕೆ ಒಮ್ಮೆ ತೆಗೆದುಕೊಂಡವರು ಮತ್ತೆ ಮತ್ತೆ ಮರಳಿ ಬರುತ್ತಿದ್ದರು. . ತಥ್ ! ಎಂತ ಕೆಟ್ಟ ಜನ "
"ಪೊಲೀಸರಿಗೆ ಹೇಗೆ ಗೊತ್ತಾಯಿತು ?" ಪಕ್ಕದ ಅಂಗಡಿಯಲ್ಲಿ ಯಾರೋ ಕೇಳಿದರು.
"ಯಾರೋ , ಅಂಗಡಿಯಲ್ಲಿ ಕೆಲಸ ಮಾಡುವವರೇ ಇರಬಹುದು  ಹೇಳಿದ್ದಾರೆ "
ಇನ್ನಷ್ಟು ಜನ ಗಲಾಟೆ ನಡೆಯುತ್ತಿದ್ದಲ್ಲಿಂದ ಮರಳಿ ಬಂದರು. ಅವರ ಮಾತುಗಳನ್ನು ಕೇಳುತ್ತಿದ್ದ ಹಾಗೆ ಸಾನ್ಸನ್ ಳ  ಅಂಗೈ ಬೆವರೊಡೆಯಲು ಪ್ರಾರಂಭಿಸಿತು. ಅವಳು ಸಂಜೆ ಅವನ ಅಂಗಡಿಗೆ ಹೋಗಬೇಕು ಎಂದುಕೊಂಡಿದ್ದಳು.   ಮೌನದಲ್ಲಿ ತಲೆಯೊಳಗೆ ಸಣ್ಣಗೆ ಪ್ರತಿಧ್ವನಿಸುವ ಸೂರ್ಯಕಾಂತಿ ಬೀಜದ ಸಿಪ್ಪೆಯೊಡೆಯುವ  ಶಬ್ದ, ಅದು ನಿಧಾನವಾಗಿ ನಾಲಗೆಯ ಮೇಲೆ ಹನಿಸುವ ವಗರು ರುಚಿ, ಪಕ್ಕದಲ್ಲಿ ರಾಶಿಯಾಗುವ ಸಿಪ್ಪೆ ಅವಳನ್ನು ದಿವ್ಯ ಏಕಾಂತದೆಡೆಗೆ ಕರೆದೊಯ್ಯುತ್ತಿತ್ತು. ಆ ಲೋಕದಲ್ಲಿ ಅವಳು ನಿಶ್ಯಬ್ದವಾಗಿ , ನಿರ್ವಿಕಾರವಾಗಿ ತ್ಸು ಮತ್ತು ಮಿನ್ ರನ್ನು ದಿಟ್ಟಿಸುತ್ತಿದ್ದಳು.  ಹಾಗಾದರೆ ತಾನು ಇಲ್ಲಿಯವರೆಗೆ ಕಟ್ಟಿಕೊಂಡಿದ್ದು ಅಫೀಮು ಲೇಪಿತ ಮಾದಕ ಕನಸೇ?

ಸಾನ್ಸನ್ ಳ  ಅಮ್ಮ ಅವಳತ್ತ ತಿರುಗಿ " ಬೇರೆಯವರ ವಿಚಾರ ನಮಗೇಕೆ ?ನಿನಗೆ ತ್ಸು ನ ಅಪ್ಪ ಅಮ್ಮ ಹೇಳಿದ್ದು ಏನು ಅನಿಸುತ್ತದೆ. ?
"ತ್ಸು ನನ್ನು  ಮದುವೆಯಾಗುವದೇ ? ಇಲ್ಲ ನನಗೆ ಇಷ್ಟವಿಲ್ಲ "
"ಇಷ್ಟು ವರ್ಷ ನೀನು ಕಾದು ಕುಳಿತಿದ್ದು ಅವನಿಗೆ ಅಲ್ಲವೇ ? ಈಗ ಪೆದ್ದಿಯಂತೆ ಮಾತನಾಡಬೇಡ.
"ನಾನು ಅವನಿಗೆ  ಕಾದು  ಕುಳಿತಿಲ್ಲ. "
"ಸುಳ್ಳು ನುಡಿಯಬೇಡ.  ನೀನು ಅವನಿಗೆ ಕಾಯುತ್ತಿರುವದು ಎಂದು ಎಲ್ಲರಿಗೂ  ಗೊತ್ತು "
"ಎಲ್ಲರಿಗೂ ?"
"ಮತ್ಯಾಕೆ ನೀನು ಇನ್ನು ಮದುವೆ ಆಗಿಲ್ಲ ? ಎಲ್ಲರಿಗೂ ಅವನು ನಿನಗೆ ಮಾಡಿದ ಮೋಸದ ಅರಿವಿದೆ. ಆದರೆ ಗಂಡಸರು ತಪ್ಪು ಮಾಡುತ್ತಾರೆ. ನೋಡು, ನಿನ್ನೆ ಅವನ ಅಪ್ಪ ಅಮ್ಮ ಕೂಡ ಕ್ಷಮೆ ಕೇಳಿದರು. ಈಗ ನೀನು ಎಲ್ಲವನ್ನು ಕ್ಷಮಿಸಿ  ಹೊಸ ಬದುಕು ಶುರು ಮಾಡು."
"ಯಾವುದನ್ನು ಕ್ಷಮಿಸಲಿ ?"
"ನಿನ್ನ  ಜೊತೆಗೆ  'ಎಲ್ಲ' ಮುಗಿಸಿಕೊಂಡು ಅವನು ಬೇರೆ ಹುಡುಗಿಯ ಹಿಂದೆ ಹೋದ. ಇಲ್ಲಿ ಕೇಳು , ಒಂದು ಗಾದೆ ಹೇಳುತ್ತಾರಲ್ಲ ಒಬ್ಬ ಮನುಷ್ಯನಿಗೆ ನಿಜವಾಗಿಯೂ ಸೇರಬೇಕಾಗಿದ್ದು ಯಾವತ್ತಾದರೂ ಸೇರಿಯೇ ತೀರುತ್ತದೆ"
"ಒಂದು ನಿಮಿಷ, ನನ್ನ ಜೊತೆಗೆ ಎಲ್ಲ ಮುಗಿದಿದೆ ಎಂದರೆ ಅರ್ಥವೇನು ?"
ಸಾನ್ಸನ್ ಅಮ್ಮ ನಾಚಿದಳು. "ನಿನಗೆ ಗೊತ್ತಿದೆಯಲ್ಲ "
"ನನಗೆ ಗೊತ್ತಿಲ್ಲ. ನಮ್ಮಿಬ್ಬರ ನಡುವೆ  ದೈಹಿಕ ಸಂಪರ್ಕ ನಡೆದಿತ್ತು ಎಂದು ನೀನು ಭಾವಿಸಿದ್ದರೆ  ಅದು ಸುಳ್ಳು. ಯಾವತ್ತೂ  ಆಗಿಲ್ಲ"
"ಅಯ್ಯೋ ಅದ್ಯಾಕೆ ಹಾಗೆ ಹೇಳುತ್ತೀಯಾ ? ಆಗಿದ್ದರೂ ಸಹ  ನಮಗೂ ಅರ್ಥವಾಗುತ್ತದೆ ಅದೇನೂ ಯಾರೊಬ್ಬರ ತಪ್ಪಲ್ಲ"

ಸಾನ್ಸನ್ ಗೆ  ಇಷ್ಟು ವರ್ಷಗಳಲ್ಲಿ ಮೊತ್ತ ಮೊದಲ ಬಾರಿಗೆ ಇಡೀ ಪಟ್ಟಣ ತನ್ನನ್ನು ಯಾಕೆ ಹಾಗೆ ನೋಡುತ್ತದೆ ಎಂದು ಅರಿವಾಯಿತು. ಒಬ್ಬ ಗಂಡಸು ತೆವಲು ತೀರಿಸಿಕೊಂಡು ಬಿಟ್ಟ ಹೆಂಗಸು. ಮತ್ತೆ ಎಲ್ಲರಂತೆ ಮದುವೆಯಾಗಲು ಯಾವತ್ತೂ ಸಾಧ್ಯವಿರದವಳು ಯಾಕೆಂದರೆ  ತನ್ನ ಕನ್ಯತ್ವವನ್ನು ಬಿಳಿ ಬಣ್ಣದ ಹಾಸಿಗೆಯ ಮೇಲೆ  ರುಜುವಾತು  ಪಡಿಸಲು ಸಾಧ್ಯವಾಗದವಳು.   " ಅಮ್ಮ ನನ್ನ ಮತ್ತು ತ್ಸು ನಡುವೆ ಅಂತಹ ಯಾವ ಕ್ರಿಯೆಯೂ ನಡೆದಿಲ್ಲ. "
"ನಿಜವಾಗಿಯೂ ?" ಅವಳಮ್ಮನ ಧ್ವನಿಯಲ್ಲಿ ಅಪನಂಬಿಕೆ.
"ಹೌದು ನಾನೊಬ್ಬ ತಲೆ ಕೆಟ್ಟ ಅವಿವಾಹಿತೆ. ನೀನು ನನ್ನ ಕನ್ಯತ್ವದ ಬಗ್ಗೆ ಬೇಕಾದರೆ ಇಡೀ ಪಟ್ಟವನ್ನು ಕೇಳಿ ಅವರ ಅಭಿಪ್ರಾಯವನ್ನು ಸಂಗ್ರಹಿಸು.  "
ಸಾನ್ಸನ್ ಳ ಅಮ್ಮ  ಬಹಳಷ್ಟು ಹೊತ್ತು  ಮಗಳನ್ನು ದಿಟ್ಟಿಸಿದಳು. ನಂತರ ಚಪ್ಪಾಳೆ ತಟ್ಟುತ್ತ " ಒಳ್ಳೆಯದೇ ಆಯಿತಲ್ಲ ಹಾಗಾದರೆ. ನನಗೆ ನೀನು ಅವನನ್ನು ಅಷ್ಟೊಂದು ಪ್ರೀತಿಸುತ್ತೀಯ ಎನ್ನುವದು ತಿಳಿದಿರಲಿಲ್ಲ. ನಾನು ಇವತ್ತು ಅವರ ಅಪ್ಪ ಅಮ್ಮನ ಬಳಿ ಹೋಗಿ ನೀನು ಇಷ್ಟು ವರ್ಷ ಅವನಿಗಾಗಿಗೇ ಪರಿಶುದ್ಧಳಾಗಿ ಕಾದಿದ್ದೆ ಎಂದು ಹೇಳಿ ಬರುತ್ತೇನೆ. "
"ನಾನು ಅವನಿಗಾಗಿ  ಕಾದಿಲ್ಲ "
" ನಿನ್ನ ಮತ್ತು ಅವನ ನಡುವೆ ಏನೂ ನಡೆದಿಲ್ಲ ಎಂದಾದರೆ ನೀನು ಯಾಕೆ ಇನ್ನೂ ಮದುವೆ ಆಗಿಲ್ಲ ?"
ಸಾನ್ಸನ್  ಉತ್ತರಿಸಲಿಲ್ಲ. ತನ್ನ ಕನ್ಯತ್ವದ ಬಗೆಗಿನ ಊಹಾಪೋಹಗಳು ತನ್ನ ಅಪ್ಪನ ಸಾವಿಗೆ ಎಷ್ಟು ಕಾರಣವಾಗಿರಬಹುದು ಎಂದು ಯೋಚಿಸಿದಳು. ತನ್ನ ಅಮ್ಮ ಈ ವಿಷಯವನ್ನು ಇಷ್ಟು ವರ್ಷ ಯಾಕೆ  ಕೇಳಿಲ್ಲ ಎಂದು ವಿಸ್ಮಯಗೊಂಡಳು. ಆದರೆ ಪಕ್ಕಾ ಸಂಪ್ರದಾಯವಾದಿಯಾದ ತನ್ನಮ್ಮ ಇಂಥ ವಿಷಯವನ್ನು ತನ್ನ ಬಳಿ ಅದು ಹೇಗೆ ತಾನೇ ಕೇಳಿಯಾಳು  ಎಂದು ತನಗೆ ತಾನೇ ಉತ್ತರಿಸಿಕೊಂಡಳು.

"ನಿನಗೆ ನನ್ನ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದಿದ್ದರೆ ನೀನು ಆದಷ್ಟು ಬೇಗ ನಿನ್ನ ಮನಸ್ಸನ್ನು ಗಟ್ಟಿ ಮಾಡಿಕೊಳ್ಳುವದು ಉತ್ತಮ " ಅಮ್ಮ
"ನನ್ನ ಮನಸ್ಸನ್ನು ನಾನು ಯಾವತ್ತೋ ಗಟ್ಟಿ ಮಾಡಿಕೊಂಡಾಗಿದೆ. ನಾನು ಯಾವತ್ತಿಗೂ ತ್ಸುನನ್ನು ಮದುವೆ ಆಗಲಾರೆ "
"ನಿನಗೇನು ಹುಚ್ಚೇ?"
"ಅಮ್ಮ ನಿನಗೆ ಯಾಕೆ ಜಗತ್ತಿನಲ್ಲೇ ಅತ್ಯುತ್ತಮವಾದ ಮೊಟ್ಟೆ ಮಾರಬೇಕು ಅನಿಸುತ್ತದೆ   ?"
ಅಮ್ಮ ತಲೆಯಾಡಿಸಿದಳು" ನೀನು ಏನು ಹೇಳುತ್ತಿದ್ದೀಯ ಎಂದು ನನಗೆ ಗೊತ್ತಾಗುತ್ತಿಲ್ಲ."
"ಅಮ್ಮ ನೀನು ಯಾಕೆ ಎಲ್ಲರಿಗಿಂತ  ಹೆಚ್ಚು ಮಸಾಲೆಯನ್ನು ಹಾಕುತ್ತಿಯ ?"
"ಯಾಕೆ ಎಂದರೆ ನಾನು ಜಗತ್ತಿನಲ್ಲೇ ಅತ್ತ್ಯುತ್ತಮ ರುಚಿಯ ಮೊಟ್ಟೆ ಮಾರುತ್ತಿರುವೆ  ಎಂದು ಜನರಿಗೆ ಹೇಳುವುದಾದರೆ ನಾನು ಆ ಮಾತನ್ನು ಉಳಿಸಿಕೊಳ್ಳಬೇಕು "
"ಆದರೆ ಅದನ್ನು ಯಾರೂ  ಗಮನಿಸುವದಿಲ್ಲ. ಯಾರಿಗೂ ಅದು ಬೇಕಿಲ್ಲ. ನೀನು ಉಳಿಸಿಕೊಳ್ಳುತ್ತಿದ್ದೇನೆ ಎಂದುಕೊಳ್ಳುತ್ತಿರುವ ಮಾತು ನಿನಗೆ ಮಾತ್ರ ಮಹತ್ವವುಳ್ಳದ್ದು. "
"ಏನೇನೋ ಮಾತನಾಡಬೇಡ. ನಾನು ಓದು ಕಲಿತವಳಲ್ಲ. ನನಗೆ ಇವೆಲ್ಲ ಅರ್ಥವಾಗುವದಿಲ್ಲ. ಅಲ್ಲದೆ ಇದಕ್ಕೂ ನಿನ್ನ ಮದುವೆಗೂ ಏನು ಸಂಬಂಧವಿದೆ?"
"ಇದೆ.   ನಾನು ಮಾತ್ರ ಉಳಿಸಿಕೊಳ್ಳಬೇಕಾದ ಮಾತು ನನಗೂ ಇದೆ"
"ಯಾಕೆ ಹೀಗೆ ನೀನು ಹಠ ಮಾಡುತ್ತೀಯಾ ? ನೀನು ಇದೆ ಥರ ಇದ್ದಾರೆ ಒಂದಲ್ಲ ಒಂದು ದಿನ ನಮ್ಮಿಬ್ಬರಿಗೂ ಹುಚ್ಚು ಹಿಡಿಯುತ್ತದೆ " ಅವಳಮ್ಮ ಬಿಕ್ಕಳು ಪ್ರಾರಂಭಿಸಿದಳು.
 
ಇನ್ನೊಂದು ರೈಲು ದೊಡ್ಡದಾಗಿ ಸದ್ದು ಮಾಡುತ್ತಾ ನಿಲ್ದಾಣವನ್ನು ತಲುಪಿತು. ಸಾನ್ಸನ್ ಅವಳಮ್ಮ ನಡುಗುವ ಧ್ವನಿಯಲ್ಲಿ ಕೂಗುತ್ತ , ಕಣ್ಣೀರನ್ನು ಒರೆಸಿಕೊಳ್ಳುತ್ತಿರುವದನ್ನು  ಗಮನಿಸದಳು. ಹೌದು ,  ಹೀಗೆಯೆ ನಡೆಯುತ್ತಿದ್ದರೆ ಒಂದಲ್ಲ ಒಂದು ದಿನ ತನ್ನೆಲ್ಲ ಮಿತಿಯ ಹೊರತಾಗಿಯೂ ತನ್ನನ್ನು ಯಾವತ್ತಿಗೂ ಪ್ರೀತಿಸುವ ತನ್ನ ಅಮ್ಮ ಹುಚ್ಚಿಯಾಗಬಹುದೇನೋ. ಸಾನ್ಸನ್ ಮಿಸುಕಾಡಿದಳು. ಆದರೆ ಅವಳ ಬಳಿ ಬೇರೆ ಆಯ್ಕೆಗಳಿರಲಿಲ್ಲ.  ಜಗತ್ತಿನಲ್ಲಿ  ಕೊಟ್ಟ ಮಾತನ್ನು ಬೇಕಾದಲ್ಲಿ ಬಿಸಾಡಿ ಹೋಗುವವರಿದ್ದಾರೆ. ಆದರೆ ಸಾನ್ಸನ್ ಗೆ ಹಾಗಾಗುವದು ಬೇಕಿರಲಿಲ್ಲ.

ಅಷ್ಟರಲ್ಲಿ  ಕೊಳೆಯಾದ ಅಂಗಿ ಧರಿಸಿದ  ಒಬ್ಬ ಮನುಷ್ಯ ಬ್ಯಾಗೊಂದನ್ನು ಅಪ್ಪಿಕೊಂಡು  ಮಾರ್ಕೆಟ್ನನ್ನು  ಪ್ರವೇಶಿಸಿದ.  ಸಾನ್ಸನ್ ನೋಡುತ್ತಿದ್ದಂತೆಯೇ ಅವನು ಅವಳಮ್ಮನ ಗಾಡಿಯ ಮತ್ತು ಇನ್ನೊಂದು ಅಂಗಡಿಯ ಮಧ್ಯದ ಖಾಲಿ ಜಾಗದಲ್ಲಿ ಕುಳಿತುಕೊಂಡ. ಅವನು ಬ್ಯಾಗಿನಿಂದ ಮಡಚಿಟ್ಟ ಒಂದು ರಟ್ಟಿನ ಬಾಕ್ಸ್ ಮತ್ತು ಕಲ್ಲಂಗಡಿ ಹಣ್ಣನ್ನು ಕತ್ತರಿಸಲು ಬಳಸುವಂತ ದೊಡ್ಡ, ಹರಿತವಾದ ಚಾಕುವನ್ನು ಹೊರತೆಗೆದ. ನಂತರ ಅವನು ತನ್ನ ಅಂಗಿಯನ್ನು ತೆಗೆದು , ಚಾಕುವನ್ನು ಎಡಗೈ  ಬಳಿ  ಕೊಂಡೊಯ್ದು,  ನಿಧಾನವಾಗಿ ಅದನ್ನು ಒತ್ತಿ ಕೈ ಚರ್ಮವನ್ನು ತುಸುವೇ ಸೀಳಿ  ಮಾಂಸವನ್ನು ಇಷ್ಟೇ ಇಷ್ಟು ಕತ್ತರಿಸಿದ. ಅವನು ಅತ್ಯಂತ ಶಾಂತವಾಗಿ , ನೋವಿಲ್ಲದವನಂತೆ, ಪ್ರತಿ ಚಲನೆಯನ್ನು  ಲೆಕ್ಕ ಹಾಕುತ್ತ  ಇವಿಷ್ಟನ್ನು ಮಾಡಿದ್ದನ್ನು ನೋಡಿ ಸಾನ್ಸನ್ ಮತ್ತು  ಅವನನ್ನು ನೋಡುತ್ತಿದ್ದ ಇತರರು ದಂಗಾದರು. ನಂತರ ಅವನು ತೋರು ಬೆರಳನ್ನು ರಕ್ತದಲ್ಲಿ ಅಡ್ಡಿ ಕ್ಯಾಲಿಗ್ರಫಿ ಪ್ರವೀಣನಂತೆ  ರಟ್ಟಿನ ಬಾಕ್ಸಿನ ಮೇಲೆ ಬರೆಯತೊಡಗಿದ " ಒಂದು ಯಾನ್ ಗೆ ನೀವು ನಿಮಗಿಷ್ಟ ಬಂದ, ನನ್ನ ದೇಹದ ಯಾವುದೇ ಭಾಗವನ್ನಾದರೂ ಕತ್ತರಿಸಬಹುದು. ಒಂದೇ ಒಂದು ಸಲ ಕತ್ತರಿಸಿದಾಗ ನನ್ನ   ಪ್ರಾಣ ಹೋದರೆ ನೀವು ನನಗೆ ಕೊಡಬೇಕಾಗಿದ್ದು ಏನೂ  ಇಲ್ಲ." ನಂತರ ಅವನು ಈ ವಾಕ್ಯವನ್ನು ಜೋರಾಗಿ ಎರಡು ಸಲ ಕೂಗಿ ಹೇಳಿದ.

"ತಲೆ  ಕೆಟ್ಟವನು " ಅಲ್ಲೇ ಇದ್ದ ಮುದುಕಿ ಗೊಣಗಿದಳು.
"ಬೇಡಲಿಕ್ಕೆ ಹೊಸ ಉಪಾಯ "
"ಸುಮ್ಮನೆ ಬೇಡಿದರೆ ಆಗಿತ್ತು "
"ಅಷ್ಟು ಗಟ್ಟಿ ಇದ್ದಾನೆ ಸುಮ್ಮನೆ ಯಾರು ದುಡ್ಡು ಕೊಡುತ್ತಾರೆ ? ಏನಾದರು ಮಾಡಬೇಕಲ್ಲ ಬೇಡಲಿಕ್ಕೆ "
"ಇವತ್ತಿನವರಿಗೆ ಕೆಲಸ ಮಾಡುವದೇ ಬೇಕಿಲ್ಲ. ಸುಲಭವಾಗಿ ದುಡ್ಡು ಸಿಕ್ಕರೆ ಆಯಿತು "
"ಸುಲಭ ಏನು ? ನೋವು ಮಾಡಿಕೊಳ್ಳುವದು ಅಷ್ಟು ಸುಲಭವೇ ?"
"ಏನಪ್ಪಾ ಏನ್ ವಿಷಯ ? ಬೇಡಲಿಕ್ಕೆ ಇನ್ನು ಯಾವ ಒಳ್ಳೆಯ ಕಥೆಯು ಸಿಕ್ಕಿಲ್ಲವಾ ?" ಯಾರೋ ಕೇಳಿದರು
ಜನ ಗೊಳ್ಳನೆ ನಕ್ಕರು. ಅವನು ಮಾತನಾಡಲಿಲ್ಲ. ಜನರ ನಡುವೆ ಸುಮ್ಮನೆ ಕುಳಿತಿದ್ದ. ಅವನ ಕೈಯಿಂದ ತೊಟ್ಟಿಕ್ಕುತ್ತಿದ್ದ ರಕ್ತದ ಹನಿ  ಜೀನ್ಸ್ ಪ್ಯಾ೦ಟನ್ನು ತೋಯಿಸುತ್ತಿತ್ತು. ಅವನು ಅದನ್ನು ಗಮನಿಸದವನಂತೆ ಮೌನವಾಗಿ ಕುಳಿತಿದ್ದ. ನಂತರ ಒಂದಷ್ಟು ನಿಮಿಷ ಕಳೆದ ಮೇಲೆ ಮತ್ತೆ ಅದೇ ವಾಕ್ಯವನ್ನು ಕೂಗಿ ಹೇಳಿದ .
 ಸಾನ್ಸನ್ ಳ ಅಮ್ಮ ನಿಟ್ಟುಸಿರು  ಬಿಟ್ಟಳು. ಅವಳು ತನ್ನ ಗಲ್ಲಾಪೆಟ್ಟಿಗೆ ತೆರೆದು ಒಂದಷ್ಟು ಹಣ ತೆಗೆದುಕೊಂಡು  ಅವನ ಬಳಿ ನಡೆದಳು.
"ಇಲ್ನೋಡು ಹತ್ತು ಯಾನ್. ತೆಗೆದುಕೋ. ಬೇರೆಲ್ಲಿಯಾದರು ಹೋಗಿ ಒಳ್ಳೆ ಕೆಲಸ ಹುಡುಕಿಕೋ . ಸುಮ್ಮನೆ ಈ ಅಸಂಬದ್ಧ ಮಾಡುತ್ತ ಜೀವನವನ್ನು ಹಾಳು  ಮಾಡಿಕೊಳ್ಳ ಬೇಡ.
"ಎಲ್ಲಿಯೂ ಯಾವ ಕೆಲಸವೂ ಸಿಗುತ್ತಿಲ್ಲ "
"ಸರಿ ಹಾಗಾದರೆ ಈ ಹತ್ತು ಯಾನ್ ತೆಗೆದುಕೋ "
ಅವನು ಹತ್ತು ಯಾನ್ ತೆಗೆದುಕೊಂಡು , ಚಾಕುವಿನ ಹಿಡಿಕೆಯನ್ನು ಸಾನ್ಸನ್ ಳ ಅಮ್ಮನ ಬಳಿ ಚಾಚಿದ. "ಹಿಡಿದುಕೊಳ್ಳಿ "
"ಯಾಕೆ ? ನನಗೆ ನಿನ್ನನ್ನು ಕತ್ತರಿಸುವದೆಲ್ಲ ಬೇಡ"  
"ಕತ್ತರಿಸಲೇ ಬೇಕು. ನೀವು ಕತ್ತರಿಸದೆ ನಾನು ನಿಮ್ಮ ದುಡ್ಡು ತೆಗೆದುಕೊಳ್ಳುವ ಹಾಗಿಲ್ಲ. ನೋಡಿ ಇಲ್ಲಿ ಬರೆದಿದೆ. "
"ಇರಲಿ , ಹಾಗೆ ತೆಗೆದುಕೋ :
"ನಾನೊಬ್ಬ ಭಿಕ್ಷುಕನಲ್ಲ "
"ಯಾರು ಹಾಗಾದರೆ ?" ಜನರ ಗುಂಪಿನಿಂದ ಯಾರೋ ಕೂಗಿದರು.
"ಮುಟ್ಟಾಳ " ಇನ್ಯಾರೋ ಹೇಳಿದರು. ಜನ ಮತ್ತೆ ಗೊಳ್ಳನೆ ನಕ್ಕರು.  ಆದರೆ ಯುವಕ ಅಲ್ಲಾಡಲಿಲ್ಲ. ಚಾಕುವನ್ನು ಹಾಗೆಯೆ ಹಿಡುಕೊಂಡಿದ್ದ.  ಸಾನ್ಸನ್ ಳ ಅಮ್ಮ ತಲೆಯಾಡಿಸಿ , ದುಡ್ಡನ್ನು ಅವನ ಬಳಿ ಹಾಕಿದಳು. ಅವನು ಅದನ್ನು ವಾಪಸು ಅವಳ ಕಾಲಿನ ಬಳಿ ಹಾಕಿ ಮತ್ತೆ ತನ್ನ ಜಾಗಕ್ಕೆ ಹೋಗಿ ಕುಳಿತ.
ಸಾನ್ಸನ್ ಬಿದ್ದಿದ್ದ ನೋಟನ್ನು ಹೆಕ್ಕಿಕೊಂಡು ಅವನ ಬಳಿ ನಡೆದಳು.  ಅವನು ತಲೆಯೆತ್ತಿ ಅವಳನ್ನು ನೋಡಿದ. ಅವಳು ಅವನ ಕಣ್ಣುಗಳನ್ನು ಆಳವಾಗಿ ದಿಟ್ಟಿಸಿದಳು. ಮಾತನಾಡದೆಯೇ ಅವನು ಚಾಕುವಿನ ಹಿಡಿಯನ್ನು ಅವಳ ಕೈಗಿತ್ತ. ಅವಳು ಅವನ ದೇಹವನ್ನು ಸೂಕ್ಷ್ಮವಾಗಿ ದಿಟ್ಟಿಸಿದಳು. ಬೆತ್ತಲೆ ಮೈ. ಬಿಸಿಲಿಗೆ ಕಂದಿದ  ಮೃದುವಾದ ಚರ್ಮ,  ರಕ್ತ ಹನಿಯುತ್ತಿರುವ ಗಾಯ. ಅವಳು ಅವನ ತೋಳಿನ ಮೇಲ್ಭಾಗವನ್ನು ಪರೀಕ್ಷಿಸುತ್ತಾ , ಲೆಕ್ಕ ಹಾಕುತ್ತ  ತೋರು ಬೆರಳಿನ ತುದಿಯಿಂದ   ಮುಟ್ಟಿದಳು.   ನಂತರ ನಿಧಾನವಾಗಿ ತೋರುಬೆರಳನ್ನು ಅವನ ಭುಜದ ಹತ್ತಿರ ಒಯ್ದಳು.  ಅವನ ದೇಹದ ಮಾಂಸದ ಜಾಡನ್ನು ಅರಸಿ ಅವಳ ಬೆರಳು ಸಾಗಿದಂತೆ ಅವನು ಸಣ್ಣಗೆ ಕಂಪಿಸಿದ.

"ಸಾನ್ಸನ್ ಏನಾಗಿದೆ ನಿನಗೆ  ?" ಅವಳ ಅಮ್ಮ  ಕಿರುಚಿದಳು.
ಅವನ ಮಾಂಸಖಂಡಗಳು ಅವಳ ಮೃದು ಸ್ಪರ್ಶಕ್ಕೆ ಸಡಿಲವಾಗತೊಡಗಿದವು. ಇಷ್ಟು ವರ್ಷಗಳ ನಂತರ ಅವಳು ಮಾತು ಕೊಡುವದೆಂದರೇನು ಎನ್ನುವದನ್ನು ಅರ್ಥೈಸಿಕೊಂಡಿದ್ದವನನ್ನು  ಭೇಟಿಯಾಗಿದ್ದಳು. ಹೊರ ಜಗತ್ತಿಗೆ ಅವರು ಹುಚ್ಚರಂತೆ ಕಾಣಿಸಬಹುದು ಆದರೆ ಅವರು ಒಬ್ಬಂಟಿಗರಲ್ಲ ,  ಅವರಂತೆ  ಕೊಟ್ಟ ಮಾತಿನ ಧ್ಯಾನದಲ್ಲಿ ಸದಾ  ಜೀವಿಸುವ ಇನ್ನಷ್ಟು ಜೀವಗಳಿವೆ  ಮತ್ತು ಅವರು ಪರಸ್ಪರರಿಗೆ ಮಾತ್ರವೇ ಅರ್ಥವಾಗಬಲ್ಲರು. ಅದು ಬದುಕು ಅವರಿಗೆ ಮಾತ್ರ  ಕೊಟ್ಟ ಮಾತು , ಬದುಕಿನ ಭವ್ಯತೆ .
"ನೀನು ಚಿ೦ತೆ ಮಾಡಬೇಡ ಅಮ್ಮ " ಸಾನ್ಸನ್  ಅಮ್ಮನತ್ತ ಮಂದಹಾಸವನ್ನು ಬೀರುತ್ತ ಹೇಳಿದಳು. ನಂತರ  ಚಾಕುವನ್ನು ಯುವಕನ  ಭುಜದ ಬಳಿಯಿಟ್ಟು  ಒತ್ತಿದಳು.  ಚಾಕುವಿನ ಹರಿತ ತುದಿ ಸಾವಕಾಶವಾಗಿ  ಚರ್ಮವನ್ನು ಸೀಳಿದಂತೆ  ಅವಳು ಅವನ  ಮಾಂಸವನ್ನು  ಮೃದುವಾಗಿ ಪ್ರೀತಿಯಿಂದ  ಕತ್ತರಿಸತೊಡಗಿದಳು.

ಲೇಖಕರ ಪರಿಚಯ

ಬೀಜಿಂಗ್ ನಲ್ಲಿ ಬೆಳೆದ ಯಿ ಯುನ್ ಲಿ ಓದಿದ್ದು ಪೀಕಿಂಗ್ ಯೂನಿವರ್ಸಿಟಿಯಲ್ಲಿ. ೧೯೯೬ ರಲ್ಲಿ ಅಮೆರಿಕಾಗೆ ಮೆಡಿಕಲ್ ವ್ಯಾಸಂಗ ಮಾಡಲು ಬಂದ ಯಿ ಯುನ್ ಲಿ , ಎರಡು ವರ್ಷಗಳ ನಂತರ ಬರವಣಿಗೆ ಪ್ರಾರಂಭಿಸಿದಳು. ಪ್ರಸ್ತುತ ಕತೆಯನ್ನು ಫ್ರಾಂಕ್  ಓ'ಕಾನರ್ ಇಂಟರನ್ಯಾಶನ್ ಅವಾರ್ಡ್ ಮತ್ತು ಹೆಮಿ೦ಗ್ವೆ ಪ್ರಶಸ್ತಿ ಪುರಸ್ಕ್ರತ " a thousands years of good prayer " ಎನ್ನುವ ಸಣ್ಣ ಕತಾ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. 

Sunday, May 23, 2021

ಅದೃಶ್ಯವಾದ ಆನೆ

 ಮೂಲ ಕತೆ  ಹರುಕಿ ಮುರಕಮಿ

ನಗರದ ಆನೆ ಲಾಯದಿಂದ ಆನೆ ಮಾಯವಾದಾಗ , ನಾನು ವಿಷಯವನ್ನು ದಿನಪತ್ರಿಕೆಯಲ್ಲಿ ಓದಿದೆ. ಎಂದಿನಂತೆ ಬೆಳಿಗ್ಗೆ ಆರು ಘಂಟೆ ಹದಿಮೂರು ನಿಮಿಷಕ್ಕೆ ಸರಿಯಾಗಿ ಅಲಾರಾಂ ನನ್ನನ್ನು  ಎಬ್ಬಿಸಿತ್ತು.  ಅಡುಗೆಮನೆಯಲ್ಲಿ ಒಂದು ಲೋಟ ಬಿಸ್ಸಿ ಕಾಫಿಯನ್ನು ಮತ್ತು ಬ್ರೆಡ್ ಟೋಸ್ಟ್  ಮಾಡಿಕೊಂಡು, ರೇಡಿಯೋವನ್ನು ಹಚ್ಚಿ ,  ಡೈನಿಂಗ್ ಟೇಬಲಿನ ಮೇಲೆ ದಿನಪತ್ರಿಕೆಯನ್ನು ಹರಡಿ , ನಿಧಾನವಾಗಿ ಕಾಫಿಯನ್ನು ಹೀರುತ್ತ, ಪೇಪರಿನಲ್ಲಿ ಕಣ್ಣಾಡಿಸತೊಡಗಿದೆ.  ನಾನು ದಿನಪತ್ರಿಕೆಯನ್ನು ಮೊದಲ ಪುಟದಿಂದ ಕೊನೆಯವರೆಗೂ ಕ್ರಮಾನುಸಾರವಾಗಿ, ಕೂಲಂಕುಷವಾಗಿ ಓದುವ  ಪ್ರಬೇಧಕ್ಕೆ ಸೇರಿದವನಾಗಿದ್ದರಿಂದ, ಆನೆ ಮಾಯವಾಗಿದೆ ಎನ್ನುವ ಸುದ್ದಿ ಕಣ್ಣಿಗೆ ಬೀಳಲು ಕೊಂಚ ಹೊತ್ತಾಯಿತು.  ಮೊದಲ ಪುಟದಲ್ಲಿ ಅಂತರ್ ರಾಷ್ಟ್ರೀಯ ಸುದ್ದಿಗಳು, ಅಮೆರಿಕಾದ ಜೊತೆಗಿನ ವಾಣಿಜ್ಯ ತಿಕ್ಕಾಟಕ್ಕೆ  ಸಂಬಂಧಪಟ್ಟ ವರದಿಗಳಿದ್ದವು.  ನಂತರ  ರಾಷ್ಟ್ರೀಯ ಸುದ್ದಿಗಳತ್ತ ಕಣ್ಣಾಡಿಸಿದೆ. ಅದಾದ ಮೇಲೆ ಆರ್ಥಿಕ ವಿಷಯಗಳು , ಸಂಪಾದಕೀಯ , ಸಂಪಾದಕರಿಗೆ ಪತ್ರ , ಪುಸ್ತಕ ವಿಮರ್ಶೆ ,  ಜಮೀನು ಇತ್ಯಾದಿಗಳಿಗೆ ಸಂಬಂಧಿಸಿದ ಜಾಹಿರಾತುಗಳು , ಕ್ರೀಡಾ ವಾರ್ತೆ ಮತ್ತು ಕೊನೆಯದಾಗಿ ಸ್ಥಳೀಯ ಸುದ್ದಿಗಳು.    

ಆನೆಯ ವಿಷಯ ಸ್ಥಳೀಯ ಸುದ್ದಿಗಳಲ್ಲಿ ಪ್ರಮುಖವಾದ ವಿಷಯವಾಗಿತ್ತು. ಅಗತ್ಯಕ್ಕಿಂತ ತುಸು ದೊಡ್ಡದೇ ಅನ್ನಬಹುದಾದ ತಲೆ ಬರಹ ನನ್ನ ಗಮನ ಸೆಳಿಯಿತು - ' ಟೋಕಿಯೋ ಹೊರವಲಯದಲ್ಲಿ ಆನೆ ಮಾಯ' . ಅದರ ಕೆಳಗೆ ಸಣ್ಣ ಅಕ್ಷರಗಳಲ್ಲಿ ಹೀಗೆ ಬರೆದಿದ್ದರು ' ಎಲ್ಲೆಡೆ ಆತಂಕದ ವಾತಾವರಣ ,   ಕ್ಷಿಪ್ರ ಶೋಧನೆಗೆ ಜನರಿಂದ ಒತ್ತಾಯ' .  ಜೊತೆಗೆ ಪೊಲೀಸ್ ಅಧಿಕಾರಿ ಒಬ್ಬ ಖಾಲಿ ಲಾಯವನ್ನು ಪರೀಕ್ಷಿಸುತ್ತಿರುವ ಫೋಟೋ  ಹಾಕಿದ್ದರು. ಆನೆಯಲ್ಲಿದ  ಖಾಲಿ  ಲಾಯ ಏನೋ ಹೆಚ್ಚುಕಡಿಮೆಯಾದಂತೆ  ತೋರುತ್ತಿತ್ತು.  ಸಂಪೂರ್ಣ ಜಾಗ, ಒಣಗಿದ ದೈತ್ಯಾಕಾರದ ಆಕೃತಿಯೊಂದರ  ಒಳಭಾಗದಿಂದ ಎಲ್ಲವನ್ನೂ ಕಿತ್ತು ತೆಗೆದಂತೆಯೂ , ಅಗತ್ಯಕ್ಕಿಂತಲೂ  ಹೆಚ್ಚಿನದಾಗಿಯೂ ತೋರುತ್ತಿತ್ತು.  

ಬ್ರೆಡ್ ಅನ್ನು ಬದಿಗಿರಿಸುತ್ತ ನಾನು ಬರಹದ ಪ್ರತಿ ಸಾಲುಗಳನ್ನು  ವಿವರವಾಗಿ ಓದತೊಡಗಿದೆ.  ಆನೆ ಕಾಣೆಯಾಗಿದೇ  ಎಂದು  ಮೊದಲ ಸಲ ಗಮನಿಸಿದ್ದು  ಮೇ ೧೮ ರ ಮಧ್ಯಾಹ್ನ ೨ ಘಂಟೆಗೆ. ಹತ್ತಿರದ ಶಾಲೆಯಲ್ಲಿ ಬಿಸಿಯೂಟ ವಿತರಿಸುವ ವಾಹನ ಆನೆಗೆ ಊಟವನ್ನು ಕೊಡಲು ಹೋದಾಗ ಆನೆ  ಕಾಣೆಯಾಗಿದೆ ಎಂದು  ಗಮನಿಸಿದ್ದರು.  ( ಸಾಮಾನ್ಯವಾಗಿ ಆನೆ, ಸಮೀಪದಲ್ಲಿದ್ದ ಶಾಲೆಯಲ್ಲಿ ಮಿಕ್ಕಿರುತ್ತಿದ್ದ ಮಧ್ಯಾನ್ಹದ ಊಟವನ್ನು ತಿನ್ನುತ್ತಿತ್ತು )
ಆನೆಯ ಕಾಲಿಗೆ ಕಟ್ಟುತ್ತಿದ್ದ ಸರಪಳಿಯಿಂದ ಆನೆ ನುಣುಚಿಕೊಂಡು ಹೋಗಿದೆಯೇನೋ ಎಂಬಂತೆ  ಸರಪಳಿ ನೆಲದ ಮೇಲೆ ಬಿದ್ದಿತ್ತು. ಅದೃಶ್ಯವಾಗಿದ್ದು ಆನೆಯೊಂದೇ ಅಲ್ಲ . ಆನೆಯನ್ನು ನೋಡಿಕೊಳ್ಳುತ್ತಿದ್ದ ಅದರ ಮಾವುತ ಸಹ ಅದೃಶ್ಯವಾಗಿದ್ದ. ಪತ್ರಿಕಾ ವರದಿಯ  ಪ್ರಕಾರ ಆನೆಯನ್ನು ಕೊನೆಯ ಬಾರಿಗೆ  ಮೇ ೧೭ ರ ಸಂಜೆ  ಸುಮಾರು ಐದು ಅಥವಾ ಐದೂವರೆಯ ಸಮಯದಲ್ಲಿ ನೋಡಲಾಗಿತ್ತು. ಶಾಲೆಯಿಂದ ಕೆಲ ವಿದ್ಯಾರ್ಥಿಗಳು ಆನೆಯನ್ನು ನೋಡಿ ಅದರ  ಚಿತ್ರವನ್ನು ರಚಿಸಲು ಬಂದಿದ್ದರು.  ಆನೆಯನ್ನು ಕೊನೆಯ ಸಲ ನೋಡಿದ್ದು ಈ ವಿದ್ಯಾರ್ಥಿಗಳೇ ಇರಬೇಕು ಯಾಕೆಂದರೆ ೬ ಘಂಟೆಯ ಸೈರನ್ ಆದ ತಕ್ಷಣ ಮಾವುತ ಆನೆಯ ಲಾಯದ ಬಾಗಿಲನ್ನು ಹಾಕುತ್ತಿದ್ದ ಎಂದು ಪತ್ರಿಕಯಲ್ಲಿ ಬರೆಯಲಾಗಿತ್ತು.  

ವಿದ್ಯಾರ್ಥಿಗಳೆಲ್ಲ ಸರ್ವಾನುಮತದಿಂದ ನೀಡಿದ ಹೇಳಿಕೆಯ ಪ್ರಕಾರ ಅವರು ಆನೆಯನ್ನು ಸಂದರ್ಶಿಸಿದ್ದ ಸಮಯದಲ್ಲಿ ಆನೆಯಲ್ಲಾಗಲಿ ಅಥವಾ ಮಾವುತನ ವರ್ತನೆಯಲ್ಲಾಗಲಿ ಯಾವುದೇ ಅಸಹಜತೆಯಿರಲಿಲ್ಲ.  ಆನೆ ಯಾವತ್ತಿನಂತೆ ಲಾಯದ ಮಧ್ಯ ಭಾಗದಲ್ಲಿ ನಿಂತಿತ್ತು, ಆಗಾಗ ಕಿವಿಯನ್ನು ಬೀಸುತ್ತಿತ್ತು ಮತ್ತು ಕಣ್ಣಿನ ರೆಪ್ಪೆಯನ್ನು ಬಡಿಯುತ್ತಿತ್ತು. ಸದರಿ  ಆನೆಗೆ ಅದೆಷ್ಟು ವಯಸ್ಸಾಗಿತ್ತೆಂದರೆ ನೋಡುಗರಿಗೆ ಅದರ ಪ್ರತಿ ಚಲನೆಯ ಹಿಂದೆ ಅಗಾಧ ಶ್ರಮವಿರುವ೦ತೆ ಭಾಸವಾಗುತ್ತಿತ್ತು ಮತ್ತು ಅದು ಯಾವುದೇ ಕ್ಷಣದಲ್ಲಾದರೂ ಕುಸಿದು ಬಿದ್ದು ತನ್ನ ಕೊನೆಯುಸಿರನ್ನು ಎಳೆಯಬಹುದು ಅನಿಸುತ್ತಿತ್ತು .

ಕಳೆದ ವರ್ಷ ನಮ್ಮ ನಗರ ಆನೆಯನ್ನು ದತ್ತು ತೆಗೆದುಕೊಳ್ಳಲು ಅದರ  ವಯಸ್ಸೇ ಕಾರಣವಾಗಿತ್ತು ಎಂದರೂ ಸರಿಯೆ.  ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ನಗರದ ಅಂಚಿನಲ್ಲಿದ್ದ ಮೃಗಾಲಯವನ್ನು  ಅನಿವಾರ್ಯವಾಗಿ ಮುಚ್ಚುವ ಸಂದರ್ಭ ಬಂದಾಗ , ಮೃಗಾಲಯದ ಮಾಲೀಕ ಆನೆಯೊಂದನ್ನು ಹೊರತುಪಡಿಸಿ ಬೇರೆಲ್ಲ ಪ್ರಾಣಿಗಳಿಗೂ ದೇಶದ ಬೇರೆ ಬೇರೆ ಕಡೆ ಜಾಗವನ್ನು ಹುಡುಕಿದ್ದ.  ಆದರೆ ಪ್ರತಿಯೊಂದು ಮೃಗಾಲಯದಲ್ಲೂ ಆನೆ ಸರ್ವೇ ಸಾಮಾನ್ಯವಾಗಿ ಇರುತ್ತಿದ್ದ ಪ್ರಾಣಿಯಾದ್ದರಿಂದ ಈ ಆನೆಯನ್ನು ಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಅಲ್ಲದೇ, ಆಗಲೋ ಈಗಲೋ ಹೃದಯಾಘಾತದಿಂದ ಸಾಯುವಂತೆ ತೋರುತ್ತಿದ್ದ  ಇಂತಹ ಪುರಾತನ ಆನೆಯನ್ನು ಕೊಳ್ಳುವ ಧೈರ್ಯ ಯಾರಿಗೂ ಇರಲಿಲ್ಲ.  ಹೀಗಾಗಿ ಅದರ ಸಹವರ್ತಿಗಳೆಲ್ಲ ಹೋದ ಮೇಲೆ ಶಿಥಿಲವಾಗಿದ್ದ ಆ ಮೃಗಾಲಯದಲ್ಲಿ  ಆನೆ ಸುಮಾರು ನಾಲ್ಕು ತಿಂಗಳುಗಳ ಕಾಲ  ಏನನ್ನೂ ಮಾಡದೆ  ಒಂಟಿಯಾಗಿ ನಿಂತಿತ್ತು. ಹಾಗೆಂದು ಮೊದಲೆಲ್ಲ ಅದು ಏನನ್ನಾದರೂ  ಮಾಡುತ್ತಿರುತ್ತಿತ್ತು ಎಂದಲ್ಲ.

ಇದು ನಗರಕ್ಕೆ ಮತ್ತು ಮೃಗಾಲಯಕ್ಕೆ ಬಹು ದೊಡ್ಡ ಸಮಸ್ಯೆಯನ್ನು ತಂದೊಡ್ಡಿತ್ತು.  ಮೃಗಾಲಯದ ಮಾಲೀಕ, ಮೃಗಾಲಯದ ಭೂಮಿಯನ್ನು  ಒಬ್ಬ  ರಿಯಲ್ಎಸ್ಟೇಟ್  ವ್ಯಕ್ತಿಗೆ  ಮಾರಿದ್ದ ,  ಈ ಜಾಗದಲ್ಲಿ ಬಹು ಅಂತಸ್ತಿನ ಕಟ್ಟಡವನ್ನು ಕಟ್ಟುವದಕ್ಕಾಗಿ ನಗರಪಾಲಿಕೆಯವರು ಈಗಾಗಲೇ ಅವನಿಗೆ ಪರವಾನಿಗೆ ನೀಡಿದ್ದರು.  ಆದರೆ  ಆನೆಯ ಸಮಸ್ಯೆ ಬಗೆ ಹರಿಯದೆ ರಿಯಲ್ ಎಸ್ಟೇಟಿನವ ಕೆಲಸ ಶುರು ಮಾಡುವ ಹಾಗಿರಲಿಲ್ಲ.  ಆದರೆ ಈಗಾಗಲೇ ಕೆಲಸಕ್ಕೆ ಸಾಲ ತೆಗೆದುಕೊಂಡಿದ್ದರಿಂದ ಅವನು ಸುಖಾ ಸುಮ್ಮನೆ  ಬಡ್ಡಿಯನ್ನು ಕಟ್ಟಬೇಕಿತ್ತು.  ಆನೆಯನ್ನು  ಮುಗಿಸಿಹಾಕುವದು ಯಾವುದೇ ಕಾರಣಕ್ಕೂ ಅಸಾಧ್ಯವಾದ ಮಾತಾಗಿತ್ತು.  ಯಾವುದೊ ಜುಜುಬಿ ಜೇಡವೋ , ಮಂಗವೋ ಇಲ್ಲ ಬಾವಲಿಯೋ ಆಗಿದ್ದರೆ ಯಾರಿಗೂ ತಿಳಿಯದಂತೆ ಅದನ್ನು ಸಾಯಿಸಿ ಕೆಲಸವನ್ನು ಮುಗಿಸುವದು  ಕಷ್ಟಕರವಾಗಿರಲಿಲ್ಲ.  ಆದರೆ ಆನೆಯಷ್ಟು ಭಾರಿ ಗಾತ್ರದ ಪ್ರಾಣಿಯನ್ನು ಯಾರಿಗೂ ತಿಳಿಯದಂತೆ ಮುಗಿಸುವದು  ಮತ್ತು ಈ ವಿಷಯ ಎಲ್ಲಿಯೂ ಹೊರಗೆ ಬರದಂತೆ ನೋಡಿಕೊಳ್ಳುವದು ಸಾಧ್ಯವೇ ಇಲ್ಲ.  ಹಾಗೊಂದು ವೇಳೆ ಆನೆಯ  ಕೆಲಸ ಮುಗಿಸಿದ ನಂತರ ವಿಷಯ ಹೊರಗೆ ಬಂದರೆ ಅದರ ಪರಿಣಾಮ ಅತ್ಯಂತ ಗಂಭೀರವಾಗಿರುವದರಲ್ಲಿ ಅನುಮಾನವೇ ಇಲ್ಲ. 

ಹೀಗಾಗಿ ಸದರಿ ವಿಷಯಕ್ಕೆ ಸಂಬಂಧಪಟ್ಟವರೆಲ್ಲ ಒಂದೆಡೆಗೆ ಕುಳಿತು, ಗಹನವಾದ ಚರ್ಚೆ ನಡೆಸಿ ಆನೆಯ ಸಮಸ್ಯೆಯನ್ನು ಇತ್ಯರ್ಥಪಡಿಸಲು  ಈ ಕೆಳಕಂಡ  ವಿಷಯಗಳನ್ನು  ಅನುಮೋದಿಸಿದರು :

೧. ಆನೆಯ ಸಂಪೂರ್ಣ ಜವಾಬ್ದಾರಿಯನ್ನು ನಗರಸಭೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಒಪ್ಪಿಕೊಳ್ಳುತ್ತದೆ
೨.  ರಿಯಲ್ ಎಸ್ಟೇಟ್ ಮಾಲೀಕ ಸ್ವ೦ತ  ಖರ್ಚಿನಲ್ಲಿ  ಒಂದು ಆನೆ ಲಾಯವನ್ನು ನಿರ್ಮಿಸಿಕೊಡತಕ್ಕದ್ದು
೩. ಮೃಗಾಲಯದ ಮಾಜಿ ಮಾಲೀಕ ಆನೆಯ ಮಾವುತನಿಗೆ ಪ್ರತಿ ತಿಂಗಳು ಸಂಬಳವನ್ನು ಕೊಡತಕ್ಕದ್ದು

ಆನೆಯ ವಿಷಯ ಪ್ರಾರಂಭದಿ೦ದಲೂ  ನನಗೆ ಕುತೂಹಲವನ್ನು ಕೆರಳಿಸಿದ್ದರಿಂದ , ನಾನು  ಮೊದಲಿನಿಂದಲೂ ಈ ವಿಷಯಕ್ಕೆ ಸಂಬಂದ  ಪಟ್ಟ  ಎಲ್ಲ ಲೇಖನಗಳನ್ನೂ , ಪತ್ರಿಕಾ ವರದಿಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದೆ.  ನಗರಸಭೆಯ  ಕಲಾಪದಲ್ಲಿ ಆನೆಯ ಬಗ್ಗೆ ಚರ್ಚೆ ನಡೆದಾಗ ನಾನು ಸ್ವತ:  ಹಾಜರಿದ್ದು , ಚರ್ಚೆಯ ವಿವರಗಳನ್ನು ಬರೆದಿಟ್ಟುಕೊಂಡಿದ್ದೆ. ಹಾಗಾಗಿಯೇ ಇಲ್ಲಿಯವರೆಗೆ ನಾನು  ಇಷ್ಟು ವಿವರವಾಗಿ ಆನೆಯ ವಿಷಯವನ್ನು ವಿವರಿಸಲಿಕ್ಕೆ ಸಾಧ್ಯವಾದದ್ದು.    ಇವೆಲ್ಲ ವಿವರಗಳು ತುಸು ದೀರ್ಘವೇ ಅನಿಸಿದರೂ , ಒಂದು ವೇಳೆ ಆನೆ ಇದ್ದಕ್ಕಿದ್ದಂತೆ ಅದೃಶ್ಯವಾದುದ್ದಕ್ಕೆ ಆನೆಯ ಪೂರ್ವ ಸಮಸ್ಯೆಗಳೇ ಮೂಲ ಕಾರಣ ಎಂದಾದರೆ  ಈ ವಿವರಗಳು ಅಗತ್ಯವಾಗಬಹುದು.

ನಗರದ  ಮೇಯರ್ ಆನೆಯ ಜವಾಬ್ದಾರಿಯನ್ನು ನಗರಸಭೆ ಹೊರುವುದಾಗಿ ಪ್ರಕಟಿಸಿದಾಗ , ವಿರೋಧ ಪಕ್ಷದವರು ಅದನ್ನು ತೀವ್ರವಾಗಿ ವಿರೋಧಿಸಿದರು. ( ಅಲ್ಲಿಯವರೆಗೆ ವಿರೋಧ ಪಕ್ಷ ಅಸ್ತಿತ್ವದಲ್ಲಿದೆ ಎನ್ನುವದೇ ನನಗೆ ತಿಳಿದಿರಲಿಲ್ಲ ) . " ಆನೆಯ ಜವಾಬ್ದಾರಿಯನ್ನು ನಗರಸಭೆ ಯಾಕೆ ಹೊತ್ತುಕೊಳ್ಳಬೇಕು ?"  ವಿರೋಧ ಪಕ್ಷದವರು ಈ ಕೆಳಗಿನ  ಪ್ರಶ್ನೆಗಳನ್ನು ಎತ್ತಿದರು. ( ಅನಗತ್ಯ ವಿವರ ಅನ್ನಿಸಬಹುದು.  ಕ್ಷಮಿಸಿ , ಆದರೆ ಕೇಸನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಇವೆಲ್ಲ ಬೇಕಾಗುತ್ತದೆ )

೧. ಆನೆಯ ಸಮಸ್ಯೆ ಇಬ್ಬರು ಖಾಸಗಿ ವ್ಯವಹಾರಸ್ಥರ ನಡುವಿನದು - ರಿಯಲ್ ಎಸ್ಟೇಟ್ ಮಾಲೀಕ ಮತ್ತು ಮೃಗಾಲಯದ ಮಾಲೀಕ. ನಗರಸಭೆ ಇದರಲ್ಲಿ ಭಾಗಿಯಾಗುವ ಅಗತ್ಯವಿಲ್ಲ.
೨. ಆನೆಗೆ ಊಟ ಒದಗಿಸುವ ಮತ್ತು ನೋಡಿಕೊಳ್ಳಲು ಅತಿಯಾದ   ಖರ್ಚು  ತಗಲುತ್ತದೆ.
೩.  ಭದ್ರತೆ ವಿಷಯದಲ್ಲಿ ಮೇಯರ್ ಅವರ ಅಭಿಪ್ರಾಯವೇನು ?
೪. ತನ್ನದೇ ಆದ ಆನೆಯನ್ನು ಹೊಂದುವದಕ್ಕೆ ನಗರಕ್ಕೆ ನಿಜಕ್ಕೂ ಅರ್ಹತೆಯಿದೆಯೇ  ?

ಇವೆಲ್ಲ ಆರೋಪಗಳಿಗೆ ಸಂಬಂಧಿಸಿದಂತೆ ಮೇಯರ್ ಈ ಕೆಳಗಿನ ಪ್ರತಿಕ್ರಿಯೆ ನೀಡಿದರು :

೧. ಮೃಗಾಲಯದ ಜಾಗದಲ್ಲಿ ಬಹು ಮಹಡಿ ಕಟ್ಟಡ ಕಟ್ಟುವದರಿಂದ ನಗರ ಸಭೆಗೆ ಹೆಚ್ಚಿನ ತೆರಿಗೆ ಸಂದಾಯವಾಗುತ್ತದೆ.  ತೆರಿಗೆ ಆದಾಯಕ್ಕೆ ಹೋಲಿಸಿದರೆ ಆನೆಯ ವೆಚ್ಚ ಬಹಳ ಕಡಿಮೆ. ಹೀಗಾಗಿ ಆನೆಯ ಜವಾಬ್ದಾರಿ ಹೊರುವದು ಸರಿಯಾದ ನಡೆ.
೨. ಆನೆ ಬಹಳ  ವಯಸ್ಸಾಗಿರುವದರಿಂದ ಅದು ಹೆಚ್ಚಿನ ಊಟವನ್ನೇನೂ ಮಾಡುವದಿಲ್ಲ ಮತ್ತು  ಭದ್ರತೆಯ ಬಗ್ಗೆ  ಅನಗತ್ಯವಾಗಿ ಭಯಪಡುವ ಕಾರಣಗಳಿಲ್ಲ.
೩. ಆನೆ ಗತಿಸಿದಾಗ , ರಿಯಲ್ ಎಸ್ಟೇಟ್ ಕಂಪನಿ ಕಟ್ಟಿಕೊಟ್ಟಿದ್ದ ಲಾಯ ಮತ್ತು ಆ ಜಾಗ ನಗರಸಭೆಯ ಸುಪರ್ದಿಗೆ ಸೇರುತ್ತದೆ.
೪. ಆನೆ ನಗರದ ಸಂಕೇತವಾಗಬಹುದು.

ಸುದೀರ್ಘವಾಗಿ ನಡೆದ ಚರ್ಚೆ ಕೊನೆಗೂ ಆನೆಯ ಜವಾಬ್ದಾರಿಯನ್ನು ನಗರಸಭೆ ಹೊರಬೇಕು ಎನ್ನುವ ತೀರ್ಮಾನದೊಂದಿಗೆ ಮುಕ್ತಾಯವಾಯಿತು.

ಬಹುತೇಕ ಶ್ರೀಮ೦ತರೇ ವಾಸವಾಗಿದ್ದ ಮತ್ತು ಆರ್ಥಿಕವಾಗಿ ಸದೃಢವಾಗಿದ್ದ ಈ  ಉಪನಗರದಲ್ಲಿ ವಯಸ್ಸಾದ ಒಂದು ಆನೆಯ ಜವಾಬ್ದಾರಿ ಹೊರುವದು ಅಂತಹ   ಕಷ್ಟಕರ ಕೆಲಸವೇನು ಆಗಿರಲಿಲ್ಲ. ಅಲ್ಲದೇ ಮೇಲ್ನೋಟಕ್ಕೆ,   ಒಳ ಚರಂಡಿ ಸಮಸ್ಯೆ ಮತ್ತು ಹೊಸ ಅಗ್ನಿಶಾಮಕ ದಳದ
 ವ್ಯವಸ್ಥೆ ಇತ್ಯಾದಿ ಸಮಸ್ಯೆಗಳಿಗೆ ಹೋಲಿಸಿದರೆ ಜನ ಈ ಮುದಿ ಆನೆಯನ್ನೇ  ಆಯ್ಕೆ ಮಾಡಿಕೊಂಡಂತಿತ್ತು.ನಾನು ವೈಯಕ್ತಿಕವಾಗಿ ನಗರ ಸಭೆ ಆನೆಯ ಜವಾಬ್ದಾರಿ ಹೊರುವದರ ಪರವಾಗಿದ್ದೆ.  ಹೌದು , ಬಹು ಮಹಡಿ ಕಟ್ಟಡಗಳು ನನಗೆ ಇಷ್ಟವಾಗುತ್ತಿರಲಿಲ್ಲ ಆದರೂ  ನಾನು ವಾಸವಾಗಿದ್ದ ನಗರ ಒಂದು ಆನೆಯನ್ನು ಹೊಂದುವದು ನನಗೆ ಹೆಮ್ಮೆಯ ವಿಷಯವೇ ಆಗಿತ್ತು

ಗಿಡ ಮರಗಳನ್ನು ತುಂಬಿದ್ದ  ಜಾಗವೊಂದನ್ನು  ಸವರಿ , ಅಲ್ಲಿಗೆ  ಪ್ರಾಥಮಿಕ ಶಾಲೆಯ ಹರಕು ಮುರುಕು ಜಿಮ್ ನಲ್ಲಿದ್ದ  ಉಪಕರಣಗಳನ್ನು  ಸೇರಿಸಿ ಲಾಯವನ್ನು ನಿರ್ಮಿಸಲಾಯಿತು .  ಹಲವಷ್ಟು ವರ್ಷಗಳಿಂದ ಆನೆಯ ಮಾವುತನಾಗಿದ್ದವನನ್ನು  ಆನೆಯೊಟ್ಟಿಗೆ ಆ ಲಾಯ ಅಥವಾ  ಮನೆಯಲ್ಲಿ  ಉಳಿದುಕೊಳ್ಳಲು ಕರೆದುಕೊಂಡು ಬರಲಾಯಿತು .  ಶಾಲೆಯ ಮಕ್ಕಳಿಗೆ ಊಟವಾದ ಮೇಲೆ ಮಿಕ್ಕುಳಿಯುವದನ್ನು ಆನೆಗೆ ಊಟವಾಗಿ ಕೊಡುವದು ಎಂದು ನಿರ್ಧರಿಸಲಾಯಿತು. ಕೊನೆಗೆ ಲಾರಿಯೊಂದರ ಮೇಲೆ ಆನೆಯನ್ನು ಅದರ ಹೊಸ ಮನೆಗೆ  ಕರೆತರಲಾಯಿತು.
ಆನೆಯನ್ನು ನಗರಕ್ಕೆ ಸಮರ್ಪಿಸುವ ಕಾರ್ಯಕ್ರಮದಲ್ಲಿ  ನಾನು ನೆರೆದಿದ್ದ ಜನಜಂಗುಳಿಯ ಜೊತೆಗೆ  ಭಾಗವಹಿಸಿದ್ದೆ.  ಆನೆಯ ಪಕ್ಕ ನಿಂತು ಮೇಯರ್ ಒಂದು  ಭಾಷಣವನ್ನು ಮಾಡಿದರು ( ನಗರದ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಶ್ರೀಮ೦ತಿಕೆಯನ್ನು ಪುಷ್ಟಿಗೊಳಿಸುವದರ  ಕುರಿತು ) , ಪ್ರಾಥಮಿಕ ಶಾಲೆಯ ಪರವಾಗಿ , ವಿದ್ಯಾರ್ಥಿಯೊಬ್ಬ ಮೊದಲೇ ಬರೆದಿಟ್ಟುಕೊಂಡಿದ್ದ ಭಾಷಣವನ್ನು ಓದಿದ ( "ಮಾನ್ಯ ಆನೆ,  ದೇವರು ನಿನಗೆ ದೀರ್ಘ ಆಯುರಾರೋಗ್ಯ  , ಆಯಸ್ಸನ್ನು ದಯಪಾಲಿಸಲಿ  ") , ಜೊತೆಗೆ ಮಕ್ಕಳಿಗೆ ಆನೆಯ ಚಿತ್ರವನ್ನು  ಬಿಡಿಸುವ  ಸ್ಪರ್ಧೆಯನ್ನು  ಏರ್ಪಡಿಸಲಾಗಿತ್ತು. ( ಇದಾದ ನಂತರ ಆನೆಯ ಚಿತ್ರ ರಚಿಸುವದು ಮಕ್ಕಳಿಗೆ ಕಡ್ಡಾಯ ಚಟುವಟಿಕೆಯಾಯಿತು ) , ಸುಂದರಾವಾದ ಉಡುಪುಗಳನ್ನು ಧರಿಸಿದ್ದ ಸಾಧಾರಣ ರೂಪಿನ ಇಬ್ಬರು ಯುವತಿಯರು ಸಾಂಕೇತಿಕವಾಗಿ ಆನೆಗೆ ಬಾಳೆಹಣ್ಣುಗಳನ್ನು ತಿನ್ನಿಸಿದರು. ಆನೆ ಇವೆಲ್ಲ ಅರ್ಥಹೀನ ಚಟುವಟಿಕೆಗಳನ್ನು ( ಆನೆಯ ಪ್ರಕಾರ ಇವೆಲ್ಲ ಖಂಡಿತವಾಗಿಯೂ ಅರ್ಥಹೀನವೇ ಸರಿ ) ಅತ್ಯಂತ ಸ೦ಯಮದಿಂದ   ಸಹಿಸಿಕೊಂಡಿತ್ತು ಮತ್ತು ಯುವತಿಯರು ಕೊಟ್ಟ ಬಾಳೆಹಣ್ಣುಗಳನ್ನು ನಿರ್ಭಾವುಕವಾಗಿ ಮೆಲ್ಲುತ್ತಿತ್ತು. ಆನೆ ಬಾಳೆಹಣ್ಣುಗಳನ್ನು ತಿಂದು ಮುಗಿಸಿದ ನಂತರ ಜನ ಕರತಾಡನ ಮಾಡಿದರು. 

ಆನೆಯ ಬಲ ಹಿಂಗಾಲಿಗೆ ಒಂದು ಗಟ್ಟಿ ಮುಟ್ಟಾದ ಲೋಹದ  ಕೋಳವನ್ನು  ತೊಡಿಸಿದ್ದರು.  ಆ ಕೋಳದಿಂದ ಸುಮಾರ ೩೦ ಅಡಿಯಷ್ಟು ಉದ್ದನೆಯ ದಪ್ಪ  ಸರಪಳಿಯೊಂದನ್ನು  ಎಳೆದು ಕಾಂಕ್ರೀಟ್ ಹಾಸುಗಲ್ಲಿಗೆ ಬಿಗಿದಿದ್ದರು. ಅದನ್ನು ನೋಡಿದ ಪ್ರತಿಯೊಬ್ಬರಿಗೂ ಬಲಶಾಲಿಯಾದ ಆನೆಯನ್ನು ಎಷ್ಟು ಬಂದೋಬಸ್ತಾಗಿ ಇಟ್ಟಿದ್ದಾರೆ ಎನ್ನುವದು ತಿಳಿಯುತ್ತಿತ್ತು - ಆನೆ ತನ್ನೆಲ್ಲ ಶಕ್ತಿಯನ್ನು ಹಾಕಿ ನೂರು ವರ್ಷ ಪ್ರಯತ್ನಿಸಿದರೂ ಈ ಬಂಧನ  ಕಿತ್ತು ಬರುವ ಹಾಗಿರಲಿಲ್ಲ.
ಈ ಲೋಹದ ಸಂಕೋಲೆ ಆನೆಯನ್ನು ನಿಜಕ್ಕೂ  ಬಾಧಿಸುತ್ತಿತ್ತೇ ಎನ್ನುವದರ ಬಗ್ಗೆ ನನಗೆ ಖಚಿತತೆ ಇರಲಿಲ್ಲ. ಮೇಲ್ನೋಟಕ್ಕೆ , ಆನೆಗೆ ತನ್ನ ಕಾಲಿಗೆ ಬಿಗಿದ ಆ ಅಸಾಧ್ಯ ಭಾರದ ಲೋಹದ ಸರಪಳಿಯ ಬಗ್ಗೆ ಅರಿವೇ ಇರಲಿಲ್ಲ ಎಂದು ತೋರುತ್ತಿತ್ತು. ಅದು ಶೂನ್ಯವೊಂದರಲ್ಲಿನ ಯಾವುದೋ ಬಿಂದುವನ್ನು ಸದಾಕಾಲ ದಿಟ್ಟಿಸುತ್ತ ನಿಂತಿರುತ್ತಿತ್ತು ; ಅದರ ಕಿವಿ , ಮೈಮೇಲಿನ ಒಂದೋ ಎರಡೋ ಬಿಳಿ ರೋಮಗಳು ಆಗಾಗ್ಗೆ ಗಾಳಿಗೆ ಸೂಕ್ಷ್ಮವಾಗಿ ಕ೦ಪಿಸುತ್ತಿದ್ದವು.

ಇನ್ನು  ಮಾವುತ ಸಣ್ಣನೆಯ , ಸಣಕಲು ದೇಹದ ವಯಸ್ಸಾದ ವ್ಯಕ್ತಿಯಾಗಿದ್ದ. ಅವನ ನಿಜವಾದ ವಯಸ್ಸನ್ನು ಊಹಿಸುವದು ಕಷ್ಟವಾಗಿತ್ತು, ಅವನಿಗೆ ಬಹುಶ: ಅರವತ್ತೋ ಇಲ್ಲ ಎಪ್ಪತ್ತರ ಆಸುಪಾಸು ಇರಬಹುದು. ಕೆಲ ವ್ಯಕ್ತಿಗಳಿಗೆ  ಒಂದು ಹಂತದ ವಯಸ್ಸಾದ ಮೇಲೆ ಅವರಿಗೆ ಇಂತಿಷ್ಟೇ ವಯಸ್ಸು ಎಂದು ಊಹಿಸುವದು ಅಸಾಧ್ಯವಾಗುತ್ತಲ್ಲ ಅಂತಹ ಕೆಲವರ ಗುಂಪಿಗೆ ಸೇರಿದವನಾಗಿದ್ದ. ಅವನ ಚರ್ಮ ಬೇಸಿಗೆ ಮತ್ತು ಚಳಿಗಾಲ ಎರಡರಲ್ಲೂ , ಬಿಸಿಲಿಗೆ ಕಂದು ಬಣ್ಣಕ್ಕೆ ತಿರುಗಿದ್ದ ಚರ್ಮದ ಹಾಗೆಯೇ ಇರುತಿತ್ತು. ಅವನ ಕೂದಲು ಸಣ್ಣಗೆ ಆದರೆ  ನೇರವಾಗಿದ್ದವು , ಅವನ ಕಣ್ಣುಗಳು ಕಿರಿದಾಗಿದ್ದವು. ಅವನ ಮುಖದಲ್ಲಿ ನೆನಪಿಟ್ಟುಕೊಳ್ಳುವ ಯಾವುದೇ ವಿಶೇಷತೆಗಳಿಲ್ಲದೆ ಇದ್ದರೂ ಅವನ ತಲೆಗೆ ಅಂಟಿಸಿಟ್ಟಂತೆ ತೋರುತ್ತಿದ್ದ ವೃತ್ತಾಕಾರದ ಕಿವಿಗಳು ಅಸ್ವಸ್ಥಗೊಳಿಸುವಷ್ಟು ಎದ್ದು ಕಾಣಿಸುತ್ತಿತ್ತು.

ಅವನೇನು ಸ್ನೇಹಭಾವವಿಲ್ಲದವನಾಗಿರಲಿಲ್ಲ. ಯಾರಾದರೂ ಮಾತನಾಡಿಸಿದರೆ ಅವನು ಸ್ಪಷ್ಟವಾಗಿ ಅವನ ವಿಚಾರಗಳನ್ನು ಹೇಳುತ್ತಿದ್ದ. ಬಯಸಿದ್ದರೆ ಅವನು ಎಲ್ಲರನ್ನೂ  ಮರಳುಮಾಡುವಂತೆ ಇರಬಹುದಾಗಿತ್ತು ಆದರೂ ಅವನನ್ನು ನೋಡಿದಾಕ್ಷಣ ಅವನಲ್ಲಿನ ಸಣ್ಣನೆಯ ಕ್ಷೋಭೆ ಗಮನಕ್ಕೆ ಬರುವಂತಿತ್ತು.  ಒಟ್ಟಿನಲ್ಲಿ ಅವನೊಬ್ಬ ಮಿತಭಾಷಿಯೂ , ಒಬ್ಬಂಟಿಯೂ ಆದ ವೃದ್ಧ ಮನುಷ್ಯ.  ಅವನಿಗೆ ಆನೆಯನ್ನು ನೋಡಲು ಬರುತ್ತಿದ್ದ ಮಕ್ಕಳನ್ನು ನೋಡಿದರೆ ಖುಷಿಯಾಗುತ್ತಿತ್ತೇನೋ , ಅವರೊಟ್ಟಿಗೆ ಸ್ನೇಹ ಭಾವದಿಂದ ಅವನು ವರ್ತಿಸುತ್ತಿದ್ದರೂ ಅದೇಕೋ ಮಕ್ಕಳೇ ಹಿಂಜರಿಯುತ್ತಿದ್ದರು.  

ಅವನೊಟ್ಟಿಗೆ ಚೆನ್ನಾಗಿದ್ದುದೆಂದರೆ ಆನೆ . ಮಾವುತ ಆನೆಯ ಲಾಯಕ್ಕೆ  ಅಂಟಿಕೊಂಡಂತೆ ಇದ್ದ ಪಕ್ಕದ ಸಣ್ಣ ಕೋಣೆಯಲ್ಲಿ ವಾಸವಾಗಿದ್ದ ಮತ್ತು ದಿನವಿಡೀ ಆನೆಯ ಬೇಕು ಬೇಡಗಳನ್ನು ಸದಾ ನೋಡಿಕೊಳ್ಳುತ್ತಿದ್ದ. ಅವರು ಸುಮಾರು ಹತ್ತು ವರ್ಷಗಳಿಂದ ಸದಾ ಜೊತೆಗಿದ್ದವರು ಹೀಗಾಗಿ ಅವರಿಬ್ಬರ ನಡುವಿನ ಅವಿನಾಭಾವ ಸಂಬಂಧವನ್ನು ನೀವು ಅವರು ಪರಸ್ಪರರೊಟ್ಟಿಗೆ ನಡೆದುಕೊಳ್ಳುವ ರೀತಿಯಲ್ಲೇ ಗಮನಿಸಬಹುದಿತ್ತು.  ಶೂನ್ಯವನ್ನು ದಿಟ್ಟಿಸುತ್ತಿದ್ದ ಆನೆಯನ್ನು ಕದಲಿಸಬೇಕೆಂದರೆ ಮಾವುತ ಮಾಡಬೇಕಾಗಿದ್ದಿಷ್ಟೇ - ಅದರ ಪಕ್ಕ ಬಂದು ನಿಂತು ಅದರ ಮುಂಗಾಲಿಗೆ ಒಮ್ಮೆ ತಟ್ಟಿ ನಂತರ ಕಿವಿಯಲ್ಲಿ ಅದೇನೋ ಪಿಸುಗುಡುವದು.  ಆಗ , ಆನೆ ತನ್ನ ದೈತ್ಯ ದೇಹವನ್ನು ಕದಲಿಸಿ , ಮಾವುತ ಬಯಸಿದ ಜಾಗದಲ್ಲಿ ಬಂದು ನಿಂತು ಮತ್ತೆ ಶೂನ್ಯವನ್ನು ದಿಟ್ಟಿಸಲು ಪ್ರಾರಂಭಿಸುತ್ತಿತ್ತು.

ಪ್ರತಿ ವಾರಾಂತ್ಯವೂ ನಾನು ಆನೆ ಲಾಯಕ್ಕೆ ಭೇಟಿ ನೀಡಿ,  ಆನೆ ಮತ್ತು ಮಾವುತರ ನಡುವಿನ ಈ ಸಂಭಾಷಣೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಆದರೆ ಆನೆ-ಮಾವುತರ  ಸಂಭಾಷಣೆಯ ಹಿಂದಿನ ಮೂಲ ತತ್ವ ಕೊನೆಯವರೆಗೂ ನನಗೆ ತಿಳಿಯಲಿಲ್ಲ. ಬಹುಶ: ಆನೆಗೆ ಕೆಲ ಸರಳ ಶಬ್ದಗಳು ಅರ್ಥವಾಗುತ್ತಿತ್ತು ( ಅಷ್ಟು  ಅರ್ಥವಾಗುವಷ್ಟು ಕಾಲ ಅದು ಬದುಕಿದೆ )  ಅಥವಾ ಅದರ ಕಾಲಿಗೆ ಮಾವುತ ಮೆಲ್ಲಗೆ ತಟ್ಟುತ್ತಿದ್ದ ರೀತಿಯಲ್ಲಿನ ಬದಲಾವಣೆಯಿಂದ ಸಂವಹನ ನಡೆಸುತ್ತಿತ್ತು ಅಥವಾ ಅದರ ಮತ್ತು ಮಾವುತನ ನಡುವೆ ಅತಿಂದ್ರೀಯವಾದ ಭಾಷಾ ವಿನಿಮಯ ನಡೆದು , ಮಾವುತನ ಚಿತ್ತದಲ್ಲಿರುವ ಯೋಚನೆ ಆನೆಯತ್ತ ಪ್ರವಹಿಸುತ್ತಿತ್ತು. ನಾನು ಒಮ್ಮೆ ಮಾವುತನನ್ನೇ ಈ ಸಂಭಾಷಣೆಯ ಬಗ್ಗೆ ಕೇಳಿದ್ದೆ. ಮುದುಕ ನಸುನಕ್ಕು ಉತ್ತರಿಸಿದ್ದ " ನಾವಿಬ್ಬರು ಸಾಕಷ್ಟು ಕಾಲದಿಂದ ಜೊತೆಗಿದ್ದೇವೆ ."

ಮತ್ತು ಹೀಗೆಯೇ ಒಂದು ವರ್ಷ ಕಳೆಯಿತು. ಒಂದು ದಿನ ಇದ್ದಕ್ಕಿದ್ದ ಹಾಗೆ ಆನೆ ಅದೃಶ್ಯವಾಯಿತು. ಆಗ ಇತ್ತು ಈಗ ಇಲ್ಲ.

ನಾನು ಎರಡನೇ ಸಲ ಕಾಫಿಯನ್ನು ಲೋಟಕ್ಕೆ ಹಾಕಿಕೊಂಡು  ಮತ್ತೆ ಸುದ್ದಿಯನ್ನು ಕೂಲಂಕುಷವಾಗಿ ಓದಿದೆ. ನಿಜ ಹೇಳಬೇಕೆಂದರೆ ಅದೊಂದು ವಿಚಿತ್ರ ಲೇಖನ. ಶೆರ್ಲಾಕ್ ಹೋಮ್ ನನ್ನು  ಆಕರ್ಷಿಸುವಂತದ್ದು.  " ನೋಡು ವ್ಯಾಟ್ಸನ್ , ತುಂಬಾ ಆಸಕ್ತಿದಾಯಕವಾಗಿದೆ " ಎಂದು  ಅವನು ಪೈಪ್ ಸೇದುತ್ತ ಹೇಳುತ್ತಿದ್ದನೇನೋ.    

ಲೇಖನಕ್ಕೆ ವಿಚಿತ್ರತೆಯನ್ನು ತಂದುಕೊಟ್ಟಿದ್ದು ವರದಿಗಾರನಲ್ಲಿ  ಈ ಘಟನೆ  ಕೆರಳಿಸಿದ್ದ ವಿಸ್ಮಯತೆ ಮತ್ತು ಗೊಂದಲ.  ಹಾಗೆ ನೋಡಿದರೆ ಈ  ವಿಸ್ಮಯತೆ ಮತ್ತು ಗೊ೦ದಲ  ಇವೆರಡಕ್ಕೂ ಮೂಲಭೂತ ಕಾರಣ  ಅಸಂಗತವಾದ ಈ  ಘಟನೆಯೇ ಹೌದು.  ಹೀಗಾಗಿ  ಲೇಖನದುದ್ದಕ್ಕೂ ಘಟನೆಯ ಅಸಂಗತತೆಯನ್ನು   ಹೋಗಲಾಡಿಸಿ , ಇಡೀ ಘಟನೆಗೆ ಒಂದು ಸಹಜತೆಯ  ಚೌಕಟ್ಟನ್ನು ನಿರ್ಮಿಸಲು  ಬರಹಗಾರ  ತೋರಿದ ಪರಿಶ್ರಮ ಎದ್ದು ಕಾಣುತ್ತಿತ್ತು. ಆದರೆ ಈ ಪರಿಶ್ರಮ ಘಟನೆಗೆ ಒಂದು ಸಹಜತೆಯನ್ನು  ತಂದು ಕೊಡುವ ಬದಲಾಗಿ  ಸಂಪೂರ್ಣ ಘಟನೆಯನ್ನು ಇನ್ನೂ ಗೊಂದಲವಾಗಿಯೂ , ವಿಸ್ಮಯಯಕಾರಿಯಾಗಿಯೂ ತೋರಿಸಿಕೊಟ್ಟಿದ್ದವು.

ಉದಾಹರಣೆಗೆ ಲೇಖನದಲ್ಲಿ ಈ ತೆರನಾದ ಅಭಿವ್ಯಕ್ತಿಗಳಿದ್ದವು - "ಆನೆ ಪರಾರಿಯಾಗಿದೆ " ಆದರೆ ಯಾರಾದರೂ ಲೇಖನವನ್ನು ಸಂಪೂರ್ಣವಾಗಿ ಓದಿದರೆ ಆನೆ ಖಂಡಿತವಾಗಿಯೂ ಪರಾರಿಯಾಗಿಲ್ಲ ಎನ್ನುವದು ಖಚಿತವಾಗಿ ತಿಳಿಯುತ್ತಿತ್ತು.  ಆನೆ ತಿಳಿ  ಗಾಳಿಯಲ್ಲಿ ಅದೃಶ್ಯವಾಗಿತ್ತು.
 ಕೆಲ "ವಿವರಗಳು" ಇನ್ನೂ  "ಅಸ್ಪಷ್ಟವಾಗಿವೆ " ಇತ್ಯಾದಿಗಳನ್ನು ಹೇಳುವ ಮೂಲಕ ವರದಿಗಾರ ಅವನ  ಗೊಂದಲಮಯ ಮನೋಸ್ಥಿತಿಯನ್ನು ಬಿಚ್ಚಿಟ್ಟಿದ್ದ. ಆದರೆ "ವಿವರ", "ಅಸ್ಪಷ್ಟ" ಇತ್ಯಾದಿ ಸರ್ವೇ ಸಾಧಾರಣ ಶಬ್ದಗಳಲ್ಲಿ ಹಿಡಿದಿಡಲು ಸಾಧ್ಯವಾಗುವ ಘಟನೆ ಇದಲ್ಲ ಎನ್ನುವದು ನನ್ನ ಬಲವಾದ ನಂಬಿಕೆಯಾಗಿತ್ತು.

ಮೊದಲನೆಯದಾಗಿ ಆನೆಯ ಕಾಲಿಗೆ ಕಟ್ಟಿದ್ದ ಲೋಹದ  ಬಳೆ ಮತ್ತು ಸರಪಳಿ. ಇವೆರಡೂ ಸಹ ಭದ್ರವಾಗಿಯೇ ಇದ್ದವು.  ಹೀಗಾಗಿ ಒಂದು ಒಪ್ಪಿಕೊಳ್ಳಬಹುದಾದ ತರ್ಕವೆಂದರೆ ಮಾವುತ ಆನೆಯ ಕಾಲಿನ ಸರಪಳಿಯ ಬೀಗ ತೆಗೆದು ಆನೆಯನ್ನು ಬಿಡಿಸಿ ಮತ್ತೆ ಕೀಲಿ ಹಾಕಿದ್ದ ಎನ್ನುವದು. ಸುದ್ದಿ ಮನೆಯ ವರದಿಗಾರರಿಗೆ ಅತ್ಯಂತ ಸಂತೋಷದಾಯಕವಾಗಬಹುದಾದ  ಈ  ತರ್ಕದಲ್ಲಿದ್ದ ಒಂದೇ ಒಂದು ದೋಷವೆಂದರೆ ಮಾವುತನ ಬಳಿ ಬೀಗವಿರಲಿಲ್ಲ ಎನ್ನುವದು .  ಭದ್ರತೆಯ ಕಾರಣಕ್ಕೋಸ್ಕರ ಆನೆಯ ಕಾಲಿನ ಸರಪಳಿಗಿದ್ದ ಎರಡು ಬೀಗಗಳಲ್ಲಿ, ಒಂದು ಪೊಲೀಸ್ ಮಹಾ ನಿರ್ದೇಶಕರ ಬಳಿಯಿರುವ ಲಾಕರಿನಲ್ಲೂ , ಇನ್ನೊಂದನ್ನು ಅಗ್ನಿಶಾಮಕ ದಳದ ಮುಖ್ಯಸ್ಥರ ಲಾಕರಿನಲ್ಲೂ ಭದ್ರವಾಗಿಡಲಾಗಿತ್ತು ಮತ್ತು ಇವೆರಡೂ ಜಾಗಗಳನ್ನು ತಲುಪುವದು ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ. ಇಷ್ಟಾಗಿಯೂ ಯಾರಾದರೂ ಬೀಗವನ್ನು ಎಗರಿಸಿದ್ದಾರೆ ಎಂದುಕೊಂಡರು , ಅದನ್ನು ಮತ್ತೆ ಅದೇ ಜಾಗದಲ್ಲಿ ಮರಳಿ ತಂದಿಡುವ ಅಗತ್ಯವಾದರೂ ಏನು ?  ಆದರೂ ಮಾರನೆಯ ದಿನ ಬೆಳಗ್ಗೆ ವಿಚಾರಿಸಿದಾಗ ಎರಡೂ ಬೀಗಗಳು ತಮ್ಮ ತಮ್ಮ ಜಾಗದಲ್ಲಿ ಸುರಕ್ಷಿತವಾಗಿದ್ದವು. ಇದು ನಮ್ಮನ್ನು ಇನ್ನೊಂದು ತರ್ಕದತ್ತ ಹೊರಳುವಂತೆ ಮಾಡುತ್ತದೆ - ಆನೆ ತನ್ನ ಕಾಲುಗಳನ್ನು ತಾನೇ ತಾನಾಗಿಯೇ ಸರಪಳಿಯಿಂದ ಕಳಚಿಕೊ೦ಡಿದೆ, ಆದರೆ ಯಾರಾದರೂ ಆನೆಯ ಕಾಲನ್ನು ಕತ್ತರಿಸದ ಹೊರತು  ಇದು ಅಸಾಧ್ಯ ಮಾತು.  

ಎರಡನೆಯ ಮುಖ್ಯ ಪ್ರಶ್ನೆ ಆನೆ ಪರಾರಿಯಾದ ದಾರಿ. ಆನೆಯ ಲಾಯ ಮತ್ತು ಸುತ್ತಲಿನ ಬಯಲಿಗೆ ೧೦ ಅಡಿ ಉದ್ದದ ಬೇಲಿ ಹಾಕಲಾಗಿತ್ತು. ಆನೆಯನ್ನು ಸುಪರ್ದಿಗೆ ತೆಗೆದುಕೊಳ್ಳುವಾಗ ಭದ್ರತೆಯ ವಿಷಯವನ್ನು ಗಹನವಾಗಿ ಚರ್ಚಿಸಲಾಗಿತ್ತು ಹೀಗಾಗಿ ಒಂದು ವಯಸ್ಸಾದ ಆನೆಗೆ ಅಗತ್ಯವಿಲ್ಲದಿದ್ದರೂ , ಸ್ವಲ್ಪ ಅತಿರೇಕವೇ ಅನಿಸುವ ಹಾಗೆ ಸಿಮೇ೦ಟ್ ಮತ್ತು ಸ್ಟಿಲಿನ ರಾಡಿನಿಂದ ೧೦ ಅಡಿ ಎತ್ತರದ ಭದ್ರ  ಬೇಲಿಯನ್ನು  ನಿರ್ಮಿಸಿದ್ದರು.  ಮತ್ತು ಈ ಬೇಲಿಯನ್ನು ದಾಟಿ ಹೋಗಲು , ಬರಲು ಒಂದೇ  ದ್ವಾರವಿದ್ದು , ಆ ದ್ವಾರದ ಬಾಗಿಲು ಒಳಗಿನಿಂದ ಭದ್ರವಾಗಿ ಅಗುಳಿ ಹಾಕಿ ಮುಚ್ಚಿಕೊಂಡಿತ್ತು. ಇವೆಲ್ಲ ಅಡೆತಡೆಗಳನ್ನು ದಾಟಿ ಆನೆ  ಓಡಿ  ಹೋಗಲು ಸಾಧ್ಯವೇ ಇಲ್ಲ.

ಮೂರನೇ ಪ್ರಶ್ನೆ ಎಂದರೆ ಆನೆ ಹೋಗಿರಬಹುದಾಗಿದ್ದ ಹಾದಿ. ಲಾಯದ ಹಿಂದೆ ಒಂದು ಕಡಿದಾದ ಗುಡ್ಡವಿದ್ದು , ಆನೆ ಅದನ್ನು ಹತ್ತುವ ಸಂಭವವಿರಲಿಲ್ಲ. ಇಷ್ಟಾಗಿಯೂ , ಆನೆ ಅದು ಹೇಗೋ ಸರಪಳಿಯಿಂದ ಕಾಲನ್ನು ತೆಗೆದುಕೊಂಡು , ೧೦ ಅಡಿ ಉದ್ದದ ಬೇಲಿಯನ್ನು ದಾಟಿ , ಅಗುಳಿ ಹಾಕಿದ್ದ ಮುಖ್ಯದ್ವಾರದ ಬಾಗಿಲನ್ನು ದಾಟಿ ಹೊರಕ್ಕೆ ಬಂದು ಓಡಿ  ಹೋಗಿದೆ ಅಂದುಕೊಂಡರೂ , ಸುತ್ತಲಿನ ಮೆತ್ತನೆಯ ಮಣ್ಣಿನಲ್ಲಿ ಆನೆಯ ಹೆಜ್ಜೆ ಗುರುತಿನ ಲವಲೇಶವೂ ಇರಲಿಲ್ಲ.

ಹೀಗಾಗಿ ಅತ್ಯಂತ ಒಗಟು  ಒಗಟಾಗಿಯೂ , ಗೋಜಲಾಗಿಯೂ ಶ್ರಮಪಟ್ಟು ಬರೆದ ಲೇಖನ , ಒಟ್ಟಾರೆಯಾಗಿ ಆನೆ ಪರಾರಿಯಾಗಿಲ್ಲ ಬದಲಾಗಿ ಅದೃಶ್ಯವಾಗಿದೆ ಎನ್ನುವ ಸಂದೇಶವನ್ನು ಕೊಡುತ್ತಿತ್ತು.  

ಇಷ್ಟಾಗಿಯೂ ಪತ್ರಿಕೆಯಾಗಲಿ , ಮೇಯರ್ ಆಗಲಿ , ಪೊಲೀಸ್ ಮಹಾ ನಿರ್ದೇಶಕರಾಗಲಿ ಯಾವುದೇ ಕಾರಣಕ್ಕೂ ಆನೆ ಅದೃಶ್ಯವಾಗಿದೆ ಎನ್ನುವದನ್ನು ಒಪ್ಪಕೊಳ್ಳಲು ತಯಾರಿರಲಿಲ್ಲ. ಪೊಲೀಸರು ಅವರ ತನಿಖೆಯನ್ನು ಮುಂದುವರಿಸಿದ್ದರು ಮತ್ತು ಅವರ ವಕ್ತಾರ ಹೇಳುವಂತೆ "ಆನೆಯನ್ನು ಅದು ಹೇಗೋ ನಾಜೂಕಾಗಿ , ಪೂರ್ವ ನಿರ್ಧಾರಿತ ಸಂಚಿನಂತೆ ಪಲಾಯನ ಮಾಡಿಸಲಾಗಿದೆ. ಆದರೆ ಆನೆಯಂತ ಭಾರಿ ಗಾತ್ರದ ಪ್ರಾಣಿಯನ್ನು ಬಹಳ ಕಾಲ ಕದ್ದು ಮುಚ್ಚಿ ಇಡಲು ಅಸಾಧ್ಯವಾದ್ದರಿಂದ ವಿಷಯ ಹೊರಗೆ ಬರಲು ಹೆಚ್ಚೇನೂ ದಿನಗಳಿಲ್ಲ. " ಅಲ್ಲದೆ ಆಸುಪಾಸಿನ ಕಾಡಿನಲ್ಲಿ ತೀವ್ರ  ಹುಡುಕಾಟಕ್ಕಾಗಿ ಸ್ಥಳೀಯ ಬೇಟೆಗಾರರನ್ನು ಮತ್ತು ಶಾರ್ಪ್ ಶೂಟರ್ ತ೦ಡವನ್ನು  ಬಳಸಿಕೊಳ್ಳಲಾಗುವದು ಎಂದೂ ತಿಳಿಸಿದ್ದ. 

ಮೇಯರ್ ಪತ್ರಿಕಾಗೋಷ್ಠಿಯನ್ನು ಕರೆದು ನಗರದ  ಪೊಲೀಸ್ ಪಡೆಯ ಅಸಮರ್ಪಕತೆಯ  ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಜೊತೆ ಜೊತೆಯಲ್ಲಿಯೇ  "ನಗರದ ಆನೆ ಭದ್ರತಾ ವ್ಯವಸ್ಥೆ ದೇಶದ ಯಾವುದೇ ಅತ್ಯುನ್ನತ ಮೃಗಾಲಯದ ಭದ್ರತಾ ವ್ಯವಸ್ಥೆಗೂ ಕಡಿಮೆಯಿಲ್ಲ. ಹಾಗೆ ನೋಡಿದರೆ ನಮ್ಮ ಭದ್ರತಾ ವ್ಯವಸ್ಥೆ ಸಾಧಾರಣ ಬೋನಿಗೆ ಹೋಲಿಸಿದರೆ ಅತ್ಯುಚ್ಚ ಮಟ್ಟದ್ದು." ಜೊತೆಯಲ್ಲಿಯೇ ಅವರು " ಪ್ರಜ್ಞಾಶೂನ್ಯವೂ , ದುರುದ್ದೇಶಪೂರಕವೂ , ಸಮಾಜ ವಿರೋಧಿಯೂ ಆದ  ಈ  ಕುಕೃತ್ಯದ ಹಿಂದಿನ ಕಾಣದ ಕೈಗಳನ್ನು ಹಿಡಿದು ಶಿಕ್ಷಿಸದೇ ಬಿಡುವದಿಲ್ಲ" ಎಂದು  ಘೋಷಿಸಿದರು.

ಕಳೆದ ವರ್ಷದಂತೆಯೇ , ವಿರೋಧ ಪಕ್ಷದವರು ಈಗಲೂ ಸಹ ಆರೋಪಗಳನ್ನು ಮಾಡಿದರು. "ಈ ಘಟನೆಯ ಸಂಪೂರ್ಣ ಜವಾಬ್ದಾರಿ ಮೇಯರ್ ಅವರದ್ದು.  ಅವರು ಖಾಸಗಿ ಕಂಪನಿಗಳೊಂದಿಗೆ ಶಾಮೀಲಾಗಿ ಆನೆಯ ಸಮಸ್ಯೆಗೆ  ಪರಿಹಾರವನ್ನು ಹುಡುಕುವ ನೆಪದಲ್ಲಿ ನಗರದ ಸಮಸ್ತ ಜನತೆಯನ್ನು  ಮೋಸಗೊಳಿಸಿದ್ದಾರೆ "

ಮೂವತ್ತೇಳು ವರ್ಷ ವಯಸ್ಸಿನ ಮಹಿಳೆಯೊಬ್ಬಳು ಪತ್ರಿಕೆಯವರು ನಡೆಸಿದ ಸಂದರ್ಶನದಲ್ಲಿ ತನ್ನ ಮಕ್ಕಳನ್ನು ಮನೆಯ ಹೊರಗೆ ಆಡಲು ಕಳುಹಿಸಲಿಕ್ಕೆ ಭಯವಾಗುವಂತಹ ವಾತಾವರಣ  ನಿರ್ಮಾಣವಾಗಿದೆ ಎಂದು ದುಃಖ ತೋಡಿಕೊಂಡಳು.

ಚಾನಲ್ಲುಗಳಲ್ಲಿ ಪ್ರಸಾರವಾಗುತ್ತಿದ್ದ ವರದಿಯಲ್ಲಿ ಸವಿಸ್ತಾರವಾಗಿ ನಗರ ಆನೆಯನ್ನು ಸುಪರ್ದಿಗೆ ತೆಗೆದುಕೊಂಡ ಕಾರಣ,  ಆನೆ ಲಾಯ ಮತ್ತು ಬಯಲಿನ  ವೈಮಾನಿಕ ನಕ್ಷೆ  ಮತ್ತು ಅದೃಶ್ಯವಾಗಿದ್ದ  ಆನೆ ಮತ್ತು ಮಾವುತನ ಹಿನ್ನೆಲೆಯನ್ನು ತೋರಿಸಲಾಯಿತು.

ಮಾವುತ , ನೊಬುರು ವಟಾಣಬೆ , ೬೩ , ಚಿಬಾ ಪ್ರಾಂತ್ಯದ ತತೆಯಾಮ ಪ್ರದೇಶದವನು. ಅವನು ಈಗಾಗಲೇ ಮುಚ್ಚಲಾಗಿದ್ದ ಮೃಗಾಲಯದಲ್ಲಿ ಸಾಕಷ್ಟು ವರ್ಷ ಮಾವುತನಾಗಿದ್ದ ಮತ್ತು ಅವನ ಕಾರ್ಯ ತತ್ಪರತೆ , ಪ್ರಾಣಿಗಳ ಬಗೆಗಿದ್ದ ಅಗಾಧ ಜ್ಞಾನ ಹಾಗೂ ಸರಳ ವ್ಯಕ್ತಿತ್ವದಿಂದ ಮೃಗಾಲಯದ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರನಾಗಿದ್ದ.ಆನೆಯನ್ನು ಸುಮಾರು ೨೨ ವರ್ಷಗಳ ಹಿಂದೆ ಪೂರ್ವ ಆಫ್ರಿಕಾದಿಂದ ತರಲಾಗಿತ್ತಾದರೂ ಅದರ ವಯಸ್ಸು ಮತ್ತು ವ್ಯಕ್ತಿತ್ವದ ಬಗ್ಗೆ ನಿಖರ ಮಾಹಿತಿಗಳಿರಲಿಲ್ಲ.  ನೇರ ಪ್ರಸಾರದ ಮುಕ್ತಾಯದಲ್ಲಿ ಪೊಲೀಸರು ನಾಗರಿಕರಲ್ಲಿ ಆನೆಯ ಬಗ್ಗೆ ಯಾವುದೇ ಮಾಹಿತಿಯಿದ್ದರೂ ದಯವಿಟ್ಟು ಪೊಲೀಸರಲ್ಲಿ ಹಂಚಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.

ಎರಡನೇ ಕಾಫಿಯನ್ನು ಹೀರುತ್ತಾ ನಾನು ಪೊಲೀಸರನ್ನು ಕಂಡು ನನ್ನಲ್ಲಿದ್ದ ಮಾಹಿತಿಯನ್ನು ಅವರೊಟ್ಟಿಗೆ ಹಂಚಿಕೊಳ್ಳುವ ಬಗ್ಗೆ ವಿಚಾರ ಮಾಡಿದೆ. ಆದರೆ ಕೊನೆಗೆ ಅವರನ್ನು ಕಾಣದಿರಲು ನಿರ್ಧರಿಸಿದೆ. ಯಾಕೆಂದರೆ ಮೊದಲನೆಯದಾಗಿ ಅವರೊಟ್ಟಿಗೆ ವ್ಯವಹಾರ ನನಗೆ ಇಷ್ಟವಿರಲಿಲ್ಲ ಎರಡನೆಯದಾಗಿ ನನ್ನಲ್ಲಿದ್ದ ಮಾಹಿತಿಯನ್ನು ಅವರು ನಂಬಬಹುದು ಎನ್ನುವದರ ಬಗ್ಗೆ ನನಗೆ ಸ್ಪಷ್ಟತೆಯಿರಲಿಲ್ಲ.  ಅದು ಅಲ್ಲದೆ ಆನೆ ಅದೃಶ್ಯವಾಗುವ ಸಂಭವ ಇದೆ  ಎನ್ನುವದನ್ನು ಒಪ್ಪಿಕೊಳ್ಳಲು ತಯಾರಿಲ್ಲದವರೊಟ್ಟಿಗೆ ಈ ವಿಚಾರವಾಗಿ ಮಾತನಾಡುವುದಾದರೂ ಹೇಗೆ ?

ನಾನು ನನ್ನ ಡೈರಿಯನ್ನು ಹೊರತೆಗೆದು , ಆನೆಯ ಲೇಖನವನ್ನು ಕತ್ತರಿಸಿ ಅದರಲ್ಲಿ  ಅಂಟಿಸಿಟ್ಟೆ. ನಂತರ ಪಾತ್ರೆಯನ್ನು ತೊಳೆದಿಟ್ಟು  ಆಫೀಸಿಗೆ ತೆರಳಿದೆ .

ಏಳು ಘಂಟೆಯ ವಾರ್ತೆಯಲ್ಲಿ ಆನೆಯ ಹುಡುಕಾಟದ ವರದಿಯನ್ನು  ಬಿತ್ತರಿಸಲಾಯಿತು.   ಉದ್ದನೆಯ ಬಂದೂಕುಗಳಲ್ಲಿ ಮತ್ತು ಬರಿಸುವ ಔಷಧಿ ತುಂಬಿಕೊಂಡಿದ್ದ ಬಂದೂಕುಧಾರಿಗಳಿದ್ದರು,  ಅರೆ ಮಿಲಿಟರಿ ಪಡೆ , ಸ್ಥಳೀಯ ಪೊಲೀಸರು , ಅಗ್ನಿಶಾಮಕ ದಳದವರು ಕಾಡಿನ ಇಂಚಿ೦ಚೂ  ಬಿಡದೆ  ಹುಡುಕಾಡುತ್ತಿದ್ದರು.  ಹೆಲಿಕ್ಯಾಪ್ಟರಿನಲ್ಲಿ ವೈಮಾನಿಕ ಸರ್ವೇಕ್ಷಣೆ ಸಹ ನಡೆಯುತ್ತಿತ್ತು.  ಅದೇನೂ  ದಟ್ಟ ಅಡವಿಯಲ್ಲ   , ಟೋಕಿಯೊದ೦ತಹ   ಬೃಹತ್ ಪಟ್ಟಣದ  ಹೊರವಲಯದಲ್ಲಿರುವ  ನಗರವೊಂದರ ಪಕ್ಕದ ಕಾಡು. ಅಲ್ಲಿ ನೆರದಿದ್ದ ಜನಸಂಖ್ಯೆ ನೋಡಿದರೆ ದಿನವೊಂದರಲ್ಲಿ ಅವರು ಎಲ್ಲ ಜಾಗವನ್ನು ತಪಾಸಣೆ ಮಾಡಬಹುದು. ಅಲ್ಲದೇ ಅವರೇನು ಯಾವುದೋ ಸಣ್ಣ ವಸ್ತುವನ್ನು ಹುಡುಕುತ್ತಿರುವದಲ್ಲ ,  ದೈತ್ಯಾಕಾರದ ಆಫ್ರಿಕಾದ ಆನೆ .  ಆ ಗಾತ್ರದ ಪ್ರಾಣಿಗಳು ಅಡಗಿಕೊಳ್ಳಬಹುದಾದ ಜಾಗಗಳು ಕೆಲವು ಮಾತ್ರ.  

ಇಷ್ಟಾದರೂ ಅವರಿಗೆ ಆನೆಯನ್ನು ಹುಡುಕಲು ಸಾಧ್ಯವಾಗಿರಲಿಲ್ಲ. ಪೊಲೀಸ್ ಮಹಾನಿರ್ದೇಶಕರು ನೇರ ಪ್ರಸಾರದಲ್ಲಿ ಕಾಣಿಸಿಕೊಂಡರು " ನಾವು ನಿರಂತರ ಹುಡುಕಾಟವನ್ನು ಮುಂದುವರೆಸುತ್ತೇವೆ."  ಎಂಬರ್ಥದ ಹೇಳಿಕೆ ನೀಡಿದರು ಮತ್ತು ನಿರೂಪಕ ಈ ಕೆಲ ಪ್ರಶ್ನೆಗಳೊಂದಿಗೆ ಕಾರ್ಯಕ್ರಮವನ್ನು ಮುಗಿಸಿದ "ಇಷ್ಟಕ್ಕೂ ಆನೆಯನ್ನು ಹೊರಗೆ ಬಿಟ್ಟಿವರು ಯಾರು ಮತ್ತು ಹೇಗೆ ?  ಅದನ್ನು ಎಲ್ಲಿ ಅಡಗಿಸಿ ಇಟ್ಟಿರಬಹುದು.? ಇವೆಲ್ಲವುಗಳ ಹಿಂದಿನ ಉದ್ದೇಶ ಏನಿರಬಹುದು ?  ಎಲ್ಲವೂ ಸಧ್ಯಕ್ಕೆ ರಹಸ್ಯದಲ್ಲಿ ಮುಚ್ಚಿಟ್ಟಿರುವ ರೋಚಕ ಘಟನೆ. "

ಹುಡುಕಾಟ ಹಲವಾರು ದಿನಗಳವರೆಗೆ ನಡೆಯಿತು. ಆದರೆ ಆನೆಯ ಕುರಿತಾಗಿ ಯಾವೊಂದು ವಿಷಯವೂ ಹೊರಗೆ  ಬರಲಿಲ್ಲ.  ನಾನು ಪತ್ರಿಕೆಯಲ್ಲಿ ಬಂದ ಎಲ್ಲ ವರದಿಗಳನ್ನು, ಕೊನೆಗೆ ಸಂಪಾದಕೀಯದಲ್ಲಿ ಬಂದ ವ್ಯ೦ಗ್ಯ ಚಿತ್ರವನ್ನು ಸಹ  ಕತ್ತರಿಸಿ ನನ್ನ ಡೈರಿಯಲ್ಲಿ ಅಂಟಿಸಿದೆ.
 
ಡೈರಿ ಕೆಲವೇ ದಿನಗಳಲ್ಲಿ ತುಂಬಿ ಹೋಯಿತು. ನಾನು ಇನ್ನೊಂದನ್ನು ಖರೀದಿಸಬೇಕಾಯಿತು.  ಇಷ್ಟಾಗಿಯೂ , ನನ್ನ ಸುದ್ದಿ ಸಂಗ್ರಹ ತುಂಬಿತೇ ವಿನಃ   ನಾನು ಕಾತುರದಿಂದ ನೋಡುತ್ತಿದ್ದ ವಸ್ತುಸ್ಥಿತಿಯ ಬಗ್ಗೆ ಯಾರೂ  ಬರೆಯಲಿಲ್ಲ.  

ಸರ್ವೇ ಸಾಧಾರಣವಾಗಿ ವರದಿಗಳಲ್ಲಿ ಯಾವುದೇ ಹುರುಳಿರುತ್ತಿರಲಿಲ್ಲ ಅಥವಾ ಪೂರ್ವನಿರ್ಧಾರಿತ ಸುದ್ದಿಯ ಹಾಗೆ ಬರೆಯುತ್ತಿದ್ದರು 'ಆನೆ ಇನ್ನೂ ಪತ್ತೆಯಾಗಿಲ್ಲ , ಆನೆ ಶೋಧನಾ ಪಡೆ ಇನ್ನೂ ಕತ್ತಲೆಯಲ್ಲಿ ,  ದುಷ್ಕರ್ಮಿಗಳ ಕೈವಾಡ ? ' ಇತ್ಯಾದಿ. ದಿನ ಕಳೆದಂತೆ ಇಂತಹ ತರ್ಕಹೀನ ವರದಿಗಳು ಸಹ ಕ್ರಮೇಣ ಕಡಿಮೆಯಾಗಿ ಕೊನೆಗೊಮ್ಮೆ ಯಾವುದೇ ತೆರನಾದ ವರದಿಗಳು ಪ್ರಕಟವಾಗುವದೇ ನಿಂತು ಹೋಯಿತು.   ಕೆಲವೊಂದು  ನಿಯತಕಾಲಿಕಗಳು ಅತಿಂದ್ರೀಯ ಶಕ್ತಿಯಿದೆ ಎಂದು ಸ್ವಯಂ ಘೋಷಿಸಿಕೊಂಡವರನ್ನು ಸಂದರ್ಶಿಸಿ ಕೆಲ ರೋಚಕ ಲೇಖನಗಳನ್ನು ಪ್ರಕಟಿಸಿದ್ದರ  ಹೊರತಾಗಿ ಬೇರೆ ಯಾವುದೇ ವರದಿಗಳು ಬರಲಿಲ್ಲ.  

ಬಹುಶ:  ಆನೆಯ ಪ್ರಕರಣವನ್ನು ವ್ಯವಸ್ಥೆ   'ಬಗೆಹರಿಸಲಾಗದ ರಹಸ್ಯ' ಎಂದು ವರ್ಗಿಕರಿಸಿ  ನಿಧಾನವಾಗಿ ಮುಚ್ಚಿಹಾಕುತ್ತಿದೆ  ಎಂದು ನನ್ನ ಗುಮಾನಿಯಾಗಿತ್ತು.  ಹೇಳಬೇಕೆಂದರೆ ಒಂದು ಮುದಿ  ಆನೆ ಮತ್ತು ಅದರ ವಯಸ್ಸಾದ ಮಾವುತ ಕಣ್ಮರೆಯಾದರೆ ಸಮಾಜದ ಮೇಲಾಗುವ ಪರಿಣಾಮವೇನು ಇಲ್ಲ.  ಭೂಮಿ ಸೂರ್ಯನ ಸುತ್ತ ಎಂದಿನಂತೆ  ಸುತ್ತುತ್ತಲೇ ಇರುತ್ತದೆ ,  ರಾಜಕಾರಣಿಗಳು ನಂಬಲರ್ಹವಲ್ಲದ ಭರವಸೆಗಳನ್ನು  ನೀಡುತ್ತಲೇ ಇರುತ್ತಾರೆ , ಜನ ಕಚೇರಿಗೆ ಆಕಳಿಸುತ್ತ  ತೆರಳುತ್ತಿರುತ್ತಾರೆ  ,  ಮಕ್ಕಳ ಅವರ ಮುಂದಿನ ಹಂತಕ್ಕಾಗಿ ಓದುತ್ತಲೇ ಇರುತ್ತಾರೆ. ಪ್ರತಿ ದಿನದ ಏಕತಾನದ ಏರಿಳಿತದ ನಡುವೆ ಒಂದು ಕಾಣೆಯಾದ ಆನೆಯ ಬಗ್ಗೆ ತಲೆ ಕೆಡಿಸಿಕೊಳ್ಳಲು ಯಾರಿಗೆ ಸಮಯವಿದೆ ? ಬಸವಳಿದ ಸೈನಿಕರು ಕಿಟಕಿಯ ಪಕ್ಕ ಹಾದುಹೋದಂತೆ  ತಿಂಗಳುಗಳು ಸಂದುಹೋದವು.

ನನಗೆ ಬಿಡುವಿನ ಸಮಯ ಸಿಕ್ಕಾಗಲೆಲ್ಲ , ಆನೆಯಿಲ್ಲದ  ಖಾಲಿ ಲಾಯದ ಬಳಿಗೆ ಹೋಗಿ ನಿಲ್ಲುತ್ತಿದ್ದೆ.   ಮುಖ್ಯದ್ವಾರದ ಗೇಟಿಗೆ ಸರಪಳಿಯನ್ನು ಸಿಂಬೆ ಸಿಂಬೆಯಾಗಿ ಸುತ್ತಿ ಭದ್ರವಾಗಿಸಿ, ಯಾರೂ ಒಳ ಬರದಂತೆ ತಡೆದಿದ್ದರು.  ಹೊರಗಿನಿಂದ ಇಣುಕಿದಾಗ ಆನೆಯ ಲಾಯದ ಬಾಗಿಲಿಗೆ ಮತ್ತಷ್ಟು ಸರಪಳಿಯನ್ನು ಸುತ್ತಿ , ಬಿಗ ಜಡಿದಿಟ್ಟಿದ್ದರು , ಆನೆಯನ್ನು ಹುಡುಕುವ ಪ್ರಯತ್ನ ನಿಷ್ಪಲವಾದುದಕ್ಕೆ ಪ್ರಾಯಶ್ಚಿತ್ತವೋ  ಎಂಬಂತೆ  ಆನೆಯಿಲ್ಲದ ಲಾಯಕ್ಕೆ ಪೊಲೀಸರು  ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದ್ದರು.  ನಿರ್ಜನವಾದ  ಆ ಜಾಗವನ್ನು ಈಗ ಜನರ ಬದಲಾಗಿ ಕಟ್ಟಡದ ಮೇಲೆ ಕುಳಿತ ಪಾರಿವಾಳಗಳು ಆಕ್ರಮಿಸಿದ್ದವು. ನೋಡಿಕೊಳ್ಳುವವರು ಇಲ್ಲದೇ,   ಈ  ಅವಕಾಶಕ್ಕಾಗಿ ಕಾದು ಕುಳಿತಿರುವಂತೆ ಬಯಲಿನ ಸುತ್ತ ದಟ್ಟವಾದ ಹಸಿರು ಹುಲ್ಲು ಬೆಳೆದುಕೊಂಡಿತ್ತು.  ಸಿಂಬೆ ಸಿಂಬೆಯಾಗಿ ಆನೆಯ ಲಾಯದ ಬಳಿ ಬಿದ್ದಿದ್ದ ಸರಪಳಿಯನ್ನು ನೋಡಿದಾಗ ನನಗೆ ದಟ್ಟ ಕಾಡಿನಲ್ಲಿರುವ ಪಾಳುಬಿದ್ದಿರುವ ಪುರಾತನ ಅರಮನೆಯ ನಿಧಿಯನ್ನು ಕಾಯುವ ಯಾವುದೋ ಒಂದು ದೈತ್ಯ ಸರ್ಪದ ನೆನಪಾಗಿ ಬೆಚ್ಚಿಬಿದ್ದೆ.  ಆನೆಯಿಲ್ಲದ ಕೆಲವೇ ತಿಂಗಳುಗಳಲ್ಲಿ ಆ ಜಾಗ ನಿರ್ಜನವಾಗಿಯೂ , ವಿನಾಶಕಾರಿಯಾಗಿಯೂ ತೋರುತ್ತ ,  ಒಂದು ಅಸ್ವಸ್ಥ ದೈತ್ಯ ಮೋಡ  ಸಂಪೂರ್ಣ ಜಾಗವನ್ನು ಕವಿದಿರುವಂತೆ ತೋರುತ್ತಿತ್ತು.

***********             ****************           *************
ನಾನು  ಸೆಪ್ಟೆಂಬರ್ ನ ಕೊನೆಯ ವಾರದಲ್ಲಿ ಅವಳನ್ನು ಭೇಟಿಯಾಗಿದ್ದೆ. ಅವತ್ತು ಬೆಳಿಗ್ಗಿನಿಂದ ಸಂಜೆಯವರೆಗೂ ಎಡಬಿಡದೆ ಸುರಿಯುತ್ತಿರುವ ಜಿಟಿಜಿಟಿ ತುಂತುರು  ಮಳೆ , ಭೂಮಿಯಾಳದಲ್ಲಿ ಹೂತುಹೋಗಿದ್ದ ಬೇಸಿಗೆಯ ಧಗೆಯ  ನೆನಪುಗಳನ್ನು  ತೋಯ್ದು  ಮರೆಸುವಂತೆ  ಸುರಿಯುವ   ವರ್ಷದ ಈ  ಕಾಲದ  ಸಣ್ಣಗಿನ ಸತತ ಮಳೆ.  ತೋಯ್ದು ಹೋದ ನೆನಪುಗಳು  ಹರಿದು ಚರಂಡಿ ಸೇರಿ , ನದಿಯಲ್ಲಿ ಲೀನವಾಗಿ , ಧುಮ್ಮಿಕ್ಕಿ ಹರಿದು , ದಟ್ಟ ನೀಲ ಸಮುದ್ರದಲ್ಲಿ ಅಂತರ್ಧಾನವಾಗುವ೦ತೆ.    

ನಮ್ಮ ಕಂಪನಿ ತನ್ನ ಹೊಸ ಜಾಹೀರಾತು ಬಿಡುಗಡೆಗೋಸ್ಕರ  ಏರ್ಪಡಿಸಿದ್ದ ಸಮಾರಂಭದಲ್ಲಿ ನಾನು ಅವಳನ್ನು  ಮೊದಲ ಸಲ ಭೇಟಿಯಾಗಿದ್ದೆ.  ನಾನು ಎಲೆಕ್ಟ್ರಿಕಲ್ ವಸ್ತುಗಳನ್ನು ತಯಾರಿಸುವ  ಬಹುರಾಷ್ಟ್ರೀಯ ಕಂಪನಿಯೊಂದರ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ಅಡುಗೆ ಮನೆಗೆ ಬೇಕಾಗುವ  ಹೊಸ ಮಾದರಿಯ ಎಲೆಕ್ಟ್ರಿಕಲ್  ಉಪಕರಣಗಳನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮದ ಆಯೋಜನೆಯ ಓಡಾಟದಲ್ಲಿದ್ದೆ.  ಹೀಗಾಗಿ ಒಂದಷ್ಟು ಮಹಿಳಾ ಪತ್ರಿಕೆಗಳು ನಮ್ಮ ಕಂಪನಿಯ  ಹೊಸ ಉಪಕರಣಗಳ ಬಗ್ಗೆ ಲೇಖನಗಳನ್ನು ಪ್ರಕಟಿಸುವಂತೆ  ಮನವೊಲಿಸುವ ಕೆಲಸದಲ್ಲಿ ತೊಡಗಿದ್ದೆ. ಹೇಳಿಕೊಳ್ಳುವಂತಹ ಬುದ್ಧಿಶಕ್ತಿಯೇನೂ ಬೇಕಿಲ್ಲದ ಕೆಲಸ ಆದರೂ ಪತ್ರಿಕೆಯಲ್ಲಿ ಬಂದಿರುವ ಲೇಖನಗಳು ನಮ್ಮ ಕಂಪನಿಯ ಕೋರಿಕೆಯವು ಎಂದು ಗೊತ್ತಾಗಬಾರದಲ್ಲ.  ಅವರು ನಮ್ಮ ಉಪಕರಣಗಳ ಬಗ್ಗೆ ಲೇಖನಗಳನ್ನು ಪ್ರಕಟಿಸಿದಾಗ ನಾವು ಅವರ ಪತ್ರಿಕೆಯಲ್ಲಿ ಜಾಹಿರಾತು ಕೊಡುತ್ತಿದ್ದೆವು. ಒಂದರ್ಥದಲ್ಲಿ ನಮಗೆ ಅವರು ಅವರಿಗೆ ನಾವು.  

 ಯುವ ವಿವಾಹಿತೆಯರಿಗಾಗಿ ಮೀಸಲಾಗಿರುವ ಯಾವುದೊ ಒಂದು ಪತ್ರಿಕೆಯೊಂದರ ಪರವಾಗಿ ಅವಳು ನಮ್ಮ ಕಂಪನಿಯ ಉಪಕರಣವೊಂದರ ಬಗ್ಗೆ ಲೇಖನ ಬರೆಯಲು ಒಂದಷ್ಟು ಮಾಹಿತಿ ಕಲೆ ಹಾಕಲು ಈ  ಸಮಾರಂಭಕ್ಕೆ ಬಂದಿದ್ದಳು.  ಅವತ್ತು ನಾನು ಅವಳಿಗೆ ಇಟಾಲಿಯನ್ ಡಿಸೈನರ್ ಒಬ್ಬ ವಿನ್ಯಾಸಗೊಳಿಸಿದ್ದ   ಹೊಸ ರೆಫ್ರಿಜರೇಟರ್ , ಕಾಫಿ ಮಾಡುವ ಮಷಿನ್ , ಓವೆನ್ , ಮಿಕ್ಸರ್  ಇತ್ಯಾದಿಗಳನ್ನು ತೋರಿಸುತ್ತ , ಅವುಗಳ ವೈಶಿಷ್ಟ್ಯವನ್ನು ವಿವರಿಸಿದ್ದೆ .

"ಐಕ್ಯತೆ, ಎಲ್ಲದಕ್ಕಿಂತ ಮುಖ್ಯವಾದುದು ಐಕ್ಯತೆ. "  ನಾನು ವಿವರಿಸಿದೆ " ಅತ್ಯಂತ ಸುಂದರವಾದ ವಿನ್ಯಾಸವುಳ್ಳದ್ದು ಸಹ ತನ್ನ ಸುತ್ತಲಿನ ವಾತಾವರಣದೊಟ್ಟಿಗೆ ಐಕ್ಯವಾಗಲಾರದೆ ಹೋದರೆ ಅದು ಉಳಿಯುವದಿಲ್ಲ. ವಿನ್ಯಾಸದ ಐಕ್ಯತೆ , ಬಣ್ಣದ ಐಕ್ಯತೆ , ಕಾರ್ಯದ ಐಕ್ಯತೆ. ಇವತ್ತಿನ ಅಡುಗೆ ಮನೆಗಳಿಗೆ ಎಲ್ಲಕ್ಕಿಂತ ಮಿಗಿಲಾಗಿ ಬೇಕಾಗಿರುವದು ಇದು. ಸ೦ಶೋಧನೆಗಳು  ಹೇಳುವಂತೆ ಮಹಿಳೆಯೊಬ್ಬಳು ತನ್ನ ಜೀವಿತದ ಬಹುತೇಕ ಅವಧಿಯನ್ನು ಅಡುಗೆ ಮನೆಯಲ್ಲಿ ಕಳೆಯುತ್ತಾಳೆ. ಅಡುಗೆ ಮನೆ - ಅವಳ ಓದಿನ ಕೋಣೆ , ಅವಳ ವರಾಂಡ , ಅವಳ ಕಚೇರಿ. ಅದಕ್ಕಾಗಿಯೇ ಅವಳು ಅಡುಗೆ ಮನೆಯನ್ನು ಸುಂದರವಾಗಿಡುವಲ್ಲಿ ತನ್ನ ಸರ್ವ ಶಕ್ತಿಯನ್ನೂ ವ್ಯಯಿಸುತ್ತಾಳೆ. ಅದು ಅತ್ಯಂತ ವಿಶಾಲವಾಗಿ ಇರಬೇಕಿಲ್ಲ. ಆದರೆ ವಿಶಾಲವಾಗಿರಲಿ ಅಥವಾ ಚಿಕ್ಕದಾಗಿರಲಿ  ಮೂಲಭೂತವಾಗಿ ಅಡುಗೆ ಮನೆಗೆ ಬೇಕಿರುವದು - ಐಕ್ಯತೆ. ಇದು ನಮ್ಮ ಹೊಸ ವಿನ್ಯಾಸದ ಹಿಂದಿನ ತತ್ವ , ಬೇಕಾದರೆ ಇದನ್ನೇ ನೋಡಿ . . . . . "

ಅವಳು ಗೋಣಾಡಿಸುತ್ತ ತನ್ನ ಸಣ್ಣ ಪುಸ್ತಕದಲ್ಲಿ ಏನೇನೋ ಬರೆದುಕೊಂಡಳು. ಅವಳಿಗೆ ಇವೆಲ್ಲವುಗಳ ಬಗ್ಗೆ ಅಷ್ಟೇನೂ ಆಸ್ಥೆಯಿಲ್ಲ ಎನ್ನುವದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು. ಹಾಗೆಂದು ನನಗೆ ಈ ಕೆಲಸದಲ್ಲಿ  ಅತ್ಯ೦ತ  ಆಸಕ್ತಿ ಇದೆ ಎಂದಲ್ಲ. ಒಟ್ಟಿನಲ್ಲಿ ಇಬ್ಬರೂ ಅವರವರ ಕೆಲಸ ಮಾಡುತ್ತಿದ್ದೆವು.

"ನಿನಗೆ ಅಡುಗೆ ಮನೆ ಬಗ್ಗೆ ತುಂಬಾ ಗೊತ್ತಿದೆ " ಅವಳು ನನ್ನ ವಿವರಣೆ ಮುಗಿದ ಮೇಲೆ ಹೇಳಿದಳು. ಅವಳು ಅಡುಗೆ ಮನೆ ಎನ್ನುವದನ್ನು ಕಿಚನ್ ಎನ್ನದೆ ಜಪಾನೀ ಭಾಷೆಯಲ್ಲಿ ಹೇಳಿದ್ದಳು.
"ನನ್ನ ಉದ್ಯೋಗವೇ ಅದು " ನಾನು ನಸುನಗುತ್ತ ಉತ್ತರಿಸಿದೆ " ಅದರ ಹೊರತಾಗಿ ನಾನೇನು ಅದ್ಭುತ ಬಾಣಸಿಗನಲ್ಲ. ನನಗೆ ಬೇಕಾದಷ್ಟನ್ನು ಬೇಯಿಸಿಕೊಳ್ಳುತ್ತೇನೆ ಅಷ್ಟೇ. "
 "ಆದರೂ ಈ ಐಕ್ಯತೆ ಎನ್ನುವದೆಲ್ಲ ಅಡುಗೆ ಮನೆಗೆ ನಿಜವಾಗಿಯೂ ಬೇಕೇ ? " ಅವಳು
"ನಾವು ಕಿಚನ್ ಎಂದು ಇಂಗ್ಲಿಷ್ ನಲ್ಲಿಯೇ ಹೇಳಬಯಸುತ್ತೇವೆ " ನಾನು ಅವಳ ಜಪಾನೀ ಶಬ್ದವನ್ನು ಸರಿ ಪಡಿಸಲು ಯತ್ನಿಸಿದೆ. "ತಪ್ಪೇನಲ್ಲ , ಆದರೆ ಕಂಪನಿ ಕಿಚನ್ ಎಂದು ಇಂಗ್ಲಿಷ್ ನಲ್ಲೇ ಹೇಳಲು ಬಯಸುತ್ತದೆ"
"ಆಹ್ ಕ್ಷಮಿಸು , ಆದರೆ ನಿಜವಾಗಿಯೂ  ಐಕ್ಯತೆ ಎನ್ನುವದೆಲ್ಲ ಅಡುಗೆ ಮನೆಗೆ ನಿಜವಾಗಿಯೂ ಬೇಕೇ ?"

"ನನ್ನ ವೈಯಕ್ತಿಕ ಅಭಿಪ್ರಾಯವೇ ? ನಾನು ಕಂಪನಿಯ ಟೈ ತೆಗೆಯುವ ತನಕ ಅದನ್ನು ಹೇಳಲು ಸಾಧ್ಯವಿಲ್ಲ. " ನಾನು ಹಲ್ಲು ಕಿರಿದೆ. " ಆದರೆ ಇವತ್ತು ಒಂದು ವಿನಾಯಿತಿ.  "ಬಹುಶ: ಒಂದು ಅಡುಗೆ ಮನೆಗೆ ಐಕ್ಯತೆಗಿಂತಲೂ ಅಗತ್ಯವಾದುದು ಇನ್ನೂಇದೆ. ಆದರೆ ಅವುಗಳನ್ನು ಯಾರೂ ಮಾರಲು ಸಾಧ್ಯವಿಲ್ಲ.   ಆದರೆ ಇವತ್ತಿನ ಈ ವ್ಯಾವಹಾರಿಕ ಜಗತ್ತಿನಲ್ಲಿ , ಮಾರಲು ಸಾಧ್ಯವಾಗದಿದ್ದರೆ ಅದಕ್ಕೆ ಅಸ್ತಿತ್ವವಿಲ್ಲ "
"ಜಗತ್ತು ಅಷ್ಟು ವ್ಯಾವಹಾರಿಕವಾಗಿದೆಯೇ ?"
ನಾನು ಒಂದು ಸಿಗರೇಟನ್ನು ಹೊತ್ತಿಸಿದೆ.
"ಗೊತ್ತಿಲ್ಲ, ಆದರೆ ಆ ಶಬ್ದ ಆಯಾಚಿತವಾಗಿ ಹೊರಕ್ಕೆ ಬಂದಿತು." ಉತ್ತರಿಸಿದೆ " ಆದರೆ ಇದೊಂದು ಶಬ್ದ ಬಹಳಷ್ಟು ವಿವರಣೆಗಳನ್ನು ಕೊಡುತ್ತದೆ. ನೀನು ಅದರೊಟ್ಟಿಗೆ ಆಟವಾಡಬಹುದು , ಅಚ್ಚುಕಟ್ಟಾದ ಭಾವನೆಗಳನ್ನು ಹೊರ ಹೊಮ್ಮಿಸ ಬಹುದು.  ಉದಾಹರೆಣೆಗೆ ಅತ್ಯಗತ್ಯವಾದ ವ್ಯಾವಹಾರಿಕತೆ ,  ವ್ಯಾವಹಾರಿಕ ಅಸ್ತಿತ್ವ.  ನೀನು ಈ ತೆರನಾಗಿ ನೋಡಿದರೆ ಸಾಕಷ್ಟು ಸಂಕೀರ್ಣ ಸಮಸ್ಯೆಗಳನ್ನು ಸುಲಭವಾಗಿ ತಪ್ಪಿಸಬಹುದು. "
"ಕುತೂಹಲಕರವಾಗಿದೆ ನಿನ್ನ ಅಭಿಪ್ರಾಯ "
"ಹಾಗೇನು ಇಲ್ಲ . ಎಲ್ಲರಂತೆ ಇದು ಕೂಡ. ಇರಲಿ ಒಂದು ಹೊಸ ಶಂಪೈನ್  ತರಿಸಿದ್ದೇವೆ ತೆಗೆದುಕೊಳ್ಳುತ್ತಿಯೇನು ?"
"ಖಂಡಿತವಾಗಿ "

ಶಂಪೈನ್ ಹೀರುತ್ತಾ ಮಾತನಾಡುವಾಗ  ನಮ್ಮಿಬ್ಬರಿಗೆ ಪರಸ್ಪರ  ಪರಿಚಿತರು ಸಾಕಷ್ಟು ಜನ ಇರುವದು ತಿಳಿಯಿತು. ನಮ್ಮಿಬ್ಬರ ಕಾರ್ಯಕ್ಷೇತ್ರ ಅಂತಹ ದೊಡ್ಡದೇನೂ ಅಲ್ಲ ಹೀಗಾಗಲಿ  ದಳಗಳನ್ನು ಎಸೆದರೆ ಒಂದೆರಡಾದರೂ   ಯಾರಾದರೂ ಪರಿಚಿತರಿಗೆ ತಾಕುವದು ಖಚಿತ. ಅಲ್ಲದೇ ಅವಳು ಮತ್ತು ನನ್ನ ಸಹೋದರಿಯೊಬ್ಬಳು ಒಂದೇ ಕಾಲೇಜಿನಲ್ಲಿ ಓದಿದ್ದರು.  ಹೀಗಾಗಿ ನಮ್ಮ ಮಾತುಕತೆ ಆರಾಮಾಗಿ ಸಾಗಿತು.

ಅವಳಿಗೆ ಮದುವೆಯಾಗಿರಲಿಲ್ಲ. ನನಗೆ  ಕೂಡ. ಅವಳಿಗೆ ಇಪ್ಪತ್ತಾರು ವರ್ಷ. ನನಗೆ ಮೂವತ್ತೊಂದು. ಅವಳು ಲೆನ್ಸ್ ಹಾಕಿಕೊಂಡಿದ್ದಳು ಮತ್ತು ನಾನು ಕನ್ನಡಕ ಧರಿಸುತ್ತಿದ್ದೆ. ಅವಳು ನನ್ನ ಟೈ  ಹೊಗಳಿದಳು , ನಾನು ಅವಳ ಜಾಕೆಟನ್ನು ಮೆಚ್ಚಿದೆ. ನಾವು ಮನೆಯ ಬಾಡಿಗೆಗಳನ್ನು ಹೋಲಿಸಿಕೊಂಡೆವು ಮತ್ತು ನಮ್ಮ ಕೆಲಸದ  ಬಗ್ಗೆ  ಒಂದಷ್ಟು ದೂರು ಹೇಳಿಕೊಂಡೆವು. ಒಟ್ಟಾರೆಯಾಗಿ ಇಬ್ಬರೂ ಪರಸ್ಪರರನ್ನು ಮೆಚ್ಚಿಕೊಂಡೆವು. ಅವಳೊಬ್ಬಳು ಸುಂದರ ಹುಡುಗಿ ಮತ್ತು ತನ್ನ ಅಭಿಪ್ರಾಯವನ್ನು ಹೇರುವವಳಾಗಿರಲಿಲ್ಲ. ಅವಳೊಟ್ಟಿಗೆ ಮಾತನಾಡುತ್ತ ನಿಂತ ಇಪ್ಪತ್ತು ನಿಮಿಷಗಳಲ್ಲಿ ಒಮ್ಮೆಯೂ ಅವಳ ಬಗ್ಗೆ ನಾನು ಇಷ್ಟಪಡದೇ ಇರುವ  ಯಾವುದೇ ಕಾರಣ ಸಿಗಲಿಲ್ಲ.

ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಾನು ಅವಳನ್ನು ಹೋಟೆಲಿನ ಹಜಾರದಲ್ಲಿ ಮಾತನಾಡಲು ಆಹ್ವಾನಿಸಿದೆ . ಅಲ್ಲಿ ಇಬ್ಬರೂ ಕುಳಿತು ಮಾತುಕತೆ ಮುಂದುವರೆಸಿದೆವು.  ಹೋಟೆಲಿನ  ಹೊರಗೆ ನಿಶ್ಯಬ್ದವಾಗಿ ಮಳೆ ಸುರಿಯುತ್ತಿತ್ತು.  ನಗರದ ಬೀದಿದೀಪಗಳು ಮಂಜಿನ ಮೂಲಕ  ಅಸ್ಪಷ್ಟ ಸಂದೇಶಗಳನ್ನು ಸಾಗಿಸುತ್ತಿದ್ದವು. ಬಹುತೇಕ ನಿರ್ಜನವಾಗಿದ್ದ ಹೋಟೆಲಿನ ಹಜಾರದಲ್ಲಿ ಆರ್ದ್ರವಾದ ಮೌನವೊಂದು ಹರಡಿಕೊಂಡಿತ್ತು.ನಾವಿಬ್ಬರು ಪಾನೀಯವನ್ನು ಆರ್ಡರ್ ಮಾಡಿದೆವು.   ಪಾನೀಯಗಳನ್ನು ಹೀರುತ್ತ ಸಾವಕಾಶವಾಗಿ ನಾವಿಬ್ಬರು ಮೊತ್ತ ಮೊದಲ ಸಲ ಭೇಟಿಯಾದ ಯುವಕ, ಯುವತಿಯರಿಬ್ಬರು ಪರಸ್ಪರರನ್ನು ಸ್ವಲ್ಪ ಸ್ವಲ್ಪವೇ ಇಷ್ಟಪಡುತ್ತ ಮಾತುಕತೆ ನಡೆಸುವಾಗ ವಿನಿಮಯ ಮಾಡಿಕೊಳ್ಳುವ ಮಾತುಗಳನ್ನು ಆಡಿದೆವು. ನಾವು ನಮ್ಮ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡೆವು , ಸಂಗೀತ , ಕ್ರೀಡೆ ಮತ್ತು ದಿನನಿತ್ಯದ ಅಭಿರುಚಿಯ ಬಗ್ಗೆ ಹರಟಿದೆವು.

ನಂತರ ನಾನು ಅವಳಿಗೆ ಆನೆಯ ಬಗ್ಗೆ ಹೇಳಿದೆ. ಯಾವ ಕಾರಣಕ್ಕೆ ಆನೆಯ ವಿಷಯ ಮಾತಿನಲ್ಲಿ ಬಂದಿತು ಎನ್ನುವದು ನನಗೆ ನೆನಪಿಲ್ಲ. ಬಹುಶ: ನಾವು ಪ್ರಾಣಿಗಳಿಗೆ ಸಂಬಂಧಿಸಿದ ಯಾವುದೋ ವಿಷಯದ ಬಗ್ಗೆ ಮಾತನಾಡುತ್ತಿದ್ದೆವು ಅನಿಸುತ್ತದೆ  ಅಥವಾ ನಾನು ನನಗರಿವಿಲ್ಲದಂತೆ ಆನೆ ಅದೃಶ್ಯವಾಗಿರುವದರ ಬಗ್ಗೆ  ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳಲು ಒಬ್ಬ ಕೇಳುಗ , ಅತ್ಯತ್ತಮ ಕೇಳುಗನಿಗೋಸ್ಕರ ಕಾಯುತ್ತಿದ್ದೇನೋ ?
ಅಥವಾ ಹೊಟ್ಟೆಯೊಳಗಿಳಿದ ಮದ್ಯದ ಅಮಲಿರಬಹುದು.

ಅದು ಏನೇ ಇರಲಿ ವಿಷಯದ ಪ್ರಸ್ತಾವ ಆದ ತಕ್ಷಣ ನನಗೆ ನಮ್ಮಿಬ್ಬರ ನಡುವೆ ನಡೆಯುತ್ತಿರುವ ಈ  ಮಧುರ ಸ೦ಭಾಷಣೆಗೆ ಸ್ವಲ್ಪವೂ ಹೊಂದದ ಈ ವಿಷಯವನ್ನು ನಾನು ತೆಗೆದಿರುವೆನೆಂದು ಅರಿವಾಯಿತು. ಇಲ್ಲ ನಾನು ಆನೆಯ ವಿಷಯವನ್ನು ತೆಗೆಯಲೇಬಾರದಿತ್ತು.  ಆಗಿಹೋದ , ಮುಚ್ಚಿಹೋದ ಘಟನೆಯದು.
   
ನಾನು ವಿಷಯಾಂತರ ಮಾಡಲು ಪ್ರಯತ್ನಿಸಿದೆ. ಆದರೆ ಈವಿಷಯವನ್ನು ತೆಗೆದ ತಕ್ಷಣ ಅವಳು ಅದೆಷ್ಟು ಆಸಕ್ತಿಯಿಂದ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದಳೆಂದರೆ ಒಂದು ಕ್ಷಣ ನನಗೆ ನಾನು ಇನ್ನಷ್ಟು  ಸೂಕ್ಷ್ಮವಾಗಿ ಆನೆಯನ್ನು ಗಮನಿಸಬೇಕಿತ್ತು ಎಂದೆನಿಸಿತು. "ಯಾವ ತೆರನಾದ ಆನೆಯದು ?  ಅದು ಏನನ್ನು ತಿನ್ನುತ್ತಿತ್ತು ? ಅದು ಹೇಗೆ ಅದೃಶ್ಯವಾಗಿರಬಹುದು ? ಇದು ಸಮಾಜಕ್ಕೆ ಅಪಾಯಕಾರಿಯೇ ? ಇತ್ಯಾದಿ ಪ್ರಶ್ನೆಗಳು.

ನಾನು ಅವಳಿಗೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ವರದಿಗಳ ಬಗ್ಗೆ ಹೇಳಿದೆ . ಆದರೆ ನಾನು ಹೆಚ್ಚಿನ ವಿಷಯ ಹೇಳದೆ  ನನಗೆ ನಾನೇ ಕಡಿವಾಣ ಹಾಕಿಕೊಳ್ಳುತ್ತಿರುವದು ಅವಳಿಗೆ ಅರಿವಾಯಿತು.  ಸುಳ್ಳು ಹೇಳುವದರಲ್ಲಿ ನಾನು ಅಂತಹ ನಿಸ್ಸಿಮನಲ್ಲ.
 ನನ್ನ ನಡುವಳಿಕೆಯಲ್ಲಿನ ಬದಲಾವಣೆಯನ್ನು ಗಮನಿಸದಂತೆ ಅವಳು ಎರಡನೇ ಗ್ಲಾಸನ್ನು ತುಟಿಗಿಡುತ್ತ ಪ್ರಶ್ನಿಸಿದಳು "ಆನೆ ಅದೃಶ್ಯವಾದಾಗ ನಿನಗೆ ಆಘಾತವಾಗಲಿಲ್ಲವೇ ? ಯಾರಾದರೂ ಸುಲಭವಾಗಿ ಊಹಿಸಬಹುದಾದ ಸಾಮಾನ್ಯ ಘಟನೆಯಲ್ಲ ಅದು  "
"ಇಲ್ಲ ಬಹುಶ: ಹಾಗೇನಿಲ್ಲ. " ನಾನು ಮೇಜಿನ ಮೇಲಿದ್ದ ಪ್ಲೇಟಿನಿಂದ ಹುರಿಗಡಲೆಯನ್ನು ತೆಗೆದುಕೊಂಡು ಒಂದೆರಡನ್ನು ಬಾಯಿಗೆ ಎಸೆಯುತ್ತಾ ಉತ್ತರಿಸಿದೆ.   ಹೋಟೆಲಿನ ವೈಟರ್  ಆಶ್ ಟ್ರೈ ಬದಲಾಯಿಸಿ ಬೇರೊಂದನ್ನು ತಂದಿಟ್ಟಿದ್ದ.
 
ಅವಳು ನಾನು ಏನು ಹೇಳುವೆನೆಂದು ನಿರೀಕ್ಷಿಸತೊಡಗಿದಳು. ನಾನು ಇನ್ನೊಂದು ಸಿಗರೇಟನ್ನು ಹೊರತೆಗೆದು ಹಚ್ಚಿದೆ. ನಾನು ಧೂಮಪಾನವನ್ನು ನಿಲ್ಲಿಸಿದ್ದೆ. ಆದರೆ ಆನೆ ಅದೃಶ್ಯವಾದಾಗಲಿನಿಂದ ಮತ್ತೆ ಈ  ಚಟ ಶುರುವಾಗಿತ್ತು.

"ಯಾಕೆ , ಯಾಕಿಲ್ಲ ? ನೀನು ಅದನ್ನು ಊಹಿಸಿದ್ದೇ ಎಂದೇ  ?" ಅವಳು ಕೇಳಿದಳು.

"ಹಾಗಲ್ಲ , ನಾನು ಖಚಿತವಾಗಿ ಊಹಿಸಿದ್ದೆ ಎಂದಲ್ಲ. " ನಾನು ನಸು ನಗುತ್ತ ನುಡಿದೆ. " ಆನೆಯೊಂದು ಇದ್ದಕ್ಕಿದ್ದ ಹಾಗೆ ಅದೃಶ್ಯವಾದ ಯಾವುದೇ ಘಟನೆ ಇಲ್ಲಿಯವರೆಗೆ ನಡೆದಿಲ್ಲ ಅಥವಾ ಇಂತಹ ಘಟನೆ ನಡೆಯಲು ಯಾವುದೇ ಕಾರಣವೂ ಇಲ್ಲ. ತಾರ್ಕಿಕವಾಗಿ ನೋಡಿದರೆ ಇದು ಅರ್ಥಹೀನ. "
"ಆದರೆ ನಿನ್ನ ಉತ್ತರ ವಿಚಿತ್ರವಾಗಿತ್ತು. ಆನೆಯೊಂದು ಮಾಯವಾಗುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ನಾನು ಹೇಳಿದಾಗ ನೀನು ಇಲ್ಲ ಬಹುಶ: ಹಾಗೇನಿಲ್ಲ ಎಂದು ಉತ್ತರಿಸಿದೆ. ಬೇರೆಯವರಾಗಿದ್ದರೆ "ಹೌದು ನೀನು ಹೇಳುವದು ನಿಜ" ಎಂದೋ ಇಲ್ಲ "ವಿಚಿತ್ರ ಘಟನೆ ಎಂದೋ ಉತ್ತರಿಸುತ್ತಿದ್ದರು.  ಗೊತ್ತಾಯಿತೇ ನಾನು ಹೇಳುತ್ತಿರುವದು ಏನೆಂದು." 

ನಾನು ಅಸ್ಪಷ್ಟವಾಗಿ ತಲೆಯಾಡಿಸಿದೆ ಮತ್ತು ವೈಟರ್ ಕರೆಯಲು  ಕೈ ಎತ್ತಿದೆ. ಅವನು ನನ್ನ ಎರಡನೇ ಸ್ಕಾಚ್ ತರುವವರೆಗೆ ನಮ್ಮಿಬ್ಬರ ನಡುವೆ ತಾತ್ಕಾಲಿಕವಾಗಿ  ಮೌನದ ಪರದೆ ಬಿದ್ದಿತ್ತು.
"ನನಗೆ ಇದನ್ನು ಅರ್ಥೈಸಿಕೊಳ್ಳುವದು ಕಷ್ಟವಾಗುತ್ತಿದೆ. " ಅವಳು ಮೃದುವಾಗಿ ನುಡಿದಳು .  "ನಮ್ಮಿಬ್ಬರ ನಡುವೆ  ಕೆಲವು ಕ್ಷಣಗಳ ಹಿಂದಿನವರೆಗೂ ಸಹಜವಾದ ಮಾತುಕತೆ ನಡೆಯುತ್ತಿತ್ತು - ಆನೆಯ ವಿಷಯ ಬರುವವರೆಗೂ . ಅದಾದ ನಂತರ ಅಸಹಜವಾದುದು ಏನೋ ನಡೆದಂತೆ. ನನಗೆ ಈಗ ನೀನು ಅರ್ಥವಾಗುತ್ತಿಲ್ಲ. ಏನೋ ಸರಿಯಿಲ್ಲ.  ಇದು ಆನೆಯೇ ? ಅಥವಾ ನನ್ನ ಕಿವಿಗಳೇ ನನಗೆ ಮೋಸ ಮಾಡುತ್ತಿವೆಯೇ ?"

"ನಿನ್ನ ಕಿವಿಗಳು ಮೋಸ ಮಾಡುತ್ತಿಲ್ಲ " ನಾನು ನುಡಿದೆ.
"ಹಾಗಾದರೆ ಇದು ನಿನ್ನದೇ ಸಮಸ್ಯೆ "
ನಾನು ಗ್ಲಾಸಿನೊಳಗೆ ಬೆರಳನ್ನು ತುಸುವೇ ಅದ್ದಿ , ಮಂಜುಗಡ್ಡೆಯನ್ನು ಅಲುಗಾಡಿಸಿದೆ. ವಿಸ್ಕಿಯೊಳಗಿನ ಮಂಜುಗಡ್ಡೆಯ ಅಲುಗಾಟದ ಶಬ್ದ ನನಗೆ ಯಾವಾಗಲೂ ಇಷ್ಟವಾಗುತ್ತಿತ್ತು.

"ನಾನು ಅದನ್ನು 'ಸಮಸ್ಯೆ' ಎಂದೇನೂ ಹೇಳಲು ಬಯಸುವದಿಲ್ಲ ಅದೇನೋ ಅಂಥ ದೊಡ್ಡ ವಿಷಯವಲ್ಲ. ಹೇಳಬೇಕೆಂದರೆ ನಾನು ಏನನ್ನೂ ಮುಚ್ಚಿಡುತ್ತಿಲ್ಲ.  ನಾನು ಸ್ಪಷ್ಟವಾಗಿ  ಈ ವಿಷಯದ ಕುರಿತು  ಮಾತನಾಡಬಲ್ಲೆನೇ ಎಂದು ನನಗೆ ನನ್ನ ಬಗ್ಗೆ ಸಂದೇಹವಿದೆ. ಹಾಗಾಗಿಯೇ ನಾನು ಹಿಂಜರಿಯುತ್ತಿರುವದು.  ಆದರೆ ಹೌದು ನೀನು ಹೇಳುವ ಹಾಗೆ ಇದೊಂದು ವಿಚಿತ್ರ ವಿಷಯ "

"ಹಾಗಂದರೆ ಏನರ್ಥ ?"
ಇನ್ನೂ ಮುಚ್ಚಿಡುವದು ಸರಿಯಲ್ಲ. ನಾನು ಅವಳಿಗೆ ಎಲ್ಲವನ್ನು ಹೇಳಬೇಕೆಂದು ನಿರ್ಧರಿಸಿದೆ. ಒಂದೇ ಗುಟುಕಿಗೆ ಗ್ಲಾಸಿನಲ್ಲಿ ಇದ್ದುದನ್ನು ಖಾಲಿ ಮಾಡಿದೆ.
"ವಿಷಯ ಏನೆಂದರೆ ಆನೆ ಅದೃಶ್ಯವಾಗುವದಕ್ಕೆ ಮೊದಲು ಅದನ್ನು ಕೊನೆಯ ಸಲ  ನೋಡಿದ್ದು ನಾನು.  ಮೇ ಹದಿನೇಳರ ಸಂಜೆ ಏಳು ಘಂಟೆ ನಂತರ ನಾನು ಅದನ್ನು ನೋಡಿದ್ದೆ  ಮತ್ತು ಹದಿನೆಂಟರ ಮಧ್ಯಾಹ್ನ ಆನೆ ಅದೃಶ್ಯವಾಗಿದ್ದನ್ನು ಎಲ್ಲರೂ ಗಮನಿಸಿದರು.  ಇವೆರಡೂ  ಸಮಯದ ನಡುವೆ ಆನೆಯನ್ನು ಯಾರೂ ನೋಡಿರಲಿಲ್ಲ ಯಾಕೆಂದರೆ ಆನೆ ಲಾಯಕ್ಕೆ  ಆರು  ಘ೦ಟೆಗೆ ಸರಿಯಾಗಿ ಬಾಗಿಲು ಹಾಕುತ್ತಾರೆ."
"ನನಗೆ ಅರ್ಥವಾಗುತ್ತಿಲ್ಲ . ಆರು ಘಂಟೆಗೆ ಬಾಗಿಲು ಹಾಕುವುದಾದರೆ ನೀನು ಏಳು ಘಂಟೆ ನಂತರ ಹೇಗೆ ನೋಡಲು ಸಾಧ್ಯ ?"
"ಆನೆ ಲಾಯದ ಹಿಂದೆ ಒಂದು ಕಡಿದಾದ ಬಂಡೆಯಿದೆ. ಒಂದು ಕಡಿದಾದ ಗುಡ್ಡ , ಸರಿಯಾದ ರಸ್ತೆ ಇಲ್ಲದ  ಖಾಸಗಿ ಆಸ್ತಿಯದು. ಆ ಗುಡ್ಡದ ಹಿಂದೆ ಒಂದು ಜಾಗವಿದೆ.  ಅಲ್ಲಿಂದ ನಿಂತು ನೋಡಿದರೆ ಆನೆ ಲಾಯ ಸರಿಯಾಗಿ ಕಾಣುತ್ತದೆ.  ಬಹುಶ: ಇದರ ಬಗ್ಗೆ ತಿಳಿದಿರುವದು ನನಗೆ ಮಾತ್ರ.
ನಾನು ಅಕಸ್ಮಾತಾಗಿ  ಈ  ಜಾಗವನ್ನು  ಹುಡುಕಿದ್ದೆ.  ಒಂದು ಭಾನುವಾರ ಮಧ್ಯಾನ್ಹ ಗುಡ್ಡದಲ್ಲಿ ಅಡ್ಡಾಡುತ್ತ ನಾನು ದಿಕ್ಕು ತಪ್ಪಿ ಈ ಕಡಿದಾದ ಜಾಗಕ್ಕೆ ಬಂದಿದ್ದೆ.  ಒಬ್ಬ ಮನುಷ್ಯನಿಗೆ ಮಾತ್ರ ಸಾಕಾಗುವಷ್ಟು ಸಪಾಟಾದ ಜಾಗ .  ಅಲ್ಲಿ ನಿಂತು ನಾನು ಗಿಡಗಂಟಿಗಳ ಸಂದಿಯಿಂದ ನೋಡಿದಾಗ ನನಗೆ ಆನೆ  ಲಾಯದ ಮೇಲ್ಛಾವಣಿ ಕಾಣಿಸಿತ್ತು.  ಮೇಲ್ಛಾವಣಿಗೆ ಸ್ವಲ್ಪ ಕೆಳಗೆ ಒಂದು ಗಾಳಿಯಾಡುವ ಖಾಲಿ ಜಾಗದ ಮೂಲಕ ನೋಡಿದರೆ ಲಾಯದ ಒಳಗಿನ ದೃಶ್ಯವೆಲ್ಲ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅದಾದ ಮೇಲೆ ನಾನು ಆಗಾಗ ಆ ಸ್ಥಳಕ್ಕೆ ಹೋಗಿ ಆನೆಯನ್ನು ನೋಡುವ ಹವ್ಯಾಸವನ್ನು  ಬೆಳೆಸಿಕೊಂಡೆ. ಯಾರಾದರೂ ನಾನೇಕೆ  ಈ ಕೆಲಸ  ಮಾಡುತ್ತಿದ್ದೇನೆ ಎಂದು ಕೇಳಿದರೆ ನನ್ನಲ್ಲಿ ಸ್ಪಷ್ಟವಾದ ಉತ್ತರವಿರಲಿಲ್ಲ. ನಾನು ಆನೆಯ ಖಾಸಗಿ ಕ್ಷಣಗಳಲ್ಲಿ ಅದನ್ನು ನೋಡುವದನ್ನು ಆನಂದಿಸುತ್ತಿದ್ದೆ.  ಅಷ್ಟೇ.  ಕತ್ತಲಾದ ಮೇಲೆ ನನಗೆ ಆನೆ ಕಾಣಿಸುತ್ತಿರಲಿಲ್ಲ ಆದರೆ ಮುಸ್ಸಂಜೆ ಹೊತ್ತಿಗೆ ಆನೆಯ ಜೊತೆಗಿರುವಾಗ ಮಾವುತ ದೀಪವನ್ನು ಹಾಕುತ್ತಿದ್ದ. ಹೀಗಾಗಿ ಅಲ್ಲಿ ನಡೆಯುತ್ತಿರುವದು ನನಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆಗೆಲ್ಲ ನನಗೆ ಹೊಳೆದಿದ್ದು ಏನೆಂದರೆ ಆನೆ ಮತ್ತು ಮಾವುತನ ನಡುವಿನ ಆತ್ಮೀಯತೆ. ಜನರಿರುವಾಗ ಅವರು ಯಾವತ್ತೂ ಈ ಆತ್ಮೀಯತೆಯನ್ನು ಪ್ರದರ್ಶಿಸುತ್ತಿರಲಿಲ್ಲ. ಅವರಿಬ್ಬರ ನಡುವಿನ ಅವಿನಾಭಾವ ಸಂಬಂಧ ಅವರ ಪ್ರತಿ ನಡೆಯಲ್ಲೂ ಗೋಚರಿಸುತ್ತಿತ್ತು. ಒಂದು ರೀತಿ ,  ಹಗಲಿನಲ್ಲಿ ಇಬ್ಬರೂ ತಮ್ಮ ಆತ್ಮೀಯ ಭಾವವನ್ನು ದೂರದಲ್ಲಿ ಎಲ್ಲೋ ಅಡಗಿಸಿಟ್ಟು , ಜನರು ಹೊರಟ ಮೇಲೆ , ನಿರ್ಜನ ಕತ್ತಲೆಯಲ್ಲಿ ಮತ್ತೆ ಅದನ್ನು ಹೊರಕ್ಕೆ ತೆಗೆದು ಪರಸ್ಪರ ಹಂಚಿಕೊಂಡಂತೆ. ಹಾಗೆಂದು ಅವರೇನು ವಿಭಿನ್ನವಾದ ಭಾವಾಭಿನಯ ಮಾಡುತ್ತಿದ್ದರು ಎಂದಲ್ಲ. ಆನೆ ಎಂದಿನಂತೆ ಶೂನ್ಯವನ್ನು ದಿಟ್ಟಿಸುತ್ತ ನಿಂತಿರುತ್ತಿತ್ತು ಮತ್ತು  ಮಾವುತ ಅವನ ಕೆಲಸವನ್ನು ಮಾಡುತ್ತಿದ್ದ - ಆನೆಯ ಮೈಯನ್ನು ಉಜ್ಜುವದು , ಅದಕ್ಕೆ  ತಿನ್ನಿಸುವದು , ಲದ್ದಿಯನ್ನು ತೆಗೆಯುವದು ಇತ್ಯಾದಿ . ಆದರೆ ಇವೆಲ್ಲವುಗಳಲ್ಲಿ ಅವರ ನಡುವಿನ  ಅಗಾಧ ತಾದ್ಯಾತ್ಮತೆಯನ್ನು ನೋಡುಗರು ಗಮನಿಸಬಹುದಿತ್ತು.  ಮಾವುತ ನೆಲ ಗುಡಿಸುವಾಗ ಆನೆ ಸೊಂಡಿಲಿನಿಂದ ಅವನ ಬೆನ್ನಿನ ಮೇಲೆ ಮೃದುವಾಗಿ ತಟ್ಟುತ್ತಿತ್ತು. ನನಗೆ ಇದು  ಅತ್ಯಂತ ಇಷ್ಟವಾದ ದೃಶ್ಯ.  
"ನಿನಗೆ ಯಾವಾಗಲೂ  ಆನೆಗಳೆಂದರೆ ಇಷ್ಟವೇ? " ಅವಳು ಕೇಳಿದಳು . "ಇಂತಹದೇ ಆನೆ ಎಂದಲ್ಲ "
"ಹ್ಮ್ . ಹೌದು ಅನಿಸುತ್ತದೆ. ನನಗೆ ಆನೆಗಳೆಂದರೆ ಇಷ್ಟ. ಯಾಕೆ ಎಂದು ಗೊತ್ತಿಲ್ಲ. ಅವುಗಳಲ್ಲಿನ ಯಾವೂದೋ ಒಂದು ಭಾವ  ನನ್ನಲ್ಲಿ ಆಕರ್ಷಣೆಯನ್ನುಂಟು ಮಾಡುತ್ತದೆ. "
"ಅಂದರೆ ಅವತ್ತು ಸಹ ಹೊತ್ತು ಕಳೆದ ಮೇಲೆ ನೀನು ಆ ಜಾಗದಲ್ಲಿ ನಿಂತು ಅವರನ್ನು ನೋಡುತ್ತಿದ್ದೆ.  ಮೇ . .  ಯಾವ ದಿನ ?"
"ಹದಿನೇಳು. ಮೇ ಹದಿನೇಳರ ಸಂಜೆ ಏಳು ಘಂಟೆ. ತುಸು ದೀರ್ಘವೇ ಅನ್ನಬಹುದಾದ ದಿನಗಳವು. ಆಕಾಶದಲ್ಲಿ  ನ್ಯೂರ್ಯಾ ಮುಳುಗುವ ತಿಳಿಗೆಂಪು ಬಣ್ಣ. ಆದರೆ ಲಾಯದೊಳಗೆ ದೀಪವಿತ್ತು. "
"ಆನೆ ಮತ್ತು ಮಾವುತರ ನಡುವೆ ಏನಾದರೂ ಅಸಹಜತೆ ಇತ್ತೇ ?"
"ಇತ್ತು. ಇರಲಿಲ್ಲ.  ನಿಖರವಾಗಿ ಹೇಳಲಾರೆ. ಅವರು ನನ್ನ ಮುಂದೆ ನಿಂತಿದ್ದರು ಎಂದೇನಲ್ಲ.  ಹಾಗಾಗಿ ನಾನು ಸಂಭಾವ್ಯ ಸಾಕ್ಷಿಯಾಗಲಾರೆ."
"ಏನಾಯಿತು ?"
ನಾನು ಒಂದು ಗುಟುಕು ವಿಸ್ಕಿ ಹೀರಿದೆ. ಕಿಟಕಿಯ ಹೊರಗೆ ಮಳೆ ಸುರಿಯುತ್ತಿತ್ತು , ಮೊದಲಿನ ಹಾಗೆ , ಹೆಚ್ಚಲ್ಲ ಕಡಿಮೆಯೂ ಅಲ್ಲ.  ಪೃಕೃತಿಯಲ್ಲಿ ಎಂದಿಗೂ ಬದಲಾಗದ ಸ್ಥಾಯಿಯ  ಹಾಗೆ .

"ಏನೂ ಆಗಿರಲಿಲ್ಲ, ನಿಜವಾಗಿಯೂ. ಆನೆ ಮತ್ತು ಮಾವುತ ಯಾವತ್ತಿನಂತೆ ಅವರವರ ಕೆಲಸದಲ್ಲಿ ತೊಡಗಿದ್ದರು. ಕಸ ಗುಡಿಸುವದು , ತಿನ್ನುವದು , ಒಬ್ಬರನ್ನೊಬ್ಬರು ಸಲುಗೆಯಿಂದ ತಡವಿಕೊಳ್ಳುವದು . ಅಂತಹ ಬದಲಾವಣೆಯೇನು ಇರಲಿಲ್ಲ. ಆದರೆ ಅವರಿಬ್ಬರೂ ಪರಸ್ಪರನ್ನು ನೋಡುತ್ತಿದ್ದ ರೀತಿ. ಅವರಿಬ್ಬರ ನಡುವಿನ ಯಾವುದೋ ಒಂದು ಸಮತೋಲನ. "
"ಸಮತೋಲನ ?"
"ಗಾತ್ರ. ಅವರಿಬ್ಬರ ದೇಹದ ಗಾತ್ರ. ಆ ಸಮತೋಲನ ಸ್ವಲ್ಪ ಬದಲಾದ ಹಾಗೆ. ಅದು ಹೇಗೋ ಅವರಿಬ್ಬರ ನಡುವಿನ ವ್ಯತ್ಯಾಸ ಸಂಕುಚಿತವಾಗಿದೆ ಎಂದು ನನಗೆ ಅನಿಸತೊಡಗಿತು. "
ಅವಳು  ಗ್ಲಾಸನ್ನು ದಿಟ್ಟಿಸುತ್ತಿದ್ದಳು. ಮಂಜುಗಡ್ಡೆ ನಿಧಾನವಾಗಿ ಕರಗುತ್ತಿತ್ತು. ನೀರು ಸಾವಕಾಶವಾಗಿ ಪೇಯದಲ್ಲಿ ಮಿಳಿತವಾಗುತ್ತ , ಸಮುದ್ರದಾಳದ ಹರಿವಿನ  ಹಾಗೆ ಕಾಣಿಸುತ್ತಿತ್ತು.
"ಅಂದರೆ ಆನೆ ಸಣ್ಣಗಾಗಿತ್ತು ಎಂದೇ ?"
"ಅಥವಾ ಮಾವುತ ದೊಡ್ಡದಾಗಿದ್ದ. ಅಥವಾ ಎರಡೂ ಕ್ರಿಯೆಗಳು ಸಮಾನಾಂತರವಾಗಿ ಘಟಿಸುತ್ತಿದ್ದವು "
"ಮತ್ತು ನೀನು ಈವಿಷಯವನ್ನು ಪೊಲೀಸರಿಗೆ ತಿಳಿಸಲಿಲ್ಲ ?"
"ಇಲ್ಲ ಖಂಡಿತವಾಗಿಯೂ ಇಲ್ಲ. " ನಾನು ಹೇಳಿದೆ "ಅವರು ನನ್ನನ್ನು ನಂಬುತ್ತಿರಲಿಲ್ಲ. ಅಲ್ಲದೆ ಆ ಸಮಯದಲ್ಲಿ ನಾನು ಕಡಿದಾದ ಜಾಗದಿಂದ ಆನೆಯನ್ನು ನೋಡುತ್ತಿದ್ದೆ ಎಂದು ಹೇಳಿದರೆ   ನಾನೇ  ಘಟನೆಯ ಮೊದಲ ಶಂಕಿತನಾಗುತ್ತಿದ್ದೆ. "
"ಆದರೂ ಅವರಿಬ್ಬರ ನಡುವಿನ ಸಮತೋಲನ ತಪ್ಪಿದೆ ಎಂದು ನಿನಗೆ ಖಚಿತವಾಗಿತ್ತೇ ?"
"ಬಹುಶ: . ನಾನು ಬಹುಶ: ಎಂದಷ್ಟೇ ಹೇಳಬಹುದು . ನನ್ನ ಬಳಿ ಯಾವುದೇ ಪುರಾವೆಗಳಿಲ್ಲ. ಅಲ್ಲದೆ ನಾನು ಅವರನ್ನು ಸಣ್ಣ ಗಾಳಿಯಾಡುವ ತೂತಿನ ಮೂಲಕ ದಿಟ್ಟಿಸುತ್ತಿದ್ದೆ. ನಾನು ಅವರನ್ನು ಆ ರೀತಿ  ಸಾಕಷ್ಟು  ಸಲ ಹಿಂದೆಲ್ಲ ನೋಡಿದ್ದಿದೆ.   ಹಾಗಾಗಿ ಅವರ  ನಡುವಿನ ಗಾತ್ರದ ವ್ಯತ್ಯಾಸದ ಬಗ್ಗೆ ನಾನು ತಪ್ಪು ಮಾಡಬಹುದು ಎಂದೆನಿಸುವದಿಲ್ಲ.  
ನಿಜ ಹೇಳಬೇಕು ಎಂದರೆ ನನ್ನ ಕಣ್ಣುಗಳು ನನಗೆ ಮೋಸ ಮಾಡುತ್ತಿವೆಯೇ ಎಂದು ನಾನು ಕ್ಷಣ ಕಾಲ ಚಿ೦ತಿಸಿದ್ದೂ ಇದೆ. ನಾನು ಒಮ್ಮೆ ಕಣ್ಣುಜ್ಜಿಕೊಂಡೆ , ತಲೆಯಾಡಿಸಿದೆ , ಆದರೆ ಆನೆಯ ಗಾತ್ರ ಹಾಗೆಯೆ  ಇತ್ತು.  ಖಂಡಿತವಾಗಿಯೂ ಆನೆಯ ಗಾತ್ರ ಸಂಕುಚಿತವಾಗಿತ್ತು . ಎಷ್ತೆಂದರೆ ನಗರದಲ್ಲಿ ಇನ್ನೊಂದು ಸಣ್ಣ ಗಾತ್ರದ ಆನೆಯನ್ನು ತಂದಿದ್ದಾರೆ ಎಂದು ಕೆಲ ಕಾಲ ನಾನು ಭಾವಿಸುವ ಹಾಗೆ. ಆದರೆ ನಾನು ಆ ಸುದ್ದಿಯನ್ನು ಕೇಳಿರಲಿಲ್ಲ ಮತ್ತು ಆನೆಯ ಕುರಿತಾದ ಇಂಥ ಸುದ್ದಿಯನ್ನು ನಾನು ಖಂಡಿತ ತಪ್ಪಿಸಿಕೊಳ್ಳುತ್ತಿರಲಿಲ್ಲ. ಇದು ಇನ್ನೊಂದು ಆನೆ ಅಲ್ಲವಾಗಿದ್ದರೆ   ಸಂಕುಚಿತವಾದ ಗಾತ್ರದ  ಹಳೆಯ ಮುದಿಯೇ ಇರಬೇಕು , ಕಾರಣಗಳು ಏನೇ ಇದ್ದಿರಬಹುದು.

ಮತ್ತೆ ನೋಡಿದ ಹಾಗೆ ನನಗೆ ಗಾತ್ರವನ್ನು ಕಳೆದುಕೊಂಡು ಈ ಆನೆಯ ಹಾವಭಾವಗಳು ಹಳೆಯ ಆನೆಯದೇ ಆಗಿರುವದು ಗಮನಕ್ಕೆ ಬಂದಿತು.
ಅದು  ನೆಲದ ಮೇಲೆ ಮುಂಗಾಲನ್ನು ಚಾಚಿ ಸಂತೋಷದಿಂದ ಮಲಗಿಕೊಂಡಿತ್ತು.  ಮಾವುತನ ಬೆನ್ನಿನ ಮೇಲೆ ಸ್ವಲ್ಪ ಸಣ್ಣದಾಗಿದ್ದ ತನ್ನ ಸೊಂಡಿಲಿನಿಂದ ನೇವರಿಸುತ್ತಿತ್ತು.  

ಅದೊಂದು ಅದ್ಭುತವಾದ ರಹಸ್ಯ ದೃಶ್ಯ. ಅದನ್ನು ನೋಡುತ್ತಿದ್ದ ಹಾಗೆ ನನಗೆ , ಹೊರಗಿನ ಪ್ರಪ೦ಚದ ಅರಿವಿಗೆ ನಿಲುಕದ ಕಾಲವೊಂದು ಲಾಯದಲ್ಲಿ ಮಾತ್ರ ಪ್ರವಹಿಸುತ್ತಿರುವ ಹಾಗೆ ಭಾಸವಾಯಿತು ಮತ್ತು ಆನೆ ಹಾಗೂ ಮಾವುತ ಅವರನ್ನು ಆವರಿಸುತ್ತಿದ್ದ  ಕಾಲದ ಪ್ರವಾಹದಲ್ಲಿ ತಮ್ಮನ್ನು ತಾವು ಸಂತೋಷದಿಂದ ಒಪ್ಪಿಸಿಕೊಳ್ಳುತ್ತಿದ್ದರು.

ಒಟ್ಟಾರೆಯಾಗಿ ನಾನು ಸುಮಾರು ಮೂವತ್ತು ನಿಮಿಷಗಳ ಕಾಲ ಈ ದೃಶ್ಯವನ್ನು ನೋಡುತ್ತ ನಿಂತಿದ್ದಿರಬಹುದು. ಏಳೂವರೆ ಹಾಗೆ ದೀಪಗಳು ಆರಿದವು. ಎಂದಿಗಿಂತ ಮೊದಲೇ. ಆ ಕ್ಷಣದಿಂದ ದಟ್ಟ ಕತ್ತಲು  ಎಲ್ಲವನ್ನೂ ಆವರಿಸಿತ್ತು.  ಮತ್ತೆ ಬೆಳಕು ಕಾಣಿಸಬಹುದೇನೋ ಎಂದು ನಾನು ಆ  ಜಾಗದಲ್ಲೇ  ನಿಂತು ಕಾದೆ. ಆದರೆ ಬೆಳಕು ಮತ್ತೆ ಮರಳಲಿಲ್ಲ. ನಾನು ಆನೆಯನ್ನು ನೋಡಿದ್ದು ಅದೇ ಕೊನೆಯ ಸಲ.

"ಅಂದರೆ ನೀನು ಹೇಳುವ ಹಾಗೆ ಆನೆ ಸರಪಳಿ , ಲೋಹದ ಬಳೆ , ಬೇಲಿ ಎಲ್ಲವನ್ನೂ ದಾಟುವಷ್ಟು ಸಂಕುಚಿತವಾಗಿ  ಸಣ್ಣದಾಗಿತ್ತು   ಅಥವಾ ಅದು ಶೂನ್ಯದಲ್ಲಿ ಲೀನವಾಯಿತು ಎಂದೇ ?"
"ನನಗೆ ಗೊತ್ತಿಲ್ಲ. " ನಾನು ನುಡಿದೆ . "ನಾನು ಹೇಳಲು ಬಯಸುತ್ತಿರುವದು ನಾನು ಅವತ್ತು ನೋಡಿದ ದೃಶ್ಯವನ್ನು ಅಷ್ಟೇ.  ಅದರ ನಂತರ ಏನಾಯಿತು ಎಂದು ನಾನು ಯಾವತ್ತೂ  ಯೋಚಿಸಿಲ್ಲ.  ಅವತ್ತಿನ ದೃಶ್ಯಾವಳಿಗಳು ಅದೆಷ್ಟು ಗಾಢವಾಗಿವೆ ಎಂದರೆ ನನಗೆ  ಅವುಗಳನ್ನು ದಾಟಿ ಮುಂದಕ್ಕೆ ಹೋಗಿ ವಿಚಾರ ಮಾಡುವದು ಸಾಧ್ಯವಿಲ್ಲ "

 ಆನೆ ಅದೃಶ್ಯವಾದ ಬಗ್ಗೆ ನನಗೆ ಅಷ್ಟು ಮಾತ್ರ ಹೇಳಲು ಸಾಧ್ಯವಾಯಿತು. ನಾನು ಭಯಪಟ್ಟ ಹಾಗೆ ಆನೆಯ ವಿಷಯ ಇಬ್ಬರ ನಡುವೆ ಮತ್ತೆ ಮಾತು ಮುಂದುವರೆಸಲು ಸಾಧ್ಯವಿಲ್ಲದಷ್ಟು ಸಂಪೂರ್ಣವೂ ,  ಭಿನ್ನವೂ ಹಾಗೂ  ಈಗಷ್ಟೆ ಭೇಟಿಯಾದ ಯುವತಿಯ ಜೊತೆಗೆ  ಮಾತು ಮತ್ತೆ ಪೋಣಿಸಲಾಗದಷ್ಟು ನಿರ್ದಿಷ್ಟವೂ ಆಗಿತ್ತು. ನಾನು ಘಟನೆಯನ್ನು ಹೇಳಿ ಮುಗಿಸಿದ ನಂತರ ನಮ್ಮಿಬ್ಬರ ನಡುವೆ  ಮೌನ ಹೆಪ್ಪುಗಟ್ಟಿತ್ತು.
ಮತ್ತೆ ಮಾತಿಗೆ  ಅವಕಾಶವಿಲ್ಲದಂತೆ ಇರುವ ಆನೆ ಅದೃಶ್ಯವಾದ  ಘಟನೆ ಹೇಳಿಯಾದ ಮೇಲೆ ಮತ್ತೆ ಯಾವ ವಿಷಯದ ಬಗ್ಗೆ ಇಬ್ಬರೂ ಮಾತನಾಡಬಹುದು ?  ಅವಳು ಗ್ಲಾಸಿನ ಮೇಲೆ ವೃತ್ತಾಕಾರವಾಗಿ ಬೆರಳುಗಳನ್ನು ಆಡಿಸಿದಳು.  ನಾನು ಗ್ಲಾಸಿನ ಮೇಲೆ ಮುದ್ರಿತವಾಗಿದ್ದ ಕೆಲ ಶಬ್ದಗಳನ್ನೇ ಮತ್ತೆ ಮತ್ತೆ ಓದಿದೆ. ನಾನು ಆನೆಯ ವಿಷಯವನ್ನು ಅವಳ ಬಳಿ ಹೇಳಲೇ ಬಾರದಾಗಿತ್ತು.  ಅದು ಎಲ್ಲರೊಟ್ಟಿಗೆ ಸಹಜವಾಗಿ ಹೇಳುವಂತ ವಿಷಯವಲ್ಲ.  
"ನಾನು ಚಿಕ್ಕವಳಿದ್ದಾಗ  ನನ್ನ ಬೆಕ್ಕು ಕಣ್ಮರೆಯಾಗಿತ್ತು. " ಅವಳು ದೀರ್ಘ ಮೌನವನ್ನು ಮುರಿಯುತ್ತ ನುಡಿದಳು. "ಆದರೂ ಬೆಕ್ಕು ಅದೃಶ್ಯವಾಗುವದಕ್ಕೂ , ಆನೆ ಅದೃಶ್ಯವಾಗುವದಕ್ಕೂ ಸಾಕಷ್ಟು ವ್ಯತ್ಯಾಸವಿದೆ "
"ಖಂಡಿತ. ಹೋಲಿಕೆ ಸಾಧ್ಯವೇ ಇಲ್ಲ. ಗಾತ್ರ ವ್ಯತ್ಯಾಸವನ್ನೇ ನೋಡು "

ಮೂವತ್ತು ನಿಮಿಷಗಳ ನಂತರ ನಾವು ಹೋಟೆಲಿನ ಹೊರಗೆ ನಿಂತು  ಪರಸ್ಪರರಿಗೆ ವಿದಾಯ ಹೇಳಿದೆವು.  ಇದ್ದಕ್ಕಿದ್ದ ಹಾಗೆ ಅವಳಿಗೆ ಹೋಟೆಲಿನ ಹಜಾರದಲ್ಲಿ ತನ್ನ  ಛತ್ರಿಯನ್ನು ಮರೆತು ಬಿಟ್ಟಿರುವದು ನೆನಪಾಯಿತು.  ನಾನು ಎಲೀವೆಟರಿನಲ್ಲಿ ಹೋಗಿ ಛತ್ರಿಯನ್ನು ತೆಗದುಕೊಂಡು ಬಂದೆ. ಅದು ದೊಡ್ಡ ಕೈ ಹಿಡಿ ಇರುವ ಕೆಂಪು ಬಣ್ಣದ ಛತ್ರಿ.
"ಧನ್ಯವಾದಗಳು" ಅವಳು
"ಶುಭ ರಾತ್ರಿ "

ಅದೇ ಕೊನೆಯ ಸಲ ನಾನು ಅವಳನ್ನು ನೋಡಿದ್ದು. ಅದಾದ ಮೇಲೆ ಒಮ್ಮೆ ನಾವು ದೂರವಾಣಿಯಲ್ಲಿ ಅವಳ ಲೇಖನದ ಕುರಿತು ಮಾತನಾಡಿದ್ದೆವು.  ಮಾತನಾಡುವಾಗ ನಾನು ಅವಳನ್ನು ಮತ್ತೊಮ್ಮೆ ಊಟಕ್ಕೆ ಆಹ್ವಾನಿಸುವ ಕುರಿತು ಯೋಚಿಸಿದ್ದೆ. ಆದರೆ ಕೊನೆಗೂ ಅದನ್ನು ಬಾಯಿ ಬಿಟ್ಟು ಹೇಳಲಿಲ್ಲ.  ಅದು ಒಂದಲ್ಲ ಒಂದು ರೀತಿಯಲ್ಲಿ ನನಗೆ ಸರಿ ಬರುತ್ತಿರಲಿಲ್ಲ.

ಆನೆ ಅದೃಶ್ಯವಾದುದನ್ನು ಅನುಭವಿಸಿದ ನಂತರ ನನಗೆ  ಬಹಳಷ್ಟು ಸಲ ಈ  ಭಾವ ಕಾಡುತ್ತಿತ್ತು. ನಾನು ಸಾಕಷ್ಟು ಸಲ ಏನನ್ನೋ ಮಾಡಬೇಕೆಂದು ಯೋಚಿಸುತ್ತಿದ್ದೆ ಆದರೆ ನಂತರ ಮಾಡುವದರ ಮತ್ತು ಮಾಡದಿರುವುದರ   ಫಲಿತಾಂಶಗಳ  ನಡುವಿನ ವ್ಯತ್ಯಾಸವನ್ನು ಗುರುತಿಸಲು ಅಸಮರ್ಥನಾಗುತ್ತಿದ್ದೆ.  ಬಹಳಷ್ಟು ಸಲ ನನ್ನ ಸುತ್ತಲಿನ ವಸ್ತುಗಳು ತಮ್ಮ ನೈಜ ಸಮತೋಲನವನ್ನು ಕಳೆದುಕೊಂಡಿವೆಯೇನೋ ಎಂದು ನನಗೆ ಭಾಸವಾಗುತ್ತಿತ್ತು.ಆನೆ ಅದೃಶ್ಯವಾದ ಘಟನೆಯ ನಂತರ ನನ್ನ ಒಳಗಿನ ಯಾವುದೋ ಸಮತೋಲನ ಮುರಿದುಬಿದ್ದ ಹಾಗೆ ಬಾಹ್ಯ ಘಟನೆಗಳೆಲ್ಲ ವಿಚಿತ್ರವಾಗಿ ತೋರುತ್ತಿದ್ದವು. ಬಹುಶ: ಅದು  ನನ್ನೊಳಗಿನದೇನೋ  ಇರಬಹುದು .
 
ನಾನು ನನ್ನ ಹಳೆಯ ನೆನಪಿನ ಚಿತ್ರಗಳಿಂದ ಚಿತ್ರಿಸಿದ್ದ ಬಾಹ್ಯ  ಪ್ರಪಂಚದಲ್ಲಿ  ರೆಫ್ರಿಜರೇಟರ್ , ಓವೆನ್ , ಕಾಫಿ ಫಿಲ್ಟರ್ ಇವುಗಳನ್ನು ವ್ಯಾವಹಾರಿಕ ಜಗತ್ತಿಗೆ ಮಾರುವದನ್ನು ಮುಂದುವರೆಸಿದ್ದೆ.  ನಾನು ಹೆಚ್ಚು ಹೆಚ್ಚು ವ್ಯಾವಹಾರಿಕವಾದಂತೆ ಹೆಚ್ಚು ಹೆಚ್ಹು ಮಾರಬಹುದು - ನಮ್ಮ ಪ್ರಚಾರ ನಮ್ಮ ಊಹೆಗೂ ಮೀರಿ ಯಶಸ್ವಿಯಾಗಿತ್ತು , ನನ್ನನ್ನು  ನಾನು ಸಾಕಷ್ಟು ಜನರಿಗೆ ಮಾರಿಕೊಳ್ಳುವದರಲ್ಲಿ ಯಶಸ್ವಿಯಾಗಿದ್ದೆ ಕೂಡ.  ಅದಕ್ಕೆ ಕಾರಣ ಬಹುಶ: ಜನ  ತಾವು ಪ್ರಪಂಚವೇ ಎಂದು ಭಾವಿಸಿದ್ದ ಅಡುಗೆ ಮನೆಯಲ್ಲಿ  ಐಕ್ಯತೆಯನ್ನು  ಹುಡುಕುತ್ತಿದ್ದರು,  ವಿನ್ಯಾಸದಲ್ಲಿನ ಐಕ್ಯತೆ ,  ಕಾರ್ಯಕಾರಣದಲ್ಲಿನ ಐಕ್ಯತೆ.

ಈಗ ಪೇಪರಿನಲ್ಲಿ ಅದೃಶ್ಯವಾದ ಆನೆಯ ಬಗ್ಗೆ ಯಾವುದೇ ಸುದ್ದಿ ಪ್ರಕಟವಾಗುವದಿಲ್ಲ. ಜನ ಹಿಂದೊಮ್ಮೆ ತಮ್ಮ ನಗರದಲ್ಲಿ ಆನೆಯೊಂದು ಇತ್ತು ಎನ್ನುವದನ್ನೇ ಮರೆತ ಹಾಗೆ ಇದ್ದರು.  ಆನೆಯ ಲಾಯವಿದ್ದ ಜಾಗದ ಸುತ್ತಲಿನ ದಟ್ಟ ಹುಲ್ಲು ಒಣಗಿ , ಜಾಗಕ್ಕೆ ಚಳಿಗಾಲದ ಛಾಯೆಯನ್ನು ತಂದುಕೊಟ್ಟಿತ್ತು.

ಆನೆ ಮತ್ತು ಮಾವುತ ಸಂಪೂರ್ಣವಾಗಿ ಅದೃಶ್ಯವಾಗಿದ್ದರು. ಮತ್ತೆಂದೂ ಮರಳಿ ಬಾರದ ಹಾಗೆ. 

Tuesday, April 27, 2021

ಬೆಳಕೆಂಬುದು ನೀರಿನಂತೆ

ಮೂಲ : ಗಾಬ್ರಿಯೇಲ್ ಗ್ರಾಸಿಯಾ ಮಾರ್ಕ್ವೆಜ್

ಕ್ರಿಸ್ ಮಸ್ ದಿನ ಹುಡುಗರು ದೋಣಿ ಬೇಕೆಂದು ಮತ್ತೆ ಕೇಳಿದರು.

"ಸರಿ" ಅವರಪ್ಪ ಹೇಳಿದ "ನಾವು ಕಾರ್ಟಜೆನಾಗೆ ಮರಳಿ ಹೋದಾಗ ಖರೀದಿಸಿದರಾಯಿತು "

ಒಂಬತ್ತು ವರ್ಷದ ಟೋಟೋ ಮತ್ತು ಏಳು ವರ್ಷದ ಜೋಯೆಲ್ ರ ನಿರ್ಧಾರ ಅವರ ತಂದೆ ತಾಯಿಗಳು ಅಂದುಕೊಂಡಿದ್ದುದಕ್ಕಿಂತ  ಗಟ್ಟಿಯಾಗಿದ್ದುದಾಗಿತ್ತು.
"ಸಾಧ್ಯವಿಲ್ಲ " ಇಬ್ಬರೂ ಒಟ್ಟಿಗೆ ಹೇಳಿದರು. "ಇವತ್ತು , ಈಗಲೇ, ನಮಗೆ ಅದು ಬೇಕು "
" ಅರ್ಥ ಮಾಡಿಕೊಳ್ಳಿ  " ಅವರ ಅಮ್ಮ  "ಇಲ್ಲಿ ದೋಣಿ ಸಂಚಾರಕ್ಕೆ ಸ್ವಲ್ಪ ಯೋಗ್ಯ ಅನ್ನುವಂತಹ  ನೀರು ಸಿಗುವದು ಬಚ್ಚಲು ಮನೆಯಲ್ಲಿ ಮಾತ್ರ  "

ಅವಳು ಮತ್ತು ಅವಳ ಗಂಡ ಹೇಳಿದ್ದು ನಿಜವೇ ಆಗಿತ್ತು.   ಕಾರ್ಟಜೆನಾಗೆ ಡಿ ಇಂಡಿಯಾನಾ ದಲ್ಲಿ  ಅವರ ಮನೆಯ ಅಂಗಳ ಬಂದರಿಗೆ ತಾಕಿಕೊಂಡಿತ್ತು ಮತ್ತು ಅವರ ಷೆಡ್ಡು ಎರಡು ವಿಹಾರನೌಕೆಗಳು  ಹಿಡಿಯುವಷ್ಟು ವಿಶಾಲವಾಗಿತ್ತು.  ಆದರೆ  ಈ ಮ್ಯಾಡ್ರಿಡ್ ನಗರದಲ್ಲಿ  ಅವರು  '೪೭ ಪ್ಯಾಸಿಯೊ ಡೆ ಲಾ ಕ್ಯಾಸ್ಟೆಲ್ಲಾನಾ'ದಲ್ಲಿರುವ  ಜನದಟ್ಟಣೆಯಿಂದ ಕಿಕ್ಕಿರಿದ ಐದು ಅಂತಸ್ತಿನ ಅಪಾರ್ಟ್ ಮೆ೦ಟೊ೦ದರಲ್ಲಿ ವಾಸವಾಗಿದ್ದರು.  ಅದು  ಏನೇ ಇರಲಿ , ಅಪ್ಪ ಅಮ್ಮ ಇಬ್ಬರೂ ಮಕ್ಕಳ ಬೇಡಿಕೆಯನ್ನು ತಳ್ಳಿ ಹಾಕುವಂತಿರಲಿಲ್ಲ. ಯಾಕೆಂದರೆ  ಶಾಲೆಯಲ್ಲಿ ಬಹುಮಾನವನ್ನು ಗೆದ್ದರೆ ಒಂದು ಪುಟ್ಟ ಹಾಯಿ ದೋಣಿ , ಒಂದು ದಿಕ್ಸೂಚಿ ಮತ್ತು ಒಂದು ಕೋನಮಾಪಕ ಕೊಡಿಸುವುದಾಗಿ ಅವರು ಮಕ್ಕಳಿಗೆ ಭಾಷೆಯಿತ್ತಿದ್ದರು  ಹಾಗೂ ಈಗ ಮಕ್ಕಳು ಬಹುಮಾನವನ್ನು ಗೆದ್ದಿದ್ದರು. 
ಅವರ ಅಪ್ಪ ದೋಣಿಯನ್ನು ತಂದಿದ್ದರೂ,  ಪಣಕ್ಕಿಟ್ಟಿದ್ದುದನ್ನು ಕೊಡಲೇಬೇಕು  ಎನ್ನುವ  ಇಚ್ಛೆಯನ್ನು ಕಿಂಚಿತ್ತೂ  ವ್ಯಕ್ತಪಡಿಸದ ಅವನ ಹೆಂಡತಿಗೆ ಇನ್ನೂ ವಿಷಯವನ್ನು  ತಿಳಿಸಿರಲಿಲ್ಲ.  ಅದೊಂದು  ಅಲ್ಯೂಮಿನಿಯಂನಲ್ಲಿ ಮಾಡಿದ , ತಳದಲ್ಲಿ ಬಂಗಾರದ ವರ್ಣದ ಪಟ್ಟೆಗಳಿರುವ ಸುಂದರವಾದ ಹಾಯಿ ದೋಣಿಯಾಗಿತ್ತು 
"ದೋಣಿ ಗ್ಯಾರೇಜಿನಲ್ಲಿ ಇದೆ" ಅವರ ಅಪ್ಪ ಮಧ್ಯಾನ್ಹ ಊಟ ಮಾಡುವಾಗ ಘೋಷಿಸಿದ.  "ಆದರೆ ಸಮಸ್ಯೆಯೇನೆಂದರೆ ಅದನ್ನು ಎಲಿವೇಟರ್ ಮುಖಾ೦ತರವಾಗಲಿ ಅಥವಾ ಮೆಟ್ಟಿಲುಗಳ ಮೂಲಕವಾಗಲಿ ಮೇಲಕ್ಕೆ ತರಲು ಸಾಧ್ಯವಿಲ್ಲ ಮತ್ತು ಗ್ಯಾರೇಜಿನಲ್ಲಿ ಯಾವುದಕ್ಕೂ  ಜಾಗವಿಲ್ಲ. " 

ಅದರ ಮುಂದಿನ ಶನಿವಾರ  ಹುಡುಗರು ದೋಣಿಯನ್ನು ಮೇಲಕ್ಕೇರಿಸಲು  ಅವರ ಸಹಪಾಠಿಗಳನ್ನು ಮನೆಗೆ ಆಹ್ವಾನಿಸಿದರು ಮತ್ತು ಅವರೆಲ್ಲರೂ ಸೇರಿ ದೋಣಿಯನ್ನು  ಕೆಲಸದವರ ಕೋಣೆಯವರೆಗೆ ಎಳೆದು ತರುವಲ್ಲಿ ಯಶಸ್ವಿಯಾಗಿದರು. 

"ಅಭಿನಂದನೆಗಳು " ಅವರಪ್ಪ ನುಡಿದ "ಮುಂದೇನು ?"
"ಮುಂದೇನೂ ಇಲ್ಲ" ಹುಡುಗರು ಉತ್ತರಿಸಿದರು " ನಮಗೆ  ಕೋಣೆಯಲ್ಲಿ ದೋಣಿಯಿರಬೇಕಿತ್ತು , ಈಗ ಅದು ಇದೆ "

ಬುಧವಾರ ರಾತ್ರಿ , ಪ್ರತಿ ಬುಧವಾರದಂತೆ ಅಪ್ಪ ಅಮ್ಮ ಸಿನಿಮಾ ನೋಡಲು ಹೋದರು. ಹುಡುಗರು , ಸಧ್ಯದ  ಮನೆಯ ಸಾಮ್ರಾಟರು, ಮನೆಯ ಬಾಗಿಲುಗಳನ್ನು ಮುಚ್ಚಿದರು ಮತ್ತು ಮನೆಯ ಜಗುಲಿಯಲ್ಲಿರುವ ದೀಪವೊಂದರ  ಬಲ್ಬನ್ನು ಒಡೆದರು.  ಒಡೆದ ಬಲ್ಬಿನಿಂದ ದುಮ್ಮಿಕ್ಕುವ ನೀರಿನಂತೆ ಹೊರಚಿಮ್ಮಿದ ಬಂಗಾರದ ಬಣ್ಣದ ಬೆಳಕು ಸುಮಾರು ಮೂರು  ಅಡಿ ಆಳದಷ್ಟು ತುಂಬುವವರೆಗೆ ಹಾಗೆಯೇ ಹರಿಯಲು ಬಿಟ್ಟರು. ನಂತರ ಅವರು ಮನೆಯ ವಿದ್ಯುಚ್ಛಕ್ತಿಯನ್ನು ಆರಿಸಿದರು ಮತ್ತು  ಹಾಯಿದೋಣಿಯನ್ನು ಹೊರತೆಗೆದು  ಮನೆಯಲ್ಲಿರುವ ದ್ವೀಪಗಳ  ನಡುವೆ ಸ್ವಚ್ಚ೦ದವಾಗಿ  ಹುಟ್ಟನ್ನು  ಹಾಕುತ್ತ  ಸಂಚರಿಸಿದರು .  

ಈ ಅತಿರಮ್ಯ ಸಾಹಸಕ್ಕೆ ಮೂಲ ಕಾರಣವೇನೆಂದರೆ ನಾನು ನಿತ್ಯ  ಬಳಕೆಯ ವಸ್ತುಗಳ ಕಾವ್ಯಮಯತೆಯ ಬಗ್ಗೆ ಒಂದು ಸೆಮಿನಾರಿನಲ್ಲಿ ಮಾತನಾಡುವಾಗ ಹಿಂದೆಮುಂದೆ ಯೋಚಿಸದೆ ಆಡಿದ ಒಂದು ಮಾತು. ಸ್ವಿಚ್ ಆರಿಸಿದಾಗ ದೀಪವೇಕೆ ಆರುತ್ತದೆ ಎಂದು ಟೋಟೋ ನನ್ನನ್ನು ಕೇಳಿದ್ದ ಮತ್ತು ಅದರ ಬಗ್ಗೆ ಎರಡು ಬಾರಿ ಯೋಚನೆ ಮಾಡಿ ಉತ್ತರಿಸಬಲ್ಲನೆಂಬ ಧೈರ್ಯ ನನಗೂ ಇರಲಿಲ್ಲ

"ಬೆಳಕು ನೀರಿನಂತೆ " ನಾನು ಉತ್ತರಿಸಿದ್ದೆ "ನೀನು ಕೊಳಾಯಿಯನ್ನು ತಿರುಗಿಸಿದರೆ ಸಾಕು ಅದು ಧುಮ್ಮಿಕ್ಕುತ್ತದೆ "

ಮತ್ತು ಪ್ರತಿ ಬುಧವಾರ ಅಪ್ಪ ಅಮ್ಮ  ಮರಳಿ ಬರುವವರೆಗೆ  ಅವರು ದಿಕ್ಸೂಚಿ ಮತ್ತು ಕೋನಮಾಪಕವನ್ನು ಉಪಯೋಗಿಸುವದನ್ನು ಕಲಿಯುತ್ತಿದ್ದರು.   ಅಪ್ಪ ಅಮ್ಮ ಸಿನಿಮಾ ಮುಗಿಸಿ ಮನೆಗೆ ಬಂದಾಗ ಮಕ್ಕಳು  ತೀರದಲ್ಲಿ ಮಲಗಿದ್ದ ದೇವತೆಗಳಂತೆ  ಕಾಣಿಸುತ್ತಿದ್ದರು

ತಿಂಗಳುಗಳ ನಂತರ , ಇನ್ನೂ ಮುಂದಕ್ಕೆ ಹೋಗುವ ತವಕದಲ್ಲಿ ಅವರು ಸಮುದ್ರದಲ್ಲಿ ಮುಳುಗುವಾಗ ಧರಿಸುವ ಉಡುಪನ್ನು ಕೇಳಿದರು - ಮುಖಕವಚ , ಈಜುರೆಕ್ಕೆ, ಆಮ್ಲಜನಕದ ಸಿಲಿಂಡರ್ . 
"ಆ ಉಪಯೋಗಕ್ಕೆ ಬಾರದ ಹಾಯಿದೋಣಿಯನ್ನು ತಂದು ಕೆಲಸದವರ ರೂಮಿನಲ್ಲಿ  ಇಟ್ಟಿದ್ದು ಸಾಲದು ಎಂದು ಈಗ ಡೈವಿಂಗ್ ಉಡುಪು  ಸಹ  ಬೇಕು ಎನ್ನುತ್ತಿದ್ದೀರಾ"   ಅವರಪ್ಪ ಕೇಳಿದ.  
" ಈ ಸೆಮಿಸ್ಟರ್ ನಲ್ಲಿ  ನಾವು ಗೋಲ್ಡ್ ಗಾರ್ಡೇನಿಯಾ ಪಾರಿತೋಷಕವನ್ನು ಗೆದ್ದರೆ ?"  ಜೋಯಲ್ ಕೇಳಿದ 
"ಬೇಡ " ಅವರಮ್ಮ ಮುನ್ನೆಚ್ಚರಿಕೆಯ ಧ್ವನಿಯಲ್ಲಿ ಹೇಳಿದಳು " ಅದು ಯಾವುದರ ಅಗತ್ಯವೂ ಇಲ್ಲ"
ಅವರಪ್ಪ ಹೆಂಡತಿಯ ಜಿಗುಟುತನಕ್ಕೆ ಆಕ್ಷೇಪ ವ್ಯಕ್ತಪಡಿಸಿದ.
"ಈ ಮಕ್ಕಳು ಮಾಡಬೇಕಾದ ಕೆಲಸ ಮಾಡಿ ಎಂದರೆ ಒಂದು ಉಗುರನ್ನೂ ಕದಲಿಸುವದಿಲ್ಲ " ಅಮ್ಮ ನುಡಿದಳು  "ಆದರೆ ತಮಗೆ ಬೇಕು ಅನಿಸಿದ್ದನ್ನು ಪಡೆದುಕೊಳ್ಳುವದಿಕ್ಕೆ ಇವರು  ಪ್ರಿನ್ಸಿಪಾಲರ ಕುರ್ಚಿ ಬೇಕಾದರೂ ತರಲಿಕ್ಕೆ ಸಿದ್ಧ "
ಕೊನೆಗೂ ಅಪ್ಪ ಅಮ್ಮ ಹೌದು ಇಲ್ಲ ಏನೂ ಹೇಳಲಿಲ್ಲ. ಆದರೆ ಜುಲೈ ನಲ್ಲಿ ಜೋಯೆಲ್ ಮತ್ತು ಟೋಟೋ  ಇಬ್ಬರೂ  ಗೋಲ್ಡ ಗಾರ್ಡೇನಿಯಾ ಪಾರಿತೋಷಕವನ್ನು ಗೆದ್ದರಲ್ಲದೆ ಶಾಲೆಯ ಪ್ರಾಂಶುಪಾಲರು  ಎಲ್ಲರ ಸಮ್ಮುಖದಲ್ಲಿ  ಅವರನ್ನು ಶ್ಲಾಘಿಸಿದರು. ಅದೇ ಮಧ್ಯಾನ್ಹ  ಮತ್ತೊಮ್ಮೆ ಕೇಳುವ ಮೊದಲೇ  ಅವರು ಬಯಸಿದ್ದ ಡೈವಿಂಗ್ ಸಲಕರಣೆಗಳು ಅವರ ಕೋಣೆಯಲ್ಲಿ ಹಾಜರಾಗಿದ್ದವು.  

ಮತ್ತು ಮುಂದಿನ ಬುಧವಾರ ಅವರಪ್ಪ ಅಮ್ಮ 'ಲಾಸ್ಟ ಟ್ಯಾಂಗೋ ಇನ್ ಪ್ಯಾರಿಸ್' ಸಿನಿಮಾವನ್ನು ನೋಡಲು ಹೋಗಿದ್ದಾಗ ಅವರು ಅಪಾರ್ಟ್ ಮೆ೦ಟನ್ನು  ಸುಮಾರು  ಹನ್ನೆರಡು ಅಡಿ ಆಳದಷ್ಟು ತುಂಬಿಸಿ ಮನೆಯ ಪೀಠೋಪಕರಣಗಳ ನಡುವೆ, ಹಾಸಿಗೆಗಳ ಮಧ್ಯೆ, ವರುಷಗಟ್ಟಲೆ ಬೆಳಕಿನಾಳವನ್ನೇ ಕಾಣದ ಹಲವಷ್ಟು ವಸ್ತುಗಳ ಕಡುಗಪ್ಪು ತಳಗಳ ನಡುವಿನಲ್ಲಿ  ಅವರು  ಪಳಗಿದ ಶಾರ್ಕಿನಂತೆ ಈಜಾಡಿದರು. 

ವರ್ಷದ ಕೊನೆಗೆ ಬಹುಮಾನ ವಿತರಣಾ ಸಮಾರಂಭದಲ್ಲಿ , ಸಹೋದರರನ್ನು ಶಾಲೆಯ  ಅತ್ಯುತ್ತಮ ವಿದ್ಯಾರ್ಥಿಗಳು ಎಂದು ಸನ್ಮಾನಿಸಲಾಯಿತು.  ಈ ಬಾರಿ ಅವರಾಗಿಯೇ ಏನನ್ನಾದರೂ ಕೇಳುವ ಮೊದಲೇ ಅವರಪ್ಪ ಅಮ್ಮ ಏನು ಬೇಕು ಎಂದು ಕೇಳಿದ್ದರು.  ಹುಡುಗರು ಹೆಚ್ಚೇನೂ ಬೇಡಿಕೆಯಿಡದೆ , ತಮ್ಮ ಸಹಪಾಠಿಗಳಿಗೆ ಮನೆಯಲ್ಲಿಯೇ ಒಂದು ಸಣ್ಣ ಔತಣಕೂಟ ಏರ್ಪಡಿಸಿದರೆ ಸಾಕು   ಎಂದರು . 

ಅವರಪ್ಪ ಅವನ ಹೆಂಡತಿಯ ಜೊತೆಗೆ ಏಕಾಂತದಲ್ಲಿ ಇದ್ದಾಗ ಹೆಮ್ಮೆಯಿಂದ  ಹೇಳಿದ " ನೋಡಿದೆಯಾ , ಇದು ನಮ್ಮ ಮಕ್ಕಳ ಪ್ರಬುದ್ಧತೆಗೆ ಸಾಕ್ಷಿ "
" ನಿಮ್ಮ ಬಾಯಿಯಿಂದ ಹೊರಬಿದ್ದ ಮಾತು ಆ ದೇವರ ಕಿವಿಯವರೆಗೆ ತಲುಪಿದರೆ ಸಾಕು " ಹೆಂಡತಿ ಮರು ನುಡಿದಳು . 

 ಮುಂದಿನ ಬುಧವಾರ  ಅವರ ತಂದೆತಾಯಿಯರು 'ದಿ ಬ್ಯಾಟಲ್ ಆಫ್ ಅಲ್ಜಿಯರ್ಸ್' ಸಿನಿಮಾವನ್ನು ನೋಡಲು ಹೋದಾಗ , ಅವರ ಮನೆಯ ಮುಂದೆ ಹೋಗುತ್ತಿದ್ದವರಿಗೆ, ಮರಗಳ ನಡುವೆ ಅವಿತಿದ್ದ ಹಳೆಯ ಕಟ್ಟಡದಿಂದ ಬೆಳಕು ಧುಮ್ಮಿಕ್ಕುತ್ತಿರುವದು ಕಾಣಿಸಿತು. ಬೆಳಕು ಬಾಲ್ಕನಿಯಿಂದ ಹೊರಚಿಮ್ಮುತ್ತಿತ್ತು. ಧಾರಾಕಾರವಾಗಿ  ಮನೆಯ ಮುಂಭಾಗದಿಂದ ಹರಿದು ರಸ್ತೆಗಳನ್ನು ಆವರಿಸಿದ  ದೇದೀಪ್ಯಮಾನವಾದ ಬಂಗಾರದ ವರ್ಣದ ಬೆಳಕಿನ ಪ್ರವಾಹಕ್ಕೆ ಗ್ವಾಡರಾಮ ನಗರವೇ ಬೆಳಗುತ್ತಿತ್ತು.

ಈ ತುರ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಅಗ್ನಿಶಾಮಕದಳದವರು ಐದನೇ ಮಹಡಿಯಲ್ಲಿ ಬಾಗಿಲನ್ನು ಬಲವಂತವಾಗಿ ತೆರೆದಾಗ , ಅಪಾರ್ಟ್ ಮೆ೦ಟಿನ ಛಾವಣಿಯವರೆಗೂ ಬೆಳಕು ತುಂಬಿರುವದು ಕಾಣಿಸಿತು. 

ಮನೆಯ ಜಗುಲಿಯಲ್ಲಿ ಸೋಫಾ ಮತ್ತು ಚಿರತೆಯ ಚರ್ಮದ ಆರಾಮ ಕುರ್ಚಿಗಳು ಬೇರೆ ಬೇರೆ ಸ್ಥರಗಳಲ್ಲಿ ತೇಲಾಡುತ್ತಿದ್ದವು.   ಬಾರಿನ  ಬಾಟಲುಗಳು  ಮತ್ತು ಅರ್ಧ ಮುಳುಗಿದ್ದ ಪಿಯಾನೋ ಮಧ್ಯೆ  ಪಿಯಾನೋವನ್ನಾವರಿಸಿದ್ದ ಮನಿಲಾ ಶಾಲು ಪಟಪಟನೆ ಹೊಯ್ದಾಡುತ್ತ ಬಂಗಾರದ ಬಣ್ಣದ 'ಮ೦ತಾ ರೇ' ಮೀನಿನಂತೆ ಕಾಣಿಸುತ್ತಿತ್ತು.    

ದಿನನಿತ್ಯದ ವಸ್ತುಗಳು  ತಮ್ಮದೇ  ಆದ ಕಾವ್ಯದ ಉತ್ತು೦ಗದಲ್ಲಿ  ರೆಕ್ಕೆಗಳನ್ನು ಬಿಚ್ಚಿ ಅಡುಗೆ ಮನೆಯ ಆಕಾಶದಲ್ಲಿ ಹಾರಾಡುತ್ತಿದ್ದವು. 

 ಪ್ರಕಾಶಮಾನವಾದ ಈ ವಿಶಾಲ  ಜವುಗು ಪ್ರದೇಶದಲ್ಲಿ ಜೀವಕಳೆಯನ್ನು ಹೊರಹೊಮ್ಮಿಸುತ್ತ ಸಂತೋಷದಲ್ಲಿದ್ದ  ಏಕ ಮಾತ್ರ  ಜೀವಿಗಳಾದ ಅವರಮ್ಮನ  ಅಕ್ವೆರಿಯಂನಿಂದ ಹೊರಗೆ  ಬಂದಿದ್ದ ಉಜ್ವಲ ಬಣ್ಣದ ಮೀನುಗಳ ನಡುವೆ ಮಕ್ಕಳು ನೃತ್ಯ ಮಾಡುವಾಗ ನುಡಿಸುತ್ತಿದ್ದ ವಾದ್ಯ ಸಲಕರಣೆಗಳು ಹೊಯ್ದಾಡುತ್ತಿದ್ದವು. 

ಬಚ್ಚಲುಮನೆಯಲ್ಲಿ ತೇಲಾಡುತ್ತಿದ್ದ  ಮನೆಯವರೆಲ್ಲರ  ಟೂತ್ ಬ್ರಶ್ ಗಳ ನಡುವೆ ಅಪ್ಪನ ಕಾಂಡೋಮ್ , ಅಮ್ಮನ  ಕ್ರೀಮ್  ನ ಜಾಡಿ , ಮತ್ತವಳ ಪಗಡೆ ಮಣೆಯಿದ್ದವು  ಹಾಗೂ ಇವೆಲ್ಲವುಗಳ ಪಕ್ಕ ತೇಲುತ್ತಿದ್ದ ಹಜಾರದಲ್ಲಿಟ್ಟಿದ್ದ  ಟಿವಿಯಲ್ಲಿ ಮಧ್ಯರಾತ್ರಿ ಮಾತ್ರ ಬರುವ  ವಯಸ್ಕರ ಧಾರಾವಾಹಿಯ ಕೊನೆಯ ಕಂತ ಇನ್ನೂ ಬರುತ್ತಿತ್ತು. 
  
ಜಗುಲಿಯ ತುದಿಯಲ್ಲಿ ಮುಖಕವಚವನ್ನು  ಧರಿಸಿ, ತೀರವನ್ನು ಸೇರಲು ಮಾತ್ರ ಸಾಕಾಗುವಷ್ಟು ಗಾಳಿಯನ್ನು ಹಿಡಿದಿಟ್ಟುಕೊಂಡು  ಪ್ರವಾಹದಲ್ಲಿ ತೇಲುತ್ತ , ಹುಟ್ಟುಗೋಲನ್ನು ಹಾಕುತ್ತ,ಏಕಾಗ್ರತೆಯಿಂದ ದೀಪ ಸ್ಥ೦ಭವನ್ನು  ಟೋಟೋ ಹುಡುಕಾಡುತ್ತಿದ್ದರೆ , ಇನ್ನೂ ದೋಣಿಯ ತುದಿಯಲ್ಲಿ ಕುಳಿತು ತೇಲುತ್ತಿದ್ದ  ಜೋಯೆಲ್,  ಧ್ರುವ ನಕ್ಷತ್ರಕ್ಕಾಗಿ ಕೋನಮಾಪಕವನ್ನು ನೋಡುತ್ತಿದ್ದ ಮತ್ತು ಅವರ ಮೂವತ್ತೇಳು ಸಹಪಾಠಿಗಳು ಇಡೀ ಮನೆಯಲ್ಲಿ ತೇಲಾಡುತ್ತ, 'ಜೆರೇನಿಯಂ ' ಹೂಗಳು ತುಂಬಿದ್ದ ಮಡಕೆಗೆ ಮೂತ್ರ ವಿಸರ್ಜನೆ ಮಾಡುವ  ಅನಿವರ್ಚನೀಯ ಸುಖವನ್ನು ಅನುಭವಿಸುತ್ತ,   ಮುಖ್ಯೋಪಾಧ್ಯಾಯರನ್ನು ಗೇಲಿ  ಮಾಡಲು ಕೆಲವೊಂದಿಷ್ಟು  ಶಬ್ದಗಳನ್ನು ಬದಲಾಯಿಸಿದ  ಶಾಲೆಯ ಪ್ರಾರ್ಥನೆಯನ್ನು ಜೋರಾಗಿ ಹಾಡುತ್ತ , ಅಪ್ಪನ ಬಾಟಲಿಯಿ೦ದ ಒಂದು ಗ್ಲಾಸು ಬ್ರಾಂದಿಯನ್ನು  ಪಟಾಯಿಸುತ್ತಿದ್ದರು. ಅವರು ಏಕಕಾಲಕ್ಕೆ ಅದೆಷ್ಟು ದೀಪಗಳನ್ನು ಹೊತ್ತಿಸಿದ್ದರೆಂದರೆ ಅಪಾರ್ಟ್ ಮೆ೦ಟು  ಬೆಳಕಿನಿಂದ ಉಕ್ಕಿ ಹರಿಯುತ್ತಿತ್ತು ಮತ್ತು 'ಸಂತ ಜೂಲಿಯನ್ ದ ಹಾಸ್ಪಿಟಲ್ರ್'  ಪ್ರಾಥಮಿಕ ಶಾಲೆಯ ಎರಡು ತರಗತಿಗಳು  ೪೭ . ಪ್ಯಾಸಿಯೊ ಡೆ ಲಾ ಕ್ಯಾಸ್ಟೆಲ್ಲಾನಾ ದ ಐದನೆಯ ಅಂತಸ್ತಿನೊಳಗೆ ಸಂಪೂರ್ಣವಾಗಿ ಮುಳುಗಿ ಹೋಗಿದ್ದವು.  

ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ,   ಸುಡುವ ಬೇಸಿಗೆ ಮತ್ತು ಹಿಮಾವೃತ ಗಾಳಿಯ ಈ  ನಗರದಲ್ಲಿ ಸಮುದ್ರವಿಲ್ಲದ , ನದಿಗಳಿಲ್ಲದ  ಸದಾ ಕಾಲ ನೆಲವನ್ನು ಮಾತ್ರ ಪರಿಮಿತಿಯನ್ನಾಗಿಸಿಕೊಂಡಿದ್ದ  ಸ್ಥಳೀಯ  ಜನರು  ಬೆಳಕಿನಲ್ಲಿ ಸಂಚರಿಸುವ ಕೌಶಲ್ಯವನ್ನು ಎಂದಿಗೂ  ಕರಗತ ಮಾಡಿಕೊಂಡಿರಲಿಲ್ಲ.