ಮೊದಲೇ ಸ್ನೇಹಪರರಾಗಿದ್ದ ಅಮೇರಿಕಾದ ಜನರು ಅವನ ವೃತ್ತಿಯ ಬಗ್ಗೆ ತಿಳಿದಾಗ ಇನ್ನೂ ಸ್ನೇಹದಿಂದ ವರ್ತಿಸುತ್ತಿದ್ದರಿಂದ ಅವನು ಇತ್ತೀಚಿಗೆ ಮಾತನಾಡುವಾಗಲೆಲ್ಲ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಈ ಶಬ್ದವನ್ನು ಪದೇ ಪದೇ ಬಳಸುತ್ತಿದ್ದ. ಅಮೇರಿಕಾದ ಮಧ್ಯಪಶ್ಚಿಮದ ಸಣ್ಣ ಪಟ್ಟಣದಲ್ಲಿರುವ ಮಗಳ ಮನೆಗೆ ಬಂದ ಈ ಐದು ದಿನಗಳಲ್ಲೇ ಶಿ ಅಕ್ಕಪಕ್ಕದ ಅನೇಕರ ಪರಿಚಯ ಗಳಿಸಿಕೊಂಡಿದ್ದ. ಪುಟ್ಟ ಮಕ್ಕಳನ್ನು ಪಾರ್ಕಿನಲ್ಲಿ ತಿರುಗಾಡಿಸಲು ಬರುವ ಅಮ್ಮ೦ದಿರು ಅವನತ್ತ ಕೈ ಬೀಸುತ್ತಿದ್ದರು. ಪ್ರತಿ ದಿನ ಒಂಬತ್ತು ಘಂಟೆಗೆ ಸರಿಯಾಗಿ ಪಾರ್ಕಿಗೆ ಬರುತ್ತಿದ್ದ ವಯಸ್ಸಾದ ಗಂಡ ಮತ್ತು ಅವನ ಕೈ ಹಿಡಿದುಕೊಂಡಿ ರುತ್ತಿದ್ದ ಸ್ಕರ್ಟ್ ಧರಿಸಿದ್ದ ಅವನ ಹೆಂಡತಿ ಯಾವಾಗಲು ಒಂದು ಕ್ಷಣ ನಿಂತು ಶಿ ಜೊತೆಗೆ ಮಾತನಾಡಿಕೊಂಡು ಮುಂದಕ್ಕೆ ಹೋಗುತ್ತಿದ್ದರು. ಸದಾ ಸೂಟು ಧರಿಸಿರುತ್ತಿದ್ದ ತಾತ ಏನಾದರೊಂದು ಹೇಳುತ್ತಲೇ ಇರುತ್ತಿದ್ದ ಮತ್ತು ಹೆಂಡತಿ ನಸುನಗುತ್ತ ಅವನ ಕೈ ಸವರುತ್ತಿರುತ್ತಿದ್ದಳು. ಪಾರ್ಕಿನಿಂದ ತುಸು ದೂರದಲ್ಲಿರುವ ನಿವೃತ್ತರ ವಿಶ್ರಾ೦ತಿ ಗೃಹದಲ್ಲಿರುವ , ಶಿ ಗಿಂತ ಎರಡು ವರ್ಷ ದೊಡ್ಡವಳಾದ ಎಪ್ಪತ್ತೇಳು ವರ್ಷದ ಮಹಿಳೆಯೊಬ್ಬಳು ಅವನ ಜೊತೆಗೆ ಹರಟಲು ಬರುತ್ತಿದ್ದಳು. ಹಾಗೆ ನೋಡಿದರೆ ಇಬ್ಬರಿಗೂ ಇಂಗ್ಲಿಷ್ ಬರುತ್ತಿದ್ದುದು ಅಷ್ಟಕ್ಕಷ್ಟೆಯಾದರೂ ಭಾಷೆಯ ತೊಡಕು ಅವರಿಬ್ಬರ ನಡುವಿನ ಸಂಭಾಷಣೆಗಾಗಲಿ , ಸ್ನೇಹಕ್ಕಾಗಲಿ, ಪರಸ್ಪರರನ್ನು ಅರ್ಥೈಸಿಕೊಳ್ಳುವದಕ್ಕಾಗಲಿ ಅಡ್ಡಿಯಾಗಿರಲಿಲ್ಲ.
"ಅಮೇರಿಕ ಒಳ್ಳೆ ದೇಶ " ಅವಳು ಆಗಾಗ ಹೇಳಿತ್ತಿದ್ದಳು "ಇಲ್ಲಿ ಮಕ್ಕಳು ತುಂಬಾ ದುಡ್ಡು ಕಾಸು ಸಂಪಾದಿಸುತ್ತಾರೆ "
ನಿಜವಾಗಿಯೂ ಅಮೇರಿಕ ಒಳ್ಳೆಯ ದೇಶವೇ ಹೌದು. ಶಿ ಯ ಮಗಳು ಕಾಲೇಜೊಂದರ ಏಷಿಯಾ ಡಿಪಾರ್ಟ್ ಮೆಂಟ್ ನಲ್ಲಿ ಲೈಬ್ರರಿಯನ್ ಆಗಿ ಕೆಲಸ ಮಾಡುತ್ತಿದ್ದವಳು ಒಂದು ವರ್ಷದಲ್ಲಿ ಶಿಯ ಇಪ್ಪತ್ತು ವರ್ಷಗಳ ದುಡಿಮೆಗಿಂತ ಹೆಚ್ಚು ಹಣ ಗಳಿಸುತ್ತಿದ್ದಳು.
"ನನ್ನ ಮಗಳು ಸಹ ಕೈ ತುಂಬಾ ಸಂಪಾದಿಸುತ್ತಾಳೆ " ಶಿ
"ನನಗಂತೂ ಅಮೇರಿಕ ತುಂಬಾ ಇಷ್ಟ . ಎಲ್ಲರಿಗೂ ಒಳ್ಳೆ ಜಾಗ "
"ಹೌದು. ನಾನು ಚೀನಾದಲ್ಲಿ ರಾಕೆಟ್ ಸೈ೦ಟಿಸ್ಟ್. ಆದರೆ ಸಂಪಾದನೆ ಮಾತ್ರ ಏನಿಲ್ಲ. 'ರಾಕೆಟ್ ಸೈ೦ಟಿಸ್ಟ್' - ಗೊತ್ತೆ ನಿಮಗೆ ?" ಶಿ ಹರುಕು ಮುರುಕು ಇಂಗ್ಲಿಷ್ ನಲ್ಲಿ ಮಾತನಾಡುತ್ತ ಕೈ ಮೇಲಕ್ಕೆತ್ತಿ ರಾಕೆಟ್ ತರಹ ಮಾಡಲು ಪ್ರಯತ್ನಿಸಿದ.
"ಐ ಲವ್ ಚೀನಾ . ಒಳ್ಳೆ ದೇಶ. ತುಂಬಾ ಹಳೆ ದೇಶ " ಅವಳು ಹೇಳಿದಳು.
"ಅಮೇರಿಕ ಇನ್ನೂ ಪ್ರಾಯದ ದೇಶ, ಪ್ರಾಯದವರ ಹಾಗೆ "
"ಅಮೇರಿಕ ಸುಖಿ ದೇಶ "
"ಪ್ರಾಯದ ಜನ ಹಳೆಯ ಜನರಿಗಿಂತ ಖುಷಿಯಾಗಿರುತ್ತಾರೆ. " ಶಿ ನುಡಿದ. ನಂತರ ಅವನಿಗೆ ತಾನು ಒಟ್ಟಾರೆ ಸಂಭಾಷಣೆಗೆ ಇದ್ದಕ್ಕಿದ್ದ ಹಾಗೆ ಮುಕ್ತಾಯವನ್ನು ಘೋಷಿಸಿದೆನೇನೋ ಎಂದು ಮುಜುಗರವಾಯಿತು. ನಿಜವಾಗಿಯೂ ಹೇಳಬೇಕು ಎಂದರೆ ತನ್ನ ಜೀವಮಾನದಲ್ಲಿ ಇದುವರೆಗೂ ಅನುಭವಿಸದಷ್ಟು ಖುಷಿಯನ್ನು ಅವನು ಇಲ್ಲಿ ಅನುಭವಿಸುತ್ತಿದ್ದ. ಅವನೆದುರಿಗೆ ಕುಳಿತ, ತನ್ನ ಸುತ್ತಲಿನ ಪ್ರತಿಯೊಂದನ್ನೂ ಪ್ರೀತಿಸುತ್ತಿದ್ದ ಈ ಹೆಂಗಸು ಸಹ ವಿನಾಕಾರಣ ಯಾವಾಗಲೂ ಖುಷಿಯಾಗಿರುವಂತೆ ತೋರುತ್ತಿತ್ತು.
ಕೆಲವೊಮ್ಮೆ ಅವರಿಬ್ಬರ ಮಾತುಕತೆಗೆ ಇಂಗ್ಲಿಷ್ ಭಾಷೆ ಸಾಲುತ್ತಿರಲಿಲ್ಲ. ಆಗೆಲ್ಲ ಅವಳು ಅಲ್ಲಿ ಇಲ್ಲಿ ಇಂಗ್ಲಿಷ್ ಶಬ್ದ ಪೊಣಿಸಿದ ಪರ್ಷಿಯನ್ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸುತ್ತಿದ್ದಳು. ಶಿ ಗೆ ಅವಳೊಟ್ಟಿಗೆ ಚೈನೀಸ್ ಭಾಷೆಯಲ್ಲಿ ಮಾತನಾಡುವದು ಸ್ವಲ್ಪ ಸಂಕೋಚದ ವಿಷಯವಾಗಿತ್ತು. ಆಗೆಲ್ಲ ಅವನು ಸುಮ್ಮನೆ ನಸುನಗುತ್ತಾ ತಲೆಯಾಡಿಸುತ್ತ ಕುಳಿತಿರುತ್ತಿದ್ದ ಮತ್ತು ಅವಳೇ ಮಾತುಕತೆಯ ಮುಂದಾಳತ್ವ ವಹಿಸುತ್ತಿದ್ದಳು. ಅವನಿಗೆ ಅವಳು ಮಾತನಾಡುತ್ತಿರುವದು ಏನೆಂದು ಅರ್ಥವಾಗದಿದ್ದರೂ ಅವಳ ಉತ್ಸುಕತೆ , ಖುಷಿ ತನ್ನನ್ನೂ ಆವರಿಸುತ್ತಿರುವಂತೆ ಭಾಸವಾಗಿ ಅವನೂ ಉಲ್ಲಾಸಿತನಾಗುತ್ತಿದ್ದ.
ಶಿ ಪ್ರತಿ ದಿನ ಬೆಳಿಗ್ಗೆ ಪಾರ್ಕಿನಲ್ಲಿ ಅವಳ ಭೇಟಿಗಾಗಿ ಕಾದಿರುತ್ತಿದ್ದ. ಅವಳ ಹೆಸರು ಏನೆಂದು ಅವನು ಯಾವತ್ತೂ ಕೇಳಿರಲಿಲ್ಲ. ಹೀಗಾಗಿ "ಮ್ಯಾಡಮ್" ಎಂದೇ ಅವಳನ್ನು ಸಂಬೋದಿಸುತ್ತಿದ್ದ. ಅವಳು ಧರಿಸುತ್ತಿದ್ದ ಕೆಂಪು, ಕೇಸರಿ, ಹಳದಿ, ನೇರಳೆ ಬಣ್ಣದ ಉಡುಪುಗಳನ್ನು ಅವಳ ದೇಶದಲ್ಲಿ ಅವಳಷ್ಟೇ ವಯಸ್ಸಾದ ಮಹಿಳೆಯೊಬ್ಬಳು ಧರಿಸಬಹುದು ಎನ್ನುವದನ್ನು ಊಹಿಸಿಕೊಳ್ಳಲೂ ಶಿ ಗೆ ಸಾಧ್ಯವಾಗುತ್ತಿರಲಿಲ್ಲ. ಅವಳ ಬಳಿ ಕೂದಲಿಗೆ ಹಾಕುವ ಬಿಳಿಯ ಬಣ್ಣದ ಆನೆಯಾಕಾರದ ಮತ್ತು ನೀಲಿ ಹಸಿರು ಮಿಶ್ರಿತ ನವಿಲಿನಾಕಾರದ ಎರಡು ಕ್ಲಿಪ್ಪುಗಳಿದ್ದವು. ಅವಳ ತಲೆಯ ಕೂದಲಿನಲ್ಲಿ ಸಿಕ್ಕಿಹಾಕಿಕೊಂಡು ಅನಿಶ್ಚಿತತೆಯಿಂದ ಸಣ್ಣಗೆ ಅಲುಗಾಡುತ್ತಿದ್ದ೦ತೆ ತೋರುತ್ತಿದ್ದ ಆ ಕ್ಲಿಪ್ಪುಗಳನ್ನು ನೋಡಿದಾಗಲೆಲ್ಲ ಶಿಗೆ ಅವನ ಮಗಳು ಚಿಕ್ಕವಳಿರುವಾಗ ಇನ್ನೂ ಎಳೆಯ ಕೂದಲಿಗೆ ಒಂದು ಚಿಟ್ಟೆಯಾಕಾರದ ಪ್ಲಾಸ್ಟಿಕ್ ಕ್ಲಿಪ್ ಹಾಕಿಕೊಂಡು ಅದನ್ನು ಹಣೆಯವರೆಗೆ ಜೋತಾಡಿಸಿಕೊಂಡಿರುತ್ತಿದ್ದುದು ನೆನಪಿಗೆ ಬರುತ್ತಿತ್ತು. ಆಗೆಲ್ಲ ಅವನಿಗೆ ತನ್ನ ಮಗಳು ಇನ್ನೂ ಪುಟಾಣಿಯಾಗಿದ್ದ, ಬದುಕು ಆಶಾದಾಯಕವಾಗಿದ್ದ ಅವಳ ಆ ಬಾಲ್ಯದ ದಿನಗಳನ್ನು ತಾನು ಹೇಗೆ ಮತ್ತೆ ಮತ್ತೆ ನೆನಪಿಸ್ಕೊಳ್ಳುತ್ತೇನೆ ಎಂದು ಹೇಳಬೇಕು ಅನಿಸುತ್ತಿತ್ತು. ಆದರೆ ತನ್ನ ಸೀಮಿತ ಇಂಗ್ಲಿಷ್ ಜ್ಞಾನದಲ್ಲಿ ಈ ಭಾವನೆಯನ್ನು ವಿವರಿಸಲು ಸಾಧ್ಯವಾಗಲಾರದು ಎನ್ನುವದು ಖಚಿತವಾಗಿ ತಿಳಿದಿತ್ತು. ಅಲ್ಲದೆ ನಡೆದುಹೋದುದರ ಬಗ್ಗೆ ಮಾತನಾಡುವದು ಅವನ ರೀತಿಯೆ ಅಲ್ಲ.
ಸಂಜೆ ಅವನ ಮಗಳು ಕೆಲಸದಿಂದ ಬರುವಷ್ಟರಲ್ಲಿ ಶಿ ಅಡುಗೆ ಮಾಡಿಡುತ್ತಿದ್ದ. ಕೆಲ ವರ್ಷಗಳ ಹಿಂದೆ ಅವನ ಹೆಂಡತಿ ತೀರಿಹೋದ ನಂತರ ಅವನು ಅಡುಗೆ ಮಾಡುವದನ್ನು ಕಲಿಸುವ ಕೋರ್ಸಿಗೆ ಸೇರಿಕೊಂಡಿದ್ದ. ತನ್ನ ಕಾಲೇಜಿನ ದಿನಗಳಲ್ಲಿ ಭೌತಶಾಸ್ತ್ರ ಮತ್ತು ಗಣಿತವನ್ನು ಕಲಿತಷ್ಟೇ ತೀವ್ರತೆಯಿಂದ ಅವನು ಅಡುಗೆ ಮಾಡುವದನ್ನೂ ಕಲಿತಿದ್ದ. "ಪ್ರತಿ ಮನುಷ್ಯನೂ ಅವನಿಗೆ ಉಪಯೋಗಿಸಲು ತಿಳಿದಿರುವದಕ್ಕಿಂತ ಹೆಚ್ಚಿನ ಕೌಶಲ್ಯವನ್ನು ಹೊಂದಿರುತ್ತಾನೆ " ಊಟಕ್ಕೆ ಕುಳಿತಾಗ ಅವನು ಘೋಷಿಸಿದ . "ನನಗೆ ಇಷ್ಟು ಚೆನ್ನಾಗಿ ಅಡುಗೆ ಮಾಡಲು ಬರುತ್ತದೆ ಎಂದು ನನಗೇ ತಿಳಿದಿರಲಿಲ್ಲ "
"ಹೌದು, ಚೆನ್ನಾಗಿದೆ " ಅವನ ಮಗಳು ಮರು ನುಡಿದಳು.
"ಅದೇ ತರಹ " ಅವನು ಮಗಳತ್ತ ಕಣ್ಣು ಹಾಯಿಸುತ್ತ ಹೇಳಿದ "ಬದುಕು ನಾವು ಕಲ್ಪಿಸಿಕೊಂಡಿರುವದಕ್ಕಿಂತ ಹೆಚ್ಚಿನ ಸಂತೋಷವನ್ನು ಕೊಟ್ಟಿರುತ್ತದೆ. ಅದನ್ನು ಅನುಭವಿಸಲು ನಮ್ಮನ್ನು ನಾವು ತರಬೇತುಗೊಳಿಸಿಕೊಳ್ಳಬೇಕು "
ಅವನ ಮಗಳು ಉತ್ತರಿಸುವದಿಲ್ಲ. ಅವನ ಅಡುಗೆ ಕೌಶಲ್ಯವನ್ನು ಅವಳು ಮೆಚ್ಚಿಕೊಂಡಿದ್ದರೂ ಅವಳು ತಿನ್ನುವದು ಇಷ್ಟೇ ಇಷ್ಟು. ಅದೂ ತಿನ್ನಬೇಕು ಎನ್ನುವ ಕ್ರಿಯೆಯಂತೆ ಕಾಣಿಸುತ್ತಿತ್ತು. ಅವಳು ಈ ಬದುಕಿನಲ್ಲಿ ಯಾವುದರಲ್ಲಿಯೂ ಉತ್ಸುಕತೆ ತೋರಿಸುತ್ತಿಲ್ಲ ಎನ್ನುವದು ಅವನಿಗೆ ಸದಾ ಕಾಲ ಕಾಡುತ್ತಿತ್ತು. ಖಂಡಿತವಾಗಿಯೂ ಅವಳಿಗೆ ಅವಳದ್ದೇ ಆದ ಕಾರಣಗಳಿವೆ - ಏಳು ವರ್ಷಗಳ ವೈವಾಹಿಕ ಜೀವನದ ನಂತರ ಈಗಷ್ಟೆ ವಿಚ್ಛೇದನ ಪಡೆದಿದ್ದಾಳೆ. ಅವನ ಹಳೆಯ ಅಳಿಯ ವಿಚ್ಛೇದನದ ನಂತರ ಶಾಶ್ವತವಾಗಿ ಬೀಜಿಂಗ್ ಗೆ ಮರಳಿದ್ದ. ಯಾವ ಕಾರಣಕ್ಕಾಗಿ ಅವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎನ್ನುವದು ಅವನಿಗೆ ಸ್ಪಷ್ಟವಾಗಿ ತಿಳಿದಿರಲಿಲ್ಲ. ಆದರೆ ಅದಕ್ಕೆ ತನ್ನ ಮಗಳು ಮಾತ್ರ ಕಾರಣವಲ್ಲ ಎನ್ನುವದು ಅವನ ನಂಬಿಕೆಯಾಗಿತ್ತು. ಅವಳು ಒಳ್ಳೆಯ ಹುಡುಗಿ , ಹೆಂಡತಿ. ಮೆಲು ದನಿ, ಮೃದು ಮನಸ್ಸು, ಸುಂದರಿ, ಕರ್ತವ್ಯನಿಷ್ಠಳು , ಎಲ್ಲದರಲ್ಲಿಯೂ ಅವಳ ಅಮ್ಮನ ತದ್ರೂಪು. ಅವಳು ವಿಚ್ಛೇದನದ ವಿಷಯ ತಿಳಿಸಲು ಫೋನಾಯಿಸಿದಾಗ ಅವನು ಮಗಳನ್ನು ಅತೀವ ದುಃಖದಲ್ಲಿರುವಂತೆ ಕಲ್ಪಿಸಿಕೊಂಡಿದ್ದ. ಸಂತೈಸಲು ತನ್ನನ್ನು ಅಮೆರಿಕಾಕ್ಕೆ ಆಹ್ವಾನಿಸುತ್ತಾಳೆ ಎಂದುಕೊಂಡಿದ್ದ. ಆದರೆ ಅವಳು ಅದನ್ನೆಲ್ಲ ನಿರಾಕರಿಸಿದ್ದಳು. ಅದಾದ ಮೇಲೆ ಅವನು ತನ್ನ ಒಂದು ತಿಂಗಳ ಪೆನ್ಶನ್ ಹಣವನ್ನೆಲ್ಲ ಮಗಳಿಗೆ ಪ್ರತಿದಿನ ಫೋನು ಮಾಡಲು ವ್ಯಯಿಸಿದ್ದ. ಕೊನೆಗೂ ಅವನು ತನ್ನ ಎಪ್ಪತ್ತೈದನೆಯ ಹುಟ್ಟುಹಬ್ಬದ ಪ್ರಯುಕ್ತ ಅಮೇರಿಕ ನೋಡುವದು ತನ್ನ ಬಯಕೆ , ತಾನು ಅದಕ್ಕಾಗಿ ಅಮೆರಿಕಕ್ಕೆ ಬರುತ್ತೇನೆ ಎಂದು ಘೋಷಿಸಿದಾಗ ಅವಳು ಒಪ್ಪಿಕೊಂಡಿದ್ದಳು. ಅವನು ಹೇಳುತ್ತಿರುವದು ಸುಳ್ಳು ಎನ್ನುವದು ಇಬ್ಬರಿಗೂ ತಿಳಿದಿತ್ತು. ಆದರೂ ಒಂದು ಒಳ್ಳೆಯ ಕಾರಣಕ್ಕೆ ಸುಳ್ಳು ಹೇಳುವದು ತಪ್ಪಲ್ಲ ಎನ್ನುವದು ಅವನ ಭಾವನೆಯಾಗಿತ್ತು. ಒಟ್ಟಿನಲ್ಲಿ ಅವನು ಅಮೆರಿಕಕ್ಕೆ ಬಂದಿದ್ದು ಒಳ್ಳೆಯದೇ ಆಯಿತು. ಅಮೇರಿಕ ನೋಡಬಹುದಾದ ಸುಂದರ ದೇಶ. ಅಲ್ಲದೆ ಈ ದೇಶ ಅವನನ್ನು ಮತ್ತೊಬ್ಬ ವ್ಯಕ್ತಿಯನ್ನಾಗಿ ಮಾಡಿತ್ತು - ಒಬ್ಬ ರಾಕೆಟ್ ಸೈ೦ಟಿಸ್ಟ್, ಮಗಳನ್ನು ಪ್ರೀತಿಸುವ ಅಪ್ಪ, ಚತುರ ಸಂಭಾಷಣೆಗಾರ ಎಲ್ಲಕ್ಕಿಂತ ಹೆಚ್ಚಾಗಿ ಸುಖಿ ಮನುಷ್ಯ.
ರಾತ್ರಿ ಊಟವಾದ ಮೇಲೆ ಮಗಳು ಒಂದೋ ರೂಮನ್ನು ಸೇರಿಕೊಂಡು ಏನಾದರು ಓದುತ್ತಿದ್ದಳು ಇಲ್ಲ ಕಾರನ್ನು ತೆಗೆದುಕೊಂಡು ಹೊರಗೆ ಸುತ್ತಾಡಲು ಹೋಗಿ ಅವನು ಮಲಗಿದ ಮೇಲೆ ಮರಳುತ್ತಿದ್ದಳು. ಅವಳು ಯಾವುದೋ ಸಿನಿಮಾ ನೋಡಲು ಒಬ್ಬಂಟಿಯಾಗಿ ಹೋಗುತ್ತಾಳೆ ಎಂದುಕೊಂಡು ಶಿ ಅವಳ ಬಳಿ ತಾನು ಬರುತ್ತೇನೆ ಎಂದಿದ್ದ. ಆದರೆ ಅವಳು ಅವನ ಕೋರಿಕೆಯನ್ನು ನಯವಾಗಿ ಅಷ್ಟೇ ದೃಢವಾಗಿ ನಿರಾಕರಿಸಿದ್ದಳು. ಖಂಡಿತವಾಗಿಯೂ ಒಬ್ಬ ಮಹಿಳೆ ಅದರಲ್ಲೂ ಅವನ ಮಗಳ ಮಯಸ್ಸಿನ ಹುಡುಗಿ ಒಬ್ಬಂಟಿಯಾಗಿ ಜೀವನವನ್ನು ಕಳೆಯುವದು ಒಳ್ಳೆಯದಲ್ಲ. ಅವನು ನಿಧಾನವಾಗಿ ಅವಳ ಬದುಕಿನ ವಿವರಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದ. ಅವಳ ಏಕಾಂತವನ್ನು ಮುರಿಯಲು ಸಹಾಯವಾಗಬಹುದು ಎಂದು ತಾನು ನೋಡಿರದ ಅವಳ ಬದುಕಿನ ಭಾಗವನ್ನು ಅರಿಯಲು ಅವಳಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದ.
"ಇವತ್ತು ಕೆಲಸ ಹೇಗಿತ್ತು ?" ಅವನು ಕೇಳಿದರೆ "ಚೆನ್ನಾಗಿತ್ತು" ಎಂದು ಅವಳು ಭಾರವಾಗಿ ಉತ್ತರಿಸುತ್ತಿದ್ದಳು. ಬೇಸರಿಸಿಕೊಳ್ಳದೆ ಅವನು ಅವನು ಅವಳ ಸಹೋದ್ಯೋಗಿಗಳ ಬಗ್ಗೆ ವಿಚಾರಿಸುತ್ತಿದ್ದ ? ಗಂಡಸರು ಜಾಸ್ತಿ ಇದ್ದಾರೋ ಇಲ್ಲ ಹೆಂಗಸರೊ ? ಅವರಿಗೆಲ್ಲ ಎಷ್ಟು ವರ್ಷ ? ಮಕ್ಕಳಿದ್ದಾರೆಯೇ ? ಆಫೀಸಿನಲ್ಲಿ ಅವಳು ಒಬ್ಬಳೇ ಊಟ ಮಾಡುತ್ತಾಳಾ ? ಯಾವ ಕ೦ಪ್ಯೂಟರ್ ಉಪಯೋಗಿಸುತ್ತೀರಿ ? ಯಾವ ಪುಸ್ತಕ ಓದುತ್ತಿದ್ದೀಯ ? ಅವನು ಅವಳ ಬಾಲ್ಯದ ಸ್ನೇಹಿತರ ಬಗ್ಗೆ ವಿಚಾರಿಸುತ್ತಿದ್ದ. ಅವಳು ವಿಚ್ಛೇದನದ ಅವಮಾನದಿಂದ ದೂರವಾಗಿದ್ದಾಳೆ ಎಂದು ಅವನು ಭಾವಿಸಿದ್ದ ಅವಳ ಹಳೆಯ ಸ್ನೇಹಿತರ ಬಗ್ಗೆ ಕೇಳುತ್ತಿದ್ದ. ಅವಳ ಮುಂದಿನ ಜೀವನದ ಬಗ್ಗೆ ಕೇಳುತ್ತಿದ್ದ. ವಯಸ್ಸು ಹೆಚ್ಚಾದಂತೆ ಹುಡುಗಿಯರು ಮರದಿಂದ ಕಿತ್ತಿಟ್ಟ ಹಣ್ಣಿನಂತೆ - ದಿನಗಳೆದಂತೆ ಯಾರೂ ಅವರನ್ನು ಬಯಸುವದಿಲ್ಲ ಎನ್ನುವದನ್ನು ಅವಳಿಗೆ ಮನದಟ್ಟು ಮಾಡಿಸಲು ಪ್ರಯತ್ನಿಸುತ್ತಿದ್ದ. ಕೆಲವೇ ದಿನಗಳಲ್ಲಿ ಬೆಲೆ ಕಳೆದುಕೊಂಡ ಹಣ್ಣುಗಳನ್ನು ಯಾವುದೋ ಒಂದು ಕಡೆ ಸಿಕ್ಕಷ್ಟು ಬೆಲೆ ಮಾರಲಾಗುತ್ತದೆ .
ಶಿ ಈ ಮಾರಾಟದ ಬೆಲೆಯ ಬಗ್ಗೆ ಪ್ರಸ್ತಾಪಿಸದಿದ್ದರೂ ಕೆಲವೊಮ್ಮೆ ಜೀವನದ ಫಲಪ್ರದತೆಯ ಬಗ್ಗೆ , ಗುರಿಯ ಬಗ್ಗೆ ಆಗಾಗ ಉಪದೇಶ ಕೊಡುತ್ತಿದ್ದ. ಅವನು ಹೆಚ್ಚು ಹೆಚ್ಚು ಮಾತನಾಡಿದಷ್ಟೂ ತನ್ನ ತಾಳ್ಮೆಯ ಬಗ್ಗೆ ತಾನೇ ಅಚ್ಚರಿಗೊಳ್ಳುತ್ತಿದ್ದ. ಆದರೆ ಮಗಳು ಬದಲಾಗಲಿಲ್ಲ. ಇನ್ನೂ ಕಡಿಮೆ ತಿನ್ನುತ್ತಿದ್ದಳು. ಮತ್ತಷ್ಟು ಮೌನಿಯಾಗುತ್ತಿದ್ದಳು. ಕೊನೆಗೊಮ್ಮೆ ಅವನು ಅವಳು ಜೀವನವನ್ನು ಖುಷಿಯಿಂದ ಅನುಭವಿಸುತ್ತಿಲ್ಲ ಎಂದು ಬಾಯಿ ಬಿಟ್ಟು ಹೇಳಿದಾಗ ಅವಳು ಅವನನ್ನು ಮರು ಪ್ರಶ್ನಿಸಿದಳು " ನಾನು ಖುಷಿಯಾಗಿಲ್ಲ ಎಂದು ನೀನು ಹೇಗೆ ತೀರ್ಮಾನಿಸಿದೆ ? ನನ್ನ ಜೀವನವನ್ನು ನಾನು ಖುಷಿಯಿಂದ ಅನುಭವಿಸುತ್ತಿದ್ದೇನೆ "
"ಆದರೆ ಅದು ಸುಳ್ಳು. ಖುಷಿಯಾಗಿರುವ ಮನುಷ್ಯ ಇಷ್ಟು ಮೌನವಾಗಿರಲು ಸಾಧ್ಯವಿಲ್ಲ "
ಅವಳು ಊಟದ ಪ್ಲೇಟಿನಿಂದ ಕತ್ತೆತ್ತಿ ಅವನನ್ನು ಒಂದು ಕ್ಷಣ ದಿಟ್ಟಿಸಿದಳು. "ಅಪ್ಪಾ ಮೊದಲೆಲ್ಲ ನೀನು ಸಹ ಹೀಗೆ ಮೌನವಾಗಿರುತ್ತಿದ್ದೆ. ನೆನಪಿದೆಯೇ? ಆಗ ನೀನು ದುಃಖಿಯಾಗಿದ್ದೆಯ?"
ಶಿ ತನ್ನ ಮಗಳು ತನ್ನನ್ನು ಹೀಗೆ ನೇರವಾಗಿ ಪ್ರಶ್ನಿಸುತ್ತಾಳೆ ಎಂದುಕೊಂಡಿರಲಿಲ್ಲ. ಒಂದು ಕ್ಷಣ ಅವನು ಅವಕ್ಕಾದ. ಒಳ್ಳೆಯ ನಡುವಳಿಕೆಯುಳ್ಳವರು ಮಾಡುವಂತೆ ಮಾತಿನಲ್ಲಾದ ತಪ್ಪಿನರಿವಾಗಿ ತನ್ನ ಮಾತಿಗೆ ಕ್ಷಮೆ ಕೇಳಿ ಅವಳು ವಿಷಯವನ್ನು ಬದಲಿಸುತ್ತಾಳೆ ಎಂದು ಅವನು ಕಾದ. ಆದರೆ ಅವಳು ಹಾಗೆ ಮಾಡಲಿಲ್ಲ. ಕನ್ನಡಕದ ಹಿಂದಿನಿಂದ ಅವನನ್ನು ತೀಕ್ಷ್ಣವಾಗಿ ನೋಡುತ್ತಿದ್ದ ಅವಳ ಅಗಲ ಕಣ್ಣುಗಳು ಅವನಿಗೆ ಅವಳ ಬಾಲ್ಯದ ದಿನಗಳನ್ನು ನೆನಪಿಗೆ ತಂದವು. ಅವಳು ಐದು ಆರು ವರ್ಷದವಳಾಗಿದ್ದಾಗ ಅವನನ್ನು ಸದಾ ಕಾಲ ಪ್ರಶ್ನೆ ಕೇಳುತ್ತ ಉತ್ತರಕ್ಕಾಗಿ ಪೀಡಿಸುತ್ತಿದ್ದಳು. ಅವಳ ಕಣ್ಣುಗಳು ಅವಳಮ್ಮನನ್ನು ನೆನಪಿಸುತ್ತಿದ್ದವು. ಅವಳ ಅಮ್ಮನ ಕಣ್ಣುಗಳಲ್ಲಿ ಉತ್ತರಕ್ಕಾಗಿ ಕಾದುಕುಳಿತಿರುವ ಪ್ರಶ್ನೆಗಳಿದ್ದವು. ಆದರೆ ಅವನ ಬಳಿ ಉತ್ತರಗಳಿರಲಿಲ್ಲ.
ಅವನು ನಿಟ್ಟುಸಿರು ಬಿಟ್ಟ.
" ಖಂಡಿತವಾಗಿಯೂ ನಾನು ಖುಷಿಯಾಗಿದ್ದೆ "
"ಆಯಿತಲ್ಲ. ಮೌನವಾಗಿದ್ದರೂ ಜನ ಖುಷಿಯಾಗಿರುತ್ತಾರೆ. ಅಲ್ಲವೇ "
"ನಿನ್ನ ಬದುಕಿನ ಬಗ್ಗೆ ನನ್ನ ಜೊತೆಗೆ ಮಾತನಾಡು ಮಗಳೇ . ನಿನ್ನ ಕೆಲಸದ ಬಗ್ಗೆಯಾದರೂ ಹೇಳು. " ಶಿ ದೈನ್ಯದಿಂದ ಕೇಳಿದ.
"ನೀನು ನಿನ್ನ ಕೆಲಸದ ಬಗ್ಗೆ ಯಾವತ್ತೂ ಮಾತನಾಡುತ್ತಿರಲಿಲ್ಲ. ನಿನಪಿದೆಯಾ? ನಾನು ಕೇಳಿದಾಗಲೂ ಉತ್ತರಿಸುತ್ತಿರಲಿಲ್ಲ "
"ನಾನೊಬ್ಬ ರಾಕೆಟ್ ಸೈ೦ಟಿಸ್ಟ್. ನಮ್ಮ ಕೆಲಸದಲ್ಲಿ ಗೌಪ್ಯತೆ ಅತ್ಯಗತ್ಯ. "
"ನೀನು ಯಾವುದರ ಬಗ್ಗೆಯೂ ಮಾತನಾಡುತ್ತಿರಲಿಲ್ಲ " ಮಗಳು ಮರುನುಡಿದಳು.
ಶಿ ಏನೋ ಹೇಳಲು ಬಾಯಿ ತೆರೆದ. ಆದರೆ ಶಬ್ದಗಳು ಹೊರಬರಲಿಲ್ಲ. ಒಂದು ಸುಧೀರ್ಘ ಮೌನದ ನಂತರ ಅವನು ನುಡಿದ "ನಾನು ಈಗ ಮಾತನಾಡುತ್ತಿದ್ದೇನೆ. ನಾನು ತಿದ್ದಿಕೊಳ್ಳುತ್ತಿದ್ದೇನೆ. ಅಲ್ಲವೇ ?"
"ನಿಜ" ಮಗಳು ನುಡಿದಳು.
"ಅದನ್ನೇ ನೀನು ಮಾಡಬೇಕಾಗಿರುವದು. ದಯವಿಟ್ಟು ಮಾತನಾಡು " ಶಿ ಹೇಳಿದ "ಈಗಲೇ ಪ್ರಾರಂಭಿಸು. "
ಮಗಳು ಉತ್ತರಿಸಲಿಲ್ಲ. ಮೌನವಾಗಿ ಊಟವನ್ನು ಮುಗಿಸಿ ಕೈ ತೊಳೆದು ಅವನು ಊಟವನ್ನು ಮುಗಿಸುವ ಮೊದಲೇ ಕಾರಿನ ಕೀ ತೆಗೆದುಕೊಂಡು ಹೊರಕ್ಕೆ ನಡೆದಳು.
ಮಾರನೆಯ ದಿನ ಬೆಳಿಗ್ಗೆ ಪಾರ್ಕಿನಲ್ಲಿ ಕುಳಿತಿದ್ದಾಗ ಶಿ ಮ್ಯಾಡಮ್ ಗೆ ಹೇಳಿದ "ಮಗಳು , ಅವಳು ಸಂತೋಷವಾಗಿಲ್ಲ "
"ಮಗಳಿದ್ದರೆ ಅದೇ ಒಂಥರ ಸಂತೋಷ " ಮ್ಯಾಡಮ್
"ಅವಳು ವಿಚ್ಛೇದನ ತೆಗೆದುಕೊಂಡಿದ್ದಾಳೆ "
ಮ್ಯಾಡಮ್ ತಲೆಯಾಡಿಸುತ್ತಾ ಪರ್ಷಿಯನ್ ಭಾಷೆಯಲ್ಲಿ ಏನೋ ಹೇಳಲು ಪ್ರಾರಂಭಿಸಿದಳು. ಮ್ಯಾಡಮ್ ಗೆ ವಿಚ್ಛೇದನ ಎಂದರೆ ಗೊತ್ತಿದೆಯೇ ಎನ್ನುವದು ಶಿ ಗೆ ಖಚಿತವಾಗಲಿಲ್ಲ. ಜಗತ್ತಿನೊಟ್ಟಿಗೆ ಇಷ್ಟು ಸಂತೋಷದಿಂದ ಬದುಕುತ್ತಿರುವ ಮ್ಯಾಡಮ್ ಳನ್ನು ಬದುಕಿನ ವಿಷಾದಗಳಿಂದ ಅವಳ ಗಂಡನೋ, ಮಗನೋ ಯಾರೋ ಒಬ್ಬರು ರಕ್ಷಿಸಿಕೊಳ್ಳುತ್ತಿರಬೇಕು. ಮಾತನಾಡುತ್ತ , ನಗುತ್ತ ಬದುಕಿನ ಪ್ರತಿ ಕ್ಷಣವನ್ನು ಉತ್ಕಟ ಆನಂದದಿಂದ ಅನುಭವಿಸುತ್ತ ಕೆ೦ಪಾಗಿರುವ ಮ್ಯಾಡಮ್ ಳ ಮುಖವನ್ನು ಮುಖವನ್ನು ದಿಟ್ಟಿಸಿದ. ಅವಳಿಗಿಂತ ಹೆಚ್ಚು ಕಡಿಮೆ ನಲವತ್ತು ವರ್ಷಕ್ಕೆ ಕಿರಿಯವಳಾದ ತನ್ನ ಮಗಳಲ್ಲಿ ಈ ಉತ್ಸುಕತೆಯಿಲ್ಲ ಎನ್ನುವ ನೋವು ಕ್ಷಣ ಕಾಲ ಕಾಡಿದಂತಾಯಿತು . ಮ್ಯಾಡಮ್ ಧರಿಸಿದ್ದ ದಟ್ಟ ಕಿತ್ತಳೆ ಬಣ್ಣದ ಉಡುಪಿನಲ್ಲಿದ್ದ ನೇರಳೆ ಬಣ್ಣದ ಚಿಕ್ಕ ಚಿಕ್ಕ ಮಂಗಗಳು ಖುಷಿಯಲ್ಲಿ ಜಿಗಿದಾಡುತ್ತಿದ್ದವು. ತಲೆಯ ಮೇಲೆ ಅದೇ ಬಣ್ಣದ ಸ್ಕಾರ್ಫ್ ಕಟ್ಟಿಕೊಂಡಿದ್ದಳು. ಹುಟ್ಟಿದೂರಿನಿಂದ ಸ್ಥಾನಪಲ್ಲಟಗೊಂಡಿರುವ ಹೆಂಗಸು. ಆದರೆ ಸಂದೇಹವೇ ಇಲ್ಲ ಇದು ಸಂತೋಷದಿಂದಾದ ಸ್ಥಾನಪಲ್ಲಟ. ಶಿ ತನಗೆ ಇರಾನ್ ನ ಇತ್ತೀಚಿನ ವಿದ್ಯಮಾನವಾಗಲಿ ಅಥವಾ ಅದರ ಇತಿಹಾಸವಾಗಲಿ ಏನಾದರು ಗೊತ್ತಿದೆಯೇ ಎಂದು ನೆನಪಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಯಾವುದೂ ಜ್ಞಾಪಕಕ್ಕೆ ಬರಲಿಲ್ಲ. ಕೊನೆಗೆ ಮ್ಯಾಡಮ್ ಒಬ್ಬಳು ಅದೃಷ್ಟವಂತ ಮಹಿಳೆ ಎಂದು ನಿರ್ಧರಿಸಿದ. ಹಾಗೆ ನೋಡಿದರೆ ಬದುಕಿನ ಸಣ್ಣ ಪುಟ್ಟ ನ್ಯೂನತೆಗಳನ್ನು ಹೊರತುಪಡಿಸಿದರೆ ತಾನೂ ಸಹ ಅದೃಷ್ಟಶಾಲಿಯೇ. ಮ್ಯಾಡಮ್ ಮತ್ತು ತಾನು ಪ್ರಪಂಚದ ಬೇರೆ ಬೇರೆ ಪ್ರದೇಶದ ಬೇರೆಯದೇ ಆದ ಭಾಷೆಯ ತಮ್ಮದೇ ಆದ ವಿಭಿನ್ನ ಸಂಸ್ಕೃತಿಯವರು ಇಲ್ಲಿ ಹೀಗೆ ಬೆಳಗಿನ ಹಿತವಾದ ಬಿಸಿಲನಲ್ಲಿ ಕುಳಿತು ಹರಟುತ್ತಿದ್ದೇವೆ. ಎಂತಹ ಅದ್ಭುತ.
ನಮ್ಮ ಚೀನಾದಲ್ಲಿ ಒಂದು ಮಾತಿದೆ "ಕ್ಸು ಬಾಯ್ ಶಿ ಜ್ಹೆ ತೊಂಗ್ ಜ್ಹೌ " ಮ್ಯಾಡಮ್ ಮಾತು ನಿಲ್ಲಿಸಿದಾಗ ಶಿ ಸಾವಕಾಶವಾಗಿ ನುಡಿದ. ಒಂದು ದೋಣಿಯಲ್ಲಿ ಜೊತೆಯಾಗಿ ಕುಳಿತು ನದಿಯನ್ನು ದಾಟುವ ಅವಕಾಶ ಸಿಗಬೇಕಾದರೆ ಮುನ್ನೂರು ವರ್ಷಗಳಷ್ಟು ಕಾಲ ನಿರ್ಮಲವಾಗಿ ಪ್ರಾರ್ಥಿಸಿರಬೇಕಂತೆ. ಅವನು ಅದನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಿ ವಿವರಿಸಬೇಕು ಎಂದು ಯೋಚಿಸಿದ. ಆದರೆ ನಿಜಕ್ಕೂ ಭಾವನೆಗಳಿಗೆ ಭಾಷೆಗಳ ವ್ಯತ್ಯಾಸವಿದೆಯೇ ? ತಾನು ಭಾಷಾ೦ತರಿಸಿದರೂ, ಭಾಷಾ೦ತರಿಸದಿದ್ದರೂ ಮ್ಯಾಡಮ್ ತನ್ನನ್ನು ಅರ್ಥೈಸಿಕೊಳ್ಳಬಲ್ಲಳು. "ಬಹುಶ: ನಾವು ಹೀಗೆ ಇಲ್ಲಿ ಭೇಟಿಯಾಗಿ ಕುಳಿತು ಹರಟುತ್ತಿದ್ದೇವೆ ಎಂದರೆ ಇದರ ಹಿಂದೆ ಅದೆಷ್ಟು ವರ್ಷಗಳ ಸುಧೀರ್ಘ ಪ್ರಾರ್ಥನೆಯಿರಬಹುದು." ಅವನು ಚೈನೀಸ್ ನಲ್ಲಿ ನುಡಿದ.
ಮ್ಯಾಡಮ್ ನಸುನಗುತ್ತ ಅವನು ಹೇಳಿದ್ದಕ್ಕೆ ಸಹಮತ ವ್ಯಕ್ತಡಿಸುವಂತೆ ತಲೆಯಾಡಿಸಿದಳು.
"ಪ್ರತಿಯೊಂದು ಸಂಬಂಧದ ಹಿಂದೆ ಅದರದ್ದೇ ಕಾರಣಗಳಿವೆ ಎನ್ನುವದು ಆ ಮಾತಿನ ಅರ್ಥ. ಗಂಡ ಹೆಂಡತಿ, ತ೦ದೆ ತಾಯಿ ಮತ್ತು ಮಕ್ಕಳು , ಮಿತ್ರರು ಮತ್ತು ಶತ್ರುಗಳು, ಹಾದಿಯಲ್ಲಿ ಅಚಾನಕ್ಕಾಗಿ ಮಾತನಾಡಿಸುವ ಯಾರೋ ಅಪರಿಚಿತರು.. . . ನಾವು ಅಗಾಧವಾಗಿ ಪ್ರೀತಿಸುವವರೊಟ್ಟಿಗೆ ದಿಂಬಿನಲ್ಲಿ ತಲೆಯಿಟ್ಟು ಪರಸ್ಪರರ ತಲೆಗೆ ತಲೆ ತಾಕಿಸಿ ದಿವ್ಯ ಮೌನದಲ್ಲಿ ಮಲಗಬೇಕಾದರೆ ಮೂರು ಸಾವಿರ ವರ್ಷಗಳ ನಿರ್ಮಲ ಪ್ರಾರ್ಥನೆಯ ಅಗತ್ಯವಿದೆ. ಅಪ್ಪ ಮತ್ತು ಮಗಳು ? ಬಹುಶ: ಒಂದು ಸಾವಿರ ವರ್ಷಗಳಷ್ಟಿರಬಹುದೇ? ಒಂದು ಮಾತು ಸತ್ಯ - ಗೊತ್ತು ಗುರಿಯಿಲ್ಲದ ಯಾರೋ ಇಬ್ಬರು ಅಪ್ಪ ಮಗಳಾಗುವದಿಲ್ಲ. ಆದರೆ ನನ್ನ ಮಗಳಿಗೆ ಇದು ಅರ್ಥವಾಗುತ್ತಿಲ್ಲ. ಅವಳಿಗೆ ನಾನೊಬ್ಬ ಕಿರಿಕಿರಿ ಉಂಟುಮಾಡುವವ. ಅವಳಿಗೆ ನಾನು ಮೌನವಾಗಿದ್ದರೆನೇ ಸರಿ. ಯಾಕೆಂದರೆ ನಾನು ಯಾವತ್ತೂ ಇದ್ದುದು ಹಾಗೆ ಅಲ್ಲವೇ ? ನಾನು ಅವಳೊಟ್ಟಿಗೆ , ಅವಳ ಅಮ್ಮನೊಟ್ಟಿಗೆ ಮಾತನಾಡುತ್ತಿರಲಿಲ್ಲ. ಯಾಕೆ೦ದರೆ ನಾನೊಬ್ಬ ರಾಕೆಟ್ ಸೈ೦ಟಿಸ್ಟ್ ಆಗಿದ್ದೆ. ಅವಳಿಗೆ ಅದು ಅರ್ಥವಾಗುತ್ತಿಲ್ಲ. ನನ್ನ ಕೆಲಸದಲ್ಲಿ ಪ್ರತಿಯೊಂದು ಗೌಪ್ಯ. ನಾವು ದಿನ ಪೂರ್ತಿ ಕೆಲಸ ಮಾಡುತ್ತಿದ್ದೆವು. ಸಂಜೆ ಮನೆಗೆ ಹೊರಡುವಾಗ ಸೆಕ್ಯೂರಿಟಿ ಗಾರ್ಡಗಳು ಬಂದು ನಮ್ಮ ಪುಸ್ತಕ, ಪೆನ್ನು ಕೊನೆಗೆ ಯಾವುದೋ ಸಣ್ಣ ಚಿ೦ದಿ ಚೀಟಿಯನ್ನೂ ತೆಗೆದಿರಿಸುತ್ತಿದ್ದರು. ನಾವು ಹಳೆಯ ಪುಸ್ತಕವೊಂದರಲ್ಲಿ ಸಹಿ ಮಾಡಿ ಬರುತ್ತಿದ್ದೆವು. ನಮ್ಮ ಕುಟುಂಬದವರೊಟ್ಟಿಗೆ ನಮ್ಮ ಕೆಲಸದ ಬಗ್ಗೆ ಮಾತನಾಡುವದು ನಿಷಿದ್ಧವಾಗಿತ್ತು. ಮಾತನಾಡದಿರುವಂತೆ ನಮ್ಮನ್ನು ತರಬೇತುಗೊಳಿಸಿದ್ದರು.
ಮ್ಯಾಡಮ್ ಕೈಕಟ್ಟಿಕೊಂಡು ಕೇಳಿಸಿಕೊಳ್ಳುತ್ತಿದ್ದಳು. ತನ್ನ ಹೆಂಡತಿ ತೀರಿ ಹೋದಾಗಲಿನಿಂದ ಶಿ ತನ್ನದೇ ವಯಸ್ಸಿನ ಇನ್ನೊಬ್ಬ ಮಹಿಳೆಯ ಸಾಮೀಪ್ಯದಲ್ಲಿ ಇಷ್ಟು ಹತ್ತಿರಕ್ಕೆ ಯಾವತ್ತೂ ಕುಳಿತಿರಲಿಲ್ಲ. ಅವಳು ಬದುಕಿದ್ದಾಗಲೂ ಅವನು ಅವಳೊಟ್ಟಿಗೆ ಯಾವತ್ತೂ ಇಷ್ಟು ಮಾತನಾಡಿರಲಿಲ್ಲ. ಅವನ ಕಣ್ಣುಗಳು ಮಂಜಾದವು. ಇಷ್ಟು ವರ್ಷಗಳ ಕಾಲ ಬಲವಂತವಾಗಿ ಬಚ್ಚಿಟ್ಟಿದ್ದ ಶಬ್ದಗಳನ್ನು ಮಾತುಗಳನ್ನಾಗಿಸಿ ಹೊರಹಾಕಲು ಅವನು ಪ್ರಪಂಚದ ಆ ಮೂಲೆಯಿಂದ ಇಲ್ಲಿಗೆ ಬಂದಿದ್ದ. ಆದರೆ ಅವನ ಮಗಳಿಗೆ ಅವನ ಮಾತುಗಳಲ್ಲಿ ಆಸಕ್ತಿಯಿರಲಿಲ್ಲ. ಮ್ಯಾಡಮ್ , ಅವನಾಡುವ ಭಾಷೆ ಗೊತ್ತಿಲ್ಲದ ಈ ಮ್ಯಾಡಮ್ ಅವನ ಮಾತುಗಳನ್ನು , ಅವನನ್ನು ಅರ್ಥೈಸಿಕೊಳ್ಳುವಂತೆ ಕೇಳುತ್ತಿದ್ದಳು.
ಶಿ ತನ್ನ ಕಣ್ಣುಗಳನ್ನು ಉಜ್ಜಿಕೊಂಡ. ಈ ವಯಸ್ಸಿನಲ್ಲಿ ಇಂತಹ ಭಾವನೆಗಳಿಗೆ ಬಲಿಯಾಗಬಾರದು. ಅವನು ದೀರ್ಘವಾಗಿ ಉಸಿರೆಳೆದುಕೊಂಡ. ಅರ್ಥಹೀನವಾಗಿ ನಸುನಕ್ಕ. " ಪ್ರತಿಯೊಂದಕ್ಕೂ ಅದರದ್ದೇ ಆದ ಕಾರಣಗಳಿವೆ. ಬಲಹೀನ ಸಂಬಂಧಗಳಿಗೂ ಸಹ. ಬಹುಶ: ನಾನು ಹೃದಯಪೂರ್ವಕವಾಗಿ ಒಂದು ಸಾವಿರ ವರ್ಷ ಮಗಳಿಗೋಸ್ಕರ ಪ್ರಾರ್ಥಿಸಿಲ್ಲವೇನೋ ?"
ಮ್ಯಾಡಮ್ ಗಂಭೀರವಾಗಿ ತಲೆಯಾಡಿಸಿದಳು. ಅವಳಿಗೆ ತಾನು ಹೇಳುತ್ತಿರುವದು ಅರ್ಥವಾಗುತ್ತಿದೆ ಎನ್ನುವದು ಅವನಿಗೆ ತಿಳಿದಿತ್ತು. ಆದರೆ ತನ್ನ ವಿಷಾದಗಳನ್ನು ಅವಳ ಸುಖಿ ಬದುಕಿನ ಮೇಲೆ ಹೇರಲು ಅವನು ಇಷ್ಟಪಡಲಿಲ್ಲ. ಅವನು ಹಳೆಯ ನೆನಪಿನ ಧೂಳುಗಳನ್ನು ಕೊಡವುವಂತೆ ಕೈಗಳೆರಡನ್ನೂ ಉಜ್ಜಿಕೊಂಡ. "ಪ್ರಾಚೀನ ನೆನಪುಗಳು" ಅವನು ತನಗೆ ತಿಳಿದ ಇಂಗ್ಲಿಷ್ ನಲ್ಲಿ ಹೇಳಲು ಪ್ರಯತ್ನಿಸಿದ "ಈ ಹಳೆಯ ನೆನಪುಗಳು ಖುಷಿಕೊಡುವದಿಲ್ಲ "
"ನನಗೆ ಕತೆಗಳೆಂದರೆ ಇಷ್ಟ " ಮ್ಯಾಡಮ್ ಹೇಳಿದಳು ಮತ್ತು ಮಾತನಾಡಲು ಪ್ರಾರಂಭಿಸಿದಳು. ಶಿ ಕೇಳತೊಡಗಿದ. ಅವಳು ಮಧ್ಯೆ ಮಧ್ಯೆ ನಗುತ್ತಿದ್ದಳು. ಶಿ ಅವಳ ಉಡುಪಿನ ಮೇಲಿದ್ದ ಕೋತಿಗಳನ್ನು ದಿಟ್ಟಿಸಿದ. ಅವಳು ನಕ್ಕಾಗಲೆಲ್ಲ ಆ ಕೋತಿಗಳು ಮೇಲಕ್ಕೆ ಕೆಳಕ್ಕೆ ಓಲಾಡುತ್ತಿದ್ದವು.
"ನಾವು ಅದೃಷ್ಟವಂತರು " ಅವಳು ಮಾತು ಮುಗಿಸಿದಾಗ ಅವನು ನುಡಿದ. "ಅಮೇರಿಕಾದಲ್ಲಿ ನಾವು ಏನು ಬೇಕಾದರೂ ಮಾತನಾಡಬಹುದು "
"ಅಮೇರಿಕ ಒಳ್ಳೆ ದೇಶ " ಮ್ಯಾಡಮ್ ತಲೆಯಾಡಿಸಿದಳು " ಐ ಲವ್ ಅಮೇರಿಕ "
ಅವತ್ತು ಸಂಜೆ ಶಿ ಅವನ ಮಗಳಿಗೆ ಅವನು ಇರಾನಿ ಮಹಿಳೆಯನ್ನು ಪಾರ್ಕಿನಲ್ಲಿ ಭೇಟಿಯಾಗಿರುವದನ್ನು ಹೇಳಿದ.
"ನೀನು ಅವಳನ್ನು ಯಾವತ್ತಾದರೂ ಭೇಟಿಯಾಗಿದ್ದೀಯ ?"
"ಇಲ್ಲ "
"ನೀನು ಅವಳನ್ನು ಒಮ್ಮೆ ಭೇಟಿಯಾಗಬೇಕು. ಅವಳು ಎಷ್ಟು ಆಶಾವಾದಿ ಗೊತ್ತೇ ? ಬಹುಶ : ನಿನ್ನ ಈ ಪರಿಸ್ಥಿತಿಯಿಂದ ಹೊರಬರಲು ಅವಳು ಪ್ರೇರಣೆಯಾಗಬಹುದು. "
"ಯಾವ ಪರಿಸ್ಥಿತಿ ?" ಮಗಳು ಊಟದ ತಟ್ಟೆಯಿಂದ ತಲೆಯೆತ್ತದೆ ಪ್ರಶ್ನಿಸಿದಳು.
"ನಿನಗೆ ಗೊತ್ತಲ್ಲ "
ಮಗಳು ಸಂಭಾಷಣೆ ಮುಂದುವರೆಸುವ ಲಕ್ಷಣ ತೋರದಿದ್ದಾಗ ತಾನೇ ಹೇಳಿದ "ನಿನ್ನ ಬದುಕಿನ ಕತ್ತಲಿನ ದಿನಗಳಿವು ಅಲ್ಲವೇ ?"
"ಅವಳು ನನಗೆ ಪ್ರೇರಣೆಯಾಗುತ್ತಾಳೆ ಎಂದು ನಿನಗೆ ಹೇಗೆ ಗೊತ್ತು ?"
ಶಿ ಉತ್ತರಿಸಲು ಬಾಯಿ ತೆರೆದ. ಆದರೆ ಹೇಳುವದು ಏನೆಂದು ತಿಳಿಯಲಿಲ್ಲ. ತಾನು ಮತ್ತು ಮ್ಯಾಡಮ್ ಇಬ್ಬರೂ ಬೇರೆ ಬೇರೆ ಭಾಷೆಯಲ್ಲಿ ಮಾತನಾಡುತ್ತೇವೆ ಎಂಬುದನ್ನು ಬಹಿರಂಗ ಪಡಿಸಿದರೆ ಮಗಳು ತಮ್ಮಿಬ್ಬರದು ಹುಚ್ಚಾಟ ಎಂದು ಭಾವಿಸಿದರೆ ಎಂದು ಅವನಿಗೆ ಅಂಜಿಕೆಯಾಯಿತು. ಒಂದು ಸಮಯದಲ್ಲಿ ಅರ್ಥವತ್ತಾಗಿ ಕಾಣಿಸವದು ಮತ್ತೊಂದು ಸಮಯದಲ್ಲಿ ಅರ್ಥಹೀನವಾಗಿರುತ್ತದೆ ಅನಿಸಿತು. ತನ್ನ ಭಾಷೆಯನ್ನೇ ಮಾತನಾಡುವ ತನ್ನದೇ ಮಗಳೊಟ್ಟಿಗೆ ತಾನು ಒಂದೇ ಒಂದು ಅರ್ಥವತ್ತಾದ ಮಾತುಕತೆಯಲ್ಲಿ ತೊಡಗುವಾದಾಗಲಿ , ಒಂದು ಸುಂದರ ಕ್ಷಣವನ್ನು ಕಳೆಯುವ ದಾಗಲಿ ಅಸಾಧ್ಯವೆನಿಸಿ ವಿಷಾದದ ಛಾಯೆಯೊಂದು ಹಾದುಹೋದಂತಾಯಿತು. ಒಂದು ಸುಧೀರ್ಘ ಮೌನದ ನಂತರ ಅವನು ಮತ್ತೆ ನುಡಿದ "ನೋಡು ಒಬ್ಬಳು ಹುಡುಗಿಯಾಗಿ ನೀನು ಕಟುವಾಗಿ ಮಾತನಾಡಬಾರದು. ಒಬ್ಬಳು ಒಳ್ಳೆಯ ಮಹಿಳೆ ಯಾವಾಗಲೂ ಗೌರವಾನ್ವಿತಳು ಮತ್ತು ಜನರನ್ನು ಹೇಗೆ ಮಾತನಾಡಿಸಬೇಕು ಎಂದು ಅರಿತವಳು. "
"ನಾನು ವಿಚ್ಛೇದಿತೆ. ಹೇಗಿದ್ದರೂ ನಿನ್ನ ಅಳತೆಗೋಲಿನ ಪ್ರಕಾರ ಒಳ್ಳೆಯವಳೂ ಅಲ್ಲ ಗೌರವಾನ್ವಿತಳೂ ಅಲ್ಲ "
ಶಿ ಮಗಳು ಉದ್ದೇಶಪೂರ್ವಕವಾಗಿ ವ್ಯ೦ಗ್ಯದ ಮಾತನಾಡುತ್ತಿದ್ದಾಳೆ ಎಂದು ಅವಳ ಮಾತುಗಳನ್ನು ನಿರ್ಲಕ್ಷಿಸಿದ. "ನಿನ್ನ ಅಮ್ಮ ಅತ್ಯುತ್ತಮ ಹೆಂಗಸಾಗಿದ್ದಳು"
"ಅವಳಿಗೆ ನಿನ್ನನ್ನು ಮಾತನಾಡಿಸಲು ಸಾಧ್ಯವಾಯಿತೇ ?" ಅವಳು ಶಿಯ ಕಣ್ಣಿನಲ್ಲಿ ಕಣ್ಣು ನೆಟ್ಟು ಕೇಳಿದಳು. ಮಗಳ ದೃಷ್ಟಿ ಹಿಂದೆಂದಿಗಿಂತ ಹರಿತವಾಗಿದೆ ಅನಿಸಿತು.
"ನಿನ್ನಮ್ಮ ಯಾವತ್ತೂ ಹೀಗೆ ವಾದ ಮಾಡುತ್ತಿರಲಿಲ್ಲ. "
"ಬಾಬಾ, ಮೊದಲು ನಾನು ಮಾತನಾಡುತ್ತಿಲ್ಲ ಎಂದು ದೂರುತ್ತಿದ್ದೆ. ಈಗ ಮಾತನಾಡಿದರೆ ವಾದ ಮಾಡುತ್ತೇನೆ ಎನ್ನುತ್ತೀಯ ಅಥವಾ ನಾನು ಸರಿಯಾಗಿ ಮಾತನಾಡುತ್ತಿಲ್ಲ ಎನ್ನುತ್ತೀಯ "
"ಮಾತುಕತೆ ಎಂದರೆ ಪ್ರಶ್ನೆಗಳನ್ನು ಮಾತ್ರ ಕೇಳುವದಲ್ಲ. ಮಾತುಕತೆಯೆಂದರೆ ಎದುರಿನವರೊಟ್ಟಿಗೆ ನಿನ್ನ ಭಾವನೆಗಳನ್ನು ಹಂಚಿಕೊಳ್ಳುವದು ಮತ್ತು ಅವರ ಭಾವನೆಗಳನ್ನು ಹಂಚಿಕೊಳ್ಳಲು ಆಹ್ವಾನಿಸುವದು. "
"ಬಾಬಾ ನೀನು ಥೆರಪಿಸ್ಟ್ ಆಗಿದ್ದು ಯಾವಾಗ?"
"ನಾನು ಇಲ್ಲಿಗೆ ಬಂದಿದ್ದು ನಿನಗೆ ಸಹಾಯ ಮಾಡಲು ಮತ್ತು ನನ್ನ ಕೈಯಿಂದ ಏನೆಲ್ಲ ಮಾಡಲು ಸಾಧ್ಯವೋ ಅದನ್ನು ಮಾಡುತ್ತಿದ್ದೇನೆ" ಶಿ ಹೇಳಿದ " ನಿನ್ನ ವಿಚ್ಛೇದನದ ಹಿಂದಿನ ಕಾರಣಗಳನ್ನು ನಾನು ತಿಳಿಯಬೇಕು. ಯಾವ ತಪ್ಪಿನಿಂದ ಹೀಗಾಯಿತು ಎಂದು ನನಗೆ ಅರಿವಾದರೆ ಮುಂದೆ ನೀನು ಒಬ್ಬ ಯೋಗ್ಯ ವ್ಯಕ್ತಿಯನ್ನು ಹುಡುಕಲು ನಾನು ಸಹಾಯ ಮಾಡಬಹುದು. ನೀನು ನನ್ನ ಮಗಳು ಮತ್ತು ನೀನು ಸಂತೋಷದಿಂದ ಇರುವದು ನನಗೆ ಮುಖ್ಯ. ನೀನು ಮತ್ತೆ ಬದುಕಿನಲ್ಲಿ ಎಡವುದನ್ನು ನೋಡಲು ನನಗೆ ಸಾಧ್ಯವಿಲ್ಲ"
"ಬಾಬಾ, ನಾನು ಮೊದಲು ಈ ಮಾತನ್ನು ನಿನ್ನಲ್ಲಿ ಕೇಳಿರಲಿಲ್ಲ ಆದರೆ ಈಗ ಕೇಳುತ್ತಿದ್ದೇನೆ. ನೀನು ಇನ್ನೂ ಎಷ್ಟು ದಿನ ಅಮೇರಿಕಾದಲ್ಲಿ ಇರುತ್ತೀಯ?" ಅವನ ಮಗಳು ಪ್ರಶ್ನಿಸಿದಳು.
"ನೀನು ಸರಿಯಾಗುವವರೆಗೆ "
ಅವನ ಮಗಳು ಎದ್ದು ನಿಂತಳು. ಆ ರಭಸಕ್ಕೆ ಕುರ್ಚಿಯ ಕಾಲುಗಳು ನೆಲಕ್ಕೆ ಉಜ್ಜಿ ಕಿರ್ ಗುಟ್ಟಿದವು.
"ನಮಗಿಬ್ಬರಿಗೆ ಬೇರೆ ಯಾರೂ ಇಲ್ಲ ಮಗಳೇ " ಅಂಗಲಾಚುವ ದನಿಯಲ್ಲಿ ಶಿ ಹೇಳಿದ. ಆದರೆ ಅವನು ಮಾತು ಮುಂದುವರೆಸುವ ಮೊದಲೇ ಮಗಳು ರೂಮಿಗೆ ಹೋಗಿ ಧಡಾರನೆ ಬಾಗಿಲನ್ನು ಹಾಕಿಕೊಂಡಳು. ಶಿ ಮಗಳಿಗಾಗಿ ಮಾಡಿಟ್ಟಿದ್ದ ಅಡುಗೆಗಳತ್ತ ದಿಟ್ಟಿಸಿದ. ಅಣಬೆ ಹಾಕಿದ ಹುರಿದ ತೊಫು , ಶು೦ಟಿ ಹಾಕಿ ಮಾಡಿದ ಸಿಗಡಿ, ಅಂದವಾಗಿ ಜೋಡಿಸಿಟ್ಟಿದ್ದ ಕಳಲೆ, ಕೆಂಪು ಮೆಣಸು ಸಿಂಪಡಿಸಿದ ಎಳೆ ಬಟಾಣಿ. ಪ್ರತಿದಿನ ಅವನ ಮಗಳು ಅವನ ಅಡುಗೆಯ ಕೌಶಲ್ಯವನ್ನು ಮೆಚ್ಚಿದರೂ ಅದು ಅರೆ ಮನಸ್ಸಿನ ಮೆಚ್ಚುಗೆ ಎಂದು ಅವನಿಗೆ ಭಾಸವಾಗುತ್ತಿತ್ತು. ಅಡುಗೆ ಎನ್ನುವ ಅವನ ಪ್ರತಿನಿತ್ಯದ ಪ್ರಾರ್ಥನೆಗೆ ಅವನ ಮಗಳು ಸ್ಪಂದಿಸುತ್ತಿರಲಿಲ್ಲ.
"ನನ್ನ ಹೆಂಡತಿ ಇದ್ದಿದ್ದರೆ ಮಗಳನ್ನು ಸಮಾಧಾನ ಪಡಿಸಿ ಗೆಲುವಾಗುವಂತೆ ಮಾಡುತ್ತಿದ್ದಳು " ಶಿ ಮಾರನೆಯ ದಿನ ಬೆಳಿಗ್ಗೆ ಮ್ಯಾಡಮ್ ಬಳಿ ಹೇಳಿದ. ಈಗೀಗ ಅವಳ ಬಳಿ ಚೈನೀಸ್ ಮಾತನಾಡುವದರಲ್ಲಿ ಅವನಿಗೆ ಯಾವುದೇ ಸಂಕೋಚವಿರಲಿಲ್ಲ.
"ಅವರಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದರು . ನಾನು ಅವರಿಬ್ಬರಿಗೂ ಅಷ್ಟೊಂದು ಹತ್ತಿರವಾಗಲಿಲ್ಲ. ನಾನು ಅವರನ್ನು ಪ್ರೀತಿಸಿಲ್ಲವೆಂದಲ್ಲ. ಒಬ್ಬ ರಾಕೆಟ್ ಸೈ೦ಟಿಸ್ಟ ಎಂದರೆ ಹಾಗೆಯೆ. ನಾನು ದಿನ ಪೂರ್ತಿ ಕಷ್ಟಪಟ್ಟು ದುಡಿಯುತ್ತಿದ್ದೆ ಮತ್ತು ರಾತ್ರಿಯಿಡಿ ಕೆಲಸದ ಬಗ್ಗೆಯೇ ಯೋಚಿಸುತ್ತಿರುತ್ತಿದ್ದೆ. ಪ್ರತಿಯೊಂದು ಗೌಪ್ಯ. ಹಾಗಾಗಿ ನಾನು ವಿಚಾರ ಮಾಡುತ್ತಿರುವದು ಏನು ಎಂದು ಯಾರೊಟ್ಟಿಗೂ ಹೇಳುವ ಹಾಗಿಲ್ಲ. ಆದರೆ ನನ್ನ ಹೆಂಡತಿ , ಬಹುಶ: ಅವಳಷ್ಟು ನನ್ನನ್ನು ಅರಿತವರು ಪ್ರಪಂಚದಲ್ಲಿ ಇನ್ನೊಬ್ಬರಿಲ್ಲ. ನಾನು ಸದಾ ಕಾಲ ಕೆಲಸದಲ್ಲಿ ಮುಳುಗಿದ್ದೆ ಎನ್ನುವದರ ಅರಿವಿನಿಂದ ಯಾವತ್ತೂ ನನ್ನ ವಿಚಾರಸರಣಿಗೆ ಅಡ್ಡಿಯು೦ಟು ಮಾಡುತ್ತಿರಲಿಲ್ಲ. ಮಗಳಿಗೂ ಅಡ್ಡಿಮಾಡಲು ಬಿಡುತ್ತಿರಲಿಲ್ಲ. ಬೆಳೆಯುತ್ತಿರುವ ಮಗಳಿಗೆ ಅದು ಒಳ್ಳೆಯದಾಗಿರಲಿಲ್ಲ ಎಂದು ನನಗೆ ಈಗ ಅರಿವಾಗುತ್ತಿದ್ದೆ. ನನ್ನ ಕೆಲಸದ ಮುಖವನ್ನು ನಾನು ಕಛೇರಿಯಲ್ಲೇ ಕಳಚಿಟ್ಟು ಬರಬೇಕಿತ್ತು. ಆದರೆ ಅದನ್ನು ಅರಿಯುವಷ್ಟು ತಿಳುವಳಿಕೆ ಆಗ ನನಗಿರಲಿಲ್ಲ. ಈಗ ಮಗಳಿಗೆ ನನ್ನೊಟ್ಟಿಗೆ ಮಾತನಾಡಲು ವಿಷಯಗಳೇ ಇಲ್ಲ."
ಮಗಳೊಟ್ಟಿಗೆ ಮಾತನಾಡಲು ಮೊದಲೆಲ್ಲ ಪ್ರಯತ್ನಿಸದೇ ಇದ್ದುದು ಅವನದೇ ತಪ್ಪೇನೋ . ಒಂದು ಮಹತ್ತರ ಕೆಲಸಕ್ಕೆ ಕಟಿಬದ್ಧರಾಗಿ ನಿಂತ ಕೆಲವೇ ಕೆಲವು ಮಂದಿಯಲ್ಲಿ ಒಬ್ಬನಾದ ತಾನು ಕೆಲವೊಂದು ತ್ಯಾಗಗಳನ್ನು ಮಾಡುವದು ಅನಿವಾರ್ಯ. ಗೌರವ ಅಥವಾ ವಿಷಾದ. ಗೌರವ ವಿಷಾದಕ್ಕಿಂತ ದೊಡ್ಡದು. ಅವನು ತನ್ನನ್ನು ತಾನೇ ಸಮಾಧಾನಪಡಿಸಿಕೊಳ್ಳುತ್ತಿದ್ದ .
ಅವತ್ತು ರಾತ್ರಿ ಊಟಕ್ಕೆ ಕುಳಿತಾಗ ಅವನ ಮಗಳು ಕರಾವಳಿಯುದ್ದಕ್ಕೂ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಚೈನೀಸ್ ಭಾಷೆಯಲ್ಲಿ ವ್ಯವಹರಿಸಬಲ್ಲ ಒಂದು ಟೂರಿಸ್ಟ್ ಕಂಪನಿಯನ್ನು ಹುಡುಕಿರುವುದಾಗಿ ತಿಳಿಸಿದಳು. 'ನೀನು ಇಲ್ಲಿಗೆ ಬಂದಿರುವದು ಅಮೆರಿಕವನ್ನು ನೋಡಲಿಕ್ಕೆ ಅಲ್ಲವೇ? ಚಳಿಗಾಲ ಶುರುವಾಗುವದರೊಳಗೆ ನೀನು ಒಂದಷ್ಟು ಪ್ರವಾಸ ಮಾಡುವದು ಒಳ್ಳೆಯದು "
"ತುಂಬಾ ದುಬಾರಿಯೇ ?"
"ನಾನು ಹಣ ಕೊಡುತ್ತೇನೆ. ಬಾಬಾ, ನಿನ್ನ ಹುಟ್ಟಿದ ಹಬ್ಬದ ಪ್ರಯುಕ್ತ ನೀನು ಇದನ್ನೇ ಮಾಡಬೇಕು ಎಂದುಕೊಂಡಿದಲ್ಲವೇ ?"
ಏನೇ ಹೇಳಿದರು ಕೊನೆಗೆ ಅವಳು ಅವನದೆ ಮಗಳಲ್ಲವೇ. ಅವನ ಆಸೆಗಳನ್ನು ಅವಳು ನೆನಪಿನಲ್ಲಿಟ್ಟುಕೊಂಡು ಪೂರೈಸಲು ಪ್ರಯತ್ನಿಸುತ್ತಾಳೆ. ಆದರೆ ಅವಳಿಗೆ ತಿಳಿಯದಿರುವದೆಂದರೆ ಅವನು ನೋಡಬಯಸುವದು ಅವನ ಮಗಳು ಮದುವೆಯಾಗಿ ಖುಷಿಯಾಗಿರುವ ಅಮೇರಿಕಾವನ್ನು.
ಅವನು ಒಂದಷ್ಟು ತರಕಾರಿ ಮತ್ತು ಮೀನಿನ ಹೋಳನ್ನು ಅವಳ ಪ್ಲೇಟಿಗೆ ಹಾಕುತ್ತಾ "ನೀನು ಸ್ವಲ್ಪ ಜಾಸ್ತಿ ತಿನ್ನುವದನ್ನು ಕಲಿಯಬೇಕು "
"ಸರಿ , ನಾಳೆ ನಾನು ಅವರಿಗೆ ಕರೆ ಮಾಡಿ ಟಿಕೆಟ್ ತೆಗೆದುಕೊಳ್ಳುತ್ತೇನೆ " ಅವಳು
"ಏನು ಗೊತ್ತ? ಬಹುಶ: ನಾನು ಇಲ್ಲಿರುವದೇ ಒಳ್ಳೆಯದೇನೋ. ವಯಸ್ಸಾಗಿದೆ ನನಗೆ. ತಿರುಗಾಟ ಆರೋಗ್ಯಕ್ಕೆ ಒಳ್ಳೆಯದಲ್ಲ. "
"ಆದರೆ ಇಲ್ಲಿ ನೋಡಲಿಕ್ಕೆ ಜಾಸ್ತಿ ಏನಿಲ್ಲ "
"ಯಾಕಿಲ್ಲ ? ನಾನು ನೋಡಬೇಕಿದ್ದ ಅಮೇರಿಕ ಇದೇನೆ. ನೀನು ಚಿ೦ತಿಸಬೇಡ. ನನಗೆ ಇಲ್ಲಿ ಗೆಳೆಯರಿದ್ದಾರೆ. ನಾನು ನಿನಗೂ ತುಂಬಾ ತೊಂದರೆ ಕೊಡುವದಿಲ್ಲ. "
ಅವನ ಮಗಳು ಏನಾದರು ಉತ್ತರಿಸುವ ಮೊದಲೇ ಅವಳ ಫೋನು ರಿಂಗಾಯಿತು. ಅವಳು ಫೋನ್ ಎತ್ತಿಕೊಂಡು ರೂಮಿಗೆ ನಡೆದಳು. ಅವಳು ಧಡಾರನೆ ಬಾಗಿಲನ್ನು ಹಾಕುವುದನ್ನು ಅವನು ನಿರೀಕ್ಷಿಸ ತೊಡಗಿದ. ಅವಳು ಯಾವತ್ತೂ ಅವನ ಎದುರಿಗೆ ಫೋನಿನಲ್ಲಿ ಮಾತನಾಡುವದಿಲ್ಲ. ಅದು ಯಾವುದೋ ಜಾಹಿರಾತಿನ ಕರೆಯಾಗಿದ್ದರೂ ಅವಳು ರೂಮಿಗೆ ಹೋಗಿಯೆ ಮಾತನಾಡುತ್ತಿದ್ದಳು. ಕೆಲವೊಮ್ಮೆ ಅವಳು ಮೇಲು ದನಿಯಲ್ಲಿ ಬಹಳ ಹೊತ್ತು ಮಾತನಾಡುತ್ತಿದ್ದಾಗ ಅವಳ ಮಾತುಗಳನ್ನು ಕೇಳಿಸಿಕೊಳ್ಳಬೇಕು ಎನ್ನುವ ಅಪೇಕ್ಷೆಯನ್ನು ಅವನು ಬಲವಂತದಿಂದ ತಡೆಹಿಡಿದಿದ್ದ. ಆದರೆ ಇವತ್ತು , ಈ ಸಂಜೆ ಅವಳು ಮನಸು ಬದಲಿಸಿದಂತಿತ್ತು. ಬಾಗಿಲನ್ನು ತೆರೆದೆ ಇಟ್ಟಿದ್ದಳು.
ಅವಳು ಇಂಗ್ಲಿಷಿನಲ್ಲಿ ಮಾತನಾಡುವದನ್ನು ಅವನು ಕೇಳಿಸಿಕೊಂಡ. ಅವಳ ಧ್ವನಿ ಸಾಧಾರಣಕ್ಕಿಂತ ತುಸು ಕೀರಲಾಗಿ ಕೇಳಿಸಿತು. ಅವಳು ಜೋರು ಜೋರಾಗಿ ಮಾತನಾಡುತ್ತ ಮಧ್ಯೆ ಮಧ್ಯೆ ನಗುತ್ತಿದ್ದಳು. ಅವಳ ಮಾತುಗಳು ಅವನಿಗೆ ಅರ್ಥವಾಗಲಿಲ್ಲ. ಅವಳ ನಡುವಳಿಕೆಯೂ ಅರ್ಥವಾಗಲಿಲ್ಲ. ಅವಳ ಹರಿತವಾದ , ಎಂದಿಗಿಂತ ದೊಡ್ಡದಾದ, ಸಂಕೋಚವಿಲ್ಲದ ಕೀರಲು ಧ್ವನಿ ಅವನಿಗೆ ಅಪರಚಿತ ಧ್ವನಿಯಂತೆ ಭಾಸವಾಯಿತು. ಒಂದು ಕ್ಷಣಕ್ಕೆ ಅವಳು ತನ್ನ ಮಗಳಲ್ಲದೆ ಅಪರಿಚಿತಳಾದಂತೆ , ಇದ್ದಕ್ಕಿದ್ದ ಹಾಗೆ ಅವಳ ಬೆತ್ತಲು ದೇಹವನ್ನು ನೋಡಿದ ಹಾಗೆ ಅನಿಸಿ ಅವನು ಬೆಚ್ಚಿಬಿದ್ದ.
ಅವಳು ರೂಮಿನಿಂದ ಹೊರಬಂದಾಗ ಅವಳನ್ನು ದುರುಗುಟ್ಟಿಕೊಂಡು ನೋಡಿದ. ಅವಳು ಫೋನನ್ನು ಇರಿಸಿ, ಒಂದೂ ಮಾತನಾಡದೆ ಊಟದ ಟೇಬಲಿನ ಬಳಿ ಕುಳಿತುಕೊಂಡಳು. ಅವನು ಅವಳ ಮುಖವನ್ನು ಕ್ಷಣ ಕಾಲ ದಿಟ್ಟಿಸಿ ನಂತರ ಪ್ರಶ್ನಿಸಿದ "ಯಾರು ಅದು ಫೋನು ಮಾಡಿದ್ದು ?"
"ಫ್ರೆ೦ಡ್ "
"ಹುಡುಗನೋ ಅಥವಾ ಹುಡುಗಿಯೋ ?"
"ಹುಡುಗ "
ಅವಳು ಮತ್ತೇನಾದರೂ ವಿವರ ಕೊಡುತ್ತಾಳೇನೋ ಎಂದು ಕಾದ. ಆದರೆ ಅವಳು ಆ ಥರದ ಯಾವುದೇ ಪ್ರಯತ್ನ ಮಾಡಲಿಲ್ಲ. ಸ್ವಲ್ಪ ಸಮಯದ ನಂತರ ಅವನೇ ಕೇಳಿದ "ಈ ಫ್ರೆ೦ಡ್ ಏನಾದರು ಸ್ಪೆಷಲ್ ಫ್ರೆ೦ಡ್ ಆಗಿದ್ದಾನೋ ಹೇಗೆ ?"
"ಸ್ಪೆಷಲ್ ? ಖಂಡಿತ "
"ಯಾವ ಥರ ?"
"ಬಾಬಾ, ಬಹುಶ: ಈಗ ನಿನಗೆ ನನ್ನ ಬಗ್ಗೆ ಸ್ವಲ್ಪ ಸಮಾಧಾನವಾಗಬಹುದು. ಹೌದು ಅವನು ನನಗೆ ಸ್ಪೆಷಲ್ ಫ್ರೆ೦ಡ್. ಅದು ಗೆಳೆತನಕ್ಕಿಂತ ಹೆಚ್ಚಿನದು. " ಅವಳು ನುಡಿದಳು. " ಒಬ್ಬ ಪ್ರಿಯತಮ. ಈಗ ನಿನಗೆ ಸಮಾಧಾನವಾಯಿತೇ? ನನ್ನ ಬದುಕು ನೀನು ಅಂದುಕೊಂಡಷ್ಟು ನಿಕೃಷ್ಟವಾಗಿಲ್ಲ "
"ಅಮೇರಿಕನ್ ?"
"ಅಮೇರಿಕನ್ ? ಹೌದು. ಈಗ ಅಮೇರಿಕನ್ ಆಗಿದ್ದಾನೆ. ಆದರೆ ಅವನು ಬಂದಿರುವದು ರೊಮಾನಿಯಾದಿಂದ. "
ಏನಿಲ್ಲವೆಂದರೂ ಕೊನೆಗೆ ಅವನು ಒಂದು ಕಮ್ಯುನಿಸ್ಟ್ ದೇಶದಿಂದ ಬಂದವನು ಶಿ ತನ್ನನ್ನು ತಾನೇ ಸಮಾಧಪಡಿಸಿಕೊಳ್ಳಲು ಪ್ರಯತ್ನಿಸಿದ.
"ಅವನಿಗೆ ನಿನ್ನ ಬಗ್ಗೆ ಚೆನ್ನಾಗಿ ತಿಳಿದಿದೆಯೇ? ಅವನು ನಿನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವನೇ ? ನೀನು ಬಂದಿರುವದು ಎಲ್ಲಿಂದ, ನಿನ್ನ ಹಿನ್ನೆಲೆ , ಕುಟುಂಬ, ಸಂಸ್ಕೃತಿ ? ನೋಡು ನೀನು ಮತ್ತೆ ಅದೇ ಹಳೆಯ ತಪ್ಪನ್ನು ಮತ್ತೆ ಮಾಡುವ ಹಾಗಿಲ್ಲ. ನೀನು ಹುಷಾರಾಗಿರಬೇಕು. "
"ನಾವಿಬ್ಬರು ಪರಸ್ಪರರನ್ನು ಬಹಳ ಹಿಂದಿನಿಂದ ಬಲ್ಲೆವು "
"ಒಂದು ತಿಂಗಳು ಎನ್ನುವದು ತುಂಬಾ ಸಮಯವಲ್ಲ "
"ಅದಕ್ಕಿಂತ ಮೊದಲಿನಿಂದ ನನಗೆ ಪರಿಚಯವಿದೆ ಬಾಬಾ "
"ಬಹುಶ: ಒಂದೂವರೆ ತಿಂಗಳು ಇರಬಹುದೇ? ನನಗೆ ಗೊತ್ತು ನೀನು ದುಃಖದಲ್ಲಿದ್ದೀಯ. ಆದರೆ ಹೆಣ್ಣಾಗಿ ನೀನು ದುಡುಕಬಾರದು. ಅದರಲ್ಲೂ ನಿನ್ನ ಈ ಪರಿಸ್ಥಿತಿಯಲ್ಲಿ ಒಬ್ಬಂಟಿ ಹೆಣ್ಣು ಕೆಲವೊಮ್ಮೆ ಎಡುವುತ್ತಾಳೆ. "
ಅವನ ಮಗಳು ತಲೆಯೆತ್ತಿ ಅವನನ್ನು ನೋಡಿದಳು. "ಬಾಬಾ, ನನ್ನ ಮುರಿದುಬಿದ್ದ ಮದುವೆಯ ಬಗ್ಗೆ ನೀನು ಅಂದುಕೊಂಡಿರುವದು ತಪ್ಪು. ಅದನ್ನು ಕೊನೆಗಾಣಿಸಿದ್ದು ನಾನು "
ಶಿ ಮಗಳನ್ನು ದಿಟ್ಟಿಸಿದ. ಅವಳ ನಿರ್ಭೀತ ಕಣ್ಣುಗಳಲ್ಲಿ ಸಮಾಧಾನ , ದೃಢ ನಿಶ್ಚಯಗಳಿತ್ತು. ಒಂದು ಕ್ಷಣಕ್ಕೆ ಅವಳು ಇನ್ನೇನೂ ಮಾತನಾಡದಿರಲಿ ಎಂದು ಅವನು ಮನಸ್ಸಿನಲ್ಲೇ ಬೇಡಿಕೊಂಡ. ಆದರೆ ಅವಳನ್ನು ತಡೆದು ನಿಲ್ಲಿಸಲು ಅವನು ಅಶಕ್ತನಾಗಿದ್ದ. "ಬಾಬಾ, ನಾವು ವಿಚ್ಚೇದನ ಪಡೆದಿದ್ದೆ ಇವನಿಗೋಸ್ಕರ. ತ್ಯಜಿಸಿರುವದು ನಾನೇ "
"ಯಾಕೆ ಮಗಳೇ ?"
"ವೈವಾಹಿಕ ಜೀವನದಲ್ಲಿ ತಪ್ಪುಗಳಾಗುತ್ತವೆ ಬಾಬಾ"
"ಒಂದು ರಾತ್ರಿ ಗಂಡ ಹೆಂಡತಿಯರಾಗಿ ಹಾಸಿಗೆಯಲ್ಲಿ ಮಲಗಿದರೆ ಮುಂದಿನ ನೂರು ದಿನಗಳ ಕಾಲ ಪರಸ್ಪರರು ಪ್ರೀತಿಯಲ್ಲಿ ಇರುತ್ತಾರಂತೆ. ನೀನು ಏಳು ವರ್ಷಗಳಿಂದ ಅವನ ಜೊತೆಗೆ ಸಂಸಾರ ಮಾಡಿದ್ದೆ. ನಿನ್ನ ಗಂಡನಿಗೆ ಅದು ಹೇಗೆ ನೀನು ಹೀಗೆ ಮಾಡಲು ಸಾಧ್ಯ. ? ನಿನ್ನ ಆ ವಿವಾಹೇತರ ಸಂಬಂಧದ ಹೊರತಾಗಿ ಅಂತಹ ಏನು ಸಮಸ್ಯೆಯಿತ್ತು ? " ಶಿ ದನಿ ಎತ್ತರಿಸಿ ಕೇಳಿದ. ತನ್ನ ಗಂಡನಿಗೆ ನಿಷ್ಠಳಾಗಿರದ ಮಗಳನ್ನು ತಾನು ಬೆಳೆಸಿಲ್ಲ.
"ಆಗಿ ಹೋಗಿರುವುದರ ಬಗ್ಗೆ ಈಗ ಮಾತನಾಡಿ ಪ್ರಯೋಜನವಿಲ್ಲ "
"ನಾನು ನಿನ್ನ ಅಪ್ಪ. ನನಗೆ ಅದನ್ನು ತಿಳಿಯುವ ಹಕ್ಕಿದೆ. " ಶಿ ಅವನಿಗೆ ಅರಿವಿಲ್ಲದೆಯೇ ಕೈಯನ್ನು ಟೇಬಲಿನ ಮೇಲೆ ಕುಟ್ಟಿದ.
" ನಮ್ಮ ಸಮಸ್ಯೆ ಎಂದರೆ ನಾನು ಯಾವತ್ತೂ ಮೌನಿಯಾಗಿದ್ದೆ. ನನ್ನ ಗಂಡನಿಗೆ ಬೇಕಾದಷ್ಟು ನಾನು ಮಾತನಾಡುತ್ತಿರಲಿಲ್ಲ. ನಾನು ಏನನ್ನೋ ಮುಚ್ಚಿಡಲು ಮೌನವಾಗಿರುತ್ತಿದ್ದೆ ಎನ್ನುವ ಸಂದೇಹ ಅವನಿಗಿತ್ತು. "
"ನೀನು ನಿನ್ನ ಪ್ರಿಯತಮನನ್ನು ಅವನಿಂದ ಮುಚ್ಚಿಟ್ಟಿದ್ದೆ "
ಅವಳು ಶಿ ಯ ಮಾತುಗಳನ್ನು ಅಲಕ್ಷಿಸಿದಳು.
"ಅವನು ಹೆಚ್ಚು ಹೆಚ್ಚು ಮಾತನಾಡಿದಂತೆಲ್ಲ ನಾನು ಹೆಚ್ಚು ಹೆಚ್ಚು ಮೌನಿಯಾಗುತ್ತಿದ್ದೆ. ನನಗೆ ಇನ್ನಷ್ಟು ಏಕಾಂತ ಬೇಕೆನಿಸುತ್ತಿತ್ತು. ನೀನೇ ಹೇಳಿದಂತೆ ನಾನು ಮಾತನಾಡುವದರಲ್ಲಿ ಅಂತಹ ಚತುರಳಲ್ಲ. "
"ಸುಳ್ಳು. ಈಗಷ್ಟೆ ಫೋನಿನಲ್ಲಿ ಮಾತನಾಡಿದೆಯಲ್ಲ. ಸ್ವಲ್ಪವೂ ಸಂಕೋಚವಿಲ್ಲದೆ ದೊಡ್ಡ ಧ್ವನಿಯಲ್ಲಿ ನಗುತ್ತ ಹಾದರಕ್ಕಿಳಿದವರಂತೆ. "
ಶಿ ಯ ಮಗಳು ಅವನ ಕಟು ಮಾತಿಗೆ ಅವಕ್ಕಾಗಿ ಅವನತ್ತ ಒಂದು ದೀರ್ಘ ನೋಟವನ್ನು ಬೀರಿದಳು. ನಂತರ ಅದೇ ಮೃದು ಧ್ವನಿಯಲ್ಲಿ "ಅದೇ ಬೇರೆ ಬಾಬಾ. ನಾವಿಬ್ಬರೂ ಇಂಗ್ಲಿಷ್ ನಲ್ಲಿ ಮಾತನಾಡುತ್ತೇವೆ. ಅದು ಸುಲಭ. ನಾನು ಚೈನೀಸ್ ನಲ್ಲಿ ಹಾಗೆ ಮಾತನಾಡಲಾರೆ "
"ಅದೆಂತ ಅಸಂಬಂದ್ಧ ವಿವರಣೆ "
"ಬಾಬಾ, ನೀನು ಭಾವನೆಗಳನ್ನೇ ತೋರ್ಪಡಿಸದೆ, ಎಲ್ಲವನ್ನು ಅದುಮಿಟ್ಟು ಒಂದು ಭಾಷೆಯೊಟ್ಟಿಗೆ ಬೆಳೆದರೆ ಮುಂದೆ ಇನ್ನೊಂದು ಭಾಷೆಯನ್ನು ಆರಿಸಿಕೊಂಡು ಅದರಲ್ಲಿ ಸಂಭಾಷಿಸುವದು ಸುಲಭ. ಹೊಸ ಭಾಷೆ ಹೊಸ ವ್ಯಕ್ತಿತ್ವವನ್ನು ಕೊಡುತ್ತದೆ. "
"ನಿನ್ನ ಈ ಅಕ್ರಮಕ್ಕೆ ನೀನು ನನ್ನನ್ನು ಮತ್ತು ನಿನ್ನ ಅಮ್ಮನನ್ನು ಹೊಣೆಗಾರರನ್ನಾಗಿಸುತ್ತಿರುವೆಯ?"
"ನಾನು ಹೇಳುತ್ತಿರುವದು ಹಾಗಲ್ಲ, ಬಾಬಾ"
"ಮತ್ತೇನು ? ನಾವು ನಿನ್ನನ್ನು ಚೈನೀಸ್ ಭಾಷೆಯಲ್ಲಿ ಸರಿಯಾಗಿ ಬೆಳಸಲಿಲ್ಲ. ಹಾಗಾಗಿ ನೀನು ದೊಡ್ಡವಳಾಗುತ್ತಲೇ ಇನ್ನೊಂದು ಭಾಷೆ ಮತ್ತು ಅದೇ ಭಾಷೆಯಲ್ಲಿ ಮಾತನಾಡುವ ಪ್ರಿಯಕರನನ್ನು ಆರಿಸಿಕೊಂಡೆ ಮತ್ತು ನಿನ್ನ ಗಂಡ ಚೈನೀಸ್ ಮಾತನಾಡುತ್ತಿದ್ದರಿಂದ ನಿನಗೆ ಅವನ ಜೊತೆಗೆ ಸಂಸಾರ ಮಾಡಲಾಗಲಿಲ್ಲ "
"ನೀನು ಮಾತನಾಡುತ್ತಿರಲಿಲ್ಲ. ಅಮ್ಮ ಮಾತನಾಡುತ್ತಿರಲಿಲ್ಲ . ನಿಮ್ಮಿಬ್ಬರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದವು. ನಾನು ಮೌನವಾಗಿರುವದನ್ನ ಕಲಿತೆ. "
"ನಿನ್ನಮ್ಮ ಮತ್ತು ನನ್ನ ನಡುವೆ ಯಾವುದೇ ಸಮಸ್ಯೆಗಳಿರಲಿಲ್ಲ ನಾವು ಮೌನದ ಮೊರೆಹೊಕ್ಕ ದಂಪತಿಗಳು ಅಷ್ಟೇ. "
"ಸುಳ್ಳು"
"ಸುಳ್ಳಲ್ಲ. ನಾನು ಸದಾಕಾಲ ಕೆಲಸದಲ್ಲಿ ಮುಳುಗಿರುತ್ತಿದ್ದೆ. ಅದು ನನ್ನ ತಪ್ಪು. ಒಪ್ಪಿಕೊಳ್ಳುತ್ತೇನೆ. ಆದರೆ ಒಂದು ಅರ್ಥ ಮಾಡಿಕೋ ನನ್ನ ಕೆಲಸವೇ ಹಾಗಿತ್ತು "
"ಬಾಬಾ " ಮಗಳು ಕಣ್ಣಿನಲ್ಲಿ ಕನಿಕರವನ್ನು ಸೂಸುತ್ತ ನುಡಿದಳು "ನೀನು ಹೇಳುತ್ತಿರುವದು ಸುಳ್ಳು ಎನ್ನುವದು ನಿನಗೂ ಗೊತ್ತು. ನೀನು ಯಾವತ್ತಿಗೂ ರಾಕೆಟ್ ಸೈ೦ಟಿಸ್ಟ್ ಆಗಿರಲಿಲ್ಲ. ಅದು ನಿನಗೂ ಗೊತ್ತಿತ್ತು. ಅಮ್ಮನಿಗೂ ಗೊತ್ತಿತ್ತು. ನನಗೂ ಗೊತ್ತಿತ್ತು. ಎಲ್ಲರಿಗೂ ಗೊತ್ತಿತ್ತು. "
ಶಿ ಅವನ ಮಗಳನ್ನು ಎವೆಯಿಕ್ಕದೆ ದಿಟ್ಟಿಸಿದ "ಏನು ಹೇಳುತ್ತಿದ್ದೀಯ ?"
"ಒಂದು ವಿಷಯ ಏನು ಗೊತ್ತೇ ಬಾಬಾ. ನೀನು ಏನು ಕೆಲಸ ಮಾಡುತ್ತಿದ್ದೆ ಎಂದು ನೀನು ಯಾವತ್ತೂ ಬಾಯಿ ಬಿಟ್ಟು ಹೇಳುತ್ತಿರಲಿಲ್ಲ. ಆದರೆ ಉಳಿದವರು ? ಅವರೆಲ್ಲರೂ ನಿನ್ನ ಬಗ್ಗೆ ಮಾತನಾಡುತ್ತಿದ್ದರು "
ಶಿ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಶಬ್ದಗಳಿಗೆ ತಡಕಾಡಿದ. ಅವನು ತುಟಿಗಳು ಅಸ್ತವ್ಯಸ್ತವಾಗಿ ಅಲುಗಾಡಿದವು. ಅವುಗಳಿಂದ ಯಾವುದೇ ಶಬ್ದ ಹೊರಬರಲಿಲ್ಲ.
ಅವನ ಮಗಳು ಹೇಳಿದಳು " ಬಾಬಾ ನನ್ನನ್ನು ಕ್ಷಮಿಸು , ನಿನಗೆ ನೋವು ಕೊಡಬೇಕು ಎನ್ನುವದು ನನ್ನ ಉದ್ದೇಶವಾಗಿರಲಿಲ್ಲ. "
ಶಿ ಜೋರಾಗಿ ಉಸಿರಾಡುತ್ತ ತನ್ನನ್ನು ತಾನು ಹತೋಟಿಯಲ್ಲಿಟ್ಟುಕೊಳ್ಳಲು ಯತ್ನಿಸಿದ. ಹಾಗೆ ನೋಡಿದರೆ ಅದು ಅವನಿಗೆ ಕಷ್ಟಕರವಲ್ಲ. ಜೀವನಪೂರ್ತಿ ಹೀಗೆಯೇ ಅಲ್ಲವೇ ಅವನು ದುರ್ಘಟನೆಯನ್ನು ಎಲ್ಲರಿಂದ ಮುಚ್ಚಿಟ್ಟು ಬದುಕಿದ್ದು. " ನೀನು ನನಗೆ ನೋವು ಮಾಡಲಿಲ್ಲ ಮಗಳೇ. ನೀನು ಹೇಳಿದಂತೆ ನೀನು ಕೇವಲ ಸತ್ಯವನ್ನು ನುಡಿಯುತ್ತಿದ್ದೆ. " ಅವನು ಮಾತು ಮುಗಿಸಿ ಎದ್ದು ನಿಂತ. ಭಾರವಾದ ಹೆಜ್ಜೆಯಿಡುತ್ತ ತನ್ನ ರೂಮಿನತ್ತ ಹೊರಟ ಅವನ ಹಿಂದೆ ಬಂದು ಮಗಳು ಹೇಳಿದಳು "ಬಾಬಾ ನಾಳೆ ನಿನಗೆ ಟೂರ್ ಹೋಗಲು ಟಿಕೆಟ್ ಬುಕ್ ಮಾಡುತ್ತೇನೆ "
ಶಿ ಪಾರ್ಕಿನಲ್ಲಿ ಕುಳಿತು ಮ್ಯಾಡಮ್ ಗೆ ವಿದಾಯ ಹೇಳಲು ಕಾಯತೊಡಗಿದ. ಟೂರ್ ಮುಗಿಸಿ ಬಂದ ತಕ್ಷಣ ಮರಳಿ ಹೋಗಲು ಟಿಕೆಟ್ ಕಾಯ್ದಿರಿಸುವಂತೆ ಮಗಳಿಗೆ ಹೇಳಿದ್ದ. ಅವನು ಪ್ರವಾಸ ಮುಗಿಸಿ ಬಂದ ಮೇಲೂ ಒಂದು ವಾರ ಸಮಯವಿರುತ್ತದೆ. ಆದರೆ ಇಲ್ಲಿಯವರೆಗೆ ಮ್ಯಾಡಮ್ ಗೆ ಅವನು ಹೇಳಿದ್ದ ಎಲ್ಲ ಸುಳ್ಳುಗಳ ಬಗ್ಗೆ ತಪ್ಪೊಪ್ಪಿಗೆ ಕೇಳಲು , ವಿವರಣೆ ಕೊಡಲು ಅವನಿಗೆ ಅಲ್ಲಿಯವರೆಗೆ ಕಾಯುವುದಕ್ಕೆ ಸಾಧ್ಯವಾಗಲಿಲ್ಲ. ಅವನು ರಾಕೆಟ್ ಸೈ೦ಟಿಸ್ಟ್ ಆಗಿರಲಿಲ್ಲ. ಅವನಿಗೆ ಅದರಲ್ಲಿ ತರಬೇತಿಯಾಗಿತ್ತು. ಅವನು ಕಚೇರಿಯಲ್ಲಿ ಕೆಲಸ ಮಾಡಿದ ಮೂವತ್ತೆಂಟು ವರ್ಷಗಳಲ್ಲಿ ಕೇವಲ ಮೊದಲ ಮೂರು ವರ್ಷ ಮಾತ್ರ ರಾಕೆಟ್ ಸೈ೦ಟಿಸ್ಟ್ ಆಗಿ ಕಳೆದಿದ್ದ. ತನ್ನ ಕೆಲಸದ ಬಗ್ಗೆ ಯಾರೊಟ್ಟಿಗೂ ಮಾತನಾಡದಿರುವದು ಒಬ್ಬ ಯುವ ಕೆಲಸಗಾರನಿಗೆ ಅತ್ಯಂತ ಕಷ್ಟಕರವಾದದ್ದು. ಒಬ್ಬ ಯುವ ರಾಕೆಟ್ ಸೈ೦ಟಿಸ್ಟ್ ಎಂದರೆ ಗೌರವ, ಹೆಮ್ಮೆ. ಇವನ್ನೆಲ್ಲ ಯಾರೊಟ್ಟಿಗಾದರೂ ಹಂಚಿಕೊಳ್ಳಬೇಕಿತ್ತು. ಆ ಯಾರೊಟ್ಟಿಗೂ ಆಗಿ ಬಂದವಳು ನಲವತ್ತೆರಡು ವರ್ಷಗಳ ಹಿಂದೆ ಸಿಕ್ಕ ಇಪ್ಪತ್ತೈದು ವರ್ಷದ ಹಾಜರಾತಿ ಲೆಕ್ಕ ಹಾಕುವ ಕಾರ್ಡ್ ಪಂಚ್ ಮಾಡುವ ಯುವತಿ. ಪಂಚರ್ಸ್ ಎಂದು ಅವರನ್ನು ಕರೆಯುತ್ತಿದ್ದರು. ಇವತ್ತು ಸಂಪೂರ್ಣ ಕಾರ್ಡ್ ಪಂಚ್ ಕೆಲಸ ಕಣ್ಮರೆಯಾಗಿ ಕ೦ಪ್ಯೂಟರಿನಲ್ಲಿ ಹಾಜರಾತಿ ಹಾಕಲಾಗುತ್ತದೆ. ಅಂತಹ ಅನೇಕ ಕೆಲಸಗಳು, ವಸ್ತುಗಳು ಕಾಲದ ಹೊಡೆತಕ್ಕೆ ಮಾಯವಾಗಿವೆ. ಆದರೆ ತನ್ನ ಜೀವನದಲ್ಲಿ ಕಣ್ಮರೆಯಾದ ಬೇರೆಲ್ಲವುಗಳಿಗಿಂತ ಅವನು ಅತೀ ಹೆಚ್ಚು ಜ್ಞಾಪಿಸಿಕೊಳ್ಳುತ್ತಿದ್ದುದು ಕಾರ್ಡ್ ಪಂಚ್ ಮಾಡುವವರನ್ನು.
"ಅವಳ ಹೆಸರು ಯಿಲಾನ್" ಶಿ ಜೋರಾಗಿ ಆಕಾಶದತ್ತ ತಲೆಯೆತ್ತಿ ಕೂಗಿದ.
ಮತ್ತು ಅದಕ್ಕೆ ಪ್ರತಿಧ್ವನಿಯಾಗಿ ಯಾರದೊ ಮಾತು ಕೇಳಿದಂತಾಯಿತು. ಮ್ಯಾಡಮ್ ನೆಲಕ್ಕೆ ಬಿದ್ದಿದ್ದ ಚೆ೦ದನೆಯ ಎಲೆಗಳನ್ನು ಆರಿಸಿ ಬುಟ್ಟಿಯಲ್ಲಿಟ್ಟುಕೊಂಡು ನಸುನಗುತ್ತ ಅವನತ್ತ ನಡೆದು ಬರುತ್ತಿದ್ದಳು. ಅವಳು ಆ ಎಲೆಗಳ ಗೊಂಚಲಿನಿಂದ ಒಂದನ್ನು ತೆಗೆದು ಶಿ ಯ ಕೈಗಿತ್ತಳು
"ಎಷ್ಟು ಅದ್ಭುತವಾಗಿದೆಯಲ್ಲ " ಅವಳು.
ಶಿ ಕೈಯಲ್ಲಿದ್ದ ಎಲೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದ. ಎಲೆಯ ದೇಹವನ್ನು ಭಾಗವಾಗಿಸಿದ್ದ ಸಣ್ಣ ಸಣ್ಣ ಗೀಟುಗಳು ಮತ್ತು ಎಲೆಯನ್ನು ತುಂಬಿದ್ದ ಹಳದಿ ಕಿತ್ತಳೆ ಮಿಶ್ರಿತ ಬಣ್ಣ. ಇದಕ್ಕೂ ಮೊದಲು ಎಂದಿಗೂ ತನ್ನ ಜೀವನದಲ್ಲಿ ಯಾವುದನ್ನೂ ಇಷ್ಟು ಸೂಕ್ಶ್ಮವಾಗಿ ತಾನು ಅವಲೋಕಿಸಿರಲಿಲ್ಲ ಎಂದೆನಿಸಿತು. ಅವನು ತನ್ನ ಜೀವನದಿಂದ ನವಿರಾದ ಅಂಚುಗಳನ್ನು, ಮಾಸಿದ ಬಣ್ಣಗಳನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದ. ಅವನು ಹೆಚ್ಚು ಹೆಚ್ಚು ಪ್ರಯತ್ನಿಸಿದಂತೆಲ್ಲ ಕಣ್ಣಿನ ಪೊರೆ ತೆಗೆದಾಗ ಕಾಣಿಸುವಂತೆ ಹರಿತವಾದ , ಗಾಢವಾದ ದಿಗಿಲುಗೊಳಿಸುವ ಆದರೆ ಆಕರ್ಷಿಸುವ ಚಿತ್ರಗಳು ಮಾತ್ರ ಕಣ್ಣೆದುರಿಗೆ ಸುಳಿಯತೊಡಗಿದವು.
"ನಾನು ನಿಮಗೆ ಏನೋ ಹೇಳಬೇಕು " ಶಿ ಹೇಳಿದ ಮತ್ತು ಮ್ಯಾಡಮ್ ಕಾತರದ ನಗು ಬೀರಿದಳು.
ಶಿ ಕುಳಿತಲ್ಲೇ ಮಿಸುಕಾಡಿದ. "ನಾನು ರಾಕೆಟ್ ಸೈ೦ಟಿಸ್ಟ ಅಲ್ಲ "
ಮ್ಯಾಡಮ್ ತಲೆಯಾಡಿಸಿದಳು. ಒಂದು ಕ್ಷಣ ಶಿ ಅವಳನ್ನು ನೋಡಿ ನಂತರ ದೃಷ್ಟಿಯನ್ನು ಬೇರೆ ಕಡೆ ಹಾಯಿಸಿದ. "ನಾನು ರಾಕೆಟ್ ಸೈ೦ಟಿಸ್ಟ ಆಗದೆ ಇರುವದಕ್ಕೆ ಕಾರಣ ಒಬ್ಬಳು ಹೆಂಗಸು. ನಾವು ಮಾಡಿದ ಒಂದೇ ಕೆಲಸವೆಂದರೆ ಅವಳ ಜೊತೆಗೆ ಮಾತನಾಡಿದ್ದು. ಮಾತನಾಡಿದ್ದರಲ್ಲಿ ಏನು ತಪ್ಪಿದೆ ಎಂದು ನಿಮಗೆ ಅನಿಸಬಹುದು. ಆದರೆ ಒಬ್ಬ ವಿವಾಹಿತ ಪುರುಷ ಅವಿವಾಹಿತ ಯುವತಿಯ ಜೊತೆಗೆ ಮಾತುಕತೆಯಾಡುವದಕ್ಕೆ ಒಪ್ಪಿಗೆಯಿರಲಿಲ್ಲ. ಅದು ನಮ್ಮ ಕಾಲದ ದುರಂತ. " ಹೌದು ದುರಂತ ಎನ್ನುವದೇ ಸರಿ. ಇವತ್ತಿನ ಹುಡುಗರು ಹೇಳುವಂತೆ ಅದು ಹುಚ್ಚುತನವಲ್ಲ. ದುರಂತ. "ಮಾತನಾಡದೆ ಇರುವದು ನಮ್ಮ ತರಭೇತಿಯ ಭಾಗವಾಗಿತ್ತು ಆದರೆ ನಾವು ಮಾತನಾಡಲು ಬಯಸುತ್ತಿದ್ದೆವು."
ಮಾತು ಎನ್ನುವದು ದಿನನಿತ್ಯದ ಬದುಕಿನ ಒಂದು ಅವಿಭಾಜ್ಯ ಭಾಗ. ಆದರೆ ಜನ ಸದಾ ಮಾತಾನಾಡಲು ಹಾತೊರಿಯುತ್ತಿರುತ್ತಾರೆ. ಶಿ ಮತ್ತು ಯುವತಿಯ ನಡುವೆ ಐದು ನಿಮಿಷದ ಕೆಲಸದ ವಿರಾಮ ಕಾಲದಲ್ಲಿ ಮಾತು ನಿರುಪದ್ರವಿಯಾಗಿ ಸಣ್ಣಗೆ ಶುರುವಾಯಿತು. ನಂತರ ಅವರು ಕೆಫೆಟೇರಿಯದಲ್ಲಿ ಊಟದ ವಿರಾಮದ ವೇಳೆಯಲ್ಲಿ ಮಾತನಾಡುತ್ತಿದ್ದರು. ಅವರು ತಮ್ಮ ಕನಸುಗಳ ಬಗ್ಗೆ ಮಾತನಾಡುತ್ತಿದ್ದರು. ಕಮ್ಯುನಿಸ್ಟ್ ತಾಯಿಗಾಗಿ ತಾವು ನಿರ್ಮಿಸುತ್ತಿರುವ ದೇಶದ ಮೊಟ್ಟಮೊದಲ ರಾಕೆಟ್ ನಿರ್ಮಾಣ ತಂಡದ ಭಾಗವಾಗಿ ಮುಂದೆ ತಾವು ಸಹ ಇತಿಹಾಸದ ಪುಟದಲ್ಲಿ ಸೇರಿ ಹೋಗುವದರ ಬಗ್ಗೆ ಹರಟುತ್ತಿದ್ದರು.
"ಒಮ್ಮೆ ಮಾತನಾಡಲು ಪ್ರಾರಂಭಿಸಿದರೆ ಮಾತು ತನ್ನಷ್ಟಕ್ಕೆ ತಾನೇ ರೂಪುಗೊಳ್ಳುತ್ತ ಹೋಗುತ್ತದೆ. ಆ ಮಾತು ಕೆಲಸದ ನಂತರ ಮನೆಗೆ ಹೋಗಿ ಹೆಂಡತಿಯ ಜೊತೆಗೆ ಮಾತನಾಡುವದಕ್ಕಿಂತ ಭಿನ್ನವಾಗಿತ್ತು. ನಾನು ಇಲ್ಲಿ ಯಾವುದನ್ನೂ ಮುಚ್ಚಿಡುವ ಅಗತ್ಯವಿರಲಿಲ್ಲ. ನಾವು ಪರಸ್ಪರರ ಜೀವನದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದೆವು . ಮಾತೆಂದರೆ ಕಡಿವಾಣವಿಲ್ಲದ ಕುದುರೆಯಂತೆ. ಅದು ಸೇರುವ ಗಮ್ಯವಾಗಲಿ, ವೇಗವಾಗಲಿ ನಮಗೆ ಅರಿವಿರುವದಿಲ್ಲ ಮತ್ತು ಅದರ ಊಹೆಯೂ ಇರುವದಿಲ್ಲ. ನಮ್ಮ ಮಾತುಕತೆಯೂ ಹಾಗೆ ಇತ್ತು. ನಾವು ಕೇವಲ ಹರಟುತ್ತಿದ್ದೆವು ಅಷ್ಟೇ. ಆದರೆ ಅದಕ್ಕೆ ಸಂಬಂಧವೆಂದು ಕರೆಯಲಾಯಿತು. ನಮ್ಮಿಬ್ಬರ ನಡುವೆ ಏನಿರದಿದ್ದರೂ ನಾವು ಪ್ರೀತಿಸುತ್ತಿದ್ದೇವೆ ಎಂದರು." ಶಿ ಮಾತು ನಿಲ್ಲಿಸಿದ. ಒಂದು ಕ್ಷಣ ಅವನಾಡಿದ ಮಾತಿನ ಬಗ್ಗೆ ಅವನಿಗೆ ಗೊಂದಲವಾದಂತಾಯಿತು. ಯಾವ ತರದ ಪ್ರೀತಿಯ ಬಗ್ಗೆ ಅವನು ಹೇಳುತ್ತಿರುವದು? ಖಂಡಿತವಾಗಿಯೂ ಅವರ ನಡುವೆ ಪ್ರೀತಿಯಿತ್ತು. ಆದರೆ ಅದು ಸಮಾಜ ನಿರ್ಧರಿಸಿದ ಪ್ರೀತಿಯಲ್ಲ. ಅವರಿಬ್ಬರ ನಡುವೆ ಸದಾ ಕಾಲ ಗೌರವದ ಅಂತರವಿತ್ತು. ಅಕಸ್ಮಾತಾಗಿಯೂ ಪರಸ್ಪರರ ಕೈ ಸಹ ಒಮ್ಮೆಯೂ ಸೋಕಿರಲಿಲ್ಲ. ಆದರೆ ಅವರ ನಡುವೆ ಒಂದು ಸೆಳೆತವಿತ್ತು. ಆ ಸೆಳೆತದ ಪ್ರವಾಹದಲ್ಲಿ ಅವರಿಬ್ಬರೂ ಯಾವತ್ತೂ ಮಾತನಾಡುತ್ತಿದ್ದರು. ಆ ಪ್ರವಾಹದಲ್ಲಿ ಅವರಿಬ್ಬರ ಮನಸ್ಸುಗಳು ಪರಸ್ಪರರನ್ನು ತಾಕುತ್ತಿದ್ದವು. ಅದಕ್ಕೆ ಪ್ರೀತಿ ಎನ್ನಬಹುದೇ? ನನ್ನ ಮಗಳ ದಾಂಪತ್ಯ ಮುರಿದಿರುವದು ಇದೇ ಕಾರಣಕ್ಕಾಗಿಯೇ? ಬೇರೊಬ್ಬನ ಜೊತೆಗೆ ಮಾತನ್ನು ಹಂಚಿಕೊಂಡಿರುವದಕ್ಕೆ ? ಶಿ ಕುಳಿತಲ್ಲೇ ಮಿಸುಕಾಡಿದ. ತಣ್ಣಗಿನ ವಾತಾವರಣದಲ್ಲೂ ಸಣ್ಣಗೆ ಬೆವರಿದ. ಅವರ ಮೇಲೆ ಪ್ರಣಯದ ಆರೋಪವನ್ನು ಹೊರಿಸಲಾಯಿತು. ಅವನು ಅದನ್ನು ಅಲ್ಲಗಳೆದ. ಅವಳನ್ನು ಯಾವುದೋ ಕುಗ್ರಾಮಕ್ಕೆ ಸಾಗಹಾಕಿದಾಗ ಅವಳ ಪರವಾಗಿ ಅವನು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ. ಅವಳೊಬ್ಬಳು ಕುಶಲ ಕಾರ್ಡ್ ಪಂಚ್ ಮಾಡುವವಳಾಗಿದ್ದಳು. ಕಾರ್ಡ್ ಪಂಚ್ ಮಾಡುವವರನ್ನು ಬದಲಿಸುವದು ಸುಲಭ. ಆದರೆ ಅವನ ಕೆಲಸ ಹಾಗಲ್ಲ. ಸೈ೦ಟಿಸ್ಟ್. ಅವನು ಬಹಿರಂಗವಾಗಿ ತನ್ನ ಅಪರಾಧವನ್ನು ಒಪ್ಪಿಕೊಂಡು ಕ್ಷಮಾಪಣೆ ಕೇಳಿದರೆ ಅವನನ್ನು ಕೆಲಸದಲ್ಲಿ ಮುಂದುವರೆಸುವುದಾಗಿ ತಿಳಿಸಲಾಯಿತು. ಅವನು ತಾನು ಮಾಡದ ತಪ್ಪನ್ನು ಒಪ್ಪಿಕೊಳ್ಳಲಿಲ್ಲ.
"ನನ್ನ ಮೂವತ್ತೆರಡನೆಯ ವಯಸ್ಸಿನಿಂದ ನಾನು ರಾಕೆಟ್ ಸೈ೦ಟಿಸ್ಟ್ ಆಗಿರಲಿಲ್ಲ. ಅವತ್ತಿನಿಂದ ನಾನು ಯಾವುದೇ ರಿಸರ್ಚ್ ಕೆಲಸದಲ್ಲಿ ತೊಡಗಲಿಲ್ಲ. ಆದರೆ ನನ್ನ ಕೆಲಸದ ಬಗ್ಗೆ ಎಲ್ಲವೂ ಗೌಪ್ಯ. ಹೀಗಾಗಿ ನನ್ನ ಹೆಂಡತಿಗೆ ಇವೆಲ್ಲ ತಿಳಿಯಲಿಲ್ಲ." ಅಥವಾ ಅವಳಿಗೆ ತಿಳಿದಿರಲಿಲ್ಲ ಎಂದು ಅವನು ನಿನ್ನೆ ರಾತ್ರಿಯವರೆಗೂ ಭಾವಿಸಿದ್ದ. ಅವನ ಬುದ್ಧಿಮತ್ತೆ ಮತ್ತು ತರಬೇತಿಗೆ ಹೋಲಿಸಿದರೆ ಅತ್ಯ೦ತ ಕೆಳದರ್ಜೆಯ ಕೆಲಸಕ್ಕೆ ಅವನನ್ನು ಹಾಕಲಾಯಿತು. ಅವನು ಚೇರ್ಮನ್ ಮಾವೋನ ಹುಟ್ಟಿದ ದಿನದಂದು ಆಫೀಸನ್ನು ಸಿಂಗರಿಸುತ್ತಿದ್ದ, ಕಚೇರಿಯಲ್ಲಿ ಫೈಲ್ ಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುತ್ತಿದ್ದ, ಸಂಜೆ ಒಂದು ಕಾಲದ ಅವನ ಸಹೋದ್ಯೋಗಿಗಳಿಂದ ಫೈಲ್ , ಪುಸ್ತಕ ಇತ್ಯಾದಿಗಳನ್ನು ಕಲೆಹಾಕುತ್ತಿದ್ದ, ಅವುಗಳ ಲೆಕ್ಕ ಬರೆಯಿತ್ತಿದ್ದ, ಗಾರ್ಡಗಳ ಸಮಕ್ಷಮದಲ್ಲಿ ಫೈಲುಗಳನ್ನು ಆಫೀಸಿನ ಲಾಕರಿನಲ್ಲಿ ಜೋಡಿಸಿಡುತ್ತಿದ್ದ. ಮನೆಗೆ ಹೋದಾಗ ಹೆಂಡತಿಯ ಎದುರಿನಲ್ಲಿ ಪ್ರತಿಷ್ಠಿತ ಕೆಲಸದಲ್ಲಿರುವಂತೆ, ಸದಾ ಕಾಲ ಕೆಲಸದ ಭಾರ ಹೊತ್ತವನಂತೆ ನಟಿಸುವ ರಾಕೆಟ್ ಸೈ೦ಟಿಸ್ಟ್ ಆಗಿದ್ದ. ಅವನ ಹೆಂಡತಿಯ ಕಣ್ಣುಗಳು ಪ್ರಶ್ನೆಗಳನ್ನು ಸೂಸಿದಾಗ ಅವನು ತನ್ನ ದೃಷ್ಟಿಯನ್ನು ಬೇರೆಡೆ ಹಾಯಿಸುತ್ತಿದ್ದ. ಒಂದು ದಿನ ಅವಳ ಕಣ್ಣುಗಳಲ್ಲಿ ಪ್ರಶ್ನೆಗಳು ಶಾಶ್ವತವಾಗಿ ಬತ್ತಿಹೋದವು. ಅವನು ತನ್ನ ಮಗಳು ಮೌನಿಯಾಗಿ ತನ್ನ ಹೆಂಡತಿಯಂತೆ ತನ್ನನ್ನು ಅರಿತವಳಾಗಿ , ಒಳ್ಳೆಯ ಹುಡುಗಿಯಾಗಿ ಬೆಳೆಯುದಕ್ಕೆ ಸಾಕ್ಷಿಯಾದ. ಅವನ ವೃತ್ತಿ ಜೀವನದಲ್ಲಿ ಅವನು ಮೂವತ್ತೆರಡು ಗಾರ್ಡ್ ಗಳ ಜೊತೆಗೆ ಕೆಲಸ ಮಾಡಿದ್ದ. ಸಮವಸ್ತ್ರ ತೊಟ್ಟ ಯುವಕರು, ಅವರ ಬೆಲ್ಟಿನಲ್ಲಿನ ಒರೆ ಪಿಸ್ತೂಲಿಲ್ಲದೆ ಖಾಲಿಯಾಗಿರುತ್ತಿತ್ತು ಆದರೆ ರೈಫಲ್ ನ ತುದಿಯಲ್ಲಿರುವ ಬಾನೆಟ್ ಚೂಪಾಗಿ , ಹರಿತವಾಗಿತ್ತು ಮತ್ತು ಸದಾಕಾಲ ಚುಚ್ಚುವಂತೆ ಭಾಸವಾಗುತ್ತಿತ್ತು.
ಆದರೆ ಆವತ್ತು ಅವನಿಗೆ ಬೇರೆ ಆಯ್ಕೆಗಳಿರಲಿಲ್ಲ. ಅವನು ತೆಗೆದುಕೊಂಡ ನಿರ್ಧಾರ ಅವನ ಹೆಂಡತಿ ಮತ್ತು ಆ ಯುವತಿಗೆ ನಿಷ್ಠನಾಗಿಯೇ ಅಲ್ಲವೇ? ಕೇವಲ ರಾಕೆಟ್ ಸೈ೦ಟಿಸ್ಟ್ ಆಗಿ ಸಮಾಜದಲ್ಲಿ ಅತ್ಯಂತ ಪ್ರತಿಷ್ಠೆಯಿಂದ ಬದುಕಬೇಕು ಎನ್ನುವ ಸ್ವಾರ್ಥಕ್ಕಾಗಿ ತನ್ನದಲ್ಲದ ತಪ್ಪನ್ನು ಒಪ್ಪಿಕೊಂಡು ತನ್ನ ಹೆಂಡತಿಯಂತ ಒಳ್ಳೆಯ ಜೀವಕ್ಕೆ ಹೇಗೆ ನೋವನ್ನುಂಟು ಮಾಡಲಿ ? ಅಥವಾ ತನ್ನ ವೃತ್ತಿ, ಹೆಂಡತಿ , ಪುಟ್ಟ ಮಗಳು ಎಲ್ಲವನ್ನು ಬಿಟ್ಟು ಇನ್ನೊಬ್ಬಳ ಜೊತೆಗೆ ತಾನು ಬಯಸಿಲ್ಲದ ಜೀವನವನ್ನು ಹೇಗೆ ಕಳೆಯಲಿ? " ನಾವು ಮಾಡುವ ತ್ಯಾಗ ನಮ್ಮ ಬದುಕಿಗೆ ಅರ್ಥವನ್ನು ಕೊಡುತ್ತದೆ " ಶಿ ಅವನ ತರಬೇತಿಯಲ್ಲಿ ಹೇಳಿದ್ದ ವಾಕ್ಯವನ್ನು ಮತ್ತೆ ಮತ್ತೆ ಪುನರುಚ್ಚಿಸಿದ. ಅತ್ತಿತ್ತ ನೋಡಿದ. ತಲೆಯನ್ನು ಕೊಡವಿದ. ಬಹುಶ: ಪರಕೀಯ ಸ್ಥಳದಲ್ಲಿ ಪರಕೀಯವಾದ ವಿಚಾರಗಳು ಹೊಳೆಯುತ್ತದೆ. ಈ ವಯಸ್ಸಿನಲ್ಲಿ ನಡೆದು ಹೋದುದರ ಕುರಿತು ಪದೇ ಪದೇ ವಿಚಾರ ಮಾಡುವದು ಒಳ್ಳೆಯದಲ್ಲ. ಒಬ್ಬ ಒಳ್ಳೆಯ ವ್ಯಕ್ತಿ ವರ್ತಮಾನದಲ್ಲಿ ಬದುಕುತ್ತಾನೆ.
ಪಕ್ಕದಲ್ಲಿ ಕುಳಿತಿರುವ ಅವನ ಸ್ನೇಹಿತೆ ಮ್ಯಾಡಮ್ ಬಂಗಾರದ ಬಣ್ಣದ ಎಲೆಯನ್ನು ಸೂರ್ಯನ ಕಿರಣಗಳಿಗೆ ಅಡ್ಡಲಾಗಿ ಹಿಡಿದು ಅದು ಪ್ರತಿಫಲಿಸುವ ಬಣ್ಣವನ್ನು ಅವನಿಗೆ ತೋರಿಸುತ್ತಿದ್ದಳು.
ಲೇಖಕರ ಪರಿಚಯ
ಬೀಜಿಂಗ್ ನಲ್ಲಿ ಹುಟ್ಟಿ ಬೆಳೆದ ಯಿಯುನ್ ಲಿ ಓದಿದ್ದು ಪೀಕಿಂಗ್ ಯೂನಿವರ್ಸಿಟಿಯಲ್ಲಿ. ೧೯೯೬ ರಲ್ಲಿ ಅಮೆರಿಕಾಗೆ ಮೆಡಿಕಲ್ ವ್ಯಾಸಂಗ ಮಾಡಲು ಬಂದ ಯಿಯುನ್ ಲಿ ಅದಾದ ಎರಡು ವರ್ಷಗಳ ನಂತರ ಬರವಣಿಗೆ ಪ್ರಾರಂಭಿಸಿದಳು. ಪ್ರಸ್ತುತ ಕತೆಯನ್ನು ಫ್ರಾಂಕ್ ಓ’ಕಾನರ್ ಇಂಟರನ್ಯಾಶನ್ ಅವಾರ್ಡ್ ಮತ್ತು ಹೆಮಿ೦ಗ್ವೆ ಪ್ರಶಸ್ತಿ ಪುರಸ್ಕೃತ ” A THOUSANDS YEARS OF GOOD PRAYER ” ಎನ್ನುವ ಸಣ್ಣ ಕತಾ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.
No comments:
Post a Comment