Monday, June 17, 2013

ಕೇಂದ್ರ


ಈ ಘಟನೆಯನ್ನು ನಾನು ಮರೆತು ಹೋಗಿದ್ದೇನೆ ಎಂದು ಅಂದುಕೊಂಡಿದ್ದರೂ , ಅವಾಗಾವಾಗ ಇದು ನನ್ನ ಮನಸ್ಸಿನಲ್ಲಿ ಹಾದು ಬರುತ್ತಿತ್ತು. ಈ ಘಟನೆಯನ್ನ ನಿಮಗೆ ಹೇಳುವುದೋ ಬೇಡವೋ ಎನ್ನುವುದರ ಬಗ್ಗೆ ನನ್ನೊಳಗೆ ಹಲವಾರು ಬಾರಿ ವಾದ ಪ್ರತಿವಾದ ವಿವಾದ ಮುಂತಾದವುಗಳನ್ನು ಆಗಿ ಕೊನೆಗೆ ಈ ಘಟನೆಯನ್ನು ನಿಮ್ಮ ಮುಂದಿಡಬೇಕೆಂದು ನಿರ್ಧರಿಸಿ ಹೇಳಹೊರಟಿದ್ದೇನೆ.
ಇಷ್ಟಕ್ಕೂ ಇದು ನನಗೆ ನೇರವಾಗಿ ಸಂಬಂಧಪಟ್ಟ ಘಟನೆಯಲ್ಲ . ಇದು ವಿಠೋಬಾ ನನಗೆ ಹೇಳಿದ ಘಟನೆ . ಹಾಗೆ ನೋಡಿದರೆ ಇದು ಅವನ ಜೀವನದಲ್ಲಿ ನಡೆದ ಘಟನೆ. ಹಾಗಾಗಿ ಇದು ನನ್ನ  ಜೀವನದಲ್ಲಿ ನೇರವಾಗಿ ನಡೆದ ಘಟನೆ ಅಲ್ಲ . ವಿಠೋಬಾ ಇವತ್ತು ಇಲ್ಲಿ ಎಲ್ಲೂ ಇಲ್ಲದುದರಿಂದಲೂ ಅಥವಾ ನೀವು ಅವನನ್ನು ಭೇಟಿಯಾಗುವ ಸಂಭವ ಇಲ್ಲದುದರಿಂದಲೂ ನಾನು ನಿಮಗೆ ಈ ಘಟನೆಯನ್ನು ಹೇಳುತ್ತಿದ್ದೇನೆ . ಈ ಮೂಲಕವಾದರೂ ನನ್ನ ಕಾಡುತಿದ್ದ ಘಟನೆಯನ್ನು ನಿಮಗೆ ವರ್ಗಾಯಿಸಿದಂತೆ ಆಗುತ್ತದೆ . ಮುಂದೆ ನೀವು ಸಹ ಯಾರಿಗಾದರು ಈ ಘಟನೆಯನ್ನ ಹೇಳಬೇಕೆಂದು ಕೊಂಡರೆ ಹೇಳಬಹುದು.
ನಾನು ಕೆಲಸ ಮಾಡುತ್ತಿದ್ದುದು ವೈಟ್ ಫೀಲ್ಡ ಭಾಗದ ಐ ಟಿ ಪಿ ಎಲ್ ನ ಹಿಂಬದಿಯಲ್ಲಿರುವ ಸಿಂಫೊನಿ ಟೆಲೆಕಾದಲ್ಲಿ . ಘಟನೆಯನ್ನ ನನಗೆ ಹೇಳಿದ ಜಾಗ ಅಷ್ಟು ಮುಖ್ಯವಲ್ಲದಿದ್ದರೂ , ಹೇಳಬೇಕೆಂದು ಅನ್ನಿಸಿದ್ದರಿಂದ ಹೇಳುತ್ತಿದ್ದೇನೆ. ಐ ಟಿ ಪಿ ಎಲ್ ನ ಹಿಂಭಾಗದ ಎರಡನೆ ಗೇಟ್ ನ ಎದುರಿಗಿರುವ ಬೃಹತ್ ಕಟ್ಟಡ ಸಮುಚ್ಛಯ ಸಿಂಫೊನಿ-ಟೆಲೆಕಾ ಕಂಪನಿಗೆ ಸೇರಿದ್ದು. ಬೃಹದಾಕಾರದ ೩ ಕಟ್ಟಡಗಳನ್ನು ಒಂದಕ್ಕೊಂದು ಸೇರಿಸಿ , ಹೊರಭಾಗದಿಂದ ನೋಡಿದರೆ ಏಕ ಕಟ್ಟಡದಂತೆ ಕಾಣಸಿಗುವ ಸಿಂಫೊನಿ-ಟೆಲೆಕಾದ ಈ ಸಮುಚ್ಚಯದ ಒಳ ಹೊಕ್ಕರೆ ಮಾತ್ರ ೩ ಕಟ್ಟಡಗಳು ಇರುವದು ಗೊತ್ತಾಗುತ್ತದೆ . ಈ ಮೂರು ಕಟ್ಟಡಗಳಿಗೆ ೩ ಬೇರೆ ಬೇರೆ ಲಿಫ್ಟ್ ಗಳು ಸದಾಕಾಲ ಜನರನ್ನು ಹೊತ್ತೊಯ್ಯುತ್ತಲೂ , ಕೆಳಗಿಳಿಸುತ್ತಲೂ ಮಾಡುತ್ತ ಇರುತ್ತಿದ್ದವು . ೩ ಕಟ್ಟಡಗಳು ಒಂದಕ್ಕೊಂದು ಒಳಭಾಗದಲ್ಲಿ ಸೇರಿದ್ದರಿಂದ , ಪ್ರತಿ ಮಹಡಿಯ ಜನರೂ ಇನ್ನೊಂದು ಮಹಡಿಯ ಲಿಫ್ಟ್ ಉಪಯೋಗಿಸುತ್ತಿದ್ದುದು ಸಾಮಾನ್ಯವಾಗಿತ್ತು . ಆದರೆ ಈ ಮೂರು ಲಿಫ್ಟ್ ಹೊರತು ಪಡಿಸಿದರೆ ಇನ್ನೊಂದು ಬೃಹದಾಕಾರದ ಲಿಫ್ಟನ್ನು ಸರ್ವೀಸ್ ಲಿಫ್ಟ್ ಎಂದು ಉಪಯೋಗಿಸುತ್ತಿದ್ದರು . ಕ್ಷಣ ಕ್ಷಣಕ್ಕೂ ಎಗರೆಗರಿ ಬೀಳುವಂತೆ ಭಾಸವಾಗುವ ಈ ಲಿಫ್ಟ್ನಲ್ಲಿ ಎಲ್ಲ ಮಹಡಿಗಳಿಗೂ ಬೇಕಾದ , ಸರಕುಗಳನ್ನು , ನೀರಿನ ಬಾಟಲ್ಗಳ , ಕ್ಯಾಂಟೀನ್ ಗೆ ಬೇಕಾದ ಸರಂಜಾಮುಗಳ ಒಯ್ಯಲು ,ಬಳಸುತ್ತಿದ್ದರು ಇದೇ ಕಾರಣದಿಂದ ಸದಾ ಕಾಲ ತೆಳ್ಳನೆಯ ಧೂಳುಮಯವಾದ ಈ ಲಿಫ್ಟ್ನಲ್ಲಿ ಉದ್ಯೋಗಿಗಳು ಓಡಾಡುತ್ತಿದ್ದುದು ವಿರಳ. ಲಿಫ್ಟ್ನಲ್ಲಿ ಜನರು ಇರುತ್ತಿದ್ದುದು ಕಡಿಮೆ ಎಂದೋ ಅಥವಾ ಬೇರೆಲ್ಲ ಲಿಫ಼್ಟ್ಗಳಿಗಿಂತ ದೊಡ್ಡದಾದ ವಿಶಾಲ ಲಿಫ್ಟ್ ಎಂದೋ ಒಟ್ಟಿನಲ್ಲಿ ನನಗೆ ಈ ಸರ್ವೀಸ್ ಲಿಫ್ಟ್ ಇಷ್ಟವಾಗುತ್ತಿತ್ತು ಅಂತೇಲೆ ನಾನು ದಿನವೂ ಬೆಳಿಗ್ಗೆ ಉಪಯೋಗಿಸುತ್ತಿದ್ದು ಇದೇ ಲಿಫ್ಟನ್ನು . ಬೆಳಗಿನ ಜಾಮದಲ್ಲಿ ನನ್ನೊಟ್ಟಿಗೆ ಈ ಲಿಫ್ಟ್ಗೆ ,ಬರುತ್ತಿದ್ದುದು ಕ್ಯಾಂಟಿನ್ನಲ್ಲಿ ಚಹಾ ಅಂಗಡಿ ಇಟ್ಟಿದ್ದ ವಿಠೋಬಾ . ಸಿಂಫೊನಿ-ಟೆಲೆಕಾದ ಕ್ಯಾಂಟಿನಲ್ಲಿ ವಿಠೋಬಾ ಒಂದು ಸಣ್ಣ ಚಹಾ ಅಂಗಡಿ ಹಾಕಿದ್ದ. ಪ್ರತಿ ತಿಂಗಳು ಕಂಪೆನಿಯಿಂದ ಇಂತಿಷ್ಟು ಎಂದು ಹಣ ಪಡೆದು ಎಲ್ಲ ಉದ್ಯೋಗಿಗಳಿಗೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಚಹಾ ಕೊಡುತ್ತಿದ್ದ ವಿಠೋಬಾ ಪ್ರತಿ ದಿನವೂ ನನ್ನ ಜೊತೆಯಲ್ಲಿಯೇ ಸರ್ವಿಸ್ ಲಿಫ್ಟ್ನಲ್ಲಿ , ಅವನ ಚಹಾ , ಪುಡಿ ಹಾಲು , ಕಾಫಿ ಪುಡಿ ಮುಂತಾದ ಚೀಲ ಹಿಡಿದು ಬರುತ್ತಿದ್ದ. ನಾನು ನಾಲ್ಕನೇ ಫ್ಲೋರ್ನಲ್ಲಿ ಇಳಿದು ನನ್ನ ಡೆಸ್ಕನತ್ತ ,ಹೋಗಿ , ಅವತ್ತಿನ ಕೆಲಸಗಳ ಬಗ್ಗೆ ಸಣ್ಣಗೆ ಕಣ್ಣು ಹಾಯಿಸಿ ಕ್ಯಾಂಟಿನ್ ಗೆ ಬರುವಷ್ಟರಲ್ಲಿ ವಿಠೋಬಾ ಬಿಸ್ಸಿ ಬಿಸ್ಸಿ ಚಹಾ ಕುದಿಸುತ್ತಾ ಇರುತ್ತಿದ್ದ. ಮುಂಜಾನೆಯಾದ್ದರಿಂದ ಹಾಗೂ ಆಫೀಸು ಪ್ರಾರಂಭವಾಗುವದಕ್ಕೆ ಇನ್ನು ಸ್ವಲ್ಪ ತಡವಿರುವದರಿಂದಲೂ , ನಾನು ಚಹಾ ಕುಡಿಯುತ್ತ ವಿಠೋಬಾನ ಜೊತೆಗೆ ಸ್ವಲ್ಪ ಹೊತ್ತು ಮಾತನಾಡುತ್ತ ನಿಂತಿರುತ್ತಿದ್ದೆ. ಇದು ಪ್ರತಿ ದಿನದ ಅಭ್ಯಾಸ.
ಇವತ್ತು ನಾನು ಹೇಳ ಹೊರಟಿರುವದು, ನಮಸ್ಕಾರ ಸಾರ್ ಎಂದು ಪ್ರತಿ ದಿನವೂ ಹೇಳುವ , ಚಹಾ ಮಾರುವ ಈ ವಿಠೋಬಾನ ಕತೆಯನ್ನೇ. ಇದನ್ನು ನೀವು ಕತೆಯೆಂದು , ಪ್ರಬಂಧವೆಂದು , ಲೇಖನವೆಂದು , ಯಾವುದಕ್ಕೂ ಬಾರದುದೆಂದು ಅಥವಾ ನಾನು ಹೇಳುವ ಹಾಗೆ ಘಟನೆಯೆಂದು ಒಟ್ಟಿನಲ್ಲಿ ಏನಾದರು ಅಂದು ಕೊಳ್ಳಬಹುದು.
ಅವತ್ತು ಚಹಾ ಸೇವಿಸುತ್ತಿರುವಾಗ , ಯಾವತ್ತಿಗೂ ನನ್ನೊಟ್ಟಿಗೆ ನಗುನಗುತ್ತ ಮಾತನಾಡುತ್ತಿರುವ ವಿಠೋಬಾ ಮಂಕಾಗಿ ಇದ್ದಾನೆ ಎನ್ನುವ ಭಾವ ನನಗೆ ಬೆಳೆಯತೊಡಗಿತು . ಇದು ಒಂದೆರಡು ದಿನದ ಮಾತಲ್ಲ , ಕಳೆದ ಹಲವಾರು ದಿನಗಳಿಂದ ವಿಠೋಬಾ ಅನ್ಯಮನಸ್ಕನಾಗೊಯೋ , ಹಾಂ ಹೂಂ ಎಂದೋ ಮಾತನಾಡುತ್ತ , ಯಾವುದೋ ಒಂದು ಚಿಂತೆಯಲ್ಲಿರುವಂತೆ ಭಾಸವಾದ್ದರಿಂದ , ನಾನು ಇವತ್ತು ವಿಠೋಬಾನನ್ನು ಕೇಳಲೇ ಬೇಕೆಂದು ಅಂದು ಕೊಳ್ಳುತ್ತಿರುವಾಗಲೇ , ವಿಠೋಬಾ " ಸಾರ್ ಎಂದು ದೈನ್ಯವಾಗಿ ಕರೆದ. . ವಿಠೋಬಾ ಯಾವುದೋ ವಿಷಯವನ್ನು ಮಾತನಾಡಬೇಕೆಂದು ಬಯಸುತ್ತಿದ್ದಾನೆ ಎನ್ನುವ ಅನುಮಾನ ಗಟ್ಟಿಯಾಗತೊಡಗಿತು . " ಬಾರೋ ಹೊರಗೆ ಹೋಗಿ ಬರೋಣ ಎಂದೆ "
ವಿಠೋಬಾ ಚಹಾ ಅಂಗಡಿಯನ್ನು ನೋಡಿಕೊಳ್ಳಲು ಅವನ ಸಹಾಯಕನಿಗೆ ಹೇಳಿ ನನ್ನೊಡನೆ ಹೊರಟ .
ಮುಂದೆ ನಡೆದ ಮಾತುಕತೆಯನ್ನ ವಿಠೋಬಾ ಹೇಳಿದ ಹಾಗೆ ನಿಮ್ಮ ಮುಂದೆ ಇಡುತ್ತಿದ್ದೇನೆ .
******************************************************************************************
ಸ್ವಪ್ನಗಳು ಸಾರ್ ! , ಕಾಡುವಂತೆ ಮತ್ತೆ ಮತ್ತೆ ಬೀಳುವ ಪುನರಾವರ್ತನೆಗೊಳ್ಳುವ ಸ್ವಪ್ನಗಳು. ಕಣ್ಣು ಮುಚ್ಚಿದರೆ ರಾತ್ರಿಯೆಲ್ಲ ಕಣ್ಣು ತೆರೆದೇ ಇರುವಂತೆ ಮಾಡಿಸುವ , ಮಾಡುವ ಸ್ವಪ್ನಗಳು.
"ಯಾಕಪ್ಪ ? ಯಾರಾದ್ರು ಹುಡುಗಿ ಬರ್ತಾ ಇದ್ದಳೊ? " ನಾನು ಇನ್ನು ವಿಷಯದ ಗಂಭೀರತೆಗೆ ಇಳಿದಿರಲಿಲ್ಲ .
ಸಿಂಪೋನಿ_ ಟೆಲೆಕಾದ ಈ ಗಾರ್ಡನ್ ನಿಂದ ನೋಡಿದರೆ ಐ ಟಿ ಪಿ ಎಲ್ ನ ಒಳಗೂ ಹೊರಗೂ ಜನ ಓಡಾಡುವದು ಕಾಣಿಸುತ್ತಿತ್ತು . ನನ್ನಂತ , ವಿಠೋಬಾನಂತಹ ಜನ. ಎತ್ತರದೆತ್ತರದ ಕಟ್ಟಡಗಳು ಗಾಜಿನ ಹೊರಮೈನಲ್ಲಿ , ಪಾರದರ್ಶಕ್ವಾಗಿಯೂ , ಅಪಾರದರ್ಶಕವಾಗಿಯೂ ಕಾಣಿಸುತ್ತ ಒಳಗೆ ದುಡಿಯುವ ಸಾವಿರಾರು ಕೈಗಳನ್ನು ಅವುಗಳ ದೇಹಗಳನ್ನು ಯಂತ್ರಗಳನ್ನ , ಯಂತ್ರಗಳoತವರನ್ನ ಅಸ್ಪಷ್ಟವಾಗಿ ತೋರಿಸುತ್ತ , ಮುಚ್ಚಿಡುತ್ತ ನಿಂತಿದ್ದವು.
ಸ್ವಪ್ನ ಹೆಣ್ಣಿನದಲ್ಲ ಸಾರ್ , ಸ್ವಪ್ನ ಯಾವುದರದ್ದು ಅಲ್ಲ. ಅಸ್ಪಷ್ಟ.
ಬಿ ಎ ಪದವಿಯನ್ನು ಅರ್ಧಕ್ಕೆ ಬಿಟ್ಟು , ನಿಗೂಢವಾಗಿ ಖೂನಿಯಾಗಿ ಹೋದ ಅಪ್ಪನ ಶವದ ಎದುರು ಕಣ್ಣೀರು ಸುರಿಸಲು ಹೆದರಿ , ಜೀವಭಯದಿಂದ ಮನೆಯಿಂದ ಬೆಂಗಳೂರಿಗೆ ಓಡಿ ಬಂದ ದಿನವೂ ಇದೇ ಸ್ವಪ್ನ ಸಾರ್ .
ಸ್ವಪ್ನ ! ಮತ್ತೆ ಮತ್ತೆ ಪುನರಾವರ್ತನೆಗೊಳ್ಳುವ ಸ್ವಪ್ನ !
ಆಟ !
ಸ್ವಪ್ನದಲ್ಲಿ ಆಟ !
ಮನುಷ್ಯರು ಮನುಷ್ಯರನ್ನು ಆಡುವ ಆಟ !
ದೊಡ್ಡದೊಂದು ವರ್ತುಲ , ಅದರೊಳಗೊಂದು ಚಿಕ್ಕ ವರ್ತುಲ , ಅದರೊಳಗೆ ಇನ್ನು ಚಿಕ್ಕದು ! ಒ0ದಕ್ಕಿಂತ ಒಂದು ಸಣ್ಣದಾಗುತ್ತ ಹೋಗಿ , ಒಂದನ್ನು ಇನ್ನೊಂದು ಆವರಿಸಿ ನುಂಗುವಂತೆ ತಬ್ಬಿ ನಿಂತ ವರ್ತುಲಗಳು ! ಎಲ್ಲಕ್ಕಿಂತ ಹೊರಗಿನ ವರ್ತುಲ ಭೂತಕಾಲವಾಗಿಯೂ , ಇನ್ನೊಂದು ಭವಿಷ್ಯವಾಗಿಯೂ , ಸಣ್ಣದಾದ ವರ್ತುಲ ವರ್ತಮಾನವಾಗಿಯೂ ಗೋಚರಿಸುತ್ತಿದ್ದವು ! ದಟ್ಟ ಭೂತ ಎಲ್ಲವನ್ನು ಆವರಿಸಿ ನಿಂತಿತ್ತು ! ವರ್ತುಲಗಳ ಚಕ್ರಕ್ಕೆ ಹೊಡೆಯುವ ಆಟ ! ನಾನು ಗುರಿಕಾರನಾಗಿಯೂ , ನಿಗೂಢವಾಗಿ ಖೂನಿಯಾಗಿ ಹೋದ ಅಪ್ಪ , ಉಬ್ಬಸ ಖಾಯಿಲೆಯಿಂದ ನನ್ನ ಬಾಲ್ಯದಲ್ಲೇ ತೀರಿಕೊಂಡ ಅಮ್ಮ, ಓಡಿಹೋದ ತಂಗಿ , ಇವರೆಲ್ಲ ಚಕ್ರಕ್ಕೆ ಹೊಡೆಯುವ ಬಾಣಗಳಾಗಿಯೂ ನಿಂತಿದ್ದವು ,!
ಜನ ! ಸುತ್ತ ಕಾತುರದ ಜನ !
ಅವರಿಗೆ ಆಟ ! ಮೋಜಿನ ಆಟ ! ನನ್ನ ಪ್ರತಿ ಗುರಿ , ವರ್ತಮಾನವನ್ನು , ಭವಿಷ್ಯವನ್ನು ತಪ್ಪಿ ಭೂತವನ್ನು , ಹೊಕ್ಕು , ಬಾಣಗಳಾದ - ಉಬ್ಬಸ ಖಾಯಿಲೆಯಿಂದ ನನ್ನ ಬಾಲ್ಯದಲ್ಲೇ ತೀರಿಕೊಂಡ ಅಮ್ಮ , ಕೊಲೆಯಾಗಿ ಹೋದ ಅಪ್ಪ , ಹೇರೂರು ಸಾಬಿಯೊಟ್ಟಿಗೆ ಓಡಿಹೋದ ತಂಗಿ , ಇವರೆಲ್ಲ ಸಿಕ್ಕಿ ಒದ್ದಾಡುತ್ತ , ಅವರಿಂದ ಸಣ್ಣಗೆ ಸೆಲೆಯೊಡೆದ ರಕ್ತ ಹನಿ ಹನಿಯಾಗಿ ನನ್ನ ವರ್ತಮಾನವನ್ನು , ಭವಿಷ್ಯವನ್ನು ಆವರಿಸಿದ್ದ್ಂತೆ , !
ಸ್ವಪ್ನದಲ್ಲಿ ನಾನು ಸೋಲುತ್ತಿದ್ದೆ ! ಸುತ್ತಲಿನ ಜನ ಕೇಕೆ ಹಾಕಿ ನಗುತ್ತಿದ್ದರು
ಸೋಲುವ ಆಟ ! ಸೋಲಲೆಂದೆ ಆಟ !
ಖಾಲಿಯಾದ ಬಾಣ- ಕೊಲೆಯಾಗಿದ ಅಪ್ಪ , ಉಬ್ಬಸ ಖಾಯಿಲೆಯಿಂದ ನನ್ನ ಬಾಲ್ಯದಲ್ಲೇ ತೀರಿಕೊಂಡ ಅಮ್ಮ, , ಓಡಿಹೋದ ತಂಗಿ , ! ದಟ್ಟವಾಗುತ್ತಿದ್ದ ಭೂತ !
ಕೊನೆಗೆ ನಾನೇ ಬಾಣವಾದೆ !
ಜನ ಅಟ್ಟಹಾಸ ಮಾಡಿದರು !
ಬೇಕಿಲ್ಲದ ಸ್ವಪ್ನ , ನಾನು ಎಚ್ಚರಗೊಳ್ಳಬೇಕು , ಆದರೆ ಸ್ವಪ್ನದ ಆಟ ಸೋಲುವ ಆಟ , ದಟ್ಟವಾಗಿ ಹಬ್ಬಿಕೊಳ್ಳುತ್ತಿರುವ ಭೂತ . ಪ್ರತಿ ಬಾರಿ ಸ್ವಪ್ನ ಮರುಕಳಿಸಿದಾಗಲೂ ನಾನು ಹಾಸಿಗೆಯಲ್ಲೇ ವಿಲ ವಿಲನೆ ಒದ್ದಾಡುತ್ತಿದೇನೆ ಎನ್ನುವ ಅನುಭವ,
ಖೂನಿಯಾದ ಅಪ್ಪ , ಅಪ್ಪ ಖೂನಿಯಾಗುವ ಹಿಂದಿನ ದಿನ ರಾತ್ರಿ ಓಡಿ ಹೋದ ತಂಗಿ , ಯಾವತ್ತು ಬದುಕಿ ಬಾರದಂತೆ ಖೂನಿಯಾಗಿ ಹೋದ ಅಪ್ಪ , ಬದುಕಿರುವದು ನಿಜವೋ ಇಲ್ಲವೋ ಎನ್ನುವಂತೆ ಗುರುತೇ ಸಿಗದಂತೆ ರಾತ್ರಿ ಓಡಿ ಹೋದ ತಂಗಿ.
ಅಪ್ಪನ ಖೂನಿಗೆ ಕಾರಣವೇನು ? ಅಪ್ಪ ಖೂನಿಯಾಗುತ್ತಾನೆ ಎಂದು ತಿಳಿದೆ ತಂಗಿ ಓಡಿ ಹೋದಳೆ ?
ಅಪ್ಪ ಖೂನಿಯಾದ ಎನ್ನುವ ಭಯಕ್ಕಿಂತ , ತಂಗಿ ಓಡಿ ಹೋದಳು ಎನ್ನುವ ಭಯಕ್ಕಿಂತ ಇವೆಲ್ಲುವುಗಳ ಹಿಂದಿನ ಅಸ್ಪಷ್ಟತೆ ನನ್ನ ಹೆದರಿಸಿ ಬಿಟ್ಟಿತ್ತು ಸಾರ್ ! ಸ್ಪಷ್ಟವಾಗದ ಆಕೃತಿಗಳು , ಯಾವುದೋ ವೃತ್ತದಲ್ಲಿ ನಾನು ಸುರುಳಿ ಸುರುಳಿಯಾಗಿ ಅಸ್ತಿತ್ವವೇ ಇಲ್ಲದ ಆಕೃತಿಯು ಬೆನ್ನಟ್ಟಿ ಬಂದಂತೆ , ನಾನು ವೃತ್ತದ ಪರಿಧಿಯೊಳಗೆ ಮತ್ತೆ ಮತ್ತೆ ಓಡುವಂತೆ , ಕೆಂದ್ರದಿಂದ ದೂರದಲ್ಲಿ ಇದ್ದೂ ಕೆಂದ್ರದಿಂದ ನಿಯಂತ್ರಿಸಲ್ಪಡುವ ವೃತ್ತದ ಪರಿಧಿಯಂತೆ ನಾನು , ಅಪ್ಪನ ಖೂನಿಯಾದ ರಾತ್ರಿ ಓಡಿದೆ , ಎಂದು ಒಂದು ಕ್ಷಣ ವಿಠೋಬಾ ಮೌನವಾದ.
ನಾನು ಸುಮ್ಮನೆ ಐ ಟಿ ಪಿ ಎಲ್ ನ ಬಿಲ್ಡಿಂಗ್ ಗಳಿಂದ ಕಾಣಸಿಗುವ ಗೋಚರವಾಗದೆ ಅಸ್ಪಷ್ಟವಾಗಿ ಗೋಚರವಾಗುತ್ತ , ಕಲ್ಪನೆಗಳನ್ನು ಹುಟ್ಟುಹಾಕುವ ಗಾಜಿನ ಹಿಂದಿರುವ ಆಕೃತಿಗಳನ್ನು ಗಮನಿಸುತ್ತ ನಿಂತೆ. ಗೋಚರವಾಗುವ ಆಕೃತಿಗಳು ಸ್ಪಷ್ಟ ಅಕಾರ ಪಡೆದುಕೊಂಡಿದ್ದವು . ಸಂಪೂರ್ಣವಾಗಿ ಕಾಣಸಿಗದ ಆಕೃತಿಗಳು ಕಲ್ಪನೆಯ ಸುಳಿಗೆ ಸಿಲುಕಿ , ಒಬ್ಬರ ತಲೆಗೆ ಇನ್ನೊಬ್ಬರ ಕಾಲು ಕೂಡಿಯೂ , ಮತ್ತೊಬ್ಬರ ಹೊಟ್ಟೆಗೆ ಯಾವುದೋ ಯಂತ್ರದ ಭಾಗವೊಂದು ಸೇರಿಯೊ ವಿಚಿತ್ರ ಆಕಾರಗಳು ನಿರ್ಮಾಣಗೊಂಡು ಭಯ ಹುಟ್ಟಿಸುತ್ತಿದ್ದವು.
ವಿಠೋಬಾ ತನ್ನ ಸ್ವಪ್ನದಿಂದ ನನಗೆ ಏನನ್ನು ಹೇಳಲು ಹೊರಟಿದ್ದಾನೆ? ಅಥವಾ ಮುಂದಿನ ಯಾವುದೋ ಕೆಲಸಕ್ಕೆ ನನ್ನ ಉಪಯೋಗ ಬೇಕೆಂಬ ಹೊಂಚಿಕೆಯೆ?
ವಿಠೋಬಾ ಮತ್ತೆ ಹೇಳತೊಡಗಿದ .
ಮೊನ್ನೆಯೂ ಈ ಸ್ವಪ್ನ ಬಂದಿತ್ತು ಸಾರ್. ಅರ್ಧ ನಿದ್ರೆಯಲ್ಲಿ , ಅರ್ಧಕ್ಕೆ ಬೀಳುವ , ಅರ್ಧ ಬದುಕಿನಿಂದ ಪ್ರಾರಂಭವಾದ ಅರ್ಧ ಸ್ವಪ್ನ . ಅತ್ತ ಬೆಳಗೂ ಅಲ್ಲದ ಇತ್ತ ರಾತ್ರಿಯೂ ಅಲ್ಲದ ಮೂರುವರೆ ಘಂಟೆಗೆ ಸರಿಯಾಗಿ ಸ್ವಪ್ನದಲ್ಲಿ ನಾನು ಮಿಸುಕಾಡುತ್ತಿರುವಾಗ , ಅರ್ಧ ಸ್ವಪ್ನದಲ್ಲಿ ಒದ್ದಾಡುತ್ತಿರುವಾಗ ,ಖೂನಿಯಾದ ಅಪ್ಪನ ಹೆಣವನ್ನು ,ಬಾಣದಂತೆ ಬಳಸುವ ಕ್ರೂರ ಸ್ವಪ್ನದಲ್ಲಿರುವಾಗ ಫೋನು ರಿಂಗಣಿಸಿತ್ತು ಸಾರ್ .
ಮಂದ ಬೆಳಕಿನ ಮಬ್ಬು ರಾತ್ರಿಯಲ್ಲದ ಹಗಲಿನ ಸಮಯದಲ್ಲಿ ಇದ್ದಕ್ಕಿದ್ದಂತೆ ಭೀಕರವಾಗಿ ಫೋನಿನ ಶಬ್ದ .
ವಿಠೋಬಾ ಏನ್ನನ್ನು ಹೇಳಲು ಹೊರಟಿದ್ದಾನೆ ಎನ್ನುವದು ಸ್ಪಷ್ಟವಾಗಿ ಅರಿವಾಗಲಿಲ್ಲ. ಒಂದಂತೂ ನಿಜ , ವಿಠೋಬಾ ನನಗೆ ಅರಿವಾಗದ ಏನನ್ನೋ  ಹೇಳಲು ಹೊರಟಿದ್ದಾನೆ. ವಿಠೋಬಾನ ಅಸ್ತಿತ್ವಕ್ಕೆ ಸವಾಲೆಸೆಯುವ , ವಿಠೋಬಾನ ಅಸ್ತಿತ್ವವನ್ನು ಬುಡ ಸಮೇತ ಅಲ್ಲಡಿಸಬಲ್ಲ , ವಿಠೋಬಾನ ಜೊತೆ ಜೊತೆಗೆ ಇರುವ ಸ್ವಪ್ನ  ವಿಠೋಬಾನನ್ನು ಹಣಿಯುತ್ತಿದೆ .
ಐ ಟಿ ಪಿಎಲ್ ನ ಬೃಹದಾಕರಾದ ಗಾಜಿನ ಹೊರಮೈ ಹೊಂದಿರುವ ಕಟ್ಟಡಗಳಲ್ಲಿ ಕಾಣಿಸುವ ಸ್ಪಷ್ಟವಿರುವ ಆಕೃತಿಗಳು  ಸ್ಪಷ್ಟ ಕಲ್ಪನೆಯನ್ನು ಮೂಡಿಸುತ್ತಿದ್ದವು, ಅಸ್ಪಷ್ಟ ಆಕೃತಿಗಳು ಒಂದಕ್ಕೊಂದು ಅಂಟಿಕೊಂಡು , ಅವ್ಯಕ್ತವಾದ ಭಯ ಉಂಟು ಮಾಡುತ್ತಿದ್ದವು. ವಿಠೋಬಾನ ಸ್ವಪ್ನ ಸ್ಪಷ್ಟವೇ ? ವಿಠೋಬಾನ ಅಪ್ಪ ಖೂನಿಯಾದದ್ದು , ಖೂನಿ ಮಾಡಿದವರು ಯಾರು ಎನ್ನುವದು  ಸ್ಪಷ್ಟವೇ ? ಖೂನಿ ಮಾಡಿದವರನ್ನು ಕಂಡು ಹಿಡಿಯಲು ನನ್ನ ಸಹಾಯವನ್ನು ಯಾಚಿಸುತ್ತಿದ್ದನೆಯೇ? ಅಥವಾ ಅವನ ಓಡಿ ಹೋದ ತಂಗಿಯ ಹುಡುಕಾಟಕ್ಕೆ ನನ್ನ ಅವಶ್ಯಕತೆಯಿದೆಯೇ ? 

"ಆ ಸಮಯದಲ್ಲಿ ಫೋನು ? ಅವೇಳೆಯಲ್ಲಿ ಫೋನು , ಮನಸ್ಸು ಕೇಡನ್ನೆ ಬಯಸುತ್ತದಲ್ಲವೇ? ವಿಠೋಬಾ " ಕೇಳಿದೆ

"ಮೊದಲು ನನಗೆ ಎಚ್ಚರವಾಗಲಿಲ್ಲ ಅಥವಾ ಎಚರವಾದರೂ ಸ್ವಪ್ನದ ಮುಂದುವರಿದ ಭಾಗವೇ ಎಂದು ಭಾಸವಾಗಿ ಮಲಗಿದ್ದೆ . ಆದರೆ ಫೋನಿನ ಶಬ್ದ ನನ್ನನು ಇದು ಸ್ವಪ್ನವಲ್ಲ ನಿಜ ಎನ್ನುವಂತೆ ಮಾಡಿತ್ತು. ಸಾರ್ ಅದೇ ಮೊನ್ನೆ ನೀವು ಕೊಡಿಸಿದ್ದರಲ್ಲ ಅದೇ ಬಿಳಿಯ ಬಣ್ಣದ ಫೋನು ."

ತಿಂಗಳುಗಳ ಹಿಂದೆ , ವಿಠೋಬಾ ಒಂದು ಲ್ಯಾಂಡ್ ಲೈನ್ ಫೋನನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಇದ್ದೇನೆ ಎಂದಾಗ , ನಾನೇ ಅವನಿಗೆ ನನ್ನ ಬಳಿಯಿದ್ದ ಉಪಯೋಗಿಸದೆ ಬಿದ್ದಿದ್ದ , ಅಚ್ಚ ಬಿಳಿಯ ಬಣ್ಣದ ಪ್ಯಾನ್ಸೋನಿಕ್ ಫೋನನ್ನ ಕೊಟ್ಟಿದ್ದೆ. ಇವಾಗ ವಿಠೋಬಾ ಫೋನನ್ನು ಉಪಯೋಗಿಸಿಕೊಂಡು ನನ್ನಿಂದ ಬೇರೆ ಏನನ್ನೋ ಎಳೆಯುವ ಆಟದಲ್ಲಿದ್ದಾನೆಯೆ? ಸ್ಪಷ್ಟವಾಗದ ಆಕೃತಿಗಳು ಗುಮಾನಿ ಮೂಡಿಸುತ್ತ ಹೋದವು.

"ಸಾರ್ ನೀವು ಕೊಟ್ಟಿದ್ದ ಫೋನಿನಲ್ಲಿ ಬಂದ ಮೊದಲ ಕರೆಯದು ಸಾರ್. ಹಗಲು ಅಲ್ಲದ ರಾತ್ರಿಯೂ ಅಲ್ಲದ ವೇಳೆಯಲ್ಲಿ , ನೀವು ಕೊಟ್ಟ ಬಿಳಿ ಬಣ್ಣದ ಪ್ಯಾನ್ಸೊನಿಕ್ ಫೋನ್ ಗೆ ಬಂದ ಕರೆ ಸಾರ್. ಭಯ ! ಅವೇಳೆಯಲ್ಲಿ ಬಂದ ಫೋನನ್ನು ತೆಗೆಯಲು ಭಯ ! ಕೆಟ್ಟ ಸುದ್ದಿ ಎಂದಲ್ಲ ಸಾರ್ ಸುದ್ದಿ ಎನ್ನುವ ಭಯ ! ಅವೇಳೆಯಲ್ಲಿ ಅಪ್ಪನನ್ನು ಖೂನಿ ಮಾಡಿದವರೆ ಹನ್ನೆರಡುವರೆ ವರ್ಷಗಳ ನಂತರ ಅವೇಳೆಯಲ್ಲಿ ಕರೆ ಮಾಡಿ ನನ್ನ ಅಸ್ತಿತ್ವವನ್ನು ಅಳಿಸುವ ಕೆಲಸಕ್ಕೆ ಕೈ ಹಾಕಿದ್ದರೆ ಎನ್ನುವ ಭಯ ! ಅಪ್ಪನನ್ನು ಕೊಲೆ ಮಾಡಿದ್ದು ತಾವೇ ಎಂದು ಹೇಳಿದರೆ , ನಾನು ಏನು ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಸೋತು ಹೋಗುವ ಭಯ ! ಅಥವಾ ಅಪ್ಪನನ್ನು ಖೂನಿ ಮಾಡಿದವರು   ಕ್ಷಮಿಸು ಎಂದರೆ , ನಾನು ಏನನ್ನು ಹೇಳಲಾಗದೆ ಶೂನ್ಯವಾಗುವ ಭಯ .
ಓಡಿ  ಹೋದ ತಂಗಿಯ ಗಂಡ ನನ್ನ ಕಿವಿಗೆ ಹತ್ತಿರದಲ್ಲಿ ನಾನೇ ನಿನ್ನ ಭಾವ ಎಂದರೆ ಎನ್ನುವ ಭಯ ! ಗುರುತೇ ಇಲ್ಲದ , ಪರಿಚಯವೇ ಇಲ್ಲದ ವ್ಯಕ್ತಿಯಿಬ್ಬ ಮೆದುಳಿಗೆ ಹತ್ತಿರದ , ಹೃದಯದ ಮೇಲ್ಭಾಗದ ಕಿವಿಯಲ್ಲಿ ಮೆಲ್ಲನೆ ಇಳಿಯುತ್ತ , ಭಾವ ಎಂದರೆ ಅವನನ್ನು ಭಾವ ಎಂದು ಒಪ್ಪಿಕೊಳ್ಳಬೇಕಾಗುವ ಯಾವತ್ತೂ ನೋಡಿಯೇ ಇರದ ವ್ಯಕ್ತಿ ,ತಂಗಿಯ ಗಂಡನೆನ್ನುವ ಸತ್ಯ ಗೊತ್ತಾದರೆ ಎನ್ನುವ ಭಯ .
ನೀವು ಕೊಟ್ಟಿದ್ದ ಬಿಳಿ ಬಣ್ಣದ ಪ್ಯಾನ್ಸೊನಿಕ್ ಫೋನ್ನಲ್ಲಿ ಸದ್ದು ರಿಂಗಣಿಸುತ್ತಿತ್ತು .
ಟ್ರಿನ್ ಟ್ರಿಣ್
ವಿಠೋಬಾ ಮಾತು ಕೇಳುತ್ತ ನಾನು ಮತ್ತೆ ಐ ಟಿ ಪಿ ಎಲ್ ನ ದೈತ್ಯ ಬಿಲ್ಡಿಂಗ್ ಕಡೆಗೆ ಗಮನ ಹರಿಸಿದೆ. ಸ್ಪಷ್ಟವಾಗದ ಆಕೃತಿಗಳು ಇನ್ನಷ್ಟು ಅಸ್ಪಷ್ಟ ಚಿತ್ರಣ ಕಟ್ಟುತ್ತಿದ್ದವು
ಫೋನು ಮತ್ತೆ ಮತ್ತೆ ಸದ್ದು ಮಾಡುತ್ತಿತ್ತು ಸಾರ್ . ನಾನು ಅದನ್ನೇ ದಿಟ್ಟಿಸುತ್ತಿದ್ದೆ , ಖೂನಿಯಾದ ಅಪ್ಪನ ಹೆಣವನ್ನು ದಿಟ್ಟಿಸಿದ ಹಾಗೆ , ತಂಗಿ ಓಡಿ ಹೋದಳು ಎಂದು ಗೊತ್ತಾದಾಗ ಪ್ರತಿ ದಿನವು ಅವಳು ಮಲಗುತ್ತಿದ್ದ ಜಾಗವನ್ನು ನೋಡುತ್ತ ಕುಳಿತ ಹಾಗೆ .
ಯಾಕೋ ಸ್ವಪ್ನ ಮತ್ತೆ ನೆನಪಿಗೆ ಬರತೊಡಗಿತು ಸಾರ್ ! ದೊಡ್ಡದೊಂದು ವರ್ತುಲ , ಅದರೊಳಗೊಂದು ಚಿಕ್ಕ ವರ್ತುಲ , ಅದರೊಳಗೆ ಇನ್ನು ಚಿಕ್ಕದು ! ಒದಕ್ಕಿಂತ ಒಂದು ಸಣ್ಣದಾಗುತ್ತ ಹೋಗಿ , ಒಂದನ್ನು ಇನ್ನೊಂದು ಆವರಿಸಿ ನುಂಗುವಂತೆ ತಬ್ಬಿ ನಿಂತ ವರ್ತುಲಗಳು ! ಎಲ್ಲಕ್ಕಿಂತ ಹೊರಗಿನ ವರ್ತುಲ ಭೂತಕಾಲವಾಗಿಯೂ , ಇನ್ನೊಂದು ಭವಿಷ್ಯವಾಗಿಯೂ , ಸಣ್ಣದಾದ ವರ್ತುಲ ವರ್ತಮಾನವಾಗಿಯೂ ಗೋಚರಿಸುತ್ತಿದ್ದವು ! ದಟ್ಟ ಭೂತ ಎಲ್ಲವನ್ನು ಆವರಿಸಿ ನಿಂತಿತ್ತು ! ವರ್ತುಲಗಳ ಚಕ್ರಕ್ಕೆ ಹೊಡೆಯುವ ಆಟ ! ನಾನು ಗುರಿಕಾರನಾಗಿಯೂ , , ಖೂನಿಯಾದ ಅಪ್ಪ , ಅಮ್ಮ , ಓಡಿಹೋದ ತಂಗಿ , ಇವರೆಲ್ಲ ಚಕ್ರಕ್ಕೆ ಹೊಡೆಯುವ ಬಾಣಗಳಾಗಿಯೂ ನಿಂತಿದ್ದೆವು ,!
ಸ್ವಪ್ನದಲ್ಲಿ ನಾನು ಸೋಲುತ್ತಿದ್ದೆ ! ಸುತ್ತಲಿನ ಜನ ಕೇಕೆ ಹಾಕಿ ನಗುತ್ತಿದ್ದರು
ಸೋಲುವ ಆಟ ! ಸೋಲಲೆಂದೆ ಆಟ !
ನಾನು ಫೋನು ಎತ್ತಲೇ ಇಲ್ಲ ಸಾರ್ . ಮಲಗಿದ್ದಾಗ ವಿಚಿತ್ರ ಜಂತುವೊಂದು ಪುಳ ಪುಳನೆ ಹಾಸಿಗೆಯಡಿಯಲ್ಲಿ ಹರಿದಾಡುವ ಅನುಭವ ಸಾರ್ .
ಫೋನು ಕೊನೆಯ ರಿಂಗ್ ಮಾಡಿ ನಿಶ್ಯಬ್ದವಾಯಿತು . ನಾನು ಬೆವತಿದ್ದೆ , ಅಚ್ಚ ಬಿಳಿಯ ಬಣ್ಣದ ಫೋನು ಸುಮ್ಮನೆ ಇತ್ತು . ಸೋಲುವ ಆಟದ ಸ್ವಪ್ನ .
ವೃತ್ತದ ಕೆಂದ್ರದಿಂದ ದೂರವಿರುವ ಪರಿಧಿಯ ನಿಯಂತ್ರಣ ಕೆಂದ್ರದ ಬಳಿಯೇ . ನಾನು ದೂರ ದೂರ ಹೋದಂತೆ ಭಾಸವಾದರೂ ನಾನು ಕೆಂದ್ರದ ಅಳತೆಯಲ್ಲಿಯೇ .
ಆಗ ಇದ್ದಕ್ಕಿದ್ದಂತೆ ಭಾಸವಾದ , ಮನಸ್ಸಿಗೆ ಹೊಳೆದುದು ನನ್ನ ಇಡಿ ಬದುಕಿನ ಉದ್ದೇಶವನ್ನೇ ನಿರರ್ಥಕಗೊಳಿಸಿತು ಸಾರ್ ! ಬೆಳಗಿನ ಜಾಮದವರೆಗೂ ನಾನು ಊಳಿಡುತ್ತಲೇ ಇದ್ದೆ ಸಾರ್. ಯಾವ ಉದ್ದೇಶಕ್ಕೆ ನಾನು ಬದುಕಿದ್ದೇನೋ ಅದು ಅದನ್ನೇ ಎದುರಿಸಲಾಗದ ಹೇಡಿ , ನಾನು ಸೋತೆ ಸಾರ್ " ವಿಠೋಬಾ ಬಿಕ್ಕತೊಡಗಿದ
ಸ್ಪಷ್ಟವಾಗದ ಆಕೃತಿಗಳು...
ಸಾರ್ ಅವತ್ತು ಅವೇಳೆಯಲ್ಲಿ ಫೋನ್ ಮಾಡಿದ್ದು , ಅಪ್ಪನ ಖೂನಿಯ ಹಿಂದಿನ ದಿನ ರಾತ್ರಿ ಓಡಿ ಹೋದ ನನ್ನ ತಂಗಿಯಾ ಸಾರ್ ? ನನ್ನ ಜೊತೆಗೆ  ರಕ್ತ ಹಂಚಿ ಹುಟ್ಟಿದವಳು ಎನ್ನುವ ನನ್ನ ತಂಗಿ ,  ಬದುಕಿದ್ದಾಳೆ ಎಂದು ನಾನು ಅಂದುಕೊಂಡ ತಂಗಿಯ ತಲುಪುವ ಏಕ ಮಾತ್ರ ಅವಕಾಶ ನಾನೇ ಕೈಯಾರೆ ಕೊಂದೆನಾ ಸಾರ್ ? ಹೇಳಿ ಸಾರ್ ದಯವಿಟ್ಟು ಹೇಳಿ , ಅವತ್ತು ಫೋನ್ ಮಾಡಿದ್ದು ನನ್ನ ತಂಗಿಯಾ ಸಾರ್
ವಿಠೋಬಾ ಇಷ್ಟು ಹೇಳಿದವನೇ ಗಳ ಗಳನೆ ಅಳತೊಡಗಿದ
ನಾನು ಮಾತನಾಡಲಿಲ್ಲ. ಅವತ್ತು ಫೋನ್ ಮಾಡಿದವಳು ಅವನ ತಂಗಿ ಹೌದು ಎನ್ನುವ ಧೈರ್ಯವಾಗಲಿ , ಅಲ್ಲ ಎನ್ನುವ ಆತ್ಮವಿಶ್ವಾಸವಾಗಲಿ ನನಗೆ ಬರಲಿಲ್ಲ .
ಐ ಟಿ ಪಿ ಎಲ್ ನ ಬಿಲ್ಡಿಂಗ್ ನಲ್ಲಿ ಮೂಡಿದ ಸ್ಪಷ್ಟ ಆಕೃತಿಗೂ ಯಾವುದೇ ಆಕಾರವಿರಲಿಲ್ಲ .


************************************************************
ಆಮೇಲೆ ಮಾರನೆಯ ದಿನದಿಂದ ವಿಠೋಬಾ ಕೆಲಸಕ್ಕೆ ಬರಲಿಲ್ಲ . ಅವನು ಎಲ್ಲಿ ಹೋದ ಎನ್ನುವದಕ್ಕೆ ಯಾವುದೇ ಮಾಹಿತಿ ಇರದೇ ನಾನು ಹುಡುಕುವ ಪ್ರಯತ್ನದಲ್ಲಿ ಸೋತೆ . ವಿಠೋಬಾ ನನಗೆ ಹೇಳಿದಾಗಿನಿಂದ ನನ್ನೊಳಗೆ ಇದ್ದ ಈ ಘಟನೆಗೆ ನೀವು , ಕಥೆ , ಲೇಖನ ಪ್ರಬಂಧ ಅಥವಾ ಯಾವುದು ಅಲ್ಲ ಎಂದು ಏನನ್ನು ಬೇಕಾದರು ಹೇಳಬಹುದು