Wednesday, January 25, 2017

ದೀಪಾವಳಿ

ದೀಪಾವಳಿಯೆ೦ದರೆ ಜಗುಲಿಯಿಂದ ಹೆಬ್ಬಾಗಿಲಿನ ತನಕ ಹಚ್ಚಿಟ್ಟ ಪುಟ್ಟ ಪುಟ್ಟ ದೀಪ . ನೀಲ ನೀಲಾಂಜನ , ಒಂದರ ಪಕ್ಕ ಇನ್ನೊಂದು , ನಿಶ್ಚಲ , ನೀಲ ಮಂದ. ಕಡುನೀಲಿಯ ಕತ್ತಲೆಯಲ್ಲಿ ನಕ್ಷತ್ರ. ಅಂಗಳದಲ್ಲಿ , ಗೊಬ್ಬರ ಗುಂಡಿಯ ಬಳಿ , ಸೋಮಸಾಗರದ ಉದ್ದನೆಯ ರಥಬೀದಿಯ ಇಕ್ಕೆಲಗಳಲ್ಲಿ , ರಥಬೀದಿಯ ಅಂಚಿನ ಬಸವಣ್ಣನ ಕಲ್ಲು ಮೂರ್ತಿಯ ಬಳಿ , ಕೊಟ್ಟಿಗೆಯ ಹತ್ತಿರ , ಊರ ರಸ್ತೆ ಕೂಡುವಲ್ಲಿ , ಕೊನೆಯಾಗುವಲ್ಲಿ ಅಜ್ಜ ಹಚ್ಚಿಟ್ಟ ಪಂಜು , ಪಾತಾಳದಿಂದ ಬಲಿಂದ್ರನನ್ನ ಕರೆದು ತಂದು 'ಆಯಿ' ಕೂರಿಸಿದ್ದಾಳೆ ದೇವರ ಮುಂದೆ . ಬಲಿಂದ್ರನ ತಲೆಯ ಮೇಲೆ ಅಡಿಕೆಯ ಸಿಂಗಾರ ಹೂವು ಹಣ್ಣು ಅರಿಶಿನ . ಮೋರೆಯ ಮೇಲೆ ಮಸಿಯಲ್ಲಿ ಬರೆದ ಕಣ್ಣು ಕಿವಿ ಮೂಗು ಬಾಯಿ . ಪುರುಸೊತ್ತಿಲ್ಲದ ಆಯಿಗೆ ಹಬ್ಬದ ತಯಾರಿ . ಹಬ್ಬವೆಂದಲ್ಲ ಯಾವತ್ತೂ ಪುರುಸೊತ್ತು ಅವಳಿಗೆ ? ಮಕ್ಕಳು ಮೊಮ್ಮಕ್ಕಳು ಗಂಡ ಮನೆ ಕೊಟ್ಟಿಗೆ ತವರು ಮನೆ .. ನಮಗೆಲ್ಲ ಪುರುಸೊತ್ತು ಮಾಡಿಕೊಡುವದರಲ್ಲೇ ಅವಳ ಪುರುಸೊತ್ತು . ಅಜ್ಜ ಮೌನಿ . ದೀಪಾವಳಿಯ ಹಣತೆಯಂತೆ , ದೀಪದಂತೆ . ನೀಲ ನೀಲಾಂಜನ , ಒಂದರ ಪಕ್ಕ ಇನ್ನೊಂದು , ನಿಶ್ಚಲ , ನೀಲ ಮಂದ. ಅಜ್ಜ ಆಯಿ. ಹಣತೆಯ ಹತ್ತಿರ ಮಾತ್ರ ಹಿತದ ಬೆಳಕು. ಬದುಕಿ ಬೆಳಕಾದವರು . ನಾವು ಬದುಕದೆಯೇ ಕತ್ತಲೆಯಲ್ಲಿ ನಿಂತವರು .

ದೀಪ್ ದೀಪ್ ದೀಪ್ ಓಳ್ಗೆ .. ಇಂದು ಹೋಗಿ ಮುಂದೆ ಬಾ .. ಹಬ್ಬ ಹಾಡುವವವರು ದೊಂದಿಯ ಬೆಳಕಲ್ಲಿ ಮುನ್ನೆಡೆಯುತ್ತಿದ್ದಾರೆ . ಅಲ್ಲೊಂದು ಇಲ್ಲೊಂದು ಹೊಳೆಯುವ ನಕ್ಷತ್ರ. ಬದುಕೊಂದು ಛ೦ದಸ್ಸು

ಲೋಕಲೋಕಾಂತರಾದ ದೂರ ಸೀಮೆಗಳಲ್ಲಿ
ಹೊಳೆಯುತ್ತಲಿದೆ ಚೆಲುವ ನಂದಾದೀಪ ಒಂದು ;
ಎಂಥ ಬಿರುಗಾಳಿಗು ಆರಲಾರದ ಬೆಳಕು
ಕತ್ತಲೆಯ ಗೆಲ್ಲುತ್ತಿದೆ ಎಂದಿನಂತೆಯೇ ಇಂದು -
ಎಲ್ಲರನು ಒಲವಿನಲಿ ಕಂಡು ಹರಸುತ್ತಲಿದೆ .

                                                               - ಕೆ ಎಸ್ ನ

ದೀಪದ ಬೆಳಕ ಹಚ್ಚುತ್ತಾ ಹಬ್ಬವ ಹಾಡುತ್ತ ನಡೆದಿದ್ದಾರೆ ಕೆಲವರು. ಬೆಳಕಿಗಿಂತ , ಹಣತೆಗಿಂತ ಕ್ಷಣಿಕ ಜ್ವಾಲೆಯ ಹೊತ್ತು ತಿರುಗುವವರು ಹಲವರು . ದೀಪಾವಳಿ ಅಬ್ಬರಿಸಿ ಬೊಬ್ಬಿರಿದು , ಭೋ೦ಕನೇ ನಭಕ್ಕೆ ನೆಗೆದು ಬೂದಿಯಾಗುವ ತವಕ . ಕತ್ತಲೆಯಲ್ಲಿ ಆಗಸಕ್ಕೆ ನೆಗೆಯುವ ಇಂದ್ರಜಾಲದ ಬೆಳಕಿನ ಮಾಯೆ . ಅನ್ನವಿಲ್ಲದ ಕಂದನಿಗೆ ಬೀದಿಯ ವಿಷಗಾಳಿ . ಪಟಾಕಿಯ ಎಡೆಗಳಲ್ಲಿ ಅನ್ನದ ಚೂರೊಂದು ಕರಟದೇ ಇರಬಹುದು .ಶಹರದ ಎಲ್ಲ ಪಟಾಕಿಗಳನ್ನು ಇಲ್ಲಿಯೇ ಸುಟ್ಟಿದ್ದಾರೆ ರಾತ್ರಿ ಪಾಳಿಯ ಅಪ್ಪನ ಕಣ್ಣುಗಳಲ್ಲಿ ಕೆಂಪು ಜ್ವಾಲೆ . ಸೀರೆ ಹಳೆಯದಾದರೇನು , ಅಮ್ಮನ ಸೆರಗು ಯಾವಾಗಲು ಹೊಸತೇ .

ಶ್ರೀಮಂತ ಸೌಧಗಳ ರಾಜ ಬೀದಿಗಳಲ್ಲಿ
ಕಡುಬಡವ ಈಜಲು ಪಟಾಕಿಗಳ ಹುಡುಕುತ್ತ
ಕೈಸುಟ್ಟುಕೊಂಡು ಹಿಂದುರಿಗಿ ಬಂದಿದ್ದಾನೆ .
ಆಕಾಶ ಬಾಣಗಳು ಬಾನಿನಂಗಳದಲ್ಲಿ
ಬಣ್ಣ ಬಣ್ಣದ ಬೆಳಕ ಹೂವ ಚೆಲ್ಲುತ್ತಲಿವೆ
ಕಸವ ಗುಡಿಸುವ ಹೆಣ್ಣು ಸುಟ್ಟವರ ಶಪಿಸುತ್ತಿದೆ .

                                                           -ಕೆ ಎಸ್ ನ

Monday, January 2, 2017

ನೀಲ ಮೋಡದ ಭಾವಗೀತ

ಗಾಂಧಿ ಬಜಾರಿನಲ್ಲಿ ಮಳೆಯಾಗುತ್ತದೆ. ಮುಗಿಲಿನಿಂದ ಮುತ್ತಿನ ಬೀಜಗಳು ಧೋ ಎಂದು ಧುಮುಕುತ್ತವೆ. ಹನಿಯಡಿಯಲ್ಲಿ ಮರ ದನ ಜನ ಗಿಡ ಮುದುಕ ಹುಡುಗಿ ಮದರಂಗಿ ಹೋಟೆಲು ತಿರುವು ಕೊಚ್ಚೆ ಹೂವು ಕನಸು ಹಣ್ಣು ನಿಟ್ಟುಸಿರು ಕಾರು ನೋಟ ಬೈಕು . . . .

ಕಪ್ಪು ಬಣ್ಣದ ಮೋಡ ಈಗಷ್ಟೆ ಕಂಡ ಕನಸಿನಂತೆ ತೇಲುತ್ತ ನಿಂತಿದೆ , ಸರಪರ ಓಡಾಡುವ ಜನಕ್ಕೆ ಮೋಡದ ಇಲ್ಲ , ಪುಟ್ಟ ಹುಡುಗಿಯ ಗೆಜ್ಜೆಯ ಮರೆಯಲ್ಲಿಟ್ಟ ನೆರಿಗೆಯ ಲಂಗದಂತೆ ಆವರಿಸುವ ಕಪ್ಪು ಮೋಡದ ಬಣ್ಣ . ಲೈಟು ಹಾಕುವ ಹುಡುಗ ಹೊತ್ತಿಗೆ ಮೊದಲೇ ಬೀದಿ ದೀಪಗಳನ್ನು ಹಾಕಿದ್ದಾನೆ . ಕತ್ತಲಾಗಲೇಬಾರದು ನಗರಗಳಲ್ಲಿ ಅಥವಾ ದೂರದ ಊರಿನ ಕತ್ತಲೆಯಲ್ಲಿ ಮಗನನ್ನು ಕಾಯುತ್ತ ಕುಳಿತವರು ನೆನಪಾಗುವರು ಅಂಜಿಕೆ ? ಲೈಟು ಹಾಕುವ ಹುಡುಗನಿಗೆ ಇವನ್ನೆಲ್ಲ ವಿಚಾರಿಸಲು ಪುರುಸೊತ್ತು ಇಲ್ಲ , ಮೋಡ ಕೆಳಗೆ ಬೀಳುವದರೊಳಗೆ ಪಕ್ಕದ ಬೀದಿಯ ಲೈಟು ಹಾಕಬೇಕು . ಯಾರಿಗೆ ಗೊತ್ತು , ಮೋಡದೊಳಗಿನಿಂದ ಹೊರಬಿದ್ದ ಹನಿಯೊಂದು ಬಾಯಲಿರುವ ಸಿಗರೇಟಿನ ಬೆಂಕಿ ಅಂಚಿಗೆ ತಾಗಿದರೆ ?

ಮದರಂಗಿ ಹಾಕುವ ಬಿಹಾರಿ ಹುಡುಗನಿಗೆ ಹಿಡಿದ ಅಂಗೈ ಚಿತ್ರಪಟ ಸರಿಯಾಗಿ ಕಾಣಿಸುತ್ತಿಲ್ಲ. ಮದರಂಗಿ ಮುಗಿಯುವದರೊಳಗೆ ಮಳೆ ಬರಲಿದೆಯೆ ? ಇವತ್ತಿಗೆ ಇದೇ ಕೊನೆಯ ಚಿತ್ರಪಟವೆ ? ದೇವರೆ ಇನ್ನೈದು ನಿಮಿಷ ಮೋಡ ಆಕಾಶದಲ್ಲಿರಲಿ , ಚಿತ್ರಪಟದ ಹುಡುಗಿ ಕಣ್ಣುಗಳನ್ನು ಆಗಸದಷ್ಟೇ ಅಗಲಿಸಿದ್ದಾಳೆ. ಚುಕ್ಕಿ ಹೆಕ್ಕಿ ಗೆರೆ ಚಿತ್ರ ಸೆರೆ .

ಗಾಂಧಿ ಬಜಾರಿನ ಸರ್ಕಲಿನಲ್ಲಿ ಮೋಟಾರುಗಳು ಗಡಿಬಿಡಿಯಲ್ಲಿ ಹೊರಟಿವೆ . ಅಲ್ಲಿ ಮುತ್ತ ಇಲ್ಲಿ ಅತ್ತ ಸುತ್ತ ಎಲ್ಲರಿಗು ಅಳಿಯದ ಅವಸರ , ನುಗ್ಗಿ ಹಿಗ್ಗಿದ ಧೀರರು ದಾರಿಯಿಲ್ಲದೆ ನಿಂತಿದ್ದಾರೆ. ಮೋಡದಿಂದ ಹನಿಯೊಂದು ಬೀಳುವದರೊಳಗೆ ಮೊಟಾರನ್ನು ಮನೆಗೆ ಸೇರಿಸಬೇಕು , ಕೊಚ್ಹೆಯಾದರೆ ಬಿಳಿಯ ಬಣ್ಣದ ಕಾರು . ಸಾವಕಾಶದ ಸನಿಹ ದನವೊಂದು ನಿಂತಿದೆ. ರಭಸದಿಂದ ಓಡಾಡುವ ಕ್ರಿಯೆಯೊಂದು ಅರ್ಥವಾದಂತಿಲ್ಲ ಅದಕ್ಕೆ , ತರಕಾರಿ ಮಾರುವ ಸಾಲಿನಿಂದ ಎತ್ತಿದ ಯಾವುದೊ ಒಂದು ಸೊಪ್ಪನ್ನು ಆರಾಮವಾಗಿ ಜಗಿಯುತ್ತಾ ನಿಂತಿದೆ. ಕೆಂಚು ಬಣ್ಣದ ಹೊಟ್ಟೆಗೆ ಸಗಣಿ ರಾಡಿ ಎಲ್ಲ ಸೇರಿಸಿಕೊಂಡು ನವ್ಯ ಚಿತ್ರವೊಂದನ್ನ ರಚಿಸುವ ಕಲಾವಿದನಂತೆ ಏಕಾಗ್ರತೆಯಿಂದ ನಿಂತಿದೆ. ಕಪ್ಪುಗಟ್ಟಿದ ಮೋಡದ ವಾಸನೆ ಹಿಡಿದಂತೆ ಮೂಗಿನ ಹೊಳ್ಳೆಗಳನ್ನು ಅರಳಿಸುತ್ತಿದೆ. ಮಳೆಯಾಗುವದು ಗೊತ್ತಿದೆಯೆನೋ ? ಆದದ್ದು ಆಗಲಿ ಎನ್ನುವ ಭಂಡತನವೋ ಅಥವಾ ದಾರ್ಶನಿಕತೆಯೋ ? ದನ ಶಾಂತವಾಗಿದೆ . ಜನ ಅಶಾಂತವಾಗಿದ್ದಾರೆ . ಮಳೆಯಾಗಲಿ ಎಂದು ಹುಡುಗನ ಕಾತುರ , ಇನ್ನೊಂದಿಷ್ಟು ಕಾಲ ಹುಡುಗಿಯ ಜೊತೆಗೆ ಯಾವದೂ ಸೂರಿನ ಕೆಳಗೆ ನಿಂತಿರಬಹುದು. ಗಾಂಧಿ ಬಜಾರಿನ ಮರಗಳ ನೆತ್ತಿಗೆ ನೀರು ಬೇಕಾಗಿದೆ. ಬುಡ ಬೇರು ಡಾಂಬರಿನಲ್ಲಿ ಕಳೆದುಹೋಗಿದೆ. ಪುಟ್ಪಾತಿನಲ್ಲಿ ಮರ ಬೆಳೆದಿದ್ದೇಕೆ ? ಮರದ ಕೆಳಗೆ ಸೊಪ್ಪು ಮಾರುವ ಅಜ್ಜಿ . ಈಗಷ್ಟೆ ಯಾರೋ ಅನಾಮಿಕ ಚಿತ್ರಕಾರ ಬಿಡಿಸಿಟ್ಟ ಚಿತ್ರದಂತೆ ಸೊಪ್ಪು ರಾಶಿಯ ಮಧ್ಯೆ ಬಾಯಿ ತುಂಬ ವೀಳ್ಯೆದೆಲೆ ತುಂಬಿಕೊಂಡ ಅಜ್ಜಿ . ಸುಕ್ಕುಗಟ್ಟಿದ ಚರ್ಮದ ಮಧ್ಯೆ ಕಣ್ಣು ಕಿವಿ ಮೂಗು ನಾಲಗೆ. ಹಣೆಯ ಮೇಲಿನ ಬಿಳಿಯ ಬಣ್ಣ ಅರ್ಧ ಮುಖವನ್ನು ಮುಚ್ಚಿದೆ . ಅರೆ ತೆರೆದ ಕಣ್ಣು , ಮಸುಕು ಬದುಕು . ಮುಸ್ಸಂಜೆ ಕವಿದ ಮೇಲೆ ಅಜ್ಜಿಗೆ ಚಿಲ್ಲರೆ ಕಾಸುಗಳು ಕಾಣುವದಿಲ್ಲ , ರುಪಾಯಿ ಎರಡು ರುಪಾಯಿ ಹುಡುಕಿ ಕೂಡಿಟ್ಟ ಹನಿ ಹರಿದು ಸೇರಿದ್ದೆಲ್ಲಿ ? ಅರೆ ತೆರೆದ ಕಣ್ಣಿನ ಅಂಚಿನಿಂದ ಸದಾಕಾಲ ಒಸರುವ ನೀರು. ಮೊನ್ನೆಯಷ್ಟೇ ಶುರುವಾದ ಬೃಹದಾಕಾರದ ಸುಪರ್ ಮಾರ್ಕೆಟ್ ಗಳು , ಒಳಗೆ ಚಟಿಪಿಟಿ ಓಡಾಡುವ ಕೆಲಸದ ಹುಡುಗಿಯರನ್ನು ರೇಗಿಸುತ್ತಿದ್ದಾರೆ ಕೆಲಸದ ಹುಡುಗರು. ಯಾವುದೋ ಕಂಪನಿಯ ಸಮವಸ್ತ್ರ ತೆಗೆದು ಅವರಾಗಲು ಕಾಯುತ್ತಿರುವ ಇವರು , ಮಳೆಯ ಪರಿವೆಯಿಲ್ಲದ ಕೊಳ್ಳುಬಾಕರು .

ರೋಟಿ ಘರ್ ನ ಬಿಸ್ಸಿ ಬಿಸ್ಸಿ ಕಾಪಿಯ ಹಬೆ ಸುರುಳಿ ಸುರುಳಿಯಾಗಿ ಮೇಲಕ್ಕೆ ಹೋಗುತ್ತಿದೆ , ಹಬೆಯ ಹಾಯಿ ದೋಣಿ ಮೋಡಕ್ಕೆ ಪಯಣ . ಬಾಳೆಹಣ್ಣು ಮಾರುವ ಅಕ್ಕ ಹಣ್ಣಿನ ಮೇಲೆ ಪರದೆಯೊಂದನ್ನ ಹೊದೆಸಿದ್ದಾಳೆ , ಬೆತ್ತದ ಬುಟ್ಟಿಯಲ್ಲಿ ರಥದ ಚಕ್ರದಂತೆ ಸುರುಳಿಯಾದ ಹಳದಿ ಹಣ್ಣುಗಳು ಬೆಚ್ಚಗೆ ರಜಾಯಿ ಹೊದ್ದು ಮಲಗಿವೆ . ಅಕೋ , ಅವರು ಬರುತ್ತಿದ್ದಾರೆ , ಹಣ್ಣು ಕೊಳ್ಳಲು ಅಲ್ಲ , ಅಕ್ಕನ ಗಂಡ ಮತ್ತೆ ಸಾಲ ಮಾಡಿರಬೇಕು . ಎದುರಿಗಿರುವ ಬಟ್ಟೆಯಂಗಡಿಯ ರೇಡಿಯೋ ಸದನದಲ್ಲಿ ಮದ್ಯಪಾನ ನಿಷೇದ ತೆಗೆಯುವ ಚರ್ಚೆಯಾ ಸುದ್ದಿ ಬಿತ್ತರಿಸುತ್ತಿದೆ. ಮೋಡದೊಳಗಿನ ಹನಿ ಯಾರ್ಯಾರದೋ ಕಣ್ಣಿನಲ್ಲಿ ಇಳಿದಿದೆ , ಕಪ್ಪು ಮೋಡ ಮಳೆ ಸುರಿಸಲಿ , ಹನಿ ತುಂಬಿದ ಕಣ್ಣು ಹರಿದು ಹೋಗಲಿ , ಹೊಟ್ಟೆಗಿಲ್ಲದ ಬದುಕುಗಿಲ್ಲದ ತುತ್ತು ಕೊಡಲಾಗದ ಅಕ್ಷರಗಳು ಹರಿಹೋಗಲಿ , ಅಂಕಿತದಲ್ಲಿ ಕೈಗೆತ್ತಿಕೊಂಡ ಪುಸ್ತಕವನ್ನು ಕೆಳಗಿಟ್ಟಿದ್ದೇನೆ.


ಗಾಂಧಿ ಬಜಾರಿನಲ್ಲಿ ಮಳೆಯಾಗುತ್ತದೆ. ಮುಗಿಲಿನಿಂದ ಮುತ್ತಿನ ಬೀಜಗಳು ಧೋ ಎಂದು ಧುಮುಕುತ್ತವೆ. ಹನಿಯಡಿಯಲ್ಲಿ ಮರ ದನ ಜನ ಗಿಡ ಮುದುಕ ಹುಡುಗಿ ಮದರಂಗಿ ಹೋಟೆಲು ತಿರುವು ಕೊಚ್ಚೆ ಹೂವು ಕನಸು ಹಣ್ಣು ನಿಟ್ಟುಸಿರು ಕಾರು ನೋಟ ಬೈಕು . . . .