Sunday, May 15, 2011

ಈ ಕವಿತೆಗಳು -೩

ಈ ಕವಿತೆಗಳು
ನೆನಪುಗಳ ಖೂನಿಗೆ
ಸುಪಾರೀ ತೆಗೆದುಕೊಂಡ ಅಕ್ಷರಗಳು ..!

ಸಂಬಂದಗಳ ಗೋರಿಯ ಮೇಲೆ
ಕವಿತೆಗಳ ಮಾಲೆ.!

ಬರೆಯಬೇಕೆ೦ದ ಕವಿತೆಯೊಂದು
ಮರೆತು ಹೋಗಿದೆ
ಈಗ ಮನತುಂಬಾ
ಸೂತಕದ ವಾಸನೆ.!

ಶ್..! ಸುಮ್ಮನೇ ಇರಿ,
ಕವಿತೆಗಳ ತಿರುವಿನಲ್ಲಿ
ನೆನಪೊಂದು ಬಿಕ್ಕುತ್ತಿದೆ.!

ಹುತ್ತಗಟ್ಟಿದ ಕವಿತೆಗಳ ಒಳಗೆ
ನೆನಪುಗಳ ಪುಳ-ಪುಳ..!

ಯ್ಯೊ ! ದೇವರೇ  ಈ ಕವಿತೆಯ ತುಂಬಾ
ಇದೆಂತ ಸುಟ್ಟ ವಾಸನೆ?
ಉರಿಯುತ್ತಿರಬೇಕು ಕಾದ ನೆನಪುಗಳು..!

ನೆನಪೊತ್ತರ ಶಸ್ತ್ರಕ್ರಿಯೆ;ಕವಿತೆಗಳ
ಪ್ರತಿ ಪ್ಯಾರಾ
ಕತ್ತರಿಸಿದ ಸಂಬಂದ!

ತಥ್.! ಜಾಸ್ತಿ ಆಗಿವೆ ಕವಿತೆಗಳು
ನೆನಪುಗಳಿಗೆ ಫ್ಯಾಮಿಲೀ ಪ್ಲಾನಿಂಗ್
ಮಾಡಿಸಬೇಕು.

Tuesday, May 10, 2011

ಈ ಕವಿತೆಗಳು - ೨

ಒಂದಷ್ಟು ಒದ್ದೆ ನೆನಪುಗಳು ; ಒಣಗಿಸಲೆಂದು
ಅಕ್ಷರಗಳ ಕ್ಲಿಪ್ ಹಾಕಿ ಜೋತಾಡಿಸಿದ್ದೆ
ನೋಡಿದವರು ಕವಿತೆಗಳೆ೦ದರು..!

ಗರ್ಭಪಾತವಾಗಿದೆ ,
ನನ್ನ ಮನಸಿಗೆ , ಅವಳ ಕನಸಿಗೆ
ನೋಡುತ್ತೀರಿ , ಹುಟ್ಟುತ್ತವೆ
ಸಾವಿರ-ಸಾವಿರ ಅನಾಥ ಕವಿತೆಗಳು..!!

ಈ ನೆನಪುಗಳು 
ಅದೆಲ್ಲಿಗೋ  ಸಾಲು-ಸಾಲು
ಮೆರವಣಿಗೆ ಹೊರಟಿದ್ದವು
ಕವಿತೆಗೆಂದಾಯಿತೆಂದು ತಂದಿಟ್ಟಿದ್ದೇನೆ..!

ಕೊಳೆತ ಸಂಬಂಧಗಳ ಸುತ್ತಲಿನ 
ಕವಿತೆಗಳ ಮೈ ತುಂಬಾ  , ಅನುಮಾನದ ವಾಸನೆ!


ಕವಿತೆಗಳ ಚಿತೆಯಲ್ಲಿ
ನೆನಪುಗಳ
ಸಾಮೂಹಿಕ ಆತ್ಮಹತ್ಯೆ..!

ತಥ್.! ಹೇಳುವರು ಕೇಳುವರು ಯಾರು ಇಲ್ಲ
ಹೊತ್ತಲ್ಲದ ಹೊತ್ತಿನಲ್ಲಿ
ಈ ಕವಿತೆಗಳು ನೆನಪುಗಳೊಟ್ಟಿಗೆ
ಚಕ್ಕಂದವಾಡುತ್ತವೆ.!

ಮಾರಾಯರೆ , ಈ ಕವಿತೆಗಳಿಗೆಂದರೆ
ವಾರಸುದಾರರಿಲ್ಲದ ನೆನಪುಗಳು

Wednesday, May 4, 2011

ಈ ಕವಿತೆಗಳು

ಮಧ್ಯರಾತ್ರಿ ನಿದ್ರೆ ಊಳಿಡುವಾಗ
ಸಟಕ್ಕನೆ ಎದ್ದು , ನಿನ್ನ ನೆನಪುಗಳನ್ನ ಸಂಭೋಗಿಸುತ್ತೇನೆ ;
ಅಕ್ಷರಗಳ ಸ್ಖಲನದಲ್ಲಿ  ಕವಿತೆಗಳು  ಹುಟ್ಟುತ್ತವೆ.!
****            *****   *****
ಚಾಯ್ ದುಕಾನಿನಲ್ಲಿ ಕುದಿ ಕುದಿ  ಡಿಕಾಕ್ಶನ್
ಸರ್ರ್  ಸರ್ರ್ ನೇ ಕುಡಿದು ಬಿಡುತ್ತೇನೆ
ಇದೇನು ಬಿಸಿಯಲ್ಲ ! ಅಲ್ಲಿದೆ ನೋಡಿ
ಕವಿತೆಯಾಗಿ ಉರಿಯುತ್ತಿರುವ ನೆನಪುಗಳು
****            *****   *****
ಹೃದಯ ಬಾಡಿಗೆಗೆ ಇದೆ ಎಂದು
ಬೋರ್ಡ್ ಹಾಕಿದ್ದೆ
ಒಂದು ರಾಶಿ ಕವಿತೆಗಳು ಕೇಳಿಕೊಂಡು ಬಂದವು..!
****            *****   *****
ಸ್ವಲ್ಪ ಇರ್ರ್ರಿ ಮಾರಾಯ್ರೆ ,
ನೆನಪುಗಳನ್ನ ಕಾಲನ ಕುಕರ್ ನಲ್ಲಿ  ಇಟ್ಟಿದ್ದೇನೆ
ಕವಿತೆಗಳ ಉಂಡು ಹೋಗಿರಿ.!