Monday, December 27, 2010

ಸಮಾಧಿ

ಕೆಲವೊಮ್ಮೆ ಮರೆತುಹೋದಲಿಂದಲೇ ನೆನಪುಗಳು ಎದ್ದು ಬಿಡುತ್ತವೆ. ಕ್ರಿಯೆಗಳು ಆರಂಭವಾಗಿ ಬಿಡುತ್ತವೆ. ಯಾವ ಕ್ರಿಯೆಗಳಿಗೆ , ಯಾವ  ಸಂಬಂಧಗಳಿಗೆ ನಾವು ಸಮಾಧಿ ನಿರ್ಮಿಸಿರುತ್ತೇವೆಯೋ , ಯಾವ ಭಾವಗಳು ಆಕಾರ ಕಳೆದು ಕೊಂಡಿರುತ್ತವೆಯೋ  , ಯಾವ ಸ್ವಭಾವಗಳು ಅಭಾವಗಳಾಗಿರುತ್ತವೆಯೋ ಅಂತಹುದೇ ಕೆಲವೊಂದು ಮತ್ತೆ ಉಸಿರಾಡಲಾರಂಭಿಸುತ್ತವೆ. ನಿಗ್ರಹಗೊಂಡ ವಿಗ್ರಹದೊಳಗೆ ಸುಪ್ತತೆಯೋ೦ದು ತಡವರಿಸುತ್ತಾ ಮುಲುಕಾಡುತ್ತಿರುತ್ತದೆ. ಒಳಗೊಳಗೆ ಹರಿದಾಟ. ಕೆಲವು ಅಂತರಂಗ ಸಮಾಧಿಗಳು , ಹಲವು ಬಹಿರಂಗ ಸಮಾಧಿಗಳು. ಒಳಗೊಂದು , ಒಳಗಿನ ಹೊರಗೊಂದು. ಹೊರಗೊಂದು , ಹೊರಗಿನ ಒಳಗೊಂದು. ಮೌನ ಹುತ್ತದೊಳಗೆ ಪುಳ-ಪುಳನೆ ಹರಿಯುವ ಮಾತಿನ ಗೆದ್ದಲುಗಳು. ಸಮಾಧೀಯೊಳಗೆ ಈಜುವ ಸತ್ಯಗಳು. ಸುಳಿಯ ಮಧ್ಯೆ ನಿಂತ ನೆನಪುಗಳು. ಹಲವರನ್ನು ಹುಚ್ಚರು ಎನ್ನುತ್ತೇವಲ್ಲ , ಹುಚ್ಚು ದೇಹಕ್ಕೋ? ಮನಸಿಗೋ? ವಿಕಾರ ಭಾವಕ್ಕೋ , ಭವಕ್ಕೊ? ಮಗ್ಗಲುಗಳ ಮಗ್ಗುಲಿನಲ್ಲಿ ನಾವು ಯಾವತ್ತಿಗೂ ದಿಟ್ಟಿಸದ ರೂಪಗಳು ಮಿಸುಕಾಡುತ್ತಿರುತ್ತಲ್ಲ , ಅವನ್ನು ನಮ್ಮ ಆಕ್ರಮಣಕಾರಿ ಕ್ರಿಯೆಯಲ್ಲಿ , ತರ್ಕದಲ್ಲಿ ಲೋಳೆಗೊಳಿಸುತ್ತೇವೆ. ಧೀ ಶಕ್ತಿಯ ತನನಂ ನಮಗೆ ವ್ಯಕ್ತಿಯೊಳಗಿನ ಅಭಿವ್ಯಕ್ತಿ ಆಗುವದೆ ಇಲ್ಲ..! ದುರಂತ ಪ್ರಾರಂಭವಾಗುತ್ತದೆ.. ಮುನ್ನುಡಿಯೆ ಪೂರ್ಣವಾದ ಕಾದಂಬರಿಯಂತೆ..!

ಶುದ್ಧ ಚಳಿಯು ಎದೆಯೊಳಗೆ ಇಳಿದು , ಕಮ್ಮನೇ ನಿರ್ಮಿಸಿದ ಚಳಿ ಭಾವವನ್ನು ಇಂಚಿ೦ಚಾಗಿ  ಕರಗಿಸಲು ನಾನು ಚಳಿಗಾಲದ ಮುಂಜಾವುಗಳಲ್ಲಿ  ಸೀಸಿ ಯಲ್ಲಿ ಬಿಸ್ಸಿ ಬಿಸ್ಸಿ ಟೀ ಕುಡಿಯುತ್ತಾ ಕುಳಿತಿರುತ್ತಿದ್ದೆ. ಅಲ್ಲಿಗೆ ಆತನು ಬರುತ್ತಿದ್ದ. ರಾತ್ರಿಯೆಲ್ಲ ನಿದ್ದೆ ಇಲ್ಲದವರಂತೆ ಕೆಂಡವಾದ ಕಣ್ಣುಗಳು , ಅಚ್ಚುಕಟ್ಟಾಗಿ ಮುಚ್ಚಿದ ದೇಹ ಮುದುರಿರುತಿತ್ತು. ಕೆಲವರ ಪಾಲಿಗೆ ಅವನು ಸಭ್ಯ ಹುಚ್ಚ (!?) ಹಲವರಿಗೆ ಪೂರ್ತಿ ಹುಚ್ಚ.
ಅವನಿಗೆ ಆಯಾಮಗಳಿದ್ದವು. ಆದರೆ ನನ್ನ೦ತೆ , ನಿಮ್ಮಂತೆ ಮುಖವಾಡಗಳಿರಲಿಲ್ಲ. ಮುಖವಾಡ ತೊಟ್ಟ ನಾವು , ಮುಖವಾಡರಹಿತ ಅವನ ಮುಖಕ್ಕೆ ಅಸಹ್ಯ ಪಡುತಿದ್ದೆವು. ವಾಕರಿಸುತ್ತಿದ್ದೆವು. ಅವನು ತನ್ನ ಆಯಾಮದಲ್ಲಿ ತನ್ನನೇ ಕಟಿದು ನಿಲ್ಲಿಸಿದ ಶಿಲ್ಪಿಯಾಗಿದ್ದ. ಅವನು ನಮ್ಮ೦ತೆ - ನಿಮ್ಮ೦ತೆ ಲೋಳೆಯಾಗಿರಲಿಲ್ಲ. ಅವನು ಘನವಾಗಿದ್ದ. ಕಠಿಣವಾಗಿದ್ದ. ಕಾಲನ ಏಟಿಗೆ ಅವನು ಶಿಲ್ಪವಾಗಲಿಲ್ಲ.. ಅವನು ಛಿದ್ರವಾಗುತ್ತಿದ್ದ.
ನನ್ನ ಅವನ ಮಾತು ಮೆಲ್ಲಗೆ ಹರಿಯುತ್ತಿತ್ತು. ದೀರ್ಘವಾಗಿ ,  ತುಂಡು-ತುಂಡಾಗಿ  , ಗಟ್ಟಿಯಾಗಿ , ಮೆತ್ತಗಾಗಿ , ಕೆಲವೊಮ್ಮೆ ಸ್ವಗತವಾಗಿ , ಅಭಿನಯವಾಗಿ .
ಅವನು ದು:ಖದ ತುಂಡಿನಂತೆ ಮೂರ್ತನಾಗಿದ್ದ.
" ನೀನು  ಪ್ರೀತಿಸದೇನೇ , ನಿನ್ನ ಕತೆಗಳಲ್ಲಿ ಭಗ್ನ ಪ್ರೇಮಿಯಾಗುತ್ತಿ ಸಚ್ಚೀ.. ನೀನು ಕತೆಗಳಲ್ಲಿನ ಭಗ್ನ ನನ್ನ ಕೊರಡನ್ನು ಮತ್ತಷ್ಟು ಕೊರೆಯುತ್ತದೆ.. ನಾನು ನೆನಪಿಸಿ ನೆನಪಿಸಿ ಭಗ್ಞನಾಗುತ್ತೇನೆ.. ಕೇಳಬೇಡ ಸಚ್ಚೀ ನನ್ನ ಕೇಳಬೇಡ.. ನಾನು ಮಾತಲ್ಲ ಮೌನ.. ಮೌನ .. " ಬಡಬಡಿಸುತ್ತಿದ್ದ. ಹೀಗೆ ಹೇಳುತ್ತಲೇ ಅವನು ಮಾಯವಾಗಿದ್ದ.
ಪ್ರೀಯ ಓದುಗರೇ ,
ಇಲ್ಲಿ ಇವತ್ತಿಗೂ ಕುಳಿತು ನಾನು ಟೀ ಹೀರುತ್ತೇನೆ. ಮೌನವಾಗಿ , ಕೆಲವೊಮ್ಮೆ ಸಶಬ್ದವಾಗಿ.. ಇಲ್ಲಿನ ಜಾಗಗಳಲ್ಲಿ ನಾನು ಸಂಧಿಸಿದ ಹಲವರು ಕತೆಗಳನ್ನು ಅದ್ದಿ - ಅದ್ದಿ ಕೊಟ್ಟಿದ್ದಾರೆ. ನಾನು ಕುಡಿದು ಕುಡಿದು ಚಳಿಯ ಓಡಿಸಲು ಹೆಣಗುತ್ತೇನೆ.
ಒಳಗೆ ಇಳಿದ ಕತೆಗಳು ಕದಲುತ್ತವೆ  ನಾನು ಕನಲುತ್ತೇನೆ.. ಶಬ್ದಗಳು ಕೆರಳುತ್ತವೆ..!

 

ಭಾಗ ೧ : 

 ದ್ವಂದ್ವ , ಅಸಂಬದ್ದ , ಬಡಬಡಿಕೆ , ಏಕಪಾತ್ರಭಿನಯ..

" ಕರೆದೆಯಾ ದನಿ ?"
" ಮ್ಜ್"
" ಬಂದಿದ್ದೇನೆ ದನಿ"
" ಕೇಳುತ್ತಿರುವೆಯಾ?"
"ಹ್ಮ್"
" ಹೇಗೆ?"
" ಹೀಗೆ , ಸಂಪೂರ್ಣವಾಗಿ . ಉರುಟಾಗಿ , ಗೋಲವಾಗಿ. ಕೆಲವೊಮ್ಮೆ ತುಂಡು-ತುಂಡು. ನೀನು ಹೇಳಿದ್ದು , ಉಸಿರಿಸಿದ್ದು , ಪಸರಿಸಿದ್ದು, ಬಿಟ್ಟಿದ್ದು , ಕೊಟ್ಟಿದ್ದು. ನಿನ್ನ ನೆನಪು ಅಲೆ-ಅಲೆಯಾಗಿ ಕೇಳುತ್ತೇನೆ. ನಿನಗೆ ನೆನಪಿದೆಯಾ ದನಿ? ಅವತ್ತೂ ನಾವು ಕೇಳುತ್ತಿದ್ದೆವು. ನಿನ್ನ ಎದೆಯ ದ್ವಾರದಲ್ಲಿ ಮುಖವಿಟ್ಟು ನಾನು ಕೂಗಿದರೆ , ಶಬ್ದ ನನ್ನ ಎದೆಯ ಗೋಡೆಯೊಳಗೆ ಬಡಿ- ಬಡಿದು , ಪ್ರತಿಧ್ವನಿಸಿ ಮತ್ತೆ ನಿನ್ನ ಹೊಕ್ಕು , ನನ್ನ ಮನದೊಳಗೆ ಮೊಳಗುತಿತ್ತು. ಅವತ್ತು ಕೇಳಿದ್ದೆವು. ನಿನ್ನ , ನಾನು ; ನನ್ನ ನೀನು..!  ಕೇಳುತ್ತಾ ಕುಳಿತವರ ಜಗತ್ತಿನಲ್ಲಿ ನಮ್ಮಿಬರದೇ ಶಬ್ದಗಳು..! ನಿನ್ನ ಧ್ವನಿಗೆ ನನ್ನ ಪ್ರತಿಧ್ವನಿ .. ನನ್ನ ಪ್ರತಿಧ್ವನಿಗೆ ನಿನ್ನ ಧ್ವನಿ.. ಎಲ್ಲೇ ದಾಟಿ ಇಬ್ಬರ ಮೇಲೂ ಹರಿದ ಮಾತಿನ ಮಳೆಯ ತುಂತುರು ..  ನನ್ನ ತುಟಿಯ ಮೇಲೆ ನಿಂತ ಶಬ್ದ ಹನಿಗಳನ್ನ ನೀನು ನಿನ್ನ ತುಟಿಯಿಂದ ಬಸಿ- ಬಸಿದು ನನ್ನೊಳಗೆ ಸೋಲುತ್ತಿದ್ದೆ. ನಮ್ಮಿಬ್ಬರ ದೇಹದಿಂದ ಹೊರಟ ಕಂಪನಗಳ ಮೆರವಣಿಗೆ , ತರಂಗಳ ಹೊತ್ತು  ಪ್ರೀತಿಯಲ್ಲಿ ಸಾಗುತಿತ್ತು. ಒಲವ ತರಂಗಗಳು ಜಲಪಾತದಂತೆ  ಮನಸ್ಸಿನಲ್ಲಿ ದುಮ್ಮಿಕ್ಕಿ ನಮ್ಮಿಬ್ಬರ ಎದೆಯಲ್ಲಿ ವಸಾಹತು ಸೃಷ್ಟಿಸಿಕೊಂಡಿದ್ದವು." ( ಮಾತು ಥಟ್ಟನೆ ಸ್ಥಗಿತ)

" ಮಾತನಾಡು ಶ್ರೀ ಮಾತನಾಡು.. ನಿನ್ನ ಮಾತುಗಳು ನನ್ನ ತುಂಬುತ್ತಿರಬೇಕು. ನನ್ನ ಒಡಲು ಉಕ್ಕಿ ಹರಿಯುವಷ್ಟು ಮಾತನಾಡು. ನಾನು ಒಳಗೊಳಗೆ ಕಟ್ಟಿ ನಿಂತ ಆಣೆಕಟ್ಟಾಗುತ್ತೆನೆ. ನಿನ್ನ ಧ್ವನಿಗೆ , ನಿನ್ನ ಶಬ್ದಕ್ಕೆ , ಅವುಗಳ ಉಸಿರಿಗೆ ನಾನು ತುಂಬಿ ನಿಂತ ಪ್ರೀತಿಯಾಗಿ , ಕೊನೆಗೊಂದು ದಿನ ನನ್ನ ಒಡಲ ನಾನೇ ಸ್ಪೊಟಿಸೀ , ಉಕ್ಕಿ ಹರಿದು ನಿನ್ನ ಸೆಳೆಯುತ್ತೇನೆ. ನನ್ನ ಪ್ರೀತಿ ಸುಳಿಯಲ್ಲಿ ನೀನು ಗಿರ ಗಿರನೆ ತಿರುಗಿ , ಸುಳಿಯ ಅಲೆಯಾಗು. ಕೊಚ್ಚಿ ಹೋಗು. ತುಂಬಿಸು ಶ್ರೀ ನಿನ್ನ ಶಬ್ಧಗಳ .. ನನ್ನ ಜಿಟಿ- ಜಿಟಿ ರಿಪಿ ರಿಪಿ ಯಾಗಿಸು.


ಇಲ್ಲ ದನಿ ನಾನು ಮಾತನಾಡುವದಿಲ್ಲ. ನಾನು ಮೌನಿಯಾಗುತ್ತೇನೆ. ಸಮಾಧೀಯೊಳಗೆ ನೀನು ಮೌನಿಯಾದಂತೆ ನಾನು ಬದುಕಿನ ಸಮಾಧೀಯೊಳಗೆ ಮೌನವಾಗುತ್ತೇನೆ. ಸಮಾಧೀಯೊಳಗೆ  ನೀನುಮುಚ್ಚಿಕೊಂಡಂತೆ ನಾನು ನನ್ನಷ್ಟಕ್ಕೆ ಮುಚ್ಚಿಕೊಂಡು ಬಿಡುತ್ತೇನೆ. ನಾನು ಮರೆಯಾಗಿ ಬಿಟ್ಟೆ ದನಿ. ನಿನ್ನ ಮರೆಯೊಂದಿಗೆ ನಾನು ಮರೆಯಾದೆ. ನಿನ್ನ ಕೊಂದ ಪಾಪಿಗಳ ಶಬ್ಧ ಮಾತಿಗೆ ನಾನು ಇರಿಯುತ್ತೇನೆ. ನಾನು ಮೌನದಿಂದ ಚುಚ್ಚುತ್ತೇನೆ. ಪದರ ಪದರವಾಗಿ ಅವರನ್ನು ಬಿಡಿಸಿ  ಸುಲಿದು , ಕೆತ್ತಿ ತೆಗೆದು , ಪ್ರತಿ ಪದರಕ್ಕೂ ತಿವಿಯುತ್ತೇನೆ. ನನ್ನ ಮೌನದ ಹೊಡೆತಕ್ಕೆ ಅವರ ಶಬ್ದಗಳು ಹನಿ ಹನಿಯಾಗಿ ಸೋರುತ್ತವೆ. ಸೋರಿದ ಹನಿಗಳು ನೀನು ಮಣ್ಣಾದ ನೆಲಕ್ಕೆ ಬೀಳುವ ಮೊದಲೇ ನನ್ನ ಮೌನದ ನಾಲಗೆಯ ಈಈಈ  ಎಂದು ಚಾಚಿ ಹೀರಿಬಿಡುತ್ತೇನೆ. ಅವರು ಸೋರಿ - ಸೋರಿ  ಬರಿದಾಗಿ ನಿ:ಶಕ್ತರಾಗಿ , ಮಾತುಗಳೇ ಖಾಲಿಯಾಗಿ , ಮಾತುಗಳೇ ಇಲ್ಲದವರಾಗಿ , ರಚನೆಯೇ ಇಲ್ಲದ ಆಮೀಬಾಗಳಾಗಿ ಬರಡು ಬರಡಾದಾಗ , ನನ್ನ ಮೌನ ಅವರ ಹುಡುಕಿ ಕೆತ್ತಿ ಕಿತ್ತು ಕಿತ್ತು ತಿಂದು ಮುಗಿಸುತ್ತದೆ. ಸತ್ತು ಹೋದ ಅವರ ಮಾತುಗಳ ಕಳೇಬರವನ್ನು ಲಟಕ್ಕನೆ ಮುರಿದು  , ಸೀಳಿ , ನೆಲಕ್ಕೆ ಅಪ್ಪಳಿಸಿ ದಿಕ್ಕು ದಿಕ್ಕಿಗೂ ಎಸೆದು ಬಿಡುತ್ತೇನೆ. ಮುರಿದಾಗ ಬೀಳುವ ಚೂರುಗಳನ್ನು ಬೀಳದಂತೆ ಹಿಡಿದು ನೆಕ್ಕಿ ಬಿಡುತ್ತೇನೆ.

"ದೇವಾ ! ಏನಾಗಿದೆ ಶ್ರೀ? "

"ಆಗುವದು ಇನ್ನೇನು ಇಲ್ಲ ದನಿ. ಆಗಬೇಕಾಗಿದ್ದು ಆಗದೇ , ಆಗಬಾರದ್ದು ಆಗಿ ಹೋದ ಮೇಲೆ ಇನ್ನೇನು ಆಗಬೇಕಿದೆ?
ಹೇಳು ದನಿ ನೀನು ಹೇಗಿದ್ದೀಯ? ಸಮಾಧೀಯೊಳಗೆ ನನ್ನ ನೆನಪುಗಳಿವೆಯೇ? ಅವು ಚಿತ್ಕರಿಸುತ್ತವೆಯೇ? ಅಲ್ಲಿಯೂ ನಕ್ಷತ್ರಗಳಿವೆಯೇ ? ಚಂದಮನಿದ್ದಾನೆಯೇ? ನಮ್ಮಿಬ್ಬರ ಹಣತೆಯಿದೆಯೇ? ಕಣ ಕಣಗಳಿವೆಯೇ? ಹೇಳು ದನಿ  ನೀನು ಹೇಳುತ್ತಲೇ , ನಾನು ಕೇಳುತ್ತಲೇ ಅಣುವಾಗುತ್ತೇನೆ. ಅಣು ಪರಮಾಣುವಾಗಿ , ಬೀಜಕೇಂದ್ರವಾಗಿ , ಸೂಕ್ಶ್ಮಾತಿಸೂಕ್ಶ್ಮ ಕಣವಾಗಿ , ಕಣ ಹಗುರವಾಗಿ ಎಲ್ಲೆಗಳ ದಾಟಿ , ಹಾರಿ ತೇಲಾಡಿ ನಿನ್ನ ಎದೆಯ ಪೊಟರೆಯೊಳಗೆ ಕೇ೦ದ್ರವಾಗುತ್ತೇನೆ.  ಹೇಳು ದನಿ ಹೇಳು."


" ಚಂದಮನಿದ್ದಾನೆ ಶ್ರೀ. ನಿನ್ನ ಚಂದಮ ನನ್ನ ಚಂದಮ. ನಕ್ಷತ್ರಗಳಿದ್ದಾವೆ. ನಮ್ಮಿಬ್ಬರ ನಕ್ಷತ್ರಗಳು. ನನ್ನ ಅಂತಿಮ ನಿರ್ಗಮನದ ಹಿಂದಿನ ದಿನ ನೀನು ಬೊಗಸೆಯಲ್ಲಿ ಕೊಟ್ಟ ನಕ್ಷ್ತ್ರಗಳನ್ನು ತೂಗಿ ಹಾಕಿದ್ದೇನೆ ಶ್ರೀ. ಅವುಗಳ ಬೆಳಕಲ್ಲಿ ನಿನ್ನ ನೆನಪಿಗೆ ಜೋಗುಳ ಹಾಡುತ್ತೇನೆ. ಇಲ್ಲಿ ನನ್ನ ಆಗಸದಲ್ಲಿ ನಾವಿಬ್ಬರೇ. ನನ್ನ ಚುಕ್ಕಿ , ನಿನ್ನ ಚುಕ್ಕಿ.ಇಲ್ಲಿನ ರಾತ್ರೆಗಳಿಗೆ ಹಗಲುಗಳೇ ಇಲ್ಲ ಶ್ರೀ. ಎಲ್ಲವೂ ಶಾಪಗ್ರಸ್ತ ರಾತ್ರೆಗಳು. ಅವುಗಳ ಮಧ್ಯೆ ನಿನ್ನ ನೆನಪು ಶಾಪಗ್ರಸ್ತ ಗಂಧರ್ವ."

ರಾತ್ರೆಗಳು ದೀರ್ಘವಾಗುತ್ತಿವೆ ಶ್ರೀ. ನಿನ್ನ ನೆನಪಲ್ಲಿ ಮನಸ್ಸು ಲಂಬವಾಗಿ , ಊರ್ಧ್ವವಾಗಿ ೯೦ ಡಿಗ್ರಿ ನೇರವಾಗಿ ಉಳಿಡುತ್ತದೆ. ನಿನಗೂ ಹೀಗೆ ಆಗುತ್ತದೆಯ ಶ್ರೀ??


" ಆಗುತ್ತದೆ ದನಿ. ಕಾಲನ ಬೆಟ್ಟದ ಬುಡದಲ್ಲಿ ಕಟ್ಟಿದ ನನ್ನ ಮನಸಿನ ಮನೆಗೆ , ಬೆಟ್ಟದ ಮೇಲಿಂದ ನಿನ್ನ ನೆನಪಿನ ಬಂಡೆಗಳು ಧಡ-ದಡನೆ ಉರುಳುರುಳಿ ಬರುತ್ತವೆ. ದೈತ್ಯ ಬಂಡೆಗಳು ಎಲ್ಲವನ್ನು ಛಿದ್ರಗೊಳಿಸುತ್ತವೆ. ಆಸೆಯನ್ನು , ದೇಹವನ್ನು , ನಿರಾಸೆಯನ್ನು , ತಣಿವನ್ನು , ತೃಪ್ತಿಯನ್ನು, ಮಾತನ್ನು , ಹಸಿವನ್ನು. ಉರುಳಿ ಬರುತ್ತಿರುವ ಬಂಡೆಗೆ ಆಹುತಿಯಾಗಲು ಸಮೀತ್ ಆಗಿ ನಿಲ್ಲುತ್ತೇನೆ. ನಿನ್ನ ನೆನಪಿನ ಬಂಡೆಗಳು ರಭಸ ಹೆಚ್ಚಿಸಿ ನನ್ನ ಎದೆಗೆ ಬಡಿದು , ಹೃದಯವ ಛಿದ್ರಗೊಳಿಸಿ , ಎದೆಯಲ್ಲೊಂದು ರ೦ಧ್ರ ಕೊರೆದು ಮಾಯವಾಗುತ್ತವೆ. ದಿನ ಕಳೆದರೆ , ಕಣ್ಣು ಮುಚ್ಚಿದರೆ , ತೆಗೆದರೆ , ನಿಂತರೆ ಕುಳಿತರೆ , ಉಸಿರಾಡಿದರೆ ನಿನ್ನ ನೆನಪಿನ ಬಂಡೆಗಳ ಬಡಿತ. ದನಿ ನೋವು ಸಹಿಸಲಾರೆ.

"ಅಯ್ಯೋ ..!! ಅದು ಹೇಗೆ ಬದುಕುತ್ತಿ , ಇಂತಹ ನೋವಿನಲ್ಲಿ?'
" ಬದುಕುವದಿಲ್ಲ ದನಿ ಸಾಯುತ್ತೇನೆ. ಮುಷ್ಟಿಯೊಳಗೆ ಬಿಗಿ ಹಿಡಿದ ಮರಳು ಸ್ವಲ್ಪ ಸ್ವಲ್ಪವಾಗಿ ಸೋರುವಂತೆ ನಾನು ಸ್ವಲ್ಪ ಸ್ವಲ್ಪವಾಗಿ ಸೋರಿ ಹೋಗುತ್ತಿದ್ದೇನೆ. ಕುದಿಸಿ ಬಿಡು ದನಿ ನನ್ನ ಕುದಿಸಿ ಬಿಡು. ನನ್ನ ಕೋಶ ಕೋಶಗಳನ್ನು ಹೊರಗೆ ಕಿತ್ತು ಎಳೆದು , ಒಗೆದು ಒಣಗಿಸಿ ಹರವಿ ಅದರೊಳಗೆ ನಿನ್ನ ತುಂಬಿ ಮತ್ತೆ ಕುದಿಸು. ರಕ್ತ ಬೆಂದು ಗೊಡ- ಗೊಡನೇ ಶಬ್ಧ ಬರುವಂತೆ , ಶಬ್ದ ಗುಳ್ಳೆಗಳಾಗಲಿ. ಗುಳ್ಲೆಗಳು ಒಡೆದು ಅದರೊಳಗಿನ ನಮ್ಮಿಬ್ಬರ ಆವಿ ಅಗಸದೆತ್ತರಕ್ಕೆ ಚಿಮ್ಮುವಂತೆ ಊದಿಬಿಡು. ಆವಿ ಮತ್ತೆ ಮೋಡವಾಗಿ ಮೋಡ ಮಳೆಗಟ್ಟಿ ಹನಿಗರೆದು , ಮತ್ತೆ ನಾನು ನಿನ್ನಲ್ಲಿ ಧೋ ಎಂದು ಬೀಳುತ್ತೇನೇ. ಲೀನವಾಗುತ್ತೇನೆ. ಹೀರಿಬಿಡು ದನಿ ನನ್ನ ಕಣ- ಕಣಗಳನ್ನು . ಬರಲೇ ದನಿ ನಿನ್ನ ಬಳಿ.. ಬರಲೇ ??"

" ಬಾ ಶ್ರೀ ಬಂದುಬಿಡು. ಉಸಿರಾಗಿ ಹಸಿರಾಗಿ. ಅನಂತ ಕತ್ತಲೆಯ ಸಮಾಧೀಯೊಳಗೆ ನಮ್ಮಿಬ್ಬರ ನಕ್ಷತ್ರಗಳ ಹಚ್ಚೋಣ. ಲೆಕ್ಕವೇ ಇಲ್ಲದ ದಿನಗಳ ಎಣಿಸೋಣ. ಎಣಿಸುತ್ತಾ ನಿನ್ನಲ್ಲಿ ನಾನು , ನನ್ನಲ್ಲಿ ನೀನು ಶರಣಾಗೋಣ."
( ಆಹ್ವಾನ)
"ಹಾಯ್ ದೇವರೇ..!"
( ಕೊನೆ)

 

ಭಾಗ ೨ :

 ಕೆಲವು ಹೇಳಿಕೆಗಳು ( ಬಾಲಿಶ(!?)

 

ಎಸ್. ಬಿ. ಪರಮನಾಥ್ ಜೋಷಿ : ವಕೀಲ
" ನಾನು ಲಾ ಪ್ರಾಕ್ಟೀಸು ಮಾಡುವದಕ್ಕು ಮೊದಲಿಂದ ಅವರು ಪ್ರೀತಿಸುತ್ತಿದ್ದರು. ಅವರದು ಅಪರೂಪದ ಪ್ರೀತಿ . ಅವತ್ತು ಏನಾಯಿತೋ  ಗೊತ್ತಿಲ್ಲ. ಅವಳು ಮಣ್ಣಾದಳು. ಪೊಲೀಸರು ಇವನು ಎಂದರು. ಬಡಿದರು. ಕೊನೆಗೆ ಸಹಜ ಮರಣ ಎಂದರು. ಇವನು ಹುಚ್ಚ್ನಾದ . ರಾತ್ರಿಯೆಲ್ಲ ಹಲಭುತಿದ್ದ. ನನಗೆ ಗೊತ್ತು ಸಾರ್ ಎಲ್ಲ ಗೊತ್ತು. ಯಾರನ್ನು ಬಿಡುವದಿಲ್ಲ. ಎಲ್ಲರ ಮೇಲೂ ಕೇಸು ಜಡಿಯುತ್ತೇನೆ. ಸತ್ಯಕ್ಕೆ ಸಾವಿಲ್ಲ ಸಾರ್.

ಆರ್. ಜಾರೇಶ್ವರಿ ನಾಯ್ಕ್ - ಗೃಹಿಣಿ
ತಥ್..! ಅವನೆಂತ ಮನುಷ್ಯಾರಿ? ಅಷ್ಟು ದರಿದ್ರ.. ಥೂ.. ಚೆಂದ ಹುಡುಗಿ ಅವಳನ್ನು ತಿಂದ.  ಪ್ರೀತೀಯಂತೆ ಪ್ರೀತಿ ಯಾವ ಸೀಮೆ ಪ್ರೀತಿ? ಇವನಿಂದಲೇ ಅವಳು ಹಾಳಾಗಿದ್ದು. ಸತ್ತಿದ್ದು. ಏನು ಮಾಡಿದ್ದಾನೋ ಏನೋ , ಯಾರೀಗ್ ಗೊತ್ತು. ಎಲ್ಲರೂ ಆಡ್ಕೊತಾರೆ. ಏನೋ ಮಾಡಿದ್ದಾನಂತೆ. ಪಾಪ ಮಾಡದೇ ಇದ್ದಿದ್ರೆ ಇವನಿಗೆಹುಚ್ಚು ಹಿಡಿಯುತ್ತಿತ್ತೇ? ಕೊನೆಗೆ ಇವನು ಸತ್ತ ನೋಡಿ . ಒಳ್ಳೆಯದೇ. ಇಲ್ಲವಾದರೆ ನಮ್ಮಂತಹ ಮರ್ಯಾದಸ್ತರು ಬದುಕುವದು ಹೇಗೆ?

ಅವಳ ಮನೆಯವರು :
ಇಲ್ಲ ನಾವೇನೂ ಹೇಳುವದಿಲ್ಲ. ಅಷ್ಟಕ್ಕೂ ಕೇಳುವದಿಕ್ಕೇ ನೀವ್ಯಾರೂ? ಅವನ ಜೊತೆಯವರೋ? ಹಾಗಾದ್ರೆ ಒಂದು ಮಾತು ನೆನಪಿನಲ್ಲಿ ಇಟ್ಕೊಳ್ಲಿ ಇವಳು ಯಾವತ್ತೂ ಅವನನ್ನು ಪ್ರೀತಿಸಲಿಲ್ಲ.  ಇನ್ನೂ ಹೇಳುವದು ಏನು ಇಲ್ಲ ಸಾಕು ನಡೆಯಿರಿ.

 

ಅತೀತ :ಅವನು ಆಕಾಶ ನೋಡಿ ನಗುತ್ತಾನೆ. ಚುಕ್ಕಿಗಳ ಜೊತೆ ಮಾತನಾಡುತ್ತಾನೆ. ಅಳುತ್ತಾನೆ. ಏಕ್‌ಪಾತ್ರಭಿನಯ ಮಾಡುತ್ತಿದ್ದಾನೆಯೇ ಎಂಬ ಸಂದೇಹ ಬರುತ್ತೆ. ಯಾರೊಂದಿಗೋ ಸಂಭಾಷಿಸುತ್ತಾ ಇರುತ್ತಾನೆ. ಒಮ್ಮೆ ಧ್ವನಿ ಅವಳಾಗಿ , ಇನ್ನೊಮ್ಮೆ ಇವನಾಗಿ. ಕೆಲವೊಮ್ಮೆ ಮಂದ್ರ ಇನ್ನೊಮ್ಮೆ ಸಾಂದ್ರ . ಶೂನ್ಯದಲ್ಲಿ ಬಡಬಡಿಸುತ್ತಾನೆ. ಅವನಿಗೆ ಮೈ ಮೇಲೆ ಬರುತ್ತದೇಯ೦ತೆ. ಅವನು ಅವಳ ಆತ್ಮದ ಜೊತೆ ಮಾತನಾಡುತ್ತಾನಂತೆ..!!

ಉಪಸಂಹಾರ :ಅವನ ಶವ ಸಂಸ್ಕಾರದ ದಿನ  ನಾನು , ಪೊಲೀಸು ಹಾಗೂ ಮಹಾನಗರಪಾಲಿಕೆಯ ಕೆಲಸಗಾರರಿದ್ದರು.
ಅವಳು ಮಣ್ಣಾದಲ್ಲಿ ಇವನನ್ನು ಮಣ್ಣು ಮಾಡಿ ಎಂದಾಗ ನನ್ನ , ಎಲ್ಲರೂ ದುರುಗುಟ್ಟಿ ನೋಡಿದರು.

Sunday, December 26, 2010

ಬಿಡಿ- ಬಿಡಿ ವಿಷಾದಗಳು ...

ಕಣ್ಣು ಮುಚ್ಚಿದ ಕಾಲ ಸಾಯುವದೆ ಇಲ್ಲ
ಸಾಯುವವರು ನಾವುಗಳು , ನೀವುಗಳು
   ನಮ್ಮ - ನಿಮ್ಮ  ನೆನಪುಗಳು ..
ಮರೆತು ಹೋದ ಸಂಬಂದಗಳು...!!
.....      ......       ......        ......

ಹೈದೆರಾಬಾದಿನ ಬೀದಿ- ಬೀದಿಗಳಲ್ಲಿ , ಬಿರಿಯಾನಿ ವಾಸನೆ ,
ತಿನ್ನಲು ಹೋದರೆ ಕಣ್ಣ ಮುಂದೇ , ಗಾಂಧಿ ಬಜಾರಿನ ಮುದುಕಿಯ
ಜೋತು ಬಿದ್ದ ಕಂಗಳು .. ನಾಳೆಯ ಸಾವಿನ  ವಾಸನೆ..!!
..... ........      .......        ......      ......      .....

ಸುಕಾ ಸುಮ್ಮನೇ ರಾತ್ರಿಗಳು ಧೀರ್ಘವಾಗುತ್ತಿವೆ ,
ಅನಾಥ ಕನಸುಗಳಲ್ಲಿ ನೆನಪುಗಳ ಮೌನ ಮೆರವಣಿಗೆ ..!!
...... ......      ......    ......      .......
ನಿದ್ರೆ ಬರದ ರಾತ್ರಿಗಳಲ್ಲಿ , ಹಳೆಯ ಹೊದಿಕೆಯ ಅಂಚಿನಲಿ
ಬೆವತು ಬೆವರಾಗಿ , ಕರಗುವಾಗ
ಮನಸು ಆಕ್ರಂದಿಸುತ್ತಿದೆ ಕ್ಷಮಿಸು ಒಲವೇ...!!

Friday, December 24, 2010

ಕನಸು ಕಳೆದಿದೆ..!!

"ಇಲ್ಲಿ ಕನಸುಗಳನ್ನು ಮಾರಲಾಗುತ್ತದೆ."
ಈ ಬೋರ್ಡ್‌ನ್ನು ನೋಡಿದಾಗ ನಾನು ಕೂಡ ನಿಮ್ಮಂತೆ ಆಶ್ಚರ್ಯ ಚಕಿತನಾಗಿದ್ದೆ. ಆದರೆ ನಾನು ಅಂಗಡಿಯಎದುರಿಗೆ ನಿಂತಿದ್ದೆನಾದರಿಂದ ಕುತೂಹಲ ಹತ್ತಿಕ್ಕಿಕೊಳ್ಳಲಾಗದೆ ಒಳ ಪ್ರವೇಶಿಸಿದೆ.
"ಬನ್ನಿ ಸಾರ್ ಬನ್ನಿ" ಅಂಗಡಿಯಾತ ಕನಸುಗಳ ಸಂಗ್ರಹಕ್ಕೆ ಸ್ವಾಗತಿಸಿದ.
ನಾನು ಕನಸುಗಳ ಮಹಾ ಮಾರ್ಕೆಟಿನೊಳಗೆ ನಡೆದೆ.
ದಿಟ್ಟಿಸಿದೆ.
ಸುತ್ತಲೂ... ಎತ್ತಲೂ.....ಅತ್ತ ಇತ್ತಲೂ......
ಒಂದು ರಾಶಿ ಕನಸುಗಳು.....!
ಎರಡು ರಾಶಿ ಕನಸುಗಳು.....!!
ಮೂರು ರಾಶಿ ಕನಸುಗಳು...!!!
ಹಲವಾರು ರಾಶಿ ಕನಸುಗಳು......!!!!
ಎಣಿಸಲಾರದಷ್ಟು....!
ಸುತ್ತಲೂ ಕನಸುಗಳ ಹಸಿ ವಾಸನೆ.... ಕೆಲವೊಮ್ಮೆ ವಿಚಿತ್ರವಾಗಿ.... ಕೆಲವೊಮ್ಮೆ ಸಹಿಸಲಸಾಧ್ಯವಾಗಿ...
ಕೆಲವನ್ನು ಸುಂಮ್‌ನೆ ತೂಗಿಹ್ಹಾಕಿದ್ದರು...
ಹಲವನ್ನು ಅಲ್ಲೇ ಇಟ್ಟಿದ್ದರು....
ಕೆಲವು ನೇರವಾಗಿ ನಿಂತ ಕನಸುಗಳು....
ಕೆಲವು ಮಲಗಿದ್ದವು...
ಹಲವು ಕುಳಿತಿದ್ದವು...
ಕೆಲವು ಮೌನವಾಗಿ ಬಿಕ್ಕುತ್ತಿದ್ದವು... ಕೆಲವು ನಗುತ್ತಿದ್ದವು.... ಇನ್ನೂ ಕೆಲವು ಅಳುತಿದ್ದವು....
ಕೆಲವು ಕನಸುಗಳು ಭಯ ಹುಟ್ಟಿಸುವಷ್ಟು ಮೌನವಾಗಿದ್ದವು... ಇನ್ನೂ ಒಂದಷ್ಟು ಕನಸುಗಳು ಆತಂಕಗೊಂಡಿದ್ದವು... ಹಳವಷ್ಟು ಅಂಗಾತಾನೆ ಬಿದ್ದು ಕೊಂಡು ಎತ್ತ್ಲೋ ದಿಟ್ಟಿಸುತ್ತಿದ್ದವು.
ಕೆಲವುಗಳ ಕಣ್ಣಲ್ಲಿ ಕಾಮ ...ಕಿತ್ತು ತಿನ್ನುವ ಬಯಕೆ .... ಇನ್ನೂ ಕೆಲವಕ್ಕೆ ತೀರದ ಧನದಾಹ... ಇನ್ನೂ ಹಳಾವಕ್ಕೆ ಒಂದು ತುತ್ತು ಅನ್ನದಾಸೆ...... ಕೆಲವು ಕನಸುಗಳು ಯಾವುದೋ ಧಾವಂತಕ್ಕೆ ಬಿದ್ದಂತೆ ಅವಸರದಲ್ಲಿದ್ದವು....
ನಾನು ಎಲ್ಲವನ್ನು ದಿಟ್ಟಿಸಿದೆ...
ಪರೀಕ್ಷಿಸಿದೆ......
ತಡಕಾಡಿದೆ... ಸುಮ್ಮನೇ ಮೈದಡವಿದೆ....
ಅವುಗಳ ನಡುವೆ ನಿಂತು ಜನುಮಾದ ಗೆಳೆಯನಂತೆ ಕನವರಿಸಿದೆ.....
ಯಾರನ್ನೋ ಹುಡುಕುವಂತೆ ... ಯಾರನ್ನೋ ಕಳೆದು ಕೊಂಡಂತೆ ಚಡಪಡಿಸಿದೆ.....
ಹಾಗೂ ನಾನು ನಿಧಾನವಾಗಿ ಕನಸು ಮಾರುವ ಅಂಗಡಿಯ ಗರ್ಭದೊಳಗೆ ಇಳಿಯತೊಡಗಿದೆ.
ಒಳಗೆ ಹೋದಂತೆ ಅಲ್ಲಿ ಕನಸುಗಳು ಸಂಬಂದಾಗಳಾಗಿದ್ದವು.
ಎಲ್ಲಿ ಸಂಬಂದಾಗಳೆ ಕನಸುಗಳಾಗುತ್ತವೆಯೇನೋ ಎಂದು ಒಂದು ಕ್ಷಣ ಆತಂಕವಾಯಿತು.!
ಅಪ್ಪ ಕಂಡ ಕನಸು...ಅಮ್ಮನ ಕನಸು... ಪ್ರೀತಿಸಿದ ಹುಡುಗಿಯ ಕನಸು... ಅವನ ಕನಸು.. ಅವಳ ಕನಸು...ಯಾರದೋ ಒಬ್ಬರ ಕನಸು... ಊರವರ ಕನಸು...
ಗುರುಗಳ ಕನಸು...ಎಲ್ಲರ ಕನಸು...
ಕನಸಿಗೆಲ್ಲ ಸಂಬಂದ...
ಎಲ್ಲ ಸಂಬಂದಗಳಿಗೂ ಒಂದೊಂದು ಕನಸು...!  ಎಲ್ಲ ಕನಸುಗಳಿಗೂ ಒಂದೊಂದು ಸಂಬಂದ.....!
ಕೆಲವು ನನಸಾದ ಕನಸುಗಳು...  ಹಲವು ನನಸಾಗುವ ದಾರಿಯಲ್ಲಿನ ಕನಸುಗಳು....
ಇನ್ನೂ ಕೆಲವಕ್ಕೆ ನನ್ನಸಿನ ಹಾದಿಯಲ್ಲೇ ಗರ್ಭಪಾತ... ಹಲವಕ್ಕೆ ಬಲವಂತದ ಆತ್ಮಹತ್ಯೆ...
ನಾನು ಹುಡುಕಾಡಿದೆ...
ನಾನು ಎಲ್ಲ ಕನಸುಗಳನ್ನು  ಹುಚ್ಚು ಹಿಡಿದವನಂತೆ ತಡಕಾಡಿದೆ...
ಎಲ್ಲವನ್ನು ಮತ್ತೆ ಮತ್ತೆ ಪರೀಕ್ಷಿಸಿದೆ....
ಎಲ್ಲಿಯೋ ಒಂದು ಕಡೆ ನನ್ನದು ಒಂದು ಕಾಣ್ಸು ಇರಬಹುದು ಎಂಬ ಅನಾಥ ಹಂಬಲ...!!
ಪುಟ್ಟ ಆಸೆ...!!
ಕನಸ್ಸಾಗಿಯೇ ಇದ್ದ ಕನಸುಗಳ ಎಡೆಯಲ್ಲಿ...
ನನಸಾದ ಕನಸುಗಳ ಮಗ್ಗುಲಲ್ಲಿ...ದೊಡ್ಡ-ದೊಡ್ಡ ಕನಸುಗಳ ಅಡಿಯಲ್ಲಿ...ನನ್ನ ಪುಟ್ಟ ಕನಸಿಗಾಗಿ ತಡಕಾಡಿದೆ...
ಸಿಗಬಹುದು ಎಂಬ ಆಶೆ.. ಸಿಗುವುದು ಎಂಬ ಬಯಕೆ... ಸಿಗಲಿ ಎಂಬ ಪ್ರಾರ್ಥನೆ
ಕೊನೆಯ ಕನಸಿನವರೆಗೂ ಹುಡುಕಾಡಿದೆ... ಸಿಗಲೇ ಇಲ್ಲ..! ಕಾಣಿಸಲೇ ಇಲ್ಲ...!!
"ನನ್ನ ಕನ್ಸೆಲ್ಲಿ?" ಪ್ರಶ್ನಿಸಿದೆ.
ಎದುರಿಗೆ ಸಿಕ್ಕವರನ್ನು... ಕನಸು ಕೊಳ್ಳಲು ಬಂದವರನ್ನು... ಎಲ್ಲರನ್ನೂ...ಯಾರು ಕೇಳಲೇ ಇಲ್ಲ... ಎಲ್ಲರೂ ಅವರ ಅವರ ಕನಸುಗಳಲ್ಲಿ ಮುಳುಗಿದ್ದರು...
ಕೊನೆಗೆ ಅಂಗಡಿಯಾತನನ್ನು ಕೇಳಿದೆ...
ಪ್ರಶ್ನಿಸಿದೆ..
ಬೇಡಿದೆ...
ಕಾಡಿದೆ...
ಹಂಬಲಿಸಿದೆ...
ರಚ್ಚೆ ಹಿಡಿದು ಗೋಳಾಡಿದೆ...
ಅವನು ಮಾತನಾಡಲೇ ಇಲ್ಲ.. ..!!
ನನ್ನ ಕಡೆ ಒಮ್ಮೆ ಕರುಣೆಯಿಂದ ನೋಡಿ ...ಸುಮ್ಮನೇ ಬಾಗಿಲ ಕಡೆ ದಿಟ್ಟಿಸತೊಡಗಿದ... ಅದೆಷ್ಟು ಜನ ಕಾಣ್ಸು ಕಳೆದು ಕೊಂಡಿರುವವರನ್ನು ಅವನು ನೋಡಿದ್ದಾನೋ..??
ಅಂಗಡಿಯಿಂದ ಹೊರಗೆ ಎತ್ತಿಟ್ಟ ನನ್ನ ಹೆಜ್ಜೆಗಳು ಭಾರವಾಗುತ್ತಾ ಹೋದವು..!!!

ಅನ್ವೇಷಣೆ..!!

ಅವತ್ತಿನ ನಂತರ :
 ಹಾಗೂ ನಾವಿಬ್ಬರೂ ಪ್ರೀತಿಸುತ್ತಿದ್ದೆವು.
ಅವಳು ನನ್ನೊಳಗೆ ಅನಿರೀಕ್ಷಿತವಾಗಿ ನಡೆದು ಬಂದಿದ್ದಳು. ಥಟ್ಟನೆ ಎದುರಾಗುವ ಹೆದ್ದಾರಿಯ ತಿರುವಿನಂತೆ ಒಮ್ಮೆಲೇ ಬಂದಿದ್ದಳು.
ಅವತ್ತೂ ಸಹ ನಾನು ಬೆಳಗ್ಗೆ ಹದವಾಗಿ ಕಾದ ಬಿಸ್ಸಿ ನೀರಿನ ಸ್ನಾನ ಮುಗಿಸಿ ಒದ್ದೆ ಕೂದಲನ್ನು ಬೆಂಗಳೂರಿನ ಚಳಿಗಾಳಿಗೆ ದಾನವಾಗಿ ಕೊಟ್ಟು , ಅಂಗಾತಾನೆ ಮಲಗಿದ್ದ ಬಸವನಗುಡಿಯ ಫ್ಲೈ ಓವರ್ ಕೆಳಗಿನಿಂದ ಹಾದು ಬಂದು ಕೂಲ್ ಕಾರ್ನೆರ್ ಹೊಟೆಲ್‍ನಲ್ಲಿ ಬಿಸ್ಸಿ - ಬಿಸ್ಸಿ ಟೀ ಹೀರುತ್ತ , ಎದುರಿಗಿರುವ ಅಪಾರ್ಟ್‌ಮೆಂನ್ಟ್ ನ ಕಿಟಕಿಯಲ್ಲಿ ಕುಳಿತಿರುತ್ತಿದ್ದ ಅವಳ ಕಡೆಗೆ ಒಂದು ಸಣ್ಣ ದೃಷ್ಟಿ ಬೀರುತ್ತಿದ್ದೆ.

ಅವತ್ತು :
ಬಿರಬಿರನೆ  ನನ್ನೆಡೆಗೆ ನಡೆದು ಬಂದಳು.
ನಡಿಗೆಯಲ್ಲಿ ಆಕರ್ಷಣೆಯಿತ್ತು....!
"ಪ್ರೀತಿಸುತ್ತಿಯ? ಆಕೆ
ನನ್ನ ಕಣ್ಣುಗಳಲ್ಲಿ ಅವಳ ಕಣ್ಣುಗಳು.
ಟೀ ಯ ಬಿಸ್ಸಿ ಎದೆಯ ಗೂಡಿನೊಳಗೆ ಇಳಿಯುತ್ತಿತ್ತು ಅಚ್ಚರಿಯ ಜೊತೆಗೆ.
ನಾನು ಮಾತನಾಡಲಿಲ್ಲ.
ಅವಳೆಡೆಗೆ ದಿಟ್ಟಿಸಿದೆ. ಸ್ವಲ್ಪ ಹೊತ್ತು.
ಯಾಕೇ? ನಾನು.
"ಅನ್ವೇಷಣೆಗೆ !" ಆಕೆ.
ದನಿಯಲ್ಲಿ ನಿರ್ಧಾರವಿತ್ತು.
"ಯಾವುದರ ಅನ್ವೇಷಣೆಗೆ ?" ನಾನು
ಪ್ರೀತಿ..!!
ನಾನು ಮತ್ತೆ ಮಾತನಾಡಲಿಲ್ಲ.
ಮೌನ ಕೆಲವೊಮ್ಮೆ ಸಹನೀಯ .!!
ಇಬ್ಬರ ಉಸಿರಿಗೂ ಬೆಂಗಳೂರಿನ ಚಲಿಗಾಳಿಯ ಆಮ್ಲಜನಕ..!!
ಸ್ವಲ್ಪ ಮಾತು ಮತ್ತೆ....!! ಒಂದಷ್ಟು ಪ್ರಶ್ನೆಗಳು , ಮತ್ತೆ ಒಂದಷ್ಟು  ಉತ್ತರಗಳೂ...!!

ನಂತರ :
ಮೊಬೈಲಿಗೆ ಮೆಸೇಜ್ ಪ್ಯಾಕ್ಗಳು ಬಂದವು. ಹೊಸ ಡಿಯೋ ಖರೀದಿಸಿದೆ..! ಕೂದಲು ಬಾಚಲು ಪ್ರಾರಂಭಿಸಿದೆ...!!
ಅವಳು ಇದೆಲ್ಲವನ್ನುಇಷ್ಟಪಡುತ್ತಾಳೋ ಇಲ್ಲವೋ ಎಂದು ಚಡಪಡಿಸಿದೆ.!!
ನಾಟಕಗಳಲ್ಲಿ ಯಾರನ್ನೋ ಮೆಚ್ಚಿಸಬೇಕೆಂಬ ಹಂಬಲ ...!
ಬಾಯಿಗೆ  ಲಿಪಸ್ಟಿಕ್ನ ರುಚಿ ಗೊತ್ತಾಗಿತ್ತು.!!
ವೀಕೆಂಡುಗಳಲ್ಲಿ ನನ್ನ ಎದೆಯ ಮೇಲೆ ಅವಳ ಹಲ್ಲಿನ ಗುರುತುಗಳು ಅನಾಥವಾಗಿ ಬಿದ್ದಿರುತ್ತಿದ್ದವು..!!

ಭವಿಷ್ಯದ ಇವತ್ತಿಗೂ ಮೊದಲು :
ನಾನು ಆಕೆಗೆ ನದೀ ಅನ್ನುತ್ತಿದ್ದೆ..!!
ಇಬ್ಬರು ಹುಚ್ಚಿಗೆ ಬಿದ್ದವರ ಹಾಗೆ ಪ್ರೀತಿಸುತ್ತಿದ್ದೆವು....!!
ಅವಳು ನನಗೆ ಅರ್ಥವಾಗುತ್ತಿರಲಿಲ್ಲ....!!
ರಾತ್ರಿಯಿಡಿ ಕುಳಿತು ಕಾದಂಬರಿ ಓದುತ್ತಿದ್ದವನ  ಮಡಿಲಲ್ಲಿ ಅವಳ ತಲೆ..!!
ಶಬ್ಧಕ್ಕೆ ನಿಲುಕದಷ್ಟು ಪ್ರೀತಿಸಿದೆವು..!!
 ಆಮೇಲೆ :
ಅವತ್ತಿನಂತದೇ ಬೆಳಿಗ್ಗೆ. ನಾನು ಟೀ ಕುಡಿಯುತ್ತಿದ್ದೆ. ಮೊನ್ನೆಯಿಂದ ಅವಳು ಟೀ ಕುಡಿಯುತ್ತಿಲ್ಲ.!!
"ಮಾರಬೇಕಿದೆ" ಅವಳು
"??" ನಾನು
"ಪ್ರೀತಿಯನ್ನ..! ನನ್ನ ಪ್ರೀತಿಯನ್ನ..!! " ಅವಳು
"!!" ನಾನು ಹುಬ್ಬು ಗಂಟಿಕ್ಕಿದೆ.
"ನನ್ನ ಪಾಲಿನ ಪ್ರೀತಿಯನ್ನ ಮಾರಬೇಕಿದೆ " ಅವಳು ಮತ್ತೆ ಹೇಳಿದಳು.
"ಯಾರಿಗೆ??" ನನಗೆ ಅಚ್ಚರಿ , ದು:ಖ , ಸಂಕಟ .
"ಗೊತ್ತಿಲ್ಲ" ಆಕೆ
"ಯಾಕೆ?" ನಾನು ಕೇಳಿದೆ.
"ಅನ್ವೇಷಣೆಗೆ !" ಆಕೆ
"ಯಾವುದರ "ಅನ್ವೇಷಣೆಗೆ !" ?? " ನನಗೆ ಮರೆತೇ ಹೋಗಿತ್ತು ಅಥವಾ ಮರೆತಂತೆ ನಟಿಸಿದೇ.
ಪ್ರೀತಿಯನ್ವೇಷಣೆ ..... ಆಕೆ
"............ "
"........"
.........

ಆವರ್ತನ..!

ಕತೆಗೂ ಮುನ್ನ :
ತಿಳಿದವರು ಹೇಳಿದ್ದಾರೆ. ಹುಟ್ಟಿದವೆಲ್ಲವೂ ಸಾಯಲೇಬೇಕು. ಇಂದಲ್ಲದಿದ್ದರೆ ನಾಳೆ. ನಾಳೆಯಲ್ಲದಿದ್ದರೆ ನಾಡಿದ್ದು.  ಅಲ್ಲವಾದರೆ ನಾಳೆಯಾಚೆಗಿನ ಇವತ್ತಿನ ನಾಳೆಯ ಸರಣಿಯಲ್ಲೊಂದು ದಿನ. ಸಂಬಂಧಗಳು ಹುಟ್ಟುತ್ತವೆ. ಹಾಗಾದ್ರೆ ಅವೂ ಸಾಯುತ್ತವೆಯೇ ?ಹುಟ್ಟಿದ ಸಂಬಂಧಗಳೆಲ್ಲವೂ ಒಂದಲ್ಲ ಒಂದು ದಿನ ಮರಣ ಹೊಂದುತ್ತವೆಯೇ? ಆದಿಯ ಪ್ರಾರಂಭದಲ್ಲೇ , ಅಂತ್ಯಕ್ಕೊಂದು ಮುನ್ನುಡಿಯಿರುತ್ತದೆಯೇ? ಸಂಬಂಧಗಳ ಶೈಶವದಲ್ಲೆ ಮರಣದ ಮುಪ್ಪು ಇರುತ್ತದೆಯೇ?
ಸಂಬಂದಗಳು ಹುಟ್ಟುವಾಗಲೇ , ಸಾವನ್ನು ನಿರ್ಧರಿಸಿಕೊಂಡು ಜನಿಸುತ್ತವೆಯೇ? ಹಲವು ಮುಪ್ಪಿನಲ್ಲಿ , ಕೆಲವು ಪ್ರಾಯದಲ್ಲಿ , ಬಾಲ್ಯದಲ್ಲಿ ಇನ್ನೊಂದಿಷ್ಟಕ್ಕೆ ಹುಟ್ಟುವ ಮೊದಲೇ ಗರ್ಭಪಾತ. ಇನ್ನೂ ಕೆಲವು ಹುಟ್ಟಿದ ಮೇಲೂ ಏನೋ ಕಳೆದುಕೊಂಡ ವಿಕಾರಗಳು.
ಬಾಹ್ಯ ಸ್ವರೂಪ :
ಹೆಸರು : ಎಂ. ಹೇಮಕಾಂತ.
ವಯಸ್ಸು : ನೋಡಿದಾಗ ಥಟ್ಟನೆ ಹೊಳೆಯುವಷ್ಟು.
ಓದು: ಎಮ್.ಸಿ.ಎ.
ಕೆಲಸ: ಇಲ್ಲ
ಸ್ವಭಾವ : ವಿಚಿತ್ರ , ಅಶಾಂತ , ಚಡಪಡಿಕೆ , ಹುಡುಕು , ತೀಕ್ಷ್ಣ , ಹಸಿವು , ದಾಹ.
ಕೂದಲನ್ನು ಕೆದರಿ ಕೊಂಡಿರುತಿದ್ದ. ಕಾಡು ಬೆಳೆದಂತಹ  ಕೂದಲು. ಒರಟೊರಟಾದ ರೋಮ. ಮುಖದ ಎಡೆಯಲ್ಲಿ ಆರಂಭವಾಗಿ ಎದೆಯಾಚೆಗಿನ ಕಣಿವೆಯಲ್ಲಿ ದಾಟಿ ಕಾಲಿನವರೆಗೆ ಆವರಿಸಿದ ದಟ್ಟ ಕೂದಲು. ಕಣ್ಣುಗಳು ಹುಡುಕುತಿದ್ದವು . ಏನ್‌ನ್ನೋ? ಕೆಲವರು ಪ್ರೇಮವೆನ್ನುತ್ತಿದ್ದರು. ಹಲವರು ಕಾಮವೆನ್ನುತ್ತಿದ್ದರು. ಇನ್ನೊಂದಿಷ್ಟು ಜನ ಅದು ಏನೆಂದು ತರ್ಕಿಸುವ ಗೋಜಿಗೆ ಹೋಗದೇ , ಎದುರಿಗೆ ಕಣ್ಣಿನಲ್ಲಿ ಕಣ್ಣು ಸಿಕ್ಕಾಗ ಮತ್ತೆಲ್ಲೋ ದೃಷ್ಟಿ ತಿರುಗಿಸುತ್ತಿದ್ದರು. ಸಮೃದ್ದ ಕೇಶರಾಶಿಯನ್ನು ಬೇರ್ಪಡಿಸಿ ಬೆಳೆದಂತಹ ಹಣೆ , ಕಣ್ಣು , ಮೂಗು , ಬಾಯಿ . ಇವನ್ನು ಬಿಟ್ಟರೆ ಬೇರೆಲ್ಲವೂ ಕೂದಲು-ಕೂದಲುಮಯ. ಉದ್ದನೆಯ ಕೈ ತೋಳಿನ ಅಂಗಿ ಧರಿಸುತ್ತಿದ್ದ. ಕೆಲವು ದಿನ ಅದನ್ನು ಭುಜದವರೆಗು ಮಡಚಿ , ರೋಮ ತುಂಬಿದ ಬಾಹುಗಳನ್ನ ಅಲಕ್ಷ್ಯವಾಗಿ ಜೋಟಾಡಿಸುತ್ತಿದ್ದುದೂ ಇದೆ. ಇನ್ ಶರ್ಟ ಮಾಡಿದ್ದು ಸರಿಯಾಗ್ದೇ ಅಂಗಿ ಅಲ್ಲಲ್ಲಿ ಹೊರ ಬರುತ್ತಿತ್ತು. ಹಾಗೆ ಹೊರಬಿದ್ದ ಅಂಗಿಯ ಅಂಚುಗಳನ್ನ ಬಲವಂತವಾಗಿ ಒಳಗೆ ತುರುಕುತ್ತಿದ್ದ. ಅವನ ನೆನಪುಗಳನ್ನ ಒಳಗೆ ತಳ್ಳುವಂತೆ. ತಳ್ಳಿದಂತೆ ಒಂದೆಡೆ ಸರಿಯಾಗಿ ಇನ್ನೊಂದೆಡೆ ಹೊರಬರುತಿತ್ತು. ಕೊನೆಗೆ ಬೇಸತ್ತು ಅದನ್ನು ಹಾಗೆ ನೇಟಾಡಲೂ ಬಿಡುತ್ತಿದ್ದ. ನೆನಪುಗಳ ಹಾಗೆ ಅವು ಜೊತಾದುತ್ತಿದ್ದವು.
ತುಟಿಗಳು ಆಗಾಗ ಚಡಪಡಿಸುತ್ತಿದ್ದವು.  ಕೆಂಪಗಿನ ನಾಲಗೆ , ಆಗಾಗ ಹಾವಿನಂತೆ ಸರಕ್ಕನೆ ಹೊರ ಬಂದು ತುಟಿಗಳ ದಾಹವನ್ನು ತೀರಿಸುತಿತ್ತು. ಒಂದು ಕಾಲದಲ್ಲಿ
ಪುನರಾವರ್ತನೆಗೊಳ್ಳುತಿದ್ದ ಈ ಕ್ರಿಯೆಯಿಂದ ನೋಡಿದವರು ಗಾಬರಿಗೊಳ್ಳುತಿದ್ದರು.
ನಡೆಯುತಿದ್ದ , ಓಡುತಿದ್ದ, ಕುಳಿತುಕೊಳ್ಳುತಿದ್ದ , ಮಾತನಾಡುತಿದ್ದ, ನಿಂತಿರುತಿದ್ದ , ಆ ದೇಹದಿಂದ ವಿಲಕ್ಶ್ಯಣ ಮೌನವೊಂದು ಹೊರಬರುತಿತ್ತು.
ಓರೆಯಾಗಿ ನಡೆಯುತಿದ್ದ , ಕೆಲವೊಮ್ಮೆ ಕುಂಟುತಿದ್ದ ದೇಹ , ಕೆದರಿದ ಕೂದಲಿನಿಂದ , ರೇಖೆ- ರೇಖೆಯ ಪಾದಗಲವರೆಗೆ ಯಾರುಗೂ ಬೇಡವಾಗಿತ್ತು.

ಅವನು :
ನಾನು ಪ್ರೇಮವಾಗಿದ್ದೆ. ಕಾಮವಾಗಿದ್ದೆ. ನಾನು ತುಂಬಿದವನಾಗಿದ್ದೆ. ನಾನು ಹಸಿದವ್ನೂ ಆಗಿದ್ದೆ. ಅವಳ ಪ್ರೀತಿಸುತಿದ್ದೆ. ಅವಳಲ್ಲಿ ನನ್ನ ವಿಲಕ್ಶ್ಯಣ ಶಾಂತಿಯನ್ನ ಹುಡುಕುತಿದ್ದೆ.
ಕಲಿತುದು ಸಾಕು ಅನ್ನಿಸಿದಾಗ ಅಥವಮುಗಿದಾಗ  ಕೈಯಲ್ಲಿ ಡಿಗ್ರಿ ಇದೆಯೆಂದು ನಂಬಿದ್ದೆ. ಹುಡುಕುತಿದ್ದೆ. ಅಳೆಯುತಿದ್ದೆ. ಅರಸುತಿದ್ದೆ. ಕೆಲಸಕಲ್ಲ, ಅವಳ ಜೊತೆಗಿನಏಕಾಂತಕ್ಕೆ. ಕೈಯಲ್ಲಿ ಹಣವಿತ್ತು. ಅವಳಿದ್ದಳು. ದೇಹವಿತ್ತು. ಅದಕ್ಕೆ ಹಸಿವಿತ್ತು.
ಅವಳು ಹಚ್ಚುತಿದ್ದ ಬೆಂಕಿ ಧಗಧಗಿಸಿ ಉರಿದು , ಹರಿದು , ಮುನಿದು , ಕೆನೇಡು, ತೊನೆದಾಡಿ , ನನ್ನ ಜ್ವಲಿಸಿ , ಅವಳೆಡೆಗೆ ಚಿಮ್ಮುತಿತ್ತು.
ರಭಸ...
ಏಕಾಗ್ರಾ..
ತುದಿ
ತುತ್ತ ತುದಿ
ಕೊನೇ..
ನಿರವ
ಮೌನ
ಪ್ರೆಮದೊಟ್ಟಿಗೆ ಹರಿದು ಬೆಳೆದು ಬಂದ ಕಾಮ.  ಅವಳ ತುದಿಯಲ್ಲಿ , ಸ್ಪರ್ಶದಲ್ಲಿ , ಸ್ಪರ್ಶವಿರದ ಮೌನದಲ್ಲಿ , ಸಿನಿಕತೆಗಳಲ್ಲಿ , ಕೊನೇ ಕೊನೆಗೆ ನಮ್ಮ ಬೋರಲು ಬಿದ್ದ ವಿಕಾರಗಳಲ್ಲೂ ನಾನು ನನ್ನ ವಿಲಕ್ಷಣ ಶಾಂತಿಯನ್ನ ಅರಸುತಿದ್ದೆ.
ಅವಳ ಮೇಲಿನ ಪ್ರೀತಿ ಕಿಚ್ಚಾದಾಗ ಅಥವಾ ಕಿಚ್ಛೇ ಪ್ರೀತಿಯಾದಾಗ ನಾನು ಕವನಗಳನ್ನು ಬರೆಯುತಿದ್ದೆ.
ನೀನು ,
ನನ್ನ ಎದೆಯೊಳಗೆ ಇಳಿದ ನಾನು.
ನೀನು ,
ನನ್ನ ಮನಸ ಕನ್ನಡಿಯ ನಾನು.
ನೀನು,
ನನ್ನ ಕಡಲ ಹುಡುಕುವ ನಾನು..!
....
............
....

ಅವಳು ನಗುತಿದ್ದಳು. ನನ್ನೊಳಗೆ.. ಅವಲೊಳಗೇ.. ಎದೆಯೊಳಗೆ..
ನನ್ನ ಹುಡುಕಾಟದ ತೃಪ್ತಿಯೇದುರು ಅವಳು. ಅವಳಲ್ಲಿ ನನ್ನ ನಿರಂತರ ತಡಕಾಟ.
ನನ್ನ ತೃಪ್ತಿಯ ಜೊತೆ ಜೊತೆಗೆ ಅವಳ ಅತೃಪ್ತಿಯು ಏರಿತು.
ಕೊನೆಗೆ ಅವಳು ಎದ್ದು ನಡೆದಲು.
ನಾನು ನನ್ನದೇ ಕಂಬನಿಯ ಕನ್ನಡಿಯಲ್ಲಿ ಅವಳು ಹೋದ ದಾರಿ ದಿಟ್ಟಿಸಿದೆ.
ಮನಸು ಬೇರೆಡೆಗೆ ತೃಪ್ತಿ ಬಯಸ ಹತ್ತಿತು..!!

ಅವನ ಮನಸು:
ಅವನೊಳಗೆ ನಾನು ಇದ್ದೇ.
ಆದರೆ ಅವನು , ನನ್ನೊಳಗೆ ಅವನಿದ್ದ ಎಂದು ಎಲ್ಲರಿಗೂ ಹೇಳುತಿದ್ದ.
ವರುಷಗಟ್ಟಲೇ ನನ್ನ ಉಜ್ಜಿ ಕನ್ನಡಿಯ ಹಾಗೆ ಮಾಡಿದ್ದ. ಆದರೂ ಅವನಿಗೆ ನಾನು ಅರ್ಥವಾಗಿರಲಿಲ್ಲ. ಅವನದೇ ಕಂಪನಗಳಿಗೆ ಏಳುತಿದ್ದ ಅವನದೇ ನಡುಕದ ಅಲೆಗಳಿಗೆ ನನ್ನ ಹೊಣೆಯನ್ನಾಗಿಸಿ ಹಳಿಯುತಿದ್ದ. ನಿದ್ದೆ ಬರದ ರಾತ್ರಿಗಳಲ್ಲಿ ಅವಳಲ್ಲಿ ಮುಖವಿತ್ತು ನನ್ನ ಮರೆಯಲು ಯತ್ನಿಸುತಿದ್ದ. ನನ್ನ ಆಳಲು ಯತ್ನಿಸುತಿದ್ದ. ಅವಳೊಟ್ಟಿಗಿನ ಮೌನದಲ್ಲಿ ನನ್ನ ದೂರ ಮಾಡುತಿದ್ದ. ನನ್ನೊತ್ತಿಗೆ ಸೇರಲೆ ಇಲ್ಲ. ಅವನು ಮೌನಿಯದಂತೆ ನಾನು  ಶಬ್ದ ತೀರಗಳ ಅಲೆಯಲ್ಲಿ ಕೊಚ್ಚಿ ಕೊಚ್ಚಿ ಹೋಗುತಿದ್ದೆ. ಅವನ ಕಾಮ ಅವನೆದೆಯ ಹೊಕ್ಕು , ಅಲ್ಲಿಂದ ನನ್ನೆಡೆಗೆ ವಿಕಾರ ನಗೆ ಎಸೆದು , ನನ್ನಲ್ಲಿ ಕಂಪಣ ತರುತಿತ್ಟು. ನಾನು ಅವನ ಕಾಮಕ್ಕೆ ನದುಗುತಿದ್ದೆ.  ಅವಳು ಎದ್ದು ನಡೆದ ಮೇಲೆ , ಹೆಣ್ಣು ವಾಸನೆಯಲ್ಲಿ  ಅವಳನ್ನು ಹುಡುಕಲು ಆರಂಭಿಸಿದ. ಕಣ್ಣಿನಲ್ಲಿ ಮೌನ ಕಾಮವ ತುಂಬಿ ದಿಟ್ಟಿಸುತಿದ್ದ. ಪ್ರಶ್ನಿಸಿದರೆ ಬಡಿಯುತಿದ್ದ. ನನ್ನ ಮೇಲೆ ಶತಮಾನಗಳ ದ್ವೇಷವಿದ್ದವನ ಹಾಗೆ ಹಿಂಸಿಸುತಿದ್ದ. ಅವನ ಕಾಮ ಬಲಿದ೦ತೆ ನಾನು ಸಾಯುತ್ತಾ ಹೋದೆ.
ಲೇಖಕ:
ಚಳಿಯ ನಡುಕದ ಮುಂಜಾವುಗಳಲ್ಲಿ ನಾನು ಟೀ ಕುಡಿಯಲು ಸೀಸೀ ಯತ್ತ ಹೊಗುತ್ತಿದ್ದಾಗ ಅವನು ಬರುತಿದ್ದ. ನಾನು ಹಲವಾರು ವರುಷಗಳಿಂದ ಅವನನ್ನ ನೋಡುತಿದ್ದೆ.
ಅವನ ಪ್ರೇಮ , ಅವನ ಕಾಮ
ಅವನ ಉನ್ನತಿ , ಅವನ ಅವನತಿ
ನಿನ್ನೆಯವರೆಗೆ ಅವನ ಪ್ರೇಮಕ್ಕೆ ಸಾಕ್ಷಿಯಾಗಿದ್ದ ಜನರೇ , ಇವತ್ತು ಅವನ ಕಾಮಕ್ಕೆ, ಬೀಳುವ ಏಟಿಗೆ  ಸಾಕ್ಷಿಯಾಗಿದ್ದರು.

ಅವನು ದಿಟ್ಟಿಸುತಿದ್ದ
ಅವತ್ತು ಸರಕ್ಕನೆ ಎದ್ದು ಬಂದು ನನ್ನ ಪಕ್ಕ ಕುಳಿತ.
"ಹೋಗುತಿದ್ದೇನೆ"  ಅವನು
"ಮ್"
"ದೂರ ದಿಗ೦ತಗಳಾಚೆಗೆ , ನನ್ನ ಶಾಂತಿಯನ್ನ ಅರಸುತ್ತಾ, ದೇಹದ ಹಸಿವಿಗೆ ಸಮೃದ್ಧ ತೃಪ್ತಿಯನ್ನ ಹುಡುಕುತ್ತಾ. "
"ಎಲ್ಲಿಗೆ?"
"ನನ್ನಲ್ಲಿಗೆ. ಕರೆದಲ್ಲಿಗೆ. ತಿಳಿದಲ್ಲಿಗೆ. ಪೂರ್ಣವೊಂದು ಉಗಮವಾದ ಅಪೂರ್ಣಡೆಡೆಗೆ. ಕಳೆದುಕೊಂಡುದು ಹುಟ್ಟಿಡದೆಡೆಗೆ. ಇಲ್ಲಿ ಅರ್ಥವಿಲ್ಲ ಅಥವಾ ಅರ್ಥಕ್ಕೆ ಬದುಕಿಲ್ಲ. ಯಾವುದು ಪ್ರೇಮವೆಂದುಕೊಳ್ಳುತೆವೆಯೋ ಅದು ಕಾಮವೂ ಆಗಿರುತ್ತದೆ. ಯಾವುದು ತೃಪ್ತಿ ಎನ್ನುತೆವೆಯೊ ಅದು ಅತೃಪ್ತಿಯು ಆಗಿರುತ್ತದೆ. ಯಾವುದು  ಹುಟ್ಟೋ ಆದರೆಡೆಗೆ ಸಾವು ಇರುತ್ತದೆ. ಅಲ್ಲಿ ನೋಡು ಅವರು ತಿನ್ನೂತಿದ್ದಾರೆ. ತರಹೆವಾರಿ ತಿಂಡಿಗಳನ್ನ. ಅಸಹ್ಯವಾಗಿ ಬಾಯಿಯ ಮೂಲಕ ಹೊಟ್ಟೆಗೆ ಬಲವಂತವಾಗಿ ತಳ್ಲುತಿದ್ದಾರೆ.  ಹಣದ ಮೂಲಕ ಹಸಿವು ಇಂಗಿಸುವ ಯತ್ನ. ನೀವು ತಿಂದುದು ದೇಹದ ಹಸಿವಿಗೆ. ಮನಸಿನ ರುಚಿಗೆ. ಹಾಗೆ ನಾನು ತಿನ್ನಲೆತ್ನಿಸಿದೆ. ದೇಹದ ಹಸಿವಿಗೆ ಮನಸಿನ ರುಚಿಗೆ. ನೀವು ಕಾಮಿಯೆಂದಿರಿ.  ಮೈ ಕೈ ತಾಗಿಸಿ ನಿಂತಾಗ  ಹೆಣ್ಣು ಜೀವಗಳ ಸ್ಪರ್ಶಿಸಿ ಸುಖಿಸಿದೆ. ಸವರಳೆತ್ನಿಸಿದೆ. ಛೀ.. ಥುಉ.. ಶ್ಯೊ.. ಹಚ್ಚಾ ಎಂದಿರಿ.
ನನಗೂ ಹಸಿವಿತ್ತು, ಅದಮ್ಯ ಹಸಿವು. ಒಮ್ಮೆ ರುಚಿ ಕಂಡ ನಂತರ ಬರುವ ಹಸಿವು. ಒಮ್ಮೆ ಉಂದಿದ್ದು ಮತ್ತೆ ಮತ್ತೆ ಬೇಕು ಎನ್ನುವ ಹಸಿವು. ಮನದಲ್ಲಿ ಜೂತು ಬಿದ್ದ ಬಾವಲಿಗಲಿಗೆ ಕಾಮದ ಆಹಾರ ಬೇಕಿತ್ತು. ನನಗೆ ಶಾಂತಿ ಬೇಕಿತ್ತು. ನಿಮ್ಮಂತೆ ನಾನು ಹಸಿದಿದ್ದೆ. ನಿಮಗೆ ನಿಮ್ಮ ಹಸಿವು ಪಾಪವಲ್ಲ. ಆದರೆ ನನ್ನದು ಪಾಪವಾಯಿತು. ನನ್ನ ಕಂಗಳು ವಿಕೃತವೆಂದು ಅನ್ನಿಸಿತು. ನಾನು ಎಲ್ಲರಿಗೂ ಬೇಡವಾದೇ. ಕೊನೆಗೆ ನನ್ನ ಮನಸಿಗೂ.
ಇಷ್ಟು ಹೇಳಿ ಅವನು ಮತ್ತೆ ಮೌನಿಯಾದ.
ಪರಪಾರನೆ ಗಡ್ಡ ಕೆರೆದುಕೊಂಡ . ಎಡಗೈ ಬೆರಳುಗಳಿಂದ , ಬಲಗೈ ಬೆರಳುಗಳಲ್ಲಿರುವ , ಕೊಳೆಯನ್ನ ತೆಗೆಯತೊಡಗಿದ. ಹೇಳಲಿಕ್ಕಾಗದ ದೃಷ್ಟಿಯಿಂದ ಅತ್ತ ಇತ್ತನೋಡಿದ. ಕೊಳೆಯಾದ ಕೈಯನ್ನು ಪ್ಯಾಂಟಿಗೆ ಉಜ್ಜಿದ. ಅವನ ಪ್ಯಾಂಟು ಅವನ ಎಲ್ಲ ಕೊಳೆಗಳನ್ನು ಆವರಿಸಿಕೊಂಡ ಮನಸ್ಸಿನಂತೆ ತೋರಿತು. ಒಮ್ಮೆ ಚಡಪಡಿಸಿದ. ಏನನ್ನೋ ಹೇಳಹೊರಟು ಸುಮ್ಮನಾದ.
ನಾನು ಟೀ ತಂದು ಕೊಟ್ಟೆ.
ಕುಳಿತು ಸಶಬ್ಧವಾಗಿ ಟೀ ಹೀರಲಾರ೦ಭಿಸಿದ.  ಟೀ ಯ ಕೆಲವು ಹನಿಗಳು , ಮೀಸೆಯ ತುದಿಗೆ ತುದಿಗೆ ಜೋತುಬಿದ್ದು , ಬಹಳ ಹೊತ್ತು ಆ ಸ್ತಿತಿಯಲ್ಲಿ ಇರಲಾರದೇ , ಮತ್ತೆ ಟೀ ಗ್ಲಾಸ್ ಗೆ ಬಿದ್ದು ಸರಕ್ಕನೆ ಎಳೆದುಕೊಳ್ಳುತಿದ್ದ , ಅರೆ ಬೀರಿದ ತುಟಿಯ ಮೂಲಕ ಅವನ ಬಾಯೊಳಗೆ ಸೇರಿ ಲೀನವಾಗುತಿದ್ದವು

ಅಸಂಗತಗಳಾಚೆ..!

ಹಾಗೂ ಹದಿನಾರನೇ ಮೈಲಿಕಲ್ಲಿನ ಶ್ರೀಯುತರಿಗೆ , ಹೆಂಡತಿಯೊಂದಿಗಿನ ಸುಖದ ಉತ್ಕಟ ಕ್ಷಣಗಳಲ್ಲಿ ಸೊಂಟನೋವು ಕೈ ಕೊಡುತಿತ್ತು..!!
*                     *                       *                   *               *                    *                *            *         *
ಪ್ರೀಯ ಓದುಗರೇ ,
ನೀವು ಯಾವತ್ತಾದರೂ ಶಿರಸಿಯಿಂದ ಸಿದ್ದಾಪುರದ ಕಡೆಗೆ ಅಥವಾ ಸಾಗರದ ಕಡೆಗೆ ಅಥವಾ ಶಿವಮೊಗದ ಕಡೆಗೆ ಪ್ರಯಾಣಿಸಿದ್ದರೆ ,  ಇಲ್ಲವಾದರೆ ಆ ಸ್ಥಳಗಳಿಂದ ಶಿರಸಿಯ ಕಡೆ ಬಂದಿದ್ದರೆ ನೀವು ಹದಿನಾರನೆ ಮೈಲಿಕಲ್ಲು ಎಂಬ ಊರನ್ನು ಹಾಡು ಹೋಗಿರಲೇ ಬೇಕು. ನೀವು ಈ ಕಡೆಯವರಾಗಿರದಿದ್ದರೆ ನಿಮಗೆ ಹದಿನಾರಾಣೆ ಮೈಲಿಕಲ್ಲು ಎಂಬ ವಿಚಿತ್ರ ಹೆಸರಿನ ಊರಾಗಲಿ , ಅಲ್ಲಿನ ಖಾಯಂ ನಿವಾಸಿಯಾದ ಶ್ರೀಯುತರಾಗಲಿ ಪರಿಚಯವಿಲ್ಲದಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ.
ಇವತ್ತು ನಾನು ಹೆಳಹೊರತಿರುವ , ಹದಿನಾರಾಣೆ ಮೈಲಿಕಲ್ಲಿನ ಶ್ರೀಯುತರ ಪರಮ ಪ್ರಸಿದ್ಧ (ಕುಪ್ರಸಿದ್ಧ) ಸೊಂಟನೋವಾಗಲಿ , ಆ ಸೊಂಟನೋವಿನ ಸುತ್ತ-ಮುತ್ತ ನಿಗೂಡ ಪಾಶದಂತೆ ಸುತ್ತುವರಿದ ಕಥೆಗಳಾಗಲಿ ಅಥವಾ ತರ್ಕಕ್ಕೆ ನಿಲುಕದಂತಹ ಊಹಾತ್ಮಕ ವಿಶಯಗಳಾಗಲಿ ನಿಮಗೆ ಗೊತ್ತಿರಲಿಕ್ಕೂ ಸಾಕು ಯಾ ಗೊತ್ತಿರದೆ ಇರಲಿಕ್ಕೂ ಸಾಕು.
*                     *                       *                   *               *                    *                *            *         *
ಶ್ರೀಯುತರ ಸೊಂಟನೋವಿನ ವಿಷಯ ನನ್ನ ಮಾರಿಪತ್ತಿನವರೆಗೆ ಬರುವಷ್ಟರಲ್ಲಿ ಅಖಂಡವಾಗಿ ಹದಿನಾರನೇ ಮೈಲಿಕಲ್ಲನ್ನು ಆವರಿಸಿತ್ತು. ನಾನು ನನ್ನ ಯಾವತ್ತಿನ ಅಭ್ಯಾಸದಂತೆ ಸೀಸೀ ಯಲ್ಲಿ ಕುಳಿತು ಟೀ ಕುಡಿಯುತ್ತಿರುವಾಗಲೆ  ಮಿತ್ರನಾದ ನಾಗಪತಿ ಮೆಸೇಜ್ ಮಾಡಿದ್ದ.
" ಶ್ರೀಯುತರಿಗೆ ಸೊಂಟನೋವು ತಾರಕಕ್ಕೆ  ಏರಿದೆ. ನಿನ್ನ ನೋಡಬೇಕು ಅನ್ನುತ್ತಿದ್ದಾರೆ ಕೂಡಲೇ ಹೊರಟು ಬರತಕ್ಕದ್ದು."
ನಾಗಪತಿಯ ಮೆಸೇಜ್ ನೋಡಿ ನಾನು ಗಡಬಡಿಸಿ ಎದ್ದು ಪಕ್ಕದಲ್ಲೇ ನಿಂತಿದ್ದ , ಉದ್ದ ದೇಹದ , ಬಿಗ್ಗಿ ಬಿಗಿ ಬಟ್ಟೆಯ ಜೈನ್ ಕಾಲೇಜಿನ ಕನ್ಯೆಯರ ಕುಡಿ ನೋಟವನ್ನು ಲೆಕ್ಕಿಸದೆ ,  ಗ್ಲಾಸ್‌ನಲ್ಲಿ ಉಳಿದ ಕೊನೆಯ ೩ - ೪ ಗುಟುಕು ಟೀ ಯನ್ನ ಸೊರ್ರನೇ ಕುಡಿದು ಅಲ್ಲೇ ಲೋಟವನ್ನು ಮಗುಚಿ , ತಟ್ಟನೆ ಎದ್ದು ಮೈ ಮುರಿಯಲು ಮನಸ್ಸು ಮಾಡದೇ , ರೂಮ್ಗೆ ಬಂದು , ಇದ್ದುದರಲ್ಲೇ ಸ್ವಚ್ಛವಾಗಿದ್ದ ನಾಲ್ಕಾರು ಬಟ್ಟೆಗಳನ್ನು ಎತ್ತಿಕೊಂಡು ಮೆಜೆಸ್ಟಿಕ್ನಲ್ಲಿ ಸಿರ್ಸಿಗೆ ಹೋಗುವ ಬಸ್ ಹಿಡಿದು ಕಿಡಕೀಯ ಪಕ್ಕ ಕುಳಿತು ಹದಿನಾರಾಣೆ ಮೈಲಿಕಲ್ಲಿನ ಶ್ರೀಯುತರ ಬಗ್ಗೆ ಮನಸ್ಸಿನ ವಿಚಾರವನ್ನು ಅಟ್ಟಿದಾಗ ಕೈಯಲ್ಲಿನ ಗಡಿಯಾರ ಆ ಸಮಯವನ್ನು ತೋರಿಸುತಿತ್ತು.
ಶ್ರೀಯುತರಿಗೆ  ಸೊಂಟ ನೋವು ಪ್ರಾರಂಭವಾಗಿದ್ದು ಹೇಗೆ , ಯಾಕೆ ಯಾವತ್ತು  ಎಂಬ ವಿಚಾರವಾಗಿ ಹದಿನಾರನೇ ಮೈಲಿಕಲ್ಲಿನ ಜನರಲ್ಲಿ ತರಹೆವಾರಿ ವಿಚಾರಗಳಿದ್ದರು ಅವರೆಲ್ಲರ ಏಕಮಾತ್ರ ಅಭಿಪ್ರಾಯವೆಂದರೆ ಶ್ರೀಯುತರಿಗೆ ಇದ್ದುದು ಸೊಂಟನೋವೆಂದು. ಕೆಲವರು ಹೇಳುವಂತೆ ಶ್ರೀಯುತರ ಸೊಂಟನೋವು ಅವರ ಪೂರ್ವಜನ್ಮದ ಕರ್ಮದ ಫಲವೆಂದೂ , ಇನ್ನೂ ಕೆಲವರು ಹೇಳುವಂತೆ ಅವರಿಗೆ ಸೊಂಟನೋವು ಹುಟ್ಟುವ ಮೊದಲೇ ಇತ್ತೆಂದೂ , ಇನ್ನೂ ಕೆಲವರು ಹೇಳುವಂತೆ ಅದು ಬಾಲ್ಯದಲ್ಲಿ ಪ್ರಾರಂಭವಾಗಿ , ಶ್ರೀಯುತರು ಬೆಳೆದಂತೆ ಅದು ಬೆಳೆದು ಇವಾಗ ಅದಕ್ಕೆ ಶ್ರೀಯುತರಷ್ಟೇ ವಯಸ್ಸು , ಅನುಭವ ಆಗಿದೆಯೆಂದೂ ಹೇಳುತ್ತಾರೆ.
ಇನ್ನೂ ಊರಿನ ಕೆಲ ಹಿರಿಯರು ಹೇಳುವಂತೆ ಶ್ರೀಯುತರ ಸೊಂಟನೋವು ವಂಶಾನುಗತವಾಗಿ ಬಂದಿದ್ದು. ಇನ್ನೂ ಕೆಲವು ಹಿರಿಯರು ಮತ್ತು ಮುಂದಕ್ಕೆ ಹೋಗಿ ಶ್ರೀಯುತರ ಮುತ್ತಾತನ ಅಪ್ಪ ಯಾವುದೋ ಘನ ವ್ಯಕ್ತಿಗೆ ಸೊಂಟದ ಮೇಲೆ ಬಾರಿಸಿದರಿಂದ ಆ ಘನ ವ್ಯಕ್ತಿಯು ಶ್ರೀಯುತರ ವಂಶಕ್ಕೆ ಘನಾಘೋರವಾದ ಸೊಂಟ ನೋವಿನ ಶಾಪ ಕೊಟ್ಟನೆ೦ದು ಹೇಳುತಿದ್ದುದು ಇದೆ.  ಒಟ್ಟಿನಲ್ಲಿ ಶ್ರೀಯುತರ ಸೊಂಟ ನೋವು , ಎಲ್ಲರ ಬಾಯಲ್ಲಿಯೂ ತನ್ನದೇ ಆದ ಲಾಜಿಕ್‌ನ್ನು ಪಡೆದು ,  ಅವರಿವರ ಬಾಯಲ್ಲಿನ ಲಾಲರಸಾದಿಂದ ನೆನೆದು ಒಬ್ಬರಿಂದ ಮತ್ತೊಬ್ಬರಿಗೆ ಅಂಟು ರೋಗದಂತೆ ಹರಡುತಿಟ್ಟು. ಶ್ರೀಯುತರ ಸೊಂಟ ನೋವಿನ ಬಗ್ಗೆ ಮಕ್ಕಳು ಮುದುಕರು ಹಿರಿಯರು ಕಿರಯರು ಹೆಂಗಸರು ಗಂಡಸರು ಹೀಗೆ ಎಲ್ಲರೂ ತಮ್ಮದೇ ಆದ ವಿಚಾರ ಧಾರೆಯನ್ನು ಹರಿಯ ಬಿಟ್ಟು ವಾದ ವಿವಾದಗಳಲ್ಲಿ ಮುಳುಗಿ ತೇಲಿ , ತಮ್ಮ ತಮ್ಮ ಪ್ರಕಾಂಡ ವಾಕ್ ಚಾತುರೈವನ್ನ ತೋರಿಸಿದ್ದೂ ಅಲ್ಲದೇ , ತಾವು ಹೋದಲೆಲ್ಲಾ ಅದರ ಬಗ್ಗೆ ತಮ್ಮ ಶಕ್ತ್ಯಾನುಸಾರ ಪ್ರಚಾರ ಕೊಟ್ಟಿದುದರಿಂದ ಶ್ರೀಯುತರ ಸೊಂಟ ನೋವು ಹದಿನಾರನೇ ಮೈಲಿಕಲ್ಲನ್ನು ದಾಟಿ , ಅದರ ಹೊರಗಿನ ಪರಿಧಿಗೂ ಬೆಳೆದು , ಆಗಸಕ್ಕೆ ನೆಗೆದು ನಿಂತು , ತನ್ನ ಬಾಹುಗಳನ್ನು ಚಾಚಿ , ಕಿಸಕ್ಕನೆ ಹಲ್ಲು ಕಿಸಿದು ಗಹಗಹಿಸಿ ಅಟ್ಟಹಾಸಂಗೈಯುತಿಟ್ಟು.
ಪ್ರೀಯ ಓದುಗರೇ ,
ಶ್ರೀಯುತರ ಸೊಂಟ ನೋವಿನ ಬಗ್ಗೆ ಇಲ್ಲಿಯವರೆಗೆ ಹಲವಾರು ಕಥೆಗಳು , ಉಪಕಥೆಗಳೂ , ಅಪ್ಪ ಕಥೆಗಳು , ಅಮ್ಮ ಕಥೆಗಳು , ಮಗ , ಮೊಮ್ಮಗ , ಮರಿ ಕಥೆಗಳೂಸೇರಿಕೊಂಡು ಕಥೆಗಳ ಒಂದು ಅನೂಹ್ಯ ಸರಣಿಯನ್ನೇ ನಿರ್ಮಿಸಿ , ಆ ಸರಣಿಯ ಕೊಂಡಿ ಕೊಂಡಿ ಸರಪಳಿಯಲ್ಲಿ ಸಮಸ್ತ ಹದಿನಾರನೇ ಮೈಲಿಕಲ್ಲು ಪರಿಸರವನ್ನು ಸುತ್ತುವರೆದು ಕೇಕೆ ಹಾಕುತಿದ್ದವು.
ಇಲ್ಲಿ ನಾನು ಈಗ  ಹೇಳ ಹೊರಟಿರುವದು ಅಂತಹ ಕೆಲವು ಕಥೆಗಳನ್ನೇ.


ಕಳಗದ್ದೆ ಗಪ್ಪತಿ ಮಾಸ್ತರರು ಹೇಳಿದ ಕಥೆ :
ಅದು ಅಡಕೆಯ ಧಾರಣೆ ಗಗನಕ್ಕೆ ಏರಿ ನಾಟ್ಯವಾಡುತಿದ್ದ ಕಾಲ. ಆಗ ನಮ್ಮ ಶ್ರೀಯುತರು , ಯಡಳ್ಲಿಯ ಜ್ಯೂನಿಯರ್ ಕಾಲೇಜಿನಲ್ಲಿ ಸೀನಿಯರ್ ಆಗಿದ್ದರು. ಶ್ರೀಯುತರಿಗೆ ಹುಬ್ಬಳ್ಳಿ , ಬೆಂಗಳೂರು , ಮೈಸೂರು ಮೊದಲಾದೆಡೇ ಪರಿಚಯದವ್ರು , ಮಿತ್ರರು ಇದ್ದ ಕಾರಣ ಆವ್ರು ತಕ್ಕ ಮಟ್ಟಿಗೆ ಆಧುನಿಕ ತರುಣರೇ ಆಗಿದ್ದರು.
ಆಗ ಶ್ರೀಯುತರ ತಕ್ಷಣ ಕಿರು ತರಗತಿಯವಳಾಗಿದ್ದವಳು ಪೆಟೆಸರದ ಎಮ್.ವಿಲಾಸಿನಿ ಹೆಗಡೆ.  ಸಮಸ್ತ  ಕಾಲೇಜಿನ ಯಾ ಕಾಲೇಜಿನ ಆಸು ಪಾಸಿನ ಎಲ್ಲರ ಎದೆಯಲ್ಲೂ ಎಳ್ಳು ಕುಟ್ಟುವಂತೆ , ತನ್ನ ಅಪಾರ ಐಸೀರಿಯನ್ನು  ತೋರಿಸುತ್ತಾ , ಕೊಬ್ಬಿ ಬೆಳೆದ ಐಶ್ವರ್ಯವಂತೆ ವಿಲಾಸಿನಿ , ಎಂ. ಭರತೆಶ ಹೆಗಡೆಯ ಮಾವನ ಮಗಳು.
ಇಂತಹ ಎಮ್.ವಿಲಾಸಿನಿಯು , ಶ್ರೀಯುತರು ಒಬ್ಬರನೊಬ್ಬರು ನೋಡಿ , ಅವರಿಗಾಗಿ ಇವಳು , ಇವಳಿಗಾಗಿ ಅವರು ಎಂಬಂತೆ ಆಗಿ , ಪ್ರೀತೀಯಾಂಕುರವಾದ ಹೊಸ ಬಿಸಿಯಲ್ಲೇ ಶ್ರೀಯುತರು ಒಂದು ಹೊಚ್ಚ ಹೊಸ ಸೆಕೆಂಡ್ ಹ್ಯಾಂಡ್ ಬೈಕನ್ನು ಫಸ್ಟ್ ಹ್ಯಾಂಡ್ ವಿಲಾಸಿನಿಗೊಸ್ಕರ ಖರೀದಿಸಿದ್ದರು. ಇಬ್ಬರೂ ಕುಳಿತ ಮೇಲೂ ಆ ಬೈಕಿನಲ್ಲಿ ಮೂರನೆಯವ್ರು ಕುಳಿತುಕೊಳ್ಳಬಹುದಷ್ಟು ಜಾಗ ಇರುತಿತ್ತೆಂದು ಪಡ್ಡೆಗಳು ಆಡುತಿದ್ದ ಮಾತೂ ಸುಳ್ಳಲ್ಲ.
ಹೀಗೆ ಶ್ರೀಯುತರು , ವಿಲಾಸಿನಿಯು , ಬೈಕ್‌ನ ಒಟ್ಟು ಸವಾರಿಯಲ್ಲಿ ಮೈ ಮರೆಯುತಿದ್ದಾಗ ಒಂದು ದಿನ - : ಮುಂದೆ ಕುಳಿತ ಶ್ರೀಯುತರು ತಮ್ಮ ಅರ್ಹತೆಗೆ ಮೀರಿದ ವೇಗದಲ್ಲಿ ಬೈಕನ್ನು ಓಡಿಸುತ್ತಲೂ , ಹಿಂದೆ ಕುಳಿತ ವಿಲಾಸಿನಿ , ಪಟ-ಪಟನೆ ಯಾರು ಯಾರಿಗೋ ಮೆಸೇಜುಗಳನ್ನ ಕಳಿಸುತ್ತಲೂ ಇರುವಾಗ, ತ್ಯಾಗಲಿಯ ತಿರುವಿನಲ್ಲಿ ಬೈಕ್ ಸ್ಕಿಡ್ ಆದ ರಭಸಕ್ಕೆ ಕೆಳಗೆ ಶ್ರೀಯುತರೂ , ಅವರ ಮೇಲೆ ಬೈಕೂ , ಬೈಕಿನ ಮೇಲೆ ವಿಲಸಿನಿಯೂ ಬಿದ್ದ ಭಯಾನಕತೆಗೆ , ಶ್ರೀಯುತರ ಸೊಂಟದ ಮೂಳೆ ತಿರುಗಿ ಕಳಕ್ ಎಂದು , ಎಮ್.ವಿಲಾಸಿನೀಯ ರಿಂಗ್ ಟೋನ್ ಹಾಗೆ ಶಬ್ದ ಮಾಡಿದ್ದನ್ನು ತಾನೇ ಕೇಳಿದ್ದೇನೆ ಎಂದು ಗಪ್ಪತಿ ಮಾಸ್ತರರು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ್ದರು


ಮಾಸ್ತರರ ಕಥೆಗೆ ಒಂದು ಉಪಕಥೆ:
ಆದರೆ ನಾಣಿಕಟ್ಟಾದ ಪೀ. ಜಿ.  ಈ ಮಾತನ್ನು ಖಡಾಖಂಡಿತವಾಗಿ ತಳ್ಳಿ ಹಾಕುತ್ತಾರೆ. ಅವರು ಅಭಿಪ್ರಾಯದಂತೆ ಶ್ರೀಯುತರ ಸೊಂಟ ನೋವಿಗೆ ಎಮ್.ವಿಲಾಸಿನಿಯು ಪರೋಕ್ಷ ಕಾರಣವಗಿದ್ದರು , ಪ್ರತ್ಯಕ್ಷ ಕಾರಣವಂತೂ ಅಲ್ಲ..!! 


ಪೀ. ಜಿ. ಉವಾಚ : ಮಾಸ್ತರರು ಹೇಳುವಂತೆ ಶ್ರೀಯುತರಿಗೂ , ಎಂ. ವಿಲಸಿನಿಗು ಪ್ರೀತಿ , ಪ್ರೇಮ ಲವ್ವು ಎಲ್ಲವೂ ಇದ್ದುದು ನಿಜ. ಆದರೆ ಶ್ರೀಯುತರ ಸೊಂಟ ನೋವಿಗೆ ಕಾರಣವಾದವನು ಎಂ. ಭರತೆಶ ಹೆಗಡೆ..!!  ಎಂ. ವಿಲಸಿನಿಯ ವಿಚಾರವಾಗಿ ಶ್ರೀಯುತರಿಗೂ ,  ಎಂ. ಭರತೆಶ ನಿಗೂ ಭಯಾನಕ ಯುದ್ಧವೇ ಆಗಿ , ಕೊನೆಗೆ ಭರತೆಶ ಬಾರಿಸಿದ ಏಟು ಶ್ರೀಯುತರ ಸೊಂಟಕ್ಕೆ ಬಿದ್ದು , ಈ ಬಾರಿಯ ಮಾನವ ಜನ್ಮದಲ್ಲಿ ಮತ್ತೆ ಎಂ. ವಿಲಸಿನಿಯ ನೆನಪು ಬಾರದಂತೆಯೂ , ಜನ್ಮ ಪೂರ್ತಿ ನೆನಪು ಇಟ್ಟು ಕೊಳ್ಳುವಂತೆ ಸೊಂಟ ನೋವು ಪ್ರಾಪ್ತವಾಯಿತೆಂದು , ಸಕಲ ಯದಳ್ಲಿ ಪಡ್ಡೆಗಳಿಗೂ ತಿಳಿದ ವಿಷಯ..

 

ಒಟ್ಟಿನಲ್ಲಿ ಶ್ರೀಯುತರಿಗೂ , ಎಂ. ವಿಲಾಸಿನಿಗೂ ಇದ್ದ ನಂಟು ಕಡಿದು ಹೋಗಿದ್ದು ಅಂತು ನಿಜ.  ಎಂ. ವಿಲಾಸಿನಿಯ ಪ್ರಕರಣ ಆದ ಮೇಲೆ , ಶ್ರೀಯುತರು ಮತ್ತೂ ಸುಮಾರು ಕಾಲ ಜ್ಯೂನಿಯರ್ ಕಾಲೇಜಿನಲ್ಲಿ , ವಿಲಾಸಿನಿಗೆ ಸೀನಿಯರ್ ಆಗಿಯೂ , ಕೊನೆಗೆ ಜೂನಿಯರ್ ಆಗಿಯೂ ಇದ್ದು , ಅಂತಿಮವಾಗಿ ಶ್ರೀಯುತರ ಪರಮ ಪೂಜ್ಯ ಜನ್ಮದಾತರು , ಅವರನ್ನು ಮುಂದಿನ ವೇದಾಭ್ಯಾಸಕ್ಕಾಗಿ ಕೃಷ್ಣಚಂದ್ರಾಪುರ ಮಠಕ್ಕೆ ಕಳುಹಿಸಿದರು.

ಶ್ರೀಯುತರ ಸೊಂಟ ನೋವಿನ ಬಗ್ಗೆ  ಪ್ರಭಾ ಹೇಳಿದ ಕತೆ :

ನಿಜವಾಗಿಯೂ ಶ್ರೀಯುತರಿಗೆ ಸೊಂಟನೋವು ಪ್ರಾರಂಭವಾಗಿದ್ದು , ಕಾಲೇಜಿನಲ್ಲಿ ಇರುವಾಗಲಲ್ಲ. ಇದು ಅವರು ಕಾಲೇಜು ಬಿಟ್ಟು ಕೃಷ್ಣಚಂದ್ರಪುರಕ್ಕೆ ಹೋದಾಗ ಅಲ್ಲಿಯ ಬಳುವಳಿಯಾಗಿ ಈ ಸೊಂಟನೋವು . ಅಲ್ಲಿ ಮಠದವರು ಪಶು ಪಾಲನೆ ಮಾಡಿದಂತೆ , ಶ್ರೀಯುತರು ರತ್ನಕ್ಕಂನ ಪಾಲನೆ ಮಾಡಿ , ಕೊನೆಗೆ ಮಠದವರಿಂದ
ಬಹಿಷ್ಕಾರವನ್ನೂ ,  ರತ್ನಕ್ಕನ ಸಹೋದರರಿಂದ ಒದೆಯನ್ನು , ಆ ಒದೆಯ ಪ್ರಸಾದವಾಗಿ ಸೊಂಟ ನೋವನ್ನು , ಇವೆಲ್ಲಕ್ಕೂ ಮೇಲೆ ಪತ್ನಿಯಾಗಿ ರತ್ನಕ್ಕನ್ನೂ ಕರೆತಂದುದು , ಪ್ರಭಾಳ ತವರು ಮನೆಯಾದ ಸಾಗರದ ಕಡೆಯಿಂದ ಬಂದ ವರದಿ.

ಹೀಗೆ ಶ್ರೀಯುತರ ಸೊಂಟನೋವಿನ ವಿಷಯವಾಗಿ ಊರವರೆಲ್ಲರೂ ತಮಗೆ , ತಮ್ಮ ತಿಳುವಳಿಕೆಗೆ ನಿಲುಕಿದಂತೆ , ತಮ್ಮ ತಮ್ಮ ಶಕ್ತ್ಯಾನುಸಾರ ಮಾತನಾಡಿ , ವಾದ ವಿವಾದಗಳ ಮಾಡಿ ಕೊನೆಗೆ ಒಮ್ಮತಕ್ಕೆ ಬರಲಾರದೇ ,  ಶ್ರೀಯುತರ ಸೊಂಟನೋವನ್ನು ತಾವೇ ಅನುಭವಿಸುತಿದ್ದಂತೆ ಸಂಕಟ ಪಡತೊಡಗಿದ್ದರು.
ಶ್ರೀಯುತರ ಸೊಂಟ ನೋವು ಹದಿನಾರನೇ ಮೈಲಿಕಲ್ಲಿನ ಜನಸಮುದಾಯದ ಮೇಲೆ ಒಂದು ಗಾಢವಾದ ಪ್ರಭಾವ ಬೀರಿತ್ತು.  ಹೊತ್ತು ಕಳೆಯಲು ಸಾಧ್ಯವಾಗದ ಅನೇಕ ಸಂಧರ್ಭಗಳಲ್ಲಿ ಅನೇಕರು ಶ್ರೀಯುತರನ್ನು ವಿಚಾರಿಸಿಕೊಂಡು ಬರುವ ನೆಪ ಮಾಡಿಕೊಂಡು ಅವರ ಮನೆಗೆ ಹೋಗಿ ರತ್ನಕ್ಕ ಮಾಡಿ ಕೊಡುವ ಬಿಸ್ಸಿ ಬಿಸ್ಸಿ ಟೀ ಕುಡಿದುಕೊಂಡು ಬರುವದೂ ಇದೆ. ಇನ್ನೂ ಕೆಲವರು ತಮ್ಮ ತಮ್ಮ ಶಕ್ತ್ಯಾನುಸಾರ ತೈಲಾದಿಗಳನ್ನು ಶ್ರೀಯುತರಿಗೆ ಹೇಳಿ , ತೋಚಿದಂತೆ ಔಷಧಗಳನ್ನು ತಿಳಿಸಿ , ಕೊನೆಗೆ ಶ್ರೀಯುತರಿಗೆ ಸೊಂತನೋವಿನ ಜೊತೆಗೆ ತಲೆನೋವು ಬರುವಂತೆ ಮಾಡಿದ್ದು ಇದೆ. ಊರಿನ ಪಡ್ಡೆಗಳಿಗೆ ಕ್ರಿಕೆಟ್ ಟೀಮ್ನ  ಸಕ್ರೀಯ ಸದಸ್ಯರೂ , ಹಾಗೂ ಹದಿನಾರನೇ ಮೈಲಿಕಲ್ಲಿನಲ್ಲಿ ನಡೆಯುತಿದ್ದ ಸಮಸ್ತ ಟೂರ್ನಿಗಳಿಗೂ ಉದಾರ ದಾನಿಗಳು ಆಗಿದ್ದ ಶ್ರೀಯುತರು ಹೀಗೆ ಸೊಂಟನೋವಿನಿಂದ ನರುಳುತಿದ್ದುದು ಪಡ್ಡೆಗಳ ಗ್ಯಾಂಗೆ ಒಂದು ಭಾರಿ ಆಘಾತವೇ ಆಗಿತ್ತು. ಸೊಂಟನೋವಿನಿಂದ ಬಳಲುತಿದ್ದ ಶ್ರೀಯುತರ ಬಳಿ LIC ಮೊತ್ತವನ್ನು ಹೇಗೆ ಕೇಳುವದೆಂದು ಮಧು ,  ಊರಿನ ಪಂಚಾಯತಿ ಚುನಾವಣೆಗೆ ಪ್ರಚಾರ ಬೆಂಬಲ ಕೋರುವದು ಹೇಗೆಂದು ರಾಮ್ರಜುವು ,  ಮೊನ್ನೆಯಷ್ಟೇ ಕೊಟ್ಟ ಮಗಳ ಜಾತಕದ ವಿಷಯ ಏನಾಯಿತೆಂದು ಭಾಗ್ಯಕ್ಕನೂ ,  ಕೊಟ್ಟ ಸಾಲವನ್ನು ಮರು ಪಡೆಯುವದು ಹೇಗೆಂದು ಹೆಗಡೆರು ಹೀಗೆ ಹತ್ತು ಹಲವು ಜನರು ಶ್ರೀಯುತರ ಸೊಂತನೋವಿನಿಂದ ಕಂಗಾಲಾಗಿದ್ದರು.
*              *                  *                         *                             *              *                  *                *
ಹೀಗೆ ಶ್ರೀಯುತರ ವಿಷಯ ತಾರಕಕ್ಕೆ ಏರಿ ಎಲ್ಲರನ್ನೂ ದಹಿಸುತ್ತಿರುವಾಗಲೇ ನಾನು ಊರಿಗೆ ಬಂದು ಇಳಿದಿದ್ದೆ.  ಶ್ರೀಯುತರ ಅಡಿಕೆ ತೋಟದ ಪಕ್ಕದ ತೋಟವೇ ನಾಗಪತಿಯಾದಾದ್ದರಿಂದ , ಶ್ರೀಯುತರು ಸೊಂಟನೋವಿನ ಕಾರಣದಿಂದ ಅಡಿಕೆ ತೋಟಕ್ಕೆ ಕೊಳೆ ರೋಗದ ಮದ್ದು ಹೊಡಿಸದೇ ಇದ್ದ ಕಾರಣದಿಂದ ಎಲ್ಲಿ ಅವರ ತೋಟದಿಂದ ತನ್ನ ತೋಟಕ್ಕೆ ರೋಗ ಹರಾಡುವದೋ ಎಂಬ ನಾಗಪಾತಿ , ನಾನು ಮನೆಗೆ ಬಂದ ತಕ್ಷಣ ಆತಂಕ ವ್ಯಕ್ತ ಪಡಿಸಿದ್ದ.
ಹೀಗೆ ಅಲ್ಪ ಸ್ವಲ್ಪ ವಿಶ್ರಾಂತೀಯ ನಂತರ ನಾನು ಶ್ರೀಯುತಾರ ಮನೆಗೆ ಸವಾರಿ ಬೆಳೆಸಿದೆ.

ಹಲವ್ವಾರು ಸುತ್ತಿನ ಮಾತುಕತೆಗಳು , ಚಹಾ ಸೇವನೆಯೂ ಆಗಿ , ಸೊಂಟನೋವಿನ ಕರುಣಾಜನಕ ಇತಿಹಾಸವನ್ನು , ವರ್ತಮಾನವನ್ನು ತಿಳಿದು ಇನ್ನೇನು ಮಾಡಬೇಕೆಂದು ನಾನು ತೋಚದೆ ಸುಮ್ಮನೇ ಕುಳಿತಿದ್ದಾಗ , ಶ್ರೀಯುತರು ನನ್ನ ಕಿವಿಗೆ ಮುಖ ಕೊಟ್ಟು ಯಾವುದೋ ರಹಸ್ಯ ಹೇಳುವಂತೆ ಪಿಸುಗುಟ್ಟಿದರು.
" ಮಾರಾಯ ಇದು ನಂಗೆ ಸೊಂಟನೋವಲ್ಲ , ಬೆನ್ನು ನೋವು ಮಾರಾಯ..!!"

ನಾಸಿಕ ನಾಪತ್ತೆ ಪುರಾಣ೦

ಶಿವಮೊಗ್ಗ ಜಿಲ್ಲೆಯ ನಗರ ತಾಲ್ಲೂಕಿನ ಎಸ್. ನಾವಡರ ಏಕೈಕ ಪುತ್ರನು , ಕುಲೋದ್ಧಾರಕನು , ಸಕಲ ಕಲಾವಲ್ಲಭನು , ಸರ್ವಗುಣ ಪಾರಂಗತನೂ , ಆದ ವರ್ತಮಾನದಲ್ಲಿ ಬೆಂಗಳೂರಿನಲ್ಲಿರುವ  ಎಸ್. ಮೊಸರುದ್ದಿನ ನಾವಡನಿಗೆ , ಮೊನ್ನೆಯಿಂದ ತನ್ನ ಮೂಗು ಕಳೆದು ಹೋಗಿದೆಯೆಂಬ ವಿಚಿತ್ರ ಗುಮಾನಿ ಶಂಕೆಯಾಗಿ ಆಂಕೆಯನ್ನು ದಾಟಿ ಮೊಸರುದ್ದಿನನ ಸರ್ವ ದಮನ ಯತ್ನವನ್ನೂ ದಾಟಿ , ಅವನ ಮನಸ್ಸಿನಲ್ಲಿ ನಾಗಲೋಟದಿಂದ ಸರಸ್ರನೇ ಸುತ್ತುತ್ತಾ , ಹಬ್ಬುತ್ತಾ , ಚಕ್ರಾಕಾರವಾಗಿ ತಿರುಗುತ್ತಾ ಆರ್ಭಟಿಸುತ್ತಿತ್ತು.

 

ಎಸ್. ಮೊಸರುದ್ದಿನ ನಾವಡನಿಗೆ ಹೀಗೊಂದು ಆಘಾತಕಾರಿ ಸಂಶಯ ಬಂದಿದ್ದು ಕೆಲವು ದಿನಗಳ ಹಿಂದೆ ನಡೆದ ಘಟನೆಯ ನಂತರ.
ಅವತ್ತು  ಕೆ.ಆರ್. ಮಾರ್ಕೆಟಿನಿಂದ , ಉತ್ತರಹಳ್ಳಿ ಕಡೆಗೆ ಹೋಗುವ ಬಸ್ಸನ್ನು ಕಷ್ಟಪಟ್ಟು ನುಗ್ಗಿ , ಅದಮ್ಯ ಪ್ರಯಾಣಿಕರ ಒತ್ತಡಕ್ಕೂ , ಪ್ರತಿರೋಧಕ್ಕು ಒಂದಿನೀತು ಜಗ್ಗದೆ , ಎದುರಿಗೆ ಸಿಕ್ಕ ಸಂದಿಗಳಲೆಲ್ಲಾ ತೂರಿ , ಭೇದಿಸಿ , ಛೇದಿಸಿ ಬಸ್ಸಿನೊಳಗೆ ವೀರ ಅಭಿಮನ್ಯುವಿನ ಹಾಗೆ ನುಗ್ಗಿ , ನಿಲ್ಲಲು ದುರ್ಲಭವಾದ ದುರ್ಧರ ಕ್ಷಣದಲ್ಲಿ ,ಬಸ್ಸಿನ ಟಾಪ್ ಗೆ ಹೇಗೋ ನೇತಾಡುತ್ತಾ ತ್ರಿಶಂಕು ಸ್ಥಿತಿಯಲ್ಲಿ ಇರುವಾಗಲೇ ಅಭಿನವ ಅಭಿಮನ್ಯು ಮೊಸರುದ್ದಿನನ ಮೂಗಿನ ಆಳ ಗರ್ಭದಿಂದ , ಸಿರ್ರನೇ ಸಿಂಬಳದ ತುಣುಕೊಂದು , ಒಳಗಿನ ಯಮಯಾತನೆಯನ್ನು ಸಹಿಸಲಾಗದೆ ಆತ್ಮಹತ್ಯೆಯ ಕೊನೆಯ ಪ್ರಯತ್ನವಾಗಿ ಮೂಗಿನಿಂದ ಹೊರಗೆ ಧುಮುಕಿಯೇ ಬಿಟ್ಟಿತ್ತು.ಹೀಗೆ ಮೊಸರುದ್ದಿನನ ಮೂಗಿನ ವಿಸರ್ಜನೆ , ಪರಮ ರಷ್ ನ ಆ ಬಸ್ಸಿನಲ್ಲಿ ' ಹಿರಿಯ ನಾಗರಿಕರಿಗೆ' ಎಂದು ಬರೆದಿದ್ದ ಸೀಟಿನಲ್ಲಿ ವಿರಾಜಮಾನರಗಿದ್ದ 'ಕಿರಿಯ ನಾಗರಿಕರ' ಕುತ್ತಿಗೆಯ ಮೇಲೆ ಬಿದ್ದು , ರಭಸವಾಗಿ ಭುಜದ ಬಳಿ ಹರಿದು , ಬಗಲಿನತ್ತ ಜಿಗಿದು , , ಬಗಲಿನಲ್ಲಿ ತ್ರಿಶಂಕು ಸ್ಥಿತಿಯಲ್ಲಿ ಜೋತಾಡುತಿದ್ದ ಬೆವರಿನ ಹನಿಗಳನ್ನು ಕಂಡು ಖುಷಿಯಾಗಿ ಕಕ್ಕುಲಾತಿಯಿಂದ ಸ್ಪರ್ಶಿಸಿದ್ದು ಕ್ಷಣ ಮಾತ್ರದಲ್ಲಿ ಜರುಗಿ ಬಿಟ್ಟಿತ್ತು...! ಮೊದಲೇ ಬಸ್ಸಿನ ರಷ್ ನಿಂದಲೂ , ಮೈಮೇಲೆ ಬೀಳುವ ಪ್ರಯಾಣಿಕರಿಂದಲೂ , ಕಂಗಾಲಾಗಿ ಕುಳಿತಿದ್ದ ಕಿರಿಯ ನಾಗರಿಕರಿಗೆ ತನ್ನೊಳಗೆ ತಟ್ಟನೆ ಪುಳಕ ಹುಟ್ಟಿಸುತ್ತಾ ಹರಿದಾಡುತ್ತಿರುವದು ಏನೆಂದು , ಕುತ್ತಿಗೆಯಾದಿಯಾಗಿ ಕೈ ಆಡಿಸಲಾಗಿ , ಸಿಂಬಳದ  ತುಣುಕು ಅವರ ಕೈ ಬೆರಳಿಗೂ , ಕುತ್ತಿಗೇಗೂ ನಡುವೆ ದಾರದಂತಹ ಸೇತುವೆಯೊಂದನ್ನು ನಿರ್ಮಿಸಿತ್ತು,. ಕೈ ನೋಡಿ ಒಮ್ಮೆ ಪರೀಕ್ಷಿಸಿದ ನಂತರ ಅದು ಸಿಂಬಳ ಎಂದು ತಿಳಿದ ಕಿರಿಯ ನಾಗರಿಕರು ಹೇಸಿಗೆಯಿಂದ ಅದುರಿ ಹೋಗಿಸಿಂಬಳದ ಜನ್ಮದಾತ ಯಾರೆಂದು  ತಲೆಯೆತ್ತಿ ನೋಡಲಾಗಿ ಬಸ್ಸಿನ ಟಾಪ್ಗೆ ಜೋತಾಡುತ್ತಿದ್ದ , ಮೊಸರುದ್ದಿನನು , ಅವನ ಮುಖವೂ , ಮುಖದ ಮೇಲೆ ಮೂಗು , ಆ ಮೂಗಿನ ಪಾತಾಳಗರ್ಭದ ಮಹಾದ್ವಾರದಲ್ಲಿ ಹುಲುಸಾಗಿ ತೆವಳುತ್ತಿದ್ದ ಲೋಳೆಯು ಕಂಡು , ಸಿರ್ರನೇ ಮೈ ಮೇಲೆ ಬಿದ್ದ ಸಿಂಬಳವನ್ನೂ , ಅದಕ್ಕೆ ಕಾರಣಿ ಭೂತರಾದ ಇವನನ್ನು ಕಂಡು , ಕಿರಿಯ ನಾಗರಿಕರಿಗೆ ಸರ್ರನೇ ಕೋಪ ಏರಿ ಕೇಳಿಯೇ ಬಿಟ್ಟರು.
"ರೀ , ಏನ್ರೀ?"
ಆದರೆ ಇದ್ಯಾವುದರ ಅರಿವಿಲ್ಲದ ಬಡಪಾಯಿ ಮೊಸರುದ್ದಿನ ತನ್ನ ಪಾಡಿಗೆ ತಾನು ಬಸ್ಸಿನ ಟಾಪ್ ಗೆ ಜೊತಾಡುತ್ತ , ಸೊರ್‌ರಕ ಬರ್ರೂಕ್ ಎಂದೆಲ್ಲ ಶಬ್ದ ಮಾಡುತ್ತಾ ಮೂಗನ್ನು ಸೇದುತ್ತಾ , ಬಸ್ಸಿನಲ್ಲಿ ಜನಸಂದಣಿಯಿಂದಾದ ಒತ್ತುವಿಕೆಯ ಸುಖವನ್ನು , ಕಷ್ಟವನ್ನು ಅನುಭವಿಸುತ್ತಾ ನೇತಾಡುತಿದ್ದ.

"ರೀ ನಿಮಗೆ ಹೇಳಿದ್ದು  ಏನ್ರೀ?"  ಕಿರಿಯ ನಾಗರಿಕರು ಮತ್ತೆ ಗುಡುಗಿದರು.
"ಯಾರು ನಾನಾ"? ಮೊಸರುದ್ದಿನ
"ಮತ್ತೆ ಇನ್ಯಾರಿಗೆ? ಎನ್ ಮರ್ಯಾದೆ ಗಿರ್ಯಾದೆ ಇಲ್ಲವೆನ್ರಿ ನಿಮಗೆ?"
ಹೀಗೆ ಯಾವನೋ ಒಬ್ಬ ಇದ್ದಕಿದ್ದಂತೆ ಮರ್ಯಾದೆ ಬಗ್ಗೆ ಕೇಳಲಾಗಿ ಮೊಸರುದ್ದಿನನ ಏನು ತೋಚದೆ ಕಕ್ಕಾಬಿಕ್ಕಿಯಾದ. ಅವನ ಮೆದುಳು ಅನಿರೀಕ್ಷಿತ ಸರ್ಚ್ ಗೆ ತತ್ತರಿಸಿತು. ಉತ್ತರ ಏನು ಕೊಡಬೇಕೆಂದು ಹುಡುಕಾಡಿದ ಮೆದುಳಿಗೆ ಕೆಳಕಂಡ ಉತ್ತರಗಳು ಹೊಳೆದವು.

೧. ಇವನಿಗೆ ಮರ್ಯಾದೆ ಅನ್ನೋದು ಇಲ್ಲ.. - ಅಪ್ಪ ಮೊಸರುದ್ದಿನ ಪಿ.ಯು.ಸಿ. ಫೈಲ್ ಆದಾಗ
೨. ಮಾನ ಮರ್ಯಾದೆ ಅನ್ನೋದು ಸ್ವಲ್ಪವಾದ್ರೂ ಇದ್ದಾರೆ ತಾನೇ - ಅಮ್ಮ , ಮೊಸರುದ್ದಿನ ಕದ್ದು ಬೀದಿ ಸೇದಿ ಸಿಕ್ಕಿಬಿದ್ದಾಗ.
೩. ಥೂ ಚೂರು ಮರ್ಯಾದೆ ಇಲ್ಲ - ಅಕ್ಕ , ನಗರದಲ್ಲಿ ಹುಡುಗಿಯರನ್ನ ಚುಡಾಯಿಸಿ ಒದೆ ತಿಂದಾಗ
೪. ಬಡ್ಡಿಮಗ ಮೂರುಕಾಸಿನ ಮರ್ಯಾದೆ ಇಲ್ಲ - ಗೆಳೆಯನೇಕರು , ಕ್ರಿಕೇಟಿನಲ್ಲಿ ಮೋಸ ಮಾಡಿದಾಗ
೫. ಕತ್ತೆ ಭಡವ ಮರ್ಯಾದೆ ಅನ್ನೋದು ಎಲ್ಲಿ ಇಟ್ತಿದಿಯ? ಗುರುಗಳು , ಪಕ್ಕದ ಕ್ಲಾಸ್ಸ್‌ನೆ ಶಾಂತಾಗೆ ಲೆಟರ್ ಬರೆದು ಸಿಕ್ಕಿ ಬಿದ್ದಾಗ

ಹೀಗೆ ಎಲ್ಲ ಕಡೆಯಿಂದಲೂ ಇಲ್ಲ , ಕಳೆದಿದೆ , ಎಂಬಿತ್ಯಾದಿ ಋಣಾತ್ಮಕ ಉತ್ತರೆಗಳೆ ಬಂದು , ಕೊನೆಗೆ ಮರ್ಯಾದೆ ಎಂಬುದು ನಿಜವಾಗಿಯೂ  ತನಗೆ ಇಲ್ಲವೇ ಅಥವಾ ಕಳೆದುಹೋಗಿದೆಯೇ? ಅಥವಾ ಯಾರಿಗೂ ಅದು ಇಲ್ಲವೇ? ಅಥವಾ ಅದು ಅಂಗಡಿಯಲ್ಲೇ ಸಿಗಬಹುದೇ ? ಸಿಕ್ಕರೆ ಬೆಂಗಳೂರಿನಲ್ಲಿ ಸೋವಿಗೆ ಸಿಗುತ್ತೋ ಅಥವಾ ಶಿವಮೊಗದಲ್ಲೇ ? ಬಹುಶ ಶಿವಮೊಗದಲ್ಲಿ ಕಡಿಮೆ ಇರಬಹುದು. ಒಮ್ಮೆ ಪೀರ್ ಸಾಬೀಯನ್ನ ಕೇಳಿ ನೋಡುವ. ಸಿಕ್ಕರೆ ತಂದು ಬಿಡುವ. ಆದರೆ ಹೇಳಲಿಕ್ಕೆ ಆಗುವದಿಲ್ಲ ಈ ಪೀರ್ ಸಾಬೀ ಹಲ್ಕ ಅಂದ್ರೆ ಹಲ್ಕ , ಸಾಬರ ಪೈಕಿ ಬೊಳಿಮಗ ಡೂಪ್ಲಿಕೇಟ್ ಕೊಟ್ರೆ? ಯಾರನ್ನು ನಂಬಳಿಕ್ಕೆ ಆಗುವದಿಲ್ಲ. ಯಾವುದಕ್ಕೂ ಒಮ್ಮೆ ಎಸ್‌ಬಿಟಿಯನ್ನು  ಕೇಳಿ ಬಿಡುವ. ಅವನು ಇವಕ್ಕೆಲ್ಲ ಸರಿಯಾಗಿ ಹೇಳ್ತಾನೇ. ಆದರೂ ಅವನು ಕಂತ್ರಿಯೆ , ಮೊನ್ನೆ ಹಾಗೆ ಮಾಡಿಲ್ಲವ? ಇವಳ ಬರ್ಥ್ ಡೇ ಗೆ ಏನು ಗಿಫ್ಟು ಕೊಡುವ ಎಂದು ಕೇಳಿದಕ್ಕೆ ಹಾರ್ಟ್ಗೆ ಹತ್ತಿರ ಇರುವ ಗಿಫ್ಟು ಕೊಡು ಅಂದ. ಅದು ಏನ? ಅಂತ ಕೇಳಿದಕ್ಕೆ "ಹುಡುಗಿಯರಿಗೆ ಹಾರ್ಟ್ಗೆ ಹತ್ತಿರ ಇರುವದು ಅಂದ್ರೆ ಬ್ರಾ ಮಾತ್ರ ನೋಡು ಅಂತ ಹೇಳಿ , ನನಗು ಹೌದು ಅನ್ನಿಸಿ ಕೊನೆಗೆ ಸೈಜ್ ಯಾವುದು ಎಂದು ಗೊತ್ತಾಗದೇ ಯಾವುದೋ ಸೈಜ್ ತಂದು ಅವಳಿಗೆ ಕೊಟ್ಟು , ಕೊನೆಗೆ ಅವಳು "ಮರ್ಯಾದೆಇಲ್ಲವೇನೋ " ಎಂದು ತುಪಕ್ ಎಂದು ಉಗಿದಿದ್ದಳು.  ಈ ಎಸ್ಬಿಟಿ ಕೇಳಿದರೆ ಅವಳು ಬೈದಿದ್ದು ಸೈಜ್ ಸರಿಯಿಲ್ಲವೆಂದು , ಇಲ್ಲವಾದರೆ ಇಂತಹ ನವನವೀನ ಗಿಫ್ಟ್ಗೆ ಬಯ್ಯುವ ಸಾಧ್ಯತೆ ಇಲ್ಲವೆಂದು ಖಂಡ ತುಂಡ ವಾಗಿ ವಾದಿಸಿದ್ದ. ಥತ್ ಅದೆಲ್ಲ ಸರಿ ಆದರೆ ಇವನಿಗೆ ಮರ್ಯಾದೆ ಬಗ್ಗೆ ಏನು ಹೇಳುವದು?
ಏನಾದರಾಗಲಿ ಮೊದಲು ಇವನಿಗೆ ಇದೆಯೋ ಇಲ್ಲವೋ ಕೇಳಿಯೇ ಬಿಡುವ.
"ನಿಮಗೆ ಇದೆಯೆನರೀ?" ಮೊಸರುದ್ದಿನ
"ಇದ್ದಿದಕ್ಕೆ ಹೇಳಿದ್ದು" ಅವನು

ಈಗ ನಿಜವಾಗಿಯೂ ಮೊಸರುದ್ದಿನನಿಗೆ  ಪೀಕಲಾಟಕ್ಕೆ ಶುರುವಾಯಿತು.
ಇವನೇನು ತನ್ನ ಹತ್ತಿರ ಮರ್ಯಾದೆ ಇದೆ ಎಂದು ನನಗು ಇದೆ ಎಂದು ಕೇಳಿದನೆ? ಅಥವಾ ಇವನಿಗೂ ನನ್ನ ಹಾಗೆ ಸಂಶಯ ಇದೆಯೇ? ಇದ್ದಾರೆ ಹೀಗೆಲ್ಲ ಕೇಳಿಬಿಡುವದ? ಅಥವಾ ತನಗೆ ನಿಜವಾಗಿಯೂ ಮರ್ಯಾದೆ ಇಲ್ಲವೇನೋ? ಇಲ್ಲದಿದ್ದರೆ ಸಿಕ್ಕವರೆಲ್ಲ ಹೀಗೇಕೆ ಕೇಳುತಿದ್ದರು? ಅದರಲ್ಲೂ ಗುರುತು ಪರಿಚಯ ಇಲ್ಲದ ಇವನು ಕೇಳಿದ ಎಂದರೆ .. ಬಹುಶ ನನ್ನ ಮುಖದಲ್ಲಿ ಮರ್ಯಾದೆ ಇಲ್ಲದವರಿಗೆ ಇರುವ ಯಾವುದೋ ಗುರುತು ಮಾಯವಾಗಿದೆಯೇನೋ?ಹಾ.! ಅದೇ ಇರಬೇಕು.. ಇವ್ನು ತನಗೆ ಇದೆಯೆಂದನಲ್ಲ ಇವನ ಮುಖ ಒಮ್ಮೆ ನೋಡಿಯೇ ಬಿಡುವ.
ಮೊಸರುದ್ದಿನ ಕಿರಿಯ ನಾಗರಿಕನ ಮುಖದಲ್ಲಿ ಅಂತಹದ್ದೇನು ಕಾಣಿಸಲಿಲ್ಲ. ಮತ್ತೆ ಗಲಿಬಿಲಿ ಹೆಚ್ಚಿತು. ಈ ಜನಸಂದಣಿಯ ಬಸ್ಸಿನಲ್ಲಿ ತನ್ನನುಇಂತಹ ಸಂದಿಗ್ದ ಸ್ಥಿತಿಗೆ ನೂಕಿದವನ ಮೇಲೆ ಅಪಾರ ರೋಷ ಉಕ್ಕಿ ಮೊಸರುದ್ದಿನ ಹೇಳಿದ :
"ಇದ್ದಾರೆ ಇರಲಿ, ನಾನೇನು ಮಾಡಬೇಕು?"
"ರೀ ಸ್ವಾಮಿ ನೀವೇನೂ ಮಾಡೋದು ಬೇಡ. ಮೊದ್ಲು ನಿಮ್ಮ ದರಿದ್ರ ಕೊಳಕು ಮೂಗನು ಒರೆಸಿಕೊಳ್ಳಿ , ಸುರಿತ ಇರೋ ಮೂಗು ಇಟ್ಕೊಂಡು ಬಾಯಿಗೆ ಬಂದ ಹಾಗೆ ಮಾತನಾಡ್ತಾರೆ......... "
ಹೀಗೆ ಆತ ಕೋಯ್ಯ್- ಪಯ್ಯ ಎಂದು ಬಯ್ಯತೊಡಗಿದ.

ಈಗ ಮೊಸರುದ್ದಿನನಿಗೆ ನಡೆದು ಏನೆಂದು ಅರಿವಾಗತೊಡಗಿತು. ಆದರೆ ಎರಡು ಕೈಗಳಿಂದ  ಬಸ್‌ನ ತೋಪ್‌ಗೆ ಜೊಟಾಡುತ್ತಾ , ಕಟ್ಟಿದ ಮೂಗಿನಿಂದ  ಉಸಿರಾದಲಾಗದೆ ಬಾಯಿಯಿಂದ ಉಸಿರಾಡುತ್ತಾ , ಪರದಾಟ ಪಡುವಾಗ , ಎಲ್ಲೋ ಇರುವ ತನ್ನ ಜೇಬಿನಿಂದ ಕರವಸ್ತ್ರವನ್ನು ತೆಗೆಯ ಬೆಕೆನ್ನುವದು ಮರ್ಯದೆಗಿಂತ ಭಯಂಕರ ವಿಷಯವಾಗಿ ತೋರಿತು.
ಸ್ವಲ್ಪ ಹೊತ್ತು ಹಾಗೆ  ಕಳೆಯಿತು. ನಂತರ ತಟ್ಟನೆ ಮೊಸರುದ್ದಿನನ ಮೂಗಿನಿಂದ ಹನಿಯೊಂದು ಆಳ ಪ್ರಪಾತಕ್ಕೆ ಧುಮುಕುವ ಬಿಂದುವಿನಂತೆ ಕೆಳಗೆ ಉರುಳುರುಳಿ ಬರ ತೊಡಗಿದಾಗ ಅದನ್ನು ದಾರಿ ಮಧ್ಯವೇ ತಡೆದು , ನಿರ್ದಯವಾಗಿ ಕೊಲ್ಲುವ ಸಂಚಿನಂತೆ ಅಸ್ತ್ರವನ್ನು ಹುಡುಕಲಾಗಿ , ಮೊಸರುದ್ದಿನ ಒಂದು ಕೈಯನ್ನು ಕಷ್ಟಪಟ್ಟು ತನ್ನ ಜೇಬಿಗೆ ತೂರಿಸುವ ಅವಸರದಲ್ಲಿ ಪಕ್ಕದವರ ಜೇಬಿಗೆ ತೂರಿಸಿದನು. ಅದೇ ಕ್ಷಣಕ್ಕೆ ಡ್ರೈವರ್ ಒತ್ತಿದ ಬ್ರೇಕ್ ರಭಸಕ್ಕೆ ಸಮಸ್ತ ಬಸ್ಸು ಕಂಪಿಸಿ , ಎಲ್ಲರೂ ಒಲಾಡಿ , ಪರಿಣಾಮವಾಗಿ ಮೊಸರುದ್ದಿನನ ಮೂಗಿನಿಂದ ಉರುಳುತಿದ್ದ ಹನಿಯು ಮತ್ತೂ  ರಭಸ ಪಡೆದು , ಗತಿಯನ್ನು ಹೆಚ್ಚಿಸಿಕೊಂಡು , ಮತ್ತೊಂದು ಬಾರಿ ಕಿರಿಯ ಪ್ರಯಾಣಿಕರ ಕುತ್ತಿಗೆ ಮೇಲೆ ಚುಂಬನಾಭಿಷೇಕ ಮಾಡಿತು.

ಮತ್ತೊಮ್ಮೆ ತನಗೆ ಒದಗಿದ ಗತಿಯಿಂದ ಪಿತ್ತ ನೆತ್ತಿಗೇರಿ ಕಿರಿಯ ನಾಗರಿಕರು ಥಟ್ಟನೆ ಎದ್ದು ಮೊಸರುದ್ದಿನನ ಕೆನ್ನೆಗೆ ಬಾರಿಸುವದಕ್ಕೂ , ಪಕ್ಕದಲ್ಲೇ ಇದ್ದ ಮತ್ತೊಬ್ಬರು ಯಾವನೋ ಅವನ ಜೇಬಿಗೆ ಕೈ ಹಾಕಿದವನು ಎಂದು ಇನ್ಯಾರಿಗೋ ಬಾರಿಸಿದರು. ಹೀಗೆ ಅವರು ಇವರಿಗೂ , ಇವರು ಅವರಿಗೂ , ಇನ್ನೊಬ್ಬರು ಮತ್ತೊಬ್ಬರಿಗೂ ಎಂದು ಗಲಿಬಿಲಿಗೊಂದು ಸಿಕ್ಕಸಿಕ್ಕವರಣೆಲ್ಲ ಬೈದಾಡಿ , ಬೆಂಗಳೂರಿನ ಅಸಾಧ್ಯ ಟ್ರಾಫಿಕಿನ ಮೇಲಿನ ಕೋಪವನ್ನು , ಒಳಗೆ ಬಸ್ಸನಲ್ಲಿ ಏರುತಿದ್ದ ಸೆಕೆಯನ್ನು, ಸೀಟ್ ಸಿಗದ ನೋವನ್ನು , ಹೀಗೆ ಹಳೆಯದು ಹೊಸದು ಎಲ್ಲವನ್ನು ಕೂಡಿಸಿ ಪ್ರತಿಯೊಬ್ಬರೂ ಇನ್ನೊಬ್ಬರನ್ನು ಬಾಯಿಗೆ ಬಂದಂತೆ ಬಯ್ಯತೊಡಗಿದರು. ಕಿರಿಯ ಪ್ರಯಾಣಿಕರು ಹಾಗೂ ಇನ್ನೂ ಕೆಲವರು ಮೊಸರುದ್ದಿನನ ದರಿದ್ರ ಕೊಳಕು ಮೂಗು ಇಷ್ಟಕೆಲ್ಲ ಕಾರಣವೆಂದು ಮೂಗಿನ ಕುಲ ಗೋತ್ರ  ಅದರ ಒಡೆಯ ಮೊಸರುದ್ದಿನ ಎಲ್ಲರನ್ನೂ ಸೇರಿಸಿ ಅಶ್ಲೀಲವಾಗಿ ಬಯುತ್ತಿರುವಾಗಲೆ ಬಸ್ಸು ಬಸವನಗುಡಿ ಸ್ಟಾಪಿನಲ್ಲಿ , ಮೊಸರುದ್ದಿನನ ನಿರ್ಗಮನಕ್ಕೆ ಬಾಗಿಲಿ ತೆಗೆದು ದಾರಿ ಮಾಡಿ ಕೊಟ್ಟಿತ್ತು.

ಈ ಘಟನೆ ಸಂಭವಿಸಿದ ನಂತರ ಮೊಸರುದ್ದಿನನಿಗೆ ತನ್ನ ಮೂಗಿನ ಮೇಲೆ ಬಂದ ಕೋಪವೂ ಅಷ್ಟಿಷ್ಟಲ್ಲ. ಮೊಸರುದ್ದಿನ ತನ್ನ ಸಕಲ ಭಾಷಾ ಪ್ರವಿಣ್ಯ ಬಳಸಿ ಮೂಗಿಗೆ ಹಿಡಿ ಶಾಪ ಹಾಕಿದನು.

**************                    ****************                *****************                      ****************8
ಯಾವ ಕ್ಷಣದಲ್ಲಿ ತನ್ನ ಪರಮ ಪೂಜ್ಯರ  ವೀರ್ಯಾಣು , ಮಾತೊಶ್ರೀಯವರ ಅಂಡಾಣುವಿನೊಂದಿಗೆ ಸಮ್ಮಿಲನ ಗೊಂಡಿತೋ , ಅವಟ್ತು ಏನಾದ್ರೂ ಪರಮ ಪೂಜ್ಯರೂ ಅಥವಾ ಮತೊಶ್ರಿಯವರು ಯಾವ ವಾಸನೆಯಲ್ಲಿ ಇದ್ದರೋ , ಒಟ್ಟಿನಲ್ಲಿ ತನಗೆ ಇಂತಹ ದರಿದ್ರ ಮೂಗು ಪ್ರಾಪ್ಟ್ ಆಯಿತೆಂದು ಪರಿಪರಿಯಾಗಿ ಹಲವರಿದು, ಕೊನೆಗೆ ತನಗೆ ಜನ್ಮ ಕೊಟ್ಟವರನ್ನೂ , ಕೊಡಲು ಕಾರಣವಾದ ಕ್ರಿಯೆಯನ್ನೂ ಮನಸ್ಸಿನಲ್ಲೇ ಉಗಿದನು.
ಮೊಸರುದ್ದಿನನಿಗೆ ತನ್ನ ಮೂಗಿನ ಮೇಲೆ ರೇಜಿಗೆ ಹುಟ್ಟಲು ಹಲವಾರು ಕಾರಣಗಳಿದ್ದವು. ಮೊದಮೊದಲಾದರೆ ಹೊತ್ತು ಹೋಗದ ಗಳಿಗೆಗಳಲ್ಲಿ ಮೊಸರುದ್ದಿನ ತನ್ನ ಬಲಗೈ ಹೆಬ್ಬರಳನ್ನು ಮೂಗಿನ ಅಂತಪುರದಲ್ಲಿ ತೂರಿಸಿ , ತೋರು ಬೆರಳನ್ನು ಮೂಗಿನ ಹೊರ ಮೈಗೆ ಆನಿಸಿ , ಲಯಬದ್ದವಾಗಿ ಹೆಬ್ಬೆರಳನ್ನು ಆಡಿಸಿ , ರಸ್ತೆ ಕೆಲ್ಸದ ಬುಲ್ಡೊಜರಗಳು ಮರಗಳನ್ನು ಬುಡ ಸಮೇತ ಕೀಳುವಂತೆ ತಾನು ಮೂಗಿನ ಮೂಗಿನ ಗೋಡೆಗಳ ಮೇಲೆ ಹುಲುಸಾಗಿ ಬೆಳೆದಿದ್ದ ಸಸ್ಯವರ್ಗಗಳ ಮೃದುತ್ವಕ್ಕೆ ಸುಖಪಡುತ್ತಾ , ಅಲ್ಲಿದ್ದ ಖನಿಜಗಳನ್ನು ಬೇರು ಸಮೇತ ಕಿಳುತಿದ್ದ.

ನಂತರ ಇದೆ ಕ್ರಿಯೆಯನ್ನ ಮತ್ತೆ ಪುನರಾವರ್ತಿಸಿ ಅಳಿದುಳಿದ ಶೇಷ ಅದಿರುಗಳಿಗೆ ಒಂದು ಗತಿ ಕಾಣಿಸುತಿದ್ದ. ಹೀಗೆ ಹೆಬ್ಬೆರೆಲಿನಲ್ಲಿ ಶೇಖರವಾದ ಖನಿಜಯುಕ್ತ ತ್ಯಾಜ್ಯವನ್ನು ಎಡಗೈ ತೋರುಬೆರಳಿನಿಂದ ನಾಜೂಕಾಗಿ ತೆಗೆದು ಅದನ್ನು ಎಡಗೈ ಹೆಬ್ಬೆರಳಿಗೆ ವರ್ಗಾಯಿಸಿ , ಮತ್ತೆ ತೋರು ಬ್ಬೆರಳಿನ ಸಹಾಯದಿಂದ ತಿಕ್ಕಿ ತಿಕ್ಕಿ ಅದಕ್ಕೆ ಉಂಡೆಯ ರೂಪ ಕೊಡುತಿದ್ದ. ಆಮೇಲೆ ಅಕ್ಕಪಕ್ಕ ನೋಡಿ ಯಾರು ಇಲ್ಲ ಎಂದು ಖಚಿತ ಪಡಿಸಿಕೊಂಡು ಸರಕ್ಕನೆ ಉಂಡೆಯನ್ನು ಕುಳಿತ ಜಾಗದಲ್ಲಿ ಎಲ್ಲಿಯಾದರೂ ಅಂಟಿಸುತಿದ್ದ.
ಇಂತಹ ಮೂಗು ಮೊಸರುದ್ದಿನನನ್ನು ಪ್ರಾಣಪಾಯದಿಂದ ಕಾಪಾದಿದ್ದು ಇದೆ. ಕಾಲೇಜು ಸೇರಿದ ಮೊದಲ ದಿನಗಳಲ್ಲಿ ಗೆಳೆಯೇರ ಜೊತೆ ಚಾಕೊಲೇಟಿನಲ್ಲಿ ಸ್ವಲ್ಪ ಭಂಗಿ ಸೇರಿಸಿ ತಿಂದು , ಕೊನೆಗೆ ಅದು ನೆತ್ತಿಗೆ ಏರಿ , ಆಸ್ಪತ್ರೆ ಸೇರಿದಾಗ , ಬಾಯಿಯ ಮೂಲಕ ಏನು ಇಳಿಯದೇ ಮೂಗಿನ ಮೂಲಕವೇ ಹೊಟ್ಟೆಗೆ ದ್ರವಾಹಾರ ಹಾಕಲಾಗಿತ್ತು.  ಅಲ್ಲದೇ ಮೊಸರುದ್ದಿನನ ಮೂಗು ಇನ್ನೊಂದು ವಿಧದಲ್ಲಿ ಸಹಾಯ ಮಾಡುತಿತ್ತು.  ಮೂಗು ತನ್ನ ಘ್ರಾಣ ಶಕ್ತಿಯಿಂದಲೇ  ಬರುತ್ತಿರುವದು ಯಾರು ಎಂದು ವ್ಯಕ್ತಿ ಪರಿಚಯ ಕೊಡುತಿತ್ತು.
ಹೀಗೆ ಹತ್ತು ಹಲವು ರೀತಿಯಿಂದ ಆತ್ಮೀಯವಾಗಿದ್ದ ಮೂಗು ಈಗ್ಗೆ ಕೆಲವು ತಿಂಗಳಿನಿಂದ ಭಯಾನಕ ಕಿರಿಕಿರಿ ತಂದಿತ್ತು. ಸದಾ ರೋಗ ಗ್ರಸ್ತ ವಾಗಿಇರುತಿದ್ದ ಮೂಗಿನಲ್ಲಿ ಮೊದಲಿನಂತೆ ಘನ ರೂಪದ  ಖನಿಜಾಗಳು ಬೆಳೆಯುತ್ತಿರಲಿಲ್ಲ. ಹೀಗಾಗಿ ಏಕಾಂತದಲ್ಲಿ  ಉಂಡೆ ಕಟ್ಟಲಾಗದೆ , ಕಟ್ಟಿ ಮೆತ್ತಲಾಗದೆ ಹಾಸ್ಟೆಲಿನ ಗೋಡೆಗಳ ಸ್ವಚ್ಛ ಜಾಗಗಳನ್ನು ನೋಡಿದಾಗಲೆಲ್ಲ ಮೊಸರುದ್ದಿನ ವಿಚಿತ್ರ ಅಶಾಂತಿಯಿಂದ ಚಡಪಡಿಸುತಿದ್ದ. ಹೀಗೆ ಒಳಗೊಳಗೆ ತಿದಿ ಒತ್ತಿ , ಕಾವು ಏರಿ ಹರಡುತಿದ್ದ ಅಶಾಂತಿಯಿಂದ ತತ್ತರಿಸುತ್ತಾ ಇರುವಾಗಲೇ , ಮೊಸರುದ್ದಿನನ ಘ್ರಾಣ ಶಕ್ತಿ ಮಾಯವಾಗಿದ್ದು..! ಹೀಗಾಗಿ ವಾಸನೆಯಿಂದ ತೃಪ್ತಿ ಅನುಭವಿಸುತಿದ್ದ ಮೊಸರುದ್ದಿನನ 'ಆ'' ಹಸಿವು , ಹಸಿವಾಗಿಯೇ ಸುತ್ತ ತೊಡಗಿತು. ಹೀಗೆ ದೈಹಿಕವಾಗಿ , ಮಾನಸಿಕವಾಗಿ ಹಾಗೂ ಲೈಂಗಿಕವಾಗಿ ಒಳಗೊಳಗೆ ಅಪಾರ ಒತ್ತಡವನ್ನು , ಯಾತನೆಯನ್ನೂ ಸಹಿಸಲೇಬೇಕಾದ ಸ್ಥಿತಿಯೊಂದು ನಿರ್ಮಾಣವಾಯಿತು.

ಇತ್ತೀಚಿಗೆ ಮೂಗು ಉಸಿರಾಡುವದನ್ನು ನಿಲ್ಲಿಸಿದ ಮೇಲೆ , ತಿನ್ನುವದಕ್ಕೂ , ಕುಡಿಯುವಾದಕ್ಕೂ , ಉಸಿರಾಡುವದಕ್ಕೂ , ಮಾತನಾಡಲಿಕ್ಕು , ತೆರೆಯುವದಿಕ್ಕು , ಮುಕ್ಕಳಿಸುವದಿಕ್ಕು , ಮುಚ್ಚುವದಿಕ್ಕು , ಬೈಯುವದಿಕ್ಕು , ಆಕಳಿಸುವದಿಕ್ಕು , ಹಾಡಲಿಕ್ಕೂ , ಜೊಲ್ಲು ಸುರಿಸುವದಿಕ್ಕು  ಹೀಗೆ ಹತ್ತಾರು ಕೆಲಸಗಳಿಗೆ ಬಾಯಿಯನ್ನು ಉಪಯೋಗಿಸಿದ ಪರಿಣಾಮವಾಗಿ ಬಾಯಿಯಲ್ಲಿ ಹುಣ್ಣುಗಳು ಎದ್ದು ಯಮಯಾತನೆ  ಕೊಡತೊಡಗಿದವು.
ಈ ಸಮಯದಲ್ಲೇ ಬಸ್‌ನ ಘಟನೆಯೂ ನಡೆದು ಮೊಸರುದ್ದಿನನು " ಇಂತಹ ಲೊಫರ್ ಮೂಗು ಇದ್ದರೆಷ್ಟು ಬಿಟ್ಟರೆಷ್ಟು" ಎಂದು ಬಹಿರಂಗವಾಗಿಯೇ , ಮೂಗಿಗೆ ಕೇಳುವಂತೆ ಹಲವಾರು ಬಾರಿ ಕೂಗಾಡಿದ್ದನು.
***                ***                     ****                     ***                       ***               ***                 ****             ****       ****
ಹಾಗೂ ಇತ್ತೀಚಿಗೆ ಮೂಗು ಕಳೆದುಹೋಗಿದೆಯೆಂಬ ವಿಚಿತ್ರ ಸಂಶಯ ಹೆಮ್ಮರವಾಗಿ ಮೊಸರುದ್ದಿನ ತಳಮಳಿಸಲಾರ೦ಭಿಸಿದ.

ವಿ. ಸೂ. : ಈ ಕತೆ ಸಂಪೂರ್ಣ ಕಾಲ್ಪನಿಕ. ಇಲ್ಲಿರುವ ಘಟನೆಗಳಾಗಲಿ , ಪಾತ್ರಗಳಾಗಲಿ  ಅಥವಾ ಇನ್ಯಾವುದಾಗಲಿ ಯಾರಿಗಾದರೂ ತಾಳೆಯಾದರೆ ಅದು ಕೇವಲ ಆಕಸ್ಮಿಕವೇ ಹೊರತು ಉದ್ದೇಶಪೂರ್ವಕ ಅಲ್ಲ.

ಅವಸ್ಥೆ..!

ಎಲ್. ಕೇಮಚಂದ್ರ ಉಡುಪರು ಬರೆದ ಇತ್ತೀಚಿಗಿನ ಕವಿತೆ.

ಪ್ರೇಮದಾಚೆಗಿನ ಅವಸ್ಥೆ :
ಅಳುವಿನಂತ:ಪುರದೊಳಗೆ ನಾನೊಬ್ಬನೇ
ಒಬ್ಬಂಟಿ ; ಸುತ್ತ
ಕತ್ತಲೆಯ ಶ್ವಾಸ , ಗಾಢ
ಅಂಧಕಾರದೊಳಗೊಣ ಎನ್ನ ನಿಶ್ವಾಸ
ದು:ಖ ದುಗುಡ ದುಮ್ಮಾನ ತುಂಬಿದೆರಡು
ಕಂಗಳ ಮಧ್ಯೆ ನಾನೊಬ್ಬನೇ ಒಬ್ಬಂಟಿ.!
ನಾಲಿಗೆಯಾಡಿಸಿದರೆ ಉಪ್ಪುಪ್ಪು
ನಿನ್ನ ನೆನಪಿನ ಹನಿಗಳ ಆವಿ
ತುಟಿಯಮೇಲೆ ಒಂಟಿ .!

ಉಸಿರ ಹೀರಿ ಹಿಡಿದು , ಕೋಶ ಸುಡಲೆಂದು
ಒಳಗೆಳೆದ ಆಮ್ಲಜನಕ , ಹೊರಬಿಡುವಾಗ ಇಂಗಾಲ
ಜೀವ ಸುಟ್ಟು ದಹದಹಿಸಿ ಹೊರಬಿಡುವಂತೆ
ಒಳಗೆಳೆದ ಪ್ರೇಮ ಒಳಗೊಳಗೆ ಬೆಂದು , ಸುಟ್ಟು
ಹೊರಬಿಡುವ ಹಾದಿ ನಿನ್ನ ನೆನಪುಗಳ ಶವ.!

ಕಿಟಕಿಗಳೇ ಇಲ್ಲ ಅಳುವಿನಂತ:ಪುರ
ದೊಳಗೆ ; ಬರಲೊಂದು ಬಾಗಿಲು ಹೋಗಲು
ಧುತ್ತನೆ ನಿಂತ ಗಹಗಹಿಸುವ ನಿನ್ನ ಪ್ರೇಮ ಕಳೇಬರ.!
ನಿದ್ರೆ ಬರದ ರಾತ್ರಿಗಳು
ಕನವರಿಸುತ್ತವೆ , ಹೇಳು ಸಖಿ
ನಿನ್ನ ಕಂಗಳು ಮೊದಲಿಂತೆ ವಜ್ರವಾ?

ಒದ್ದು ನಡೆದ ಎದೆಯ ಪ್ರೇಮ
ಕವಾಟ ; ತುಂಬಿದೆ ಸುಟ್ಟ ನೆನಪ ಬೂದಿ
ಅಳುವಿನಂತ:ಪುರವೇ ಹಾಗೆ
ಸತ್ತು ಸುತ್ತ ಶೇಷ ಬೂದಿ ; ಸೇರಿ ಕಣ್ಣೀರು
ಮತ್ತೆ ಹಸಿ ಹಸಿ
ಹಸಿಗೊ೦ದು ಆಕಾರ
ನಿನ್ನ ನೆನಪಿನ ವಿಕಾರ.!-- 


ಎಲ್. ಕೇಮಚಂದ್ರ ಉಡುಪರ ಸಂದರ್ಶನ ಮೊದಲಿನ ಪೀಠಿಕೆ :"ನಮಸ್ಕಾರ"
"ಹ್ಚೋ.! ನಮಸ್ತೇ.. ಬಂದಿರಾ? ಬನ್ನಿ ಒಳಗೆ. ಕುಳಿತುಕೊಳ್ಳಿ"
( ನಗು )
"ಯಾರು ಅವರನ್ನು ನೋಡಬೇಕಿತ್ತೋ?"
"ಹ್ಚ ಅವರನ್ನೇ. ಮೊನ್ನೆ ಅವರ ಕವಿತೆ ಓದಿದೆ "ಪ್ರೇಮದಾಚೆಗಿನ ಅವಸ್ಥೆ " ಹಾಗೆ ಒಂದಷ್ಟು ಮಾತನಾಡಿಕೊಂಡು ಹೋಗುವ ಅನ್ನಿಸಿತು ಬಂದೆ"
"ಹೌದೇ?"
"ಹ್ಮ್"
"ಓಹೋ"
" ನೀವು ಅವರೊಟ್ಟಿಗೆ ಇರುವುದಾ?"
"ಯಾರು? ನಾನಾ? ನೀವು ಏನು ಕೇಳಿದಿರಿ ಎಂದು ಅರ್ಥವಾಗಲಿಲ್ಲ?"

"ಅದೇ. ನೀವು ಅವರ ಮನೆಯವರಾ?"
"ಹ್ಸೆ.. ಹಾಗೆಂದರೆ ಹಾಗೆ. ಹೀಗೆಂದರೆ ಹೀಗೆ" (ನಗು)
"ಹ್ಮ್"
(ಮೌನ )
ಇರಲಿ ಬಿಡಿ ಅವರು ಬರುವ ಹೊತ್ತಾಯಿತು. ಸ್ನಾನ ಮುಗಿಸಿ ಬರುತ್ತಾರೆ. ಅಷ್ಟರಲ್ಲಿ ನಿಮಗೆ ಕುಡಿಯಲು ಏನಾದರೂ ತರಲೆ?"
" ಛೇ ಛೇ ಬೇಡ ಬೇಡ ನಿಮಗೇಕೆ ತೊಂದರೆ?"
"ತೊಂದರೆಯಾ? ಹೌದೋ?"
(ಪಕಪಕನೆ ನಗು)
ಅವರು ಒಳಗೆ ನಡೆದರು.

ಒಳಗೆ ನಡೆದವರು ಏನೋ ಗೊಣಗಿಕೊಂಡಂತೆ ಇತ್ತು. ಅವರು ಒಳಗೆ ನಡೆದ ಹಾದಿಯಲ್ಲಿರುವ ಬಾಗಿಲಿನಿಂದ ಸಣ್ಣಗೆ ಹರಡಿರುವ ಕತ್ತಲೇ , ಹೊರಗಿರುವ ನಾನು ಕುಳಿತುಕೊಂಡ ಕಾಲು ಮಂಚದವರೆಗೂ ಹರಡಿ . ಬೆಳಕು ತಾಕಿದಕ್ಷಣ ಸರ್ರನೇ ಮಾಯವಾಗುತ್ತಿತ್ತು. ಒಳಗೆ ಬೆಳಕಿಲ್ಲದಿರುವದರಿಂದ ಕತ್ತಲೆಯೋ ಅಥವಾ ಹೊರಗೆ ಕತ್ತಲೆಯಿಲ್ಲದಿರುವದರಿಂದ ಬೆಳಕೋ ಎಂಬ ಸಂದೇಹ ನನ್ನ ಮನಸ್ಸಿನಲ್ಲಿ ಥಟ್ಟನೆ ಮೂಡಿ ಮಾಯವಾಯಿತು. ಮನೆಯ ಮೂಲೆಗಳಲ್ಲಿ ಸೂರು ಕಟ್ಟಿಕೊಂಡ ಇರುವೆಗಳು ಹೊರ ಹಾಕಿದ ನುಣುಪು ಮಣ್ಣು ಶೇಖರವಾಗಿತ್ತು. ಜಗುಲಿಗೆ ತಾಕಿ ಕೊಂಡಂತೇ ಇರುವ ಚಿಕ್ಕದಾದ ಓಣಿಯಂತ ಪ್ರದೇಶದಲ್ಲಿ ಧೂಳಿನಂತಹ ಪದಾರ್ಥ ಹೌದೋ ಅಲ್ಲವೋ ಎಂಬಂತೆ ಪವಡಿಸಿತ್ತು.

ಹಳೆಯ ಕಾಲದ ಮನೆಯ ಛಾವಣಿಯ ಅಡಿಗಳು ಭಾವವಿಲ್ಲದೆ ಹುಳುಗಳ ಕೊರೆತ ಸಹಿಸುತ್ತಾ ನಿಂತಿದ್ದವು. ನಾನು ಕಾಲು ಮಂಚದ ಮೇಲೆ ಸ್ಥಾಪಿಸಿದ್ದ ನನ್ನ ದೇಹದ ಕೈಗಳನ್ನ ಮಂಚಕ್ಕೆ ಒತ್ತುತ್ತ ಅವರ ಬರುವಿಕೆಗೆ ಕಾಯತೊಡಗಿದೆ.
ಮತ್ತೊಂದಿಷ್ಟು ಸಮಯ ಭೂತಕಾಲದ ಅಡಿಯೊಳಗೆ ಪ್ರತಿಷ್ಟಾಪನೆ ಆದ ಮೇಲೆ ಅವರು ಮನೆಯೊಳಗಿನಿಂದ ಉಗಮವಾದಂತೆ ಹೊರ ಬಂದರು.

ಎಲ್. ಕೇಮಚಂದ್ರ ಉಡುಪರೊಡನೆ ಮಾತುಕತೆ:
ನಾನು
: ನಮಸ್ಕಾರ, ಬಹಳ ಮೊದಲಿನಿಂದಲೂ ನಿಮ್ಮ ಅಭಿಮಾನಿ.  ನಿಮ್ಮ ಕವನಗಳನ್ನು ಓದಿದ್ದೇನೆ , ಅಭ್ಯಸಿಸಿದ್ದೇನೆ . 'ವಿಲಕ್ಶ್ಯಣ ಕವಿತೆಗಳು- ಕವಿಗಳು" ಎಂಬ ಪುಸ್ತಕ ಬರೆಯ ಬೇಕೆಂದಿರುವೆ. ಬರೆಯುವ ಮೊದಲು ನಿಮ್ಮ ಭೇಟಿಯಾದರೆ ಹೇಗೆ ಅನ್ನಿಸಿತು ಇಲ್ಲಿ ಬಂದೆ.
ಕೇಮ: ಓಹ್.! ಹೌದೇ ಸಂತೋಷ
( ಮುಖದಲ್ಲಿ ಗಂಟು ಹಾಕಿದ ಭಾವನೆಗಳಿಲ್ಲ)
ನಾನು : ನಿಮ್ಮ ಕವಿತೆಗಳ ಮಂಥನಗಳಿಗೆ ಹಲವಾರು ಬಾರಿ ಪತ್ರಗಳನ್ನು ಬರೆದಿದ್ದೆ.
ಕೇಮ" ಅರೆ..! ಅದು ನೀವಾ?"
( ಆಶ್ಚರ್ಯ ಸುಳಿದು ಮಾಯ)
ನಾನು: ಹೌದು . ನಾನೇ. ಒಮ್ಮೆ ಎಲ್ಲೋ ಓದಿದ ಹಾಗೆ ನೆನಪು.  ನಿಮ್ಮ ಮೊದಲ ಕವನ "ಅವಸ್ಥೆಯ ಅಡಿಗಳು" ಅದರ ಟಿಪ್ಪಣಿಯಲ್ಲಿ ನೀವೇ ಹೇಳಿದ್ದಿದ್ರಿ. ನಿಮ್ಮ ಕವಿತೆಗಳು ಭಾವಗಳ ಪ್ರತೀಕ ಅಲ್ಲವೆಂದು , ಅವು ಭಾವನೆಗಳಲ್ಲವೆಂದು , ಭಾವಕ್ಕೂ ಕವಿತೆಗೂ ಸಂಭಂದ ಇಲ್ಲವೆಂದು. ಕವಿತೆಗಳೆಲ್ಲ ಅವಸ್ಥೆಯೆಂದು. ಅವಸ್ಥೆಯ ತೀವ್ರತೆ ಪ್ರಕಟವಾಗುವದೇ ಕವಿತೆಗಳೆಂದು. ಹಾಗಾದರೆ ನಿಮ್ಮ ಪ್ರಕಾರ ಕವಿತೆಗಳು ಅವಸ್ಥಾ ರೂಪ ಮಾತ್ರವೋ?

ಕೇಮ": ಹ್ಮ್.! ಹೇಳಿದ್ದೆ. ಈಗಲೂ ಹೇಳುತ್ತೇನೆ.
(ಒಂದು ಕ್ಷಣ ಮೌನ. ಉಸಿರು ಏರುಪೇರು ಇಲ್ಲದೇ ಒಳಗೆ ಹೊರಗೆ)
ಹಾಗಾದರೆ ಅವಸ್ಥೆ ಎಂದರೇನು ಎಂದು ಯಾವತ್ತಾದರೂ ವಿಚಾರ ಮಾಡಿದ್ದೀರೋ?
ಇಲ್ಲ ನೀವು ಹಾಗೆ ಮಾಡಲಾರಿರಿ (ಸ್ವಗತ)
ಒಬ್ಬ ಮನುಷ್ಯ ಅವನ ಲುಪ್ತ ಕಾಲದಲ್ಲಿ ಅಥವಾ ಬದುಕಿನ ಆವರ್ತನಗಳಲ್ಲಿ ಅನುಭವಿಸಿದ ಯಾ ಹಾದು ಬಂದ ಘಟನೆಗಳು ಅವಸ್ಥೆಯಾಗಿರಲು ಬಹುದು. ಅಥವಾ ಇನ್ನೊಂದು ವಿಧದಲ್ಲಿ ಹೇಳಲೇ? ಅವಸ್ಥೆಯೊಂದು ಮನುಷ್ಯನ ಮನಸ್ಸಿನ ಪಲ್ಲಟ. ಮಾನಸಿಕವಾಗಿ ಉತ್ಪಾಟಗಳಾದಾಗ , ಮನಸ್ಸಿನಲ್ಲಾಗುವ ಬದಲಾವಣೆಗಳು , ತನ್ಮೂಲಕ ಪರ್ಯಾಯ ಭೌತಿಕ ಬದಲಾವಣೆಗಳು , ನಮ್ಮದೇ ಬಿಂದುವಿನಲ್ಲಿ ಘನಿಭೂತವಾಗುತ್ತಾ , ಆ ಬಿಂದುಗಳೆಲ್ಲ ಸೇರಿ ಒಂದು ಕೇಂದ್ರವಾಗಿ , ಕೇಂದ್ರವು ತನ್ನದೇ ಆಯಾಮಗಳನ್ನು ದಾಟಿ , ಪರ್ಯಾಯಗಳನ್ನು ರೂಪಿಸುತ್ತಾ ಹೋಗುತ್ತದಲ್ಲ ಅದೇ ತಲ್ಲಣ. ಈ ತಲ್ಲಣಗಳ ವರ್ತಮಾನವಿದೆಯಲ್ಲ ಅದೇ ಅವಸ್ಥೆ. ಇಂತಹ ಅವಸ್ಥೆಗಳು ಕೆಲವೊಮ್ಮೆ ಕಾಲಘಟ್ಟದಲ್ಲಿ ಬದಲಾಗುತ್ತ ಹೋಗುತ್ತದೆ. ಅವಸ್ಥೆಗಳ ಗೋಚರ ರೂಪ ಶಬ್ಧಗಳಾಗಿರಬಹುದು , ಕ್ರಿಯೆಗಳಾಗಿರಬಹುದು ಅಥವಾ ನನ್ನಲ್ಲಿ ಇರುವ ಹಾಗೆ ಅಕ್ಷರಗಳಾಗಿರಬಹುದು.

ನಾನು : ಹ್ಮ್.! ಇರಬಹುದೇನೋ? ಅದಕ್ಕೆ ನಿಮ್ಮ ಕವಿತೆಗಳು ಮನುಷ್ಯನ ಒಳ ಅವಸ್ಥೆಗಳನ್ನ ಜ್ವಲಿಸುತ್ತವೆ.
ಕೇಮ: (ನಗು.. ಸಣ್ಣಗೆ.. ಹಾಗೆ ಬಂದು ಹೀಗೆ ಹೋದ ವಿಷಾದ) ಇಲ್ಲ ನಾನು ಕವಿತೆಗಳನ್ನ ಜ್ವಲಿಸುವದಿಲ್ಲ.. ಸ್ಖಲಿಸುತ್ತೇನೆ..! ಅವಸ್ಥೆಗಳನ್ನ ಮರೆಯಲು ತಲ್ಲಣಗಳನ್ನು ಸ್ಖಲಿಸುತ್ತೇನೆ..! ನೀವು ಸುಖದ ತುತ್ತ ತುದಿಯಲ್ಲಿ ಸ್ಖಲಿಸುವದಿಲ್ಲವೇ..? ಹಾಗೇ ನಾನು ದು:ಖದ ತುತ್ತ ತುದಿಯಲ್ಲಿ ಸ್ಖಲಿಸುತ್ತೇನೆ..! ನೀವು ಕೇಮ ಉಡುಪನ ಕವಿತೆಗಳು ಸುಡುತ್ತವೆ ಎನ್ನುತ್ತೀರಿ. ಇಲ್ಲ ನಾನು ಸುಡುವದಿಲ್ಲ. ನಾನು ಸುಡಲ್ಪಡುತ್ತೇನೆ. ನನ್ನದೇ ಮುಖವಾಡಗಳ ಒಳಗೆ , ನಾನು ಮರೆತ ಮುಖವಾಡಗಳ ಒಳಗಿನ ಮುಖದೊಳಗೆ , ತೊಟ್ಟ ಮುಖವಾಡದ ಮೇಲೆ.. ತಲ್ಲಣಗಳಿಂದ ಕಲೆ ಕಲೆಯಾದ ಮುಖದ  ಒಳಗೆ ಸುಡಲ್ಪಡುತ್ತೇನೆ. ನಾನೊಬ್ಬನೇ ಅಲ್ಲ ಎಲ್ಲರೂ ಹೀಗೆ ಉರಿಯುತ್ತಿರುತ್ತಾರೇನೋ? ಎಲ್ಲರೂ ಕುಂಡವೇ .. ಅಗ್ನಿ ಕುಂಡವೇ..!  ಕೆಲವರದು ದಗಧಗಿಸಿ ಉರಿಯುವ ಕುಂಡ .. ಕೆಲವರದು ಮುಚ್ಚಿದ ಕೆಂಡ..! ಉರಿ ಒಳಗೊಳಗೆ ಹೊತ್ತಿ ಕುಲುಕುತ್ತದೆ. ಉರಿದಷ್ಟು ಸುಟ್ಟಶ್ಟು ಮತ್ತೆ ಮತ್ತೆ ಅಕ್ಷಯವಾಗುವ ನೆನಪಿನ ಸೌದೆಗಳು.. ಸುಟ್ಟ ಬೂದಿಯಿಂದಲೇ ಮತ್ತೆ ಸೌದೆಗಳು.. ಮತ್ತೆ ಸೌದೆಗಳ ಸುಡುವ ಕ್ರಿಯೆ.. ನನ್ನದೇ ಅವಸ್ಥೆಯ ಶೇಷಗಳು , ಶೇಷ ನೆನಪುಗಳು ಹತ್ತಿಕೊಂಡು , ಸುತ್ತಿಕೊಂಡು , ತಬ್ಬಿಕೊಂಡು , ಉಬ್ಬಿಕೊಂಡು , ಅವುಚಿ - ಕವುಚಿ ಉರಿದುರಿದು ಧಗಧಗಿಸುತ್ತವೆ.. ನಾನು ಬೇಯುತ್ತೇನೆ.. ಅವಸ್ಥೆಗಳಲ್ಲಿ .. ಅವುಗಳ ಶೇಷ ಸೌದೆಗಳಲ್ಲಿ.... ಬೆಂಡು ಬೆಂದಂತೇ ಮತ್ತೆ ಮತ್ತೆ ಬರಡಾಗುವ ಬೆಂಡು.. ಉರಿ ತಡೆಯಲಾರದೇ ಶೇಷ ಬೂದಿ ನೆನಪುಗಳನ್ನ ಅಕ್ಷರ ರೂಪದಲ್ಲಿ ಕಕ್ಕುತ್ತೇನೆ... ನೀವು ನನ್ನ ಉರಿಯಲ್ಲಿ ತೃಪ್ತಿ ಪಡುತ್ತೀರಿ..!! ಹಾಯ್..! ದೇವರೇ ಉರಿ ತಡೆಯಲಾರೆ ಸ್ವಲ್ಪ ಗಾಳಿ ಹಾಕುತ್ತೀರಾ?? ಉರಿ ಶಮನವಾಗಲಿ .....
ನಾನು : ಸಮಾಧಾನ..! ಸುಧಾರಿಸಿಕೊಳ್ಳಿ..

( ಗಾಳಿ ಹಾಕುವ ಸಮಾಧಾನ ಮಾಡುವ ಯತ್ನ)
ಕೇಮ: ಇರಲಿ ಬಿಡಿ.. ಗಾಳಿ ಹಾಕಿದಷ್ಟು ಬೆಂಕಿ ಉರಿಯುವದು ಹೆಚ್ಚು..!
( ಸ್ವಲ್ಪ ಹೊತ್ತು ಮೌನ. ಅವರು ಎದ್ದು ಅತ್ತ ಇತ್ತ ಓಡಾಡಿದರು. ಹೊರಗೆ ಹೋಗಿ ಮುಖ ತೊಳೆದು ಬಂದರು. ಗಟ-ಗಟನೆ ನೀರು ಕುಡಿದರು.)
ನಾನು: ( ಹಿಂಜರಿಕೆ) ನೀವು ನಿಮ್ಮನ್ನು ಕವಿತೆಗಳಿಗೆ ಮಾತ್ರ ಸೀಮೀತ ಮಾಡಿಕೊಂಡಿರಲ್ಲಾ? ಇದರ ಬಗ್ಗೆ ನಾನು ಹಲವಾರು ಬಾರಿ ಆಕ್ಷೇಪಿಸಿ ಪತ್ರ ಬರೆದಿದ್ದೆ.. ನೀವು ಕತೆ ಬರೆಯುವ ಪ್ರಯತ್ನ ಮಾಡಲೇ ಇಲ್ಲವೇ? ಅಥವಾ ಇಷ್ಟವಿಲ್ಲವೇ?

ಕೇಮ: ( ಒಂದು ಕ್ಷಣ ಮೌನ , ದೃಷ್ಟಿ ವಕ್ರ ವಕ್ರ.. ಕೈ  ಬೆರಳುಗಳಲ್ಲಿ ಒಂದು ಕಿವಿಯೊಳಗೆ ಪ್ರಯಾಣಿಸಿತು. ಕೆಮ್ಮಿದರು. ದಿಟ್ಟಿಸಿದರು) ಭಯ..!! ಕತೆಗಳ ಬರೆಯಲು ಭಯ..! ಕವಿತೆಗಳ ಕಳೆದುಕೊಳ್ಳುವನೋ ಎಂಬ ಭಯ? ಕವಿತೆಗಳಿಗೆ ಅಕ್ಷರಗಳು ಖಾಲಿಯಾದರೆ ಎಂಬ ತಲ್ಲಣ..! ಆತಂಕಾವಸ್ಥೆ..!
ನಾನು : ಅರ್ಥವಾಗಲಿಲ್ಲ??
ಕೇಮ: ಅರ್ಥವಾಗುವದು ಇಲ್ಲ.! ನಿಮಗೆ ಮಾತ್ರವಲ್ಲ ಯಾರಿಗೂ.. ಅರ್ಥವಾಗುವದಿಲ್ಲ..! ಅವರಿಗೆ ಇವರಿಗೆ ಎಲ್ಲರಿಗೆ..!
ನಿಮ್ಮ ಹಾಗೆ ಅರ್ಥವಾಗುವುದಿಲ್ಲವೆಂದು ಅವಳು ಬಿಟ್ಟು ಹೋದಳು..! ಅವಳಿಗಾಗಿ ಅರ್ಥ ಹುಡುಕುತ್ತಾ,, ನಾನು ನನ್ನದೇ ಕುಲುಮೆಯಲ್ಲಿ ಕಳೆದುಹೋದೆ..
ಅವಳಿಗೆಲ್ಲಿ ಪ್ರೀತಿ ಕಡಿಮೆ ಆದಿತೊ ಎಂದು ಬೇರೆಯವರನ್ನು ಪ್ರೀತಿಸುವದ ಬಿಟ್ಟೆ.. ದ್ವೇಷಿಸಿದೆ.. ಉಳಿದವರ ದ್ವೇಷಿಸಿ ಇವಳಿಗೆ ಪ್ರೀತಿ ಹರಿಸಿದೆ.. ಅವಳ ಪ್ರೀತಿಸಲು ಎಲ್ಲರ ದೂರಮಾಡಿದೆ..!

ನಾನು: ಹೌದೇ?
ಕೇಮ:  ಅವಳಿಗಾಗಿ ಕೊಚ್ಚಿಕೊಂಡು ಬಿಚ್ಚಿಕೊಂಡು ಹಚ್ಚಿಕೊಂಡು ಹೋದೆ. ಪ್ರೀತಿಯಿಂದ ಪ್ರಾರಂಭವಾದ ಅವಸ್ಥೆ ಕಾಮವಾಯಿತು.. ಕಾಮದವಸ್ಥೆಯಡಿಯಲ್ಲಿ ಪ್ರೇಮದವಸ್ಥೆಗೆ ಅಂಗವಿಕಲ ಸ್ಥಾನ. ಕೊನೆಗೊಂದು ದಿನ ಎಲ್ಲ ಶೂನ್ಯ..! ಶೂನ್ಯಾವಸ್ಥೆ. ಅವಳು ನನ್ನ ಅವಸ್ಥೆ ದಾಟಿ ನಡೆದಿದ್ದಳು.
ಆಗ ಬರೆಯಲು ಆರಂಭಿಸಿದೆ. ನನ್ನ ಸೋಲಿಗೆ..!  ಅವಳ ಪ್ರೀತಿಸಿದ್ದು ಸರಿಯೆಂಬ ಛಲಕ್ಕೇ .. ಅವಳ ಪ್ರೀತಿಸಿದಂತೆ ಕವಿತೆಗಳ  ಪ್ರೀತಿಸಿದೆ.. ಉಳಿದವರ ದ್ವೇಷಿಸಿದಂತೆ ಕಥೆಗಳ ದ್ವೇಷಿಸಿದೆ.. ಅವಳ ಮೇಲಿನ ಸಿಟ್ಟು ಕತೆಗಳ ಮೇಲೆ.. ಅವಳಿಗೆ ಕಾದಿಟ್ಟ ಪ್ರೀತಿ ಕವನಕ್ಕೆ..!! ಕವಿತೆಗಳಿಗೆ..
ಒಳಗೊಳಗೆ ಉರಿದುರಿದು ಮುಚ್ಚಿ ಮುಚ್ಚಿ , ಕೊಚ್ಚಿ ಕೊಚ್ಚಿ ಸಾಯುವ ವಿಚಿತ್ರಾವಸ್ಥೆಯ ವಿಲಕ್ಷಣ ಆಸೆಯ ಮುಂದೆ ಕುಳಿತು ನಾನು ಬೇಯಿಸಿದ ಭಗ್ನ ಕಿಡಿಗಳನ್ನ ನೀವು ಕವಿತೆ ಎಂದಿರಿ.. ವಿಕ್ಷಿಪ್ತ ಎಂದಿರಿ.. ನನ್ನ ಭಗ್ನ ಕುರೂಪ , ನನ್ನ  ಪಲ್ಲಟ, ನನ್ನ ತಲ್ಲಣ , ನನ್ನ ಬೇಗುದಿ , ನನ್ನ ಕೆಂಡಡೊದಲ  ಭೂತದವಸ್ಥೆ ಇವನ್ನು ಒಳಗೊಂಡ ವರ್ತಮಾನದ ಅವಸ್ಥೆಗೆ ನಾನು ಅಕ್ಷರಗಳ ರೂಪ ಕೊಡಲಾರಂಬಿಸಿದೆ. ನನ್ನ ಊಳಿಡುವಿಕೆಯನ್ನ ನೀವು ಮೈಮರೆತು ಕೇಳಲಾರಂಭಿಸಿದಿರಿ. ನಾನು ನನ್ನದೇ ಕುರೂಪ  ನನ್ನದೇ ಸ್ವರಗಳಿಗೆ ಬೆಚ್ಚಿದಂತೆ ನೀವು ಮೆಚ್ಚುತ್ತಾ ಹೋದಿರಿ..! ನಾನು ಅವಸ್ಥೆಯೊಳಗೆ ಅವಸ್ಥೆಯಾಗುತ್ತ ಹೋದೆ. ಒಂದರ ಮುಂದೆ ಒಂದು ಎದುರುಬದುರಾಗಿ ಇತ್ತ ಕನ್ನಡಿಯ ಪ್ರತಿಬಿಂಬಗಳ ಹಾಗೆ ನಾನು ನನ್ನೊಳಗೆ ನಾನಾಗುತ್ತಲೇ , ನನ್ನದೆ ಬಿಂಬಗಳ ಮರೆಯುತ್ತಾ ಪ್ರತಿಬಿಂಬಗಳಾಗುತ್ತಾ ಹೋದೆ.
( ಅವರು ತಟ್ಟನೆ ಮಾತು ನಿಲ್ಲಿಸಿದರು , ಅತ್ತಿತ್ತ ನೋಡಿದರು ತಲೆ ಕೊಡವಿ ಮತ್ತೆ ಏನೋ ಹೊರಟು ಸುಮ್ಮನಾದರು. ಕತ್ತಲು ಬೆಳಕು ಸೇರುವಲ್ಲಿ ಹೋಗಿ ನಿಂತು ನೋಡಿದರು. ಬೆಳಕು ನೋಡಿ ಬೆಚ್ಚಿ ಬಿದ್ದವರಂತೆ ಮತ್ತೆ ಕತ್ತಲಿಗೆ ಬಂದರು ಮತ್ತೆ ನನ್ನೆಡೆಗೆ ಬಂದು ಕತ್ತು ಬಗ್ಗಿಸಿ ಮಾತು ಮುಗಿಯಿತು. ಟೀ ಕುಡಿದು ಹೋಗಿ ಎಂದರು)
ಅವರು ಕತ್ತಲೆಯೊಳಗೆ ಲೀನವಾಗುತ್ತಾ ಹೋಗಿ , ಅವರೇ ಕಟ್ಟಿಕೊಂಡಿದ್ದ ಅವರ ಅವಸ್ಥೆಯ ಒಳಗೆ ಮಾಯವಾದರು.
ನಾನು ಕೇಳಲೇ ಬೇಕಾಗಿದ್ದ ಹಲವು ಪ್ರಶ್ನೆಗಳು , ಅವರ "ಪ್ರೇಮದಾಚೆಗಿನ ಅವಸ್ಥೆ " ಕವನದ ದ್ವಂದ್ವಗಳ ಬಗೆಗಿನ ಸಂದೇಹ ಎಲ್ಲವೂ ತ್ರಿಶಂಕಾವಸ್ಥೆಯಲ್ಲಿ ನನ್ನಲ್ಲೇ ಜೋತಾಡುತ್ತ ಗಹಾಗಹಿಸ ತೊಡಗಿದವು.