Friday, February 10, 2012

ತಿಂಗಳಿಗೊಂದು ಪುಟ #೩ವೃತ್ತ - ನಾಯಿ 


ಎಕ್ಸ್. ಕೆ. ಮರಸರ ಹಡಪದ್  ಹೇಳಿದಂತೆ ಊರಿನ ನಾಯಿಗಳು :


 ಹಾಗೂ ಎಲ್ಲ ಊರಿನ೦ತೆ ಇಲ್ಲೂ ಸಹ ನಾಯಿಗಳಿದ್ದವು . ನಾಯಿಗಳು ಬೀದಿ ನಾಯಿಗಳಾಗಿದ್ದವು. ಸಾಕು ನಾಯಿಗಳಾಗಿದ್ದವು. ಕಾವಲು ನಾಯಿಗಳಾಗಿದ್ದವು. ಬೇಟೆ ನಾಯಿಗಳಾಗಿದ್ದವು .  ನಾಯಿಗಳು ನಾಯಿಗಳಾಗೆ ಇದ್ದು , ಬೇಟೆ , ಕಾವಲು , ಸಾಕು , ಬೀದಿ , ದರಿದ್ರ , ಕಳ್ಳ , ಹಡಬೆ ಮುಂತಾದ ವೇಷವನ್ನು ಧರಿಸುತ್ತಲು ಇದ್ದವು.  ಎಲ್ಲ ಊರಿನ ನಾಯಿಗಳಂತೆ ಇಲ್ಲಿನ ನಾಯಿಗಳಿಗೂ ಸಹ , ನಾಯಿಗಳಿಗೆ ಇರಬೇಕಾದ ಸರ್ವ ಗುಣಲಕ್ಷಣಗಳೂ , ಬಾಹ್ಯ ಸ್ವರೂಪವೂ , ಸ್ಥಾನವೂ ಅದರೊಟ್ಟಿಗಿನ ಮಾನವೂ , ಬೈಗುಳವು , ಹೊಗಳಿಕೆಯೂ , ತೆಗಳಿಕೆಯೂ , ತುಚ್ಚವೂ , ಹೆಮ್ಮೆಯೂ , ಪ್ರೀತಿಯೂ ಇನ್ನೂ ಇತ್ಯಾದಿಗಳು ಇದ್ದವು.  ಊರಿನ ನಾಯಿಗಳನ್ನು , ಅವುಗಳ ಸ್ಥಾನ ಹಾಗೂ ಮಾನಕ್ಕೆ ಅನುಗುಣವಾಗಿ ಎರಡು ವಿಭಾಗಗಳಾಗಿ ವಿಂಗಡಿಸಿದ್ದರು. ಮೊದಲನೆಯದು ಸಾಕಿದ ನಾಯಿ ಎರಡನೆಯದು ಸಾಕದ ನಾಯಿ. ಕೆಲವೊಮ್ಮೆ ಸಾಕಿದ ನಾಯಿ ಅದಕ್ಕೆ ನಿಶ್ಚಿತವಲ್ಲದ ಜಾಗೇ ಗಳಲ್ಲಿ ಅದು  'ನಿಶ್ಚಿತ'ವಾಗಿ ಪ್ರತಿ ದಿನವೂ ಮಾಡಲೇಬೇಕಾದ ಘನ ದ್ರವ ವಿಸರ್ಜನೆಯನ್ನು ಮಾಡಿದಾಗ ಸಾಕಿದ  ನಾಯಿಯಸಾಕುಜನ (?) 'ತಥೇರಿ ಬೀದಿ ನಾಯಿಗಿಂತ ಕನಿಷ್ಠ ಈ ದರಿದ್ರ'. ಎಂದು ಬೈಯುತ್ತಿದ್ದರು. ಹೀಗಾಗಿ ಊರಿನ ನಾಯಿಗಳು ತೋರಿಕೆಗೆ ಎರಡು ವಿಧವಾದರೂ , ಯಾವುದೋ ಒಂದು  ಸಂದರ್ಭದಲ್ಲಿ  ಆ ನಾಯಿಕುಲ ಈ ನಾಯಿಕುಲ ಎಲ್ಲವೂ ಒಂದೇ  ಎನ್ನುವ ಭಾವ ಕುಲೀನರೆಂದು ಬಿಂಬಿತವಾಗಿದ್ದ ಮನುಷ್ಯರಿಗೆ ಬರುತಿತ್ತು. ಇನ್ನೂ ಹಲವಾರು ಬಾರಿ ನಾಯಿಗಳನ್ನು ಜಾತಿ ನಾಯಿ ಹಾಗೂ ಕಂಟ್ರಿ  ನಾಯಿಗಳೆಂದು ವಿಭಜಿಸಿದ್ದರು.  ನಾಯಿಯನ್ನು ಜಾತಿ ನಾಯಿಗಳೆಂದು ಕರೆಯಬೇಕಾದರೆ ನಾಯಿಯ ಅಮ್ಮ ಹಾಗೂ ಅಪ್ಪ೦ದಿರ (!) ಬಗ್ಗೆ ಖಚಿತವಾದ ಮಾಹಿತಿ ನಾಯಿಯ ಸಾಕಿದವರಿಗೆ ಇರಬೇಕಿತ್ತು ಹಾಗೂ ಆ ಅಮ್ಮ ನಾಯಿ ಹಾಗೂ ನಾಯಿ ಪೀತಾಜಿ ಚಾಲ್ತಿಯಲ್ಲಿರುವ ಯಾವುದೋ ನಾಯಿ ಕುಲಕ್ಕೆ ಸೇರಿದವರೇ ಆಗಬೇಕಿತ್ತು.  ಸಾಮಾನ್ಯವಾಗಿ ಹೆಗಡೆರ ಮನೆಯ ಲಲ್ತಕ್ಕ , ದೊಡ್ಡ ಭಟ್ಟರ ಮನೆಯ ಗಪ್ಪಣ್ಣ , ದ್ಯಾವ ನಾಯ್ಕನ ಮಗ ಶಿರಿಯಪ್ಪ ಇಂತಹ ಜಾತಿ ನಾಯಿಯನ್ನು ಸಾಕುವದರಲ್ಲಿ ಹಾಗೂ ಸಾಕಿದ ನಾಯಿಯನ್ನು ಯಾವುದಾದರೊಂದು ಜಾತಿಗೆ ಸೇರಿಸುವದರಲ್ಲಿ ಪಳಗಿದ ಪಟುಗಳಾಗಿದ್ದರು. ಬಹುತೇಕ  ನಾಯಿಯ ಜಾತಿಯ ಬಗ್ಗೆ ಖಚಿತ ಜಾತಿಯುಳ್ಳ ಮನುಷ್ಯರಲ್ಲಿ ವಾಗ್ಯುದ್ಧ ನಡೆಯುತ್ತಿತ್ತು. ಕೊನೆಗೆ ಅವರು ಇವರ ನಾಯಿಯನ್ನೂ . ಇವರು ಅವರ ನಾಯಿಯನ್ನೂ ಕುಲ ಗೋತ್ರ ಗುಣ ಅವಗುಣ  ಲಕ್ಷಣಕ್ಕಿಂತ ಹೆಚ್ಚಾದ ಅವಲಕ್ಷಣ , ನಾಯಿಯ ಬಹಿರ್ದೆಸೆಯ ಕಾರ್ಯಕ್ರಮ  ಮುಂತಾದವುಗಳಲ್ಲದೇ  ನಾಯಿಗಳಿಗೆ ತೀರಾ ಖಾಸಗಿಯಾದ ವಿಚಾರಗಳವರೆಗೂ ಮಾತಿನ ಹೋರಾಟ ನಡೆಸುತ್ತಿದ್ದರು. ಆದರೆ ನಾಯಿಗಳು ಯಾವತ್ತೂ ಅವುಗಳ ಜಾತಿಯ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿರಲಿಲ್ಲ. ಅವು ಇಂತಹ ಜಗಳಗಳ ಸಂದರ್ಭಗಳಲ್ಲಿ ಮೂಸುತ್ತಿದ್ದ ಮಣ್ಣು , ವಸ್ತು ಅಥವಾ ಇನ್ಯಾವುದನ್ನೋ ಬಿಟ್ಟು ತಲೆಯೆತ್ತಿ , ಅವರವರ ಯಜಮಾನರನ್ನೂ , ಹಾಗೂ ಯಜಮಾನರಲ್ಲದವರನ್ನು ದಿವ್ಯ ನಿರ್ಲಕ್ಷ್ಯದ ದೃಷ್ಟಿಯಿಂದ ದಿಟ್ಟಿಸಿ , ಮುಂದಿನ ಅಥವಾ ಹಿಂದಿನ ಕಾಲನ್ನು ಎತ್ತಿ , ಹೊಟ್ಟೆಯ ಮುಂಭಾಗ ಅಥವಾ ಹಿಂಭಾಗಕ್ಕೆ ,ಆಂಗ್ಲ ಭಾಷೆಯ ಎಲ್ ಶೇಪ್ ನಲ್ಲಿ ಕೆರೆದುಕೊಳ್ಳುತ್ತಿದ್ದವು . ಸಾಮಾನ್ಯವಾಗಿ ಹೊಟ್ಟೆಯ ಹಿಂಭಾಗವನ್ನು ಕೆರೆದುಕೊಳ್ಳುವಾಗ ನಾಯಿಯ ಬಾಲ ಹಾಗೂ ಬಾಲದ ಆಸುಪಾಸು ನೆಲಕ್ಕೆ  ಸ್ಥಾಪಿತವಾಗಿರುತ್ತಿತ್ತು. ನಾಯಿ ಯಾರದ್ದೇ ಆದರೂ , ಯಾವ ಜಾತಿಯದೇ ಆದರೂ ಕೆರೆದುಕೊಳ್ಳುವ ಸಮಯದಲ್ಲಿ ನಾಯಿಯ ಕೂದಲು ಉದುರಿರುತಿತ್ತು. ಹಲವಾರು ಬಾರಿ ಜಾತಿ , ಕಂತ್ರಿ , ಬೀದಿ , ಅರೆ ಬೀದಿ , ಬೇಟೆ ಮುಂತಾದ ನಾಯಿಗಳ ರೋಮಗಳೆಲ್ಲಾ ಸೇರಿ  , ಗಾಳಿಗೆ ಹಾರಾಡಿ . ಊರಿನ ಸಮಸ್ತರ ಮನೆಯ ಮೇಲೂ ಪ್ರೋಕ್ಷಣೆ ಮಾಡಿ ನಾಯಿಗಳೆಲ್ಲ ಒಂದೇ ಜಾತಿ . ಕುಲ ಕುಲವೆಂದು ಹೊಡೆದಾಡದಿರಿ ಎಂಬ ಸಂದೇಶವನ್ನು ಸಾರುತ್ತಿದ್ದುದು ಇದೆ. ಈ ಮೊದಲೇ ಹೇಳಿದಂತೆ ಊರಿನ ನಾಯಿಗಳಲ್ಲಿ , ಸಾಕಿದ ನಾಯಿಗಳು ಸ್ವಲ್ಪವಾದರೂ ಸ್ಥಾನವನ್ನು , ಮಾನವನ್ನು ಹೊಂದಿದ್ದವು. ಆದರೆ ಸಾಕದ ನಾಯಿಗಳೂ ಸಹ ಸಾಕಿದ ನಾಯಿಗಳಂತೆ ಸ್ವಂತ ಅಸ್ತಿತ್ವ , ಬಾಲ , ದೇಹ , ಮಾನ , ಹಾಗೂ ನಾಯಿಗಿರಬೇಕಾದ , ಇದ್ದಿರಬಹುದಾದ , ನಮಗೆ ಗೊತ್ತಿದ್ದ ಅಥವಾ ಗೊತ್ತಿಲ್ಲದ ಇನ್ನೂ ಹಲವು , ಕೆಲವು ಸ್ವಭಾವ , ರಚನೆ , ಗುಣ ಹೊಂದಿವೆ ಎನ್ನುವದನ್ನು ಊರಿನ ಜನ ಬಹುವಾಗಿ ನಿರ್ಲಕ್ಷಿಸಿದ್ದರು. ಹೀಗಾಗಿ ಸಾಕದ ನಾಯಿಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ  ಸಾಕಿದ ನಾಯಿಗಳು ಇದ್ದ , ಇಲ್ಲದ ಮನೆಯಲ್ಲಿ  ಕೋಳಿ ಕದಿಯುವದು , ಯಾರನ್ನಾದರೂ ನೋಡಿ ಬೊಗಳುವದು ಅಥವಾ ಬಾಲ ಅಲ್ಲಾಡಿಸುವದು , ನೋಡುವದು , ಮನೆಯೊಳಗೆ ಲಬಕ್ಕನೆ ನುಗ್ಗುವದು , ಮನೆಯ ಮುಂದೆ ಮಲಗುವದು , ರಾತ್ರಿಯೆಲ್ಲ ಭೋರ್ಗರೆಯುವದು , ಹಿತ್ತಲಿನಲ್ಲಿ ವಿಸರ್ಜಿಸಲು ಬರಲಿಕ್ಕೆ ಸಾಧ್ಯವಿರುವದನ್ನೆಲ್ಲ ಹೊರಹಾಕುವದು , ಇದ್ದಕ್ಕಿದ್ದಂತೆ ಯಾವುದಾದರು ವಾಹನವನ್ನು ಅಟ್ಟಿಸಿಕೊಂಡು ಹೋಗುವದು ಮುಂತಾದ ಹತ್ತು ಹಲವು ಉಗ್ರ ಪ್ರತಿಭತನೆಗಳಲ್ಲಿ ತೊಡಗಿಕೊಂಡಿದ್ದವು. ಸಾಮಾನ್ಯವಾಗಿ ಇಂತಹ ಕೆಲಸಗಳನ್ನು ಮಾಡಿದರೆ ಆ ನಾಯಿಗೆ ಒಂದು ಗುರುತು , ತನ್ಮೂಲಕ ಅಸ್ತಿತ್ವ ಸಿಗುತ್ತಿತ್ತು. ಜನ ಸಾಕದ ನಾಯಿಯನ್ನು ಆಯಾ ನಾಯಿಯ ಪ್ರತಿಭಟನಾ ಕೆಲಸಗಳಿಂದಲೇ ಗುರುತಿಸುತ್ತಿದ್ದರು ಹಾಗೂ ಬೈಯುತ್ತಿದ್ದರು. ಕೇವಲ ಈ ರೀತಿಯ ಅಸ್ತಿತ್ವ ಅಥವಾ 'ಜನ'ಪ್ರೀಯತೆಗಾಗಿಯೆ ಸಾಕದ ನಾಯಿಗಳು ಹೀಗೆ ಮಾಡುತ್ತಿವೆಯೆಂದು , ಅವಕ್ಕೂ ಪ್ರಸಿದ್ಧಿಯ ಅಮಲು ಏರಿದೆಯೆಂದು ಜನ ಸಂಶಯ ಪಡುತ್ತಿದ್ದುದು ಇದೆ.  ಊರಿನ ಹೆಂಗಸರಲ್ಲಿ ಅನೇಕರು , ಮಿಕ್ಕಿದ ತಂಗಳನ್ನ , ದೋಸೆ ಅಥವಾ ನಾನಾ ಹೊಸರುಚಿಯನ್ನು ಸಾಕದ ನಾಯಿಗಳಿಗೆ ಪದೇ ಪದೇ ಕೊಡುತ್ತಿದ್ದುದು ಇದೆ. ಇಂತಹ ಹೆಂಗಸರು ಯಾವತ್ತು ಎಲ್ಲಿ ಕಂಡರೂ ನಾಯಿಗಳು , ಬಾಲವನ್ನು ಗಡಿಯಾರದ ಪೆಂಡಲಮ್ ಹಾಗೆ ಆಡಿಸಿ , ಕಿವಿಯನ್ನು ಹಿಂದಕ್ಕೆ ಮಡಚಿ , ಮುಂದಿನ ಕಾಲುಗಳನ್ನು ಸಾಧ್ಯವಾದಷ್ಟೂ ಮುಂದಕ್ಕೆ ಚಾಚಿ , ಹಿಂದಣ ಕಾಲು ಮತ್ತು ಮುಂದಿನ ಕಾಲಿನ ನಡುವಿನ ಅಂತರವನ್ನು ಜಾಸ್ತಿ ಮಾಡಿ , ದೇಹವನ್ನು ಹೆದೆಯೆರಿಸಿ ನಿಂತ ಬಿಲ್ಲಿನ ರಚನೆಗೆ ತಂದು , ಒಮ್ಮೆಲೇ ಅತ್ತಿತ್ತ ಜಿಗಿದು , ಕೋಯ್ಯ್ ಕುಯ್ಯಾ ಅನ್ನುವ ಹಾಗೆ ಕೇಳಿಸುವ ಶಬ್ದವನ್ನು ಉಂಟು ಮಾಡಿ ತಮ್ಮ ಗೌರವವನ್ನು ಸೂಚಿಸುತ್ತಿದ್ದವು. ಸಾಮಾನ್ಯವಾಗಿ ಈ ರೀತಿಯ ಗೌರವವನ್ನು ಜಾಸ್ತಿ ಪಡೆಯುವ ಮಹಿಳೆ ಕರುಣಾಮಯಿ ಎಂಬ ಭಾವನೆ ಬಂದರೂ , ಇವರು ಪಾಕ ಪ್ರಯೋಗ ನಿಷ್ಠರೆ ಎಂಬ ಅನುಮಾನವೂ ಬರುತ್ತಿತ್ತು. 
ಈ ಸಾಕದ ನಾಯಿಗಳು ಆಗಾಗ ಗುಂಪು ಘರ್ಷಣೆಯಲ್ಲಿ ತೊಡಗುತ್ತಿದ್ದುದು ಇದೆ. ಕೆಲವೊಮ್ಮೆ ಹಲವಾರು ನಿಮಿಷಗಳವರೆಗೆ ಪರಸ್ಪರರು ಕೇವಲ ಗುರ್ರ್ ಗರ್ರ್ರ್ ಗ್ರ್ರಿ ಎಂಬ ಏರಿಳಿತದ ಕಂಪನಗಳಲ್ಲಿ ಒಬ್ಬರನ್ನೊಬ್ಬರು ದೂಷಿಸಿಕೊಳ್ಳುತ್ತಿದ್ದುದು ಇದೆ,  ಆ ಸಮಯಗಳಲ್ಲಿ ಯಾವುದಾದರೂ ಒಂದು ಕಡೆ ಪರ ವಹಿಸಿ ಕಾದಾಡಲು ಬಂದ ಉಳಿದ ನಾಯಕರು , ಹೊತ್ತು ಎಷ್ಟಾದರೂ ಕೇವಲ ಬೊಗಳುವಿಕೆಯ ಜಗಳದಿಂದ ಬೇಸರಗೊಳ್ಳುತ್ತ ಅಲ್ಲೇ ಎಲ್ಲಾದರೂ ಮಲಗುತ್ತಿದ್ದವು. 
ಹೀಗೆ  ಊರಿನ ನಾಯಿಗಳಲ್ಲಿ ಬಣ್ಣ , ಆಕಾರ , ಗುಣ , ಸ್ವಭಾವ , ಸ್ಥಾನ ಮಾನ , ದನಿ , ಲಿಂಗ  ಗುರುತರವಾದ ವ್ಯತ್ಯಾಸಗಳಿದ್ದರೂ ,  ಊರಿನ  ನಾಯಿಗಳೆಲ್ಲ ಮಿಲನದ ಸಂದರ್ಬದಲ್ಲಿ ಪರಸ್ಪರ ವಿರುದ್ಧ ದಿಕ್ಕಿಗೆ ನಿಂತು , ಅದು ಪ್ರಕೃತಿ ಕೊಟ್ಟ ದೈವೀ ಕ್ರಿಯೆ ಎಂಬಂತೆ ರೂಪ ಸ್ವರೂಪಕ್ಕೆ ಒಂದಿನೀತು ಬೆಲೆ ಕೊಡದೇ ,  ನಡೆಸುತ್ತಿದ್ದವು ಹಾಗೂ ಬದುಕುತ್ತಿದ್ದವು.

ನಾಯಿಗಳು ಹಚಾ ಎಂದರೆ ಓಡುವದನ್ನೂ , ಕುರು ಕುರು ಅಥವಾ ತ್ಚು ತ್ಚು ಎಂದರೆ ಹತ್ತಿರ ಬರುವದು ಎನ್ನುವಷ್ಟು ವಿದ್ಯೆ ಕಲಿತು , ಖುಷಿಯ ದಿನಗಳಲ್ಲಿ ಆಕಾಶವನ್ನು ನೋಡಿ ಯಾವುದೋ ಅವ್ಯಕ್ತ ಶಕ್ತಿಯೊಂದನ್ನು ಗಮನಿಸಿದಂತೆ ಬೊಗಳುತ್ತಾ ,  ನಾಯಿ ಮತ ಒಂದೇ ಪಥ ಎನ್ನುವಂತೆ ಹೆಣ್ಣು ನಾಯಿಯೊಂದರ ಹಿಂದೆ ಹಲವಾರು ಗಂಡು ನಾಯಿಗಳು ಶಕ್ತಿಗನುಸಾರ ಹಿಂಬಾಲಿಸಿ ಹೋಗುತ್ತಾ , ಹಸಿವಾದಾಗ ತಿನ್ನುತ್ತಾ , ಯಾವತ್ತೂ ನಡೆಯದೆ ಓಡುತ್ತಾ , ಮಲಗುತ್ತಾ , ಮಲಗಿದಾಗ ಒಂದೇ ಕಣ್ಣು ತೆರೆದು ನೋಡುತ್ತಾ , ರಾತ್ರಿಯೆಲ್ಲ ಎಚ್ಚರವಿರುತ್ತ , ಬೊಗಳುತ್ತಾ , ಬೈಸಿಕೊಳ್ಳುತ್ತ , ಹೊಡೆಸಿಕೊಳ್ಳುತ್ತ ,  ತಿನ್ನುತ್ತಾ , ಕಡಿಮೆ ಕುಡಿಯುತ್ತಾ , ಅಲ್ಲಾಡುತ್ತಾ , ಬದುಕುತ್ತಾ ಸಾಯುತ್ತಾ ಇದ್ದವು .

Monday, February 6, 2012

ಕನ್ಯೆ ಕಾಡಿದ ಕ್ಷಣಗಳು .! - ೧


ಆಯತ , ಚೌಕ , ತ್ರಿಭುಜ , ವೃತ್ತ
ತಥ್ ! ಅರ್ಥವಾಗಲೇ ಇಲ್ಲ ಹತ್ತನೆಯ ಕ್ಲಾಸಿನ
ಪ್ರಮೇಯ ಹಾಗೂ ಹುಡುಗಿ.!

*******
ಪ್ಲಾಸಿ ಕದನ ಯಾವತ್ತಿಗೂ
ಮಧ್ಯಾನ್ಹದ ಪೀರಿಯಡ್ನಲ್ಲೇ,
ರಾಬರ್ಟ್ ಕ್ಲೈವ್ ಗೆದ್ಡೇ ಬಿಟ್ಟಿದ್ದ ,
ಯಾರೂ ,
ಅರ್ಥ ಮಾಡಿಸಲೇ ಇಲ್ಲ ,  ನೀನು
ಸೋತಿದ್ದು ಯಾಕೆಂದು..!

****
ಎಕಾನಮೀ ಕ್ಲಾಸ್ನಲ್ಲಿ ಕಲಿತ ಲೆಕ್ಕಾಚಾರ
ಬಯಕೆ ಆಸೆ ಎಲ್ಲ ಬೇರೆಯಂತೆ
ತಪ್ಪು ಯಾರದ್ದೂ ಗೊತ್ತಿಲ್ಲ ಕಣೇ ,
ಕ್ಲಾಸ್ ಮುಗಿದು , ನೀನು ಹೊರಟಾಗಲೇ
ಕೂಡಿಟ್ಟ ಪೈಸೆ
ಗುಲಾಬಿಗೆ ಸಾಕಾಗಿತ್ತು

*******
ಬರುವಷ್ಟೇ ಭಾಷೆ ಸಾಕಾಗಿತ್ತು ,
ಕನ್ನಡ ಕ್ಲಾಸೀನ ಲಘು , ಗುರು
 ಸಂದಿ ಸಮಾಸ  ಸಮಾನಾರ್ಥಕ ಪದ
ಥೊ ..!  ವಿರುದ್ದ ಪದದಲ್ಲಿ
 ನಿನ್ನ ಹೆಸರು

***********
ಕ್ಲಾಸ್ ಮುಗಿದಾಗ ಅರ್ಥವಾಗಿದ್ದು
ಯಾರೋ ಹೇಳಿದ್ದು
ನಿಜವಿರಬೇಕು  
ಜೀವಶಾಸ್ತ್ರಕ್ಕೆ ಬದಲು ಮನಶಾಸ್ತ್ರ
ಇರಬೇಕಿತ್ತು ..!


ವಿ. ಸೂ  : ಕಂಡ ಕೂಸುಗಳೆಲ್ಲಾ ಕಾಡಲೇ ಬೇಕು ಅಂತಿಲ್ಲ , ಕಾಡಿದ ಕನ್ಯೆಯರ ಮೇಲೆ ಲವ್ ಆಗಲೇ ಬೇಕು ಅಂತಿಲ್ಲ.   ಯಾವತ್ತೂ ಮಾತನಾಡಿಸದ  ಯಾವತ್ತಿಗೂ ನೆನಪಿನಲ್ಲಿ ಉಳಿಯುವ ಕೆಲವರ ಕುರಿತು ಒಂದಷ್ಟು ಲೈನ್ಸು ಈ ಫೆಬ್ರವರಿಯಿಂದ