Sunday, January 15, 2012

ತಿಂಗಳಿಗೊಂದು ಪುಟ #೨


ವೃತ್ತ  -  ಹೊಳೆ


ಎಕ್ಸ್. ಕೆ. ಮರಸರ ಹಡಪದ್ ಹೊಳೆಯ ಹತ್ತಿರ ಹೇಳಿದ ಮಾತುಗಳು 

ಅಲ್ಲಿ ಹೊಳೆಯ ಉಗಮವಾಗಿತ್ತು. ಹೊಳೆ ಹುಟ್ಟುತ್ತಿತ್ತು. ಪ್ರತಿದಿನವೂ ಜನಿಸುತ್ತಿತ್ತು. ಹೊಳೆಯ ಜನ್ಮಸ್ಥಾನದ ಬಗ್ಗೆ ಹಲವಾರು ಕಥೆಗಳಿದ್ದವು. ಹೊಳೆಯ ಜನ್ಮ ಎಲ್ಲಿಂದ ಎಲ್ಲಿ ಹೇಗೆ ಆಯಿತು ಎನ್ನುವದು ಅವರವರ ಕಲ್ಪನೆಯ ಶಕ್ತಿಗೆ ಬಿಟ್ಟಿದ್ದೆ ಆಗಿತ್ತು. ಹೊಳೆಯ ಜನ್ಮ ಹಾಗೂ ಊರಿನ ಹಲವರ ಜನ್ಮದ ಕಥೆಗಳು ಹುಟ್ಟುತ್ತಿದ್ದವು , ಸಾಯುತ್ತಿದ್ದವು ಹಾಗೂ ಬದಲಾಗುತ್ತ ಇದ್ದವು. ಇವೆಲ್ಲ ಕಥೆಗಳ ನಡುವಿನ ಏಕಮಾತ್ರ ಸಾಮ್ಯತೆ ಎಂದರೆ ಕಥೆಗಳಾವವೂ ನಿರ್ದಿಷ್ಟ ತೀರ್ಮಾನವನ್ನು ಕೊಡುತ್ತಿರಲಿಲ್ಲ. ಪ್ರತಿ ಕಥೆಯೂ 'ಯಾರಿಗೆ ಗೊತ್ತು ಮಾರಾಯ ನಮಗೆಲ್ಲ ಅದು ಎಂಥಕ್ಕೆ' ಎಂಬ ಮಹಾನ್ ವೇದಾಂತಿ ಮಾತಿನೊಂದಿಗೆ ಕೊನೆಯಾಗುತ್ತಿದ್ದವು. ಹೀಗಾಗಿ ಹಲವರ ಹಾಗೂ ಹೊಳೆಯ ಜನ್ಮಸ್ಥಾನ ಇವತ್ತಿನವರೆಗೂ ಅವರವರ ಇಷ್ಟಾನುಸಾರದ ಕಥೆಯೇ ಆಗಿತ್ತು. ಕೆಲವೊಮ್ಮೆ ಇಂತಹ ಕಥೆಗಳು ಹೊಳೆಯಂತೆಯೇ ಅನಿರೀಕ್ಷಿತ ತಿರುವುಗಳನ್ನ ಪಡೆದು , ಹರಿಯುವ ಹರಿವಿನ ಪಾತ್ರಗಳನ್ನೇ ಬದಲಿಸಿ , ಇನ್ಯಾವುದೋ ದಿಕ್ಕಿನತ್ತ ಸಾಗಿ , ವಿರುಡ್‌ದವಾಗಿ ಚಲಿಸಿ ಥಟ್ಟನೆ ಅಗಲವಾಗಿ ಯಾರು ಯಾರನ್ನೋ ಗಬಕ್ಕನೆ ನುಂಗಿ ಮುಂದಕ್ಕೆ ಚಲಿಸುತ್ತಿದ್ದವು. ಹೀಗಾಗಿ ಹೊಳೆಯ ಹರಿವು ಹಾಗೂ ಊರಿನಲ್ಲಿ ಹುಟ್ಟುತ್ತಿದ್ದ ಕಥೆಯ ಹರಿವುಗಳು ಯಾರೊಬ್ಬರ ನಿಯಂತ್ರಣಕ್ಕೂ ಒಳಪಟ್ಟಿರಲಿಲ್ಲ.


ಮೊದಲೇ ಹೇಳಿದಂತೆ ಹೊಳೆ ಹುಟ್ಟುವ ಜಾಗದ ಬಗ್ಗೆ ನಿಶ್ಚಿತ ಅಭಿಪ್ರಾಯ ಯಾರಿಗೂ ಇರಲಿಲ್ಲ ಹಾಗೂ ಎಲ್ಲರಿಗೂ ಇತ್ತು.  ಇನ್ನೂ ಹಲವರು ಹೊಳೆಗೆ ಜನ್ಮಸ್ಥಾನವಿಲ್ಲವೆಂದು , ಅಲ್ಲಿ ಕೇವಲ ಉಗಮವಿದೆಯೆಂದು ,ಆ ಉಗಮಕ್ಕೆ ಜಾಗವೇ ಇಲ್ಲವೆಂದೂ ,ಅನೂಹ್ಯವಾದ ಶಕ್ತಿಯೊಂದು ಅದನ್ನು ನಿಯಂತ್ರಿಸುತ್ತಿದೆಯೆಂದು , ಆ ಶಕ್ತಿಯೆ ಊರಿನ ಗಡಿಗಳನ್ನು ರಕ್ಷಿಸುತ್ತಿದೆಯೆಂದು , ಜ್ಞಾನ ವಿಜ್ಞಾನದ  ಯಾವೊಂದು ಪ್ರಮೆಯವು ಆ ಶಕ್ತಿಯನ್ನು ವರ್ಣಿಸಲಾರದೆಂದು   ನಮ್ಮ ನಿಮ್ಮಂಥವರಿಗೆ ಅರ್ಥವಾಗದ ತರ್ಕಕ್ಕೆ ಮೀರಿದ ವಿಷಯವನ್ನು ಮಂಡಿಸಿ  , ಕುತೂಹಲವನ್ನೂ , ಭಯವನ್ನೂ ಒಟ್ಟಿಗೆ ಉಂಟು ಮಾಡುತ್ತಿದ್ದರು.  ಹೀಗೆ ರಹಸ್ಯವೂ , , ಅಯೋಮಯವೂ  ಆದಂತಹ ಹುಟ್ಟನ್ನು ಹೊಂದಿದ ಹೊಳೆಗೆ ಅದರ ಅಸ್ತಿತ್ವದ ಕುರಿತು ಅಷ್ಟೇ ಭಯಾನಕ  ಗೊಂದಲವೂ ಇದ್ದಿತ್ತು. 

ಊರಿನಲ್ಲಿ ಮನುಷ್ಯರನ್ನು ಬಿಟ್ಟರೆ ಹೆಸರು ಅನ್ನುವದು ಬೇರೆಯವರಿಗೆ ಇದ್ದಿರಲಿಲ್ಲ ಅಥವಾ ಬೇರೆಯವುದಕ್ಕೂ ಹೆಸರು ಇರಬೇಕು ಅಥವಾ ಇರಬಹುದು ಎನ್ನುವ ವಿಚಾರವನ್ನೂ ಯಾರೂ ಮಾಡಿರಲಿಲ್ಲ.  ಅವರವರು ಸಾಕಿದ ಸಾಕು ಪ್ರಾಣಿಗಳಿಗೆ ಇಟ್ಟ ಹೆಸರುಗಳು ತೀರಾ ಖಾಸಗಿಯಾಗಿ ಇದ್ದುದರಿಂದ ಸಾಕು ಪ್ರಾಣಿಯನ್ನು ಸಾಕಿದ ಯಜಮಾನರಿಗಲ್ಲದೇ ಬೇರೆಯವರಿಗೆ ಅದರ ಹೆಸರು ಗೊತ್ತಾಗುವದು ಶಕ್ಯವಿದ್ದರೂ ಅದರ ಉಪಯೋಗವಿರಲಿಲ್ಲ. ಹೀಗಾಗಿ ರಾಮ್ ನಾಯ್ಕನ ಮನೆ ನಾಯಿ ಟಿಪ್ಪು ಬೇರೆಯವರಿಗೆ ರಾಮ್ ನಾಯ್ಕ ನಾಯಿಯೇ ಆಗಿತ್ತು. ಇದೆ ಪ್ರಕಾರವಾಗಿ ದೊಡ್ಡ ಭಟ್ಟರ ಮೇಲಿನ ತೊಟವೂ , ಸಣ್ಣ ಹೆಗಡೆರ ಅಡ್ಡೆರಿ ಗದ್ದೆಯು , ಕುಪ್ಪಯ್ಯನ ಗೌರಿ ದನವನ್ನು ಆಯಾ ಯಜಮಾನರ ಹೆಸರಿನಿಂದಲೆ  ಕರೆಯುವದು ಗುರುತಿಸುವದು ಬೈಯುವದು ಓಡಿಸುವದು ಹೀಗೆ ಹಲವಾರು ಕೆಲ್ಸವನ್ನು ಮಾಡುತಿದ್ದರು. ಆದರೆ ಹೊಳೆ ಯಾರದ್ದೂ ಆಗದೆ ಇದ್ದುದರಿಂದ ಅದನ್ನು ಯಾರ ಹೊಳೆಯೆಂದು ಹೇಳುವಾದಕ್ಕೂ ಸಾಧ್ಯವಿಲ್ಲ. ಬೇರೆ ಊರಿನ ಹೊಳೆಗಳಂತೆ ಇದಕ್ಕೆ ಯಾವುದೇ ಪುರಾಣದ ಕಥೆ ಅಥವಾ ಇತಿಹಾಸದ ಘಟನೆಯೊಟ್ಟಿಗು ಸಂಬಂಧ ಇಲ್ಲದೇ ಇದ್ದುದರಿಂದ ಹೊಳೆಯನ್ನು ಯಾವುದರ ಜೊತೆಗೂ ಜೋಡಿಸಿ ಹೆಸರು ಕೊಡುವಂತೆ ಇರಲಿಲ್ಲ.  ಹಲವಾರು ಬಾರಿ ಊರಿನ ಹೆಸರಿನೊಂದಿಗೆ ಹೊಳೆಯನ್ನು ಹೇಳಲು ಜನ ಪ್ರಯತ್ನಪಟ್ಟರೂ , ಹೊಳೆ ಈ ಊರನ್ನು ದಾಟಿ ಬೇರೆ ಊರಿಗು ಹರಿದು ಅಥವಾ ತೆವಳಿ ಹೋಗುವದರಿಂದ ಆಯಾ ಊರಿನ ಜನರಿಂದ ತೀವ್ರ ವಿರೋಧಕ್ಕೆ ಪಾತ್ರವಾಯಿತು. ಇಂತಹ ಹೆಸರೇ ಇಲ್ಲದ ಹೊಳೆಯಲ್ಲಿ ನೀರು ಇರುತ್ತಿತ್ತು ,ಇರಲಿಲ್ಲ ,  ತುಂಬುತಿತ್ತು , ತುಂಬುತ್ತಿರಲಿಲ್ಲ. 

 ಹೊಳೆ ಬೇರೆ ಹೊಳೆಗಳ ಹಾಗೆ ಅಥವಾ ಪುಸ್ತಕದಲ್ಲಿ ಕೊಡುವ ಹಾಗೆ ಜುಳು ಜುಳು ಎಂದು ಶಬ್ದ ಮಾಡುತ್ತಾ ಹರಿಯುತ್ತಿರಲಿಲ್ಲ. ಹೊಳೆ ಕೆಲವೊಮ್ಮೆ ಮೌನವಾಗಿ ತೆವಳುತ್ತಿತ್ತು ಇನ್ನೊಮ್ಮೆ ಜುಳು - ಜುಳು ಅಲ್ಲದ ಬೇರೆ ಒಂದು ಶಬ್ದ ಮಾಡುತ್ತಾ ಹರಿಯುತ್ತಿತ್ತು.  ಹೊಳೆಯ ಎರಡೂ ದಡಗಳು ಸಮಾನಾಂತ್ರವಾದ ರೇಖೆಗಳಂತೆಯೂ , ಯಾವತ್ತೂ  ಒಟ್ಟಾಗಲಾರದ ಚಿರ ವಿರಹಿ ಪ್ರೇಮಿಗಳಂತೆಯೂ ಬಾಳುತ್ತ ಹೊಳೆಯ ಮನಸ್ಥಿತಿಗೆ ತಕ್ಕಂತೆ ತಾವು ತಮ್ಮ ಆಕಾರಗಳನ್ನ ಬದಲಾಯಿಸುತ್ತಾ ಕೆಲವೊಮ್ಮೆ ಅತ್ತ ಹಲವೊಮ್ಮೆ ಇತ್ತವೂ ಹಾಗೂ ಇವೆಲ್ಲವೂ ಅಲ್ಲದ ಸಮಯದಲ್ಲಿ ಹೇಗಿದ್ದವೋ ಹಾಗೆಯೇ ಮಲಗಿರುತ್ತಿದ್ದವು.   ದಡ  ಊರಿನ ಹಲವರಂತೆ , ಹಲವರ ಮನಸ್ಸಿನಂತೆ , ಮನಸ್ಸಿನೊಟ್ಟಿಗಿನ ಹೃದಯದಂತೆ  ಹೊಳೆಯ ದಡಗಳು ಹೊರಗೊಂದು ರೂಪವನ್ನು ಹೊಂದಿದ್ದರೂ , ದಡದ ಬುಡದಲ್ಲಿ ಒಳಗೊಳಗೆ ಒಳದ ಆಳವನ್ನು ಪರೀಕ್ಷಿಸುವಂತೆ ಹರಿತವೂ , ಆಳವೂ ಆಗಿದ್ದವು.  ಹೊಳೆಯು ಉಕ್ಕಿ  ಹರಿಯುವಾಗ , ತುಂಬಿ ಬಿಕ್ಕಿಸುವಾಗ , ಸೊಕ್ಕಿ ತೊನೆಯುವಾಗ , ನಿರ್ಮಿಸಿದ ಅಗಲ ದಡಗಳು , ಹೊಳೆಯ ಮದ ಇಳಿದ ಮೇಲೂ ,  ಹೊಳೆಯ ಪಾತ್ರಕ್ಕೆ ತಕ್ಕಂತೆ ಸಣ್ಣವಾಗದೆ ಇದ್ದವು. 

  ದಡಗಳ ಮೇಲೆ ಜನ . ದನ . ನಾಯಿ . ಕುರಿ , ಪ್ರಾಣಿ , ಪಕ್ಷಿ ಹಾಗೂ ಇನ್ನಿತರ ಹಲವು ಜೀವ ಇರುವಂತವು  ಮಲ ವಿಸರ್ಜಿಸುತ್ತಿದ್ದವು.  ಊರ ಗಂಡಸರು ದಡದಲ್ಲಿ , ದಡದ ಪಕ್ಕ ಬೆಳಿದಿರುವ ಪೊದೆಗಳಿಗೆ ಮೂತ್ರ ವಿಸರ್ಜಿಸುತ್ತಿದ್ದರು. ಕೆಲವೊಮ್ಮೆ ಚಿಕ್ಕ ಮಕ್ಕಳು ಯಾವಾಗಾಲಾದರೊಮ್ಮೆ ದಡದ ಮೇಲೆ ನಿಂತು ಹೊಳೆಗೆ ಚುಳ್ಲ್ ಎಂದು ಮೂತ್ರ ವಿಸರ್ಜಿಸಿ , ಆ ಮೂತ್ರದ ರಭಸಕ್ಕೆ ನಿಧಾನವಾಗಿ ತೆವಳುತ್ತಿದ್ದ ಹೊಳೆಯ ನೀರಿನಲ್ಲಿ ಏಳುತ್ತಿದ್ದ ಅಲೆಗಳನ್ನು ನೋಡಿ ರೋಮಾಂಚನಗೊಳ್ಳುತ್ತಿದ್ದುದು  ಇದೆ. ಹೊಳೆಯನ್ನು ಜನ ಹಲವಾರು ಕೆಲಸಗಳಿಗೆ ಬಳಸುತ್ತಿದ್ದರು.  ಹೊಳೆಯ ಈ ದಡದಿಂದ ಆ ದಡಕ್ಕೆ ದಾಟಲು ಸಣ್ಣದಾದ ಸೇತುವೆಯೊಂದು ಇದ್ದಿತ್ತು. ಆ ಸೇತುವೆ ಮೇಲೆ ಜನ ಹಾಗೂ ನಾಯಿಗಳು ಓಡಾಡುತ್ತಿದ್ದವು. ಜನ್ರು ಆ ಕಡೆಯಿಂದ ಈ ಕಡೆಗೆ ಹೋಗುವಾಗ ಹೊಳೆಯನ್ನು ಹಲವಾರು ಬಾರಿ ಅಲಕ್ಷಿಸುತ್ತಿದ್ದರು. ಕೆಲವೊಮ್ಮೆ ವಿನಾಕಾರಣ ಥೂ ಎಂದು ಕ್ಯಾಕರಿಸಿ ಬಲವಂತವಾಗಿ ಗಂಟಲಲ್ಲಿ ಕಫವನ್ನು ಉತ್ಪಾದಿಸಿ ,  ಗಂಟಲು ಹಾಗೂ ನಾಲಗೆ ಸಂಧಿಸುವ ಜಾಗೆಯಲ್ಲಿ ನಿರ್ವಾತವನ್ನು ನಿರ್ಮಿಸಿ , ಲಬಕ್ಕನೆ ಕಫವನ್ನು ನಾಲಗೆಯ ತುದಿಗೆ ಎಳೆದು , ತುಟಿಯ ಒಳ ಬುಡ ಭಾಗಕ್ಕೆ ಆ ಕಫ ತಗಲುವ ಮೊದಲೇ , ಅದನ್ನು ತುಪಕ್ ಎಂದು ಹೊಳೆಗೆ ಉಗಿದು ಮುಂದಕ್ಕೆ ಸಾಗುತ್ತಿದ್ದರು. ಹೀಗೆ ಉಗುಳಿದ ಕಫ ಯಾ ಎಂಜಲು ಹೊಳೆಯಲ್ಲಿ ವಾಸವಾಗಿದ್ದ ಮೀನುಗಳಿಗೆ ಆಹಾರವಾಗುತಿತ್ತು. ಸ್ವಾತಿ ಮಳೆಯ ಸಮಯದಲ್ಲಿ , ಸಾಮಾನ್ಯವಾಗಿ ನಾಯಿಗಳು ಮೂಡಿಗೆ ಬಂದಾಗ ಈ ಹೊಳೆಯ ಗು೦ಟ ಮುಂದೆ ಸಾಗುತಿದ್ದ ಹೆಣ್ಣು ನಾಯಿಯ ಹಿಂದೆ ಹಲವಾರು ಗಂಡು ನಾಯಿಗಳು ಲುಟು -ಲುಟು ಎಂದು ಆಸೆಯಿಂದ ಹೋಗುತ್ತಿದ್ದವು. ಕೆಲವೊಮ್ಮೆ ಈ ನಾಯಿಗಳು ಹೊಳೆಯ ಸಣ್ಣಗಿನ ಶಬ್ದಕ್ಕೆ ಬೆಚ್ಚಿ , ಹೊಳೆಯ ಕಡೆ ತಿರುಗಿ ಬೋವ್ ಬೇಕ್ ಬ್ಯಾಕ್ ಎಂದು ಚಣ ಕಾಲ ಕೂಗಿ ಮತ್ತೆ ಓಡಿ ಹೋಗುತ್ತಿದ್ದವು. ಬಹುತೇಕ ಸಂದರ್ಭಗಳಲ್ಲಿ , ಹೊಳೆ ತುಂಬಿದ್ದರೂ ಅಥವಾ ತುಂಬದೇ ಇದ್ದರು ಜನ ಹೊಳೆಗೆ ಬಯ್ಯುತ್ತಿದ್ದರು. ಹೊಳೆಯಲ್ಲಿ ಮುಳುಗುವಷ್ಟು ನೀರು ಇಲ್ಲದೇ ಹೋದರು , ಜನ ಯಾರಿಗಾದರೂ ಬೈಯುವಾಗ ' ಹೊಳೆಗೆ ಬಿದ್ದು ಸಾಯಿ ' ಎನ್ನುತ್ತಿದ್ದರು. ಹೀಗೆ ಹೇಳುವಾಗ ಜನರ ಮನಸ್ಸಿನಲ್ಲಿ ಈ ಹೊಳೆಯೇ ಇದ್ದಿತ್ತೇ ಎನ್ನುವದು ಯಾರು ಕೆದಕಲು ಹೋಗದು ಪ್ರಶ್ನೆ. 

ಹೀಗೆ ಜನರಿಂದ , ಜನರ ಊರಿನಿಂದ ಹೊರಗೆ ಇದ್ದ ಹೊಳೆಯು ತನ್ನದೇ ಧ್ಯಾನದಲ್ಲಿ , ತನ್ನದೇ ಗುರಿಯಾದ ನದಿಯೊಂದನ್ನು ಕಲ್ಪಿಸಿಕೊಂಡು ಹರಿಯುತ್ತಾ , ಉರುಳುತ್ತ , ತೆವಳುತ್ತ , ಬತ್ತುತ್ತ , ಧುಮುಕುತ್ತಾ , ನುಗ್ಗುತ್ತಾ ಹಾಗೂ ಆವಿಯಾಗುತ್ತಾ ಕಾಲಚಕ್ರಗಳ ಪರಿವೆಯೇ ಇಲ್ಲದೇ , ಜೀವವಿಲ್ಲದ ನಿರಂತರ ಚಲನೆಯೊಂದಿಗೆ ಲಕ್ಷ್ಯದತ್ತ ಪ್ರಯಣಿಸುತ್ತಲೆ ಇದೆ , ಇತ್ತು ಹಾಗೂ ಇರುತ್ತದೆ.