ಮೂಲ
ಕತೆ : ಹರುಕಿ
ಮುರಕಮಿ
ಹಲವಷ್ಟು
ಬಾರಿ ಮಹಿಳಾ ಚಾಲಕರ ಜೊತೆ ಕಾರಿನಲ್ಲಿ
ತಿರುಗಾಡಿದ್ದರಿಂದ ಕಾಫುಕು
ಕಂಡುಕೊಂಡಿದ್ದೇನೆಂದರೆ ಹೆಂಗಸರು ಒಂದೋ ಅತಿ ವೇಗವಾಗಿ ಗಾಡಿ ಚಲಾಯಿಸುತ್ತಾರೆ ಇಲ್ಲ
ತುಂಬಾ ನಿಧಾನವಾಗಿ ಚಲಾಯಿಸುತ್ತಾರೆ . ಅದೃಷ್ಟವಷಾತ್ ಬಹುತೇಕ
ಹೆಂಗಸರು ಎರಡನೇ ಪ೦ಗಡಕ್ಕೆ ಸೇರುತ್ತರಾದ್ದರಿಂದ ನಾವಷ್ಟು ಚಿ೦ತಿಸಬೇಕಾದುದ್ದಿಲ್ಲ. ನಿಜ
ಹೇಳಬೇಕು ಅಂದರೆ ಮಹಿಳಾ ಚಾಲಕರು ಪುರುಷರಿಗಿಂತ ಹೆಚ್ಚು ಜಾಗರೂಕರಾಗಿರುತ್ತಾರೆ ಆದರೂ ಅದು ಹೇಗೋ
ಹೆಂಗಸರು ಗಾಡಿ ಚಲಾಯಿಸುವದು ರಸ್ತೆಯಲ್ಲಿರುವ
ಇತರರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಬಹುತೇಕ ಜಗಳಗಂಟಿ ಹೆಂಗಸರು ತಮ್ಮನ್ನು ತಾವು ಶ್ರೇಷ್ಠ ಚಾಲಕರು
ಅಂದುಕೊಂಡಿರುತ್ತಾರೆ. ಕ್ಷಣಾರ್ಧದಲ್ಲಿ ಅವರು
ರಸ್ತೆಯಲ್ಲಿನ ಲೇನುಗಳನ್ನು ಬದಲಿಸಿವುದು , ಇದ್ದಕಿದ್ದ ಹಾಗೆ ಬ್ರೇಕು ಹಾಕಿ
ಗಾಡಿ ನಿಲ್ಲಿಸುವದು ಇತ್ಯಾದಿಗಳನ್ನು
ಮಾಡುವಾಗ ಅವರು ಗಾಡಿಯ ಹಿಂದೆ
ಬೈಯುತ್ತಿರುವ ಯಾವ ದನಿಗೂ ಕಿವಿಗೊಡುವದಿಲ್ಲ.
ಹಾಗಂತ ಖಂಡಿತವಾಗಿಯೂ ಎಲ್ಲ ಮಹಿಳೆಯರೂ ಒಂದಲ್ಲ
ಒಂದು ಗು೦ಪಿಗೆ ಸೇರಿದವರು ಎಂದಲ್ಲ. ಅತಿ ವೇಗವೂ ಅಲ್ಲದ
ಅತೀ ನಿಧಾನವೂ ಅಲ್ಲದ ಸಹಜವಾಗಿ ಗಾಡಿ ಓಡಿಸುವ ಮಹಿಳಾ
ಚಾಲಕರೂ ಇದ್ದಾರೆ. ಹೆಂಗಸರಲ್ಲಿ
ಕೆಲವರು ಅಪರೂಪಕ್ಕೆ
ಕಾಣ ಸಿಗುವ ಅತ್ಯಂತ ನುರಿತ ಚಾಲಕರೂ ಇದ್ದಾರೆ. ಎಷ್ಟೇ ನುರಿತ ಚಾಲಕರಾಗಿದ್ದರೂ ಹೆಂಗಸರು ಗಾಡಿ ಓಡಿಸುವಾಗ ಸಾಧಾರಣವಾಗಿ
ಸ್ವಲ್ಪವಾದರೂ ಉದ್ವೇಗಕ್ಕೆ ಒಳಗಾಗುವದನ್ನು ಕಾಫುಕು ಗಮನಿಸಿದ್ದ. ಹೀಗಾಗುವದಕ್ಕೆ ಇಂತಹುದೇ ಎನ್ನುವ ಯಾವುದೇ ಕಾರಣವೂ ಕಾಫುಕುನ ಬಳಿ ಇಲ್ಲವಾಗಿದ್ದರೂ , ಅವನು
ಕಾರಿನಲ್ಲಿ ಹಿಂದಿನ ಸೀಟಿನಲ್ಲಿ
ಕುಳಿತಾಗಲೆಲ್ಲ , ಕಾರಿನೊಳಗೆ ತುಂಬಿರುತ್ತಿದ್ದ ಸಣ್ಣನೆಯ ಉದ್ವೇಗ ಅವನ ಗಮನಕ್ಕೆ ಬಂದು
ಬೇಡ ಬೇಡವೆಂದುಕೊಂಡರೂ ಕಾಫುಕು ಸ್ವಲ್ಪ ಮಟ್ಟಿಗಿನ ಒತ್ತಡಕ್ಕೆ ಒಳಗಾಗುತ್ತಿದ್ದ. ಅವನ ಗಂಟಲು ಒಣಗುತಿತ್ತು
ಅಥವಾ ಅವನು ಕಾರಿನಲ್ಲಿನ
ನಿಶ್ಶಬ್ದದಲ್ಲಿ ಹರಡಿರುವ ಸಣ್ಣನೆಯ ಒತ್ತಡವನ್ನು ಮುರಿಯಲು ಮೂರ್ಖನಂತೆ ಅಸಂಬದ್ಧವಾದ ಯಾವುದೋ ವಿಚಾರವನ್ನು ಮಾತನಾಡಲು ಪ್ರಾರಂಭಿಸುತ್ತಿದ್ದ.
ಖಂಡಿತವಾಗಿಯೂ
ಪುರುಷರಲ್ಲೂ ಸಹ ಒಳ್ಳೆಯ ಮತ್ತು
ಕೆಟ್ಟ ಚಾಲಕರಿದ್ದರು. ಆದರೂ ಅವರ ವಾಹನ
ಚಾಲನೆ ಕಾರಿನೊಳಗೆ ಯಾವುದೇ ಕಂಪನವನ್ನು೦ಟು
ಮಾಡುತ್ತಿರಲಿಲ್ಲ. ಹಾಗಂತ
ಅವರೇನು ಅತ್ಯಂತ ಆರಾಮವಾಗಿ ಗಾಡಿ ಚಲಾಯಿಸುತ್ತಿದ್ದರು ಎಂದೇನಲ್ಲ.
ನಿಜ ಹೇಳಬೇಕೆಂದರೆ ಅವರೂ ಸಹ
ಸಣ್ಣ ಮಟ್ಟಿನ ಒತ್ತಡಕ್ಕೆ ಒಳಗಾಗಿದ್ದರೂ ಅತ್ಯಂತ ಸಹಜವಾಗಿ ಪುರುಷರು ಯಾವುದೇ ಒತ್ತಡವಿಲ್ಲದವರಂತೆ ಗಾಡಿ ಚಲಾಯಿಸುತ್ತಿದ್ದುದು ಹೌದು . ಅವರು
ರಸ್ತೆಯ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸುತ್ತ
ಸಣ್ಣಗೆ ಹರಟೆಯನ್ನೂ ಹೊಡೆಯುತ್ತಿದ್ದರು. ನೋಡಿದರೆ ವಾಹನ ಚಲಾಯಿಸುವದೇ ಬೇರೆ
ಇವರು ಮಾಡುತ್ತಿರುವದೇ ಬೇರೆ ಅನ್ನುವಂತೆ ಭಾಸವಾಗುತ್ತಿತ್ತು.
ಪುರುಷ ಮತ್ತು ಮಹಿಳಾ ಚಾಲಕರ ನಡುವಿನ ಈ ವ್ಯತ್ಯಾಸಕ್ಕೆ ಕಾರಣವೇನೆಂಬುದು
ಕಾಫುಕುಗೆ ಖಂಡಿತವಾಗಿಯೂ ಗೊತ್ತಿರಲಿಲ್ಲ . ದೈನಂದಿನ ಜೀವನದಲ್ಲಿ ಕಾಫುಕು ಯಾವತ್ತಿಗೂ ಹೆಣ್ಣು ಗಂಡು ಎಂದು ಭೇದಭಾವ
ಮಾಡಿದನಲ್ಲ ಅಥವಾ ಗಂಡು
ಹೆಣ್ಣುಗಳ ಸಾಮರ್ಥ್ಯದಲ್ಲಿ ವ್ಯತಾಸವಿರಬಹುದೆಂದು ಅವನಿಗೆ
ಅನ್ನಿಸಿರಲಿಲ್ಲ. ಕಾಫುಕುನ ವೃತ್ತಿಯಲ್ಲಿ ಗಂಡಸರಿದ್ದಷ್ಟೇ ಸಂಖ್ಯೆಯಲ್ಲಿ
ಹೆಂಗಸರಿದ್ದರು. ಹಲವಷ್ಟು ಸಲ ಅವನಿಗೆ ಹೆಂಗಸರ
ಜೊತೆಯಲ್ಲಿಯೇ ಸುಲಭವಾಗಿ ಕೆಲಸ ಮಾಡಬಹುದು ಅನ್ನಿಸುತಿತ್ತು.
ಹೆಂಗಸರು ಸಣ್ಣಸಣ್ಣ ವಿವರಗಳಿಗೂ ಗಮನಕೊಡುತ್ತಿದ್ದರು ಮತ್ತು ಸಮಾಧಾನದಿಂದ ಹೇಳಿದ್ದನ್ನು ಆಲಿಸುತ್ತಿದ್ದರು. ಕಾಫುಕುಗೆ ಹೆಂಗಸರೊಟ್ಟಿಗೆ ಸಮಸ್ಯೆ
ಶುರುವಾಗುತ್ತಿದ್ದುದು ಕಾರಿನಲ್ಲಿ ಅವನು ಪಕ್ಕದಲ್ಲೋ, ಹಿಂದಿನ
ಸೀಟಿನಲ್ಲೋ ಕುಳಿತಿದ್ದು ಸ್ಟೈರಿಂಗ್
ಮುಂದೆ ಹೆಂಗಸೊಬ್ಬಳು ಕುಳಿತಾಗ ಮಾತ್ರ . ಈ
ಸಮಸ್ಯೆಯನ್ನು ಕಾಫುಕು ನಿರ್ಲಕ್ಷಿಸಲು ಸಾಧ್ಯವಿರಲಿಲ್ಲ . ಹಾಗೆಂದು
ಈ ವಿಷಯವನ್ನು ಅವನು ಯಾರೊಟ್ಟಿಗೂ ಯಾವತ್ತೂ
ಚರ್ಚಿಸಿದವನಲ್ಲ. ಅದು ಚರ್ಚೆಗೊಳಪಡುವಂತಹ ವಿಷಯವೇ
ಅಲ್ಲವೇನೋ ಎನ್ನುವದು ಅವನ ಸಂದೇಹ. ಆದ್ದರಿಂದಲೇ ಗ್ಯಾರೇಜಿನ
ಒಬಾ ಹುಡುಗಿಯೊಬ್ಬಳನ್ನು ಡ್ರೈವರ್
ಆಗಿ ಸೂಚಿಸಿದಾಗ ಕಾಫುಕನಿಗೆ ಅಂತಹ ಉತ್ಸಾಹವೇನೂ ಆಗಲಿಲ್ಲ.
'"ನಿನಗೆ
ಹೇಗೆ ಅನ್ನಿಸುತ್ತಿದೆ ಎಂದು
ನನಗೆ ಗೊತ್ತು" ಒಬಾ ನಗುತ್ತ ನುಡಿದ
" ಅವಳು ಅದ್ಭುತ ಡ್ರೈವರ್. ನಾನು ಆಶ್ವಾಸನೆ ಕೊಡುತ್ತೇನೆ.
ಒಮ್ಮೆ ಅವಳನ್ನು ಭೇಟಿ ಮಾಡಿ ನೋಡು
"
" ನೀನು
ಅಷ್ಟು ಹೇಳ್ತಿದ್ದೀಯ ಅಂದ ಮೇಲೆ ಸರಿ
" ಕಾಫುಕು
ನುಡಿದ. ಅವನಿಗೆ ಒಬ್ಬ ಡ್ರೈವರಿನ ಅವಶ್ಯಕತೆಯಿತ್ತು.
ಕಳೆದ
ಸುಮಾರು ಹದಿನೈದು ವರುಷಗಳಿಂದ ಕಾಫುಕುಗೆ
ಪರಿಚಯವಿದ್ದ ಈ ಗ್ಯಾರೇಜಿನ ಒಬ
ಆಟೋಮೊಬೈಲ್ ವಿಷಯದಲ್ಲಿ ಏನು ಹೇಳಿದರೂ ತೆಗೆದು
ಹಾಕುವ ಹಾಗಿಲ್ಲ. ಅಂತಹ ಪರಿಣಿತಿ ಓಬಾನದು.
"ಇನ್ನೊಂದು
ಸಲ ನಿನ್ನ ಕಾರಿನ ಚಕ್ರಗಳ
ಜೋಡಣೆ ಸರಿಯಾಗಿದೆಯೇ ಎಂದು ಪರೀಕ್ಷಿಸಬೇಕು.
ಅದಾದ ಮೇಲೆ ಸಣ್ಣ ಪುಟ್ಟ
ಕೆಲಸಗಳು. ನಾಡಿದ್ದು ಮಧ್ಯಾಹ್ನ
ಎರಡು ಎರಡೂವರೆ ಹಾಗೆ ಬಂದು ಕಾರನ್ನು
ಒಯ್ಯಬಹುದು. ಒಂದು ಕೆಲಸ ಮಾಡೋಣ
, ಆ ಹುಡುಗಿಯನ್ನೂ ಅದೇ ಸಮಯಕ್ಕೆ ಬರಲು ಹೇಳುತ್ತೇನೆ.
ಒಂದು ಸಲ ಮಾತನಾಡಿಸಿ ನೋಡು
. ಬಹುಶ: ಅವಳ ಜೊತೆಗೆ ಕಾರಿನಲ್ಲಿ
ಒಂದು ರೌಂಡ್ ಹೋಗಿ
ಬರಬಹುದೇನೋ. ನಿನಗೆ ಅವಳ ಚಾಲನೆ ಹಿಡಿಸಿದರೆ ಅವಳನ್ನು ಕೆಲಸಕ್ಕೆ ತೆಗೆದುಕೊಳ್ಳಬಹುದು. ಇಲ್ಲವಾದರೆ ಇಲ್ಲ. ನನ್ನದೇನೂ ಅಭ್ಯ೦ತರವಿಲ್ಲ. "
"ಎಷ್ಟು
ವರ್ಷ ಅವಳಿಗೆ ?"
"ಅದನ್ನು
ಕೇಳಲಿಕ್ಕೆ ಅವಕಾಶವೇ ಸಿಗಲಿಲ್ಲ. ಬಹುಶ: ಇಪ್ಪತ್ತೈದರ ಆಸುಪಾಸು ಇರಬಹುದೇನೋ. " ಒಬಾ ಒಂದು ಕ್ಷಣ
ಯೋಚಿಸಿದ " ಅವಳು ನುರಿತ ಡ್ರೈವರ್,
ಆದರೆ ... "
"ಆದರೆ
?"
"ಆದರೆ
ಅವಳು ಎಲ್ಲರೊಟ್ಟಿಗೂ ಹೊಂದಿಕೊಳ್ಳುವ ಸ್ವಭಾವದವಳಲ್ಲ. "
"ಹಾಗಂದರೆ
ಯಾವ ಥರ "
" ಮಾತು
ಆಡುವದೇ ಕಡಿಮೆ ಆಡಿದಾಗಲೆಲ್ಲ
ಒರಟು ಮಾತು. ಅನ್ನಿಸಿದ್ದನ್ನ ಮುಲಾಜಿಲ್ಲದೆ ತಕ್ಷಣ ಹೇಳಿಬಿಡ್ತಾಳೆ . ಸದಾ
ಕಾಲ ಚಿಮಣಿಯ ಹಾಗೆ ಸಿಗರೇಟಿನ ಹೊಗೆ
ಬಿಡುತ್ತಾ ಇರುತ್ತಾಳೆ. " ಒಬಾ ಹೇಳಿದ. "ನಾಡಿದ್ದು
ನಿನಗೆ ಸಿಗುತ್ತಾಳಲ್ಲ. ನೀನೇ ನೋಡುವಿಯಂತೆ.
ನಿಜ ಹೇಳಬೇಕು ಎಂದರೆ ತುಂಬಾ ಸುಂದರವಾಗಿದ್ದಾಳೆ ಎಂದಲ್ಲ ಆದರೂ ಒಂಥರ
ಸರಳವಾಗಿ ಸೀದಾ ಸಾದಾ. "
"ಅದೇನು
ಚಿ೦ತಿಸುವ ವಿಷಯವಲ್ಲ. ಹಾಗೆ ನೋಡಿದರೆ ತುಂಬಾ
ಚೆನ್ನಾಗಿರುವ ಹುಡುಗಿಯೊಟ್ಟಿಗೆ ಓಡಾಡಿದರೆ ಏನಾದರೂ
ಬೇಡವಾದ ವದಂತಿಗೆ ಕಾರಣವಾಗಬಹುದು "
"ಆಯ್ತಲ್ಲ
, ನಿನಗೆ ಸರಿಯಾದ ಜೋಡಿಯೇ ಅವಳು"
"ಅದೆಲ್ಲ
ಸರಿ ಅವಳು
ಒಳ್ಳೆ ಡ್ರೈವರ್ ಹೌದು ಅಲ್ಲವೇ ?"
"ಖಂಡಿತ.
ನಾನು ಇದುವರೆಗೆ ನೋಡಿದ ಕೆಲವೇ ಪರಿಣಿತ ಡ್ರೈವರ್ ಗಳಲ್ಲಿ ಇವಳೂ ಒಬ್ಬಳು"
"ಈಗ
ಅವಳು ಎಲ್ಲಿ ಕೆಲಸ ಮಾಡುತ್ತಿದ್ದಾಳೆ ?"
"ನನಗೂ
ಸರಿಯಾಗಿ ಗೊತ್ತಿಲ್ಲ. ಬಹುಶ : ಯಾವೂದೋ ಸೂಪರ್ ಮಾರ್ಕೆಟ್ ನಲ್ಲಿ ಕ್ಲರ್ಕ್ ಆಗಿಯೋ
, ಕೊರಿಯರ್ ಕಂಪನಿಯಲ್ಲಿ ಡ್ರೈವರ್ ಆಗಿಯೋ ಕೆಲಸ ಮಾಡುತ್ತಿದ್ದಾಳೆ ಅನ್ನಿಸುತ್ತದೆ.
ಎಲ್ಲಿಯೂ ಖಾಯ೦ ಅಲ್ಲ. ಯಾವಾಗ ಬೇಕಿದ್ದರೂ ಬಿಟ್ಟು ಬರುವಂತಹವು. ನನ್ನ ಪರಿಚಯದವರೊಬ್ಬರ
ಮಖಾ೦ತರ ಇಲ್ಲಿಗೆ ಕೆಲಸ ಹುಡುಕಿಕೊಂಡು ಬಂದಿದ್ದಳು.
ಆದರೆ ಸದ್ಯಕ್ಕೆ ನಾನು ಯಾವುದೇ ಖಾಯಂ
ನೌಕರರನ್ನು ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ನನ್ನಲ್ಲಿ ಜಾಸ್ತಿ ಕೆಲಸವಿದ್ದಾಗಲೆಲ್ಲ ಅವಳಿಗೆ ಹೇಳಿ ಕಳುಹಿಸುತ್ತಿದ್ದೆ. ಒಳ್ಳೆ
ಕೆಲಸಗಾರ್ತಿ ಅವಳು. ಜೊತೆಯಲ್ಲಿ ಕುಡಿತದಂತಹ ಯಾವುದೇ ಚಟಗಳೂ ಇಲ್ಲ"
ಕುಡಿಯುವ
ವಿಷಯ ಕೇಳಿದೊಡನೆ ಅಯಾಚಿತವಾಗಿ ಕಾಫುಕುನ ಕೈಬೆರಳುಗಳು ತುಟಿಯನ್ನು ಸವರಿದವು.
"ಸರಿ
ನಾಡಿದ್ದು ಎರಡು ಘಂಟೆಗೆ ಹಾಗಾದರೆ." ಕಾಫುಕು ಹೇಳಿದ. ಒರಟು
, ಕಡಿಮೆ ಮಾತಿನವಳು, ಅಷ್ಟೇನೂ ಸುಂದರಿಯಲ್ಲ- ಕಾಫುಕುನ ಕುತೂಹಲ ಕೆಣಕಲು ಇಷ್ಟು ಸಾಕಿತ್ತು .
ಎರಡು
ದಿನಗಳ ನಂತರ ಮಧ್ಯಾನ್ಹ ಎರಡು
ಘ೦ಟೆಗೆಲ್ಲ ಕಾಫುಕುನ ಹಳದಿ ಕಾರು ಗ್ಯಾರೇಜಿನಲ್ಲಿ
ರಿಪೇರಿಗೊಂಡು ಓಡಿಸಲು ಸಿದ್ಧವಾಗಿ ನಿಂತಿತ್ತು. ನೆಗ್ಗಿದ್ದ
ಕಾರಿನ ಮುಂಭಾಗವನ್ನು ಕುಟ್ಟಿ ಸರಿ ಮಾಡಲಾಗಿತ್ತು . ಬಣ್ಣ
ಮಾಸಿದೆಡೆಯಲ್ಲಿ ಹೊಸತಾಗಿ ಪೈ೦ಟ್ ಮಾಡಲಾಗಿತ್ತು. ಇಂಜಿನ್
ಗೆ ಆಯಿಲ್ ಬಿಟ್ಟು , ಬ್ರೇಕಿಗೆ ಹೊಸ ರಬ್ಬರ್ ಹೊದಿಕೆ
ಹಾಕಿ , ಕಾರಿನ
ಚಕ್ರಗಳನ್ನು ಪಾಲಿಷ್ ಮಾಡಿ
, ಮುಂಭಾಗದಲ್ಲಿ
ಎರಡು ಹೊಸ ವೈಪರ್ ಹಾಕಲಾಗಿತ್ತು. ಒಬಾನ
ಕೆಲಸವೆಂದರೆ ಹಾಗೆ ಮರು ಮಾತಿಲ್ಲ.
ಹನ್ನೆರಡು ವರುಷಗಳ ಹಿಂದೆ ಖರೀದಿ ಮಾಡಿದ್ದ ಈ ಕಾರಿನಲ್ಲಿ
ಕಾಫುಕ ಸಾವಿರಾರು ಮೈಲಿ ಅಡ್ಡಾಡಿದ್ದ. ಕಾರಿನ
ಮೇಲ್ಛಾವಣಿಗೆ ಹಾಕಿದ್ದ ಕ್ಯಾನ್ವಾಸ್ ನೋಡಿದರೆ ಕಾರಿಗಾದ ವಯಸ್ಸು ತಿಳಿಯುತ್ತಿತ್ತು. ಮಳೆಗಾಲದಲ್ಲಿ ಕ್ಯಾನ್ವಾಸ್ ನ ತೂತುಗಳನ್ನು ದಾಟಿ
ಮಳೆ ನೀರು ಒಳಗೆ ಬಂದರೆ
ಎಂದು ಕಾಫುಕ ಆಗಾಗ ಆತಂಕಗೊಳ್ಳುತ್ತಿದ್ದ.
ಆದರೆ
ಈ ಹಳೆಯ
ಕಾರನ್ನು ಮಾರಿ ಹೊಸತನ್ನು ಕೊಳ್ಳುವ
ಯಾವ ಯೋಚನೆಯು ಅವನಿಗಿರಲಿಲ್ಲ. ಹೇಳಬೇಕೆಂದರೆ ಇಷ್ಟು ವರ್ಷಗಳಿಂದ ಓಡಿಸುತ್ತಿರುವ ಕಾರಿನ ಮೇಲೆ ಕಾಫುಕುಗೆ ಸಣ್ಣಗಿನ
ವ್ಯಾಮೋಹ. ಕಾರಿನ ಮೇಲ್ಚಾವಣಿಯ ಕ್ಯಾನ್ವಾಸ್ ಅನ್ನು ತೆಗೆದು , ಸುಂಯ್ಯನೆ ಒಳ ಬರುವ ಗಾಳಿಯನ್ನು ಆಸ್ವಾದಿಸುತ್ತ
ಕಾರನ್ನು ಓಡಿಸುವದೆಂದರೆ ಅವನಿಗೆ ಅತ್ಯಂತ ಪ್ರಿಯವಾದ ಹವ್ಯಾಸ. ಚಳಿಗಾಲದಲ್ಲಿ
ಕಾರನ್ನು ಓಡಿಸುವಾಗ ದಪ್ಪನೆಯ ಕೋಟನ್ನೂ , ಕುತ್ತಿಗೆ ಮುಚ್ಚುವಂತೆ ಸ್ಕಾರ್ಫ್ ಧರಿಸುತ್ತಿದರೆ , ಬೇಸಿಗೆಯಲ್ಲಿ ಒಂದು ಕಪ್ಪು ಕನ್ನಡಕವನ್ನೂ
, ತಲೆಯ ಮೇಲೊ೦ದು ಟೊಪ್ಪಿಯನ್ನೂ ಧರಿಸುತ್ತಿದ್ದ. ಕಾರಿನ
ಗೇರನ್ನು ಬದಲಿಸುತ್ತಾ, ಗೇರು ಒಂದರಿಂದ ಇನ್ನೊಂದಕ್ಕೆ
ಜಿಗಿಯುವಾಗ ಸಣ್ಣನೆಯ ಆನಂದವನ್ನು ಅನುಭವಿಸುತ್ತ, ಆಗಾಗ ತಲೆಯೆತ್ತಿ ಆಕಾಶದಲ್ಲಿ
ಚಲಿಸುತ್ತಿದ್ದ ಬಿಳಿ ಮೋಡಗಳನ್ನು ದಿಟ್ಟಿಸುತ್ತಲೋ,
ಸಿಗ್ನಲ್ ಬಳಿ ಕಾರು ನಿಂತಾಗ
ಪಕ್ಕದ ವಿದ್ಯುತ್ ತಂತಿಗಳ ಮೇಲೆ ಕುಳಿತ ಯಾವುದೋ
ಹಕ್ಕಿಯನ್ನು ಗಮನಿಸುತ್ತಲೋ ನಗರದ
ಬೀದಿ ಬೀದಿಗಳಲ್ಲಿ ಕಾಫುಕ ಹಳದಿ ಕಾರನ್ನು ಓಡಿಸುತ್ತಿದ್ದ.
ಮತ್ತೆ ಮತ್ತೆ ಪುನರಾವರ್ತನೆಗೊಳ್ಳುತ್ತಿದ್ದ ಈ ಕ್ಷಣಗಳು ಅವನ ಜೀವನದ ಭಾಗವೇ
ಆಗಿದ್ದವು.
ಕಾಫುಕ
ಈ ಕಾರನ್ನು ಖರೀದಿಸಿದ್ದಾಗ ಅವನ ಹೆಂಡತಿ ಇನ್ನು
ಬದುಕಿದ್ದಳು. ಹಳದಿ ಬಣ್ಣವನ್ನು ಆಯ್ಕೆ
ಮಾಡಿದ್ದೂ ಅವಳೇ. ಕಾರು
ಕೊಂಡ ಮೊದಲಿಗೆಲ್ಲ ಅವರು ಆಗಾಗ ದೂರ
ಪ್ರವಾಸಕ್ಕೆ ಹೋಗುತ್ತಿದ್ದುಂಟು . ಅವನ ಹೆಂಡತಿಯ ಬಳಿ
ಲೈಸೆನ್ಸ್ ಇಲ್ಲದ ಕಾರಣ ಯಾವಾಗಲೂ ಕಾಫುಕನೇ
ಕಾರನ್ನು ಚಲಾಯಿಸುತ್ತಿದ್ದ.ಆದರೆ ಕಳೆದ
ಹತ್ತು ವರುಷಗಳಲ್ಲಿ ಕಾಫುಕ
ಒಂಟಿಯಾಗಿಯೇ ಗಾಡಿ ಓಡಿಸಿದ್ದ. ಅವನ ಹೆಂಡತಿಯ
ಮರಣದ ನಂತರ ಹಲವಷ್ಟು ಹೆಂಗಸರೊಟ್ಟಿಗೆ
ಓಡಾಡಿದ್ದರೂ ಅವರು ಯಾರೂ
ಕಾರಿನಲ್ಲಿ ಕಾಫುಕನ ಪಕ್ಕ ಕುಳಿತಿರಲಿಲ್ಲ.
ಅದು ಹೇಗೋ ಕಾಫುಕನ ಹೆಂಡತಿಯನ್ನು
ಬಿಟ್ಟರೆ ಬೇರೆ ಹೆಂಗಸನ್ನು ಕಾರಿನಲ್ಲಿ
ಪಕ್ಕ ಕುಳ್ಳರಿಸಿಕೊಳ್ಳುವ ಪ್ರಸಂಗವೇ ಬಂದಿರಲಿಲ್ಲ. ಅಲ್ಲದೇ ಇಷ್ಟು
ವರ್ಷಗಳಲ್ಲಿ ಕೆಲಸದ ನಿಮಿತ್ತ ಬಿಟ್ಟರೆ ಕಾಫುಕ ಕಾರಿನಲ್ಲಿ ಯಾವತ್ತೂ ನಗರವನ್ನು ದಾಟಿ ಹೋಗಿರಲಿಲ್ಲ.
"ಕೆಲವೊಂದಿಷ್ಟು
ಸಣ್ಣ ಪುಟ್ಟ ಸವಕಳಿ ಬಂದಿರುವದು ಬಿಟ್ಟರೆ ಕಾರು ಚೆನ್ನಾಗಿಯೇ ಇದೆ.
" ಒಬಾ ಕಾರಿನ ಮುಂಭಾಗವನ್ನು ನಾಯಿಯ ಕುತ್ತಿಗೆ ಸವರುವಂತೆ ಕೈಯಿಂದ ಸವರುತ್ತ ನುಡಿದ " ಸ್ವೀಡನ್ನಿನಲ್ಲಿ ತಯಾರಾದ ಈ ಮಾಡೆಲ್ ಕಾರುಗಳೇ
ಹಾಗೆ, ಬಾಳಿಕೆ
ಜಾಸ್ತಿ. ಎಲೆಕ್ಟ್ರಿಕ್ ಬೋರ್ಡ್ ಕಡೆಗೆ ಸ್ವಲ್ಪ ಗಮನ ಇರಲಿ , ಅಷ್ಟು
ಬಿಟ್ಟರೆ ಮಿಕ್ಕವೆಲ್ಲ ಏನು ತೊಂದರೆ ಇಲ್ಲ
"
ಕಾಫುಕು
ಒಬ ಕೊಟ್ಟ ಬಿಲ್ ಪರಿಶೀಲಿಸುತ್ತಿರುವಾಗ ಸುಮಾರು
ಐದೂವರೆ ಅಡಿಯೆತ್ತರದ , ಭುಜದ
ಹುಡುಗಿಯೊಬ್ಬಳು ಹುಡುಗಿಯೊಬ್ಬಳು ಒಳಗೆ ಬಂದಳು .
ಅವಳ
ಕುತ್ತಿಗೆಯ ಬಳಿ ಮೊಟ್ಟೆಯಾಕಾರದ ಹುಟ್ಟು ಕಲೆಯೊಂದಿತ್ತು.
ಅವಳಿಗೆ ಅದರ ಬಗ್ಗೆ ಯಾವುದೇ
ಹಿಂಜರಿಕೆಯಿಲ್ಲದಿದ್ದರೂ ಅವಳ ಕಡುಗಪ್ಪು ಕೂದಲು
ಕಲೆಯನ್ನು ಮುಚ್ಚಿಡುವಂತೆ ಆವರಿಸಿತ್ತು. ಓಬ ಹೇಳಿದಂತೆ, ಹೇಗೆ
ನೋಡಿದರೂ ಆಕರ್ಷಕ
ಅನ್ನಿಸದ, ನೋಡುಗರಲ್ಲಿ
ಸಣ್ಣನೆಯ ಕ್ಷೋಭೆಯನ್ನು ಹುಟ್ಟುಹಾಕುವಂತಿದ್ದ ಅವಳ ಮುಖದಲ್ಲಿ ಯೌವನದ
ಕುರುಹುಗಳಾಗಿ ಸಣ್ಣನೆಯ ಮೊಡವೆಗಳು ತುಂಬಿಕೊಂಡಿದ್ದವು. ಅಗಲವಾದ ಎದ್ದು ಕಾಣುವ ಅವಳ
ಕಣ್ಣುಗಳು ಹೊರ ಜಗತ್ತನ್ನು ಅನುಮಾನದಿಂದ
ನೋಡುತ್ತಾ ಅತ್ತಿತ್ತ ಸರಿದಾಡುತ್ತಿದ್ದವು. ಅವಳ ಅಗಲವಾದ ಕಿವಿಗಳು
ಯಾವುದೋ ಸ್ಯಾಟಿಲೈಟಿನ ರೆಕ್ಕೆಗಳಂತೆ ಕಾಣುತ್ತಿದ್ದವು . ಅವಳು ಬೇಸಿಗೆಗೆ ಸ್ವಲ್ಪ
ಹೆಚ್ಚೇ ಅನ್ನಿಸುವಷ್ಟು ದಪ್ಪನಾದ ಗಂಡಸರ ಜಾಕೆಟ್, ಕಂಡು ಬಣ್ಣದ ಪ್ಯಾ೦ಟ್,
ಕಡುಗಪ್ಪು ಬಣ್ಣದ ಚಪ್ಪಲಿ ಧರಿಸಿದ್ದಳು. ಅವಳ ಜಾಕೆಟಿನ ಒಳಗಿನ
ಉದ್ದನೆಯ ಕೈತೋಳಿನ ಬಿಳಿ ಶರ್ಟಿನ ಒಳಗೆ
ತುಸು ಜಾಸ್ತಿಯೇ ಅನ್ನಿಸುವಷ್ಟು ಉಬ್ಬಿರುವ ಎದೆ ಕಾಫುಕುಗೆ
ಕಾಣುತಿತ್ತು. .
ಒಬಾ
ಕಾಫುಕುಗೆ ಅವಳನ್ನು ಪರಿಚಿಯಿಸಿದ. ಅವಳ ಹೆಸರು ವಟಾರಿ.
ಮಿಸಾಕ ವಟಾರಿ.
" 'ಟ'
ದೊಡ್ಡ 'ಠ' ಅಲ್ಲ" ಅವಳು
ನುಡಿದಳು "ನಿನಗೆ
ನನ್ನ ಬಯೋ ಡಾಟಾ ಬೇಕು
ಅಂದರೆ ಕೊಡಬಲ್ಲೆ ". ಕಾಫುಕ ಅವಳ ಸ್ವರದಲ್ಲಿನ ಸಣ್ಣನೆಯ
ಪ್ರತಿಭಟನೆಯ ಚಿಹ್ನೆಯನ್ನು
ಗಮನಿಸಿದ.
"ಅವೆಲ್ಲ
ಬೇಕಿಲ್ಲ." ಕಾಫುಕ ತಲೆಯಾಡಿಸಿದ. "ನಿನಗೆ ಮಾನ್ಯುಲ್ ಗೇರ್ ಗಾಡಿಯನ್ನು ಓಡಿಸಲು
ಬರುತ್ತದೆ ಅಲ್ಲವೇ ?"
" ಬರುತ್ತೆ"
ಅವಳು ತಣ್ಣಗೆ ನುಡಿದಳು.
"ಕಾರು
ಸ್ವಲ್ಪ ಹಳೆಯದು ಜಿಪಿಎಸ್
ಮುಂತಾದವು ಇಲ್ಲ"
"ಅದು
ಬೇಕಿಲ್ಲ. ನಾನು ಕೊರಿಯರ್ ಕಂಪನಿಯಲ್ಲಿ
ಕೆಲಸ ಮಾಡಿದ್ದರಿಂದ ನಗರದ ಎಲ್ಲ ರಸ್ತೆಗಳ
ವಿವರಗಳು ನನ್ನ ತಲೆಯಲ್ಲಿದೆ."
"ಸರಿ
ಹಾಗಾದರೆ ಒಂದು ರೌಂಡ್ ಹೋಗಿ
ಬರೋಣ. ಹೇಗಿದ್ದರೂ ತಂಪು ಹವೆಯಿದೆ ಕಾರಿನ ಮೇಲ್ಚಾವಣಿಯನ್ನು ಕೆಳಗಿಳಿಸೋಣ "
" ಯಾವ
ಕಡೆಗೆ?"
ಕಾಫುಕ
ಒಂದು ಕ್ಷಣ ವಿಚಾರ ಮಾಡಿದ.
ಅವರು ಶಿನೋಹಶಿಗಿಂತ ತುಂಬಾ ದೂರದಲ್ಲೇನೂ ಇರಲಿಲ್ಲ.
"ಟೆಂಜೇಂಜಿ
ಕ್ರಾಸಿನ ಬಳಿ ಬಲಗಡೆ ತಿರುಗಿ
ಮೇಜಿಯ ಸೂಪರ್ ಮಾರ್ಕೆಟಿನ ನೆಲಮಾಳಿಗೆ ಪಾರ್ಕಿಂಗ್ ಕಡೆ ಹೋಗೋಣ , ಅಲ್ಲಿ ನಾನು ಒಂದಷ್ಟು ಸಾಮಾನುಗಳನ್ನು ಖರೀದಿ ಮಾಡಲಿಕ್ಕಿದೆ. ಅದಾದ
ಮೇಲೆ ಅರುಸುಗಾವಾ ಪಾರ್ಕಿನ್ನು ಬಳಸಿ ಫ್ರೆಂಚ್
ರಾಯಬಾರ ಕಛೇರಿಯ ಹಿಂದೆ ಸಾಗಿ ಗೈಯೆನ್
ನಿಶಿ ಡೋರಿ ತಲುಪಿ ಅಲ್ಲಿಂದ
ವಾಪಾಸ್ ಇಲ್ಲಿಗೆ ಬರೋಣ "
"ಸರಿ"
ಅವಳು ತಲೆಯಾಡಿಸಿದಳು. ಅವಳು
ಹೋಗಬೇಕಾದ ರೂಟಿನ ಬಗ್ಗೆ ಮತ್ಯಾವ ಪ್ರಶ್ನೆಯನ್ನೂ ಕೇಳಲಿಲ್ಲ . ಒಬಾನ ಬಳಿ ಕಾರಿನ
ಕೀ ತೆಗೆದುಕೊಂಡು
ಚಕಚಕನೆ ಡ್ರೈವರ್ ಸೀಟ್ ಮತ್ತು ಕನ್ನಡಿಗಳನ್ನು
ತನಗೆ ಬೇಕಾದ ಹಾಗೆ ಹೊಂದಿಸಿಕೊಂಡಳು .
"ಕ್ಯಾಸೆಟ್
ಪ್ಲೇಯರ್! " ಕಾರಿನಲ್ಲಿ ಕೂರುತ್ತಾ ತನ್ನಷ್ಟಕ್ಕೆ ತಾನೇ ಎಂಬಂತೆ ಹೇಳಿಕೊಂಡಳು.
"ನನಗೆ
ಕ್ಯಾಸೆಟ್ ಇಷ್ಟವಾಗುತ್ತೆ" ಕಾಫುಕ ಹೇಳಿದ. " ಸಿಡಿಗಿಂತ ಕ್ಯಾಸೆಟ್ ಬಳಸುವದೇ ಸುಲಭ. ನಾಟಕದ ಸಾಲುಗಳ ತಾಲೀಮಿಗೆ ಅವುಗಳನ್ನು ಬಳಸುತ್ತೇನೆ"
"ಕ್ಯಾಸೆಟ್ ಗಳನ್ನು ನೋಡದೆಯೇ ಎಷ್ಟೋ ಸಮಯವಾಗಿತ್ತು "
"ನಾನು
ಡ್ರೈವಿಂಗ್ ಶುರು ಮಾಡಿದಾಗ ಬರಿ
೮ ಟ್ರಾಕಿನ ಕ್ಯಾಸೆಟ್
ಗಳೇ ಇದ್ದವು. "
ಮಿಸಾಕಿ
ಉತ್ತರಿಸಲಿಲ್ಲ, ಆದರೆ ಅವಳ ಮುಖಭಾವ
ಅವಳು ೮
ಟ್ರಾಕಿನ ಕ್ಯಾಸೆಟ್
ಅನ್ನು ಮೊದಲ ಬಾರಿಗೆ ಕೇಳಿದ್ದು
ಎನ್ನುವದನ್ನು ಸೂಚಿಸುತ್ತಿತ್ತು.
ಒಬಾ
ಹೇಳಿದ ಹಾಗೆ ಅವಳು ನುರಿತ
ಡ್ರೈವರ್ ಆಗಿದ್ದಳು. ಅವಳು ಕಾರನ್ನು ಸರಾಗವಾಗಿ
ಸ್ವಲ್ಪವೂ ಕುಲುಕಿಸದೆ ಗಾಡಿ ಓಡಿಸುತ್ತಿದ್ದಳು. ತುಂಬಿದ್ದ
ರಸ್ತೆಯ ಮೇಲೆಲ್ಲಾ ಜನ ಅಡ್ಡಾದಿಡ್ಡಿ ಓಡಾಡುತ್ತಿದ್ದರೂ
ಸಹ ಅವಳು ಸಲೀಸಾಗಿ ಗೇರನ್ನು
ಬದಲಿಸುತ್ತಾ ಕಾರನ್ನು ಲೀಲಾಜಾಲವಾಗಿ ಚಲಾಯಿಸುತ್ತಿದ್ದಳು. ಕಾಫುಕ
ಕಣ್ಣು ಮುಚ್ಚಿ ಅವಳು ಗೇರನ್ನು ಬದಲಿಸಿದಳೋ
ಇಲ್ಲವೋ ಎನ್ನುವದನ್ನು ಊಹೆ ಮಾಡುವ ಪ್ರಯತ್ನ ಮಾಡುತ್ತಿದ್ದ. ಕೇವಲ
ಕಾರಿನ ಇಂಜಿನ್ ನ ಶಬ್ದದಿಂದ ಮಾತ್ರ
ಗೇರು ಬದಲಾಗಿದ್ದು ತಿಳಿಯುತ್ತಿತ್ತು. ಕಾರಿನ
ಆಕ್ಸಲರೇಟರ್ ಮತ್ತು ಬ್ರೇಕಿನ ಮೇಲೆ ಅವಳು ಅತ್ಯಂತ
ಜಾಗರೂಕತೆಯಿಂದ ಹೌದೋ ಅಲ್ಲವೋ ಅನ್ನುವಂತೆ
ಕಾಲಿಟ್ಟಿದ್ದಳು. ಅವೆಲ್ಲಕ್ಕಿಂತ ಹೆಚ್ಚಾಗಿ ಅವಳು ಯಾವುದೇ ಉದ್ವೇಗಕ್ಕೊಳಗಾಗಿರಲಿಲ್ಲ.
ಹೇಳಬೇಕೆಂದರೆ ಅವಳನ್ನು ನೋಡಿದರೆ ಕಾರನ್ನು
ಚಲಾಯಿಸುತ್ತಿರುವಾಗಲೇ ನಿಶ್ಚಿ೦ತೆಯಿಂದಿರುವಳೇನೋ ಅನ್ನಿಸುತಿತ್ತು. ಸದಾ
ನಿರ್ವಿಕಾರವಾಗಿರುತ್ತಿದ್ದ
ಅವಳ ಮುಖ ಶಾಂತವಾಗಿತ್ತು. ಕಾರನ್ನು
ಚಲಾಯಿಸುವಾಗಲೂ ಅವಳು ಮಾತೆ ಇಲ್ಲದಂತೆ
ಮೌನವಾಗಿದ್ದಳು. ಕಾಫುಕ
ಏನಾದರು ಕೇಳಿದರೆ ಉತ್ತರ ಹೇಳಿಯಾಳೆ ವಿನಃ ಬೇರೆ ಮಾತಿಲ್ಲ
ಮಾತಿನ
ಅನುಪಸ್ಥಿತಿ ಕಾಫುಕನಿಗೇನು ತೊಂದರೆ ಅನಿಸಲಿಲ್ಲ. ಇತರರನ್ನು ಮಾತಿಗೆಳೆಯುವದರಲ್ಲಿ ಅವನೇನು ಚತುರನಲ್ಲ. ಬೇರೆಯವರೊಟ್ಟಿಗೆ
ಮಾತನಾಡಲೇ ಬಾರದು ಎಂದಲ್ಲ ಆದರೆ ಮಾತನಾಡಲು
ವಿಷಯವಿಲ್ಲದಾಗ ಮಾತನಾಡದೆ ಸುಮ್ಮನೆ ಇರುವದು ಒಳಿತು ಎನ್ನುವದು ಅವನಿಗೆ ತಿಳಿದಿತ್ತು. ಅವನು ಕಾರಿನ ಹಿಂದಿನ
ಸೀಟ್ ನಲ್ಲಿ ಆರಾಮವಾಗಿ ಕುಳಿತು ಕಿಟಕಿಯ
ಮೂಲಕ ಹಿಂದಕ್ಕೆ ಸಾಗುತ್ತಿದ್ದ ರಸ್ತೆಗಳನ್ನು
ದಿಟ್ಟಿಸುತ್ತಿದ್ದ . ಯಾವತ್ತೂ ಕಾರಿನ ಡ್ರೈವರಿನ ಸೀಟಿನಲ್ಲಿ ಕುಳಿತಿರುತ್ತಿದ್ದ ಅವನಿಗೆ ಹಿಂದಿನ ಸೀಟಿನಲ್ಲಿ ಕುಳಿತು
ಹೊರಗೆ ನೋಡುವದು ವಿಶೇಷವಾಗಿ ತೋರುತ್ತಿತ್ತು.
ಅವನು ಅನೇಕ
ಬಾರಿ ಇಕ್ಕಟ್ಟಾದ ಜಾಗೆಗಗಲ್ಲಿಇನ್ನೊಂದು ಕಾರಿಗೆ ಸಮಾನಾಂತರವಾಗಿ ನಿಲ್ಲಿಸಲು ಹೇಳಿ ಅವಳ
ಕೌಶಲ್ಯವನ್ನು ಪರೀಕ್ಷಿಸಿದ. ಅವಳಿಗೆ ಕಾರನ್ನು ಚಲಾಯಿಸುವದರ ಮೇಲೆ ಅದ್ಭುತ ಹಿಡಿತವಿದ್ದಿತ್ತು. ಕಾರನ್ನು
ಸಿಗ್ನಲ್ ಗಳಲ್ಲಿ ನಿಲ್ಲಿಸಿದಾಗ
ಮಾತ್ರ ಅವಳು ಸಿಗರೇಟು ಸೇದುತ್ತಿದ್ದಳು
. ಮಾಲ್ಬರೋಸ್ ಅವಳ ಆಯ್ಕೆಯ ಸಿಗರೇಟೆಂದು
ತೋರುತ್ತಿತ್ತು. ಸಿಗ್ನಲ್ ಬಿಟ್ಟ ತಕ್ಷಣ ಅವಳು ಸಿಗರೇಟನ್ನು ನಂದಿಸಿಬಿಡುತ್ತಿದ್ದಳು.
ಅವಳ ತುಟಿಗೆ ಯಾವುದೇ ಲಿಪ್ಸ್ಟಿಕ್ ಇರಲಿಲ್ಲ ಕೈ ಉಗುರಗಳನ್ನು ನೀಟಾಗಿ
ಕತ್ತರಿಸಿರಲಿಲ್ಲ . ಹಾಗೆ
ನೋಡಿದರೆ ಅವಳು ಯಾವುದೇ ಅಲಂಕಾರವನ್ನು
ಯಾವತ್ತೂ ಮಾಡಿಕೊಂಡಂತೆ ತೋರುತ್ತಿರಲಿಲ್ಲ.
"ನೀನು
ತಪ್ಪು ಭಾವಿಸುವದಿಲ್ಲವೆಂದಾದರೆ ನಿನಗೆ ಒಂದಷ್ಟು ಪ್ರಶ್ನೆ ಕೇಳಬಹುದೇ ?" ಅವರು
ಅರುಸುಗಾವಾ ಪಾರ್ಕಿಗೆ ಹತ್ತಿರವಾಗುತ್ತಿದ್ದಂತೆ ಕಾಫುಕ ಕೇಳಿದ.
"ಹ್ಮ್"
"ನೀನು
ಗಾಡಿ ಚಲಾಯಿಸುವದನ್ನು ಕಲಿತಿದ್ದೆಲ್ಲಿ?"
"ನಾನು
ಬೆಳೆದಿದ್ದು ಹೊಕೈದೋ ಎನ್ನುವ ಪರ್ವತ ಪ್ರದೇಶದಲ್ಲಿ. ಚಿಕ್ಕವಳಿದ್ದಾಗಲೇ ಗಾಡಿ ಓಡಿಸಲು ಕಲಿತೆ.
ಅಂತಹ ಸ್ಥಳಗಳಲ್ಲಿ ಕಾರು ಅತ್ಯವಶ್ಯಕ.
ವರ್ಷದಲ್ಲಿ ಅರ್ಧದಷ್ಟು ದಿನ ರಸ್ತೆಗಳು ಹಿಮಾಚ್ಚಾದಿತವಾಗಿರುತ್ತವೆ. ಅಲ್ಲಿ
ಗಾಡಿ ಓಡಿಸಿದವರು ಬೇಡವೆಂದರೂ ಒಳ್ಳೆಯ ಚಾಲಕರಾಗುತ್ತಾರೆ. "
"ಅದು
ಸರಿ , ಆದರೆ ಅಲ್ಲಿ ಕಾರನ್ನು
ನೀನು ಮಾಡುವಂತೆ ಕರಾರುವಕ್ಕಾಗಿ ಪಾರ್ಕ್ ಮಾಡುವದನ್ನು ಕಲಿಯಲಿಕ್ಕೆ ಸಾಧ್ಯವಿಲ್ಲ ಅಲ್ಲವೇ ? "
ಅವಳು
ಉತ್ತರಿಸಲಿಲ್ಲ .
"ನನಗೆ
ಇದ್ದಕಿದ್ದ ಹಾಗೆ ಚಾಲಕರ ಅವಶ್ಯಕತೆ ಯಾಕೆ ಬಂದಿತು
ಎಂದು ಓಬ ನಿನಗೆ ಹೇಳಿದ್ದಾನೆಯೇ
?"
ಮಿಸಾಕಿ
ನಿರ್ಭಾವುಕ ದನಿಯಲ್ಲಿ ರಸ್ತೆಯನ್ನು ನೋಡುತ್ತಾ ಉತ್ತರಿಸಿದಳು. "ನೀನೊಬ್ಬ ನಟ. ವಾರದ ಆರು
ದಿನ ಸ್ಟೇಜಿನ ಮೇಲಿರುತ್ತಿಯ . ಮೊದಲೆಲ್ಲ ನಿನ್ನ ಕಾರನ್ನು
ನೀನೇ ಚಲಾಯಿಸಿಕೊಂಡು ಥಿಯೇಟರಿಗೆ ಬರಿತ್ತಿದ್ದೆ. ನಿನಗೆ
ಟ್ಯಾಕ್ಸಿಯಲ್ಲಾಗಲಿ, ಮೆಟ್ರೋದಲ್ಲಾಗಲೀ ಅಡ್ಡಾಡುವದು ಇಷ್ಟವಿಲ್ಲ . ಯಾಕೆಂದರೆ
ಹಾದಿಯಲ್ಲಿ ನಾಟಕದ ಸಾಲುಗಳನ್ನು ಉರುಹೊಡೆಯುವದು , ತಾಲೀಮು
ಮಾಡುವಾದು ನಿನ್ನ ಅಭ್ಯಾಸ. ಕೆಲ ವಾರಗಳ ಹಿಂದೆ
ನೀನು ಕುಡಿದು ಕಾರು ಚಲಾಯಿಸಿ
ಇನ್ನೊಂದು ಗಾಡಿಗೆ ಡಿಕ್ಕಿ ಹೊಡೆದುದರಿಂದ ನಿನ್ನ ಲೈಸೆನ್ಸ್ ಅನ್ನು
ಅಮಾನತು ಮಾಡಲಾಗಿದೆ. ಅಲ್ಲದೆ, ಅಪಘಾತವಾದಾಗ ಡಾಕ್ಟರು ನಿನ್ನ
ದ್ರಷ್ಟಿ ಮಂದವಾದೆ ಎಂದು ಪೊಲೀಸರಿಗೆ ವರದಿ
ಮಾಡಿದ್ದಾರೆ.
ಮಿಸಾಕಿ
ತಲೆಯಾಡಿಸಿದ. ಕ್ಷಣಕಾಲ ಅವನಿಗೆ ಯಾರೋ ಒಬ್ಬರು ಕನಸಿನಲ್ಲಿ ವರದಿಯನ್ನು
ಒಪ್ಪಿಸಿದಂತೆ ಇತ್ತು .
" ಡಾಕ್ಟರು
ದೃಷ್ಟಿ ಪರೀಕ್ಷೆ ಮಾಡಿದಾಗ ಗ್ಲುಕೊಮಾ ಇರಬಹುದು ಅಂದರು. ನನ್ನ ಬಲಗಣ್ಣಿನಲ್ಲಿ ದೃಷ್ಟಿ
ದುರ್ಬಲವಾಗಿದೆಯಂತೆ.
"
ರಕ್ತ
ಪರೀಕ್ಷೆಯಲ್ಲಿ ಸಿಕ್ಕಿದ ಆಲ್ಕೋಹಾಲ್ ಪ್ರಮಾಣ ಹೆಚ್ಚೇನೂ ಇರಲಿಲ್ಲ ಹೀಗಾಗಿ ಪ್ರಕರಣವನ್ನು ಅಲ್ಲಿಗೆ ಮುಚ್ಚಿ ಹಾಕಲಾಗಿತ್ತು. ಅದೃಷ್ಟವಶಾತ್ ಮಾಧ್ಯಮದವರಿಗೆ
ಯಾರೂ ವಿಷಯ ತಿಳಿಸಿರಲಿಲ್ಲ.
ಆದರೆ ಥಿಯೇಟರಿನ ಆಡಳಿತ ಮಂಡಳಿ ಕಾಫುಕನ
ದೃಷ್ಟಿ ದೋಷವನ್ನು ನಿರ್ಲಕ್ಷ ಮಾಡುವ ಹಾಗಿರಲಿಲ್ಲ. ಬಲಗಡೆಯಿಂದ
ಬರುವ ವಾಹನಗಳು ತೀರಾ ಹತ್ತಿರ ಬರುವವರೆಗೂ ಕಾಫುಕನಿಗೆ
ಸರಿಯಾಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ
ಆಡಳಿತ ಮಂಡಳಿಯವರು ಕಾಫುಕನಿಗೆ ವಾಹನ ಚಲಾಯಿಸುವದನ್ನು ನಿಲ್ಲಿಸಲು
ಕೇಳಿಕೊಂಡರು.
"ಮಿಸ್ಟರ್
ಕಾಫುಕ " ಮಿಸಾಕಿ ಕೇಳಿದಳು. " ನಿನ್ನನ್ನು ಹಾಗೆ ಕರೆಯಬಹುದೇ ? ಅದು
ನಿನ್ನ ಸ್ಟೇಜಿನ ಹೆಸರು ಅಲ್ಲ ತಾನೇ ? "
"ಇದೊಂದು
ಬಳಕೆಯಲ್ಲಿಲ್ಲದ ಹೆಸರು. ಆದರೆ ಅದು ನನ್ನ
ನಿಜವಾದ ಹೆಸರು. ಕಾಫುಕ
ಎಂದರೆ ಅದೃಷ್ಟ ದೇವತೆಯ ಮನೆ ಎಂದರ್ಥ. ಹಾಗೆಂದು
ನನಗೆ ಅದೃಷ್ಟದ ಬಾಗಿಲು ತೆರೆದಿದೆ ಎಂದಲ್ಲ. "
ಒಂದು
ಕ್ಷಣದ ಮೌನದ ನಂತರ ಕಾಫುಕ
ಅವಳಿಗೆ ಸಂಬಳವೆಷ್ಟು ಕೊಡಬಹುದೆಂದು ಹೇಳಿದ. ಅಂತಹ ದೊಡ್ಡ ಮೊತ್ತವೇನಲ್ಲ.
ಆದರೆ ಥಿಯೇಟರನ ವತಿಯಿಂದ ಕೊಡಬಹುದಾಗಿದ್ದು
ಅಷ್ಟೇ ಹಣ. ಕಾಫುಕನ
ಹೆಸರು ಬಹುತೇಕ ಎಲ್ಲರಿಗೂ ತಿಳಿದಿದ್ದರೂ ಅವನೇನು ಟಿವಿ ಅಥವಾ ಸಿನಿಮಾ
ತಾರೆಯರಂತೆ ಯಥೇಚ್ಛ ಸಂಭಾವನೆ ಪಡೆಯುವ ನಟನಾಗಿರಲಿಲ್ಲ. ಅವನಂತಹ ನಟರಿಗೆ ಕೆಲವೇ ಕೆಲವು ತಿಂಗಳುಗಳ ಮಟ್ಟಿಗೆ ಸ್ವ೦ತ ಡ್ರೈವರನ್ನು ಇರಿಸಿಕೊಳ್ಳುವದೂ ಸಹ ಯೋಗ್ಯತೆಗೆ ಮೀರಿದ
ಐಷಾರಾಮಿಯೇ ಆಗಿತ್ತು
"ನಿನ್ನ
ಕೆಲಸದ ವೇಳಾ ಪಟ್ಟಿ ಆಗಾಗ
ಬದಲಾಗಬಹುದು. ಆದರೆ ಬಹುತೇಕ ನಾನು
ಕೆಲಸ ಮಾಡುವದು ಥಿಯೇಟರಿನಲ್ಲೇ. ಹಾಗಾಗಿ
ಬೆಳಗಿನ ವೇಳೆ ನಿನಗೆ ಸಂಪೂರ್ಣ
ಬಿಡುವು . ಬೇಕಿದ್ದರೆ ಮಧ್ಯಾನ್ಹದವರೆಗೂ ನೀನು ಮಲಗಬಹುದು.
ರಾತ್ರಿ ಹನ್ನೊಂದರ ಒಳಗಾಗಿ ನಿನ್ನ ಕೆಲಸ ಮುಗಿಯುವ ಹಾಗೆ
ನಾನು ನೋಡಿಕೊಳ್ಳುತ್ತೇನೆ. ಒಂದು ವೇಳೆ ನನ್ನ
ಕೆಲಸ ಅಷ್ಟರೊಳಗಾಗಿ ಮುಗಿಯದಿದ್ದರೆ ನೀನು ಹೊರಡಬಹುದು. ನಾನು
ಟ್ಯಾಕ್ಸಿ ಮಾಡಿಕೊಂಡು ಮನೆಗೆ ಹೋಗುತ್ತೇನೆ. ವಾರದಲ್ಲಿ ಒಂದು
ದಿನ ರಜೆ.
"ಸರಿ"
ಮಿಸಾಕಿ ತಲೆಯಾಡಿಸಿದಳು
.
"ಕೆಲಸ
ಅಂಥ ಕಷ್ಟಕರವೇನಲ್ಲ. ಆದರೆ ನಾನು ಥಿಯೇಟರಿನ
ಒಳಗಿರುವಾಗ ಎರಡು ಮೂರು ತಾಸು
ಏನು ಮಾಡದೆ ಕಾಯಬೇಕಲ್ಲ ಅದು ನಿನಗೆ ಕಷ್ಟವಾಗಬಹುದು "
ಮಿಸಾಕಿ
ಮಾತನಾಡಲಿಲ್ಲ. ಅವಳ ಮುಖದಲ್ಲಿನ ಭಾವನೆ
ಅವಳು ಇದಕ್ಕೂ ಕಷ್ಟಕರವಾದ ಹಲವು ಕೆಲಸಗಳನ್ನು ಮಾಡಿದ್ದಳೆಂದು
ಹೇಳುವಂತಿತ್ತು .
"ದಯವಿಟ್ಟು
ಕಾರಿನ ಮೇಲ್ಛಾವಣಿ ಮುಚ್ಸಿದ್ದಾಗ ಸಿಗರೇಟು
ಸೇದಬೇಡ. ಬೇಕಿದ್ದರೆ ಅದನ್ನು
ಕೆಳಗಿಳಿಸಿದಾಗ ಸೇದಬಹುದು"
"ಆಯಿತು"
"ನಿನ್ನದೇನಾದರೂ
ಕರಾರು ಇದೆಯೇ "
"ಅಂತಹದೇನೂ ಇಲ್ಲ"
ಅವಳು ದೃಷ್ಟಿಯನ್ನು ಹರಿತಗೊಳಿಸಿ ಕಾರಿನೊಳಗೆ ಏನನ್ನೋ ದಿಟ್ಟಿಸಿದಳು " ನನಗೆ ಈ ಕಾರು ಇಷ್ಟವಾಗಿದೆ
"
ಅಷ್ಟೇ,
ತದನಂತರ ಇಬ್ಬರೂ ಮಾತನಾಡದೆಯೇ ಉಳಿದ
ಮಾರ್ಗವನ್ನು ಕ್ರಮಿಸಿದರು. ಅವರು
ಮರಳಿ ಗ್ಯಾರೇಜಿನ ಕಾಫುಕ
ಮಿಸಾಕಿಯನ್ನು ಕೆಲ್ಸಕ್ಕೆ ತೆಗೆದುಕೊಳ್ಳುವ ತನ್ನ ನಿರ್ಧಾರವನ್ನು ಒಬಾನಿಗೆ
ತಿಳಿಸಿದನು
ಮಿಸಾಕಿ
ಮಾರನೇ ದಿನದಿಂದಲೇ ಕಾಫುಕನ ಬಳಿ ಕೆಲಸ ಪ್ರಾರಂಭಿಸಿದಳು. ಸರಿಯಾಗಿ
ಮಧ್ಯಾನ್ಹ ಮೂರೂವರೆಗೆ ಅವಳು ಕಾಫುಕನ ಅಪಾರ್ಟಮೆ೦ಟ್
ಬಳಿ ಬಂದು ತಳಮಹಡಿಯಲ್ಲಿದ್ದ ಕಾರನ್ನು
ಹೊರತೆಗೆದು ಕಾಫುಕನನ್ನು ಗಿಂಜಾದಲ್ಲಿನ ಅವನ ಥಿಯೇಟರಿನ ಬಳಿ
ಬಿಡುತ್ತಿದ್ದಳು. ಮಳೆಯಿಲ್ಲದಿದ್ದರೆ
ಹೊರಡುವ ಮೊದಲು ಮಿಸಾಕಿ ಕಾರಿನ ಮೇಲ್ಛಾವಣಿಯನ್ನು ಕೆಳಗಿಳಿಸುತ್ತಿದ್ದಳು. ಕಾಫುಕ ಚೆಕೋವನ
ಅಂಕಲ್ ವಾನ್ಯ ನಾಟಕದಲ್ಲಿ ಅವನು ಮಾಡುತ್ತಿದ್ದ ಅಂಕಲ್
ವಾನ್ಯನ ಪಾತ್ರದ ಸಾಲುಗಳನ್ನು ಮನನ ಮಾಡಿಕೊಳ್ಳುತ್ತಿದ್ದ. ನಾಟಕದ
ಪ್ರತಿ ಸಾಲೂ ಅವನಿಗೆ ಬಾಯಿಪಾಠವಾಗಿದ್ದರೂ,
ಎಷ್ಟೋ ವರ್ಷಗಳಿ೦ದ ಅಭ್ಯಾಸ ಮಾಡಿಕೊಂಡ , ಈ ಪ್ರಯಾಣ ಕಾಲದ
ಮನನ ಕಾಫುಕನ ಉದ್ವಿಗ್ನತೆಯನ್ನು ಕಡಿಮೆ ಮಾಡುತ್ತಿತ್ತು.
ಸಾಮಾನ್ಯವಾಗಿ
ಮನೆಗೆ ವಾಪಾಸಾಗುವಾಗ ಕಾಫುಕ
ಬೆಥ್ಯುವೆನ್ ನ ಕ್ಯಾಸೇಟುಗಳನ್ನು ಕೇಳುತ್ತಿದ್ದ.
ದೀರ್ಘವಾಗಿ ಆಲೋಚಿಸಲು ಅಥವಾ ಏನನ್ನೂ ಆಲೋಚಿಸದಿರಲು
ಬೆಥ್ಯುವೆನ್ ಹಾಡುಗಳು ಸಹಕಾರಿ ಎನ್ನುವದು ಕಾಫುಕನ ಬಲವಾದ ನಂಬಿಕೆಯಾಗಿತ್ತು. ಕೆಲವೊಮ್ಮೆ ಲಘು ಮನಸ್ಥಿತಿಯಲ್ಲಿದ್ದಾಗ ಅವನು ಬೀಚ್
ಬಾಯ್ಸ್ , ರಾಸ್ಕಲ್, ಸಿಸಿಆರ್ ಮುಂತಾದ ಅಮೇರಿಕನ್ ರಾಕ್ ತಂಡಗಳ ಸಂಗೀತವನ್ನೂ ಕೇಳುತ್ತಿದ್ದ.
ಕಾಫುಕನ ಕೇಳುತಿದ್ದ ಬಹುತೇಕ ಕ್ಯಾಸೆಟುಗಳು ಅವನ ಯೌವ್ವನದ ದಿನಗಳಲ್ಲಿ
ಜನಪ್ರಿಯವಾದ ಹಾಡುಗಳಾಗಿದ್ದವು. ಮಿಸಾಕಿ ಯಾವತ್ತೂ ಅವನ ಆಯ್ಕೆಯ ಹಾಡುಗಳ
ಬಗ್ಗೆ ಯಾವುದೇ ತೆರನಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರಲಿಲ್ಲ. ಸಂಗೀತ
ಅವಳಿಗೆ ಸಂತೋಷವನ್ನುಂಟು ಮಾಡುತ್ತದೆಯೋ ಅಥವಾ ನೋವನ್ನುಂಟು ಮಾಡುತ್ತದೆಯೋ
ಎನ್ನುವದನ್ನು ಅವನು ತೀರ್ಮಾನಿಸದಾಗಿದ್ದ. ಹೇಳಬೇಕೆಂದರೆ ಅವಳು
ಈ ಹಾಡುಗಳನ್ನು ಕೇಳಿಸಿಕೊಳ್ಳುತ್ತಿದ್ದಳೋ ಇಲ್ಲವೋ ಎನ್ನುವದು ಅವನಿಗೆ ಗೊತ್ತಿರಲಿಲ್ಲ. ಅವಳು
ಯಾವತ್ತೂ ತನ್ನ ಭಾವನೆಗಳನ್ನ ತೋರ್ಪಡಿಸುತ್ತಿರಲಿಲ್ಲ.
ಕಾರಿನಲ್ಲಿ
ಮತ್ತೊಬ್ಬರ ಉಪಸ್ಥಿತಿಯಲ್ಲಿ ನಾಟಕದ ಸಾಲುಗಳನ್ನು ಹೇಳಿಕೊಳ್ಳುವದು ಕಾಫುಕನಿಗೆ ಹಿಂಸೆಯ ಕೆಲಸವಾಗಿತ್ತು. ಆದರೆ ಮಿಸಾಕಿಯ ಉಪಸ್ಥಿತಿ
ಅವನಿಗೆ ಯಾವುದೇ ತೆರನಾದ ಮುಜುಗರವನ್ನುಂಟು ಮಾಡುತ್ತಿರಲಿ್ಲ. ಒಂದು
ರೀತಿಯಲ್ಲಿ ಅವಳ ಭಾವನಾರಹಿತ ವರ್ತನೆ
ಕಾಫುಕನಿಗೆ ಒಳ್ಳೆಯದೇ ಆಗಿತ್ತು. ಕೆಲವೊಮ್ಮೆ ಅವನು ಮಿಸಾಕಳ ಕಿವಿಯದುರಿ ಹೋಗುವಂತೆ ಸಾಲುಗಳನ್ನು ಹೇಳಿದರೂ ಅವಳು
ಮಾತ್ರ ಯಾವುದೇ ಶಬ್ದ ಕೇಳಿಸಿಯೇ ಇಲ್ಲವೆಂಬಂತೆ
ಕುಳಿತಿರುತ್ತಿದ್ದಳು. ಬಹುಶ:
ಅವ್ಳ ಗಮನವೆಲ್ಲ ಡ್ರೈವಿಂಗ್ ಮೇಲೆ ಕೇಂದ್ರೀಕೃತವಾಗಿತ್ತೇನೋ. ಕಾರು
ಚಲಾಯಿಸುವಾಗ ಮಿಸಾಕಿ ಝೆನ್ ಸಂತರ
ಮನಸ್ಥಿತಿ ತಲುಪುತ್ತಿದ್ದಳೇನೋ ಅನ್ನಿಸುತಿತ್ತು.
ಮಿಸಾಕಿ
ತನ್ನ ಮೇಲೆ ಅಭಿಪ್ರಾಯ
ಇದೆ ಎನ್ನುವದರ ಬಗ್ಗೆ ಕಾಫುಕನಿಗೆ ಎಳ್ಳಷ್ಟೂ ತಿಳಿದಿರಲಿಲ್ಲ. ಅವನನ್ನು ಒಂದೆಡೆಯಿಂದ ಇನ್ನೊಂದೆಡೆಗೆ ವಿಲೇವಾರಿ
ಮಾಡುವ ಸರಕೆಂದು ಕೊಂಡಿದ್ದಳೋ ಅಥವಾ
ಅವಳಿಗೆ ಅವನ ಬಗ್ಗೆ ತಿಳಿಯುವ
ಯಾವ ಕುತೂಹಲವೂ ಇರಲಿಲ್ಲವೋ ಅಥವಾ ಕೆಲಸ ಉಳಿದರೆ
ಸಾಕು ಎಂದು ಅವನನ್ನು ಸಹಿಸಿಕೊಂಡಿದ್ದಳೋ ಎನ್ನುವದನ್ನು ಅವನು ತಿಳಿಯದಾಗಿದ್ದ. ಹೇಳಬೇಕೆಂದರೆ ಅವನ
ಬಗ್ಗೆ ಅವಳು ಏನು ಅಂದುಕೊಂಡಿದ್ದಾಳೆ
ಎನ್ನುವದು ಅವನಿಗೂ ಅಂತಹ ಮಹತ್ವವುಳ್ಳದ್ದಾಗಿರಲಿಲ್ಲ. ಅವನಿಗೆ
ಅವಳ ಸರಾಗ ಕಾಲು ಚಾಲನೆ
, ಮೌನ , ಹೊರ ಪ್ರಪಂಚದ ಬಗೆಗಿನ
ನಿರಾಸಕ್ತಿ ಎಲ್ಲವೂ ಇಷ್ಟವಾಗುತಿತ್ತು.
ರಾತ್ರಿ
ಷೋ ಮುಗಿದ ಕೂಡಲೇ ಕಾಫುಕ ಮೇಕ್ ಅಪ್ ಅಳಿಸಿ
, ವೇಷಭೂಷಣಗಳನ್ನು ತೆಗೆದಿಟ್ಟು ಸಾಧ್ಯವಾದಷ್ಟೂ ಬೇಗ ಥಿಯೇಟರಿನಿಂದ ಹೊರಟುಬಿಡುತ್ತಿದ್ದ. ಕೆಲಸ
ಮುಗಿದ ಕೂಡಲೇ ಅಲ್ಲಿ ಇಲ್ಲಿ ಅಡ್ಡಾಡುವದು ಅವನಿಗೆ ಸೇರುತ್ತಿರಲಿಲ್ಲ. ಅವನ ಜೊತೆಗಿರುವ ಬಹುತೇಕ
ನಂತರ ಪರಿಚಯವೇ ಅವನಿಗಿರಲಿಲ್ಲ. ನಾಟಕ
ಮುಗಿದ ತಕ್ಷಣ ಅವನು ಮಿಸಾಕಿಯ ಮೊಬೈಲ್
ಗೆ ಕರೆ ಮಾಡಿ ಅವಳನ್ನು
ಸ್ಟೇಜಿನ ಹತ್ತಿರದ
ದ್ವಾರದ ಬಳಿ ಬರಲು ಹೇಳುತ್ತಿದ್ದ. ಅವನು
ಹೊರ ಬಂದ ತಕ್ಷಣ ಹಳದಿ
ಬಣ್ಣದ ಕಾರು ಅವನಿಗಾಗಿ ಕಾದಿರುತ್ತಿತ್ತು.
ಅವನು ತನ್ನ ಅಪಾರ್ಟ್ ಮೆ೦ಟನ್ನು
ತಲುಪಿದಾಗ ೧೦.೩೦ ಆಗುತ್ತಿತ್ತು
ಮತ್ತು ಪ್ರತಿ ದಿನವೂ ಇದೆ ವೇಳಾಪಟ್ಟಿ ಪುನರಾವರ್ತನೆಯಾಗುತ್ತಿತ್ತು.
ಕಾಫುಕ ವಾರದಲ್ಲೊಮ್ಮೆ
ಒಂದು ಪತ್ತೇದಾರಿ ಟಿವಿ ಧಾರಾವಾಹಿಯ ಚಿತ್ರೀಕರಣದಲ್ಲಿ
ಭಾಗವಹಿಸುತ್ತಿದ್ದ. ಈ ಒಂದು
ದಿನದ ಕೆಲಸಕ್ಕೆ
ಅವನಿಗೆ ಚೆನ್ನಾಗಿಯೇ ಕಾಸು ಕೊಡುತ್ತಿದ್ದರು. ಧಾರಾವಾಹಿಯಲ್ಲಿ
ಕಾಫುಕ ಮಹಿಳಾ ಪೊಲೀಸೊಬ್ಬಳಿಗೆ ಕಳ್ಳರನ್ನು ಹಿಡಿಯಲು ಸಹಾಯ ಮಾಡುವ ಜ್ಯೋತಿಷಿಯೊಬ್ಬನ
ಪಾತ್ರ ಮಾಡುತ್ತಿದ್ದ. ಪಾತ್ರದ
ತಯಾರಿಗಾಗಿ ಹಲವಷ್ಟು ಬಾರಿ ಅವನು ಜ್ಯೋತಿಷಿಯಂತೆ
ವೇಷ ಧರಿಸಿ ರಸ್ತೆಯ ಪಕ್ಕ ಕುಳಿತು ಭವಿಷ್ಯ
ಹೇಳುವ ಕೆಲಸವನ್ನೂ ಮಾಡಿದ್ದ. ಹಲವರ ಪ್ರಕಾರ ಅವನು
ಹೇಳಿದ ಬಹುತೇಕ ಭವಿಷ್ಯ ಸತ್ಯವೇ ಆಗುತ್ತಿತ್ತು. ಧಾರಾವಾಹಿಯ ಚಿತ್ರೀಕರಣ ಮುಗಿದ ನಂತರ ಅವನು ಅಲ್ಲಿಂದ
ನೇರವಾಗಿ ನಾಟಕದ ಥಿಯೇಟಿರಿಗೆ ಹೋಗುತ್ತಿದ್ದ. ಕೆಲವೊಂದು ದಿನ ಅವನು ಹತ್ತಿರದಲ್ಲೇ
ಇದ್ದ ನಟನಾ ಶಾಲೆಯಲ್ಲಿ ಪಾಠ
ಮಾಡುತ್ತಿದ್ದ. ಯುವ ನಟ ನಟಿಯರ
ಜೊತೆಗೆ ಬೆರೆಯುವದು ಅವನಿಗೆ
ಪ್ರಿಯವಾದ ಕೆಲಸವಾಗಿತ್ತು. ಇವೆಲ್ಲ ತಿರುಗಾಟಗಳಲ್ಲಿ ಮಿಸಾಕಿ
ಒಂದಷ್ಟು ಕೊಸರಾಡದೆ ಅವನ ಜೊತೆಗೆ ತಿರುಗುತ್ತಿದ್ದಳು.
ಅವಳ ಮೌನದ ಸರಾಗ ಚಾಲನೆಗೆ
ಕ್ರಮೇಣ ಹೊಂದಿಕೊಂಡ ಕಾಫುಕನಿಗೆ ಅವಳ ಪಕ್ಕ ಕುಳಿತುಕೊಳ್ಳುವದಾಗಲಿ
, ಅಲ್ಲಿಯೇ ತೂಕಡಿಸುವದಕ್ಕಾಗಲಿ ಸ್ವಲ್ಪವೂ
ಮುಜುಗರವಾಗುತ್ತಿರಲಿಲ್ಲ.
ಬೇಸಿಗೆ
ಶುರುವಾದಂತೆ ಮಿಸಾಕಿ ದಪ್ಪನೆಯ ಜಾಕೆಟಿನ ಬದಲಿಗೆ ತೆಳ್ಳನೆಯ ಜಾಕೆಟನ್ನು ಧರಿಸಲು ಪ್ರಾರಂಭಿಸಿದಳು. ಅವಳು ಕಾರಿನಲ್ಲಿರುವಷ್ಟು ಕಾಲ
ಒಂದಿಲ್ಲೊಂದು ಜಾಕೆಟನ್ನು ಧರಿಸಿರುತ್ತಿದ್ದಳು. ಬಹುಶ: ಜಾಕೆಟ್
ಅವಳ ಸಮವಸ್ತ್ರವಾಗಿತ್ತೇನೋ. ಮಳೆಗಾಲವಿರುವಷ್ಟು ಕಾಲ ಕಾರಿನ ಮೇಲ್ಛಾವಣಿ
ಮುಚ್ಚಿಯೇ ಇರುತ್ತಿತ್ತು.
ಕಾರಿನೊಳಗೆ
ಕುಳಿತಾಗಲೆಲ್ಲ ಕಾಫುಕನಿಗೆ ತೀರಿಹೋದ ಅವನ ಹೆಂಡತಿಯ ನೆನಪಾಗುತ್ತಿತ್ತು.
ಯಾವುದೋ ಅವ್ಯಕ್ತ ಕಾರಣಕ್ಕೆ ಅವನಿಗೆ ಕಾರು ಚಲಾಯಿಸುತ್ತಿದ್ದಾಗ ಯಾವತ್ತೂ
ಬಾರದ ವನ ಹೆಂಡತಿಯ ನೆನಪು
ಕಾರಿನಲ್ಲಿ ಪ್ರಯಾಣಿಕರ ಸೈಟಿನಲ್ಲಿ ಸುಮ್ಮನೆ ಕುಳಿತಿದ್ದಾಗ ಕಾಡುತ್ತಿತ್ತು. ಅವನ ಹೆಂಡತಿಯೂ ನಟಿಯಾಗಿದ್ದಳು
, ಅವನಿಗಿಂತ ಎರಡು ವರ್ಷಕ್ಕೆ ಚಿಕ್ಕವಳಾದ
ಅವಳು ಅದ್ಭುತ ಹೆಂಗಸಾಗಿದ್ದಳು. ಕಾಫುಕ ಯಾವತ್ತೂ ಪೋಷಕ ಪಾತ್ರವನ್ನು ಮಾಡಿದವನು.
ಅವನಿಗೆ ಉದ್ದನೆಯ ಕೋಲು ಮುಖವಿತ್ತು. ಸಣ್ಣ
ವಯಸ್ಸಿನಲ್ಲೇ ಅಲ್ಲಲ್ಲಿ
ಉದುರಿ ಹೋಗಿದ್ದ ತಲೆಗೂದಲಿನಿಂದ ತಲೆಯ ಹಿಂಭಾಗ ವಯಸ್ಸಿಗೆ
ಮೊದಲೇ ಬೋಳಾಗಿತ್ತು. ಆದರೆ ಅವನ ಹೆಂಡತಿ
ಮುಖ್ಯಪಾತ್ರಕ್ಕೆ ಹೇಳಿ ಮಾಡಿಸಿದ ರೂಪವತಿಯಾಗಿದ್ದಳು.
ಅವಳಿಗೆ ಬರುತ್ತಿದ್ದ ಸಂಭಾವನೆ , ಅವಳ ಜನಪ್ರಿಯತೆ ಎರಡೂ
ಅದನ್ನು ಸಾರುತ್ತಿತ್ತು. ವರುಷಗಳು ಉರುಳಿದಂತೆ ಕಾಫುಕ ಅವನ ಪಾತ್ರ ನಟನೆಯ
ಕೌಶಲ್ಯಕ್ಕೆ ಹೆಸರುಮಾತಾಗಿದ್ದ. ಕಾಲದ ಸುಕ್ಕು ಮುಖದ
ಮೇಲೆ ಕಾಣಿಸಿದಂತೆ ಅವನ ಹೆಂಡತಿಯ
ಜನಪ್ರಿಯತೆ ಕ್ರಮೇಣ ಕುಂದತೊಡಗಿತ್ತು. ಆದರೂ ಅವರು ಪರಸ್ಪರರ
ಕೆಲಸವನ್ನು , ಕೌಶಲ್ಯವನ್ನು ಅಪಾರವಾಗಿ ಗೌರವಿಸುತ್ತಿದ್ದರು ಹೀಗಾಗಿ ಸಂಭಾವನೆಯಾಗಲಿ , ಜನಪ್ರಿಯತೆಯಾಗಲಿ ಅವರಿಬ್ಬರ ಮಧ್ಯೆ ಯಾವತ್ತಿಗೂ ಯಾವುದೇ ಸಮಸ್ಯೆಯನ್ನು ತಂದಿರಲಿಲ್ಲ.
ಕಾಫುಕ
ತನ್ನ ಹೆಂಡತಿಯನ್ನು ಆರಾಧಿಸುತ್ತಿದ್ದ. ಅವಳನ್ನು ತನ್ನ
೨೯ ನೇ ವರ್ಷದಲ್ಲಿ
ಮೊಟ್ಟಮೊದಲ ಬಾರಿಗೆ ನೋಡಿದಾಗಲಿಂದ , ಅವಳು ಸಾಯುವ ಕೊನೆಯ
ಕ್ಷಣದವರೆಗೂ ಕಾಫುಕ ಅವಳನ್ನು ಅಪಾರವಾಗಿ ಪ್ರೀತಿಸಿದ್ದ. ಅವಳು ಸತ್ತಾಗ ಅವನಿಗೆ
೪೯ ವರ್ಷಗಳಾಗಿತ್ತು. ಅವಳೊಟ್ಟಿಗಿದ್ದ ಅಷ್ಟೂ ವರ್ಷಗಳಲ್ಲಿ ಕಾಫುಕ ಯಾವತ್ತೂ ಬೇರೊಂದು ಹೆಂಗಸರ ಬಗ್ಗೆ ಯೋಚಿಸಿದವನೂ ಅಲ್ಲ.
ಆದರೆ
ಅವನ ಹೆಂಡತಿ ಹಲವಾರು ಬಾರಿ ಪರ ಪುರುಷರೊಟ್ಟಿಗೆ
ಮಲಗಿದ್ದಳು. ಅವನಿಗೆ ತಿಳಿದಂತೆ ಇಲ್ಲಿಯವರೆಗೆ ಅವಳಿಗೆ ಒಟ್ಟು ನಾಲ್ಕು ಸಂಬಂಧಗಳಿದ್ದವು. ಇನ್ನೂ ಬಿಡಿಸಿ ಹೇಳುವುದಾದರೆ ಅವಳು
ಅವನಲ್ಲದೆ ಬೇರೆ ನಾಲ್ವರ ಜೊತೆಗೂ
ಮಲಗಿದ್ದಳು. ಹಾಗೆಂದು ಅವಳು ಈ ವಿಷಯವನ್ನು
ಅವನಿಗೆ ಯಾವತ್ತೂ ಹೇಳಿದವಳಲ್ಲ. ಆದರೂ ಅದು ಹೇಗೋ
ಕಾಫುಕನಿಗೆ ಈ ವಿಷಯ ತಿಳಿಯುತ್ತಿತ್ತು.
ಇಂತಹ ವಿಷಯಗಳಲ್ಲಿ ಕಾಫುಕನ ಆರನೆಯ ಇಂದ್ರಿಯ ಅವನಿಗರಿವಿಲ್ಲದಂತೆ ಈ ವಿಷಯ
ತಿಳಿಯುವಂತೆ ಮಾಡುತ್ತಿತ್ತು ಅಲ್ಲದೇ ಹೆಂಡತಿಯ ಬಗೆಗಿನ ಅಪಾರ ಪ್ರೀತಿ ಇಂತಹ ವಿಷಯವನ್ನು ನಿರ್ಲಕ್ಷಿಸುವದನ್ನು
ಅಸಾಧ್ಯವನ್ನಾಗಿ ಮಾಡುತಿತ್ತು. ಆಕೆ
ಮಾತನಾಡುವ ವಿಧಾನದಲ್ಲೇ ಅವಳು ಯಾರೊಟ್ಟಿಗೆ ಸಂಬಂಧ
ಹೊಂದಿದ್ದಾಳೆ ಎನ್ನುವದನ್ನು ಹೇಳಬಹುದಿತ್ತು. ಬಹುತೇಕ
ಸಂದರ್ಭದಲ್ಲಿ ಅವಳ ಪ್ರಿಯಕಾರರಾಉ ಅವಳ
ಸಹನಟರೆ ಆಗಿರುತ್ತಿದ್ದರು ಮತ್ತು ಅವಳಿಗಿಂತ ವಯಸ್ಸಿನಲ್ಲಿ
ಸಣ್ಣವರಾಗಿರುತ್ತಿದ್ದರು.
ಈ ಸಂಬಂಧ ಚಿತ್ರೀಕರಣ ನಡೆಯುತ್ತಿದ್ದಷ್ಟೂ ದಿನ ಸರಾಗವಾಗಿ ಸಾಗುತ್ತಿತ್ತು. ಚಿತ್ರೀಕರಣ
ಮುಗಿದ ತಕ್ಷಣ ಅದು ಇದ್ದಕ್ಕಿದ್ದಂತೆ ಅನಾಥವಾಗಿ
ಸಾಯುತ್ತಿತ್ತು . ಇಷ್ಟು ವರ್ಷಗಳಲ್ಲಿ ಒಟ್ಟೂ ನಾಲ್ಕು ಸಲ ಹೀಗಾಗಿತ್ತು ಮತ್ತು
ಪ್ರತಿ ಸಲವು ಇದೆ ಮಾದರಿ
ಪುನರಾವರ್ತನೆಯಾಗುತ್ತಿತ್ತು
.
ಕಾಫುಕನಿಗೆ
ಅವನ ಹೆಂಡತಿ ಆಗಾಗ ಯಾಕೆ ಮತ್ತೊಬ್ಬರ ಜೊತೆಗೆ
ಮಲಗುತ್ತಿದ್ದಳು ಎನ್ನುವದು ಕೊನೆಯವರೆಗೂ ಅರ್ಥವಾಗಿರಲಿಲ್ಲ. ಗಂಡ
ಹೆಂಡತಿಯಾಗಿ , ಸಂಗಾತಿಗಳಾಗಿ ಅವರಿಬ್ಬರ ಸಂಬಂಧ ಮೊದಲಿನಿಂದ ಕೊನೆಯವರೆಗೂ ಮಧುರವಾಗಿಯೆ ಇತ್ತು. ಸಮಯ ಸಿಕ್ಕಾಗಲೆಲ್ಲ ಪರಸ್ಪರರು
ಕೂತು ಹಲವಷ್ಟು ವಿಷಯಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಒಬ್ಬರನ್ನೊಬ್ಬರು ಅವರು ಅಪಾರವಾಗಿ ನಂಬುತ್ತಿದ್ದರು.
ಅವನ ಪ್ರಕಾರ ಅವರಿಬ್ಬರೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಅತ್ಯಂತ
ಹೊಂದಾಣಿಕೆ ಇರುವ ಜೋಡಿಯಾಗಿದ್ದರು. ಸುತ್ತಲಿನವರು
ಸಹ ಹಾಗೆ ತಿಳಿದಿದ್ದರು.
ಅವಳು ಬದುಕಿದ್ದಾಗಲೇ ಅವಳನ್ನು
ಈ ವಿಷಯದ ಬಗ್ಗೆ ಯಾಕೆ
ಪ್ರಶ್ನಿಸಿಲ್ಲವೆಂದು ಅವನಿಗೆ ಪಶ್ಚಾತ್ತಾಪವಾಗುತ್ತಿತ್ತು . ಇದೊಂದು ವಿಷಾದ ಅವನ
ಮನಸ್ಸಿನಲ್ಲಿ ಆಗಾಗ ಹಾದುಹೋಗುತ್ತಿತ್ತು. ಅವಳಿದ್ದಾಗ
ಒಂದು ಸಲ ಇನ್ನೇನು ಅವಳನ್ನು
ಪ್ರಶ್ನಿಯೇ ಬಿಡುವಂತಿದ್ದ. ಅವಳ
ಬಳಿ "ಅವರಲ್ಲಿ ನೀನು ಏನನ್ನು ಹುಡುಕುತ್ತಿದ್ದೆ
? ನನ್ನಲ್ಲಿ ಏನು ಕಡಿಮೆಯಾಗಿತ್ತು ? " ಎಂದು ಕೇಳುತ್ತಿದ್ದನೇನೋ
, ಆದರೆ ಅಷ್ಟರಲ್ಲಾಗಲೇ ಅವಳು ಸಾವಿನಂಚಿಗೆ ತಲುಪಿಯಾಗಿತ್ತು. ಆ
ಸಮಯದಲ್ಲಿ ಅವಳನ್ನು ಪ್ರಶ್ನಿಸುವಷ್ಟು ಗಟ್ಟಿ ಹೃದಯ ಅವನದಾಗಿರಲಿಲ್ಲ. ಕೊನೆಗೊಂದು
ದಿನ , ವಿವರೆಣೆಯೇ ಇಲ್ಲದೆ , ಉತ್ತರಗಳೇ ಇಲ್ಲದ ಪ್ರಶ್ನೆಯನ್ನು ಬಿಟ್ಟು ಅವಳು
ಕಾಫುಕನ ಬದುಕಿನಿಂದ ದೂರ ಹೋಗಿಬಿಟ್ಟಳು. ಈಗ ಅವನ
ಬಳಿ ಉಳಿದಿದ್ದು ಯಾವತ್ತಿಗೂ ಉತ್ತರವಿಲ್ಲದ ಪ್ರಶ್ನೆ. ಅವಳ ಅಂತ್ಯಕ್ರಿಯೆ
ಮುಗಿದು ಚಿತಾಭಸ್ಮವನ್ನು ಕೊಂಡೊಯ್ಯುವಾಗಲು ಅವನಲ್ಲಿ ಈ ಪ್ರಶ್ನೆಯೇ
ತುಂಬಿತ್ತು.
ಕಾಫುಕ
ಕಣ್ಣು ಮುಚ್ಚಿದಾಗಲೆಲ್ಲ ಅವನ ಹೆಂಡತಿ ಬೇರೊಬ್ಬನ
ಜೊತೆ ಪ್ರೇಮಿಸುತ್ತಿರುವ ದೃಶ್ಯ ಕಣ್ಣ
ಮುಂದೆ ಸುಳಿದು ಮಾಯವಾಗುತ್ತಿತ್ತು. ಪ್ರಯತ್ನಪೂರ್ವಕವಾಗಿ ಚಿತ್ರವನ್ನು
ಹೊಡೆದೋಡಿಸಲು ಯತ್ನಿಸಿದರೆ , ಇನ್ನೇನು
ಆ ದ್ರಶ್ಯ ಮರೆಯಾಗಿ ಹೋಯಿತು ಎನ್ನುವಷ್ಟರಲ್ಲಿ ಮತ್ತೆ ಅಲೆ ಅಲೆಯಾಗಿ ಎದ್ದು
ಬರುತ್ತಿತ್ತು. ಅವನಿಗೆ
ಈ ವಿಷಯವನ್ನು ಕಲ್ಪಿಸಿಕೊಳ್ಳುವದು ಇಷ್ಟವಿರದಿದ್ದರೂ
, ಅಪ್ರಯತ್ನಪೂರ್ವಕವಾಗಿ ಅವನ ಹೆಂಡತಿಯು ಮತ್ತೊಬ್ಬರೊಟ್ಟಿಗಿರುವ
ಚಿತ್ರ ಅವನ ಮನೋ ಹಿಡಿತವನ್ನು
ದಾಟಿ ಹೊರಗೆ ಬಂದು ತಣ್ಣಗಿನ
ಹರಿತ ಚಾಕುವಿನಂತೆ ಅವನೆದೆಯನ್ನು ಕೊರೆಯುತ್ತಾ ಇಳಿಯುತ್ತಿತ್ತು. ಹಲವಷ್ಟು
ಬಾರಿ ಅವನಿಗೆ ಬಗೆಗಿನ
ಇದೊಂದು ವಿಷಯ ತಿಳಿಯದಿದ್ದರೆ
ಒಳ್ಳೆಯದಿತ್ತೆಂದು ಅನಿಸುವದುಂಟು. ಆದರೂ ಏನನ್ನೂ ತಿಳಿಯದೇ ಇರುವದಕ್ಕಿಂತ ಯಾವುದೇ ಸಂದರ್ಭದಲ್ಲಿ
ವಿಷಯದ ಬಗೆಗಿನ
ಅರಿವು ಒಳ್ಳೆಯದು
ಎಂದು ತನ್ನನ್ನು ತಾನು ಸಮಾಧಾನ ಪಡಿಸಿಕೊಳ್ಳುತ್ತಿದ್ದ. ಎಷ್ಟೇ
ಆಘಾತಕಾರಿಯಾದರು ಸತ್ಯವೆಂಬುದು ಸತ್ಯವೇ ಹೌದು. ಸತ್ಯವನ್ನು ಒಪ್ಪಿಕೊಳ್ಳುವದೊಂದೇ ಸತ್ಯದ ಹೊಡೆತವನ್ನು ಸಹಿಸಿಕೊಳ್ಳುವ ಏಕೈಕ ಮಾರ್ಗ ಎಂದು
ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಿದ್ದ.
ಅವನ
ಹೆಂಡತಿಯ ಈ ನಡವಳಿಕೆಯ ಬಗ್ಗೆ
ಅರಿವಿದ್ದೂ ಏನೂ ತಿಳಿದಿಲ್ಲವೆಂಬಂತೆ ಬದುಕುವದು
ಕಾಫುಕನಿಗೆ ಅತ್ಯ೦ತ ಯಾತನೆಯ ಕೆಲಸವಾಗಿತ್ತು. ಒಳಗೆ
ಸಣ್ಣಗೆ ಸೋರುತ್ತಿದ್ದ , ಗಾಸಿಗೊಂಡ ಹೃದಯ , ಹೊರಗೆ ತಣ್ಣಗೆ ನಗೆ. ಇಬ್ಬರಿಗೂ ಗೊತ್ತಿದ್ದ
ವಿಷಯವನ್ನು ಇಬ್ಬರೂ ಮುಚ್ಚಿಟ್ಟು, ಪರಸ್ಪರರನ್ನು ನಂಬಿಸುತ್ತ , ಎಲ್ಲವೂ ಸಹಜವಾಗಿದೆ ಎಂಬಂತೆ ಅವರಿಬ್ಬರೂ ನಗುತ್ತ , ಮಾತನಾಡುತ್ತ , ರಾತ್ರಿ ಒಬ್ಬರನ್ನೊಬ್ಬರು ತಬ್ಬಿ ಮಲಗುತ್ತಾ ದಿನಗಳನ್ನು
ದೂಡುತ್ತಿದ್ದರು. ಬಹುಶ: ಸಾಧಾರಣ ಜನರಿಗೆ ಇದು ಅಸಾಧ್ಯವಾಗಿರಬಹುದು ಆದರೆ
ಕಾಫುಕ ಒಬ್ಬ ಅಸಾಮಾನ್ಯ ನಟನಾಗಿದ್ದ.
ತನ್ನತನ , ತನ್ನ ರಕ್ತ ಮಾಂಸಗಳನ್ನು
ತಾನೇ ಕಳೆದುಕೊಳ್ಳುತ್ತ, ತಾನು ತೊಟ್ಟ ಪಾತ್ರದ ಆಕಾರವೇ
ಆಗಿ ಕೊನೆಗೆ ಆ ಪಾತ್ರವೇ ತಾನಾಗುವದು
ಕಾಫುಕನೊಳಗಿನ ನಟನ ಅಸಾಮಾನ್ಯ ಪ್ರತಿಭೆಯಾಗಿತ್ತು
ಮತ್ತು ತನ್ನ ಸರ್ವ ಶಕ್ತಿಯನ್ನೂ
ಧಾರೆಯೆರೆದು ಕಾಫುಕ ಪ್ರತಿ ದಿನದ ಈ ಪಾತ್ರವನ್ನು
ನಿಭಾಯಿಸುತ್ತಿದ್ದ. ಪ್ರೇಕ್ಷಕರೇ
ಇಲ್ಲದ ನಾಟಕದಲ್ಲಿ ಅವನು ಪ್ರತಿದಿನದ ಪ್ರತಿಕ್ಷಣದ
ಅಭಿನಯಿಸುತ್ತಿದ್ದ .
ಇಷ್ಟಾದರೂ
ಅವನ ಹೆಂಡತಿಯ ಇದೊಂದು ಗುಣ - ಕೆಲ ಸಂದರ್ಭದಲ್ಲಿ ಬೇರೊಬ್ಬರೊಟ್ಟಿಗೆ
ಸಂಬಂಧ ಬೆಳೆಸುವದನ್ನು ಹೊರತು
ಪಡಿಸಿದರೆ ಅವರ ದಾಂಪತ್ಯ ಅತ್ಯ೦ತ
ಸುಖಮಯವೂ, ಖುಷಿಯದೂ ಆಗಿತ್ತು. ಯಾವುದೇ ಆರ್ಥಿಕ ತೊಂದರೆಯಿಲ್ಲದೆ ಅವರ ವೃತ್ತಿಜೀವನವು
ಸಲೀಸಾಗಿ ಮುಂದುವರೆಯುತ್ತಿತ್ತು. ಇಪ್ಪತ್ತು
ವರ್ಷಗಳಷ್ಟು ಸುದೀರ್ಘ ದಾಂಪತ್ಯ ಜೀವನದಲ್ಲಿ ಅವರು ಲೆಕ್ಕವಿಲ್ಲದಷ್ಟು ಸಲ
ಪರಸ್ಪರರನ್ನು ಕೂಡಿದ್ದರು. ಅವರಿಬ್ಬರ
ಸಮಾಗಮ ಅವನ ಪಾಲಿಗೆ ಯಾವತ್ತಿಗೂ
ತೃಪ್ತಿಕರವಾಗಿತ್ತು.ಮೂತ್ರಕೋಶದ ಕ್ಯಾನ್ಸರಿನಿಂದ ಅವಳು ತೀರಿಕೊಂಡ ನಂತರ
ಕಾಫುಕ ಅನೇಕ ಮಹಿಳೆಯೊರೊಟ್ಟಿಗೆ ಕೂಡಿದ್ದರೂ
ಅವನ ಹೆಂಡತಿಯೊಟ್ಟಿಗಿದ್ದ ಭಾವ ತೀವ್ರತೆ ಯಾರೊಟ್ಟಿಗೂ
ಬಂದಿರಲಿಲ್ಲ.
ಕಾಫುಕನ
ಆಫೀಸಿನವರು ಮಿಸಾಕಿಗೆ ಸಂಬಳವನ್ನು
ಪಾವತಿಸುವ ಮೊದಲು ಅವಳ ಹಲವು ವಿವರಗಳನ್ನು
ಕೇಳಿದ್ದರು. ಹೀಗಾಗಿ ಕಾಫುಕ ಅವಳ ಹುಟ್ಟಿದ ಊರು
, ಜನ್ಮ ದಿನಾ೦ಕ, ಸಧ್ಯಕ್ಕೆ ವಾಸವಾಗಿರುವ ಸ್ಥಳದ ವಿಳಾಸ, ಡ್ರೈವಿಂಗ್ ಲೈಸೆನ್ಸ್ ನಂಬರ್ , ಬ್ಯಾ೦ಕ್ ಅಕೌ೦ಟ್ ನಂಬರ್ ಮುಂತಾದವುಗಳನ್ನು ಕೇಳಿದ್ದ. ಮಿಸಾಕಿ ಅಕ್ಬನೆ ಬೀದಿಯಲ್ಲಿನ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದಳು. ಅವಳು ಹುಟ್ಟಿದ್ದು ಹೊಕ್ಕೈಡೋ
ದ್ವೀಪದ ಜುನಿಟಾಕಿಚೊ ಎನ್ನುವ ಊರು ಮತ್ತು ಕೆಲ ದಿನಗಳ ಹಿಂದಷ್ಟೇ
ಅವಳಿಗೆ ೨೪ ವರ್ಷ ತುಂಬಿದ್ದವು.
ಹೊಕ್ಕೈಡೋ ದ್ವೀಪವಾಗಲೀ ಅದರಲ್ಲಿನ ಜುನಿಟಾಕಿಚೊ ಎನ್ನುವ
ಊರಾಗಲಿ ಎಲ್ಲಿದೆ ಎನ್ನುವದರ ಬಗ್ಗೆ ಕಾಫುಕನಿಗೆ ಎಳ್ಳಷ್ಟೂ ವಿವರ ಇರದಿದ್ದರೂ ಅವಳಿಗೆ
ಕೇವಲ ಇಪ್ಪತ್ನಾಲ್ಕು ವರ್ಷ ಎನ್ನುವದು ಅವನ
ಗಮನ ಸೆಳಿದಿತ್ತು.
ಕಾಫುಕನ ಹೆಂಡತಿ
ಕೇವಲ ಮೂರು ದಿನಗಳ ಕಾಲ
ಜೀವಿಸಿದ್ದ ಹೆಣ್ಣು ಮಗುವಿಗೆ
ಜನ್ಮ ನೀಡಿದ್ದಳು. ಹುಟ್ಟಿದ
ಮೂರನೇ ರಾತ್ರಿ ಮಗುವಿನ ಹೃದಯ ಸ್ವಲ್ಪವೂ ಸುಳಿವು
ನೀಡದೆ ಸ್ಥಬ್ದವಾಗಿತ್ತು. ಮಾರನೆಯ ದಿನ ಬೆಳಿಗ್ಗೆ ಅವರು
ಮಗುವನ್ನು ಎತ್ತಿಕೊಂಡಾಗ ಮಗುವಿನ ದೇಹ ತಣ್ಣಗೆ
ಕೊರೆಯುತ್ತಿತ್ತು. ಆಸ್ಪತ್ರೆಯವರು
ಹುಟ್ಟುವಾಗಲೇ ಮಗುವಿನ ಹೃದಯದಲ್ಲಿ ನ್ಯೂನತೆಯಿತ್ತು ಎಂದಿದ್ದರು. ಆಸ್ಪತ್ರೆಯವರ
ಮಾತನನ್ನು ಹೌದೋ ಅಲ್ಲವೋ ಎನ್ನುವದನ್ನು
ಪರೀಕ್ಷೆ ಮಾಡಲಿಕ್ಕೆ ಯಾವುದೇ ದಾರಿಯಿರಲಿಲ್ಲ. ಹಾಗಂತ
ಸಾವಿನ ನೈಜ ಕಾರಣ ಕಾಫುಕ
ಮತ್ತು ಅವನ ಹೆಂಡತಿಯ ದು:ಖವನ್ನು ಕಡಿಮೆ ಮಾಡುತಿತ್ತು ಎಂದೇನೂ ಅಲ್ಲ. ಒಳ್ಳೆಯದೋ ಕೆಟ್ಟದ್ದೋ ಅವರು ಮಗುವಿಗೆ ಯಾವುದೇ
ಹೆಸರಿಟ್ಟಿರಲಿಲ್ಲ.
ಮಗು
ಬದುಕಿದ್ದಿದ್ದರೆ ಈಗ ಅವಳಿಗೂ ಮಿಸಾಕಿಯ
ಹಾಗೆ ಇಪ್ಪತ್ನಾಲ್ಕು ವರ್ಷಗಳಾಗುತಿತ್ತು. ಪ್ರತಿ
ವರ್ಷ ಮಗು ಹುಟ್ಟಿದ ದಿನದಂದು
ಕಾಫುಕ ಅವಳ ನೆನಪಿನಲ್ಲಿ ಎರಡು
ಕೈಗಳನ್ನು ಜೋಡಿಸಿ ಮೌನವಾಗಿ ಪ್ರಾರ್ಥಿಸುವ ಮೂಲಕ ಹೆಸರಿಡುವ ಮೊದಲೇ
ತೀರಿಕೊಂಡ ಪುಟ್ಟ ಹೃದಯವನ್ನು ನೆನಪಿಸಿಕೊಳ್ಳುತ್ತಿದ್ದ. ಆಮೇಲೆ
ಬದುಕಿದಿದ್ದರೆ ಈಗ ಅವಳಿಗೆ ಎಷ್ಟು
ವರ್ಷಗಳಾಗಿರುತ್ತಿದ್ದವು ಎಂದು ಲೆಕ್ಕ ಹಾಕುತ್ತಿದ್ದ
.
ಮಗುವಿನ
ಹಠಾತ್ ಸಾವು ಕಾಫುಕ ಮತ್ತವನ
ಹೆಂಡತಿಯನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ಈ ಆಘಾತದಿಂದ ಹೊರಬರಲು
ಅವರು ಸಾಕಷ್ಟು ಸಮಯವನ್ನು ತೆಗೆದುಕೊಂಡರು. ಬಹುತೇಕ ಸಮಯವನ್ನು ಅವರು ಅಪಾರ್ಟ್ ಮೆ೦ಟಿನ
ಮುಚ್ಚಿದ ಬಾಗಿಲಿನ ಏಕಾಂತದಲ್ಲಿ ಕಳೆಯುತ್ತಿದ್ದರು. ಮಾತು ಅವರ ದು:ಖವನ್ನು ಅಗ್ಗಗೊಳಿಸುತ್ತವೆಯೇನೋ
ಎನ್ನುವ ಹಾಗೆ ಅವರು ಮೌನಿಗಳಾದರು.
ಅವಳು ಎಡಬಿಡದೆ ವೈನನ್ನು ಕುಡಿಯಲು ಶುರುಮಾಡಿದರೆ ಅವನು ಸದಾ ಕಾಲ
ಕ್ಯಾಲಿಗ್ರಾಫಿಯಲ್ಲಿ ಮುಳುಗಿರುತ್ತಿದ್ದ. ಪೆನ್ನಿನ ಚೂಪು ತುದಿಯಿಂದ ಹೊರಬರುತ್ತಿದ್ದ
ಕಪ್ಪು ಶಾಯಿ ಅವನ ಹೃದಯದ
ದು:ಖವನ್ನು ಕಾಗದದ ಮೇಲೆ ಶಬ್ದಗಳಾಕಾರದಲ್ಲಿ ಚಿತ್ರಿಸುತ್ತಿದ್ದವೇನೋ
ಎನ್ನುವಂತೆ ತೀವ್ರವಾಗಿ ಬರೆಯುತ್ತಿದ್ದ.
ಒಟ್ಟಿನಲ್ಲಿ
ಒಬ್ಬರಿಗೊಬ್ಬರು ಆಸರೆಯಾಗುತ್ತ ನಿಧಾನವಾಗಿ ಅವರು ಮಗುವಿನ ಸಾವನ್ನು
ಹಿಂದಕ್ಕೆ ತಳ್ಳಲಾರಂಭಿಸಿದರು. ಕೆಲಸದ ಮೇಲೆ ಅವರ ಗಮನ
ಇನ್ನಷ್ಟು ತೀವ್ರವಾಯಿತು.
ಹೊಸ ಪಾತ್ರಗಳು ಅಭಿನಯಿಸುವಾಗ ಪಾತ್ರದ ಆಳಕ್ಕಿಳಿದು ಪ್ರತಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸುತ್ತಿದ್ದರು. ಅವಳು
ಇನ್ನೊಮ್ಮೆ ಮಗು ಬೇಡವೆಂದಳು. ಕಾಫುಕ
ಮರು ಮಾತನಾಡದೆ ಒಪ್ಪಿದ.
ಈಗ ಹಿಂದಿನದೆಲ್ಲ ನೆನಪಿಸಿಕೊಂಡರೆ ಅನ್ನಿಸುತ್ತದೆ - ಮಗು ತೀರಿದ ದುರ್ಬಲ
ಕ್ಷಣದಲ್ಲೇ ಅವನ ಹೆಂಡತಿಗೆ ಇನ್ನೊಂದು
ಸಂಬಂಧ ಶುರುವಾಗಿದ್ದಿರಬೇಕು. ಪ್ರಾಯಶ: ಮಗುವಿನ ಮರಣದ ಸಂಕಟ ಅವಳಲ್ಲಿನ ಸುಪ್ತ ಕಾಮವನ್ನು ಬಡಿದೆಬ್ಬಿಸಿರಬೇಕು. ಆದರೆ ಅದು ಕೇವಲ
ಅವನ ಊಹೆ ಮಾತ್ರ.
ನಾನೊಂದು
ವಿಷಯ ಕೇಳಬಹುದೇ ? " ಮಿಸಾಕಿ ಕೇಳಿದಳು
ಕಾಫುಕ
ಕಿಟಕಿಯ ಮೂಲಕ ಹೊರಗಿನ ದೃಶ್ಯಗಳನ್ನು
ನೋಡುತ್ತಾ ಯಾವುದೋ ಯೋಚನೆಯಲ್ಲಿ ಮುಳುಗಿದ್ದ. ಅವನು ಆಶ್ಚರ್ಯ
ಚಕಿತನಾಗಿ ಅವಳೆಡೆಗೆ ತಿರುಗಿದ. ಅವಳು ಕೆಲಸಕ್ಕೆ ಸೇರಿದ ಕಳೆದ
ಎರಡು ತಿಂಗಳುಗಳಲ್ಲಿ ಇದೆ ಮೊದಲ ಸಲ
ಅವಳಾಗಿಯೇ ಮಾತನ್ನು ಆರಂಭಿಸಿದ್ದಿರಬೇಕು.
"ಸರಿ"
ಕಾಫುಕ
"ನೀನ್ಯಾಕೆ
ನಟನಾಗಿದ್ದು"?
"ನಾನು
ಕಾಲೇಜಿನಲ್ಲಿದ್ದಾಗ ನನ್ನ ಗೆಳತಿಯೊಬ್ಬಳು
ಅವಳ ನಾಟಕದ ತಂಡಕ್ಕೆ ಸೇರುವಂತೆ ಆಹ್ವಾನಿಸಿದ್ದಳು. ನಿಜ ಹೇಳಬೇಕೆಂದರೆ ನನಗೆ
ಬೇಸ್ ಬಾಲ್ ಆಟಗಾರನಾಗಬೇಕು ಎಂದಿತ್ತು.
ಆದರೆ ಕಾಲೇಜಿನ ಬೇಸ್ ಬಾಲ್ ತಂಡಕ್ಕೆ
ಆಯ್ಕೆಯಾಗುವಷ್ಟು ಕೌಶಲ್ಯ ನನ್ನಲ್ಲಿರಲಿಲ್ಲ. ಆದರೇನು ಬೇಸ್ ಬಾಲ್ ಇಲ್ಲದಿದ್ದರೆ
ಇನ್ನೊಂದು. ಅಲ್ಲದೇ ನನಗೆ ಆ ಹುಡುಗಿಯ
ಜೊತೆಗಿರುವದು ಇಷ್ಟವಾಗಿತ್ತು. ಹೀಗಾಗಿ ನಾಟಕದಲ್ಲಿ ಪಾತ್ರವಹಿಸಲು ಒಪ್ಪಿಕೊಂಡೆ. ನಟಿಸಲು ಶುರುಮಾಡಿದ ಸ್ವಲ್ಪ ದಿನಗಳಲ್ಲೇ ನಾನು ನಟನೆಯನ್ನು ಇಷ್ಟಪಡಲಾರಂಭಿಸಿದೆ.
ನಟನೆ ನಾನಲ್ಲದ ಇನ್ನೊಬ್ಬನಾಗುವ ಅವಕಾಶ ಕೊಡುತಿತ್ತು ಮತ್ತು ಒಮ್ಮೆ ನಾಟಕ ಮುಗಿದ ಕೊಡಲೇ
ನಾನಲ್ಲದ ಇನ್ನೊಬ್ಬನಿಂದ ಮತ್ತೆ ನಾನು ಬಿಟ್ಟು ಹೋದ
ನಾನು ಆಗಬಹುದು.
"ನೀನಲ್ಲದ ಇನ್ನೊಬ್ಬನಾಗುವದು ನಿನಗೆ ಇಷ್ಟವಾಗುತಿತ್ತೋ ?""
"ಹೌದು
, ಎಲ್ಲಿಯವರೆಗೆ ಮತ್ತೆ
ನಾನಾಗಿ ವಾಪಸಾಗಬಹುದೋ ಅಲ್ಲಿಯವರೆಗೆ"
"ಯಾವತ್ತಾದರೂ
ಮತ್ತೆ ವಾಪಸು ಹೋಗುವದು ಬೇಡವೆಂದು ಅನ್ನಿಸಿತ್ತಾ ? "
ಕಾಫುಕ
ಒಂದು ಕ್ಷಣ ಸುಮ್ಮನಾದ. ಇಲ್ಲಿಯವರೆಗೆ
ಅವನಿಗೆ ಇಂತಹ ಪ್ರಶ್ನೆಯನ್ನು ಯಾರೂ
ಕೇಳಿರಲಿಲ್ಲ. ಅವರು ಟೋಕಿಯೋ ನಗರದ
ಮುಖ್ಯರಸ್ತೆಯ ಕಡೆಗೆ ಹೋಗುತ್ತಿದ್ದರು. ರಸ್ತೆ ವಾಹನಗಳಿಂದ ತುಂಬಿತ್ತು.
"ಬೇರೆಡೆಗೆ
ಹೋಗಲಿಕ್ಕೆ ಬೇರೆ
ಯಾವ ಸ್ಥಳವೂ ಇಲ್ಲ,
ಅಲ್ಲವೇ ? "ಕಾಫುಕ ಕೇಳಿದ
ಮಿಸಾಕಿ
ಉತ್ತರಸಲಿಲ್ಲ.
ಮತ್ತೆ
ಹಲವಷ್ಟು ಸಮಯ ಇಬ್ಬರೂ ಮೌನವಾಗಿ
ರಸ್ತೆಯನ್ನು ದಿಟ್ಟಿಸಿದರು. ಕಾಫುಕ ತಲೆಯ ಮೇಲಿದ್ದ ಬೇಸ್
ಬಾಲ್ ಕ್ಯಾಪನ್ನು ಒಮ್ಮೆ ತೆಗೆದು ಅದರ ಆಕಾರವನ್ನು ಪರೀಕ್ಷಿಸುವಂತೆ
ಕಣ್ಣಾಡಿಸಿದ. ಅವರ ಕಾರಿನ ಪಕ್ಕದಲ್ಲಿ
ಬೃಹಾದಾಕಾರದ ಟ್ರ್ಯಾಕ್ಟರ್ ನಿಂತಿತ್ತು.
"ಬಹುಶ:
ನಾನು ಎಲ್ಲೆಯನ್ನು ಮೀರುತ್ತಿರಬಹುದು " ಮಿಸಾಕಿ ನುಡಿದಳು 'ಆದರೆ ಹಲವಷ್ಟು ದಿನಗಳಿಂದ
ಈ ಪ್ರಶ್ನೆ ನನ್ನ ತಲೆಯಲ್ಲಿದೆ. ನಾನು
ಕೇಳಬಹುದೇ ?"
"ಕೇಳು"
ಕಾಫುಕ
"ನಿನಗೆ
ಯಾಕೆ ಯಾರು ಸ್ನೇಹಿತರಿಲ್ಲ ? "
ಕಾಫುಕ
ಪ್ರಶ್ನಾರ್ಥಕವಾಗಿ ಅವಳ ಮುಖವನ್ನು ದಿಟ್ಟಿಸಿದ
"ನನಗೆ ಯಾರು ಸ್ನೇಹಿತರಿಲ್ಲವೆಂದು ನಿಂಗೆ ಹೇಗೆ
ಗೊತ್ತು ?"
ಮಿಸಾಕಿ
ಹೆಗಲು ಕುಣಿಸಿದಳು . "ಇಷ್ಟು ದಿನವಾಯ್ತು ನಿನ್ನ ಕಾರಿಗೆ ಡ್ರೈವರ್ ಆಗಿ, ಅಷ್ಟೂ ತಿಳಿಯದೆ"
ಕೆಲ
ಕ್ಷಣ ಕಾಫುಕ ಪಕ್ಕದಲ್ಲಿದ್ದ ಟ್ರ್ಯಾಕ್ಟರಿನ ಅಗಲ ಚಕ್ರಗಳನ್ನು ತದೇಕ
ದಿಟ್ಟಿಸಿದ. "ಆತ್ಮೀಯ ಸ್ನೇಹಿತರು ಎಂದು ಬಹಳಷ್ಟು ಜನರಿಲ್ಲ. ಯಾಕೋ
ಗೊತ್ತಿಲ್ಲ."
"ನೀನು
ಚಿಕ್ಕವನಾಗಿದ್ದಾಗಲಿಂದಲೂ ಹೀಗೆಯಾ?"
"ಉಹೂ೦
ನಾನು ಸಣ್ಣವನಾಗಿದ್ದಾಗ ನನಗೆ ತುಂಬಾ ಜನ
ಸ್ನೇಹಿತರಿದ್ದರು. ಆದರೆ ದೊಡ್ಡವನಾದಂತೆಲ್ಲ, ಇನ್ನೂ
ನಿರ್ದಿಷ್ಟವಾಗಿ ಹೇಳಿಬೇಕೆಂದರೆ ಮದುವೆಯಾದ ಮೇಲೆ ಸ್ನೇಹಿತರ
ಅವಶ್ಯಕತೆ ಇದೆ ಅನ್ನಿಸಲಿಲ್ಲ. "
"ಅಂದರೆ
ಹೆಂಡತಿಯಿರುವದರಿಂದ ನಿನಗೆ ಸ್ನೇಹಿತರು ಬೇಕು ಅನ್ನಿಸಲೇ ಇಲ್ಲವೇ
?"
"ಹೌದು.
ಇಷ್ಟಕ್ಕೂ ನಾನು ಮತ್ತು ಅವಳು
ಅತ್ಯುತ್ತಮ ಸ್ನೇಹಿತರೂ ಕೂಡ"
"ಮದುವೆಯಾದಾಗ
ನಿನಗೆ ವಯಸ್ಸೆಷ್ಟಾಗಿತ್ತು"
"ಮೂವತ್ತು.
ನಾನು ಮತ್ತು ಅವಳು ಒಂದೇ
ಸಿನಿಮಾದಲ್ಲಿ ನಟಿಸುತ್ತಿದ್ದೆವು. ಅವಳಿಗೆ ಮುಖ್ಯ ಪಾತ್ರವಿತ್ತು. ನನಗೆ ಒಂದು ಸಣ್ಣ
ಪಾತ್ರ"
ವಾಹನ
ದಟ್ಟಣೆ ಕಡಿಮೆಯಾದಂತೆ ತೋರಿತು. ಕಾರು ನಿಧಾನವಾಗಿ ಮುಂದಕ್ಕೋಡಿತು.
ಕಾರಿನ ಮೇಲ್ಚಾವಣಿಯನ್ನು ಕೆಳಗಿಳಿಸಿದ್ದರು.
"ನೀನು
ಯಾವತ್ತೂ ಕುಡಿಯುವದೇ ಇಲ್ಲವೇ ?" ಕಾಫುಕ ವಿಷಯವನ್ನು ಬದಲಾಯಿಸಿದ
"ನನ್ನ
ದೇಹಕ್ಕೆ ಆಲ್ಕೋಹಾಲ್ ಆಗುವದಿಲ್ಲ" ಮಿಸಾಕಿ ಉತ್ತರಿಸಿದಳು. "ಅಲ್ಲದೆ ನನ್ನಮ್ಮ ಅತಿಯಾಗಿ ಕುಡಿಯುತ್ತಿದ್ದಳು ನಾನು
ಕುಡಿಯದೆ ಇರುವದಕ್ಕೆ ಬಹುಶ:
ಅದು ಒಂದು ಕಾರಣವಿರಬಹುದು. "
"ಅವಳ
ಕುಡಿತದ ತೊಂದರೆ ಈಗಲೂ ಇದೆಯೇ ? " ಕಾಫುಕ
ಮಿಸಾಕಿ
ಅಡ್ಡಡ್ಡ ತಲೆಯಾಡಿಸಿದಳು. " ನನ್ನ ತಾಯಿ ಸತ್ತು
ಹೋಗಿದ್ದಾಳೆ. ಒಂದು ದಿನ ಅತಿಯಾಗಿ
ಕುಡಿದು ಕಾರನ್ನು ಚಲಾಯಿಸುವಾಗ ಅಪಘಾತವಾಗಿ ಸ್ಥಳದಲ್ಲೇ ಮೃತಪಟ್ಟಳು. ನನಗಾಗ ಹದಿನೇಳು ವರ್ಷ"
"ಅಯ್ಯೋ,
ಹಾಗಬಾರದಿತ್ತು" ಕಾಫುಕ ಖೇದ ವ್ಯಕ್ತಪಡಿಸಿದ
"ಮಾಡಿದ
ಮೇಲೆ ಪ್ರತಿಫಲ ಅನುಭವಿಸಲೇ ಬೇಕು" ಮಿಸಾಕಿ ಯಾವುದೇ ಭಾವನೆಯನ್ನು ವ್ಯಕ್ತಪಡಿಸದೆ ನುಡಿದಳು. "ಒಂದಲ್ಲಒಂದು ದಿನ ಹಾಗೆ ಸಾಯುತ್ತಾಳೆ ಎನ್ನುವದು
ನನಗೆ ಖಾತ್ರಿಯಿತ್ತು. ಆದರೆ ಯಾವಾಗ
ಎನ್ನುವದು ಗೊತ್ತಿರಲಿಲ್ಲ"
ಅವರು
ಕ್ಷಣಕಾಲ ಮೌನವಾಗಿ ಕುಳಿತರು.
"ಮತ್ತೆ
ನಿನ್ನ ಅಪ್ಪ ?"
ಅವನು
ಎಲ್ಲಿದ್ದಾನೆ ಎನ್ನುವದು ನನಗೆ ಗೊತ್ತಿಲ್ಲ.
ನನಗೆ ಎಂಟು ವರ್ಷವಾಗಿದ್ದಾಗ ಅವನು
ಮನೆ ಬಿಟ್ಟು ಹೋದ. ಮತ್ತೆ ಯಾವತ್ತೂ
ಅವನ ಬಗ್ಗೆ ಯಾವ ವಿಷಯವೂ ನಮಗೆ
ತಿಳಿಯಲಿಲ್ಲ. ಅಪ್ಪ ಮನೆ ಬಿಟ್ಟಿದ್ದಕ್ಕೆ
ನಾನೇ ಕಾರಣ
ಎಂದು ಅಮ್ಮ ಪ್ರತಿ ದಿನ
ನನ್ನನ್ನು ದೂಷಿಸುತ್ತಿದ್ದಳು "
"ಯಾಕೆ
?"
"ನಾನು
ಅವರಿಬ್ಬರ ಒಬ್ಬಳೇ ಮಗು.
ಅಮ್ಮನ ಪ್ರಕಾರ ನಾನು
ಸುಂದರವಾಗಿಲ್ಲ. ಇಲ್ಲದಿದ್ದರೆ ಅಪ್ಪ ನಮ್ಮನ್ನು ಯಾವತ್ತಿಗೂ
ಬಿಟ್ಟು ಹೋಗಿತ್ತಿರಲಿಲ್ಲ. ನಾನು ಹುಟ್ಟು ಕುರೂಪಿಯಾಗಿದ್ದೇ
ಅಪ್ಪ ಮನೆ ಬಿಟ್ಟದ್ದಕ್ಕೆ ಕಾರಣ"
"ನೀನೇನೂ
ಕುರೂಪಿಯಲ್ಲ. ಆದರೆ ನಿನ್ನ ಅಮ್ಮನಿಗೆ
ಮಾತ್ರ ಹಾಗೆ ಅನಿಸಿರಬಹುದು"
ಮಿಸಾಕಿ
ಹೆಗಲು ಕುಣಿಸಿದಳು. "ಅಮ್ಮ ಯಾವಾಗಲೂ ಹಾಗೆ ಹೇಳುತ್ತಿರಲಿಲ್ಲ.
ಅವಳು ಅತಿಯಾಗಿ ಕುಡಿದಾಗ ಮಾತ್ರ ಈ ರೀತಿಯ ಚುಚ್ಚು
ನುಡಿಗಳನ್ನು ಮತ್ತೆ ಮತ್ತೆ ಆಡುತ್ತಿದ್ದಳು. ನನಗೆ ನೋವಾಗುತ್ತಿತ್ತು. ನಾನು
ಹೀಗೆ ವಿಚಾರ ಮಾಡುವದು ತಪ್ಪೇನೋ, ಆದರೆ ಅವಳು ಸತ್ತಾಗ
ನನಗೆ ಒಂದು ರೀತಿಯ ನೆಮ್ಮದಿ
ಅನಿಸಿತ್ತು.
ಇಬ್ಬರು
ಒಂದು ಸುದೀರ್ಘ ಮೌನದ ಮೊರೆ ಹೊಕ್ಕರು.
"ನಿನಗೆ
ಸ್ನೇಹಿತರಿದ್ದಾರೆಯೇ ?
" ಕಾಫುಕ ವಿಚಾರಿಸಿದ.
"ಒಬ್ಬರೂ ಇಲ್ಲ"
ಮಿಸಾಕಿ
"ಯಾಕೆ
?"
ಅವಳು ಉತ್ತರಿಸಿಲ್ಲ. ದೃಷ್ಟಿಯನ್ನೆಲ್ಲ
ರಸ್ತೆಯ ಮೇಲೆ ಕೇಂದ್ರೀಕರಿಸಿ ಕಾರನ್ನು
ಮುಂದಕ್ಕೆ ಓಡಿಸಿದಳು.
ಕಾಫುಕ
ಕಣ್ಮುಚ್ಚಿ ಸಣ್ಣ ನಿದ್ರೆಯನ್ನು ಮಾಡಲು
ಯತ್ನಿಸಿದ. ಆದರೆ ನಿದ್ರೆ ಹತ್ತಿರವೆಲ್ಲೂ
ಸುಳಿಯಲಿಲ್ಲ. ಕಾರು ಸ್ವಲ್ಪ ಮುಂದಕ್ಕೆ ಚಲಿಸುವದು ಮತ್ತೆ ನಿಲ್ಲುವದು ಕಣ್ಮುಚ್ಚಿದ ಅವನ ಅನುಭವಕ್ಕೆ ಬಂದಿತು.
ಪಕ್ಕದಲ್ಲಿದ್ದ ಟ್ರ್ಯಾಕ್ಟರ್ ಸ್ವಲ್ಪ ಮುಂದಕ್ಕೆ ಹೋಗಿ ಮತ್ತೆ ನಿಂತಿತು.
ಅದರ ಬೃಹಾದಾಕಾರದ ನೆರಳು ಯಾವುದೋ ನಿಯತಿಯಂತೆ ಅವರ ಕಾರನ್ನು ಆವರಿಸಿತ್ತು.
ಕಾಫುಕ
ನಿದ್ರೆ ಮಾಡುವ ವ್ಯರ್ಥ ಪ್ರಯತ್ನವನ್ನು ಕೈಬಿಟ್ಟ. "ನಾನು ಕೊನೆಯದಾಗಿ ಬೇರೊಬ್ಬರೊಟ್ಟಿಗೆ
ಸ್ನೇಹ ಬೆಳೆಸಿದ್ದು
ಹತ್ತು ವರ್ಷಗಳ ಹಿಂದೆ." ಕಣ್ಣು ಬಿಡುತ್ತ ಅವನು ಹೇಳಿದ. "ಬಹುಶ:
ಸ್ನೇಹಿತನ ಹಾಗೆ ಎನ್ನುವದು ಸರಿಯೇನೋ?
ಅವನು ನನಗಿಂತ ಆರೋ ಏಳೋ ವರ್ಷಕ್ಕೆ
ಚಿಕ್ಕವನು. ಒಳ್ಳೆ ಮನುಷ್ಯ. ಅವನಿಗೆ ಕುಡಿಯುವದು ಅತ್ಯಂತ ಪ್ರಿಯವಾದ ಕೆಲಸವಾಗಿತ್ತು. ಹಾಗಾಗಿ ನಾವು ಸಾಕಷ್ಟು ಸಲ
ಕುಡಿಯುತ್ತ ಹರಟೆ ಹೊಡೆಯುತ್ತಿದ್ದೆವು "
ಮಿಸಾಕಿ
ತಲೆಯಾಡಿಸಿದಳು. ಕಾಫುಕ ಒಂದು ಕ್ಷಣ ಮಾತನ್ನು
ಮುಂದುವರೆಸಲು ಹಿಂಜರಿದ.
"ನಿಜ
ಹೇಳಬೇಕು ಎಂದರೆ ಅವನು ನನ್ನ ಹೆಂಡತಿಯ
ಪ್ರಿಯಕರರಲ್ಲಿ ಒಬ್ಬನಾಗಿದ್ದ. ಆ ವಿಷಯ
ನನಗೆ ಗೊತ್ತಿದೆ ಎನ್ನುವದರ ಬಗ್ಗೆ ಅವನಿಗೆ ಅರಿವಿರಲಿಲ್ಲ. "
ಕಾಫುಕ
ಹೇಳಿದ ಈ ವಿಷಯವನ್ನು ಜೀರ್ಣಿಸಿಕೊಳ್ಳಲು
ಮಿಸಾಕಿ ಸಾಕಷ್ಟು ಸಮಯ ಬೇಕಾಯಿತು. " ಅಂದರೆ
ಆ ಮನುಷ್ಯ ನಿನ್ನ ಹೆಂಡತಿಯೊಟ್ಟಿಗೆ ಮಲಗಿದವನು"
"ಹೌದು.
ಬಹುಶ: ಅವನಿಗೆ ನನ್ನ ಹೆಂಡತಿಯೊಟ್ಟಿಗೆ ಐದು
ಆರು ತಿಂಗಳ ಕಾಲ ಸಂಬಂಧವಿತ್ತೇನೋ "
"ನಿನಗೆ
ಹೇಗೆ ಗೊತ್ತು ?"
"ನನ್ನ
ಹೆಂಡತಿಯೇನೂ ಈ
ವಿಷಯವನ್ನು ಬಾಯಿ ಬಿಟ್ಟು ಹೇಳಿರಲಿಲ್ಲ.
ಆದರೆ ಅದು ಹೇಗೋ ನನಗೆ
ಈ ವಿಷಯ ಅರಿವಿಗೆ ಬಂದಿತ್ತು.
ಹೇಗೆ ಅನ್ನುವದನ್ನು ವಿವರಿಸಲು ತುಂಬಾ ಸಮಯವೇ ಬೇಕಾದೀತು. ಒಬ್ಬರೊಟ್ಟಿಗೆ ದೀರ್ಘಕಾಲ ಬಾಳ್ವೆ ಮಾಡಿದರೆ ಅದು ಗೊತ್ತಾಗುತ್ತದೆ.
ಆದರೆ ಒಂದಂತೂ ನಿಜ, ಅದು ಕೇವಲ
ನನ್ನ ಕಲ್ಪನೆಯಾಗಿರಲಿಲ್ಲ "
ಕಾರನ್ನು
ಸಿಗ್ನಲಿನ ಬಳಿ ನಿಲ್ಲಿಸಿದಾಗ ಮಿಸಾಕಿ
ಕಾರಿನ ಕನ್ನಡಿಯನ್ನು ಸರಿ ಪಡಿಸಿದಳು. "ಆ
ವಿಷಯ ನಿಮ್ಮ ಸ್ನೇಹಕ್ಕೆ ಅಡ್ಡಿಯಾಗಲಿಲ್ಲವೇ ?"
"ಒಂದರ್ಥದಲ್ಲಿ
ಅದಕ್ಕೆ ವಿರುದ್ಧವಾದದ್ದು. " ಕಾಫುಕ
ಹೇಳಿದ. "ನಾನು ಅವನನೊಟ್ಟಿಗೆ ಸ್ನೇಹ
ಬೆಳೆಸಿದ್ದೆ ಅವನು ನನ್ನ ಹೆಂಡತಿಯೊಟ್ಟಿಗೆ
ಮಲಗಿದ್ದಕ್ಕಾಗಿ "
ಮಿಸಾಕಿ
ಮಾತನಾಡಲಿಲ್ಲ. ಅವಳು ಅವನು ಮುಂದುವರೆಸಲಿ
ಎಂದು ಕಾಯ್ದಳು.
"ನನಗೆ
ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಹೆಂಡತಿ ಯಾಕೆ
ಅವನೊಟ್ಟಿಗೆ ಮಲಗುತ್ತಿದ್ದಾಳೆ, ಅವನನ್ನೇ ಯಾಕೆ ಆರಿಸಿಕೊಂಡಳು ಎನ್ನುವದನ್ನು
ಅರ್ಥ ಮಾಡಿಕೊಳ್ಳಲು ಬಯಸುತ್ತಿದ್ದೆ. ಕನಿಷ್ಠಪಕ್ಷ ನಮ್ಮ
ಪರಿಚಯದ ಆರಂಭದಲ್ಲಿ ಅದು ನನ್ನ ಉದ್ದೇಶವಾಗಿತ್ತು.
"
ಮಿಸಾಕಿ
ದೀರ್ಘವಾಗಿ ಉಸಿರೆಳೆದುಕೊಂಡಳು. ಅವಳ ಎದೆ ಜಾಕೆಟಿನಿಂದ
ಮೇಲಕ್ಕೇರಿ ಕೆಳಕ್ಕಿಳಿಯಿತು. " ಕಷ್ಟವಲ್ಲವೇ ? ಹೆಂಡತಿಯೊಟ್ಟಿಗೆ ಮಲಗಿದವನ ಜೊತೆ ಕುಡಿಯುವದು, ಹರಟೆ
ಹೊಡೆಯುವದು ?"
"ಖಂಡಿತವಾಗಿಯೂ
ಅದು ಸುಲಭದ ಕೆಲಸವಲ್ಲ " ಕಾಫುಕ ನುಡಿದ . "ನಾನು ಮರೆತುಬಿಡಬೇಕೆಂದುಕೊಂಡ ವಿಷಯಗಳನ್ನು ಮತ್ತೆ
ಆಲೋಚಿಸಬೇಕಾಯಿತು. ನಾನು ಹೂತು ಹಾಕಿದ
ನೆನಪುಗಳನ್ನು ಮತ್ತೆ ಹೊರಗೆಳೆಯಬೇಕಾಯಿತು. ಆದರೆ ನಾನು ನಟಿಸುತ್ತಿದ್ದೆ.
ಏನೇ ಅಂದರೂ ನಟಿಸುವದು ನನ್ನ ವೃತ್ತಿಯಲ್ಲವೇ ?"
"ನೀನಲ್ಲದ
ಬೇರೊಬ್ಬರಾಗುವದು" ಮಿಸಾಕಿ
"ಹೌದು"
"ಆಮೇಲೆ
ಮತ್ತೆ ನೀನಾಗುವದು "
"ನಿಜ"
ಕಾಫುಕ ಹೇಳಿದ. "ನಾವು ಇಷ್ಟಪಡುತ್ತೇವೋ ಇಲ್ಲವೋ,
ಆದರೆ ನಾವು ಮರಳಿದ ಜಾಗ
ಯಾವತ್ತಿಗೂ ನಾವು ಬಿಟ್ಟುಹೋದ ಸ್ಥಳಕ್ಕಿಂತ
ಸ್ವಲ್ಪವಾದರೂ ಭಿನ್ನವಾಗಿರುತ್ತದೆ. ಅದು
ನಿಯಮ. ಎರಡು ಜಾಗಗಳು ಯಾವತ್ತಿಗೂ
ಒಂದೇ ಸಮನಾಗಿರಲು ಸಾಧ್ಯವಿಲ್ಲ"
ಮಳೆ
ಸುರಿಯಲು ಪ್ರಾರಂಭವಾಯಿತು. ಮಿಸಾಕಿ ಕಾರಿನ ವೈಪರ್ ಗಳನ್ನು ಹಾಕಿದಳು.
" ಕೊನೆಗಾದರೂ ವಿಷಯ ಗೊತ್ತಾಯಿತೇ : ನಿನ್ನ
ಹೆಂಡತಿ ಅವನೊಟ್ಟಿಗೆ ಮಲಗಿದ್ದು ಯಾಕೆಂದು ? "
"ಇಲ್ಲ
" ಕಾಫುಕ ತಲೆಯಾಡಿಸಿದ. " ಕೊನೆಗೂ ಅದೊಂದು ವಿಷಯ ತಿಳಿಯಲಿಲ್ಲ . ನನ್ನಲ್ಲಿಲ್ಲದ
ಕೆಲವು ಗುಣಗಳು ಅವನಲ್ಲಿದ್ದವು. ಆದರೆ ಅವುಗಳಲ್ಲಿ ಯಾವ
ಗುಣ ನನ್ನ ಹೆಂಡತಿಯನ್ನು ಆಕರ್ಷಿಸಿತ್ತು
ಎಂದು ತಿಳಯಲಿಲ್ಲ. ನಮ್ಮ ಎಲ್ಲ ಕ್ರಿಯೆಗಳಿಗೂ
ಕಾರಣಗಳಿರುವದಿಲ್ಲ. ಈ ಕೆಲಸವನ್ನು
ಇಂತಹದೇ ಕಾರಣಕ್ಕೆ ಮಾಡಿದೆ ಎಂದು ಪ್ರತಿ ಬಾರಿಯೂ
ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಗಂಡು ಹೆಣ್ಣುಗಳ ಸಂಬಂಧವೂ
ಹಾಗೆ , ಎಲ್ಲ ಬಾರಿಯೂ ಅಂತಹ ಕಟ್ಟುನಿಟ್ಟಾಗಿರುವದಿಲ್ಲ. ಹಲವಷ್ಟು ಬಾರಿ
ಈ ಸಂಬಂಧದ ಎಳೆಗಳು ಸ್ವಯಂ ಕೇಂದ್ರಿತವಾಗಿರುತ್ತವೆ. "
ಮಿಸಾಕಿ
ಒಂದು ಕ್ಷಣ ಯೋಚಿಸಿದಳು. "ಆದರೂ
ಕಾರಣ ಏನೆಂದು ತಿಳಿಯದಿದ್ದರೂ ಕೊನೆಯವರೆಗೂ ನೀನು ಅವನೊಟ್ಟಿಗೆ ಸ್ನೇಹವನ್ನು
ಉಳಿಸಿಕೊಂಡೆಯಲ್ಲವೇ ?
"
ಕಾಫುಕ
ತಲೆಯ ಮೇಲಿದ್ದ ಕ್ಯಾಪನ್ನು ತೆಗೆದು ಒಂದು ಕ್ಷಣ ಸವರಿ
ಮಡಿಲಲ್ಲಿ ಇಟ್ಟುಕೊಂಡ. "ಅದನ್ನು
ವಿವರಿಸುವದು ಕಷ್ಟ" ತಲೆಯನ್ನು
ಸವರುತ್ತ ನುಡಿದ. "ಒಂದು ಸಲ ಪಾತ್ರದಾಳಕ್ಕೆ
ಇಳಿದರೆ ಮತ್ತೆ ಅದರಿಂದ ಹೊರಬರಲು ಸರಿಯಾದ ಸಂದರ್ಭ ಸಿಗುವದು ಕಷ್ಟ. ಪಾತ್ರವೊಂದರ ಪರಿಧಿ ನಿನ್ನ ಭಾವನೆಗಳನ್ನು ಎಷ್ಟೇ ಘಾಸಿಗೊಳಿಸುತ್ತಿದ್ದರೂ ಪಾತ್ರದೊಟ್ಟಿಗಿನ ಪ್ರವಾಹದಲ್ಲಿ ಒಂದಾಗಿ, ಪಾತ್ರಕ್ಕೆ ತನ್ನದೇ ಆದ ಸ್ವರೂಪ ಸಿಗುವವರೆಗೆ
ಕಾಯುಬೇಕು. ಆಗಲೇ ಪಾತ್ರದ ನಿಜವಾದ
ಅರ್ಥ ವಿಸ್ತಾರ ಗೋಚರವಾಗುತ್ತದೆ. ಅದು ಸಂಗೀತದಂತೆ.
ಸಂಗೀತವೊಂದು ಕೊನೆ ತಲುಪಬೇಕಾದರೆ
ಮೊದಲೇ ನಿರ್ಧರಿಸಿದ ರಾಗವೊಂದರ ತುತ್ತತುದಿಯ ಶೃ೦ಗವನ್ನು ತಲುಪಬೇಕಲ್ಲವೇ ಇದು ಹಾಗೆಯೇ.
ನಾನು ಹೇಳುವುದು ನಿನಗೆ ಅರ್ಥವಾಗುತ್ತಿದೆಯಾ?"
ಮಿಸಾಕಿ
ಜೇಬಿನಿಂದ ಸಿಗರೇಟೊಂದನ್ನು ತೆಗೆದು ತುಟಿಗಳ ನಡುವೆ ಇಟ್ಟುಕೊಂಡಳು. ಅವಳು ಸಿಗರೇಟನ್ನು ಹೊತ್ತಿಸಲಿಲ್ಲ.
ಕಾರಿನ ಮೇಲ್ಛಾವಣಿ ಮುಚ್ಚಿದ್ದಾಗ ಅವಳು ಯಾವತ್ತೂ ಸಿಗರೇಟನ್ನು
ಸೇದುತ್ತಿರಲಿಲ್ಲ.
"ನೀನು
ಆ ಮನುಷ್ಯನನ್ನು ಭೇಟಿಯಾದ ದಿನಗಳಲ್ಲಿ ಅವನು ನಿನ್ನ ಹೆಂಡತಿಯೊಟ್ಟಿಗೆ
ಮಲಗುತ್ತಿದ್ದನೆ?"
"ಇಲ್ಲ.
" ಮಿಸಾಕಿ ಉತ್ತರಿಸಿದ. "ಹಾಗೇನಾದರೂ ಆಗಿದಿದ್ದರೆ ವಿಷಯ ಇನ್ನು ಜಟಿಲವಾಗುತ್ತಿತ್ತು.
ನನ್ನ ಹೆಂಡತಿ ಸತ್ತ ಕೆಲ ದಿನಗಳ
ನಂತರವಷ್ಟೇ ನಾನು ಅವನನ್ನು
ಭೇಟಿಯಾದದ್ದು. "
"ನೀವಿಬ್ಬರೂ
ನಿಜವಾಗಿಯೂ ಸ್ನೇಹಿತರಾಗಿದ್ದೀರಾ ? ಅಥವಾ ಅದು ಕೇವಲ
ನಟನೆಯಷ್ಟೇ ಆಗಿತ್ತೆ?"
ಕಾಫುಕ
ಕೆಲ ಸೆಕೆಂಡುಗಳ ಕಾಲ ಆಲೋಚಿಸಿದ. "ಎರಡೂ
ಆಗಿತ್ತು. ನಾನು ಆ ಪಾತ್ರದೊಳಗೆ
ಅದೆಷ್ಟು ಇಳಿದಿದ್ದೆನೆಂದರೆ ಕೊನೆ ಕೊನೆಗೆ ಪಾತ್ರ
ಯಾರು, ನಿಜವಾದ ನಾನು ಯಾರು ಎನ್ನುವದನ್ನು
ಗುರುತಿಸಲು ನನಗೆ ಕಷ್ಟವಾಗುತ್ತಿತ್ತು. ಇಷ್ಟಕ್ಕೂ ನೈಜ
ಅಭಿನಯವೆಂದರೆ ಅದೇ ಅಲ್ಲವೇ ?"
ಮೊದಲಿನಿಂದಲೂ
ಕಾಫುಕನಿಗೆ ಆ ಮನುಷ್ಯನ ಬಗ್ಗೆ
ಒಂದು ರೀತಿಯ ಆಸ್ಥೆ ಬೆಳೆಯುತ್ತಿರುವದು ಲಕ್ಷ್ಯಕ್ಕೆ ಬಂದಿತ್ತು. ಎತ್ತರ ನಿಲುವಿನ , ಸ್ಪುರದ್ರೂಪಿಯಾದ ಅವನ ಹೆಸರು ತಕತ್ಸುಕಿ.
ಪ್ರಣಯ ಪಾತ್ರಗಳಿಗೆ ಹೇಳಿ ಮಾಡಿಸಿದ ರೂಪ
. ಅವನಿಗೆ
ಸುಮಾರು ನಲವತ್ತು ವರ್ಷಗಳಾಗಿತ್ತು. ಅಂತಹ ಒಳ್ಳೆಯ ಅಭಿನಯ
ಕೌಶಲ್ಯವೇನಿರಲಿಲ್ಲ. ಸಾಮಾನ್ಯವಾಗಿ ಅವನು ಒಳ್ಳೆಯ ಪಾತ್ರಗಳನ್ನೇ
ಮಾಡುತ್ತಿದ್ದ. ಮುಖದಲ್ಲಿನ ಸಣ್ಣ ವಿಷಣ್ಣತೆಯನ್ನು ಹೊರತುಪಡಿಸಿದರೆ
ಅವನದು ಉಲ್ಲಾಸಭರಿತ
ವ್ಯಕ್ತಿತ್ವವೇ. ಯಾವುದೋ ಟಿವಿ ಜಾಹಿರಾತಿನ ಸಂದರ್ಭದಲ್ಲಿ
ಕಾಫುಕನಿಗೆ ಅವನ ಭೇಟಿಯಾಗಿತ್ತು. ಕಾಫುಕ
ಹೆಂಡತಿಯ ಸಾವಿಗೆ ಸಂತಾಪ ವ್ಯಕ್ತಪಡಿಸಲು ಅವನ ಬಳಿ ತಕತ್ಸುಕಿ
ಬಂದಿದ್ದ.
"ನಿನ್ನ
ಹೆಂಡತಿ ಮತ್ತು ನಾನು ಸಿನಿಮಾವೊಂದರಲ್ಲಿ ಒಟ್ಟಿಗೆ
ಅಭಿನಯಿಸಿದ್ದೆವು. ನಾನು ಅವಳಿಗೆ ಬಹುವಾಗಿ
ಋಣಿಯಾಗಿದ್ದೇನೆ."
ಕಾಫುಕ
ಅವನಿಗೆ ಧನ್ಯವಾದಗಳನ್ನು ತಿಳಿಸಿದ. ಕಾಫುಕ ಲೆಕ್ಕ ಹಾಕಿದ ಹಾಗೆ ಅವನ
ಹೆಂಡತಿ ಸಂಬಂಧ ಬೆಳೆಸಿದವರಲ್ಲಿ ಈ ಮನುಷ್ಯನೇ ಕೊನೆಯವನು. ತಕತ್ಸುಕಿ
ಜೊತೆಗಿನ ಸಂಬಂಧ ಕೊನೆಯಾದ
ಕೆಲವೇ ದಿನಗಳ ನಂತರ ಅವಳಿಗೆ ಮೂತ್ರಕೋಶದ
ಕ್ಯಾನ್ಸರ್ ಆಗಿತ್ತು.
"ಕ್ಷಮಿಸಿ
, ನಿಮ್ಮಿ೦ದ ಒಂದು ಸಣ್ಣ
ಸಹಾಯ ಆಗಬೇಕಿತ್ತು" ಔಪಚಾರಿಕ ಮಾತುಕತೆ
ಮುಗಿದ ನಂತರ ಕಾಫುಕ ಕೇಳಿದ.
ಅವನ ಮನಸ್ಸಿನಲ್ಲಿದ್ದುದನ್ನು ಕಾರ್ಯಗತಗೊಳಿಸುವದಕ್ಕೆ ಇದು ಅವನ ಕೊನೆಯ
ಅವಕಾಶವಾಗಿತ್ತು.
"ಹೇಳಿ,
ನನ್ನಿಂದ ಏನಾಗಬೇಕು ? " ತಕತ್ಸುಕಿ
"ನಿಮಗೆ
ಅಭ್ಯ೦ತರವಿಲ್ಲದಿದ್ದರೆ, ನಿಮ್ಮ ಬಿಡುವಿನ ಸಮಯದಲ್ಲಿ ನಾವಿಬ್ಬರೂ ಭೇಟಿಯಾಗಬಹುದೇ? ಎಲ್ಲಿಯಾದರೂ ಏಕಾಂತದಲ್ಲಿ ಕುಳಿತು ಕುಡಿಯುತ್ತ, ತೀರಿಹೋದ ನನ್ನ ಹೆಂಡತಿಯನ್ನು ಜ್ಞಾಪಿಸಿಕೊಳ್ಳಬಹುದೇನೋ.
ಅವಳು ಬಹಳಷ್ಟು ಸಲ ನಿಮ್ಮ ಬಗ್ಗೆ
ಹೇಳಿದ್ದಳು. "
ತಕತ್ಸುಕಿ
ಒಂದು ಕ್ಷಣ ತಲ್ಲಣಿಸಿದ.
ಅವನು ಎಚ್ಚರಿಕೆಯಿಂದ ಕಾಫುಕನ ಮುಖವನ್ನು ದಿಟ್ಟಿಸಿದ. ಅವನು ಕಾಫುಕನ ಈ
ಅನಿರೀಕ್ಷಿತ ಆಹ್ವಾನದ ಹಿಂದಿನ ಉದ್ದೇಶವೇನಿರಬಹುದೆಂದು ಊಹಿಸಲು ಪ್ರಯತ್ನಿಸಿದ. ಆದರೆ ಕಾಫುಕನ ಮುಖದಲ್ಲಿ
ಯಾವುದೇ ಕುತ್ಸಿತ ಉದ್ದೇಶವಿರುವ ಹಾಗೆ ಕಾಣಿಸಲಿಲ್ಲ. ಅವನ
ಮುಖದಲ್ಲಿ ಬಹುಕಾಲದ ಸಂಗಾತಿಯನ್ನು ಕಳೆದುಕೊಂಡಿದ್ದ ದು:ಖದ ವಿನಃ
ಬೇರೇನಿರಲಿಲ್ಲ.
"ನಿಜ
ಹೇಳಬೇಕೆಂದರೆ ನನ್ನ ಹೆಂಡತಿಗೆ ಪರಿಚಿತರಾಗಿದ್ದ
ಯಾರೊಟ್ಟಿಗಾದರು ಮಾತನಾಡಬೇಕೆಂದು ಅಂದುಕೊಳ್ಳುತ್ತಿದ್ದೆ. ಮನೆಯಲ್ಲಿ ಒಂಟಿಯಾಗಿ ಕುಳಿತು ಅವಳ ಬಗ್ಗೆ
ಯೋಚಿಸುವದು ಕಷ್ಟಕರ ಕೆಲಸ. ನನ್ನ ಬೇಡಿಕೆಯಿಂದ ನಿಮಗೆ
ಕಸಿವಿಸಿಯಾಯಿತೇನೋ?"
"ಛೇ
ಛೇ ಹಾಗೇನು ಇಲ್ಲ. ಖಂಡಿತವಾಗಿಯೂ ನಾನು ಬಿಡುವು ಮಾಡಿಕೊಳ್ಳುತ್ತೇನೆ" ಸಣ್ಣನೆಯ
ಕಿರುನಗು ಅವನ ತುಟಿಯ ಮೇಲೆ
ಸುಳಿಯಿತು. ಕಣ್ಣಿನ
ಅಂಚಿನಲ್ಲಿ ಅನುಕಂಪ
ತುಂಬಿತ್ತು. ಆಕರ್ಷಕ
ವ್ಯಕ್ತ್ತಿತ್ವ. ತಾನೇದಾರು
ಮಧ್ಯ ವಯಸ್ಕ ಮಹಿಳೆಯಾಗಿದಿದ್ದರೆ ಈತನಿಗೆ ತಾನು ಮರುಳಾಗುತ್ತಿದ್ದೆನೇನೋ ಎಂದು ಕಾಫುಕ
ಯೋಚಿಸಿದ.
ತಕತ್ಸುಕಿ
ಒಂದು ಕ್ಷಣ ಮನಸ್ಸಿನಲ್ಲೇ ತನ್ನ
ವೇಳಾಪಟ್ಟಿಯನ್ನು ತಿರುವು ಹಾಕಿದ. " ನಾಳೆ ಸಂಜೆ ನಾನು
ಬಿಡುವಾಗಿದ್ದೇನೆ. ನಿಮಗೂ ಬಿಡುವಿದ್ದರೆ ಎಲ್ಲಿಯಾದರೂ ಭೇಟಿಯಾಗಬಹುದು"
ಕಾಫುಕ
ಒಪ್ಪಿದ. ತಕತ್ಸುಕಿಯ ಭಾವನೆಗಳನ್ನು ಸುಲಭವಾಗಿ ಊಹಿಸಬಹುದು ಎನ್ನುವದು
ಅವನಿಗೆ ಅರಿವಾಯಿತು. ಪಾರದರ್ಶಕ
ವ್ಯಕ್ತಿತ್ವ - ಈ
ಮನುಷ್ಯನ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಬಹುಶ: ಕೆಲವೇ ಕ್ಷಣದಲ್ಲಿ ಅವನ ಮನಸ್ಸಿನಲ್ಲಿರುವೆದೆನೆಂದು ಸುಲಭವಾಗಿ ಕಂಡುಹಿಡಿಯಬಹುದೆಂದು
ಕಾಫುಕನಿಗೆ ಅನಿಸಿತು.
'ಎಲ್ಲಿ
ಭೇಟಿಯಾಗೋಣ ?' ತಕತ್ಸುಕಿ ಕೇಳಿದ.
"ಯಾವ
ಜಾಗವಾದರೂ ಸರಿ. ನೀನು ಎಲ್ಲಿ
ಎಂದು ಹೇಳಿದರೆ ನಾನು ಅಲ್ಲಿಗೆ ಬರುತ್ತೇನೆ"
ಕಾಫುಕ.
ತಕತ್ಸುಕಿ
ಜಿಂಜಾದಲ್ಲಿನ ಒಂದು ಹೆಸರುವಾಸಿ ಬಾರಿನಲ್ಲಿ
ಸಿಗುವುದಾಗಿ ಹೇಳಿದ. ಅಲ್ಲಿ ಒಂದು ಏಕಾಂತದಲ್ಲಿ ಕುಳಿತು
ಕುಡಿಯುತ್ತ ಮಾತನಾಡಲು ಸಾಧ್ಯವಾಗುವಂತಹ ಟೇಬಲನ್ನು ಕಾಯ್ದಿರಿಸುವದಾಗಿ ತಿಳಿಸಿದ. ಕಾಫುಕನಿಗೆ
ಆ ಜಾಗದ ಪರಿಚಯವಿತ್ತು. ಅವರು
ಪರಸ್ಪರರ ಕೈ ಕುಲುಕಿ
,ವಿದಾಯ ಹೇಳಿ ಹೊರಡಲನುವಾದರು. ತಕತ್ಸುಕಿಯ
ಉದ್ದ ಬೆರಳಿನ ಮೃದುವಾದ ಅಂಗೈನಲ್ಲಿ ಬೆವರಿನ ಸೆಲೆಗಳೆದಿದ್ದವು. ಬಹುಶ: ಅವನು ಒತ್ತಡಕ್ಕೊಳಗಾಗಿದ್ದನೇನೋ.
ಅವನು
ಹೋದ ಎಷ್ಟೊ ಹೊತ್ತಿನ ಮೇಲೂ ಕಾಫುಕ ಗ್ರೀನ್
ರೂಮಿನಲ್ಲಿ ಕುಳಿತು ತನ್ನ ಅಂಗೈಯನ್ನು ದಿಟ್ಟಿಸುತ್ತಲೇ
ಇದ್ದ. ತಕತ್ಸುಕಿಯ
ಕೈ ಕುಲುವಿಕೆಯಿಂದಾದ ಅನುಭೂತಿ ಅವನಲ್ಲಿ ಇನ್ನು ಹಸಿಯಾಗಿತ್ತು. ಅದೇ ಕೈ, ಅದೇ
ಬೆರಳುಗಳಲ್ಲವೇ ತನ್ನ ಹೆಂಡತಿಯ ಬೆತ್ತಲೆ
ಶರೀರವನ್ನು ತಡಕಾಡಿ ಮುದ್ದಿಸಿದ್ದು. ಆ ಬೆರಳುಗಳು ನಿಧಾನವಾಗಿ
ಅವಳ ದೇಹದ ಮೂಲೆ ಮೂಲೆಯನ್ನು
ಹುಡುಕಾಡಿರಬಹುದು. ಅವನು ಕಣ್ಣು ಮುಚ್ಚಿ
ಆಳವಾಗಿ ಉಸಿರಾಡಿದ. ತಾನು ಮಾಡಲಿಕ್ಕೆ ಹೊರಟಿರುವಾದದರೂ
ಏನು ? ತಾನು ಮಾಡುತ್ತಿರುವದು ಏನೇ
ಇದ್ದರೂ ಅದಕ್ಕೆ ಹೊರತಾದ ಅನ್ಯ ಮಾರ್ಗವಿಲ್ಲವೆಂದು ಅವನಿಗೆ
ಅನಿಸಿತು.
ತಕಾತ್ಸುಕಿ ಜೊತೆ
ಬಾರಿನಲ್ಲಿ ಕುಳಿತು ವಿಸ್ಕಿಯ ಹನಿ ಗಂಟಲೊಳಗಿಳಿಯುತ್ತಿರುವಾಗ ಕಾಫುಕ ಒಂದು
ತೀರ್ಮಾನಕ್ಕೆ ಬಂದ.
ತಕಾತ್ಸುಕಿ
ಇನ್ನೂ ತನ್ನ ಹೆಂಡತಿಯನ್ನು
ಗಾಢವಾಗಿ ಹಚ್ಚಿಕೊಂಡಿದ್ದಾನೆ. ಒಂದು ಕಾಲದಲ್ಲಿ ತಾನು
ಪ್ರೀತಿಸಿದ್ದ, ಜೊತೆಗೆ ತಬ್ಬಿ ಮಲಗಿದ್ದ ರಕ್ತ ಮಾಂಸಗಳಿಂದ ತುಂಬಿದ್ದ ಸುಂದರ
ದೇಹ ಇವತ್ತು ಕೇವಲ ಬೂದಿ ಎನ್ನುವದನ್ನು
ಜೀರ್ಣಿಸಿಕೊಳ್ಳುವದು ತಕತ್ಸುಕಿಯ ಶಕ್ತಿ ಮೀರಿದ ಕಾರ್ಯವಾಗಿತ್ತು. ಕಾಫುಕ ಈ ಶೂನ್ಯವನ್ನು ಚೆನ್ನಾಗಿ ಬಲ್ಲವನಾಗಿದ್ದ. ತಕಾತ್ಸುಕಿಯ
ಕಣ್ಣುಗಳು ಅವಳ ನೆನಪಿನಿಂದ ಮಂಜಾದಾಗ
ಕಾಫುಕನಿಗೆ ಅವನನ್ನು ತಬ್ಬಿಕೊಂಡು ಸಂತೈಸಬೇಕೆನಿಸಿತ್ತು. ಅವನು ತನ್ನ ಭಾವನೆಗಳನ್ನು
ಮುಚ್ಚಿಡಲಾರದ ಮನುಷ್ಯನೆನಿಸಿತು. ಒಂದಷ್ಟು ಜಾಣ್ಮೆಯ ಪ್ರಶ್ನೋತ್ತರಗಳಿಂದ ಈ ಮನುಷ್ಯನ ಅಂತರಾಳವನ್ನು
ಹೊಕ್ಕು ಹಿಂದಿನ ಇತಿಹಾಸವನ್ನು ಕೆದಕಿ ಅವನು ಮಾಡಿದ ಕಾರ್ಯದ
ಬಗ್ಗೆ ತಪ್ಪೊಪ್ಪಿಕೊಳ್ಳುವಂತೆ ಮಾಡಬಹುದು ಎಂದು ಕಾಫುಕನಿಗೆ ಅನಿಸಿತು
ತಕತ್ಸುಕಿ
ಮಾತನಾಡಿದ್ದನ್ನು ನೋಡಿದರೆ ಕಾಫುಕನ ಹೆಂಡತಿಯೇ ಅವರಿಬ್ಬರ ಸಂಬಂಧವನ್ನು ಕೊನೆಗಾಣಿಸಿದ್ದಿರಬೇಕು. "ಮತ್ತೆ ನಾವು ಭೇಟಿಯಾಗುವದು ಬೇಡ
" ಎಂದಿರಬೇಕು ಮತ್ತು ಅವಳು ಕೊನೆಯವರೆಗೂ ಹಾಗೆ
ನಡೆದುಕೊ೦ಡಳುಹಲವು ತಿಂಗಳುಗಳ ಸಂಬಂಧಕ್ಕೆ ಇದ್ದಕ್ಕಿದ್ದ
ಹಾಗೆ ಮುಕ್ತಾಯ. ಕಾಫುಕನಿಗೆ ತಿಳಿದ ಹಾಗೆಯೇ ಅವಳ ಎಲ್ಲ ಪ್ರಣಯ
ಸಂಬಂಧಗಳೂ ಹೀಗೆಯೇ ಕೊನೆಯಾಗಿದ್ದವು. ಆದರೆ
ತಕತ್ಸುಕಿಗೆ ಇದನ್ನು ಜೀರ್ಣಿಸಿಕೊಳ್ಳಲು ಆಗಿರಲಿಲ್ಲವೇನೋ. ಅವನು ದೀರ್ಘ ಕಾಲ
ಅವರ ಸಂಬಂಧವನ್ನು ಮುಂದುವರೆಸುವ ಇರಾದೆ ಹೊಂದಿದ್ದನೇನೋ.
ತಕತ್ಸುಕಿ
ಅವಳ ಕೊನೆಯ ದಿನಗಳಲ್ಲಿ ಅವಳನ್ನು ಭೇಟಿಯಾಗಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದ. ಆದರೆ
ಅವಳು ಅವನನ್ನು ನಿರಾಕರಿಸಿದ್ದಳು. ಆಸ್ಪತ್ರೆ ಸೇರಿದ
ನಂತರ ಅವಳು ಹೊರ ಜಗತ್ತಿನೊಟ್ಟಿಗಿನ
ಸಂಪರ್ಕವನ್ನು ಬಹುತೇಕ ಕಡಿದುಕೊಂಡಿದ್ದಳು. ಆಸ್ಪತ್ರೆಯ ಹೊರತಾಗಿ ಅವಳ ವಾರ್ಡಿಗೆ ಹೋಗಲು
ಅನುಮತಿಯಿದ್ದುದು ಅವಳ ಅಮ್ಮ , ತಂಗಿ
ಮತ್ತು ಕಾಫುಕನಿಗೆ ಮಾತ್ರ. ಅವಳ ಕೊನೆಯ ದಿನಗಳಲ್ಲಿ ಅವಳನ್ನು
ಭೇಟಿಯಾಗಲು ಸಾಧ್ಯವಾಗಲಿಲ್ಲವೆನ್ನುವದು ತಕತ್ಸುಕಿಯನ್ನು ಕಾಡುತ್ತಿರಬೇಕು. ಹೇಳಬೇಕೆಂದರೆ ಅವಳಿಗೆ ಕ್ಯಾನ್ಸರ್ ಇರುವದು ಅವನಿಗೆ ತಿಳಿದಿದ್ದೆ ಅವಳು ಸತ್ತ ಹಿಂದಿನ
ವಾರ. ಅವಳ
ಅನಾರೋಗ್ಯದ ಸುದ್ದಿ ಅವನಿಗೆ ಸಿಡಿಲಿನಂತೆ ಬಡಿದಿತ್ತು.
ಇವತ್ತಿಗೂ ಅವನಿಗೆ ಅದನ್ನು ಒಪ್ಪಿಕೊಳ್ಳುವದು ಅಸಾಧ್ಯವಾಗಿ ತೋರುತಿತ್ತು. ಕಾಫುಕ ಅವನನ್ನು ಅರ್ಥೈಸಿಕೊಳ್ಳಬಲ್ಲವನಾಗಿದ್ದ. ಇಷ್ಟಾದರೂ
ಅವರಿಬ್ಬರ ಭಾವನೆಗಳು ಸಂಪೂರ್ಣವಾಗಿ ಬೇರೆಯವೇ ಆಗಿದ್ದವು. ಕಾಫುಕ ಅವನ ಹೆಂಡತಿ ದಿನದಿಂದ
ದಿನಕ್ಕೆ ಕ್ಷೀಣವಾಗುತ್ತ ಸಾವಿಗೆ ಕಾಯುತ್ತಿದ್ದುದನ್ನೂ
ನೋಡಿದ್ದ , ಅವಳ ಶವ ಸಂಸ್ಕಾರದ
ನಂತರ ಅಳುದುಳಿದ ಮೂಳೆಯನ್ನು ಹೆಕ್ಕಿ ಗಂಟು
ಕಟ್ಟಿ ತಂದಿದ್ದ. ಅವನು ಎಲ್ಲದರ ಭಾಗವಾಗಿದ್ದ
ಮತ್ತು ಅದು ಅಗಾಧ
ವ್ಯತ್ಯಾಸವನ್ನು ಕಲ್ಪಿಸಿತ್ತು. ಅವರಿಬ್ಬರು
ಕುಳಿತು ಅವನ ಹೆಂಡತಿಯನ್ನು ನೆನಪಿಸಿಕೊಳ್ಳುತ್ತಿದ್ದಾಗ
ಕಾಫುಕನಿಗೆ ಇದ್ದಕ್ಕಿದ್ದ ಹಾಗೆ ಹೊಳೆಯಿತು : ಅವರಿಬ್ಬರ
ಮಾತುಕತೆಯಲ್ಲಿ ಬಹುತೇಕ ಕಾಫುಕನೇ
ತಕತ್ಸುಕಿಯನ್ನು ಸಮಾಧಾನ ಮಾಡುತ್ತಿದ್ದ. ಕಾಫುಕನ
ಹೆಂಡತಿಯೇನಾದರೂ ಈ ರೀತಿ ಇವರಿಬ್ಬರೂ
ಒಟ್ಟಿಗೆ ಕುಳಿತಿರುವದನ್ನು ನೋಡಿದರೆ ಏನೆ೦ದುಕೊಳ್ಳುತ್ತಾಳೇ? ಕಾಫುಕನಿಗೆ ಆ ವಿಚಾರ ವಿಚಿತ್ರ
ತಳಮಳವನ್ನುಂಟು ಮಾಡಿತು. ಆದರೆ ಸತ್ತವರಿಗೆ ಭಾವನೆಗಳಿರುವದಕ್ಕೆ
ಸಾಧ್ಯವಿಲ್ಲವೆಂದು ಅವನಿಗೆ ಅವನೇ ಜ್ಞಾಪಿಸಿಕೊಂಡ.
ಇವೆಲ್ಲದರ
ಮಧ್ಯೆ ಇನ್ನೊಂದು ವಿಷಯ ಸ್ಪಷ್ಟವಾಗಿತ್ತು. ಈ
ತಕತ್ಸುಕಿ ತುಂಬಾ ಕುಡಿಯುತ್ತಿದ್ದ. ಕಾಫುಕನಿಗೆ ತಿಳಿದ ಹಾಗೆ ಸಿನಿಮಾದಲ್ಲಿನ ಹಲವಷ್ಟು
ಮಂದಿಗೆ ಕುಡಿತದ ಚಟವಿತ್ತು. ಸಿನಿಮಾದ ಮಂದಿ ಯಾಕೆ ಬಹುಬೇಗ
ಕುಡಿತದ ಚಟ ಅಂಟಿಸಿಕೊಳ್ಳುತ್ತಾರೆ ? ಕಾಫುಕನ
ಅಭಿಪ್ರಾಯದಂತೆ ಕುಡಿಯುವವರಲ್ಲಿ ಎರಡು ಮಂದಿ : ಕೆಲವರು
ತಮ್ಮನ್ನು ತಾವು ಇನ್ನಷ್ಟು ಮೇಲಕ್ಕೆ
ಕೊಂಡೊಯ್ಯಬೇಕೆಂದು ಕುಡಿಯುವವರು, ಇನ್ನೊಬ್ಬರು ತಮ್ಮನ್ನು ತಾವು ಮರೆಯುವದಕ್ಕೋಸ್ಕರ ಕುಡಿಯುವವವರು.
ತಕತ್ಸುಕಿ ಎರಡನೇ ವರ್ಗಕ್ಕೆ ಸೇರಿದವನಾಗಿದ್ದ. ಕಾಫುಕನಿಗೆ ತಕತ್ಸುಕಿ ಮರೆಯಲು ಪ್ರಯತ್ನಿಸುತ್ತಿರುವದು ಏನೆಂದು ಸ್ಪಷ್ಟವಾಗಿರಲಿಲ್ಲ. ಅವನ
ವ್ಯಕ್ತಿತ್ವದ ಯಾವುದೋ ದುರ್ಬಲತೆಯಿರಬಹುದು ಅಥವಾ ಹಳೆಯ ವಿಷಯವೊಂದು ಅವನನ್ನು
ಕೆಣಕುತ್ತಿರಬಹುದು. ಅಲ್ಲದಿದ್ದರೆ ವರ್ತಮಾನದ ಯಾವುದೋ ಘಟನೆ ಅವನನ್ನು ಘಾಸಿಗೊಳಿಸುತ್ತಿರಬಹುದು.
ಏನೇ ಇದ್ದರೂ ಅವನು ಹೊರಗೆ ಹೇಳಲಾಗದ
ಯಾವುದೋ ಅಸ್ಪಷ್ಟತೆಯನ್ನು ಮರೆಯಲು ಕುಡಿಯುತ್ತಿದ್ದ. ಕಾಫುಕ ಒಂದು ಗ್ಲಾಸ್ ಕುಡಿದು
ಮುಗಿಸುವದರೊಳಗಾಗಿ ತಕತ್ಸುಕಿ ಎರಡು, ಮೂರು ಕುಡಿದಿರುತ್ತಿದ್ದ.
ಕಾಫುಕ ಎಚ್ಚರಿಕೆಯಿಂದ
ಸಾವಕಾಶವಾಗಿ , ಅವನ ಜೊತೆಗಾರನನ್ನು
ಗಮನಿಸುತ್ತ ಕುಡಿಯುತ್ತಿದ್ದ. ಹಲವಾರು
ಸುತ್ತುಗಳು ಮುಗಿದ ನಂತರ ಕಾಫುಕ ಅವನಿಗೆ
ಮದುವೆಯಾಗಿದೆಯೋ ಎಂದು ವಿಚಾರಿಸಿದ. 'ಮದುವೆಯಾಗಿ
ಹತ್ತು ವರ್ಷಗಳಾದವು
ಮತ್ತು ಏಳು ವರ್ಷದ ಒಬ್ಬ
ಮಗನಿರುವುದಾಗಿ ತಕತ್ಸುಕಿ ಉತ್ತರಿಸಿದ. ಆದರೆ ಕೆಲವೊಂದು ಸರಿ
ಪಡಿಸಲಾರದ ಮನಸ್ತಾಪಗಳಿಂದ ತಕತ್ಸುಕಿ ಮತ್ತವನ ಹೆಂಡತಿ ಕಳೆದ ವರ್ಷದಿಂದ ಬೇರೆ
ಬೇರೆ ವಾಸಿಸುತ್ತಿದ್ದರು. ಇಬ್ಬರ ವಿಚ್ಛೇದನ ಕೇಸು ಕೋರ್ಟಿನಲ್ಲಿ ನಡೆಯುತ್ತಿತ್ತು.
ತಕತ್ಸುಕಿಗೆ ಕೋರ್ಟು
ಮಗನನ್ನು ತನ್ನಿಂದ ದೂರ ಮಾಡಿದರೆ ಎನ್ನುವ
ಭಯ ಕಾಡುತ್ತಿತ್ತು. ಅವನು ಕಾಫುಕನಿಗೆ ಮಗನ
ಫೋಟೋ ತೋರಿಸಿದ.
ಸ್ವಲ್ಪ
ಸಮಯದ ನಂತರ ಬಹುತೇಕ ಕುಡುಕರು
ಮಾಡುವಂತೆ ತಕತ್ಸುಕಿ ಸಹ ಒಂದೇ ಸಮನೆ
ಮಾತನಾಡಲು ಪ್ರಾರಂಭಿಸಿದ. ಅವನು ಇನ್ನೊಬ್ಬರ ಸಮಕ್ಷಮದಲ್ಲಿ
ಹೇಳಬಾರದ ವಿಷಯಗಳನ್ನು ಯಾವುದೇ ಅಡೆ ತಡೆಯಿಲ್ಲದೆ
ಬಿಚ್ಚಿಡಲಾರಂಭಿಸಿದ. ಆಗಾಗ
ಹಾಂ ಹೂಂ ಎಂದು ಸಂಭಾಷಣೆಗೆ
ಉತ್ತೇಜನ ಕೊಡುವ ಮಾತುಗಳನ್ನು ಬಿಟ್ಟರೆ ಕಾಫುಕ ಏಕಾಗ್ರಚಿತ್ತದಿಂದ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ. ತಕತ್ಸುಕಿಯ ಬಗ್ಗೆ ಅಪಾರ ಸ್ನೇಹಭಾವವಿದ್ದಂತೆ ಕಾಫುಕ
ಅಭಿನಯಿಸುತ್ತಿದ್ದ. ಕಾಫುಕನಂತ ನಟನಿಗೆ ಈ ಅಭಿನಯ ಕಷ್ಟಕರವಾಗಿರಲಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರಲ್ಲೂ ಒಂದು ಸಾಮಾನ್ಯ ಅಂಶವಿತ್ತು
: ಇಬ್ಬರೂ ಸಹ ಅದೇ ಸುಂದರ
ಆದರೆ ಬದುಕಿಲ್ಲದ ಒಂದೇ ಹೆಂಗಸನ್ನು ಇನ್ನೂ ಪ್ರೀತಿಸುತ್ತಿದ್ದರು.
ಅವಳೊಟ್ಟಿಗಿದ್ದ ಅವರಿಬ್ಬರ ಸಂಬಂಧದ ಸ್ವರೂಪ ಬೇರೆ ಬೇರೆಯಾಗಿದ್ದರೂ ಇಬ್ಬರಿಗೂ
ಅವಳ ಸಾವಿನಿಂದ ಹೊರಬರುವದು ಕಷ್ಟವಾಗಿತ್ತು. ಮಾತನಾಡುವದಕ್ಕೆ
ಇಬ್ಬರಲ್ಲೂ ಸಾಕಷ್ಟು ವಿಷಯವಿತ್ತು.
"ಬಹುಶ:
ನಾವು ಮತ್ತೊಮ್ಮೆ ಭೇಟಿಯಾಗಬಹುದೇನೋ?"
ರಾತ್ರಿ ಕಂದುತ್ತಿದ್ದಂತೆ ಕಾಫುಕ ಹೇಳಿದ. ಅಷ್ಟರಲ್ಲಾಗಲೇ
ಅವನು ಬಾರಿನ ಬಿಲ್ಲನ್ನು ಚುಕ್ತಾ ಮಾಡಿದ್ದ.
"ಖಂಡಿತ"
ತಕತ್ಸುಕಿ ಗ್ಲಾಸನ್ನು ನೋಡುತ್ತ ಹೇಳಿದ " ನಿಜ ಹೇಳಬೇಕೆಂದರೆ ನಿನ್ನೊಟ್ಟಿಗೆ
ಮಾತನಾಡಿದ್ದು ನನ್ನ ಎದೆಯ ಮೇಲಿದ್ದ
ಎಷ್ಟೊಂದು ಭಾರವನ್ನು ಇಳಿಸಿದ೦ತಾಗಿದೆ "
"ನನಗನಿಸುತ್ತದೆ ನಾವಿಬ್ಬರು
ಭೇಟಿಯಾಗುವದು ಪೂರ್ವನಿರ್ಧಾರಿತವಾಗಿತ್ತೋ ಏನೋ ? ಕಾಫುಕ
ಹೇಳಿದ ಬಹುಶ : ನನ್ನ ಸತ್ತ ಹೆಂಡತಿಯೇ
ಇದನ್ನು ಮಾಡಿಸಿರಬೇಕು"
ಕಾಫುಕ
ಹೇಳಿದ್ದು ಒಂದು ರೀತಿಯಲ್ಲಿ ಸತ್ಯವೇ
ಆಗಿತ್ತು .
ಅವರಿಬ್ಬರೂ
ಪರಸ್ಪರರ ಕೈ ಕುಲುಕಿ , ಮೊಬೈಲ್
ನಂಬರಗಳನ್ನು ವಿನಿಮಯ ಮಾಡಿಕೊಂಡು ಅಲ್ಲಿಂದ ಹೊರಟರು.
ಹೀಗೆ
ಇಬ್ಬರಲ್ಲಿಯೂ ಸಲುಗೆ ಬೆಳೆಯಿತು. ಒಂದರ್ಥದಲ್ಲಿ ಕುಡಿಯಲು ಸಿಗುವ ಸ್ನೇಹಿತರು. ಹಲವಷ್ಟು ಸಲ ಅವರಿಬ್ಬರೂ ಯಾವುದೋ
ಬಾರಿನಲ್ಲಿ ಭೇಟಿಯಾಗುತ್ತಿದ್ದರು ಮತ್ತು ಕುಡಿಯುತ್ತ ಸಾಕಷ್ಟು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು. ಅವರು ಕೇವಲ ಬಾರಿನಲ್ಲಿ
ಮಾತ್ರ ಭೇಟಿಯಾಗುತ್ತಿದ್ದರು. ಅವರಿಬ್ಬರೂ ವೈವಿಧ್ಯಮಯವಾದ ವಿಷಯಗಳನ್ನು ಚರ್ಚಿಸುತ್ತಿದ್ದರು ಆದರೆ ಚರ್ಚೆಯ
ಯಾವುದೋ ಹಂತದಲ್ಲಿ ಮಾತು
ಕಾಫುಕನ ಹೆಂಡತಿಯ ಕಡೆಗೆ ತಿರುಗುತಿತ್ತು. ಕಾಫುಕ ಅವಳ ಯೌವನದ ವಿಷಯಗಳನ್ನು
ಹೇಳುತ್ತಿದ್ದ. ಆಗಲೆಲ್ಲ ತಕತ್ಸುಕಿ ತದೇಕ ಚಿತ್ತದಿಂದ
ಮತ್ಯಾರದೋ ನೆನಪುಗಳನ್ನು ಹೆಕ್ಕಿ ರೂಪುರೇಷೆಗಳನ್ನು ನಿರ್ಮಿಸಲಿಕ್ಕೆ ಹೊರಟ ಸಂಶೋಧಕನಂತೆ
ಕೇಳಿಸಿಕೊಳ್ಳುತ್ತಿದ್ದ ಮತ್ತು
ಈ ಕ್ಷಣಗಳು ಕಾಫುಕನಿಗೆ ಅತ್ಯಂತ ಸಂತೋಷದಾಯಕವಾಗಿದ್ದವು.
ಒಂದು
ಸಂಜೆ ಇಬ್ಬರೂ ನೇಜು
ಮ್ಯೂಸಿಯಮ್ಮಿನ ಹಿಂದಿನ ಇಕ್ಕಟ್ಟಾದ ಓಣಿಯಲ್ಲಿರುವ ಯಾವುದೋ ಬಾರೊಂದರಲ್ಲಿ ಕುಡಿಯುತ್ತ ಕುಳಿತಿದ್ದರು. ಬಾರಿನ ಯಜಮಾನನಿಗೆ ಸುಮಾರು ನಲವತ್ತು ವರ್ಷಗಳಾಗಿದ್ದಿರಬಹುದು. ಬಾರಿನ ಷೋಕೇಸಿನ ಬಳಿ ಕಂಡು ಬಣ್ಣದ ಬೆಕ್ಕೊಂದು
ಕುಳಿತಿತ್ತು. ಬಹುಶ: ಬೆಕ್ಕು ಕೆಲವು ದಿನಗಳ ಮಟ್ಟಿಗೆ ಬಾರಿನೊಳಗೆ ಸೇರಿದ್ದ ಹಾಗಿತ್ತು. ಹಿನ್ನೆಲೆಯಲ್ಲಿ ಸಣ್ಣಗೆ
ಜಾಜ್ ಸಂಗೀತ
ಕೇಳಿಬರುತ್ತಿತ್ತು. ಬಾರಿನ ಹಿತವಾದ ಈ ವಾತಾವರಣ ಇಬ್ಬರಿಗೂ
ಬಹುವಾಗಿ ಹಿಡಿಸಿದ್ದರಿಂದ ಇಬ್ಬರೂ ಹಿಂದೆಯೂ ಅನೇಕ ಸಲ
ಇಲ್ಲಿಗೆ ಬಂದಿದ್ದರು. ಕಾಕತಾಳೀಯವೆಂಬಂತೆ ಅವರು ಭೇಟಿಯಾದಾಗಲೆಲ್ಲ ಮಳೆ
ಸುರಿಯುತಿತ್ತು. ಇವತ್ತೂ ಸಹ ಹೊರಗೆ ಸಣ್ಣನೆಯ
ಮಳೆ.
'ಅವಳೊಬ್ಬಳು
ಅಧ್ಭುತ ಮಹಿಳೆ" ತಕತ್ಸುಕಿ ಮೇಜಿನ ಮೇಲಿಟ್ಟಿದ್ದ ತನ್ನ ಕೈಯನ್ನು ಪರಿಶೀಲಿಶುತ್ತಾ
ಹೇಳಿದ. ಮಧ್ಯವಯಸ್ಕರಿಗೆ
ಹೋಲಿಸಿದರೆ ಅವನು ಚರ್ಮವಿನ್ನೂ ಕಾಂತಿಯುತವಾಗಿತ್ತು.
ಅವನ ಕಣ್ಣಿನ ಸುತ್ತಲೂ ಒಂದೇ ಒಂದು ಸುಕ್ಕುಗಳಿರಲಿಲ್ಲ.
"ಅವಳನ್ನು ಜೀವನ ಸಂಗಾತಿಯಾಗಿ ಪಡೆದಿದ್ದು
ನಿನ್ನ ಅದೃಷ್ಟವೇ ಸರಿ"
"ಹೌದು,
ಅವಳೊಟ್ಟಿಗಿದ್ದ ಸಮಯದಲ್ಲಿ ನಾನು
ಅತ್ಯಂತ ಸಂತೋಷದಿಂದ ಇದ್ದೆ. ಆದರೆ
ಅತಿಯಾದ ಸಂತೋಷ ಕೊನೆಗೊಳ್ಳುವದು ನೋವಿನಲ್ಲಿಯೇ " ಕಾಫುಕ ನುಡಿದ.
"ಅದು
ಹೇಗೆ ?"
ಕಾಫುಕ
ಗ್ಲಾಸನ್ನು ಎತ್ತಿ ಅದರೊಳಗೆ ಕಣ್ಣಾಡಿಸಿದ. "ಯಾವತ್ತಾದರೂ ಅವಳು ನನ್ನಿಂದ ದೂರವಾದರೆ
ಎನ್ನುವ ಯೋಚನೆ ನನ್ನಲ್ಲಿ ಸುಳಿದಾಗಲೆಲ್ಲ ನನಗೆ ಎಟಿಮ್ಟ್ಯಾ ನೋವಾಗುತ್ತಿತ್ತು
"
"ನನಗೆ
ಆ ನೋವು ಅರ್ಥವಾಗುತ್ತದೆ
"
"ಅದು
ಹೇಗೆ ? "
"ಹಾಗಲ್ಲ
.. ಅಂದರೆ .. " ತಕತ್ಸುಕಿ ತಡವರಿಸಿದ.
" ಅಷ್ಟು ಪ್ರೀತಿಪಾತ್ರರನ್ನು ಕಳೆದುಕೊಳ್ಳುವದು ಎಂದರೆ . . . "
"ಅಲ್ಲವೇ?
"
"ಹೌದು
" ತಕತ್ಸುಕಿ ತನ್ನನ್ನು
ತಾನೇ ಒಪ್ಪಿಸುವಂತೆ ಹಲವಾರು ಬಾರಿ ತಲೆಯಾಡಿಸಿದ. "ನಿನಗೆ ಅದೆಷ್ಟು
ನೋವಾಗಿರಬಹುದು ಎಂದು ನಾನು ಊಹಿಸಬಲ್ಲೆ
". ಅಷ್ಟು ಹೇಳಿ ಸುಮ್ಮನಾದ.
ಕಾಫುಕ ಮಾತನಾಡಲಿಲ್ಲ.
ಇಬ್ಬರ ನಡುವೆ ಒಂದು ಸುದೀರ್ಘ ಮೌನ ಮೈದಳೆಯಿತು.
ಕೊನೆಗೆ ಕಾಫುಕನೇ ಹೇಳಿದ.
"ಕೊನೆಗೂ
ನಾನು ಅವಳನ್ನು ಕಳೆದುಕೊಂಡೆ. ಮೊದಮೊದಲು ಸ್ವಲ್ಪ ಸ್ಸ್ವಲ್ಪವಾಗಿ ಕೊನೆಗೆ ಪೂರ್ತಿಯಾಗಿ. ಹಂತ
ಹಂತವಾಗಿ ಒಳಗೊಳಗೇ ಕೊರೆದಂತೆ. ಈ ಪ್ರಕ್ರಿಯೆ
ನನಗರಿವಿಲ್ಲದಂತೆ ಸಾವಕಾಶವಾಗಿ ಶುರುವಾಗಿತ್ತು. ಕೊನೆಗೊಮ್ಮೆ ಪ್ರವಾಹವೊಂದು ಇದ್ದಕ್ಕಿದ್ದಂತೆ ಬುಡಸಮೇತ ಎಲ್ಲವನ್ನೂ ಕೊಚ್ಚಿಕೊಂಡು ಹೋಯಿತು. ನಾನು ಹೇಳುತ್ತಿರುವದು ಅರ್ಥವಾಗುತ್ತಿದೆಯಾ
? "
"ಹೌದು
, ನನಗೆ ಅರ್ಥವಾಗುತ್ತದೆ "
ನಿನ್ನ
ತಲೆ ನಿನಗೇನು ಅರ್ಥವಾಗುತ್ತದೆ ಎಂದು ಕಾಫುಕ ಮನಸ್ಸಿನಲ್ಲೇ
ಅಂದುಕೊಂಡ.
"ಆದರೆ
ಒಂದು ವಿಷಯ ನನಗೆ ಅತ್ಯಂತ
ನೋವು ಕೊಡುತ್ತದೆ " ಕಾಫುಕ ಹೇಳಿದ. "ನನಗೆ ಅವಳು ಕೊನೆಯವರೆಗೂ
ಪೂರ್ತಿಯಾಗಿ ಅರ್ಥವಾಗಲೇ ಇಲ್ಲ ಅಥವಾ ಅವಳ ವ್ಯಕ್ತಿತ್ವದ ಯಾವುದೋ
ಒಂದು ಮಹತ್ವದ ಭಾಗ ನನಗೆ ತಿಳಿಯಲೇ
ಇಲ್ಲ. ಈಗ ಅವಳು ಇಲ್ಲವಾದ್ದರಿಂದ
ನನಗೆ ಅದರ ಬಗ್ಗೆ ತಿಳಿಯುವ
ಅವಕಾಶವೇ ಇಲ್ಲ. ಸಮುದ್ರದ ತಳದಲ್ಲಿ ಬೀಗ ಹಾಕಿದ ಸಣ್ಣ
ಪೆಟ್ಟಿಗೆಯೊಂದು ಮುಳುಗಿದ ಹಾಗೆ. ಒಳಗೇನಿದೆ ಎನ್ನುವದು ಕೊನೆಯವರೆಗೂ ನಿಗೂಢ ."
ತಕತ್ಸುಕಿ
ಮಾತನಾಡುವ ಮುನ್ನ ಸ್ವಲ್ಪ ಯೋಚಿಸಿದ. "ಹಾಗೆ ನೋಡಿದರೆ ನಾವೆಷ್ಟೇ
ಪ್ರೀತಿಸಿದರು ಬಹುಶ: ನಾವು ಯಾರನ್ನಾದರೂ
ಸಂಪೂರ್ಣ ಅರ್ಥ ಮಾಡಿಕೊಳ್ಳುವದು ಅಸಾಧ್ಯವೇ
ಅಲ್ಲವೇ "
"ಇಪ್ಪತ್ತು
ವರ್ಷ ಜೊತೆಗಿದ್ದೆವು " ಕಾಫುಕ ಉತ್ತರಿಸಿದ "ಗಂಡ ಹೆಂಡಿರಂತೆ. ಸ್ನೇಹಿತರಂತೆ.
ಯಾವುದೇ ಬಿಗುಮಾನ, ನಿರ್ಭ೦ದ ಇಲ್ಲದೆಯೇ ನಾವಿಬ್ಬರೂ ಎಲ್ಲ ವಿಷಯಗಳನ್ನೂ ಹಂಚಿಕೊಳ್ಳುತ್ತಿದ್ದೆವು
ಅಥವಾ ನಾನು ಹಾಗೆ ಭಾವಿಸಿದ್ದೆ
ಅಥವಾ ನಿಜವಾಗಿಯೂ ನಾವು ಹಾಗೆ ಇರಲಿಲ್ಲವೇ
? ನನಗೆ ಇದನ್ನು ಹೇಗೆ ಹೇಳಬೇಕು ಅನ್ನುವದೆ
ತಿಳಿಯುತ್ತಿಲ್ಲ. ಕೊನೆಯವರೆಗೂ ನನಗೆ ನಮ್ಮ ಸಂಬಂಧದಲ್ಲಿದ್ದ
ಕಪ್ಪು ಚುಕ್ಕೆಯೊಂದು ಕಾಣಿಸಲೇ ಇಲ್ಲ
"ಕಪ್ಪು
ಚುಕ್ಕೆ " ತಕತ್ಸುಕಿ ಪುನರುಚ್ಛರಿಸಿದ
"ಅವಳೊಳಗೆ
ಏನೋ ಹುದುಗಿತ್ತು. ನನಗದು ಕಾಣಿಸಲೇ ಇಲ್ಲ ಅಥವಾ ಕಾಣಿಸಿದ್ದರೂ
ನಾನು ನಿರ್ಲಕ್ಷಿಸಿದೆನೇನೋ"
ತಕತ್ಸುಕಿ
ಅವನ ಕೆಳತುಟಿಯನ್ನು ಒಮ್ಮೆ ಕಚ್ಚಿಕೊಂಡ. ಗ್ಲಾಸಿನಲ್ಲಿದ್ದುದನ್ನು
ಗಟಗಟನೆ ಕುಡಿದ. ಬಾರಿನ ಪರಿಚಾರಕನ ಬಳಿ ಗ್ಲಾಸನ್ನು ತುಂಬಲು
ಸನ್ನೆ ಮಾಡಿದ.
"ನೀನು
ಹೇಳುತ್ತಿರುವದು ಏನೆಂದು ನನಗೆ ಗೊತ್ತು"
ಕಾಫುಕ
ತಲೆಯೆತ್ತಿ ಅವನನ್ನು ದಿಟ್ಟಿಸಿದ. ತಕತ್ಸುಕಿಯ ಕಣ್ಣುಗಳು ಕಾಫುಕನನ್ನು ಒಮ್ಮೆ ನೋಡಿ ಮತ್ತೆ ಬೇರೆಡೆಗೆ
ಚಲಿಸಿದವು.
"ಅದು
ಹೇಗೆ ನಿನಗೆ ಗೊತ್ತು ? " ಕಾಫುಕ
ಕೇಳಿದ.
ಬಾರಿನ
ಪರಿಚಾರಕ ವಿಸ್ಕಿಯನ್ನು ತಂದು ಗ್ಲಾಸಿಗೆ ಸುರಿದ.ಅವನು ಅಲ್ಲಿಂದ
ಹೋಗುವವರೆಗೂ ಅವರಿಬ್ಬರೂ
ಸುಮ್ಮನೆ ಕುಳಿತಿದ್ದರು.
"ಅದು
ಹೇಗೆ ನಿನಗೆ ಗೊತ್ತು ? " ಕಾಫುಕ
ಮತ್ತೆ ಕೇಳಿದ.
ತಕತ್ಸುಕಿ ಒಂದು
ಕ್ಷಣ ಪರ್ಯಾಲೋಚಿಸಿದ.
ಕಾಫುಕ ಅವನ ಕಣ್ಣಿನಲ್ಲಿ ಕಣ್ಣಿಟ್ಟು
ನೋಡಿದ. ಅವನು ಅನಿಶ್ಚಿತನಾಗುತ್ತಿದ್ದಾನೆ
ಅನಿಸಿತು. ತಕತ್ಸುಕಿ ಏನನ್ನೋ ಬಹಿರಂಗಗೊಳಿಸಬೇಕು ಎನ್ನುವ ಪ್ರಚೋದನೆಯನ್ನು ಬಲವಂತವಾಗಿ ಹತ್ತಿಕ್ಕುತ್ತಿರವಂತೆ ಭಾಸವಾಯಿತು. ಕೊನೆಯಲ್ಲಿ ತಕತ್ಸುಕಿ ತನ್ನನ್ನು ತಾನು ಸ್ಥಿಮಿತಕ್ಕೆ ತಂದುಕೊಂಡ.
"ಒಬ್ಬ
ಹೆಂಗಸಿನ ಮನಸ್ಸಿನಲ್ಲಿ ಏನಿದೆ ಎನ್ನುವದು ನಮಗೆ ಕೊನೆಯವರೆಗೂ ಗೊತ್ತಾಗುವದೇ
ಇಲ್ಲವೇನೋ " ಅವನು
ಉತ್ತರಿಸಿದ. "ನಾನು ಹೇಳುವದಕ್ಕೆ ಹೊರಟಿರುವದು
ಇಷ್ಟೇ . ಅವಳು ಯಾರೇ ಇರಬಹುದು.
ಎಷ್ಟೇ ಆತ್ಮೀಯಳಾಗಿರಬಹುದು . ಅಂತರಂಗವೆಲ್ಲವೂ
ಬಹಿರಂಗವಾಗಲಿಕ್ಕೆ ಅಸಾಧ್ಯ . ಹಾಗಾಗಿ ನಿನಗೆ ತೋರಿದ ಆ ಕಪ್ಪು ಚುಕ್ಕೆ
ನಿನ್ನೊಬ್ಬನದಷ್ಟೇ ಅಲ್ಲ. ನಮ್ಮೆಲರದೂ ಕೂಡ . ನಾವು
ಗಂಡಸರೆಲ್ಲರೂ ಒಂದಲ್ಲ ಒಂದು ಅರ್ಥೈಸಲಾಗದ ಕಪ್ಪು
ಚುಕ್ಕೆಯ ಹೊತ್ತು ಬದುಕುತ್ತೇವೆ.
ಹಾಗಾಗಿ ನೀನು ನಿನ್ನೊಬ್ಬನದೇ ತಪ್ಪು
ಎಂದು ತಿಳಿಯುವದು ಅನಾವಶ್ಯಕ "
"ಹಾಗೆ
ಎಲ್ಲರಿಗೂ ಅನ್ವಯವಾಗುವಂತೆ ಹೇಳುವದು ಸುಲಭ." ಕಾಫುಕ
ಸ್ವಲ್ಪ ಹೊತ್ತು ಯೋಚಿಸಿ ಹೇಳಿದ.
"ಅದು
ನಿಜ"
"ಆದರೆ
ನಾನು ಮಾತನಾಡುತ್ತಿರುವದು ನನ್ನ ಸತ್ತ ಹೆಂಡತಿ
ಮತ್ತು ನನ್ನ ಬಗ್ಗೆ. ಹಾಗಾಗಿ
ಒಂದು ಸಾರ್ವತ್ರಿಕವಾದ ಭಾವಕ್ಕೆ ಒಳಗಾಗಲು ನನಗೆ ಸಾಧ್ಯವಿಲ್ಲ. "
"ನನಗೆ
ತಿಳಿದಂತೆ " ತಕತ್ಸುಕಿ ಗಂಟಲನ್ನು
ಸರಿ ಪಡಿಸಿಕೊಳ್ಳುತ್ತ ನುಡಿದ " ನಿನ್ನ ಹೆಂಡತಿ ಒಬ್ಬ ಅದ್ಭುತ ಮಹಿಳೆಯಾಗಿದ್ದಳು.
ಅವಳ ಬಗ್ಗೆ ನಿನಗೆ ಗೊತ್ತಿದ್ದಷ್ಟು ನನಗೆ ಗೊತ್ತಿಲ್ಲದೇ ಇದ್ದರೂ
ಅವಳೊಬ್ಬಳು ಸದಾ ನೆನಪಿನಲ್ಲಿ ಉಳಿಯುವ೦ತವಳು
ಎನ್ನುವದು ನನ್ನ ಧೃಡ ನಂಬಿಕೆ.
ಮತ್ತೇನಲ್ಲದಿದ್ದರೂ ನಿನ್ನ ಜೀವನದ ಅತ್ಯಮೂಲ್ಯ ಇಪತ್ತು ವರ್ಷಗಳನ್ನು ಅವಳೊಟ್ಟಿಗೆ ಕಳೆದೆ ಎನ್ನುವದಕ್ಕೆ ನೀನು ಸದಾ ಕಾಲ
ಕೃತಜ್ಞನಾಗಿರಬೇಕು. ಆದರೆ ಪರಸ್ಪರ ಅರಿತೆದ್ದೆವು
ಎಂದು ಕೊಂಡು ಇನ್ನೊಬ್ಬರ ಹೃದಯದಾಳದಲ್ಲಿರುವದು ಏನಿರಬಹುದು
ಎನ್ನುವದನ್ನು ಸ್ಪಷ್ಟವಾಗಿ ತಿಳಿಯಬಹುದು ಎಂದು ಕೊಂಡರೆ ಅದು
ಮೂರ್ಖತನ. ನಾನು
ಇನ್ನೊಬ್ಬರನ್ನು ಎಷ್ಟು ಅರಿತುಕೊಳ್ಳಬೇಕು ಅಥವಾ ಎಷ್ಟು ಪ್ರೀತಿಸಬೇಕು
ಎನ್ನುವದು ನನಗೆ ಮುಖ್ಯವಲ್ಲ. ಆ
ತರದ ಯೋಚನೆಗಳು ನಮಗೆ ನೋವನ್ನೇ ತರುತ್ತವೆ.
ಆದರೆ ನಮ್ಮ ನಮ್ಮ ಅಂತರಾಳವನ್ನು
ಪರಿಶೀಲಿಸಿಕೊಳ್ಳುವದು ಇನ್ನೊಂದು ಬಗೆ. ಪ್ರಾಮಾಣಿಕವಾಗಿ
ಪ್ರಯತ್ನಿಸಿದರೆ ನಮ್ಮ ಹೃದಯಲ್ಲಿರುವದೇನು ಎನ್ನುವದು
ನಮಗೆ ಅರಿವಾಗುತ್ತದೆ. ಹಾಗಾಗಿ
ಕೊನೆಯಲ್ಲಿ ನಮಗೆಲ್ಲ ಎದುರಾಗುವದು ಒಂದೇ ಸವಾಲು : ನಮ್ಮ
ನಮ್ಮ ಅಂತರಾತ್ಮವನ್ನು ಪ್ರಶ್ನಿಸಿ, ಪ್ರಾಮಾಣಿಕವಾಗಿ ಸಿಕ್ಕ ಉತ್ತರವನ್ನು ಗ್ರಹಿಸಿ, ಸಿಕ್ಕ
ಉತ್ತರದೊಟ್ಟಿಗೆ ಸಮಚಿತ್ತದಿಂದ
ಬದುಕುವದು. ನಾವು ಇನ್ನೊಬ್ಬರನ್ನು ಅರಿತುಕೊಳ್ಳುವದಕ್ಕೆ
ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು. "
ತಕತ್ಸುಕಿಯ ಮಾತು
ನಿಜಕ್ಕೂ ಹೃದಯಅಂತರಾಳದಿಂದ ಬಂದಂತಿತ್ತು. ತಾತ್ಕಾಲಿಕವಾದರೂ, ಮುಚ್ಚಿದ್ದ ಒಂದು ಬಾಗಿಲು ಇದ್ದಕ್ಕಿದ್ದ
ಹಾಗೆ ತೆರೆದುಕೊಂಡಿತ್ತು. ಅವನ ಮಾತುಗಳು ಸ್ಪಷ್ಟವಾಗಿದ್ದವು.
ಖಂಡಿತವಾಗಿಯೂ ಅವನು ನಟಿಸುತ್ತಿರಲಿಲ್ಲ. ಹೇಳಬೇಕೆಂದರೆ
ಇಷ್ಟೊಂದು ತನ್ಮಯನಾಗಿ ಅಭಿನಯಿಸುವಷ್ಟು ಶಕ್ತಿ
ಅವನಿಗಿರಲಿಲ್ಲ. ಕಾಫುಕ
ಮಾತನಾಡಲಿಲ್ಲ. ಸುಮ್ಮನೆ ತಕತ್ಸುಕಿಯ ಕಡೆ ನೋಡಿದ. ಕ್ಷಣ ಕಾಲ ಇಬ್ಬರ
ದೃಷ್ಟಿ ಕಲೆತವು. ಪರಸ್ಪರರ ಕಣ್ಣುಗಳಲ್ಲಿನ ಕಿಡಿ ಇಬ್ಬರಿಗೂ ಕಾಣಿಸಿತು.
ಹೊರಡುವಾಗ
ಇಬ್ಬರೂ ಕೈಕುಲುಕಿದರು. ಹೊರಗೆ ಮಳೆ ಧಾರಾಕಾರವಾಗಿ ಸುರಿಯುತಿತ್ತು.
ತಕತ್ಸುಕಿ ರೈನ್ ಕೋಟನ್ನು ತೊಟ್ಟು
ಮಳೆಯಲ್ಲಿ ನಡೆದ. ಕಾಫುಕ
ಅಭ್ಯಾಸದಂತೆ ಅವನ ಬಲಗೈ ಹಸ್ತವನ್ನು
ದಿಟ್ಟಿಸಿದ. 'ಇದೆ ಕೈ ಅಲ್ಲವೇ
ನನ್ನ ಹೆಂಡತಿಯ ಬೆತ್ತಲೆ ದೇಹದ ಮೇಲೆ ಕೈಯಾಡಿಸಿದ್ದು
? ' ಎಂದು
ಯೋಚಿಸಿದ. ಆದರೆ ಆವತ್ತು ಅವನಿಗೆ
ಆ ಯೋಚನೆಯಿಂದ ಯಾವುದೇ ನೋವಾಗಲಿಲ್ಲ. ಬದಲಾಗಿ ಇಂತಹ ಘಟನೆಗಳು ನಡೆಯುತ್ತವೆ
ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಂಡ. ಎಲ್ಲದಕ್ಕಿಂತ
ಹೆಚ್ಚಾಗಿ ದೇಹವೆಂದರೆ ಬರಿ ರಕ್ತ
ಮಾಂಸದಿಂದ ತುಂಬಿದ ಮುದ್ದೆ ಅಷ್ಟೇ. ಎಲ್ಲ ಮುಗಿದಾಗ ಕೊನೆಗೆ
ಉಳಿಯುವದು ಬೂದಿ. ಸಂಬಂಧವೆಂದರೆ ಇವುಗಳನ್ನು ಮೀರಿದ ಬೇರೆ ಏನೋ ಇರಬೇಕಲ್ಲವೇ?
"ನಾವು
ಗಂಡಸರೆಲ್ಲರೂ ಒಂದಲ್ಲ ಒಂದು ಅರ್ಥೈಸಲಾಗದ ಕಪ್ಪು
ಚುಕ್ಕೆಯ ಹೊತ್ತು ಬದುಕುತ್ತೇವೆ
" ತಕತ್ಸುಕಿಯ ಮಾತುಗಳು ತುಂಬಾ ಹೊತ್ತಿನ ತನಕವೂ ಅವನ ಕಿವಿಗಳಲ್ಲಿ ಗುಂಯ್
ಗುಡುತಿತ್ತು.
"ಕೊನೆಗೇನಾಯಿತು
ನಿಮ್ಮ ಗೆಳೆತನ ಇನ್ನೂ ಉಳಿದುಕೊಂಡಿದೆಯೋ? " ಮಿಸಾಕಿ ಕೇಳಿದಳು
ಅದಾದ
ಮೇಲೆ ಸುಮಾರು ಆರು ತಿಂಗಳುಗಳ ಕಾಲ
ನಾವಿಬ್ಬರು ಪ್ರತಿ ಎರಡು ವಾರಕ್ಕೊಮ್ಮೆ ಭೇಟಿಯಾಗುತ್ತಿದ್ದೆವು.
" ಕಾಫುಕ ಉತ್ತರಿಸಿದ. " ಯಾವುದೋ ಬಾರಿನಲ್ಲಿ ಕುಡಿಯುತ್ತ ಮಾತನಾಡುವದು. ಕೊಡು ಕೊಳ್ಳುವದು.
ಕೊನೆಗೊಮ್ಮೆ ನಾನು ಅವನನ್ನು ಭೇಟಿಯಾಗುವದನ್ನು
ನಿಲ್ಲಿಸಿದೆ. ಅವನ ಫೋನು ಕರೆಗಾಗಲಿ
, ಮೆಸೇಜಿಗಾಗಲಿ
ಉತ್ತರಿಸಲಿಲ್ಲ. ಸ್ವಲ್ಪ ಸಮಯದ ನಂತರ ಅವನು
ಮತ್ತೆ ನನ್ನನು ಸಂಪರ್ಕಿಸುವ ಪ್ರಯತ್ನವನ್ನು ನಿಲ್ಲಿಸಿದ"
"ಅವನಿಗೆ
ವಿಚಿತ್ರ ಅನ್ನಿಸಿರಬಹುದು "
"ಇರಬಹುದೇನೋ
"
"ಅವನ
ಭಾವನೆಗಳಿಗೆ ಘಾಸಿಯಾಯಿತೇನೋ"
"ಹೌದು
ಅನಿಸುತ್ತದೆ"
"ನೀನ್ಯಾಕೆ
ಇದ್ದಕ್ಕಿದ್ದ ಹಾಗೆ ಸಂಬಂಧವನ್ನು ಕಡಿದು
ಹಾಕಿದೆ "
"ಯಾಕೆಂದರೆ
ಅಲ್ಲಿ ಮತ್ತೆ ಅಭಿನಯಿಸುವಂತದ್ದು ಬೇರೇನೂ ಉಳಿದಿರಲಿಲ್ಲ"
"ಅಂದರೆ
ಒಂದು ಸಲ ಅಭಿನಯಿಸಲಿಕ್ಕೆ ಏನು
ಇಲ್ಲವೆಂದ ಮೇಲೆ ಸ್ನೇಹಿತರಾಗಿ ಉಳಿಯುವದು
ಅವಶ್ಯವಿಲ್ಲವೆಂದೇ ?
"ಅದು
ಹೌದು" ಕಾಫುಕ ಉತ್ತರಿಸಿದ. "ಇನ್ನೊಂದು ಕಾರಣವೂ
ಇದೆ "
"ಏನು?"
ಕಾಫುಕ
ಮೌನವಾದ. ಮಿಸಾಕಿ ಆಗೊಮ್ಮೆ ಈಗೊಮ್ಮೆ ಅವನೆಡೆಗೆ ದೃಷ್ಟಿ ಹಾಯಿಸಿದಳು. ತುಟಿಯ
ನಡುವೆ ಹೊತ್ತಿಸದ ಸಿಗರೇಟು ಒದ್ದೆಯಾಗುತ್ತಿತ್ತು.
"ಕಾರಿನೊಳಗೆ
ಸಿಗರೇಟು ಸೇದು ಅಡ್ಡಿಯಿಲ್ಲ " ಕಾಫುಕ ಹೇಳಿದ
"ಹಾಂ?"
"ಸಿಗರೇಟು
ಸೇದಬಹುದು "
"ಆದರೆ
ಕಾರಿನ ಮೇಲ್ಛಾವಣಿ ತೆರೆದಿಲ್ಲ "
"ಪರವಾಗಿಲ್ಲ.
"
ಮಿಸಾಕಿ
ಸಿಗರೇಟನ್ನು ಹೊತ್ತಿಸಿದಳು. ಸುದೀರ್ಘವಾಗಿ ಹೊಗೆಯನ್ನು ಎಳೆದುಕೊಂಡು , ಪಪ್ಪುಸ ಸೇರಿದ ಹೊಗೆಯನ್ನು ಕಾರಿನ ಕಿಟಕಿಯಿಂದ ಹೊರಗೆ ಬಿಟ್ಟಳು.
"ತಂಬಾಕು
ಸಾಯಿಸುತ್ತದೆ " ಕಾಫುಕ
"ಜೀವಂತವಾಗಿರುವದೇ
ಸಾಯಲಿಕ್ಕೆ" ಮಿಸಾಕಿ
ಕಾಫುಕ
ನಗೆಯಾಡಿದ. "ಅದು ಬದುಕನ್ನು ನೋಡುವ
ಇನ್ನೊಂದು ದೃಷ್ಟಿ . . "
"ನೀನು
ನಗುವದನ್ನು ನಾನು ಇದೆ ಮೊದಲು
ನೋಡಿದ್ದು " ಮಿಸಾಕಿ
ಅವಳು
ಹೇಳಿದ್ದು ನಿಜವೇ. ಕಾಫುಕ ಅಭಿನಯದ ಹೊರತಾಗಿ ಸಹಜವಾಗಿ ನಕ್ಕು ಅದೆಷ್ಟೋ ವರ್ಷಗಳಾಗಿದ್ದವು.
"ನೀನು
ಹುಟ್ಟಿದ್ದು ನನ್ನಪ್ಪ ಹುಟ್ಟಿದ ವರ್ಷದಲ್ಲೇ , ನಾನು ನಿನ್ನ ರೆಕಾರ್ಡ್ ನೋಡಿದ್ದೆ
" ಮಿಸಾಕಿ
ಕಾಫುಕ
ಮಾತನಾಡದೆ ಕಾರಿನಲ್ಲಿದ್ದ
ಕ್ಯಾಸೆಟಗಳನ್ನು ತೆಗೆದುಕೊಂಡು ಎಲ್ಲವನ್ನೂ ಒಮ್ಮೆ ಪರಿಶೀಲಿಸಿದ. ಯಾವ
ಕ್ಯಾಸೆಟನ್ನೂ ಹಾಕಲಿಲ್ಲ. ಕಾರಿನ
ಕಿಟಕಿಯಿಂದ ಹೊರಗೆ ಇಟ್ಟುಕೊಂಡಿದ್ದ ಮಿಸಾಕಿಯ ಕೈಯಲ್ಲಿ ಸಿಗರೇಟು ಉರಿಯುತ್ತಿತ್ತು. ಕಾರು ಮತ್ತೆ ಚಲಿಸುವವರೆಗೆ
ಅವಳು ಎರಡೂ ಕೈಯಲ್ಲಿ ಸ್ಟೇರಿಂಗ್
ಹಿಡಿಯಲಿಲ್ಲ.
"ನಿಜ
ಹೇಳಬೇಕು ಎಂದರೆ ನನಗೆ ಆ ಮನುಷ್ಯನನ್ನು
ಶಿಕ್ಷಿಸಬೇಕು ಎಂದಿತ್ತು " ಕಾಫುಕ ತಪ್ಪೊಪ್ಪಿಕೊಳ್ಳುವವನಂತೆ ಹೇಳಿದ. "ನನ್ನ ಹೆಂಡತಿಯೊಟ್ಟಿಗೆ ಮಲಗಿದ್ದ
ಮನುಷ್ಯ " ಕಾಫುಕ ಕ್ಯಾಸೆಟುಗಳನ್ನು
ಮರಳಿ
ಒಂದೊಂದಾಗಿ ಇಡತೊಡಗಿದ.
"ಶಿಕ್ಷೆ
?"
"ಅವನು
ಮಾಡಿದ ತಪ್ಪಿಗೆ ಶಿಕ್ಷೆ. ಅವನೊಟ್ಟಿಗೆ ಸ್ನೇಹಿತನಂತೆ ನಟಿಸಿ , ಅವನ ರಹಸ್ಯಗಳನ್ನು ತಿಳಿದುಕೊಂಡು
ಕೊನೆಯವರೆಗೂ ಅವನನ್ನು ಆಟವಾಡಿಸಬೇಕು ಎಂದುಕೊಂಡಿದ್ದೆ "
"ಯಾವ
ಥರದ ರಹಸ್ಯ ?"
"ಇಂತಹುದೇ
ಅಂಥ ಅಲ್ಲ . ಆದರೆ ಅವನು
ಕುಡಿದ ಮತ್ತಿನಲ್ಲಿ ಏನಾದರು ವಿಷಯ ಬಾಯ್ಬಿಟ್ಟಾಗ ಅದನ್ನು
ಉಪಯೋಗಿಸಿ ಯಾವುದೋ ಹಗರಣವನ್ನು ಸೃಷ್ಟಿಸಿ ಅವನ ಘನತೆ ಗೌರವಕ್ಕೆ
, ಅವನ ಅಭಿನಯದ ವೃತ್ತಿಜೀವನಕ್ಕೆ ಮಸಿ ಬಳಿಯುವಂತೆ ಮಾಡಬೇಕು.
ಆಗ ಅವನ ವಿಚ್ಛೇದನ ಸಮಯದಲ್ಲಿ
ಕೋರ್ಟು ಅವನನ್ನು ಮಗನಿಂದ ದೂರ ಮಾಡುತ್ತದೆ.
ಅವನನ್ನು ಘಾಸಿಗೊಳಿಸಲು ಅಷ್ಟು ಸಾಕು ಅಂದುಕೊಂಡಿದ್ದೆ. "
"ತುಂಬಾ
ಕ್ರೂರ ಯೋಜನೆ
"
"ಹೌದು
ಕ್ರೂರ"
"ಮತ್ತು
ಇಷ್ಟೆಲ್ಲಾ ಮಾಡುವದು ಯಾಕೆಂದರೆ ಅವನು ನಿನ್ನ ಹೆಂಡತಿಯ
ಜೊತೆಗೆ ಮಲಗಿದ್ದ ಎನ್ನುವ ಒಂದೇ ಕಾರಣಕ್ಕಾಗಿ ?"
"ಇದು
ಹಗೆ ಸಾಧಿಸುವದಕ್ಕಿಂತ ಭಿನ್ನವಾದದ್ದು." ಕಾಫುಕ ಉತ್ತರಿಸಿದ. “ಅವರಿಬ್ಬರ ನಡುವೆ ಏನು ನಡೆದಿರಬಹುದು ಎನ್ನುವ
ಯೋಚನೆಯನ್ನು ನನ್ನ ಮನಸ್ಸಿನಿಂದ ಕಿತ್ತು
ಹಾಕಲು ನನಗೆ ಕೊನೆಯವರೆಗೂ ಸಾಧ್ಯವಾಗಲೇ
ಇಲ್ಲ. ಅವಳು ಜೀವಂತವಾಗಿದ್ದಾಗಿನ ಅವಳ
ಚಿತ್ರಣ ಹೇಗೆ ನನ್ನ ಮನಸ್ಸಿನಲ್ಲಿ
ಕೂತಿದೆಯೋ ಹಾಗೆಯೇ ಅವಳು ಮತ್ತೊಬ್ಬ ಮನುಷ್ಯನ
ತೋಳಿನಲ್ಲಿರುವ ಚಿತ್ರವೂ ಅಷ್ಟೇ ಸ್ಪಷ್ಟವಾಗಿ ನನ್ನಲ್ಲಿ ಅಚ್ಚಾಗಿತ್ತು. ಅದೊಂದು
ಭೂತ ಸದಾ ಕಾಲ ನನ್ನನ್ನು
ದುರುಗುಟ್ಟಿಕೊಂಡು ನೋಡುತ್ತಿತ್ತು. ಅವಳ
ಸಾವಿನ ನಂತರ ಸಮಯ ಸರಿದಂತೆ
ಈ ಭೂತ ಅವಳೊಟ್ಟಿಗೆ
ಮರೆಯಾಗುತ್ತದೆ ಎಂದುಕೊಂಡಿದ್ದೆ. ಆದರೆ ಹಾಗಾಗಲಿಲ್ಲ. ಬದಲಾಗಿ
ದಿನದಿಂದ ದಿನಕ್ಕೆ ಆ ಭೂತ ನನ್ನ
ಅಸ್ತಿತ್ವವನ್ನೂ ಮೀರಿ ಬೆಳೆಯುತಿತ್ತು.
ಅದನ್ನು ಕಿತ್ತು ಹಾಕುವುದಾದರೆ ಇದೊಂದೇ ದಾರಿ ಅನಿಸಿತು.”
ಕಾಫುಕು
ತಾನು ಇದನ್ನೆಲ್ಲಾ ತನ್ನ ಮಗಳಿನ ವಯಸ್ಸಿನ
ಈ ಹುಡುಗಿಗೆ ಯಾಕೆ ಹೇಳುತ್ತಿದ್ದೇನೆ
ಎಂದು ಒಂದು ಕ್ಷಣ ಯೋಚಿಸಿದ.
ಇಷ್ಟಾದರೂ ತನ್ನನ್ನು ತಾನು ತೆರೆದಿಡದಂತೆ ತಡೆಯಲಿಕ್ಕಾಗಲಿಲ್ಲ.
"ಹಾಗಾಗಿ ಅವನ
ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದೆ?"
ಮಿಸಾಕಿ
"ಹೌದು
"
"ಆದರೆ
ನೀನು ಹಾಗೆ ಮಾಡಲಿಲ್ಲ ಅಲ್ಲವೇ
?" ಮಿಸಾಕಿ ಕಾತುರತೆಯಿಂದ ಕೇಳಿದಳು
"ಇಲ್ಲ
" ಕಾಫುಕ ತಲೆಯಾಡಿಸಿದ
ಮಿಸಾಕಿ
ಒಂದು ಸಮಾಧಾನದ ನಿಟ್ಟುಸಿರು ಬಿಟ್ಟಳು. ಕಿರುನಕ್ಕು ಸಿಗರೇಟಿನ ಹೊಗೆ ಎಳೆದುಕೊಂಡಳು.
"ಹೇಗೆ
ವಿವರಿಸಬೇಕು ಎಂದು ಗೊತ್ತಾಗುತ್ತಿಲ್ಲ. ಆದರೆ
ಯಾವುದೋ ಒಂದು ಹಂತದಲ್ಲಿ ನನಗೆ ಗತಿಸಿ
ಹೋದ ಯಾವ ಘಟನೆಯೂ ಮುಖ್ಯವಲ್ಲ
ಅನ್ನಿಸುವದಕ್ಕೆ ಶುರುವಾಯಿತು. ಇದ್ದಕಿದ್ದ
ಹಾಗೆ ನನ್ನನ್ನು ಕಾಡುತ್ತಿದ್ದ ಭೂತ ಮಾಯವಾಗಿತ್ತು " ಕಾಫುಕ ಹೇಳಿದ
" ಪ್ರತಿಕಾರದ ಭಾವನೆ ಮರೆಯಾಗಿತ್ತು ಅಥವಾ ನನ್ನಲ್ಲಿದ್ದುದು ಪ್ರತಿಕಾರವೇ ಅಲ್ಲವೇನೋ ? "
"ಏನೇ
ಆಗಿರಬಹುದು ನೀನು ಅದನ್ನು ಅಲ್ಲಿಯೇ
ಬಿಟ್ಟಿದ್ದು ಒಳ್ಳೆಯದೇ ಆಯಿತು. "
"ನನಗೂ
ಹಾಗೆ ಅನಿಸುತ್ತದೆ "
"ಆದರೆ
ನಿನಗೆ ನಿನ್ನ ಹೆಂಡತಿ ಯಾಕೆ ಅವನೊಟ್ಟಿಗೆ ಮಲಗಿದ್ದಳು
ಎನ್ನುವದಕ್ಕೆ ಉತ್ತರವೇ ಸಿಗಲಿಲ್ಲ ಅಲ್ಲವೇ ?"
"ಇಲ್ಲ.
ಆ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಇವತ್ತಿಗೂ ಅದು ನನಗೆ ದೊಡ್ಡ
ಪ್ರಶ್ನೆಯೇ. ಅವನೊಬ್ಬ ಒಳ್ಳೆಯ, ಸರಳ ಮನುಷ್ಯ. ಅವನೂ ಸಹ ನನ್ನ
ಹೆಂಡತಿಯನ್ನು ಅಪಾರವಾಗಿ ಪ್ರೀತಿಸಿದ್ದ. ಅವಳೊಟ್ಟಿಗಿನ ಸಂಬಂಧ ಅವನಿಗೆ ಚೆಲ್ಲಾಟವಾಗಿರಲಿಲ್ಲ. ಅವಳ
ಸಾವು ಅವನನ್ನು ಘಾಸಿಗೊಳಿಸಿತ್ತು ಅದಕ್ಕಿಂತ ಹೆಚ್ಚಾಗಿ ಅವಳು ಅವನನ್ನು ಕೊನೆಯ
ದಿನಗಳಲ್ಲಿ ನೋಡಲು ನಿರಾಕರಿಸಿದ್ದು ಅವನಿಗೆ ಸಹಿಸಲಸಾಧ್ಯ ನೋವನ್ನುಂಟು ಮಾಡಿತ್ತು. ಹಾಗೆ ನೋಡಿದರೆ ಆ ಮನುಷ್ಯ ನನಗೂ
ಸಹ ಇಷ್ಟವಾದ. “
ಕಾಫುಕ
ಗದ್ಗದಿತನಾದ. ಅವನು ತನ್ನ ಭಾವೆನೆಗಳಿಗೆ
ಮಾತಿನ ರೂಪ ಕೊಡುಬಲ್ಲ ಶಬ್ದಗಳಿಗಾಗಿ
ತಡಕಾಡುತ್ತಿದ್ದ.
"ಅವನಿಗೆ
ತನ್ನ ಕ್ರಿಯೆಯ ಪರಿಣಾಮವೇನಿರಬಹುದು ಎನ್ನುವುದರ ಬಗ್ಗೆ ಕಿಂಚಿತ್ತೂ ಲಕ್ಷ್ಯವಿರಲಿಲ್ಲ. ಆದರೂ ಒಟ್ಟಾರೆಯಾಗಿ ಅವನದು ಒಳ್ಳೆಯ
ವ್ಯಕ್ತಿತ್ವ. ನೋಡಲಿಕ್ಕೆ ಸುಂದರವಾಗಿದ್ದ. ಎಲ್ಲರೊಟ್ಟಿಗೆ ಬೆರೆತು ಸಂತೋಷದಿಂದ ಮಾತನಾಡುತಿದ್ದ. ಅವನನ್ನು ನೋಡಿದಾಗ ಅಪಾರ ಗೌರವವೇನೂ ಹುಟ್ಟದಿದ್ದರೂ
ಒಳ್ಳೆಯ ಮನುಷ್ಯ ಅನಿಸುತಿತ್ತು. ಒಳಗೊಳಗೇ ದುರ್ಬಲ ಮನುಷ್ಯ. ಪರಿಣಿತ
ನಟನೂ ಅಲ್ಲ. ನನ್ನ ಹೆಂಡತಿ ಅಪಾರ
ಇಚ್ಚಾಶಕ್ತಿಯುಳ್ಳವಳು. ಅದ್ಭುತ ನಟಿ. ಇಷ್ಟಾದರೂ ಸಹ
ಅವಳು ಅವನಂತಹ ಮನುಷ್ಯನನ್ನು
ಬಯಸಿದ್ದು ಏಕೆ ? ಈ ಪ್ರಶ್ನೆ ಇವತ್ತಿಗೂ ನನ್ನ ಹೃದಯವನ್ನು ಕೊರೆಯುತ್ತಿದೆ.
"ಅಹ೦ಗೆ
ಹೊಡೆತ ಬಿದ್ದಂತೆ? "
ಕಾಫುಕ
ಅವಳು ಹೇಳಿದ್ದನ್ನು ಒಂದು ಕ್ಷಣ ಯೋಚಿಸಿದ.
"ಇರಬಹುದೇನೋ"
"ಹೀಗೂ
ಇರಬಹುದಲ್ಲವೇ . ನಿನ್ನ ಹೆಂಡತಿ ಅವನ ವ್ಯಕ್ತಿತ್ವಕ್ಕೆ ಮಾರುಹೋದಳು
ಎಂದೇಕೆ ಭಾವಿಸುತ್ತೀಯಾ ? ಅವಳು
ಅವನೊಟ್ಟಿಗೆ ಮಲಗಿರುವದಕ್ಕೆ ಯಾವುದೇ ಕಾರಣಗಳು ಇಲ್ಲದಿರಬಹುದು. "
ಕಾಫುಕ ಮಿಸಾಕಿಯನ್ನು
ಅವಕ್ಕಾಗಿ ದಿಟ್ಟಿಸಿದ. ಅವಳು ಕಾರಿನ ಮುಂದು
ಬದಿಯ ಗಾಜನ್ನು ಒರೆಸುತ್ತಿದ್ದಳು.
"ಹೆಂಗಸರು
ಹಾಗೂ ಇರುತ್ತಾರೆ " ಅವಳು ಮತ್ತೆ ನುಡಿದಳು.
ಕಾಫುಕನಿಗೆ
ಏನು ಹೇಳಬೇಕು ಎಂದು ತಿಳಿಯಲಿಲ್ಲ. ಅವನು
ಸುಮ್ಮನೆ ಕುಳಿತ.
"ನನಗೆ
ಅದೊಂದು ಕಾಯಿಲೆ ಕಾರಣ ಅನಿಸುತ್ತದೆ. ಅದರ
ಬಗ್ಗೆ ಯೋಚಿಸಿ ಪ್ರಯೋಜನವಿಲ್ಲ. ನನ್ನಪ್ಪ, ನನ್ನ ಮತ್ತು ಅಮ್ಮನ
ಬದುಕಿನಿಂದ ಇದ್ದಕಿದ್ದ ಹಾಗೆ ಎದ್ದು ಹೋದದ್ದು
, ಅಮ್ಮ ನನ್ನನ್ನು ಯಾವತ್ತೂ ಮೂದಲಿಸಿ ಮಾತನಾಡುತ್ತಿದ್ದುದು - ಎಲ್ಲದಕ್ಕೂ ನಾನು ಯಾವುದೋ ಒಂದು
ಕಾಯಿಲೆಯನ್ನು ದೂಷಿಸುತ್ತೇನೆ. ಹೌದು. ನಾನು ನಂಬಿರುವದರಲ್ಲಿ , ನಾನು
ದೂಷಿಸುವ ಕಾಯಿಲೆಗೆ ಅರ್ಥ ತರ್ಕಗಳಿಲ್ಲ.
ಅದು ಏನೆಂದೂ ನನಗೆ
ಗೊತ್ತಿಲ್ಲ . ಆದರೆ ಘಟಿಸಿದನ್ನು
ಸ್ವೀಕರಿಸಿಕೊಂಡು ಏನೂ
ಆಗಿಲ್ಲವೆಂಬಂತೆ ವರ್ತಮಾನದ ಜೊತೆಗೆ ಬದುಕುವುದಷ್ಟೇ ನನ್ನ ಕೈಯಲ್ಲಿ ಸಾಧ್ಯವಿರುವ
ಕೆಲಸ. "
"ಹಾಗಾದರೆ
ಒಂದಲ್ಲ ಒಂದು ರೀತಿಯಲ್ಲಿ ನಾವೆಲ್ಲರೂ
ನಟರು "
"ಒಂದರ್ಥದಲ್ಲಿ
ಅದು ನಿಜ "
ಕಾಫುಕ
ಹಿಂದಕ್ಕೆ ಒರಗಿ ಸಿಟ್ ಬೆಲ್ಟ್
ಸರಿಪಡಿಕೊಂಡು ಕಣ್ಣು ಮುಚ್ಚಿ ಕಾರಿನ ಇಂಜಿನಿನ ಶಬ್ದದ ಮೂಲಕ ಮಿಸಾಕಿ
ಯಾವಾಗ ಗೇರನ್ನು
ಬದಲಿಸುತ್ತಲೇ ಎಂದು ಕಂಡು ಹಿಡಿಯಲು ಯತ್ನಿಸಿದ.
ಆದರೆ ಯಾವ ಸಮಯದಲ್ಲಿ ಮಿಸಾಕಿ
ಗೇರನ್ನು ಬದಲಿಸಿದಳು ಎಂದು ತಿಳಿಯುವದು
ಸಾಧ್ಯವಾಗಲಿಲ್ಲ. ಎಲ್ಲವೂ ನಯವಾಗಿ , ರಹಸ್ಯವಾಗಿ ನಡೆಯುತಿತ್ತು. ಇಂಜಿನಿನ್ನ
ಏಕತಾನದ ಶಬ್ದದ ನಡುವೆ ಗೇರನ್ನು ಬದಲಿಸಿದಾಗ ಸಣ್ಣನೆಯ ಶಬ್ದ ವ್ಯತ್ಯಾಸ ಮಾತ್ರ.
ಮತ್ತೆ ಎಲ್ಲವೂ ಮೊದಲಿನಂತೆಯೇ. ಹಾರುತ್ತಿರುವ ಹುಳವೊಂದರ ರೆಕ್ಕೆ ಕಣ್ಣಿಗೆ ಬಿದ್ದು ಮಾಯವಾದ ಹಾಗೆ.
ಒಂದು
ಸಣ್ಣ ನಿದ್ರೆ ಮಾಡಬೇಕು ಎಂದು ಕಾಫುಕ ಯೋಚಿಸಿದ.
ಆಳ ನಿದ್ರೆ. ಹತ್ತು ಹದಿನೈದು ನಿಮಿಷ ಸಾಕಾಗಬಹುದು. ಮತ್ತೆ ರಂಗದ ಮೇಲೆ ಅಭಿನಯ.
ಕಣ್ಣು ಕೋರೈಸುವ ಬೆಳಕಿನ ನಡುವೆ ಪೂರ್ವನಿರ್ಧಾರಿತ ಸಾಲುಗಳನ್ನು ಹೇಳುವದು. ಪೆರೇಡ್ ಬಿದ್ದೊಡನೆ ಚಪ್ಪಾಳೆ. ಕೆಲವು ಕ್ಷಣಗಳ ಮಟ್ಟಿಗೆ ನಾವು ಯಾರಾಗಿದ್ದೇವೋ ಅದನ್ನು
ಮರೆಯುವದು. ಮತ್ತೆ ವರ್ತಮಾನಕ್ಕೆ, ಮೂಲಕ್ಕೆ ಮರಳುವಿಕೆ. ಮತ್ತೆ ಮರಳಿದಾಗ ಬಿಟ್ಟು ಹೋಗಿದ್ದ 'ತಾನು' ಮತ್ತೆ ಮೊದಲಿನ 'ತಾನು' ಆಗಿಯೇ ಸಿಗುವದು ಅಸಾಧ್ಯ. ನಾವು
ಮರಳಿದ ಜಾಗ ಯಾವತ್ತಿಗೂ ನಾವು
ಬಿಟ್ಟುಹೋದ ಸ್ಥಳಕ್ಕಿಂತ ಸ್ವಲ್ಪವಾದರೂ ಭಿನ್ನವಾಗಿರುತ್ತದೆ. ಅದು
ನಿಯಮ. ಎರಡು ಜಾಗಗಳು ಯಾವತ್ತಿಗೂ
ಒಂದೇ ಸಮನಾಗಿರಲು ಸಾಧ್ಯವಿಲ್ಲ.
"ನಾನು
ಸ್ವಲ್ಪ ಕಣ್ಣು ಮುಚ್ಚುತ್ತೇನೆ " ಕಾಫುಕ ಹೇಳಿದ.
ಮಿಸಾಕಿ
ಮಾತನಾಡಲಿಲ್ಲ. ಅವಳು
ಸೂಕ್ಷ್ಮ ದೃಷ್ಟಿಯಿಂದ ರಸ್ತೆಯನ್ನು ದಿಟ್ಟಿಸಿದಳು. ಕಾಫುಕ ಅವಳ ಮೌನಕ್ಕೆ ಕೃತಜ್ಞನಾಗಿದ್ದ.
ಲೇಖಕರ ಪರಿಚಯ
: ಜಪಾನಿ ಕಥೆಗಾರ ಹರುಕಿ ಮುರಕಮಿ ಜನಿಸಿದ್ದು ೧೯೪೯ ರ
ಜನವರಿ ೧೨ ರಂದು ಜಪಾನಿನ
ಕ್ಯೋಟೋದಲ್ಲಿ. ಅವರ ಕತೆಗಳು ಜಗತ್ತಿನ
೫೦ಕ್ಕೂ ಹೆಚ್ಚು ಭಾಷೆಗೆ ಅನುವಾದಗೊಂಡಿವೆ. ಸಂಗೀತದ
ಬಗ್ಗೆ ಅಪಾರ ಒಲವು ಹೊಂದಿರುವ
ಮುರಕಮಿಯ ಕತೆಗಳಲ್ಲಿ ಏಕಾಂತದ ದಟ್ಟ ಪಾತ್ರ
ಚಿತ್ರಣಗಳನ್ನು , ಸಾಮಾನ್ಯತೆಯಿಂದ ಅಸಾಮಾನ್ಯತೆಗೆ ಸಾವಕಾಶವಾಗಿ ಜರುಗುವ ಘಟನೆಗಳನ್ನು ಕಾಣಬಹುದು. ,ಮ್ಯಾರಥಾನ್ ಓಟಗಾರರೂ ಆಗಿರುವ ಅವರಿಗೆ ವರ್ಲ್ಡ್ ಫ್ಯಾ೦ಟಸಿ ಪ್ರಶಸ್ತಿ , ಕಾಫ್ಕ ಪ್ರಶಸ್ತಿ , ಜೆರುಸಲೇಮ್ ಪ್ರಶಸ್ತಿ ಮುಂತಾದವು ಸಂದಿವೆ.