Wednesday, May 27, 2020

ಹಿಮ ಮನುಷ್ಯ

ಮೂಲ ಕತೆ : ಹರುಕಿ ಮುರಕಮಿ


ನಾನು ಮದುವೆಯಾಗಿರುವದು ಹಿಮ ಮನುಷ್ಯನನ್ನು. 

ಮಂಜುಗಡ್ಡೆಯಲ್ಲಿ ಸ್ಕಾಯಿಂಗ್ ಮಾಡುವ ರೆಸಾರ್ಟಿನಲ್ಲಿ ಅವನನ್ನು  ಮೊದಲ ಸಲ ಭೇಟಿಯಾಗಿದ್ದೆ.  ಹಿಮ ಮನುಷ್ಯನನ್ನು ಇಂತಹ  ಜಾಗದಲ್ಲೇ  ಭೇಟಿಯಾಗುವದಲ್ಲವೇ ?  ಹೋಟೆಲಿನ ಪಡಸಾಲೆಯಲ್ಲಿ ಕಿಚಪಿಚನೆ ಮಾತನಾಡುತ್ತ ಅಸಾಧ್ಯ  ಗದ್ದಲ ಮಾಡುತ್ತಿದ್ದ  ಯುವಕ ಯುವತಿಯರಿಂದಲೂ ,  ಉರಿಯುತ್ತಿರುವ ಅಗ್ಗಷ್ಟಿಕೆಯಿಂದಲೂ ಸಾಧ್ಯವಾದಷ್ಟು ದೂರದಲ್ಲಿ ಒಂದು ಮೂಲೆಯಲ್ಲಿ ಕುಳಿತು ಅವನು ಯಾವುದೋ ಪುಸ್ತಕವನ್ನು ಓದುವದರಲ್ಲಿ ಮಗ್ನನಾಗಿದ್ದ.  ಸಮಯ ಮಧ್ಯಾನ್ಹವನ್ನು ಸಮೀಪಿಸುತ್ತಿದ್ದರೂ ಅವನ ಸುತ್ತ  ಚಳಿಗಾಲದ ಮುಂಜಾನೆಯಲ್ಲಿ  ಕಾಣ ಸಿಗುವ  ತಣ್ಣಗಿನ  ತಾಜಾತನ ಪಸರಿಸಿತ್ತು.   'ಹೇಯ್ ಅಲ್ನೋಡು ಹಿಮ ಮನುಷ್ಯ"  ನನ್ನ ಗೆಳತಿ ಅವನತ್ತ ಬೊಟ್ಟು ಮಾಡಿ ಪಿಸು ದನಿಯಲ್ಲಿ ನುಡಿದಳು. ಆಗ  ಹಿಮ ಮನುಷ್ಯನ ಬಗ್ಗೆ ನನಗೆ ಕಿಂಚಿತ್ತೂ ತಿಳಿದಿರಲಿಲ್ಲ.  ಇಂತಹ ಮನುಷ್ಯನೊಬ್ಬನಿದ್ದಾನೆ  ಮತ್ತು ಅವನಿಗೆ ಹಿಮ ಮನುಷ್ಯ ಎನ್ನುತ್ತಾರೆ ಅನ್ನುವದರ ಹೊರತಾಗಿ ನನ್ನ ಗೆಳತಿಗೂ  ಅವನ ಬಗ್ಗೆ ಬೇರೆ ಯಾವುದೇ ಮಾಹಿತಿ ಇರಲಿಲ್ಲ.  ಅವನು ಮಂಜು ಗಡ್ಡೆಯಿಂದ  ಮಾಡಲ್ಪಟ್ಟವನು  ಎನ್ನುವದು ಅವಳ ನಂಬಿಕೆಯಾಗಿತ್ತು .  ಅದಕ್ಕೆ ಅಲ್ಲವೇ ಅವನಿಗೆ ಹಿಮ ಮನುಷ್ಯನೆಂದು ಕರೆಯುವದು ಎಂದು ಅವಳು ಅತ್ಯ೦ತ ಗಂಭೀರ ಧ್ವನಿಯಲ್ಲಿ ಹೇಳಿದ್ದಳು. ಅವಳ ಮಾತಿನಲ್ಲಿ ಯಾವುದೋ ಭೂತ ಅಥವಾ ಅಂಟುರೋಗದ ಕುರಿತು  ಮಾತನಾಡುವ ಭಾವವಿತ್ತು.   

ಹಿಮ ಮನುಷ್ಯ ನೀಳಕಾಯದವನಾಗಿದ್ದ. ತತ್ ಕ್ಷಣಕ್ಕೆ ನೋಡಿದಾಗ ಅವನ ತಲೆಯಲ್ಲಿ ಕೂದಲುಗಳು ವಿರಳವಾಗಿದ್ದುದು ಗಮನಕ್ಕೆ ಬರುತ್ತಿತ್ತು. ನಾನು  ನೋಡಿದಾಗ ಅವನು ಪ್ರಾಯದವನಂತೆ ಕಾಣುತ್ತಿದ್ದ. ಆದರೆ ವಿರಳವಾಗಿದ್ದ, ದಪ್ಪನೆಯ ಅವನ ಕಡ್ಡಿಯಂತಹ ಕೂದಲುಗಳು ಹಿಮದಲ್ಲಿ ಕಲಸಿಟ್ಟ೦ತೆ  ಅಲ್ಲಲ್ಲಿ ಬೆಳ್ಳಗೆ ಕಾಣಿಸುತಿತ್ತು. ಅವನ ಕೆನ್ನೆಯ ಮೇಲೆ ಉಬ್ಬಿದಂತಿದ್ದ ಮೂಳೆಗಳು  ಚಳಿಗಾಲದಲ್ಲಿ ಬಂಡೆಗಲ್ಲಿಗೆ  ತಾಕಿ ಕತ್ತರಿಸಿದಂತೆ ಭಾಸವಾಗುತಿತ್ತು , ಅವನ ಕೈ ಬೆರಳುಗಳ ತುದಿಗೆ ತೆಳುವಾಗಿ ಹಿಮ ಹಅಂಟಿಕೊಂಡಿತ್ತು. ಇವೆರಡನ್ನು ಹೊರತುಪಡಿಸಿದರೆ  ಅವನನ್ನು ಇತರರಿಂದ ಬೇರ್ಪಡಿಸುವ ಯಾವ ಲಕ್ಷಣಗಳೂ ಗೋಚರಿಸುತ್ತಿರಲಿಲ್ಲ. ಸ್ಫುರದ್ರೂಪಿಯಲ್ಲದಿದ್ದರೂ ಅವನ ನಿಲುವಿನಲ್ಲಿ ವಿಚಿತ್ರ  ಆಕರ್ಷಣೆಯಿತ್ತು. ಕೆಲವರು  ಕಾರಣವಿಲ್ಲದೆಯೇ ನಮಗೆ ಹತ್ತಿರದವರು ಅನಿಸುತ್ತಾರೆ, ಹಾಗೆ. ಅತ್ಯಂತ ಪಾರದರ್ಶಕವಾಗಿದ್ದ ಅವನ  ನಿರ್ಭಾವುಕ ಮುಖ ಚಳಿಗಾಲದ ನಸುಕಿನ  ಮಂಜನ್ನು ನೆನಪಿಗೆ ತರುತ್ತಿತ್ತು.ಅವನ ದೇಹದ ಒಟ್ಟಾರೆ  ಸಂರಚನೆ ಅವನಿಗೆ ಹೊಳಪನ್ನು ಕೊಟ್ಟಿತ್ತು. ನಾನು ಅಲ್ಲಿಯೇ ನಿಂತು ಕ್ಷಣ ಕಾಲ ಅವನನ್ನು ದಿಟ್ಟಿಸಿ ನೋಡಿದೆ. ಹಿಮ ಮನುಷ್ಯ ಒಂದು ಬಾರಿಯೂ ಪುಸ್ತಕದಿಂದ ತಲೆಯೆತ್ತಲಿಲ್ಲ. ಸ್ವಲ್ಪವೂ ಮಿಸುಕಾಡದೆ ಓದುವದರಲ್ಲಿ ತಲ್ಲೀನನಾಗಿದ್ದ ಅವನನ್ನು ನೋಡಿದರೆ ತನ್ನ ಸುತ್ತಲೂ ಇರುವವವರ ಅಸ್ತಿತ್ವವನ್ನು ಅವನು ಮರೆಯಲು ಪ್ರಯತ್ನಿಸುತ್ತಿರುವ ಹಾಗೆ ಕಾಣಿಸುತಿತ್ತು. 

ಮಾರನೆಯ ದಿನ ಕೂಡ ಹಿಮ ಮನುಷ್ಯ ಅದೇ ಜಾಗದಲ್ಲಿ , ಅದೇ ಭಂಗಿಯಲ್ಲಿ ಕುಳಿತುಕೊಂಡು ಪುಸ್ತಕವನ್ನು ಓದುತ್ತಿದ್ದ.  ನಾನು ಬೆಳಿಗ್ಗೆ ತಿಂಡಿ ತಿನ್ನಲು ಹೋದಾಗಲೂ , ಸಂಜೆ ಎಲ್ಲರೊಟ್ಟಿಗೆ ಸ್ಕೆಯಿಂಗ್ ಮುಗಿಸಿ ವಾಪಸು ಬಂದಾಗಲೂ ಅವನು ಅದೇ ಭಂಗಿಯಲ್ಲಿ , ಅದೇ ನಿರ್ಭಾವುಕ ಮುಖ ಹೊತ್ತು , ಅದೇ ಜಾಗದಲ್ಲಿ ಕುಳಿತು ಪುಸ್ತಕವನ್ನು ಓದುತ್ತಿದ್ದ.  ಅದರ ಮಾರನೆಯ ದಿನವೂ ಕೂಡ ಹಾಗೆಯೇ. ಹಗಲು ಕರಗಿ ಕತ್ತಲಾದರೂ  ಅವನು  ಕಿಟಕಿಯ ಹೊರಗೆ ಬೀಳುತ್ತಿದ್ದ ಚಳಿಯಂತೆ ಸ್ತಬ್ದವಾಗಿ ಕುಳಿತು ಪುಸ್ತಕ ಓದುತ್ತಿದ್ದ. ನಾಲ್ಕನೆಯ ದಿನ ಮಧ್ಯಾನ್ಹ ನಾನು ಯಾವುದೋ ನೆಪ ಹೇಳಿ ಉಳಿದವರೊಟ್ಟಿಗೆ ಹೊರಗೆ  ಆಡಲು ಹೋಗಲಿಲ್ಲ.  ಏಕಾಂಗಿಯಾಗಿ ನಾನು ಕೆಲ ಕಾಲ ಹೋಟೆಲಿನ ಪಡಸಾಲೆಯಲ್ಲಿ ಅಡ್ಡಾಡಿದೆ.  ನಿರ್ಜನವಾಗಿದ್ದ ಹೋಟೆಲಿನ ಪಡಸಾಲೆ ಶಬ್ದವಿಲ್ಲದೆ ಭೂತದ ಮನೆಯಂತೆ ಭಾಸವಾಗುತ್ತಿತ್ತು. ಪಡಸಾಲೆಯಲ್ಲಿನ ಗಾಳಿ ಬೆಚ್ಚಗಿತ್ತು , ತೇವವಾಗಿತ್ತು ಮತ್ತು ಗಾಳಿಯಲ್ಲಿ ತೇವಾಂಶದ ವಿಚಿತ್ರ ವಾಸನೆ ಬೆರೆತುಕೊಂಡಿತ್ತು. ಹೊರಗೆ ಅಡ್ಡಾಡಿ ಬಂದ ಜನ ತಮ್ಮ ಬೂಟುಗಳಿಗೆ ಹಿಡಿದಿದ್ದ ಹಿಮವನ್ನು ಒರೆಸಿಕೊಳ್ಳದೆಯೇ ಅಗ್ಗಷ್ಟಿಕೆಯ ಬೆಂಕಿಯ ಮುಂದೆ ಬಂದು ಕುಳಿತಾಗ, ಅವರ ಬೂಟಿನಿಂದ ಕರಗುತ್ತಿದ್ದ ಹಿಮದ ವಾಸನೆ ಸುತ್ತ ತುಂಬಿಕೊಂಡ ಹಾಗಿತ್ತು. ನಾನು ಖಾಲಿ ಕಿಟಕಿಗಳ ಹೊರಗೆ ದೃಷ್ಟಿ ಹಾಯಿಸಿದೆ. ಒಂದಷ್ಟು ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದೆ. ಆಮೇಲೆ ಧೈರ್ಯ ಮಾಡಿ ಹಿಮ ಮನುಷ್ಯನ ಬಳಿ ಬಂದು ಅವನನ್ನು ಮಾತನಾಡಿಸಿದೆ. ನಿಜ ಹೇಳಬೇಕೆಂದರೆ ನಾನು ಬಹಳ ನಾಚಿಕೆಯ ಸ್ವಭಾವದವಳು. ಯಾವತ್ತೂ ಯಾರೊಟ್ಟಿಗೂ ನಾನಾಗಿಯೇ ಮಾತುಕತೆ ಪ್ರಾರಂಭಿಸಿದವಳೇ ಅಲ್ಲ. ಆದರೆ ಆ ಕ್ಷಣಕ್ಕೆ ಅವನೊಟ್ಟಿಗೆ ಮಾತನಾಡಬೇಕೆಂಬ ಅದಮ್ಯ ಬಯಕೆಯನ್ನು ತಡೆ ಹಿಡಿಯಲಾಗಲಿಲ್ಲ. ಅವತ್ತು ರಾತ್ರಿ ಹೋಟೆಲಿನಲ್ಲಿ  ನನ್ನ  ಕೊನೆಯ ದಿನ. ಮಾರನೆಯ ದಿನ ಹೋಟೆಲಿನಿಂದ ಹೊರಟರೆ ಮತ್ತೆ ಅವನನ್ನು ಮಾತನಾಡಿಸಲು ಮತ್ತೆ ಅವಕಾಶ ಯಾವತ್ತೂ ಸಿಗಲಾರದು.  

"ನೀನು ಸ್ಕೈಯಿಂಗ್ ಮಾಡುವದಿಲ್ಲವೇ ?" ನಾನು ಸಾಧ್ಯವಾದಷ್ಟೂ ಸಹಜ ಧ್ವನಿಯಲ್ಲಿ ಅವನನ್ನು ಕೇಳಿದೆ. ಅವನು ನಿಧಾನವಾಗಿ ತಲೆಯೆತ್ತಿದ. ಅವನ ಮುಖದಲ್ಲಿ  ದೂರದಲ್ಲೆಲ್ಲೋ ಬೀಸುತ್ತಿರುವ ಗಾಳಿಯ ಶಬ್ದವನ್ನು ಆಲಿಸುತ್ತಿರುವಂತಹ ಭಾವವಿತ್ತು. ಅವನು ತಣ್ಣಗೆ ನನ್ನನ್ನು ದಿಟ್ಟಿಸಿದ. ನಂತರ ನಿಧಾನವಾಗಿ ತಲೆಯನ್ನು ಅಡ್ಡಡ್ಡ ಆಡಿಸಿದ. "ನಾನು ಸ್ಕೈಯಿಂಗ್ ಮಾಡುವದಿಲ್ಲ.  ಇಲ್ಲಿ ಹೀಗೆ ಕುಳಿತು ಪುಸ್ತಕ ಓದುವದನ್ನು ಮತ್ತು ಕಿಟಕಿಯಿಂದ ಹೊರಗೆ ಹಿಮ ಬೀಳುವದನ್ನು ನೋಡಲು ಇಷ್ಟಪಡುತ್ತೇನೆ. ". ಅವನ ಮಾತುಗಳು ಅವನ ಬಾಯಿಯಿಂದ ತುಸು ಮೇಲಕ್ಕೆ ಗಾಳಿಯಲ್ಲಿ, ಟಿವಿಯ ಪರದೆಯ ಮೇಲೆ ಬಿಸಿಯುಸಿರು ತಾಕಿದಾಗ ಕಾಣಿಸುವಂತಹ ,  ಸಣ್ಣನೆಯ ಬಿಳಿಯ  ಮೋಡವನ್ನು  ನಿರ್ಮಿಸಿದವು. ಅವನಾಡಿದ ಪ್ರತಿಯೊಂದು  ಶಬ್ದವೂ ನನ್ನ ಕಣ್ಣುಗಳಿಗೆ ಸ್ಪಷ್ಟವಾಗಿ  ಗೋಚರವಾದಂತೆ ಅನಿಸಿತು. ಅವನು ನಿಧಾನವಾಗಿ ಬೆರಳುಗಳ ತುದಿಗೆ ಕಟ್ಟಿದ್ದ ಮಂಜನ್ನು ಉದುರಿಸಿದ.

ಮುಂದಕ್ಕೆ ಏನು ಮಾತನಾಡಬಹುದೆಂದು ನನಗೆ ಅರ್ಥವಾಗಲಿಲ್ಲ. ನಾನು ಅಲ್ಲಿಯೇ ಸುಮ್ಮನೆ ನಾಚುತ್ತ ನಿಂತೆ. ಅವನು ನನ್ನ ಕಣ್ಣಲ್ಲಿ  ಕಣ್ಣಿಟ್ಟು ನೋಡಿದ. ಅವನು ಸಣ್ಣಗೆ ನಗುತ್ತಿರುವಂತೆ ನನಗೆ ತೋರಿತು ಅಥವಾ ನನಗೆ ಹಾಗನಿಸಿತು. ಅವನು ನಿಜಕ್ಕೂ ನಕ್ಕಿದ್ದನೆ ?
"ಕುಳಿತುಕೊಳ್ಳುವದಿಲ್ಲವೇ ?" ಹಿಮ ಮನುಷ್ಯ ಹೇಳಿದ. " ಬನ್ನಿ ಒಂದಷ್ಟು ಮಾತಾಡೋಣ. ನಿಮಗೆ ನನ್ನ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಇರಬಹುದು ಅಲ್ಲವೇ ? ಹಿಮ ಮನುಷ್ಯ ಎಂದರೆ ಏನು ಅನ್ನುವದನ್ನು    ತಿಳಿಯಬೇಕಾಗಿದೆ ಅಲ್ಲವೇ ? " ಈಗ ಅವನು ನಿಜಕ್ಕೂ ನಕ್ಕ. "ನೀವೇನೂ  ಭಯಪಡಬೇಕಾಗಿಲ್ಲ , ನನ್ನಿಂದ ನಿಮಗೆ ನೆಗಡಿ ಬರಲಾರದು "

ನಾನು ಹಿಮ ಮನುಷ್ಯನೊಟ್ಟಿಗೆ ಮಾತುಕತೆ ಶುರು ಮಾಡಿದ್ದು ಹೀಗೆ. ಹೋಟೆಲಿನ ಪಡಸಾಲೆಯಲ್ಲಿನ ಸೋಫಾದಲ್ಲಿ ಅಕ್ಕಪಕ್ಕ ಕುಳಿತು ಕಿಟಕಿಯ ಹೊರಗೆ ಬೀಳುತ್ತಿದ್ದ ಹಿಮವನ್ನು ನೋಡುತ್ತಾ ನಾವಿಬ್ಬರೂ ತಡೆತಡೆದು ಮಾತನಾಡುತ್ತಿದ್ದೆವು. ನಾನು ಕಾಫಿಯನ್ನು  ತರಿಸಿಕೊಂಡು ಕುಡಿದೆ. ಅವನು ಏನನ್ನೂ ತೆಗೆದುಕೊಳ್ಳಲಿಲ್ಲ. ಅವನೂ ಸಹ ನನ್ನ ಹಾಗೆ ಮಿತಭಾಷಿಯಾಗಿದ್ದ. ಅಲ್ಲದೆ  ಮಾತನಾಡಲು ಇಬ್ಬರಿಗೂ ಹೊಂದಿಕೆಯಾಗುವ   ಯಾವ ವಿಷಯವೂ  ಇರಲಿಲ್ಲ. ಮೊದಲು ನಾವು ಹವಾಮಾನದ ಬಗ್ಗೆ ಮಾತನಾಡಿದೆವು. ಆಮೇಲೆ ಹೋಟೇಲಿನ ಉತ್ತಮ ಸೇವೆಯ ಬಗ್ಗೆ ಒಂದಷ್ಟು ಹೊಗಳಿದೆವು. ಅವನು ಒಬ್ಬನೇ ಬಂದಿದ್ದಾನೆಯೇ ಎಂದು ನಾನು ಪ್ರಶ್ನಿಸಿದೆ. ಅವನು ಹೌದು ಎಂದ. ನನಗೆ ಸ್ಕೈಯಿಂಗ್  ಮಾಡುವದು ಇಷ್ಟವೇ ಎಂದು ಅವನು ಕೇಳಿದ. ಇಲ್ಲವೆಂದೆ. ಸ್ಕೈಯಿಂಗ್ ನನಗೆ ಇಷ್ಟವಿಲ್ಲದಿದ್ದರೂ ನನ್ನ ಸ್ನೇಹಿತೆಯರ ಒತ್ತಾಯಕ್ಕೆ ಇಲ್ಲಿಗೆ ಬಂದಿದ್ದೆ.  ನನಗೆ ಹಿಮ ಮನುಷ್ಯನ ಬಗ್ಗೆ ತಿಳಿದುಕೊಳ್ಳಬೇಕಿತ್ತು , ಅವನ ದೇಹ ಯಾವುದರಿಂದ ಮಾಡಲ್ಪಟ್ಟಿದೆ ? ಅವನು ಏನನ್ನು ತಿನ್ನುತ್ತಾನೆ ? ಬೇಸಿಗೆಯಲ್ಲಿ ಅವನು ಏನು ಮಾಡುತ್ತಾನೆ ? ಅವನಿಗೆ ಕುಟುಂಬವಿದೆಯೇ?  ಇತ್ಯಾದಿ . ಆದರೆ ಹಿಮ ಮನುಷ್ಯನಿಗೆ ಅವನ ಬಗ್ಗೆ ಮಾತನಾಡುವದು ಇಷ್ಟವಿರಲಿಲ್ಲ. ನನಗೂ ಅವನನ್ನು ಒತ್ತಾಯಿಸುವದು ಇಷ್ಟವಿರಲಿಲ್ಲ.

ಬದಲಾಗಿ ನಾವು  ಒಬ್ಬ ಸಾಮಾನ್ಯ ಮನುಷ್ಯಳಾದ ನನ್ನ ಕುರಿತೇ  ಮಾತನಾಡಿದೆವು.  ನನಗೆ ನಂಬಲು ಕಷ್ಟವಾದರೂ ಅದು ಹೇಗೋ ಹಿಮ ಮನುಷ್ಯನಿಗೆ  ನನ್ನ ಬಗ್ಗೆ ಎಲ್ಲ ಮಾಹಿತಿಯಿತ್ತು. ನನ್ನ ಬಾಲ್ಯ, ನನ್ನ ಕುಟುಂಬ, ನನ್ನ ಸ್ನೇಹಿತರು, ನನ್ನ ಇಷ್ಟಾನಿಷ್ಟಗಳು, ನಾನು ಯಾವ ರೀತಿಯ  ಅಲಂಕಾರ ಮಾಡಿಕೊಳ್ಳುತ್ತೇನೆ, ಎಲ್ಲೆಲ್ಲಿ ಓಡಾಡುತ್ತೇನೆ . .  ನನ್ನ ಜೀವನದಲ್ಲಿ ಇಲ್ಲಿಯವರೆಗೆ ನಡೆದ ಎಲ್ಲವೂ ಮೊದಲಿನಿಂದ ಕೊನೆಯವರೆಗೂ ಅವನಿಗೆ ತಿಳಿದಿತ್ತು. ಕೆಲವೊಂದು ಘಟನೆಗಳಂತೂ   ನನ್ನ ಬದುಕಿನಲ್ಲಿ ನಡೆದಿದೆ ಎಂದು ನಾನೇ ಮರೆತಿದ್ದರೂ ಅವನು ನನಗೆ ಜ್ಞಾಪಿಸಿದ್ದ. ನನಗೆ ಎಲ್ಲರೆದುರು ಬೆತ್ತಲೆಯಾದಂತೆ  ಅಸಾಧ್ಯ ನಾಚಿಕೆಯಾಯಿತು.

"ನಿನಗೆ ಅದು ಹೇಗೆ ನನ್ನ ಬಗ್ಗೆ ಅಷ್ಟೆಲ್ಲ ತಿಳಿದಿರಲು ಸಾಧ್ಯ ? ನಿನಗೆ  ಎದುರಿಗೆ  ಕುಳಿತವರ ಮನಸ್ಸನ್ನು ಓದುವ ಶಕ್ತಿಯಿದೆಯೇ ?"

"ಇಲ್ಲ ನನಗೆ ಜನರ ಮನಸ್ಸನ್ನು ಓದಲು ಸಾಧ್ಯವಿಲ್ಲ. ಆದರೆ ನನಗೆ  ಎಲ್ಲವೂ ತಿಳಿದಿದೆ . ನನಗೆ ಗೊತ್ತಾಗುತ್ತದೆ."  ಅವನು  ಹೊರಗೆ ಮಂಜಿನಲ್ಲಿ ಸಿಕ್ಕಿಹಾಕೊಂಡು ಹೆಪ್ಪುಗಟ್ಟಿದ ಏನನ್ನೋ ನೋಡುತ್ತಾ ನುಡಿದ. " ನಿಮ್ಮ  ಕಣ್ಣುಗಳನ್ನು ನೋಡಿದಾಗ ನಿಮ್ಮ ಬಗ್ಗೆ ಎಲ್ಲವೂ ನನಗೆ ಸ್ಪಷ್ಟವಾಗಿ ಕಾಣಿಸಿತು. "

"ನನ್ನ ಭವಿಷ್ಯ ಹೇಳಬಹುದೇ ?"

"ನಾನು ಭವಿಷ್ಯವನ್ನು ನೋಡಲಾರೆ"  ಅವನು ನಿರ್ಭಾವುಕತನದಿಂದ ನುಡಿದ ಮತ್ತು ಅವನ ತಲೆಯನ್ನು ನಿಧಾನವಾಗಿ ಆಡಿಸಿದ. "ನನಗೆ ಭವಿಷ್ಯದಲ್ಲಿ ಆಸಕ್ತಿಯಿಲ್ಲ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ನನಗೆ ಭವಿಷ್ಯದ ಪರಿಕಲ್ಪನೆಯೂ ಇಲ್ಲ. ಮಂಜುಗಡ್ಡೆಗೆ ಭವಿಷ್ಯವಿಲ್ಲ. ಅದು ಕೇವಲ ಭೂತವನ್ನು ಮಾತ್ರ ಘನಿಭವಿಸಿಟ್ಟುಕೊಳ್ಳುತ್ತದೆ.   ಅದು ಗತಿಸಿದ ಎಲ್ಲವನ್ನೂ ಇದ್ದ ಹಾಗೆಯೇ ಸ್ಪಷ್ಟವಾಗಿ, ತಾಜಾತನದಲ್ಲಿ  ಕಾಪಾಡಿಕೊಳ್ಳುತ್ತದೆ. ಮಂಜುಗಡ್ಡೆ ಎಲ್ಲವನ್ನೂ ಇದ್ದ ಹಾಗೆಯೇ  ಕಾಪಾಡಿಟ್ಟುಕೊಳ್ಳಬಲ್ಲದು. ಮಂಜುಗಡ್ಡೆಯ ಉದ್ದೇಶವೇ ಅದು."

"  ಒಳ್ಳೆಯದು" ನಾನು ನಸು ನಗುತ್ತ ಹೇಳಿದೆ . ನನ್ನ ಭವಿಷ್ಯದ ಬಗ್ಗೆ ಅವನಿಗೆ ಏನು ತಿಳಿದಿಲ್ಲ ಎನ್ನುವದು ನನಗೆ ನಿರಾಳತೆಯನ್ನು ತಂದು ಕೊಟ್ಟಿತ್ತು.  ನನಗೆ ನನ್ನ ಭವಿಷ್ಯವನ್ನು ತಿಳಿದುಕೊಳ್ಳುವ ಯಾವ ಉದ್ದೇಶವೂ ಇರಲಿಲ್ಲ.

+++++++++++++++++++++++++++++++++++++

ಹೋಟೆಲಿನಿಂದ ವಾಪಸು ಬಂದ ಮೇಲೆ ಹಲವಷ್ಟು ಸಲ ನಾವಿಬ್ಬರು ಭೇಟಿಯಾದೆವು. ಕ್ರಮೇಣ ಪ್ರತಿ ವಾರಾಂತ್ಯ ನಾವಿಬ್ಬರೂ ಸಿಗುತ್ತಿದ್ದೆವು.  ಎಲ್ಲರಂತೆ  ನಾವು ಯಾವತ್ತಿಗೂ ಜೊತೆಯಾಗಿ ಕುಳಿತು ಥಿಯೇಟರಿನಲ್ಲಿ ಸಿನಿಮಾ ನೋಡಲಿಲ್ಲ ,  ಕಾಫಿ ಅಂಗಡಿಗೆ ಹೋಗಿ ಕಾಪಿ ಕುಡಿಯಲಿಲ್ಲ ಅಥವಾ ಒಂದು ಒಳ್ಳೆಯ ಹೋಟೆಲಿನಲ್ಲಿ ರಾತ್ರಿ ಊಟಕ್ಕೂ ಹೋಗಲಿಲ್ಲ . ಬದಲಾಗಿ ಪ್ರತಿ ಸಲ  ಇಬ್ಬರು ಪಾರ್ಕಿನ ಮೂಲೆ ಬೆಂಚೊಂದರಲ್ಲಿ ಕುಳಿತು ಮಾತನಾಡುತ್ತಿದ್ದೆವು. ನಾವಿಬ್ಬರು ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೆವು. ಆದರೆ ಯಾವತ್ತಿನಂತೆ ಹಿಮ ಮನುಷ್ಯ ಅವನ ಬಗ್ಗೆ ಏನನ್ನೂ ಹೇಳುತ್ತಿರಲಿಲ್ಲ. 'ಯಾಕೆ' ಎಂದು ನಾನು ಕೇಳಿದೆ. "ನಿನ್ನ ಬಗ್ಗೆ ಯಾವತ್ತಿಗೂ ನೀನು ಹೇಳುವದೇ ಇಲ್ಲವಲ್ಲ- ನೀನು ಹುಟ್ಟಿದ್ದು ಎಲ್ಲಿ ? ನಿನ್ನ ತಂದೆ ತಾಯಿಯರು ಯಾರು ? ನೀನು ಅದು ಹೇಗೆ ಹಿಮ ಮನುಷ್ಯನಾದೆ ?" ಅವನು ನನ್ನ ಮುಖವನ್ನು ಅರೆ ಕ್ಷಣ ದಿಟ್ಟಿಸಿದ. ಆಮೇಲೆ ನಿಧಾನವಾಗಿ ತಲೆಯಾಡಿಸಿದ. "ನನಗೂ ಗೊತ್ತಿಲ್ಲ" ಅವನು ಉಸುರಿದ. ನಂತರ ಅವನು ದೀರ್ಘವಾದ  ಅಚ್ಚ ಬಿಳಿಯ ಉಸಿರನ್ನು ಹೊರಗೆ ಬಿಡುತ್ತ ಹೇಳಿದ "ನನಗೆ ಭೂತಕಾಲವಿಲ್ಲ. ಆದರೆ ನಾನು ಭೂತಕಾಲವನ್ನು ಅರಿತಿದ್ದೇನೆ. ಭೂತಕಾಲದಲ್ಲಿ ನಡೆದ ಘಟನೆಗಳನ್ನು ಹಿಡಿದಿಟ್ಟುಕೊಂಡಿದ್ದೇನೆ. ಆದರೆ ನನಗೆ ನನ್ನದೇ ಆದ ಭೂತಕಾಲದ ಅರಿವಿಲ್ಲ. ನಾನು ಹುಟ್ಟಿದ್ದು ಎಲ್ಲಿ ಎನ್ನುವದು ನನಗೆ ತಿಳಿದಿಲ್ಲ.  ನನ್ನ ತಂದೆ ತಾಯಿ ನನ್ನ ಮುಂದೆಯೇ ಬಂದರೂ ನಾನು ಅವರನ್ನು ಗುರುತಿಸಲಾರೆ. ನನಗೆ ತಂದೆ ತಾಯಿಯರು ಇದ್ದಾರೆಯೇ ಎನ್ನುವದೂ ಸಹಿತ ನನಗೆ ತಿಳಿದಿಲ್ಲ. ನನ್ನ ವಯಸ್ಸೆಷ್ಟು ಎನ್ನುವದು ನನಗೆ ತಿಳಿದಿಲ್ಲ. ಕಾಲದ ಅರಿವಿಲ್ಲದ ನನಗೆ ವಯಸ್ಸು ಇದೆಯೇ ಎನ್ನುವದೂ ಕೂಡ  ಗೊತ್ತಿಲ್ಲ."   ಹಿಮ ಮನುಷ್ಯ ಮಂಜಿನ ರಾಶಿಯಲ್ಲಿನ ಮಂಜುಗಡ್ಡೆಯಂತೆ  ತೋರುತ್ತಿದ್ದ. . 

ಮತ್ತು ನಿಧಾನವಾಗಿ ನಾನು ಹಿಮ ಮನುಷ್ಯನನ್ನು ಆಳವಾಗಿ ಪ್ರೀತಿಸಲು ಪ್ರಾರಂಭಿಸಿದೆ.  ಭೂತವಿಲ್ಲದ ಭವಿಷ್ಯವಿಲ್ಲದ ಅವನು ಕೇವಲ ವರ್ತಮಾನದ ನನ್ನನ್ನು ಮಾತ್ರ ಪ್ರೀತಿಸುತ್ತಿದ್ದ ಮತ್ತು ನಾನು ಭೂತ ಭವಿಷ್ಯತ್ತನ್ನು ಹೊರತುಪಡಿಸಿ ಕೇವಲ  ವರ್ತಮಾನದ ಹಿಮ ಮನುಷ್ಯನನ್ನು ಮಾತ್ರ ಪ್ರೀತಿಸುತ್ತಿದ್ದೆ.  ಇದು  ಅತ್ಯುತ್ಕೃಷ್ಟ ಪ್ರೀತಿ ಅನಿಸಿತು. ನಾವು ಮದುವೆಯಾಗುವ ಯೋಚನೆ ಮಾಡತೊಡಗಿದೆವು. ನಾನು ಆಗ ತಾನೇ ಇಪ್ಪತ್ತು ವರ್ಷದ ಯುವತಿಯಾಗಿದ್ದೆ ಮತ್ತು ನನ್ನ ಕೋಮಲ ಭಾವನೆಗಳನ್ನು ಕೆರಳಿಸಿದ ಮೊದಲ ವ್ಯಕ್ತಿ ಹಿಮ ಮನುಷ್ಯನಾಗಿದ್ದ. ಹಿಮ ಮನುಷ್ಯ ಇರದಿದ್ದರೆ ಅವನನ್ನು  ಹೊರತುಪಡಿಸಿ ಬೇರೆಯವರನ್ನು  ಪ್ರೀತಿಸುತ್ತಿದ್ದೆನೋ ಎನ್ನುವದನ್ನು   ಕಲ್ಪಿಸಿಕೊಳ್ಳುವದು ಸಹ ನನಗೆ ಅಸಾಧ್ಯವಾಗಿತ್ತು.  

ನನ್ನ ಅಮ್ಮ ಮತ್ತು ಸಹೋದರಿ ಇಬ್ಬರೂ ನಾನು ಹಿಮ ಮನುಷ್ಯನನ್ನು ಪ್ರೀತಿಸುವದನ್ನು ಖಡಾಖಂಡಿತವಾಗಿ ವಿರೋಧಿಸಿದರು. ಮದುವೆಯಾಗಲಿಕ್ಕೆ ನೀನು  ಇನ್ನೂ ಚಿಕ್ಕವಳು ಎಂದರು. ಅವನ ಬಗ್ಗೆ ನಿನಗೆ ಏನೊಂದು ಗೊತ್ತಿಲ್ಲ, ಅವನು ಯಾರು ? ಅವನ ಹಿನ್ನೆಲೆಯೇನು ? ಅವನು ಬಂದಿದ್ದು ಎಲ್ಲಿಂದ?  ಏನೂ ಗೊತ್ತಿಲ್ಲದೇ ಮದುವೆಯಾಗಲು ಹೇಗೆ ಸಾಧ್ಯ ಎಂದು ವಾದಿಸಿದರು.  ಇಂಥ ಮದುವೆಗೆ ನಾವುಗಳು ಒಪ್ಪಿಗೆ ಕೊಡಲು ಸಾಧ್ಯವಿಲ್ಲ ಎಂದರು. ಮದುವೆ ಎಂದರೆ ಹುಡುಗಾಟವಲ್ಲ. ಹಿಮ ಮನುಷ್ಯನನ್ನು ವರಿಸುವಷ್ಟು ದೊಡ್ಡ ಜವಾಬ್ದಾರಿ ಹೊರಲು ನಿನಗೆ ಸಾಧ್ಯವೇ ಎಂದು ಕೇಳಿದರು. 

ಆದರೆ ಅವರು ಅನಗತ್ಯವಾಗಿ ಆತಂಕ ಪಡುವ ಅವಶ್ಯಕತೆಯಿರಲಿಲ್ಲ. ಹಿಮ ಮನುಷ್ಯನೇನೂ ಸಂಪೂರ್ಣ ಹಿಮದಿಂದ ಮಾಡಲ್ಪಟ್ಟವನಾಗಿರಲಿಲ್ಲ. ಅವನು ತಣ್ಣಗಿದ್ದ ಅಷ್ಟೇ. ಅವನೇನೂ ಬಿಸಿಗೆ ಕರಗುತ್ತಿರಲಿಲ್ಲ.  ಅವನ ದೇಹ   ತಣ್ಣಗಿದ್ದರೂ ಅದು ಮಂಜಿಗಿಂತ ಬೇರೆಯದೇ ಆಗಿತ್ತು. ಅವನು  ಎಷ್ಟೇ ತಣ್ಣಗಿದ್ದರೂ ಅದರಿಂದ ಬೇರೆಯವರ ದೇಹದ ಬಿಸಿಯೇನೂ ಕಡಿಮೆಯಾಗುತ್ತಿರಲಿಲ್ಲ.

ಕೊನೆಗೊಂದು ದಿನ ನಾವಿಬ್ಬರೂ ಮದುವೆಯಾದೆವು. ನಮ್ಮ ಮದುವೆಯಲ್ಲಿ  ಯಾರೂ ಭಾಗವಹಿಸಲಿಲ್ಲ. ಯಾರಿಗೂ ಸಂತೋಷವಾಗಿರಲಿಲ್ಲ. ನಾವು ಯಾವುದೇ ಸಂತೋಷಕೂಟವನ್ನೂ ಏರ್ಪಡಿಸಲಿಲ್ಲ. ಹಿಮ ಮನುಷ್ಯನಿಗೆ ಕುಟುಂಬವೇ ಇಲ್ಲದುದರಿಂದ ನಾವು ವಿವಾಹ ನೊಂದಾವಣಿ ಪತ್ರಕ್ಕೂ ಅರ್ಜಿ ಹಾಕಲಿಲ್ಲ. ಒಂದು ದಿನ ನಾವಿಬ್ಬರೂ ನಮಗಿಬ್ಬರಿಗೆ ಮದುವೆ ಆಗಿದೆ ಒಂದು ನಿರ್ಧರಿಸಿದೆವು  ಅಷ್ಟೇ. ಸ್ವಲ್ಪ ಸಿಹಿ ತಂದು ಇಬ್ಬರೂ ತಿಂದೆವು. ನಾವು ಒಂದು ಅಪಾರ್ಟ್ ಮೆ೦ಟನ್ನು ಬಾಡಿಗೆಗೆ ಹಿಡಿದೆವು.  ಹಿಮ ಮನುಷ್ಯ ಹತ್ತಿರದಲ್ಲೇ ಇರುವ ಒಂದು ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ.  ಎಷ್ಟೇ ದುಡಿದರೂ ಅವನಿಗೆ ದಣಿವಾಗುತ್ತಿರಲಿಲ್ಲ. ಹೀಗಾಗಿ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಅವನಿಗೆ ಭಡ್ತಿಯಾಯಿತು. ನಾವು ಯಾರೊಬ್ಬರ ತಂಟೆಗೂ ಹೋಗುತ್ತಿರಲಿಲ್ಲ ಮತ್ತು ಯಾರೂ ನಮ್ಮ ತಂಟೆಗೂ ಬರುತ್ತಿರಲಿಲ್ಲ. ಒಟ್ಟಿನಲ್ಲಿ ಶಾಂತ ಜೀವನ.

ಅವನು ಪ್ರತಿ ಬಾರಿ ನನ್ನನ್ನು ತಬ್ಬಿಕೊಂಡಾಗಲೂ ದೂರದ ಯಾವುದೋ ಅಜ್ಞಾತ ಸ್ಥಳದಲ್ಲಿ ಯಾವುದೋ ಒಂದು ದೊಡ್ಡ ಹಿಮಗಡ್ಡೆ  ಅಸ್ತಿತ್ವದಲ್ಲಿದೆ ಎನ್ನುವ  ಭಾವ ನನ್ನಲ್ಲಿ ಸುಳಿದು ಹೋಗುತ್ತಿತ್ತು. ಈ  ಮನುಷ್ಯನಿಗೆ ಆ ಹಿಮಗಡ್ಡೆ ಎಲ್ಲಿದೆ ಎನ್ನುವದು ಗೊತ್ತಿದೆ.  ಆ ಹಿಮಗಡ್ಡೆ ಕಠಿಣವಾಗಿತ್ತು. ನಾನು ಅಂದುಕೊಂಡದ್ದಕ್ಕಿಂತ ಕಠಿಣವಾಗಿತ್ತು. ಅದೊಂದು ಪ್ರಪಂಚದಲ್ಲೇ  ದೊಡ್ಡದಾದ ಹಿಮಗಡ್ಡೆ. ಆದರೆ ಊಹಿಸಲಸಾಧ್ಯವಾದಷ್ಟು ದೂರದಲ್ಲಿರುವ ಹಿಮ ಗಡ್ಡೆ.  ಆ  ಹಿಮಗಡ್ಡೆಯ ರಹಸ್ಯ  ಜಗತ್ತಿನ ಪ್ರತೀಕವಾಗಿ ಅವನಿದ್ದ.  ಮೊದಮೊದಲು  ಅವನು ತಬ್ಬಿಕೊಂಡಾಗಲೆಲ್ಲ ಹಿಮಗಡ್ಡೆಯ ವಿಚಾರ ಬಂದು  ನನಗೆ ತಳಮಳವಾಗುತ್ತಿತ್ತು.  ಕ್ರಮೇಣ ಅದು ಅಭ್ಯಾಸವಾಯಿತು ಮತ್ತು ನಾನು ಅದನ್ನು ಇಷ್ಟಪಡತೊಡಗಿದೆ. ಅವನು ತನ್ನ ಬಗ್ಗೆ ಮಾತನಾಡುತ್ತಿರಲಿಲ್ಲ. ಅವನು ಹಿಮ ಮನುಷ್ಯನಾಗಿದ್ದು ಹೇಗೆ ಅನ್ನುವದನ್ನು ಸಹ ಹೇಳಲಿಲ್ಲ ಮತ್ತು ನಾನು ಏನನ್ನೂ ಕೇಳಲಿಲ್ಲ. ಏಕಾಂತದ ಮೌನದಲ್ಲಿ ಪರಸ್ಪರರು ತಬ್ಬಿಕೊಂಡು ಆ ದೊಡ್ಡದಾದ , ನಿಶ್ಚಲವಾದ  ಹಿಮಗಡ್ಡೆಯನ್ನು ನಾವು ಹಂಚಿಕೊಳ್ಳುತ್ತಿದ್ದೆವು. ಸಾವಿರ ವರುಷಗಳ ಭೂತಕಾಲವನ್ನು ಅದರ  ಮೂಲ  ಸ್ವರೂಪದಲ್ಲಿಯೇ ಹುದುಗಿಸಿಟ್ಟುಕೊಂಡ ಹಿಮಗಡ್ಡೆ . 

ನಮ್ಮ ವೈವಾಹಿಕ ಜೀವನದಲ್ಲಿ ಹೇಳಿಕೊಳ್ಳುವಂತಹ  ಯಾವುದೇ  ಕುಂದು ಕೊರತೆಗಳಿರಲಿಲ್ಲ. ಪರಸ್ಪರರನ್ನು ಅಗಾಧವಾಗಿ ಪ್ರೀತಿಸುತ್ತಿದ್ದೆವು. ಮೊದಮೊದಲು ನೆರೆಹೊರೆಯವರು ಅವನನ್ನು ದೂರವಿಟ್ಟಿದ್ದರೂ , ಕ್ರಮೇಣ ಅವರೂ ಸಹ ಅವನೊಟ್ಟಿಗೆ ನಿಧಾನವಾಗಿ ಮಾತನಾಡಲು ಪ್ರಾರಂಭಿಸಿದರು. ಅವನು ಹಿಮ ಮನುಷ್ಯನಾಗಿದ್ದರೂ ಇತರರಿಗಿಂತ ಭಿನ್ನವಾಗಿಲ್ಲ ಎಂದು   ಅವರು ಹೇಳಿದರೂ ಅವರ ಹೃದಯದ ಆಳದಲ್ಲಿ ಅವನನ್ನು ತಮ್ಮಲ್ಲೊಬ್ಬ ಒಂದು ಒಪ್ಪುವದು ಅವರಿಗೆ ಸಾಧ್ಯವಾಗಿರಲಿಲ್ಲ ಮತ್ತು ನಮ್ಮ ಮದುವೆಯನ್ನು ಒಪ್ಪಿಕೊಳ್ಳುವದು ಅವರಿಗೆ ಕಷ್ಟವಾಗಿತ್ತು.

ನಮ್ಮಿಬ್ಬರಿಗೆ ಮಕ್ಕಳಾಗಲಿಲ್ಲ. ಬಹುಶ: ನರಮನುಷ್ಯರ  ಸೃಷ್ಟಿ ಕ್ರಿಯೆಯೊಂದಿಗೆ  ಹಿಮ ಮನುಷ್ಯರದು ಹೊಂದಾಣಿಕೆಯಾಗುವದಿಲ್ಲವೇನೋ. ಅದು ಏನೇ ಇರಲಿ, ಮಕ್ಕಳಿಲ್ಲದುದರಿಂದ ನನಗೆ  ಸಾಕಷ್ಟು ಬಿಡುವಿನ ಸಮಯವಿತ್ತು.  ಬೆಳಿಗ್ಗೆ ಮನೆಗೆಲಸವನ್ನು ಮುಗಿಸಿದ ಮೇಲೆ  ಮಾಡಲು ಬೇರೆ ಯಾವ ಕೆಲಸವೂ ಇರುತ್ತಿರಲಿಲ್ಲ. ನನಗೆ ಹೇಳಿಕೊಳ್ಳುವಂತ ಆತ್ಮೀಯ ಸ್ನೇಹಿತರೂ ಇರಲಿಲ್ಲ,  ಮದುವೆಯ ನಂತರ ಮನೆಯವರೆಲ್ಲ ದೂರವಾಗಿದ್ದರು, ಅಕ್ಕಪಕ್ಕದವರ ಜೊತೆಗೂ ಅಂತಹ ಸಲಿಗೆಯಿರಲಿಲ್ಲ. ಹಿಮ ಮನುಷ್ಯ ಕೆಲಸಕ್ಕೆ ಹೊರಗೆ ಹೋದ ನಂತರ ನಾನು ಮನೆಯಲ್ಲಿ ಪುಸ್ತಕ ಓದುತ್ತಲೋ , ಸಂಗೀತವನ್ನು ಆಲಿಸುತ್ತಲೋ ಸಮಯ ಕಳೆಯುತ್ತಿದ್ದೆ. ಹಾಗೆ ನೋಡಿದರೆ ನನಗೆ ಹೊರಗೆ ಸುತ್ತಾಡುವದಕ್ಕಿಂತ ಮನೆಯಲ್ಲಿ ಕಾಲ ಕಳೆಯುವದೆ ಹಿಡಿಸುತ್ತಿತ್ತು ಹೀಗಾಗಿ ಒಬ್ಬಂಟಿಯಾಗಿರುವದು ಕಷ್ಟವೆಂದು ಅನಿಸಲಿಲ್ಲ. ಇಷ್ಟಾದರೂ  ಪ್ರತಿ ದಿನದ ಏಕತಾನದ ಕೆಲಸ ನನ್ನ ಯೌವನದ ಮನಸ್ಸಿನ ಮೇಲೆ ಸೂಕ್ಷ್ಮ ಪ್ರಭಾವವನ್ನು ಬೀರುತ್ತಿತ್ತು. ಏಕಾಂತಕ್ಕಿಂತ ಹೆಚ್ಚಾಗಿ ಪ್ರತಿದಿನವೂ ಒಂದಿನಿತೂ ಹೆಚ್ಚು ಕಡಿಮೆಯಿಲ್ಲದೆ ಪುನರಾವರ್ತನೆಯಾಗುತ್ತಿರುವ ದಿನಚರಿಯಿಂದ ಕ್ರಮೇಣ ನಾನು ನನ್ನದೇ ನೆರಳು ಎಂದು ಭಾಸವಾಗುತ್ತಿತ್ತು. ಕಡೆಗೆ  ಒಂದು ದಿನ ನನ್ನ ಗಂಡನ ಬಳಿಯಲ್ಲಿ ನಾನೊಂದು ಬೇಡಿಕೆಯಿಟ್ಟೆ. " ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಆದರೆ ನನಗೆ  ಸಮಯ ಕಳೆಯುವದು ಕಷ್ಟಕರವಾಗಿದೆ.  ಒಂದು ಸಲ  ನಾನು ಇಲ್ಲಿಯವರೆಗೆ ಯಾವತ್ತೂ ಹೋಗದಿರುವ ಜಾಗಕ್ಕೆ ಹೋಗಿ, ನಾನು ಇಲ್ಲಿಯವರೆಗೆ ಯಾವತ್ತೂ ನೋಡಿರದುದ್ದನ್ನು ನೋಡಲು ಬಯಸುತ್ತೇನೆ. ನಾನು ಇಲ್ಲಿಯವರೆಗೆ ಯಾವತ್ತೂ ಉಸಿರಾಡಿರದ ಆಹ್ಲಾದಕರ ಗಾಳಿಯನ್ನು ಒಮ್ಮೆ ಒಳೆಗೆಳೆದುಕೊಳ್ಳಬೇಕು. ಹೇಗಿದ್ದರೂ ನಾವು ಹನಿಮೂನಿಗೂ ಹೋಗಿಲ್ಲ. ಒಂದು ದೂರದ ತಿರುಗಾಟಕ್ಕೆ ಒಮ್ಮೆ ಹೋಗಿ ಬರೋಣವೇ ?"

ಹಿಮ ಮನುಷ್ಯ ದೀರ್ಘವಾದ, ಹೆಪ್ಪುಗಟ್ಟುವಂತಹ ಉಸಿರನ್ನು ಬಿಟ್ಟ. ಉಸಿರು ಹೊರಬಂದಾಗ ಗಾಳಿಯಲ್ಲಿ ಹಿಮ ಉದುರುವ ಸೂಕ್ಷ್ಮ ಸದ್ದು ಕೇಳಿಸಿತು. ಅವನು ತನ್ನ ಉದ್ದನೆಯ ಹಿಮ ತಾಕಿದ ಕೈ ಬೆರಳುಗಳನ್ನು ಮಂಡಿಯ ಮೇಲಿಟ್ಟುಕೊಂಡ. " ನಿನಗೆ ಎಲ್ಲಿಯಾದರೂ ಪ್ರವಾಸಕ್ಕೆ ಹೋಗಬೇಕು ಎಂದು ಉತ್ಕಟವಾದ ಬಯಕೆಯಿದ್ದರೆ ಹೋಗಬಹುದು. ಪ್ರವಾಸಕ್ಕೆ ಹೋಗುವದು ಒಳ್ಳೆಯದು ಎಂದು ವೈಯಕ್ತಿಕವಾಗಿ ನನಗೆ ಅನಿಸುತ್ತಿಲ್ಲ. ಆದರೆ ಹೋಗುವದರಿಂದ ನಿನಗೆ ಸಂತೋಷವಾಗುತ್ತದೆ ಎಂದಾದರೆ ನಾನದಕ್ಕೆ ಸಿದ್ಧ. ನೀನು ಖುಷಿಯಾಗಿರುವದಕ್ಕೆ  ನಾನು  ಏನನ್ನು  ಮಾಡಲೂ ಸಿದ್ಧನಿದ್ದೇನೆ.  ನೀನು ಹೇಳಿದಲ್ಲಿ ಹೋಗೋಣ. ಹೇಳು ಎಲ್ಲಿಗೆ ಹೋಗುವದು ?"

"ದಕ್ಷಿಣದ ತುತ್ತ ತುದಿಗೆ ಹೋದರೆ ಹೇಗೆ ? " ನಾನು ಕೇಳಿದೆ.  ಹಿಮ ಮನುಷ್ಯನಿಗೆ ಅಲ್ಲಿಯ ಚಳಿ ಇಷ್ಟವಾಗುವದು ಎನ್ನುವದಕ್ಕೆ ನಾನು ದಕ್ಷಿಣ ಧ್ರುವ  ಎಂದಿದ್ದು. ಅಲ್ಲದೇ , ಅಲ್ಲಿಗೊಮ್ಮೆ ಹೋಗಬೇಕು ಎನ್ನುವದು ನನ್ನ ಜೀವಿತದ ಬಯಕೆಯಾಗಿತ್ತು. ನನಗೆ ಅಲ್ಲಿ ತಿರುಗಾಡುವ ಪೆ೦ಗ್ವಿನ್ ಗಳನ್ನು ನೋಡಬೇಕಿತ್ತು.  ಹಿಮವನ್ನು ತೂರಿ ಬರುತ್ತಿರುವ ಮಂದಬೆಳಕಿನಲ್ಲಿ  ದಪ್ಪನೆಯ ಉಣ್ಣೆಯ ಕೋಟುಗಳನ್ನು ತೊಟ್ಟುಕೊಂಡು ಪೆ೦ಗ್ವಿನ್ ಜೊತೆಗೆ ನಾನು ಆಟವಾಡುತ್ತಿರುವಂತೆ ಕಲ್ಪಿಸಿಕೊಂಡೆ. 

  ನಾನು ಈ ವಿಷಯವನ್ನು ಹೇಳಿದಾಗ, ನನ್ನ ಗಂಡ ಹಿಮ ಮನುಷ್ಯ ನನ್ನ ಕಣ್ಣಲ್ಲಿ ಕಣ್ಣಿಟ್ಟು ರೆಪ್ಪೆ ಬಡಿಯದೆ ನೋಡಿದ. ಅವನ ಹರಿತ ದೃಷ್ಟಿ ಚೂಪಾದ ಮಂಜಿನ ಚೂರಿನಂತೆ ನನ್ನ ಕಣ್ಣುಗಳನ್ನು ಹೊಕ್ಕು ತಲೆಯ ಹಿಂಭಾಗವನ್ನು  ಸೀಳಿ ಹೊರಬರುತ್ತಿರುವಂತೆ ಭಾಸವಾಯಿತು. ಅವನು ಕ್ಷಣಕಾಲ ತನ್ನಷ್ಟಕ್ಕೆ ತಾನೇ ಏನನ್ನೋ ಚಿ೦ತಿಸಿದ. "ಸರಿ ಹಾಗಾದರೆ. ಅಲ್ಲಿಗೆ ಹೋಗಬೇಕು ಎನ್ನುವದು ನಿನ್ನ ಬಯಕೆಯಾಗಿದ್ದರೆ, ಅಲ್ಲಿಗೇ ಹೋಗೋಣ. ಅಲ್ಲಿಗೆ ಹೋಗಬೇಕಲ್ಲವೇ ?"

ನಾನು ಒಪ್ಪಿದೆ.

ಬಹುಶ: ಇನ್ನು ಎರಡು ವಾರಗಳಲ್ಲಿ ನಾನು ಕಚೇರಿಯಲ್ಲಿ ದೀರ್ಘಾವಧಿ ರಜೆಯನ್ನು ತೆಗೆದುಕೊಳ್ಳಬಹುದು. ಅಷ್ಟರೊಳಗೆ  ನಮ್ಮ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಬಹುದು.

ನಾನು ತಕ್ಷಣಕ್ಕೆ ಏನೂ ಹೇಳಲಿಲ್ಲ.

ಆದರೆ ಕ್ರಮೇಣ ನಾನು ದಕ್ಷಿಣದ ತುದಿಗೆ ಹೋಗುವ ವಿಚಾರವನ್ನು ಯಾಕಾದರೂ ಅವನ ಬಳಿ ಹೇಳಿದೆನೋ ಎಂದು ಅನ್ನಿಸತೊಡಗಿತು. ನಾನು ಆ ವಿಷಯವನ್ನು ಪ್ರಸ್ತಾವಿಸಿದ ದಿನದಿಂದ ಅವನಲ್ಲಾಗುತ್ತಿರುವ   ಸೂಕ್ಷ್ಮ ಬದಲಾವಣೆ  ನನಗೆ ಗೋಚರವಾಗುತ್ತಿತ್ತು. ಅವನ ದೃಷ್ಟಿ ಮತ್ತಷ್ಟು ಹರಿತಗೊಂಡಿತ್ತು. ಅವನ ಉಸಿರು ಮತ್ತಷ್ಟು ತಣ್ಣಗಾಗಿತ್ತು. ಅವನ ಕೈಬೆರಳಿನ ಅಂಚಿನಲ್ಲಿ ಹಿಮಗಟ್ಟುವದು ಜಾಸ್ತಿಯಾಗಿತ್ತು. ಅವನು ಮತ್ತಷ್ಟು ಮಿತಭಾಷಿಯೂ,ಹಠಮಾರಿಯೂ ಆಗಿದ್ದ. ಇತ್ತೀಚಿಗೆ ಅವನು ಏನನ್ನೂ ತಿನ್ನುತ್ತಿರಲಿಲ್ಲ. ನನಗೆ ಭಯವಾಗತೊಡಗಿತು.  ಹೊರಡುವದಕ್ಕೆ ಇನ್ನೇನು ಐದು ದಿನಗಳಿವೆ ಎಂದಾದಾಗ ನಾನು  ಅವನ ಬಳಿ ಧೈರ್ಯ ಮಾಡಿ ನಮ್ಮ ಪ್ರಯಾಣವನ್ನು ರದ್ದುಗೊಳಿಸಲು ಕೇಳಿಕೊಂಡೆ.
 "ಬಹುಶ: ಅಲ್ಲಿಯ ತೀವ್ರ ಚಳಿ ನನಗೆ ಸಹಿಸಲಸಾಧ್ಯವಾಗಿರಬಹುದು. ನಾವು ಈ ಚಳಿಯ ಪ್ರದೇಶವನ್ನು ಬಿಟ್ಟು ಯಾವುದಾದರೂ ಸಾಮಾನ್ಯ ಜಾಗೆಗಳಿಗೆ ಹೋಗಬಹುದೇನೋ. ಯುರೋಪಿಗೆ ಹೋದರೆ ಹೇಗೆ ? ಅಲ್ಲಿ ಸ್ಪೇನ್ ಚೆನ್ನಾಗಿದೆಯಂತೆ. ಅಲ್ಲಿ ವೈನ್ ಹೀರುತ್ತಾ ಗೂಳಿ ಕಾಳಗ ನೋಡಬಹುದು. "
ಅವನು ಕ್ಷಣ ಕಾಲ ಶೂನ್ಯವನ್ನು ದಿಟ್ಟಿಸಿದ. ನಂತರ ದೃಷ್ಟಿಯನ್ನು ನನ್ನತ್ತ ಹೊರಳಿಸಿದ. ಮತ್ತದೇ ಹರಿತ ದೃಷ್ಟಿ, ನನ್ನೊಳಗಿಳಿದು . ನನ್ನನ್ನು ಹಂತ ಹಂತವಾಗಿ ಕೊರೆಯುತ್ತಿರುವಂತೆ ಭಾಸವಾಗಿ ಒಂದು ಕ್ಷಣ ನಡುಗಿದೆ. " ಇಲ್ಲ ನನಗೆ ಸ್ಪೇನ್ ಹೋಗುವದಕ್ಕೆ ಇಷ್ಟವಿಲ್ಲ. ಅಲ್ಲಿನ ಧೂಳು, ಶೆಕೆ  ನನಗೆ ಹಿಡಿಸುವದಿಲ್ಲ. ಮತ್ತು ಅಲ್ಲಿನ ಮಸಾಲೆ ಆಹಾರವನ್ನು ತಿನ್ನುವದು ಅಸಾಧ್ಯ. ಅದು ಏನೇ ಇರಲಿ, ನಾನು ಈಗಾಗಲೇ ದಕ್ಷಿಣದ ತುದಿಗೆ ಹೋಗಲು ಟಿಕೇಟುಗಳನ್ನು ಕಾಯ್ದಿರಿಸಿದ್ದೇನೆ. ನಿನಗೆ ಕೋಟು, ಬೂಟುಗಳನ್ನು ಖರೀದಿಸಿದ್ದೇನೆ. ಅವನ್ನು ವ್ಯರ್ಥ ಮಾಡುವದಕ್ಕೆ ಸರಿಯಲ್ಲ "   

ಅವನು ನಿರ್ಭಾವುಕನಾಗಿ ಹೇಳಿದ ರೀತಿಗೆ ನಾನು ಒಂದು ಕ್ಷಣ ತಲ್ಲಣಿಸಿದೆ. ನಾವು ದಕ್ಷಿಣಕ್ಕೆ ಹೋದರೆ ಯಾವುದೋ ಅಪಾಯ ಕಾದಿದೆ ಎಂದು ನನ್ನ ಒಳ ಮನಸ್ಸು ನುಡಿಯಲಾರಂಭಿಸಿತು. ಅಲ್ಲಿ, ನಾವಿಬ್ಬರು  ಮತ್ತೆ ಯಾವತ್ತೂ ಮರಳಿ ಪಡೆಯಲಾಗದ ಯಾವುದನ್ನೋ ಕಳೆದುಕೊಳ್ಳುತ್ತೇವೆ ಎಂದು ನನ್ನ ಮನಸ್ಸಿನ ಮೂಲೆಯಲ್ಲಿ ಅನಿಸತೊಡಗಿತು. ಅವತ್ತಿನಿಂದ ನನಗೆ ಪ್ರತಿದಿನವೂ ದುಃಸ್ವಪ್ನ ಕಾಡುತಿತ್ತು. ಪ್ರತಿ ದಿನವೂ ಅದೇ ಸ್ವಪ್ನ ಪುನರಾವರ್ತನೆಯಾಗುತಿತ್ತು. ಸ್ವಪ್ನದಲ್ಲಿ ನಾನು ಹೊರಗಡೆ ಅಡ್ಡಾಡಲು ಹೋಗಿದ್ದಾಗ ಆಳವಾದ ಗುಂಡಿಯೊಳಗೆ ಬೀಳುತ್ತಿದ್ದೆ . ನಿರ್ಜನ ಪ್ರದೇಶವದು.  ನಾನು ಕೂಗಿದಷ್ಟು ನನ್ನ ಧ್ವನಿಯೇ ನನಗೆ ಮರಳಿ ಕೇಳಿಸುತ್ತಿತ್ತು.  ಕ್ರಮೇಣ ಅಲ್ಲಿಯೇ ಹಿಮಗಟ್ಟಿದೆ. ಹಿಮದೊಳಗೆ ಸಿಕ್ಕಿಕೊಂಡ ನನಗೆ ತಲೆಯೆತ್ತಿದರೆ ಆಕಾಶ ಸ್ಪಷ್ಟವಾಗಿ ಕಾಣಿಸುತಿತ್ತು. ನನಗೆ ಕೈಬೆರಳನ್ನೂ  ಸಹ ಆಡಿಸಲು ಆಗುತ್ತಿರಲಿಲ್ಲ. ನಿಧಾನವಾಗಿ   ವರ್ತಮಾನದ ಪ್ರತಿ ಕ್ಷಣವೂ ಭೂತಕಾಲಕ್ಕೆ ಸರಿಯುತ್ತಿದ್ದಂತೆ ನನಗೆ ಭವಿಷ್ಯತ್ತಿಲ್ಲ ಎನ್ನುವದು ಅರಿವಾಗತೊಡಗಿತು. ಭೂತಕಾಲ ನನ್ನ ಮೇಲೆ ಗುಡ್ಡೆಯಾಗುತ್ತಿತ್ತು ಮತ್ತು ಈಗ ಜನರು ನನ್ನನ್ನು ಎವೆಯಿಕ್ಕದೆ ನೋಡುತ್ತಿದ್ದರು. ಅವರಿಗೆ ನನ್ನ ಭೂತಕಾಲ ಮಾತ್ರ ಕಾಣುತಿತ್ತು. ನಾನು ಭೂತಕಾಲವಾಗಿದ್ದೆ. ಈ ಕ್ಷಣದಲ್ಲಿ ನನಗೆ ಎಚ್ಚರವಾಗುತ್ತಿತ್ತು. ಹಿಮ ಮನುಷ್ಯ ನನ್ನ ಪಕ್ಕ ಮಲಗಿ ನಿದ್ರಿಸುತ್ತಿದ್ದ. ಅವನು ನಿದ್ರಿಸುವಾಗ ಉಸಿರಾಡುತ್ತಿರಲಿಲ್ಲ. ಅವನು ಮಲಗುವಾಗ ಸತ್ತುಹೋಗಿದ್ದನೋ, ಹಿಮಗಟ್ಟಿದ್ದನೋ ಅಥವಾ ಅಂತಹ ಇನ್ನೇನೋ ಆಗಿದ್ದನೋ, ನನಗೆ ಗೊತ್ತಾಗುತ್ತಿರಲಿಲ್ಲ. ಆದರೆ ನಾನು ಹಿಮ ಮನುಷ್ಯನನ್ನು ಪ್ರೀತಿಸುತ್ತಿದ್ದೆ. ನಾನು ನಿಧಾನಕ್ಕೆ ಬಿಕ್ಕಿದೆ.. ನನ್ನ ಕಣ್ಣುಗಳಿಂದ ಹನಿಗಳು ಉದುರಿ ಅವನ ಕೆನ್ನೆಯ ಮೇಲೆ ಬಿದ್ದವು.  ಆಗ ಅವನು ಎದ್ದು ನನ್ನನ್ನು  ತಬ್ಬಿ ಹಿಡಿದುಕೊ೦ಡ. "ಕೆಟ್ಟ ಸ್ವಪ್ನ" ನಾನು ಉಸುರಿದೆ.  ಅವನು  ರಾತ್ರಿಯ ಕತ್ತಲೆಯ ಮೌನದಲ್ಲಿ ತಲೆಯಾಡಿಸಿದ. "ಅದೊಂದು ಕನಸು  ಅಷ್ಟೇ " ಅವನು ಹೇಳಿದ  "ಕನಸುಗಳು  ಭೂತಕಾಲದ ಪಳೆಯುಳಿಕೆಗಳು. ಅವು ಭವಿಷ್ಯದಿಂದ ಬಂದಿದ್ದಲ್ಲ. ಅಲ್ಲಿ  ಬಂಧಿಯಾಗಿದ್ದು ನೀನಲ್ಲ.  ನಿನ್ನ ಕನಸುಗಳು ಅಷ್ಟೇ. ಅರ್ಥವಾಯಿತೇ ?"

ನನಗೆ ಅರ್ಥವಾಗಲಿಲ್ಲ. ಆದರೂ ತಲೆಯಾಡಿಸಿದೆ.

+++++++++++++++++++++++++++++++++++++++++++

ಕೊನೆಗೂ ನಾವಿಬ್ಬರು ದಕ್ಷಿಣದ ತುದಿಗೆ ಹೊರಡುವ ವಿಮಾನ ಹತ್ತಿದೆವು. ಪ್ರಯಾಣವನ್ನು ರದ್ದುಗೊಳಿಸಲು ಬಲವಾದ ಕಾರಣಗಳಿರಲಿಲ್ಲ. ವಿಮಾನದಲ್ಲಿ  ಸಿಬ್ಬಂದಿಗಳು ಮೌನವಾಗಿದ್ದರು. ನನಗೂ ಕಿಟಕಿಯಿಂದ ಹೊರಗಿನ ದೃಶ್ಯಗಳನ್ನು ನೋಡಬೇಕಿತ್ತು. ಆದರೆ ಮೋಡ ಕವಿದಿದ್ದರಿಂದ ಅಲ್ಲಿ ಏನೂ ಕಾಣಿಸಲಿಲ್ಲ. ಸ್ವಲ್ಪ ಸಮಯದ ನಂತರ ಹೊರಗೆ ದಟ್ಟ ಮಂಜು ಕವಿದಿತ್ತು. ನನ್ನ ಗಂಡ ಪುಸ್ತಕದಲ್ಲಿ ಮುಳುಗಿದ್ದ. ನನಗೆ ಪ್ರವಾಸಕ್ಕೆ ಹೊರಟ ಖುಷಿಯಾಗಲಿ, ರೋಮಾಂಚನವಾಗಲಿ ಇರಲಿಲ್ಲ .. ಎಲ್ಲವೂ ಪೂರ್ವನಿರ್ಧಾರಿತವಾದ ಕೆಲಸಗಳ ಹಾಗೆ .

ನಾವು ದಕ್ಷಿಣ ತುದಿಗೆ ಕಾಲಿಟ್ಟ ಕ್ಷಣ ನನ್ನ ಗಂಡನ ದೇಹ ತಲೆಯಿಂದ ಪಾದದವರೆಗೆ  ಅದುರಿತು. ಬೇರೆಯವರು ಅದನ್ನು ಗಮನಿಸಿಲ್ಲವಾದರೂ ನನ್ನ  ಅರಿವಿಗೆ ಬಂದಿತ್ತು.  ನನ್ನ ಗಂಡನ ದೇಹದ ಒಳಗಿನ ಯಾವುದೋ ಭಾಗ ಬುಡ ಸಮೇತ ಅಲ್ಲಾಡುತ್ತಿತ್ತು. ಅವನು ಒಂದು ಕ್ಷಣ ತಲೆಯೆತ್ತಿ ಆಗಸವನ್ನು ನೋಡಿದ , ತನ್ನ ಅಂಗೈಯನ್ನು ದಿಟ್ಟಿಸಿದ  ನಂತರ ದೀರ್ಘವಾಗಿ ಉಸಿರೆಳೆದುಕೊಂಡ. ನನ್ನತ್ತ ನೋಡಿ ಕೇಳಿದ " ಇದು ನೀನು ಜೀವಿತದಲ್ಲಿ ಒಮ್ಮೆಯಾದರೂ ನೋಡಲು ಬಯಸುತ್ತಿದ್ದ ಜಾಗವೇ ?" ನಾನು ಹೌದು ಎಂದು ತಲೆಯಾಡಿಸಿದೆ.

ದಕ್ಷಿಣದ ವಿಷಣ್ಣತೆ ನಾನು ಅಂದುಕೊಂಡದ್ದಕ್ಕಿಂತ ಕೆಟ್ಟದಾಗಿತ್ತು. ಅಲ್ಲಿ ಯಾರೂ ಬದುಕುತ್ತಿಲ್ಲ ಎಂದರೂ ಸರಿಯೇ. ಕೇವಲ ಗುರುತಿಲ್ಲದ ಒಂದು ಸಣ್ಣ ಪಟ್ಟಣ ಅಷ್ಟೇ. ಗುರುತಿಲ್ಲದ ಒಂದು ಹೋಟೆಲ್. ನೋಡುವದಕ್ಕೂ ಏನಿರಲಿಲ್ಲ. ಅಲ್ಲಿ ಪೆ೦ಗ್ವಿನ್ ಗಳಿರಲಿಲ್ಲ.

ಕೆಲವೊಮ್ಮೆ ನನಗೆ ಅವರಿವರು ಕಾಣಿಸುತ್ತಿದ್ದರು. ಅವರನ್ನು ನಾನು  ಪೆ೦ಗ್ವಿನ್ ಗಳು ಎಲ್ಲಿವೆ ಎಂದು ಕೇಳುತ್ತಿದ್ದೆ. ಆದರೆ ಅವರು ಮೌನವಾಗಿ ತಲೆಯನ್ನು ಅಡ್ಡಡ್ಡ ಆಡಿಸುತ್ತಿದ್ದರು. ಅವರಿಗೆ ನನ್ನ ಮಾತುಗಳು ಅರ್ಥವಾಗುತ್ತಿರಲಿಲ್ಲ. ನಾನು ಅವರಿಗೆ ಪೆ೦ಗ್ವಿನ್ ನ ಚಿತ್ರ ಬಿಡಿಸಿ ತೋರಿಸುತ್ತಿದ್ದೆ. ಆದರೂ ಅವರು ಮೌನವಾಗಿ ಏನನ್ನೂ ಉತ್ತರಿಸದೆ ಮುನ್ನಡೆಯುತ್ತಿದ್ದರು. ಎಲ್ಲೆಡೆಯೂ ಮೌನ. ಮನೆಯಿಂದ ಹೊರಗೆ ಕಾಲಿಟ್ಟರೆ ಎಲ್ಲೆಡೆಯೂ ಬಿಳಿಯ ಹಿಮ. ಮರ ಗಿಡಗಳಿರಲಿಲ್ಲ, ಹಕ್ಕಿಗಳಿರಲಿಲ್ಲ, ಹರಿಯುವ ತೊರೆಯಿರಲಿಲ್ಲ. ಎಲ್ಲವೂ  ಶೂನ್ಯ. ಎಲ್ಲಿ ಹೋದರೂ ಹಿಮವನ್ನು ಬಿಟ್ಟು ಬೇರೆ ಏನೂ ಇರಲಿಲ್ಲ. 

ಇಷ್ಟಾದರೂ ನನ್ನ ಗಂಡ ಹಿಮ ತುಂಬಿದ ಉಸಿರನ್ನು ಬಿಡುತ್ತ, ಬೆರಳುಗಳ ತುದಿಗೆ ಹಿಮವನ್ನು ಬೆಳೆಸಿಕೊಳ್ಳುತ್ತಾ , ಮಂಜಿನಷ್ಟೇ ಹರಿತವಾದ ದೃಷ್ಟಿಯನ್ನು ಬೀರುತ್ತಾ ಅತ್ತಿತ್ತ ಓಡಾಡುತ್ತಿದ್ದ. ಕೆಲವೇ ದಿನಗಳಲ್ಲಿ ಅವನಿಗೆ ಅಲ್ಲಿಯ ಭಾಷೆ ರೂಢಿಯಾಯಿತು. ಮಂಜಿನ ಧ್ವನಿಯಲ್ಲಿ ಅವನು ಅಲ್ಲಿಯ ಜನರೊಟ್ಟಿಗೆ ಮಾತನಾಡುತ್ತಿದ್ದ. ಅವನೊಳಗೆ ಹೊಕ್ಕ ಯಾವುದೋ ಅವನಿಗೆ ಈ ಸ್ಥಳಕ್ಕೆ ಹೊಂದಿಕೆಯಾಗುವಂತೆ ಮಾಡಿದೆ ಅನಿಸಿತು. ಕೆಲವೊಮ್ಮೆ ನನಗೆ ಅವನನ್ನು ನೋಡಿ ಕಿರಿಕಿರಿಯಾಗುತಿತ್ತು , ಸಿಟ್ಟು ಬರುತ್ತಿತ್ತು.  

ಕ್ರಮೇಣ ನಾನು ನನ್ನ ಅಂತ:ಶಕ್ತಿಯನ್ನು ಕಳೆದುಕೊಂಡೆ. ಎಲ್ಲೆಲ್ಲೂ ಹಿಮ ತುಂಬಿದ ಆ ನಿರ್ಜನ ಪ್ರದೇಶದಲ್ಲಿ ನನ್ನ  ಕೋಪಗೊಳ್ಳುವ ಶಕ್ತಿ ಸಹ ಸೋರಿ ಹೋಯಿತು. ನನ್ನ ಇಂದ್ರಿಯಗಳು ಯಾವುದೇ ಅರಿವಿನ ದಿಕ್ಸೂಚಿಯನ್ನು ಕಳೆದುಕೊಂಡವು.  ದಿನಗಳು ನಶಿಸಿಹೋದವು, ದಿಕ್ಕುಗಳು ಅಳಿಸಿಹೋದವು.  ಕ್ರಮೇಣ ನನ್ನ ಅಸ್ತಿತ್ವವದ ಅರಿವು ಕೂಡ ನನ್ನಿಂದ ಮಾಯವಾಗತೊಡಗಿತು. ಈ ಪ್ರಕ್ರಿಯೆ ನನ್ನಲ್ಲಿ ಶುರುವಾಗಿದ್ದು ಅಥವಾ ಮುಗಿದಿದ್ದು ಯಾವತ್ತೂ ಎನ್ನುವದು ಕೂಡ ನನಗೆ ಅರಿವಾಗಲಿಲ್ಲ. ದಕ್ಷಿಣ ಧ್ರುವದ ನನ್ನ ಗಂಡ ಮೊದಲಿನ ನನ್ನ ಗಂಡನಾಗಿರಲಿಲ್ಲ. ನನ್ನ ಎಡೆಗೆ ಅವನ ಪ್ರೀತಿ ಸ್ವಲ್ಪವೂ  ಕಡಿಮೆಯಾಗಿರಲಿಲ್ಲ. ಆದರೆ ನಾನು ಸ್ಕೈಯಿಂಗ್ ಹೋಟೆಲಿನಲ್ಲಿ ಭೇಟಿಯಾಗಿದ್ದ ಹಿಮ ಮನುಷ್ಯ ಅವನಾಗಿರಲಿಲ್ಲ ಅಷ್ಟೇ.  ಅವನ ಬಗ್ಗೆ ನಾನು ಯಾರೊಂದಿಗೂ ಮಾತನಾಡುವಂತಿರಲಿಲ್ಲ.  ಇಲ್ಲಿ ಎಲ್ಲರೂ ಅವನಿಗೆ ಮಿತ್ರರಾಗಿದ್ದರು.  ಅಲ್ಲದೆ ಅವರಿಗೆ ನನ್ನ ಭಾಷೆಯೂ ಅರ್ಥವಾಗುತ್ತಿರಲಿಲ್ಲ. ಅವರೆಲ್ಲರೂ ಅವನಂತೆ ಬಿಳಿಯ ಉಸಿರನ್ನು ಹೊರ ಹಾಕುತ್ತಿದ್ದರು, ಅವರ ಬೆರಳುಗಳ ತುದಿಗೆ ಹಿಮ ತುಂಬಿಕೊಳ್ಳುತ್ತಿತ್ತು, ಅವರು ಅವರದೇ ಆದ ಜೋಕುಗಳನ್ನು ಮಾಡುತ್ತಿದ್ದರು, ಅವರದೇ ಆದ ವಾದಕ್ಕೆ ವಾದ ಮಾಡುತ್ತಿದ್ದರು ಮತ್ತು ಅವರದೇ ಆದ ಹಾಡನ್ನು ಹಾಡುತ್ತಿದ್ದರು.  ನಾನು ರೂಮಿನಲ್ಲಿ ಒಬ್ಬಂಟಿಯಾಗಿ ಕುಳಿತು ಯಾವತ್ತೂ ಬದಲಾಗದ,  ಹೊರಗಿನ ಮ೦ಜು ತುಂಬಿದ ಜಾಗಗಳನ್ನು ದಿಟ್ಟಿಸುತ್ತಿದ್ದೆ,  ಅದೇ ಆಕಾಶವನ್ನು ನೋಡುತ್ತಿದ್ದೆ ಮತ್ತು ಅರ್ಥವಾಗದ ದಕ್ಷಿಣ ಧ್ರುವದ ಭಾಷೆಯ ವ್ಯಾಕರಣ ಕಲಿಯಲು ಹೆಣಗುತ್ತಿದ್ದೆ.

ನಮ್ಮನ್ನು ಇಳಿಸಿ ವಿಮಾನ ಹೋದ ಮೇಲೆ ಮತ್ತೆ ಬೇರೆ ಯಾವ ವಿಮಾನವು ಅಲ್ಲಿಗೆ ಬಂದಿರಲಿಲ್ಲ. ವಿಮಾನ ನಿಲ್ದಾಣದ ರನ್ ವೇ ಮೇಲೆ ದಟ್ಟ ಮಂಜು ತುಂಬಿತ್ತು. ಚಳಿಗಾಲ ಬಂದಿದೆ ಎಂದು ನನ್ನ ಗಂಡ ತಿಳಿಸಿದ. ಇನ್ನು ವಿಮಾನಗಳು ಬರುವದಿಲ್ಲ. ಹಡಗುಗಳು ಸಂಚರಿಸುವದಿಲ್ಲ. ಎಲ್ಲವು ಹೆಪ್ಪುಗಟ್ಟಿವೆ.  ನಾವು ಬೇಸಿಗೆಯವರೆಗೆ ಕಾಯಬೇಕು ಎಂದ.

ನಾನು ದಕ್ಷಿಣ ಧ್ರುವಕ್ಕೆ ಬಂದ ಮೂರು  ತಿ೦ಗಳಿಗೆ ಬಸುರಿಯಾಗಿರುವದು ಅರಿವಾಯಿತು. ನಾನು ಜನ್ಮ ಕೊಡುವದು  ಇನ್ನೊಬ್ಬ ಸಣ್ಣ ಹಿಮ ಮನುಷ್ಯನಿಗೆ. ನನ್ನ ದೇಹದ ಒಳಗೆ ಹಿಮ ಕಟ್ಟತೊಡಗಿತ್ತು. ನನ್ನ ಕಿಬ್ಬೊಟ್ಟೆಯಲ್ಲಿ ಚಳಿ ತುಂಬುತ್ತಿರುವದು ನನ್ನ ಅನುಭವವಕ್ಕೆ ಬಂದಿತು. ನನ್ನ ಮಗುವಿಗೆ  ಅದರ ಅಪ್ಪನಂತೆಯೇ ಹರಿತ   ದೃಷ್ಟಿಯಿರುತ್ತದೆ  ಮತ್ತು ಅದರ ಕೈ ಬೆರಳುಗಳ ಅಂಚಿನಲ್ಲಿ ಹಿಮ ತುಂಬುತ್ತದೆ ಎನ್ನುವದು ನನಗೆ ಸ್ಪಷ್ಟವಾಗತೊಡಗಿತು. ನಾವು ಮತ್ತೆ ಎಂದಿಗೂ ದಕ್ಷಿಣ ಧ್ರುವವನ್ನು ಬಿಟ್ಟು ಹೊರಗೆ ಹೋಗಲಾರೆವು. ನನ್ನ ಕಾಲಿಗೆ  ಸಂವೇದನಾ ರಹಿತವಾದ ಭೂತಕಾಲದ ಹಿಮ ಶಾಶ್ವತವಾಗಿ ಅಂಟಿಕೊಂಡಿರುತ್ತದೆ ಮತ್ತು  ನಾನೆಷ್ಟು ಕೊಡವಿದರು  ಅದನ್ನು ತೆಗೆದು ಹಾಕಲು ಸಾಧ್ಯವಿಲ್ಲ ಎನ್ನುವದು ನನಗೆ ಅರ್ಥವಾಯಿತು.

ಈಗ, ನನ್ನ ಹಳೆಯ ನಾನು ನನ್ನಲ್ಲಿ ಸ್ವಲ್ಪವೂ ಇಲ್ಲ.  ಸಹಜವಾದ ನನ್ನ ದೇಹದ ಬಿಸಿ ಮತ್ತೆ ನನ್ನ ಹತ್ತಿರಕ್ಕೆ  ಬರಲಾರದಷ್ಟು ದೂರ ಹೋಗಿತ್ತು. ಕೆಲವೊಮ್ಮೆ ಅಂಥದೊಂದು ಬಿಸುಪು ನನ್ನಲ್ಲಿತ್ತು ಎನ್ನುವದನ್ನೂ ಕೂಡ ನಾನು ಮರೆತು ಬಿಡುತ್ತೇನೆ. ಇಷ್ಟಾದರೂ ಅದು ಹೇಗೋ ಇವತ್ತಿಗೂ ನನಗೆ ಅಳಲು ಸಾಧ್ಯವಾಗುತ್ತದೆ. ನಾನು ನಿಜವಾಗಿಯೂ ಏಕಾಂಗಿ. ಈ ಜಗತ್ತಿನಲ್ಲಿರುವ ಎಲ್ಲರಿಗಿಂತ ಅತ್ಯ೦ತ ಚಳಿಯೂ , ಒಂಟಿಯೂ  ಆದ ಜಾಗದಲ್ಲಿ ನಾನಿದ್ದೇನೆ. ನಾನು ಅತ್ತಾಗ ಹಿಮ ಮನುಷ್ಯ ನನ್ನ ಕೆನ್ನೆಯನ್ನು ಚುಂಬಿಸುತ್ತಾನೆ. ಅವನು ಚುಂಬಿಸಿದಾಗ ನನ್ನ ಕಣ್ಣೀರು ಹಿಮವಾಗುತ್ತದೆ.  ಅವನು ನನ್ನ ಕೆನ್ನೆಯಿಂದ ಹಿಮವನ್ನು ತೆಗೆದುಕೊಂಡು ತನ್ನ ನಾಲಿಗೆಯ ಮೇಲೆ ಇಟ್ಟುಕೊಳ್ಳುತ್ತಾನೆ. "ನಾನು ನಿನ್ನ ಪ್ರೀತಿಸುತ್ತೇನೆ " ಎಂದು ಅವನು ಹೇಳುತ್ತಾನೆ. ಖಂಡಿತವಾಗಿಯೂ ಅವನು ಸುಳ್ಳಾಡುತ್ತಿಲ್ಲ. ಹಿಮ ಮನುಷ್ಯ ನನ್ನನ್ನು ಪ್ರೀತಿಸುತ್ತಾನೆ. ಆದರೆ ಯಾವುದೋ  ದೂರದ ಅಜ್ಞಾತ  ಸ್ಥಳದಿಂದ ಬೀಸುತ್ತಿರುವ  ಗಾಳಿ ಅವನ ಹಿಮ ತುಂಬಿದ ಹೆಪ್ಪುಗಟ್ಟಿದ ಮಾತುಗಳನ್ನು ಸೆಳೆದೊಯ್ದು ಭೂತಕಾಲಕ್ಕೆ ನೂಕಿ ಬಿಡುತ್ತಿತ್ತು.

ನಾನು ಅಳುತ್ತೇನೆ. ತಣ್ಣನೆಯ  ಕಣ್ಣೀರು ನನ್ನ ಕೆನ್ನೆಯಿಂದ ಹರಿದು ದಕ್ಷಿಣ ಧ್ರುವದ ಹಿಮದಲ್ಲಿ ಸೇರುತ್ತದೆ.  


+++++++++++++++++++++++++++++++++++++++++++++

ಮೂಲ ಕಥೆ : ದಿ ಐಸ್ ಮ್ಯಾನ್  ಲೇಖಕರು : ಹರುಕಿ ಮುರಕಮಿ  

ಲೇಖಕರ ಪರಿಚಯ : ಜಪಾನಿ ಕಥೆಗಾರ ಹರುಕಿ ಮುರಕಮಿ ಜನಿಸಿದ್ದು ೧೯೪೯   ಜನವರಿ ೧೨ ರಂದು ಜಪಾನಿನ ಕ್ಯೋಟೋದಲ್ಲಿಅವರ ಕತೆಗಳು ಜಗತ್ತಿನ ೫೦ಕ್ಕೂ ಹೆಚ್ಚು ಭಾಷೆಗೆ ಅನುವಾದಗೊಂಡಿವೆ.  ಸಂಗೀತದ ಬಗ್ಗೆ ಅಪಾರ ಒಲವು ಹೊಂದಿರುವ ಮುರಕಮಿಯ ಕತೆಗಳಲ್ಲಿ ಏಕಾಂತದ ದಟ್ಟ  ಪಾತ್ರ ಚಿತ್ರಣಗಳನ್ನು , ಸಾಮಾನ್ಯತೆಯಿಂದ ಅಸಾಮಾನ್ಯತೆಗೆ ಸಾವಕಾಶವಾಗಿ ಜರುಗುವ ಘಟನೆಗಳನ್ನು ಕಾಣಬಹುದು. ,ಮ್ಯಾರಥಾನ್ ಓಟಗಾರರೂ ಆಗಿರುವ ಅವರಿಗೆ ವರ್ಲ್ಡ್ ಫ್ಯಾ೦ಟಸಿ ಪ್ರಶಸ್ತಿ , ಕಾಫ್ಕ ಪ್ರಶಸ್ತಿ , ಜೆರುಸಲೇಮ್ ಪ್ರಶಸ್ತಿ ಮುಂತಾದವು ಸಂದಿವೆ.   

No comments:

Post a Comment