Wednesday, October 19, 2011

ಬೆತ್ತಲು

ಕಟ ಲಟ ಪಟ ಚಟ
ಸದ್ದುಗದ್ದಲದ ಆಸ್ಪತ್ರೆಯ ಸ್ಟ್ರೆಚರ್ನ ಮೇಲೆ ,
ಕ೦ಡೂ ಕಾಣದ ಬಿಳಿಯ ಹೊದಿಕೆಯ ಒಳಗೆ
ಶಬ್ಧವಿಲ್ಲದೇ ಮಲಗಿದ್ದಾಳೆ 
ವಿಠೋಬಾನ ಮಗಳು.
ಅಲ್ಲಿ ,
ಗಿರಾಕಿಗಳಿಲ್ಲದ , ವಿಠೋಬಾನ ಭಜ್ಜಿ ಥಣ್ಣಗಾಗುತ್ತಿವೆ .
ಇಲ್ಲಿ,
ಉಸಿರಿಲ್ಲದೇ ವಿಠೋಬಾನ ಮಗಳು ಥಣ್ಣಗಾಗಿದ್ದಾಳೆ.
******
ಶ್! ನನಗೂ ಗೊತ್ತು 
ವಿಠೋಬಾನ ಭಜ್ಜಿ ಸ್ವಲ್ಪ ಉಪ್ಪಾಗಿದೆ ,
ಸುಮ್ಮನಿರಿ ದಮ್ಮಯ್ಯ .
ಆಸ್ಪತ್ರೆಯ ಬಿಲ್ಲಿನಲ್ಲೆ ಭಜ್ಜಿ ಕಟ್ಟಿ ಕೊಟ್ಟಿದ್ದಾನೆ.
ಒಂದೆರಡು ಹನಿ ಕಣ್ಣೀರು 
ಕಟ್ಟಿದ ಬಿಲ್ಲಿನ ಮೇಲೆ ಬಿದ್ದಿರಲಿಕ್ಕೂ ಸಾಕು..!
*********
ಸಿಡಿಮಿಡಿಗೊಳ್ಳುತ್ತಿದ್ದಾರೆ ಆಸ್ಪತ್ರೆಯ ಸಿಸ್ಟರ್ ಗಳು ,
ಭಜ್ಜಿ ಅಂಗಡಿಯ ವಿಠೋಬಾನ ಬಳಿ 
ಭಕ್ಷಿಸು ಸಿಗಲಾರದು.
ಯಾಕಾದಾರೂ ಬರುತ್ತಾವೋ ಇಂತವು !!
*******
ವಿಠೋಬಾನ ಮಗಳಿಗೆ 
ಹೃದಯದಲ್ಲಿ ತೂತಾಗಿತ್ತ೦ತೆ .
ಥೋ! ಮಾರಾಯ ನೋಡಬೇಕಿತ್ತು
ತೂತು ಕೆನ್ನೆ ಮೇಲಿನ ಮಚ್ಚೆಯಷ್ಟು ಸಣ್ಣದೆ?
ಸತ್ತು ಹೋದರೆ ಬೇರೊಬ್ಬಳ ಹುಡುಕಬೇಕು .
 ಮಾತುಗಳು ಸಾಯುವದೆ ಇಲ್ಲ
ದೇಹ ಸಾಯುತ್ತವೆ.!
****
ಒಳಗೆ ,
ಪೂರ್ತಿಯಾಗಿ ಸತ್ತಿದ್ದಾಳೆ
ವಿಠೋಬಾನ ಮಗಳು , ಐದು ಅಡಿ ಉದ್ದಕ್ಕೆ
ಹೊರಗೆ ,
ಆರು ಅಡಿ ಉದ್ದಕ್ಕೆ ಇಂಚಿಂಚಾಗಿ ಸಾಯುತ್ತಿದ್ದಾನೆ
ವಿಠೋಬ . 
ಚಿಂತೆಯಿಲ್ಲ ಬಿಡಿ , 
ಚಿತೆಗೆ ಸಾಕಾಗುವಷ್ಟು ಬಿಲ್ಲುಗಳು ಇನ್ನೂ ಬಾಕಿ ಇವೆ
ಬರ್ರನೇ ಉರಿಯುತ್ತವೆ
ಒಳಗೂ , ಹೊರಗು..!