Monday, December 17, 2018

ನೆರಳು

ಸೋಮವಾರ : 

ನನ್ನನ್ನು ಅತ್ಯಂತ ವ್ಯವಸ್ಥಿತವಾಗಿ  ಹಿಂಸಿಸುವದನ್ನು ಆ ಅಪರಿಚಿತ ವ್ಯಕ್ತಿ ಮುಂದುವರಿಸುತ್ತಿದ್ದಾನೆ.  ಬಹುಶ: ಅವನ ಹೆಸರು ಮೋಸರುದ್ದಿನ ಎಂದು ತೋರುತ್ತದೆ. ನಾನು ಅವನ  ಹಿಡಿತಕ್ಕೆ ಸಿಕ್ಕಿಬಿದ್ದುದು ಯಾವಾಗ ಎನ್ನುವದು ಸರಿಯಾಗಿ ನೆನಪಾಗುತ್ತಿಲ್ಲ. ಪ್ರಾಯಶಃ ನಾನು ಹುಟ್ಟಿನಿಂದಲೇ ನನಗರಿವಿಲ್ಲದಂತೆ ಅವನ ಸೆರೆಯಾಳೇನೋ?

ಮಂಗಳವಾರ :

ಇವತ್ತು ಬೆಳಿಗ್ಗೆ ನಾನು ಗಾಂಧೀ ಬಜಾರಿನ ತಣ್ಣಗಿನ ರಸ್ತೆಯಲ್ಲಿ ಆಹ್ಲಾದಕರ ವಾತಾವರಣವನ್ನು ಆನಂದಿಸುತ್ತಾ ನಡೆಯುತ್ತಿದ್ದೆ. ಇದ್ದಕ್ಕಿದ್ದ ಹಾಗೆ ನನ್ನ ಕಾಲುಗಳು ನನಗೆ ಗುರುತು ಪರಿಚಯವಿಲ್ಲದ ರಸ್ತೆಗಳಲ್ಲಿ  ಹೆಜ್ಜೆಹಾಕಲು ಆರಂಭಿಸಿದವು.  ಕೆಲವು ಕ್ಷಣಗಳವರೆಗೂ ನನ್ನದಾಗಿದ್ದ ಗಾಂಧೀ ಬಜಾರಿನ ರಸ್ತೆಗಳು ಈಗ ಮೊಸರುದ್ದೀನ ವಿನ್ಯಾಸ ಮಾಡಿದ ಚಕ್ರವ್ಯೂಹದೊಳಗೆ ಕರೆದೊಯ್ಯುವ ಹಾದಿಯಾಗಿ ರೂಪಾ೦ತರಗೊಂಡಿದ್ದವು. ತಾಸುಗಟ್ಟಲೆ ದಿಕ್ಕು ತಪ್ಪಿ ಅಲೆದಾಡಿದ ಮೇಲೆ  ನಾನು ಮುಂದಕ್ಕೆ ಹೋಗಲು ಅವಕಾಶವಿಲ್ಲದ ಇಕ್ಕಟ್ಟಾದ ಗಲ್ಲಿಯೊಂದರಲ್ಲಿ ಸಿಕ್ಕಿ ಬಿದ್ದೆ. 

ಬುಧವಾರ :

ಇತ್ತೀಚಿಗೆ ನನ್ನ ಜೀವನವು ಪಾಳುಬಿದ್ದ ಹಳ್ಳಿಯೊಂದರ೦ತೆ ದಿನದಿನಕ್ಕೂ  ಸಂಕುಚಿತಗೊಳ್ಳುತ್ತಿದೆ . ಇವೆಲ್ಲವುಗಳಿಂದ  ತಪ್ಪಿಸಿಕೊಂಡು ಎಲ್ಲಿಯಾದರೂ ಓಡಿ ಹೋಗೋಣವೆಂದರೆ ಮೊಸರುದ್ದೀನನ ಕಬಂಧ ಬಾಹುಗಳುಎಲ್ಲೆಡೆಯೂ ಬಿಳಲು ಬಿಟ್ಟಿವೆ. ನಾನು ಅವಿತುಕೊಳ್ಳಲು ಪ್ರಯತ್ನಿಸುವ ಪ್ರತಿ ಮೂಲೆಯಲ್ಲೂ ಅವನು ನನಗಿಂತ ಮೊದಲೇ ಹೋಗಿ  ಕಾಯುತ್ತಿರುತ್ತಾನೆ .  

ಗುರುವಾರ :
 ನಾನು ಮತ್ತ್ತು ಮೊಸರುದ್ದಿನ ಏಕಾಂತದಲ್ಲಿ ಪರಸ್ಪರ ಮುಖಾಮುಖಿಯಾಗುವ ಪ್ರಸ೦ಗ  ಒದಗಿ ಬಂದರೆ ಎನ್ನುವ ಭಯಾನಕ ಯೋಚನೆಗೆ ಆಗಾಗ  ಬೆಚ್ಚಿ ಬೀಳುತ್ತೇನೆ.  ನನ್ನ ಕೋಣೆಯ  ಬಾಗಿಲನ್ನು ಭದ್ರವಾಗಿ ಹಾಕಿಮರದ ತುಂಡನ್ನು ಅಡ್ಡ ಇತ್ತು ಮೊಳೆಯನ್ನು ಹೊಡೆದಿದ್ದೇನೆ. ಕಿಟಕಿಯ ಬಾಗಿಲುಗಳನ್ನು ತೆರೆಯಲು ಬಾರದಂತೆ ಮುಚ್ಚಿದ್ದೇನೆ. ಇಷ್ಟಾದರೂ ಮಂಚದ ಮೇಲೆ ಮಲಗುವಾಗ , ಬಟ್ಟೆ ಬದಲಿಸುವಾಗ ನನ್ನ ಬೆತ್ತಲೆ ದೇಹವನ್ನುಮೊಸರುದ್ದಿನ ಕದ್ದು ನೋಡುತ್ತಿದ್ದಾನೆ ಅನಿಸುತ್ತದೆ. 

ಶುಕ್ರವಾರ :
ಇವತ್ತು ಮಲಗಿದ್ದಲಿಂದ ಸ್ವಲ್ಪವೂ ಮಿಸುಕಾಡದೆ ಮನೆಯಲ್ಲಿಯೇ  ದಿನಪೂರ್ತಿ  ಕಳೆದಿದ್ದೇನೆ. ರಾತ್ರಿ ಇದ್ದಕ್ಕಿದ್ದ ಹಾಗೆ  ನನ್ನ ಸುತ್ತ ವೃತ್ತಾಕಾರದ, ಪೀಪಾಯಿಯಂತಹದೇನೋ ಬೆಳೆಯುತ್ತಿರುವಂತೆ ಭಾಸವಾಯಿತು . 

ಶನಿವಾರ :
ಬೆಳಗ್ಗೆ  ನನಗೆ ಎಚ್ಚರವಾದಾಗ ನಾನು ಚೌಕಾಕಾರದ ಪೆಟ್ಟಿಗೆಯೊಳಗೆ ಮಲಗಿದ್ದೆ. ಕೈ ಕಾಲು ಆಡಿಸಲೂ  ಜಾಗವಿಲ್ಲ. ಈ ಪೆಟ್ಟಿಗೆಯ ಗೋಡೆಗಳನ್ನು ಒಡೆದು ಹೊರಹೋಗಲು ಪ್ರಯತ್ನಿಸುವದು ಉಪಯೋಗವಿಲ್ಲದ  ಕೆಲಸ.ಖಂಡಿತವಾಗಿಯೂ ಈ ಪೆಟ್ಟಿಗೆಯ ಹಿಂದೆ ಇನ್ನೊಂದು ಇಂತಹದೇ ಚೌಕಾಕಾರದ ಪೆಟ್ಟಿಗೆಯಿರುತ್ತದೆ. ಸಂದೇಹವೇ ಬೇಡ ಇದು ಮೊಸರುದ್ದಿನ ನನಗೆಂದೇ ನಿರ್ಮಿಸಿದ ಸೆರೆಮನೆ . 

ಭಾನುವಾರ : 
ಬಂಧಿಯಾಗಿರುವ ಈ ಚೌಕಾಕಾರದ ಪೆಟ್ಟಿಗೆಯೊಳಗಿನಿಂದಲೇ ನಾನು ನಿಧಾನವಾಗಿ ಕೊಳೆಯುತ್ತೇನೆ . ಮೊದಲು ನನ್ನ ದೇಹವೆಲ್ಲ ತುಂಡು ತುಂಡಾಗುತ್ತದೆ. ಆಮೇಲೆ ಸಣ್ಣ ಸಣ್ಣ ಚೂರುಗಳಾಗಿ ವಿಭಜನೆ ಹೊಂದಿ  ನನ್ನ ದೇಹ ದಟ್ಟ ಹಳದಿ ಬಣ್ಣದ ದಪ್ಪನೆಯ ದ್ರವವಾಗಿ ಹರಿಯಲು ಆರಂಭಿಸುತ್ತದೆ. 
ಮೊಸರುದ್ದೀನನ ಹೊರತಾಗಿ ದಯವಿಟ್ಟು ಯಾರೂ ನನ್ನನ್ನು ಜೇನುತುಪ್ಪ ಎಂದು ತಪ್ಪಾಗಿ ತಿಳಿಯಬೇಡಿ. 


ಮೆಕ್ಸಿಕನ್ ಮೂಲ : ಹ್ವಾನ್ ಜೋಸ್ ಅರೇರೊಲ 

ಮೆಕ್ಸಿಕಾದ ಪ್ರಸಿದ್ಧ ಕತೆಗಾರ ಜುವಾನ್ ಜೋಸ್ ಅರೇರೊಲ , ಇಪ್ಪತ್ತನೆಯ ಶತಮಾನದಲ್ಲಿ ಮೆಕ್ಸಿಕಾದ ಸಾಹಿತ್ಯವಲಯವನ್ನು ಅಗಾಧವಾಗಿ ಪ್ರಭಾವಿಸಿದ ಲೇಖಕರಲ್ಲೊಬ್ಬರು. ಮೆಕ್ಸಿಕೋದ ರಿಯಾಲಿಸ್ಟ್ ಸಾಹಿತ್ಯದ ಅಲೆಗೆ ವಿರುದ್ಧವಾಗಿ ಅಸಂಗತ ಕತೆಗಳನ್ನು ಬರೆದವರು. 'ನೆರಳು' ಕತೆಯನ್ನು ಅವರ ಪ್ರಸಿದ್ಧ ಕತಾ ಸಂಕಲನ  'ಕಾನ್ ಫ್ಯಾಬುಲರಿಯೊ'ದಿಂದ ಆಯ್ದುಕೊಳ್ಳಲಾಗಿದೆ 


Saturday, October 27, 2018

ಕಲ್ಲುಗಳು

ಬೇಸಿಗೆಯ ಸೆಕೆ ತುಂಬಿದ ರಾತ್ರಿಗಳಲ್ಲಿ ಮನೆಯಿಂದ ಹೊರಗೆ ಬಂದು ಕಲ್ಲು
ಬೆಳೆಯುವದನ್ನು ನೋಡುತ್ತಾ ಕುಳಿತುಕೊಳ್ಳುವುದು ನನಗಿಷ್ಟವಾದ ಕೆಲಸ.
ಬಹುಶಃ ಬೇರೆಲ್ಲ ಕಡೆಗಿಂತ ಈ ಮರುಭೂಮಿಯ ಬಿಸಿ ಮತ್ತು ಶುಷ್ಕ
ವಾತಾವರಣದಲ್ಲಿ ಕಲ್ಲುಗಳು ಚೆನ್ನಾಗಿ ಬೆಳೆಯುತ್ತವೆಯೇನೋ? ಅಥವಾ ಈ
ಮರುಭೂಮಿಯಲ್ಲಿ ಎಳೆಯ ಪ್ರಾಯದ ಕಲ್ಲುಗಳೇ ಜಾಸ್ತಿಯಿರುವದರಿಂದ
ಇಷ್ಟೊಂದು ಚಟುವಟಿಕೆ ಕಾಣಬಹುದೇನೋ ?

ಪ್ರಾಯದ ಕಲ್ಲುಗಳು ವಯಸ್ಸಾದ ಕಲ್ಲುಗಳಿಗಿಂತ ಜಾಸ್ತಿ ಚಲಿಸುತ್ತವೆ. ಈ
ಪ್ರಾಯದ ಕಲ್ಲುಗಳಿಗಿರುವ೦ತೆ ಒಂದು ಕಡೆಯಿಂದ ಇನ್ನೊಂದೆಡೆಗೆ ಚಲಿಸುವ
ಆಸೆ, ಅವುಗಳ ಅಪ್ಪ ಅಮ್ಮ ಕಲ್ಲುಗಳಿಗೂ ಅವುಗಳ ಪ್ರಾಯದಲ್ಲಿ ಇತ್ತು. ಆದರೆ
ವಯಸ್ಸಾದಂತೆ ಬಹಳಷ್ಟು ಅಪ್ಪ ಅಮ್ಮ ಕಲ್ಲುಗಳು ತಮಗೂ ಆಸೆಗಳಿದ್ದವು
ಎನ್ನುವದನ್ನೇ ಮರೆತಿರುವ ಹಾಗಿದೆ. ಪ್ರಾಯಶಃ ಇಂತಹ ಆಸೆಗಳಲ್ಲಿ ನೀರನ್ನು
ಹುಡುಕುವ ಸುಪ್ತ ಬಯಕೆ ಇರುತ್ತಿದ್ದರಿಂದಲೇನೋ, ಯಾರೂ ತಮ್ಮ
ಆಸೆಗಳನ್ನು ಬಾಯಿ ಬಿಟ್ಟು ಹೇಳಿಕೊಳ್ಳುತ್ತಿರಲಿಲ್ಲ. ಹಳೆಯ ಕಲ್ಲುಗಳು ನೀರನ್ನು
ನಿರಾಕರಿಸುತ್ತವೆ . ಅವುಗಳು ಹೇಳುವಂತೆ "ವಿಷಯವೊಂದನ್ನು ಗಹನವಾಗಿ
ಅಭ್ಯಸಿಸಬೇಕಾದರೆ ಒಂದೆಡೆಗೆ ಸ್ಥಿರವಾಗಿ ನಿಲ್ಲುವದು ಅಗತ್ಯ . ನೀರಾದರೋ
ಸದಾ ಕಾಲ ಹರಿಯುತ್ತಿರುತ್ತದೆ." ಆದರೆ ಪ್ರಾಯದ ಕಲ್ಲುಗಳು ಹಿರಿಯರ

ಕಣ್ತಪ್ಪಿಸಿ, ಮೆತ್ತಗೆ ಇಂಚಿ೦ಚೆ ಚಲಿಸುವ ಪ್ರಯತ್ನವನ್ನು ಸದಾ ಕಾಲ
ಮಾಡುತ್ತಿರುತ್ತವೆ. ಚಂಡಮಾರುತದಿಂದ ಯಾವತ್ತೋ ಸವಕಳಿಯಾದ
ಹಾದಿಯ ಇಳಿಜಾರಿನಲ್ಲಿ ಜಾರುತ್ತ ನೀರಿನ ಪಸೆಯಿರುವ ಕಡೆ ತಲುಪುವ
ಹಂಬಲ ಅವಕ್ಕೆ. ಇಂತಹ ಪ್ರಯಾಣ ಒಳಗೊಂಡಿರುವ ಅಪಾಯದ
ಹೊರತಾಗಿಯೂ , ಪ್ರಾಯದ ಕಲ್ಲುಗಳಿಗೆ ತಮ್ಮ ಅಪ್ಪ ಅಮ್ಮ೦ದಿರಿಂದ
ದೂರವಾಗಿ ಪ್ರಪಂಚದ ಇನ್ಯಾವುದೋ ಮೂಲೆಗೆ ಚಲಿಸಿ , ತಮ್ಮದೇ ಆದ
ಹೊಸ ಜಾಗೆಯನ್ನು ಕಟ್ಟುವ ಆಸೆ.
ಕಲ್ಲುಗಳಲ್ಲಿ ಕುಟುಂಬ ವ್ಯವಸ್ಥೆ ಗಟ್ಟಿಯಾಗಿದ್ದರೂ ಕೆಲವು ಕಲ್ಲುಗಳು
ಕುಟುಂಬದಿಂದ ಹೊರಗೆ ಬಂದು ಅವರದ್ದೇ ಆದ ಸಂಸಾರ ಶುರುಮಾಡಿದ್ದೂ
ಇದೆ. ಇಂತಹ ಕಲ್ಲುಗಳು ತಮ್ಮ ದೇಹದ ಮೇಲೆ ಪ್ರಯಾಣ ಕಾಲದಲ್ಲಾದ
ಗಾಯದ ಗುರುತುಗಳನ್ನು ತಮ್ಮ ಮಕ್ಕಳಿಗೆ ಪ್ರಯಾಣದ ಸಾಧನೆಯ
ಕುರುಹಾಗಿ ತೋರಿಸುತ್ತವೆ. ಕೆಲವು ಕಲ್ಲುಗಳು ಸುಮಾರು ೧೫ ಅಡಿಗಳಷ್ಟು
ಸಾಗಿದ್ದೂ ಇದೆ ! ಉಳಿದ ಕಲ್ಲುಗಳಿಗೆ ಹೋಲಿಸಿದರೇ ಇದು ಅದ್ಭುತ
ಸಾಧನೆಯೇ ಸರಿ . ಜೀವನದ ಸಂಧ್ಯಾ ಕಾಲದಲ್ಲಿರುವ ಈ ಕಲ್ಲುಗಳು ತಮ್ಮ
ಪ್ರಾಯದ ಸಾಹಸಗಳನ್ನು ಆಗಾಗ ಜ್ಞಾಪಿಸಿಕೊಂಡು ನಸುನಗುತ್ತವೆ.

ವಯಸ್ಸಾದ ಹಾಗೆ ಕಲ್ಲುಗಳು ಹೆಚ್ಚು ಹೆಚ್ಚು ಸಂಪ್ರದಾಯವಾದಿಗಳಾಗುವದು
ನಿಜ. ಚಲನೆಯನ್ನು ಅವರು ಅಪಾಯಕಾರಿ ಮತ್ತು ದುಷ್ಟ ಕೆಲಸ ಎಂದು
ಭಾವಿಸುತ್ತಾರೆ. ಅವರು ಬಹುತೇಕ ಸಮಯವನ್ನು ಕುಳಿತಲ್ಲೇ ಕಳೆಯಲು
ಬಯಸುತ್ತಾರೆ. ಹೀಗೆ ಕುಳಿತಲ್ಲೆ ಇದ್ದು ಹಲವು ಹಿರಿಯ ಕಲ್ಲುಗಳಿಗೆ ಸಣ್ಣಗೆ

ಬೊಜ್ಜು ಬೆಳೆಯುತ್ತದೆ. ನಿಜ ಹೇಳಬೇಕೆಂದರೆ ಸಣ್ಣ ಬೊಜ್ಜು ತುಂಬಿದ
ದೇಹವೆಂದರೆ ಕಲ್ಲುಗಳಿಗೆ ಒಳಗೊಳಗೇ ಹೆಮ್ಮೆ .

ಮತ್ತು ಬೇಸಿಗೆಯ ರಾತ್ರಿಗಳಲ್ಲಿ ಕಿರಿಯ ಕಲ್ಲುಗಳು ಮಲಗಿದ ಮೇಲೆ ಹಿರಿಯ
ಕಲ್ಲುಗಳು ಅತ್ಯಂತ ಗಂಭೀರವೂ, ದಿಗಿಲುಗೊಳಿಸುವುದು ಆದ
ವಿಷಯವೊಂದರ ಬಗ್ಗೆ ಮಾತುಕತೆ ಪ್ರಾರಂಭಿಸುತ್ತವೆ - ಚಂದ್ರ. ಕಲ್ಲುಗಳು
ಚಂದ್ರನ ಬಗ್ಗೆ ಯಾವತ್ತೂ ಪಿಸುಮಾತಿನಲ್ಲಿ ತಮ್ಮ ತಮ್ಮಲ್ಲೇ
ಮಾತನಾಡಿಕೊಳ್ಳುತ್ತವೆ - "ನೋಡಿ ಹೇಗೆ ದಿನ ದಿನಕ್ಕೂ ತನ್ನ ಆಕಾರವನ್ನು
ಬದಲಿಸುತ್ತಾ , ಸುತ್ತಲೂ ಬೆಳಕನ್ನು ಪಸರಿಸುತ್ತಾ ಆಗಸದಲ್ಲಿ
ಹಾದುಹೋಗುತ್ತಿದ್ದಾನೆ ಎಂದು ಹಳೆ ಕಲ್ಲೊಂದು ಗೊಣಗುತ್ತದೆ. "ಪ್ರತಿಬಾರಿ
ದಿಟ್ಟಿಸಿದಾಗಲೂ ಅವನು ತನ್ನನ್ನು ಹಿಂಬಾಲಿಸುವಂತೆ ಪ್ರೇರೇಪಿಸುತ್ತಿದ್ದಾನೆ
ಅನ್ನಿಸುತ್ತದೆ"; ಮಗದೊಂದು ಕಲ್ಲಿನ ಆಕ್ಷೇಪಣೆ. ಅದೇ ಸಮಯಕ್ಕೆ ಹಿಂದಿನಿಂದ
ಇನ್ಯಾವುದೋ ಕಲ್ಲು ಆಕಾಶವನ್ನು ನೋಡುತ್ತ ಪಿಸುಗುಡುತ್ತದೆ  "ನಮ್ಮಲ್ಲೇ
ತಲೆಕೆಟ್ಟ ಕಲ್ಲೊಂದು ಈ ಚಂದ್ರನಾಗಿದೆ"

ಮೂಲ ಕತೆ : The Stone : ೧೯೩೩ ರಲ್ಲಿ ಅಮೆರಿಕಾದ ಇಡಾಹೊದ ಅರಿಜೋನಾದಲ್ಲಿ
ಹುಟ್ಟಿದ ಲೇಖಕ ರಿಚರ್ಡ್ ಷೆಲ್ಟನ್ ಅರಿಜೋನಾ ಯುನಿವರ್ಸಿಟಿಯಲ್ಲಿ
ಪ್ರಾಧ್ಯಾಪಕರು. ಸುಮಾರು ಒಂಬತ್ತುಕ್ಕೂ ಹೆಚ್ಚು ಕವನ ಸಂಕಲನಗಳು,
ಲೇಖನ ಸಂಕಲನಗಳು ಅವರ ಹೆಸರಿನಲ್ಲಿ ಪ್ರಕಟವಾಗಿದೆ.

Sunday, September 9, 2018

ದಿನಪತ್ರಿಕೆಯ ಓದುಗಳೊಬ್ಬಳ ಡೈರಿಯ ಪುಟಗಳು


ಸ್ಪಾನಿಷ್ ಮೂಲ : ಅರ್ಜೆಂಟೀನಾದ ಕತೆಗಾರ ಎಡ್ವರ್ಡೊ ಬರ್ತಿ ಅವರ ’ಡೈರಿ ಆಫ್ ಎ ನ್ಯೂಸ್ ಪೇಪರ್ ರೀಡರ್ ’

ಗುರುವಾರ ಜುಲೈ
ಎಷ್ಟೋ ದಿನಗಳಾದ ಮೇಲೆ ನಿನಗೇನಾದರೂ ಬರೆಯಬೇಕು ಅನ್ನಿಸುತ್ತಿದೆ . ನಿನ್ನೊಟ್ಟಿಗೆ ಹಂಚಿಕೊಳ್ಳಲೇ ಬೇಕು ಅನ್ನಿಸುವ ಕೆಲವು ವಿಷಯಗಳಿವೆ . ಮನೆಗೆ ಪೇಪರ್ ಹಾಕುವ ಹುಡುಗ ಇವತ್ತು  ಬಂದಿರಲಿಲ್ಲ. ಯಾಕೆ ಎಂದು ವಿಚಾರಿಸಲಿಕ್ಕೆ ನಾನು ಅಂಗಡಿಗೆ ಹೋಗುವಾಗ 'ಇನ್ನು ಮುಂದೆ ಎಲ್ಲ ಪೇಪರ್ ಗಳನ್ನು ಓದಲು ಪ್ರಾರಂಭಿಸಿದರೆ  ಹೇಗೆ ? ' ಎನ್ನುವ ವಿಚಾರ  ತಲೆಯಲ್ಲಿ ಬಂದಿತು . ಎಷ್ಟು ಪೇಪರ್ ಗಳಿರಬಹುದು? ಅಂಗಡಿಯವನಿಗೂ ಸರಿಯಾಗಿ ಲೆಕ್ಕ ಗೊತ್ತಿರಲಿಲ್ಲ. ಹೀಗಾಗಿ ನಾನು ಅವನೂ ಜೊತೆಯಲ್ಲಿ ಕುಳಿತು ಲೆಕ್ಕ ಹಾಕಬೇಕಾಯಿತು . "ನಾಳೆಯಿಂದ ಇವೆಲ್ಲ ಪೇಪರ್ ಒಂದೊಂದು ಪ್ರತಿಯನ್ನು  ನಮ್ಮ ಮನೆಗೆ ಹಾಕು" ಅಂತ ಅವನಿಗೆ ಹೇಳಿ ಬಂದಿದ್ದೇನೆ.

ಶನಿವಾರ ಜುಲೈ ೧೫
ಪೇಪರು ಓದುವ ಕೆಲಸ ಸಿಕ್ಕಾಪಟ್ಟೆ ಆಗುತ್ತದೆ. ಬೆಳಿಗ್ಗೆ ಎಂಟು ಘಂಟೆ ಹಾಗೆ ನಾನು ಓದಲಿಕ್ಕೆ ಪ್ರಾರಂಭಿಸುತ್ತೇನೆ. ಆಮೇಲೆ ಮಧ್ಯಾನ್ಹ ಊಟಕ್ಕೆ ಒಂದು ವಿರಾಮ . ಮತ್ತೆ ಸಂಜೆ .೩೦ ತನಕ ಓದುತ್ತೇನೆ. ನೀವೆಲ್ಲ ಕಾದಂಬರಿಗಳನ್ನ ಓದುತ್ತಿರಲ್ಲವೇ , ಹಾಗೆಯೇ ನಾನು ಪೇಪರ್ ಗಳನ್ನ ಓದುತ್ತೇನೆ. ಮೊದಲನೇ ಪುಟದಿಂದ ಕೊನೆಯ ಪುಟದವರೆಗೂ. ನಾನು ರೀತಿ ಓದದೇ ಇದ್ದರೆ ಕೆಲವು ಸುದ್ದಿಗಳು, ವಿಷಯಗಳು ನನ್ನ ಕಣ್ತಪ್ಪಿ ಹೋಗಬಹುದು. ನಾನು ಪೇಪರ್ ಓದುವ ಬೇರೆ ಬೇರೆ ವಿಧಾನಗಳನ್ನ ಪ್ರಯತ್ನಿಸಿದ್ದೇನೆ . ಉದಾಹರಣೆಗೆ ರಾಜಕೀಯಕ್ಕೆ ಸಂಬಂಧಿಸಿದ ಸುದ್ದಿಗಳನ್ನ ಮೊದಲು ಓದುವದು, ನಂತರ ಕ್ರೀಡಾ ಸುದ್ದಿ , ಆಮೇಲೆ ಸಿನಿಮಾ ಮನರಂಜನೆ , ಕೊನೆಗೆ ಅಂತರರಾಷ್ಟ್ರೀಯ ಸಮಾಚಾರಗಳು .   ಆದರೆ ಇವೆಲ್ಲ ಕ್ರಮಕ್ಕಿಂತ, ನಾನು  ಈಗ ಓದುತ್ತಿರುವ ಕ್ರಮವೇ ಸರಿ

ಭಾನುವಾರ ಆಗಸ್ಟ್ ೨೦
ದಯೆವಿಟ್ಟು ನನ್ನನ್ನು ಕ್ಷಮಿಸು. ಇವತ್ತು ನಿನ್ನ ಬಟ್ಟೆಗಳನ್ನೆಲ್ಲ ಹೊರಗೆಸೆಯಬೇಕಾಯಿತು .ವಿಚಿತ್ರವೆಂದರೆ ಹಾಗೆ ಮಾಡುವಾಗ ನನಗೆ ಸ್ವಲ್ಪವೂ ಅಪರಾಧಿ ಪ್ರಜ್ಞೆ ಕಾಡಲೇ ಇಲ್ಲ. ನಿನ್ನ ಬಟ್ಟೆಗಳನ್ನೆಲ್ಲ ಯಾವುದಾದರೂ ಅನಾಥಾಶ್ರಮಕ್ಕೆ ದಾನ ಕೊಡುವುದಾಗಿ ನಿನ್ನ ಬಳಿ ಹೇಳಿದ್ದೆ , ಹೌದು . ಆದರೆ ಈಗ ನನಗೆ ಯಾವುದಕ್ಕೂ ಪುರುಸೊತ್ತೇ ಇಲ್ಲ . ಕೆಲವೊಂದು  ದಿನ ನಾನು ಹನ್ನೆರಡು ಹದಿಮೂರು ಘಂಟೆ ಕುಳಿತು ಓದಿದರೂ , ಪೇಪರ್ ಓದುವ ಕೆಲಸವನ್ನ ಮುಗಿಸಲಿಕ್ಕೆ ಆಗುವದಿಲ್ಲ . ಅದರಲ್ಲೂ ವಾರಾಂತ್ಯದಲ್ಲಿ ಪೇಪರಗಳ ಪುರವಣಿಗಳನ್ನು ಓದಿ ಮುಗಿಸುವುದರೊಳಗೆ ನನಗೆ ಸಾಕುಸಾಕಾಗಿ ಬಿಡುತ್ತದೆ . ಹಾಗಾಗಿ ಕೆಲವೊಂದಿಷ್ಟನ್ನು ಸೋಮವಾರವೂ  ಓದುತ್ತೇನೆ . ಸಾಮಾನ್ಯವಾಗಿ ಮಂಗಳವಾರದ ಹೊತ್ತಿಗೆ ಓದು ಒಂದು ಹಂತಕ್ಕೆ ಬರುತ್ತದೆ . ಅವತ್ತು ಮನೆಯನ್ನ ಚೊಕ್ಕಟ ಮಾಡಲಿಕ್ಕೆ ಸ್ವಲ್ಪ ಸಮಯ ಸಿಗುತ್ತದೆ. ನಿನ್ನ ಬಟ್ಟೆಗಳನ್ನು  ಹೊರಗೆಸೆದ ಮೇಲೆ ವಾರ್ಡ್ ರೋಬಿನಲ್ಲಿ ಸಾಕಷ್ಟು ಜಾಗ ಆಗಿದೆ. ಹೀಗಾಗಿ ನಾನು ಓದಿ ಮುಗಿಸಿದ ಪೇಪರುಗಳನ್ನ ನಿನ್ನ ಬಟ್ಟೆ ಇಡುವ ಜಾಗದಲ್ಲಿ ಇಡುತ್ತೇನೆ.  ಪೂರ್ವಿ ಮನೆಗೆ ಬಂದಾಗಲೆಲ್ಲ 'ಅಮ್ಮಾ , ಹಳೆ ಪೇಪರಗಳನ್ನ ಯಾಕೆ ಇಟ್ಟುಕೊಂಡಿದ್ದೀಯ , ಅವನ್ನೆಲ್ಲ ರದ್ದಿಗೆ ಹಾಕಬಾರದೇ'  ಅನ್ನುತ್ತಾಳೆ.  ಈಗ ವಾರ್ಡ್ ರೋಬನ್ನು ಪೇಪರುಗಳು ತುಂಬಿರುವದರಿಂದ ನಿನ್ನ ವಾಸನೆ  ಅಕ್ಷರಗಳ ವಾಸನೆ ಜೊತೆಗೆ ಬೆರೆಯುತ್ತಿದೆ ಅನ್ನಿಸುತ್ತಿದೆ . ಹೊಸ ವಾಸನೆಯೇನಲ್ಲ , ಎರಡು ವಾಸನೆಗಳು ಪರಸ್ಪರ ಆಕ್ರಮಿಸಲು ಕಾದಾಡುತ್ತಿವೆ ಎನ್ನುವ ಹಾಗೆ

ಶುಕ್ರವಾರ ಸೆಪ್ಟೆಂಬರ್
ಇತ್ತೀಚಿಗೆ  ಪೇಪರಿನಲ್ಲಿ ನಾನು ಬೇರೆ ಯಾರೂ ಓದದ  ವಿಷಯಗಳನ್ನು ಓದುತ್ತಿದ್ದೇನೆ. ಪೇಪರಿನ ಮರೆತುಹೋದ ಮೂಲೆಗಳಲ್ಲಿ ಕೆಲವೊಂದು ಯಾರು ಓದದ ವಿಷಯಗಳನ್ನು ಓದುವ ಏಕ ಮಾತ್ರ ಓದುಗ ನಾನೊಬ್ಬನೇ ಇರಬೇಕು . ಕೆಲವೊಮ್ಮೆ ಪೇಪರಿನವರು  ಕೆಲವೊಂದು ಕ್ಷುಲ್ಲಕ ವಿಷಯಗಳನ್ನು ನನ್ನನ್ನೇ  ದೃಷ್ಟಿಯಲ್ಲಿ ಇರಿಸಿಕೊಂಡೆ ಪ್ರಕಟಿಸುತ್ತಾರೆ ಅನಿಸುತ್ತದೆ. ಇಲ್ಲವಾದರೆ ಪ್ರಪಂಚದಲ್ಲಿ ಯಾರಿಗೂ ಬೇಡದ ಇಂತಹ ಸುದ್ದಿಗಳನ್ನು ಯಾಕೆ ಪ್ರಕಟಿಸಬೇಕು ? ನಾನು ಕೆಲವೊಂದು ವಿಚಿತ್ರವಾದ ಆಶ್ಚರ್ಯಕರವಾದ ಸುದ್ದಿಗಳನ್ನು ನನ್ನ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತೇನೆ   ಪೂರ್ವಿ ಬಂದಾಗಲೆಲ್ಲ ನಾನು ಓದಿದ ಹಳೆಯ ಪೇಪರುಗಳನ್ನು ನಿನ್ನ ವಾರ್ಡ್ ರೋಬಿನಲ್ಲಿಡಲು ಸಹಾಯ ಮಾಡುತ್ತಾಳೆ


ಸೋಮವಾರ ಸೆಪ್ಟೆಂಬರ್ ೧೧
ಯಾವುದಾದರು ಸುದ್ದಿ ಒಂದೇ ಪೇಪರಿನಲ್ಲಿ ಪ್ರಕಟವಾಗಿದ್ದರೆ ನಾನು ಅದನ್ನು ನಂಬುವದೇ ಇಲ್ಲ . ಹಾಗೆಯೇ ಎಲ್ಲ ಪೇಪರಿನಲ್ಲೂ ಯಾವುದೋ ಸುದ್ದಿ ಒಂದೇ ತೆರನಾಗಿದ್ದರೆ ನಾನು ಅದನ್ನೂ ನಂಬುವದಿಲ್ಲ . ನಾನು ನಂಬಬೇಕಾದರೆ, ಸುದ್ದಿ ಪ್ರತಿ ಪೇಪರಿನಲ್ಲೂ ಬೇರೆ ಬೇರೆ ತೆರನಾಗಿರಬೇಕು .   ನಿನ್ನೆ ಪೂರ್ವಿ ಬಂದಾಗ ಅವಳಿಗೆ ಪುಸ್ತಕದಲ್ಲಿ ನಾನು ಟಿಪ್ಪಣಿ ಮಾಡಿಟ್ಟುಕೊಂಡಿದ್ದ , ಎರಡನೇ ತಲೆಯನ್ನ ಕಸಿ ಮಾಡಿಕೊಂಡಿರುವ  ಮನುಷ್ಯನ ಸುದ್ದಿಯೊಂದನ್ನ ಓದಿದೆ . ಆದರೆ ಸುದ್ದಿ  ಕೇವಲ ಒಂದು ಪೇಪರಿನಲ್ಲಿ ಮಾತ್ರ ಪ್ರಕಟವಾಗಿತ್ತು. ಪೂರ್ವಿ ತುಂಬಾ ಬಾರಿ ಹೇಳುತ್ತಿರುತ್ತಾಳೆ : 'ಅಮ್ಮ , ಪೇಪರಿನವರು ಕೆಲವೊಮ್ಮೆ ಸುದ್ದಿ ಸೃಷ್ಟಿ ಮಾಡಿ ಬರೆಯುತ್ತಾರೆ.' ಹಾಗಾಗಿ ನಾನು ಅವಳಿಗೆ ಇನ್ನೊಂದು ಸುದ್ದಿ ಓದಿ ತೋರಿಸಿದೆ : ಹಾಲೆಂಡಿನಲ್ಲಿ ಸಿನಿಮಾ ನಿರ್ದೇಶಕನೊಬ್ಬ , ಕಳೆದ ವರ್ಷ ಅವನೊಟ್ಟಿಗೆ ಕೆಲಸಮಾಡಿದ ನಾಲ್ಕು ಜನ ಕಲಾವಿದರನ್ನ ಕೊಲೆ ಮಾಡಿದ್ದನಂತೆ . ಅವನೊಟ್ಟಿಗೆ ಕೆಲಸ ಮಾಡಿದ ಕಲಾವಿದರು ಈಗ ಬೇರೆಯವರೊಟ್ಟಿಗೆ ಕೆಲಸ ಮಾಡುವದನ್ನು ಸಹಿಸಲಿಕ್ಕೆ ಆಗದೆ ಕೊಲೆ ಮಾಡಿದ್ದಾನೆ ಎಂದು ಪೇಪರನಲ್ಲಿ ಪ್ರಕಟವಾಗಿತ್ತು .  ಪೂರ್ವಿ ಅದನ್ನು ಕೇಳಿ ಸಿಕ್ಕಾಪಟ್ಟೆ ನಕ್ಕಳು . ಎಷ್ಟು ಎಂದರೆ  ನಕ್ಕು ನಕ್ಕು ಅವಳಿಗೆ ಅಳುವೇ ಬಂದಿತು. ಪೂರ್ವಿ ಖಿನ್ನಳಾಗಿದ್ದ ಹಾಗೆ ಕಾಣಿಸಿತು . ಅವಳ ಹೆಗಲಮೇಲೆ ಕೈ ಹಾಕಿ , ಬೇಕಾದರೆ ಇನ್ನೂ ಒಂದಿಷ್ಟು ಸುದ್ದಿ ಓದಿ ಹೇಳುತ್ತೇನೆ ಎಂದೆ . ಯಾಕೆ ಎಂದು ಗೊತ್ತಿಲ್ಲ ಇದ್ದಕ್ಕಿದ್ದಂತೆಯೇ ಪೂರ್ವಿ ಸಿಟ್ಟಿಗೆದ್ದು ಹೊರಟುಹೋದಳು .

ಭಾನುವಾರ ಅಕ್ಟೊಬರ್ ೨೯
ಪೂರ್ವಿ ಬರದೇ ತುಂಬಾ ದಿನಗಳಾದವು .  ಕಲೆಯ ಸಲ ಬಂದಾಗ ಅವಳಿಗೆ ವಾರಂತ್ಯದಲ್ಲಿ ಬರುವದು ಬೇಡ ಎಂದಿದ್ದೆ . ಯಾಕೆಂದರೆ ವಾರಂತ್ಯದಲ್ಲಿ ಪೇಪರಿನಲ್ಲಿ ಓದುವದಕ್ಕೆ ಸಿಕ್ಕಾಪಟ್ಟೆ ಸುದ್ದಿ ಇರುತ್ತದೆ . ಅವಳಿಗೆ ಬುಧವಾರ ಸಂಜೆ ಘಂಟೇ  ನಂತರ  ಬಾ ಅಂದಿದ್ದೆ. ನನ್ನ ಅನಿಸಿಕೆಯೇನೆಂದರೆ ಅವಳಿಗೆ ಪೇಪರ್ ಓದುವ ವಿಷಯದ ಗಂಭೀರತೆ ಅರ್ಥವಾಗುತ್ತಾ ಇಲ್ಲ  .

ಸೋಮವಾರ ನವೆಂಬರ್
ನಿನ್ನೆ ಪೂರ್ವಿ ಬಂದವಳು ಹಿಂದಿನ ತಿಂಗಳು ಮಾರುಕಟ್ಟೆಗೆ ಬಂದ  ಹೊಸ ದಿನಪತ್ರಿಕೆಯ ವಿಷಯ ಹೇಳಿದಳು .  ನನಗೆ ಅಸಾಧ್ಯ ಕೋಪ ಬಂತು . ನಿಜ ಹೇಳಬೇಕೆಂದರೆ ಹೊಸ  ಪೇಪರ್ ಬಂದಿರುವ  ವಿಷಯ ಇದುವರೆಗೂ ತಿಳಿಯದೆ ಇದ್ದುದಕ್ಕೆ ನನಗೆ ಕೋಪ ಬಂದಿತೋ ಅಥವಾ ನಿನ್ನೆ ,   ಭಾನುವಾರ , ನನಗೆ ಈಗಾಗಲೇ ಓದುವ ಕೆಲಸ  ಸಾಕಷ್ಟು ಇರುವಾಗ  ಇನ್ನೊಂದು ಪೇಪರು ಓದುವ ಪಟ್ಟಿಗೆ ಸೇರಿತಲ್ಲ ವಿಷಯ ಗೊತ್ತಾಯಿತಲ್ಲ ಅಂಥ ಕೋಪ  ಬಂದಿತ್ತೋ ಗೊತ್ತಾಗಲಿಲ. ಇವತ್ತು ಬೆಳಿಗ್ಗೆ ಪೇಪರ್ ಅಂಗಡಿಗೆ  ವಿಚಾರಿಸಿದೆ , ಅಂಗಡಿಯವನು ನಾಳೆಯಿಂದ ಹೊಸ ಪೇಪರನ್ನು ಹಾಕುತ್ತಾನೆ

ಶುಕ್ರವಾರ ನವೆಂಬರ್ ೧೦
ಇತ್ತೀಚಿಗೆ ನಾನು ಪೇಪರಿನಲ್ಲಿ ಸುದ್ದಿ ಓದಿದ ನಂತರ ಆಯಾ ಪೇಪರಿಗೆ ಫೋನ್  ಮಾಡಿ ಸುದ್ದಿ ಬರೆದ  ವರದಿಗಾರನ ಫೋನ್   ನಂಬರ್ ತೆಗೆದುಕೊಳ್ಳುತ್ತೇನೆ . ಕೆಲವೊಮ್ಮೆ ಸುದ್ದಿ ಕಳುಹಿಸಿದವರು ಫ್ರೀಲ್ಯಾನ್ಸರ್ ಆಗಿದ್ದರೆ ಅವರ ನಂಬರ್ ಸಿಗುವದಿಲ್ಲ . ಅಂತವರ ಹೆಸರನ್ನ ನನ್ನ ಪಟ್ಟಿಯಿಂದ ಅಳಿಸಿಹಾಕುತ್ತೇನೆ . ಈಗ ನನಗೆ ಬಹುತೇಕ ವರದಿಗಾರರ ಧ್ವನಿಯ ಪರಿಚಯ ಚೆನ್ನಾಗಿಯೇ ಆಗಿದೆ . ಸಾಮಾನ್ಯವಾಗಿ ರಾಜಕೀಯ ವಿಷಯಗಳನ್ನು ಬರೆಯುವವರು ಪುರುಷ ವರದಿಗಾರರು . ಅವರ ಧ್ವನಿ ಕೇಳಿದರೆ ಅವರು ಸಿಗರೇಟು ಸೇದುತ್ತಾರೆ ಅನ್ನಿಸುತ್ತದೆ . ಸಿನಿಮಾ ಮನರಂಜನೆ ವಿಷಯಗಳನ್ನು ವರದಿ ಮಾಡುವವರಲ್ಲಿ ಮಹಿಳಾ ವರದಿಗಾರರೇ ಜಾಸ್ತಿ . ಇತ್ತೀಚಿಗೆ ನನಗೆ ಸುದ್ದಿ ಓದುವಾಗ ನನ್ನ ಕಿವಿಯಲ್ಲಿ ಆಯಾ ವರದಿಗಾರರೇ ಕುಳಿತು ಓದುತ್ತಿದ್ದಾರೆ ಅನ್ನಿಸುತ್ತದೆ

ಗುರುವಾರ ನವೆಂಬರ್ ೧೬
ಇದನ್ನ ನಿನಗೆ ಹೇಗೆ ಹೇಳಬೇಕು ಎಂದು ತಿಳಿಯುತ್ತಿಲ್ಲ . ನಿನ್ನೆ ವಿಠೋಬ ಬಂದಿದ್ದ.  ನಿನಗೆ ನೆನಪಿದ್ಯಾ ? ಮೊದಲೆಲ್ಲ  ಪೂರ್ವಿ ಅವನ ಬಗ್ಗೆ ಯಾವಾಗಲೂ ಹೇಳುತ್ತಿರುತ್ತಿದ್ದಳು . ಆಮೇಲೆ ಇದ್ದಕ್ಕಿದ್ದ ಹಾಗೆ ಅವನ ಬಗ್ಗೆ ಮಾತನಾಡುವದನ್ನೇ ನಿಲ್ಲಿಸಿ ಬಿಟ್ಟಳು .  ಕೆಲ ವಾರಗಳಿಂದ ಮತ್ತೆ ಅವನ ಬಗ್ಗೆ ಮಾತನಾಡುತ್ತಿದ್ದಳು. ನಿನ್ನೆ ಸಂಜೆ ಅವನನ್ನು ಮನೆಗೆ ಕರೆದುಕೊಂಡು ಬಂದಿದ್ದಳು. ವಿಠೋಬನದು ಮಾತು ಕಡಿಮೆ ಅನ್ನಿಸುತ್ತದೆ .  ಪೇಪರು ಓದುವ ಹಾಗೆ ಕಾಣಿಸಲಿಲ್ಲ.  ನಿನಗೆ ಅವನು ಇಷ್ಟವಾಗದೇ ಇರಬಹುದು.
 
ಮಂಗಳವಾರ ನವೆಂಬರ್ ೨೮
ಮತ್ತೆ ಇನ್ನೊಂದು ಹೊಸ ಪೇಪರ್  ಪ್ರಾರಂಭವಾಗಿದೆ. ನನ್ನ ಜೀವನವನ್ನು ಇನ್ನಷ್ಟು ಜಟಿಲಗೊಳಿಸಲಿಕ್ಕೆ ಪೇಪರಿನವರು ಸೇರಿಕೊಂಡು ಹೊಸ ಪತ್ರಿಕೆ ಶುರು ಮಾಡುತ್ತಿದ್ದಾರೇನೋ ಅನಿಸುತ್ತಿದೆ . ಹೊಸತಾಗಿ ಬರುವ ಎಲ್ಲ ಪತ್ರಿಕೆಗಳೂ ಈಗ ಇರುವ ಪತ್ರಿಕೆಗಳಿಗಿಂತ ದಪ್ಪನಾಗಿರುತ್ತವೆ . ಹೊಸ ಪೇಪರ್  ದೆಸೆಯಿಂದ ನಾನು ವೇಳಾಪಟ್ಟಿಯಲ್ಲಿ  ಸ್ವಲ್ಪ ಹಿಂದೆ ಬಿದ್ದಿದ್ದೆ.  ಅದಕ್ಕೆ ನಿನಗೆ ಏನು ಬರೆದಿರಲಿಲ್ಲ. ಇವಾಗ ಅಡ್ಡಿಯಿಲ್ಲ. ವಾರಾಂತ್ಯದಲ್ಲಿ ನಿದ್ದೆಗೆಟ್ಟು ಓದಿದ್ದರಿಂದ ಎಲ್ಲವನ್ನೂ ಮುಗಿಸಲು ಸಾಧ್ಯವಾಯಿತು.

ಬುಧವಾರ ನವೆಂಬರ್ ೨೯
ಹೇಳಲಿಕ್ಕೆ ಮರೆತುಹೋಗಿತ್ತು . ಪೂರ್ವಿ ಬಾಂಗ್ಲಾದೇಶಕ್ಕೆ ಹೋಗಿದ್ದಾಳೆ . ಒಬ್ಬಳೇ . ವಿಠೋಬಾನದು ಯಾವುದೋ ಪಾರ್ಸೆಲ್ ಇವಳು ತರುತ್ತಾಳಂತೆ . ಅವನ  ಕೆಲಸ ಏನೆಂದು ನನಗೆ ಗೊತ್ತಿಲ್ಲ. ಏನೇ ಇರಲಿ ಇನ್ನು ಮೇಲೆ ನಾನು ಬಾಂಗ್ಲಾದೇಶಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಸ್ವಲ್ಪ ಹೆಚ್ಚೇ ಗಮನಕೊಟ್ಟು ಓದುತ್ತೇನೆ.

ಸೋಮವಾರ ಡಿಸೆ೦ಬರ್ ೧೧
ಪೂರ್ವಿ ವಾಪಾಸು ಬಂದು ಮತ್ತೆ ಎಲ್ಲಿಗೋ ಹೋಗಿದ್ದಾಳೆ. ಇತ್ತೀಚಿಗೆ ಅವಳು ಇಲ್ಲಿಗೆ ಬರುವದನ್ನೇ ಕಡಿಮೆ ಮಾಡಿದ್ದಾಳೆ . ಆಗಾಗ ಫೋನ್ ಮಾಡುತ್ತಾಳೆ. ಮೊನ್ನೆ  ಕಣ್ಣು ಪರೀಕ್ಷೆ ಮಾಡಿಸಲು ಹೋಗಿದ್ದೆ . ದ್ರಷ್ಟಿ ಮಂಜಾದ ಹಾಗೆ ಇತ್ತು . ಇದೇನು ನನ್ನ ಅತಿಯಾದ ಓದಿನಿಂದ ಆಗಿದ್ದಲ್ಲ . ಬಹುಶ: ಪೇಪರಿನಲ್ಲಿ ಅಕ್ಷರಗಳನ್ನು ಮುದ್ರಿಸಿದ ಮಸಿ ನನ್ನ ಕೈಗೆ ತಾಕಿರುತ್ತದೆ , ನಾನು ಅದೇ ಕೈಯಲ್ಲಿ ಕೆಲವೊಮ್ಮೆ ಕಣ್ಣುಜ್ಜಿಕೊಳ್ಳುತ್ತೇನೆಲ್ಲ ಅದರಿಂದಲೇ ಹೀಗಾಗಿರಬೇಕು. ಪೇಪರಿನ ಹಾಳೆಗಳನ್ನು ತಿರುವಿ ತಿರುವಿ ಕೆಲವೊಮ್ಮೆ ಅದರಲ್ಲಿನ ಅಕ್ಷರಗಳು ನನ್ನ ಕೈಗೆ ಅಂಟಿಕೊಂಡು ಬಿಡುತ್ತವೆ . ಇನ್ನು ಮೇಲೆ ಒಂದು ಒದ್ದೆ ಬಟ್ಟೆಯಿಂದ ಕೈಯನ್ನು ಆಗಾಗ ಒರೆಸಿಕೊಳ್ಳುತ್ತೇನೆ

ಗುರುವಾರ ಡಿಸೆ೦ಬರ್ ೨೧
ನನಗೆ ನಂಬುವದಕ್ಕೆ  ಆಗುತ್ತಿಲ್ಲ. ಪೂರ್ವಿ ಏನೋ ಹೆಚ್ಚು ಕಡಿಮೆ ಮಾಡಿಕೊಂಡಿದ್ದಾಳೆ . ಎಲ್ಲ ಪೇಪರಿನಲ್ಲೂ ಅವಳದೇ ಸುದ್ದಿ . ವಿಠೋಬಾನದು ಏನು ತಪ್ಪಿಲ್ಲವಂತೆ ಹಾಗಾಗಿ ಅವನಿಗೆ ಬಿಡುಗಡೆಯಂತೆ. ನಾನು ಇದು ಯಾವುದನ್ನೂ ನಂಬುವದಿಲ್ಲ ಯಾಕೆಂದರೆ ಎಲ್ಲ ಪೇಪರಿನವರೂ ಒಂದೇ ತೆರನಾದ ಸುದ್ದಿ ಪ್ರಕಟಿಸಿದ್ದಾರೆ. ಬಹುಶ: ವಿಠೋಬ ನನಗೆ ಫೋನ್ ಮಾಡಿ ಏನಾಗಿದೆ ಎಂದು ವಿವರಿಸಬಹುದೇನೋ ? ಆದರೆ ಅವನ ಬಳಿ ನನ್ನ ಫೋನ್  ನಂಬರ್  ಇದೆಯೋ ಇಲ್ಲವೋ ?  ನನಗನ್ನಿಸುತ್ತದೆ   ಪೇಪರಿನವರು ಬೇರೆ ಯಾರೋ ಪೂರ್ವಿ ಬಗ್ಗೆ ಬರೆದಿದ್ದಾರೆ . ವಿಠೋಬಾ ಸಹ ಇವನಲ್ಲ, ಬೇರೆ ಯಾರೋ ಇರಬೇಕು . ಅಥವಾ ನಾನೇ ಪೂರ್ವಿಗೆ ಫೋನು ಮಾಡಿದರೆ ಹೇಗೆ ? ಪೂರ್ವಿ ಬದಲು ವಿಠೋಬ ಫೋನ್ ತೆಗೆದುಕೊ೦ಡರೆ ? ಇಲ್ಲ, ಆಗ ನಾನು ಮಾತನಾಡುವದೇ ಇಲ್ಲ 

ಶನಿವಾರ ಡಿಸೆಂಬರ್ ೨೩
ಇವತ್ತು ಸಹ ಪೇಪರಿನ ತುಂಬಾ ಪೂರ್ವಿಯದೇ ಸುದ್ದಿ . ಆದರೆ ಒಂದೊಂದು ಪೇಪರಿನಲ್ಲಿ ಒಂದೊಂದು ಸುದ್ದಿ . ನನಗೆ ಈಗ ನಂಬಿಕೆ ಬರುತ್ತಿದೆ . ಒಂದು ಸಮಾಧಾನದ ಸಂಗತಿ ಎಂದರೆ ಕೊನೆಗೂ  ನಾನು ಪೇಪರ್ ಓದುವ ಕೆಲಸ ನಿಲ್ಲಿಸದೆ ಪೂರ್ವಿಯ ಜೀವನದಲ್ಲಿ ಏನಾಗುತ್ತಿದೆ ಎಂದು ತಿಳಿಯಬಹುದು.

ಗುರುವಾರ ಜನವರಿ
ಚೀನಾದಲ್ಲಿ ಮಹಿಳೆಯೊಬ್ಬಳು ನಾಯಿ ಮರಿಗೆ ಜನ್ಮನೀಡಿದ್ದಾಳೆ .  ಇಂತಹ ಮಹತ್ವದ ವಿಷಯವನ್ನ ಪೇಪರಿನ ಯಾವುದೋ ಒಳ ಪುಟದಲ್ಲಿ ಯಾಕೆ ಪ್ರಕಟಿಸುತ್ತಾರೆ ಅನ್ನುವದು ನನಗೆ ಅರ್ಥವೇ ಆಗುತ್ತಿಲ್ಲ? ನಿನ್ನೆ ಮಧ್ಯಾಹ್ನ ಹಲವಾರು ಪೇಪರಿನ ಸಂಪಾದಕರಿಗೆ ಫೋನು ಮಾಡಿ ವಿಷಯವನ್ನು ಚರ್ಚಿಸಿದ್ದೇನೆ . ಆದರೆ ಯಾರಿಗೂ ಸುದ್ದಿಯ ಮಹತ್ವವೇ ಅರ್ಥವಾದಂತಿಲ್ಲ . ಕೊನೆಗೆ ಇವರೆಲ್ಲರ ಜೊತೆ ಮಾತನಾಡಿ ನನ್ನ ಸಮಯ ಹಾಳು ಮಾಡಿಕೊಂಡು ಪೇಪರು ಓದುವದರಲ್ಲಿ ಹಿಂದೆ ಬೀಳುವಂತಾಯಿತು. ಆದರೇನು ಮಾಡೋದು ? ಒಂದಲ್ಲ ಒಂದು ದಿನ ಯಾವುದಾದರೂ ಒಂದು ಪೇಪರಿನವರು ರೀತಿಯ ತಪ್ಪುಗಳನ್ನು ಮಾಡುತ್ತಿರುತ್ತಾರೆ . ಹೀಗಾಗಿ ನಾನು ಅವರಿಗೆ ಫೋನು ಮಾಡಲೇ ಬೇಕು. 

ಶುಕ್ರವಾರ ಜನವರಿ ೧೨

ಇವತ್ತು ಪೇಪರು ಹಾಕುವ ಹುಡುಗನಿಗೆ ಹೇಳಿ ,   ಹಳೆಯ ಪೇಪರುಗಳನ್ನೆಲ್ಲ ವಾರ್ಡ್ ರೊಬಿನೊಳಗೆ ಇರಿಸಬೇಕು . ನನ್ನ ಲೆಕ್ಕಾಚಾರದ ಪ್ರಕಾರ ಇನ್ನು ಮೂರು ತಿಂಗಳಿಗೆ ನಮ್ಮ ಮನೆಯಲ್ಲಿರುವ ರೂಮುಗಳೆಲ್ಲ ತುಂಬಿ ಹೋಗುತ್ತವೆ. ಬಹುಶ : ಆಗ ನಾನು ನನ್ನ ಬಟ್ಟೆಗಳನ್ನೆಲ್ಲ ವಾರ್ಡ್ ರೊಬಿನಿ೦ದ ತೆಗೆದು ಹೊರಗೆಸೆಯುತ್ತೇನೆ . ಹೇಗಿದ್ದರೂ  ಎಷ್ಟೊಂದು ಬಟ್ಟೆಗಳನ್ನು ನಾನು ಧರಿಸುವದೇ ಇಲ್ಲ . 


ಬುಧವಾರ ಜನವರಿ ೨೪
ಎಷ್ಟೋ ದಿನಗಳಾದ ಮೇಲೆ ಪೂರ್ವಿ ಫೋನ್ ಮಾಡಿದ್ದಳು . ಬಹುಶ: ಅವಳು ಮರಳಿ ಬಂದಿದ್ದಾಳೆ ಅನ್ನಿಸುತ್ತದೆ .  ಅವಳ ಹೊಸ ಫೋನ್ ನಂಬರ್ ಕೊಟ್ಟಿದ್ದಾಳೆ. ಹಳೆ ನಂಬರ್  ಏನಾಯಿತು ?  ಕೇಳಿದೆ . ಮರೆತು ಬಿಡು ಎಂದಳು. ವಿಠೋಬ ಎಲ್ಲಿ ? ಕೇಳಿದೆ . ಮರೆತು ಬಿಡು ಎಂದಳು .   ನೀನ್ಯಾಕೆ ಇತ್ತೀಚಿಗೆ ಪೇಪರಿನಲ್ಲಿ ಬರುತ್ತಿಲ್ಲ ? ನನಗೆ ನಿನ್ನ ಬಗ್ಗೆ ಏನೂ ತಿಳಿಯುತ್ತಲೇ ಇಲ್ಲ ಎಂದೇ. ಪೂರ್ವಿ  ಅಳುವದಕ್ಕೆ ಪ್ರಾರಂಭಿಸಿದಳು. 'ಅಮ್ಮಾ , ನಿನ್ನ ನೋಡಬೇಕು , ಜೊತೆಗೆ ಕುಳಿತು ಮಾತನಾಡಬೇಕು ' ಎಂದಳು .  ಅವಳಿಗೆ ಅಲ್ಲಿ ಬರುವದು ಬೇಡ ಎಂದು ಅಂತೂ ಇಂತೂ ತಿಳಿಸಿ ಹೇಳುವಷ್ಟರಲ್ಲಿ ಸಾಕು ಸಾಕಾಯಿತು ನನಗೆ. ಅವಳು ಬಂದರೆ ಪೇಪರು ಓದುವದು ಹೇಗೆ ?

ಸೋಮವಾರ ಜನವರಿ ೨೯
ಪೂರ್ವಿ  ಬಗ್ಗೆ  ವರದಿ ಮಾಡಿದ್ದ ಪೇಪರಿನವರಿಗೆ ಫೋನು ಮಾಡಿದ್ದೆ. ಯಾವಾಗ ಫೋನು ಮಾಡಿದರು ವರದಿಗಾರ ಇಲ್ಲ ಎನ್ನುತ್ತಾರೆ. ಹೀಗಾದರೆ ನನಗೆ ಸತ್ಯ ಗೊತ್ತಾಗುವದು ಹೇಗೆ ?   ಇತ್ತೀಚಿಗೆ ಪೇಪರಿನ ವರದಿಗಾರರೆಲ್ಲ ಎಲ್ಲಿಗೋ ಹೋಗುತ್ತಿದ್ದಾರೆ . ಯಾವ ಪತ್ರಿಕೆಗೆ ಯಾವಾಗ ಫೋನು ಮಾಡಿದರು ಯಾವ ವರದಿಗಾರನು ಸಿಗುವದಿಲ್ಲ

ಮಂಗಳವಾರ ಫೆಬ್ರವರಿ ೧೩
ಹಂಗೇರಿಯಲ್ಲಿ ಯಾರೋ ಒಬ್ಬ ಬಂದೂಕುಧಾರಿ , ಸಂಗೀತ ಕಚೇರಿ ನಡೆಯುತ್ತಿರುವಾಗ ಹಾಡುತ್ತಿರುವವನನ್ನು ಗುಂಡಿಕ್ಕಿ ಕೊಲೆ ಮಾಡಿದನಂತೆ. ಅವನನ್ನು ಅರೆಸ್ಟ್ ಮಾಡಿದಾಗ ಬಂದೂಕುಧಾರಿ ಕೊಲೆಗಾರ ಕಿವುಡ ಎಂದು ತಿಳಿಯಿತಂತೆ. ದಿನ ಹೋದಂತೆ  ಪೇಪರುಗಳು ದಪ್ಪವಾಗ್ತಾ ಹೋಗ್ತಿವೆ . ನಾನು ಮಾತ್ರ ಸಣ್ಣ ಆಗುತ್ತಿದ್ದೇನೆ. ಈಗಾಗಲೇ ನಾನು ಎರಡು ವಾರ ಹಿಂದಿದ್ದೇನೆ . ಮೊದಲು ಒಂದು ವಾರ ಹಿಂದಕ್ಕೆ ಬಿದ್ದಿದ್ದೆ .  ಹಿಂದಿನ ವಾರ ತಲೆ ನೋವು ಶುರುವಾದಾಗಿನಿ೦ದ ಎರಡು ವಾರ ಹಿಂದಕ್ಕೆ ಬಿದ್ದಿದ್ದೇನೆ. ನಿನಗೆ ಹೇಳಿದರೆ ನಗು ಬರುವದೇನೋ ? ನಿನ್ನೆ  ಅಂಗಡಿಯಿಂದ ಸಾಮಾನು ತರುವಾಗ , ಅಂಗಡಿಯಾತನಿಗೆ ಜನವರಿ ೨೦ರ ನಂತರದ ಯಾವುದೇ ಪೇಪರಿನಲ್ಲಿ ಸಾಮಾನು ಕಟ್ಟಿ ಕೊಡುವದು ಬೇಡ ಅಂಥ ಖಡಾಖಂಡಿತವಾಗಿ ಹೇಳಿದೆ. ನನಗೆ ಅರ್ಧಮರ್ಧ ಸುದ್ದಿ ಓದುವದಕ್ಕೆ ಇಷ್ಟವಿಲ್ಲ.

ಮಂಗಳವಾರ ಫೆಬ್ರವರಿ ೨೭
ಈಗ ನಿನ್ನ ವಾರ್ಡ್ ರೋಬಿನಲ್ಲಿ ಪೇಪರುಗಳೇ ತುಂಬಿವೆ. ವಾರ್ಡ್ ರೋಬಿನ ತುಂಬಾ ಅಕ್ಷರಗಳದೇ ವಾಸನೆ . ನಿನ್ನ ವಾಸನೆ ಇಲ್ಲವೇ ಇಲ್ಲ.

ಸೋಮವಾರ ಮಾರ್ಚ್
ಇತ್ತೀಚಿಗೆ  ನನ್ನ ಆರೋಗ್ಯ ಕೈ ಕೊಡ್ತಾ ಇದೆ.. ಕಣ್ಣಿನ ಸಮಸ್ಯೆ ಮತ್ತೆ  ಶುರುವಾಗಿದೆ.  ನಿನ್ನೆ ಏನಾಯಿತು ಗೊತ್ತೇ? ನಾನು ಈಗಾಗಲೇ ಓದಿ ಮುಗಿಸಿದ್ದ ಪೇಪರನ್ನು ಮತ್ತೆ ಓದಿದೆ. ಸುಮಾರು ಒಂದು ಘಂಟೆ ಓದಿದ ಮೇಲೆ ನಾಲ್ವರು ಸಯಾಮಿಗಳ ತಲೆ ಹೇಗೆ ಕೂಡಿಕೊ೦ಡಿದೆ ಎನ್ನುವ ಸುದ್ದಿಯನ್ನು ಓದಿದಾಗಲೇ ಇದು ಈಗಾಗಲೇ ಓದಿ ಮುಗಿಸಿದ ಪೇಪರು ಎನ್ನುವದು ಗೊತ್ತಾಗಿದ್ದು. ನಿಜ ಏನೇನೆಂದರೆ ಇಂತಹ ಸುದ್ದಿಗಳನ್ನು ಹೊರತುಪಡಿಸಿದರೆ ಪೇಪರಿನಲ್ಲಿ ಉಳಿದೆಲ್ಲ ಸುದ್ದಿಗಳು ಹಿಂದಿನ ದಿನದ ಹಾಗೆಯೇ ಇರುತ್ತವೆ. ಹೀಗಾಗಿ ಪೇಪರು ಅದಲುಬದಲಾದರೂ ಗೊತ್ತಾಗುವದಿಲ್ಲ.  ಇವತ್ತು ನನಗೆ ತಲೆ ನೋವು. ಓದಲಿಕ್ಕೆ ಆಗುತ್ತಿಲ್ಲ .

ಭಾನುವಾರ ಮಾರ್ಚ್ ೧೧
ನಿನ್ನೆ ಎಂತಹ  ದುರದೃಷ್ಟಕಾರಿ ಘಟನೆ ನಡೆಯಿತು ಗೊತ್ತೇ ? ವಾರ್ಡ್ ರೋಬಿನ ಬಾಗಿಲು ತೆರೆದು ಪೇಪರು ತೆಗೆದುಕೊಳ್ಳಬೇಕು ಅನ್ನುವಾಗ , ತಲೆ ಸುತ್ತಿ ನಾನು ಪೇಪರುಗಳ ರಾಶಿಯ ಮೇಲೆ ಬಿದ್ದೆ. ಮತ್ತೆ ಸುಧಾರಿಸಿಕೊಂಡು ಎದ್ದೇಳುವಷ್ಟರಲ್ಲಿ , ನಾನು ಬಿದ್ದ ಹೊಡೆತಕ್ಕೆ ಹಿಂದಿನ ಮೂರು ತಿಂಗಳುಗಳ ಪೇಪರುಗಳೆಲ್ಲ ಕೆಳಗೆ ಬಿದ್ದು ,  ಪೇಪರುಗಳು  ಎಲ್ಲೆಂದರಲ್ಲಿ ಹರಡಿಕೊಂಡಿವೆ. ಈಗ ನನಗೆ ನಾನು ಓದದ ಪೇಪರು ಯಾವುದು , ಓದಿದ ಪೇಪರು ಯಾವುದು ಎನ್ನುವದು ಗೊತ್ತಾಗುತ್ತಲೇ ಇಲ್ಲ . ನನಗೆ  ಯಾವ ದಿನಾ೦ಕದವೆರೆಗೆ ಓದಿದ್ದೇನೆ ಎನ್ನುವದೇ ನೆನಪಾಗುತ್ತಿಲ್ಲ. ಹೀಗಾಗಿ ಮತ್ತೆ ಎಲ್ಲವನ್ನೂ ಓದಬೇಕಾಗಿದೆ. ದಿನ ಭವಿಷ್ಯ ಮತ್ತು ಹವಾಮಾನ ವರದಿ - ಇವುಗಳನ್ನು ಓದುವಾಗ ದಿನಾ೦ಕ ನೆನಪಿರಬೇಕೋ?

ಮಂಗಳವಾರ ಮಾರ್ಚ್ ೨೦
ಬಹುಶ: ನಾನು  ಬಹಳ ದಿನಗಳ ಸುದ್ದಿಗಳನ್ನು ಓದಿಲ್ಲ ಅನ್ನಿಸುತ್ತದೆ . ಯಾಕೆ ಅಂದರೆ ನನಗೆ ಈಗೀಗ ಸುದ್ದಿಗಳು ಅರ್ಥವೇ ಆಗುತ್ತಿಲ್ಲ.  ಸ್ಪೇನ್ ನಲ್ಲಿ ಬಹಳ ವಿಚಿತ್ರ ಘಟನೆಗಳು ನಡೆಯುತ್ತಿವೆಯಂತೆ.  ನಿನಗೆ ವಿಷಯ ಹೇಳಿದ್ದೇನೋ ಇಲ್ಲವೋ . ಇತ್ತೀಚಿಗೆ ಯಾವುದಾದರೂ ಸುದ್ದಿಯನ್ನು ಧಾರಾವಾಹಿ ಹಾಗೆ ಹಿಂಬಾಲಿಸಿ ಓದಲು ಪ್ರಾರಂಭಿಸಿದರೆ ಸ್ವಲ್ಪ ದಿನವಾದ ಮೇಲೆ ಇದ್ದಕ್ಕಿದ್ದ ಹಾಗೆ ಸುದ್ದಿ ಪೇಪರಿನಿಂದ ಮಾಯವಾಗಿಬಿಡುತ್ತದೆ. ಮತ್ತೆ ವಾಪಸು ಬರಬಹುದು ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುವದೇ ಬಂತು , ಸುದ್ದಿ ಬರುವದೇ ಇಲ್ಲ . ಹೀಗಾದರೆ ಸುದ್ದಿಯಲ್ಲಿ ಬರುವವರ ಬದುಕು ಅರ್ಧಕ್ಕೆ ನಿ೦ತು ಹೋದ ಹಾಗೆ ಅಲ್ಲವೇ ?

ಗುರುವಾರ ಮಾರ್ಚ್ ೨೯
ಪಶ್ಚಿಮ ಬಂಗಾಳದಲ್ಲಿ ಕೈ ಕಾಲುಗಳು  ಹಿಂದುಮುಂದಾಗಿರುವ ಮಗುವೊಂದು ಜನಿಸಿದೆಯಂತೆ. ಮಗುವಿನ ಫೋಟೋ ನೋಡಿದರೆ  ಒಂದು ಕ್ಷಣಕ್ಕೆ ನಿನ್ನನ್ನು  ನೋಡಿದ ಹಾಗೆ ಆಯಿತು. ಫೋಟೋ ಅಂತಹ ಸ್ಪಷ್ಟವಿರಲಿಲ್ಲ.  ಕೊನೆಗೆ ಅದು ನಿನ್ನ ಫೋಟೋ ಆಗಿರಬಹುದೇ ಎಂದು ಭೂತಗನ್ನಡಿಯಲ್ಲಿ ನೋಡಬೇಕಾಯಿತು. ಸ್ಪೇನ್  ನಲ್ಲಿ ವಿಚಿತ್ರ ಘಟನೆಗಳು ಹೆಚ್ಚಾಗಿವೆಯಂತೆ . ನಾನು ಓದದೇ  ಬಾಕಿ ಉಳಿದ ಪೇಪರುಗಳನ್ನ ಓದಿ ಮುಗಿಸಲಿಕ್ಕೆ ಪೂರ್ವಿ ಒಂದು ಉಪಾಯ ಹೇಳಿದ್ದಾಳೆ . ಅವಳ ಸ್ನೇಹಿತೆ ಒಬ್ಬಳು ನರ್ಸ್ ಆಗಿದ್ದಾಳಂತೆ . ಅವಳನ್ನು ಕಳುಹಿಸುತ್ತೀನಿ , ಇಬ್ಬರೂ ಕುಳಿತು ಓದಿ ಎಂದಿದ್ದಾಳೆ

ಶನಿವಾರ ಏಪ್ರಿಲ್
ಪೂರ್ವಿಯ  ಸ್ನೇಹಿತೆಗೆ ಪೇಪರು ಓದುವದಕ್ಕೆ ಬರುವದಿಲ್ಲ. ಅವಳಿಗೆ ಘಟನೆಗಳನ್ನ ಧಾರಾವಾಹಿಯ ಹಾಗೆ ಹೇಗೆ ಓದಬೇಕು ,ಪೇಪರನ್ನು ಹೇಗೆ ಕಾದಂಬರಿಯ ಹಾಗೆ ಓದಬೇಕು , ಯಾವ ಸುದ್ದಿಗಳನ್ನು ಟಿಪ್ಪಣಿ ಮಾಡಿಕೊಳ್ಳಬೇಕು ಇತ್ಯಾದಿಗಳ  ಬಗ್ಗೆ ತರಬೇತಿ ನೀಡಿ ನೀಡಿ ನನಗೆ ಸಾಕಾಯಿತು. ನಾಳೆಯಿಂದ ಅವಳನ್ನ ಪೇಪರು ಓದುವುದರ ಬದಲು ಅಡುಗೆ ಮಾಡುವ ಕೆಲಸಕ್ಕೆ ಹಚ್ಚುವದು ಒಳ್ಳೆಯದು

ಭಾನುವಾರ  ಏಪ್ರಿಲ್ ೧೫
ಪೇಪರಿನವರು ನಿನ್ನ ಫೋಟೋವನ್ನು ಯಾಕೆ ಅಷ್ಟು ಚಿಕ್ಕದಾಗಿ ಪ್ರಕಟಿಸುತ್ತಿದ್ದಾರೋ ಗೊತ್ತಿಲ್ಲ. ನಿನ್ನೆ ಇಡೀ ದಿನ ಭೂತಗನ್ನಡಿಯಲ್ಲಿ ನಿನ್ನ ಫೋಟೋ ನೋಡುವದರಲ್ಲಿಯೇ  ಕಳೆಯಿತು. ಭೂತಗನ್ನಡಿ ಇದ್ದರೂ  ನಿನ್ನ ಫೋಟ್ ಸ್ವಲ್ಪ ಮಸುಕಾಗಿ ಕಾಣಿಸುತ್ತಿದೆ.


ಗುರುವಾರ ಮೇ ೧೭
ಎಲ್ಲವೂ ಮಬ್ಬು ಮಬ್ಬಾಗಿ , ಮಂಜು ಮಂಜಾಗಿ ಅಸ್ಪಷ್ಟ . ಹಗಲು ರಾತ್ರಿ  ನಾನು ಯಾವುದೋ ದೋಣಿಯಲ್ಲಿ ಕುಳಿತಿರುವ ಹಾಗೆ.

 ಬುಧವಾರ ಜೂನ್ ೨೦
ಇವತ್ತು ಬೆಳಿಗ್ಗೆ ಎದ್ದಾಗ ವಾರ್ಡ್ ರೊಬಿನಿಂದ ವಿಚಿತ್ರ ವಾಸನೆ ಹೊಮ್ಮುತ್ತಿತ್ತು . ಬಾಗಿಲು ತೆಗೆದು ನೋಡಿದರೆ ಹಳೆಯ ಪೇಪರುಗಳೆಲ್ಲ ಬಣ್ಣಗೆಟ್ಟು  ಅಕ್ಷರಗಳೆಲ್ಲ ಕೊಳೆಯಲಾರಂಭಿಸಿವೆ . ಇಷ್ಟಕ್ಕೆಲ್ಲ ನಾನು ಓದುವದನ್ನು ಬಿಡುವದಿಲ್ಲ. ಆದರೂ ಅಕ್ಷರಗಳು ಕೊಳೆತ ವಾಸನೆ ಹೀಗಿರುತ್ತದೆ ಎಂದು ನನಗೆ ಗೊತ್ತಾಗಿದ್ದೇ ಆವಾಗ

ಬುಧವಾರ ಜುಲೈ
ಇತ್ತೀಚಿಗೆ ಪೇಪರುಗಳು ವಿಚಿತ್ರಾಕೃತಿಯಲ್ಲಿ ಬರುತ್ತಿವೆ . ವೃತ್ತ , ಚೌಕ, ಆಯತ , ತ್ರಿಭುಜ , ಷಟ್ಕೋನ .  ಮೊನ್ನೆ ಪೇಪರೊಂದರಲ್ಲಿ ಒಂದೇ ಸುದ್ದಿಯನ್ನು ನೂರು ಬೇರೆ ಬೇರೆ ವಿಧಾನದಲ್ಲಿ ಪ್ರಕಟಿಸಿದ್ದರು . ಇತ್ತೀಚಿಗೆ ನಾನು ತುಂಬಾ ಹಿಂದೆ ಉಳಿದಿದ್ದೇನೆ . ಬಹುಶ: ಎಲ್ಲವನ್ನೂ ಓದಿ ಮುಗಿಸಲಿಕ್ಕೆ ನನಗೆ ಆಗುವದೇ ಇಲ್ಲವೇನೋ? ಹಾಗಂತ ನಾನು ಅರ್ಧಕ್ಕೆ ಬಿಡುವವಳಲ್ಲ . ನಾನು ಹುಷಾರಾಗಿ , ಭೂತಗನ್ನಡಿ ಹಿಡಿದು ಪೇಪರಿನಲ್ಲಿ ಪ್ರಕಟವಾದ  ನಿನ್ನ ಚಿತ್ರಗಳನ್ನು ನೋಡುತ್ತಿದ್ದರೆ , ಚಿತ್ರಗಳ ಹಿಂದೆ ವಿಲಕ್ಷಣವಾದವು  ಏನೋ ನಡೆಯುತ್ತಿರುವುದು ಕಾಣಿಸುತ್ತದೆ .  ಕೆಲವೊಂದು ಫೋಟೋಗಳು ನನಗೆ ಹೊಟ್ಟೆ ತೊಳೆಸುವಂತೆ ಮಾಡುತ್ತವೆ. ನಿನ್ನೆಯ೦ತೂ ಯಾವುದೋ ಫೋಟೋ ನೋಡಿ ತಲೆತಿರುಗಿ ಹೋಗಿತ್ತು. ಸ್ಪೇನ್ ನಲ್ಲಿ ಏನಾಗುತ್ತಿರಬಹುದು ಎನ್ನುವದು ನನ್ನನ್ನು ಬಹಳ ಕಾಡುತ್ತಿದೆ . ವಾರ್ಡ್ ರೋಬಿಗೆ ಸ್ವಲ್ಪ ಸುಗಂಧ ತೈಲ ಚುಮುಕಿಸಬೇಕು

ಸೋಮವಾರ ಆಗಸ್ಟ್ ೨೦
ಪ್ರೀತಿಯ ಅಪ್ಪ ,
ನಾನು ಪೂರ್ವಿ . ನನಗೆ   ಡೈರಿ  ನಿನ್ನೆ ಸಿಕ್ಕಿತು . ಅಮ್ಮ ಎರಡು ಗುರುವಾರಗಳ ಹಿಂದೆ ತೀರಿಕೊಂಡಳು.  ಅವಳು ಇದ್ದಿದ್ದರೆ :  ಕೆಳಗೆ ಅಂಟಿಸಿರುವ ಪೇಪರಿನ ಕ್ಲಿಪ್ಪಿಂಗ್ ನೊಂದಿಗೆ ಡೈರಿಯನ್ನು ಮುಗಿಸುತ್ತಿದ್ದಳೇನೋ ? ಎಷ್ಟೊಂದು  ಸಲ ಅನ್ನಿಸಿತ್ತು , ಅಮ್ಮನ  ಮರಣ ವಾರ್ತೆಯನ್ನು  ಪೇಪರಿನಲ್ಲಿ ಹಾಕಿಸುವದು ಬೇಡ ಅಂತ . ಸುದ್ದಿ ಹಾಕಿಸಿದರೆ  ರೀತಿಯಲ್ಲಾದರೂ  ಆಕೆಯ ಕೆಲವು ಹಳೆಯ ಗೆಳತಿಯರಿಗೆ ಸುದ್ದಿ ದೊರೆಯಬಹುದೇನೋ ? ಅದಕ್ಕಿಂತ  ಹೆಚ್ಚಾಗಿ  ನನಗೆ ತಿಳಿದ ಹಾಗೆ ಅಮ್ಮ ಪೇಪರಿನಲ್ಲಿ ಬಂದಿದ್ದು ಇದೊಂದೇ ಸಲ.


ಸ್ಪಾನಿಷ್ ಮೂಲ : ಎಡ್ವರ್ಡೊ ಬರ್ತಿ

ಅರ್ಜೆಂಟೀನಾದ ಕತೆಗಾರ , ಪತ್ರಕರ್ತ  ಎಡ್ವರ್ಡೊ ಬರ್ತಿಹುಟ್ಟಿದ್ದು ೧೯೬೪  ರಲ್ಲಿ. ಇದುವರೆಗೂ ನಾಲ್ಕು ಕಥಾ ಸಂಕಲನಗಳು , ಆರು ಕಾದಂಬರಿಗಳು , ಎರಡು ಪತ್ರಿಕೋದ್ಯಮ ಕುರಿತ ಪುಸ್ತಕಗಳು  ಎಡ್ವರ್ಡೊ ಬರ್ತಿಯ ಹೆಸರಿನಲ್ಲಿ ಪ್ರಕಟವಾಗಿವೆ. ಬರವಣಿಗೆಯ ಜೊತೆಯಲ್ಲಿಯೇ  ಸಾಕ್ಷ್ಯ ಚಿತ್ರ ನಿರ್ಮಾಣ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ .




ತುಷಾರದಲ್ಲಿ ಪ್ರಕಟಿತವಾದ ಕತೆ