Friday, December 24, 2010

ನಾಸಿಕ ನಾಪತ್ತೆ ಪುರಾಣ೦

ಶಿವಮೊಗ್ಗ ಜಿಲ್ಲೆಯ ನಗರ ತಾಲ್ಲೂಕಿನ ಎಸ್. ನಾವಡರ ಏಕೈಕ ಪುತ್ರನು , ಕುಲೋದ್ಧಾರಕನು , ಸಕಲ ಕಲಾವಲ್ಲಭನು , ಸರ್ವಗುಣ ಪಾರಂಗತನೂ , ಆದ ವರ್ತಮಾನದಲ್ಲಿ ಬೆಂಗಳೂರಿನಲ್ಲಿರುವ  ಎಸ್. ಮೊಸರುದ್ದಿನ ನಾವಡನಿಗೆ , ಮೊನ್ನೆಯಿಂದ ತನ್ನ ಮೂಗು ಕಳೆದು ಹೋಗಿದೆಯೆಂಬ ವಿಚಿತ್ರ ಗುಮಾನಿ ಶಂಕೆಯಾಗಿ ಆಂಕೆಯನ್ನು ದಾಟಿ ಮೊಸರುದ್ದಿನನ ಸರ್ವ ದಮನ ಯತ್ನವನ್ನೂ ದಾಟಿ , ಅವನ ಮನಸ್ಸಿನಲ್ಲಿ ನಾಗಲೋಟದಿಂದ ಸರಸ್ರನೇ ಸುತ್ತುತ್ತಾ , ಹಬ್ಬುತ್ತಾ , ಚಕ್ರಾಕಾರವಾಗಿ ತಿರುಗುತ್ತಾ ಆರ್ಭಟಿಸುತ್ತಿತ್ತು.

 

ಎಸ್. ಮೊಸರುದ್ದಿನ ನಾವಡನಿಗೆ ಹೀಗೊಂದು ಆಘಾತಕಾರಿ ಸಂಶಯ ಬಂದಿದ್ದು ಕೆಲವು ದಿನಗಳ ಹಿಂದೆ ನಡೆದ ಘಟನೆಯ ನಂತರ.
ಅವತ್ತು  ಕೆ.ಆರ್. ಮಾರ್ಕೆಟಿನಿಂದ , ಉತ್ತರಹಳ್ಳಿ ಕಡೆಗೆ ಹೋಗುವ ಬಸ್ಸನ್ನು ಕಷ್ಟಪಟ್ಟು ನುಗ್ಗಿ , ಅದಮ್ಯ ಪ್ರಯಾಣಿಕರ ಒತ್ತಡಕ್ಕೂ , ಪ್ರತಿರೋಧಕ್ಕು ಒಂದಿನೀತು ಜಗ್ಗದೆ , ಎದುರಿಗೆ ಸಿಕ್ಕ ಸಂದಿಗಳಲೆಲ್ಲಾ ತೂರಿ , ಭೇದಿಸಿ , ಛೇದಿಸಿ ಬಸ್ಸಿನೊಳಗೆ ವೀರ ಅಭಿಮನ್ಯುವಿನ ಹಾಗೆ ನುಗ್ಗಿ , ನಿಲ್ಲಲು ದುರ್ಲಭವಾದ ದುರ್ಧರ ಕ್ಷಣದಲ್ಲಿ ,ಬಸ್ಸಿನ ಟಾಪ್ ಗೆ ಹೇಗೋ ನೇತಾಡುತ್ತಾ ತ್ರಿಶಂಕು ಸ್ಥಿತಿಯಲ್ಲಿ ಇರುವಾಗಲೇ ಅಭಿನವ ಅಭಿಮನ್ಯು ಮೊಸರುದ್ದಿನನ ಮೂಗಿನ ಆಳ ಗರ್ಭದಿಂದ , ಸಿರ್ರನೇ ಸಿಂಬಳದ ತುಣುಕೊಂದು , ಒಳಗಿನ ಯಮಯಾತನೆಯನ್ನು ಸಹಿಸಲಾಗದೆ ಆತ್ಮಹತ್ಯೆಯ ಕೊನೆಯ ಪ್ರಯತ್ನವಾಗಿ ಮೂಗಿನಿಂದ ಹೊರಗೆ ಧುಮುಕಿಯೇ ಬಿಟ್ಟಿತ್ತು.ಹೀಗೆ ಮೊಸರುದ್ದಿನನ ಮೂಗಿನ ವಿಸರ್ಜನೆ , ಪರಮ ರಷ್ ನ ಆ ಬಸ್ಸಿನಲ್ಲಿ ' ಹಿರಿಯ ನಾಗರಿಕರಿಗೆ' ಎಂದು ಬರೆದಿದ್ದ ಸೀಟಿನಲ್ಲಿ ವಿರಾಜಮಾನರಗಿದ್ದ 'ಕಿರಿಯ ನಾಗರಿಕರ' ಕುತ್ತಿಗೆಯ ಮೇಲೆ ಬಿದ್ದು , ರಭಸವಾಗಿ ಭುಜದ ಬಳಿ ಹರಿದು , ಬಗಲಿನತ್ತ ಜಿಗಿದು , , ಬಗಲಿನಲ್ಲಿ ತ್ರಿಶಂಕು ಸ್ಥಿತಿಯಲ್ಲಿ ಜೋತಾಡುತಿದ್ದ ಬೆವರಿನ ಹನಿಗಳನ್ನು ಕಂಡು ಖುಷಿಯಾಗಿ ಕಕ್ಕುಲಾತಿಯಿಂದ ಸ್ಪರ್ಶಿಸಿದ್ದು ಕ್ಷಣ ಮಾತ್ರದಲ್ಲಿ ಜರುಗಿ ಬಿಟ್ಟಿತ್ತು...! ಮೊದಲೇ ಬಸ್ಸಿನ ರಷ್ ನಿಂದಲೂ , ಮೈಮೇಲೆ ಬೀಳುವ ಪ್ರಯಾಣಿಕರಿಂದಲೂ , ಕಂಗಾಲಾಗಿ ಕುಳಿತಿದ್ದ ಕಿರಿಯ ನಾಗರಿಕರಿಗೆ ತನ್ನೊಳಗೆ ತಟ್ಟನೆ ಪುಳಕ ಹುಟ್ಟಿಸುತ್ತಾ ಹರಿದಾಡುತ್ತಿರುವದು ಏನೆಂದು , ಕುತ್ತಿಗೆಯಾದಿಯಾಗಿ ಕೈ ಆಡಿಸಲಾಗಿ , ಸಿಂಬಳದ  ತುಣುಕು ಅವರ ಕೈ ಬೆರಳಿಗೂ , ಕುತ್ತಿಗೇಗೂ ನಡುವೆ ದಾರದಂತಹ ಸೇತುವೆಯೊಂದನ್ನು ನಿರ್ಮಿಸಿತ್ತು,. ಕೈ ನೋಡಿ ಒಮ್ಮೆ ಪರೀಕ್ಷಿಸಿದ ನಂತರ ಅದು ಸಿಂಬಳ ಎಂದು ತಿಳಿದ ಕಿರಿಯ ನಾಗರಿಕರು ಹೇಸಿಗೆಯಿಂದ ಅದುರಿ ಹೋಗಿಸಿಂಬಳದ ಜನ್ಮದಾತ ಯಾರೆಂದು  ತಲೆಯೆತ್ತಿ ನೋಡಲಾಗಿ ಬಸ್ಸಿನ ಟಾಪ್ಗೆ ಜೋತಾಡುತ್ತಿದ್ದ , ಮೊಸರುದ್ದಿನನು , ಅವನ ಮುಖವೂ , ಮುಖದ ಮೇಲೆ ಮೂಗು , ಆ ಮೂಗಿನ ಪಾತಾಳಗರ್ಭದ ಮಹಾದ್ವಾರದಲ್ಲಿ ಹುಲುಸಾಗಿ ತೆವಳುತ್ತಿದ್ದ ಲೋಳೆಯು ಕಂಡು , ಸಿರ್ರನೇ ಮೈ ಮೇಲೆ ಬಿದ್ದ ಸಿಂಬಳವನ್ನೂ , ಅದಕ್ಕೆ ಕಾರಣಿ ಭೂತರಾದ ಇವನನ್ನು ಕಂಡು , ಕಿರಿಯ ನಾಗರಿಕರಿಗೆ ಸರ್ರನೇ ಕೋಪ ಏರಿ ಕೇಳಿಯೇ ಬಿಟ್ಟರು.
"ರೀ , ಏನ್ರೀ?"
ಆದರೆ ಇದ್ಯಾವುದರ ಅರಿವಿಲ್ಲದ ಬಡಪಾಯಿ ಮೊಸರುದ್ದಿನ ತನ್ನ ಪಾಡಿಗೆ ತಾನು ಬಸ್ಸಿನ ಟಾಪ್ ಗೆ ಜೊತಾಡುತ್ತ , ಸೊರ್‌ರಕ ಬರ್ರೂಕ್ ಎಂದೆಲ್ಲ ಶಬ್ದ ಮಾಡುತ್ತಾ ಮೂಗನ್ನು ಸೇದುತ್ತಾ , ಬಸ್ಸಿನಲ್ಲಿ ಜನಸಂದಣಿಯಿಂದಾದ ಒತ್ತುವಿಕೆಯ ಸುಖವನ್ನು , ಕಷ್ಟವನ್ನು ಅನುಭವಿಸುತ್ತಾ ನೇತಾಡುತಿದ್ದ.

"ರೀ ನಿಮಗೆ ಹೇಳಿದ್ದು  ಏನ್ರೀ?"  ಕಿರಿಯ ನಾಗರಿಕರು ಮತ್ತೆ ಗುಡುಗಿದರು.
"ಯಾರು ನಾನಾ"? ಮೊಸರುದ್ದಿನ
"ಮತ್ತೆ ಇನ್ಯಾರಿಗೆ? ಎನ್ ಮರ್ಯಾದೆ ಗಿರ್ಯಾದೆ ಇಲ್ಲವೆನ್ರಿ ನಿಮಗೆ?"
ಹೀಗೆ ಯಾವನೋ ಒಬ್ಬ ಇದ್ದಕಿದ್ದಂತೆ ಮರ್ಯಾದೆ ಬಗ್ಗೆ ಕೇಳಲಾಗಿ ಮೊಸರುದ್ದಿನನ ಏನು ತೋಚದೆ ಕಕ್ಕಾಬಿಕ್ಕಿಯಾದ. ಅವನ ಮೆದುಳು ಅನಿರೀಕ್ಷಿತ ಸರ್ಚ್ ಗೆ ತತ್ತರಿಸಿತು. ಉತ್ತರ ಏನು ಕೊಡಬೇಕೆಂದು ಹುಡುಕಾಡಿದ ಮೆದುಳಿಗೆ ಕೆಳಕಂಡ ಉತ್ತರಗಳು ಹೊಳೆದವು.

೧. ಇವನಿಗೆ ಮರ್ಯಾದೆ ಅನ್ನೋದು ಇಲ್ಲ.. - ಅಪ್ಪ ಮೊಸರುದ್ದಿನ ಪಿ.ಯು.ಸಿ. ಫೈಲ್ ಆದಾಗ
೨. ಮಾನ ಮರ್ಯಾದೆ ಅನ್ನೋದು ಸ್ವಲ್ಪವಾದ್ರೂ ಇದ್ದಾರೆ ತಾನೇ - ಅಮ್ಮ , ಮೊಸರುದ್ದಿನ ಕದ್ದು ಬೀದಿ ಸೇದಿ ಸಿಕ್ಕಿಬಿದ್ದಾಗ.
೩. ಥೂ ಚೂರು ಮರ್ಯಾದೆ ಇಲ್ಲ - ಅಕ್ಕ , ನಗರದಲ್ಲಿ ಹುಡುಗಿಯರನ್ನ ಚುಡಾಯಿಸಿ ಒದೆ ತಿಂದಾಗ
೪. ಬಡ್ಡಿಮಗ ಮೂರುಕಾಸಿನ ಮರ್ಯಾದೆ ಇಲ್ಲ - ಗೆಳೆಯನೇಕರು , ಕ್ರಿಕೇಟಿನಲ್ಲಿ ಮೋಸ ಮಾಡಿದಾಗ
೫. ಕತ್ತೆ ಭಡವ ಮರ್ಯಾದೆ ಅನ್ನೋದು ಎಲ್ಲಿ ಇಟ್ತಿದಿಯ? ಗುರುಗಳು , ಪಕ್ಕದ ಕ್ಲಾಸ್ಸ್‌ನೆ ಶಾಂತಾಗೆ ಲೆಟರ್ ಬರೆದು ಸಿಕ್ಕಿ ಬಿದ್ದಾಗ

ಹೀಗೆ ಎಲ್ಲ ಕಡೆಯಿಂದಲೂ ಇಲ್ಲ , ಕಳೆದಿದೆ , ಎಂಬಿತ್ಯಾದಿ ಋಣಾತ್ಮಕ ಉತ್ತರೆಗಳೆ ಬಂದು , ಕೊನೆಗೆ ಮರ್ಯಾದೆ ಎಂಬುದು ನಿಜವಾಗಿಯೂ  ತನಗೆ ಇಲ್ಲವೇ ಅಥವಾ ಕಳೆದುಹೋಗಿದೆಯೇ? ಅಥವಾ ಯಾರಿಗೂ ಅದು ಇಲ್ಲವೇ? ಅಥವಾ ಅದು ಅಂಗಡಿಯಲ್ಲೇ ಸಿಗಬಹುದೇ ? ಸಿಕ್ಕರೆ ಬೆಂಗಳೂರಿನಲ್ಲಿ ಸೋವಿಗೆ ಸಿಗುತ್ತೋ ಅಥವಾ ಶಿವಮೊಗದಲ್ಲೇ ? ಬಹುಶ ಶಿವಮೊಗದಲ್ಲಿ ಕಡಿಮೆ ಇರಬಹುದು. ಒಮ್ಮೆ ಪೀರ್ ಸಾಬೀಯನ್ನ ಕೇಳಿ ನೋಡುವ. ಸಿಕ್ಕರೆ ತಂದು ಬಿಡುವ. ಆದರೆ ಹೇಳಲಿಕ್ಕೆ ಆಗುವದಿಲ್ಲ ಈ ಪೀರ್ ಸಾಬೀ ಹಲ್ಕ ಅಂದ್ರೆ ಹಲ್ಕ , ಸಾಬರ ಪೈಕಿ ಬೊಳಿಮಗ ಡೂಪ್ಲಿಕೇಟ್ ಕೊಟ್ರೆ? ಯಾರನ್ನು ನಂಬಳಿಕ್ಕೆ ಆಗುವದಿಲ್ಲ. ಯಾವುದಕ್ಕೂ ಒಮ್ಮೆ ಎಸ್‌ಬಿಟಿಯನ್ನು  ಕೇಳಿ ಬಿಡುವ. ಅವನು ಇವಕ್ಕೆಲ್ಲ ಸರಿಯಾಗಿ ಹೇಳ್ತಾನೇ. ಆದರೂ ಅವನು ಕಂತ್ರಿಯೆ , ಮೊನ್ನೆ ಹಾಗೆ ಮಾಡಿಲ್ಲವ? ಇವಳ ಬರ್ಥ್ ಡೇ ಗೆ ಏನು ಗಿಫ್ಟು ಕೊಡುವ ಎಂದು ಕೇಳಿದಕ್ಕೆ ಹಾರ್ಟ್ಗೆ ಹತ್ತಿರ ಇರುವ ಗಿಫ್ಟು ಕೊಡು ಅಂದ. ಅದು ಏನ? ಅಂತ ಕೇಳಿದಕ್ಕೆ "ಹುಡುಗಿಯರಿಗೆ ಹಾರ್ಟ್ಗೆ ಹತ್ತಿರ ಇರುವದು ಅಂದ್ರೆ ಬ್ರಾ ಮಾತ್ರ ನೋಡು ಅಂತ ಹೇಳಿ , ನನಗು ಹೌದು ಅನ್ನಿಸಿ ಕೊನೆಗೆ ಸೈಜ್ ಯಾವುದು ಎಂದು ಗೊತ್ತಾಗದೇ ಯಾವುದೋ ಸೈಜ್ ತಂದು ಅವಳಿಗೆ ಕೊಟ್ಟು , ಕೊನೆಗೆ ಅವಳು "ಮರ್ಯಾದೆಇಲ್ಲವೇನೋ " ಎಂದು ತುಪಕ್ ಎಂದು ಉಗಿದಿದ್ದಳು.  ಈ ಎಸ್ಬಿಟಿ ಕೇಳಿದರೆ ಅವಳು ಬೈದಿದ್ದು ಸೈಜ್ ಸರಿಯಿಲ್ಲವೆಂದು , ಇಲ್ಲವಾದರೆ ಇಂತಹ ನವನವೀನ ಗಿಫ್ಟ್ಗೆ ಬಯ್ಯುವ ಸಾಧ್ಯತೆ ಇಲ್ಲವೆಂದು ಖಂಡ ತುಂಡ ವಾಗಿ ವಾದಿಸಿದ್ದ. ಥತ್ ಅದೆಲ್ಲ ಸರಿ ಆದರೆ ಇವನಿಗೆ ಮರ್ಯಾದೆ ಬಗ್ಗೆ ಏನು ಹೇಳುವದು?
ಏನಾದರಾಗಲಿ ಮೊದಲು ಇವನಿಗೆ ಇದೆಯೋ ಇಲ್ಲವೋ ಕೇಳಿಯೇ ಬಿಡುವ.
"ನಿಮಗೆ ಇದೆಯೆನರೀ?" ಮೊಸರುದ್ದಿನ
"ಇದ್ದಿದಕ್ಕೆ ಹೇಳಿದ್ದು" ಅವನು

ಈಗ ನಿಜವಾಗಿಯೂ ಮೊಸರುದ್ದಿನನಿಗೆ  ಪೀಕಲಾಟಕ್ಕೆ ಶುರುವಾಯಿತು.
ಇವನೇನು ತನ್ನ ಹತ್ತಿರ ಮರ್ಯಾದೆ ಇದೆ ಎಂದು ನನಗು ಇದೆ ಎಂದು ಕೇಳಿದನೆ? ಅಥವಾ ಇವನಿಗೂ ನನ್ನ ಹಾಗೆ ಸಂಶಯ ಇದೆಯೇ? ಇದ್ದಾರೆ ಹೀಗೆಲ್ಲ ಕೇಳಿಬಿಡುವದ? ಅಥವಾ ತನಗೆ ನಿಜವಾಗಿಯೂ ಮರ್ಯಾದೆ ಇಲ್ಲವೇನೋ? ಇಲ್ಲದಿದ್ದರೆ ಸಿಕ್ಕವರೆಲ್ಲ ಹೀಗೇಕೆ ಕೇಳುತಿದ್ದರು? ಅದರಲ್ಲೂ ಗುರುತು ಪರಿಚಯ ಇಲ್ಲದ ಇವನು ಕೇಳಿದ ಎಂದರೆ .. ಬಹುಶ ನನ್ನ ಮುಖದಲ್ಲಿ ಮರ್ಯಾದೆ ಇಲ್ಲದವರಿಗೆ ಇರುವ ಯಾವುದೋ ಗುರುತು ಮಾಯವಾಗಿದೆಯೇನೋ?ಹಾ.! ಅದೇ ಇರಬೇಕು.. ಇವ್ನು ತನಗೆ ಇದೆಯೆಂದನಲ್ಲ ಇವನ ಮುಖ ಒಮ್ಮೆ ನೋಡಿಯೇ ಬಿಡುವ.
ಮೊಸರುದ್ದಿನ ಕಿರಿಯ ನಾಗರಿಕನ ಮುಖದಲ್ಲಿ ಅಂತಹದ್ದೇನು ಕಾಣಿಸಲಿಲ್ಲ. ಮತ್ತೆ ಗಲಿಬಿಲಿ ಹೆಚ್ಚಿತು. ಈ ಜನಸಂದಣಿಯ ಬಸ್ಸಿನಲ್ಲಿ ತನ್ನನುಇಂತಹ ಸಂದಿಗ್ದ ಸ್ಥಿತಿಗೆ ನೂಕಿದವನ ಮೇಲೆ ಅಪಾರ ರೋಷ ಉಕ್ಕಿ ಮೊಸರುದ್ದಿನ ಹೇಳಿದ :
"ಇದ್ದಾರೆ ಇರಲಿ, ನಾನೇನು ಮಾಡಬೇಕು?"
"ರೀ ಸ್ವಾಮಿ ನೀವೇನೂ ಮಾಡೋದು ಬೇಡ. ಮೊದ್ಲು ನಿಮ್ಮ ದರಿದ್ರ ಕೊಳಕು ಮೂಗನು ಒರೆಸಿಕೊಳ್ಳಿ , ಸುರಿತ ಇರೋ ಮೂಗು ಇಟ್ಕೊಂಡು ಬಾಯಿಗೆ ಬಂದ ಹಾಗೆ ಮಾತನಾಡ್ತಾರೆ......... "
ಹೀಗೆ ಆತ ಕೋಯ್ಯ್- ಪಯ್ಯ ಎಂದು ಬಯ್ಯತೊಡಗಿದ.

ಈಗ ಮೊಸರುದ್ದಿನನಿಗೆ ನಡೆದು ಏನೆಂದು ಅರಿವಾಗತೊಡಗಿತು. ಆದರೆ ಎರಡು ಕೈಗಳಿಂದ  ಬಸ್‌ನ ತೋಪ್‌ಗೆ ಜೊಟಾಡುತ್ತಾ , ಕಟ್ಟಿದ ಮೂಗಿನಿಂದ  ಉಸಿರಾದಲಾಗದೆ ಬಾಯಿಯಿಂದ ಉಸಿರಾಡುತ್ತಾ , ಪರದಾಟ ಪಡುವಾಗ , ಎಲ್ಲೋ ಇರುವ ತನ್ನ ಜೇಬಿನಿಂದ ಕರವಸ್ತ್ರವನ್ನು ತೆಗೆಯ ಬೆಕೆನ್ನುವದು ಮರ್ಯದೆಗಿಂತ ಭಯಂಕರ ವಿಷಯವಾಗಿ ತೋರಿತು.
ಸ್ವಲ್ಪ ಹೊತ್ತು ಹಾಗೆ  ಕಳೆಯಿತು. ನಂತರ ತಟ್ಟನೆ ಮೊಸರುದ್ದಿನನ ಮೂಗಿನಿಂದ ಹನಿಯೊಂದು ಆಳ ಪ್ರಪಾತಕ್ಕೆ ಧುಮುಕುವ ಬಿಂದುವಿನಂತೆ ಕೆಳಗೆ ಉರುಳುರುಳಿ ಬರ ತೊಡಗಿದಾಗ ಅದನ್ನು ದಾರಿ ಮಧ್ಯವೇ ತಡೆದು , ನಿರ್ದಯವಾಗಿ ಕೊಲ್ಲುವ ಸಂಚಿನಂತೆ ಅಸ್ತ್ರವನ್ನು ಹುಡುಕಲಾಗಿ , ಮೊಸರುದ್ದಿನ ಒಂದು ಕೈಯನ್ನು ಕಷ್ಟಪಟ್ಟು ತನ್ನ ಜೇಬಿಗೆ ತೂರಿಸುವ ಅವಸರದಲ್ಲಿ ಪಕ್ಕದವರ ಜೇಬಿಗೆ ತೂರಿಸಿದನು. ಅದೇ ಕ್ಷಣಕ್ಕೆ ಡ್ರೈವರ್ ಒತ್ತಿದ ಬ್ರೇಕ್ ರಭಸಕ್ಕೆ ಸಮಸ್ತ ಬಸ್ಸು ಕಂಪಿಸಿ , ಎಲ್ಲರೂ ಒಲಾಡಿ , ಪರಿಣಾಮವಾಗಿ ಮೊಸರುದ್ದಿನನ ಮೂಗಿನಿಂದ ಉರುಳುತಿದ್ದ ಹನಿಯು ಮತ್ತೂ  ರಭಸ ಪಡೆದು , ಗತಿಯನ್ನು ಹೆಚ್ಚಿಸಿಕೊಂಡು , ಮತ್ತೊಂದು ಬಾರಿ ಕಿರಿಯ ಪ್ರಯಾಣಿಕರ ಕುತ್ತಿಗೆ ಮೇಲೆ ಚುಂಬನಾಭಿಷೇಕ ಮಾಡಿತು.

ಮತ್ತೊಮ್ಮೆ ತನಗೆ ಒದಗಿದ ಗತಿಯಿಂದ ಪಿತ್ತ ನೆತ್ತಿಗೇರಿ ಕಿರಿಯ ನಾಗರಿಕರು ಥಟ್ಟನೆ ಎದ್ದು ಮೊಸರುದ್ದಿನನ ಕೆನ್ನೆಗೆ ಬಾರಿಸುವದಕ್ಕೂ , ಪಕ್ಕದಲ್ಲೇ ಇದ್ದ ಮತ್ತೊಬ್ಬರು ಯಾವನೋ ಅವನ ಜೇಬಿಗೆ ಕೈ ಹಾಕಿದವನು ಎಂದು ಇನ್ಯಾರಿಗೋ ಬಾರಿಸಿದರು. ಹೀಗೆ ಅವರು ಇವರಿಗೂ , ಇವರು ಅವರಿಗೂ , ಇನ್ನೊಬ್ಬರು ಮತ್ತೊಬ್ಬರಿಗೂ ಎಂದು ಗಲಿಬಿಲಿಗೊಂದು ಸಿಕ್ಕಸಿಕ್ಕವರಣೆಲ್ಲ ಬೈದಾಡಿ , ಬೆಂಗಳೂರಿನ ಅಸಾಧ್ಯ ಟ್ರಾಫಿಕಿನ ಮೇಲಿನ ಕೋಪವನ್ನು , ಒಳಗೆ ಬಸ್ಸನಲ್ಲಿ ಏರುತಿದ್ದ ಸೆಕೆಯನ್ನು, ಸೀಟ್ ಸಿಗದ ನೋವನ್ನು , ಹೀಗೆ ಹಳೆಯದು ಹೊಸದು ಎಲ್ಲವನ್ನು ಕೂಡಿಸಿ ಪ್ರತಿಯೊಬ್ಬರೂ ಇನ್ನೊಬ್ಬರನ್ನು ಬಾಯಿಗೆ ಬಂದಂತೆ ಬಯ್ಯತೊಡಗಿದರು. ಕಿರಿಯ ಪ್ರಯಾಣಿಕರು ಹಾಗೂ ಇನ್ನೂ ಕೆಲವರು ಮೊಸರುದ್ದಿನನ ದರಿದ್ರ ಕೊಳಕು ಮೂಗು ಇಷ್ಟಕೆಲ್ಲ ಕಾರಣವೆಂದು ಮೂಗಿನ ಕುಲ ಗೋತ್ರ  ಅದರ ಒಡೆಯ ಮೊಸರುದ್ದಿನ ಎಲ್ಲರನ್ನೂ ಸೇರಿಸಿ ಅಶ್ಲೀಲವಾಗಿ ಬಯುತ್ತಿರುವಾಗಲೆ ಬಸ್ಸು ಬಸವನಗುಡಿ ಸ್ಟಾಪಿನಲ್ಲಿ , ಮೊಸರುದ್ದಿನನ ನಿರ್ಗಮನಕ್ಕೆ ಬಾಗಿಲಿ ತೆಗೆದು ದಾರಿ ಮಾಡಿ ಕೊಟ್ಟಿತ್ತು.

ಈ ಘಟನೆ ಸಂಭವಿಸಿದ ನಂತರ ಮೊಸರುದ್ದಿನನಿಗೆ ತನ್ನ ಮೂಗಿನ ಮೇಲೆ ಬಂದ ಕೋಪವೂ ಅಷ್ಟಿಷ್ಟಲ್ಲ. ಮೊಸರುದ್ದಿನ ತನ್ನ ಸಕಲ ಭಾಷಾ ಪ್ರವಿಣ್ಯ ಬಳಸಿ ಮೂಗಿಗೆ ಹಿಡಿ ಶಾಪ ಹಾಕಿದನು.

**************                    ****************                *****************                      ****************8
ಯಾವ ಕ್ಷಣದಲ್ಲಿ ತನ್ನ ಪರಮ ಪೂಜ್ಯರ  ವೀರ್ಯಾಣು , ಮಾತೊಶ್ರೀಯವರ ಅಂಡಾಣುವಿನೊಂದಿಗೆ ಸಮ್ಮಿಲನ ಗೊಂಡಿತೋ , ಅವಟ್ತು ಏನಾದ್ರೂ ಪರಮ ಪೂಜ್ಯರೂ ಅಥವಾ ಮತೊಶ್ರಿಯವರು ಯಾವ ವಾಸನೆಯಲ್ಲಿ ಇದ್ದರೋ , ಒಟ್ಟಿನಲ್ಲಿ ತನಗೆ ಇಂತಹ ದರಿದ್ರ ಮೂಗು ಪ್ರಾಪ್ಟ್ ಆಯಿತೆಂದು ಪರಿಪರಿಯಾಗಿ ಹಲವರಿದು, ಕೊನೆಗೆ ತನಗೆ ಜನ್ಮ ಕೊಟ್ಟವರನ್ನೂ , ಕೊಡಲು ಕಾರಣವಾದ ಕ್ರಿಯೆಯನ್ನೂ ಮನಸ್ಸಿನಲ್ಲೇ ಉಗಿದನು.
ಮೊಸರುದ್ದಿನನಿಗೆ ತನ್ನ ಮೂಗಿನ ಮೇಲೆ ರೇಜಿಗೆ ಹುಟ್ಟಲು ಹಲವಾರು ಕಾರಣಗಳಿದ್ದವು. ಮೊದಮೊದಲಾದರೆ ಹೊತ್ತು ಹೋಗದ ಗಳಿಗೆಗಳಲ್ಲಿ ಮೊಸರುದ್ದಿನ ತನ್ನ ಬಲಗೈ ಹೆಬ್ಬರಳನ್ನು ಮೂಗಿನ ಅಂತಪುರದಲ್ಲಿ ತೂರಿಸಿ , ತೋರು ಬೆರಳನ್ನು ಮೂಗಿನ ಹೊರ ಮೈಗೆ ಆನಿಸಿ , ಲಯಬದ್ದವಾಗಿ ಹೆಬ್ಬೆರಳನ್ನು ಆಡಿಸಿ , ರಸ್ತೆ ಕೆಲ್ಸದ ಬುಲ್ಡೊಜರಗಳು ಮರಗಳನ್ನು ಬುಡ ಸಮೇತ ಕೀಳುವಂತೆ ತಾನು ಮೂಗಿನ ಮೂಗಿನ ಗೋಡೆಗಳ ಮೇಲೆ ಹುಲುಸಾಗಿ ಬೆಳೆದಿದ್ದ ಸಸ್ಯವರ್ಗಗಳ ಮೃದುತ್ವಕ್ಕೆ ಸುಖಪಡುತ್ತಾ , ಅಲ್ಲಿದ್ದ ಖನಿಜಗಳನ್ನು ಬೇರು ಸಮೇತ ಕಿಳುತಿದ್ದ.

ನಂತರ ಇದೆ ಕ್ರಿಯೆಯನ್ನ ಮತ್ತೆ ಪುನರಾವರ್ತಿಸಿ ಅಳಿದುಳಿದ ಶೇಷ ಅದಿರುಗಳಿಗೆ ಒಂದು ಗತಿ ಕಾಣಿಸುತಿದ್ದ. ಹೀಗೆ ಹೆಬ್ಬೆರೆಲಿನಲ್ಲಿ ಶೇಖರವಾದ ಖನಿಜಯುಕ್ತ ತ್ಯಾಜ್ಯವನ್ನು ಎಡಗೈ ತೋರುಬೆರಳಿನಿಂದ ನಾಜೂಕಾಗಿ ತೆಗೆದು ಅದನ್ನು ಎಡಗೈ ಹೆಬ್ಬೆರಳಿಗೆ ವರ್ಗಾಯಿಸಿ , ಮತ್ತೆ ತೋರು ಬ್ಬೆರಳಿನ ಸಹಾಯದಿಂದ ತಿಕ್ಕಿ ತಿಕ್ಕಿ ಅದಕ್ಕೆ ಉಂಡೆಯ ರೂಪ ಕೊಡುತಿದ್ದ. ಆಮೇಲೆ ಅಕ್ಕಪಕ್ಕ ನೋಡಿ ಯಾರು ಇಲ್ಲ ಎಂದು ಖಚಿತ ಪಡಿಸಿಕೊಂಡು ಸರಕ್ಕನೆ ಉಂಡೆಯನ್ನು ಕುಳಿತ ಜಾಗದಲ್ಲಿ ಎಲ್ಲಿಯಾದರೂ ಅಂಟಿಸುತಿದ್ದ.
ಇಂತಹ ಮೂಗು ಮೊಸರುದ್ದಿನನನ್ನು ಪ್ರಾಣಪಾಯದಿಂದ ಕಾಪಾದಿದ್ದು ಇದೆ. ಕಾಲೇಜು ಸೇರಿದ ಮೊದಲ ದಿನಗಳಲ್ಲಿ ಗೆಳೆಯೇರ ಜೊತೆ ಚಾಕೊಲೇಟಿನಲ್ಲಿ ಸ್ವಲ್ಪ ಭಂಗಿ ಸೇರಿಸಿ ತಿಂದು , ಕೊನೆಗೆ ಅದು ನೆತ್ತಿಗೆ ಏರಿ , ಆಸ್ಪತ್ರೆ ಸೇರಿದಾಗ , ಬಾಯಿಯ ಮೂಲಕ ಏನು ಇಳಿಯದೇ ಮೂಗಿನ ಮೂಲಕವೇ ಹೊಟ್ಟೆಗೆ ದ್ರವಾಹಾರ ಹಾಕಲಾಗಿತ್ತು.  ಅಲ್ಲದೇ ಮೊಸರುದ್ದಿನನ ಮೂಗು ಇನ್ನೊಂದು ವಿಧದಲ್ಲಿ ಸಹಾಯ ಮಾಡುತಿತ್ತು.  ಮೂಗು ತನ್ನ ಘ್ರಾಣ ಶಕ್ತಿಯಿಂದಲೇ  ಬರುತ್ತಿರುವದು ಯಾರು ಎಂದು ವ್ಯಕ್ತಿ ಪರಿಚಯ ಕೊಡುತಿತ್ತು.
ಹೀಗೆ ಹತ್ತು ಹಲವು ರೀತಿಯಿಂದ ಆತ್ಮೀಯವಾಗಿದ್ದ ಮೂಗು ಈಗ್ಗೆ ಕೆಲವು ತಿಂಗಳಿನಿಂದ ಭಯಾನಕ ಕಿರಿಕಿರಿ ತಂದಿತ್ತು. ಸದಾ ರೋಗ ಗ್ರಸ್ತ ವಾಗಿಇರುತಿದ್ದ ಮೂಗಿನಲ್ಲಿ ಮೊದಲಿನಂತೆ ಘನ ರೂಪದ  ಖನಿಜಾಗಳು ಬೆಳೆಯುತ್ತಿರಲಿಲ್ಲ. ಹೀಗಾಗಿ ಏಕಾಂತದಲ್ಲಿ  ಉಂಡೆ ಕಟ್ಟಲಾಗದೆ , ಕಟ್ಟಿ ಮೆತ್ತಲಾಗದೆ ಹಾಸ್ಟೆಲಿನ ಗೋಡೆಗಳ ಸ್ವಚ್ಛ ಜಾಗಗಳನ್ನು ನೋಡಿದಾಗಲೆಲ್ಲ ಮೊಸರುದ್ದಿನ ವಿಚಿತ್ರ ಅಶಾಂತಿಯಿಂದ ಚಡಪಡಿಸುತಿದ್ದ. ಹೀಗೆ ಒಳಗೊಳಗೆ ತಿದಿ ಒತ್ತಿ , ಕಾವು ಏರಿ ಹರಡುತಿದ್ದ ಅಶಾಂತಿಯಿಂದ ತತ್ತರಿಸುತ್ತಾ ಇರುವಾಗಲೇ , ಮೊಸರುದ್ದಿನನ ಘ್ರಾಣ ಶಕ್ತಿ ಮಾಯವಾಗಿದ್ದು..! ಹೀಗಾಗಿ ವಾಸನೆಯಿಂದ ತೃಪ್ತಿ ಅನುಭವಿಸುತಿದ್ದ ಮೊಸರುದ್ದಿನನ 'ಆ'' ಹಸಿವು , ಹಸಿವಾಗಿಯೇ ಸುತ್ತ ತೊಡಗಿತು. ಹೀಗೆ ದೈಹಿಕವಾಗಿ , ಮಾನಸಿಕವಾಗಿ ಹಾಗೂ ಲೈಂಗಿಕವಾಗಿ ಒಳಗೊಳಗೆ ಅಪಾರ ಒತ್ತಡವನ್ನು , ಯಾತನೆಯನ್ನೂ ಸಹಿಸಲೇಬೇಕಾದ ಸ್ಥಿತಿಯೊಂದು ನಿರ್ಮಾಣವಾಯಿತು.

ಇತ್ತೀಚಿಗೆ ಮೂಗು ಉಸಿರಾಡುವದನ್ನು ನಿಲ್ಲಿಸಿದ ಮೇಲೆ , ತಿನ್ನುವದಕ್ಕೂ , ಕುಡಿಯುವಾದಕ್ಕೂ , ಉಸಿರಾಡುವದಕ್ಕೂ , ಮಾತನಾಡಲಿಕ್ಕು , ತೆರೆಯುವದಿಕ್ಕು , ಮುಕ್ಕಳಿಸುವದಿಕ್ಕು , ಮುಚ್ಚುವದಿಕ್ಕು , ಬೈಯುವದಿಕ್ಕು , ಆಕಳಿಸುವದಿಕ್ಕು , ಹಾಡಲಿಕ್ಕೂ , ಜೊಲ್ಲು ಸುರಿಸುವದಿಕ್ಕು  ಹೀಗೆ ಹತ್ತಾರು ಕೆಲಸಗಳಿಗೆ ಬಾಯಿಯನ್ನು ಉಪಯೋಗಿಸಿದ ಪರಿಣಾಮವಾಗಿ ಬಾಯಿಯಲ್ಲಿ ಹುಣ್ಣುಗಳು ಎದ್ದು ಯಮಯಾತನೆ  ಕೊಡತೊಡಗಿದವು.
ಈ ಸಮಯದಲ್ಲೇ ಬಸ್‌ನ ಘಟನೆಯೂ ನಡೆದು ಮೊಸರುದ್ದಿನನು " ಇಂತಹ ಲೊಫರ್ ಮೂಗು ಇದ್ದರೆಷ್ಟು ಬಿಟ್ಟರೆಷ್ಟು" ಎಂದು ಬಹಿರಂಗವಾಗಿಯೇ , ಮೂಗಿಗೆ ಕೇಳುವಂತೆ ಹಲವಾರು ಬಾರಿ ಕೂಗಾಡಿದ್ದನು.
***                ***                     ****                     ***                       ***               ***                 ****             ****       ****
ಹಾಗೂ ಇತ್ತೀಚಿಗೆ ಮೂಗು ಕಳೆದುಹೋಗಿದೆಯೆಂಬ ವಿಚಿತ್ರ ಸಂಶಯ ಹೆಮ್ಮರವಾಗಿ ಮೊಸರುದ್ದಿನ ತಳಮಳಿಸಲಾರ೦ಭಿಸಿದ.

ವಿ. ಸೂ. : ಈ ಕತೆ ಸಂಪೂರ್ಣ ಕಾಲ್ಪನಿಕ. ಇಲ್ಲಿರುವ ಘಟನೆಗಳಾಗಲಿ , ಪಾತ್ರಗಳಾಗಲಿ  ಅಥವಾ ಇನ್ಯಾವುದಾಗಲಿ ಯಾರಿಗಾದರೂ ತಾಳೆಯಾದರೆ ಅದು ಕೇವಲ ಆಕಸ್ಮಿಕವೇ ಹೊರತು ಉದ್ದೇಶಪೂರ್ವಕ ಅಲ್ಲ.

2 comments:

  1. olle vidambane, :), madyadalli maryadi ya bagge baredaddu highly creative.

    ReplyDelete
  2. ha ha ha haa.... :D adbhuta varnane.... olle creativity.... innashtu vidambanaatmaka lekhanane bardre namgu khushi.. :P

    ReplyDelete