ಮೂಲ ಕತೆ : ಹರುಕಿ ಮುರಕಮಿ
ನಗರದ ಆನೆ ಲಾಯದಿಂದ ಆನೆ ಮಾಯವಾದಾಗ , ನಾನು ವಿಷಯವನ್ನು ದಿನಪತ್ರಿಕೆಯಲ್ಲಿ ಓದಿದೆ. ಎಂದಿನಂತೆ ಬೆಳಿಗ್ಗೆ ಆರು ಘಂಟೆ ಹದಿಮೂರು ನಿಮಿಷಕ್ಕೆ ಸರಿಯಾಗಿ ಅಲಾರಾಂ ನನ್ನನ್ನು ಎಬ್ಬಿಸಿತ್ತು. ಅಡುಗೆಮನೆಯಲ್ಲಿ ಒಂದು ಲೋಟ ಬಿಸ್ಸಿ ಕಾಫಿಯನ್ನು ಮತ್ತು ಬ್ರೆಡ್ ಟೋಸ್ಟ್ ಮಾಡಿಕೊಂಡು, ರೇಡಿಯೋವನ್ನು ಹಚ್ಚಿ , ಡೈನಿಂಗ್ ಟೇಬಲಿನ ಮೇಲೆ ದಿನಪತ್ರಿಕೆಯನ್ನು ಹರಡಿ , ನಿಧಾನವಾಗಿ ಕಾಫಿಯನ್ನು ಹೀರುತ್ತ, ಪೇಪರಿನಲ್ಲಿ ಕಣ್ಣಾಡಿಸತೊಡಗಿದೆ. ನಾನು ದಿನಪತ್ರಿಕೆಯನ್ನು ಮೊದಲ ಪುಟದಿಂದ ಕೊನೆಯವರೆಗೂ ಕ್ರಮಾನುಸಾರವಾಗಿ, ಕೂಲಂಕುಷವಾಗಿ ಓದುವ ಪ್ರಬೇಧಕ್ಕೆ ಸೇರಿದವನಾಗಿದ್ದರಿಂದ, ಆನೆ ಮಾಯವಾಗಿದೆ ಎನ್ನುವ ಸುದ್ದಿ ಕಣ್ಣಿಗೆ ಬೀಳಲು ಕೊಂಚ ಹೊತ್ತಾಯಿತು. ಮೊದಲ ಪುಟದಲ್ಲಿ ಅಂತರ್ ರಾಷ್ಟ್ರೀಯ ಸುದ್ದಿಗಳು, ಅಮೆರಿಕಾದ ಜೊತೆಗಿನ ವಾಣಿಜ್ಯ ತಿಕ್ಕಾಟಕ್ಕೆ ಸಂಬಂಧಪಟ್ಟ ವರದಿಗಳಿದ್ದವು. ನಂತರ ರಾಷ್ಟ್ರೀಯ ಸುದ್ದಿಗಳತ್ತ ಕಣ್ಣಾಡಿಸಿದೆ. ಅದಾದ ಮೇಲೆ ಆರ್ಥಿಕ ವಿಷಯಗಳು , ಸಂಪಾದಕೀಯ , ಸಂಪಾದಕರಿಗೆ ಪತ್ರ , ಪುಸ್ತಕ ವಿಮರ್ಶೆ , ಜಮೀನು ಇತ್ಯಾದಿಗಳಿಗೆ ಸಂಬಂಧಿಸಿದ ಜಾಹಿರಾತುಗಳು , ಕ್ರೀಡಾ ವಾರ್ತೆ ಮತ್ತು ಕೊನೆಯದಾಗಿ ಸ್ಥಳೀಯ ಸುದ್ದಿಗಳು.
ಆನೆಯ ಕಾಲಿಗೆ ಕಟ್ಟುತ್ತಿದ್ದ ಸರಪಳಿಯಿಂದ ಆನೆ ನುಣುಚಿಕೊಂಡು ಹೋಗಿದೆಯೇನೋ ಎಂಬಂತೆ ಸರಪಳಿ ನೆಲದ ಮೇಲೆ ಬಿದ್ದಿತ್ತು. ಅದೃಶ್ಯವಾಗಿದ್ದು ಆನೆಯೊಂದೇ ಅಲ್ಲ . ಆನೆಯನ್ನು ನೋಡಿಕೊಳ್ಳುತ್ತಿದ್ದ ಅದರ ಮಾವುತ ಸಹ ಅದೃಶ್ಯವಾಗಿದ್ದ. ಪತ್ರಿಕಾ ವರದಿಯ ಪ್ರಕಾರ ಆನೆಯನ್ನು ಕೊನೆಯ ಬಾರಿಗೆ ಮೇ ೧೭ ರ ಸಂಜೆ ಸುಮಾರು ಐದು ಅಥವಾ ಐದೂವರೆಯ ಸಮಯದಲ್ಲಿ ನೋಡಲಾಗಿತ್ತು. ಶಾಲೆಯಿಂದ ಕೆಲ ವಿದ್ಯಾರ್ಥಿಗಳು ಆನೆಯನ್ನು ನೋಡಿ ಅದರ ಚಿತ್ರವನ್ನು ರಚಿಸಲು ಬಂದಿದ್ದರು. ಆನೆಯನ್ನು ಕೊನೆಯ ಸಲ ನೋಡಿದ್ದು ಈ ವಿದ್ಯಾರ್ಥಿಗಳೇ ಇರಬೇಕು ಯಾಕೆಂದರೆ ೬ ಘಂಟೆಯ ಸೈರನ್ ಆದ ತಕ್ಷಣ ಮಾವುತ ಆನೆಯ ಲಾಯದ ಬಾಗಿಲನ್ನು ಹಾಕುತ್ತಿದ್ದ ಎಂದು ಪತ್ರಿಕಯಲ್ಲಿ ಬರೆಯಲಾಗಿತ್ತು.
ವಿದ್ಯಾರ್ಥಿಗಳೆಲ್ಲ ಸರ್ವಾನುಮತದಿಂದ ನೀಡಿದ ಹೇಳಿಕೆಯ ಪ್ರಕಾರ ಅವರು ಆನೆಯನ್ನು ಸಂದರ್ಶಿಸಿದ್ದ ಸಮಯದಲ್ಲಿ ಆನೆಯಲ್ಲಾಗಲಿ ಅಥವಾ ಮಾವುತನ ವರ್ತನೆಯಲ್ಲಾಗಲಿ ಯಾವುದೇ ಅಸಹಜತೆಯಿರಲಿಲ್ಲ. ಆನೆ ಯಾವತ್ತಿನಂತೆ ಲಾಯದ ಮಧ್ಯ ಭಾಗದಲ್ಲಿ ನಿಂತಿತ್ತು, ಆಗಾಗ ಕಿವಿಯನ್ನು ಬೀಸುತ್ತಿತ್ತು ಮತ್ತು ಕಣ್ಣಿನ ರೆಪ್ಪೆಯನ್ನು ಬಡಿಯುತ್ತಿತ್ತು. ಸದರಿ ಆನೆಗೆ ಅದೆಷ್ಟು ವಯಸ್ಸಾಗಿತ್ತೆಂದರೆ ನೋಡುಗರಿಗೆ ಅದರ ಪ್ರತಿ ಚಲನೆಯ ಹಿಂದೆ ಅಗಾಧ ಶ್ರಮವಿರುವ೦ತೆ ಭಾಸವಾಗುತ್ತಿತ್ತು ಮತ್ತು ಅದು ಯಾವುದೇ ಕ್ಷಣದಲ್ಲಾದರೂ ಕುಸಿದು ಬಿದ್ದು ತನ್ನ ಕೊನೆಯುಸಿರನ್ನು ಎಳೆಯಬಹುದು ಅನಿಸುತ್ತಿತ್ತು .
ಕಳೆದ ವರ್ಷ ನಮ್ಮ ನಗರ ಆನೆಯನ್ನು ದತ್ತು ತೆಗೆದುಕೊಳ್ಳಲು ಅದರ ವಯಸ್ಸೇ ಕಾರಣವಾಗಿತ್ತು ಎಂದರೂ ಸರಿಯೆ. ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ನಗರದ ಅಂಚಿನಲ್ಲಿದ್ದ ಮೃಗಾಲಯವನ್ನು ಅನಿವಾರ್ಯವಾಗಿ ಮುಚ್ಚುವ ಸಂದರ್ಭ ಬಂದಾಗ , ಮೃಗಾಲಯದ ಮಾಲೀಕ ಆನೆಯೊಂದನ್ನು ಹೊರತುಪಡಿಸಿ ಬೇರೆಲ್ಲ ಪ್ರಾಣಿಗಳಿಗೂ ದೇಶದ ಬೇರೆ ಬೇರೆ ಕಡೆ ಜಾಗವನ್ನು ಹುಡುಕಿದ್ದ. ಆದರೆ ಪ್ರತಿಯೊಂದು ಮೃಗಾಲಯದಲ್ಲೂ ಆನೆ ಸರ್ವೇ ಸಾಮಾನ್ಯವಾಗಿ ಇರುತ್ತಿದ್ದ ಪ್ರಾಣಿಯಾದ್ದರಿಂದ ಈ ಆನೆಯನ್ನು ಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಅಲ್ಲದೇ, ಆಗಲೋ ಈಗಲೋ ಹೃದಯಾಘಾತದಿಂದ ಸಾಯುವಂತೆ ತೋರುತ್ತಿದ್ದ ಇಂತಹ ಪುರಾತನ ಆನೆಯನ್ನು ಕೊಳ್ಳುವ ಧೈರ್ಯ ಯಾರಿಗೂ ಇರಲಿಲ್ಲ. ಹೀಗಾಗಿ ಅದರ ಸಹವರ್ತಿಗಳೆಲ್ಲ ಹೋದ ಮೇಲೆ ಶಿಥಿಲವಾಗಿದ್ದ ಆ ಮೃಗಾಲಯದಲ್ಲಿ ಆನೆ ಸುಮಾರು ನಾಲ್ಕು ತಿಂಗಳುಗಳ ಕಾಲ ಏನನ್ನೂ ಮಾಡದೆ ಒಂಟಿಯಾಗಿ ನಿಂತಿತ್ತು. ಹಾಗೆಂದು ಮೊದಲೆಲ್ಲ ಅದು ಏನನ್ನಾದರೂ ಮಾಡುತ್ತಿರುತ್ತಿತ್ತು ಎಂದಲ್ಲ.
ಇದು ನಗರಕ್ಕೆ ಮತ್ತು ಮೃಗಾಲಯಕ್ಕೆ ಬಹು ದೊಡ್ಡ ಸಮಸ್ಯೆಯನ್ನು ತಂದೊಡ್ಡಿತ್ತು. ಮೃಗಾಲಯದ ಮಾಲೀಕ, ಮೃಗಾಲಯದ ಭೂಮಿಯನ್ನು ಒಬ್ಬ ರಿಯಲ್ಎಸ್ಟೇಟ್ ವ್ಯಕ್ತಿಗೆ ಮಾರಿದ್ದ , ಈ ಜಾಗದಲ್ಲಿ ಬಹು ಅಂತಸ್ತಿನ ಕಟ್ಟಡವನ್ನು ಕಟ್ಟುವದಕ್ಕಾಗಿ ನಗರಪಾಲಿಕೆಯವರು ಈಗಾಗಲೇ ಅವನಿಗೆ ಪರವಾನಿಗೆ ನೀಡಿದ್ದರು. ಆದರೆ ಆನೆಯ ಸಮಸ್ಯೆ ಬಗೆ ಹರಿಯದೆ ರಿಯಲ್ ಎಸ್ಟೇಟಿನವ ಕೆಲಸ ಶುರು ಮಾಡುವ ಹಾಗಿರಲಿಲ್ಲ. ಆದರೆ ಈಗಾಗಲೇ ಕೆಲಸಕ್ಕೆ ಸಾಲ ತೆಗೆದುಕೊಂಡಿದ್ದರಿಂದ ಅವನು ಸುಖಾ ಸುಮ್ಮನೆ ಬಡ್ಡಿಯನ್ನು ಕಟ್ಟಬೇಕಿತ್ತು. ಆನೆಯನ್ನು ಮುಗಿಸಿಹಾಕುವದು ಯಾವುದೇ ಕಾರಣಕ್ಕೂ ಅಸಾಧ್ಯವಾದ ಮಾತಾಗಿತ್ತು. ಯಾವುದೊ ಜುಜುಬಿ ಜೇಡವೋ , ಮಂಗವೋ ಇಲ್ಲ ಬಾವಲಿಯೋ ಆಗಿದ್ದರೆ ಯಾರಿಗೂ ತಿಳಿಯದಂತೆ ಅದನ್ನು ಸಾಯಿಸಿ ಕೆಲಸವನ್ನು ಮುಗಿಸುವದು ಕಷ್ಟಕರವಾಗಿರಲಿಲ್ಲ. ಆದರೆ ಆನೆಯಷ್ಟು ಭಾರಿ ಗಾತ್ರದ ಪ್ರಾಣಿಯನ್ನು ಯಾರಿಗೂ ತಿಳಿಯದಂತೆ ಮುಗಿಸುವದು ಮತ್ತು ಈ ವಿಷಯ ಎಲ್ಲಿಯೂ ಹೊರಗೆ ಬರದಂತೆ ನೋಡಿಕೊಳ್ಳುವದು ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಆನೆಯ ಕೆಲಸ ಮುಗಿಸಿದ ನಂತರ ವಿಷಯ ಹೊರಗೆ ಬಂದರೆ ಅದರ ಪರಿಣಾಮ ಅತ್ಯಂತ ಗಂಭೀರವಾಗಿರುವದರಲ್ಲಿ ಅನುಮಾನವೇ ಇಲ್ಲ.
೧. ಆನೆಯ ಸಂಪೂರ್ಣ ಜವಾಬ್ದಾರಿಯನ್ನು ನಗರಸಭೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಒಪ್ಪಿಕೊಳ್ಳುತ್ತದೆ
೨. ರಿಯಲ್ ಎಸ್ಟೇಟ್ ಮಾಲೀಕ ಸ್ವ೦ತ ಖರ್ಚಿನಲ್ಲಿ ಒಂದು ಆನೆ ಲಾಯವನ್ನು ನಿರ್ಮಿಸಿಕೊಡತಕ್ಕದ್ದು
೩. ಮೃಗಾಲಯದ ಮಾಜಿ ಮಾಲೀಕ ಆನೆಯ ಮಾವುತನಿಗೆ ಪ್ರತಿ ತಿಂಗಳು ಸಂಬಳವನ್ನು ಕೊಡತಕ್ಕದ್ದು
ಆನೆಯ ವಿಷಯ ಪ್ರಾರಂಭದಿ೦ದಲೂ ನನಗೆ ಕುತೂಹಲವನ್ನು ಕೆರಳಿಸಿದ್ದರಿಂದ , ನಾನು ಮೊದಲಿನಿಂದಲೂ ಈ ವಿಷಯಕ್ಕೆ ಸಂಬಂದ ಪಟ್ಟ ಎಲ್ಲ ಲೇಖನಗಳನ್ನೂ , ಪತ್ರಿಕಾ ವರದಿಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದೆ. ನಗರಸಭೆಯ ಕಲಾಪದಲ್ಲಿ ಆನೆಯ ಬಗ್ಗೆ ಚರ್ಚೆ ನಡೆದಾಗ ನಾನು ಸ್ವತ: ಹಾಜರಿದ್ದು , ಚರ್ಚೆಯ ವಿವರಗಳನ್ನು ಬರೆದಿಟ್ಟುಕೊಂಡಿದ್ದೆ. ಹಾಗಾಗಿಯೇ ಇಲ್ಲಿಯವರೆಗೆ ನಾನು ಇಷ್ಟು ವಿವರವಾಗಿ ಆನೆಯ ವಿಷಯವನ್ನು ವಿವರಿಸಲಿಕ್ಕೆ ಸಾಧ್ಯವಾದದ್ದು. ಇವೆಲ್ಲ ವಿವರಗಳು ತುಸು ದೀರ್ಘವೇ ಅನಿಸಿದರೂ , ಒಂದು ವೇಳೆ ಆನೆ ಇದ್ದಕ್ಕಿದ್ದಂತೆ ಅದೃಶ್ಯವಾದುದ್ದಕ್ಕೆ ಆನೆಯ ಪೂರ್ವ ಸಮಸ್ಯೆಗಳೇ ಮೂಲ ಕಾರಣ ಎಂದಾದರೆ ಈ ವಿವರಗಳು ಅಗತ್ಯವಾಗಬಹುದು.
ನಗರದ ಮೇಯರ್ ಆನೆಯ ಜವಾಬ್ದಾರಿಯನ್ನು ನಗರಸಭೆ ಹೊರುವುದಾಗಿ ಪ್ರಕಟಿಸಿದಾಗ , ವಿರೋಧ ಪಕ್ಷದವರು ಅದನ್ನು ತೀವ್ರವಾಗಿ ವಿರೋಧಿಸಿದರು. ( ಅಲ್ಲಿಯವರೆಗೆ ವಿರೋಧ ಪಕ್ಷ ಅಸ್ತಿತ್ವದಲ್ಲಿದೆ ಎನ್ನುವದೇ ನನಗೆ ತಿಳಿದಿರಲಿಲ್ಲ ) . " ಆನೆಯ ಜವಾಬ್ದಾರಿಯನ್ನು ನಗರಸಭೆ ಯಾಕೆ ಹೊತ್ತುಕೊಳ್ಳಬೇಕು ?" ವಿರೋಧ ಪಕ್ಷದವರು ಈ ಕೆಳಗಿನ ಪ್ರಶ್ನೆಗಳನ್ನು ಎತ್ತಿದರು. ( ಅನಗತ್ಯ ವಿವರ ಅನ್ನಿಸಬಹುದು. ಕ್ಷಮಿಸಿ , ಆದರೆ ಕೇಸನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಇವೆಲ್ಲ ಬೇಕಾಗುತ್ತದೆ )
೧. ಆನೆಯ ಸಮಸ್ಯೆ ಇಬ್ಬರು ಖಾಸಗಿ ವ್ಯವಹಾರಸ್ಥರ ನಡುವಿನದು - ರಿಯಲ್ ಎಸ್ಟೇಟ್ ಮಾಲೀಕ ಮತ್ತು ಮೃಗಾಲಯದ ಮಾಲೀಕ. ನಗರಸಭೆ ಇದರಲ್ಲಿ ಭಾಗಿಯಾಗುವ ಅಗತ್ಯವಿಲ್ಲ.
೨. ಆನೆಗೆ ಊಟ ಒದಗಿಸುವ ಮತ್ತು ನೋಡಿಕೊಳ್ಳಲು ಅತಿಯಾದ ಖರ್ಚು ತಗಲುತ್ತದೆ.
೩. ಭದ್ರತೆ ವಿಷಯದಲ್ಲಿ ಮೇಯರ್ ಅವರ ಅಭಿಪ್ರಾಯವೇನು ?
೪. ತನ್ನದೇ ಆದ ಆನೆಯನ್ನು ಹೊಂದುವದಕ್ಕೆ ನಗರಕ್ಕೆ ನಿಜಕ್ಕೂ ಅರ್ಹತೆಯಿದೆಯೇ ?
೧. ಮೃಗಾಲಯದ ಜಾಗದಲ್ಲಿ ಬಹು ಮಹಡಿ ಕಟ್ಟಡ ಕಟ್ಟುವದರಿಂದ ನಗರ ಸಭೆಗೆ ಹೆಚ್ಚಿನ ತೆರಿಗೆ ಸಂದಾಯವಾಗುತ್ತದೆ. ತೆರಿಗೆ ಆದಾಯಕ್ಕೆ ಹೋಲಿಸಿದರೆ ಆನೆಯ ವೆಚ್ಚ ಬಹಳ ಕಡಿಮೆ. ಹೀಗಾಗಿ ಆನೆಯ ಜವಾಬ್ದಾರಿ ಹೊರುವದು ಸರಿಯಾದ ನಡೆ.
೨. ಆನೆ ಬಹಳ ವಯಸ್ಸಾಗಿರುವದರಿಂದ ಅದು ಹೆಚ್ಚಿನ ಊಟವನ್ನೇನೂ ಮಾಡುವದಿಲ್ಲ ಮತ್ತು ಭದ್ರತೆಯ ಬಗ್ಗೆ ಅನಗತ್ಯವಾಗಿ ಭಯಪಡುವ ಕಾರಣಗಳಿಲ್ಲ.
೩. ಆನೆ ಗತಿಸಿದಾಗ , ರಿಯಲ್ ಎಸ್ಟೇಟ್ ಕಂಪನಿ ಕಟ್ಟಿಕೊಟ್ಟಿದ್ದ ಲಾಯ ಮತ್ತು ಆ ಜಾಗ ನಗರಸಭೆಯ ಸುಪರ್ದಿಗೆ ಸೇರುತ್ತದೆ.
೪. ಆನೆ ನಗರದ ಸಂಕೇತವಾಗಬಹುದು.
ಸುದೀರ್ಘವಾಗಿ ನಡೆದ ಚರ್ಚೆ ಕೊನೆಗೂ ಆನೆಯ ಜವಾಬ್ದಾರಿಯನ್ನು ನಗರಸಭೆ ಹೊರಬೇಕು ಎನ್ನುವ ತೀರ್ಮಾನದೊಂದಿಗೆ ಮುಕ್ತಾಯವಾಯಿತು.
ಬಹುತೇಕ ಶ್ರೀಮ೦ತರೇ ವಾಸವಾಗಿದ್ದ ಮತ್ತು ಆರ್ಥಿಕವಾಗಿ ಸದೃಢವಾಗಿದ್ದ ಈ ಉಪನಗರದಲ್ಲಿ ವಯಸ್ಸಾದ ಒಂದು ಆನೆಯ ಜವಾಬ್ದಾರಿ ಹೊರುವದು ಅಂತಹ ಕಷ್ಟಕರ ಕೆಲಸವೇನು ಆಗಿರಲಿಲ್ಲ. ಅಲ್ಲದೇ ಮೇಲ್ನೋಟಕ್ಕೆ, ಒಳ ಚರಂಡಿ ಸಮಸ್ಯೆ ಮತ್ತು ಹೊಸ ಅಗ್ನಿಶಾಮಕ ದಳದ
ವ್ಯವಸ್ಥೆ ಇತ್ಯಾದಿ ಸಮಸ್ಯೆಗಳಿಗೆ ಹೋಲಿಸಿದರೆ ಜನ ಈ ಮುದಿ ಆನೆಯನ್ನೇ ಆಯ್ಕೆ ಮಾಡಿಕೊಂಡಂತಿತ್ತು.ನಾನು ವೈಯಕ್ತಿಕವಾಗಿ ನಗರ ಸಭೆ ಆನೆಯ ಜವಾಬ್ದಾರಿ ಹೊರುವದರ ಪರವಾಗಿದ್ದೆ. ಹೌದು , ಬಹು ಮಹಡಿ ಕಟ್ಟಡಗಳು ನನಗೆ ಇಷ್ಟವಾಗುತ್ತಿರಲಿಲ್ಲ ಆದರೂ ನಾನು ವಾಸವಾಗಿದ್ದ ನಗರ ಒಂದು ಆನೆಯನ್ನು ಹೊಂದುವದು ನನಗೆ ಹೆಮ್ಮೆಯ ವಿಷಯವೇ ಆಗಿತ್ತು
ಆನೆಯನ್ನು ನಗರಕ್ಕೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ನಾನು ನೆರೆದಿದ್ದ ಜನಜಂಗುಳಿಯ ಜೊತೆಗೆ ಭಾಗವಹಿಸಿದ್ದೆ. ಆನೆಯ ಪಕ್ಕ ನಿಂತು ಮೇಯರ್ ಒಂದು ಭಾಷಣವನ್ನು ಮಾಡಿದರು ( ನಗರದ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಶ್ರೀಮ೦ತಿಕೆಯನ್ನು ಪುಷ್ಟಿಗೊಳಿಸುವದರ ಕುರಿತು ) , ಪ್ರಾಥಮಿಕ ಶಾಲೆಯ ಪರವಾಗಿ , ವಿದ್ಯಾರ್ಥಿಯೊಬ್ಬ ಮೊದಲೇ ಬರೆದಿಟ್ಟುಕೊಂಡಿದ್ದ ಭಾಷಣವನ್ನು ಓದಿದ ( "ಮಾನ್ಯ ಆನೆ, ದೇವರು ನಿನಗೆ ದೀರ್ಘ ಆಯುರಾರೋಗ್ಯ , ಆಯಸ್ಸನ್ನು ದಯಪಾಲಿಸಲಿ ") , ಜೊತೆಗೆ ಮಕ್ಕಳಿಗೆ ಆನೆಯ ಚಿತ್ರವನ್ನು ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ( ಇದಾದ ನಂತರ ಆನೆಯ ಚಿತ್ರ ರಚಿಸುವದು ಮಕ್ಕಳಿಗೆ ಕಡ್ಡಾಯ ಚಟುವಟಿಕೆಯಾಯಿತು ) , ಸುಂದರಾವಾದ ಉಡುಪುಗಳನ್ನು ಧರಿಸಿದ್ದ ಸಾಧಾರಣ ರೂಪಿನ ಇಬ್ಬರು ಯುವತಿಯರು ಸಾಂಕೇತಿಕವಾಗಿ ಆನೆಗೆ ಬಾಳೆಹಣ್ಣುಗಳನ್ನು ತಿನ್ನಿಸಿದರು. ಆನೆ ಇವೆಲ್ಲ ಅರ್ಥಹೀನ ಚಟುವಟಿಕೆಗಳನ್ನು ( ಆನೆಯ ಪ್ರಕಾರ ಇವೆಲ್ಲ ಖಂಡಿತವಾಗಿಯೂ ಅರ್ಥಹೀನವೇ ಸರಿ ) ಅತ್ಯಂತ ಸ೦ಯಮದಿಂದ ಸಹಿಸಿಕೊಂಡಿತ್ತು ಮತ್ತು ಯುವತಿಯರು ಕೊಟ್ಟ ಬಾಳೆಹಣ್ಣುಗಳನ್ನು ನಿರ್ಭಾವುಕವಾಗಿ ಮೆಲ್ಲುತ್ತಿತ್ತು. ಆನೆ ಬಾಳೆಹಣ್ಣುಗಳನ್ನು ತಿಂದು ಮುಗಿಸಿದ ನಂತರ ಜನ ಕರತಾಡನ ಮಾಡಿದರು.
ಈ ಲೋಹದ ಸಂಕೋಲೆ ಆನೆಯನ್ನು ನಿಜಕ್ಕೂ ಬಾಧಿಸುತ್ತಿತ್ತೇ ಎನ್ನುವದರ ಬಗ್ಗೆ ನನಗೆ ಖಚಿತತೆ ಇರಲಿಲ್ಲ. ಮೇಲ್ನೋಟಕ್ಕೆ , ಆನೆಗೆ ತನ್ನ ಕಾಲಿಗೆ ಬಿಗಿದ ಆ ಅಸಾಧ್ಯ ಭಾರದ ಲೋಹದ ಸರಪಳಿಯ ಬಗ್ಗೆ ಅರಿವೇ ಇರಲಿಲ್ಲ ಎಂದು ತೋರುತ್ತಿತ್ತು. ಅದು ಶೂನ್ಯವೊಂದರಲ್ಲಿನ ಯಾವುದೋ ಬಿಂದುವನ್ನು ಸದಾಕಾಲ ದಿಟ್ಟಿಸುತ್ತ ನಿಂತಿರುತ್ತಿತ್ತು ; ಅದರ ಕಿವಿ , ಮೈಮೇಲಿನ ಒಂದೋ ಎರಡೋ ಬಿಳಿ ರೋಮಗಳು ಆಗಾಗ್ಗೆ ಗಾಳಿಗೆ ಸೂಕ್ಷ್ಮವಾಗಿ ಕ೦ಪಿಸುತ್ತಿದ್ದವು.
ಇನ್ನು ಮಾವುತ ಸಣ್ಣನೆಯ , ಸಣಕಲು ದೇಹದ ವಯಸ್ಸಾದ ವ್ಯಕ್ತಿಯಾಗಿದ್ದ. ಅವನ ನಿಜವಾದ ವಯಸ್ಸನ್ನು ಊಹಿಸುವದು ಕಷ್ಟವಾಗಿತ್ತು, ಅವನಿಗೆ ಬಹುಶ: ಅರವತ್ತೋ ಇಲ್ಲ ಎಪ್ಪತ್ತರ ಆಸುಪಾಸು ಇರಬಹುದು. ಕೆಲ ವ್ಯಕ್ತಿಗಳಿಗೆ ಒಂದು ಹಂತದ ವಯಸ್ಸಾದ ಮೇಲೆ ಅವರಿಗೆ ಇಂತಿಷ್ಟೇ ವಯಸ್ಸು ಎಂದು ಊಹಿಸುವದು ಅಸಾಧ್ಯವಾಗುತ್ತಲ್ಲ ಅಂತಹ ಕೆಲವರ ಗುಂಪಿಗೆ ಸೇರಿದವನಾಗಿದ್ದ. ಅವನ ಚರ್ಮ ಬೇಸಿಗೆ ಮತ್ತು ಚಳಿಗಾಲ ಎರಡರಲ್ಲೂ , ಬಿಸಿಲಿಗೆ ಕಂದು ಬಣ್ಣಕ್ಕೆ ತಿರುಗಿದ್ದ ಚರ್ಮದ ಹಾಗೆಯೇ ಇರುತಿತ್ತು. ಅವನ ಕೂದಲು ಸಣ್ಣಗೆ ಆದರೆ ನೇರವಾಗಿದ್ದವು , ಅವನ ಕಣ್ಣುಗಳು ಕಿರಿದಾಗಿದ್ದವು. ಅವನ ಮುಖದಲ್ಲಿ ನೆನಪಿಟ್ಟುಕೊಳ್ಳುವ ಯಾವುದೇ ವಿಶೇಷತೆಗಳಿಲ್ಲದೆ ಇದ್ದರೂ ಅವನ ತಲೆಗೆ ಅಂಟಿಸಿಟ್ಟಂತೆ ತೋರುತ್ತಿದ್ದ ವೃತ್ತಾಕಾರದ ಕಿವಿಗಳು ಅಸ್ವಸ್ಥಗೊಳಿಸುವಷ್ಟು ಎದ್ದು ಕಾಣಿಸುತ್ತಿತ್ತು.
ಅವನೊಟ್ಟಿಗೆ ಚೆನ್ನಾಗಿದ್ದುದೆಂದರೆ ಆನೆ . ಮಾವುತ ಆನೆಯ ಲಾಯಕ್ಕೆ ಅಂಟಿಕೊಂಡಂತೆ ಇದ್ದ ಪಕ್ಕದ ಸಣ್ಣ ಕೋಣೆಯಲ್ಲಿ ವಾಸವಾಗಿದ್ದ ಮತ್ತು ದಿನವಿಡೀ ಆನೆಯ ಬೇಕು ಬೇಡಗಳನ್ನು ಸದಾ ನೋಡಿಕೊಳ್ಳುತ್ತಿದ್ದ. ಅವರು ಸುಮಾರು ಹತ್ತು ವರ್ಷಗಳಿಂದ ಸದಾ ಜೊತೆಗಿದ್ದವರು ಹೀಗಾಗಿ ಅವರಿಬ್ಬರ ನಡುವಿನ ಅವಿನಾಭಾವ ಸಂಬಂಧವನ್ನು ನೀವು ಅವರು ಪರಸ್ಪರರೊಟ್ಟಿಗೆ ನಡೆದುಕೊಳ್ಳುವ ರೀತಿಯಲ್ಲೇ ಗಮನಿಸಬಹುದಿತ್ತು. ಶೂನ್ಯವನ್ನು ದಿಟ್ಟಿಸುತ್ತಿದ್ದ ಆನೆಯನ್ನು ಕದಲಿಸಬೇಕೆಂದರೆ ಮಾವುತ ಮಾಡಬೇಕಾಗಿದ್ದಿಷ್ಟೇ - ಅದರ ಪಕ್ಕ ಬಂದು ನಿಂತು ಅದರ ಮುಂಗಾಲಿಗೆ ಒಮ್ಮೆ ತಟ್ಟಿ ನಂತರ ಕಿವಿಯಲ್ಲಿ ಅದೇನೋ ಪಿಸುಗುಡುವದು. ಆಗ , ಆನೆ ತನ್ನ ದೈತ್ಯ ದೇಹವನ್ನು ಕದಲಿಸಿ , ಮಾವುತ ಬಯಸಿದ ಜಾಗದಲ್ಲಿ ಬಂದು ನಿಂತು ಮತ್ತೆ ಶೂನ್ಯವನ್ನು ದಿಟ್ಟಿಸಲು ಪ್ರಾರಂಭಿಸುತ್ತಿತ್ತು.
ಪ್ರತಿ ವಾರಾಂತ್ಯವೂ ನಾನು ಆನೆ ಲಾಯಕ್ಕೆ ಭೇಟಿ ನೀಡಿ, ಆನೆ ಮತ್ತು ಮಾವುತರ ನಡುವಿನ ಈ ಸಂಭಾಷಣೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಆದರೆ ಆನೆ-ಮಾವುತರ ಸಂಭಾಷಣೆಯ ಹಿಂದಿನ ಮೂಲ ತತ್ವ ಕೊನೆಯವರೆಗೂ ನನಗೆ ತಿಳಿಯಲಿಲ್ಲ. ಬಹುಶ: ಆನೆಗೆ ಕೆಲ ಸರಳ ಶಬ್ದಗಳು ಅರ್ಥವಾಗುತ್ತಿತ್ತು ( ಅಷ್ಟು ಅರ್ಥವಾಗುವಷ್ಟು ಕಾಲ ಅದು ಬದುಕಿದೆ ) ಅಥವಾ ಅದರ ಕಾಲಿಗೆ ಮಾವುತ ಮೆಲ್ಲಗೆ ತಟ್ಟುತ್ತಿದ್ದ ರೀತಿಯಲ್ಲಿನ ಬದಲಾವಣೆಯಿಂದ ಸಂವಹನ ನಡೆಸುತ್ತಿತ್ತು ಅಥವಾ ಅದರ ಮತ್ತು ಮಾವುತನ ನಡುವೆ ಅತಿಂದ್ರೀಯವಾದ ಭಾಷಾ ವಿನಿಮಯ ನಡೆದು , ಮಾವುತನ ಚಿತ್ತದಲ್ಲಿರುವ ಯೋಚನೆ ಆನೆಯತ್ತ ಪ್ರವಹಿಸುತ್ತಿತ್ತು. ನಾನು ಒಮ್ಮೆ ಮಾವುತನನ್ನೇ ಈ ಸಂಭಾಷಣೆಯ ಬಗ್ಗೆ ಕೇಳಿದ್ದೆ. ಮುದುಕ ನಸುನಕ್ಕು ಉತ್ತರಿಸಿದ್ದ " ನಾವಿಬ್ಬರು ಸಾಕಷ್ಟು ಕಾಲದಿಂದ ಜೊತೆಗಿದ್ದೇವೆ ."
ನಾನು ಎರಡನೇ ಸಲ ಕಾಫಿಯನ್ನು ಲೋಟಕ್ಕೆ ಹಾಕಿಕೊಂಡು ಮತ್ತೆ ಸುದ್ದಿಯನ್ನು ಕೂಲಂಕುಷವಾಗಿ ಓದಿದೆ. ನಿಜ ಹೇಳಬೇಕೆಂದರೆ ಅದೊಂದು ವಿಚಿತ್ರ ಲೇಖನ. ಶೆರ್ಲಾಕ್ ಹೋಮ್ ನನ್ನು ಆಕರ್ಷಿಸುವಂತದ್ದು. " ನೋಡು ವ್ಯಾಟ್ಸನ್ , ತುಂಬಾ ಆಸಕ್ತಿದಾಯಕವಾಗಿದೆ " ಎಂದು ಅವನು ಪೈಪ್ ಸೇದುತ್ತ ಹೇಳುತ್ತಿದ್ದನೇನೋ.
ಲೇಖನಕ್ಕೆ ವಿಚಿತ್ರತೆಯನ್ನು ತಂದುಕೊಟ್ಟಿದ್ದು ವರದಿಗಾರನಲ್ಲಿ ಈ ಘಟನೆ ಕೆರಳಿಸಿದ್ದ ವಿಸ್ಮಯತೆ ಮತ್ತು ಗೊಂದಲ. ಹಾಗೆ ನೋಡಿದರೆ ಈ ವಿಸ್ಮಯತೆ ಮತ್ತು ಗೊ೦ದಲ ಇವೆರಡಕ್ಕೂ ಮೂಲಭೂತ ಕಾರಣ ಅಸಂಗತವಾದ ಈ ಘಟನೆಯೇ ಹೌದು. ಹೀಗಾಗಿ ಲೇಖನದುದ್ದಕ್ಕೂ ಘಟನೆಯ ಅಸಂಗತತೆಯನ್ನು ಹೋಗಲಾಡಿಸಿ , ಇಡೀ ಘಟನೆಗೆ ಒಂದು ಸಹಜತೆಯ ಚೌಕಟ್ಟನ್ನು ನಿರ್ಮಿಸಲು ಬರಹಗಾರ ತೋರಿದ ಪರಿಶ್ರಮ ಎದ್ದು ಕಾಣುತ್ತಿತ್ತು. ಆದರೆ ಈ ಪರಿಶ್ರಮ ಘಟನೆಗೆ ಒಂದು ಸಹಜತೆಯನ್ನು ತಂದು ಕೊಡುವ ಬದಲಾಗಿ ಸಂಪೂರ್ಣ ಘಟನೆಯನ್ನು ಇನ್ನೂ ಗೊಂದಲವಾಗಿಯೂ , ವಿಸ್ಮಯಯಕಾರಿಯಾಗಿಯೂ ತೋರಿಸಿಕೊಟ್ಟಿದ್ದವು.
ಉದಾಹರಣೆಗೆ ಲೇಖನದಲ್ಲಿ ಈ ತೆರನಾದ ಅಭಿವ್ಯಕ್ತಿಗಳಿದ್ದವು - "ಆನೆ ಪರಾರಿಯಾಗಿದೆ " ಆದರೆ ಯಾರಾದರೂ ಲೇಖನವನ್ನು ಸಂಪೂರ್ಣವಾಗಿ ಓದಿದರೆ ಆನೆ ಖಂಡಿತವಾಗಿಯೂ ಪರಾರಿಯಾಗಿಲ್ಲ ಎನ್ನುವದು ಖಚಿತವಾಗಿ ತಿಳಿಯುತ್ತಿತ್ತು. ಆನೆ ತಿಳಿ ಗಾಳಿಯಲ್ಲಿ ಅದೃಶ್ಯವಾಗಿತ್ತು.
ಕೆಲ "ವಿವರಗಳು" ಇನ್ನೂ "ಅಸ್ಪಷ್ಟವಾಗಿವೆ " ಇತ್ಯಾದಿಗಳನ್ನು ಹೇಳುವ ಮೂಲಕ ವರದಿಗಾರ ಅವನ ಗೊಂದಲಮಯ ಮನೋಸ್ಥಿತಿಯನ್ನು ಬಿಚ್ಚಿಟ್ಟಿದ್ದ. ಆದರೆ "ವಿವರ", "ಅಸ್ಪಷ್ಟ" ಇತ್ಯಾದಿ ಸರ್ವೇ ಸಾಧಾರಣ ಶಬ್ದಗಳಲ್ಲಿ ಹಿಡಿದಿಡಲು ಸಾಧ್ಯವಾಗುವ ಘಟನೆ ಇದಲ್ಲ ಎನ್ನುವದು ನನ್ನ ಬಲವಾದ ನಂಬಿಕೆಯಾಗಿತ್ತು.
ಮೊದಲನೆಯದಾಗಿ ಆನೆಯ ಕಾಲಿಗೆ ಕಟ್ಟಿದ್ದ ಲೋಹದ ಬಳೆ ಮತ್ತು ಸರಪಳಿ. ಇವೆರಡೂ ಸಹ ಭದ್ರವಾಗಿಯೇ ಇದ್ದವು. ಹೀಗಾಗಿ ಒಂದು ಒಪ್ಪಿಕೊಳ್ಳಬಹುದಾದ ತರ್ಕವೆಂದರೆ ಮಾವುತ ಆನೆಯ ಕಾಲಿನ ಸರಪಳಿಯ ಬೀಗ ತೆಗೆದು ಆನೆಯನ್ನು ಬಿಡಿಸಿ ಮತ್ತೆ ಕೀಲಿ ಹಾಕಿದ್ದ ಎನ್ನುವದು. ಸುದ್ದಿ ಮನೆಯ ವರದಿಗಾರರಿಗೆ ಅತ್ಯಂತ ಸಂತೋಷದಾಯಕವಾಗಬಹುದಾದ ಈ ತರ್ಕದಲ್ಲಿದ್ದ ಒಂದೇ ಒಂದು ದೋಷವೆಂದರೆ ಮಾವುತನ ಬಳಿ ಬೀಗವಿರಲಿಲ್ಲ ಎನ್ನುವದು . ಭದ್ರತೆಯ ಕಾರಣಕ್ಕೋಸ್ಕರ ಆನೆಯ ಕಾಲಿನ ಸರಪಳಿಗಿದ್ದ ಎರಡು ಬೀಗಗಳಲ್ಲಿ, ಒಂದು ಪೊಲೀಸ್ ಮಹಾ ನಿರ್ದೇಶಕರ ಬಳಿಯಿರುವ ಲಾಕರಿನಲ್ಲೂ , ಇನ್ನೊಂದನ್ನು ಅಗ್ನಿಶಾಮಕ ದಳದ ಮುಖ್ಯಸ್ಥರ ಲಾಕರಿನಲ್ಲೂ ಭದ್ರವಾಗಿಡಲಾಗಿತ್ತು ಮತ್ತು ಇವೆರಡೂ ಜಾಗಗಳನ್ನು ತಲುಪುವದು ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ. ಇಷ್ಟಾಗಿಯೂ ಯಾರಾದರೂ ಬೀಗವನ್ನು ಎಗರಿಸಿದ್ದಾರೆ ಎಂದುಕೊಂಡರು , ಅದನ್ನು ಮತ್ತೆ ಅದೇ ಜಾಗದಲ್ಲಿ ಮರಳಿ ತಂದಿಡುವ ಅಗತ್ಯವಾದರೂ ಏನು ? ಆದರೂ ಮಾರನೆಯ ದಿನ ಬೆಳಗ್ಗೆ ವಿಚಾರಿಸಿದಾಗ ಎರಡೂ ಬೀಗಗಳು ತಮ್ಮ ತಮ್ಮ ಜಾಗದಲ್ಲಿ ಸುರಕ್ಷಿತವಾಗಿದ್ದವು. ಇದು ನಮ್ಮನ್ನು ಇನ್ನೊಂದು ತರ್ಕದತ್ತ ಹೊರಳುವಂತೆ ಮಾಡುತ್ತದೆ - ಆನೆ ತನ್ನ ಕಾಲುಗಳನ್ನು ತಾನೇ ತಾನಾಗಿಯೇ ಸರಪಳಿಯಿಂದ ಕಳಚಿಕೊ೦ಡಿದೆ, ಆದರೆ ಯಾರಾದರೂ ಆನೆಯ ಕಾಲನ್ನು ಕತ್ತರಿಸದ ಹೊರತು ಇದು ಅಸಾಧ್ಯ ಮಾತು.
ಮೂರನೇ ಪ್ರಶ್ನೆ ಎಂದರೆ ಆನೆ ಹೋಗಿರಬಹುದಾಗಿದ್ದ ಹಾದಿ. ಲಾಯದ ಹಿಂದೆ ಒಂದು ಕಡಿದಾದ ಗುಡ್ಡವಿದ್ದು , ಆನೆ ಅದನ್ನು ಹತ್ತುವ ಸಂಭವವಿರಲಿಲ್ಲ. ಇಷ್ಟಾಗಿಯೂ , ಆನೆ ಅದು ಹೇಗೋ ಸರಪಳಿಯಿಂದ ಕಾಲನ್ನು ತೆಗೆದುಕೊಂಡು , ೧೦ ಅಡಿ ಉದ್ದದ ಬೇಲಿಯನ್ನು ದಾಟಿ , ಅಗುಳಿ ಹಾಕಿದ್ದ ಮುಖ್ಯದ್ವಾರದ ಬಾಗಿಲನ್ನು ದಾಟಿ ಹೊರಕ್ಕೆ ಬಂದು ಓಡಿ ಹೋಗಿದೆ ಅಂದುಕೊಂಡರೂ , ಸುತ್ತಲಿನ ಮೆತ್ತನೆಯ ಮಣ್ಣಿನಲ್ಲಿ ಆನೆಯ ಹೆಜ್ಜೆ ಗುರುತಿನ ಲವಲೇಶವೂ ಇರಲಿಲ್ಲ.
ಹೀಗಾಗಿ ಅತ್ಯಂತ ಒಗಟು ಒಗಟಾಗಿಯೂ , ಗೋಜಲಾಗಿಯೂ ಶ್ರಮಪಟ್ಟು ಬರೆದ ಲೇಖನ , ಒಟ್ಟಾರೆಯಾಗಿ ಆನೆ ಪರಾರಿಯಾಗಿಲ್ಲ ಬದಲಾಗಿ ಅದೃಶ್ಯವಾಗಿದೆ ಎನ್ನುವ ಸಂದೇಶವನ್ನು ಕೊಡುತ್ತಿತ್ತು.
ಇಷ್ಟಾಗಿಯೂ ಪತ್ರಿಕೆಯಾಗಲಿ , ಮೇಯರ್ ಆಗಲಿ , ಪೊಲೀಸ್ ಮಹಾ ನಿರ್ದೇಶಕರಾಗಲಿ ಯಾವುದೇ ಕಾರಣಕ್ಕೂ ಆನೆ ಅದೃಶ್ಯವಾಗಿದೆ ಎನ್ನುವದನ್ನು ಒಪ್ಪಕೊಳ್ಳಲು ತಯಾರಿರಲಿಲ್ಲ. ಪೊಲೀಸರು ಅವರ ತನಿಖೆಯನ್ನು ಮುಂದುವರಿಸಿದ್ದರು ಮತ್ತು ಅವರ ವಕ್ತಾರ ಹೇಳುವಂತೆ "ಆನೆಯನ್ನು ಅದು ಹೇಗೋ ನಾಜೂಕಾಗಿ , ಪೂರ್ವ ನಿರ್ಧಾರಿತ ಸಂಚಿನಂತೆ ಪಲಾಯನ ಮಾಡಿಸಲಾಗಿದೆ. ಆದರೆ ಆನೆಯಂತ ಭಾರಿ ಗಾತ್ರದ ಪ್ರಾಣಿಯನ್ನು ಬಹಳ ಕಾಲ ಕದ್ದು ಮುಚ್ಚಿ ಇಡಲು ಅಸಾಧ್ಯವಾದ್ದರಿಂದ ವಿಷಯ ಹೊರಗೆ ಬರಲು ಹೆಚ್ಚೇನೂ ದಿನಗಳಿಲ್ಲ. " ಅಲ್ಲದೆ ಆಸುಪಾಸಿನ ಕಾಡಿನಲ್ಲಿ ತೀವ್ರ ಹುಡುಕಾಟಕ್ಕಾಗಿ ಸ್ಥಳೀಯ ಬೇಟೆಗಾರರನ್ನು ಮತ್ತು ಶಾರ್ಪ್ ಶೂಟರ್ ತ೦ಡವನ್ನು ಬಳಸಿಕೊಳ್ಳಲಾಗುವದು ಎಂದೂ ತಿಳಿಸಿದ್ದ.
ಕಳೆದ ವರ್ಷದಂತೆಯೇ , ವಿರೋಧ ಪಕ್ಷದವರು ಈಗಲೂ ಸಹ ಆರೋಪಗಳನ್ನು ಮಾಡಿದರು. "ಈ ಘಟನೆಯ ಸಂಪೂರ್ಣ ಜವಾಬ್ದಾರಿ ಮೇಯರ್ ಅವರದ್ದು. ಅವರು ಖಾಸಗಿ ಕಂಪನಿಗಳೊಂದಿಗೆ ಶಾಮೀಲಾಗಿ ಆನೆಯ ಸಮಸ್ಯೆಗೆ ಪರಿಹಾರವನ್ನು ಹುಡುಕುವ ನೆಪದಲ್ಲಿ ನಗರದ ಸಮಸ್ತ ಜನತೆಯನ್ನು ಮೋಸಗೊಳಿಸಿದ್ದಾರೆ "
ಮೂವತ್ತೇಳು ವರ್ಷ ವಯಸ್ಸಿನ ಮಹಿಳೆಯೊಬ್ಬಳು ಪತ್ರಿಕೆಯವರು ನಡೆಸಿದ ಸಂದರ್ಶನದಲ್ಲಿ ತನ್ನ ಮಕ್ಕಳನ್ನು ಮನೆಯ ಹೊರಗೆ ಆಡಲು ಕಳುಹಿಸಲಿಕ್ಕೆ ಭಯವಾಗುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ದುಃಖ ತೋಡಿಕೊಂಡಳು.
ಚಾನಲ್ಲುಗಳಲ್ಲಿ ಪ್ರಸಾರವಾಗುತ್ತಿದ್ದ ವರದಿಯಲ್ಲಿ ಸವಿಸ್ತಾರವಾಗಿ ನಗರ ಆನೆಯನ್ನು ಸುಪರ್ದಿಗೆ ತೆಗೆದುಕೊಂಡ ಕಾರಣ, ಆನೆ ಲಾಯ ಮತ್ತು ಬಯಲಿನ ವೈಮಾನಿಕ ನಕ್ಷೆ ಮತ್ತು ಅದೃಶ್ಯವಾಗಿದ್ದ ಆನೆ ಮತ್ತು ಮಾವುತನ ಹಿನ್ನೆಲೆಯನ್ನು ತೋರಿಸಲಾಯಿತು.
ಮಾವುತ , ನೊಬುರು ವಟಾಣಬೆ , ೬೩ , ಚಿಬಾ ಪ್ರಾಂತ್ಯದ ತತೆಯಾಮ ಪ್ರದೇಶದವನು. ಅವನು ಈಗಾಗಲೇ ಮುಚ್ಚಲಾಗಿದ್ದ ಮೃಗಾಲಯದಲ್ಲಿ ಸಾಕಷ್ಟು ವರ್ಷ ಮಾವುತನಾಗಿದ್ದ ಮತ್ತು ಅವನ ಕಾರ್ಯ ತತ್ಪರತೆ , ಪ್ರಾಣಿಗಳ ಬಗೆಗಿದ್ದ ಅಗಾಧ ಜ್ಞಾನ ಹಾಗೂ ಸರಳ ವ್ಯಕ್ತಿತ್ವದಿಂದ ಮೃಗಾಲಯದ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರನಾಗಿದ್ದ.ಆನೆಯನ್ನು ಸುಮಾರು ೨೨ ವರ್ಷಗಳ ಹಿಂದೆ ಪೂರ್ವ ಆಫ್ರಿಕಾದಿಂದ ತರಲಾಗಿತ್ತಾದರೂ ಅದರ ವಯಸ್ಸು ಮತ್ತು ವ್ಯಕ್ತಿತ್ವದ ಬಗ್ಗೆ ನಿಖರ ಮಾಹಿತಿಗಳಿರಲಿಲ್ಲ. ನೇರ ಪ್ರಸಾರದ ಮುಕ್ತಾಯದಲ್ಲಿ ಪೊಲೀಸರು ನಾಗರಿಕರಲ್ಲಿ ಆನೆಯ ಬಗ್ಗೆ ಯಾವುದೇ ಮಾಹಿತಿಯಿದ್ದರೂ ದಯವಿಟ್ಟು ಪೊಲೀಸರಲ್ಲಿ ಹಂಚಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.
ಎರಡನೇ ಕಾಫಿಯನ್ನು ಹೀರುತ್ತಾ ನಾನು ಪೊಲೀಸರನ್ನು ಕಂಡು ನನ್ನಲ್ಲಿದ್ದ ಮಾಹಿತಿಯನ್ನು ಅವರೊಟ್ಟಿಗೆ ಹಂಚಿಕೊಳ್ಳುವ ಬಗ್ಗೆ ವಿಚಾರ ಮಾಡಿದೆ. ಆದರೆ ಕೊನೆಗೆ ಅವರನ್ನು ಕಾಣದಿರಲು ನಿರ್ಧರಿಸಿದೆ. ಯಾಕೆಂದರೆ ಮೊದಲನೆಯದಾಗಿ ಅವರೊಟ್ಟಿಗೆ ವ್ಯವಹಾರ ನನಗೆ ಇಷ್ಟವಿರಲಿಲ್ಲ ಎರಡನೆಯದಾಗಿ ನನ್ನಲ್ಲಿದ್ದ ಮಾಹಿತಿಯನ್ನು ಅವರು ನಂಬಬಹುದು ಎನ್ನುವದರ ಬಗ್ಗೆ ನನಗೆ ಸ್ಪಷ್ಟತೆಯಿರಲಿಲ್ಲ. ಅದು ಅಲ್ಲದೆ ಆನೆ ಅದೃಶ್ಯವಾಗುವ ಸಂಭವ ಇದೆ ಎನ್ನುವದನ್ನು ಒಪ್ಪಿಕೊಳ್ಳಲು ತಯಾರಿಲ್ಲದವರೊಟ್ಟಿಗೆ ಈ ವಿಚಾರವಾಗಿ ಮಾತನಾಡುವುದಾದರೂ ಹೇಗೆ ?
ಏಳು ಘಂಟೆಯ ವಾರ್ತೆಯಲ್ಲಿ ಆನೆಯ ಹುಡುಕಾಟದ ವರದಿಯನ್ನು ಬಿತ್ತರಿಸಲಾಯಿತು. ಉದ್ದನೆಯ ಬಂದೂಕುಗಳಲ್ಲಿ ಮತ್ತು ಬರಿಸುವ ಔಷಧಿ ತುಂಬಿಕೊಂಡಿದ್ದ ಬಂದೂಕುಧಾರಿಗಳಿದ್ದರು, ಅರೆ ಮಿಲಿಟರಿ ಪಡೆ , ಸ್ಥಳೀಯ ಪೊಲೀಸರು , ಅಗ್ನಿಶಾಮಕ ದಳದವರು ಕಾಡಿನ ಇಂಚಿ೦ಚೂ ಬಿಡದೆ ಹುಡುಕಾಡುತ್ತಿದ್ದರು. ಹೆಲಿಕ್ಯಾಪ್ಟರಿನಲ್ಲಿ ವೈಮಾನಿಕ ಸರ್ವೇಕ್ಷಣೆ ಸಹ ನಡೆಯುತ್ತಿತ್ತು. ಅದೇನೂ ದಟ್ಟ ಅಡವಿಯಲ್ಲ , ಟೋಕಿಯೊದ೦ತಹ ಬೃಹತ್ ಪಟ್ಟಣದ ಹೊರವಲಯದಲ್ಲಿರುವ ನಗರವೊಂದರ ಪಕ್ಕದ ಕಾಡು. ಅಲ್ಲಿ ನೆರದಿದ್ದ ಜನಸಂಖ್ಯೆ ನೋಡಿದರೆ ದಿನವೊಂದರಲ್ಲಿ ಅವರು ಎಲ್ಲ ಜಾಗವನ್ನು ತಪಾಸಣೆ ಮಾಡಬಹುದು. ಅಲ್ಲದೇ ಅವರೇನು ಯಾವುದೋ ಸಣ್ಣ ವಸ್ತುವನ್ನು ಹುಡುಕುತ್ತಿರುವದಲ್ಲ , ದೈತ್ಯಾಕಾರದ ಆಫ್ರಿಕಾದ ಆನೆ . ಆ ಗಾತ್ರದ ಪ್ರಾಣಿಗಳು ಅಡಗಿಕೊಳ್ಳಬಹುದಾದ ಜಾಗಗಳು ಕೆಲವು ಮಾತ್ರ.
ಇಷ್ಟಾದರೂ ಅವರಿಗೆ ಆನೆಯನ್ನು ಹುಡುಕಲು ಸಾಧ್ಯವಾಗಿರಲಿಲ್ಲ. ಪೊಲೀಸ್ ಮಹಾನಿರ್ದೇಶಕರು ನೇರ ಪ್ರಸಾರದಲ್ಲಿ ಕಾಣಿಸಿಕೊಂಡರು " ನಾವು ನಿರಂತರ ಹುಡುಕಾಟವನ್ನು ಮುಂದುವರೆಸುತ್ತೇವೆ." ಎಂಬರ್ಥದ ಹೇಳಿಕೆ ನೀಡಿದರು ಮತ್ತು ನಿರೂಪಕ ಈ ಕೆಲ ಪ್ರಶ್ನೆಗಳೊಂದಿಗೆ ಕಾರ್ಯಕ್ರಮವನ್ನು ಮುಗಿಸಿದ "ಇಷ್ಟಕ್ಕೂ ಆನೆಯನ್ನು ಹೊರಗೆ ಬಿಟ್ಟಿವರು ಯಾರು ಮತ್ತು ಹೇಗೆ ? ಅದನ್ನು ಎಲ್ಲಿ ಅಡಗಿಸಿ ಇಟ್ಟಿರಬಹುದು.? ಇವೆಲ್ಲವುಗಳ ಹಿಂದಿನ ಉದ್ದೇಶ ಏನಿರಬಹುದು ? ಎಲ್ಲವೂ ಸಧ್ಯಕ್ಕೆ ರಹಸ್ಯದಲ್ಲಿ ಮುಚ್ಚಿಟ್ಟಿರುವ ರೋಚಕ ಘಟನೆ. "
ಹುಡುಕಾಟ ಹಲವಾರು ದಿನಗಳವರೆಗೆ ನಡೆಯಿತು. ಆದರೆ ಆನೆಯ ಕುರಿತಾಗಿ ಯಾವೊಂದು ವಿಷಯವೂ ಹೊರಗೆ ಬರಲಿಲ್ಲ. ನಾನು ಪತ್ರಿಕೆಯಲ್ಲಿ ಬಂದ ಎಲ್ಲ ವರದಿಗಳನ್ನು, ಕೊನೆಗೆ ಸಂಪಾದಕೀಯದಲ್ಲಿ ಬಂದ ವ್ಯ೦ಗ್ಯ ಚಿತ್ರವನ್ನು ಸಹ ಕತ್ತರಿಸಿ ನನ್ನ ಡೈರಿಯಲ್ಲಿ ಅಂಟಿಸಿದೆ.
ಡೈರಿ ಕೆಲವೇ ದಿನಗಳಲ್ಲಿ ತುಂಬಿ ಹೋಯಿತು. ನಾನು ಇನ್ನೊಂದನ್ನು ಖರೀದಿಸಬೇಕಾಯಿತು. ಇಷ್ಟಾಗಿಯೂ , ನನ್ನ ಸುದ್ದಿ ಸಂಗ್ರಹ ತುಂಬಿತೇ ವಿನಃ ನಾನು ಕಾತುರದಿಂದ ನೋಡುತ್ತಿದ್ದ ವಸ್ತುಸ್ಥಿತಿಯ ಬಗ್ಗೆ ಯಾರೂ ಬರೆಯಲಿಲ್ಲ.
ಸರ್ವೇ ಸಾಧಾರಣವಾಗಿ ವರದಿಗಳಲ್ಲಿ ಯಾವುದೇ ಹುರುಳಿರುತ್ತಿರಲಿಲ್ಲ ಅಥವಾ ಪೂರ್ವನಿರ್ಧಾರಿತ ಸುದ್ದಿಯ ಹಾಗೆ ಬರೆಯುತ್ತಿದ್ದರು 'ಆನೆ ಇನ್ನೂ ಪತ್ತೆಯಾಗಿಲ್ಲ , ಆನೆ ಶೋಧನಾ ಪಡೆ ಇನ್ನೂ ಕತ್ತಲೆಯಲ್ಲಿ , ದುಷ್ಕರ್ಮಿಗಳ ಕೈವಾಡ ? ' ಇತ್ಯಾದಿ. ದಿನ ಕಳೆದಂತೆ ಇಂತಹ ತರ್ಕಹೀನ ವರದಿಗಳು ಸಹ ಕ್ರಮೇಣ ಕಡಿಮೆಯಾಗಿ ಕೊನೆಗೊಮ್ಮೆ ಯಾವುದೇ ತೆರನಾದ ವರದಿಗಳು ಪ್ರಕಟವಾಗುವದೇ ನಿಂತು ಹೋಯಿತು. ಕೆಲವೊಂದು ನಿಯತಕಾಲಿಕಗಳು ಅತಿಂದ್ರೀಯ ಶಕ್ತಿಯಿದೆ ಎಂದು ಸ್ವಯಂ ಘೋಷಿಸಿಕೊಂಡವರನ್ನು ಸಂದರ್ಶಿಸಿ ಕೆಲ ರೋಚಕ ಲೇಖನಗಳನ್ನು ಪ್ರಕಟಿಸಿದ್ದರ ಹೊರತಾಗಿ ಬೇರೆ ಯಾವುದೇ ವರದಿಗಳು ಬರಲಿಲ್ಲ.
ನನಗೆ ಬಿಡುವಿನ ಸಮಯ ಸಿಕ್ಕಾಗಲೆಲ್ಲ , ಆನೆಯಿಲ್ಲದ ಖಾಲಿ ಲಾಯದ ಬಳಿಗೆ ಹೋಗಿ ನಿಲ್ಲುತ್ತಿದ್ದೆ. ಮುಖ್ಯದ್ವಾರದ ಗೇಟಿಗೆ ಸರಪಳಿಯನ್ನು ಸಿಂಬೆ ಸಿಂಬೆಯಾಗಿ ಸುತ್ತಿ ಭದ್ರವಾಗಿಸಿ, ಯಾರೂ ಒಳ ಬರದಂತೆ ತಡೆದಿದ್ದರು. ಹೊರಗಿನಿಂದ ಇಣುಕಿದಾಗ ಆನೆಯ ಲಾಯದ ಬಾಗಿಲಿಗೆ ಮತ್ತಷ್ಟು ಸರಪಳಿಯನ್ನು ಸುತ್ತಿ , ಬಿಗ ಜಡಿದಿಟ್ಟಿದ್ದರು , ಆನೆಯನ್ನು ಹುಡುಕುವ ಪ್ರಯತ್ನ ನಿಷ್ಪಲವಾದುದಕ್ಕೆ ಪ್ರಾಯಶ್ಚಿತ್ತವೋ ಎಂಬಂತೆ ಆನೆಯಿಲ್ಲದ ಲಾಯಕ್ಕೆ ಪೊಲೀಸರು ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದ್ದರು. ನಿರ್ಜನವಾದ ಆ ಜಾಗವನ್ನು ಈಗ ಜನರ ಬದಲಾಗಿ ಕಟ್ಟಡದ ಮೇಲೆ ಕುಳಿತ ಪಾರಿವಾಳಗಳು ಆಕ್ರಮಿಸಿದ್ದವು. ನೋಡಿಕೊಳ್ಳುವವರು ಇಲ್ಲದೇ, ಈ ಅವಕಾಶಕ್ಕಾಗಿ ಕಾದು ಕುಳಿತಿರುವಂತೆ ಬಯಲಿನ ಸುತ್ತ ದಟ್ಟವಾದ ಹಸಿರು ಹುಲ್ಲು ಬೆಳೆದುಕೊಂಡಿತ್ತು. ಸಿಂಬೆ ಸಿಂಬೆಯಾಗಿ ಆನೆಯ ಲಾಯದ ಬಳಿ ಬಿದ್ದಿದ್ದ ಸರಪಳಿಯನ್ನು ನೋಡಿದಾಗ ನನಗೆ ದಟ್ಟ ಕಾಡಿನಲ್ಲಿರುವ ಪಾಳುಬಿದ್ದಿರುವ ಪುರಾತನ ಅರಮನೆಯ ನಿಧಿಯನ್ನು ಕಾಯುವ ಯಾವುದೋ ಒಂದು ದೈತ್ಯ ಸರ್ಪದ ನೆನಪಾಗಿ ಬೆಚ್ಚಿಬಿದ್ದೆ. ಆನೆಯಿಲ್ಲದ ಕೆಲವೇ ತಿಂಗಳುಗಳಲ್ಲಿ ಆ ಜಾಗ ನಿರ್ಜನವಾಗಿಯೂ , ವಿನಾಶಕಾರಿಯಾಗಿಯೂ ತೋರುತ್ತ , ಒಂದು ಅಸ್ವಸ್ಥ ದೈತ್ಯ ಮೋಡ ಸಂಪೂರ್ಣ ಜಾಗವನ್ನು ಕವಿದಿರುವಂತೆ ತೋರುತ್ತಿತ್ತು.
*********** **************** *************
ನಾನು ಸೆಪ್ಟೆಂಬರ್ ನ ಕೊನೆಯ ವಾರದಲ್ಲಿ ಅವಳನ್ನು ಭೇಟಿಯಾಗಿದ್ದೆ. ಅವತ್ತು ಬೆಳಿಗ್ಗಿನಿಂದ ಸಂಜೆಯವರೆಗೂ ಎಡಬಿಡದೆ ಸುರಿಯುತ್ತಿರುವ ಜಿಟಿಜಿಟಿ ತುಂತುರು ಮಳೆ , ಭೂಮಿಯಾಳದಲ್ಲಿ ಹೂತುಹೋಗಿದ್ದ ಬೇಸಿಗೆಯ ಧಗೆಯ ನೆನಪುಗಳನ್ನು ತೋಯ್ದು ಮರೆಸುವಂತೆ ಸುರಿಯುವ ವರ್ಷದ ಈ ಕಾಲದ ಸಣ್ಣಗಿನ ಸತತ ಮಳೆ. ತೋಯ್ದು ಹೋದ ನೆನಪುಗಳು ಹರಿದು ಚರಂಡಿ ಸೇರಿ , ನದಿಯಲ್ಲಿ ಲೀನವಾಗಿ , ಧುಮ್ಮಿಕ್ಕಿ ಹರಿದು , ದಟ್ಟ ನೀಲ ಸಮುದ್ರದಲ್ಲಿ ಅಂತರ್ಧಾನವಾಗುವ೦ತೆ.
ಯುವ ವಿವಾಹಿತೆಯರಿಗಾಗಿ ಮೀಸಲಾಗಿರುವ ಯಾವುದೊ ಒಂದು ಪತ್ರಿಕೆಯೊಂದರ ಪರವಾಗಿ ಅವಳು ನಮ್ಮ ಕಂಪನಿಯ ಉಪಕರಣವೊಂದರ ಬಗ್ಗೆ ಲೇಖನ ಬರೆಯಲು ಒಂದಷ್ಟು ಮಾಹಿತಿ ಕಲೆ ಹಾಕಲು ಈ ಸಮಾರಂಭಕ್ಕೆ ಬಂದಿದ್ದಳು. ಅವತ್ತು ನಾನು ಅವಳಿಗೆ ಇಟಾಲಿಯನ್ ಡಿಸೈನರ್ ಒಬ್ಬ ವಿನ್ಯಾಸಗೊಳಿಸಿದ್ದ ಹೊಸ ರೆಫ್ರಿಜರೇಟರ್ , ಕಾಫಿ ಮಾಡುವ ಮಷಿನ್ , ಓವೆನ್ , ಮಿಕ್ಸರ್ ಇತ್ಯಾದಿಗಳನ್ನು ತೋರಿಸುತ್ತ , ಅವುಗಳ ವೈಶಿಷ್ಟ್ಯವನ್ನು ವಿವರಿಸಿದ್ದೆ .
"ಐಕ್ಯತೆ, ಎಲ್ಲದಕ್ಕಿಂತ ಮುಖ್ಯವಾದುದು ಐಕ್ಯತೆ. " ನಾನು ವಿವರಿಸಿದೆ " ಅತ್ಯಂತ ಸುಂದರವಾದ ವಿನ್ಯಾಸವುಳ್ಳದ್ದು ಸಹ ತನ್ನ ಸುತ್ತಲಿನ ವಾತಾವರಣದೊಟ್ಟಿಗೆ ಐಕ್ಯವಾಗಲಾರದೆ ಹೋದರೆ ಅದು ಉಳಿಯುವದಿಲ್ಲ. ವಿನ್ಯಾಸದ ಐಕ್ಯತೆ , ಬಣ್ಣದ ಐಕ್ಯತೆ , ಕಾರ್ಯದ ಐಕ್ಯತೆ. ಇವತ್ತಿನ ಅಡುಗೆ ಮನೆಗಳಿಗೆ ಎಲ್ಲಕ್ಕಿಂತ ಮಿಗಿಲಾಗಿ ಬೇಕಾಗಿರುವದು ಇದು. ಸ೦ಶೋಧನೆಗಳು ಹೇಳುವಂತೆ ಮಹಿಳೆಯೊಬ್ಬಳು ತನ್ನ ಜೀವಿತದ ಬಹುತೇಕ ಅವಧಿಯನ್ನು ಅಡುಗೆ ಮನೆಯಲ್ಲಿ ಕಳೆಯುತ್ತಾಳೆ. ಅಡುಗೆ ಮನೆ - ಅವಳ ಓದಿನ ಕೋಣೆ , ಅವಳ ವರಾಂಡ , ಅವಳ ಕಚೇರಿ. ಅದಕ್ಕಾಗಿಯೇ ಅವಳು ಅಡುಗೆ ಮನೆಯನ್ನು ಸುಂದರವಾಗಿಡುವಲ್ಲಿ ತನ್ನ ಸರ್ವ ಶಕ್ತಿಯನ್ನೂ ವ್ಯಯಿಸುತ್ತಾಳೆ. ಅದು ಅತ್ಯಂತ ವಿಶಾಲವಾಗಿ ಇರಬೇಕಿಲ್ಲ. ಆದರೆ ವಿಶಾಲವಾಗಿರಲಿ ಅಥವಾ ಚಿಕ್ಕದಾಗಿರಲಿ ಮೂಲಭೂತವಾಗಿ ಅಡುಗೆ ಮನೆಗೆ ಬೇಕಿರುವದು - ಐಕ್ಯತೆ. ಇದು ನಮ್ಮ ಹೊಸ ವಿನ್ಯಾಸದ ಹಿಂದಿನ ತತ್ವ , ಬೇಕಾದರೆ ಇದನ್ನೇ ನೋಡಿ . . . . . "
ಅವಳು ಗೋಣಾಡಿಸುತ್ತ ತನ್ನ ಸಣ್ಣ ಪುಸ್ತಕದಲ್ಲಿ ಏನೇನೋ ಬರೆದುಕೊಂಡಳು. ಅವಳಿಗೆ ಇವೆಲ್ಲವುಗಳ ಬಗ್ಗೆ ಅಷ್ಟೇನೂ ಆಸ್ಥೆಯಿಲ್ಲ ಎನ್ನುವದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು. ಹಾಗೆಂದು ನನಗೆ ಈ ಕೆಲಸದಲ್ಲಿ ಅತ್ಯ೦ತ ಆಸಕ್ತಿ ಇದೆ ಎಂದಲ್ಲ. ಒಟ್ಟಿನಲ್ಲಿ ಇಬ್ಬರೂ ಅವರವರ ಕೆಲಸ ಮಾಡುತ್ತಿದ್ದೆವು.
"ನಿನಗೆ ಅಡುಗೆ ಮನೆ ಬಗ್ಗೆ ತುಂಬಾ ಗೊತ್ತಿದೆ " ಅವಳು ನನ್ನ ವಿವರಣೆ ಮುಗಿದ ಮೇಲೆ ಹೇಳಿದಳು. ಅವಳು ಅಡುಗೆ ಮನೆ ಎನ್ನುವದನ್ನು ಕಿಚನ್ ಎನ್ನದೆ ಜಪಾನೀ ಭಾಷೆಯಲ್ಲಿ ಹೇಳಿದ್ದಳು.
"ನನ್ನ ಉದ್ಯೋಗವೇ ಅದು " ನಾನು ನಸುನಗುತ್ತ ಉತ್ತರಿಸಿದೆ " ಅದರ ಹೊರತಾಗಿ ನಾನೇನು ಅದ್ಭುತ ಬಾಣಸಿಗನಲ್ಲ. ನನಗೆ ಬೇಕಾದಷ್ಟನ್ನು ಬೇಯಿಸಿಕೊಳ್ಳುತ್ತೇನೆ ಅಷ್ಟೇ. "
"ಆದರೂ ಈ ಐಕ್ಯತೆ ಎನ್ನುವದೆಲ್ಲ ಅಡುಗೆ ಮನೆಗೆ ನಿಜವಾಗಿಯೂ ಬೇಕೇ ? " ಅವಳು
"ನಾವು ಕಿಚನ್ ಎಂದು ಇಂಗ್ಲಿಷ್ ನಲ್ಲಿಯೇ ಹೇಳಬಯಸುತ್ತೇವೆ " ನಾನು ಅವಳ ಜಪಾನೀ ಶಬ್ದವನ್ನು ಸರಿ ಪಡಿಸಲು ಯತ್ನಿಸಿದೆ. "ತಪ್ಪೇನಲ್ಲ , ಆದರೆ ಕಂಪನಿ ಕಿಚನ್ ಎಂದು ಇಂಗ್ಲಿಷ್ ನಲ್ಲೇ ಹೇಳಲು ಬಯಸುತ್ತದೆ"
"ಆಹ್ ಕ್ಷಮಿಸು , ಆದರೆ ನಿಜವಾಗಿಯೂ ಐಕ್ಯತೆ ಎನ್ನುವದೆಲ್ಲ ಅಡುಗೆ ಮನೆಗೆ ನಿಜವಾಗಿಯೂ ಬೇಕೇ ?"
"ಜಗತ್ತು ಅಷ್ಟು ವ್ಯಾವಹಾರಿಕವಾಗಿದೆಯೇ ?"
ನಾನು ಒಂದು ಸಿಗರೇಟನ್ನು ಹೊತ್ತಿಸಿದೆ.
"ಗೊತ್ತಿಲ್ಲ, ಆದರೆ ಆ ಶಬ್ದ ಆಯಾಚಿತವಾಗಿ ಹೊರಕ್ಕೆ ಬಂದಿತು." ಉತ್ತರಿಸಿದೆ " ಆದರೆ ಇದೊಂದು ಶಬ್ದ ಬಹಳಷ್ಟು ವಿವರಣೆಗಳನ್ನು ಕೊಡುತ್ತದೆ. ನೀನು ಅದರೊಟ್ಟಿಗೆ ಆಟವಾಡಬಹುದು , ಅಚ್ಚುಕಟ್ಟಾದ ಭಾವನೆಗಳನ್ನು ಹೊರ ಹೊಮ್ಮಿಸ ಬಹುದು. ಉದಾಹರೆಣೆಗೆ ಅತ್ಯಗತ್ಯವಾದ ವ್ಯಾವಹಾರಿಕತೆ , ವ್ಯಾವಹಾರಿಕ ಅಸ್ತಿತ್ವ. ನೀನು ಈ ತೆರನಾಗಿ ನೋಡಿದರೆ ಸಾಕಷ್ಟು ಸಂಕೀರ್ಣ ಸಮಸ್ಯೆಗಳನ್ನು ಸುಲಭವಾಗಿ ತಪ್ಪಿಸಬಹುದು. "
"ಕುತೂಹಲಕರವಾಗಿದೆ ನಿನ್ನ ಅಭಿಪ್ರಾಯ "
"ಹಾಗೇನು ಇಲ್ಲ . ಎಲ್ಲರಂತೆ ಇದು ಕೂಡ. ಇರಲಿ ಒಂದು ಹೊಸ ಶಂಪೈನ್ ತರಿಸಿದ್ದೇವೆ ತೆಗೆದುಕೊಳ್ಳುತ್ತಿಯೇನು ?"
"ಖಂಡಿತವಾಗಿ "
ಶಂಪೈನ್ ಹೀರುತ್ತಾ ಮಾತನಾಡುವಾಗ ನಮ್ಮಿಬ್ಬರಿಗೆ ಪರಸ್ಪರ ಪರಿಚಿತರು ಸಾಕಷ್ಟು ಜನ ಇರುವದು ತಿಳಿಯಿತು. ನಮ್ಮಿಬ್ಬರ ಕಾರ್ಯಕ್ಷೇತ್ರ ಅಂತಹ ದೊಡ್ಡದೇನೂ ಅಲ್ಲ ಹೀಗಾಗಲಿ ದಳಗಳನ್ನು ಎಸೆದರೆ ಒಂದೆರಡಾದರೂ ಯಾರಾದರೂ ಪರಿಚಿತರಿಗೆ ತಾಕುವದು ಖಚಿತ. ಅಲ್ಲದೇ ಅವಳು ಮತ್ತು ನನ್ನ ಸಹೋದರಿಯೊಬ್ಬಳು ಒಂದೇ ಕಾಲೇಜಿನಲ್ಲಿ ಓದಿದ್ದರು. ಹೀಗಾಗಿ ನಮ್ಮ ಮಾತುಕತೆ ಆರಾಮಾಗಿ ಸಾಗಿತು.
ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಾನು ಅವಳನ್ನು ಹೋಟೆಲಿನ ಹಜಾರದಲ್ಲಿ ಮಾತನಾಡಲು ಆಹ್ವಾನಿಸಿದೆ . ಅಲ್ಲಿ ಇಬ್ಬರೂ ಕುಳಿತು ಮಾತುಕತೆ ಮುಂದುವರೆಸಿದೆವು. ಹೋಟೆಲಿನ ಹೊರಗೆ ನಿಶ್ಯಬ್ದವಾಗಿ ಮಳೆ ಸುರಿಯುತ್ತಿತ್ತು. ನಗರದ ಬೀದಿದೀಪಗಳು ಮಂಜಿನ ಮೂಲಕ ಅಸ್ಪಷ್ಟ ಸಂದೇಶಗಳನ್ನು ಸಾಗಿಸುತ್ತಿದ್ದವು. ಬಹುತೇಕ ನಿರ್ಜನವಾಗಿದ್ದ ಹೋಟೆಲಿನ ಹಜಾರದಲ್ಲಿ ಆರ್ದ್ರವಾದ ಮೌನವೊಂದು ಹರಡಿಕೊಂಡಿತ್ತು.ನಾವಿಬ್ಬರು ಪಾನೀಯವನ್ನು ಆರ್ಡರ್ ಮಾಡಿದೆವು. ಪಾನೀಯಗಳನ್ನು ಹೀರುತ್ತ ಸಾವಕಾಶವಾಗಿ ನಾವಿಬ್ಬರು ಮೊತ್ತ ಮೊದಲ ಸಲ ಭೇಟಿಯಾದ ಯುವಕ, ಯುವತಿಯರಿಬ್ಬರು ಪರಸ್ಪರರನ್ನು ಸ್ವಲ್ಪ ಸ್ವಲ್ಪವೇ ಇಷ್ಟಪಡುತ್ತ ಮಾತುಕತೆ ನಡೆಸುವಾಗ ವಿನಿಮಯ ಮಾಡಿಕೊಳ್ಳುವ ಮಾತುಗಳನ್ನು ಆಡಿದೆವು. ನಾವು ನಮ್ಮ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡೆವು , ಸಂಗೀತ , ಕ್ರೀಡೆ ಮತ್ತು ದಿನನಿತ್ಯದ ಅಭಿರುಚಿಯ ಬಗ್ಗೆ ಹರಟಿದೆವು.
ನಂತರ ನಾನು ಅವಳಿಗೆ ಆನೆಯ ಬಗ್ಗೆ ಹೇಳಿದೆ. ಯಾವ ಕಾರಣಕ್ಕೆ ಆನೆಯ ವಿಷಯ ಮಾತಿನಲ್ಲಿ ಬಂದಿತು ಎನ್ನುವದು ನನಗೆ ನೆನಪಿಲ್ಲ. ಬಹುಶ: ನಾವು ಪ್ರಾಣಿಗಳಿಗೆ ಸಂಬಂಧಿಸಿದ ಯಾವುದೋ ವಿಷಯದ ಬಗ್ಗೆ ಮಾತನಾಡುತ್ತಿದ್ದೆವು ಅನಿಸುತ್ತದೆ ಅಥವಾ ನಾನು ನನಗರಿವಿಲ್ಲದಂತೆ ಆನೆ ಅದೃಶ್ಯವಾಗಿರುವದರ ಬಗ್ಗೆ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳಲು ಒಬ್ಬ ಕೇಳುಗ , ಅತ್ಯತ್ತಮ ಕೇಳುಗನಿಗೋಸ್ಕರ ಕಾಯುತ್ತಿದ್ದೇನೋ ?
ಅಥವಾ ಹೊಟ್ಟೆಯೊಳಗಿಳಿದ ಮದ್ಯದ ಅಮಲಿರಬಹುದು.
ನಾನು ವಿಷಯಾಂತರ ಮಾಡಲು ಪ್ರಯತ್ನಿಸಿದೆ. ಆದರೆ ಈವಿಷಯವನ್ನು ತೆಗೆದ ತಕ್ಷಣ ಅವಳು ಅದೆಷ್ಟು ಆಸಕ್ತಿಯಿಂದ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದಳೆಂದರೆ ಒಂದು ಕ್ಷಣ ನನಗೆ ನಾನು ಇನ್ನಷ್ಟು ಸೂಕ್ಷ್ಮವಾಗಿ ಆನೆಯನ್ನು ಗಮನಿಸಬೇಕಿತ್ತು ಎಂದೆನಿಸಿತು. "ಯಾವ ತೆರನಾದ ಆನೆಯದು ? ಅದು ಏನನ್ನು ತಿನ್ನುತ್ತಿತ್ತು ? ಅದು ಹೇಗೆ ಅದೃಶ್ಯವಾಗಿರಬಹುದು ? ಇದು ಸಮಾಜಕ್ಕೆ ಅಪಾಯಕಾರಿಯೇ ? ಇತ್ಯಾದಿ ಪ್ರಶ್ನೆಗಳು.
ನಾನು ಅವಳಿಗೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ವರದಿಗಳ ಬಗ್ಗೆ ಹೇಳಿದೆ . ಆದರೆ ನಾನು ಹೆಚ್ಚಿನ ವಿಷಯ ಹೇಳದೆ ನನಗೆ ನಾನೇ ಕಡಿವಾಣ ಹಾಕಿಕೊಳ್ಳುತ್ತಿರುವದು ಅವಳಿಗೆ ಅರಿವಾಯಿತು. ಸುಳ್ಳು ಹೇಳುವದರಲ್ಲಿ ನಾನು ಅಂತಹ ನಿಸ್ಸಿಮನಲ್ಲ.
ನನ್ನ ನಡುವಳಿಕೆಯಲ್ಲಿನ ಬದಲಾವಣೆಯನ್ನು ಗಮನಿಸದಂತೆ ಅವಳು ಎರಡನೇ ಗ್ಲಾಸನ್ನು ತುಟಿಗಿಡುತ್ತ ಪ್ರಶ್ನಿಸಿದಳು "ಆನೆ ಅದೃಶ್ಯವಾದಾಗ ನಿನಗೆ ಆಘಾತವಾಗಲಿಲ್ಲವೇ ? ಯಾರಾದರೂ ಸುಲಭವಾಗಿ ಊಹಿಸಬಹುದಾದ ಸಾಮಾನ್ಯ ಘಟನೆಯಲ್ಲ ಅದು "
"ಇಲ್ಲ ಬಹುಶ: ಹಾಗೇನಿಲ್ಲ. " ನಾನು ಮೇಜಿನ ಮೇಲಿದ್ದ ಪ್ಲೇಟಿನಿಂದ ಹುರಿಗಡಲೆಯನ್ನು ತೆಗೆದುಕೊಂಡು ಒಂದೆರಡನ್ನು ಬಾಯಿಗೆ ಎಸೆಯುತ್ತಾ ಉತ್ತರಿಸಿದೆ. ಹೋಟೆಲಿನ ವೈಟರ್ ಆಶ್ ಟ್ರೈ ಬದಲಾಯಿಸಿ ಬೇರೊಂದನ್ನು ತಂದಿಟ್ಟಿದ್ದ.
ಅವಳು ನಾನು ಏನು ಹೇಳುವೆನೆಂದು ನಿರೀಕ್ಷಿಸತೊಡಗಿದಳು. ನಾನು ಇನ್ನೊಂದು ಸಿಗರೇಟನ್ನು ಹೊರತೆಗೆದು ಹಚ್ಚಿದೆ. ನಾನು ಧೂಮಪಾನವನ್ನು ನಿಲ್ಲಿಸಿದ್ದೆ. ಆದರೆ ಆನೆ ಅದೃಶ್ಯವಾದಾಗಲಿನಿಂದ ಮತ್ತೆ ಈ ಚಟ ಶುರುವಾಗಿತ್ತು.
"ಯಾಕೆ , ಯಾಕಿಲ್ಲ ? ನೀನು ಅದನ್ನು ಊಹಿಸಿದ್ದೇ ಎಂದೇ ?" ಅವಳು ಕೇಳಿದಳು.
"ಹಾಗಲ್ಲ , ನಾನು ಖಚಿತವಾಗಿ ಊಹಿಸಿದ್ದೆ ಎಂದಲ್ಲ. " ನಾನು ನಸು ನಗುತ್ತ ನುಡಿದೆ. " ಆನೆಯೊಂದು ಇದ್ದಕ್ಕಿದ್ದ ಹಾಗೆ ಅದೃಶ್ಯವಾದ ಯಾವುದೇ ಘಟನೆ ಇಲ್ಲಿಯವರೆಗೆ ನಡೆದಿಲ್ಲ ಅಥವಾ ಇಂತಹ ಘಟನೆ ನಡೆಯಲು ಯಾವುದೇ ಕಾರಣವೂ ಇಲ್ಲ. ತಾರ್ಕಿಕವಾಗಿ ನೋಡಿದರೆ ಇದು ಅರ್ಥಹೀನ. "
"ಆದರೆ ನಿನ್ನ ಉತ್ತರ ವಿಚಿತ್ರವಾಗಿತ್ತು. ಆನೆಯೊಂದು ಮಾಯವಾಗುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ನಾನು ಹೇಳಿದಾಗ ನೀನು ಇಲ್ಲ ಬಹುಶ: ಹಾಗೇನಿಲ್ಲ ಎಂದು ಉತ್ತರಿಸಿದೆ. ಬೇರೆಯವರಾಗಿದ್ದರೆ "ಹೌದು ನೀನು ಹೇಳುವದು ನಿಜ" ಎಂದೋ ಇಲ್ಲ "ವಿಚಿತ್ರ ಘಟನೆ ಎಂದೋ ಉತ್ತರಿಸುತ್ತಿದ್ದರು. ಗೊತ್ತಾಯಿತೇ ನಾನು ಹೇಳುತ್ತಿರುವದು ಏನೆಂದು."
"ನನಗೆ ಇದನ್ನು ಅರ್ಥೈಸಿಕೊಳ್ಳುವದು ಕಷ್ಟವಾಗುತ್ತಿದೆ. " ಅವಳು ಮೃದುವಾಗಿ ನುಡಿದಳು . "ನಮ್ಮಿಬ್ಬರ ನಡುವೆ ಕೆಲವು ಕ್ಷಣಗಳ ಹಿಂದಿನವರೆಗೂ ಸಹಜವಾದ ಮಾತುಕತೆ ನಡೆಯುತ್ತಿತ್ತು - ಆನೆಯ ವಿಷಯ ಬರುವವರೆಗೂ . ಅದಾದ ನಂತರ ಅಸಹಜವಾದುದು ಏನೋ ನಡೆದಂತೆ. ನನಗೆ ಈಗ ನೀನು ಅರ್ಥವಾಗುತ್ತಿಲ್ಲ. ಏನೋ ಸರಿಯಿಲ್ಲ. ಇದು ಆನೆಯೇ ? ಅಥವಾ ನನ್ನ ಕಿವಿಗಳೇ ನನಗೆ ಮೋಸ ಮಾಡುತ್ತಿವೆಯೇ ?"
"ನಿನ್ನ ಕಿವಿಗಳು ಮೋಸ ಮಾಡುತ್ತಿಲ್ಲ " ನಾನು ನುಡಿದೆ.
"ಹಾಗಾದರೆ ಇದು ನಿನ್ನದೇ ಸಮಸ್ಯೆ "
ನಾನು ಗ್ಲಾಸಿನೊಳಗೆ ಬೆರಳನ್ನು ತುಸುವೇ ಅದ್ದಿ , ಮಂಜುಗಡ್ಡೆಯನ್ನು ಅಲುಗಾಡಿಸಿದೆ. ವಿಸ್ಕಿಯೊಳಗಿನ ಮಂಜುಗಡ್ಡೆಯ ಅಲುಗಾಟದ ಶಬ್ದ ನನಗೆ ಯಾವಾಗಲೂ ಇಷ್ಟವಾಗುತ್ತಿತ್ತು.
"ನಾನು ಅದನ್ನು 'ಸಮಸ್ಯೆ' ಎಂದೇನೂ ಹೇಳಲು ಬಯಸುವದಿಲ್ಲ ಅದೇನೋ ಅಂಥ ದೊಡ್ಡ ವಿಷಯವಲ್ಲ. ಹೇಳಬೇಕೆಂದರೆ ನಾನು ಏನನ್ನೂ ಮುಚ್ಚಿಡುತ್ತಿಲ್ಲ. ನಾನು ಸ್ಪಷ್ಟವಾಗಿ ಈ ವಿಷಯದ ಕುರಿತು ಮಾತನಾಡಬಲ್ಲೆನೇ ಎಂದು ನನಗೆ ನನ್ನ ಬಗ್ಗೆ ಸಂದೇಹವಿದೆ. ಹಾಗಾಗಿಯೇ ನಾನು ಹಿಂಜರಿಯುತ್ತಿರುವದು. ಆದರೆ ಹೌದು ನೀನು ಹೇಳುವ ಹಾಗೆ ಇದೊಂದು ವಿಚಿತ್ರ ವಿಷಯ "
ಇನ್ನೂ ಮುಚ್ಚಿಡುವದು ಸರಿಯಲ್ಲ. ನಾನು ಅವಳಿಗೆ ಎಲ್ಲವನ್ನು ಹೇಳಬೇಕೆಂದು ನಿರ್ಧರಿಸಿದೆ. ಒಂದೇ ಗುಟುಕಿಗೆ ಗ್ಲಾಸಿನಲ್ಲಿ ಇದ್ದುದನ್ನು ಖಾಲಿ ಮಾಡಿದೆ.
"ವಿಷಯ ಏನೆಂದರೆ ಆನೆ ಅದೃಶ್ಯವಾಗುವದಕ್ಕೆ ಮೊದಲು ಅದನ್ನು ಕೊನೆಯ ಸಲ ನೋಡಿದ್ದು ನಾನು. ಮೇ ಹದಿನೇಳರ ಸಂಜೆ ಏಳು ಘಂಟೆ ನಂತರ ನಾನು ಅದನ್ನು ನೋಡಿದ್ದೆ ಮತ್ತು ಹದಿನೆಂಟರ ಮಧ್ಯಾಹ್ನ ಆನೆ ಅದೃಶ್ಯವಾಗಿದ್ದನ್ನು ಎಲ್ಲರೂ ಗಮನಿಸಿದರು. ಇವೆರಡೂ ಸಮಯದ ನಡುವೆ ಆನೆಯನ್ನು ಯಾರೂ ನೋಡಿರಲಿಲ್ಲ ಯಾಕೆಂದರೆ ಆನೆ ಲಾಯಕ್ಕೆ ಆರು ಘ೦ಟೆಗೆ ಸರಿಯಾಗಿ ಬಾಗಿಲು ಹಾಕುತ್ತಾರೆ."
"ನನಗೆ ಅರ್ಥವಾಗುತ್ತಿಲ್ಲ . ಆರು ಘಂಟೆಗೆ ಬಾಗಿಲು ಹಾಕುವುದಾದರೆ ನೀನು ಏಳು ಘಂಟೆ ನಂತರ ಹೇಗೆ ನೋಡಲು ಸಾಧ್ಯ ?"
"ಆನೆ ಲಾಯದ ಹಿಂದೆ ಒಂದು ಕಡಿದಾದ ಬಂಡೆಯಿದೆ. ಒಂದು ಕಡಿದಾದ ಗುಡ್ಡ , ಸರಿಯಾದ ರಸ್ತೆ ಇಲ್ಲದ ಖಾಸಗಿ ಆಸ್ತಿಯದು. ಆ ಗುಡ್ಡದ ಹಿಂದೆ ಒಂದು ಜಾಗವಿದೆ. ಅಲ್ಲಿಂದ ನಿಂತು ನೋಡಿದರೆ ಆನೆ ಲಾಯ ಸರಿಯಾಗಿ ಕಾಣುತ್ತದೆ. ಬಹುಶ: ಇದರ ಬಗ್ಗೆ ತಿಳಿದಿರುವದು ನನಗೆ ಮಾತ್ರ.
ನಾನು ಅಕಸ್ಮಾತಾಗಿ ಈ ಜಾಗವನ್ನು ಹುಡುಕಿದ್ದೆ. ಒಂದು ಭಾನುವಾರ ಮಧ್ಯಾನ್ಹ ಗುಡ್ಡದಲ್ಲಿ ಅಡ್ಡಾಡುತ್ತ ನಾನು ದಿಕ್ಕು ತಪ್ಪಿ ಈ ಕಡಿದಾದ ಜಾಗಕ್ಕೆ ಬಂದಿದ್ದೆ. ಒಬ್ಬ ಮನುಷ್ಯನಿಗೆ ಮಾತ್ರ ಸಾಕಾಗುವಷ್ಟು ಸಪಾಟಾದ ಜಾಗ . ಅಲ್ಲಿ ನಿಂತು ನಾನು ಗಿಡಗಂಟಿಗಳ ಸಂದಿಯಿಂದ ನೋಡಿದಾಗ ನನಗೆ ಆನೆ ಲಾಯದ ಮೇಲ್ಛಾವಣಿ ಕಾಣಿಸಿತ್ತು. ಮೇಲ್ಛಾವಣಿಗೆ ಸ್ವಲ್ಪ ಕೆಳಗೆ ಒಂದು ಗಾಳಿಯಾಡುವ ಖಾಲಿ ಜಾಗದ ಮೂಲಕ ನೋಡಿದರೆ ಲಾಯದ ಒಳಗಿನ ದೃಶ್ಯವೆಲ್ಲ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅದಾದ ಮೇಲೆ ನಾನು ಆಗಾಗ ಆ ಸ್ಥಳಕ್ಕೆ ಹೋಗಿ ಆನೆಯನ್ನು ನೋಡುವ ಹವ್ಯಾಸವನ್ನು ಬೆಳೆಸಿಕೊಂಡೆ. ಯಾರಾದರೂ ನಾನೇಕೆ ಈ ಕೆಲಸ ಮಾಡುತ್ತಿದ್ದೇನೆ ಎಂದು ಕೇಳಿದರೆ ನನ್ನಲ್ಲಿ ಸ್ಪಷ್ಟವಾದ ಉತ್ತರವಿರಲಿಲ್ಲ. ನಾನು ಆನೆಯ ಖಾಸಗಿ ಕ್ಷಣಗಳಲ್ಲಿ ಅದನ್ನು ನೋಡುವದನ್ನು ಆನಂದಿಸುತ್ತಿದ್ದೆ. ಅಷ್ಟೇ. ಕತ್ತಲಾದ ಮೇಲೆ ನನಗೆ ಆನೆ ಕಾಣಿಸುತ್ತಿರಲಿಲ್ಲ ಆದರೆ ಮುಸ್ಸಂಜೆ ಹೊತ್ತಿಗೆ ಆನೆಯ ಜೊತೆಗಿರುವಾಗ ಮಾವುತ ದೀಪವನ್ನು ಹಾಕುತ್ತಿದ್ದ. ಹೀಗಾಗಿ ಅಲ್ಲಿ ನಡೆಯುತ್ತಿರುವದು ನನಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆಗೆಲ್ಲ ನನಗೆ ಹೊಳೆದಿದ್ದು ಏನೆಂದರೆ ಆನೆ ಮತ್ತು ಮಾವುತನ ನಡುವಿನ ಆತ್ಮೀಯತೆ. ಜನರಿರುವಾಗ ಅವರು ಯಾವತ್ತೂ ಈ ಆತ್ಮೀಯತೆಯನ್ನು ಪ್ರದರ್ಶಿಸುತ್ತಿರಲಿಲ್ಲ. ಅವರಿಬ್ಬರ ನಡುವಿನ ಅವಿನಾಭಾವ ಸಂಬಂಧ ಅವರ ಪ್ರತಿ ನಡೆಯಲ್ಲೂ ಗೋಚರಿಸುತ್ತಿತ್ತು. ಒಂದು ರೀತಿ , ಹಗಲಿನಲ್ಲಿ ಇಬ್ಬರೂ ತಮ್ಮ ಆತ್ಮೀಯ ಭಾವವನ್ನು ದೂರದಲ್ಲಿ ಎಲ್ಲೋ ಅಡಗಿಸಿಟ್ಟು , ಜನರು ಹೊರಟ ಮೇಲೆ , ನಿರ್ಜನ ಕತ್ತಲೆಯಲ್ಲಿ ಮತ್ತೆ ಅದನ್ನು ಹೊರಕ್ಕೆ ತೆಗೆದು ಪರಸ್ಪರ ಹಂಚಿಕೊಂಡಂತೆ. ಹಾಗೆಂದು ಅವರೇನು ವಿಭಿನ್ನವಾದ ಭಾವಾಭಿನಯ ಮಾಡುತ್ತಿದ್ದರು ಎಂದಲ್ಲ. ಆನೆ ಎಂದಿನಂತೆ ಶೂನ್ಯವನ್ನು ದಿಟ್ಟಿಸುತ್ತ ನಿಂತಿರುತ್ತಿತ್ತು ಮತ್ತು ಮಾವುತ ಅವನ ಕೆಲಸವನ್ನು ಮಾಡುತ್ತಿದ್ದ - ಆನೆಯ ಮೈಯನ್ನು ಉಜ್ಜುವದು , ಅದಕ್ಕೆ ತಿನ್ನಿಸುವದು , ಲದ್ದಿಯನ್ನು ತೆಗೆಯುವದು ಇತ್ಯಾದಿ . ಆದರೆ ಇವೆಲ್ಲವುಗಳಲ್ಲಿ ಅವರ ನಡುವಿನ ಅಗಾಧ ತಾದ್ಯಾತ್ಮತೆಯನ್ನು ನೋಡುಗರು ಗಮನಿಸಬಹುದಿತ್ತು. ಮಾವುತ ನೆಲ ಗುಡಿಸುವಾಗ ಆನೆ ಸೊಂಡಿಲಿನಿಂದ ಅವನ ಬೆನ್ನಿನ ಮೇಲೆ ಮೃದುವಾಗಿ ತಟ್ಟುತ್ತಿತ್ತು. ನನಗೆ ಇದು ಅತ್ಯಂತ ಇಷ್ಟವಾದ ದೃಶ್ಯ.
"ಹ್ಮ್ . ಹೌದು ಅನಿಸುತ್ತದೆ. ನನಗೆ ಆನೆಗಳೆಂದರೆ ಇಷ್ಟ. ಯಾಕೆ ಎಂದು ಗೊತ್ತಿಲ್ಲ. ಅವುಗಳಲ್ಲಿನ ಯಾವೂದೋ ಒಂದು ಭಾವ ನನ್ನಲ್ಲಿ ಆಕರ್ಷಣೆಯನ್ನುಂಟು ಮಾಡುತ್ತದೆ. "
"ಅಂದರೆ ಅವತ್ತು ಸಹ ಹೊತ್ತು ಕಳೆದ ಮೇಲೆ ನೀನು ಆ ಜಾಗದಲ್ಲಿ ನಿಂತು ಅವರನ್ನು ನೋಡುತ್ತಿದ್ದೆ. ಮೇ . . ಯಾವ ದಿನ ?"
"ಹದಿನೇಳು. ಮೇ ಹದಿನೇಳರ ಸಂಜೆ ಏಳು ಘಂಟೆ. ತುಸು ದೀರ್ಘವೇ ಅನ್ನಬಹುದಾದ ದಿನಗಳವು. ಆಕಾಶದಲ್ಲಿ ನ್ಯೂರ್ಯಾ ಮುಳುಗುವ ತಿಳಿಗೆಂಪು ಬಣ್ಣ. ಆದರೆ ಲಾಯದೊಳಗೆ ದೀಪವಿತ್ತು. "
"ಆನೆ ಮತ್ತು ಮಾವುತರ ನಡುವೆ ಏನಾದರೂ ಅಸಹಜತೆ ಇತ್ತೇ ?"
"ಇತ್ತು. ಇರಲಿಲ್ಲ. ನಿಖರವಾಗಿ ಹೇಳಲಾರೆ. ಅವರು ನನ್ನ ಮುಂದೆ ನಿಂತಿದ್ದರು ಎಂದೇನಲ್ಲ. ಹಾಗಾಗಿ ನಾನು ಸಂಭಾವ್ಯ ಸಾಕ್ಷಿಯಾಗಲಾರೆ."
ನಾನು ಒಂದು ಗುಟುಕು ವಿಸ್ಕಿ ಹೀರಿದೆ. ಕಿಟಕಿಯ ಹೊರಗೆ ಮಳೆ ಸುರಿಯುತ್ತಿತ್ತು , ಮೊದಲಿನ ಹಾಗೆ , ಹೆಚ್ಚಲ್ಲ ಕಡಿಮೆಯೂ ಅಲ್ಲ. ಪೃಕೃತಿಯಲ್ಲಿ ಎಂದಿಗೂ ಬದಲಾಗದ ಸ್ಥಾಯಿಯ ಹಾಗೆ .
"ಏನೂ ಆಗಿರಲಿಲ್ಲ, ನಿಜವಾಗಿಯೂ. ಆನೆ ಮತ್ತು ಮಾವುತ ಯಾವತ್ತಿನಂತೆ ಅವರವರ ಕೆಲಸದಲ್ಲಿ ತೊಡಗಿದ್ದರು. ಕಸ ಗುಡಿಸುವದು , ತಿನ್ನುವದು , ಒಬ್ಬರನ್ನೊಬ್ಬರು ಸಲುಗೆಯಿಂದ ತಡವಿಕೊಳ್ಳುವದು . ಅಂತಹ ಬದಲಾವಣೆಯೇನು ಇರಲಿಲ್ಲ. ಆದರೆ ಅವರಿಬ್ಬರೂ ಪರಸ್ಪರನ್ನು ನೋಡುತ್ತಿದ್ದ ರೀತಿ. ಅವರಿಬ್ಬರ ನಡುವಿನ ಯಾವುದೋ ಒಂದು ಸಮತೋಲನ. "
"ಸಮತೋಲನ ?"
"ಗಾತ್ರ. ಅವರಿಬ್ಬರ ದೇಹದ ಗಾತ್ರ. ಆ ಸಮತೋಲನ ಸ್ವಲ್ಪ ಬದಲಾದ ಹಾಗೆ. ಅದು ಹೇಗೋ ಅವರಿಬ್ಬರ ನಡುವಿನ ವ್ಯತ್ಯಾಸ ಸಂಕುಚಿತವಾಗಿದೆ ಎಂದು ನನಗೆ ಅನಿಸತೊಡಗಿತು. "
ಅವಳು ಗ್ಲಾಸನ್ನು ದಿಟ್ಟಿಸುತ್ತಿದ್ದಳು. ಮಂಜುಗಡ್ಡೆ ನಿಧಾನವಾಗಿ ಕರಗುತ್ತಿತ್ತು. ನೀರು ಸಾವಕಾಶವಾಗಿ ಪೇಯದಲ್ಲಿ ಮಿಳಿತವಾಗುತ್ತ , ಸಮುದ್ರದಾಳದ ಹರಿವಿನ ಹಾಗೆ ಕಾಣಿಸುತ್ತಿತ್ತು.
"ಅಂದರೆ ಆನೆ ಸಣ್ಣಗಾಗಿತ್ತು ಎಂದೇ ?"
"ಅಥವಾ ಮಾವುತ ದೊಡ್ಡದಾಗಿದ್ದ. ಅಥವಾ ಎರಡೂ ಕ್ರಿಯೆಗಳು ಸಮಾನಾಂತರವಾಗಿ ಘಟಿಸುತ್ತಿದ್ದವು "
"ಮತ್ತು ನೀನು ಈವಿಷಯವನ್ನು ಪೊಲೀಸರಿಗೆ ತಿಳಿಸಲಿಲ್ಲ ?"
"ಇಲ್ಲ ಖಂಡಿತವಾಗಿಯೂ ಇಲ್ಲ. " ನಾನು ಹೇಳಿದೆ "ಅವರು ನನ್ನನ್ನು ನಂಬುತ್ತಿರಲಿಲ್ಲ. ಅಲ್ಲದೆ ಆ ಸಮಯದಲ್ಲಿ ನಾನು ಕಡಿದಾದ ಜಾಗದಿಂದ ಆನೆಯನ್ನು ನೋಡುತ್ತಿದ್ದೆ ಎಂದು ಹೇಳಿದರೆ ನಾನೇ ಘಟನೆಯ ಮೊದಲ ಶಂಕಿತನಾಗುತ್ತಿದ್ದೆ. "
"ಆದರೂ ಅವರಿಬ್ಬರ ನಡುವಿನ ಸಮತೋಲನ ತಪ್ಪಿದೆ ಎಂದು ನಿನಗೆ ಖಚಿತವಾಗಿತ್ತೇ ?"
"ಬಹುಶ: . ನಾನು ಬಹುಶ: ಎಂದಷ್ಟೇ ಹೇಳಬಹುದು . ನನ್ನ ಬಳಿ ಯಾವುದೇ ಪುರಾವೆಗಳಿಲ್ಲ. ಅಲ್ಲದೆ ನಾನು ಅವರನ್ನು ಸಣ್ಣ ಗಾಳಿಯಾಡುವ ತೂತಿನ ಮೂಲಕ ದಿಟ್ಟಿಸುತ್ತಿದ್ದೆ. ನಾನು ಅವರನ್ನು ಆ ರೀತಿ ಸಾಕಷ್ಟು ಸಲ ಹಿಂದೆಲ್ಲ ನೋಡಿದ್ದಿದೆ. ಹಾಗಾಗಿ ಅವರ ನಡುವಿನ ಗಾತ್ರದ ವ್ಯತ್ಯಾಸದ ಬಗ್ಗೆ ನಾನು ತಪ್ಪು ಮಾಡಬಹುದು ಎಂದೆನಿಸುವದಿಲ್ಲ.
ಮತ್ತೆ ನೋಡಿದ ಹಾಗೆ ನನಗೆ ಗಾತ್ರವನ್ನು ಕಳೆದುಕೊಂಡು ಈ ಆನೆಯ ಹಾವಭಾವಗಳು ಹಳೆಯ ಆನೆಯದೇ ಆಗಿರುವದು ಗಮನಕ್ಕೆ ಬಂದಿತು.
ಅದು ನೆಲದ ಮೇಲೆ ಮುಂಗಾಲನ್ನು ಚಾಚಿ ಸಂತೋಷದಿಂದ ಮಲಗಿಕೊಂಡಿತ್ತು. ಮಾವುತನ ಬೆನ್ನಿನ ಮೇಲೆ ಸ್ವಲ್ಪ ಸಣ್ಣದಾಗಿದ್ದ ತನ್ನ ಸೊಂಡಿಲಿನಿಂದ ನೇವರಿಸುತ್ತಿತ್ತು.
ಅದೊಂದು ಅದ್ಭುತವಾದ ರಹಸ್ಯ ದೃಶ್ಯ. ಅದನ್ನು ನೋಡುತ್ತಿದ್ದ ಹಾಗೆ ನನಗೆ , ಹೊರಗಿನ ಪ್ರಪ೦ಚದ ಅರಿವಿಗೆ ನಿಲುಕದ ಕಾಲವೊಂದು ಲಾಯದಲ್ಲಿ ಮಾತ್ರ ಪ್ರವಹಿಸುತ್ತಿರುವ ಹಾಗೆ ಭಾಸವಾಯಿತು ಮತ್ತು ಆನೆ ಹಾಗೂ ಮಾವುತ ಅವರನ್ನು ಆವರಿಸುತ್ತಿದ್ದ ಕಾಲದ ಪ್ರವಾಹದಲ್ಲಿ ತಮ್ಮನ್ನು ತಾವು ಸಂತೋಷದಿಂದ ಒಪ್ಪಿಸಿಕೊಳ್ಳುತ್ತಿದ್ದರು.
ಒಟ್ಟಾರೆಯಾಗಿ ನಾನು ಸುಮಾರು ಮೂವತ್ತು ನಿಮಿಷಗಳ ಕಾಲ ಈ ದೃಶ್ಯವನ್ನು ನೋಡುತ್ತ ನಿಂತಿದ್ದಿರಬಹುದು. ಏಳೂವರೆ ಹಾಗೆ ದೀಪಗಳು ಆರಿದವು. ಎಂದಿಗಿಂತ ಮೊದಲೇ. ಆ ಕ್ಷಣದಿಂದ ದಟ್ಟ ಕತ್ತಲು ಎಲ್ಲವನ್ನೂ ಆವರಿಸಿತ್ತು. ಮತ್ತೆ ಬೆಳಕು ಕಾಣಿಸಬಹುದೇನೋ ಎಂದು ನಾನು ಆ ಜಾಗದಲ್ಲೇ ನಿಂತು ಕಾದೆ. ಆದರೆ ಬೆಳಕು ಮತ್ತೆ ಮರಳಲಿಲ್ಲ. ನಾನು ಆನೆಯನ್ನು ನೋಡಿದ್ದು ಅದೇ ಕೊನೆಯ ಸಲ.
"ನನಗೆ ಗೊತ್ತಿಲ್ಲ. " ನಾನು ನುಡಿದೆ . "ನಾನು ಹೇಳಲು ಬಯಸುತ್ತಿರುವದು ನಾನು ಅವತ್ತು ನೋಡಿದ ದೃಶ್ಯವನ್ನು ಅಷ್ಟೇ. ಅದರ ನಂತರ ಏನಾಯಿತು ಎಂದು ನಾನು ಯಾವತ್ತೂ ಯೋಚಿಸಿಲ್ಲ. ಅವತ್ತಿನ ದೃಶ್ಯಾವಳಿಗಳು ಅದೆಷ್ಟು ಗಾಢವಾಗಿವೆ ಎಂದರೆ ನನಗೆ ಅವುಗಳನ್ನು ದಾಟಿ ಮುಂದಕ್ಕೆ ಹೋಗಿ ವಿಚಾರ ಮಾಡುವದು ಸಾಧ್ಯವಿಲ್ಲ "
ಆನೆ ಅದೃಶ್ಯವಾದ ಬಗ್ಗೆ ನನಗೆ ಅಷ್ಟು ಮಾತ್ರ ಹೇಳಲು ಸಾಧ್ಯವಾಯಿತು. ನಾನು ಭಯಪಟ್ಟ ಹಾಗೆ ಆನೆಯ ವಿಷಯ ಇಬ್ಬರ ನಡುವೆ ಮತ್ತೆ ಮಾತು ಮುಂದುವರೆಸಲು ಸಾಧ್ಯವಿಲ್ಲದಷ್ಟು ಸಂಪೂರ್ಣವೂ , ಭಿನ್ನವೂ ಹಾಗೂ ಈಗಷ್ಟೆ ಭೇಟಿಯಾದ ಯುವತಿಯ ಜೊತೆಗೆ ಮಾತು ಮತ್ತೆ ಪೋಣಿಸಲಾಗದಷ್ಟು ನಿರ್ದಿಷ್ಟವೂ ಆಗಿತ್ತು. ನಾನು ಘಟನೆಯನ್ನು ಹೇಳಿ ಮುಗಿಸಿದ ನಂತರ ನಮ್ಮಿಬ್ಬರ ನಡುವೆ ಮೌನ ಹೆಪ್ಪುಗಟ್ಟಿತ್ತು.
ಮತ್ತೆ ಮಾತಿಗೆ ಅವಕಾಶವಿಲ್ಲದಂತೆ ಇರುವ ಆನೆ ಅದೃಶ್ಯವಾದ ಘಟನೆ ಹೇಳಿಯಾದ ಮೇಲೆ ಮತ್ತೆ ಯಾವ ವಿಷಯದ ಬಗ್ಗೆ ಇಬ್ಬರೂ ಮಾತನಾಡಬಹುದು ? ಅವಳು ಗ್ಲಾಸಿನ ಮೇಲೆ ವೃತ್ತಾಕಾರವಾಗಿ ಬೆರಳುಗಳನ್ನು ಆಡಿಸಿದಳು. ನಾನು ಗ್ಲಾಸಿನ ಮೇಲೆ ಮುದ್ರಿತವಾಗಿದ್ದ ಕೆಲ ಶಬ್ದಗಳನ್ನೇ ಮತ್ತೆ ಮತ್ತೆ ಓದಿದೆ. ನಾನು ಆನೆಯ ವಿಷಯವನ್ನು ಅವಳ ಬಳಿ ಹೇಳಲೇ ಬಾರದಾಗಿತ್ತು. ಅದು ಎಲ್ಲರೊಟ್ಟಿಗೆ ಸಹಜವಾಗಿ ಹೇಳುವಂತ ವಿಷಯವಲ್ಲ.
"ನಾನು ಚಿಕ್ಕವಳಿದ್ದಾಗ ನನ್ನ ಬೆಕ್ಕು ಕಣ್ಮರೆಯಾಗಿತ್ತು. " ಅವಳು ದೀರ್ಘ ಮೌನವನ್ನು ಮುರಿಯುತ್ತ ನುಡಿದಳು. "ಆದರೂ ಬೆಕ್ಕು ಅದೃಶ್ಯವಾಗುವದಕ್ಕೂ , ಆನೆ ಅದೃಶ್ಯವಾಗುವದಕ್ಕೂ ಸಾಕಷ್ಟು ವ್ಯತ್ಯಾಸವಿದೆ "
"ಖಂಡಿತ. ಹೋಲಿಕೆ ಸಾಧ್ಯವೇ ಇಲ್ಲ. ಗಾತ್ರ ವ್ಯತ್ಯಾಸವನ್ನೇ ನೋಡು "
ಮೂವತ್ತು ನಿಮಿಷಗಳ ನಂತರ ನಾವು ಹೋಟೆಲಿನ ಹೊರಗೆ ನಿಂತು ಪರಸ್ಪರರಿಗೆ ವಿದಾಯ ಹೇಳಿದೆವು. ಇದ್ದಕ್ಕಿದ್ದ ಹಾಗೆ ಅವಳಿಗೆ ಹೋಟೆಲಿನ ಹಜಾರದಲ್ಲಿ ತನ್ನ ಛತ್ರಿಯನ್ನು ಮರೆತು ಬಿಟ್ಟಿರುವದು ನೆನಪಾಯಿತು. ನಾನು ಎಲೀವೆಟರಿನಲ್ಲಿ ಹೋಗಿ ಛತ್ರಿಯನ್ನು ತೆಗದುಕೊಂಡು ಬಂದೆ. ಅದು ದೊಡ್ಡ ಕೈ ಹಿಡಿ ಇರುವ ಕೆಂಪು ಬಣ್ಣದ ಛತ್ರಿ.
"ಧನ್ಯವಾದಗಳು" ಅವಳು
ಅದೇ ಕೊನೆಯ ಸಲ ನಾನು ಅವಳನ್ನು ನೋಡಿದ್ದು. ಅದಾದ ಮೇಲೆ ಒಮ್ಮೆ ನಾವು ದೂರವಾಣಿಯಲ್ಲಿ ಅವಳ ಲೇಖನದ ಕುರಿತು ಮಾತನಾಡಿದ್ದೆವು. ಮಾತನಾಡುವಾಗ ನಾನು ಅವಳನ್ನು ಮತ್ತೊಮ್ಮೆ ಊಟಕ್ಕೆ ಆಹ್ವಾನಿಸುವ ಕುರಿತು ಯೋಚಿಸಿದ್ದೆ. ಆದರೆ ಕೊನೆಗೂ ಅದನ್ನು ಬಾಯಿ ಬಿಟ್ಟು ಹೇಳಲಿಲ್ಲ. ಅದು ಒಂದಲ್ಲ ಒಂದು ರೀತಿಯಲ್ಲಿ ನನಗೆ ಸರಿ ಬರುತ್ತಿರಲಿಲ್ಲ.
ಆನೆ ಅದೃಶ್ಯವಾದುದನ್ನು ಅನುಭವಿಸಿದ ನಂತರ ನನಗೆ ಬಹಳಷ್ಟು ಸಲ ಈ ಭಾವ ಕಾಡುತ್ತಿತ್ತು. ನಾನು ಸಾಕಷ್ಟು ಸಲ ಏನನ್ನೋ ಮಾಡಬೇಕೆಂದು ಯೋಚಿಸುತ್ತಿದ್ದೆ ಆದರೆ ನಂತರ ಮಾಡುವದರ ಮತ್ತು ಮಾಡದಿರುವುದರ ಫಲಿತಾಂಶಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಅಸಮರ್ಥನಾಗುತ್ತಿದ್ದೆ. ಬಹಳಷ್ಟು ಸಲ ನನ್ನ ಸುತ್ತಲಿನ ವಸ್ತುಗಳು ತಮ್ಮ ನೈಜ ಸಮತೋಲನವನ್ನು ಕಳೆದುಕೊಂಡಿವೆಯೇನೋ ಎಂದು ನನಗೆ ಭಾಸವಾಗುತ್ತಿತ್ತು.ಆನೆ ಅದೃಶ್ಯವಾದ ಘಟನೆಯ ನಂತರ ನನ್ನ ಒಳಗಿನ ಯಾವುದೋ ಸಮತೋಲನ ಮುರಿದುಬಿದ್ದ ಹಾಗೆ ಬಾಹ್ಯ ಘಟನೆಗಳೆಲ್ಲ ವಿಚಿತ್ರವಾಗಿ ತೋರುತ್ತಿದ್ದವು. ಬಹುಶ: ಅದು ನನ್ನೊಳಗಿನದೇನೋ ಇರಬಹುದು .
ನಾನು ನನ್ನ ಹಳೆಯ ನೆನಪಿನ ಚಿತ್ರಗಳಿಂದ ಚಿತ್ರಿಸಿದ್ದ ಬಾಹ್ಯ ಪ್ರಪಂಚದಲ್ಲಿ ರೆಫ್ರಿಜರೇಟರ್ , ಓವೆನ್ , ಕಾಫಿ ಫಿಲ್ಟರ್ ಇವುಗಳನ್ನು ವ್ಯಾವಹಾರಿಕ ಜಗತ್ತಿಗೆ ಮಾರುವದನ್ನು ಮುಂದುವರೆಸಿದ್ದೆ. ನಾನು ಹೆಚ್ಚು ಹೆಚ್ಚು ವ್ಯಾವಹಾರಿಕವಾದಂತೆ ಹೆಚ್ಚು ಹೆಚ್ಹು ಮಾರಬಹುದು - ನಮ್ಮ ಪ್ರಚಾರ ನಮ್ಮ ಊಹೆಗೂ ಮೀರಿ ಯಶಸ್ವಿಯಾಗಿತ್ತು , ನನ್ನನ್ನು ನಾನು ಸಾಕಷ್ಟು ಜನರಿಗೆ ಮಾರಿಕೊಳ್ಳುವದರಲ್ಲಿ ಯಶಸ್ವಿಯಾಗಿದ್ದೆ ಕೂಡ. ಅದಕ್ಕೆ ಕಾರಣ ಬಹುಶ: ಜನ ತಾವು ಪ್ರಪಂಚವೇ ಎಂದು ಭಾವಿಸಿದ್ದ ಅಡುಗೆ ಮನೆಯಲ್ಲಿ ಐಕ್ಯತೆಯನ್ನು ಹುಡುಕುತ್ತಿದ್ದರು, ವಿನ್ಯಾಸದಲ್ಲಿನ ಐಕ್ಯತೆ , ಕಾರ್ಯಕಾರಣದಲ್ಲಿನ ಐಕ್ಯತೆ.
ಈಗ ಪೇಪರಿನಲ್ಲಿ ಅದೃಶ್ಯವಾದ ಆನೆಯ ಬಗ್ಗೆ ಯಾವುದೇ ಸುದ್ದಿ ಪ್ರಕಟವಾಗುವದಿಲ್ಲ. ಜನ ಹಿಂದೊಮ್ಮೆ ತಮ್ಮ ನಗರದಲ್ಲಿ ಆನೆಯೊಂದು ಇತ್ತು ಎನ್ನುವದನ್ನೇ ಮರೆತ ಹಾಗೆ ಇದ್ದರು. ಆನೆಯ ಲಾಯವಿದ್ದ ಜಾಗದ ಸುತ್ತಲಿನ ದಟ್ಟ ಹುಲ್ಲು ಒಣಗಿ , ಜಾಗಕ್ಕೆ ಚಳಿಗಾಲದ ಛಾಯೆಯನ್ನು ತಂದುಕೊಟ್ಟಿತ್ತು.
ಆನೆ ಮತ್ತು ಮಾವುತ ಸಂಪೂರ್ಣವಾಗಿ ಅದೃಶ್ಯವಾಗಿದ್ದರು. ಮತ್ತೆಂದೂ ಮರಳಿ ಬಾರದ ಹಾಗೆ.
No comments:
Post a Comment