ಮೂಲ : ಗಾಬ್ರಿಯೇಲ್ ಗ್ರಾಸಿಯಾ ಮಾರ್ಕ್ವೆಜ್
ಕ್ರಿಸ್ ಮಸ್ ದಿನ ಹುಡುಗರು ದೋಣಿ ಬೇಕೆಂದು ಮತ್ತೆ ಕೇಳಿದರು.
"ಸರಿ" ಅವರಪ್ಪ ಹೇಳಿದ "ನಾವು ಕಾರ್ಟಜೆನಾಗೆ ಮರಳಿ ಹೋದಾಗ ಖರೀದಿಸಿದರಾಯಿತು "ಒಂಬತ್ತು ವರ್ಷದ ಟೋಟೋ ಮತ್ತು ಏಳು ವರ್ಷದ ಜೋಯೆಲ್ ರ ನಿರ್ಧಾರ ಅವರ ತಂದೆ ತಾಯಿಗಳು ಅಂದುಕೊಂಡಿದ್ದುದಕ್ಕಿಂತ ಗಟ್ಟಿಯಾಗಿದ್ದುದಾಗಿತ್ತು.
"ಸಾಧ್ಯವಿಲ್ಲ " ಇಬ್ಬರೂ ಒಟ್ಟಿಗೆ ಹೇಳಿದರು. "ಇವತ್ತು , ಈಗಲೇ, ನಮಗೆ ಅದು ಬೇಕು "
" ಅರ್ಥ ಮಾಡಿಕೊಳ್ಳಿ " ಅವರ ಅಮ್ಮ "ಇಲ್ಲಿ ದೋಣಿ ಸಂಚಾರಕ್ಕೆ ಸ್ವಲ್ಪ ಯೋಗ್ಯ ಅನ್ನುವಂತಹ ನೀರು ಸಿಗುವದು ಬಚ್ಚಲು ಮನೆಯಲ್ಲಿ ಮಾತ್ರ "
ಅವಳು ಮತ್ತು ಅವಳ ಗಂಡ ಹೇಳಿದ್ದು ನಿಜವೇ ಆಗಿತ್ತು. ಕಾರ್ಟಜೆನಾಗೆ ಡಿ ಇಂಡಿಯಾನಾ ದಲ್ಲಿ ಅವರ ಮನೆಯ ಅಂಗಳ ಬಂದರಿಗೆ ತಾಕಿಕೊಂಡಿತ್ತು ಮತ್ತು ಅವರ ಷೆಡ್ಡು ಎರಡು ವಿಹಾರನೌಕೆಗಳು ಹಿಡಿಯುವಷ್ಟು ವಿಶಾಲವಾಗಿತ್ತು. ಆದರೆ ಈ ಮ್ಯಾಡ್ರಿಡ್ ನಗರದಲ್ಲಿ ಅವರು '೪೭ ಪ್ಯಾಸಿಯೊ ಡೆ ಲಾ ಕ್ಯಾಸ್ಟೆಲ್ಲಾನಾ'ದಲ್ಲಿರುವ ಜನದಟ್ಟಣೆಯಿಂದ ಕಿಕ್ಕಿರಿದ ಐದು ಅಂತಸ್ತಿನ ಅಪಾರ್ಟ್ ಮೆ೦ಟೊ೦ದರಲ್ಲಿ ವಾಸವಾಗಿದ್ದರು. ಅದು ಏನೇ ಇರಲಿ , ಅಪ್ಪ ಅಮ್ಮ ಇಬ್ಬರೂ ಮಕ್ಕಳ ಬೇಡಿಕೆಯನ್ನು ತಳ್ಳಿ ಹಾಕುವಂತಿರಲಿಲ್ಲ. ಯಾಕೆಂದರೆ ಶಾಲೆಯಲ್ಲಿ ಬಹುಮಾನವನ್ನು ಗೆದ್ದರೆ ಒಂದು ಪುಟ್ಟ ಹಾಯಿ ದೋಣಿ , ಒಂದು ದಿಕ್ಸೂಚಿ ಮತ್ತು ಒಂದು ಕೋನಮಾಪಕ ಕೊಡಿಸುವುದಾಗಿ ಅವರು ಮಕ್ಕಳಿಗೆ ಭಾಷೆಯಿತ್ತಿದ್ದರು ಹಾಗೂ ಈಗ ಮಕ್ಕಳು ಬಹುಮಾನವನ್ನು ಗೆದ್ದಿದ್ದರು.
ಅವರ ಅಪ್ಪ ದೋಣಿಯನ್ನು ತಂದಿದ್ದರೂ, ಪಣಕ್ಕಿಟ್ಟಿದ್ದುದನ್ನು ಕೊಡಲೇಬೇಕು ಎನ್ನುವ ಇಚ್ಛೆಯನ್ನು ಕಿಂಚಿತ್ತೂ ವ್ಯಕ್ತಪಡಿಸದ ಅವನ ಹೆಂಡತಿಗೆ ಇನ್ನೂ ವಿಷಯವನ್ನು ತಿಳಿಸಿರಲಿಲ್ಲ. ಅದೊಂದು ಅಲ್ಯೂಮಿನಿಯಂನಲ್ಲಿ ಮಾಡಿದ , ತಳದಲ್ಲಿ ಬಂಗಾರದ ವರ್ಣದ ಪಟ್ಟೆಗಳಿರುವ ಸುಂದರವಾದ ಹಾಯಿ ದೋಣಿಯಾಗಿತ್ತು
"ದೋಣಿ ಗ್ಯಾರೇಜಿನಲ್ಲಿ ಇದೆ" ಅವರ ಅಪ್ಪ ಮಧ್ಯಾನ್ಹ ಊಟ ಮಾಡುವಾಗ ಘೋಷಿಸಿದ. "ಆದರೆ ಸಮಸ್ಯೆಯೇನೆಂದರೆ ಅದನ್ನು ಎಲಿವೇಟರ್ ಮುಖಾ೦ತರವಾಗಲಿ ಅಥವಾ ಮೆಟ್ಟಿಲುಗಳ ಮೂಲಕವಾಗಲಿ ಮೇಲಕ್ಕೆ ತರಲು ಸಾಧ್ಯವಿಲ್ಲ ಮತ್ತು ಗ್ಯಾರೇಜಿನಲ್ಲಿ ಯಾವುದಕ್ಕೂ ಜಾಗವಿಲ್ಲ. "
ಅದರ ಮುಂದಿನ ಶನಿವಾರ ಹುಡುಗರು ದೋಣಿಯನ್ನು ಮೇಲಕ್ಕೇರಿಸಲು ಅವರ ಸಹಪಾಠಿಗಳನ್ನು ಮನೆಗೆ ಆಹ್ವಾನಿಸಿದರು ಮತ್ತು ಅವರೆಲ್ಲರೂ ಸೇರಿ ದೋಣಿಯನ್ನು ಕೆಲಸದವರ ಕೋಣೆಯವರೆಗೆ ಎಳೆದು ತರುವಲ್ಲಿ ಯಶಸ್ವಿಯಾಗಿದರು.
"ಅಭಿನಂದನೆಗಳು " ಅವರಪ್ಪ ನುಡಿದ "ಮುಂದೇನು ?"
"ಮುಂದೇನೂ ಇಲ್ಲ" ಹುಡುಗರು ಉತ್ತರಿಸಿದರು " ನಮಗೆ ಕೋಣೆಯಲ್ಲಿ ದೋಣಿಯಿರಬೇಕಿತ್ತು , ಈಗ ಅದು ಇದೆ "
ಬುಧವಾರ ರಾತ್ರಿ , ಪ್ರತಿ ಬುಧವಾರದಂತೆ ಅಪ್ಪ ಅಮ್ಮ ಸಿನಿಮಾ ನೋಡಲು ಹೋದರು. ಹುಡುಗರು , ಸಧ್ಯದ ಮನೆಯ ಸಾಮ್ರಾಟರು, ಮನೆಯ ಬಾಗಿಲುಗಳನ್ನು ಮುಚ್ಚಿದರು ಮತ್ತು ಮನೆಯ ಜಗುಲಿಯಲ್ಲಿರುವ ದೀಪವೊಂದರ ಬಲ್ಬನ್ನು ಒಡೆದರು. ಒಡೆದ ಬಲ್ಬಿನಿಂದ ದುಮ್ಮಿಕ್ಕುವ ನೀರಿನಂತೆ ಹೊರಚಿಮ್ಮಿದ ಬಂಗಾರದ ಬಣ್ಣದ ಬೆಳಕು ಸುಮಾರು ಮೂರು ಅಡಿ ಆಳದಷ್ಟು ತುಂಬುವವರೆಗೆ ಹಾಗೆಯೇ ಹರಿಯಲು ಬಿಟ್ಟರು. ನಂತರ ಅವರು ಮನೆಯ ವಿದ್ಯುಚ್ಛಕ್ತಿಯನ್ನು ಆರಿಸಿದರು ಮತ್ತು ಹಾಯಿದೋಣಿಯನ್ನು ಹೊರತೆಗೆದು ಮನೆಯಲ್ಲಿರುವ ದ್ವೀಪಗಳ ನಡುವೆ ಸ್ವಚ್ಚ೦ದವಾಗಿ ಹುಟ್ಟನ್ನು ಹಾಕುತ್ತ ಸಂಚರಿಸಿದರು .
ಈ ಅತಿರಮ್ಯ ಸಾಹಸಕ್ಕೆ ಮೂಲ ಕಾರಣವೇನೆಂದರೆ ನಾನು ನಿತ್ಯ ಬಳಕೆಯ ವಸ್ತುಗಳ ಕಾವ್ಯಮಯತೆಯ ಬಗ್ಗೆ ಒಂದು ಸೆಮಿನಾರಿನಲ್ಲಿ ಮಾತನಾಡುವಾಗ ಹಿಂದೆಮುಂದೆ ಯೋಚಿಸದೆ ಆಡಿದ ಒಂದು ಮಾತು. ಸ್ವಿಚ್ ಆರಿಸಿದಾಗ ದೀಪವೇಕೆ ಆರುತ್ತದೆ ಎಂದು ಟೋಟೋ ನನ್ನನ್ನು ಕೇಳಿದ್ದ ಮತ್ತು ಅದರ ಬಗ್ಗೆ ಎರಡು ಬಾರಿ ಯೋಚನೆ ಮಾಡಿ ಉತ್ತರಿಸಬಲ್ಲನೆಂಬ ಧೈರ್ಯ ನನಗೂ ಇರಲಿಲ್ಲ
"ಬೆಳಕು ನೀರಿನಂತೆ " ನಾನು ಉತ್ತರಿಸಿದ್ದೆ "ನೀನು ಕೊಳಾಯಿಯನ್ನು ತಿರುಗಿಸಿದರೆ ಸಾಕು ಅದು ಧುಮ್ಮಿಕ್ಕುತ್ತದೆ "
ಮತ್ತು ಪ್ರತಿ ಬುಧವಾರ ಅಪ್ಪ ಅಮ್ಮ ಮರಳಿ ಬರುವವರೆಗೆ ಅವರು ದಿಕ್ಸೂಚಿ ಮತ್ತು ಕೋನಮಾಪಕವನ್ನು ಉಪಯೋಗಿಸುವದನ್ನು ಕಲಿಯುತ್ತಿದ್ದರು. ಅಪ್ಪ ಅಮ್ಮ ಸಿನಿಮಾ ಮುಗಿಸಿ ಮನೆಗೆ ಬಂದಾಗ ಮಕ್ಕಳು ತೀರದಲ್ಲಿ ಮಲಗಿದ್ದ ದೇವತೆಗಳಂತೆ ಕಾಣಿಸುತ್ತಿದ್ದರು
ತಿಂಗಳುಗಳ ನಂತರ , ಇನ್ನೂ ಮುಂದಕ್ಕೆ ಹೋಗುವ ತವಕದಲ್ಲಿ ಅವರು ಸಮುದ್ರದಲ್ಲಿ ಮುಳುಗುವಾಗ ಧರಿಸುವ ಉಡುಪನ್ನು ಕೇಳಿದರು - ಮುಖಕವಚ , ಈಜುರೆಕ್ಕೆ, ಆಮ್ಲಜನಕದ ಸಿಲಿಂಡರ್ .
"ಆ ಉಪಯೋಗಕ್ಕೆ ಬಾರದ ಹಾಯಿದೋಣಿಯನ್ನು ತಂದು ಕೆಲಸದವರ ರೂಮಿನಲ್ಲಿ ಇಟ್ಟಿದ್ದು ಸಾಲದು ಎಂದು ಈಗ ಡೈವಿಂಗ್ ಉಡುಪು ಸಹ ಬೇಕು ಎನ್ನುತ್ತಿದ್ದೀರಾ" ಅವರಪ್ಪ ಕೇಳಿದ.
" ಈ ಸೆಮಿಸ್ಟರ್ ನಲ್ಲಿ ನಾವು ಗೋಲ್ಡ್ ಗಾರ್ಡೇನಿಯಾ ಪಾರಿತೋಷಕವನ್ನು ಗೆದ್ದರೆ ?" ಜೋಯಲ್ ಕೇಳಿದ
"ಬೇಡ " ಅವರಮ್ಮ ಮುನ್ನೆಚ್ಚರಿಕೆಯ ಧ್ವನಿಯಲ್ಲಿ ಹೇಳಿದಳು " ಅದು ಯಾವುದರ ಅಗತ್ಯವೂ ಇಲ್ಲ"
ಅವರಪ್ಪ ಹೆಂಡತಿಯ ಜಿಗುಟುತನಕ್ಕೆ ಆಕ್ಷೇಪ ವ್ಯಕ್ತಪಡಿಸಿದ.
"ಈ ಮಕ್ಕಳು ಮಾಡಬೇಕಾದ ಕೆಲಸ ಮಾಡಿ ಎಂದರೆ ಒಂದು ಉಗುರನ್ನೂ ಕದಲಿಸುವದಿಲ್ಲ " ಅಮ್ಮ ನುಡಿದಳು "ಆದರೆ ತಮಗೆ ಬೇಕು ಅನಿಸಿದ್ದನ್ನು ಪಡೆದುಕೊಳ್ಳುವದಿಕ್ಕೆ ಇವರು ಪ್ರಿನ್ಸಿಪಾಲರ ಕುರ್ಚಿ ಬೇಕಾದರೂ ತರಲಿಕ್ಕೆ ಸಿದ್ಧ "
ಅವರಪ್ಪ ಹೆಂಡತಿಯ ಜಿಗುಟುತನಕ್ಕೆ ಆಕ್ಷೇಪ ವ್ಯಕ್ತಪಡಿಸಿದ.
"ಈ ಮಕ್ಕಳು ಮಾಡಬೇಕಾದ ಕೆಲಸ ಮಾಡಿ ಎಂದರೆ ಒಂದು ಉಗುರನ್ನೂ ಕದಲಿಸುವದಿಲ್ಲ " ಅಮ್ಮ ನುಡಿದಳು "ಆದರೆ ತಮಗೆ ಬೇಕು ಅನಿಸಿದ್ದನ್ನು ಪಡೆದುಕೊಳ್ಳುವದಿಕ್ಕೆ ಇವರು ಪ್ರಿನ್ಸಿಪಾಲರ ಕುರ್ಚಿ ಬೇಕಾದರೂ ತರಲಿಕ್ಕೆ ಸಿದ್ಧ "
ಕೊನೆಗೂ ಅಪ್ಪ ಅಮ್ಮ ಹೌದು ಇಲ್ಲ ಏನೂ ಹೇಳಲಿಲ್ಲ. ಆದರೆ ಜುಲೈ ನಲ್ಲಿ ಜೋಯೆಲ್ ಮತ್ತು ಟೋಟೋ ಇಬ್ಬರೂ ಗೋಲ್ಡ ಗಾರ್ಡೇನಿಯಾ ಪಾರಿತೋಷಕವನ್ನು ಗೆದ್ದರಲ್ಲದೆ ಶಾಲೆಯ ಪ್ರಾಂಶುಪಾಲರು ಎಲ್ಲರ ಸಮ್ಮುಖದಲ್ಲಿ ಅವರನ್ನು ಶ್ಲಾಘಿಸಿದರು. ಅದೇ ಮಧ್ಯಾನ್ಹ ಮತ್ತೊಮ್ಮೆ ಕೇಳುವ ಮೊದಲೇ ಅವರು ಬಯಸಿದ್ದ ಡೈವಿಂಗ್ ಸಲಕರಣೆಗಳು ಅವರ ಕೋಣೆಯಲ್ಲಿ ಹಾಜರಾಗಿದ್ದವು.
ಮತ್ತು ಮುಂದಿನ ಬುಧವಾರ ಅವರಪ್ಪ ಅಮ್ಮ 'ಲಾಸ್ಟ ಟ್ಯಾಂಗೋ ಇನ್ ಪ್ಯಾರಿಸ್' ಸಿನಿಮಾವನ್ನು ನೋಡಲು ಹೋಗಿದ್ದಾಗ ಅವರು ಅಪಾರ್ಟ್ ಮೆ೦ಟನ್ನು ಸುಮಾರು ಹನ್ನೆರಡು ಅಡಿ ಆಳದಷ್ಟು ತುಂಬಿಸಿ ಮನೆಯ ಪೀಠೋಪಕರಣಗಳ ನಡುವೆ, ಹಾಸಿಗೆಗಳ ಮಧ್ಯೆ, ವರುಷಗಟ್ಟಲೆ ಬೆಳಕಿನಾಳವನ್ನೇ ಕಾಣದ ಹಲವಷ್ಟು ವಸ್ತುಗಳ ಕಡುಗಪ್ಪು ತಳಗಳ ನಡುವಿನಲ್ಲಿ ಅವರು ಪಳಗಿದ ಶಾರ್ಕಿನಂತೆ ಈಜಾಡಿದರು.
ವರ್ಷದ ಕೊನೆಗೆ ಬಹುಮಾನ ವಿತರಣಾ ಸಮಾರಂಭದಲ್ಲಿ , ಸಹೋದರರನ್ನು ಶಾಲೆಯ ಅತ್ಯುತ್ತಮ ವಿದ್ಯಾರ್ಥಿಗಳು ಎಂದು ಸನ್ಮಾನಿಸಲಾಯಿತು. ಈ ಬಾರಿ ಅವರಾಗಿಯೇ ಏನನ್ನಾದರೂ ಕೇಳುವ ಮೊದಲೇ ಅವರಪ್ಪ ಅಮ್ಮ ಏನು ಬೇಕು ಎಂದು ಕೇಳಿದ್ದರು. ಹುಡುಗರು ಹೆಚ್ಚೇನೂ ಬೇಡಿಕೆಯಿಡದೆ , ತಮ್ಮ ಸಹಪಾಠಿಗಳಿಗೆ ಮನೆಯಲ್ಲಿಯೇ ಒಂದು ಸಣ್ಣ ಔತಣಕೂಟ ಏರ್ಪಡಿಸಿದರೆ ಸಾಕು ಎಂದರು .
ಅವರಪ್ಪ ಅವನ ಹೆಂಡತಿಯ ಜೊತೆಗೆ ಏಕಾಂತದಲ್ಲಿ ಇದ್ದಾಗ ಹೆಮ್ಮೆಯಿಂದ ಹೇಳಿದ " ನೋಡಿದೆಯಾ , ಇದು ನಮ್ಮ ಮಕ್ಕಳ ಪ್ರಬುದ್ಧತೆಗೆ ಸಾಕ್ಷಿ "
" ನಿಮ್ಮ ಬಾಯಿಯಿಂದ ಹೊರಬಿದ್ದ ಮಾತು ಆ ದೇವರ ಕಿವಿಯವರೆಗೆ ತಲುಪಿದರೆ ಸಾಕು " ಹೆಂಡತಿ ಮರು ನುಡಿದಳು .
" ನಿಮ್ಮ ಬಾಯಿಯಿಂದ ಹೊರಬಿದ್ದ ಮಾತು ಆ ದೇವರ ಕಿವಿಯವರೆಗೆ ತಲುಪಿದರೆ ಸಾಕು " ಹೆಂಡತಿ ಮರು ನುಡಿದಳು .
ಮುಂದಿನ ಬುಧವಾರ ಅವರ ತಂದೆತಾಯಿಯರು 'ದಿ ಬ್ಯಾಟಲ್ ಆಫ್ ಅಲ್ಜಿಯರ್ಸ್' ಸಿನಿಮಾವನ್ನು ನೋಡಲು ಹೋದಾಗ , ಅವರ ಮನೆಯ ಮುಂದೆ ಹೋಗುತ್ತಿದ್ದವರಿಗೆ, ಮರಗಳ ನಡುವೆ ಅವಿತಿದ್ದ ಹಳೆಯ ಕಟ್ಟಡದಿಂದ ಬೆಳಕು ಧುಮ್ಮಿಕ್ಕುತ್ತಿರುವದು ಕಾಣಿಸಿತು. ಬೆಳಕು ಬಾಲ್ಕನಿಯಿಂದ ಹೊರಚಿಮ್ಮುತ್ತಿತ್ತು. ಧಾರಾಕಾರವಾಗಿ ಮನೆಯ ಮುಂಭಾಗದಿಂದ ಹರಿದು ರಸ್ತೆಗಳನ್ನು ಆವರಿಸಿದ ದೇದೀಪ್ಯಮಾನವಾದ ಬಂಗಾರದ ವರ್ಣದ ಬೆಳಕಿನ ಪ್ರವಾಹಕ್ಕೆ ಗ್ವಾಡರಾಮ ನಗರವೇ ಬೆಳಗುತ್ತಿತ್ತು.
ಈ ತುರ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಅಗ್ನಿಶಾಮಕದಳದವರು ಐದನೇ ಮಹಡಿಯಲ್ಲಿ ಬಾಗಿಲನ್ನು ಬಲವಂತವಾಗಿ ತೆರೆದಾಗ , ಅಪಾರ್ಟ್ ಮೆ೦ಟಿನ ಛಾವಣಿಯವರೆಗೂ ಬೆಳಕು ತುಂಬಿರುವದು ಕಾಣಿಸಿತು.
ಮನೆಯ ಜಗುಲಿಯಲ್ಲಿ ಸೋಫಾ ಮತ್ತು ಚಿರತೆಯ ಚರ್ಮದ ಆರಾಮ ಕುರ್ಚಿಗಳು ಬೇರೆ ಬೇರೆ ಸ್ಥರಗಳಲ್ಲಿ ತೇಲಾಡುತ್ತಿದ್ದವು. ಬಾರಿನ ಬಾಟಲುಗಳು ಮತ್ತು ಅರ್ಧ ಮುಳುಗಿದ್ದ ಪಿಯಾನೋ ಮಧ್ಯೆ ಪಿಯಾನೋವನ್ನಾವರಿಸಿದ್ದ ಮನಿಲಾ ಶಾಲು ಪಟಪಟನೆ ಹೊಯ್ದಾಡುತ್ತ ಬಂಗಾರದ ಬಣ್ಣದ 'ಮ೦ತಾ ರೇ' ಮೀನಿನಂತೆ ಕಾಣಿಸುತ್ತಿತ್ತು.
ದಿನನಿತ್ಯದ ವಸ್ತುಗಳು ತಮ್ಮದೇ ಆದ ಕಾವ್ಯದ ಉತ್ತು೦ಗದಲ್ಲಿ ರೆಕ್ಕೆಗಳನ್ನು ಬಿಚ್ಚಿ ಅಡುಗೆ ಮನೆಯ ಆಕಾಶದಲ್ಲಿ ಹಾರಾಡುತ್ತಿದ್ದವು.
ಪ್ರಕಾಶಮಾನವಾದ ಈ ವಿಶಾಲ ಜವುಗು ಪ್ರದೇಶದಲ್ಲಿ ಜೀವಕಳೆಯನ್ನು ಹೊರಹೊಮ್ಮಿಸುತ್ತ ಸಂತೋಷದಲ್ಲಿದ್ದ ಏಕ ಮಾತ್ರ ಜೀವಿಗಳಾದ ಅವರಮ್ಮನ ಅಕ್ವೆರಿಯಂನಿಂದ ಹೊರಗೆ ಬಂದಿದ್ದ ಉಜ್ವಲ ಬಣ್ಣದ ಮೀನುಗಳ ನಡುವೆ ಮಕ್ಕಳು ನೃತ್ಯ ಮಾಡುವಾಗ ನುಡಿಸುತ್ತಿದ್ದ ವಾದ್ಯ ಸಲಕರಣೆಗಳು ಹೊಯ್ದಾಡುತ್ತಿದ್ದವು.
ಬಚ್ಚಲುಮನೆಯಲ್ಲಿ ತೇಲಾಡುತ್ತಿದ್ದ ಮನೆಯವರೆಲ್ಲರ ಟೂತ್ ಬ್ರಶ್ ಗಳ ನಡುವೆ ಅಪ್ಪನ ಕಾಂಡೋಮ್ , ಅಮ್ಮನ ಕ್ರೀಮ್ ನ ಜಾಡಿ , ಮತ್ತವಳ ಪಗಡೆ ಮಣೆಯಿದ್ದವು ಹಾಗೂ ಇವೆಲ್ಲವುಗಳ ಪಕ್ಕ ತೇಲುತ್ತಿದ್ದ ಹಜಾರದಲ್ಲಿಟ್ಟಿದ್ದ ಟಿವಿಯಲ್ಲಿ ಮಧ್ಯರಾತ್ರಿ ಮಾತ್ರ ಬರುವ ವಯಸ್ಕರ ಧಾರಾವಾಹಿಯ ಕೊನೆಯ ಕಂತ ಇನ್ನೂ ಬರುತ್ತಿತ್ತು.
ಜಗುಲಿಯ ತುದಿಯಲ್ಲಿ ಮುಖಕವಚವನ್ನು ಧರಿಸಿ, ತೀರವನ್ನು ಸೇರಲು ಮಾತ್ರ ಸಾಕಾಗುವಷ್ಟು ಗಾಳಿಯನ್ನು ಹಿಡಿದಿಟ್ಟುಕೊಂಡು ಪ್ರವಾಹದಲ್ಲಿ ತೇಲುತ್ತ , ಹುಟ್ಟುಗೋಲನ್ನು ಹಾಕುತ್ತ,ಏಕಾಗ್ರತೆಯಿಂದ ದೀಪ ಸ್ಥ೦ಭವನ್ನು ಟೋಟೋ ಹುಡುಕಾಡುತ್ತಿದ್ದರೆ , ಇನ್ನೂ ದೋಣಿಯ ತುದಿಯಲ್ಲಿ ಕುಳಿತು ತೇಲುತ್ತಿದ್ದ ಜೋಯೆಲ್, ಧ್ರುವ ನಕ್ಷತ್ರಕ್ಕಾಗಿ ಕೋನಮಾಪಕವನ್ನು ನೋಡುತ್ತಿದ್ದ ಮತ್ತು ಅವರ ಮೂವತ್ತೇಳು ಸಹಪಾಠಿಗಳು ಇಡೀ ಮನೆಯಲ್ಲಿ ತೇಲಾಡುತ್ತ, 'ಜೆರೇನಿಯಂ ' ಹೂಗಳು ತುಂಬಿದ್ದ ಮಡಕೆಗೆ ಮೂತ್ರ ವಿಸರ್ಜನೆ ಮಾಡುವ ಅನಿವರ್ಚನೀಯ ಸುಖವನ್ನು ಅನುಭವಿಸುತ್ತ, ಮುಖ್ಯೋಪಾಧ್ಯಾಯರನ್ನು ಗೇಲಿ ಮಾಡಲು ಕೆಲವೊಂದಿಷ್ಟು ಶಬ್ದಗಳನ್ನು ಬದಲಾಯಿಸಿದ ಶಾಲೆಯ ಪ್ರಾರ್ಥನೆಯನ್ನು ಜೋರಾಗಿ ಹಾಡುತ್ತ , ಅಪ್ಪನ ಬಾಟಲಿಯಿ೦ದ ಒಂದು ಗ್ಲಾಸು ಬ್ರಾಂದಿಯನ್ನು ಪಟಾಯಿಸುತ್ತಿದ್ದರು. ಅವರು ಏಕಕಾಲಕ್ಕೆ ಅದೆಷ್ಟು ದೀಪಗಳನ್ನು ಹೊತ್ತಿಸಿದ್ದರೆಂದರೆ ಅಪಾರ್ಟ್ ಮೆ೦ಟು ಬೆಳಕಿನಿಂದ ಉಕ್ಕಿ ಹರಿಯುತ್ತಿತ್ತು ಮತ್ತು 'ಸಂತ ಜೂಲಿಯನ್ ದ ಹಾಸ್ಪಿಟಲ್ರ್' ಪ್ರಾಥಮಿಕ ಶಾಲೆಯ ಎರಡು ತರಗತಿಗಳು ೪೭ . ಪ್ಯಾಸಿಯೊ ಡೆ ಲಾ ಕ್ಯಾಸ್ಟೆಲ್ಲಾನಾ ದ ಐದನೆಯ ಅಂತಸ್ತಿನೊಳಗೆ ಸಂಪೂರ್ಣವಾಗಿ ಮುಳುಗಿ ಹೋಗಿದ್ದವು.
ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ, ಸುಡುವ ಬೇಸಿಗೆ ಮತ್ತು ಹಿಮಾವೃತ ಗಾಳಿಯ ಈ ನಗರದಲ್ಲಿ ಸಮುದ್ರವಿಲ್ಲದ , ನದಿಗಳಿಲ್ಲದ ಸದಾ ಕಾಲ ನೆಲವನ್ನು ಮಾತ್ರ ಪರಿಮಿತಿಯನ್ನಾಗಿಸಿಕೊಂಡಿದ್ದ ಸ್ಥಳೀಯ ಜನರು ಬೆಳಕಿನಲ್ಲಿ ಸಂಚರಿಸುವ ಕೌಶಲ್ಯವನ್ನು ಎಂದಿಗೂ ಕರಗತ ಮಾಡಿಕೊಂಡಿರಲಿಲ್ಲ.
No comments:
Post a Comment