Tuesday, February 5, 2013

ಎರಡು ಕವನಗಳು

ಒಲವೆಂಬ ಪಸೆ 

ಕಾದಿದ್ದು ಸಾಕು 
ಎರವಲು ಕೊಡು 
ನಿನ್ನ ಅಲೆಮಾರಿ ತುಟಿಯ 
ಮೇಲೆ ಕುಳಿತ
ಪಿಸು ನುಡಿಯ !

ದಾಟಿ ಹೋಗುವ
ಪರಸ್ಪರ ಕಣ್ಣ ಗಡಿಯ ,
ಹಾವಿನಂತೆ ತಣ್ಣಗೆ
ಹರಿಯುವ ಸಂಜೆ
ಆಕಾಶಕ್ಕೊಂದು
ಸ್ವಪ್ನ ಎಸೆಯೋಣ !

ಕತೆ ಹೇಳುವೆ
ಕೇಳಿಸಿಕೋ
ಒಂದು ಚುಕ್ಕಿ ಒಂದು ಚಂದ್ರ
ಒಬ್ಬಳು ನೀನು ಒಬ್ಬನು ನಾನು
ಎಲ್ಲ ನಡೆಯಲಿ
ಒಂದಾನೊಂದು ಕಾಲದಲ್ಲಿ !


ಕೊಂಡಿಯಿಲ್ಲದ ತುಣುಕುಗಳು 

ಕದ್ದು ಸಾಗುವ ಭಾವಗಳ 
ಮೇಲೆ ; ನೆನಪುಗಳ ಖಟ್ಲೆ .
ಇಬ್ಬರ ಪದಗಳು 
ಬಂದಿಯಾಗಿವೆ ಕವನಗಳಲ್ಲಿ !

ಬಿಡಿ ಬಿಡಿ ಪದಗಳು 
ಹಿಂದಿಲ್ಲ ಮುಂದಿಲ್ಲ 
ಜಾರಿ ಹೋದರು 
ಕೇಳುವರಿಲ್ಲ ,!

ಅರ್ಧ ಟೀ ಅರ್ಧ ಬನ್ನು
ಪೂರ್ತಿಯಾಗದ ಕವಿತೆ,
ಬಿಟ್ಟ ಪದಗಳಲ್ಲಿ
ನಿನ್ನ ಭಾವ !

ಒಲವೆಂಬ ಪಸೆಗೆ
ಒದ್ದೆ ಒದ್ದೆ ಪದಗಳು
ಪುಳಕ್ಕನೆ ಮನಸ್ಸಿಂದ
ಜಾರುವ ಕವಿತೆಗಳು !

2 comments:

  1. ಭಟ್ರ ಕವನ ಬರವು ಅಂದ್ರೆ ಟೀ, ಬನ್ನು ಇರಲೇ ಬೇಕು.... :) ಒಲವಿನ ಪಸೆ ಚೊಲೊ ಇದ್ದು.. :)

    ReplyDelete