Wednesday, October 24, 2012

ಪರಿಧಿ

ನಿಮಗೆ ಇದನ್ನ ಟೈಪಿಸಿ ಕೊಡೋಣ ಎಂದು ಬಹಳ ದಿನದಿಂದ ಅ೦ದು ಕೊ೦ಡಿದ್ದೆ . ಇಲ್ಲಿ ಪಾತ್ರಗಳಿಗೆ ಹೆಸರು ಕೊಡಲು ನನಗೆ ಸಾಧ್ಯವಾಗಲಿಲ್ಲ , ನಿಮಗೆ ಅನಿಸಿದ ಹೆಸರು ಕೊಟ್ಟು , ಬಿಳುಪಿನ ಹಿಂದಿನ ಕಪ್ಪು , ನೆನಪಿಗೆ ತಂದು ಓದಿಕೊಂಡರೆ ಅರ್ಥ ಕೊಟ್ಟಿತು  - ಲೇಖಕ


ಪತ್ರ -೧ 

ಸ್ಥಳ : ಮನೆ ನಂಬರ್ ೫೩ ಬಸವನಗುಡಿ 
ಜಾಗ : ಎರಡನೇ ಮಹಡಿಯ ಮೊದಲ ರೂಮು 

ಪತ್ರದ ಆರಂಭ "

ಕಾಲಿನಿಂದ ಕುತ್ತಿಗೆಯವರೆಗೆ ಬೆಳೆದು ನಿಂತ ದೇಹದ ಮೇಲ್ಭಾಗದಲ್ಲಿ ಎಲ್ಲರಿಗೂ ಮುಖ ಸ್ಥಾಪಿತವಾಗಿತ್ತು. ಆದರೆ ನಿನಗೆ ಮುಖವಿರುವ ಜಾಗದಲ್ಲಿ ಲೋಳೆ ಯಿತ್ತು. ಅದು ನಿನಗೆ ಮುಖವೂ ಮುಖವಾಡವೂ ಆಗಿ ಪಾತ್ರಗಳನ್ನ ಬದಲಿಸುತ್ತಿತ್ತು. ಆಕಾರಗಳನ್ನು ಹುಟ್ಟು ಹಾಕುತ್ತಿತ್ತು. ಲೋಳೆಯ ಒಳಗೆ ಕಣ್ಣು ಕಿವಿ , ಮೂಗು ನಾಲಗೆ , ಹುಬ್ಬು ರೆಪ್ಪೆ ಇವೆಲ್ಲ ಚರ್ಮದ ಸಹಾಯದಿಂದ ಅ೦ಟಿಕೊ೦ಡಿದ್ದವು . ನಿನ್ನ ಲೋಳೆ ಮುಖದ ಸ್ವರೂಪ ಆಗಾಗ ಬದಲಾಗುತ್ತಿತ್ತು ಅಂತೆಯೇ ಅದರ ಗುಣ . ಅದು ಅ೦ಟಿಕೊಳ್ಳುತ್ತ , ಅ೦ಟಿಸಿಕೊಳ್ಳುತ್ತ , ದೊಡ್ಡವಾಗಿ , ಉದ್ದವಾಗಿ , ಅಗಲವಾಗಿ , ಚಿಕ್ಕದಾಗಿ , ಸಣ್ಣದಾಗಿ , ಮೃದುವಾಗಿ , ಗಡುಸಾಗಿ ಬೆಳೆಯುತ್ತ ನಿನ್ನ ಆವರಿಸಿ ಕೊನೆಗೆ ಬೇರೆಯವರನ್ನ್ನು ಒಳಗೆ ಸೆಳೆದು ನು೦ಗುತ್ತಿತ್ತು . ಹೀಗೆ ಸಿಲುಕಿದವರಲ್ಲಿ ನಾನು ಒಬ್ಬಳಾಗಿದ್ದೆ. ನಿನ್ನ ಮುಖವೆಂಬ ಲೋಳೆಗೆ ಆಕರ್ಷಿತವಾಗಿ ಬರುವ ನಾವೆಲ್ಲ ಕೀಟಗಳಾಗಿದ್ದೆವು. ಕೀಟಗಳು ಲೋಳೆಗೆ ಅಂಟಿ ಒದ್ದಾಡಿ ಅಸುನಿಗುತ್ತಿದ್ದವು . ನೀನು ಬೇಟೆಯಾಡಲು ತಾಕತ್ತಿಲ್ಲದ ಮುದಿ  ಸಿ೦ಹವೊ೦ದು ಗವಿಯೊಳಗೆ ಮಿಕಗಳಿಗೆ ಕಾದಂತೆ  ಮತ್ತೆ ಅಂಟಿಕೊಳ್ಳುವ ಕೀಟಗಳಿಗೆ ಕಾಯುತ್ತಿದ್ದೆ.

( ಪತ್ರದ ಅಂಚಿನಲ್ಲಿ ನೀರಿನ ಹನಿ ಬಿದ್ದು ಒದ್ದೆಯಾಗಿ ಕಾಗದ ಒಣಗಿದ ಗುರುತು , ಕಾಗದ ಸ್ವಲ್ಪ ಬಣ್ಣ ಕಳೆದುಕೊಂಡಿತ್ತು , ಅಕ್ಷರಗಳು ಹಲವಾರು ಅಳಿಸಿ ಹೋಗಿದ್ದವು , ಹೀಗಾಗಿ ಕೆಲವು ಪ್ಯಾರಾಗಳನ್ನು ಇಲ್ಲಿ ಹಾಕುತ್ತಿಲ್ಲ. ಯಾರೋ ಹೆಣ್ಣು ನೋಡಲು ಬಂದ ದಿನದ ವಿವರಗಳು - ಲೇಖಕ )

ಮದುವೆಗೂ ಮೊದಲು ನೀನು ನಮ್ಮ ಮನೆಗೆ ಬರುತ್ತಿದ್ದೆ .ಅಪ್ಪನ ಮನೆಯಲ್ಲಿ ನಾನು , ನನ್ನ ಕಾಲಿಲ್ಲದ ದೇಹ , ಅಪ್ಪ , ಅಪ್ಪನ ಚಟಗಳು ಇವಿಷ್ಟೇ.  ಮದುವೆ ಆಗುವೆ ಎಂದೆ , ಅಪ್ಪ ಸರಿ ಎಂದರು. ಸಣ್ಣ ಮಾತುಕತೆ , ನಮ್ಮ ಮದುವೆ ಸಿದ್ಧವಾಗಿತ್ತು. ಕೈಗೆ ಹಚ್ಚಿದ ಮದರಂಗಿಯ ಬಣ್ಣ ಗೊತ್ತಿಲ್ಲದೇ ಕು೦ಟು ಕಾಲಿಗೆ ತಾಗಿ , ಅದು ಸಹ ಸಣ್ಣಗೆ ಕೆಂಪಾಗಿತ್ತು , ಉದ್ದ ಲಂಗದ ಒಳಗೆ ಅದು ಉದ್ದವಾದ೦ತೆ. ನಿನಗೆ ನೆನಪಿದೆಯ? ಪೇಪರಿನಲ್ಲಿ ನೀನು ಹಾಕಿಸಿದ ಮದುವೆಯ ಫೋಟೋದಲ್ಲಿ ನನಗಿಂತ , ನಿನಗಿಂತ  , ಎಲ್ಲರಿಗಿಂತ , ಹೆಚ್ಚು ಖುಷಿ ಪಟ್ಟು ದೊಡ್ಡದಾಗಿ ಕಾಣಿಸಿದ್ದು ನನ್ನ ಕು೦ಟು ಕಾಲು .! ಅವತ್ತಿನ ದಿನದವರೆಗೆ  ನೀನು ಘನವಾಗಿದ್ದೆ ಅಥವಾ ಘನವೆ೦ದು ನಾನು ತಿಳಿದಿದ್ದೆ . ನಿನ್ನ  ಲೋಳೆಯ ಮೊದಲ ಹೇಸಿಗೆ ನನಗೆ ಅರಿವಾದುದು ನಾವು ಮದುವೆಯಾದ ಮೇಲೆಯೇ . ನನ್ನ ಮದುವೆಯಾದ ನೀನು ಎಲ್ಲರಿಗು ದೇವರಾಗಿದ್ದೆ , ನನಗು , ಅಪ್ಪನಿಗೂ , ಸಮಾಜಕ್ಕೂ . ನನಗೆ ಕನಸುಗಳಿದ್ದವು , ಕನಸುಗಳಿಗೆ ಕಾಲುಗಳಿರುವದಿಲ್ಲ. ರೆಕ್ಕೆಗಳು ಮಾತ್ರ ಎಂದಿದ್ದಳು ಅಮ್ಮ , ಅವಳು ಇದ್ದಿದ್ದಿದರೆ ಇವತ್ತು ಚೀರುತ್ತಿದ್ದೆ ಕನಸುಗಳಿಗೆ ಇರುವದು ಕು೦ಟು ಕಾಲುಗಳು ಮಾತ್ರ . ನಾವೇ ಕಡಿದು ಕು೦ಟು ಮಾಡಿದ ಕಾಲುಗಳು , ನಾವೇ ಹಿಸುಕಿ ಕೊಂದ ರಕ್ತನಾಳಗಳು , ನರಗಳು ಕೆಂಪಾಗಿ , ದಟ್ಟ ನಿಲಿಯಾಗಿ ಚದುರಿದ ಕುಂಟು.
ಅವತ್ತು ನಮ್ಮಿಬ್ಬರ ಮೊದಲ ರಾತ್ರಿ . ನೀನು ಬೆವತಿದ್ದೆ , ನನ್ನ ಮದರಂಗಿ ಇನ್ನು ಕೆಂಪಾಗಿದ್ದವು , ಕು೦ಟು ದೇಹಕ್ಕೆ ಮಾತ್ರ , ಬಯಕೆಗಲ್ಲ . ನಿನ್ನ ಮುಖ ಬಿಳುಚಿತ್ತು ( ಆಗಿನ್ನೂ ಅದರ ಲೋಳೆಯ ಅನುಭವ ಆಗಿರಲಿಲ್ಲ ). ನನ್ನ ಪೂರ್ಣವಾಗದ ದೇಹದ ಪಕ್ಕ ನಿನ್ನ ಪೂರ್ಣವಾದ ದೇಹ , ಪುರ್ಣವಾಗದ ಮನಸು ಎರಡು ಇತ್ತು . ಎರಡು ತಣ್ಣಗೆ ! ನೀನು ಏನೇನೋ ಬಡಬಡಿಸಿದೆ . ನಿನ್ನ ನಾಲಗೆ ಸರಕ್ಕನೆ ಹೊರಗೆ ಒಳಗೆ ಓಡುತ್ತಿತ್ತು . ಸಮಯವಲ್ಲದ ಸಮಯವೆ೦ದೆ , ನನ್ನ ಪಕ್ಕ ಮಲಗಿದೆ. ನಿನ್ನ ಪೊರೆಯೊಳಗೆ ಲೋಳೆ ಪುಳ- ಪಿಳನೆ ಹರಿದಾಡುತ್ತಿತ್ತು . ರಾತ್ರಿ ಹಗಲಾದವು , ಹಗಲು ರಾತ್ರಿಯಾದವು , ದಿನ ಕಳೆಯುವಾ ಆಟದಲ್ಲಿ ನಮ್ಮಿಬ್ಬರ ದೇಹದ ಸ್ಪರ್ಶ ಅದಲು ಬದಲಾಗಲೇ ಇಲ್ಲ. ನಿನ್ನ ಸ್ಪರ್ಶದಲ್ಲಿ ಬಿಸಿಯಿರಲಿಲ್ಲ ಅಥವಾ ಅದು ನಿನಗೆ ಬಂದಿರಲೇ ಇಲ್ಲ. ನಿನ್ನ ಮುಖದಿಂದ ಸಣ್ಣಗೆ ಲೋಳೆ ಜಿನುಗತೊಡಗಿತ್ತು. ನನ್ನ ದೇಹಕ್ಕೆ ಜರೆದೆ , ಸುಖಕ್ಕೆ ಯೋಗ್ಯವಲ್ಲದ ದೇಹವಿದು ಎಂದೆ . ನನಗೆ ಕಾಲಲ್ಲಿ ಬಲವಿರಲಿಲ್ಲ, ನಿನಗೆ ದೇಹದಲ್ಲಿ ! ನಿನ್ನ ಲೋಳೆ ಕ್ಷಣ ಕ್ಷಣಕ್ಕೂ ಅಗಲವಾಗುತ್ತ , ಧಾರೆಯಾಗುತ್ತ ಇಳಿದು ನಿನ್ನ ಕೈ ಮೂಗು ಕಾಲು ಕುತ್ತಿಗೆ , ಎದೆ ತೊಡೆ , ಬೆನ್ನು ಸೊ೦ಟ ಎಲ್ಲವನ್ನು ಆವರಿಸಿ ನಿನ್ನ ಘನವನ್ನು ಕರಗಿಸಿತ್ತು. ನೀನು ಯಾವತ್ತಿಗೂ ಘನವಲ್ಲ ಎನ್ನುವದು ನನಗೆ ತಿಳಿಯಿತು ಹಾಗ್ ನಿನಗೆ ತಿಳಿದಿತ್ತು ಬೇಸರವಿಲ್ಲ ನನಗೆ , ಪಾಲಿಗೆ ಬಂದಿದ್ದು ಎಂದೆ , ನಿನಗೆ ಹೆದರಿಕೆಯಿತ್ತು , ನಿನ್ನ ಪ್ರಶ್ನೆ , ನಿನ್ನ ಅಸ್ತಿತ್ವದ ಪ್ರಶ್ನೆ . ಲೋಳೆಯಾದ ನಿನಗೆ ಘನವಾಗಬೇಕಿತ್ತು , ಮಗು ಕೊಡದ ದೇಹ ನಾನಾದೆ.!

ನೀನು ಕತೆಗಳನ್ನು ಬರೆಯುತ್ತಿದ್ದೆ. ನಿನ್ನ ಪ್ರತಿ ಕತೆಯನ್ನು ನೀನು ಬೇರೆ ಬೇರೆ ಹೆಸರಿನಲ್ಲಿ ಬರೆಯುತ್ತಿದ್ದೆ, ಮಾಸಿಕಗಳಲ್ಲಿ ಪ್ರಕಟವಾದ ನಿನ್ನ ಕತೆಗಳಿಗೆ ಮತ್ತೆ ನೀನು ಬೇರೆಯದೇ ಹೆಸರಿನಲ್ಲಿ ಪತ್ರ ಬರೆಯುತ್ತಿದ್ದೆ. ನಿನ್ನ ಲೋಳೆ ಮುಖದಿಂದ ಹೊರಟ ಹಲವಾರು ಕತೆಗಳು ನಿನ್ನಂತೆ ಬೇರೆ ಬೇರೆ ಸ್ವರೂಪ ಪಡೆದು , ನಿನ್ನದೇ ಹೊಗಳಿಕೆ ನಿನ್ನದೇ ತೆಗಳಿಕೆ ಪಡೆಯುತ್ತಿದ್ದವು . ನೀನು ಹೊಗಳುವರ ಜೊತೆ ಹೊಗಳುತ್ತಿದ್ದೆ , ತೆಗಳುವರ ಜೊತೆ ತೆಗಳುತ್ತಿದ್ದೆ. ನೀನು ಮೇಲಕ್ಕೆ ಏರಿದೆ ಅಥವಾ ಕೆಳಕ್ಕೆ ಇಳಿದೆ , ಗೆದ್ದೇ ಅಥವಾ ಸೋತೆ , ಹುಡುಕಿದೆ ಅಥವಾ ಕಳೆದೆ .! 

ನೀನು ನಿನ್ನದೇ ಪರಿಧಿಯಲ್ಲಿ ಸೃಷ್ಟಿಯಾಗಿದ್ದ ಬಿ೦ದುವಾಗಿದ್ದೆ , ನಿನ್ನ ಪರಿಧಿಯೊಳಗೆ  ನೀನು ಕೆಂದ್ರ , ತ್ರಿಜ್ಯಾ , ಜ್ಯಾ ಮು೦ತಾದವುಗಳಾಗಿದ್ದೆ.  ಒಂದೆ ಮನೆಯೊಳಗೇ ಬದುಕುವ ನಾವಿಬ್ಬರು ಬೇರೆ ಬೇರೆ ವೃತ್ತಗಳು . ನಿನ್ನ ಪರಿಧಿ , ನಿನ್ನ ವೃತ್ತ , ನಿನ್ನ ತ್ರಿಜ್ಯ , ನಿನ್ನ ಜ್ಯಾ ಇವೆಲ್ಲದರ ಹೊರಗೆ ನನ್ನ ಅರ್ಧ ವೃತ್ತ , ಪೂರ್ಣವಾಗದ , ಪೂರ್ಣವಾಗಲು ಕಾದ , ಕಾಯುವ ವೃತ್ತ , ನಿನಗೆ ಮನಸ್ಸುಗಳು ಮುಖ್ಯವಾಗಿರಲಿಲ್ಲ , ಹೊರ ಜಗತ್ತಿಗೆ ನೀನು ಆದರ್ಶನಾಗ ಬೇಕಿತ್ತು , ಕತೆಗಾರನಾಗಬೇಕಿತ್ತು , ಗೆದ್ದವನಾಗಬೇಕಿತ್ತು , ಯಾಕೆ ? ನಿನ್ನ ದೇಹದ ಕೊರತೆಗೆ? ಘನವಾಗಲು ಹೊರಟ ಹಾದಿಯಲ್ಲಿ ನಿನ್ನ ಲೋಳೆ ನನ್ನ ಮೇಲೆ ಬಸಿ ಬಸಿದು ಅದರೊಳಗೆ ನನ್ನ ಮುಳುಗಿಸಿ , ಸಿಲುಕಿಸಿ ಕಾಯಿಸಿ ಸಾಯಿಸಿತ್ತು ಅಥವಾ ಸಾಯ ಬೇಕೆಂಬ ಆಸೆಗೋಸ್ಕರ ಬದುಕಿಸಿತ್ತು . 

(ಕವರಿನಲ್ಲಿ ಇನ್ನು ಪುಟಗಳಿದ್ದವು , ಮತ್ತೆ ಟೈಪಿಸೋಣ  )

2 comments:

  1. ಅನನ್ಯತೆಯ ಪ್ರಶ್ನೆ, ಅಸ್ತಿತ್ವದ ಪ್ರಶ್ನೆ ಎರಡೂ ಹೀಗೇ. ಶೈಲಿ ಎಂದಿನಂತೆ ಸೂಪರ್. ಪರಿಧಿಯ ವಿಸ್ತಾರ ಇನ್ನೂ ಆಗಲಿ ಎಂಬುದು ಆಶಯ.

    ಸೂಪರ್ :)

    ReplyDelete
  2. ದಯವಿಟ್ಟು ತಮ್ಮ ಬ್ಲಾಗಿನ 'ಮಾದರಿ' ಯನ್ನು ಬದಲಾಯಿಸಿ, ಓದುಗರಿಗೆ ಸ್ಪಷ್ಟವಾಗಿ ತಮ್ಮ ಮುದ್ರಿಸಿದ ಅಕ್ಷರಗಳು ಗೋಚರಿಸುತ್ತವೆ ಎಂಬುದು ನಮ್ಮ ಸವಿನಯ ವಿನಂತಿ .

    ReplyDelete