ಮತ್ತೆ ಸಂಜೆಯೊಂದು ಅನಾಥವಾಗಿ ಸತ್ತು ಹೋಗುವ ಆತುರದಲ್ಲಿತ್ತು. ಸಂಜೆಗೊಂದು ಧಾವಂತ , ಆತುರ , ಕತ್ತಲನ್ನು ತಬ್ಬುವ ತವಕ. ಆ ಸಂಜೆಯೊಂದರ ಮಡಿಲಲ್ಲಿ ಕುಳಿತು ಸುಮ್ಮಗೆ ಟೀ ಹೀರುತ್ತಿದ್ದವನ ಹೆಸರು ಡಿ.ಪಿತಾಮಹ.
ಕುಳಿತಿರುವದು ಸಿಸಿಯೆಂಬ ಹೋಟೆಲಿನ ಎದುರುಗಡೆಯ ಮರದ ಬುಡದಲ್ಲಿ.
ಇಲ್ಲಿ ಮರವಿದೆ. ಮರಕ್ಕೊಂದು ಬುಡವಿದೆ.ಬುಡದ ಅಡಿಯಲ್ಲಿ ಬುಡದ ಬುಡಕ್ಕೆ ಕಟ್ಟಿಸಿದ ಕಟ್ಟೆಯಿದೆ. ಕಟ್ಟೆಯ ಮೇಲೆ ಜನ.
ಇಲ್ಲಿ ಹಬೆಯಾಡುವ ಗ್ಲಾಸುಗಳಿವೆ. ಗ್ಲಾಸ್ಸುಗಳಲ್ಲಿ ಬಿಸ್ಸಿ- ಬಿಸ್ಸಿ ಟೀ. ಅದನ್ನು ಕುಡಿಯಲು ಜನ.
ಕೌಂಟರಿನಲ್ಲಿ ಕುಳಿತಿದ್ದವ ಸಂತೋಷ. ಟಕಟಕನೆ ಚೀಟಿಗಳನ್ನು ಕೊಡುತ್ತಾ , ದುಡ್ಡು ತೆಗೆದುಕೊಳ್ಳುತ್ತ , ಚಿಲ್ಲರೆ ಕೊಡುತ್ತಾ , ಅಸಹ್ಯವಾಗಿ ಕೈ ಚಾಚುವ ಹಸಿದ ಹೊಟ್ಟೆಗಳನ್ನ , ಹೊಟ್ಟೆಗಳ ಮನವನ್ನು ಸಂಭಾಲೀಸುತ್ತಾನೆ . ಅವನ ಎದುರಲ್ಲಿ ಜನ.
ಪಕ್ಕದಲ್ಲಿ ಸೈಬರ ಕೇಫೆ ಇದೆ. ನೆಲಮಾಳಿಗೆಯಲ್ಲಿ. ಆಳದಲ್ಲಿ ಕುಳಿತು ನೆಟ್ ಮೂಲಕ ಜಗವ ನೋಡುವ ಜನ. ನೆಲಮಾಳಿಗೆಯನ್ನು ತಲುಪಲು ಮೆಟ್ಟಿಲುಗಳು , ಅಲ್ಲಿಂದ ಹೊರ ಲೋಕಕ್ಕೆ ಬರಲು ಅವೇ ಮೆಟ್ಟಿಲುಗಳು..! ಅವುಗಳ ಮೇಲೆ ಜನ.
ಎದುರಿಗಿನ ರಸ್ತೆಯಲ್ಲಿ ವಾಹನಗಳು ಶರವೇಗದಿಂದ ಸಾಗುತ್ತವೆ. ಒಂದಕ್ಕೆ ಮತ್ತೊಂದನ್ನು ಹಿಂದಿಕ್ಕಿ ಮುನ್ನುಗ್ಗುವ ತವಕ. ಅವುಗಳ ಮೇಲೂ ಜನ.
ಡಿ.ಪಿತಾಮಹ. ಚಿಂತಿಸಿದ.
ಸುಡುವ ಜನ , ಸಿಡುಕುವ ಜನ , ತಲ್ಲಣಿಸುವ ಜನ , ತಬ್ಬುವ , ತಾಕೂವ , ಆತುಕೊಳ್ಳುವ , ಆತಂಕಗೊಳ್ಳುವ , ಬೆಚ್ಚುವ , ಬಿಚ್ಚುವ , ಕರಗುವ , ಕರಗಿಸುವ , ಕಾಯಿಸುವ , ಜನ.
ಜನಕ್ಕೆಲ್ಲ ಮನ. ಜನರಂತೆ ಮನ.
ಡಿ.ಪಿತಾಮಹ. ಸುತ್ತಲು ದಿಟ್ಟಿಸಿದ.
ದೃಷ್ಟಿ ಮತ್ತೆ ಸೈಬರ್ ಕೆಫೆಗೆ ಇಳಿಯುವ , ಹತ್ತುವ ಮೆಟ್ಟಿಲುಗಳ ಮೇಲೆ.
ಅಚ್ಚರಿ.
ಆಳದ ನೆಲಮಾಳಿಗೆಗೆ ಇಳಿಯುವ ಮೆಟ್ಟಿಲುಗಳ ಮೇಲೆ ಯಾವತ್ತೂ ತೀರದ ಕುತೂಹಲ.
ಮತ್ತೆ ದಿಟ್ಟಿಸಿದ.
ಜನರು ಕೆಳಗಿನಿಂದ ಮೇಲಕ್ಕೆ ಬರುತ್ತಿದ್ದಾರೆ. ಸ್ವಲ್ಪ- ಸ್ವಲ್ಪವಾಗಿ , ತಲೆ , ಹಣೆ , ಕಣ್ಣು , ಬಾಯಿ ,ಕಟ್ಟು , ಎದೆ, ಕೈ , ಹೊಟ್ಟೆ , ಕಾಲು.... ಪೂರ್ತಿ ದೇಹ.
ಡಿ.ಪಿತಾಮಹ ಸಮೀಕರಿಸುತ್ತಾನೆ. ಪರಿಚಯವೂ ಹೀಗೆ. ಅಲ್ಪವಾಗಿ - ಸ್ವಲ್ಪವಾಗಿ ಕೊನೆಗೆ ಎಲ್ಲವಾಗಿ.
ಕೊನೆಯ ಕೊನೇ ಕಂಡ ಕ್ಷಣಗಳಲ್ಲಿ ಎಲ್ಲವೂ ಬಟಾಬಯಲು. ಕಲ್ಪನೆ ನಿಜವಾದಾಗ ಎಲ್ಲವೂ ಎದುರಲ್ಲಿ.
ಬೆತ್ತಲು... ಬೆತ್ತಲು... ನಗ್ನ..ನಗ್ನ..
ಇಳಿಯುವದು ಅಷ್ಟೇ. ಇಡೀ-ಇಡಿಯಾಗಿ ಸ್ವಲ್ಪ-ಸ್ವಲ್ಪವಾಗಿ ವಕ್ರ-ವಕ್ರವಾಗಿ , ದ್ವಂದ್ವವಾಗಿ.
ಎಳಿದಂತೆ ಎಲ್ಲವೂ ಮಾಯ.ಎಲ್ಲವು ಲೀನ.
ಮತ್ತೆ ಮನಸ್ಸು ಸಮೀಕರಿಸುತ್ತದೆ. ಇಳಿಯುವಾದೆಂದರೆ ಕರಗುವದೆ? ಅವರಲ್ಲಿ ಮಾಯವಾಗುವದೆ? ಬಣ್ಣ-ಬಣ್ಣವಾಗಿ , ಕಿರಣ-ಕಿರಣವಾಗಿ , ಕೊನೆಗೊಂದು ದಿನ ಬಿಂದುವಾಗುವದೆ? ಸಂಖ್ಯಾ - ಅಸಂಖ್ಯ ಬಿಂದುಗಳು ಸೇರಿ ರೇಖೆ , ವರ್ತುಲಾಗಳಾಗುವಂತೆ ಮನಸು - ಮನಸುಗಳ ಬಿಂದುಗಳು ಸೇರಿದರೆ ರೂಪವೊಂದು , ಆಕೃತಿಯೊಂದು ಮೂಡುವದೇ? ಮೂಡಿದ ರೂಪಕ್ಕೆ ಸಂಬಂದ ಎನ್ನಬಹುದೇ? ಅದಕ್ಕೊಂದು ಹೆಸರು ಕೊಡಬಹುದೇ?
ಕಣ್ಣು ಮತ್ತೆ ದಿಟ್ಟಿಸಿತು.
ಇಳಿದವರೆಲ್ಲ ಮೇಲಕ್ಕೆ ಹತ್ತಿ ಬರುತ್ತಿದ್ದಾರೆ. ಒಬ್ಬರು ಬೇಗ ಇನ್ನೊಬ್ಬರು ತಡ. ಒಟ್ಟಿನಲ್ಲಿ ಇಳಿದವರು ಮೇಲಕ್ಕೆ ಬಂದೆ ಬರುತ್ತಿದ್ದಾರೆ.
ಡಿ.ಪಿತಾಮಹ. ತರ್ಕಿಸೀದ.
ಹಾಗಾದರೆ ಇಳಿದ ಸಂಬಂದ ಗಳೆಲ್ಲಾ ಹೊರ ಬರಲೇ ಬೇಕೋ.? ಒಂದು ಪರಿಮಿತಿಯ ಅವಶ್ಯಕತೆಯ ನಂತರ , ಇಳಿದ , ತಬ್ಬಿದ , ಮನಸುಗಳು ಸಂಬಂದ ಗಳ ದಾಟಿ ಹೊರಗೆ ಬರಲೇ ಬೇಕೋ?
ಕೆಲವಕ್ಕೆ ಆತುರ ಕೆಲವಕ್ಕೆ ಸಂಯಮ.
ಒಟ್ಟಿನಲ್ಲಿ ಬಲಿತ ಸಂಬಂದ ಗಳು ಹೊರ ಬೀಳುತ್ತಿವೆ. ಪುಳ-ಪುಳನೆ ಮಳೆ ಬರುವ ಹಾದಿಯಲ್ಲಿ ಮಳೆ ಹುಳಗಳು ಏಳುವಂತೆ , ಮನಸ್ಸಿನ ತುಂಬಾ ವಿಚಾರದ ಹುಳಗಳು ಹರಿದಾಡುತ್ತಿವೆ. ಬೇಕೆನಿಸುವಷ್ಟು , ಬೇಕಾದಷ್ಟು , ಬೇಡವೆನಿಸುವಷ್ಟು , ಬೇಡುವಷ್ಟು.
ಹಾಗಾದರೆ ಇಳಿದವೆಲ್ಲವೂ , ಇಳಿದ ಮನಸ್ಸುಗಳೆಲ್ಲವೂ ಸಂಬಂದಗಳೆ ಆಗಬೇಕೆ?
ಗೊತ್ತಿಲ್ಲ ಅಥವಾ ಇರಬಹುದೇನೋ?
ಬಿಂದು - ಬಿಂದು ಸೇರಿ ಆದ ಆಕೃತಿಗೆ ಹೆಸರಿಡುವಂತೆ ಮನಸ್ಸು ಮನಸ್ಸು ಸೇರಿ ಆಗುವ ಆಕೃತಿಗೆ ಹೆಸರು ಇಡುವದು ಅಷ್ಟು ಅಗತ್ಯವೇ?
ಇರಬೇಕು. ಇಲ್ಲವಾದರೆ ನನ್ನ , ನಿಹಾರಿಕಾಳ ಮನಸುಗಳ ಸಂಬಂದಕ್ಕೆ ಪ್ರೀತಿ ಎನ್ನುವ ಹೆಸರನ್ನು ಅವಳು ಕೊಡುತ್ತಿರಲಿಲ್ಲ. ಕೊಟ್ಟ ಹೆಸರು ಬಲಿತು ಎದೆಯೊಳಗೆ ಇಳಿಯುತ್ತಳಿರಲಿಲ್ಲ.
ಅವಳು ನನ್ನೊಳಗೆ ಇಳಿದಳೆ?
ನಾನು ಅವಲೊಳಗೇ ಹತ್ತಿದೆನೇ?
ಅಥವಾ ಒಟ್ಟಿಗೆ ಇಳಿದು ಎಲ್ಲ ಮುಗಿದ ಮೇಲೆ ಹತ್ತಿದೇವೆ?
ಸಮೀಕರಣ ನೆಲಮಾಳಿಗೆಯೊಂದಿಗೆ.
ಇಳಿದುದು ಅವಳೇ ಇರಬೇಕು. ಇಂಚು - ಅಂಚಾಗಿ , ಮುದ್ದೆ- ಮುದ್ದೆಯಾಗಿ , ಕಾದು ಮಾಗಿದ ಕಿಚ್ಚೊಂದು ಕನವರಿಸಿ , ಕವಳೋಡೆದು , ತೊನೇ - ತೊನೆದು
ಕರುಳ ಬಳ್ಳಿಯನ್ನು , ಜಗಿ ಹತ್ತಿ , ಕಣ್ಣುಗಳ ಮೂಲಕ ತಂಪನೆರೆದು ಮನದೊಳಗೆ ಬೇರು ಬಿಟ್ಟು , ಕನಸುಗಳ ಬೆಳೆದು , ಸುಖವ ಹೀರಿ, ತೊನೆದು ತೂಗಾಡಿ , ಝೇಂಕರಿಸಿ ಹೃದಯದೊಳಗೆ ಒಲವ ಕೆತ್ತಿದಂತೆ.
ನನಗೆ ಇದೇನೆಂದು ಗೊತ್ತಿರಲಿಲ್ಲ. ಅವಳಿಗೂ ಹೀಗೆ ಅಗಿತ್ತ?
ಕೇಳಿದೆ.
ಹೌದು ಎಂದಳು. ಪ್ರೀತಿಯಿದು ಎಂದಳು . ತಬ್ಬಿದಲು. ಆವುಚಿಕೊಂಡಳೂ. ಹಿಡಿದೆಳೆದು ಆವರಿಸತೊಡಗಿದಳು
ಉಸಿರು ಭಾರ , ಮಣ ಭಾರ. ಮನಸ್ಸು ಆಸೆಯ ವಿಗ್ರಹ. ಬಯಕೆಗೆ ಆಗ್ರಹ.. ಎಲ್ಲ ಮುಗಿದ ಮೇಲೆ ಹದವಾದ ಮಳೆ.!
ಮತ್ತೆ ಇದೇನು? ನಾನು
"ಪ್ರೀತಿ" ಅವಳು , ನಿಹಾರಿಕ.
ಮತ್ತೆ ಉಸಿರಿಗೆ ತೀರದದಾಹ.. ದಣಿವಿಗೆ ದೇಹ.
ಇಳಿಯುವದು .. ಹತ್ತುವದು.. ಮೆಟ್ಟಿಲುಗಳನ್ನು ಅಲ್ಲ .. ದೇಹಗಳನ್ನು... ಮನಸ್ಸುಗಳನ್ನು..ಕ್ರಿಯೆಗಳನ್ನ.
ಅರಳಿಸುತಿದ್ದೆ..ಅರಳುತ್ತಿದ್ದಳು... ಕೆರಳಿಸುತ್ತಿದ್ದಳು... ಕೆರಳುತ್ತಿದ್ದೆ..! ನಮ್ಮಿಬ್ಬರ ಜಗದಲ್ಲಿ , ಮನಸುಗಳೇ ನಕ್ಷತ್ರಗಳು.
ಇಳಿದಂತೆ , ಹತ್ತಿದಂತೆ ಕಾಲ ಉರುಳಿದಂತೆ ದೇಹದ , ಮಾನಸಿನ ಮೂಲೆ ಮೂಲೆಗಳು ಪರಿಚಯವಾದಂತೆ ಆಳ ಸಾಗರದಲ್ಲಿ ಅನುಮಾನದ ಅಲೆಯೊಂದು ಅಲೆ-ಅಲೆದು ಹುತ್ತವಾಗತೊಡಗಿತ್ತು.
ಮನಸು ಮನಸುಗಳ ವೃತ್ತದಿಂದ ಬಿಂದುವೊಂದು ದೂರವಾಗಿ ರೂಪಿಸಿದ
ಆಕೃತಿಯ ಹೆಸರು.ಸಂಶಯ .
ದೇಹಗಳ ಎಡೆಯಲ್ಲಿ , ಮನಸ್ಸುಗಳ ಮೂಲೆಯಲ್ಲಿ ಮತ್ತೆ ಹುಡುಕಾಟ , ಹುಡುಕಾಟದ ಹೆಸರು ಕುರುಹು. ಪುರಾವೆ.
ನಿಹಾರಿಕಾ ಪ್ರಶ್ನಿಸಿದಳು " ಬೆರ್ಪಡಲು ಕಾರಣಕ್ಕೊಂದು ಪುರಾವೆ ಬೇಕೇ?"
ಅವಳ ಕಣ್ಣುಗಳು ತಣ್ಣಗೆ ಇದ್ದವು. ನಿರ್ಧಾರವಿತ್ತು
ನಾನು ಅವಳ ಕಣ್ಣುಗಲ್ಲಿ ಇಳಿಯಲು ಪ್ರಯತ್ನಿಸಿದೆ. ಕಣ್ಣು ಕೊರೆಯುತ್ತಿತ್ತು . ನನ್ನ ನಿಹಾರಿಕಾಳ ಕಣ್ಣುಗಳೇ ಎಂಬ ಅನುಮಾನ ಬರುವಷ್ಟು ತಣ್ಣಗೆ.
ನೆತ್ತಿಯೊಳಗಿ೦ದ ಜಲಲ ಧಾರೆಯೊಂದು ಇಳಿದು , ಹರಿದು ಎದೆಯೊಳಗೆ ಬಚ್ಚಿಟ್ಟ ಗೂಡನ್ನು ಕೊಚ್ಚಿ ಹೋಗುವಂತೆ , ಕಾಲ ತುದಿಯ ಚಳುಕು , ಸಿಡಿಲಂತೆ ತಳಮಳಿಸಿ ಉಸಿರ ಬಿಸಿ ಮಾಡಿ, ಕಣ್ಣೊಳಗಿಂದ ನೀರ ಹನಿಯೊಂದು ಚಳ್ಳನೆ ಚಿಮ್ಮಿದಂತೆ.
ಮನಸ್ಸು ಬಿಕ್ಕಳಿಸಿ ಭೊರ್ಗರಿಯ ತೊಡಗಿತು.
ಮನಸಿನ ವರ್ತುಲವ ಕತ್ತರಿಸಿದಂತೆ. ಬಿಂದುವೊಂದರಲ್ಲಿ ತುಂಡರಿಸಿದಂತೆ. ಕತ್ತರಿಸಿದ ವರ್ತುಲಕ್ಕೂ ಒಂದು ರೂಪ. ರೇಖೆ. ರೇಖೆಯಲ್ಲಿ ಬಿಂದುಗಳಿವೆ. ಎರಡು ಅಂಚುಗಳು ಇವೆ. ಆದರೆ ದೂರ ದೂರ. ಹತ್ತಿರವಿದ್ದು ಸೇರಲು ಆಗದಷ್ಟು.
ಡಿ.ಪಿತಾಮಹ ತಲೆ ಕೊಡವಿದ.
ನೆನಪುಗಳ ಕಳೇಬರ ಎದುರಿಗೆ. ಕಾಲನ ಚಿತೆಯೊಳಗೆ ಅರೆ ಬೆಂದ ನೆನಪುಗಳ ಕಳೇಬರ. ಒಳಗೆ ಸುಡಲು ಬಿಟ್ಟರೂ ಬೂದಿಯಾಗದ ನೆನಪುಗಳು.
ಮತ್ತೆ ದಿಟ್ಟಿಸಿದ.
ಟೀ ಖಾಲಿಯಾಗುತ್ತಾ ಬಂದಿತ್ತು. ಕೊನೆಯ ಗುಟುಕು. ಬಹುಶ: ಎಲ್ಲವೂ ಒಂದಲ್ಲ ಒಂದು ದಿನ ಖಾಲಿಯಾಗಲೇ ಬೇಕೇನೋ?
ನಾಳೆ ಮತ್ತೆ ಬೇರೆ ಟೀ ಗ್ಲಾಸ್. ಬೇರೆ ಟೀ.
ಇಳಿಯುವವರು ಇಳಿಯುತ್ತಿದ್ದಾರೆ.
ಹತ್ತುವವರು ಹತ್ತುತ್ತಿದ್ದಾರೆ.
sambandhagala mele barite yake?
ReplyDelete