Friday, December 16, 2011

ತಿಂಗಳಿಗೊಂದು ಪುಟ #೧


ವೃತ್ತ  -  ಊರು 


ಎಕ್ಸ್. ಕೆ. ಮರಸರ ಹಡಪದ್ ವರ್ಣಿಸಿದ ಊರು :

ಊರು ಶುರುವಾಗುವದು ಎಲ್ಲಿಂದ ಎನ್ನುವದು ಅಥವಾ ಊರು ಎಲ್ಲಿ ಮುಕ್ತಾಯಗೊಳ್ಳುತ್ತದೆ ಎನ್ನುವದರ ಸಲುವಾಗಿ ಸರ್ಕಾರಿ ದಾಖಲೆಗಳು ಇದ್ದರೂ , ಪ್ರತಿ ವರ್ಷ ಊರು ಬದಲಾಗುತ್ತ , ಉದ್ದವಾಗುತ್ತಾ , ಅಗಲವಾಗುತ್ತಾ , ಹಿಗ್ಗುತ್ತಾ ಹೋಗಿದ್ದರಿಂದ ಊರಿನ ಗಡಿ ಯಾವುದು ಎನ್ನುವದರ ಕುರಿತು ಸ್ಪಷ್ಟ ಮಾಹಿತಿ ಕೊಡುವದು ಕಷ್ಟವಾಗುತಿತ್ತು.  ನಾಗರಿಕತೆಯ ಲಕ್ಷಣಗಳು ಪ್ರಾರಂಭವಾದಾಗ ಊರಿನ ಉಗಮವಾಗುತಿತ್ತು ಹಾಗೂ ಅದೇ ನಾಗರಿಕತೆಯ ಲಕ್ಷಣಗಳು ಊರಿನ ಕೊನೆಗೂ ಇರುತ್ತಿದ್ದವು. ಕೆಲವೊಮ್ಮೆ ಇದು ಅದಲು ಬದಲು ಆಗುತ್ತಿದ್ದವು. ಕೊನೆ ಮೊದಲಾಗೂ ಮೊದಲು ಕೊನೆಯಾಗೂ ಇರುತ್ತಿದ್ದವು. ಊರು ಬೆಳೆಯುತಿತ್ತು ಅಥವಾ ಜನರು ಬೆಳೆಯುತ್ತಿದ್ದರು. ಜನ ಬೆಳೆದಂತೆ ಊರು ಬೆಳೆಯಿತು. ಊರಿಗೆ ತನ್ನದೇ ಆದ ಗುಣ ಲಕ್ಷಣಗಳು ಇದ್ದವು ಹಾಗೂ ಅದನ್ನು ಆ ಊರಿನ ಜನ ಇಲ್ಲವೆಂಬಂತೆ ಕಡೆಗಣಿಸಿದ್ದರು. ಈ ಊರು ಬೇರೆ ಊರುಗಳಂತೆ, ತನ್ನದೇ ಆದ ಅಕ್ಷಾಂಕ್ಷ , ರೇಖಾಂಕ್ಷಗಳನ್ನು ಹೊಂದಿತ್ತು. ಇಲ್ಲಿನ ಜನ ಅದರ ಪರಿವೆಯೇ ಇಲ್ಲದೇ, ತಮ್ಮದೇ ಅಕ್ಷಾಂಕ್ಷ ಗಳಲ್ಲಿ ಬೇರೆ ಬೇರೆಯವರ ರೇಖಾಂಕ್ಷಗಳಲ್ಲಿ ಬದುಕುತ್ತಿದ್ದರು. ಇವರು ಅವರ ರೇಖೆಗಳಲ್ಲಿ , ಅವರು ಇವರ ರೇಖೆಗಳಲ್ಲಿ ಒಬ್ಬರನ್ನೊಬ್ಬರನ್ನು ಹುಡುಕುತ್ತಾ , ಸಿಕ್ಕರೂ ಸಿಕ್ಕಿದುರ ಪರಿವೆ ಇಲ್ಲದೇ , ಮನಸು ಮನಸುಗಳ ನಡುವೆ ಸಮಭಾಜಕ ವೃತ್ತ ನಿರ್ಮಿಸಿ ಬದುಕುತ್ತಿದ್ದರು.
ಊರಿನ ಒಳಗೆ ಪ್ರವೇಶಿಸಲು ರಸ್ತೆಯಿತ್ತು, ಆ ರಸ್ತೆ ಬೇರೆ ಯಾವುದೋ ಒಂದು ಊರಿನಿ೦ದ ಪ್ರಾರಂಭವಾಗಿ , ಇನ್ಯಾವುದೋ ಊರಿಗೆ ಹೋಗಿ ಈ ಊರಿಗೆ ಬಂದು ಇಲ್ಲಿನ ಮೂಲಕ  ಮತ್ಯಾವುದೋ ಊರಿಗೆ ಹೋಗುತಿತ್ತು. ಈ ರಸ್ತೆ ಬಹಳ ವಿಸ್ಮಯಕಾರಿಯಾಗಿಯೂ , ನಿಗೂಢವಾಗಿಯು ಇತ್ತು, ರಸ್ತೆ ಎಲ್ಲಿಗೂ ಹೋಗದೇ ಚಲಿಸುತಿತ್ತು. ರಸ್ತೆ ನೀವು ಇದ್ದಲ್ಲೇ ಇರುತಿತ್ತು , ನೀವು ಹೋದಲ್ಲೇ ಹೋಗುತಿತ್ತು. ಆದರೂ ಅದಕ್ಕೆ ಚಲನೆಯಿಲ್ಲದ ಚಲನೆ ಇತ್ತು. ಇಂತ ರಸ್ತೆಯೊಂದು ಈ ಊರಿಗೂ ಇತ್ತು. ಮುಖ್ಯ ರಸ್ತೆ ಊರನ್ನು  ಸಮವಲ್ಲದ ಎರಡು ಭಾಗವಾಗಿ ವಿಭಜಿಸಿತ್ತು. ಸಮವಲ್ಲದ ಎರಡು ಭಾಗಗಳಲ್ಲಿ ಅಸಮ ಮನಸ್ಕ ಜನ ವಾಸವಾಗಿದ್ದರು. ಮುಖ್ಯ ರಸ್ತೆಯ ಮರಿ ರಸ್ತೆ , ಮಕ್ಕಳು ರಸ್ತೆ  ಹಾಗೂ ಅವುಗಳ ಸಂಬಂಧಿ ರಸ್ತೆಗಳು ಸಂಪೂರ್ಣ ಊರನ್ನ ಆವರಿಸಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ಮುಚ್ಚಿದ , ಆಳವಿರದ ಕಾಲುವೆಗಳಿದ್ದವು ಮತ್ತು ಅವುಗಳಲ್ಲಿ ಸಾರಾಯಿ ಪಾಕಿಟುಗಳು ಇದ್ದವು. ಇನ್ನು ಹಲವು ಕಡೆ ಎರಡು ಕಾಲಿನ , ನಾಲ್ಕು ಕಾಲಿನ ಪ್ರಾಣಿಗಳ ವಿಸರ್ಜನೆಗಳಿದ್ದವು. ರಸ್ತೆ ಇಳುಕಲಿನಲ್ಲಿ ಜನರನ್ನು , ವಾಹನಗಳನ್ನು ಓಡುವಂತೆಯೂ , ಏರಿನಲ್ಲಿ ನಿಧಾನವಾಗುವಂತೆಯೂ , ತಿರುವಿನಲ್ಲಿ ಹುಷಾರಾಗಿ ಹೋಗುವಂತೆಯೂ ಮಾಡುತಿತ್ತು.  ರಸ್ತೆಯ ಬಡತವನ್ನು ,ಸಿರಿತನವನ್ನೂ ಇಟ್ಟುಕೊಂಡು ಪ್ರತಿ ವರ್ಷ ರಾಜಕಾರಣಿಗಳು ಓಟು ಕೇಳುತಿದ್ದರು. ರಸ್ತೆಯಮೈ ಮೇಲೆ ಅಲ್ಲಲ್ಲಿ ಗುಳ್ಳೆಗಳು  ಎದ್ದು ಒಡೆದಿದ್ದವು.
 ಇಂತಹ ರಸ್ತೆಯನ್ನು ಜನ ಹೋಗಲು , ಬರಲು , ಅಡ್ಡಾಡಲು , ತಿರುಗಾಡಲು , ನಿಂತುಕೊಳ್ಳಲು ಹಾಗೂ ಇನ್ನೂ ಹಲವಾರು ಕೆಲಸಗಳಿಗೆ ಬಳಸುತಿದ್ದರು. ಊರಿನಲ್ಲಿ ಸಾವುಗಳು , ಮರಣಗಳು ಸಂಭವಿಸುತ್ತಿದ್ದವು. ಇಂತಹ ಸಂದರ್ಭಗಳಲ್ಲಿ ಜನ ಹೆಣವನ್ನು ಊರ ಹೊರಗಿರುವ ಸ್ಮಶಾನಕ್ಕೆ ಒಯ್ಯುತ್ತಿದ್ದರು. ಹಾಗೆ ಆದಾಗ ಊರಿನ ಜನ ಕೆಲವೊಮ್ಮೆ ಅಳುತಿದ್ದರು. ಊರಿಗೆ ಅಥವಾ ಊರಿನಿ೦ದ  ಜನ ಬರುತಿದ್ದರು , ಜನ ಹೋಗುತಿದ್ದರು , ದನ ಕರುಗಳು ಇದ್ದವು , ಹಾಗೂ ಸಾಯುತ್ತಿದ್ದವು. ಊರಿನಲ್ಲಿ ಹಲವಾರು ನಾಯಿಗಳು ಇದ್ದವು. ಅವು ಯಾವತ್ತೂ ಓಡುತ್ತಾ ಅಥವಾ ಮಲಗುತ್ತಾ ಅಥವಾ ಬೊಗಳುತ್ತಾ ಇದ್ದವು. ಊರಿನಲ್ಲಿ ಮಣ್ಣು ಕಪ್ಪು , ಕಂದು , ಅರೆ ಬಿಳಿ ಮತ್ತು ಹೇಳಲಿಕ್ಕಾಗದ ಇನ್ನೂ ಕೆಲವು ಬಣ್ಣಗಳಲ್ಲಿ ಇತ್ತು.  ಊರಿನ ಸುತ್ತ ದಟ್ಟವಾದ ಕಾಡು ಬೆಳೆದಿತ್ತು. ಊರಿನ ಗಡಿ ಬೆಳೆದಂತೆ ಕಾಡಿನ ಗಡಿ ಕಡಿಮೆಯಾಗುತ್ತಿತ್ತು. ಜನರು ಊರಿನ ಮೇಲೆ ಊರು ಕಾಡಿನ ಮೇಲೆ ಕಾಲ ಕಾಲಕ್ಕೆ ಅವ್ಯಾಹಿತವಾಗಿ ಅತ್ಯಾಚಾರ ಮಾಡಿಕೊಂಡು , ಸ್ವಲ್ಪ ದಿನಕ್ಕೆ ಮೊದಲಿನಂತೆ ಆಗಿ ಬದುಕುತ್ತಾ ಸಾಯುತ್ತಾ ಇದ್ದವು. ಊರಿನ ಮೇಲೆ ಎಲ್ಲ ಕಡೆ ಇರುವಂತೆ ಆಕಾಶವಿತ್ತು. ಕೆಲವೊಮ್ಮೆ ಧೋ ಎಂದು ಆಕಾಶ ಊರಿನ ಮೇಲೆ ಸ್ಖಲಿಸುತ್ತಿತ್ತು.  ಪ್ರತಿ ಮಳೆಗಾಲದ ಪ್ರಾರಂಭವನ್ನೂ ಊರು ಪ್ರಥಮ ರಾತ್ರಿಗೆ ಕಾಯುವ ವಧುವಿನಂತೆ ಕಾಯುತ್ತಿತ್ತು. ಮಿಲನದ ಪ್ರತಿ ಕೊನೆಗೆ ಊರು ಘಮ ವನ್ನು ಸೂಸುತ್ತಿದ್ದಳು. ಕೆಲವೊಮ್ಮೆ ಆಕಾಶದ ದಾಹ ಹೆಚ್ಚಾದಾಗ ಆಗಸದ ಅಬ್ಬರ ಜಾಸ್ತಿಯಾಗುತ್ತಿತ್ತು. ಆಗಲೂ ಊರು ಮೌನವಾಗಿ ಸಹಿಸುತ್ತಿತ್ತು. ಕೊಚ್ಚಿ ಹೋಗುವದು ಊರು ಆಗಿದ್ದರೂ ಜನ ಅಳುತ್ತಿದ್ದರು. 

4 comments:

  1. ನಿಮ್ಮ ನಿರೂಪಣೆಗೊಂದು ಸಲಾಂ ಸಚೇತನ್.. ಸಾಮಾನ್ಯವಾಗಿ ನಾವುಗಳು ನೋಡಿರುವ ಊರನ್ನೇ ನಿಮ್ಮ ನಿರೂಪಣೆ ಭಿನ್ನವಾಗಿ ಪರಿಚಯಿಸುತ್ತದೆ.. ಆ ಅಕ್ಷಾಂಶ-ರೇಖಾಂಶ ಮತ್ತು ಸಮಭಾಜಕ ವೃತ್ತಗಳಂತಹ ಭೌಗೋಳಿಕ ಪದಗಳನ್ನಿಟ್ಟುಕೊಂಡು ನೀವು ನಿರೂಪಿಸಹೊರಟ ಊರಿನ ಮತ್ತು ಅಲ್ಲಿನ ಜನರ ಬದುಕಿನ ಚಿತ್ರಣ ಮನಮೋಹಕವಾಗಿದೆ..:))) ಅಲ್ಲಲ್ಲಿ ನೀವು ಬಳಸಿರುವ ಹಾಸ್ಯ ಮಿಶ್ರಿತ ಸಾಲುಗಳ ಜೂಟಾಟ ಮನೋಜ್ಞ ಮತ್ತು ಮನಮೋಹಕ.. ಸರಳ ಪದಗಳ ಸಾಲುಗಳನ್ನಿಟ್ಟುಕೊಂಡು ಓದುಗನನ್ನು ಗೊಂದಲದಲ್ಲಿ ಸಿಲುಕಿಸುತ್ತಾ ಅದರ ಅರ್ಥವನ್ನು ತಳಿಯಲು ಮತ್ತೆ ಮತ್ತೆ ಓದುವಂತೆ ಮಾಡುವ ನಿಮ್ಮ ನಿರೂಪಣಾ ಶೈಲಿ ನನ್ನ ಮೆಚ್ಚುಗೆಗೆ ಬಹುವಾಗಿ ಪಾತ್ರವಾಗಿದೆ..:)))

    ReplyDelete
  2. ಊರಿನ ವ್ರತ್ತಾಂತ ಚೆನ್ನಾಗಿದೆ....
    ನಿರೂಪಿಸಿದ ಶೈಲಿ ಇಷ್ಟವಾಯ್ತು

    ReplyDelete
  3. after a long time barita idde anstu... chennagiddu... :)

    ReplyDelete