Saturday, September 8, 2018

ಈ ಬ್ಯಾಂಕುಗಳ ಸಹವಾಸವೇ ಬೇಡ



ಮೂಲ ಕಥೆ : ಸ್ಟೀಫನ್ ಲೀಕಾಕ್

ನನಗೆ ಬ್ಯಾಂಕಿಗೆ ಹೋಗುವುದೆಂದರೆ ಕಿರಿಕಿರಿ. ಇಂಥದ್ದೆ ಅನ್ನುವಂತಿಲ್ಲ ಬ್ಯಾಂಕಿಗೆ ಸಂಬಂಧಿಸಿದಂತೆ ಎಲ್ಲವೂ ಕಿರಿಕಿರಿಯೆ. ಬ್ಯಾಂಕಿನಲ್ಲಿನ ಕ್ಲರ್ಕ್ಗ್ ಗಳು , ಅವರು ಕುಳಿತಿರುವ ಕೌಂಟರ್ ಗಳು , ಅವರು ಎಣಿಸುವ ಹಣ .. ಒಟ್ಟಿನಲ್ಲಿ ಬ್ಯಾಂಕಿನಲ್ಲಿ ನಡೆಯುವ ಪ್ರತಿಯೊಂದು ನನ್ನಲ್ಲಿ ಅಸಾಧ್ಯವಾದ ರಗಳೆಯನ್ನುಂಟು ಮಾಡುತ್ತವೆ.ಇದೇ ಕಾರಣಕ್ಕೆ ಇರಬಹುದು ,ಬ್ಯಾಂಕಿನ ಹೊಸ್ತಿಲನ್ನು ದಾಟಿ ಒಳಗಡಿಯಿಟ್ಟು ಏನಾದರೂ ವ್ಯವಹಾರ ಶುರು ಮಾಡೋಣ ಎನ್ನುವಷ್ಟರಲ್ಲಿ ನಾನೊಬ್ಬ ಬೇಜವಾಬ್ದಾರಿಯುಳ್ಳವನೂ ,ಅತ್ಯಂತ ಮೂರ್ಖನೂ ಆದ ವ್ಯಕ್ತಿಯ0ತೆ ವರ್ತಿಸುವದಕ್ಕೆ ಶುರು ಮಾಡುತ್ತೇನೆ.  
ಇದೆಲ್ಲ ನನಗೆ ಗೊತ್ತಿದುದರಿಂದಲೇ ನಾನು ಇಷ್ಟೂ ದಿನ ಬ್ಯಾಂಕಿನಿಂದ ದೂರವಿದ್ದುದು. ಆದರೆ ಇತ್ತೀಚಿಗಷ್ಟೆ ನನ್ನ ಸಂಬಳ ಸುಮಾರು ಎಂಟೂನೂರು ರುಪಾಯಿಗಳಷ್ಟು ಹೆಚ್ಚಾದುದರಿಂದ ಮತ್ತು ಈ ಹೆಚ್ಚಿಗೆಯಾದ ಮೊತ್ತವನ್ನ ಇರಿಸಲಿಕ್ಕೆ ಎಲ್ಲಿಯೂ ಸರಿಯಾದ ಜಾಗ ಸಿಗದಿದುರಿಂದ ನಾನು ಅನಿವಾರ್ಯವಾಗಿ ಬ್ಯಾಂಕಿಗೆ ಹೋಗಲೇ ಬೇಕಾಯಿತು.
ಬ್ಯಾಂಕಿನೊಳಗೆ ಕಾಲಿರಿಸಿದ್ದೇ ಅಲ್ಲಿ ಕೌಂಟರಿನಲ್ಲಿ ಸಾಲಾಗಿ ಕುಳಿತಿದ್ದ ಕ್ಲರ್ಕ್ ರನ್ನೆಲ್ಲ ದಿಟ್ಟಿಸಿದೆ. ನನ್ನ ಪ್ರಕಾರ ಹೊಸತಾಗಿ ಅಕೌಂಟ್ ತೆರೆಯುವ ಎಲ್ಲರೂ  ಈ ಕ್ಲರ್ಕ್ ಗಳನ್ನ ಭೇಟಿಯಾಗಲೇ ಬಾರದು ನೇರವಾಗಿ ಬ್ಯಾಂಕ್ ನ ಮೇನೆಜರ್ ನ್ನ ಭೇಟಿಯಾಗ ತಕ್ಕದ್ದು.
ನಾನು ’ಅಕೌಂಟೆಂಟ್’ ಎಂದು ಬೋರ್ಡು ನೇತಾಕಿದ್ದ  ಕೌಂಟರಿನತ್ತ ನಡೆದೆ. ಕೌಂಟರಿನ ಹಿಂದೆ ಉದ್ದನೆಯ ಕ್ಲರ್ಕ್ ಒಬ್ಬ ತಣ್ಣನೆಯ ಭೂತದಂತೆ ಕುಳಿತಿದ್ದ. ಅವನ ಮುಖ ನೊಡಿದ್ದೆ ನನಗೆ ಕಿರಿಕಿರಿಯಾಗತೊಡಗಿತು. ಬಹುಶ: ಇದೇ ಕಾರಣಕ್ಕೆ ನನ್ನ ಧ್ವನಿ ಅಗತ್ಯಕ್ಕಿಂತ ಹೆಚ್ಚೇ ದು:ಖಮಯವಾಗಿದ್ದಂತೆ ತೋರಿತು.
“ನಾನು ಮೇನೆಜರ್ ನ್ನ ನೋಡಬಹುದೇ ? “  ನಾನು ಇಷ್ಟನ್ನೇ ಕೇಳಿದ್ದರೆ ಚೆನ್ನಾಗಿತ್ತೇನೋ ಆದರೆ ನನಗೆ ಅರಿವಿಲ್ಲದಂತೆ ನಾನು ಇನ್ನೊಂದು ಶಬ್ದ ಸೇರಿಸಿದ್ದೆ – ’ಅವರನ್ನೊಬ್ಬರನ್ನೇ.’. ನಿಜಕ್ಕೂ ಈ ಇನ್ನೊಂದು ಶಬ್ದ ಸೇರಿಸಿದ್ದು ಯಾಕೆ ಎನ್ನುವದು ನನಗೆ ಸಹ ಗೊತ್ತಿಲ್ಲ.
“ಖಂಡಿತಾ” , ಉದ್ದಕೆ , ತಣ್ಣಗೆ ಕೌಂಟರಿನ ಹಿಂದೆ ಕುಳಿತಿದ್ದ ಭೂತ ಒಳ ಹೋಗಿ ಮೇನೆಜರ್ ನ್ನ ಕರೆತಂದ.
ಈ ಮ್ಯಾನೆಜರ್ ಎನ್ನುವ ಮನುಷ್ಯ ಈಗ ತಾನೇ ಗೋರಿಯೊಳಗಿನಿಂದ ಎದ್ದು ಬಂದಿದ್ದಾನೆಯೋ ಎನ್ನುವಷ್ಟು ತಣ್ಣಗೆ , ನಿರ್ವಿಕಾರವಾಗಿದ್ದ.
“ಈ ಬ್ಯಾಂಕಿನ ಮೇನೆಜರ್ ತಾವೇನೊ ? “ ನಾನು ಪ್ರಶ್ನಿಸಿದೆ. ದೇವರಾಣೆ ನನಗೆ ಅದರಲ್ಲಿ ಯಾವುದೇ ಸಂದೇಹ ಇಲ್ಲದಿದ್ದರೂ , ಪ್ರಶ್ನೆ ನನ್ನ ಬಾಯಿಯಿಂದ ಬುಳಕ್ಕನೆ ಹೊರ ಬಂದಿತ್ತು.
“ಹೌದು” ಅವನು ಉತ್ತರಿಸಿದೆ.
“ನಾನು ತಮ್ಮ ಜೊತೆ ಮಾತನಾಡಬಹುದೇ ?” ನಾನು ಕೇಳಿದೆ . ಈ ಬಾರಿ  ’ತಮ್ಮೊಬ್ಬರ ಜೊತೆಗೆ ಮಾತ್ರ’ ಎನ್ನುವ ಮಾತನ್ನು ನಾನು ಸೇರಿಸಿಲ್ಲವಾದರೂ ಅದು ಮ್ಯಾನೆಜರ್ ಗೆ ಈ ಮೊದಲೇ ತಿಳಿದಂತೆ ಇತ್ತು.
ಮ್ಯಾನೆಜರ್ ನನ್ನನ್ನು ಅತ್ಯಂತ ಎಚ್ಚರಿಕೆಯಿಂದ ನೋಡುತ್ತಿರುವಂತೆ ಭಾಸವಾಯಿತು. ಬಹುಶ: ನಾನು ಯಾವುದೋ ರಹಸ್ಯ ವಿಷಯವನ್ನ ಹೇಳಲಿಕ್ಕೆ ಬಂದಿದ್ದೇನೆ ಎಂದು ಆತ ಭಾವಿಸಿರಬೇಕು.
“ಬನ್ನಿ ನನ್ನ ಜೊತೆಗೆ “ ಇಷ್ಟು ಹೇಳಿ ಆತ ನನ್ನನ್ನು ಅವನ ಛೆಂಬರಿಗೆ ಕರೆದೊಯ್ದು,  ಛೆಂಬರಿನ ಬಾಗಿಲನ್ನು ಭದ್ರವಾಗಿ ಹಾಕಿದ.
“ಈಗ , ಇಲ್ಲಿ ಯಾವುದೇ ಅಡಚಣೆ ಇಲ್ಲದೆ  ಆರಾಮವಾಗಿ ಕುಳಿತು ಮಾತನಾಡಬಹುದು”  ಮ್ಯಾನೆಜರ್ ಗೆ ನನ್ನ ವಿಷಯದಲ್ಲಿ ಆತಂಕ ತುಂಬಿದ ಕುತೂಹಲ ಇದ್ದಂತೆ ಅನಿಸಿತು.
“ಇದೇನಿದು ನಿಂತೇ ಇದ್ದಿರ ? ಕುಳಿತುಕೊಳ್ಳಿ ,”
ನಾವಿಬ್ಬರೂ ಕುರ್ಚಿಗಳಲ್ಲಿ ಎದುರುಬದುರಾಗಿ ಕುಳಿತು ಒಂದು  ಕ್ಷಣ ಒಬ್ಬರನ್ನೊಬ್ಬರು ದಿಟ್ಟಿಸಿದೆವು. ನನಗೆ ಏನು ಮಾತನಡಬೇಕು ಎನ್ನುವದೇ ತಿಳಿಯಲಿಲ್ಲ.
“ನನ್ನ ಊಹೆ ಸರಿಯಾಗಿದ್ದರೆ ನೀವು ಸಿಬಿಐ ಅಧಿಕಾರಿಗಳೆ ಇರಬೇಕು ಅಲ್ಲವೇ ? “ ಮ್ಯಾನೆಜರ್ ಅತ್ಯಂತ ತಗ್ಗಿದ ದನಿಯಲ್ಲಿ ಪ್ರಶ್ನಿಸಿದ.
ಬಹುಶ: ನನ್ನ ನಿಗೂಢವಾದ ವರ್ತನೆ ಅವನಲ್ಲಿ ಈ ಸಂಶಯಕ್ಕೆ ಹುಟ್ಟು ಹಾಕಿತ್ತು ಅನ್ನಿಸುತ್ತದೆ ಮತ್ತು ಅವನಿಗೆ ಹೀಗೆ ಅನ್ನಿಸುತ್ತಿದೆ ಎನ್ನುವ ಯೋಚನೆಯೆ ನನ್ನನ್ನು ಇನ್ನೂ ಅಸ್ವಸ್ಠನನ್ನಾಗಿ ಮಾಡಿತ್ತು.
“ಅಲ್ಲ ನಾನು ಸಿಬಿಐನಿಂದ ಬಂದವನಲ್ಲ” ನನಗೆ ಗೊತ್ತಿಲ್ಲದಂತೆ ನನ್ನ ಧ್ವನಿ ಅದೆಷ್ಟು ಹರಿತವಾಗಿತ್ತೆಂದರೆ , ನಾನು ಸಿಬಿಐಗಿಂತ ಮೇಲಿನ ತನಿಖಾ ಸಂಸ್ಥೆಯೊಂದರಿಂದ ಬಂದ ಅಧಿಕಾರಿ ಎಂದು ಸೂಚಿಸುವಂತಿತ್ತು.
“ನಿಜ ಹೇಳಬೇಕೆಂದರೆ “ ನಾನು ಗಂಟಲನ್ನು ಸರಿ ಪಡಿಸಿಕೊಳ್ಳುತ್ತ ಹೇಳಿದೆ “ ನಾನು ತನಿಖಾಧಿಕಾರಿಯೇ ಅಲ್ಲ. ನಾನು ಬಂದಿದ್ದು ಒಂದು ಅಕೌಂಟ್ ತೆರೆಯಲಿಕ್ಕೆ. ನನ್ನ ಬಳಿ ಇರುವ ಒಂದಷ್ಟು ಹಣವನ್ನು ಬ್ಯಾಂಕಿನಲ್ಲಿ ಇಡಬೇಕಿತ್ತು.”
ಈ ಮಾತು ಕೇಳಿದ್ದೆ ಮ್ಯಾನೆಜರ್ ಗೆ ಅಪಾರ ಸಮಾಧಾನವಾದ ಹಾಗೆ ತೋರಿತು. ಆದರೂ ಅವನ ಅನುಮಾನ ಪೂರ್ತಿಯಾಗಿ ಪರಿಹಾರವಾದ ಹಾಗೆ ಕಾಣಿಸಲಿಲ್ಲ. ಸಿಬಿಐ ಅಧಿಕಾರಿಯಿಂದ ನಾನು ಯಾವುದೋ ಬ್ಯುಸಿನೆಸ್ ಮಾಡುವ ಶ್ರೀಮಂತ ಮನುಷ್ಯ ಎನ್ನುವ ತೀರ್ಮಾನಕ್ಕೆ ಆತ ಬಂದ  ಹಾಗೆ ಇತ್ತು.
“ದೊಡ್ದ ಮೊತ್ತವೇ ಅನಿಸುತ್ತೆ”  ಆತ ಸ್ವಲ್ಪ ಮುಂದಕ್ಕೆ ಬಾಗಿ ಕೇಳಿದ.
“ಹ್ಮ್ , ಸ್ವಲ್ಪ ದೊಡ್ಡ ಮೊತ್ತವೆ.” ನಾನು ಉಸುರಿದೆ. “ ಸುಮಾರು ಎಂಟು ನೂರಾ ಐವತ್ತು ರುಪಾಯಿಗಳನ್ನ ಜಮಾ ಮಾಡಲು ಬಯಸುತ್ತೇನೆ. ಆಮೇಲೆ ಪ್ರತಿ ತಿಂಗಳೂ ಇನ್ನೂರು ರುಪಾಯಿಗಳನ್ನ ಜಮಾ ಮಾಡುತ್ತೇನೆ”
ಇದನ್ನ ಕೇಳಿದ್ದೆ ಮ್ಯಾನೆಜರ್ ದಡಕ್ಕನೆ ಕುರ್ಚಿಯಿಂದ ಎದ್ದು , ಛೆಂಬರಿನ ಬಾಗಿಲನ್ನು ತೆಗೆದು , ನಾನು ಈ ಮೊದಲೇ ಭೇಟಿಯಾಗಿದ್ದ ಅಕೌಂಟೆಂಟ್ ನನ್ನು ಕೂಗಿ ಕರೆದ.
“ಮಂಜುನಾಥ್ “ ಮ್ಯಾನೆಜರ್ ದ್ವನಿ ಅಗತ್ಯಕ್ಕಿಂತ ಸ್ವಲ್ಪ ಹೆಚ್ಚೇ ದೊಡ್ಡದಾಗಿದೆಯೇನೋ ಅನಿಸಿತು. “ ಇಲ್ಲಿದ್ದಾರಲ್ಲ ಇವರು ಒಂದು ಹೊಸ ಅಕೌ0ಟ್ ತೆಗೆದು ಎಂಟು ನೂರ ಐವತ್ತು ರೂಪಾಯಿಗಳನ್ನು ಜಮಾ ಮಾಡಲು ಬಯಸುತ್ತಾರೆ”
ನಂತರ ಮ್ಯಾನೆಜರ್ ನನಗೆ ಬಾಗಿಲಿನ ಕಡೆ ಕೈ ತೋರಿಸಿ , “ ದಯವಿಟ್ಟು ಹೊರ ನಡೆಯಿರಿ” ಎಂದ.
’ನಮಸ್ಕಾರ” ಎಂದು ನಾನು ಅಕೌಂಟೆಂಟ್ ನ ಹಿಂಬಾಲಿಸಿದೆ. ನಂತರ ಅಕೌಂಟೆಂಟ್ ನ ಕೌಂಟರಿಗೆ ಹೋಗಿ, ನನ್ನ ಜೇಬಿನಿಂದ ಹಣವನ್ನು ತೆಗೆದು “ತಗೊಳ್ಳಿ” ಎಂದು ಅವನ ಮುಂದೆ ಹಿಡಿದೆ. ನಾನು ಅತ್ಯಂತ ಸಹಜವಾಗಿ ಇರಲು ಯತ್ನಿಸುತ್ತಿದ್ದರೂ ಸಹ ಅದು ಹೇಗೊ ನಾನು ಹಣವನ್ನು ಇದ್ದಕ್ಕಿದ್ದಂತೆ ಮುಂದೆ ಹಿಡಿದ ರೀತಿ ಅಕೌಂಟೆಂಟ್ ನ ಬೆಚ್ಚಿ ಬೀಳಿಸಿದಂತೆ ಇತ್ತು.
 “ತಗೊಳ್ಳಿ , ಜಮಾ ಮಾಡಿ”  , ನಾನು ಎಷ್ಟೆ ಪ್ರಯತ್ನ ಪಟ್ಟಿದ್ದರೂ ನನ್ನ ದ್ವನಿ ಮತ್ತು ನನ್ನ ಬಿಳುಚಿದ ಮುಖದ ಒಂದಕ್ಕೊಂದು ಹೊಂದಿಕೊಂಡತೆ ಇರಲಿಲ್ಲ. “ ಆದಷ್ಟು ಬೇಗ ಈ ಹಣ ಜಮಾ ಮಾಡುವ ತ್ರಾಸದಾಯಕ ಕೆಲಸವನ್ನ ಮುಗಿಸಿಬಿಡೋಣ” ಅವನಿಗೆಂದೆ.
 ಅಕೌಂಟೆಂಟ್ ಇವಕ್ಕೆಲ್ಲ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ. ನನ್ನ ಬಳಿ ಹಣ ತೆಗೆದು ಕೊಂಡವನೆ ಅದನ್ನು ಇನ್ನೊಬ್ಬ ಕ್ಲರ್ಕ್ ಗೆ ದಾಟಿಸಿದ.
ಇನ್ನೊಬ್ಬ ಕ್ಲರ್ಕ್ ಹಣ ತೆಗೆದುಕೊಂಡು , ನನ್ನ ಬಳಿ ಹಲವಾರು ಫಾರ್ಮ್ ಗಳನ್ನ ತುಂಬಿ , ಅಲ್ಲಿ ನಾನು ಕೊಟ್ಟ ಹಣದ ಮೊತ್ತವನ್ನು ನಮೂದಿಸಿ , ನನ್ನಿಂದ ಹಲವೆಡೆ ಸಹಿ ಮಾಡಿಸಿಕೊಂಡ. ನಿಜ ಹೇಳಬೇಕೆಂದರೆ , ಈಗ ನಾನು ಏನು ಮಾಡುತ್ತಿದ್ದೇನೆ  ಎನ್ನುವದು ನನಗೆ ತಿಳಿಯುತ್ತಿರಲಿಲ್ಲ.
“ಜಮಾ ಆಯಿತೇ ? “ ನಾನು ಖಾಲಿಯಾಗಿ ನಡುಗುವ ಧ್ವನಿಯಲ್ಲಿ ಕೇಳಿದೆ.
“ಆಗಿದೆ” ಕ್ಲರ್ಕ್ ಉತ್ತರಿಸಿದ.
“ಹಾಗಾದರೆ ನಾನು ಒಂದಷ್ಟು ಹಣವನ್ನು ತೆಗೆಯಲು ಬಯಸುತ್ತೇನೆ”
ನಾನು ಯೋಚಿಸುತ್ತಿದ್ದುದು ಐವತ್ತು ರೂಪಾಯಿಗಳನ್ನು ಅಕೌಂಟ್ ನಿಂದ ತೆಗೆಯುವದು ಎಂದು. ಯಾರೋ ನನಗೆ ಹಣವನ್ನು ತೆಗೆಯುಲು ತುಂಬಬೇಕಾದ ಫಾರ್ಮ್ ಕೊಟ್ಟರು. ಇನ್ಯಾರೋ ಬಂದು ಅದನ್ನು ತುಂಬುವದು ಹೇಗೆ ಎನ್ನುವದನ್ನು ವಿವರಿಸಿದರು. ಬ್ಯಾಂಕಿನಲ್ಲಿದ್ದವರಿಗೆ ನಾನೊಬ್ಬ  ದಾರಿ ತಪ್ಪಿ ಇಲ್ಲಿಗೆ ಬಂದ ಲಕ್ಷಾಧೀಶ ಅನ್ನಿಸಿರಬೇಕು. ನಾನು ಫಾರ್ಮಿನ ಮೇಲೆ ಯಾವುದೋ ಒಂದು ಮೊತ್ತವನ್ನು ನಮೂದಿಸಿ , ಕ್ಲರ್ಕ್ ಗೆ ನೀಡಿದೆ. ನೀಡಿದೆ ಅನ್ನುವದಕ್ಕಿಂತ ಅವನ ಕೌಂಟರಿನಲ್ಲಿ ಕುಕ್ಕಿದೆ ಎನ್ನುವದೇ ಸರಿ. ನಾನು ಹೀಗೆ ಮಾಡಬೇಕು ಅನ್ನುವ ಯಾವುದೇ ಪೂರ್ವ ವಿಚಾರವನ್ನು ಮಾಡಿಲ್ಲವಾಗಿದ್ದರೂ , ಇವೆಲ್ಲ ನನ್ನ ಹಿಡಿತ ಮೀರಿ ಆಗುತ್ತಿತ್ತು.
“ಏನು ? ನೀವು ಅಕೌಂಟ್ ನಲ್ಲಿ ಇರೋದನ್ನೆಲ್ಲ ತೆಗೆಯುತ್ತೀರಾ?  ಈಗ ತಾನೆ ಜಮಾ ಮಾಡಿದ್ದಿರಲ್ಲ“ ಕ್ಲರ್ಕ್ ಆಶ್ಚರ್ಯದಿಂದ ಫಾರ್ಮ್ ನೋಡುತ್ತ ಲ್ಕೇಳಿದ.
ನನಗೆ ಆಗಲೆ ಗೊತ್ತಾಗಿದ್ದು. ಐವತ್ತು  ಎಂದು ಬರೆಯುವ ಬದಲು ನಾನು ಎಂಟು ನೂರಾ ಐವತ್ತು ಎಂದು ಬರೆದಿದ್ದೆ. ಆದರೆ ಆ ಕ್ಷಣದಲ್ಲಿ ನಾನು ಅದೆಷ್ಟು ಗೊಂದಲದಲ್ಲಿ ಇದ್ದೆ ಎಂದರೆ ನಾನು ಹಾಗೆ ಮಾಡಿದ್ದು ಯಾಕೆ ಎನ್ನುವದನ್ನು ವಿವೇಚಿಸಲೇ ಹೋಗಲಿಲ್ಲ ಅಥವಾ ನನಗೆ ಯಾಕೆ ಹೀಗೆಲ್ಲ ಆಗುತ್ತಿದೆ ಎನ್ನುವದನ್ನು ಈ ಕ್ಲರ್ಕ್ ಗೆ ವಿವರಿಸುವದೂ ಸಹ ಅಸಾಧ್ಯವಾಗಿ ತೋರಿತು. ಬ್ಯಾಂಕಿನಲ್ಲಿದ್ದ ಎಲ್ಲ ಕ್ಲರ್ಕ್ ಗಳೂ ಕೌಂಟರಿನಿಂದ ತಲೆಯೆತ್ತಿ ನನ್ನ ಕಡೆಯೆ ನೋಡುತ್ತಿರುವಂತೆ ಭಾಸವಾಯಿತು.
ಈ ಕಠೋರವಾದ ಕ್ಷಣಗಳು ಕಳೆದರೆ ಸಾಕೆಂದು ನಾನು ಪ್ರಾರ್ಥಿಸತೊಡಗಿದೆ.
 “ಹೌದು , ಅಷ್ಟೂ ಹಣವನ್ನು ತೆಗೆಯುತ್ತೇನೆ”
“ಅಲ್ಲ ಸ್ವಾಮೀ , ಈಗ ತಾನೆ ಜಮಾ ಮಾಡಿದ ಹಣವನ್ನು ಪೂರ್ತಿಯಾಗಿ ತೆಗೆಯುತ್ತೀರ?”
“ಹೌದು , ನನ್ನ ಒಂದೊಂದು ಪೈಸೆ ಸಹ “ . ನನ್ನ ಧ್ವನಿಯಲ್ಲಿ ಸಣ್ಣಗೆ ಕ್ರಾಂತಿಯ ಕಿಡಿ ಇದೆ ಅನ್ನಿಸಿತು.
“ಇನ್ಮೇಲೆ ಬ್ಯಾಂಕಿನಲ್ಲಿ ಹಣನ್ನು ತುಂಬುವದೇ ಇಲ್ಲವೆ ? “
“ಇಲ್ಲಾ , ಯಾವತ್ತಿಗೂ ಇಲ್ಲ”
 ನಾನು ಫಾರ್ಮ್ ಭರ್ತಿ ಮಾಡುವಾಗ ನನ್ನನು ಅವಮಾನಿಸುವ  ಯಾವುದದರೊಂದು ಘಟನೆ ನಡೆದು ಹೋದ್ದರಿಂದಲೆ ನಾನು ಹೀಗೆ ಮಾಡುತ್ತಿದ್ದೆನೆ ಎಂದು ಈ ಕ್ಲರ್ಕ್ ಗಳು ತಿಳಿದುಕೊಳ್ಳಲಿ ಎನ್ನುವ ಮೂರ್ಖ ಆಸೆಯೊಂದು ನನ್ನ ಮನಸ್ಸಿನಲ್ಲಿ ಹಾದು ಹೋಯಿತು. ಹಾಗಾಗಿಯೇ ನಾನು ಅಗತ್ಯಕ್ಕಿಂತ ಹೆಚ್ಚಾದ ಕಟು ಧ್ವನಿಯಲ್ಲಿ ಉತ್ತರಿಸಿದ್ದು. ನಾನೊಬ್ಬ ಅತ್ಯಂತ ಸ್ವಾಭಿಮಾನಿ ಮತ್ತು ಕೋಪಿಷ್ಟ ಮನುಶ್ಯನಂತೆ ನಿಂತಿದ್ದೆ.
ಕ್ಲರ್ಕ್ ನನ್ನ ಅಕೌಂಟ್ ನಿಂದ ಹಣ ತೆಗೆದುಕೊಂಡು ಬಂದ.
“ಹೇಗೆ ತೆಗೆದುಕೊಳ್ತೀರಿ ಹಣವನ್ನು ?” ಕ್ಲರ್ಕ್
“ಏನು “ ನಾನು
“ಅದೇ , ಹೇಗೆ ತೆಗೆದುಕೊಳ್ತೀರಿ ಹಣವನ್ನು”
“ಓಹ್! “ ಅವನು ಹೇಳಿದ್ದು ನನಗೆ ಅರ್ಥವಾಗಿದೆಯೆಂದೂ , ಮತ್ತೆ ಮತ್ತೆ ಅದನ್ನೇ ಹೇಳುವದು ಬೇಡವೆನ್ನುವ ಮುಖಭಾವದಲ್ಲಿ , ಸ್ವಲ್ಪವೂ ಯೋಚಿಸದೇ ಉತ್ತರಿಸಿದೆ.:
“ನೂರರ ನೋಟನ್ನೆ ಕೊಡಿ”
ಅವನು ನನಗೆ ನೂರರ ಎಂಟು ನೋಟನ್ನು ನೀಡಿದ.
“ಉಳಿದ ಐವತ್ತು ಏನು ಮಾಡುತ್ತೀರಿ?”
“ಐವತ್ತರದೇ ಕೊಡಿ”
ಅವನು ಹಣ ಕೊಟ್ಟಿದ್ದೇ ನಾನು ಜೇಬಿಗಿಳಿಸಿಕೊಂಡು ಅಲ್ಲಿಂದ ಓಟಕಿತ್ತೆ.
ನಾನು ಬ್ಯಾಂಕಿನ ಮುಖ್ಯದ್ವಾರವನ್ನು ದಾಟಿದ್ದೇನೊ ಇಲ್ಲವೋ , ಒಳಗಿನಿಂದ ಬ್ಯಾಂಕಿನ ಸೂರಿಗೆ ತಾಕುವಂತೆ ನಗು ಅಲೆ ಅಲೆಯಾಗಿ ಕೇಳಿಸತೊಡಗಿತು.
ಅವತ್ತೇ ಕೊನೆ. ಆಮೇಲೆ ನಾನು ಬ್ಯಾಂಕಿಗೆ ಹೋದದ್ದೆ ಇಲ್ಲ. ನನ್ನ ಹಣವನ್ನು ನನ್ನ ಜೇಬಿನಲ್ಲಿ ಅಥವಾ ಟ್ರಂಕಿನಲ್ಲಿ ಇಡುತ್ತೇನೆ. ಕೆಲವೊಮ್ಮೆ ಈ ಹಣದಿಂದ ಚಿನ್ನವನ್ನೋ ಬೆಳ್ಳಿಯನ್ನೋ ಖರಿದಿಸಿ ಒಂದು ಹಳೆಯ ಚೀಲದೊಳಗೆ ಇಡುತ್ತೇನೆ.


ಲೇಖಕರ ಪರಿಚಯ :
ಶಿಕ್ಷಕ , ರಾಜಕೀಯ ಶಾಸ್ತ್ರಜ್ನ , ಹಾಸ್ಯ ಬರಹಗಾರ , ಕಥೆಗಾರ  ಸ್ಟೀಫನ್ ಲೀಕಾಕ್ (ಡಿಸೆಂಬರ್ 1869 – ಮಾರ್ಚ್ 1944) ಇ0ಗ್ಲೆಂಡಿನಲ್ಲಾದರೂ ತನ್ನ ಆರನೆಯ ವಯಸ್ಸಿಗೆ ಕುಟುಂಬದೊಡನೆ ಕೆನಡಾಗೆ ಬಂದು ನೆಲೆಸಿದ. ಅಧುನಿಕ ಸಾಹಿತ್ಯದಲ್ಲಿ ಅವನ ಹೆಸರು ಅಷ್ಟೇನೂ ಪ್ರಸಿದ್ಢವಲ್ಲದಿದ್ದರೂ ಸುಮಾರು 1900 ರ ಹೊತ್ತಿಗೆ ಆಂಗ್ಲ ಭಾಷೆ ಮಾತನಾಡುವ ಬಹುತೇಕ ದೇಶಗಳಲ್ಲಿ ಅವನ ಹಾಸ್ಯ ಲೇಪಿತ ಬರಹಗಳು ಜನಪ್ರಿಯವಾಗಿದ್ದವು.

( ಮಯೂರದಲ್ಲಿ ಪ್ರಕಟಿತವಾದ ಕತೆ )

No comments:

Post a Comment