Saturday, September 8, 2018

ಶವಮೂಲ ಜರ್ಮನ್ ಕತೆ :  ಕ್ಲೆಮೆನ್ಸ್ ಜೆ ಸೆಟ್ಜ್,  ಆಂಗ್ಲ ಅನುವಾದ : ಇಮೊಜೆನ್ ಟೈಲರ್

ಕೆಲಸ ಮುಗಿಸಿ  ಅಪಾರ್ಟ್ ಮೆಂಟ್ ಗೆ ಮರಳಿದ  ಮೊಸರುದ್ದೀನ ನಾವಡನಿಗೆ  ಬಾಗಿಲು ತೆರೆದೊಡನೆ ಕಾಣಿಸಿದ್ದು ಹಾಲಿನಲ್ಲಿ ಹಾಸಿದ್ದ ನಾಜೂಕಿನ ಕುಸುರಿಯ ಕಾರ್ಪೆಟ್   ಮೇಲೆ ಬೆತ್ತಲೆಯಾಗಿ ಮಕಾಡೆ ಮಲಗಿದ್ದ ಹೆಂಗಸೊಬ್ಬಳು. ಅವಳ ಕೆದರಿದ ಕೂದಲು ಮೊಸರುದ್ದೀನನಿಗೆ ತಾನು ಚಿಕ್ಕವನಾಗಿದ್ದಾಗ ಗೀಚುತ್ತಿದ್ದ ಕಾಗೆಯ ಗೂಡನ್ನೂ ಮತ್ತು  ಉದ್ದಕ್ಕೆ ಬೆಳೆದಿದ್ದ ಮರದ ತುದಿಯನ್ನೂ ನೆನಪಿಗೆ ತಂದವು. ಅವಳ ಮೈ  ವಾರ್ನಿಷ್ ಹಚ್ಚಿ ಆಗಷ್ಟೇ  ಒಣಗಿಸಿದ ಮರದ ಪಿಠೋಪಕರಣದಂತೆ ಫಳ ಫಳನೇ ಹೊಳೆಯುತ್ತಿತ್ತುಇದ್ದಕ್ಕಿದ್ದಂತೆ ಇಲ್ಲಿ ಪ್ರತ್ಯಕ್ಷವಾದ ಅಪರಿಚಿತ ಹೆಂಗಸು ಯಾರು ತನ್ನ ಅಪಾರ್ಟ್ ಮೆಂಟ್ ಒಳಗೆ ಬಂದಿದ್ದಾರೂ  ಹೇಗೆ? ಇಲ್ಲಿ ಮಾಡುತ್ತಿರುವುದಾದರೂ ಏನು ? ಮುಂತಾದ ಪ್ರಶ್ನೆಗಳನ್ನು  ಕೇಳಬೇಕೆಂದುಕೊಂಡು, ಹುಷಾರಾಗಿ ಅವಳ ಹತ್ತಿರ ಬಂದುಭುಜ ಹಿಡಿದು  ಅವಳನ್ನು ತನ್ನತ್ತ  ತಿರುಗಿಸಿಕೊಂಡಾಗಲೇ ಮೊಸರುದ್ದೀನಗೆ ಅವಳು  ಬದುಕಿಲ್ಲವೆಂದು ಅರಿವಾಯಿತು.

ಮೊಸರುದ್ದೀನ  ನೇರವಾಗಿ ಕಿಟಕಿಯ ಹತ್ತಿರ ಹೋಗಿ ಬಾಗಿಲನ್ನು ಹಾಕಿ ಭದ್ರಪಡಿಸಿದ . ಹೊರಗೆ ಇನ್ನೂ ಸಾಕಷ್ಟು ಬೆಳಕಿರುವಾಗ ಇಷ್ಟು ಬೇಗ ಕಿಟಕಿಯ ಬಾಗಿಲುಗಳನ್ನ ಹಾಕುವ ಅಗತ್ಯವಿರಲಿಲ್ಲಕೆಲವು ದಿನಗಳ ಹಿಂದಷ್ಟೇ ಶುರುವಾಗಿದ್ದ ವಸಂತಕಾಲ  ಆರು ಘಂಟೆಯ ನಂತರವೂ ಇನ್ನಷ್ಟು ಹೊತ್ತು ಸೂರ್ಯನ ಬೆಳಕು ಇರುವಂತೆ ಮಾಡುತ್ತಿತ್ತುಈಗ್ಗೆ ಕೆಲವು ವಾರಗಳ ಹಿಂದೆ ಹೀಗಿರಲಿಲ್ಲ. ಸಂಜೆ ನಾಲ್ಕು ಘ೦ಟೆಗೆಲ್ಲಾ ಕತ್ತಲು  ಆವರಿಸುತ್ತಿತ್ತು. ಆದರೆ ವಸಂತ ಶುರುವಾದಾಗಿನಿಂದ ದಿನಗಳು ಬೆಳಕನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುತ್ತಿದ್ದವು . ಇನ್ನೇನು ಕೆಲವೇ ಕೆಲವು ದಿನ , ಆಮೇಲೆ ದಿನಗಳು ಹಿಡಿದಿಟ್ಟುಕೊಂಡಿರುವ ಬೆಳಕಿನಿಂದ ನಿಧಾನವಾಗಿ  ಸೆಕೆ ದಾರಿ ಮಾಡಿಕೊಂಡು ಹೊರಬರಲು ಪ್ರಾರಂಭಿಸುತ್ತದೆ  .  ವಾತಾವರಣ ಹೀಗೆ ಹಿತಕರವಾಗಿದ್ದ ದಿನಗಳಲ್ಲಿ  ಮೊಸರುದ್ದೀನ  ಆಫೀಸು ಮುಗಿಸಿ ತನ್ನ ಫ್ಲ್ಯಾಟ್ ನೊಳಗೆ ಕಾಲಿಡುತ್ತಿದ್ದಂತೆ ಸಂಜೆಯ ಸೂರ್ಯನ ಕಿರಣಗಳು ಕಿಟಕಿಯ ಮೂಲಕ ತೂರಿಕೊಂಡು ಬಂದು ಅವನ ಪಾದಗಳನ್ನ ಸರ್ಶಿಸಿ ನವಿರಾಗಿ ಕಚಗುಳಿ ಕೊಡುತ್ತಿದ್ದವುಇವತ್ತು ಬಂದ ತಕ್ಷಣ  ಕಿಟಕಿ ಮುಚ್ಚಬೇಕಾಗಿ ಬ೦ದುದು ಮೊಸರುದ್ದೀನ ನಿಗೆ ತಲೆನೋವನ್ನೇ ತಂದಿತು. ರೂಮಿನಲ್ಲಿ ಸಂಜೆಯ ಸೂರ್ಯ ಕಿರಣಗಳ ಬದಲು ತಲೆನೋವೇ ತುಂಬಿದೆಯೇನೋ ಎನ್ನವ ಅನುಭವ. ಆದರೆ ಕಿಟಕಿಯನ್ನ ಮುಚ್ಚದೇ ಬೇರೆ ಗತಿಯಿಲ್ಲ. ಇಷ್ಟಕ್ಕೂ ಹಾಲ್   ಮಧ್ಯದಲ್ಲಿ ಹೆಂಗಸೊಬ್ಬಳ ಬೆತ್ತಲೆ ಶವವನ್ನು ಇಟ್ಟುಕೊಂಡು ಯಾರಾದರೂ ಕಿಟಕಿಯ ಬಾಗಿಲುಗಳನ್ನ ತೆರೆದು ಕೂರುತ್ತಾರೆಯೇ ?  
ಮೊಸರುದ್ದೀನ  ಶವವನ್ನು ಎತ್ತಿ ಪಕ್ಕದಲ್ಲಿದ್ದ ಆರಾಮ ಕುರ್ಚಿಯ ಮೇಲೆ ಕೂರಿಸಿದ .ಶವಕ್ಕೆ ಅಲ್ಲಿ ಕುಳಿತುಕೊಳ್ಳುವ ವಿಚಾರ ಇದ್ದಂತೆ ತೋರಲಿಲ್ಲ. ಮೊಸರುದ್ದೀನ  ಶವದ ಮೇಲಿನ ತನ್ನ ಕೈಯನ್ನು ತೆಗೆದನೋ ಇಲ್ಲವೋ , ಅದು ಭಡಕ್ಕನೆ ಕುರ್ಚಿಯಲ್ಲಿ ಕುಸಿಯಿತು . ಅದರ ಕೀಲುಗಳು ಜೆಲ್ಲಿಯಂತೆ ಲೋಳೆಯಾಗಿಯೂ , ದೇಹ ದ್ರವ ವಸ್ತುವಿನಿಂದ ತುಂಬಿದ ಬಲೂನಿನಂತೆಯೂ  ಇದ್ದವುಮೊಸರುದ್ದೀನ  ಮತ್ತೊಮ್ಮೆ ಶವವನ್ನು ಕುರ್ಚಿಯಲ್ಲಿ ಸರಿಯಾಗಿ ಕೂರಿಸಲು ಪ್ರಯತ್ನಿಸಿದಶವ ಮತ್ತೆ ಕುಸಿದು ಬಿತ್ತು. ಇದ್ದಕ್ಕಿದ್ದಂತೆ ಹೊಟ್ಟೆ ತೊಳಸಿ ವಾಂತಿ  ಉಮ್ಮಳಿಸಿ ಬಂದವರು ಸಟಕ್ಕನೆ ಬಾಗುವಂತೆ ಶವದ  ಮೇಲ್ಭಾಗ ಕುರ್ಚಿಯಿಂದ ಬಾಗಿ ಹೊರಗೆ ಬಂದು ಕುರ್ಚಿಗೆ  ಅಪ್ಪಳಿಸಿದಾಗ ಹೊರಹೊಮ್ಮಿದ  ಶಬ್ದ ಮೊಸರುದ್ದೀನನನ್ನ ಮರಳಿ ವಾಸ್ತವಕ್ಕೆ ಕರೆತಂದಿತು . ಮೊಸರುದ್ದೀನ  ಶವವನ್ನು ಅಲ್ಲೇ ಬಿಟ್ಟು ನೇರವಾಗಿ ಮ್ಯೂಸಿಕ್ ಸಿಸ್ಟಮ್ ಬಳಿ ಹೋಗಿ  ಸ್ಟಿರಿಯೊದಲ್ಲಿ  ಯಾವುದೋ ಹಳೆಯ ಹಾಡೊಂದನ್ನ ಹಾಕಿದಯಾವತ್ತಿದ್ದರೂ ಸಂಗೀತ ಗಾಢ ಯೋಚನೆಗೆ ಸಹಾಯ ಮಾಡುತ್ತದೆ  

ಶವವನ್ನು ನೆಲದ ಮೇಲೆ ಹಾಗೆಯೇ ಬಿಡಲು ಸಾಧ್ಯವಿಲ್ಲ. ಶವಗಳು ಬದಲಾಗುತ್ತವೆ. ಜೀವಂತವಿದ್ದವರ ದೇಹದಂತೆ ಅವುಗಳ ದೇಹ ಸ್ಥಿರವಾಗಿರುವದಿಲ್ಲ . ಶವಗಳಿಗಿರುವ ಮುಖ್ಯ ಮತ್ತು ಏಕೈಕ ಉದ್ದೇಶ ಎಂದರೆ ತಮ್ಮನ್ನ ತಾವೇ ವಿಘಟಿಸಿಕೊಳ್ಳುವದು. ಶವ ಅತ್ಯಂತ ಸಣ್ಣ ಕಣಗಳಾಗಿ ವಿಘಟನೆಯಾಗಿ  ಸಂಪೂರ್ಣವಾಗಿ ಕಣ್ಮರೆಯಾಗಬೇಕಾದರೆ , ಅದಕ್ಕೆ ತಕ್ಕುದಾದ ವಾತಾವರಣ ಮತ್ತು  ಅಡಿಪಾಯ ಬೇಕು. ಉದಾಹರಣೆಗೆ ಕಾಡಿನ ಜಾಗ ಅಥವಾ ಜೌಗು ಪ್ರದೇಶವೊಂದು ಸಿಕ್ಕಿದ್ದೇ ಆದಲ್ಲಿ ಅವು ತಮನ್ನು ತಾವೇ  ಮರೆಯುತ್ತ ಚಿಕ್ಕ ಚಿಕ್ಕ ಕಣಗಳಾಗಿ ಕಾಡೊಳಗೆ ಕಾಡಾಗಿ , ಜೌಗೊಳಗೆ ಜೌಗಾಗಿ ಮರೆಯಾಗುತ್ತಿದ್ದವು .   ಆದರೆ ಇಲ್ಲಿ , ಮೊಸರುದ್ದೀನ ನ  ಫ್ಲ್ಯಾಟಿನ ಹಾಲಿನಲ್ಲಿ ಶವಕ್ಕೆ  ಬೇಕಾದ  ಯಾವುದೇ ನೈಸರ್ಗಿಕ ಸಹಾಯ ಇಲ್ಲದ ಕಾರಣ ಅವನು ಒಂದೋ ಕೃತಕ ವಾತಾವರಣ ನಿರ್ಮಿಸಬೇಕಾಗಿತ್ತು ಅಥವಾ ಬೇರೆ ಏನಾದರೂ ಹಾದಿ ಕಂಡು ಹಿಡಿಯುವದು ಅನಿವಾರ್ಯವಾಗಿತ್ತು. ಮೊಸರುದ್ದೀನ  ಸಂಗೀತದ ವಾಲ್ಯೂಮ್ ಜಾಸ್ತಿ ಮಾಡಿದ 

ಮೊಸರುದ್ದೀನ ನಿಗೆ ಇತ್ತೀಚಿಗಷ್ಟೇ ರೂಮಿನಲ್ಲಿ ಚಳಿ ಕಾಯಿಸುವ  ರೇಡಿಯೇಟರ್  ಹಿಂಭಾಗದಲ್ಲಿ ತಾನು ತಯಾರಿಸುತ್ತಿದ್ದ  ವಿಮಾನದ ಮಾದರಿಯನ್ನು ಮರೆಮಾಡಿಟ್ಟಿದ್ದು ನೆನಪಾಯಿತು. ಹಿಂದಿನ ವಾರ ಅವನ  ತಂದೆ ತಾಯಿ ಮನೆಗೆ ಬಂದಾಗ  ಅವರಿಗೆ ವಿಮಾನದ ಮಾದರಿ ಕಾಣಿಸದೇ ಇರಲಿ ಎಂದು  ರೇಡಿಯೇಟರ್ ಇಟ್ಟ ರೂಮಿನಲ್ಲಿ ಅದನ್ನ ಮುಚ್ಚಿಟ್ಟಿದ್ದ . ರೇಡಿಯೇಟರ್ ಹಿಂಭಾಗದಲ್ಲಿ ಸಾಕಷ್ಟು ಜಾಗವೇನೋ ಇತ್ತು. ಆದರೆ ಬೆಳೆದು ನಿಂತು ಈಗ ಹೀಗೆ ಶವವಾಗಿರುವ ಹೆಂಗಸಿಗೆ ಅಷ್ಟು ಜಾಗ ಸಾಕಾಗುತ್ತದೆಯೋ ? ಮೊಸರುದ್ದೀನ  ನಿಗೆ ಹೊಳೆಯಲಿಲ್ಲ. ಅವನು ಒಂದು ಟೇಪ್ ತಂದು ಶವವನ್ನು ಅಳತೆ ಮಾಡಿದ. ಜಾಗ ಸಾಕಾಗುತ್ತದೆಯೋ ಇಲ್ಲವೋ ಎನ್ನುವದು ಅಳತೆಯಿಂದ ಸ್ಪಷ್ಟವಾಗಲಿಲ್ಲ

ಅರ್ಧ ಘಂಟೆಯ ಪ್ರಯಾಸದ ಕೆಲಸದ ನಂತರ ಹಾಗೂ ಹೀಗೂ ಶವವನ್ನು ರೇಡಿಯೇಟರ್ನ್ ನ ಹಿಂಭಾಗದಲ್ಲಿರಿಸಲು ಫಲಕಾರಿಯಾಗಿ ಶವದ ರು೦ಡ ಮತ್ತು ಮುಂಡದ ಮೇಲ್ಭಾಗ  ಹೊರಗಿಣುಕುತ್ತಿದ್ದರೂ, ಈ ಕಾರ್ಯಕ್ರಮವನ್ನು  ಭಾಗಶಃ ಯಶಸ್ಸು ಎಂದೇ ಕರೆಯಬಹುದುಮೊಸರುದ್ದೀನ ಬಾಗಿಲಿನ ಚೌಕಟ್ಟಿಗೆ ಒರಗಿ ಕುಳಿತುಕೊಂಡು ರೂಮಿನ ಮಬ್ಬು ಕತ್ತಲೆಯ ಶೂನ್ಯವನ್ನು ದಿಟ್ಟಿಸಿದ. ಹೆಂಗಸು ಸತ್ತಿದಾದರೂ ಹೇಗೆ ? ಇಡೀ ದೇಹದಲ್ಲಿ ಎಲ್ಲಿಯೂ ಗಾಯವಿಲ್ಲಸಾವಿನ ಕಾರಣ ಏನೇ ಇದ್ದರೂ ಅದು ದೇಹದ ಮೇಲೆ ಚಿಕ್ಕ ಗೀರಿದ ಗುರುತನ್ನೂ ಮೂಡಿಸಿಲ್ಲ. ಬಹುಷ : ಅವಳು ವಿಷ ಕುಡಿದಿರಬಹುದು ಅಥವಾ ಅವಳದು ಸ್ವಾಭಾವಿಕ ಸಾವಿರಬಹುದು.  ಹಾಗಾಗಲಿಕ್ಕೆ ಅವಳೇನು ತೀರಾ ವಯಸ್ಸಾದ ಹಾಗೆ ಕಾಣಿಸುತ್ತಿಲ್ಲ. ಮೊಸರುದ್ದೀನ  ಅವಳ  ವಯಸ್ಸು ಇಪ್ಪತ್ತೈದು ಅಥವಾ  ಮೂವತ್ತರ  ನಡುವೆ ಎಂದು ಊಹಿಸಿದ. ಅವನು ಮೇಲೆದ್ದು ಮೈಮುರಿದ. ಇಲ್ಲ ,   ಜಾಗದಲ್ಲಿ ಶವವನ್ನು ಇಡುವ ಹಾಗಿಲ್ಲ.

ವಿಮಾನದ ಮಾದರಿಯೇನೋ  ರೇಡಿಯೇಟರ್ ಹಿಂದೆ ಸುರಕ್ಷಿತವಾಗಿತ್ತು. ಆದರೆ ಶವ ಹಾಗಲ್ಲ. ಕೊಠಡಿ ಪ್ರವೇಶಿಸುವ ಯಾರಿಗಾದರೂ ಶವ ಸುಲಭವಾಗಿ ಕಣ್ಣಿಗೆ ಬೀಳುತ್ತಿತ್ತು. ಶವಕ್ಕೆ ಇನ್ನೊಂದು ಸುರಕ್ಷಿತ ಸ್ಥಳವನ್ನು ಹುಡುಕುವದು ಅನಿವಾರ್ಯತನ್ನ ಫ್ಲ್ಯಾಟ್ ವಿವಿಧ ಮೂಲೆಗಳ , ಖಾಲಿ ಜಾಗಗಳ ಬಗ್ಗೆ ವಿಚಾರ ಮಾಡುತ್ತ ಮೊಸರುದ್ದೀನ  ಶವವನ್ನು ರೇಡಿಯೇಟರ್ ನಿಂದ ಹೊರಗೆಳೆದ. ಅವನ  ಹಿಗ್ಗಾಮುಗ್ಗಾ ಎಳೆದಾಟದ ಮಧ್ಯೆ  ಅವಳು ಬೆತ್ತಲೆ ದೇಹ ರೇಡಿಯೇಟರ್ ಗೆ ತಗುಲಿ ದೇಹದ ಹಲವಾರು ಕಡೆ ಗೀರಿದ ಗುರುತುಗಳನ್ನು ಮೂಡಿಸಿತು . ರೇಡಿಯೇಟರ್ ಅಂಚು ಅವಳ  ಬೆಣ್ಣೆಯಂತಹ  ದೇಹವನ್ನು ಹಲವೆಡೆ ಕತ್ತರಿಸಿತ್ತು. ಇಷ್ಟಾದರೂ ಅವಳ ಹೃದಯ ಸ್ಥ೦ಭನ ನಿಲ್ಲಿಸಿ ಸಾಕಷ್ಟು ಸಮಯವಾದ್ದರಿ೦ದ, ರಕ್ತ ಸಂಚಾರದ ಒತ್ತಡವಿಲ್ಲದ ರಕ್ತನಾಳಗಳು ತಮ್ಮಲ್ಲಿ ಶೇಖರವಾಗಿದ್ದ ಚೂರು ಪಾರು ರಕ್ತವನ್ನು ಹೊರಗೆ ತುಣುಕಿಸಿದವುಹಾಗಿದ್ದರೂ, ರಕ್ತದ ಕೆಲವೇ ಬಿಂದುಗಳು ನೆಲದ ಮೇಲೆ ಮತ್ತು ರೇಡಿಯೇಟರ್  ಮೇಲೆ  ಕಲೆಗಳನ್ನು ಮೂಡಿಸಿದವು . ಮೊಸರುದ್ದೀನ  ಬಾತ್ ರೂಮಿಗೆ ಹೋಗಿ ಒದ್ದೆ ಬಟ್ಟೆಯನ್ನು ತಂದು  ರಕ್ತದ ಕಲೆಗಳನ್ನು ಒರೆಸಿದ. ಸ್ವಲ್ಪ ಸೋಮಾರಿತನಕ್ಕೆ ಸಿಕ್ಕು ಬೇಸಿಗೆ ಕಾಲದಲ್ಲಿ ಮೂಲೆಗೆ ಬಿದ್ದಿದ್ದ ರೇಡಿಯೇಟರ್  ಮೇಲೆ ಚೆಲ್ಲಿದ್ದ ರಕ್ತದ ಹನಿಗಳನ್ನು ಕೂಡಲೇ ಒರೆಸದೆ ಹೋದರೆ , ಅವು ಒಣಗಿ ಮುಂದೆ ಚಳಿಗಾಲದಲ್ಲಿ ರೇಡಿಯೇಟರ್  ಚಾಲೂ ಮಾಡಿದಾಗ ರಕ್ತದ ವಾಸನೆ ಎಲ್ಲೆಡೆಯೂ ಹರಡುವದರಲ್ಲಿ ಸಂಶಯವೇ ಇಲ್ಲ  ಅವನು ಶವದ ಎರಡು ಕೈ ಹಿಡಿದು ಪುನ: ಹಾಲ್ ಗೆ ಎಳೆದು ತಂದ . ಮತ್ತೆ ಶವದಿಂದ ಹೊರಸೂಸುತ್ತಿದ್ದ ರಕ್ತ ನೆಲದ ಮೇಲೆಲ್ಲಾ ನಸುಗೆಂಪಾದ ಕಲೆಗಳನ್ನು ಮೂಡಿಸಿತು . ತಥ್  ! ಮೊಸರುದ್ದೀನ  ತಲೆಯಾಡಿಸುತ್ತಾ ಬಾತ್ ರೂಮಿಗೆ ಹೋಗಿ ಒದ್ದೆ ಬಟ್ಟೆಯನ್ನು ತಂದು ನೆಲವನ್ನು ಒರೆಸಿದ.  ಮೊಸರುದ್ದೀನ  ಯಾವಾಗಲೂ  ಹೀಗೆ ಅಂತ ಅಲ್ಲ , ಆದರೆ ಕೆಲವೊಮ್ಮೆ ಅವನು ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುತ್ತಾನೆ .  

ರೀತಿ ರಕ್ತದ ಕಲೆ ನೆಲದ ಮೇಲೆ ಮೂಡುವದು , ತಾನು ಮತ್ತೆ ಒದ್ದೆ ಬಟ್ಟೆ ತಂದು ಒರೆಸುವ ಕೆಲಸ ಪುನರಾವರ್ತನೆ ಆಗುವದನ್ನು ತಪ್ಪಿಸಲು ಮೊಸರುದ್ದೀನ  ಒಂದು ದೊಡ್ಡ ಟವೆಲ್ ತಂದು ಶವಕ್ಕೆ  ಅಡಿಯಿಂದ ಮುಡಿಯವರೆಗೆ  ಸುತ್ತಿದ. ಇದರಿಂದ ಅವನಿಗೆ ಶವವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಎಳೆದು ಸಾಗಿಸಲೂ ಸುಲಭವಾಯಿತು

ಸ್ಟಿರಿಯೊ ಒಂದು ಕ್ಷಣಕ್ಕೆ ಮೌನವಾಯಿತು . ಸಂಗೀತದ  ಅಲೆಗಳು ಕ್ಷಣಕಾಲ ಸ್ತಬ್ದವಾದವು .ಸ್ಟಿರಿಯೊದಲ್ಲಿನ ಧ್ವನಿ ತಾಳವಾದ್ಯ ಮತ್ತು ಕೊಳಲುಗಳ ಜುಗಲ್ ಬು೦ದಿಯಿರುವ ಯಾವುದೋ ಅಜ್ಞಾತ ಕಲಾವಿದರ ಹೆಸರನ್ನು  ಘೋಷಿಸಿತು .  

ಮೊಸರುದ್ದೀನ  ಶವವನ್ನು ಹಾಲ್ ನಿ೦ದ   ಬಾತ್ ಟಬ್ ಗೆ ವರ್ಗಾಯಿಸಿದನ. ಅವತ್ತು ರಾತ್ರಿ ಅವನಿಗೆ ಗಾಢ ನಿದ್ರೆ ಹತ್ತಿತು . ಮರುದಿನ ಹೊತ್ತುಮೀರುವ ತನಕವೂ ಅವನು ಮಲಗಿದ್ದ. ಅವತ್ತು ರಾತ್ರಿ , ಒಂದು ಕಪ್ಪೆಯನ್ನು ಚಿಕ್ಕ ರಾಕೇಟ್ ನಲ್ಲಿ ಕೂರಿಸಿ ಭೂಮಿಯಿಂದ ಅಂತರಿಕ್ಷಕ್ಕೆ ಉಡಾಯಿಸಿದ ಹಾಗೆ ಅವನು ಕನಸು ಕಂಡನುಬೆಳಿಗ್ಗೆ ಸರಿಯಾದ ಸಮಯಕ್ಕೆ ಅಲಾರಾಂ ಶಬ್ದ ಮಾಡಿ ಎಚ್ಚರಿಸಿದರೂ ಮೊಸರುದ್ದೀನ  , ಅಲಾರಾಂ ಶಬ್ದವನ್ನು ರಾಕೆಟ್ ಉಡಾವಣೆಯ ಶಬ್ದ ಎಂದು ತಪ್ಪಾಗಿ ಗ್ರಹಿಸಿದ್ದರಿಂದ ಅಲಾರಾಂ ಕಡೆ ಗಮನ ಕೊಡುವ ಗೋಜಿಗೆ ಹೋಗಲಿಲ್ಲ. ಬೆಳಿಗ್ಗೆ ಎದ್ದಾಗ ಹೊತ್ತಾದುದರಿಂದ ಬೆಳಗಿನ ಉಪಹಾರವನ್ನು ಗಡಿಬಿಡಿಯಿಂದ ಮುಗಿಸಿ ಆಫೀಸಿಗೆ ಓಡ ಬೇಕಾಯಿತು.  ಮಧ್ಯಾಹ್ನ ಅವನು ಮನೆಗೆ ಹಿಂದಿರುಗಿದ.

ಬಾಗಿಲು ತೆರೆದೊಡನೆ ಮನೆಯೊಳಗೇ ಸಣ್ಣಗೆ ಹರಡಿದ್ದ ಕಮಟು ವಾಸನೆ ಅವನ ಗಮನಕ್ಕೆ ಬಂದಿತು . ತುಂಬಾ ದಟ್ಟವಾದ ವಾಸನೆಯೇನಲ್ಲ ಆದರೂ ಒಂದು ತೆರನಾದ ಮೂಗು ಗ್ರಹಿಸಬಲ್ಲ ಸಣ್ಣ ವಾಸನೆಅವನು ಬಾತ್ ರೂಮಿಗೆ ಹೋದ . ಶವ ನಿನ್ನೆ ಸಂಜೆ ಇಟ್ಟ್ಟಾಗ ಹೇಗಿತ್ತೋ  ಹಾಗೆ ಇತ್ತು. ಒಂದೇ ವ್ಯತ್ಯಾಸವೆಂದರೆ ಶವದ ಮುಖದ ಮೇಲಾದ  ತರಚು ಗಾಯದಿಂದ  ಹೊರಬಂದಿದ್ದ ರಕ್ತದ ಬಿಂದುಗಳು ಶವವನ್ನುಸುತ್ತಿದ್ದ ಬೆಳ್ಳನೆಯ ಟವೆಲ್ ಮೇಲೆ ಹರಡಿ  , ಒಣಗಿದ ಎಲೆಯಾಕಾರವನ್ನು ನೆನಪಿಗೆ ತರುವ ರಚನೆಯನ್ನು ರೂಪಿಸಿದ್ದವು

ಆಫೀಸಿನಲ್ಲಿ ವಿಪರೀತ ಕೆಲಸ ಇದ್ದ ದಿನಗಳಲ್ಲಿ ಮನೆಗೆ ಬಂದ ಕೊಡಲೇ ಮೊಸರುದ್ದೀನ  ಬಾತ್ ಟಬ್ ನಲ್ಲಿ ಬಿಸಿ ನೀರು ತುಂಬಿಸಿ , ಟಬ್ ನೊಳಗೆ ಆರಾಮವಾಗಿ ಕೈ ಕಾಲು ಚಾಚಿ ಮಲಗಿ , ಟಬ್ ನಿಂದ  ಫಟ್ ಫಟ್ ಎಂದು ಉಬ್ಬಿ ಬರುತ್ತಿದ್ದ  ನೀರಿನ ಗುಳ್ಳೆಗಳಲ್ಲಿ  ತನ್ನ ಆಯಾಸವನ್ನೆಲ್ಲ ತುಂಬಿಸಿ , ಗುಳ್ಳೆಯೊಟ್ಟಿಗೆ ಆಯಾಸವನ್ನೂ ನಿಧಾನಕ್ಕೆ ಕರಗಿಸುವದು ಎಂದಿನ  ರೂಢಿಇವತ್ತೇನೋ ಅವನು ಬಾತ್ ಟಬ್  ರೂಢಿಗೆ ಚಕ್ಕರ್ ಹೊಡೆಯಬಹುದಿತ್ತು. ಆದರೆ ರೀತಿ ಬಾತ್ ಟಬ್ ನಲ್ಲಿ ಶವ ಇಟ್ಟುಕೊಂಡು ಪ್ರತಿ ದಿನ ಬಿಸ್ಸಿ ನೀರಿನ ಸ್ನಾನವನ್ನು ತಪ್ಪಿಸುವದು ಶಾಶ್ವತ ಪರಿಹಾರವೇನಲ್ಲ. ನಿಜ ಹೇಳಬೇಕೆಂದರೆ ಈಗಾಗಲೇ ಶವದ ವ್ಯವಹಾರ ಅವನಲ್ಲಿ ಅಸ್ವಸ್ಥತೆಯನ್ನು ಹುಟ್ಟುಹಾಕಿತ್ತು. ಅವನು ಶವವನ್ನು ಬಾತ್ ರೂಮಿನಿಂದ ಎಳೆದು , ಪಕ್ಕದ ಕೊಠಡಿಯಲ್ಲಿಟ್ಟು ಬಂದು ಸ್ನಾನದ ತೊಟ್ಟಿಯನ್ನು ತೊಳೆಯಲಿಕ್ಕೆ ಶುರುಮಾಡಿದನುಒಂದು ದೊಡ್ಡ ಡೆಟಾಲ್  ಬಾಟಲಿಯನ್ನು ಪೂರ್ತಿಯಾಗಿ ಹಾಕಿ ಖಾಲಿ ಮಾಡಿ ತೊಳೆದ ಮೇಲೆಯೇ , ಅವನಿಗೆ  ಬೆತ್ತಲೆಯಾಗಿ ತಾನೂ ಸಹ ಬಾತ್ ಟಬ್ ನೊಳಗೆ ಇಳಿದು ಅಸಹ್ಯ ಪಡದೆ ಸ್ನಾನ ಮಾಡಲು ಸಾಧ್ಯವಾಗಿದ್ದು

ಸ್ನಾನ ಮಾಡುವದಕ್ಕೆ ಮೊದಲು ಅವನು  ಮಾಡಿದ ಕೆಲಸವೆಂದರೆ ಶವವನ್ನು ಪಕ್ಕದಲ್ಲಿದ್ದ ತನ್ನ ಸ್ಟಡೀ ರೂಮಿನಲ್ಲಿನ ವಾರ್ಡರೋಬಿನೊಳಗೆ ತುಂಬಿಸಿಟ್ಟಿದ್ದು. ವಿಷಯ ತನಗೆ ಮೊದಲೇ ಯಾಕೆ   ಹೊಳೆಯಲಿಲ್ಲ ಎಂದು ತಲೆ ಕೆರೆದುಕೊಂಡ . ಹಿಂದೊಮ್ಮೆ ಅವನು ಕಿಟಕಿಯನ್ನು ಮುಚ್ಚುವ ಬಿದಿರಿನ ಕರ್ಟನ್ ಗಳನ್ನು ಸುತ್ತಿ ವಾರ್ಡರೋಬಿನೊಳಗೆ ಇಟ್ಟಿದ್ದ . ಬಿದಿರಿನ ಕರ್ಟನ್ ಗಳಿಗಿದ್ದ ತಂತಿ ವಾರ್ಡರೋಬಿನ ಮುಚ್ಚಿದ ಬಾಗಿಲ ಸಂದಿಯಿಂದ  ಹೊರಗೆ ಬಂದು  ಡೈನಮೈಟ್ ತಂತಿಯಂತೆ  ಕಾಣುತ್ತಿತ್ತುಶವವನ್ನು ಹೆಚ್ಚು ಪ್ರಯಾಸ ಪಡದೆಯೇ  ವಾರ್ಡರೋಬಿನೊಳಗೆ  ತುರುಕಲು ಸಾಧ್ಯವಾಯಿತು . ಆದರೆ ಒಂದೇ ಒಂದು ಅಡಚಣೆಯೆಂದರೆ ಪ್ರತಿಬಾರಿ ಅವನು  ಬಾಗಿಲು ಹಾಕಲು ಪ್ರಯತ್ನಿಸಿದಾಗಲೂ , ಶವ ಬುಳಕ್ಕನೆ ಹೊರಬೀಳುತ್ತಿತ್ತು . ಹಾಗಾದಾಗಲೆಲ್ಲ  ಅವನು ಶವವನ್ನು ಬಹು ಕಾಲದ ಮೇಲೆ ಭೇಟಿಯಾದ ಆತ್ಮೀಯರನ್ನು ತಬ್ಬಿಕೊಳ್ಳುವ ಹಾಗೆ  ಶವದ ಕುತ್ತಿಗೆ ಹಿಡಿದು ತಬ್ಬಿಕೊಳ್ಳಬೇಕಾಗುತ್ತಿತ್ತು. ಹಲವಾರು ಬಾರಿ ಪ್ರಯತ್ನಿಸಿದ ನಂತರ ಅವನು ಅವಳ ಕೈಗಳನ್ನು ವಾರ್ಡರೋಬಿನ  ಒಳಗಿನ ಹಲಗೆಗೆ ಗಮ್ ಟೇಪ್ ಹಾಕಿ ಅಂಟಿಸಿ , ಬಲವಂತವಾಗಿ ಬಾಗಿಲನ್ನು ಹಾಕಿದ. ನಂತರ ವಾರ್ಡರೋಬಿನೊಳಗಿನ ಗಾಳಿ ಕೊಂಚವೂ  ಹೊರಗೆ ಬರದಂತೆ  ಬಾಗಿಲಿನ ಸಂದಿಗೆ ಟೇಪನ್ನು ಅಂಟಿಸಿದ

ಮೊಸರುದ್ದೀನ  ಬಾತ್ ಟಬ್ ನಲ್ಲಿ ಮಲಗಿ ಕಣ್ಮುಚ್ಚಿ ಎರಡು - ಮೂರು ನಿಮಿಷಗಳಾದವೋ ಇಲ್ಲವೋ , ಪಕ್ಕದ ರೂಮಿನಿಂದ ದಢ್ ಎನ್ನುವ  ಸದ್ದು ಕೇಳಿಸಿತು . ನಲ್ಲಿಯನ್ನು ನಿಲ್ಲಿಸಿ ಶಬ್ದವನ್ನು ಆಲಿಸಿದ. ಎಲ್ಲೆಡೆ ನಿಶ್ಯಬ್ಧವಿದೆ ಏನೂ ನಡೆದಿಲ್ಲ ಹಾಗೆ ನಟಿಸುವದರಲ್ಲಿ ಅರ್ಥವಿಲ್ಲ. ಪಕ್ಕದ ರೂಮಿನಲ್ಲಿ ಏನಾಗಿದೆ ಎನ್ನುವದು ಅವನಿಗೆ ಗೊತ್ತಿತ್ತುಅರೆ ಬೆತ್ತಲೆಯಾಗಿ ಬಾತ್ ರೂಮಿನಿಂದ ಅವನು  ಪಕ್ಕದ ರೂಮಿಗೆ ಧಾವಿಸಿದ

ವಾರ್ಡರೋಬಿನ ಅರ್ಧ ತೆರೆದ ಬಾಗಿಲಿನ ಮೂಲಕ ಬೆಳ್ಳನೆಯ ಟವಲ್ ನಲ್ಲಿ ಸುತ್ತಿದ್ದ ಹೆಂಗಸಿನ ಶವದ  ಅರ್ಧ ಭಾಗ ಹೊರಗಿಣುಕುತ್ತಿರುವ ದೃಶ್ಯ ನೋಡಿದ ಮೊಸರುದ್ದೀನ  ಇಡೀ ರೂಮು ಅದುರಿ ಹೋಗುವಂತೆ ಸೀನಿದ್ದಕ್ಕೆ ಕಾರಣ ಕೇವಲ ಅವನ ಮೂಗಿನಲ್ಲಿ ಉಂಟಾದ ಅಸಾಧ್ಯ ತುರಿಕೆಯೊಂದೇ ಅಲ್ಲ , ಅದಕ್ಕೆ ಶವವನ್ನು ಸ್ಥಿತಿಯಲ್ಲಿ ನೋಡಿದ್ದಾಗ ಒತ್ತರಿಸಿಕೊಂಡು ಬಂದ ಅವನ ಕಲ್ಪನಾ ಪ್ರವಾಹವು ಕಾರಣವಾಗಿತ್ತುವಾರ್ಡರೋಬಿನಿಂದ ಅವಳನ್ನ ಹೊರಗೆ ಎಳೆದು ತೆಗೆಯುವ ಮುನ್ನ ಮಡಚಿಟ್ಟಿದ್ದ ಅವಳನ್ನ ಬಿಚ್ಚಬೇಕಾಯಿತು . ಹೌದು ! ಹೇಳಿದ್ದು ಸರಿಯಾಗೇ ಇದೆ. ಮಡಚಿಟ್ಟಿದ್ದ ಅವಳನ್ನ ಬಿಚ್ಚಬೇಕಾಯಿತು. ಎಂಥಹ ನಿಪುಣ ಜಿಮ್ನ್ಯಾಸ್ಟಿಕ್ ಪಟು ಸಹ ಇಂತಹ ಮಡಚಿದ ಭಂಗಿಯಲ್ಲಿ  ವಾರ್ಡ್ ರೊಬ್ ನಲ್ಲಿರಲು ಸಾಧ್ಯವಿಲ್ಲ . 'ಆದರೇನು , ಇದೇನು ಬದುಕಿರುವ  ಹೆಂಗಸಿನ ದೇಹವಲ್ಲ , ಅವಳ ಶವ ತಾನೇ ' ಮೊಸರುದ್ದೀನ  ತನ್ನನ್ನು ತಾನೇ ಸಮಾಧಾನಿಸಿಕೊಂಡ .  'ಬದುಕಿರುವವರನ್ನು ನಡೆಸಿಕೊಂಡ ಹಾಗೆ ಶವವನ್ನು ನೋಡಿಕೊಳ್ಳಲಾಗುತ್ತದೆಯೇ ? '

ಶವವನ್ನು ಸಂಪೂರ್ಣವಾಗಿ ಬಿಚ್ಚಿದ ಮೇಲೆ ಅವನಿಗೆ ಇದನ್ನು ಮೊದಲಿನ ಹಾಗೆ ಮಡಚಿಟ್ಟಿದ್ದರೆ ಒಳ್ಳೆಯದಿತ್ತೇನೋ ಅನಿಸಿತು . ಅವಳ ಕೈ ಕಾಲುಗಳು ಅಸ್ತವ್ಯಸ್ತವಾಗಿ ಹರಡಿಕೊಂಡವು , ದೇಹದ ಬಹುಭಾಗ ಉಬ್ಬಿಕೊಂಡು ಟವೆಲನ್ನು ಸೀಳಿ ಹೊರಬರುವದೇನೋ ಎನ್ನುವ ಹಾಗಿತ್ತು. ಮಡಚಿಡುವದಕ್ಕಿಂತ ಶವವನ್ನು ಬಿಚ್ಚಿಟ್ಟರೆ ಎಳೆದುಕೊಂಡು ಅತ್ತಿತ್ತ ಹೋಗುವದಕ್ಕೆ ಸುಲಭ. ಒಂದೇ ತೊಂದರೆ ಎಂದರೆ ಬಿಚ್ಚಿಟ್ಟರೆ ಮೊದಲಿಗಿಂತ ಸ್ವಲ್ಪ ಹೆಚ್ಚು ಜಾಗ ಬೇಕಾಗುತ್ತದೆ  

ಮೊಸರುದ್ದೀನನ  ಹಾಲಿನಲ್ಲಿ ಹಾಸಿದ್ದ ಕಾರ್ಪೆಟ್ ಮೇಲೆ ಹಳೆಯ ಕಾಲದ ನಾಜೂಕಿನ ಕುಸರಿಯ ಚೆ೦ದನೆಯ  ಚಿತ್ರಗಳನ್ನು ರಚಿಸಲಾಗಿತ್ತು . ಹಲವಾರು ತಲೆಮಾರುಗಳು ಕಾರ್ಪೆಟ್ ಮೇಲೆ ನಡೆದಾಡಿದ್ದವು . ಪುಟ್ಟ ಮಕ್ಕಳ ಚಿಕ್ಕ ಪಾದಗಳು ಕಾರ್ಪೆಟ್ ಮೇಲೆ ನಡೆದಾಡುತ್ತಾ ಭಾರ ತುಂಬಿದ ಬೆಳೆದ ಪಾದಗಳಾಗಿದ್ದವು. ಹೊಸತಾಗಿ ಮದುವೆಯಾದವರ ಬೆಚ್ಚನೆಯ ಹೆಜ್ಜೆಗಳ ಜೊತೆ ಜೊತೆಗೆ ಶೋಕತಪ್ತರ ತೇವದ ಹೆಜ್ಜೆಗಳ ನೆನಪು ಸಹ ಕಾರ್ಪೆಟ್ ಕುಸುರಿಗಳ ಮೇಲೆ ಹರಡಿತ್ತು. ಕಾರ್ಪೆಟ್ ಮೇಲೆ ಕೆತ್ತಲಾಗಿದ್ದ ಚಿತ್ರಗಳು ಮಹಾ ಯುದ್ಧವನ್ನೂ , ಸುಖಭೋಗವನ್ನೂ ಅರಾಜಗಕತೆಯ ತಲ್ಲಣವನ್ನೂ ದಾಟಿ ಬಂದಿದ್ದವು . ಸಂಕ್ಷಿಪ್ತವಾಗಿ ಹೇಳುವುದಾದರೆ, ನೀವು ಒಂದು ಶವವನ್ನು ಕೆಳಗೆ ತಳ್ಳಿ ಮುಚ್ಚಿಡಲು ಬಳಸಬಹುದಾದ ಸಾಮಾನ್ಯ ಕಾರ್ಪೆಟ್  ಇದು ಅಲ್ಲ

ಮೊಸರುದ್ದೀನನಿಗೆ ಕಾರ್ಪೆಟ್ ಘನ ಇತಿಹಾಸ  ತಿಳಿದಿತ್ತು. ಇಷ್ಟಾದರೂ ಸಹ ಅವನಿಗೆ ಬೇರೆ ದಾರಿಯೇ ಹೊಳೆಯಲಿಲ್ಲ. ಅವನು ತನಗೆ ಇಲ್ಲಿಯವರೆಗೆ ತೋಚಿದ ಎಲ್ಲ ಮಾರ್ಗಗಳನ್ನೂ ಪ್ರಯತ್ನಿಸಿಯಾಗಿತ್ತು . ರೇಡಿಯೇಟರ್ , ವಾರ್ಡರೊಬ್ , ಬಾತ್ ರೂಮ್.  ಈಗ ಶವವನ್ನು ಹಿಡಿದು ಕಿಟಕಿಯವೆರೆಗೆ ಎಳೆದು ಅಲ್ಲಿಂದ ಸರಕ್ಕನೆ  ತಲೆಕೆಳಗಾಗಿ ಎಸೆಯುವುದರ ಹೊರತಾಗಿ ಬೇರೆ ಯಾವ ದಾರಿಯೂ ಇರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಸಮಯವಿರಲಿಲ್ಲ. ಮೊಸರುದ್ದೀನ  ಭಾರವಾದ ಕಾರ್ಪೆಟ್ ತುದಿಯನ್ನು ಎರಡು ಕೈಗಳಿಂದ ಎತ್ತಿ , ಕಾಲಿನಿಂದ ಶವವನ್ನು ಬಲವಾಗಿ ಕಾರ್ಪೆಟ್ ಒಳಗಿನ ಮರದ ನೆಲಹಾಸಿನತ್ತ ನೂಕಿದನುಕಾರ್ಪೆಟ್ ಕೆಳಗಿನ ಮರದ ಹಲಗೆಗಳಿಗೆ ಅದೆಷ್ಟೋ ಕಾಲದಿಂದ ಜನರ ಸ್ಪರ್ಶವಾಗಲಿ  ಅಥವಾ ಬೆಳಕಿನ ಸಂಪರ್ಕವಾಗಲಿ ಇರಲಿಲ್ಲಅಂದುಕೊಂಡದ್ದಕ್ಕಿಂತಲೂ ಸ್ವಲ್ಪ ಹೆಚ್ಚೇ  ಸಮಯ ತೆಗೆದುಕೊಂಡರೂ ಕೊನೆಗೂ ಅವನು ಶವವನ್ನು ಕಾರ್ಪೆಟ್ ಕೆಳಗೆ ನೂಕಿ ಅದರ ಮೇಲೆ ಮತ್ತೆ ಮೊದಲಿನಂತೆಯೇ  ಕಾರ್ಪೆಟ್ ಹಾಸಲು ಸಫಲನಾದ .ಕಾರ್ಪೆಟ್ ನಿ೦ದ ಹಳೆಯ ಚರ್ಮದ ಬೂಟಿನ  ಗಾಢ ವಾಸನೆ  ಹೊರಹೊಮ್ಮಿತು. ರೂಮಿನ ತುಂಬಾ ಹರಡಿಕೊಂಡ ವಾಸನೆ ಕ್ರಮೇಣ ಕರಗುತ್ತಿದ್ದ ಹಾಗೆ ಮೊಸರುದ್ದೀನ ಸಮಾಧಾನದ ನಿಟ್ಟುಸಿರು ಬಿಟ್ಟನು. ಅವನು ಸಣ್ಣಗೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದ.  

ಈಗ ಶವವನ್ನು ತನ್ನ ಅಡಿಯಲ್ಲಿಟ್ಟುಕೊಂಡಿರುವದರಿಂದ ಕಾರ್ಪೆಟ್ ನಲ್ಲಿ ದಿಬ್ಬವೊಂದು ಮೂಡಿ ಅದು ಮೂರು-ಆಯಾಮದ ಭೂಗೋಳದ ನಕ್ಷೆಯನ್ನು ನೆನಪಿಗೆ ತರುತಿತ್ತುಶವದ ಮೇಲ್ಭಾಗ ಕರಾರುವಕ್ಕಾಗಿ ಕಾರ್ಪೆಟ್ ದಟ್ಟ ಚಿತ್ರಗಳನ್ನು ಮೇಲೆಕ್ಕೆ ಎತ್ತಿ ದಿಬ್ಬದ ತುದಿಗೆ ಕೂರಿಸಿದ್ದರಿಂದ , ಕಪ್ಪಗಿದ್ದ ಕಾರ್ಪೆಟ್ ನ ಆ ಜಾಗಗಳು ಭೌಗೋಳಿಕವಾಗಿ ಅತ್ಯಂತ ಎತ್ತರದ ಪ್ರದೇಶಗಳಾಗಿ ತೋರುತ್ತಿದ್ದವು. ಅದು ಹೇಗೋ ಶವವನ್ನು ಕೆಳಗೆ ಮಲಗಿಸಿದಾಗಲೆಲ್ಲ ಅದರ ಒಂದು ಕೈ ಮೇಲಕ್ಕೆ ಎತ್ತಿರುತ್ತಿದ್ದುದರಿಂದ ಭೌಗೋಳಿಕವಾಗಿ ಎತ್ತರದ ಪ್ರದೇಶವೊಂದು ಖಾಯಂ ಆಗಿ ರಚನೆಯಾದಂತಾಯಿತುದೂರದಿಂದ ನೋಡಿದರೆ ಉದ್ದೇಶಪೂರ್ವಕವಾಗಿ ದಿಬ್ಬವನ್ನು ನಿರ್ಮಿಸಿದ ಹಾಗೆ ತೋರುತ್ತಿತ್ತು

ನಿಸ್ಸಂಶಯವಾಗಿ ಇದುವರೆಗಿನ ಎಲ್ಲದಕ್ಕಿಂತ  ಪರಿಹಾರವು ಅತ್ಯುತ್ತಮವಾಗಿತ್ತು. ಒಂದೇ ತೊಂದರೆ ಎಂದರೆ ಅತ್ತಿತ್ತ ಓಡಾಡುವಾಗ ಶವವನ್ನು , ಅದು ನಿರ್ಮಿಸಿದ ಭೌಗೋಲಿಕ ದಿಬ್ಬವನ್ನು ಎಡವದೆ ನಡೆದಾಡುವದು. ಹಾಲಿನ ಮಧ್ಯ ದಿಬ್ಬವೊಂದಿದ್ದರೆ ನಡೆದಾಡುವದು  ಸುಲಭವಲ್ಲ . ಹೀಗಾಗಿ ಮೊಸರುದ್ದೀನ ತನ್ನ ಸ್ಟಡಿ ರೂಮಿನಲ್ಲಿ ಅನಾಥವಾಗಿ ಬಿದ್ದಿದ್ದ ದೊಡ್ಡ ಟೇಬಲ್ ತಂದು ದಿಬ್ಬ ಮುಚ್ಚುವ ಹಾಗೆ ಇಟ್ಟ . ಅದು ಕನಿಷ್ಟ ಅವನು ಶವಕ್ಕೆ ಹಾಯ್ದು ಮುಗ್ಗರಿಸುವುದನ್ನು ತಡೆಯಬಲ್ಲದು . ಅಲ್ಲದೆ ಇಷ್ಟು ಕಾಲ ಯಾವುದೇ ಉಪಯೋಗವಿಲ್ಲದೆ ಮೂಲೆಯಲ್ಲಿ ಬಿದ್ದಿದ್ದ ಟೇಬಲ್  ಈಗ ಸರಿಯಾಗಿ ಹಾಲಿನ ಮದ್ಯೆ ಬಂದಿದ್ದರಿಂದ ಅವನು ಅದರ ಮುಂದೆ ಕುಳಿತು ಓದುವದು , ಬರೆಯುವದು , ಸಾಹಿತ್ಯ ಕೃತಿಗಳ  ರಚನೆಯಲ್ಲಿ ತೊಡಗುವದು ಅಥವಾ  ಸುಮ್ಮನೆ ಕುಳಿತಿರುವದು ಮುಂತಾದವುಗಳನ್ನು ಮಾಡಬಹುದಿತ್ತು

ಹಾಲಿನ ಹೊಸ ಅಲಂಕಾರ ತೀರಾ ಕೆಟ್ಟದಾಗಿಯೇನೂ ತೋರುತ್ತಿರಲಿಲ್ಲ . ಹಾಲಿನ ಮಧ್ಯದಲ್ಲಿ ಒಂದು ಸಣ್ಣ ದಿಬ್ಬ ಮತ್ತು ಅದರ ಮೇಲೆ ಒಂದು ದೊಡ್ಡ ಟೇಬಲ್ಮುಂದಿನ ದಿನಗಳಲ್ಲಿ ತನ್ನ ಬರವಣಿಗೆಯ ಪುಟಗಳು ಟೇಬಲ್ ಮುಚ್ಚದೇ ಇದ್ದಾರೆ , ಒಂದು ಕಸೂತಿ ಮಾಡಿದ ಬಟ್ಟೆಯನ್ನು ತಂದು ಟೇಬಲ್ ಮೇಲೆ ಹರಡುವ ನಿರ್ಧಾರವನ್ನು ಅವನು ತಕ್ಷಣ ತೆಗೆದುಕೊಂಡ .  

"ಅಂತೂ ಒಂದು ಕೆಲಸ ಮುಗಿಯಿತು  ' ಎಂದುಕೊಳ್ಳುತ್ತ ಮೊಸರುದ್ದೀನ  ಅಡಿಗೆ ಮನೆಗೆ ಹೋದನು. ಎರಡು ದಿನಗಳ ಸತ್ವ ಪರೀಕ್ಷೆಯನ್ನು ಸಮರ್ಥವಾಗಿ  ಎದುರಿಸಿದ್ದಕ್ಕಾಗಿ ಒಂದು ಸಣ್ಣ ಸಂಭ್ರಮಾಚರಣೆ ಬೇಡವೇ ? ಮೊಸರುದ್ದೀನ  ತನ್ನಲ್ಲಿದ್ದ ಉತ್ಕ್ರಷ್ಟ್ರ ವಾದ ವೈನ್ ಬಾಟಲಿಯನ್ನು ಹೊರ ತೆಗೆದವೈನ್ ಬಾಟಲು ಮತ್ತು ಗ್ಲಾಸ್ ತೆಗೆದುಕೊಂಡು  , ಈಗ ಇಡೀ ಹಾಲಿಗೆ ಭಾವನಾತ್ಮಕ ಮೇರುಕೃತಿಯಾಗಿ ಕಂಗೊಳಿಸುತ್ತಿದ್ದ ಹಾಲಿನ ಮಧ್ಯದಲ್ಲಿದ್ದ ಟೇಬಲ್ ಬಳಿಗೆ ಬರುವಾಗಲೇ , ಮೊಸರುದ್ದೀನನಿಗೆ ಗೊತ್ತಾಗಿದ್ದು - ತಾನು ಎರಡು ಗ್ಲಾಸ್ ಗಳನ್ನು ತಂದಿದ್ದೇನೆ ಎನ್ನುವದುಅವನು ಟೇಬಲ್ ಬಳಿಗೆ ಸಾಗಲು ಹಾಕುತ್ತಿದ್ದ ಪ್ರತಿ ಹೆಜ್ಜೆಗೂ , ಕೈಯಲ್ಲಿ ಹಿಡಿದಿದ್ದ ಎರಡೂ ಗ್ಲಾಸ್ ಗಳು ಒಂದಕ್ಕೊ೦ದು ಮೆದುವಾಗಿ ತಾಗಿ  ಹಿತವಾದ ಸಣ್ಣಗಿನ ಶಬ್ದವನ್ನು ಹೊರ ಹೊಮ್ಮಿಸುತ್ತಿದ್ದವು

ಲೇಖಕರ ಪರಿಚಯ :

1982 ರಲ್ಲಿ ಆಸ್ಟ್ರಿಯಾದ ರಾಜಧಾನಿ ಗ್ರಾಜ್ ನಗರದಲ್ಲಿ. ಹುಟ್ಟಿದ ಆಸ್ಟ್ರಿಯನ್  ಕತೆಗಾರ  , ಕಾದಂಬರಿಕಾರ ಕ್ಲೆಮೆನ್ಸ್ ಜೆ ಸೆಟ್ಜ್ ಓದಿದ್ದು ಗಣಿತ ಮತ್ತು ಜರ್ಮನ್ . 2011 ರಲ್ಲಿ ಸಣ್ಣ ಕಥಾ ಸಂಕಲನಕ್ಕೆ ಲೈಪ್ಜಿಗ್  ಬುಕ್ ಫೇರ್ ಪ್ರಶಸ್ತಿ ಸಂದಿದೆ. ಶವ ಕತೆಯನ್ನು ಇದೇ ಕಥಾ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

No comments:

Post a Comment