Monday, December 27, 2010

ಸಮಾಧಿ

ಕೆಲವೊಮ್ಮೆ ಮರೆತುಹೋದಲಿಂದಲೇ ನೆನಪುಗಳು ಎದ್ದು ಬಿಡುತ್ತವೆ. ಕ್ರಿಯೆಗಳು ಆರಂಭವಾಗಿ ಬಿಡುತ್ತವೆ. ಯಾವ ಕ್ರಿಯೆಗಳಿಗೆ , ಯಾವ  ಸಂಬಂಧಗಳಿಗೆ ನಾವು ಸಮಾಧಿ ನಿರ್ಮಿಸಿರುತ್ತೇವೆಯೋ , ಯಾವ ಭಾವಗಳು ಆಕಾರ ಕಳೆದು ಕೊಂಡಿರುತ್ತವೆಯೋ  , ಯಾವ ಸ್ವಭಾವಗಳು ಅಭಾವಗಳಾಗಿರುತ್ತವೆಯೋ ಅಂತಹುದೇ ಕೆಲವೊಂದು ಮತ್ತೆ ಉಸಿರಾಡಲಾರಂಭಿಸುತ್ತವೆ. ನಿಗ್ರಹಗೊಂಡ ವಿಗ್ರಹದೊಳಗೆ ಸುಪ್ತತೆಯೋ೦ದು ತಡವರಿಸುತ್ತಾ ಮುಲುಕಾಡುತ್ತಿರುತ್ತದೆ. ಒಳಗೊಳಗೆ ಹರಿದಾಟ. ಕೆಲವು ಅಂತರಂಗ ಸಮಾಧಿಗಳು , ಹಲವು ಬಹಿರಂಗ ಸಮಾಧಿಗಳು. ಒಳಗೊಂದು , ಒಳಗಿನ ಹೊರಗೊಂದು. ಹೊರಗೊಂದು , ಹೊರಗಿನ ಒಳಗೊಂದು. ಮೌನ ಹುತ್ತದೊಳಗೆ ಪುಳ-ಪುಳನೆ ಹರಿಯುವ ಮಾತಿನ ಗೆದ್ದಲುಗಳು. ಸಮಾಧೀಯೊಳಗೆ ಈಜುವ ಸತ್ಯಗಳು. ಸುಳಿಯ ಮಧ್ಯೆ ನಿಂತ ನೆನಪುಗಳು. ಹಲವರನ್ನು ಹುಚ್ಚರು ಎನ್ನುತ್ತೇವಲ್ಲ , ಹುಚ್ಚು ದೇಹಕ್ಕೋ? ಮನಸಿಗೋ? ವಿಕಾರ ಭಾವಕ್ಕೋ , ಭವಕ್ಕೊ? ಮಗ್ಗಲುಗಳ ಮಗ್ಗುಲಿನಲ್ಲಿ ನಾವು ಯಾವತ್ತಿಗೂ ದಿಟ್ಟಿಸದ ರೂಪಗಳು ಮಿಸುಕಾಡುತ್ತಿರುತ್ತಲ್ಲ , ಅವನ್ನು ನಮ್ಮ ಆಕ್ರಮಣಕಾರಿ ಕ್ರಿಯೆಯಲ್ಲಿ , ತರ್ಕದಲ್ಲಿ ಲೋಳೆಗೊಳಿಸುತ್ತೇವೆ. ಧೀ ಶಕ್ತಿಯ ತನನಂ ನಮಗೆ ವ್ಯಕ್ತಿಯೊಳಗಿನ ಅಭಿವ್ಯಕ್ತಿ ಆಗುವದೆ ಇಲ್ಲ..! ದುರಂತ ಪ್ರಾರಂಭವಾಗುತ್ತದೆ.. ಮುನ್ನುಡಿಯೆ ಪೂರ್ಣವಾದ ಕಾದಂಬರಿಯಂತೆ..!

ಶುದ್ಧ ಚಳಿಯು ಎದೆಯೊಳಗೆ ಇಳಿದು , ಕಮ್ಮನೇ ನಿರ್ಮಿಸಿದ ಚಳಿ ಭಾವವನ್ನು ಇಂಚಿ೦ಚಾಗಿ  ಕರಗಿಸಲು ನಾನು ಚಳಿಗಾಲದ ಮುಂಜಾವುಗಳಲ್ಲಿ  ಸೀಸಿ ಯಲ್ಲಿ ಬಿಸ್ಸಿ ಬಿಸ್ಸಿ ಟೀ ಕುಡಿಯುತ್ತಾ ಕುಳಿತಿರುತ್ತಿದ್ದೆ. ಅಲ್ಲಿಗೆ ಆತನು ಬರುತ್ತಿದ್ದ. ರಾತ್ರಿಯೆಲ್ಲ ನಿದ್ದೆ ಇಲ್ಲದವರಂತೆ ಕೆಂಡವಾದ ಕಣ್ಣುಗಳು , ಅಚ್ಚುಕಟ್ಟಾಗಿ ಮುಚ್ಚಿದ ದೇಹ ಮುದುರಿರುತಿತ್ತು. ಕೆಲವರ ಪಾಲಿಗೆ ಅವನು ಸಭ್ಯ ಹುಚ್ಚ (!?) ಹಲವರಿಗೆ ಪೂರ್ತಿ ಹುಚ್ಚ.
ಅವನಿಗೆ ಆಯಾಮಗಳಿದ್ದವು. ಆದರೆ ನನ್ನ೦ತೆ , ನಿಮ್ಮಂತೆ ಮುಖವಾಡಗಳಿರಲಿಲ್ಲ. ಮುಖವಾಡ ತೊಟ್ಟ ನಾವು , ಮುಖವಾಡರಹಿತ ಅವನ ಮುಖಕ್ಕೆ ಅಸಹ್ಯ ಪಡುತಿದ್ದೆವು. ವಾಕರಿಸುತ್ತಿದ್ದೆವು. ಅವನು ತನ್ನ ಆಯಾಮದಲ್ಲಿ ತನ್ನನೇ ಕಟಿದು ನಿಲ್ಲಿಸಿದ ಶಿಲ್ಪಿಯಾಗಿದ್ದ. ಅವನು ನಮ್ಮ೦ತೆ - ನಿಮ್ಮ೦ತೆ ಲೋಳೆಯಾಗಿರಲಿಲ್ಲ. ಅವನು ಘನವಾಗಿದ್ದ. ಕಠಿಣವಾಗಿದ್ದ. ಕಾಲನ ಏಟಿಗೆ ಅವನು ಶಿಲ್ಪವಾಗಲಿಲ್ಲ.. ಅವನು ಛಿದ್ರವಾಗುತ್ತಿದ್ದ.
ನನ್ನ ಅವನ ಮಾತು ಮೆಲ್ಲಗೆ ಹರಿಯುತ್ತಿತ್ತು. ದೀರ್ಘವಾಗಿ ,  ತುಂಡು-ತುಂಡಾಗಿ  , ಗಟ್ಟಿಯಾಗಿ , ಮೆತ್ತಗಾಗಿ , ಕೆಲವೊಮ್ಮೆ ಸ್ವಗತವಾಗಿ , ಅಭಿನಯವಾಗಿ .
ಅವನು ದು:ಖದ ತುಂಡಿನಂತೆ ಮೂರ್ತನಾಗಿದ್ದ.
" ನೀನು  ಪ್ರೀತಿಸದೇನೇ , ನಿನ್ನ ಕತೆಗಳಲ್ಲಿ ಭಗ್ನ ಪ್ರೇಮಿಯಾಗುತ್ತಿ ಸಚ್ಚೀ.. ನೀನು ಕತೆಗಳಲ್ಲಿನ ಭಗ್ನ ನನ್ನ ಕೊರಡನ್ನು ಮತ್ತಷ್ಟು ಕೊರೆಯುತ್ತದೆ.. ನಾನು ನೆನಪಿಸಿ ನೆನಪಿಸಿ ಭಗ್ಞನಾಗುತ್ತೇನೆ.. ಕೇಳಬೇಡ ಸಚ್ಚೀ ನನ್ನ ಕೇಳಬೇಡ.. ನಾನು ಮಾತಲ್ಲ ಮೌನ.. ಮೌನ .. " ಬಡಬಡಿಸುತ್ತಿದ್ದ. ಹೀಗೆ ಹೇಳುತ್ತಲೇ ಅವನು ಮಾಯವಾಗಿದ್ದ.
ಪ್ರೀಯ ಓದುಗರೇ ,
ಇಲ್ಲಿ ಇವತ್ತಿಗೂ ಕುಳಿತು ನಾನು ಟೀ ಹೀರುತ್ತೇನೆ. ಮೌನವಾಗಿ , ಕೆಲವೊಮ್ಮೆ ಸಶಬ್ದವಾಗಿ.. ಇಲ್ಲಿನ ಜಾಗಗಳಲ್ಲಿ ನಾನು ಸಂಧಿಸಿದ ಹಲವರು ಕತೆಗಳನ್ನು ಅದ್ದಿ - ಅದ್ದಿ ಕೊಟ್ಟಿದ್ದಾರೆ. ನಾನು ಕುಡಿದು ಕುಡಿದು ಚಳಿಯ ಓಡಿಸಲು ಹೆಣಗುತ್ತೇನೆ.
ಒಳಗೆ ಇಳಿದ ಕತೆಗಳು ಕದಲುತ್ತವೆ  ನಾನು ಕನಲುತ್ತೇನೆ.. ಶಬ್ದಗಳು ಕೆರಳುತ್ತವೆ..!

 

ಭಾಗ ೧ : 

 ದ್ವಂದ್ವ , ಅಸಂಬದ್ದ , ಬಡಬಡಿಕೆ , ಏಕಪಾತ್ರಭಿನಯ..

" ಕರೆದೆಯಾ ದನಿ ?"
" ಮ್ಜ್"
" ಬಂದಿದ್ದೇನೆ ದನಿ"
" ಕೇಳುತ್ತಿರುವೆಯಾ?"
"ಹ್ಮ್"
" ಹೇಗೆ?"
" ಹೀಗೆ , ಸಂಪೂರ್ಣವಾಗಿ . ಉರುಟಾಗಿ , ಗೋಲವಾಗಿ. ಕೆಲವೊಮ್ಮೆ ತುಂಡು-ತುಂಡು. ನೀನು ಹೇಳಿದ್ದು , ಉಸಿರಿಸಿದ್ದು , ಪಸರಿಸಿದ್ದು, ಬಿಟ್ಟಿದ್ದು , ಕೊಟ್ಟಿದ್ದು. ನಿನ್ನ ನೆನಪು ಅಲೆ-ಅಲೆಯಾಗಿ ಕೇಳುತ್ತೇನೆ. ನಿನಗೆ ನೆನಪಿದೆಯಾ ದನಿ? ಅವತ್ತೂ ನಾವು ಕೇಳುತ್ತಿದ್ದೆವು. ನಿನ್ನ ಎದೆಯ ದ್ವಾರದಲ್ಲಿ ಮುಖವಿಟ್ಟು ನಾನು ಕೂಗಿದರೆ , ಶಬ್ದ ನನ್ನ ಎದೆಯ ಗೋಡೆಯೊಳಗೆ ಬಡಿ- ಬಡಿದು , ಪ್ರತಿಧ್ವನಿಸಿ ಮತ್ತೆ ನಿನ್ನ ಹೊಕ್ಕು , ನನ್ನ ಮನದೊಳಗೆ ಮೊಳಗುತಿತ್ತು. ಅವತ್ತು ಕೇಳಿದ್ದೆವು. ನಿನ್ನ , ನಾನು ; ನನ್ನ ನೀನು..!  ಕೇಳುತ್ತಾ ಕುಳಿತವರ ಜಗತ್ತಿನಲ್ಲಿ ನಮ್ಮಿಬರದೇ ಶಬ್ದಗಳು..! ನಿನ್ನ ಧ್ವನಿಗೆ ನನ್ನ ಪ್ರತಿಧ್ವನಿ .. ನನ್ನ ಪ್ರತಿಧ್ವನಿಗೆ ನಿನ್ನ ಧ್ವನಿ.. ಎಲ್ಲೇ ದಾಟಿ ಇಬ್ಬರ ಮೇಲೂ ಹರಿದ ಮಾತಿನ ಮಳೆಯ ತುಂತುರು ..  ನನ್ನ ತುಟಿಯ ಮೇಲೆ ನಿಂತ ಶಬ್ದ ಹನಿಗಳನ್ನ ನೀನು ನಿನ್ನ ತುಟಿಯಿಂದ ಬಸಿ- ಬಸಿದು ನನ್ನೊಳಗೆ ಸೋಲುತ್ತಿದ್ದೆ. ನಮ್ಮಿಬ್ಬರ ದೇಹದಿಂದ ಹೊರಟ ಕಂಪನಗಳ ಮೆರವಣಿಗೆ , ತರಂಗಳ ಹೊತ್ತು  ಪ್ರೀತಿಯಲ್ಲಿ ಸಾಗುತಿತ್ತು. ಒಲವ ತರಂಗಗಳು ಜಲಪಾತದಂತೆ  ಮನಸ್ಸಿನಲ್ಲಿ ದುಮ್ಮಿಕ್ಕಿ ನಮ್ಮಿಬ್ಬರ ಎದೆಯಲ್ಲಿ ವಸಾಹತು ಸೃಷ್ಟಿಸಿಕೊಂಡಿದ್ದವು." ( ಮಾತು ಥಟ್ಟನೆ ಸ್ಥಗಿತ)

" ಮಾತನಾಡು ಶ್ರೀ ಮಾತನಾಡು.. ನಿನ್ನ ಮಾತುಗಳು ನನ್ನ ತುಂಬುತ್ತಿರಬೇಕು. ನನ್ನ ಒಡಲು ಉಕ್ಕಿ ಹರಿಯುವಷ್ಟು ಮಾತನಾಡು. ನಾನು ಒಳಗೊಳಗೆ ಕಟ್ಟಿ ನಿಂತ ಆಣೆಕಟ್ಟಾಗುತ್ತೆನೆ. ನಿನ್ನ ಧ್ವನಿಗೆ , ನಿನ್ನ ಶಬ್ದಕ್ಕೆ , ಅವುಗಳ ಉಸಿರಿಗೆ ನಾನು ತುಂಬಿ ನಿಂತ ಪ್ರೀತಿಯಾಗಿ , ಕೊನೆಗೊಂದು ದಿನ ನನ್ನ ಒಡಲ ನಾನೇ ಸ್ಪೊಟಿಸೀ , ಉಕ್ಕಿ ಹರಿದು ನಿನ್ನ ಸೆಳೆಯುತ್ತೇನೆ. ನನ್ನ ಪ್ರೀತಿ ಸುಳಿಯಲ್ಲಿ ನೀನು ಗಿರ ಗಿರನೆ ತಿರುಗಿ , ಸುಳಿಯ ಅಲೆಯಾಗು. ಕೊಚ್ಚಿ ಹೋಗು. ತುಂಬಿಸು ಶ್ರೀ ನಿನ್ನ ಶಬ್ಧಗಳ .. ನನ್ನ ಜಿಟಿ- ಜಿಟಿ ರಿಪಿ ರಿಪಿ ಯಾಗಿಸು.


ಇಲ್ಲ ದನಿ ನಾನು ಮಾತನಾಡುವದಿಲ್ಲ. ನಾನು ಮೌನಿಯಾಗುತ್ತೇನೆ. ಸಮಾಧೀಯೊಳಗೆ ನೀನು ಮೌನಿಯಾದಂತೆ ನಾನು ಬದುಕಿನ ಸಮಾಧೀಯೊಳಗೆ ಮೌನವಾಗುತ್ತೇನೆ. ಸಮಾಧೀಯೊಳಗೆ  ನೀನುಮುಚ್ಚಿಕೊಂಡಂತೆ ನಾನು ನನ್ನಷ್ಟಕ್ಕೆ ಮುಚ್ಚಿಕೊಂಡು ಬಿಡುತ್ತೇನೆ. ನಾನು ಮರೆಯಾಗಿ ಬಿಟ್ಟೆ ದನಿ. ನಿನ್ನ ಮರೆಯೊಂದಿಗೆ ನಾನು ಮರೆಯಾದೆ. ನಿನ್ನ ಕೊಂದ ಪಾಪಿಗಳ ಶಬ್ಧ ಮಾತಿಗೆ ನಾನು ಇರಿಯುತ್ತೇನೆ. ನಾನು ಮೌನದಿಂದ ಚುಚ್ಚುತ್ತೇನೆ. ಪದರ ಪದರವಾಗಿ ಅವರನ್ನು ಬಿಡಿಸಿ  ಸುಲಿದು , ಕೆತ್ತಿ ತೆಗೆದು , ಪ್ರತಿ ಪದರಕ್ಕೂ ತಿವಿಯುತ್ತೇನೆ. ನನ್ನ ಮೌನದ ಹೊಡೆತಕ್ಕೆ ಅವರ ಶಬ್ದಗಳು ಹನಿ ಹನಿಯಾಗಿ ಸೋರುತ್ತವೆ. ಸೋರಿದ ಹನಿಗಳು ನೀನು ಮಣ್ಣಾದ ನೆಲಕ್ಕೆ ಬೀಳುವ ಮೊದಲೇ ನನ್ನ ಮೌನದ ನಾಲಗೆಯ ಈಈಈ  ಎಂದು ಚಾಚಿ ಹೀರಿಬಿಡುತ್ತೇನೆ. ಅವರು ಸೋರಿ - ಸೋರಿ  ಬರಿದಾಗಿ ನಿ:ಶಕ್ತರಾಗಿ , ಮಾತುಗಳೇ ಖಾಲಿಯಾಗಿ , ಮಾತುಗಳೇ ಇಲ್ಲದವರಾಗಿ , ರಚನೆಯೇ ಇಲ್ಲದ ಆಮೀಬಾಗಳಾಗಿ ಬರಡು ಬರಡಾದಾಗ , ನನ್ನ ಮೌನ ಅವರ ಹುಡುಕಿ ಕೆತ್ತಿ ಕಿತ್ತು ಕಿತ್ತು ತಿಂದು ಮುಗಿಸುತ್ತದೆ. ಸತ್ತು ಹೋದ ಅವರ ಮಾತುಗಳ ಕಳೇಬರವನ್ನು ಲಟಕ್ಕನೆ ಮುರಿದು  , ಸೀಳಿ , ನೆಲಕ್ಕೆ ಅಪ್ಪಳಿಸಿ ದಿಕ್ಕು ದಿಕ್ಕಿಗೂ ಎಸೆದು ಬಿಡುತ್ತೇನೆ. ಮುರಿದಾಗ ಬೀಳುವ ಚೂರುಗಳನ್ನು ಬೀಳದಂತೆ ಹಿಡಿದು ನೆಕ್ಕಿ ಬಿಡುತ್ತೇನೆ.

"ದೇವಾ ! ಏನಾಗಿದೆ ಶ್ರೀ? "

"ಆಗುವದು ಇನ್ನೇನು ಇಲ್ಲ ದನಿ. ಆಗಬೇಕಾಗಿದ್ದು ಆಗದೇ , ಆಗಬಾರದ್ದು ಆಗಿ ಹೋದ ಮೇಲೆ ಇನ್ನೇನು ಆಗಬೇಕಿದೆ?
ಹೇಳು ದನಿ ನೀನು ಹೇಗಿದ್ದೀಯ? ಸಮಾಧೀಯೊಳಗೆ ನನ್ನ ನೆನಪುಗಳಿವೆಯೇ? ಅವು ಚಿತ್ಕರಿಸುತ್ತವೆಯೇ? ಅಲ್ಲಿಯೂ ನಕ್ಷತ್ರಗಳಿವೆಯೇ ? ಚಂದಮನಿದ್ದಾನೆಯೇ? ನಮ್ಮಿಬ್ಬರ ಹಣತೆಯಿದೆಯೇ? ಕಣ ಕಣಗಳಿವೆಯೇ? ಹೇಳು ದನಿ  ನೀನು ಹೇಳುತ್ತಲೇ , ನಾನು ಕೇಳುತ್ತಲೇ ಅಣುವಾಗುತ್ತೇನೆ. ಅಣು ಪರಮಾಣುವಾಗಿ , ಬೀಜಕೇಂದ್ರವಾಗಿ , ಸೂಕ್ಶ್ಮಾತಿಸೂಕ್ಶ್ಮ ಕಣವಾಗಿ , ಕಣ ಹಗುರವಾಗಿ ಎಲ್ಲೆಗಳ ದಾಟಿ , ಹಾರಿ ತೇಲಾಡಿ ನಿನ್ನ ಎದೆಯ ಪೊಟರೆಯೊಳಗೆ ಕೇ೦ದ್ರವಾಗುತ್ತೇನೆ.  ಹೇಳು ದನಿ ಹೇಳು."


" ಚಂದಮನಿದ್ದಾನೆ ಶ್ರೀ. ನಿನ್ನ ಚಂದಮ ನನ್ನ ಚಂದಮ. ನಕ್ಷತ್ರಗಳಿದ್ದಾವೆ. ನಮ್ಮಿಬ್ಬರ ನಕ್ಷತ್ರಗಳು. ನನ್ನ ಅಂತಿಮ ನಿರ್ಗಮನದ ಹಿಂದಿನ ದಿನ ನೀನು ಬೊಗಸೆಯಲ್ಲಿ ಕೊಟ್ಟ ನಕ್ಷ್ತ್ರಗಳನ್ನು ತೂಗಿ ಹಾಕಿದ್ದೇನೆ ಶ್ರೀ. ಅವುಗಳ ಬೆಳಕಲ್ಲಿ ನಿನ್ನ ನೆನಪಿಗೆ ಜೋಗುಳ ಹಾಡುತ್ತೇನೆ. ಇಲ್ಲಿ ನನ್ನ ಆಗಸದಲ್ಲಿ ನಾವಿಬ್ಬರೇ. ನನ್ನ ಚುಕ್ಕಿ , ನಿನ್ನ ಚುಕ್ಕಿ.ಇಲ್ಲಿನ ರಾತ್ರೆಗಳಿಗೆ ಹಗಲುಗಳೇ ಇಲ್ಲ ಶ್ರೀ. ಎಲ್ಲವೂ ಶಾಪಗ್ರಸ್ತ ರಾತ್ರೆಗಳು. ಅವುಗಳ ಮಧ್ಯೆ ನಿನ್ನ ನೆನಪು ಶಾಪಗ್ರಸ್ತ ಗಂಧರ್ವ."

ರಾತ್ರೆಗಳು ದೀರ್ಘವಾಗುತ್ತಿವೆ ಶ್ರೀ. ನಿನ್ನ ನೆನಪಲ್ಲಿ ಮನಸ್ಸು ಲಂಬವಾಗಿ , ಊರ್ಧ್ವವಾಗಿ ೯೦ ಡಿಗ್ರಿ ನೇರವಾಗಿ ಉಳಿಡುತ್ತದೆ. ನಿನಗೂ ಹೀಗೆ ಆಗುತ್ತದೆಯ ಶ್ರೀ??


" ಆಗುತ್ತದೆ ದನಿ. ಕಾಲನ ಬೆಟ್ಟದ ಬುಡದಲ್ಲಿ ಕಟ್ಟಿದ ನನ್ನ ಮನಸಿನ ಮನೆಗೆ , ಬೆಟ್ಟದ ಮೇಲಿಂದ ನಿನ್ನ ನೆನಪಿನ ಬಂಡೆಗಳು ಧಡ-ದಡನೆ ಉರುಳುರುಳಿ ಬರುತ್ತವೆ. ದೈತ್ಯ ಬಂಡೆಗಳು ಎಲ್ಲವನ್ನು ಛಿದ್ರಗೊಳಿಸುತ್ತವೆ. ಆಸೆಯನ್ನು , ದೇಹವನ್ನು , ನಿರಾಸೆಯನ್ನು , ತಣಿವನ್ನು , ತೃಪ್ತಿಯನ್ನು, ಮಾತನ್ನು , ಹಸಿವನ್ನು. ಉರುಳಿ ಬರುತ್ತಿರುವ ಬಂಡೆಗೆ ಆಹುತಿಯಾಗಲು ಸಮೀತ್ ಆಗಿ ನಿಲ್ಲುತ್ತೇನೆ. ನಿನ್ನ ನೆನಪಿನ ಬಂಡೆಗಳು ರಭಸ ಹೆಚ್ಚಿಸಿ ನನ್ನ ಎದೆಗೆ ಬಡಿದು , ಹೃದಯವ ಛಿದ್ರಗೊಳಿಸಿ , ಎದೆಯಲ್ಲೊಂದು ರ೦ಧ್ರ ಕೊರೆದು ಮಾಯವಾಗುತ್ತವೆ. ದಿನ ಕಳೆದರೆ , ಕಣ್ಣು ಮುಚ್ಚಿದರೆ , ತೆಗೆದರೆ , ನಿಂತರೆ ಕುಳಿತರೆ , ಉಸಿರಾಡಿದರೆ ನಿನ್ನ ನೆನಪಿನ ಬಂಡೆಗಳ ಬಡಿತ. ದನಿ ನೋವು ಸಹಿಸಲಾರೆ.

"ಅಯ್ಯೋ ..!! ಅದು ಹೇಗೆ ಬದುಕುತ್ತಿ , ಇಂತಹ ನೋವಿನಲ್ಲಿ?'
" ಬದುಕುವದಿಲ್ಲ ದನಿ ಸಾಯುತ್ತೇನೆ. ಮುಷ್ಟಿಯೊಳಗೆ ಬಿಗಿ ಹಿಡಿದ ಮರಳು ಸ್ವಲ್ಪ ಸ್ವಲ್ಪವಾಗಿ ಸೋರುವಂತೆ ನಾನು ಸ್ವಲ್ಪ ಸ್ವಲ್ಪವಾಗಿ ಸೋರಿ ಹೋಗುತ್ತಿದ್ದೇನೆ. ಕುದಿಸಿ ಬಿಡು ದನಿ ನನ್ನ ಕುದಿಸಿ ಬಿಡು. ನನ್ನ ಕೋಶ ಕೋಶಗಳನ್ನು ಹೊರಗೆ ಕಿತ್ತು ಎಳೆದು , ಒಗೆದು ಒಣಗಿಸಿ ಹರವಿ ಅದರೊಳಗೆ ನಿನ್ನ ತುಂಬಿ ಮತ್ತೆ ಕುದಿಸು. ರಕ್ತ ಬೆಂದು ಗೊಡ- ಗೊಡನೇ ಶಬ್ಧ ಬರುವಂತೆ , ಶಬ್ದ ಗುಳ್ಳೆಗಳಾಗಲಿ. ಗುಳ್ಲೆಗಳು ಒಡೆದು ಅದರೊಳಗಿನ ನಮ್ಮಿಬ್ಬರ ಆವಿ ಅಗಸದೆತ್ತರಕ್ಕೆ ಚಿಮ್ಮುವಂತೆ ಊದಿಬಿಡು. ಆವಿ ಮತ್ತೆ ಮೋಡವಾಗಿ ಮೋಡ ಮಳೆಗಟ್ಟಿ ಹನಿಗರೆದು , ಮತ್ತೆ ನಾನು ನಿನ್ನಲ್ಲಿ ಧೋ ಎಂದು ಬೀಳುತ್ತೇನೇ. ಲೀನವಾಗುತ್ತೇನೆ. ಹೀರಿಬಿಡು ದನಿ ನನ್ನ ಕಣ- ಕಣಗಳನ್ನು . ಬರಲೇ ದನಿ ನಿನ್ನ ಬಳಿ.. ಬರಲೇ ??"

" ಬಾ ಶ್ರೀ ಬಂದುಬಿಡು. ಉಸಿರಾಗಿ ಹಸಿರಾಗಿ. ಅನಂತ ಕತ್ತಲೆಯ ಸಮಾಧೀಯೊಳಗೆ ನಮ್ಮಿಬ್ಬರ ನಕ್ಷತ್ರಗಳ ಹಚ್ಚೋಣ. ಲೆಕ್ಕವೇ ಇಲ್ಲದ ದಿನಗಳ ಎಣಿಸೋಣ. ಎಣಿಸುತ್ತಾ ನಿನ್ನಲ್ಲಿ ನಾನು , ನನ್ನಲ್ಲಿ ನೀನು ಶರಣಾಗೋಣ."
( ಆಹ್ವಾನ)
"ಹಾಯ್ ದೇವರೇ..!"
( ಕೊನೆ)

 

ಭಾಗ ೨ :

 ಕೆಲವು ಹೇಳಿಕೆಗಳು ( ಬಾಲಿಶ(!?)

 

ಎಸ್. ಬಿ. ಪರಮನಾಥ್ ಜೋಷಿ : ವಕೀಲ
" ನಾನು ಲಾ ಪ್ರಾಕ್ಟೀಸು ಮಾಡುವದಕ್ಕು ಮೊದಲಿಂದ ಅವರು ಪ್ರೀತಿಸುತ್ತಿದ್ದರು. ಅವರದು ಅಪರೂಪದ ಪ್ರೀತಿ . ಅವತ್ತು ಏನಾಯಿತೋ  ಗೊತ್ತಿಲ್ಲ. ಅವಳು ಮಣ್ಣಾದಳು. ಪೊಲೀಸರು ಇವನು ಎಂದರು. ಬಡಿದರು. ಕೊನೆಗೆ ಸಹಜ ಮರಣ ಎಂದರು. ಇವನು ಹುಚ್ಚ್ನಾದ . ರಾತ್ರಿಯೆಲ್ಲ ಹಲಭುತಿದ್ದ. ನನಗೆ ಗೊತ್ತು ಸಾರ್ ಎಲ್ಲ ಗೊತ್ತು. ಯಾರನ್ನು ಬಿಡುವದಿಲ್ಲ. ಎಲ್ಲರ ಮೇಲೂ ಕೇಸು ಜಡಿಯುತ್ತೇನೆ. ಸತ್ಯಕ್ಕೆ ಸಾವಿಲ್ಲ ಸಾರ್.

ಆರ್. ಜಾರೇಶ್ವರಿ ನಾಯ್ಕ್ - ಗೃಹಿಣಿ
ತಥ್..! ಅವನೆಂತ ಮನುಷ್ಯಾರಿ? ಅಷ್ಟು ದರಿದ್ರ.. ಥೂ.. ಚೆಂದ ಹುಡುಗಿ ಅವಳನ್ನು ತಿಂದ.  ಪ್ರೀತೀಯಂತೆ ಪ್ರೀತಿ ಯಾವ ಸೀಮೆ ಪ್ರೀತಿ? ಇವನಿಂದಲೇ ಅವಳು ಹಾಳಾಗಿದ್ದು. ಸತ್ತಿದ್ದು. ಏನು ಮಾಡಿದ್ದಾನೋ ಏನೋ , ಯಾರೀಗ್ ಗೊತ್ತು. ಎಲ್ಲರೂ ಆಡ್ಕೊತಾರೆ. ಏನೋ ಮಾಡಿದ್ದಾನಂತೆ. ಪಾಪ ಮಾಡದೇ ಇದ್ದಿದ್ರೆ ಇವನಿಗೆಹುಚ್ಚು ಹಿಡಿಯುತ್ತಿತ್ತೇ? ಕೊನೆಗೆ ಇವನು ಸತ್ತ ನೋಡಿ . ಒಳ್ಳೆಯದೇ. ಇಲ್ಲವಾದರೆ ನಮ್ಮಂತಹ ಮರ್ಯಾದಸ್ತರು ಬದುಕುವದು ಹೇಗೆ?

ಅವಳ ಮನೆಯವರು :
ಇಲ್ಲ ನಾವೇನೂ ಹೇಳುವದಿಲ್ಲ. ಅಷ್ಟಕ್ಕೂ ಕೇಳುವದಿಕ್ಕೇ ನೀವ್ಯಾರೂ? ಅವನ ಜೊತೆಯವರೋ? ಹಾಗಾದ್ರೆ ಒಂದು ಮಾತು ನೆನಪಿನಲ್ಲಿ ಇಟ್ಕೊಳ್ಲಿ ಇವಳು ಯಾವತ್ತೂ ಅವನನ್ನು ಪ್ರೀತಿಸಲಿಲ್ಲ.  ಇನ್ನೂ ಹೇಳುವದು ಏನು ಇಲ್ಲ ಸಾಕು ನಡೆಯಿರಿ.

 

ಅತೀತ :ಅವನು ಆಕಾಶ ನೋಡಿ ನಗುತ್ತಾನೆ. ಚುಕ್ಕಿಗಳ ಜೊತೆ ಮಾತನಾಡುತ್ತಾನೆ. ಅಳುತ್ತಾನೆ. ಏಕ್‌ಪಾತ್ರಭಿನಯ ಮಾಡುತ್ತಿದ್ದಾನೆಯೇ ಎಂಬ ಸಂದೇಹ ಬರುತ್ತೆ. ಯಾರೊಂದಿಗೋ ಸಂಭಾಷಿಸುತ್ತಾ ಇರುತ್ತಾನೆ. ಒಮ್ಮೆ ಧ್ವನಿ ಅವಳಾಗಿ , ಇನ್ನೊಮ್ಮೆ ಇವನಾಗಿ. ಕೆಲವೊಮ್ಮೆ ಮಂದ್ರ ಇನ್ನೊಮ್ಮೆ ಸಾಂದ್ರ . ಶೂನ್ಯದಲ್ಲಿ ಬಡಬಡಿಸುತ್ತಾನೆ. ಅವನಿಗೆ ಮೈ ಮೇಲೆ ಬರುತ್ತದೇಯ೦ತೆ. ಅವನು ಅವಳ ಆತ್ಮದ ಜೊತೆ ಮಾತನಾಡುತ್ತಾನಂತೆ..!!

ಉಪಸಂಹಾರ :ಅವನ ಶವ ಸಂಸ್ಕಾರದ ದಿನ  ನಾನು , ಪೊಲೀಸು ಹಾಗೂ ಮಹಾನಗರಪಾಲಿಕೆಯ ಕೆಲಸಗಾರರಿದ್ದರು.
ಅವಳು ಮಣ್ಣಾದಲ್ಲಿ ಇವನನ್ನು ಮಣ್ಣು ಮಾಡಿ ಎಂದಾಗ ನನ್ನ , ಎಲ್ಲರೂ ದುರುಗುಟ್ಟಿ ನೋಡಿದರು.

Sunday, December 26, 2010

ಬಿಡಿ- ಬಿಡಿ ವಿಷಾದಗಳು ...

ಕಣ್ಣು ಮುಚ್ಚಿದ ಕಾಲ ಸಾಯುವದೆ ಇಲ್ಲ
ಸಾಯುವವರು ನಾವುಗಳು , ನೀವುಗಳು
   ನಮ್ಮ - ನಿಮ್ಮ  ನೆನಪುಗಳು ..
ಮರೆತು ಹೋದ ಸಂಬಂದಗಳು...!!
.....      ......       ......        ......

ಹೈದೆರಾಬಾದಿನ ಬೀದಿ- ಬೀದಿಗಳಲ್ಲಿ , ಬಿರಿಯಾನಿ ವಾಸನೆ ,
ತಿನ್ನಲು ಹೋದರೆ ಕಣ್ಣ ಮುಂದೇ , ಗಾಂಧಿ ಬಜಾರಿನ ಮುದುಕಿಯ
ಜೋತು ಬಿದ್ದ ಕಂಗಳು .. ನಾಳೆಯ ಸಾವಿನ  ವಾಸನೆ..!!
..... ........      .......        ......      ......      .....

ಸುಕಾ ಸುಮ್ಮನೇ ರಾತ್ರಿಗಳು ಧೀರ್ಘವಾಗುತ್ತಿವೆ ,
ಅನಾಥ ಕನಸುಗಳಲ್ಲಿ ನೆನಪುಗಳ ಮೌನ ಮೆರವಣಿಗೆ ..!!
...... ......      ......    ......      .......
ನಿದ್ರೆ ಬರದ ರಾತ್ರಿಗಳಲ್ಲಿ , ಹಳೆಯ ಹೊದಿಕೆಯ ಅಂಚಿನಲಿ
ಬೆವತು ಬೆವರಾಗಿ , ಕರಗುವಾಗ
ಮನಸು ಆಕ್ರಂದಿಸುತ್ತಿದೆ ಕ್ಷಮಿಸು ಒಲವೇ...!!

Friday, December 24, 2010

ಕನಸು ಕಳೆದಿದೆ..!!

"ಇಲ್ಲಿ ಕನಸುಗಳನ್ನು ಮಾರಲಾಗುತ್ತದೆ."
ಈ ಬೋರ್ಡ್‌ನ್ನು ನೋಡಿದಾಗ ನಾನು ಕೂಡ ನಿಮ್ಮಂತೆ ಆಶ್ಚರ್ಯ ಚಕಿತನಾಗಿದ್ದೆ. ಆದರೆ ನಾನು ಅಂಗಡಿಯಎದುರಿಗೆ ನಿಂತಿದ್ದೆನಾದರಿಂದ ಕುತೂಹಲ ಹತ್ತಿಕ್ಕಿಕೊಳ್ಳಲಾಗದೆ ಒಳ ಪ್ರವೇಶಿಸಿದೆ.
"ಬನ್ನಿ ಸಾರ್ ಬನ್ನಿ" ಅಂಗಡಿಯಾತ ಕನಸುಗಳ ಸಂಗ್ರಹಕ್ಕೆ ಸ್ವಾಗತಿಸಿದ.
ನಾನು ಕನಸುಗಳ ಮಹಾ ಮಾರ್ಕೆಟಿನೊಳಗೆ ನಡೆದೆ.
ದಿಟ್ಟಿಸಿದೆ.
ಸುತ್ತಲೂ... ಎತ್ತಲೂ.....ಅತ್ತ ಇತ್ತಲೂ......
ಒಂದು ರಾಶಿ ಕನಸುಗಳು.....!
ಎರಡು ರಾಶಿ ಕನಸುಗಳು.....!!
ಮೂರು ರಾಶಿ ಕನಸುಗಳು...!!!
ಹಲವಾರು ರಾಶಿ ಕನಸುಗಳು......!!!!
ಎಣಿಸಲಾರದಷ್ಟು....!
ಸುತ್ತಲೂ ಕನಸುಗಳ ಹಸಿ ವಾಸನೆ.... ಕೆಲವೊಮ್ಮೆ ವಿಚಿತ್ರವಾಗಿ.... ಕೆಲವೊಮ್ಮೆ ಸಹಿಸಲಸಾಧ್ಯವಾಗಿ...
ಕೆಲವನ್ನು ಸುಂಮ್‌ನೆ ತೂಗಿಹ್ಹಾಕಿದ್ದರು...
ಹಲವನ್ನು ಅಲ್ಲೇ ಇಟ್ಟಿದ್ದರು....
ಕೆಲವು ನೇರವಾಗಿ ನಿಂತ ಕನಸುಗಳು....
ಕೆಲವು ಮಲಗಿದ್ದವು...
ಹಲವು ಕುಳಿತಿದ್ದವು...
ಕೆಲವು ಮೌನವಾಗಿ ಬಿಕ್ಕುತ್ತಿದ್ದವು... ಕೆಲವು ನಗುತ್ತಿದ್ದವು.... ಇನ್ನೂ ಕೆಲವು ಅಳುತಿದ್ದವು....
ಕೆಲವು ಕನಸುಗಳು ಭಯ ಹುಟ್ಟಿಸುವಷ್ಟು ಮೌನವಾಗಿದ್ದವು... ಇನ್ನೂ ಒಂದಷ್ಟು ಕನಸುಗಳು ಆತಂಕಗೊಂಡಿದ್ದವು... ಹಳವಷ್ಟು ಅಂಗಾತಾನೆ ಬಿದ್ದು ಕೊಂಡು ಎತ್ತ್ಲೋ ದಿಟ್ಟಿಸುತ್ತಿದ್ದವು.
ಕೆಲವುಗಳ ಕಣ್ಣಲ್ಲಿ ಕಾಮ ...ಕಿತ್ತು ತಿನ್ನುವ ಬಯಕೆ .... ಇನ್ನೂ ಕೆಲವಕ್ಕೆ ತೀರದ ಧನದಾಹ... ಇನ್ನೂ ಹಳಾವಕ್ಕೆ ಒಂದು ತುತ್ತು ಅನ್ನದಾಸೆ...... ಕೆಲವು ಕನಸುಗಳು ಯಾವುದೋ ಧಾವಂತಕ್ಕೆ ಬಿದ್ದಂತೆ ಅವಸರದಲ್ಲಿದ್ದವು....
ನಾನು ಎಲ್ಲವನ್ನು ದಿಟ್ಟಿಸಿದೆ...
ಪರೀಕ್ಷಿಸಿದೆ......
ತಡಕಾಡಿದೆ... ಸುಮ್ಮನೇ ಮೈದಡವಿದೆ....
ಅವುಗಳ ನಡುವೆ ನಿಂತು ಜನುಮಾದ ಗೆಳೆಯನಂತೆ ಕನವರಿಸಿದೆ.....
ಯಾರನ್ನೋ ಹುಡುಕುವಂತೆ ... ಯಾರನ್ನೋ ಕಳೆದು ಕೊಂಡಂತೆ ಚಡಪಡಿಸಿದೆ.....
ಹಾಗೂ ನಾನು ನಿಧಾನವಾಗಿ ಕನಸು ಮಾರುವ ಅಂಗಡಿಯ ಗರ್ಭದೊಳಗೆ ಇಳಿಯತೊಡಗಿದೆ.
ಒಳಗೆ ಹೋದಂತೆ ಅಲ್ಲಿ ಕನಸುಗಳು ಸಂಬಂದಾಗಳಾಗಿದ್ದವು.
ಎಲ್ಲಿ ಸಂಬಂದಾಗಳೆ ಕನಸುಗಳಾಗುತ್ತವೆಯೇನೋ ಎಂದು ಒಂದು ಕ್ಷಣ ಆತಂಕವಾಯಿತು.!
ಅಪ್ಪ ಕಂಡ ಕನಸು...ಅಮ್ಮನ ಕನಸು... ಪ್ರೀತಿಸಿದ ಹುಡುಗಿಯ ಕನಸು... ಅವನ ಕನಸು.. ಅವಳ ಕನಸು...ಯಾರದೋ ಒಬ್ಬರ ಕನಸು... ಊರವರ ಕನಸು...
ಗುರುಗಳ ಕನಸು...ಎಲ್ಲರ ಕನಸು...
ಕನಸಿಗೆಲ್ಲ ಸಂಬಂದ...
ಎಲ್ಲ ಸಂಬಂದಗಳಿಗೂ ಒಂದೊಂದು ಕನಸು...!  ಎಲ್ಲ ಕನಸುಗಳಿಗೂ ಒಂದೊಂದು ಸಂಬಂದ.....!
ಕೆಲವು ನನಸಾದ ಕನಸುಗಳು...  ಹಲವು ನನಸಾಗುವ ದಾರಿಯಲ್ಲಿನ ಕನಸುಗಳು....
ಇನ್ನೂ ಕೆಲವಕ್ಕೆ ನನ್ನಸಿನ ಹಾದಿಯಲ್ಲೇ ಗರ್ಭಪಾತ... ಹಲವಕ್ಕೆ ಬಲವಂತದ ಆತ್ಮಹತ್ಯೆ...
ನಾನು ಹುಡುಕಾಡಿದೆ...
ನಾನು ಎಲ್ಲ ಕನಸುಗಳನ್ನು  ಹುಚ್ಚು ಹಿಡಿದವನಂತೆ ತಡಕಾಡಿದೆ...
ಎಲ್ಲವನ್ನು ಮತ್ತೆ ಮತ್ತೆ ಪರೀಕ್ಷಿಸಿದೆ....
ಎಲ್ಲಿಯೋ ಒಂದು ಕಡೆ ನನ್ನದು ಒಂದು ಕಾಣ್ಸು ಇರಬಹುದು ಎಂಬ ಅನಾಥ ಹಂಬಲ...!!
ಪುಟ್ಟ ಆಸೆ...!!
ಕನಸ್ಸಾಗಿಯೇ ಇದ್ದ ಕನಸುಗಳ ಎಡೆಯಲ್ಲಿ...
ನನಸಾದ ಕನಸುಗಳ ಮಗ್ಗುಲಲ್ಲಿ...ದೊಡ್ಡ-ದೊಡ್ಡ ಕನಸುಗಳ ಅಡಿಯಲ್ಲಿ...ನನ್ನ ಪುಟ್ಟ ಕನಸಿಗಾಗಿ ತಡಕಾಡಿದೆ...
ಸಿಗಬಹುದು ಎಂಬ ಆಶೆ.. ಸಿಗುವುದು ಎಂಬ ಬಯಕೆ... ಸಿಗಲಿ ಎಂಬ ಪ್ರಾರ್ಥನೆ
ಕೊನೆಯ ಕನಸಿನವರೆಗೂ ಹುಡುಕಾಡಿದೆ... ಸಿಗಲೇ ಇಲ್ಲ..! ಕಾಣಿಸಲೇ ಇಲ್ಲ...!!
"ನನ್ನ ಕನ್ಸೆಲ್ಲಿ?" ಪ್ರಶ್ನಿಸಿದೆ.
ಎದುರಿಗೆ ಸಿಕ್ಕವರನ್ನು... ಕನಸು ಕೊಳ್ಳಲು ಬಂದವರನ್ನು... ಎಲ್ಲರನ್ನೂ...ಯಾರು ಕೇಳಲೇ ಇಲ್ಲ... ಎಲ್ಲರೂ ಅವರ ಅವರ ಕನಸುಗಳಲ್ಲಿ ಮುಳುಗಿದ್ದರು...
ಕೊನೆಗೆ ಅಂಗಡಿಯಾತನನ್ನು ಕೇಳಿದೆ...
ಪ್ರಶ್ನಿಸಿದೆ..
ಬೇಡಿದೆ...
ಕಾಡಿದೆ...
ಹಂಬಲಿಸಿದೆ...
ರಚ್ಚೆ ಹಿಡಿದು ಗೋಳಾಡಿದೆ...
ಅವನು ಮಾತನಾಡಲೇ ಇಲ್ಲ.. ..!!
ನನ್ನ ಕಡೆ ಒಮ್ಮೆ ಕರುಣೆಯಿಂದ ನೋಡಿ ...ಸುಮ್ಮನೇ ಬಾಗಿಲ ಕಡೆ ದಿಟ್ಟಿಸತೊಡಗಿದ... ಅದೆಷ್ಟು ಜನ ಕಾಣ್ಸು ಕಳೆದು ಕೊಂಡಿರುವವರನ್ನು ಅವನು ನೋಡಿದ್ದಾನೋ..??
ಅಂಗಡಿಯಿಂದ ಹೊರಗೆ ಎತ್ತಿಟ್ಟ ನನ್ನ ಹೆಜ್ಜೆಗಳು ಭಾರವಾಗುತ್ತಾ ಹೋದವು..!!!