Wednesday, February 22, 2017

ಕಾರ್ತೀಕ

ಕಾರ್ತೀಕ , ಕಡು ನೀಲಿ ರಾತ್ರಿಯಲ್ಲಿ ಹಣತೆಗಳ ಹಚ್ಚಿ ಸಾಲಂಕೃತಗೊಂಡ ತುಳಸಿಗೆ , ಬೆಟ್ಟದ ನೆಲ್ಲಿಕಾಯಿಯ ಜೊತೆಗೆ ಮದುವೆ. ಶುಭ್ರ , ನಿರ್ಮಲ , ಪವಿತ್ರ ತುಳಸಿ , ಊರ ಹೊರಗಿನ ಏರು ಬೆಟ್ಟದಿಂದ ಪಲ್ಲಕ್ಕಿಯಲ್ಲಿ ಬಂದಿಳಿದ ನೆಲ್ಲಿ. ಧೂಳು , ಹುಳಿ . ಮೆಚ್ಚಿ ತಿಂದವರಿಗಷ್ಟೇ ನೆಲ್ಲಿಯ ರುಚಿ . ಮೆಚ್ಚಿ ವರಿಸಿದ ತುಳಸಿಗಷ್ಟೇ ನೆಲ್ಲಿ . ಕಾರ್ತೀಕದ ಹಬ್ಬಕ್ಕೆ ಪುಟ್ಟ ಪುಟ್ಟ ಮಂಟಪ , ನಾಲ್ಕು ಕಡೆ ಹೂಗಿದಿಟ್ಟ ಗೂಟ , ಮೇಲೊ೦ದು ದಬ್ಬೆ , ಬಿಗಿ ಹಿಡಿಯಲು ಬಾಳೆಯ ದಾರ . ದಬ್ಬೆಯ ಅಂಚಿನಲ್ಲಿ , ಬದಿಯಲ್ಲಿ , ತುದಿಯಲ್ಲಿ , ಉತ್ತರದಲ್ಲಿ , ದಕ್ಷಿಣದಲ್ಲಿ , ಮಧ್ಯದಲ್ಲಿ , ಮೂಲೆಯಲ್ಲಿ ಹಚ್ಚಿಟ್ಟ ಹಣತೆಗಳು . ಅಂಗಳದ ತುದಿಯಲ್ಲಿ ಸಾಲು ಸಾಲಾಗಿ ಹಚ್ಚಿಟ್ಟ ಮೊ೦ಬತ್ತಿ. ಕೆಲವು ನೆಟ್ಟಗೆ ನಿಂತಿವೆ ಕೆಲವು ಸೊಟ್ಟಗೆ ಕುಳಿತಿವೆ , ಹಸಿ ನೆಲದಲ್ಲಿ ಹೊಸ ಬೆಳಕು . ಚಳಿಗಾಲದ ಗಾಳಿಗೆ ದೀಪಗಳ ಹೊಯ್ದಾಟ . ಅವಳು ಲಂಗ ದಾವಣಿಯ ಹುಡುಗಿ ಅವನು ಪಂಚೆ ಶರಟಿನ ಹುಡುಗ . ಮೊ೦ಬತ್ತಿ ತಂದಿಟ್ಟವನು , ಮೊ೦ಬತ್ತಿ ಹುಗಿದಿಟ್ಟವನು ಅವನು , ದೀಪ ಹಚ್ಚುವವಳು ಅವಳು . ತುಳಸಿ - ನೆಲ್ಲಿ , ಶುಭ್ರ , ಪವಿತ್ರ ಸ್ವಚ್ಚ೦ದ . ಹೆಣ್ಣು ದೀಪ ಹಚ್ಚಲಿ , ಗಂಡು ದೀಪ ಕಾಯಲಿ. ಹಣತೆ ಹಚ್ಚುವಾಗ ಅರಿವಿರದೆ ಕೈ ತಾಕಿದರೆ ಅದೇ ಲಕ್ಷದೀಪೋತ್ಸವ .
ಕಾರ್ತಿಕವೆಂದರೆ ಕತ್ತಲ ಹಬ್ಬ . ಕತ್ತಲ ರಾತ್ರಿಯಲ್ಲಿ ದೀಪ ಬೆಳಗುವ ಹಬ್ಬ. ಕೋಟ್ಯಾ೦ತರ ನಕ್ಷತ್ರಗಳ ಅಡಿಯಲ್ಲಿ ಸಾವಿ ಸಾವಿರ ಹಣತೆ . ಅಪ್ಪ ಹಣತೆ , ಅಮ್ಮ ಹಣತೆ , ಅಣ್ಣ ಹಣತೆ , ತಮ್ಮ ಹಣತೆ , ಹುಡುಗ ಹಣತೆ, ಹುಡುಗಿ ಹಣತೆ , ಆಯಿ ಹಣತೆ , ಅಜ್ಜ ಹಣತೆ . ಮನೆಯೆದುರಿಗೆ ನೇತುಬಿಟ್ಟ ಆಕಾಶಬುಟ್ಟಿ. ಕಾರ್ತಿಕದ ಸಣ್ಣ ಚಳಿಯೊಳಗೆ , ಊರು ಬಿಳಿಯ ಬಣ್ಣದ ಹಾಳೆಯ ಮೇಲೆ ಬರೆದ ಕವಿತೆ . ಬದುಕು ದೇದೀಪ್ಯಮಾನ. ಕೇರಿಯಾಚೆಯಿಂದ ಕೇರಿಯೊಳಗಿನಿಂದ ಕಡು ನೀಲಿ ರಾತ್ರಿಯಲ್ಲಿ ಕಾರ್ತಿಕಕ್ಕೆ ಬಂದವರೆಷ್ಟೋ . ಎಲ್ಲರ ಕೈಯಲ್ಲಿ ಎಣ್ಣೆಯ ಪುಟ್ಟ ಪುಟ್ಟ ಡಬ್ಬ. ಹಣತೆ ಉರಿದಷ್ಟು ಎಣ್ಣೆ. ಕೇರಿಯ ಕತ್ತಲೊಡಲಿನಿಂದ ಬಂದವರು , ಹಣತೆ ಹಚ್ಚಿ ಬೆಳಕಿನಲ್ಲಿ ನಿಂತರು .

ತಮಸೋಮಾ ಜ್ಯೋತಿರ್ಗಮಯ . . . ಕತ್ತಲೆಯಿಂದ ಬೆಳಕಿನೆಡೆಗೆ , ಅಜ್ಞಾನದಿಂದ ಜ್ಙಾನದೆಡೆಗೆ

ಎಣ್ಣೆ ಹೊಯ್ದ ಕೈಯಲ್ಲಿ ಜಿಡ್ಡು , ಅಂಟು . ಎಣ್ಣೆಯೇ೦ದರೆ ಅಂಟಲ್ಲವೇ ? ಅಂಟು ಅಂಟುತ್ತ ಅಂಟಿನೊಟ್ಟಿಗೆ ಬೆಳೆಯುವ ನಂಟು . ಹಣತೆ ಹಚ್ಚುವ ತುಳಸಿ , ಎಣ್ಣೆ ಹೊಯ್ಯುವ ನೆಲ್ಲಿ . ಪೂಜೆಗೆ ಕುಳಿತ ಅಪ್ಪ , ನೈವೇದ್ಯದ ಪಾತ್ರೆಯನ್ನ ಹೊತ್ತು ತರುತ್ತಿರುವ ಅಮ್ಮ . ಬದುಕೊಂದು ಅಶ್ವತ್ಥ ಮರ . ವಿಶಾಲ , ವೈವಿಧ್ಯ , ಸನಾತನ . ಇವತ್ತು ಮನೆಯಂಗಳದಲ್ಲಿ ಮದುವೆ , ನಾಳೆ ಅಶ್ವತ್ಥ ಮರದ ಕಟ್ಟೆಯಲ್ಲಿ ಊರ ಕಾರ್ತಿಕ . ಅಶ್ವತ್ಥ ಮರಕ್ಕೊಂದು ನಿರಂತರ ಪ್ರದಕ್ಷಿಣೆ . ಶುರುವಾದಲ್ಲಿಂದ ಕೊನೆಯವರೆಗೆ ,ಮತ್ತೆ ಕೊನೆಯಿಂದ ಶುರುವಿನೆಡೆಗೆ . ಬೆಳಕಿನಿಂದ ಕತ್ತಲೆಯೆಡೆಗೆ , ಕತ್ತಲೆಯಿಂದ ಬೆಳಕಿನೆಡೆಗೆ . ಕತ್ತಲಡಿಯಲ್ಲಿ ಬೆಳಕು . ಕತ್ತಲೆಯಿಂದಲೇ ಬೆಳಕು . ಕತ್ತಲೆಡೆಯಿಂದ ಬೆಳಕಿನೆಡೆಗೆ. ರಾತ್ರಿಯಿಂದ ಹಗಲು , ಹಗಲಿನಿಂದ ರಾತ್ರಿ . ಕತ್ತಲಾಳದಲ್ಲಿ ಬೆಳಕಿನ ಕುಡಿ , ದೇವನಿರುವ ಗರ್ಭಗುಡಿಯ ಕತ್ತಲಲ್ಲಿ ಹಣತೆ , ತುಳಸಿಯ ಗರ್ಭದಲ್ಲಿ ಜೀವ . ಬದುಕು - ಕತ್ತಲು ಬೆಳಕುಗಳ ನಡುವಿನ ಕಣ್ಣಾಮುಚ್ಚಾಲೆ , ಬೆಳಕು ಕತ್ತಲುಗಳ ನಡುವಿನ ನಿರಂತರ ಪಯಣ , ಅನ್ವೇಷಣೆ .

ಸೂರ್ಯ ಮುಳುಗುವ ತನಕ ರಾತ್ರಿಯಾಗುವುದಿಲ್ಲವಂತೆ ;
ರಾತ್ರಿಯಾಗುವ ತನಕ ನಕ್ಷತ್ರಗಳಿಲ್ಲವಂತೆ
ಕಿಡಿಯ ಚೆಲ್ಲುವ ಪುಣ್ಯ , ಚಂದ್ರನಿಗೆ ಕಲೆಯಿಲ್ಲವಂತೆ ,
ಹಾಲುಬೀದಿಯಲಿ ಗೋಧೂಳಿಯೇಳುವದಿಲ್ಲವಂತೆ . - ಕೆ ಎಸ್ ನ್ ( ರೂಪಕ ರಾತ್ರಿ )