Thursday, March 30, 2017

ಕೆಂಪು ದೀಪದ ಸುತ್ತ ತೇಲಿ ಬರುವ ಮಂದ ಗೀತ



ಕೆಂಪು ದೀಪದ ಮುಂದೆ ಏದುಸಿರು ಬಿಡುತ್ತ ಕವಿತೆಗಳು ನಿಲ್ಲುತ್ತವೆ. ಒಂದರ ಪಕ್ಕ ಇನ್ನೊಂದು. ಇನ್ನೊಂದರ ಹಿಂದೆ ಮತ್ತೊಂದು. ಮಳೆಗಾಲದ ಅಣಬೆಗಳು ಮುಗಿಲಿನಡಿಯ ಮಣ್ಣಿನ ಕವಿತೆಗಳು. ಕನಸುಗಳ ಪಲ್ಲಕ್ಕಿ. ಕೆಲವು ಹಗುರ ಹಲವು ಭಾರ.

ಸಿಗ್ನಲ್ಲಿನ ಬುಡಕ್ಕೆ ಜನಗಳನ್ನು ಹೊತ್ತು ತರುತ್ತಿವೆ ಗಾಡಿಗಳು, ಹೊರಟಿದ್ದು ಎಲ್ಲಿಗೋ? ನಿಂತಿದ್ದು ಮಾತ್ರ ಇಲ್ಲಿ. ಸೇರುವ ಮುನ್ನ ನಿಲ್ಲಲೇಬೇಕು. ಕೆಂಪು ದೀಪದ ಮುಂದೆ ಎಲ್ಲವೂ ಸ್ಥಗಿತ, ಹಿಂದೆ ಹಿಂದೆ ನೋಡಿದಷ್ಟು ಮತ್ತೊಂದಿಷ್ಟು, ಪುಳಪುಳನೆ ಹುತ್ತದೊಳಗಿನಿಂದ ಹೊರಬಿದ್ದ ಗೆದ್ದಲು. ಹೊಸ ಮಳೆಯ ಹಸಿ ಮಣ್ಣಿಗೆ ಹಾತೆಗಳು ಹೊರಬಿದ್ದಿವೆ. ಹೊರಹೋಗಲು ಕಿಟಕಿಗಳಿವೆ, ಒಳಬರಲು ಬಾಗಿಲುಗಳಿಲ್ಲ.

ದೀಪದೆದುರಿನಲ್ಲಿ ಅಸಹಾಯಕ ಆತಂಕ, ಕೋಪ, ಧಾವಂತ, ನಿತ್ಯ ನಿರಂತರ ಕಾತುರ. ಕಳೆದುಹೋದ ಎಲ್ಲರೊಳಗಿನ ಕವಿತೆ. ಕಳೆದುಹೋದ ಬಗ್ಗೆ ಅರಿವೆಲ್ಲಿ? ಕಳೆದುಕೊಂಡದ್ದಾದರೂ ಏನು? ಬದಲಿಗೆ ಗಳಿಸಿದ್ದು ಸಾಕಷ್ಟಿದೆಯಲ್ಲ. ಎಕ್ಸ್ ಚೇಂಚ್ ಕೊಡುಗೆಯಲ್ಲಿ ಭಾವನೆಗಳನ್ನು ಕೊಳ್ಳುವಂತಿದ್ದರೆ ಒಳ್ಳೆಯದಿತ್ತು.

ಅರವತ್ತು ಸೆಕೆಂಡುಗಳ ಸಿಗ್ನಲ್ಲು, ಕವಿತೆಗಳನ್ನಾದರೂ ಕಳೆದೆವು ಕಾಲವನ್ನಲ್ಲ. ಸೆಕೆಂಡು, ನಿಮಿಷ, ತಾಸು, ದಿನ, ವಾರ, ತಿಂಗಳು, ವರುಷ , ದಶಕ , ಜನನ, ಮರಣ. ಇಪ್ಪತ್ನಾಲ್ಕು ಘಂಟೆಗಳು. ಅಪ್ಪ-ಅಮ್ಮ, ಹೆಂಡತಿ ಮಗ ಮಗಳು, ಗೆಳೆಯ. ಯಾರಿಗೆಷ್ಟು ಕೊಡುವದು? ಭಾಗಾಕಾರ ಕಲಿಸಿದ ಗುರುಗಳು ರಿಟೈರ್ ಆಗಿ ಎಷ್ಟು ದಿನಗಳಾದವು?

ತಿರುಗುವ ಚಕ್ರ. ಬಣ್ಣ ಮಾಸಿದ ಬೈಕ್ ಮೇಲೆ ಕೂತವನು ನೆಲಕ್ಕೆ ಒಂದು ಕಾಲನ್ನು ಊರಿದ್ದಾನೆ. ಕಾಲು ಸಿಗುವಷ್ಟರಲ್ಲೆ ಬ್ಯಾಲೆನ್ಸ್ ಮಾಡಬೇಕು. ಬಲಕ್ಕೆ ಸರಿಯಾದರೆ ಎಡಕ್ಕೆ ಕಡಿಮೆ. ಎಡಕ್ಕೆ ಸಮವಾದರೆ ಬಲಕ್ಕೆ ಕಡಿಮೆ. ಮಧ್ಯ ಕೂತವನು ಹೊಂದಿಸಲೇಬೇಕು. ಊರಿಗೆ ಕೊನೆಯ ಬಾರಿ ಹಣ ಕಳುಹಿಸಿದ ತಾರೀಖು ಯಾವಾಗ?

ಸಾಲುಗಳ ಕಂಪನಿಯ ಕ್ಯಾಬುಗಳು. ಯಾವ ಪಾಳಿಯ ಜನರಿವರು? ಹಾಡು ಕೇಳುತ್ತ ಒಳಗೆ ಕೂತವರ ಕಿವಿಯಲ್ಲಿ ಮಧುರ ಗೀತ. ಮರೆತು ಹೋಗುವಷ್ಟು ಕಾಲವಾಗಿದೆ ಯಾವತ್ತು ಕೇಳಿದ್ದು ಸುತ್ತಲಿನ ಪ್ರಾಚೀನ ಸಂಗೀತ? ಓಟ, ಹೆಜ್ಜೆಯ ಸಪ್ಪಳದಲ್ಲಿ ನಡಿಗೆಗೆಲ್ಲಿ ಜಾಗ? ಸಿಗ್ನಲ್ಲಿನ ಸೆಕೆಂಡುಗಳಲ್ಲಿ ಕಾತುರ. ರೇಟಿಂಗ್ಸ್, ಪ್ರಮೋಷನ್ನು, ಜಾಬ್ ಚೆಂಜ್.

ನಾಳೆಯಿಂದ ದಾರಿ ಬದಿಯಲ್ಲಿ ಬಾಳೆಹಣ್ಣು ಕೊಳ್ಳಬಾರದು. ಸೋಡೆಕ್ಸೋ ಕೂಪನ್ನುಗಳ ರಾಶಿಗೆ ಮುಕ್ತಿ. ಬಣ್ಣ ಬಣ್ಣದ ಬಲೂನುಗಳ ಒಳಗೆ ಖಾಲಿ ಖಾಲಿ. ಐದು ದಶಕದ ಬದುಕಿನ ಕ್ಯಾಬ್ ಡ್ರೈವರ್. ಸ್ಟಾರ್ಟ್, ಕ್ಲಚ್. ಆಕ್ಸಿಲೇಟರ್. ಬ್ರೇಕ್.

ಎಲ್ಲರ ಬದುಕು ಮುಷ್ಟಿಯಲ್ಲಿ ಬಿಗಿ ಹಿಡಿದ ಮರಳು - ಕನಸು. ಮುಂದಿನ ವಾರದ ಮದುಮಗಳು ಸ್ಕೂಟಿಯ ಮೇಲೆ, ದೊಡ್ಡ ದೊಡ್ಡ ಕಣ್ಣುಗಳಲ್ಲಿ ಪುಟ್ಟ ಪುಟ್ಟ ಕನಸುಗಳ ನೀಲಾಂಜನ. ಕಿರುಬೆರಳಿನ ಅಂಚಿನಲ್ಲಿ ಕೆಂಪಾಗದೆ ಉಳಿದ ಮದರಂಗಿ. ಬಟ್ಟಲು ತುಂಬ ಅಕ್ಷತೆ, ಪೆಟ್ಟಿಗೆಯಿಂದ ಹೊರತೆಗೆದ ಅಮ್ಮನ ರೇಶಿಮೆ ಸೀರೆ.ಬಿಳಿಯ ಮುಗಿಲಿನ ಹಣೆಯ ಮೇಲೆ ಕೆಂಪು ಸೂರ್ಯ ಬಿಂದಿ, ಆಡುತ್ತ ಬೆಳೆದ ಮುದ್ದಿಗೆ ವಿರಾಮ.

ಸಿಗ್ನಲ್ಲಿನ ಕೆಂಪು. ಮೂಲೆಯಲ್ಲಿ ಆಂಬ್ಯುಲೆನ್ಸ್. ಶರಶಯ್ಯೆಯಲ್ಲಿ ಮಲಗಿರುವ ಭೀಷ್ಮ , ಕತ್ತಲು ದೇವರೇ ಬೆಳಕನ್ನೇ ನುಂಗುವ ಕತ್ತಲು. ದಾಹವಾದರೆ ಅರ್ಜುನನಿಲ್ಲ. ಕಾರು ಒರೆಸುವ ಬಟ್ಟೆ ಮಾರುವ ಹುಡುಗಿ. ಕಂಕುಳಲ್ಲಿ ನಿದ್ರಿಸಿರುವ ರಾಜಕುಮಾರಿ. ಕೊಳೆಯಾದ ಬದುಕು ಒರೆಸಲು ಬಟ್ಟೆಯಿಲ್ಲವೆ?

ಭೂಮಿಯೊಡಲಲ್ಲಿ ಬರಿದಾಗುತ್ತಿರುವ ನೀರು, ಇಣುಕಿದಷ್ಟು ಒಳಸರಿದಂತಿರುವ ಕಣ್ಣು, ಸುಡುಬಿಸಿಲಿನ ಸಿಗ್ನಲ್ಲು ಆವಿಯಾಗಿದೆ ಎಲ್ಲರ ಕಣ್ಣೀರು. ಹತ್ತಿರದಲ್ಲೆ ಸುಳಿದಾಡುತ್ತಿದ್ದಾನೆ ಮಾಧವ, ಮಾರಾಟಕ್ಕಿಟ್ಟಿರುವ ಗೊಂಬೆಗಳು ಖಾಲಿಯಾದರೆ ಇವತ್ತು ರಾತ್ರಿಯೇ ಇವಳು ಮೀರಾ, ಸಿಗ್ನಲ್ಲಿನ ಎದುರಿನಲ್ಲಿ ಗಂಧರ್ವರ ಲೋಕ.

ಹಸಿರು ಹಳದಿ ಕೆಂಪು ಹಳದಿ ಹಸಿರು. ಎದೆಗಳಲ್ಲಿ ಮಂಕಾಗಿ ಉರಿಯುತ್ತಿರುವ ಹಣತೆ ಮಿಣಕ್ ಮಿಣಕ್ ಎನ್ನುತ್ತಿದೆ, ಸಿಗ್ನಲ್ಲಿನ ಹಸಿರು ಜ್ವಲಿಸುತ್ತಿದೆ.

ಬದುಕು ದೊಡ್ಡದು. ಅವರವರ ಪರಿಧಿಯಲ್ಲಿ ಅವರವರ ಓಟ, ಮುಗಿಯದ ಆಟ...