Saturday, September 17, 2011

ಶ್ರೀ ಕ್ಷೇತ್ರ ಬಾಲ ಮಹಾತ್ಮೆ

ಸೊಂಟ , ಬೆನ್ನು ಮೂಳೆ (ಬೆನ್ನಿನೊಟ್ಟಿಗೆ) ಹಾಗೂ ಪೃಷ್ಟ ಸೇರುವ , ಸೇರಿ ನಿರ್ಮಿಸುವ , ಹೌದೊ ಅಲ್ಲವೊ ಎಂಬಂತೆ ಇರುವ ತ್ರಿಕೋನದಲ್ಲಿ , ತ್ರಿಕೋನದ ತುತ್ತ ತುದಿಯ ಬಿಂದುವಿನಲ್ಲಿ , ಆ ಬಿಂದುವಿನಿಂದ ಭೂಮಿಗೆ ಸಮಾನಾಂತರವಾಗಿ , ಕಾಲು ಮತ್ತು ಬೆನ್ನಿಗೆ ಲಂಬವಾಗಿ ಮೊಸರುದ್ದೀನರಿಗೆ ಬಾಲವೊಂದು ಬೆಳೆದಿತ್ತು.

**************************************************************************
ಪ್ರಿಯ ಓದುಗರೇ ,
ನಿಮಗೆ ಪಾತ್ರ ಪರಿಚಯವಾಗಲಿ ಎಂದು ಒಂದಷ್ಟು ಮಾಹಿತಿ ಕೊಡುತ್ತೇನೆ. ಶ್ರೀಯುತರಾದ ಮೊಸರುದ್ದೀನರು ಅವರ ಪರಮ ಪೂಜ್ಯರಿಗೆ ಪ್ರಥಮ ಹಾಗೂ ಕೊನೆಯ ಪುತ್ರ ರತ್ನರು. ಶ್ರೀಯುತರ ಜನನವಾದದ್ದು ಶಿಮೊಗ್ಗ ಜಿಲ್ಲೆಯ ನಾಗರ ತಾಲ್ಲೂಕಿನ ಹಳ್ಳಿಯೊಂದರಲ್ಲಿ. ಬಹುಕಾಲದಿಂದ ಪುತ್ರೋತ್ಸವದ ನಿರಿಕ್ಷೆಯಲ್ಲಿ ಇದ್ದ ಕುಟುಂಬದಲ್ಲಿ ಶ್ರೀದೇವರ ಮೊಸರು ಪ್ರಸಾದ ತಿಂದು ಜನಿಸಿದ ಕುಲೋದ್ದಾರಕನಿಗೆ ಮೊಸರು ಪ್ರಸಾದದ ನೆನಪಿಗಾಗಿ ಮೊಸರುದ್ದೀನ ಎಂದು ನಾಮಕರಣ ಮಾಡಲಾಯಿತು ಎಂದು ಅವರ ಪರಮಪೂಜ್ಯರು ಆಗಾಗ ಹೇಳುವದುಂಟು. ಪ್ರಾಯ ಹತ್ತುವ ತನಕ ತವರಿನಲ್ಲೇ ವ್ಯಾಸಂಗ ಮಾಡಿದ ಮೊಸರುದ್ದೀನರು ತದನಂತರ 'ಉನ್ನತ' ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಸದ್ಯ ಸಿ,ಎ. ಪ್ರಾಕ್ಟೀಸ್ ನಡೆಸುತ್ತಿರುವ ಇವರು ಗಾಂಧಿಬಜ಼ಾರಿನ ಸಂದಿಯೊಂದರಲ್ಲಿ ಮನೆ ಮಾಡಿಕೊ0ಡು ಆಗಾಗ ಸಂದಿಯೊಳಗೆ ಇಣುಕುವ ಕೆಲಸ ಮಾಡುತ್ತಾರೆ. ಇವಿಷ್ಟೂ ವ್ಯಕ್ತಿ ಪರಿಚಯ. ಇನ್ನು ರೂಪ ಪರಿಚಯಕ್ಕೆ  ಬಂದರೆ ಇವರಿಗೂ ಕಣ್ಣು , ಕಿವಿ , ಬಾಯೀ ನಾಲಗೆ ಇತ್ಯಾದಿಗಳನ್ನು ಒಳಗೊಂಡ ನವರಂಧ್ರಗಳಿವೆ. ಉಳಿದವರಿಗಿಂತ ಭಿನ್ನವಾದದ್ದೆಂದರೆ ಹಿಂಭಾಗದಲ್ಲಿ ಬೆಳೆಯುತ್ತಿರುವ ಬಾಲ
ಮೊಸರುದ್ದೀನರು ಸದಾ ಕಾಲ ಚಟುವಟಿಕೆಯಲ್ಲಿ ನಿರತರಾಗಿರುವ ವ್ಯಕ್ತಿ. ಅವರ ಬಲಗೈ ಆಗಾಗ ಮೂಗಿನೊಳಗೆ ತೆರಳಿ , ದೇಹಕ್ಕೆ ಪ್ರಾಣವಾಯು ಸಂಚರಿಸಿದ  ಮಾರ್ಗವು ಸದಾಕಾಲ ಪರಿಶುದ್ದವಾಗಿರುವಂತೆ ನೋಡಿಕೊಳ್ಳುತ್ತದೆ. ಈಕೆಲಸ   ಮುಗಿದ ತಕ್ಷಣ ಬಲಗೈ ಕಿರುಬೆರಳನ್ನು ನೇರವಾಗಿಸಿ ಉಳಿದೆಲ್ಲ ಬೆರಳುಗಳನ್ನ ಮಡಚಿ , ಕೈಯನ್ನು  ಡ್ರಿಲ್ ಮಶಿನಿನ ಹಾಗೆ ಕಿವಿಯಾಳಕ್ಕೆ ಇಳಿ ಬಿಡುತ್ತಾರೆ. ಒಳಗಿಳಿದ ಬೆರಳನ್ನು ಹಾಗೂ ತಲೆಯನ್ನು ಒಂದು ನಾದಬದ್ದವಾದ ರೀತಿಯಲ್ಲಿ ವಿಶಿಷ್ಟವಾಗಿ ಕುಣಿಸುತ್ತಾರೆ. ಇಂತಹ ಸಮಯದಲ್ಲಿ ಅವರ ಕಣ್ಣು ಅರೆ ತೆರೆದಿರುತ್ತದೆ. ಮೂಗಿನ ಹೊಳ್ಳೆಗಳು ಸ್ವಲ್ಪ ಅಗಲವಾಗುತ್ತವೆ. ದವಡೆ ಬಿಗಿದಿರುತ್ತದೆ.

ಹಲವು ಸೆಕೆಂಡುಗಳ ಕಾಲ ಇದೆ ಕ್ರಿಯೆ ಮುಂದುವರಿಸಿ ನಂತರ ಯಾವುದೋ ಒಂದು ಲುಪ್ತ ಕಾಲದಲ್ಲಿ ಬೇಚೈನುಗೊಂಡವರಂತೆ ತಟ್ಟನೆ ಕಿರು ಬೆರಳನ್ನು ಹೊರಕ್ಕೆ ಎಳೆದು , ಬೆಳಕಿಗೆ ಅಡ್ಡವಾಗಿ ಹಿಡಿದು , ಉಗುರಿನ ತುದಿಗೆ ಸ್ಪಾಂಜಿನಂತಹ ಅರೆ ತೇವ ಮಿಶ್ರಿತವಾದದ್ದು ಏನಾದರೂ  ಇದೆಯ ಎಂದು ಪರೀಕ್ಷಿಸುತ್ತಾರೆ. ತದನಂತರ ಕೈಯನ್ನು ಜೇಬಿನೊಳಗೆ ಇಳಿಬಿಟ್ಟು ಬೆರಳುಗಳನ್ನ ಶುಚಿಗೊಳಿಸುತ್ತಾರೆ. ಇತ್ತೀಚಿಗೆ ಈ ಕೆಲಸ ಮಾಡುವಾಗ ಬಾಲ ಅಲ್ಲಾಡುತ್ತಿದೆ ಎಂಬ ಶಂಕೆ ಅವರಿಗೆ ಬಲವಾಗ ಹತ್ತಿದೆ. ಮೊಸರುದ್ದೀನರ ಎಡಗೈ ಸಧ್ಯಕ್ಕೆ ಆಗಾಗ ಬಾಲದ ಯೋಗಕ್ಷೇಮ ನೋಡಿಕೊಳ್ಳುತ್ತದೆ. ಅದರ ಜೊತೆಗೆ ಎಡಗೈಗೆ ತನ್ನದೇ ಆದ ಕೆಲಸವನ್ನು ಮೊಸರುದ್ದೀನರು ವಹಿಸಿಕೊಟ್ಟಿದ್ದಾರೆ. ಬಹುವಾಗಿ ಬೆವರುವ ಬೇಸಿಗೆಯ ದಿನಗಳಲ್ಲಿ ಮೊಸರುದ್ದೀನರು  ಎಡಗೈ ಕಂಕುಳವನ್ನು ಮುಚ್ಚಿದ ಅಂಗಿಯ ಭಾಗವನ್ನು ಎಡಗೈ ಹೆಬ್ಬೆರಳು ಹಾಗೂ ತೋರುಬೆರಳಿನಿಂದ ಎಳೆದು ಎರಡು ಭುಜಗಳನ್ನು ಮೇಲಕ್ಕೆ ಎತ್ತಿ ಉಫ್..! ಎಂದ ಕಾಲರಿನ ಭಾಗದಿಂದ ಕಂಕುಳದ ಕಡೆಗೆ ಗಾಳಿ ಕಳುಹಿಸುತ್ತಾರೆ. ಹೀಗೆ ಹಲವು ಬಾರಿ ಮಾಡಿದ ನಂತರ ಕುತ್ತಿಗೆಯನ್ನು ತಿರುಗಿಸಿ ಲಟಕ್ಕನೆ ಸದ್ದು ಮಾಡುತ್ತಾರೆ.

**************************************************************************

 ಮೊಸರುದ್ದೀನರಿಗೆ ಬಾಲ ಯಾವತ್ತಿನಿಂದ ಬೆಳೆಯಿತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಒಂದು ದಿನ ಮುಂಜಾನೆ ಹೊಟ್ಟೆಯನ್ನು ಚಾವಣಿಯತ್ತ ಮಾಡಿ , ಬೆನ್ನನ್ನು ಬೆಡ್ಗೆ  ಒತ್ತಿ ಮಲಗಿದ್ದ ಮೊಸರುದ್ದೀನರಿಗೆ , ಬೆನ್ನಿನ ತಳ ಭಾಗದಲ್ಲಿ ಒಮ್ಮೆಗೇ ಸಾವಿರ ಸಾವಿರ ಸೂಜಿಗಳು ಚುಚ್ಚಿದಂತಾಗಿ ಅಮ್ಮಾ..! ಎಂದು ನರಳಿದರು. ಹೀಗೆ ಒಮ್ಮೆಲೇ ಸಂಕಟ ಕೊಡತೊಡಗಿದ ಆ ಭಾಗವನ್ನು ಸವರಿ ಮುದ್ದು ಮಾಡಲು ತಮ್ಮ ಪ್ರಿಯ ಎಡಗೈ ಅನ್ನು , ಸೂಜಿ ಚುಚ್ಚಿದಂತೆ ಭಾಸವಾಗುತ್ತಿದ್ದ ಭಾಗಕ್ಕೆ , ಶಬ್ದವೇದಿಯಂತೆ ನೂಕಲಾಗಿ , ಮೊಸರುದ್ದೀನರ ಕೈಗೆ ಮೊದಲೇ ಹೇಳಿದ ತ್ರಿಕೋನದ ಭಾಗದಲ್ಲಿ ಕೊಳವೆಯಾಕಾರದ ರಚನೆ ಸಿಕ್ಕು ಒಮ್ಮೆಲೇ ಬೆಚ್ಚಿಬಿದ್ದರು. ಮತ್ತೊಮ್ಮೆ, ಮಗದೊಮ್ಮೆ ಕೈಯನ್ನು ಅತ್ತ ಕಡೆ ಕಳುಹಿಸಿ ಪರೀಕ್ಷಿಸಿದರು. ಆ ಕ್ಷಣಕ್ಕೆ ಮೊಸರುದ್ದೀನರಿಗೆ ಬಂದ ಯೋಚನೆಯೆಂದರೆ, ಜನಿವಾರ ಹಾಗೂ ಉಡಿದಾರಗಳು ಮಿಲನವಾಗಿ ,  ಪ್ರಣಯದ ತುದಿಯಲ್ಲಿ ತಮ್ಮ ತಮ್ಮ ಸ್ಥಾನಗಳಿಂದ  ಪಲ್ಲಟವಾಗಿ ಅಲ್ಲಿ ಬಂದು ಕುಳಿತಿವೆಯೇ? ಹಾಗೇನಾದರೂ ಆಗಿದ್ದರೂ ಅವಕ್ಕೆ ಸ್ಪರ್ಶದ ಅರಿವು ಬಂದಿದ್ದು ಹೇಗೆ? ಅಥವಾ ತಾನು ಹುಟ್ಟಿದ ಲಾಗಾಯ್ತಿನಿಂದ ಇರುವ ಉಡಿದಾರ ಹಾಗೂ ಹಾಕಿದಾಗಿನಿಂದ  ಬದಲಾಯಿಸದೇ ಇದ್ದ ಜನಿವಾರ ಇವೆರಡು ಹಲವಾರು ವರ್ಷಗಳಿಂದ  ದೇಹದಲ್ಲೇ ಇದ್ದು , ತನ್ನ ಶರೀರಕ್ಕೆ ಇವು ತನ್ನದೇ ಅವಯವಗಳು ಎಂದು ಗೊಂದಲ ಉಂಟಾಗಿ , ಅವು ತನ್ನ ದೇಹದ ಭಾಗಗಳೆ ಆಗಿವೆಯೇ? ಹೀಗೆಲ್ಲ ಚಿಂತಿಸುತ್ತಿರುವಾಗಲೇ ಮತ್ತೊಮ್ಮೆ ಸೂಜಿ ಚುಚ್ಚಿದ ಅನುಭವವಾಯಿತು. ಈ ಬಾರಿ ತಡ ಮಾಡದೇ ಮೊಸರುದ್ದೀನರು ಹೊಟ್ಟೆಯನ್ನು ಸ್ವಲ್ಪ ಮೇಲಕ್ಕೆ ಎತ್ತಿ , ನಿಧಾನವಾಗಿ ಮತ್ತೆ ತ್ರಿಕೋನದ ಕಡೆಗೆ ಕೈಯನ್ನು ಕಳುಹಿಸಿದರು. ಈ ಬಾರಿ ಕೈ ತ್ರಿಕೋನದ ಭಾಗದಲ್ಲಿ ಅಹೋ ರಾತ್ರಿ ಉದ್ಭವವಾಗಿದ್ದ ಕೊಳವೆಯಾಕಾರದ ರಚನೆಯನ್ನು ಸವರಿ ಅದರ ಲಕ್ಷಣಗಳನ್ನು ಮೆದುಳಿಗೆ ರವಾನಿಸಿತು. ಈಗ ನಿಜಕ್ಕೂ ಮೊಸರುದ್ದೀನರು  ಕಂಗಾಲಾದರೂ.ಇದ್ದಕ್ಕಿದ್ದಂತೆ ಇದು ಬಂದದ್ದಾದರೂ ಹೇಗೆ? ತನ್ನದೇ ದೇಹದ ಭಾಗವೊಂದು ಇನ್ನೊಂದರ ಜೊತೆಗೆ ಅಕ್ರಮ ಸಂಬಂಧ ಬೆಳೆಸಿ , ತನಗೆ ಗೊತ್ತಾಗದಂತೆ ನಡೆಸಿದ ಕ್ರಿಯೆಯ ಫಲವೇ ಇದು? ಛೇ! ಹಾಗೆ ಇರಲಾರದು. ಆದರೂ ತನ್ನ ಅರಿವು ಇಲ್ಲದೇನೆ , ಗಾಳಿ ಬೆಳಕು ಪ್ರವೇಶಿಸದ , ಸದಾ ಕಾಲ ಒತ್ತಡ ಅನುಭವಿಸುವ , ಅರೆ ತೇವದ ಆ ಜಾಗದಲ್ಲಿ ಇದು ಬೆಳೆದಿದ್ದಾದರೂ  ಹೇಗೆ? ಇಷ್ಟಕ್ಕು ತಾನು ಅತ್ತ ಕಡೆ ತನ್ನ ಕೈ ಕಳುಹಿಸದೇ ಏಷ್ಟು ದಿನಗಳಾದವು?  ಸರಿ ಬೆಳೆಯುವದೇನೊ ಬೆಳೆದಿದೆ , ಆದರೆ ಇದಕ್ಕೆ ಏನಂತ ಕರೆಯುವದು? ಕ್ಲಿಷ್ಟ ಪದ ಕೋಶ ದಲ್ಲಿ ಇದೆಯೇ? ಎಂದೆಲ್ಲ ವಿಚಾರಗಳು ಮು ತ್ತಿಮೊಸರುದ್ದೀನರು  ಕಂಗಾಲಾದರು.

**************************************************************************

  ಈ ಒಂದು ಚಿಂತೆಯಲ್ಲೇ ನಿತ್ಯವಿಧಿಗಳನ್ನು ಆತುರಾತುರವಾಗಿ ಮುಗಿಸಿ ,ಯಾವುದಕ್ಕೂ ಎಸ್.ಬಿ.ಟಿ. ಯನ್ನು ಒಮ್ಮೆ ಕೇಳಿಯೆ ಬಿಡುವ   ಎಂದು ದೂರವಾಣಿ ಕರೆ ಮಾಡಿದರು.
:ಹೇಲ್ಲೋ"
"ಹ್ವಾಯ್"
ನಾನು ಮೊಸರು"
ನಾನು ಹಾಲು..!
"ತ್ತೋ.! ನಾನಾ ಮೊಸರುದ್ದೀನ.
ಒಹೋಹೋ ಏನಾ ಬೆಳಿಗ್ಗೆ ಬೆಳಿಗ್ಗೆ..
" ಹ್ಮ್..! ಮಾರಾಯ ಇಲ್ಲಿ ಏನೋ ಆಗಿದೆ.
ಎಲ್ಲಿ
ಇಲ್ಲಿ
ತತ್.! ನನಗೆ ಹೇಗೆ ಗೊತ್ತಗಬೇಕು ಇಲ್ಲಿ ಅಂದರೆ?
ಮೊಸರುದ್ದೀನರು  ನಾಚಿದರು. ಹೇಳಲಿಕ್ಕೆ  ಸಂಕೋಚ
ಮೌನ... ಮೌನ.. ಉಸಿರಾಟ..
ಕೊನೆಗೂ ಮೊಸರುದ್ದೀನರು  ವಿವರಿಸಿದರು.
 ಎಸ್.ಬಿ.ಟಿ. " ನೋಡು , ಮೊಸರು ,ಈಗ ತೊಂದರೆ ಇರುವದು ಅದು ಯಾಕೆ ಬಂತು , ಹೇಗೆ ಬಂತು ಅಂತ ಅಲ್ಲ. ಅದಕ್ಕೆ ಏನಂತ ಹೇಳಬೇಕು ಎಂದು"
ಹ್ಮ್
ಅದು ಹೇಗಿದೆ?
ಹಾಗೆ ಇದೆ.
ದಪ್ಪವಾಗಿದೆಯೋ?
ಇಲ್ಲ
ಉದ್ದವಾಗಿದೆಯೋ?
ಇಲ್ಲ.! ಸುಮಾರು 12 ಸೆ.ಮಿ.
ಮೆತ್ತಗಿದೆಯೋ
ಹೌದು..
ತುದಿ ಚೂಪು ಇದೆಯೋ?
ಇಲ್ಲ ಕೈ ಬೆರಳಿನಂತೆ ಇದೆ.
ಯಾವ ಆಕೃತಿ?
ಕೊಳವೆಯಂತೆ ಅನ್ನಿಸುತ್ತದೆ.
ಅನ್ನಿಸುವದೇನು? ನೋಡಿಲ್ಲವೊ?
ಇಲ್ಲ. ಹಿಂದೆ ಇದೆ . ನೋಡುವದು ಹೇಗೆ?
ಸರಿ. ಕನ್ನಡಿ ನೆಲಕ್ಕೆ ಇಟ್ಟು ತುದಿ ಕಾಲಲ್ಲಿ ಕುಳಿತು ನೋಡಲಿಕ್ಕೆ ಪ್ರಯತ್ನಿಸು. ತಾತ್ಕಾಲಿಕವಾಗಿ ಅದಕ್ಕೆ ಬಾಲ ಎನ್ನೋಣ. ಅಲ್ಲವೇ
ಸರಿ ಮುಂದೆ ?
ಅರೆ..! ಮುಂದಿನದಕ್ಕೆ ಏನಾಯ್ತು?
ಹಾಗಲ್ಲ ಮಾರಾಯ ಮುಂದಿನ ಕಥೆ ಏನು?
ಚಿಂತನೆ.. ವಿಚಾರ.. ಮೌನ ,.... ಉಸಿರಾಟ..
ಡಾಕ್ಟರ್ ಗೆ ತೋರ್ಸು.

**************************************************************************

ಬಹುವಿಧ ಚಿಂತನೆಯ ನಂತರ ಮೊಸರುದ್ದೀನರು ಬಾಲದ ವಿಚಾರವಾಗಿ  ಜ್ಯೊತಿಷಿಯೊಬ್ಬರ ಕಾಣಲು ತೀರ್ಮಾನಿಸಿದರು. ಈ  ನಡುವೆ ಮೊಸರುದ್ದೀನರನ್ನು ಕಾಡಿದ ಸಂಗತಿ ಅವರ ಮದುವೆಯ ವಿಷಯ. ವಧುವರಾನ್ವೇಷಣೆಗೆ ಜಾಹೀರಾತು ಕೊಡುವದು ಹೇಗೆ? ಹೆಸರು :ಮೊಸರುದ್ದೀನ ಕೆಲಸ ಮಾಡಲಿಕ್ಕೆ ತಯ್ಯಾರೂ. ...... ಎತ್ತರ 5.5 ದಪ್ಪ ಸ್ವಲ್ಪ ಇರುವ ಸಿ.ಎ. ಪ್ರಾಕ್ಟಿಸ್ ಮಾಡುತ್ತಿರುವ ಸುಂದರವಾದ ಬಾಲವುಳ್ಳ ಗಂಡಿಗೆ , ಬಾಲವಿರುವ ಯಾ ಇಲ್ಲದಿರುವ ಅನುರೂಪಳಾದ ಕನ್ಯೆ ಬೇಕಾಗಿದ್ದಾಳೆ. ಹೀಗೆ ಕೊಟ್ಟರೆ ಸರಿಯಾದೀತೋ ? ಬಾಲ ತನ್ನ ದೇಹಕ್ಕೆ ತೂಕ ಕೊಟ್ಟಂತೆ , ವ್ಯಕ್ತಿತ್ವಕ್ಕೂ ತೂಕ ಕೊಡುತ್ತಿದೆಯೇ? ಆದರೂ ಸುಂದರ ಬಾಲ ಎಂಬ ಶಬ್ದ ಪ್ರಯೋಗ ಸರಿಯಾದೀತೇ? ತಾನು ಅದನ್ನು ನೋಡೆ ಇಲ್ಲ. ಮುಂದೆ ಪತ್ನಿಯಾಗಿ ಬರುವವಳಿಗೆ ಅದು ಇಷ್ಟವಾದಿತೆ? ಸದ್ಯಕ್ಕೆ ಬಾಲ ಅಷ್ಟು ಉದ್ದ ಇಲ್ಲ. ಆದರೆ ಕಾಲ ಕಳೆದಂತೆ ಅದು ಬೆಳೆದು ದೊಡ್ಡದಾಗಿ ಉದ್ದವಾದರೆ ಪ್ಯಾಂಟ್ ಹೊಲಿಸು ವಾಗಅದಕ್ಕೂ ಒಂದು ಕೊಳವೆಯಾಕರದ ಜೇಬು ಇಡಬೇಕೆ. ಆದರೆ ಬಾಲ ಬೆಳೆದರೆ ಕುಳಿತುಕೊಳ್ಳುವುದಾದರೂ ಹೇಗೆ? ಬಾಲ ಕೊಳವೆಯಾಕಾರದಲ್ಲಿ ಇರುವದರಿಂದ , ಕುಳಿತುಕೊಂಡರೆ ಬಸ್ ಸ್ಟಾಪಿನಲ್ಲಿ ಸರಳಿನ ಮೇಲೆ ಕುಳಿತ ಹಾಗೆ ಆಗುವದಿಲ್ಲವೇ? ಹೀಗೆ ಯೋಚನೆಗಳು ಬೃಹದಾಕಾರವಾಗಿ ಬೆಳೆದು ಮೊಸರುದ್ದೀನನ್ನು ಜ್ಯೋತಿಷಿಗಳ ಬಳಿ ಎಳೆದು ತಂದವು.

**************************************************************************
ಜ್ಯೋತಿಷಿಗಳ ಜೊತೆ ನಡೆದ ಮಾತುಕತೆಯ ಸಂಕ್ಷಿಪ್ತ ವರದಿ.
ಹತ್ತು ಹಲವು ಗಿಣಿತ-ಗುಣಿತ ತರ್ಕ ಕವಡೆ , ಪಂಚಾಗದ ನಂತರ ಮೊಸರುದ್ದೀನರ ಬಳಿ ಹೀಗೆ ಹೇಳಿದರು.
"ಮೊಸರುದ್ದೀನರಿಗೆ ಈ ಬಾಲ ಬಂದಿದ್ದು ಅವರ ಪೂರ್ವಜರ ಪಾಪ ಕರ್ಮದಿಂದ. ಮೊಸರುದ್ದೀನರ ವಂಶಕ್ಕೆ ಈ ಶಾಪ ಬಂದಿದ್ದು ಶ್ರೀ ಆಂಜನೇಯನಿಂದ. ಮಹಾಭಾರತದಲ್ಲಿ ಭೀಮಸೇನ ಸೌಗಂಧಿಕಾ ಪುಷ್ಪ ತರಲು ಹೋದಾಗ ಶ್ರೀ ಆಂಜನೇಯ ಸ್ವಾಮಿ , ಕಪಿಯ ವೇಷದಲ್ಲಿ ದಾರಿಗೆ ಅಡ್ಡವಾಗಿ ಮಲಗಿದ ಕಥೆ ಗೊತ್ತೇ ಇದೆ.  ಅವತ್ತು ಭೀಮಸೇನನಿಗೆ ಶ್ರೀ ಆಂಜನೇಯ ಸ್ವಾಮಿ ಬಾಲವನ್ನು ಸರಿಸುವ ಸಲುವಾಗಿ ಅಲ್ಲೇ ಹತ್ತಿರಕ್ಕೆ ಬಹಿರ್ದೇಸೆಗೆ ಬಂದಿದ್ದ ಮೊಸರುದ್ದೀನರ ಪೂರ್ವಜರು , ಕೂಲಿಗಾಗಿ 'ನೀರು' ಯೊಜನೆಯಡಿ ಭೀಮಸೆನನಿಗೆಶ್ರೀ ಆಂಜನೇಯ ಸ್ವಾಮಿ ಬಾಲ ಎತ್ತುವ ಯತ್ನದಲ್ಲಿ ಸಹಕರಿಸಿದ್ದರು.ಹೀಗಾಗಿ ಕೋಪಗೊಂಡ ಹನುಮಂತ ದೇವರು ಶ್ರೀಯುತರ ವಂಶದವರಿಗೆ ಬಾಲ ಬರಲಿ ಎಂದು ಶಾಪ ಕೊಟ್ಟಿದ್ದರು. ಕೊನೆಗೆ ಪೂರ್ವಜರ ಮೇಲೆ ಕರುಣೆ ತೋರಿ , ಅವರ ವಂಶದಲ್ಲಿ ಯಾರಾದರೊಬ್ಬರಿಗೆ ಬಾಲ ಬರಲಿ ಎಂದು ಮಾಫಿ ಕೊಟ್ಟಿದ್ದರು. ಆ ಶಾಪದ ಫಲವೇ ಈ ಬಾಲ.

**************************************************************************
ಹೀಗೆ ತ್ರಿಕೋನದಲ್ಲಿ ಬಾಲ ಹೊತ್ತ ಮೊಸರುದ್ದೀನರು ಮಾರ್ಕೆಟಿನ ಸಲೀಮ ಭಾಯ್ ಹತ್ತಿರ ಮೂಲವ್ಯಾಧಿ ಮೊಳಕೆ ತೆಗೆಯುವ ಚಿಕಿತ್ಸೇಯಿಂದ ಆದಿಯಾಗಿ ಎಲ್ಲ ಪೂಜೆ ಪುನಸ್ಕಾರವನ್ನು ಮಾಡಿ ಯಾವುದೂ ಫಲಿಸದೇ , ಡಾಕ್ಟರರನ್ನು ಭೇಟಿಯಾಗಲಾಗಿ ಅವರು ಆಮೂಲಾಗ್ರ ಬುಡ ತಪಾಸಣೆ ನಡೆಸಿ , ಬಾಲವನ್ನು ಬೇರು ಸಮೇತ  ಕಿತ್ತು ಹಾಕಲು ಶಸ್ತ್ರಚಿಕಿತ್ಸೆಯ ದಿನಾಂಕ ನಿಗದಿ ಪಡಿಸಿದರು.

***************************************************************************

ಶಸ್ತ್ರಚಿಕಿತ್ಸೆಯ  ದಿನ ಬೆಳಿಗ್ಗೆ ಮತ್ತೆ ತ್ರಿಕೋನದಲ್ಲಿ ಸೂಜಿ ಚುಚ್ಚಿದಂತೆ ಭಾಸವಾಗಿ , ಮೊಸರುದ್ದೀನರು  ಕೈ ಆಡಿಸಲಾಗಿ , ಬಾಲದ ನೀರಿಕ್ಷೆಯಲ್ಲಿದ್ದವರಿಗೆ ಖಾಲಿ ಜಾಗದ ಅನುಭವವಾಯಿತು.

***       ***       ****    *







Sunday, September 11, 2011

ಆಭಾಸ

ಜಿಟೀ ಜಿಟಿ ರಿಪಿ ರಿಪಿ ಪಿರಿ ಪಿರಿ
ಗಾಂಧೀ ಬಜಾರಿನಲ್ಲಿ ಮುಸ್ಸಂಜೆಯಲ್ಲೊಂದು ಮಳೆ ,
ಹೆಚ್.ಎನ್. ಫ್ಲೈ ಓವರ್ ದಾಟಿ ಬಂದ ಕನಸುಗಳು
ರೋಟೀ ಘರ್ ನಲ್ಲಿ ಬೈ ಟೂ ಟೀ ಕುಡಿಯುತ್ತವೆ..!
ಸೊಪ್ಪು ಮಾರುವ ಮುದುಕಿಯ 
ಪುಟ್ಟ ಮೊಮ್ಮಗು , ತೂತು ಕನಸಿನ ಕೊಡೆಯಲ್ಲಿ
ಮಳೆಯ ನೋಡುತಿದೆ..!
ಒಬ್ಬಂಟಿಯಾದರೆ ಫುಟ್‍ಪಾತ್ ಕಡೆ 
ಹೋಗಲೇ ಬೇಡಿ ,
ಮಳೆಯ ನೋಡುತ್ತಾ
ಜೋಡಿಗಳು ಕುಳಿತಿವೆ, ಆದರೂ ಆಯಿತು
ನಿಮಗೂ ಅಸೂಯೆ.!
ನೆನೆದಿದ್ದು , ಗೊಂಬೆ ಮಾರುವ ಹುಡುಗನ 
ಗೊಂಬೆಗಳಷ್ಟೇ ಅಲ್ಲ , 
ಕೆನ್ನೆ ಮೇಲೆ ಇಳಿದ ಕನಸು , ಜೇಬಿನಲ್ಲಿದ್ದ 
ಪುಡಿ ಕಾಸನ್ನು ಒದ್ದೆ ಮಾಡಿದೆ..
ಯಾರೋ ಹೇಳಿದ್ದು ನೆನಪಾಗುತ್ತಿದೆ ,
ಮತ್ತೆ ಮಳೆ ಬರಲಿ , ನೆನಪಾಗಿದ್ದು ಮಾತಾಡೀತು..