Sunday, June 5, 2022

ಗಾಯ

ಸಾನ್ಸನ್  ತನ್ನ  ವಿದ್ಯಾರ್ಥಿ ವೃ೦ದದಲ್ಲಿ    'ಮಿಸ್ ಕಾಸಾಬ್ಲಾಂಕಾ' ಎಂದೇ  ಪರಿಚಿತಳು. ಆ ಹೆಸರಿನ ಜೊತೆ ಜೊತೆಗೆ ಮೂಡಿ ಬರುವ  ಅಣಕಿಸುವ  ಅಪಹಾಸ್ಯದ  ನಗುವನ್ನು ನಿರ್ಲಕ್ಷಿಸುವದು  ಸಾಧ್ಯವಾದರೆ  ಮಿಸ್ ಕಾಸಾಬ್ಲಾಂಕಾ ಎನ್ನುವದು ಚಂದನೆಯ ಹೆಸರು. ಸಾನ್ಸನ್ ಸಾಧ್ಯವಾದಷ್ಟೂ ಆ ನಗುವನ್ನು ಗಮನಿಸದಿರಲು ಪ್ರಯತ್ನಿಸುತ್ತಾಳೆ. ಮೂವತ್ತೆರಡು ವರ್ಷದ ಸಾನ್ಸನ್ ಗೆ ಗಂಡನಾಗಲಿ  , ಪ್ರಿಯಕರನಾಗಲಿ  ಅಥವಾ ಒಬ್ಬ ಆಪ್ತ ಸ್ನೇಹಿತೆ ಸಹ ಇಲ್ಲ.  ಪದವಿ ಮುಗಿಸಿ , ತಾನು ಹುಟ್ಟಿ ಬೆಳೆದ ಸಣ್ಣ ಪಟ್ಟಣದಲ್ಲಿನ  ಎಜುಕೇಟರ್ ಸ್ಕೂಲಿನಲ್ಲಿ  ತಾತ್ಕಾಲಿಕವಾಗಿ ಇಂಗ್ಲಿಷ್ ಶಿಕ್ಷಕಿಯಾಗಿ  ಸೇರಿದ  ಅವಳ ನೌಕರಿ ಈಗ  ಖಾಯಂ ಆಗಿದ್ದರೂ  ಸಹ ಅವಳು ಮೊದಲಿನಂತೆ ಇಂಗ್ಲಿಷ್ ಟೀಚರ್ ಆಗಿಯೇ ಮುಂದುವರೆದಿದ್ದಾಳೆ.  ಕಳೆದ ಹತ್ತು ವರ್ಷದಲ್ಲಿ ಅವಳು ಕಾಸಾಬ್ಲಾಂಕಾ ಸಿನೆಮಾವನ್ನು  ಪ್ರತಿ ಬ್ಯಾಚಿನ ವಿದ್ಯಾರ್ಥಿಗಳಿಗೂ ಒಂದು ಸೆಮಿಸ್ಟರ್ ನಲ್ಲಿ  ಕಡಿಮೆಯೆ೦ದರೂ ಐದರಿಂದ ಆರು ಸಲ ತೋರಿಸಿದ್ದಾಳೆ.  ಪ್ರತಿಯೊಂದು ಬಾರಿ ಸಿನಿಮಾ ನೋಡಿದಾಗಲೂ ಆಯಾ  ಬ್ಯಾಚಿನ ವಿದ್ಯಾರ್ಥಿಗಳು ಹೇಗೆ  ಪ್ರತಿಕ್ರಿಯಿಸಬಹುದು ಎನ್ನುವದು ಅವಳಿಗೆ ಒಂದು ಸಿದ್ಧ ಮಾದರಿಯಂತಾಗಿರುವದರಿಂದ ಅದನ್ನು ಸಹಿಸಿಕೊಳ್ಳುವದು ಅವಳಿಗೆ ಕಷ್ಟಕರವು ಅಲ್ಲ . ಮೊದಲ  ಸಲ ಸಿನಿಮಾ ತೋರಿಸಿದಾಗ   ಅದು ಅವರ ಜೀವನದಲ್ಲಿ ಚೈನೀಸ್ ಅಡಿ  ಶೀರ್ಷಿಕೆ ಇಲ್ಲದೆ ನೋಡಿದ ಮೊತ್ತಮೊದಲ  ಅಮೇರಿಕನ್  ಸಿನಿಮವಾದ್ದರಿಂದ  ಬೆರಗುಗಣ್ಣಿನಿಂದ ನೋಡುತ್ತಿದ್ದರು.   ಅವರು  ಭಾಷೆಯನ್ನು ಗ್ರಹಿಸಲು ಕಷ್ಟಪಡುತ್ತಾ, ಅಲ್ಲಿ ಇಲ್ಲಿ ಒಂದೊಂದು ಶಬ್ದವನ್ನೋ , ವಾಕ್ಯವನ್ನೋ ಅರ್ಥಮಾಡಿಕೊಳ್ಳುತ್ತಿರುವದನ್ನು ಸಾನ್ಸನ್  ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಇಷ್ಟಾದರೂ ಒಟ್ಟಾರೆಯಾಗಿ ಸಿನಿಮಾವನ್ನು ಅರ್ಥೈಸಿಕೊಳ್ಳವುದರಲ್ಲಿ  ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಪ್ರತಿ ಸಲ   ಸಿನಿಮಾ ನೋಡಿದವರಲ್ಲಿ ಒಬ್ಬರೋ, ಇಬ್ಬರೋ   ಹುಡುಗಿಯರು ಕ್ಲಾಸ್ ಮುಗಿಯುವಷ್ಟರಲ್ಲಿ ಕಣ್ಣಿನಲ್ಲಿ ನೀರನ್ನು ತುಂಬಿಕೊಂಡಿರುತ್ತಿದ್ದರು.  ಆದರೆ ಬಹು ಬೇಗ ವಿದ್ಯಾರ್ಥಿಗಳಿಗೆ  ಸಿನಿಮಾದಲ್ಲಿ ಆಕರ್ಷಣೆ  ಮಾಯವಾಗುತ್ತಿತ್ತು. ಸಿನಿಮಾದಲ್ಲಿನ ಹುಡುಗಿಯರು  ಅತ್ತಾಗ ಇವರು ನಗುತ್ತಿದ್ದರು.  ತೆರೆಯ ಮೇಲೆ  ಗಂಡಸೊಬ್ಬ ಹೆಂಗಸಿಗೆ ಮುತ್ತಿಕ್ಕಿದಾಗ ಇವರು ಕೇಕೆ ಹಾಕುತ್ತಿದ್ದರು. ಕೊನೆ ಕೊನೆಗೆ ಇದು ಹೇಗಾಗುತ್ತಿತ್ತು ಎಂದರೆ ವಿದ್ಯಾರ್ಥಿಗಳ ಗದ್ದಲದ ನಡುವೆ  ಸಾನ್ಸನ್  ಒಬ್ಬಳೇ ಸಿನಿಮಾವನ್ನು ವೀಕ್ಷಿಸುತ್ತಿದ್ದಳು.  


ಅವತ್ತು ಬೆಳಗ್ಗೆಯ ಪಿರಿಯಡ್ ನಲ್ಲಿ  ಸಾನ್ಸನ್ ಅದೇ ಕೆಲಸವನ್ನು ಮಾಡುತ್ತಿದ್ದಾಗಲೇ  ಕ್ಲಾಸಿನ ಬಾಗಿಲನ್ನು ಯಾರೋ ತಟ್ಟಿದರು. ತಟ್ಟುವ ಸದ್ದನ್ನು ಇನ್ನು  ತಡೆಯಲಸಾಧ್ಯ ಎಂದೆನಿಸಿದಾಗ ಅವಳು ಸಿನಿಮಾವನ್ನು ನಿಲ್ಲಿಸಿದಳು.

"ನಿಮ್ಮ ಅಮ್ಮ ನಿಮಗೋಸ್ಕರ ಹೊರಗೆ ಕಾಯುತ್ತಿದ್ದಾಳೆ . ಅವರಿಗೆ ನಿಮ್ಮನ್ನು ನೋಡಬೇಕಂತೆ."  ಸಾನ್ಸನ್ ಕ್ಲಾಸಿನ ಬಾಗಿಲನ್ನು ತೆರೆದಾಗ ಅಟೆಂಡರ್ ಹೇಳಿದ.
"ಯಾಕಂತೇ ?"
"ಕಾರಣ ಹೇಳಿಲ್ಲ "
"ನಾನು ಇಲ್ಲಿ ಕ್ಲಾಸು ತೆಗೆದುಕೊಳ್ಳುತ್ತಿರುವದು  ಗೊತ್ತಾಗುತ್ತಿಲ್ಲವೇ?"
"ನಿಮಗೆ ಕಾಯುತ್ತಿರುವದು ನಿಮ್ಮ ಅಮ್ಮ "  ಅಟೆಂಡರ್  ಕ್ಲಾಸಿನ ಒಳಗೆ ಒಂದು ಹೆಜ್ಜೆ  ಇಟ್ಟು ಮತ್ತೆ ಹೇಳಿದ.
ಸಾನ್ಸನ್ ಅವನನ್ನು ಒಂದು ಕ್ಷಣ ದುರುಗುಟ್ಟಿಕೊಂಡು ನೋಡಿದಳು. ನಂತರ ನಿಟ್ಟುಸಿರು ಬಿಡುತ್ತ "ಸರಿ , ನಾನು ಬರುತ್ತಿದ್ದೀನಿ ಎಂದು ಹೇಳು. " ಕ್ಲಾಸಿನಲ್ಲಿ  ವಿದ್ಯಾರ್ಥಿಗಳು ತಲೆಯೆತ್ತಿ ನೋಡತೊಡಗಿದರು. ಅವರು  ತನ್ನ ಮಾತನ್ನು ಪಾಲಿಸುವದಿಲ್ಲ  ಎಂದು ತಿಳಿದಿದ್ದರೂ  ಸಿನಿಮಾವನ್ನು ಗಮನವಿಟ್ಟು ನೋಡುವಂತೆ  ಅವರಿಗೆ ಆದೇಶಿಸಿದಳು.

ಸ್ಕೂಲಿನ ಗೇಟಿನ ಹೊರಗೆ ಸಾನ್ಸನ್ ಳ ಅಮ್ಮ  ಪ್ರತಿ ದಿನ ಮಾರ್ಕೆಟಿಗೆ ಒಯ್ಯುತ್ತಿದ್ದ  ತನ್ನ ತಳ್ಳುಗಾಡಿಗೆ ಒರಗಿ ನಿಂತುಕೊಂಡಿದ್ದಳು.  ಗಾಡಿಯ ಮೇಲೆ ಒಂದು ಸ್ಟವ್ , ಒಂದು ಅಲ್ಯೂಮಿನಿಯಂನ ದೊಡ್ಡ ಬೋಗುಣಿ, ಒಂದಷ್ಟು ಮೊಟ್ಟೆಗಳು, ಮಸಾಲೆಪದಾರ್ಥ ತುಂಬಿರುವ ಬಾಟಲ್ಗಳು  ಮತ್ತು ಒಂದು ಮರದ ಸ್ಟೂಲು ಇದ್ದವು. ಕಳೆದ ನಲವತ್ತು ವರ್ಷಗಳಿಂದ ಅವಳ ಅಮ್ಮ ರೈಲ್ವೆ ನಿಲ್ದಾಣದ ಹತ್ತಿರವಿರುವ ಮಾರ್ಕೆಟಿನ ಬಳಿ ಬೇಯಿಸಿದ ಮೊಟ್ಟೆಯನ್ನು ಮಾರುತ್ತಿದ್ದಳು. ಸಾಕಷ್ಟು ವರ್ಷದಿಂದ  ಸ್ಟೂಲಿನ ಮೇಲೆ ಕುಳಿತೆ ಇರುವದಕ್ಕೋ ಏನೋ ಅವಳು ಈಗ ಬೆನ್ನು ಬಾಗಿದ   ಸಣ್ಣ ಮುದುಕಿಯಾಗಿದ್ದಳು.  ಅಪ್ಪನ  ಅಂತ್ಯಕ್ರಿಯೆಯ ದಿನ ನೀಡಿದ್ದೆ ಕೊನೆ,  ಕಳೆದ ಒಂದು ವರ್ಷದಲ್ಲಿ ಸಾನ್ಸನ್ ಅಮ್ಮನನ್ನು ಭೇಟಿಯಾಗಿರಲಿಲ್ಲ.  ಅವಳ ಅಮ್ಮನ ಕೂದಲು   ಬೆಳ್ಳಗಾಗುತ್ತ , ಉದುರುತ್ತಿದ್ದವು . ಮುಂದೊಂದು ದಿನ ಅವಳ  ಕೂದಲೂ  ಸಹ ಹೀಗೆಯೇ ಆಗಬಹುದೇನೋ . ಮುಂದೊಂದು ದಿನ ಅವಳ  ಕೂದಲೂ  ಸಹ ಹೀಗೆಯೇ ಆಗಬಹುದೇನೋ . ಅವಳಿಗೆ  ಅಂತಹ ಭಾವುಕತೆ ಇರಲಿಲ್ಲ.   
" ಅಮ್ಮ, ನನ್ನನ್ನು ಹುಡುಕಿಕೊಂಡು ಬಂದಿದ್ದಿಯಂತೆ?" ಸಾನ್ಸನ್ ಕೇಳಿದಳು.
"ಇಲ್ಲದಿದ್ದರೆ ನೀನು ಬದುಕಿದ್ದೀಯಾ ಎಂದು ನನಗೆ ತಿಳಿಯುವದು ಹೇಗೆ ?"
"ಯಾಕೆ ? ಹೇಗಿದ್ದರೂ ನನ್ನ ಬಗ್ಗೆ  ಒಬ್ಬರಲ್ಲ ಒಬ್ಬರು ಪ್ರತಿದಿನ ನಿನ್ನ ಬಳಿ ಬಂದು  ಏನಾದರು ಹೇಳುತ್ತಾರೆ ಅಂದುಕೊಂಡಿದ್ದೆ "
"ಅವರು ಸುಳ್ಳು  ಸುದ್ದಿ ಸಹ ಹೇಳಬಹುದಲ್ಲ"
 "ಖಂಡಿತ"
"ಆದರೆ ಬೇರೆಯವರು ನಿನ್ನ ಬಗ್ಗೆ ಮಾತನಾಡುವ ಹಾಗೆ ಆಗಿದೆ  ಎಂದಾದರೆ ಅದು ಯಾರ ಸಮಸ್ಯೆ ?"
"ನಿನ್ನದು"
"ನಾಚಿಕೆ ಅನ್ನುವ ಶಬ್ದ ಒಂದು ಇದೆ ಎನ್ನುವದು ಗೊತ್ತಾ  ನಿನಗೆ ?"
"ನೀನು ಇಲ್ಲಿಯವರೆಗೆ  ಬಂದಿದ್ದು ನಾನು ನಾಚಿಕೆಪಟ್ಟುಕೊಳ್ಳಬೇಕು ಎನ್ನುವದನ್ನು ಹೇಳುವದಕ್ಕೋಸ್ಕರವೇ ? "
"ಯಾವ ದೇವರ ಶಾಪದಿಂದ ನೀನು ನನ್ನ ಮಗಳಾಗಿ ಹುಟ್ಟಿದೆಯೇನೋ?" ಅವಳಮ್ಮ ಈಗ ಧ್ವನಿ ಎತ್ತರಿಸಿ ಮಾತನಾಡಲು ಪ್ರಾರಂಭಿಸಿದಳು. ಸುತ್ತಮುತ್ತ ಹೋಗುತ್ತಿದ್ದವರು ಇವರ ಕಡೆ ನೋಡಿ ಕುಹಕದ ನಗೆಯನ್ನು ಬೀರಿ ಸಾಗುತ್ತಿದ್ದರು.
"ಅಮ್ಮ ಬೇರೆ ಏನಾದರು ಹೇಳುವದಕ್ಕೆ ಇದೆಯೇ ?"
"ನಿನ್ನ ಬಗ್ಗೆ ಜನ ಮಾತನಾಡಿಕೊಳ್ಳುತ್ತಾರಲ್ಲ , ಅದು ಒಂದಲ್ಲ ಒಂದು ದಿನ ನನ್ನ ಉಸಿರು ಕಟ್ಟಿಸಿ ಸಾಯಿಸುತ್ತೆ "
"ಕೇವಲ ಜನರ ಮಾತು ಯಾರನ್ನು ಸಾಯಿಸುವದಿಲ್ಲ "
 "ಹಾಗಾದರೆ ನಿನ್ನ ಅಪ್ಪನನ್ನು ಸಾಯಿಸಿದ್ದು ಯಾವುದು ?"
"ಅಪ್ಪನ ಸಾವಿಗೆ ನಾನು ಒಬ್ಬಳೇ ಕಾರಣಳಲ್ಲ" ಸಾನ್ಸನ್ ಮರು ನುಡಿದಳು. ಎಷ್ಟೇ ಪ್ರಯತ್ನಿಸಿದರೂ ಗಂಟಲು ಒತ್ತರಿಸಿ ಬಂದ ಹಾಗೆ ಭಾಸವಾಯಿತು.
ಅವಳಪ್ಪ ನೀರಿನ ಮೀಟರ್  ನೋಡಿ  ಬಿಲ್  ಕೊಡುವ ಕೆಲಸದಲ್ಲಿದ್ದ.  ಹೊತ್ತಲ್ಲದ ಹೊತ್ತಿನಲ್ಲಿ ಇನ್ಯಾರದೋ ಮನೆಯ ಬಾಗಿಲನ್ನು ಬಡಿದು ಬಿಲ್ ಕೊಡುವಾಗ ಮತ್ತು ದರ ಏರಿದ ಬಿಲ್ ನೋಡಿ ಮನೆಯವರು ಕೂಗಾಡುವಾಗ  ಅವನಿಗೆ ಸದಾ  ಏರುತ್ತಿದ್ದ ನೀರಿನ ಬಿಲ್ ಗೆ ತಾನೇ ಹೊಣೆ ಎನ್ನುವ ಭಾವ ಮೂಡಿ ಆತಂಕಗೊಳ್ಳುತ್ತಿದ್ದ.   ಒಂದು ದಿನ ಕೆಲಸಕ್ಕೆ ಹೋಗಿ  ನಂತರ ಮಾಯವಾದ ಅವನನ್ನು ಕೆಲ ಹುಡುಗರು ಊರ ಹೊರಗಿನ ಕೆರೆಯಲ್ಲಿ ಶವವಾಗಿ ಪತ್ತೆ ಹಚ್ಚಿದ್ದರು. ಕೆರೆಯಲ್ಲಿ  ಅಂತಹ  ನೀರು ಇರಲಿಲ್ಲ. ಹೆಚ್ಚು ಎಂದರೆ ಸೊಂಟ ಮುಳುಗುವಷ್ಟು. ಅವನೇ ಕೆರೆಯಲ್ಲಿ ಮುಳುಗಿ ಸತ್ತಿರಬಹುದು. ಆದರೆ ಅದನ್ನು ಖಚಿತವಾಗಿ ಹೇಳಲು ಯಾರಿಗೂ ಸಾಧ್ಯವಿರಲಿಲ್ಲ.  ಆತ ಯಾಕೆ ಹಾಗೆ ಮಾಡಿದ ಎನ್ನುವದಕ್ಕೂ ಇಂತಹುದೇ ಎನ್ನಬಹುದಾದ  ಯಾವುದೇ ಕಾರಣವಿರಲಿಲ್ಲ.   ಸಾನ್ಸನ್ ಳ ಅಮ್ಮನ ಪ್ರಕಾರ ಸಾನ್ಸನ್ ಮದುವೆಯಾಗದೆ ಇರುವದೇ  ಇವಕ್ಕೆಲ್ಲ ಕಾರಣ.

"ನೀನು ಮೊದಲು ಕಾಲೇಜಿಗೆ ಹೋಗಿದ್ದೆಯಲ್ಲ, ಆ ದಿನಗಳನ್ನು ನೆನಪಿಸಿಕೋ.  ನಾನು ಮತ್ತು ನಿನ್ನಪ್ಪ ಈ ಪ್ರಪಂಚದಲ್ಲೇ ಮಹತ್ ಸಾಧನೆ ಮಾಡಿದವರ ಪಟ್ಟಿಗೆ ಸೇರಿದವರು ಎನ್ನುವಷ್ಟು ಖುಷಿ ಪಟ್ಟಿದ್ದೆವು. " ಅವಳ ಅಮ್ಮ ಹಳೆಯದನ್ನು ನೆನಪಿಸಿಕೊಂಡು ಇನ್ನೇನು ಅತ್ತೇ ಬಿಡುತ್ತಾಳೆ ಅನಿಸುತ್ತಿತ್ತು.
"ಅಮ್ಮ ಈ ವಿಷಯವನ್ನು ಈಗಾಗಲೇ ಸಾಕಷ್ಟು ಸಲ ಮಾತನಾಡಿ  ಆಗಿದೆ. ಮತ್ತೆ  ಅದನ್ನೇ ಕೆದಕುವದು ಬೇಡ."
"ಯಾಕೆ ? ನಾನು ಇಷ್ಟು ವರ್ಷ ಕಷ್ಟಪಟ್ಟು ನಿನ್ನನ್ನು ಬೆಳೆಸಿದ್ದು ಈಗ ನೀನು ನನ್ನ ಬಾಯಿ ಮುಚ್ಚಿಸಲು ಎಂದೇ ? "
"ಆಯಿತು. ನನ್ನದು ತಪ್ಪಾಯಿತು. ಸರಿನಾ ? ನಾನು ಈಗ ಹೋಗಬೇಕು " ಸಾನ್ಸನ್ ಹೇಳಿದಳು.
"ದಯವಿಟ್ಟು ಹೋಗಬೇಡ, ನಾನು ಹೇಳುವದನ್ನು ಸ್ವಲ್ಪ ಕೇಳು" ಅವಳಮ್ಮ  ಬೇಡಿಕೊಳ್ಳುವಂತೆ ಕೇಳಿದಳು.  
"ಅಮ್ಮ , ನಾನೀಗ ಕ್ಲಾಸ್ ತೆಗೆದುಕೊಳ್ಳುತ್ತಿದ್ದೇನೆ"  ಸಾನ್ಸನ್ ಸ್ವಲ್ಪ ಮೆದು ಧ್ವನಿಯಲ್ಲಿ ಹೇಳಿದಳು.
"ಹಾಗಾದರೆ ಇವತ್ತು ರಾತ್ರೆ ಮನೆಗೆ ಬಾ. ನಿನಗೊಂದು ಮುಖ್ಯವಾದ ವಿಷಯವನ್ನು ಹೇಳುವದಕ್ಕೆ ಇದೆ. "
"ಈಗಲೇ ಹೇಳಿಬಿಡು. ನನಗೆ ಇನ್ನು ೫ ನಿಮಿಷ ಸಮಯವಿದೆ. "
"ಐದು ನಿಮಿಷ ಸಾಕಾಗುವದಿಲ್ಲ. ಇದು ತ್ಸು ನ ಬಗ್ಗೆ " ಅಮ್ಮ ಸಾನ್ಸನ್ ಳ  ಹತ್ತಿರ ಬಂದು ಪಿಸುಗುಟ್ಟಿದಳು " ತ್ಸು ಡೈವೋರ್ಸ್ ತೆಗೆದುಕೊಂಡಿದ್ದಾನೆ "
ಸಾನ್ಸನ್ ಅವಳಮ್ಮನನ್ನು ಎವೆಯಿಕ್ಕದೆ ನೋಡಿದಳು.  ಅವಳಮ್ಮ ಸಾವಕಾಶವಾಗಿ ತಲೆದೂಗುತ್ತ  "ಈಗ ಅವನು ಒಬ್ಬಂಟಿ "
"ನೀನು  ಏನು ಹೇಳುತ್ತಿದ್ದೀಯ ಎಂದು ನನಗೆ ಅರ್ಥವಾಗುತ್ತಿಲ್ಲ" ಸಾನ್ಸನ್
"ಅವರಪ್ಪ ಅಮ್ಮ ನೀನು  ಅವನನ್ನು  ಒಪ್ಪಿ ಜೊತೆಗೆ ಹೋಗುತ್ತೀಯಾ ಎಂದು ಕೇಳುತ್ತಿದ್ದಾರೆ"
"ಅಮ್ಮ ನನಗೆ  ಸ್ವಲ್ಪವೂ ಅರ್ಥವಾಗುತ್ತಿಲ್ಲ "
"ಅದಕ್ಕೆ ಹೇಳಿದ್ದು ಐದು ನಿಮಿಷ ಸಾಲುವದಿಲ್ಲ. ರಾತ್ರೆ ಮನೆಗೆ ಬಾ. ಇಬ್ಬರೂ ಕೂತು ಮಾತನಾಡೋಣ. ಈಗ ಕ್ಲಾಸಿಗೆ ವಾಪಸು ಹೋಗು. " ಸಾನ್ಸನ್ ಏನಾದರು ಹೇಳುವದಕ್ಕೆ ಮೊದಲೇ ಅವಳಮ್ಮ ತಳ್ಳುಗಾಡಿಯನ್ನು ನೂಕಿಕೊಂಡು ಅಲ್ಲಿಂದ ಹೊರಟಿದ್ದಳು.  

 ಸಾನ್ಸನ್  ಕಾಸಾಬ್ಲಾಂಕಾ ಸಿನಿಮಾವನ್ನು ಮೊಟ್ಟಮೊದಲ ಬಾರಿಗೆ ನೋಡಿದ್ದು ಮತ್ತು  ತ್ಸು ಅವಳನ್ನು ಮದುವೆಯಾಗುವದಿಲ್ಲ ಎಂದು ಸಣ್ಣ ಕ್ಷಮಾಪಣಾ ಪತ್ರವನ್ನು ಅಮೆರಿಕದಿಂದ ಅವಳಿಗೆ ಕಳುಹಿಸಿದ್ದು ಎರಡೂ ಒಂದೇ ವರ್ಷ.  ಪತ್ರ ಬರುವದಕ್ಕೂ ಮೊದಲು ಅವಳು ತನ್ನ ವಿದ್ಯಾರ್ಥಿಗಳಿಗೆ  "ಸೌಂಡ್ ಆಫ್ ಮ್ಯೂಸಿಕ್" ಸಿನಿಮಾವನ್ನು ತೋರಿಸುತ್ತ , ಸಿನಿಮಾದಲ್ಲಿನ ಹಾಡಿನೊಟ್ಟಿಗೆ ತಾನೂ ಗುನುಗುತ್ತ ಯಾವುದೇ ಕ್ಷಣದಲ್ಲಾದರೂ ಅಮೆರಿಕಾಕ್ಕೆ ಹೋಗಿ ತ್ಸುನನ್ನು  ಸೇರಿಕೊಳ್ಳುವ  ಕನಸನ್ನು ಕಾಣುತ್ತಿದ್ದಳು.  ಪತ್ರ ಓದಿದ ನಂತರ ಅವಳು ಯಾವತ್ತೂ ಹಾಡಿದ್ದಿಲ್ಲ.

ಸಾನ್ಸನ್ ಮತ್ತೆ ಕ್ಲಾಸಿಗೆ ಮರಳಿ , ಕಿಟಕಿಯ ಕಟ್ಟೆಯನ್ನು ಹತ್ತಿ, ತನ್ನ ಅಮೇರಿಕನ್ ಟೀಚರ್ ಮಾಡುತ್ತಿದ್ದಂತೆ, ಕಾಲನ್ನು ಸಾವಕಾಶವಾಗಿ ಜೋತಾಡಿಸುತ್ತ ಕುಳಿತುಕೊಂಡಳು.  ಸಿನಿಮಾದ ಕೊನೆಯ ದೃಶ್ಯದಲ್ಲಿ ನಾಯಕ  ರಿಕ್ ಸುರಿಯುತ್ತಿದ್ದ ಮಳೆಯಲ್ಲಿ ಸಂಪೂರ್ಣವಾಗಿ ಒದ್ದೆಯಾಗಿ, ರೈಲನ್ನು  ಹತ್ತುವಾಗ ವಿದ್ಯಾರ್ಥಿಯೊಬ್ಬ ಕೂಗಿದ " ಇದೊಳ್ಳೆ ತಮಾಷೆ, ಅವನ ಕೋಟು ಮಾತ್ರ  ಒಂಟೆಯ ಚರ್ಮದ ಹಾಗೆ ಒಣಗಿದೆ."

 ಇಷ್ಟು ಸಲ ಸಿನಿಮಾವನ್ನು ನೋಡಿದ್ದರೂ ತಾನು ಈ ವಿಷಯವನ್ನು  ಗಮನಿಸಿಯೇ ಇಲ್ಲವಲ್ಲ ಎಂದು ಆಶ್ಚರ್ಯವಾಗೊಂಡಳು.  ಈ ವಿವರವನ್ನು ಗಮನಿಸಿದ ಹುಡುಗನ ಸೂಕ್ಷ್ಮ ಗ್ರಹಿಕೆಯನ್ನು ಶ್ಲಾಘಿಸಬೇಕು ಎಂದುಕೊಂಡವಳು ಕೊನೆ ಕ್ಷಣದಲ್ಲಿ ಮನಸ್ಸು ಬದಲಿಸಿ ಕ್ಲಾಸನ್ನು ಉದ್ದೇಶಿಸಿ "ಬದುಕಿನ ನಿಗೂಢತೆಯಿರುವದೇ ಘಟಿಸುವ ಘಟನೆಗಳಿಗೆಲ್ಲ ವಿವರಣೆ ಇಲ್ಲದಿರುವದರಲ್ಲಿ"
ಅವಳ ಮಾತು ಕೇಳಿ ಕ್ಲಾಸಿನಲ್ಲಿ ನಗೆಯ ಅಲೆ ಎದ್ದಿತು. ಈ ವಾಕ್ಯ, ಅದರೊಟ್ಟಿಗೆ  ಸಾನ್ಸನ್ ಗೆ  ಇನ್ನೊಂದು ಹೊಸ ಅಡ್ಡ ಹೆಸರು ಸೇರಿ ಬೇರೆ ಎಲ್ಲ ಕ್ಲಾಸಿಗೆ ಡಂಗುರ ಸಾರಲಾಗುತ್ತದೆ. ಅದು ಸಾನ್ಸನ್ ಳಿಗೂ ಗೊತ್ತಿತ್ತು ಮತ್ತು ಅವಳು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.  ಈಗಷ್ಟೆ ಹೈಸ್ಕೂಲು ಮುಗಿಸಿ ಬಂದ ಈ ವಿಧ್ಯಾರ್ಥಿಗಳಿ ಇನ್ನೇನು ಕೆಲ ವರ್ಷಗಳಲ್ಲಿ ಪದವಿ ಸಹ ಮುಗಿಸಿ ಇನ್ಯಾವುದೋ ಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಬಹುದೇನೋ. ಇಲ್ಲಿರುವವರಲ್ಲಿ ಬಹುತೇಕರು ಹಳ್ಳಿಗಾಡಿನಿಂದ ಬಂದವರು.  ಹೀಗಾಗಿ ಸ್ಕೂಲು ಗದ್ದೆಯಲ್ಲಿ ಕೆಲಸ ಮಾಡುವದನ್ನು ತಪ್ಪಿಸಿಕೊಳ್ಳುವ ಒಂದು ಅವಕಾಶಕ್ಕಾಗಿ ಅವರು ಇಲ್ಲಿ ಬಂದು ಸೇರಿದವರು.   ಇಲ್ಲಿ ಇಂಗ್ಲಿಷ್ ಒಂದು ವಿಷಯವಾಗಿ ಇಟ್ಟಿರುವದು ಕೇವಲ ಶೈಕ್ಷಣಿಕ ನಿಯಮವನ್ನು ಪಾಲಿಸಬೇಕು ಎಂದಷ್ಟೇ. ತಮ್ಮ  ಕ್ಷುಲ್ಲಕ ಬಯಕೆಗಳಲ್ಲಿ ವಿಹರಿಸುತ್ತಿರುವ  ಈ ಹುಡುಗರಿಗೆ ಸಾನ್ಸನ್ ಹೇಳುವದು ಯಾವತ್ತೂ ಅರ್ಥವಾಗುವದಿಲ್ಲ.

 ಎರಡು  ಪಿರಿಯಡ್ ಆದಮೇಲೆ ಸಾನ್ಸನ್ ತಲೆನೋವಿನ ನೆಪ ಹೇಳಿ ಅವತ್ತು ರಜೆ ತೆಗೆದುಕೊಳ್ಳುಲು ನಿರ್ಧರಿಸಿದಳು. ಅವಳು ಕೊಟ್ಟ ಈ ಕಾರಣವನ್ನು  ಯಾರೂ ನಂಬದಿದ್ದರೂ, ಯಾರು ಅವಳನ್ನು ಪ್ರಶ್ನಿಸಲಿಲ್ಲ.  ಅವರು ಅವಳನ್ನು ನೋಡುತ್ತಿದ್ದ ರೀತಿಯೇ ಹಾಗೆ , ಯಾರಿಗೂ ತೊಂದರೆಯನ್ನುಂಟು ಮಾಡದ,  ಸ್ವಲ್ಪವೇ ಸ್ವಲ್ಪ ನಿರುಪದ್ರವಿ ಹುಚ್ಚುತನ ತುಂಬಿಕೊಡಿರುವ ವ್ಯಕ್ತಿಯೊಬ್ಬನಿಂದ ಏಕತಾನದ ಬದುಕಿಗೆ ಒಂಚೂರು ಬದಲಾವಣೆ ಸಿಕ್ಕ ಹಾಗೆ.  ಸಾನ್ಸನ್, ಈ  ಪಟ್ಟಣದಲ್ಲಿ ಪದವಿ ಮುಗಿಸಿದವರಲ್ಲಿ ಅತ್ಯ೦ತ ಹೆಚ್ಚು ಓದಿದವಳು. ಈ ಪಟ್ಟಣದಲ್ಲಿ ಪದವಿಯನ್ನು ಮುಗಿಸಿ , ಬೀಜಿಂಗ್ ನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಇಬ್ಬರಲ್ಲಿ ಒಬ್ಬಳು ಮತ್ತು ಮರಳಿ ಬ೦ದವಳು ಅವಳು ಒಬ್ಬಳೇ.  ಇನ್ನೊಬ್ಬ ಅವಳ ಬಾಲ್ಯದ  ಗೆಳೆಯ, ಸಹಪಾಠಿ,  ಒಂದು ಕಾಲದ ಪ್ರಿಯಕರ , ಭಾವಿ ಪತಿ  ನಂತರ   ಸಾನ್ಸನ್ ಗಿಂತ ಸುಂದರವಾದ ಇನ್ನೊಬ್ಬಳನ್ನು ಮದುವೆಯಾಗಿ ಈಗ ಅಮೇರಿಕಾದಲ್ಲಿ ನೆಲೆಸಿರುವ ತ್ಸು.

 ಈಗ ಡೈವೋರ್ಸ್ ತೆಗೆದುಕೊಂಡಿದ್ದಾನೆ . ಹತ್ತು  ಸುದೀರ್ಘ ವರ್ಷಗಳ ನಂತರ .
 

ತನ್ನ ಬಾಡಿಗೆ ರೂಮಿನಲ್ಲಿ ಹಾಸಿಗೆಯ ಮೇಲೆ  ಕುಳಿತು ಸಾನ್ಸನ್  ಸೂರ್ಯಕಾಂತಿ ಬೀಜಗಳನ್ನು ಬಿಡಿಸತೊಡಗಿದಳು.  ಒಂದೊಂದಾಗಿ ಬಿಡಿಸಿದ ಬೀಜದ ಸಿಪ್ಪೆಗಳು ಮಂಚದ ಕೆಳಗೆ , ಹಾಸಿಗೆಯ ಮೇಲೆ, ರೂಮಿನ ನೆಲದ ಮೇಲೆ ರಾಶಿಯಾಗುತ್ತಿದ್ದವು.  ಬೀಜಗಳನ್ನು ಅಗಿಯುವಾಗ ಹೊರಡುವ ಕರಕರ ಶಬ್ದದ  ಏಕತಾನ ಲಹರಿ  ಅವಳ ತಲೆಯೊಳಗೆ ಉನ್ಮಾದವನ್ನುಂಟು ಮಾಡುತ್ತಿತ್ತು. ಬಾಯಲ್ಲಿ   ಸೂರ್ಯಕಾಂತಿ ಬೀಜದ ಹೇಳಲಾಗದ ಸವಿ.    ಗೋಂಗ್ಸ್ ನ  ಅ೦ಗಡಿಯಿಂದ ತಂದ ಈ ಸೂರ್ಯಕಾಂತಿ ಬೀಜ ಉಪ್ಪು ಮಿಶ್ರಿತ ಸಿಹಿ ಮತ್ತು ಅಂಗಡಿಯವರು ಸೇರಿಸುವ ಯಾವುದೋ ವಸ್ತುವಿನಿಂದ ಉತ್ಪತ್ತಿಯಾಗುವ ಹೌದೋ ಅಲ್ಲವೋ ಎನ್ನುವ ಕಹಿ ರುಚಿ ಮತ್ತು ಕಾಲೇಜಿನ ದಿನಗಳಲ್ಲಿ ಕೊಂಡು ತಂದಿದ್ದ ಒಂದು ಷೆಲ್ಫ್ ಪೂರ್ತಿ ತುಂಬುವಷ್ಟು ಇಂಗ್ಲಿಷ್ ಕಾದಂಬರಿಗಳು, ಪ್ರತಿಯೊಂದು ಒಂದು   ಜೀವಮಾನವಿಡೀ ಅಧ್ಯಯನಕ್ಕೆ ಸಾಕಾಗುವಂತಹ ಪುಸ್ತಕಗಳು ಸಾನ್ಸನ್ ಳ ಒಂಟಿ ಬದುಕನ್ನು  ಬಹುತೇಕ ಸಹಿಸಲಾಗುವಂತೆ ಮಾಡಿದ್ದವು. ಆದರೆ  ಇವತ್ತು ಬಾಯೊಳಗೆ ಅಗಿಯುತ್ತಿದ್ದ ಸೂರ್ಯಕಾಂತಿ ಬೀಜಗಳ ಕರಕರ ಪ್ರತಿಧ್ವನಿ ತಲೆಯೊಳಗೆ ಎಂದಿಗಿಂತ ಬೇರೆಯದಾಗಿ ಮೊಳಗುತ್ತಿತ್ತು. ತ್ಸುನ ಡೈವೋರ್ಸ ವಿಷಯ ಗಂಟಲೊಳಗೆ ಸಿಕ್ಕಿಕೊಂಡ ಮೀನಿನ ಮೂಳೆಯಂತೆ ಅತ್ತಲೂ ಹೋಗುತ್ತಿರಲಿಲ್ಲ ಇತ್ತಲೂ ಬರುತ್ತಿರಲಿಲ್ಲ.

ಬಹುಶ:  ಹೀಗೆ ಬಿಡಿಸಿ ಬಿಸಾಡಿದ   ಸೂರ್ಯಕಾಂತಿ ಬೀಜಗಳ ಸಿಪ್ಪೆಯ ನಡುವೆ ಕುಳಿತುಕೊಂಡು ತನ್ನ ಡೈವೋರ್ಸ ವಿಷಯವನ್ನು ಸಾನ್ಸನ್ ಚಿ೦ತಿಸುತ್ತಾಳೆ ಎಂದು  ಊಹಿಸುವದು ತ್ಸು ಗೆ ಸಾಧ್ಯವೇ ಇರಲಿಲ್ಲವೇನೋ. ಆದರೆ ಅವಳು ಪ್ರತಿದಿನ ಅವನನ್ನು ಧೇನಿಸುತ್ತಿದ್ದಳು. ಅವರಿಬ್ಬರ ನಿಶ್ಚಿತಾರ್ಥದ  ದಿನ ಅವಳು ತುಸು ಭಾವುಕಳಾಗಿ  ಹೇಳಿದಂತೆ  "ಪ್ರಪಂಚದಲ್ಲಿ ಸಮುದ್ರದ  ನೀರೆಲ್ಲ ಬತ್ತಿ ಹೋಗುವ ತನಕ ನಾನು ನಿನ್ನನ್ನು ನೆನಪಿಸಿಕೊಳ್ಳುತ್ತಿರುತ್ತೇನೆ. " ಅವತ್ತು ತ್ಸು ಸಹ ಹೀಗೆಯೇ ಏನೋ ಹೇಳಿರಬೇಕು.  ಮಿನ್ , ಅವರಿಬ್ಬರ ನಿಶ್ಚಿತಾರ್ಥದ ಏಕೈಕ ಸಾಕ್ಷಿ ಮತ್ತು  ಕಾನೂನು ರೀತ್ಯಾ  ಪೇಪರಿನ ಮೇಲಿನ ತ್ಸು ನ ಹೆಂಡತಿ ಅವರಿಬ್ಬರನ್ನು ಸಂತೋಷದಿಂದ ತಬ್ಬಿಕೊಂಡಿದ್ದಳು.  ಇವಾಗ ಮರಳಿ ನೋಡಿದರೆ ಅವೆಲ್ಲವೂ ವಿಚಿತ್ರವಾಗಿ ತೋರುತ್ತದೆ.  ಅವರ ನಡುವೆ ಯಾವುದೇ ಭಾಷೆ, ಆಣೆಗಳಿರಲಿಲ್ಲ. ಮಿನ್ ಮತ್ತು ತ್ಸು ನಡುವಿನ ತಾತ್ಕಾಲಿಕ ಕಾನೂನಿನ ಕಣ್ಣಿಗೆ ಕಾಣಿಸುವ, ಕೇವಲ ಪೇಪರಿನ ಮೇಲಿರಬೇಕಾದ ಮದುವೆಯ ಸಂದರ್ಭದಲ್ಲಿ ಮಾಡಿದ ಹಾಗೆ ಈ   ನಿಶ್ಚಿತಾರ್ಥ ಸಹ ಅವರ ಮೂವರ ನಡುವಿನ ಒಪ್ಪಂದವಾಗಿತ್ತು.

ಮಿನ್ ಕಾಲೇಜು ದಿನಗಳಲ್ಲಿ ಸಾನ್ಸನ್ ಭೇಟಿಯಾದ ಅತ್ಯಂತ ಸುಂದರಿ ಹುಡುಗಿ. ಅದಾಗಿ ಹತ್ತು ವರ್ಷಗಳ ನಂತರವೂ ಇಲ್ಲಿಯವರೆಗೆ ಸಾನ್ಸನ್ ನೋಡಿದ ಯುವತಿಯರಲ್ಲೇ ಅವಳು ಪರಮ ಸುಂದರಿ. ಕಾಲೇಜು ಸಮಯದಲ್ಲಿ ಅವರಿಬ್ಬರು  ಜೊತೆಗೆ ಇನ್ನೂ ನಾಲ್ಕು ಹುಡುಗಿಯರು  ಒಂದೇ ಹಾಸ್ಟೆಲಿನಲ್ಲಿ  ವಾಸವಾಗಿದ್ದರೂ  ಸಹ ಮೊದಲ ವರ್ಷದಲ್ಲಿ ಅವರಿಬ್ಬರ ನಡುವೆ ಅಂತಹ ಸ್ನೇಹವೇನು ಇರಲಿಲ್ಲ. ಮಿನ್ , ದೊಡ್ಡ ನಗರದಿಂದ ಬಂದವಳು. ಎಲ್ಲರೊಟ್ಟಿಗೆ ಮುಕ್ತವಾಗಿ  ಬೆರೆಯುವವಳು. ಬಯಸಿದ್ದನ್ನು ದಕ್ಕಿಸಿಕೊಳ್ಳುವ ಛಾತಿಯಿರುವಂತವಳು. ಸಾನ್ಸನ್ ಹಾಗಲ್ಲ ಸಣ್ಣ ಪಟ್ಟಣದದಿಂದ ಬಂದವಳು, ಸಾಧಾರಣ ರೂಪು. ಹೀಗಾಗಿ ಅವರಿಬ್ಬರೂ ಸ್ನೇಹಿತೆಯರಾಗುವದಕ್ಕೆ ಯಾವುದೇ ಕಾರಣಗಳಿರಲಿಲ್ಲ.

ಕಾಲೇಜಿನಲ್ಲಿ ಮೊದಲ ವರ್ಷ  ಕೊನೆ ಸಮೀಪಿಸಿದಾಗ  ತಿಯಾನಮೆನ್ ಚೌಕದಲ್ಲಿ ನಡೆದ ಘಟನೆಯಿಂದ  ಅವರ ಕಾಲೇಜಿನ ದೈನಂದಿನ ತರಗತಿಗಳು  ಭಂಗಗೊಂಡಿದ್ದವು.  ಮಿನ್, ಚೌಕದಲ್ಲಿ ನಡೆಯುವ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಳು. ಅವಳನ್ನು ಮಿಸ್ ತಿಯಾನಮೆನ್ ಎಂದು ಕಾಲೇಜಿನ ಹುಡುಗರು ಘೋಷಿಸಿದ್ದರು.  ಸ್ವಾತಂತ್ರ್ಯ ದೇವತೆಯ ಚಿತ್ರವಿರುವ ಟೀ ಶರ್ಟ್ ಧರಿಸಿಕೊಂಡು ಅವಳು ಪಾಶ್ಚಿಮಾತ್ಯ ವರದಿಗಾರರ ಕಡೆಗೆ ವಿಜಯದ ಸಂಕೇತ ಬೀರುವ ಪೋಸನ್ನು ಕೊಟ್ಟಿದ್ದಳು. ಆದರೆ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಿದ ನಂತರ ಮಿನ್ ಕಷ್ಟಕರ ದಿನಗಳನ್ನು ಎದುರಿಸಬೇಕಾಯಿತು. ಅವಳನ್ನು ಆಗಾಗ ತಪಾಸಣೆಗೆ ಕರೆಯುತ್ತಿದ್ದರು. ಅವಳನ್ನು ಜೈಲಿಗೆ ಹಾಕದಿದ್ದರೂ  ಸರ್ಕಾರ  ಕಾಲೇಜಿನ ನಂತರ  ಯಾವುದೇ ಕೆಲಸಕ್ಕೂ  ಕಾನೂನು ಪ್ರಕಾರ  ಅನರ್ಹಳು  ಎಂದು ಘೋಷಿಸಿತ್ತು. ಇವೆಲ್ಲ ಘಟನೆಗಳು ಮುಗಿದ ನಂತರ ಮಿನ್ ಮತ್ತೆ ಕಾಲೇಜಿಗೆ  ಮೊದಲಿನಂತೆ ಸುಂದರವಾಗಿ ಆದರೆ ಖಿನ್ನಳಾಗಿ , ಸೋತವಳಾಗಿ   ಮರಳಿದ್ದಳು. ಇಡೀ ಹಾಸ್ಟೆಲಿನಲ್ಲಿ ಸಾನ್ಸನ್ ಮಾತ್ರ ಅವಳನ್ನು ಮತ್ತೆ ಮಾತನಾಡಿಸುವ ಧೈರ್ಯ ತೋರಿದ್ದವಳು.  ಪ್ರತಿಭಟನೆಯಲ್ಲಿ ಭಾಗವಹಿಸದ ಕೆಲವೇ ಕೆಲವರಲ್ಲಿ ಸಾನ್ಸನ್  ಕೂಡ ಒಬ್ಬಳಾಗಿದ್ದಳು.  ಸಹಪಾಠಿಗಳೆಲ್ಲ ಪ್ರತಿಭಟನೆಯಲ್ಲಿ ತೊಡಗಿದ್ದರೂ ಸಾನ್ಸನ್  ಮತ್ತು ತ್ಸು ಮಾತ್ರ  ತರಗತಿಗೆ ಹಾಜರಾಗುತ್ತಿದ್ದರು. ಮುಂದೆ ಅಧ್ಯಾಪಕರೂ ತರಗತಿಗೆ ಬರುವದನ್ನು ನಿಲ್ಲಿಸಿದರು.  ಬಹುಶ: ಇದೆ ಸಮಯದಲ್ಲಿ ಇರಬೇಕು , ಅವರ ತಂದೆ ತಾಯಿ ಅಷ್ಟೇಕೆ  ಅವರ ಇಡೀ  ಪಟ್ಟಣವೇ ಇದನ್ನು ನಿರೀಕ್ಷಿಸಿದಂತೆ ಸಾನ್ಸನ್ ಮತ್ತು ತ್ಸು ನಡುವೆ ಪ್ರೀತಿ ಮೊಳೆತಿದ್ದುದು.

ಸಾನ್ಸ್ನನ್ ಗೆ ತಾನು ಮಿನ್ ಜೊತೆಗೆ ಸ್ನೇಹಭಾವದಿಂದ ವರ್ತಿಸಿದ್ದು ಘನ ಕಾರ್ಯವೆಂದು  ಯಾವತ್ತೂ ಅನಿಸಿರಲಿಲ್ಲ. ಅದು ಇನ್ನೊಬ್ಬರಿಗೆ ತಾನು ತೋರಿಸಬಹುದಾದ ಅನುಕಂಪ ಅಷ್ಟೇ.  ಆದರೆ ಅವಳ   ನಿರೀಕ್ಷೆಗೂ ಮೀರಿ ಮಿನ್ ಹತ್ತಿರವಾಗತೊಡಗಿದ್ದಳು. ಮೊದಮೊದಲು ಸಾನ್ಸನ್ ಗೆ ಕಸಿವಿಸಿಯಾಗುತ್ತಿತ್ತು.  ಇವೆಲ್ಲ ಘಟನೆ ನಡೆಯದಿರುತ್ತಿದ್ದರೆ ತಾನು ಮತ್ತು ಮಿನ್  ಸ್ನೇಹಿತೆಯರಾಗಿರುತ್ತಿರಲಿಲ್ಲ. ಹೀಗಾಗಿ ತಾನು ಪರಿಸ್ಥಿತಿಯ ಉಪಯೋಗ ಪಡೆದುಕೊಂಡೆ ಎನ್ನುವ ಭಾವ ಆಗಾಗ ಕಾಡುತ್ತಿತ್ತು.  ಆದರೆ ಹೀಗಾಗಬೇಕು ಎನ್ನುವದೇ ಪೂರ್ವನಿರ್ಧಾರಿತವಾಗಿದ್ದರೆ ಅವಳು ತಾನೇ ಏನು ಮಾಡಿಯಾಳು.?

ಕಾಲೇಜಿನಲ್ಲಿ ಅವರು ಅಂತಿಮ ವರ್ಷದಲ್ಲಿದ್ದಾಗ ಸರ್ಕಾರ ಒಂದು ವಿಚಿತ್ರ ನಿಯಮಾವಳಿಯನ್ನು ಘೋಷಿಸಿತು . ಅದರಂತೆ ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ಮಾಡಬೇಕಾದರೆ ಅಂತಹ ವಿದ್ಯಾರ್ಥಿಗಳ ಯಾರಾದರೊಬ್ಬರು ಸಂಬಂಧಿಕರು ಈ  ಮೊದಲೇ  ಅಮೇರಿಕಾದಲ್ಲಿ ನೆಲೆಸಿರಬೇಕು. ತಲೆ ಬುಡವಿಲ್ಲದ ಈ ನಿಯಮಕ್ಕೆ ಯಾವುದೇ ತಾರ್ಕಿಕ ಹಿನ್ನೆಲೆ ಇಲ್ಲದಿದ್ದರೂ ಸರ್ಕಾರಿ ನಿಯಮ ಎಂದ ಮೇಲೆ ಪಾಲಿಸಲೇಬೇಕು. ಅಮೆರಿಕಾಗೆ  ಓದಲು ಹೋಗಬೇಕು ಎನ್ನುವ ಮಿನ್  ಳ ಕನಸು  ಕ್ಷಣ ಮಾತ್ರದಲ್ಲಿ ನುಚ್ಚು ನೂರಾಯಿತು.  ಮಿನ್ ಳ ವಿಷಾದ ತುಂಬಿದ ಮುಖ ನೋಡಿ ಹೇಗಾದರೂ ಮಾಡಿ ಈ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಸಾನ್ಸನ್ ನಿರ್ಧರಿಸಿದಳು.

"ನಿನಗೇನು ತಲೆ ಕೆಟ್ಟಿದೆಯಾ ?"  ಸಾನ್ಸನ್ ತನ್ನ ಯೋಜನೆಯನ್ನು  ವಿವರಿಸಿದಾಗ ತ್ಸು  ಉದ್ಗರಿಸಿದ. ಅವಳ ಯೋಜನೆಯಂತೆ ತ್ಸು ಮೊದಲು ಅಮೇರಿಕಾದ ಯೂನಿವರ್ಸಿಟಿಗೆ ಅರ್ಜಿ ಹಾಕಿ ಸೇರುವದು ನಂತರ ತನ್ನ ಹೆಂಡತಿ ಎಂದು ಮಿನ್ ಳನ್ನು ಕರೆಯಿಸಿಕೊಳ್ಳುವದು.
 " ನನಗೆ ಅಮೇರಿಕಾದಲ್ಲಿ ಯಾವ ಸಂಬಂಧಿಕರೂ ಇಲ್ಲ" ತ್ಸು  ವಾದಿಸಿದ.
"ನಿನ್ನ ಅಜ್ಜನ ತಮ್ಮ ಯುದ್ಧದ ನಂತರ  ತೈವಾನ್ ಗೆ ಹೋಗಿಲ್ಲವೇ ? ಬಹುಶ: ಅವನು ಅಲ್ಲಿಂದ ಅಮೆರಿಕಾಕ್ಕೆ ಹೋಗಿರಬಹುದು. ಇಲ್ಲಿ ಕೇಳು , ಯಾವ ಸರ್ಕಾರಿ ಅಧಿಕಾರಿಯೂ ಅಮೆರಿಕಾಗೆ ಬಂದು ನಿನ್ನ ಸಂಬಂಧಿಕರು ಇದ್ದಾರೆಯೇ ಎಂದು ತಪಾಸಣೆ ಮಾಡುವದಿಲ್ಲ. ನಿನ್ನ ಅಜ್ಜನ ತಮ್ಮ ಅಮೇರಿಕಾದಲ್ಲಿ ಇದ್ದಾನೆ ಎನ್ನುವ ಒಂದು ಸರ್ಟಿಫಿಕೇಟ್ ಸಿಕ್ಕಿದರೆ ಸಾಕು . . "
"ಯಾರು ಅಂಥ ಸರ್ಟಿಫಿಕೇಟ್ ಕೊಡುತ್ತಾರೆ ?"
"ಆ ಕೆಲಸ ನನಗೆ ಬಿಡು. ನೀನು ಯೂನಿವರ್ಸಿಟಿಗೆ ಅರ್ಜಿ ಹಾಕುವದನ್ನು ಯೋಚಿಸು. " ಅವಳು ತ್ಸುನ ಕಣ್ಣಿನಲ್ಲಿ ಹಿಂಜರಿತವನ್ನು ಅದರ ಹಿಂದೆಯೇ  ಮಿಂಚಿನಂತೆ ಹಾದು  ಹೋದ ಭರವಸೆಯನ್ನು ಗಮನಿಸದಳು. "ನಿನಗೆ ಅಮೆರಿಕಾಗೆ ಹೋಗಬೇಕು ಎನ್ನುವ ಕನಸಿಲ್ಲವೇ? ಅಲ್ಲಿ ಚೆನ್ನಾಗಿ ಓದಿದರೆ ಇಲ್ಲಿನಂತೆ ಯಾವುದೋ ಬೇಜಾರಿನ  ಕೆಲಸವನ್ನು ಮಾಡುತ್ತಾ ಕಷ್ಟ ಪಡುವ ಅಗತ್ಯವಿಲ್ಲ. ಅಲ್ಲಿ ಯಾರೂ ನೀನು  ಸಣ್ಣ ಹಳ್ಳಿಯಿಂದ ಬಂದವನು, ಚಿಕ್ಕ ಪಟ್ಟಣದವನು ಎಂದು ಅಳೆಯುವದಿಲ್ಲ. "
"ಆದರೆ ಮಿನ್ ಳನ್ನು ಮದುವೆಯಾಗುವದು ಎಂದರೆ ?"
"ಯಾಕಿಲ್ಲ?" ಸಾನ್ಸನ್ ನುಡಿದಳು "ನೋಡು ನಾವು  ಇಬ್ಬರಿದ್ದೇವೆ. ನಿನಗೆ ನಾನು ನನಗೆ ನೀನು. ಅವಳಿಗೆ  ಯಾರೂ ಇಲ್ಲ.  ಅವಳ ಸಿಟಿ ಸ್ನೇಹಿತರೆಲ್ಲ  ಅವಳ ಕಷ್ಟಕಾಲದಲ್ಲಿ ದೂರವಾಗಿದ್ದಾರೆ.  ಅಲ್ಲದೆ ಇದು  ತಾತ್ಕಾಲಿಕ  ಅಷ್ಟೇ.
ತ್ಸು ಅವಳು ಹೇಳಿದಂತೆ ಪಾಲಿಸಲು ನಿರ್ಧರಿಸಿದ. ಸಾನ್ಸನ್ ಅವನನ್ನು ಇಷ್ಟಪಡಲು ಇದೂ ಒಂದು ಕಾರಣ - ಅವನಿಗೆ  ತನಗಿಂತ ಹೆಚ್ಚಾಗಿ ಸಾನ್ಸನ್ ಳ  ನಿರ್ಧಾರದ ಮೇಲೆ  ಯಾವಾಗಲೂ ಹೆಚ್ಚು ನಂಬಿಕೆ.  ಸಾನ್ಸನ್ ಳಿಗೆ  ಮಿನ್ ಳನ್ನು ಒಪ್ಪಿಸುವದು ಕಷ್ಟವಾಗಲಿಲ್ಲ.  ಹೇಗಿದ್ದರೂ ಅಮೇರಿಕ ಸೇರಬೇಕು  ಎನ್ನುವದು ಮೂವರ ಕನಸಾಗಿತ್ತು. ಅವಳು ತನ್ನ ಊರಿಗೆ ಹೋಗಿ ಲಂಚ ಕೊಟ್ಟು , ಕಾಡಿ ಬೇಡಿ ತ್ಸು ನ ಅಜ್ಜನ ತಮ್ಮ ಅಮೇರಿಕಾದಲ್ಲಿ ಇದ್ದಾನೆ ಎನ್ನುವದನ್ನು ದೃಢಪಡಿಸುವ  ಹಾಗೆ ಒಂದು ಸರ್ಟಿಫಿಕೇಟ್ ತಂದು ಕೊಟ್ಟಳು.  ಯಾವುದೇ ಅಡಚಣೆ ಇಲ್ಲದೆ ಅವರ ಎಲ್ಲ ಯೋಜನೆಗಳು ಪೂರ್ಣಗೊಂಡವು. ಪೆನ್ಸಿಲ್ವೇನಿಯಾದ ಕಾಲೇಜೊಂದರಲ್ಲಿ ತ್ಸು ಗೆ ಅಡ್ಮಿಷನ್ ಸಿಕ್ಕಿತು. ಕೆಲವೇ ದಿನಗಳಲ್ಲಿ ತ್ಸು ನ ಹೆಂಡತಿ ಎನ್ನುವ ಸರ್ಟಿಫಿಕೇಟಿನೊಡನೆ ಮಿನ್ ಹೊರಟಳು.  ಈ ಯೋಜನೆಯನ್ನು ಮತ್ತು ಇದರ ಅಡಿಪಾಯವಾಗಿ ನಿಂತಿದ್ದ ಪರಸ್ಪರರಲ್ಲಿದ್ದ ನಂಬಿಕೆಯನ್ನು ಇತರರಿಗೆ ವಿವರಿಸುವದು ಕಷ್ಟಕರವಾದ್ದರಿಂದ ಅವರು ಅದನ್ನು ಯಾರಿಗೂ ವಿವರಿಸುವ ಗೋಜಿಗೆ ಹೋಗಿಲ್ಲ.  ಈ ಪೂರ್ವನಿರ್ಧಾರಿತ ಯೋಜನೆ ಬೇರೆಡೆಗೆ ಸಾಗುವದು ಎನ್ನುವ ಯಾವ  ಸಂಶಯವೂ ಅವರಿಗೆ ಇರಲಿಲ್ಲ.  ಅವರ ಪರಸ್ಪರ ನಿರ್ಧರಿಸಿದಂತೆ   ಒಂದು ವರ್ಷವಾಗುವಷ್ಟರಲ್ಲಿ ಮಿನ್ ಬೇರೊಂದು ಕೆಲಸವನ್ನೋ , ಓದನ್ನೋ ನೋಡಿಕೊಳ್ಳುವದು; ತ್ಸು ಅವಳಿಗೆ ವಿಚ್ಛೇದನ ಕೊಡುವದು ಮತ್ತು ಅಲ್ಲಿಯವರೆಗೆ ಸಾನ್ಸನ ತ್ಸುಗಾಗಿ ಕಾಯುವದು .

ಅವರು ಅಮೆರಿಕಾಗೆ ತೆರಳುವ ಮೊದಲು ತಾನು ತ್ಸು ಜೊತೆಗೆ ದೈಹಿಕ ಸಂಪರ್ಕ ಬೆಳೆಸಬೇಕು ಎನ್ನುವ ವಿಚಾರ ಯಾವತ್ತೂ ಸಾನ್ಸನ್ ಳ ತಲೆಯಲ್ಲಿ ಬಂದಿರಲಿಲ್ಲ. ಹಾಗೆ ನೋಡಿದರೆ ಈ ವಿಷಯವಾಗಿ ತ್ಸುನನ್ನು  ಅವಳೇ ದೂರ ಇಟ್ಟಿದ್ದಳು. ಅವಳ ತಲೆಯಲ್ಲಿ ಯಾವತ್ತೋ   ಓದಿದ್ದ "ವುಮನ್ ಇನ್ ಲವ್ " ಪುಸ್ತಕದ ಸಾಲುಗಳು ಅಚ್ಚಳಿಯದಂತೆ ಕೂತಿದ್ದವು. ಪುಸ್ತಕದಲ್ಲಿ  ಹುಡುಗಿಯೊಬ್ಬಳು ಯುದ್ಧಕ್ಕೆ ಹೊರಟಿರುವ ತನ್ನ ಪ್ರಿಯಕರನ ಜೊತೆಗೆ ಮಲಗುವದನ್ನು ನಿರಾಕರಿಸುತ್ತಾಳೆ.  ಮುಂದೆ ಯುದ್ಧದಲ್ಲಿ  ಅವನು ಸಾವನ್ನು ಪ್ರತಿ ದಿನ ಎದುರು ನೋಡುತ್ತಿರವಾಗ  ಹಳೆಯ ನೆನಪಿನಿಂದಾಗಿ ದೇಹದ ಹಸಿವೆಯನ್ನು ತೀರಿಸಿಕೊಳ್ಳುವದು ಮಾತ್ರ  ಅವನ ಗುರಿಯಾಗಿಬಿಟ್ಟರೆ ಎನ್ನುವ ಭಯ ಅವಳನ್ನು ಕಾಡಿತ್ತು. ಆದರೆ ಈಗ ತ್ಸು ಹೊರಟಿರುವದು ಯುದ್ಧಕ್ಕಲ್ಲ. ಬದಲಾಗಿ ಸುಂದರ ಯುವತಿಯೊಟ್ಟಿಗೆ ಗಂಡನಂತೆ ವೈವಾಹಿಕ ಬದುಕನ್ನು ಬದುಕುತ್ತಿರುವ ನಾಟಕಕ್ಕೆ. ಗಂಡಸೊಬ್ಬನಿಗೆ ಅಪರಿಚಿತ ದೇಶದಲ್ಲಿ ಕೇವಲ ಒಂದು ರೂಮಿನ ಆಚೆಯಲ್ಲಿ ತನ್ನೊಟ್ಟಿಗೆ ಬದುಕುತ್ತಿರುವ , ತಿನ್ನುತ್ತಿರುವ , ಕುಡಿಯುತ್ತಿರುವ , ಮಲಗುತ್ತಿರುವ,  ಸುಂದರ ಯುವತಿಯೊಬ್ಬಳ ಮೇಲೆ ಪ್ರೇಮ ಅಥವಾ ಬಯಕೆ  ಹುಟ್ಟದಿರಲು ಸಾಧ್ಯವೇ?  ಪ್ರಶ್ನೆ ಯಾವತ್ತೂ ಉದ್ಭವವಾಗಿರಲಿಲ್ಲ.

ಮೊತ್ತ ಮೊದಲ ಬಾರಿಗೆ ಸಾನ್ಸನ್ ಳ ಕಣ್ಣು ಮುಂದೆ ತ್ಸು ಮತ್ತು ಮಿನ್  ದೇಹಗಳು ಒಂದಾದ ಹಾಗೆ ಕಾಣಿಸುವ ಚಿತ್ರಗಳು ಸುಳಿಯತೊಡಗಿದ್ದು , ತ್ಸು ಅವಳಿಗೆ ಒಂದು ಸಣ್ಣ ಪತ್ರದ  ಮುಖೇನ  ತಾನು ಮತ್ತು ಮಿನ್ ಗಂಡ ಹೆಂಡತಿಯರಾಗಿಯೇ ಮುಂದುವರೆಯಲು ನಿರ್ಧರಿಸಿದ್ದೇವೆ ಎಂದು ತಿಳಿಸಿದಾಗ.  ಅದೇ ಕೊನೆಯ ಪತ್ರ , ಅದಾದ ಮೇಲೆ ಅವಳಿಗೆ ಯಾರೂ ಪತ್ರ ಬರೆಯಲಿಲ್ಲ. ಸಿಗಲಾರದ ಉತ್ತರವೊಂದು ಸಿಗಬಹುದೇನೋ ಎನ್ನುವ ನಿರೀಕ್ಷೆಯಲ್ಲಿ,  ಅವಳ ಕಲ್ಪನೆಯಲ್ಲಿ  ಅವರಿಬ್ಬರನ್ನು ಬೆತ್ತಲೆಯಾಗಿ ಹಾಸಿಗೆಯ ಮೇಲೆ ಮಲಗಿಸಿ ಅವರ ಉನ್ಮತ್ತತೆಯನ್ನು ಅಳೆಯುವ ಪ್ರಯತ್ನ ಮಾಡಿದ್ದಳು.  ಮಿನ್ ಳ ನುಣುಪಾದ ಕೂದಲು ತ್ಸುನ ಬರಿ ದೇಹದ ಮೇಲೆಲ್ಲಾ ಹರಡಿರುವಂತೆ, ತ್ಸು ತನ್ನ ಮುಖವನ್ನು ಮಿನ್ ಳ ಎದೆಯಲ್ಲೂ ಹುದುಗಿಸಿರುವಂತೆ,  ಮಿನ್ ಳ ಎದೆಯತ್ತ    ಕುರೂಪಿಯಾದ ಹಂದಿಮರಿಯೊಂದು ನುಗ್ಗುತ್ತಿರುವಂತೆ  ಭಾಸವಾಗಿ ಅವಳು ಬೆಚ್ಚಿ ಬಿದ್ದಳು. ಅವಳು ಹೆಚ್ಚು ಹೆಚ್ಚು ಯೋಚಿಸಿದಂತೆಲ್ಲ ಅವರಿಬ್ಬರೂ ಇನ್ನೂ ಅಸಂಗತವಾಗಿ ತೋರುತ್ತಿದ್ದರು.  ಬಹುಶ: ಇದು ತಪ್ಪೇನೋ , ಆದರೆ ಮಿನ್ ಳ ಅಸಾಧಾರಣ ರೂಪಿಗೂ , ತ್ಸು ನ ಸಾಧಾರಣ ಮೈಕಟ್ಟಿಗೂ ತಾಳಮೇಳವಿರಲಿಲ್ಲ. ಅವರಿಬ್ಬರೂ ಪರಸ್ಪರರನ್ನು ಇಷ್ಟಪಟ್ಟಾರು ಎನ್ನುವ ಸಣ್ಣ ಸಂಶಯ ಸವ ಅವಳಿಗೆ ಯಾವತ್ತೂ ಇರಲಿಲ್ಲ.  ಮಿನ್ ಅತ್ಯಂತ ಆಕರ್ಷಕ ಯುವತಿ.  ಅವಳಿಗೆ ಹೋಲಿಸಿದರೆ ದೊಡ್ಡ ತಲೆಯ, ಬಡಕಲು ಮೈಕಟ್ಟಿನ ತ್ಸು ಯಾವ ಕಾರಣಕ್ಕೂ ತಾಳೆಯಾಗಲಾರ.    ಅವಳಿಗೆ ತನ್ನ ಮತ್ತು ತ್ಸು ನ ನಡುವಿನ ಪ್ರೀತಿಯಲ್ಲಿ ಅಗಾಧ ನಂಬಿಕೆಯಿತ್ತು ಮತ್ತು ತಮ್ಮಿಬ್ಬರ ಸ್ನೇಹಿತೆಯ ಬದುಕನ್ನು ರೂಪಿಸಲು ತಾವಿಬ್ಬರು ಮಾಡಬೇಕಿರುವ ತಾತ್ಕಾಲಿಕ ತ್ಯಾಗದ ಕುರಿತಾಗಿಯೂ ಅರಿವಿತ್ತು. ಆದರೆ ಬದುಕಿನ ವಿವರಿಸಲಾಗದ ಯಾವುದೋ ತಿರುವಿನಲ್ಲಿ ತ್ಸು ಮತ್ತು ಮಿನ್  ಈಗ ಪರಸ್ಪರರನ್ನು ಪ್ರೀತಿಸುತ್ತಿದ್ದರು ಮತ್ತು ಸಾನ್ಸನ್ ಳ ಕಲ್ಪನೆಯಲ್ಲಿ ಈಗ ತಾಳಮೇಳವಿಲ್ಲದ ದೈಹಿಕ ಸುಖವನ್ನು ಅವರು ಅನುಭವಿಸಲು ಪ್ರಯತ್ನಿಸುತ್ತಿದ್ದರು. ಕೆಲವೊಮ್ಮೆ ಅವಳು ಮಿನ್  ಸ್ಥಾನದಲ್ಲಿ ತನ್ನನ್ನು ಊಹಿಸಿಕೊಳ್ಳುತ್ತಿದ್ದಳು. ಅವಳ ಕಲ್ಪನೆಯಲ್ಲಿ ಅವಳು ಮತ್ತು ತ್ಸು ಒಬ್ಬರೊಬ್ಬರಿಗೆ ಹೇಳಿ ಮಾಡಿಸಿದ ಜೋಡಿಯಾಗಿದ್ದರು. ಬಾಲ್ಯದಿಂದಲೂ ತ್ಸು ಮತ್ತು ಸಾನ್ಸನ್ ಆಡುತ್ತ ಬೆಳೆದವರು. ಅವಳ ಅಮ್ಮನ ಟೀ ಗಾಡಿಯ ಪಕ್ಕದಲ್ಲೇ ತ್ಸು ನ ಅಪ್ಪನ ಹಣ್ಣಿನ ಗಾಡಿಯಿತ್ತು. ಪ್ರತಿ ಬಾರಿಯೂ ಕಲ್ಪನೆಯಲ್ಲಿ ಅವನೊಟ್ಟಿಗೆ ಅತ್ಯ೦ತ ಸುಂದರ ಕ್ಷಣಗಳನ್ನು ಕಳೆದ ಅವಳು ಕಲ್ಪನೆಯಿಂದ ಹೊರ ಬಂದಾಗ ನೋವಿನಿಂದ ತತ್ತರಿಸುತ್ತಿದ್ದಳು.

ಬೆಂಬಿಡದೆ ಕಾಡುವ ಈ ಕಲ್ಪನೆಗಳಿಂದ ತಪ್ಪಿಸಿಕೊಳ್ಳುವದಕ್ಕೋಸ್ಕರ   ಸಾನ್ಸನ್ ಸೂರ್ಯಕಾಂತಿ ಬೀಜವನ್ನು ತಿನ್ನಲು ಶುರುಮಾಡಿದ್ದಳು.  ಪ್ರತಿ ರಾತ್ರಿಯೂ ತಾಸುಗಟ್ಟಲೆ ಒಬ್ಬಳೇ ಕುಳಿತು ಮೌನವಾಗಿ ಒಂದೊಂದಾಗಿ ಸೂರ್ಯಕಾಂತಿ ಬೀಜದ ಸಿಪ್ಪೆ ತೆಗೆಯುತ್ತಿದ್ದಳು. ಮರುದಿನ ಎದ್ದ ಮೇಲೂ ಅವಳು ಮಾಡುತ್ತಿದ್ದ ಮೊದಲ ಕೆಲಸವೆಂದರೆ ಸೂರ್ಯಕಾಂತಿ ಬೀಜವಿರುವ ಡಬ್ಬಿಗೆ  ಕೈ ಹಾಕುವದು.  ಸೂರ್ಯಕಾಂತಿ ಬೀಜದ ಸಿಪ್ಪೆಯೊಡೆಯುವಾಗಿನ ಶಬ್ದ ಅವಳ ಕಿವಿಯನ್ನು ಹಾದು  ಮೆದುಳಿಗೆ ತಲುಪಿದಾಗ ಅವಳ ಕಲ್ಪನೆಗಳು ಸಾವಕಾಶವಾಗಿ  ಕರಗಿ ತ್ಸು ಮತ್ತು ಮಿನ್ ಳ ಬೆತ್ತಲೆ ಮೈಗೆ ಒಂದೊಂದಾಗಿ ಬಟ್ಟೆಗಳು ಮರಳಿ ಬರುತ್ತಿದ್ದವು ಮತ್ತು  ಅವರಿಬ್ಬರೂ ಅವಳಿಗೆ ಕೊಟ್ಟ ಮಾತನ್ನು ಮುರಿದಿದ್ದಾರೆ ಎನ್ನುವ ಸದಾಕಾಲದ ನೋವು ಅರ್ಥವನ್ನು ಕಳೆದುಕೊಳ್ಳುತ್ತಿತ್ತು.  ಸಾನ್ಸನ್ ಳ ಬಳಿಗೆ ಮರಳಿ ಬರುವದರ ಬಗ್ಗೆ ಅವಳಿಗೆ ಕೊಟ್ಟ ಭಾಷೆಯೊಂದಲೇ ಅಲ್ಲ , ಅವರಿಬ್ಬರೂ ಪರಸ್ಪರಿಗೆ ಹಾಕಿಕೊಂಡ ಆಣೆಗೆ ಈಗಲೂ ಅರ್ಥವಿದೆಯೇ ಎಂದು ಅವಳು ಯೋಚಿಸುತ್ತಿದ್ದಳು. ಅವರಿಬ್ಬರನ್ನೂ ಗಂಡ ಹೆಂಡತಿಯರನ್ನಾಗಿ ಮಾಡಿದ್ದು ತಾನೇ ಅಲ್ಲವೇ ? ಈಗ ಅವರಿಗೆ ಶಾಪ ಹಾಕುತ್ತಿರುವದು ತಾನೇ. ಕೈ ಮತ್ತೆ ಸೂರ್ಯಕಾಂತಿ ಬೀಜದತ್ತ ಚಾಚುತ್ತಿದ್ದವು.

ಇಷ್ಟೆಲ್ಲ ನಡೆದು ಹತ್ತು ವರ್ಷಗಳಾದ ಮೇಲೆ ಅವರಿಬ್ಬರೂ ವಿಚ್ಛೇದನ ಪಡೆಯಲು ಕಾರಣಗಳೇನಿರಬಹುದು?  ಹತ್ತು ವರ್ಷಗಳಲ್ಲಿ ಅವರಿಗೆ ಒಮ್ಮೆಯೂ ತನ್ನ  ಬಗ್ಗೆ ಅರಿವಾಗಲೇ ಇಲ್ಲವೇ ?

ಸೂರ್ಯಕಾಂತಿ ಬೀಜಗಳೆಲ್ಲ ಖಾಲಿಯಾದ ಮೇಲೆ ಅವಳು ಅಮ್ಮನನ್ನು ಭೇಟಿಯಾಗಿ ತ್ಸು ನ ಡೈವೋರ್ಸ್ ಬಗ್ಗೆ ಕೇಳಲು ನಿರ್ಧರಿಸಿದಳು.  ರೈಲು  ನಿಲ್ದಾಣದ ಬಳಿಯಿರುವ ಮಾರ್ಕೆಟ್ ಸಂಪೂರ್ಣ ನಗರಕ್ಕೆ ಒಂದೇ ಒಂದು  ಮಾರ್ಕೆಟ್. ಬೀಜಿಂಗ್ ಕಡೆಯಿಂದ ದಕ್ಷಿಣಕ್ಕೆ ಹೊರಡುವ ರೈಲುಗಳು ಕೆಲವೊಮ್ಮೆ ಇಲ್ಲಿ ಹತ್ತು ನಿಮಿಷ ನಿಲ್ಲುತ್ತವೆ. ಈ ಕ್ಷಣಕ್ಕಾಗಿಯೇ. ಆಸುಪಾಸಿನ ಬಹುತೇಕ ವ್ಯಾಪಾರಿಗಳು ಕಾಯುತ್ತಿದ್ದರು.  

ಸಾನ್ಸನ್ ಬಂದಾಗ ಆಗ ತಾನೇ ಮಧ್ಯಾಹ್ನದ ರೈಲು ಬಂದು ನಿಂತಿತ್ತು. ಕೆಲ ಜನರು ಮೈ ಮುರಿಯುತ್ತ ಹೊರ ಬಂದರು. ನಂತರ ಇನ್ನಷ್ಟು ಜನ. ಸಾನ್ಸನ್ ಅವಳಮ್ಮನನ್ನು ಗಮನಿಸುತ್ತಾ ನಿ೦ತಳು - ಗಾಡಿಯ ಮೇಲಿದ್ದ ಪಾತ್ರೆಯನ್ನು ಬಡಿಯುತ್ತ  ಅವಳ ಅಮ್ಮ "ಬನ್ನಿ, ಬನ್ನಿ.  ಬಿಸಿ, ಬಿಸಿ ಮೊಟ್ಟೆ , ಜಗತ್ತಿನ ಅತ್ಯಂತ  ರುಚಿ, ರುಚಿ ಮೊಟ್ಟೆ " ಕೂಗುತ್ತಿದ್ದಳು.

ಒಬ್ಬಳು ಹೆಂಗಸು ಗಾಡಿಯ ಬಳಿ ಬಂದು ನಿಂತು ಪಾತ್ರೆಯ ಮುಚ್ಚಳ ತೆಗೆದು ನೋಡಿದಳು. . ಅವಳೊಟ್ಟಿಗಿರುವ ಮಗು ಪಾತ್ರೆಯೊಳಗಿದ್ದ ದೊಡ್ಡ ಮೊಟ್ಟೆಯತ್ತ ಕೈ ತೋರಿಸಿತು. ಟೀ ಎಲೆ, ಮಸಾಲೆ  ಮತ್ತು ಸೋಯಾ ಸಾಸ್ ಪರಿಮಳಕ್ಕೆ ಇನ್ನಷ್ಟು ಜನ ಮೂಗರಳಿಸಿದರು. ಕೆಲವರು ಹತ್ತಿರ ಬಂದು ಕೊಳ್ಳುತ್ತಿದ್ದರು , ಇನ್ನು ಕೆಲವರು ಜಗತ್ತಿನ ಅತ್ಯಂತ ರುಚಿಕರವಾದ  ಮೊಟ್ಟೆಯನ್ನು  ತಿನ್ನುವ ಅವಕಾಶವನ್ನು ಬಿಡುತ್ತಿದ್ದೇವೆ ಎಂದು ಅರಿಯದೆಯೇ ಇನ್ನಿತರ ಮೊಟ್ಟೆ ವ್ಯಾಪಾರಿಗಳ ಬಳಿ ಸಾಗುತ್ತಿದ್ದರು.  ಸಾನ್ಸನ್ ಚಿಕ್ಕವಳಿದ್ದಾಗ ಅವಳಮ್ಮನ ಬಳಿ ಮೊಟ್ಟೆ ಕೊಳ್ಳದವರನ್ನು ನೋಡಿದಾಗ  ಅವಳಿಗೆ  ಅಸಾಧ್ಯ ಕೋಪ ಬರುತ್ತಿತ್ತು - ಬೇರೆ ಅಂಗಡಿಯವರು ಜಿಪುಣರು - ಅವಳ ಅಮ್ಮನಂತೆ ಟೀ ಗೆ ಸಾಕಷ್ಟು  ಎಲೆಯನ್ನು ಮತ್ತು ಮೊಟ್ಟೆಗೆ ಮಸಾಲೆ ಪದಾರ್ಥ ಹಾಕುತ್ತಿರಲಿಲ್ಲ. ಆದರೆ ಸಾನ್ಸನ್ ದೊಡ್ಡವಳಾದಂತೆಲ್ಲ ಅವಳ  ಕೋಪ ಕ್ರಮೇಣ ಅವಳಮ್ಮನ ಕಡೆಗೆ ತಿರುಗಿತ್ತು. ಅವಳಮ್ಮನ ಬಳಿ ಮೊಟ್ಟೆ ಕೊಳ್ಳುತ್ತಿದ್ದ ಆ ಎಲ್ಲ ಅಪರಿಚಿತ ಪ್ರಯಾಣಿಕರು ಬಹುತೇಕ  ಯಾವತ್ತೂ ಮರಳಿ ಬರುತ್ತಿರಲಿಲ್ಲ. ಅವಳಮ್ಮನನ್ನಾಗಲಿ ಮೊಟ್ಟೆಯನ್ನಾಗಲಿ ನೆನಪಿನಲ್ಲಿಟ್ಟುಕೊಳ್ಳುತ್ತಿರಲಿಲ್ಲ.  ಅವಳಮ್ಮ ಬೇರೆಲ್ಲರಿಗಿಂತ ಹೆಚ್ಚು ಖರ್ಚು ಮಾಡಿ ಟೀ ಎಲೆ, ಮಸಾಲೆ ಪದಾರ್ಥ ಮತ್ತು ಮೊಟ್ಟೆ ಕೊಳ್ಳುತ್ತಾಳೆ ಎನ್ನುವದನ್ನು ಅವರು ಯಾವತ್ತೂ ಗಮನಿಸುತ್ತಿರಲಿಲ್ಲ.

 
 ರೈಲು ಹೋದ ನಂತರ ಸಾನ್ಸನ್ ಒಂದು ಇಟ್ಟಿಗೆಯನ್ನು ಹುಡುಕಿ ಅಮ್ಮನ ಗಾಡಿಯ ಬಳಿ ಹಾಕಿಕೊಂಡು ಅದರ ಮೇಲೆ  ಕುಳಿತಳು. ಅವಳಮ್ಮ ಇನ್ನೊಂದಿಷ್ಟು ಮಸಾಲೆಯನ್ನು ಮತ್ತು ಮೊಟ್ಟೆಯನ್ನು ಪಾತ್ರೆಗೆ ಹಾಕುವದನ್ನು ಗಮನಿಸಿ . "ಇಷ್ಟೊಂದು ಬೆಲೆಯ ಮಸಾಲೆಯನ್ನು ಹೀಗೆ ಹಾಕುವದು ಸುಮ್ಮನೆ ದುಡ್ಡು ಖರ್ಚಿಗೆ ಅಲ್ಲವೇ ?"  ಎಂದು ಅಮ್ಮನನ್ನು ಪ್ರಶ್ನಿಸಿದಳು.
"ಮೊಟ್ಟೆಯನ್ನು ಹೇಗೆ ಬೇಯಿಸುವದು ಎಂದು ನೀನು ನನಗೆ ಉಪದೇಶ ಕೊಡಬೇಕಿಲ್ಲ. ಕಳೆದ ನಲವತ್ತು ವರ್ಷಗಳಿಂದ ನಾನು ಇದನ್ನೇ ಮಾಡುತ್ತಿರುವದು ಮತ್ತು ಇದೆ ಮೊಟ್ಟೆಯನ್ನು ನನಗೆ ತಿಳಿದ ಹಾಗೆ ಬೇಯಿಸುವ ಕೆಲಸದಿಂದ ನಿನ್ನನ್ನು ಬೆಳೆಸಿದ್ದು "
"ಹಾಗಲ್ಲ, ನಿನ್ನ ಮೊಟ್ಟೆ ಚೆನ್ನಾಗಿದೆ ಎಂದು ಜನಕ್ಕೆ ತಿಳಿದರೂ  ಅವರು  ಕೇವಲ ಮೊಟ್ಟೆಗೋಸ್ಕರ ಮರಳಿ ಇಲ್ಲಿಗೆ ಬರುವ ಸಂಭವ ಕಡಿಮೆ "
"ಅದಕ್ಕೆ  ಒಂದು ಸಲವಾದರೂ  ಅವರಿಗೆ ಜಗತ್ತಿನಲ್ಲೇ ಅತ್ಯಂತ ರುಚಿಯಾದ ಮೊಟ್ಟೆಯನ್ನು ಕೊಡುವ ತಿನ್ನಲು ಅವಕಾಶವೊಂದನ್ನು ಯಾಕೆ ಕೊಡಬಾರದು ?" ಅವಳಮ್ಮ ತುಸು ಗಟ್ಟಿಯಾಗಿಯೇ ನುಡಿದಳು. ಅಕ್ಕ ಪಕ್ಕದ ಕೆಲ ವ್ಯಾಪಾರಿಗಳು ಕಟ್ಟು  ತಿರುಗಿಸಿ, ಒಬ್ಬರೊಬ್ಬರಿಗೆ ಕಣ್ಣು ಹೊಡೆಯುತ್ತ  ಇವರನ್ನ  ನೋಡಿದರು. ಮಾರ್ಕೆಟಿನ ತುಂಬ ಕಣ್ಣು ಮತ್ತು ಕಿವಿಗಳೇ ತುಂಬಿದ್ದವು. ಬಹುಶ: ಸಂಜೆಯ ಹೊತ್ತಿಗೆ ಇಡೀ ಮಾರ್ಕೆಟಿಗೆ ಸಾನ್ಸನ್  ಮತ್ತು  ಅವಳಮ್ಮ ನಡುವೆ ವಾಗ್ವಾದ ನಡೆದಿದೆ ಎನ್ನುವದು ತಿಳಿಯುತ್ತದೆ.  ವಯಸ್ಸಾದ ಅಮ್ಮನಿಗೆ ಜೋರಾಗಿ ಮಾತನಾಡಿದ ಸಾನ್ಸನ್ ಬಗ್ಗೆ ಪ್ರತಿ ಮನೆಯಲ್ಲೂ ಚರ್ಚೆಯಾಗುತ್ತದೆ.  ಮಕ್ಕಳಿಗೆ ಅವಳಂತೆ ಆಗಬಾರದು ಎನ್ನುವ ಕಿವಿಮಾತು ಹೇಳಲಾಗುತ್ತದೆ.  ಅಮ್ಮನ ಮಾತನ್ನು ಕೇಳದ, ಅಮ್ಮನ ಜೊತೆಗೆ ಇರದೇ ಬೇರೆ ರೂಮು ಮಾಡಿಕೊಂಡಿರುವ ಅವಳ೦ತೆ  ಯಾವತ್ತೂ ವರ್ತಿಸಬಾರದು ಎಂದು ಹೇಳಲಾಗುತ್ತದೆ.

"ಅಮ್ಮ ನೀನ್ಯಾಕೆ ಈ ಕೆಲಸ  ಬಿಟ್ಟು ಆರಾಮವಾಗಿ ಇರಬಾರದು ?" ಸಾನ್ಸನ್ ತಗ್ಗಿದ ದನಿಯಲ್ಲಿ ಕೇಳಿದಳು.
"ನನಗೆ ಯಾರು ಊಟ ಹಾಕುತ್ತಾರೆ ? ವಯಸ್ಸಾದ ಬಡ ವಿಧವೆ "
"ನಾನು "
"ನೀನು? ನಿನಗೆ ನಿನ್ನನ್ನೇ ಹೇಗೆ  ನೋಡಿಕೊಳ್ಳುವದು ಎಂದು ಇನ್ನೂ ತಿಳಿದಿಲ್ಲ." ಅವಳಮ್ಮ ಹೇಳಿದಳು " ನಿನಗೆ ತ್ಸು ಥರ ಒಬ್ಬ ಜೊತೆಗಾರ ಬೇಕು "

ಸಾನ್ಸನ್ ನೆಲದ ಮೇಲೆ ಅಲುಗಾಡುತ್ತಿರುವ ತನ್ನ ನೆರಳನ್ನು ದಿಟ್ಟಿಸಿದಳು. ಅವಳ ಚಪ್ಪಲಿಯ ಬುಡದಲ್ಲಿ  ಮೊಟ್ಟೆಯ ಚಿಪ್ಪಿನ ಒಡಕಲುಗಳು ಅಲ್ಲಲ್ಲಿ ಬಿದ್ದಿದ್ದವು.  ಬಾಲ್ಯದಲ್ಲಿ ಅವಳು ಮತ್ತು  ಪಕ್ಕದ ಅಂಗಡಿಯಲ್ಲಿ ಹಣ್ಣುಗಳನ್ನು ಮಾರುವವನ ಮಗ ತ್ಸು ನ ಜೊತೆಗೆ ಆಟವಾಡಲು ಪ್ರಾರಂಭಿಸುವ ಮೊದಲು ಮೊಟ್ಟೆಯ ಚಿಪ್ಪುಗಳು ಮಾತ್ರ ಅವಳ ಆಟಿಕೆಯಾಗಿದ್ದವು.  ಈಗ ತ್ಸು ನ ಅಪ್ಪ ಅಮ್ಮ ನಿವೃತ್ತರಾಗಿದ್ದಾರೆ. ತ್ಸು ಅವರಿಗೆಂದು ಖರೀದಿಸಿಕೊಟ್ಟಿದ್ದ ಎರಡು ಬೆಡ್ರೂಮಿನ ದೊಡ್ಡ ಮನೆಯಲ್ಲಿದ್ದಾರೆ. ಈಗ ಪಕ್ಕದ ಅಂಗಡಿಯಲ್ಲಿ ಸಿಗರೇಟು ಮತ್ತು ಲೈಟರ್ ಮಾರಲಾಗುತ್ತದೆ. ಅಲ್ಲಿ ಸಿಗುವ  ಆಕರ್ಷಕ ಯುವತಿಯ ಚಿತ್ರವಿರುವ ಸಿಗರೇಟಿಗೆ ಉರಿ ತಾಕಿದ ತಕ್ಷಣ ಚಿತ್ರದಲ್ಲಿರುವ ಯುವತಿಯ ಬಟ್ಟೆಗಳು ಕ್ರಮೇಣ ಕರಗುತ್ತಿರುವಂತೆ ಭಾಸವಾಗುತ್ತಿತ್ತು.  ಕೆಲ ಕ್ಷಣಗಳ ನಂತರ ಅವಳು ಕೇಳಿದಳು " ತ್ಸು ನಿಗೆ ಏನಾಯಿತು ?"
"ಅವರ ಅಪ್ಪ ಅಮ್ಮ ನಿನ್ನೆ ಬಂದಿದ್ದರು. ನೀನು ಮರಳಿ ಅವನ ಜೊತೆಗೆ ಹೋಗುತ್ತೀಯಾ ಎಂದು ಕೇಳಿದರು "
"ಯಾಕೆ ?"
"ಗಂಡಸಿಗೆ ಹೆಂಗಸೊಬ್ಬಳು ಬೇಕು. ನಿನಗೆ ಒಬ್ಬ ಗಂಡ ಬೇಕು "
"ನಾನು  ಬೇಕಾದಾಗ ಬರುವ ಬದಲಿ ವಸ್ತುವಂತೆ  ಇರುವದೇನು ?"
"ಸುಮ್ಮನೆ ಹಠಮಾರಿಯಂತೆ ವರ್ತಿಸಬೇಡ ನೀನು ಚಿಕ್ಕವಳಲ್ಲ"
"ಅವನಿಗೆ ವಿಚ್ಚೇದನ ಯಾಕೆ ಆಯಿತಂತೆ ?"
"ಜನ ಮನಸ್ಸನ್ನು ಬದಲಿಸುತ್ತಾರೆ. ಸಾನ್ಸನ್, ನನ್ನನ್ನು ಕೇಳಿದರೆ ನೀನು ಯಾವ ಪ್ರಶ್ನೆ ಕೇಳದೆ ವಾಪಸು ಅವನ ಬಳಿ ಹೋಗುವದು  ಉತ್ತಮ "
"ಇದು ತ್ಸು ನ ಬಯಕೆಯಾ ಅಥವಾ ಅವನ ಅಪ್ಪ ಅಮ್ಮ ನ  ಐಡಿಯಾ?"
"ಯಾರದ್ದಾದರೇನು? ನೀನು ಒಪ್ಪಿದರೆ ಅವನು ನಿನ್ನನ್ನು ಮಾಡುವೆ ಆಗುತ್ತಾನೆ ಅಂಥ ಅವನ ಅಪ್ಪ ಅಮ್ಮ ಹೇಳಿದರು "
"ಅಂದರೆ ಪೂರ್ವ ನಿರ್ಧರಿತವಾದ ವಿವಾಹ "
"ಅಸಂಬದ್ಧ. ನೀನು ಅವನು ಇಬ್ಬರು ಜೊತೆಗೆ ಓಡಾಡಿಕೊಂಡು  ಬೆಳೆದಿದ್ದನ್ನು ನಾವೆಲ್ಲ ನೋಡಿದ್ದೇವೆ. " ಅಮ್ಮ ಹೇಳಿಳು "ಮದುವೆ ಆದ ಮೇಲೇ ಎಷ್ಟೊಂದು ಜನ ಪ್ರೀತಿಯಲ್ಲಿ ಬೀಳುವದು  "
ಕೊನೆಯ ವಾಕ್ಯವನ್ನು ಕೇಳಿ ಸಾನ್ಸನ್ ಳ  ಹೃದಯಕ್ಕೆ ಕುಟುಕಿದಂತಾಯಿತು. "ಇರಬಹುದು. ಆದರೆ ಆ ಥರದ ಪ್ರೀತಿ ನನಗೆ ಬೇಡ "
"ಹಾಗಾದ್ರೆ ಪ್ರೀತಿಯ ದೇವತೆಯಾದ ತಮಗೇನು ಬೇಕು? "
ಸಾನ್ಸನ್ ಉತ್ತರಿಸಲಿಲ್ಲ. ಪ್ರೀತಿಯೇನೆಂದರೆ ಒಬ್ಬ ಗಂಡಸನ್ನು ಕೇವಲ ಇಷ್ಟಪಡುವದಕ್ಕಿಂತ ಹೆಚ್ಚಿನದು.  ಮಾತು ಕೊಡುವದು ಎಂದರೆ ಏನು?  ಮಾತು ಕೊಡುವದು, ಉಳಿಸಿಕೊಳ್ಳುವದು  ಅಷ್ಟೇ.  ಕೊಟ್ಟ ಮಾತು, ಕೊಟ್ಟ ಮಾತಾಗಿಯೇ ಕೊನೆಯವರೆಗೂ ಪವಿತ್ರತೆಯನ್ನು ಉಳಿಸಿಕೊಂಡಿರುತ್ತದೆ . ಕಾಸಬ್ಲಾ೦ಕಾದ  ಮಹತ್ತರತೆಯೇ ಅದು. ಇಂತಹ ಅನುಭಾವದ ಪ್ರೀತಿ ಬದುಕನ್ನು ಅರ್ಥಪೂರ್ಣವಾಗಿ ಮಾಡುವದಲ್ಲವೇ? ಅವಳು ಮಿಸುಕಾಡಿದಳು.

ಬಹಳ ಹೊತ್ತಿನ ತನಕ ಇಬ್ಬರೂ  ಮಾತನಾಡಲಿಲ್ಲ. ಅವಳಮ್ಮ ಮೊಟ್ಟೆಯನ್ನು ತೆಗೆದುಕೊಂಡು ಚಮಚದಿಂದ ಅದರ ಚಿಪ್ಪನ್ನು ಸಾವಕಾಶವಾಗಿ ಒಡೆಯುವದನ್ನು ಗಮನಿಸಿದಳು. ಸಣ್ಣಗೆ ಬಿರುಕು ಬಿಟ್ಟ  ಒಡೆದ ಮೊಟ್ಟೆಯೊಳಗೆ ಮಸಾಲೆ ಪದಾರ್ಥಗಳು ತುಂಬಿಕೊಳ್ಳುತ್ತಿದ್ದವು. ಅದಾದ ಮೇಲೆ ಅವಳಮ್ಮ ಒಂದು ಮೊಟ್ಟೆಯನ್ನು ತೆಗೆದು ಮೌನವಾಗಿ  ಮಗಳಿಗೆ ಕೊಟ್ಟಳು. ಮೊಟ್ಟೆ ಬಿಸಿಯಾಗಿತ್ತು. ಆದರೆ ಸಾನ್ಸನ್ ಅದನ್ನು ಕೆಳಗಿಡಲಿಲ್ಲ.  ಸುಡುತ್ತಿರುವ ಚರ್ಮವನ್ನು ಸಹಿಸಿಕೊಳ್ಳುತ್ತ,   ಒಡೆದ ಚಿಪ್ಪಿನೊಳಗಿನಿಂದ  ದಟ್ಟನೆಯ ಮಸಾಲೆ  ಮತ್ತು  ಸೋಯಾ ಸಾಸ್  ಮೊಟ್ಟೆಯೊಳಗೆ ತೂರಿ   ನೋಡಿದಾಗ  ಭವಿಷ್ಯ ಹೇಳುವ ಒಡಕಲು ಚಿಪ್ಪಿನ  ಪುರಾತನ ಆಮೆಯಂತೆ  ಭಾಸವಾಗುತ್ತಿತ್ತು. ಅವಳು ಚಿಕ್ಕವಳಿದ್ದಾಗ ಒಂದು ಮೊಟ್ಟೆಯನ್ನು ಪಡೆಯಲು  ಅಮ್ಮನ ಬಳಿ ಘ೦ಟೆಗಟ್ಟಲೆ ಬೇಡಬೇಕಿತ್ತು. ಆದರೆ ತ್ಸು ಜೊತೆಗಿದ್ದಾಗಲೆಲ್ಲ ಅವರಮ್ಮ ಯಾವುದೇ ಹಿಂಜರಿಕೆಯಿಲ್ಲದೆ ತಕ್ಷಣ ಇಬ್ಬರಿಗೂ ಒಂದೊಂದು ಮೊಟ್ಟೆ ಕೊಡುತ್ತಿದ್ದಳು.  ತಾನು ಮತ್ತು ತ್ಸು ಪ್ರೇಮಿಸುವದಕ್ಕೆ ಮೊದಲೇ ಅವಳಮ್ಮ ತಮ್ಮಿಬ್ಬರ ನಡುವೆ ಯಾವುದೋ ಸಂಬಂಧದ ಎಳೆಯನ್ನು ಪೋಷಿಸಿದ್ದ ಇಂತಹ ಘಟನೆಗಳು ಅಮ್ಮನಿಗೆ ಈಗಲೂ ನೆನಪಿದೆಯೇ ಎಂದು ಕೇಳಬೇಕು ಎಂದುಕೊಂಡಳು.  

ಕೆಲವು ನಿಮಿಷಗಳು ಹೀಗೆಯೇ ಕಳೆದವು. ನಂತರ ರಸ್ತೆಯಾಚೆಗೆ ಇದ್ದಕ್ಕಿದ್ದ ಹಾಗೆ ಎರಡು ಜೀಪುಗಳು ವೇಗವಾಗಿ ಬಂದು ನಿಂತವು. ಸಾನ್ಸನ್ ನೋಡುತ್ತಿರುವಂತೆಯೇ ಜೀಪಿನಿಂದ ಪೊಲೀಸರು ಹೊರಬಂದು ಗೋಂಗ್ಸ್ ನ  ಅ೦ಗಡಿಯನ್ನು ಸುತ್ತುವರೆದರು. ಕೆಲವೇ ನಿಮಿಷದಲ್ಲಿ ಅಲ್ಲಿದ್ದ ಗಿರಾಕಿಗಳನ್ನು ಹೊರ ಕಳುಹಿಸಲಾಯಿತು. "ಏನಾಗುತ್ತಿದೆ ?" ಅಲ್ಲಿದ್ದ ಬೇರೆ ಅಂಗಡಿಯವರು ಪರಸ್ಪರರನ್ನು ಪ್ರಶ್ನಿಸಿಕೊಂಡರು.  ಸಾನ್ಸನ್ ಳ ಅಮ್ಮ ಎದ್ದು ನಿಂತು ಕತ್ತೆತ್ತಿ ನೋಡಿ, ಸೌಟನ್ನು ಸಾನ್ಸನ್ಳಿಗೆ ಕೊಟ್ಟು "ಇಲ್ಲೇ ಇರು , ಸ್ವಲ್ಪ ಸ್ಟವ್ ನೋಡುತ್ತಿರು " ಎಂದು ಹೇಳಿ  ಅಕ್ಕ ಪಕ್ಕದ ಒಂದಷ್ಟು ವ್ಯಾಪಾರಿಗಳ ಜೊತೆಗೆ ರಸ್ತೆ ದಾಟಿ ನಡೆದಳು.  ಸಾನ್ಸನ್ ಳಿಗೆ ಅವಳಮ್ಮ ಅಂಗಡಿಯ ಮುಂದೆ ಇಣುಕುತ್ತಿರುವದು ಕಾಣಿಸಿತು. ನಲವತ್ತು ವರ್ಷ ಇಲ್ಲೇ ಕಳೆದ ಮೇಲೂ  ಇನ್ನೊಬ್ಬರ ಅ೦ಗಡಿಯಲ್ಲಿ  ಏನಾಗುತ್ತಿದೆ ಎಂದು ತಿಳಿಯುವ ಕುತೂಹಲ ಯಾಕೆ ಅಮ್ಮನಿಗೆ ಎಂದು ಅನಿಸಿತು.  
ಹತ್ತು ನಿಮಿಷಗಳ ನಂತರ ಅವಳಮ್ಮ ವಾಪಸು ಬಂದಳು. "ಏನಾಗಿದೆ ಗೊತ್ತಿದೆಯೇ ? ಅವನ ಅಂಗಡಿಯಲ್ಲಿ ಅಫೀಮು ಸಿಕ್ಕಿದೆ "
"ಏನು ?"
"ಈಗ ಗೊತ್ತಾಯಿತಾ ಯಾಕೆ ಅವನದು ಅಂತಹ ಭಾರಿ ವ್ಯಾಪಾರ ಅಂಥ ?  ಅಲ್ಲಿ ಮಾರುವ  ಬೀಜಗಳು  , ದ್ರಾಕ್ಷಿ ಎಲ್ಲದಕ್ಕೂ ಅಫೀಮು ಹಾಕುತ್ತಿದ್ದನಂತೆ. ಅದಕ್ಕೆ ಒಮ್ಮೆ ತೆಗೆದುಕೊಂಡವರು ಮತ್ತೆ ಮತ್ತೆ ಮರಳಿ ಬರುತ್ತಿದ್ದರು. . ತಥ್ ! ಎಂತ ಕೆಟ್ಟ ಜನ "
"ಪೊಲೀಸರಿಗೆ ಹೇಗೆ ಗೊತ್ತಾಯಿತು ?" ಪಕ್ಕದ ಅಂಗಡಿಯಲ್ಲಿ ಯಾರೋ ಕೇಳಿದರು.
"ಯಾರೋ , ಅಂಗಡಿಯಲ್ಲಿ ಕೆಲಸ ಮಾಡುವವರೇ ಇರಬಹುದು  ಹೇಳಿದ್ದಾರೆ "
ಇನ್ನಷ್ಟು ಜನ ಗಲಾಟೆ ನಡೆಯುತ್ತಿದ್ದಲ್ಲಿಂದ ಮರಳಿ ಬಂದರು. ಅವರ ಮಾತುಗಳನ್ನು ಕೇಳುತ್ತಿದ್ದ ಹಾಗೆ ಸಾನ್ಸನ್ ಳ  ಅಂಗೈ ಬೆವರೊಡೆಯಲು ಪ್ರಾರಂಭಿಸಿತು. ಅವಳು ಸಂಜೆ ಅವನ ಅಂಗಡಿಗೆ ಹೋಗಬೇಕು ಎಂದುಕೊಂಡಿದ್ದಳು.   ಮೌನದಲ್ಲಿ ತಲೆಯೊಳಗೆ ಸಣ್ಣಗೆ ಪ್ರತಿಧ್ವನಿಸುವ ಸೂರ್ಯಕಾಂತಿ ಬೀಜದ ಸಿಪ್ಪೆಯೊಡೆಯುವ  ಶಬ್ದ, ಅದು ನಿಧಾನವಾಗಿ ನಾಲಗೆಯ ಮೇಲೆ ಹನಿಸುವ ವಗರು ರುಚಿ, ಪಕ್ಕದಲ್ಲಿ ರಾಶಿಯಾಗುವ ಸಿಪ್ಪೆ ಅವಳನ್ನು ದಿವ್ಯ ಏಕಾಂತದೆಡೆಗೆ ಕರೆದೊಯ್ಯುತ್ತಿತ್ತು. ಆ ಲೋಕದಲ್ಲಿ ಅವಳು ನಿಶ್ಯಬ್ದವಾಗಿ , ನಿರ್ವಿಕಾರವಾಗಿ ತ್ಸು ಮತ್ತು ಮಿನ್ ರನ್ನು ದಿಟ್ಟಿಸುತ್ತಿದ್ದಳು.  ಹಾಗಾದರೆ ತಾನು ಇಲ್ಲಿಯವರೆಗೆ ಕಟ್ಟಿಕೊಂಡಿದ್ದು ಅಫೀಮು ಲೇಪಿತ ಮಾದಕ ಕನಸೇ?

ಸಾನ್ಸನ್ ಳ  ಅಮ್ಮ ಅವಳತ್ತ ತಿರುಗಿ " ಬೇರೆಯವರ ವಿಚಾರ ನಮಗೇಕೆ ?ನಿನಗೆ ತ್ಸು ನ ಅಪ್ಪ ಅಮ್ಮ ಹೇಳಿದ್ದು ಏನು ಅನಿಸುತ್ತದೆ. ?
"ತ್ಸು ನನ್ನು  ಮದುವೆಯಾಗುವದೇ ? ಇಲ್ಲ ನನಗೆ ಇಷ್ಟವಿಲ್ಲ "
"ಇಷ್ಟು ವರ್ಷ ನೀನು ಕಾದು ಕುಳಿತಿದ್ದು ಅವನಿಗೆ ಅಲ್ಲವೇ ? ಈಗ ಪೆದ್ದಿಯಂತೆ ಮಾತನಾಡಬೇಡ.
"ನಾನು ಅವನಿಗೆ  ಕಾದು  ಕುಳಿತಿಲ್ಲ. "
"ಸುಳ್ಳು ನುಡಿಯಬೇಡ.  ನೀನು ಅವನಿಗೆ ಕಾಯುತ್ತಿರುವದು ಎಂದು ಎಲ್ಲರಿಗೂ  ಗೊತ್ತು "
"ಎಲ್ಲರಿಗೂ ?"
"ಮತ್ಯಾಕೆ ನೀನು ಇನ್ನು ಮದುವೆ ಆಗಿಲ್ಲ ? ಎಲ್ಲರಿಗೂ ಅವನು ನಿನಗೆ ಮಾಡಿದ ಮೋಸದ ಅರಿವಿದೆ. ಆದರೆ ಗಂಡಸರು ತಪ್ಪು ಮಾಡುತ್ತಾರೆ. ನೋಡು, ನಿನ್ನೆ ಅವನ ಅಪ್ಪ ಅಮ್ಮ ಕೂಡ ಕ್ಷಮೆ ಕೇಳಿದರು. ಈಗ ನೀನು ಎಲ್ಲವನ್ನು ಕ್ಷಮಿಸಿ  ಹೊಸ ಬದುಕು ಶುರು ಮಾಡು."
"ಯಾವುದನ್ನು ಕ್ಷಮಿಸಲಿ ?"
"ನಿನ್ನ  ಜೊತೆಗೆ  'ಎಲ್ಲ' ಮುಗಿಸಿಕೊಂಡು ಅವನು ಬೇರೆ ಹುಡುಗಿಯ ಹಿಂದೆ ಹೋದ. ಇಲ್ಲಿ ಕೇಳು , ಒಂದು ಗಾದೆ ಹೇಳುತ್ತಾರಲ್ಲ ಒಬ್ಬ ಮನುಷ್ಯನಿಗೆ ನಿಜವಾಗಿಯೂ ಸೇರಬೇಕಾಗಿದ್ದು ಯಾವತ್ತಾದರೂ ಸೇರಿಯೇ ತೀರುತ್ತದೆ"
"ಒಂದು ನಿಮಿಷ, ನನ್ನ ಜೊತೆಗೆ ಎಲ್ಲ ಮುಗಿದಿದೆ ಎಂದರೆ ಅರ್ಥವೇನು ?"
ಸಾನ್ಸನ್ ಅಮ್ಮ ನಾಚಿದಳು. "ನಿನಗೆ ಗೊತ್ತಿದೆಯಲ್ಲ "
"ನನಗೆ ಗೊತ್ತಿಲ್ಲ. ನಮ್ಮಿಬ್ಬರ ನಡುವೆ  ದೈಹಿಕ ಸಂಪರ್ಕ ನಡೆದಿತ್ತು ಎಂದು ನೀನು ಭಾವಿಸಿದ್ದರೆ  ಅದು ಸುಳ್ಳು. ಯಾವತ್ತೂ  ಆಗಿಲ್ಲ"
"ಅಯ್ಯೋ ಅದ್ಯಾಕೆ ಹಾಗೆ ಹೇಳುತ್ತೀಯಾ ? ಆಗಿದ್ದರೂ ಸಹ  ನಮಗೂ ಅರ್ಥವಾಗುತ್ತದೆ ಅದೇನೂ ಯಾರೊಬ್ಬರ ತಪ್ಪಲ್ಲ"

ಸಾನ್ಸನ್ ಗೆ  ಇಷ್ಟು ವರ್ಷಗಳಲ್ಲಿ ಮೊತ್ತ ಮೊದಲ ಬಾರಿಗೆ ಇಡೀ ಪಟ್ಟಣ ತನ್ನನ್ನು ಯಾಕೆ ಹಾಗೆ ನೋಡುತ್ತದೆ ಎಂದು ಅರಿವಾಯಿತು. ಒಬ್ಬ ಗಂಡಸು ತೆವಲು ತೀರಿಸಿಕೊಂಡು ಬಿಟ್ಟ ಹೆಂಗಸು. ಮತ್ತೆ ಎಲ್ಲರಂತೆ ಮದುವೆಯಾಗಲು ಯಾವತ್ತೂ ಸಾಧ್ಯವಿರದವಳು ಯಾಕೆಂದರೆ  ತನ್ನ ಕನ್ಯತ್ವವನ್ನು ಬಿಳಿ ಬಣ್ಣದ ಹಾಸಿಗೆಯ ಮೇಲೆ  ರುಜುವಾತು  ಪಡಿಸಲು ಸಾಧ್ಯವಾಗದವಳು.   " ಅಮ್ಮ ನನ್ನ ಮತ್ತು ತ್ಸು ನಡುವೆ ಅಂತಹ ಯಾವ ಕ್ರಿಯೆಯೂ ನಡೆದಿಲ್ಲ. "
"ನಿಜವಾಗಿಯೂ ?" ಅವಳಮ್ಮನ ಧ್ವನಿಯಲ್ಲಿ ಅಪನಂಬಿಕೆ.
"ಹೌದು ನಾನೊಬ್ಬ ತಲೆ ಕೆಟ್ಟ ಅವಿವಾಹಿತೆ. ನೀನು ನನ್ನ ಕನ್ಯತ್ವದ ಬಗ್ಗೆ ಬೇಕಾದರೆ ಇಡೀ ಪಟ್ಟವನ್ನು ಕೇಳಿ ಅವರ ಅಭಿಪ್ರಾಯವನ್ನು ಸಂಗ್ರಹಿಸು.  "
ಸಾನ್ಸನ್ ಳ ಅಮ್ಮ  ಬಹಳಷ್ಟು ಹೊತ್ತು  ಮಗಳನ್ನು ದಿಟ್ಟಿಸಿದಳು. ನಂತರ ಚಪ್ಪಾಳೆ ತಟ್ಟುತ್ತ " ಒಳ್ಳೆಯದೇ ಆಯಿತಲ್ಲ ಹಾಗಾದರೆ. ನನಗೆ ನೀನು ಅವನನ್ನು ಅಷ್ಟೊಂದು ಪ್ರೀತಿಸುತ್ತೀಯ ಎನ್ನುವದು ತಿಳಿದಿರಲಿಲ್ಲ. ನಾನು ಇವತ್ತು ಅವರ ಅಪ್ಪ ಅಮ್ಮನ ಬಳಿ ಹೋಗಿ ನೀನು ಇಷ್ಟು ವರ್ಷ ಅವನಿಗಾಗಿಗೇ ಪರಿಶುದ್ಧಳಾಗಿ ಕಾದಿದ್ದೆ ಎಂದು ಹೇಳಿ ಬರುತ್ತೇನೆ. "
"ನಾನು ಅವನಿಗಾಗಿ  ಕಾದಿಲ್ಲ "
" ನಿನ್ನ ಮತ್ತು ಅವನ ನಡುವೆ ಏನೂ ನಡೆದಿಲ್ಲ ಎಂದಾದರೆ ನೀನು ಯಾಕೆ ಇನ್ನೂ ಮದುವೆ ಆಗಿಲ್ಲ ?"
ಸಾನ್ಸನ್  ಉತ್ತರಿಸಲಿಲ್ಲ. ತನ್ನ ಕನ್ಯತ್ವದ ಬಗೆಗಿನ ಊಹಾಪೋಹಗಳು ತನ್ನ ಅಪ್ಪನ ಸಾವಿಗೆ ಎಷ್ಟು ಕಾರಣವಾಗಿರಬಹುದು ಎಂದು ಯೋಚಿಸಿದಳು. ತನ್ನ ಅಮ್ಮ ಈ ವಿಷಯವನ್ನು ಇಷ್ಟು ವರ್ಷ ಯಾಕೆ  ಕೇಳಿಲ್ಲ ಎಂದು ವಿಸ್ಮಯಗೊಂಡಳು. ಆದರೆ ಪಕ್ಕಾ ಸಂಪ್ರದಾಯವಾದಿಯಾದ ತನ್ನಮ್ಮ ಇಂಥ ವಿಷಯವನ್ನು ತನ್ನ ಬಳಿ ಅದು ಹೇಗೆ ತಾನೇ ಕೇಳಿಯಾಳು  ಎಂದು ತನಗೆ ತಾನೇ ಉತ್ತರಿಸಿಕೊಂಡಳು.

"ನಿನಗೆ ನನ್ನ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದಿದ್ದರೆ ನೀನು ಆದಷ್ಟು ಬೇಗ ನಿನ್ನ ಮನಸ್ಸನ್ನು ಗಟ್ಟಿ ಮಾಡಿಕೊಳ್ಳುವದು ಉತ್ತಮ " ಅಮ್ಮ
"ನನ್ನ ಮನಸ್ಸನ್ನು ನಾನು ಯಾವತ್ತೋ ಗಟ್ಟಿ ಮಾಡಿಕೊಂಡಾಗಿದೆ. ನಾನು ಯಾವತ್ತಿಗೂ ತ್ಸುನನ್ನು ಮದುವೆ ಆಗಲಾರೆ "
"ನಿನಗೇನು ಹುಚ್ಚೇ?"
"ಅಮ್ಮ ನಿನಗೆ ಯಾಕೆ ಜಗತ್ತಿನಲ್ಲೇ ಅತ್ಯುತ್ತಮವಾದ ಮೊಟ್ಟೆ ಮಾರಬೇಕು ಅನಿಸುತ್ತದೆ   ?"
ಅಮ್ಮ ತಲೆಯಾಡಿಸಿದಳು" ನೀನು ಏನು ಹೇಳುತ್ತಿದ್ದೀಯ ಎಂದು ನನಗೆ ಗೊತ್ತಾಗುತ್ತಿಲ್ಲ."
"ಅಮ್ಮ ನೀನು ಯಾಕೆ ಎಲ್ಲರಿಗಿಂತ  ಹೆಚ್ಚು ಮಸಾಲೆಯನ್ನು ಹಾಕುತ್ತಿಯ ?"
"ಯಾಕೆ ಎಂದರೆ ನಾನು ಜಗತ್ತಿನಲ್ಲೇ ಅತ್ತ್ಯುತ್ತಮ ರುಚಿಯ ಮೊಟ್ಟೆ ಮಾರುತ್ತಿರುವೆ  ಎಂದು ಜನರಿಗೆ ಹೇಳುವುದಾದರೆ ನಾನು ಆ ಮಾತನ್ನು ಉಳಿಸಿಕೊಳ್ಳಬೇಕು "
"ಆದರೆ ಅದನ್ನು ಯಾರೂ  ಗಮನಿಸುವದಿಲ್ಲ. ಯಾರಿಗೂ ಅದು ಬೇಕಿಲ್ಲ. ನೀನು ಉಳಿಸಿಕೊಳ್ಳುತ್ತಿದ್ದೇನೆ ಎಂದುಕೊಳ್ಳುತ್ತಿರುವ ಮಾತು ನಿನಗೆ ಮಾತ್ರ ಮಹತ್ವವುಳ್ಳದ್ದು. "
"ಏನೇನೋ ಮಾತನಾಡಬೇಡ. ನಾನು ಓದು ಕಲಿತವಳಲ್ಲ. ನನಗೆ ಇವೆಲ್ಲ ಅರ್ಥವಾಗುವದಿಲ್ಲ. ಅಲ್ಲದೆ ಇದಕ್ಕೂ ನಿನ್ನ ಮದುವೆಗೂ ಏನು ಸಂಬಂಧವಿದೆ?"
"ಇದೆ.   ನಾನು ಮಾತ್ರ ಉಳಿಸಿಕೊಳ್ಳಬೇಕಾದ ಮಾತು ನನಗೂ ಇದೆ"
"ಯಾಕೆ ಹೀಗೆ ನೀನು ಹಠ ಮಾಡುತ್ತೀಯಾ ? ನೀನು ಇದೆ ಥರ ಇದ್ದಾರೆ ಒಂದಲ್ಲ ಒಂದು ದಿನ ನಮ್ಮಿಬ್ಬರಿಗೂ ಹುಚ್ಚು ಹಿಡಿಯುತ್ತದೆ " ಅವಳಮ್ಮ ಬಿಕ್ಕಳು ಪ್ರಾರಂಭಿಸಿದಳು.
 
ಇನ್ನೊಂದು ರೈಲು ದೊಡ್ಡದಾಗಿ ಸದ್ದು ಮಾಡುತ್ತಾ ನಿಲ್ದಾಣವನ್ನು ತಲುಪಿತು. ಸಾನ್ಸನ್ ಅವಳಮ್ಮ ನಡುಗುವ ಧ್ವನಿಯಲ್ಲಿ ಕೂಗುತ್ತ , ಕಣ್ಣೀರನ್ನು ಒರೆಸಿಕೊಳ್ಳುತ್ತಿರುವದನ್ನು  ಗಮನಿಸದಳು. ಹೌದು ,  ಹೀಗೆಯೆ ನಡೆಯುತ್ತಿದ್ದರೆ ಒಂದಲ್ಲ ಒಂದು ದಿನ ತನ್ನೆಲ್ಲ ಮಿತಿಯ ಹೊರತಾಗಿಯೂ ತನ್ನನ್ನು ಯಾವತ್ತಿಗೂ ಪ್ರೀತಿಸುವ ತನ್ನ ಅಮ್ಮ ಹುಚ್ಚಿಯಾಗಬಹುದೇನೋ. ಸಾನ್ಸನ್ ಮಿಸುಕಾಡಿದಳು. ಆದರೆ ಅವಳ ಬಳಿ ಬೇರೆ ಆಯ್ಕೆಗಳಿರಲಿಲ್ಲ.  ಜಗತ್ತಿನಲ್ಲಿ  ಕೊಟ್ಟ ಮಾತನ್ನು ಬೇಕಾದಲ್ಲಿ ಬಿಸಾಡಿ ಹೋಗುವವರಿದ್ದಾರೆ. ಆದರೆ ಸಾನ್ಸನ್ ಗೆ ಹಾಗಾಗುವದು ಬೇಕಿರಲಿಲ್ಲ.

ಅಷ್ಟರಲ್ಲಿ  ಕೊಳೆಯಾದ ಅಂಗಿ ಧರಿಸಿದ  ಒಬ್ಬ ಮನುಷ್ಯ ಬ್ಯಾಗೊಂದನ್ನು ಅಪ್ಪಿಕೊಂಡು  ಮಾರ್ಕೆಟ್ನನ್ನು  ಪ್ರವೇಶಿಸಿದ.  ಸಾನ್ಸನ್ ನೋಡುತ್ತಿದ್ದಂತೆಯೇ ಅವನು ಅವಳಮ್ಮನ ಗಾಡಿಯ ಮತ್ತು ಇನ್ನೊಂದು ಅಂಗಡಿಯ ಮಧ್ಯದ ಖಾಲಿ ಜಾಗದಲ್ಲಿ ಕುಳಿತುಕೊಂಡ. ಅವನು ಬ್ಯಾಗಿನಿಂದ ಮಡಚಿಟ್ಟ ಒಂದು ರಟ್ಟಿನ ಬಾಕ್ಸ್ ಮತ್ತು ಕಲ್ಲಂಗಡಿ ಹಣ್ಣನ್ನು ಕತ್ತರಿಸಲು ಬಳಸುವಂತ ದೊಡ್ಡ, ಹರಿತವಾದ ಚಾಕುವನ್ನು ಹೊರತೆಗೆದ. ನಂತರ ಅವನು ತನ್ನ ಅಂಗಿಯನ್ನು ತೆಗೆದು , ಚಾಕುವನ್ನು ಎಡಗೈ  ಬಳಿ  ಕೊಂಡೊಯ್ದು,  ನಿಧಾನವಾಗಿ ಅದನ್ನು ಒತ್ತಿ ಕೈ ಚರ್ಮವನ್ನು ತುಸುವೇ ಸೀಳಿ  ಮಾಂಸವನ್ನು ಇಷ್ಟೇ ಇಷ್ಟು ಕತ್ತರಿಸಿದ. ಅವನು ಅತ್ಯಂತ ಶಾಂತವಾಗಿ , ನೋವಿಲ್ಲದವನಂತೆ, ಪ್ರತಿ ಚಲನೆಯನ್ನು  ಲೆಕ್ಕ ಹಾಕುತ್ತ  ಇವಿಷ್ಟನ್ನು ಮಾಡಿದ್ದನ್ನು ನೋಡಿ ಸಾನ್ಸನ್ ಮತ್ತು  ಅವನನ್ನು ನೋಡುತ್ತಿದ್ದ ಇತರರು ದಂಗಾದರು. ನಂತರ ಅವನು ತೋರು ಬೆರಳನ್ನು ರಕ್ತದಲ್ಲಿ ಅಡ್ಡಿ ಕ್ಯಾಲಿಗ್ರಫಿ ಪ್ರವೀಣನಂತೆ  ರಟ್ಟಿನ ಬಾಕ್ಸಿನ ಮೇಲೆ ಬರೆಯತೊಡಗಿದ " ಒಂದು ಯಾನ್ ಗೆ ನೀವು ನಿಮಗಿಷ್ಟ ಬಂದ, ನನ್ನ ದೇಹದ ಯಾವುದೇ ಭಾಗವನ್ನಾದರೂ ಕತ್ತರಿಸಬಹುದು. ಒಂದೇ ಒಂದು ಸಲ ಕತ್ತರಿಸಿದಾಗ ನನ್ನ   ಪ್ರಾಣ ಹೋದರೆ ನೀವು ನನಗೆ ಕೊಡಬೇಕಾಗಿದ್ದು ಏನೂ  ಇಲ್ಲ." ನಂತರ ಅವನು ಈ ವಾಕ್ಯವನ್ನು ಜೋರಾಗಿ ಎರಡು ಸಲ ಕೂಗಿ ಹೇಳಿದ.

"ತಲೆ  ಕೆಟ್ಟವನು " ಅಲ್ಲೇ ಇದ್ದ ಮುದುಕಿ ಗೊಣಗಿದಳು.
"ಬೇಡಲಿಕ್ಕೆ ಹೊಸ ಉಪಾಯ "
"ಸುಮ್ಮನೆ ಬೇಡಿದರೆ ಆಗಿತ್ತು "
"ಅಷ್ಟು ಗಟ್ಟಿ ಇದ್ದಾನೆ ಸುಮ್ಮನೆ ಯಾರು ದುಡ್ಡು ಕೊಡುತ್ತಾರೆ ? ಏನಾದರು ಮಾಡಬೇಕಲ್ಲ ಬೇಡಲಿಕ್ಕೆ "
"ಇವತ್ತಿನವರಿಗೆ ಕೆಲಸ ಮಾಡುವದೇ ಬೇಕಿಲ್ಲ. ಸುಲಭವಾಗಿ ದುಡ್ಡು ಸಿಕ್ಕರೆ ಆಯಿತು "
"ಸುಲಭ ಏನು ? ನೋವು ಮಾಡಿಕೊಳ್ಳುವದು ಅಷ್ಟು ಸುಲಭವೇ ?"
"ಏನಪ್ಪಾ ಏನ್ ವಿಷಯ ? ಬೇಡಲಿಕ್ಕೆ ಇನ್ನು ಯಾವ ಒಳ್ಳೆಯ ಕಥೆಯು ಸಿಕ್ಕಿಲ್ಲವಾ ?" ಯಾರೋ ಕೇಳಿದರು
ಜನ ಗೊಳ್ಳನೆ ನಕ್ಕರು. ಅವನು ಮಾತನಾಡಲಿಲ್ಲ. ಜನರ ನಡುವೆ ಸುಮ್ಮನೆ ಕುಳಿತಿದ್ದ. ಅವನ ಕೈಯಿಂದ ತೊಟ್ಟಿಕ್ಕುತ್ತಿದ್ದ ರಕ್ತದ ಹನಿ  ಜೀನ್ಸ್ ಪ್ಯಾ೦ಟನ್ನು ತೋಯಿಸುತ್ತಿತ್ತು. ಅವನು ಅದನ್ನು ಗಮನಿಸದವನಂತೆ ಮೌನವಾಗಿ ಕುಳಿತಿದ್ದ. ನಂತರ ಒಂದಷ್ಟು ನಿಮಿಷ ಕಳೆದ ಮೇಲೆ ಮತ್ತೆ ಅದೇ ವಾಕ್ಯವನ್ನು ಕೂಗಿ ಹೇಳಿದ .
 ಸಾನ್ಸನ್ ಳ ಅಮ್ಮ ನಿಟ್ಟುಸಿರು  ಬಿಟ್ಟಳು. ಅವಳು ತನ್ನ ಗಲ್ಲಾಪೆಟ್ಟಿಗೆ ತೆರೆದು ಒಂದಷ್ಟು ಹಣ ತೆಗೆದುಕೊಂಡು  ಅವನ ಬಳಿ ನಡೆದಳು.
"ಇಲ್ನೋಡು ಹತ್ತು ಯಾನ್. ತೆಗೆದುಕೋ. ಬೇರೆಲ್ಲಿಯಾದರು ಹೋಗಿ ಒಳ್ಳೆ ಕೆಲಸ ಹುಡುಕಿಕೋ . ಸುಮ್ಮನೆ ಈ ಅಸಂಬದ್ಧ ಮಾಡುತ್ತ ಜೀವನವನ್ನು ಹಾಳು  ಮಾಡಿಕೊಳ್ಳ ಬೇಡ.
"ಎಲ್ಲಿಯೂ ಯಾವ ಕೆಲಸವೂ ಸಿಗುತ್ತಿಲ್ಲ "
"ಸರಿ ಹಾಗಾದರೆ ಈ ಹತ್ತು ಯಾನ್ ತೆಗೆದುಕೋ "
ಅವನು ಹತ್ತು ಯಾನ್ ತೆಗೆದುಕೊಂಡು , ಚಾಕುವಿನ ಹಿಡಿಕೆಯನ್ನು ಸಾನ್ಸನ್ ಳ ಅಮ್ಮನ ಬಳಿ ಚಾಚಿದ. "ಹಿಡಿದುಕೊಳ್ಳಿ "
"ಯಾಕೆ ? ನನಗೆ ನಿನ್ನನ್ನು ಕತ್ತರಿಸುವದೆಲ್ಲ ಬೇಡ"  
"ಕತ್ತರಿಸಲೇ ಬೇಕು. ನೀವು ಕತ್ತರಿಸದೆ ನಾನು ನಿಮ್ಮ ದುಡ್ಡು ತೆಗೆದುಕೊಳ್ಳುವ ಹಾಗಿಲ್ಲ. ನೋಡಿ ಇಲ್ಲಿ ಬರೆದಿದೆ. "
"ಇರಲಿ , ಹಾಗೆ ತೆಗೆದುಕೋ :
"ನಾನೊಬ್ಬ ಭಿಕ್ಷುಕನಲ್ಲ "
"ಯಾರು ಹಾಗಾದರೆ ?" ಜನರ ಗುಂಪಿನಿಂದ ಯಾರೋ ಕೂಗಿದರು.
"ಮುಟ್ಟಾಳ " ಇನ್ಯಾರೋ ಹೇಳಿದರು. ಜನ ಮತ್ತೆ ಗೊಳ್ಳನೆ ನಕ್ಕರು.  ಆದರೆ ಯುವಕ ಅಲ್ಲಾಡಲಿಲ್ಲ. ಚಾಕುವನ್ನು ಹಾಗೆಯೆ ಹಿಡುಕೊಂಡಿದ್ದ.  ಸಾನ್ಸನ್ ಳ ಅಮ್ಮ ತಲೆಯಾಡಿಸಿ , ದುಡ್ಡನ್ನು ಅವನ ಬಳಿ ಹಾಕಿದಳು. ಅವನು ಅದನ್ನು ವಾಪಸು ಅವಳ ಕಾಲಿನ ಬಳಿ ಹಾಕಿ ಮತ್ತೆ ತನ್ನ ಜಾಗಕ್ಕೆ ಹೋಗಿ ಕುಳಿತ.
ಸಾನ್ಸನ್ ಬಿದ್ದಿದ್ದ ನೋಟನ್ನು ಹೆಕ್ಕಿಕೊಂಡು ಅವನ ಬಳಿ ನಡೆದಳು.  ಅವನು ತಲೆಯೆತ್ತಿ ಅವಳನ್ನು ನೋಡಿದ. ಅವಳು ಅವನ ಕಣ್ಣುಗಳನ್ನು ಆಳವಾಗಿ ದಿಟ್ಟಿಸಿದಳು. ಮಾತನಾಡದೆಯೇ ಅವನು ಚಾಕುವಿನ ಹಿಡಿಯನ್ನು ಅವಳ ಕೈಗಿತ್ತ. ಅವಳು ಅವನ ದೇಹವನ್ನು ಸೂಕ್ಷ್ಮವಾಗಿ ದಿಟ್ಟಿಸಿದಳು. ಬೆತ್ತಲೆ ಮೈ. ಬಿಸಿಲಿಗೆ ಕಂದಿದ  ಮೃದುವಾದ ಚರ್ಮ,  ರಕ್ತ ಹನಿಯುತ್ತಿರುವ ಗಾಯ. ಅವಳು ಅವನ ತೋಳಿನ ಮೇಲ್ಭಾಗವನ್ನು ಪರೀಕ್ಷಿಸುತ್ತಾ , ಲೆಕ್ಕ ಹಾಕುತ್ತ  ತೋರು ಬೆರಳಿನ ತುದಿಯಿಂದ   ಮುಟ್ಟಿದಳು.   ನಂತರ ನಿಧಾನವಾಗಿ ತೋರುಬೆರಳನ್ನು ಅವನ ಭುಜದ ಹತ್ತಿರ ಒಯ್ದಳು.  ಅವನ ದೇಹದ ಮಾಂಸದ ಜಾಡನ್ನು ಅರಸಿ ಅವಳ ಬೆರಳು ಸಾಗಿದಂತೆ ಅವನು ಸಣ್ಣಗೆ ಕಂಪಿಸಿದ.

"ಸಾನ್ಸನ್ ಏನಾಗಿದೆ ನಿನಗೆ  ?" ಅವಳ ಅಮ್ಮ  ಕಿರುಚಿದಳು.
ಅವನ ಮಾಂಸಖಂಡಗಳು ಅವಳ ಮೃದು ಸ್ಪರ್ಶಕ್ಕೆ ಸಡಿಲವಾಗತೊಡಗಿದವು. ಇಷ್ಟು ವರ್ಷಗಳ ನಂತರ ಅವಳು ಮಾತು ಕೊಡುವದೆಂದರೇನು ಎನ್ನುವದನ್ನು ಅರ್ಥೈಸಿಕೊಂಡಿದ್ದವನನ್ನು  ಭೇಟಿಯಾಗಿದ್ದಳು. ಹೊರ ಜಗತ್ತಿಗೆ ಅವರು ಹುಚ್ಚರಂತೆ ಕಾಣಿಸಬಹುದು ಆದರೆ ಅವರು ಒಬ್ಬಂಟಿಗರಲ್ಲ ,  ಅವರಂತೆ  ಕೊಟ್ಟ ಮಾತಿನ ಧ್ಯಾನದಲ್ಲಿ ಸದಾ  ಜೀವಿಸುವ ಇನ್ನಷ್ಟು ಜೀವಗಳಿವೆ  ಮತ್ತು ಅವರು ಪರಸ್ಪರರಿಗೆ ಮಾತ್ರವೇ ಅರ್ಥವಾಗಬಲ್ಲರು. ಅದು ಬದುಕು ಅವರಿಗೆ ಮಾತ್ರ  ಕೊಟ್ಟ ಮಾತು , ಬದುಕಿನ ಭವ್ಯತೆ .
"ನೀನು ಚಿ೦ತೆ ಮಾಡಬೇಡ ಅಮ್ಮ " ಸಾನ್ಸನ್  ಅಮ್ಮನತ್ತ ಮಂದಹಾಸವನ್ನು ಬೀರುತ್ತ ಹೇಳಿದಳು. ನಂತರ  ಚಾಕುವನ್ನು ಯುವಕನ  ಭುಜದ ಬಳಿಯಿಟ್ಟು  ಒತ್ತಿದಳು.  ಚಾಕುವಿನ ಹರಿತ ತುದಿ ಸಾವಕಾಶವಾಗಿ  ಚರ್ಮವನ್ನು ಸೀಳಿದಂತೆ  ಅವಳು ಅವನ  ಮಾಂಸವನ್ನು  ಮೃದುವಾಗಿ ಪ್ರೀತಿಯಿಂದ  ಕತ್ತರಿಸತೊಡಗಿದಳು.

ಲೇಖಕರ ಪರಿಚಯ

ಬೀಜಿಂಗ್ ನಲ್ಲಿ ಬೆಳೆದ ಯಿ ಯುನ್ ಲಿ ಓದಿದ್ದು ಪೀಕಿಂಗ್ ಯೂನಿವರ್ಸಿಟಿಯಲ್ಲಿ. ೧೯೯೬ ರಲ್ಲಿ ಅಮೆರಿಕಾಗೆ ಮೆಡಿಕಲ್ ವ್ಯಾಸಂಗ ಮಾಡಲು ಬಂದ ಯಿ ಯುನ್ ಲಿ , ಎರಡು ವರ್ಷಗಳ ನಂತರ ಬರವಣಿಗೆ ಪ್ರಾರಂಭಿಸಿದಳು. ಪ್ರಸ್ತುತ ಕತೆಯನ್ನು ಫ್ರಾಂಕ್  ಓ'ಕಾನರ್ ಇಂಟರನ್ಯಾಶನ್ ಅವಾರ್ಡ್ ಮತ್ತು ಹೆಮಿ೦ಗ್ವೆ ಪ್ರಶಸ್ತಿ ಪುರಸ್ಕ್ರತ " a thousands years of good prayer " ಎನ್ನುವ ಸಣ್ಣ ಕತಾ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. 

No comments:

Post a Comment