Tuesday, April 27, 2021

ಕೀನೊ

ಅವನು ಪ್ರತಿ ಬಾರಿಯೂ ಅದೇ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದ - ಕೌ೦ಟರಿನಿಂದ ಸಾಧ್ಯವಾದಷ್ಟೂ ದೂರದಲ್ಲಿದ್ದ ಸ್ಟೂಲಿನ ಮೇಲೆ. ಆ ಜಾಗ ಖಾಲಿಯಿದ್ದಾಗಲೆಲ್ಲ ಅವನು ಅದನ್ನೇ ಆರಿಸಿಕೊಳುತ್ತಿದ್ದ. ಸಾಧಾರಣವಾಗಿ  ಅದು ಯಾವಾಗಲು ಖಾಲಿಯೇ ಇರುತ್ತಿತ್ತು. ಬಾರು ಜನರಿಂದ ತುಂಬಿ ತುಳುಕುವದು ಅಪರೂಪವೇ ಅಲ್ಲದೆ ಅದೊಂದು ಜಾಗ ತತ್ ಕ್ಷಣ  ಗಮನಕ್ಕೆ  ಬರುತ್ತಿರಲಿಲ್ಲ  ಮತ್ತು  ವಿರಮಿಸಲು ಅಂತಹ ಆರಾಮದಾಯಕ ಜಾಗವೂ ಅದಾಗಿರಲಿಲ್ಲ.  ಮೇಲಿನ ಮಹಡಿಗೆ  ಹೋಗುವ ಮೆಟ್ಟಿಲುಗಳು ಅಲ್ಲಿಯೇ  ಇರುವದರಿಂದ ಅದೊಂದು ಜಾಗದಲ್ಲಿ ತಗ್ಗಿದ್ದ   ಮೇಲ್ಛಾವಣಿ   ಪ್ರತಿಬಾರಿ ಎದ್ದು ನಿಂತಾಗಲು ತಲೆಗೆ ತಾಕುತ್ತಿತ್ತು. . ಅವನು ನೀಳಕಾಯದವನಾಗಿದ್ದರೂ ಅದೇಕೋ  ಆ ಇಕ್ಕಟ್ಟಾದ, ಓಣಿಯಂತ ಜಾಗವನ್ನೇ  ಪ್ರತಿ ಬಾರಿ ಆಯ್ಕೆ ಮಾಡಿಕೊಳ್ಳುತ್ತಿದ್ದ.

 "ಒಂದು ಮಾಮೂಲಿ  ಡಬಲ್  ಸ್ಕಾಚ್.  ಜೊತೆಗೆ ಸ್ಕಾಚ್ ನಷ್ಟೇ ಪ್ರಮಾಣದಲ್ಲಿ ನೀರು ಮತ್ತು ಸ್ವಲ್ಪ ಐಸ್  ಸಿಗಬಹುದೇ ?"  ಮೊತ್ತ ಮೊದಲ ಸಲ ಆ ಮನುಷ್ಯ ಬಾರಿಗೆ ಬಂದಿದ್ದು  ಕೀನೊಗೆ ಚೆನ್ನಾಗಿ ಜ್ಞಾಪಕದಲ್ಲಿತ್ತು.  ಅಪ್ರಜ್ಞಾಪೂರ್ವಕವಾಗಿ  ಆ ಮನುಷ್ಯನ  ಚಹರೆ ಕೀನೊನ ಗಮನ ಸೆಳೆದಿತ್ತು -  ತುಸು ನೀಲಿ ಬಣ್ಣದ ನುಣ್ಣನೆ ಬೋಳಿಸಿರುವ ತಲೆ , ಸಪೂರನೆಯ  ಆದರೆ  ಅಗಲವಾದ ಭುಜಗಳು, ಕಣ್ಣುಗಳಲ್ಲಿನ ತೀಕ್ಷ್ಣ ಹೊಳಪು, ಉಬ್ಬಿಕೊಂಡಿದ್ದ ಕೆನ್ನೆಯ ಮೂಳೆಗಳು ಮತ್ತು ಅಗಲ ಹಣೆ.  ಅವನ ವಯಸ್ಸು ಸುಮಾರು ಮೂವತ್ತರ ಆಸುಪಾಸಿರಬಹುದು.  ಮಳೆ ಇಲ್ಲದಿದ್ದರೂ ಅವನು ಕಂದು ಬಣ್ಣದ ರೈನ್ ಕೋಟನ್ನು ಧರಿಸಿದ್ದ. ಮೊದಲಿಗೆ ಕೀನೋ ಅವನನ್ನು ದರೋಡೆಕೋರ  ಗುಂಪಿನವನು ಅಂದು ಕೊಂಡಿದ್ದ ಮತ್ತು ಅವನ ಬಳಿ ಸಾಧ್ಯವಾದಷ್ಟು ಜಾಗರೂಕನಾಗಿರುತ್ತಿದ್ದ.  ಅವತ್ತು ೭.೩೦ ಘಂಟೆ , ಏಪ್ರಿಲ್ ಮಧ್ಯಭಾಗದ ನ ತಣ್ಣಗಿನ ಛಳಿಯ ಸಮಯ.  ಬಾರು ಖಾಲಿಯಿತ್ತು.  ಆ ಮನುಷ್ಯ ಕೌ೦ಟರಿನಿಂದ ದೂರದಲ್ಲಿದ್ದ ಸ್ಟೂಲನ್ನು ಆರಿಸಿಕೊಂಡ. ಧರಿಸಿದ್ದ ರೈನ್ ಕೋಟನ್ನು ತೆಗೆದಿಟ್ಟ.  ಸಣ್ಣಗಿನ ಧ್ವನಿಯಲ್ಲಿ ಒಂದು ಬಿಯರ್ ತರಲು ಹೇಳಿದ ಮತ್ತು ಮೌನವಾಗಿ ಪುಸ್ತಕವನ್ನು ಓದತೊಡಗಿದ. ಅರ್ಧ ಘ೦ಟೆಯ ನಂತರ ಬಿಯರ್ ಕುಡಿದಾದ ಮೇಲೆ, ಕೈಯನ್ನು ಸಾವಾಕಾಶವಾಗಿ ಒಂದೆರಡು ಇಂಚು ಮೇಲಕ್ಕೆತ್ತಿ ಕಿನೋನನ್ನು ಕರೆದು ಒಂದು ವಿಸ್ಕಿ ತರಲು ಹೇಳಿದ. "ಯಾವ ಬ್ರಾಂಡ್ ?"  ಕೀನೋ ಕೇಳಿದ.  ಇಂತದೇ ಆಗಬೇಕು ಎಂದೇನಿಲ್ಲ ಎಂದು ಅವನು ಉತ್ತರಿಸಿದ.      

ಕೀನೋ ಹೆಸರಿಲ್ಲದ ವಿಸ್ಕಿಯನ್ನು ಗ್ಲಾಸಿಗೆ ಸುರಿದು ಅಷ್ಟೇ ಪ್ರಮಾಣದಲ್ಲಿ ನೀರನ್ನು ಬೆರೆಸಿ ಮೇಲೆ ಎರಡು ಸಣ್ಣ ಸಣ್ಣ ಐಸ್ ತುಂಡುಗಳನ್ನು ತೇಲಿಬಿಟ್ಟ. ಅವನು ಗ್ಲಾಸಿನಿಂದ ಒಂದೆರಡು ಹನಿಯಷ್ಟು ಮದ್ಯವನ್ನು ಹೀರಿ, ಕೂಲಂಕುಷವಾಗಿ ಗ್ಲಾಸನ್ನು ಪರೀಕ್ಷಿಸಿ, ಕಣ್ಣುಗಳನ್ನು ಕಿರಿದಾಗಿಸುತ್ತ ನುಡಿದ " ಹ್ಮ್!  ಪರವಾಗಿಲ್ಲ. " 

ಅವನು ಮತ್ತೆ ಅರ್ಧ ಘಂಟೆಗಳಷ್ಟು ಕಾಲ ಪುಸ್ತಕವನ್ನು ಓದಿ  ನಂತರ ಎದ್ದು ಕೌ೦ಟರಿನ ಬಳಿ ಬಂದು ಬಿಲ್ ನ್ನು ನಗದು ಹಣದಲ್ಲಿಯೇ ಪಾವತಿಸಿದ. ಅವನು ಕರಾರುವಕ್ಕಾಗಿ ಎಷ್ಟು ಕೊಡಬೇಕಿತ್ತೋ ಅಷ್ಟೇ ಹಣವನ್ನು ಲೆಕ್ಕ ಮಾಡಿ ಪಾವತಿಸುತ್ತಿದ್ದ. ಹೀಗಾಗಿ  ಅವನಿಗೆ ವಾಪಸು ಚಿಲ್ಲರೆ ಮರಳಿಸುವ ಸಂದರ್ಭವೇ ಇರುತ್ತಿರಲಿಲ್ಲ. ಅವನು ಬಾರಿನಿಂದ ಹೊರಗೆ ಕಾಲಿಟ್ಟ ತಕ್ಷಣ  ಸಮಾಧಾನದ ನಿಟ್ಟುಸಿರು ಕಿನೊನಿಂದ ಹೊರಬರುತ್ತಿತ್ತು.  ಆ ಮನುಷ್ಯ ಬಾರಿನಿಂದ ಹೊರ ನಡೆದಿದ್ದರೂ ಅವನ ಉಪಸ್ಥಿತಿ ಇನ್ನೂ  ಬಾರಿನಲ್ಲಿ ಇರುವಂತೆ  ಭಾಸವಾಗುತಿತ್ತು. ಕೌ೦ಟರಿನ ಹಿಂದೆ ನಿಂತು ಕೀನೋ ಓರೇ ನೋಟದಲ್ಲಿ ಆ ಮನುಷ್ಯ ಕುಳಿತಿದ್ದ ಜಾಗವನ್ನು ಆಗಾಗ ದಿಟ್ಟಿಸುತ್ತಿದ್ದ. ಅವನು ಇನ್ನು ಅಲ್ಲೇ ಇದ್ದಂತೆ , ಕೈಯನ್ನು ಅರ್ಧ ಎತ್ತಿ ಇನ್ನೇನನ್ನೋ ಆರ್ಡರ್ ಮಾಡಿದ ಹಾಗೆ  ಅನಿಸುತ್ತಿತ್ತು. 

ಅವನು ಕ್ರಮೇಣ ಕಿನೋನ ಬಾರಿಗೆ ನಿಯಮಿತವಾಗಿ ಬರಲಾರಂಭಿಸಿದ. ಒಂದು, ಹೆಚ್ಛೆ೦ದರೆ ಪ್ರತಿ ವಾರ ಎರಡು ಸಲ. ಪ್ರತಿ ಬಾರಿಯೂ ಅವನು ಮೊದಲು ಬಿಯರ್ ನಂತರ ವಿಸ್ಕಿಯನ್ನು ಕುಡಿಯುತ್ತಿದ್ದ. ಕೆಲವೊಮ್ಮೆ ಕಪ್ಪು ಹಲಗೆಯ ಮೇಲೆ ಬರೆದಿಟ್ಟಿದ್ದ ದಿನದ  ತಿಂಡಿ ತಿನಿಸಿನ ಪಟ್ಟಿಯನ್ನು ಓದಿ ಏನನ್ನಾದರೂ ಆರ್ಡರ್ ಮಾಡುತ್ತಿದ್ದ. 

ಅವನು ಏನನ್ನಾದರೂ ಹೇಳುತ್ತಿದ್ದು ಅಪರೂಪವೇ ಆಗಿತ್ತು. ಪ್ರತಿ ಸಲವೂ ಅವನು ಸಂಜೆ ಆಗುವಷ್ಟರಲ್ಲೆಲ್ಲ ಕಂಕುಳಲ್ಲಿ ಪುಸ್ತಕವನ್ನು ಇಟ್ಟುಕೊಂಡು ಬಂದು ದಪ್ಪನೆಯ ಆ ಪುಸ್ತಕವನ್ನು ಕೌ೦ಟರಿನ ಮೇಲಿಡುತ್ತಿದ್ದ. ಅವನಿಗೆ ಓದಿ ಓದಿ ಸುಸ್ತಾದಾಗಲೆಲ್ಲ. ( ಅಥವಾ ಸುಸ್ತಾಯಿತು ಎಂದು ಕೀನೋ ಅಂದುಕೊಂಡಾಗಲೆಲ್ಲ ) ಅವನು ತಲೆಯೆತ್ತಿ ಮೇಲೆ ಕಪಾಟಿನಲ್ಲಿ  ಜೋಡಿಸಿಟ್ಟಿದ್ದ  ಮದ್ಯದ ಬಾಟಲಿಗಳನ್ನು  ಯಾವುದೋ ದೂರ ಪ್ರದೇಶದಿಂದ ತಂದು ಸಂರಕ್ಷಿಸಿಟ್ಟ ಅನಾಮಧೇಯ ಪ್ರಾಣಿಗಳ ಪ್ರತಿಕೃತಿಯನ್ನು  ಪರೀಕ್ಷಿಸುವವನಂತೆ ದಿಟ್ಟಿಸುತ್ತಿದ್ದ.  

ಒಮ್ಮೆ ಆ ಮನುಷ್ಯನ ಉಪಸ್ಥಿತಿ ಕಿನೋಗೆ ಅಭ್ಯಾಸವಾದ ಮೇಲೆ , ಅವರಿಬ್ಬರೇ ಇದ್ದಾಗಲೂ ಅವನಿಗೆ ಮೊದಲಿನಂತೆ ಇರುಸುಮುರುಸಾಗುತ್ತಿರಲಿಲ್ಲ.  ಹಾಗೆ ನೋಡಿದರೆ ಕೀನೋ ಸಹ ಮಿತಭಾಷಿಯೇ . ಹೀಗಾಗಿ ಇನ್ನೊಬ್ಬರ ಉಪಸ್ಥಿಯಲ್ಲಿ ಮೌನವನ್ನು ಸಹಿಸಿಕೊಂಡಿರುವದು ಕಿನೊಗೆ ಕಷ್ಟವೆನಿಸಲಿಲ್ಲ. ಆ ಮನುಷ್ಯ ಓದುತ್ತ ಕುಳಿತಿದ್ದರೆ, ಕೀನೋ ತನ್ನ ಪಾಡಿಗೆ ತಾನು ಒಬ್ಬನೇ ಇದ್ದಾಗ ಏನೆಲ್ಲ ಮಾಡುತ್ತಿದ್ದನೋ ಅದನ್ನೆಲ್ಲ ಮಾಡುತ್ತಿದ್ದ - ಪಾತ್ರೆಗಳನ್ನು ತೊಳೆಯುವದು , ಸಾಸ್ ಸಿದ್ಧಪಡಿಸುವದು ,  ಯಾವ ಹಾಡನ್ನು ಕೇಳಬೇಕು ಎಂದು ಕ್ಯಾಸೆಟನ್ನು ಆರಿಸುವದು  ಅಥವಾ ವೃತ್ತ ಪತ್ರಿಕೆಯ ಮೇಲೆ ಕಣ್ಣು ಹಾಯಿಸುವದು. 

ಕೀನೊಗೆ ಆ ಮನುಷ್ಯನ ಹೆಸರು ಏನೆಂದು ಗೊತ್ತಿರಲಿಲ್ಲ. ಈತನೂ ಸಹ ಬೇರೆಲ್ಲ ಗಿರಾಕಿಗಳಂತೆ - ಒಂದು ಬಿಯರು ಆಮೇಲೆ ಒಂದು ವಿಸ್ಕಿಯನ್ನು ಕುಡಿದು , ಸ್ವಲ್ಪ ಪುಸ್ತಕವನ್ನು ಓದಿ ನಂತರ ನಗದು ಹಣ ನೀಡಿ ಹೋಗುವವನು. ಅವನು ಯಾವತ್ತಿಗೂ ಯಾರಿಗೂ ತೊಂದರೆ ಕೊಟ್ಟವನಲ್ಲ. ಇಷ್ಟರ ಮೇಲೆ ಕಿನೋಗೆ ಅವನ ಬಗ್ಗೆ ತಿಳಿದುಕೊಳ್ಳುವದಾದರೂ ಏನಿದೆ ?  

ಕಾಲೇಜಿನ ದಿನಗಳಲ್ಲಿ ಕೀನೋ ಮಧ್ಯಮ ದೂರದ ಓಟದಲ್ಲಿ ಗಮನಾರ್ಹ ಓಟಗಾರನಾಗಿದ್ದ. ಆದರೆ ಅವನ ಹಿಮ್ಮಡಿಗಾದ ಗಾಯದ  ಕಾರಣ ಮುಂದೊಂದು ದಿನ ಯಾವುದಾದರೂ ಸಂಘ ಸಂಸ್ಥೆಯಲ್ಲಿ ಕ್ರೀಡಾಪಟುವಾಗಿ ಸೇರಬೇಕೆನ್ನುವ ಆಶಯವನ್ನು ಬಿಡಬೇಕಾಯಿತು. ಕಾಲೇಜು ಮುಗಿದ ನಂತರ ಅವನ ತರಬೇತುದಾರರ ಶಿಫಾರಿಸಿನ ಮೇರೆಗೆ ಕ್ರೀಡಾ ಸಾಮಗ್ರಿಗಳನ್ನು ಮಾಡುವ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ ಮತ್ತು ತನ್ನ ಜೀವಿತದ ಮುಂದಿನ ಹದಿನೇಳು ವರ್ಷಗಳನ್ನು ಕೀನೋ ಅಲ್ಲಿಯೇ ಕಳೆದಿದ್ದ.   ಕ್ರೀಡಾ ಸಾಮಗ್ರಿಗಳನ್ನು ಮಾರುವ ಬೇರೆ ಬೇರೆ ಅಂಗಡಿಗಳು ತನ್ನ ಕಂಪನಿಯ ಶೂಗಳನ್ನು ಮಾರುವಂತೆ  ಅಂಗಡಿಗಳ ಮಾಲೀಕರನ್ನು ಒಪ್ಪಿಸುವದು ಮತ್ತು  ಅಗ್ರಮಾನ್ಯ ಕ್ರೀಡಾಪಟುಗಳನ್ನು ತನ್ನ ಕಂಪನಿಯ ಶೂ ಧರಿಸುವಂತೆ ಮನವೊಲಿಸುವದು ಅವನ ಕೆಲಸದ ಮುಖ್ಯ ಭಾಗವಾಗಿತ್ತು.  ಓಕಯಾಮದಲ್ಲಿ ಪ್ರಧಾನ ಕಾರ್ಯಾಲಯವನ್ನು ಹೊಂದಿದ್ದ  ಮಧ್ಯಮ ಗಾತ್ರದ ಅವನ ಕಂಪನಿಗೆ  ಪ್ರಪಂಚದ ಅಗ್ರಗಣ್ಯ ಕ್ರೀಡಾ ಪಟುಗಳು ತಮ್ಮ ಶೂವನ್ನು ಮಾತ್ರ ಧರಿಸುವಂತೆ ಒಪ್ಪಂದ ಮಾಡಿಕೊಳ್ಳಲು  ಬೇಕಾಗುವ,  ಜಗತ್ತಿನ ಅತಿ ದೊಡ್ಡ  ಕಂಪನಿಗಳಾದ ನೈಕಿ , ಅಡಿಡಾಸ್ ಗಳ ಬಳಿ  ಇರುವ ಹಾಗೆ  ಹಣಕಾಸಿನ ಶಕ್ತಿ ಇರಲಿಲ್ಲ. ಇಷ್ಟಾದರೂ ಸಹ ಅವರು ಅತ್ಯ೦ತ ಕುಶಲತೆಯಿಂದ ತಯಾರಿಸಿದ್ದ ಹಲವಷ್ಟು ಶೂಗಳನ್ನು ಬಹಳಷ್ಟು ಕ್ರೀಡಾಪಟುಗಳು ಮೆಚ್ಚುಗೆಯಿಂದ ಧರಿಸುತ್ತಿದ್ದರು. "ಶ್ರದ್ಧೆಯ ಕೆಲಸಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ " ಎನ್ನುವದು ಕಂಪನಿಯ ಸಂಸ್ಥಾಪಕರ ಧ್ಯೇಯವಾಗಿತ್ತು.  ಈ ಮಂದಗತಿಯ , ಪುರಾತನ ಶೈಲಿ ಕಿನೋನ ವ್ಯಕ್ತಿತ್ವಕ್ಕೆ ತಕ್ಕದುದೇ ಆಗಿತ್ತು. ಅವನಂತಹ ಮಿತಭಾಷಿ ,ಜನರ ಜೊತೆಗೆ  ಅಷ್ಟೇನೂ  ಬೆರೆಯದವನು ಸಹ ಸಾಕಷ್ಟು ವ್ಯಾಪಾರವನ್ನು  ಮಾಡುತ್ತಿದ್ದ. ಹಾಗೆ ನೋಡಿದರೆ ಅವನ ಮೌನ ವ್ಯಕ್ತಿತ್ವವೇ ತರಬೇತಿದಾರರು ಅವನ ಕಂಪನಿಯ ಶೂಗಳನ್ನ ಶಿಫಾರಸು ಮಾಡುವಂತೆಯೂ , ಕ್ರೀಡಾಪಟುಗಳು ಅವುಗಳನ್ನು ಧರಿಸುವಂತೆಯೂ ಮಾಡುತ್ತಿತ್ತು.  ಅವನು ಪ್ರತಿ ಕ್ರೀಡಾಪಟುವಿನ ಪ್ರತಿಯೊಂದು ಅಗತ್ಯವನ್ನೂ ಎಚ್ಚರಿಕೆಯಿಂದ ಕೇಳಿಸಿಕೊಂಡು ಅವುಗಳನ್ನು ಶೂ ತಯಾರಿಕೆ ವಿಭಾಗದ  ಮುಖ್ಯಸ್ಥರಿಗೆ ತಲುಪಿಸುತ್ತಿದ್ದ .  ಅವನಿಗೆ ಹೇಳಿಕೊಳ್ಳುವಂತಹ ಸಂಬಳವೇನೂ ಇರಲಿಲ್ಲ ಆದರೆ  ಅವನಿಗೆ ಕೆಲಸ ತೃಪ್ತಿದಾಯಕವಾಗಿತ್ತು.  ಅವನಿಗೆ ಮತ್ತೆ  ಯಾವತ್ತೂ ಓಡಲು  ಸಾಧ್ಯವಾಗದಿದ್ದರೂ ಮೈದಾನದಲ್ಲಿ ಓಡುತ್ತಿರುವ ಕ್ರೀಡಾ ಪಟುಗಳ ಜೊತೆಯಿರುವದು ಸಂತೋಷದ ಕೆಲಸವಾಗಿತ್ತು. 

ಕೀನೋ ಕೆಲಸ ಬಿಟ್ಟಿದ್ದು ಕೆಲಸದ ಮೇಲಿದ್ದ ಅಸಮಾಧಾನದಿ೦ದ ಆಗಿರಲಿಲ್ಲ. ಬದಲಾಗಿ ಕಂಪನಿಯಲ್ಲಿ ಅವನ ಅತ್ಯುತ್ತಮ ಸ್ನೇಹಿತ ಎನಿಸಿಕೊಂಡಿದ್ದವನ ಜೊತೆಗೆ ಅವನ ಹೆಂಡತಿ ಮಲಗುತ್ತಿದ್ದುದು ಕಾರಣವಾಗಿತ್ತು. ಕೀನೋ ಟೋಕಿಯೊದಲ್ಲಿರುವ ಅವನ ಮನೆಗಿಂತ ಹೆಚ್ಚಿನ ಸಮಯವನ್ನು ರಸ್ತೆಯ  ಮೇಲೆ ಕಳೆಯುತ್ತಿದ್ದ. ಒಂದು  ಬ್ಯಾಗಿನಲ್ಲಿ ಹೊಸ ಹೊಸ ಶೂಗಳ ಮಾದರಿಯನ್ನು ತುಂಬಿಕೊಂಡು ಅವನು ಜಪಾನಿನ ಉದ್ದಗಲಕ್ಕೂ ಸಂಚರಿಸಿ ಕ್ರೀಡಾ ಸಾಮಗ್ರಿಗಳನ್ನು ಮಾರುವ ಅಂಗಡಿಗಳನ್ನು ಮತ್ತು ಕಾಲೇಜುಗಳನ್ನು ಸಂದರ್ಶಿಸುತ್ತಿದ್ದ. ಅವನು ಹೀಗೆ ಹೊರಗೆ ತಿರುಗಾಡುತ್ತಿರುವಾಗ ಅವನ ಹೆಂಡತಿ ಮತ್ತು ಅವನ ಸ್ನೇಹಿತ ಜೊತೆಗೆ ಸೇರುತ್ತಿದ್ದರು. ಕಿನೋ ಸಣ್ಣ ಪುಟ್ಟ ಬದಲಾವಣೆಗಳನ್ನು ಸೂಕ್ಶ್ಮವಾಗಿ ಗಮನಿಸುವ  ವ್ಯಕ್ತಿಯೇನು ಅಲ್ಲ. ಹೀಗಾಗಿ ಒಂದು ದಿನ ಅವನು ನಿಗದಿತ ದಿನಕ್ಕಿಂತ ಒಂದು ದಿನ ಮುಂಚಿತವಾಗಿ ಮನೆಗೆ ಬಂದಾಗ ಅವನ ಹೆಂಡತಿ ಮತ್ತು ಸ್ನೇಹಿತ ಸಿಕ್ಕಿ ಬೀಳದೆ ಇದ್ದಿದ್ದರೆ ಬಹುಶ : ಕೊನೆಯವರೆಗೂ ಅವನಿಗೆ ಈ ವಿಷಯ ತಿಳಿಯುತ್ತಲೇ ಇರುತ್ತಿರಲಿಲ್ಲ. 

ಅವತ್ತು ಟೋಕಿಯೋಗೆ ಬಂದ ತಕ್ಷಣ ನೇರವಾಗಿ ಮನೆಗೆ ಬಂದ ಅವನಿಗೆ ಕಾಣಿಸಿದ್ದು  ಅವನು ಮತ್ತು ಅವನ ಹೆಂಡತಿ ಯಾವತ್ತೂ ಮಲಗುತ್ತಿದ್ದ   ಕೋಣೆಯಲ್ಲಿ ಬೆತ್ತಲೆಯಾಗಿದ್ದ ಅವನ ಹೆಂಡತಿ ಮತ್ತು ಸ್ನೇಹಿತ .  ಬೆತ್ತಲೆಯಾಗಿದ್ದ ಅವನ ಹೆಂಡತಿಯ ದೇಹ ತೊನೆದಾಡುತ್ತಿತ್ತು. ಆಗ ಅವನಿಗೆ ಮೂವತ್ತೊಂಬತ್ತು ಮತ್ತು ಅವನ ಹೆಂಡತಿಗೆ ಮೂವತ್ತೈದು. ಅವರಿಗೆ ಮಕ್ಕಳಿರಲಿಲ್ಲ. ಕೀನೋ ಮಾತನಾಡದೆಯೇ ಮೌನವಾಗಿ ಮನೆಯ ಬಾಗಿಲನ್ನು ಮತ್ತೆ ಹಾಕಿ ಹೊರನಡೆದ. ಮತ್ತೆಂದೂ ಅವನು ಆ ಮನೆಗೆ ಕಾಲಿಡಲಿಲ್ಲ. ಮಾರನೆಯ ದಿನ ಅವನು ಕೆಲಸಕ್ಕೆ ರಾಜೀನಾಮೆ ನೀಡಿದ್ದ. 

ಕಿನೋಗೆ ಒಬ್ಬಳು ಅವಿವಾಹಿತೆ ದೊಡ್ಡಮ್ಮ ಇದ್ದಳು. ಅವನು ಮಗುವಾಗಿದ್ದಾಗಲಿಂದ ಅವನ ದೊಡ್ಡಮ್ಮನಿಗೆ ಕೀನೋ ಎಂದರೆ ಅಕ್ಕರೆ. ಅವಳಿಗೆ  ಬಹಳಷ್ಟು ವರ್ಷ ಒಬ್ಬ ಸ್ನೇಹಿತನಿದ್ದ ( ಪ್ರಿಯಕರ ಎಂದರೆ ಸರಿಯೇನೋ. ) ಮತ್ತು ಅವನು ಅವಳಿಗೆ ಅಯೋಮಾದಲ್ಲಿ ಒಂದು ಮನೆಯನ್ನು ಉಡುಗೊರೆಯಾಗಿ ನೀಡಿದ್ದ. ಅವಳು ಮನೆಯ ಎರಡನೆಯ ಮಹಡಿಯಲ್ಲಿ ವಾಸಿಸುತ್ತಿದ್ದಳು ಮತ್ತು ಕೆಳಗಿನ ಅಂತಸ್ತಿನಲ್ಲಿ ಕಾಫಿ ಮಾರುತ್ತಿದ್ದಳು. ಮನೆಯ ಮುಂದೆ ಸುಂದರ ಚಿಕ್ಕ ಕೈತೋಟ ಮತ್ತು ಒಂದು ಆಕರ್ಷಕವಾದ, ಉದ್ದನೆಯ ಎಲೆಗಳಿಂದ ತುಂಬಿದ , ಬಾಗಿದ ಕೊಂಬೆಗಳಿರುವ  ವಿಲೊವ್ ಮರವಿತ್ತು . ಮನೆ ‘ನೇಜು’ ವಸ್ತು ಸಂಗ್ರಹಾಲಯದ ಹಿಂದಿರುವ ಇಕ್ಕಟ್ಟಾದ ಓಣಿಯಲ್ಲಿತ್ತು . ಅದೇನು ಬಹಳಷ್ಟು ಜನ ಅಡ್ಡಾಡುವ ಜಾಗವಲ್ಲ ಆದರೆ ಅವನ ದೊಡ್ಡಮ್ಮಳಿಗಿದ್ದ ಜನರನನ್ನು ಆಕರ್ಷಿಸುವ ಗುಣದಿಂದ ಕಾಫಿ ಅಂಗಡಿ ಚೆನ್ನಾಗಿಯೇ ನಡೆಯುತ್ತಿತ್ತು. 

ಅವಳಿಗೆ ಅರವತ್ತು ವರ್ಷಗಳಾದ ಮೇಲೆ , ಇನ್ನುಸರಿಯಾಗಿ ಹೇಳಬೇಕೆಂದರೆ ಅವಳಿಗೆ ಬೆನ್ನು ನೋವು ಪ್ರಾರಂಭವಾದ ಮೇಲೆ ಕಾಫಿ ಅಂಗಡಿಯನ್ನು ಒಬ್ಬಳೇ  ನಡೆಸಿಕೊಂಡು  ಹೋಗುವದು ಅವಳಿಗೆ ಕಷ್ಟಕರವಾಗಿತ್ತು. ಅವಳು ಆ ಮನೆಯನ್ನು ಬಿಟ್ಟು ‘ಈಜು ಕೋಜೆನ್’ ನಲ್ಲಿರುವ ಅಪಾರ್ಟ್ ಮೆ೦ಟ್ ಗೆ ಹೋಗುವ ಬಗ್ಗೆ ವಿಚಾರ ಮಾಡತೊಡಗಿದ್ದಳು. "ಬಹುಶ : ಯಾವತ್ತಾದರೊಮ್ಮೆ ನೀನು ಈ ಕಾಫಿ ಅಂಗಡಿಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿ ಬರಬಹುದೇನೋ" ಅವಳು ಕಿನೊನಲ್ಲಿ ಕೇಳಿದ್ದಳು. ಇದು ಕೀನೋ ಅವನ ಹೆಂಡತಿಯ ಅನ್ಯ ಸಂಬಂಧದ ಬಗ್ಗೆ  ತಿಳಿಯುವದಕ್ಕೆ ಮೂರು ತಿಂಗಳುಗಳ ಮೊದಲು.  " ಖಂಡಿತ. ಆದರೆ ಸದ್ಯಕ್ಕೆ ನಾನು ನನ್ನ ಕೆಲಸದಲ್ಲಿ ಸಂತೋಷವಾಗಿದ್ದೇನೆ "

ರಾಜೀನಾಮೆ ನೀಡಿದ ನಂತರ ಕೀನೋ ಅವನ ದೊಡ್ಡಮ್ಮನಿಗೆ ಫೋನಾಯಿಸಿ ಅಂಗಡಿಯನ್ನು ಅವಳು ಈಗಾಗಲೇ ಮಾರಿಬಿಟ್ಟಿದ್ದಾಳೆಯೇ ಎಂದು ವಿಚಾರಿಸಿದ. ಅಂಗಡಿಯನ್ನು ಮಾರಲು ಅವಳು ಜಾಹಿರಾತು ನೀಡಿದ್ದಳು. ಆದರೆ ಇನ್ನೂ ಯಾವುದೇ ಗಂಭೀರ ಪ್ರಸ್ತಾವನೆ ಬಂದಿರಲಿಲ್ಲ. "  ನೀನು ಒಪ್ಪಿಗೆ ಕೊಟ್ಟರೆ ಅಲ್ಲೊಂದು ಬಾರನ್ನು ಪ್ರಾರಂಭ ಮಾಡಬೇಕು ಎಂದಿರುವೆ. " ಕೀನೋ ಹೇಳಿದ.  " ನಾನು ಪ್ರತಿ ತಿಂಗಳು ನಿನಗೆ ಬಾಡಿಗೆ ಕೊಡಬಹುದೇ ?"

"ಆದರೆ ನಿನ್ನ ಈಗಿನ ಕೆಲಸವೇನಾಯಿತು ? " ಅವಳು ಕೇಳಿದಳು. 

"ಕೆಲ ದಿನಗಳ ಹಿಂದೆ ಬಿಟ್ಟು ಬಿಟ್ಟೆ "

"ನಿನ್ನ ಹೆಂಡತಿಗೆ ಅದು ಸರಿ ಅನಿಸಿತೇ ?"

"ಬಹುಶ:  ಸಧ್ಯದಲ್ಲಿಯೇ ನಾವು ವಿಚ್ಛೇದನ ಪಡೆಯುವವರಿದ್ದೇವೆ "

ಕೀನೋ ಕಾರಣವೇನೆಂದು ವಿವರಿಸಲಿಲ್ಲ ಮತ್ತು ಅವನ ದೊಡ್ಡಮ್ಮ ಏನೆಂದು ಕೇಳಲಿಲ್ಲ. ಒಂದಷ್ಟು ಹೊತ್ತು ಅಲ್ಲಿ ಮೌನವಿತ್ತು. ನಂತರ ಅವನ ದೊಡ್ಡಮ್ಮ ತಿಂಗಳ ಬಾಡಿಗೆ ಎಷ್ಟೆಂದು ಹೇಳಿದಳು. ಕೀನೋ ಊಹಿಸಿದ್ದಕ್ಕಿಂತ ಅದು ಬಹಳ ಕಡಿಮೆಯಾಗಿತ್ತು. "ಅಷ್ಟನ್ನು ನಾನು ಹೊ೦ದಿಸಬಹುದು  ಅನಿಸುತ್ತದೆ " ಅವನು ಅವಳಿಗೆ ಹೇಳಿದ. 

ಅವನು ಮತ್ತು ಅವನ ದೊಡ್ಡಮ್ಮ ಯಾವತ್ತೂ ತುಂಬಾ  ಮಾತನಾಡಿಕೊಂಡವರಲ್ಲ. ( ಅವನಮ್ಮನಿಗೆ ಅದು ಇಷ್ಟವಿರಲಿಲ್ಲ ) ಆದರೂ ಅವರಿಬ್ಬರ ನಡುವೆ ಯಾವತ್ತಿಗೂ ಒಂದು ಅನ್ಯೋನ್ಯವಾದ ಪರಸ್ಪರರ ಬಗೆಗೆ ಅರಿವಿತ್ತು.  ಕೀನೋ ಕೊಟ್ಟ ಮಾತಿಗೆ ತಪ್ಪುವವನಲ್ಲ ಎನ್ನುವದು ಅವಳಿಗೆ ತಿಳಿದಿತ್ತು. 

ಕೀನೋ ತನ್ನ ಉಳಿತಾಯದ ಅರ್ಧ ಭಾಗವನ್ನು ವಿನಿಯೋಗಿಸಿ ಕಾಫಿ ಅಂಗಡಿಯನ್ನು ಬಾರನ್ನಾಗಿ ಪರಿವರ್ತಿಸಿದ. ಸರಳ ಪೀಠೋಪಕರಣಗಳನ್ನು ಖರೀದಿಸಿದ. ಗೋಡೆಗೆ ಸೌಮ್ಯ ಬಣ್ಣದ ಹೊಸ ಚಿತ್ರಪಟಗಳನ್ನು ತೂಗಿ ಹಾಕಿದ. ಬಾರಿನ ಶೆಲ್ಫಿನಲ್ಲಿ ಹಳೆಯ ಕ್ಯಾಸೆಟುಗಳಿಂದ ತುಂಬಿಸಿದ. ಅವನ ಬಳಿ ಒಂದು ಯೋಗ್ಯವಾದ ಸ್ಟಿರಿಯೋ ಇತ್ತು. ಅವನು ಮದುವೆಗೆ ಮುಂಚೆ ತುಸು ದುಬಾರಿಯೇ ಎನ್ನಬಹುದಾಗಿದ್ದ ಬೆಲೆಗೆ ಖರೀದಿಸಿದ್ದ  ಥೇರೋನ್ಸ್ ಗ್ರಾಮಾಫೋನ್ಸ್ , ಲಕ್ಸ್ ಮ್ಯಾನ್ ಆ೦ಪ್ಲಿಫೈರ್  ಹಾಗೂ ಜೆಬಿಲ್ ಸ್ಪೀಕರ್  ಗಳನ್ನು ಹೊರತೆಗೆದು ಜೋಡಿಸಿಟ್ಟ. ಹಳೆಯ ಜಾಜ್ ಸಂಗೀತ   ಯಾವತ್ತಿಗೂ ಅವನಿಗೆ ಅಚ್ಚುಮೆಚ್ಚಿನದಾಗಿತ್ತು. ಇದು ಅವನ ಏಕಮಾತ್ರ ಹಾಗೂ ಯಾರೊಂದಿಗೂ ಹಂಚಿಕೊಳ್ಳದ  ಹವ್ಯಾಸವಾಗಿತ್ತು. ಅವನ ಕಾಲೇಜಿನ ದಿನಗಳಲ್ಲಿ ಅವನು ರೊಪ್ಪೊಂಗಿಯಲ್ಲಿನ ಬಾರೊಂದರಲ್ಲಿ ಅರೆ ಕಾಲಿಕ ಕೆಲಸಗಾರನಾಗಿ ಕೆಲಸ ಮಾಡಿದ್ದರಿಂದ ಬಾರಿನಲ್ಲಿ ಮದ್ಯ ಬೆರೆಸುವ ಕೆಲಸದಲ್ಲಿ ಪರಿಣಿತಿಯಿತ್ತು. 

ಅವನು ಬಾರಿಗೆ 'ಕೀನೊ' ಎಂದು ಹೆಸರಿಟ್ಟ. ಅದರ ಹೊರತಾಗಿ ಅವನಿಗೆ ಬೇರಾವುದೇ ಹೆಸರು ಹೊಳೆದಿರಲಿಲ್ಲ.  ಅವನು ಬಾಗಿಲು ತೆರೆದ ಮೊದಲ ವಾರ ಒಬ್ಬನೇ ಒಬ್ಬ ಗಿರಾಕಿಯೂ ಬಾರಿನತ್ತ ಸುಳಿಯಲಿಲ್ಲ. ಕೀನೋ ಅದರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳಲಿಲ್ಲ.   ಹಾಗೇ ನೋಡಿದರೆ ಅವನು ಬಾರಿನ ಬಗ್ಗೆ ಯಾವುದೇ ಜಾಹೀರಾತನ್ನೂ ನೀಡಿರಲಿಲ್ಲ ಅಥವಾ ಹೊಳೆಯುವ ಗಮನ ಸೆಳೆಯುವ ಬೋರ್ಡನ್ನೂ ನೇತು ಹಾಕಿರಲಿಲ್ಲ.   ಈ ಓಣಿಯಲ್ಲಿರುವ ಬಾರಿಗೆ ಕುತೂಹಲದಿಂದ ಯಾರಾದರೂ ಭೇಟಿ ನೀಡುವರು ಎಂದು ತಾಳ್ಮೆಯಿಂದ ಕಾಯತೊಡಗಿದ.   ಅವನ ಹಳೆಯ ಕೆಲಸ ಬಿಟ್ಟಾಗ ಕಂಪನಿಯವರು ನೀಡಿದ್ದ ಹಣ ಇನ್ನೂ ಅವನ ಬಳಿ ಮಿಕ್ಕಿತ್ತು. ಅಲ್ಲದೇ ಅವನ ಹೆಂಡತಿಯೂ ಅವನ ಬಳಿ ಯಾವುದೇ ಹಣಕಾಸಿನ ನೆರವನ್ನು ಕೇಳಿರಲಿಲ್ಲ. ಅವಳು ಅದಾಗಲೇ ಅವನ ಸ್ನೇಹಿತನೊಂದಿಗೆ ವಾಸಿಸುತ್ತಿದ್ದಳು. ಕೀನೋ ಮತ್ತವನ ಹೆಂಡತಿ ಅವರ ಮನೆಯನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಕೀನೋ ದೊಡ್ಡಮ್ಮನ ಮನೆಯ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದ ಮತ್ತು ಇನ್ನಷ್ಟು ಕಾಲ ಹೀಗೆಯೇ ತಳ್ಳುವದು ಸಾಧ್ಯವೆಂದು ಅವನಿಗೆ ಅನಿಸಿತ್ತು.   

ತನ್ನ ಮೊಟ್ಟಮೊದಲ ಗಿರಾಕಿಗೆ ಕಾಯುತ್ತ ಕೀನೋ ತಾನು ಇಷ್ಟಪಟ್ಟಿದ್ದ ಸಂಗೀತವನ್ನು ಕೇಳುತ್ತ, ಇಲ್ಲಿಯವರೆಗೆ ಓದಬೇಕೆಂದುಕೊಂಡಿದ್ದ ಪುಸ್ತಕಗಳನ್ನು ಓದುತ್ತ  ಆನಂದಿಸುತ್ತಿದ್ದ.  ಮಳೆಯನ್ನು ಬರಮಾಡಿಕೊಳ್ಳುವ, ಪಸೆಯಿಲ್ಲದ ಮಣ್ಣಿನಂತೆ ಅವನು ಮೌನ , ಏಕಾಂತತೆ ಮತ್ತು ಒಂಟಿತನದಲ್ಲಿ  ತೊಯ್ಯತೊಡಗಿದ. ಅವನು ಈಗೀಗ ಬಹುತೇಕ ಆರ್ಟ್ ತಾಟುಮ್ ನ ಏಕವ್ಯಕ್ತಿ ಪಿಯಾನೋ ವಾದನವನ್ನು  ಕೇಳುತ್ತಿದ್ದ. ಸಧ್ಯದ ಅವನ ಮನಃಸ್ಥಿತಿಗೆ ಅದೇ ಹೊಂದುವಂತಿತ್ತು. ಅವನಿಗೆ ಕಾರಣವೇನೆಂದು ಗೊತ್ತಿರಲಿಲ್ಲ ಆದರೆ ತನ್ನ ಹೆಂಡತಿಯೆಡೆಗಾಗಲಿ ಅಥವಾ ಅವಳ ಜೊತೆಗೆ ಸಂಬಂಧ ಬೆಳೆಸಿದ್ದ ಅವನ ಸ್ನೇಹಿತನ ಬಗ್ಗೆಯಾಗಲಿ ಕಿನೋಗೆ ಕೋಪವಾಗಲಿ , ಕಹಿ ಭಾವನೆಯಾಗಲಿ ಹುಟ್ಟಲಿಲ್ಲ. ಅವರಿಬ್ಬರ ದ್ರೋಹದಿಂದ  ಅವನಿಗೆ ಆಘಾತವೇ ಆಗಿದ್ದರೂ ಕ್ರಮೇಣ ಸಮಯ ಸರಿದಂತೆ, ಒಂದಲ್ಲ ಒಂದು ದಿನ ಈ ಘಟನೆ ಘಟಿಸಿಯೇ ಬಿಡಬೇಕು ಎನ್ನುವದು ತನ್ನ ಹಣೆಬರಹದಲ್ಲಿತ್ತು ಎಂದು ಅವನು ಅಂದುಕೊಂಡಿದ್ದ. ಹೇಳಬೇಕೆಂದರೆ ಅವನ ಜೀವನದಲ್ಲಿ ಇದುವರೆಗೂ ಅವನು ಸಾಧಿಸಿದ್ದು ಏನೂ ಇಲ್ಲ.  ಇನ್ನೊಬ್ಬರನ್ನು ಸಂತೋಷಪಡಿಸುವದಿರಲಿ  ತನ್ನನು ತಾನೇ ಸಂತೋಷವಾಗಿಟ್ಟುಕೊಳ್ಳುವದೂ ಅವನಿಗೆ ಸಾಧ್ಯವಾಗಿರಲಿಲ್ಲ. ಸಂತೋಷ ? ಅದರ ಅರ್ಥವೇ ಅವನಿಗೆ ತಿಳಿದಿರಲಿಲ್ಲ ಎಂದರೂ ಸರಿಯೇ. ಅವನಿಗೆ ಯಾವುದೇ ಭಾವ ತೀವ್ರತೆಯನ್ನು ಗ್ರಹಿಸುವ ಶಕ್ತಿಯೂ ಇರಲಿಲ್ಲ. ಹೀಗಾಗಿ ನೋವು , ಕೋಪ ,  ಹತಾಶೆ ,  ಸಂಕಟ ಇವೆಲ್ಲವೂ ಹೇಗಿರುತ್ತದೆ ಎನ್ನುವ ಯಾವ ಎಣಿಕೆಯೂ ಅವನಿಗಿರಲಿಲ್ಲ. ಈಗ ಹೆಚ್ಚೆ೦ದರೆ, ಅವನಿಗೆ ಮಾಡಲು ಸಾಧ್ಯವಾದುದು ತೂಕವಿಲ್ಲದ, ಆಳವಿಲ್ಲದ ಅವನ ಶೂನ್ಯ ಹೃದಯ ಪಟಪಟಿಸದಂತೆ, ಗೊತ್ತು ಗುರಿಯಿಲ್ಲದೆ ಹೊಯ್ದಾಡದಂತೆ  ತಡೆಯಲು ಜಾಗವೊಂದನ್ನು ನಿರ್ಮಿಸುವದು.  ಓಣಿಯಲ್ಲಿರುವ ಈ ಸಣ್ಣ ಬಾರು 'ಕೀನೊ' ಅಂತಹ  ಜಾಗವಾಯಿತು ಮತ್ತು ಬಾರು ಸಹ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಒಂದು   ವಿಲಕ್ಷಣವಾದ ಹಿತಕರ ಅನುಭೂತಿಯನ್ನುಂಟು ಮಾಡುವ ಜಾಗವಾಯಿತು. 

'ಕೀನೊ' ಬಾರಿನ ವಿಲಕ್ಷಣ ಹಿತಕರ ಅನುಭೂತಿಯನ್ನು ಕಂಡು ಹಿಡಿದಿದ್ದು ಯಾವುದೇ ವ್ಯಕ್ತಿಯಲ್ಲ ಬದಲಾಗಿ ಯಾವುದೋ ಒಂದು ಬೀದಿ ಬೆಕ್ಕು. ಉದ್ದನೆಯ ಬಾಲದ ಕಂಡು ಬಣ್ಣದ ಚುರುಕು ಹೆಣ್ಣು ಬೆಕ್ಕು.  ಬಾರಿನ ಮೂಲೆಯಲ್ಲಿರುವ ಬಾಟಲುಗಳನ್ನು ಪೇರಿಸಿಟ್ಟ ಕಪಾಟಿನ ಬಳಿ ಮುದುರಿಕೊಂಡು ಮಲಗುವದು ಅದಕ್ಕೆ ಇಷ್ಟವಾಗಿತ್ತು. ಕೀನೋ ಬೆಕ್ಕಿನ ಏಕಾಂಗಿತನವನ್ನು ಭಂಗಪಡಿಸುವ ಯಾವುದೇ  ಕೆಲಸಕ್ಕೂ ಕೈ ಹಾಕಲಿಲ್ಲ. ದಿನಕೊಮ್ಮೆ ಅದಕ್ಕೆ ತಿನ್ನಲು ಏನಾದರೂ ಹಾಕಿ , ಕುಡಿಯಲು ನೀರಿಡುವ ಬಟ್ಟಲನ್ನು ಬದಲಿಸುವದನ್ನು ಬಿಟ್ಟರೆ ಬೇರೇನೂ ಇಲ್ಲ. ಜೊತೆಗೆ ಬೆಕ್ಕು ಆರಾಮವಾಗಿ ಹೊರಗೆ ಹೋಗಿ ಬಂದು ಮಾಡಲು ಆಗುವಂತೆ ಅದಕ್ಕೆ ಮಾತ್ರ ಸರಿ ಹೊಂದುವಂತ ಪುಟ್ಟ ಬಾಗಿಲನ್ನು ಮಾಡಿದ.   

ಬೆಕ್ಕು ಬಹುಶ : ತನ್ನೊಟ್ಟಿಗೆ ಒಂದಷ್ಟು ಶುಭ ದೆಸೆಯನ್ನು ತಂದಿತ್ತು ಎನ್ನುವಂತೆ ಅದು ಬಂದ ದಿನದಿಂದ ಬಾರಿನತ್ತ ಸಾವಕಾಶವಾಗಿ ಕೆಲ ಗಿರಾಕಿಗಳು ಬರತೊಡಗಿದರು. ಅವರಲ್ಲಿ ಬಹಳಷ್ಟು ಮಂದಿ  ಓಣಿಯ ಸಂದಿಯಲ್ಲಿರುವ ಈ ಪುಟ್ಟ ಬಾರು , ಅದರ ಮಧ್ಯ ವಯಸ್ಕ ಮಿತಭಾಷಿ ಮಾಲೀಕ, ಬಾರಿನ ಮುಂದಿನ ಕೈತೋಟದಲ್ಲಿರುವ ಸುಂದರ ವಿಲ್ಲೋ ಮರ ,  ಸಣ್ಣಗೆ ಗುನುಗಿದಂತೆ ಗ್ರಾಮಾಫೋನಿನಿಂದ ಕೇಳುವ ಹಳೆಯ ಹಾಡುಗಳು , ಮೂಲೆಯಲ್ಲಿ ಸುರುಳಿ ಸುತ್ತಿ ಮುದುರಿ ಮಲಗಿರುವ ಕಂಡು ಬೆಕ್ಕು - ಇವುಗಳನ್ನು ಇಷ್ಟಪಟ್ಟವರು ಖಾಯಂ ಗಿರಾಕಿಗಳಾದರು . ಒಮ್ಮೊಮ್ಮೆ ಕೆಲವರು ತಮ್ಮ ಜೊತೆಗೆ ತಮ್ಮ ಪರಿಚಯದವರನ್ನೂ ಕರೆ ತರುತ್ತಿದ್ದರು.  ಹೆಚ್ಚಲ್ಲದಿದ್ದರೂ ಬಾರು ಸುಮಾರಾಗಿ ನಡೆಯತೊಡಗಿತು. 

ಮತ್ತು ಕಿನೋಗೆ ಅಷ್ಟು ಸಾಕಿತ್ತು. 

ಬಾರು ತೆರೆದು ಸುಮಾರು ಎರಡು ತಿಂಗಳುಗಳಾದ ಮೇಲೆ ತಲೆ ಬೋಳಿಸಿಕೊಂಡ ಆ ಯುವಕ ಮೊದಲ ಸಲ ಕೀನೊನ  ಬಾರಿಗೆ ಬಂದಿದ್ದ . ಅದಾಗಿ ಎರಡು ತಿ೦ಗಳಗಳಾದ ಮೇಲೆ ಕಿನೋಗೆ ಆ ಯುವಕನ ಹೆಸರು ಗೊತ್ತಾದದ್ದು - ಕಮಿಟೊ . 

ಅವತ್ತು ಮಳೆ ಸಣ್ಣಗೆ ಜಿನುಗುತ್ತಿತ್ತು . ಛತ್ರಿ ತೆರೆಯಬೇಕೆ ಬೇಡವೇ ಎಂದು ಗೊಂದಲ ಸೃಷ್ಟಿಸುವಂತಹ ಮಳೆ. ಬಾರಿನಲ್ಲಿ ಇದ್ದ  ಗಿರಾಕಿಗಳು ಮೂರು ಜನ ಮಾತ್ರ. ಕಮಿಟೊ ಮತ್ತು ಸೂಟು ಧರಿಸಿದ್ದ ಇನ್ನಿಬ್ಬರು ಯುವಕರು.  ಸಮಯ ಏಳೂವರೆ ಆಗಿತ್ತು. ಯಾವತ್ತಿನಂತೆ ಕಮಿಟೊ ಅವನ ಮಾಮೂಲಿ ಜಾಗದಲ್ಲಿ ಕುಳಿತು ನೀರು ಬೆರೆಸಿದ್ದ  ವಿಸ್ಕಿ  ಹೀರುತ್ತ ಪುಸ್ತಕ ಓದುತ್ತಿದ್ದ. ಇಬ್ಬರು ಯುವಕರ ಇನ್ನೊಂದು ಟೇಬಲಿನಲ್ಲಿ ಕುಳಿತು  ವೈನ್ ಕುಡಿಯುತ್ತಿದ್ದರು. ಆ ವೈನ್ ಬಾಟಲನ್ನು ತಂದವರು ಅವರೇ. ಈಬಾರಿನಲ್ಲಿ ಕುಳಿತು ತಾವು ತಂದಿದ್ದ ವೈನನ್ನು ಕುಡಿದು ಕೊಂಚ ಹಣವನ್ನು ಪಾವತಿಸಬಹುದೇ  ಎಂದು ಅವರು ಕಿನೋನನ್ನು ಕೇಳಿದ್ದರು.   ಇದು ಅವನಿಗೂ ಹೊಸತು. ಆದರೆ ಅವರಿಗೆ ಇಲ್ಲವೆನ್ನಲು ಅವನ ಬಳಿ ಕಾರಣವಿರಲಿಲ್ಲ.   ಕೀನೋ ಅವರಿಗೆ ಟೇಬಲನ್ನು ಹೊಂದಿಸಿ , ಬಾಟಲನ್ನು ತೆರೆದು ಎರಡು ವೈನ್ ಗ್ಲಾಸಿಗೆ ಸುರುವಿ , ಒಂದು ಬಟ್ಟಲು ಹುರಿಗಡಲೆಯನ್ನು ತಂದಿಟ್ಟ.  ಅಂತಹ  ತೊಂದರೆಯಾಗುವ ಕೆಲಸವೇನಲ್ಲ. ಆದರೆ ಅವರಿಬ್ಬರೂ ಒಂದೇ ಸಮನೆ ಸಿಗರೇಟನ್ನು ಸೇದುತ್ತ ಹೊಗೆ ಬಿಡುತ್ತಿರುವದು,  ಸಿಗರೇಟಿನ ಹೋಗೆ ಸಹಿಸದ ಕಿನೋಗೆ ರೇಜಿಗೆಯನ್ನುಂಟು ಮಾಡಿತ್ತು. ಮಾಡಲು ಯಾವುದೇ ಮಹತ್ತರವಾದ ಕೆಲಸ ಇಲ್ಲದ ಕಾರಣ ಕೀನೋ ಸ್ಟೂಲಿನ ಮೇಲೆ ಕುಳಿತುಕೊಂಡು ಕೋಲ್ಮನ್ ಹಾಕಿನ್ಸ್ ನ 'ಜೋಶುವಾ ಹಿಟ್ ದ್ ಬ್ಯಾಟಲ್ ಆಫ್  ಜೆರಿಚೊ' ಹಾಡನ್ನು ಕೇಳತೊಡಗಿದ. 

ಮೊದ ಮೊದಲು ಇಬ್ಬರೂ ಯುವಕರು ವೈನನ್ನು ಹೀರುತ್ತ ಆರಾಮವಾಗಿ ಮಾತನಾಡುತ್ತ ಕುಳಿತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಸ್ವಲ್ಪ ಸಮಯದ ನಂತರ ಏನಾಯಿತು ಎಂದು ಕಿನೋಗೆ ತಿಳಿಯುವ ಮೊದಲೇ ಅವರಿಬ್ಬರ ನಡುವೆ ಸಣ್ಣಗೆ ಹುಟ್ಟಿಕೊಂಡ ಭಿನ್ನಾಭಿಪ್ರಾಯ ದೊಡ್ಡ ಸ್ವರೂಪ ಪಡೆದುಕೊಂಡಿತು.   ಅವರಲ್ಲಿ ಒಬ್ಬ ಎದ್ದು  ಕೋಪದಲ್ಲಿ ಟೇಬಲನ್ನು ಅಪ್ಪಳಿಸಿದ ರೀತಿಗೆ ಒಂದು ಗಾಜಿನ ಲೋಟ ನೆಲಕ್ಕೆ ಬಿದ್ದು ಫಳಾರನೆ ಚೂರಾಯಿತು. ಕೀನೋ ಗಡಬಡಿಸಿ ಬಂದು ಗ್ಲಾಸಿನ ಚೂರುಗಳನ್ನು ಗುಡಿಸಿ ತೆಗೆದು ಬೇರೊಂದು ಲೋಟವನ್ನು ತಂದಿಟ್ಟ. 

ಕಮಿಟೊಗೆ  - (ಆ ಸಮಯದಲ್ಲಿ ಕಿನೋಗೆ ಇನ್ನೂ  ಅವನ ಹೆಸರು ತಿಳಿದಿರಲಿಲ್ಲ)   ಆಗಲೇ ಯುವಕರಿಬ್ಬರ ನಡುವಳಿಕೆ ಜಿಗುಪ್ಸೆ ಹುಟ್ಟಿಸುತ್ತಿತ್ತು .  ಅವನ ಮುಖಭಾವದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ ಅವನು ಕೈಬೆರಳುಗಳು ಅಸಹನೆಯಿಂದ  ಟೇಬಲಿಗೆ ಗಿಟಾರನ್ನು ನುಡಿಸುವಂತೆ ಪಟ  ಪಟನೆ ಬಡಿಯುತ್ತಿದ್ದವು.  ಪರಿಸ್ಥಿತಿ ಇನ್ನೂ ಹದಗೆಡುವದಕ್ಕೆ ಮೊದಲು ಇದನ್ನು ಸರಿ ಪಡಿಸಬೇಕೆಂದು ಕೀನೋ ನಿರ್ಧರಿಸಿದ. ಕೀನೋ ಯುವಕರಿಬ್ಬರ ಬಳಿಗೆ ಬಂದು " ದಯವಿಟ್ಟು ಕ್ಷಮಿಸಿ. ದಯಮಾಡಿ ತಾವು ಸ್ವಲ್ಪ ಸಣ್ಣಗೆ ಮಾತನಾಡಬಹುದೇ ?"

ಅವರಲ್ಲೊಬ್ಬ ಕಿನೋನೆಡೆಗೆ  ಥಣ್ಣಗೆ ಹೊಳೆಯುವ  ದೃಷ್ಟಿ ಬೀರುತ್ತ ಎದ್ದು ನಿಂತ. ಕೀನೋ ಇಲ್ಲಿಯವರೆಗೆ ಅವನನ್ನು ಸರಿಯಾಗಿ ನೋಡಿರಲಿಲ್ಲ.  ಆ ಮನುಷ್ಯ ದೈತ್ಯ ದೇಹಿಯಾಗಿದ್ದ.  ಆಜಾನುಭಾಹುವಲ್ಲ. ಆದರೆ ಸುಮೋ ಕುಸ್ತಿ ಪಟುವಂತೆ ಭಾರಿ ದೇಹ. 

ಇನ್ನೊಬ್ಬ  ಯುವಕ ಸ್ವಲ್ಪ ಸಣಕಲು, ಆದರೆ ತೀಕ್ಷ್ಣ ನೋಟ. ಮತ್ತೊಬ್ಬರನ್ನು ಯಾವುದೇ ಕೆಲಸಕ್ಕಾದರೂ ಪ್ರೇರೇಪಿಸಬಲ್ಲ ನೋಟ.   ಅವನೂ ಸಹ ನಿಧಾನವಾಗಿ ಟೇಬಲಿನಿಂದ ಎದ್ದು ನಿಂತ . ಈಗ ಕೀನೋ ಅವರಿಬ್ಬರಿಗೆ ಮುಖಾಮುಖಿಯಾಗಿ ನಿಂತಿದ್ದ.  ಇದ್ದಕ್ಕಿದ್ದ ಹಾಗೆ ಅವರಿಬ್ಬರೂ ತಮ್ಮ ನಡುವಿನ ವಾಗ್ವಾದವನ್ನು ಕೊನೆಗೊಳಿಸಿ ಕಿನೋನನ್ನು ಎದುರಿಸಲು ಸಿದ್ಧರಾದರು.  

ಅವರಿಬ್ಬರು ಸಿದ್ಧರಾಗಿ ನಿಂತ ರೀತಿ ನೋಡಿದರೆ  ಮೊದಲೇ ಯೋಜನೆಯೊಂದನ್ನು ಹಾಕಿಕೊಂಡು ಇಂತಹ ಒಂದು  ಅವಕಾಶಕ್ಕಾಗಿಯೇ ಅವರು ಕಾಯುತ್ತಿದ್ದವರಂತೆ ಕಾಣಿಸಿತು. 

"ನೀನು ಮಧ್ಯೆ ಬಾಯಿ ಹಾಕಿ ನಮ್ಮ ಮಾತುಕತೆಗೆ ಅಡ್ಡಿ ಪಡಿಸಬಹುದು ಎಂದು ಅಂದುಕೊಂಡಿದ್ದೀಯ?"   ಅವರಲ್ಲೊಬ್ಬ ಕಠಿಣ ದನಿಯಲ್ಲಿ  ಕೇಳಿದ. 

ಅವರು ಧರಿಸಿದ್ದ ಸೂಟು ಮೇಲು ನೋಟಕ್ಕೆ ಬೆಲೆ  ಬಾಳುವಂತೆ ಕಾಣಿಸಿದರೂ ಸೂಕ್ಷ್ಮವಾಗಿ ಗಮನಿಸಿದರೆ ಅದು ಕಳಪೆ ದರ್ಜೆಯದು ಎಂದು ಅರಿವಾಗುತ್ತಿತ್ತು. ಅವರು ಪೂರ್ಣ ಪ್ರಮಾಣದ ಅಪರಾಧಿ ತಂಡಕ್ಕೆ  ಸೇರಿದವರಲ್ಲದಿದ್ದರೂ ಅವರು ಮಾಡುವ ಕೆಲಸ ಅಂತಹ ಗೌರವಾನ್ವಿತ ಅನಿಸುವ ಹಾಗೆ ಇರಲಿಲ್ಲ. ದೈತ್ಯ ದೇಹಿ ಕೂದಲನ್ನು ಮಿಲಿಟರಿಯವರಂತೆ ಸಣ್ಣಗೆ ಕತ್ತರಿಕೊಂಡಿದ್ದರೆ ಇನ್ನೊಬ್ಬ ಬಣ್ಣ ಹಾಕಿದ ಉದ್ದನೆಯ ಕೂದಲನ್ನು ಹಿಂದೆಳೆದು ಜುಟ್ಟು ಹಾಕಿಕೊಂಡಿದ್ದ. ಕೀನೋ ಮುಂದೆ ನಡೆಯಬಹುದಾದ ಕಹಿ ಘಟನೆಗೆ ಮನಸ್ಸಿನಲ್ಲೇ ಸಿದ್ಧನಾಗತೊಡಗಿದ. ಅವನ ಕಂಕುಳಲ್ಲಿ  ಬೆವರೊಡೆಯಲು ಪ್ರಾರಂಭವಾಯಿತು. 

"ಕ್ಷಮಿಸಿ "  ಇನ್ನೊಂದು ಸ್ವರ ತೂರಿಬಂತು . 

ಕೀನೋ ತಿರುಗಿದಾಗ ಅವನ ಹಿಂದೆ ಕಮಿಟೊ ನಿಂತಿದ್ದ. 

"ಅವನನ್ನು ದೂಷಿಸಬೇಡಿ" ಕಮಿಟೊ ಹೇಳಿದ "ನಿಮ್ಮನ್ನು ಸುಮ್ಮನಿರಿಸಲು ಅವನನ್ನು ಕಳುಹಿಸಿದ್ದು ನಾನು.  ನೀವು ಅಷ್ಟು ಜೋರಾಗಿ ಗಲಾಟೆ ಮಾಡಿದರೆ ಏಕಾಗ್ರತೆಯಿಂದ ಪುಸ್ತಕ ಓದುವದು ಸಾಧ್ಯವಿಲ್ಲ."

ಕಮಿಟೊನ ಧ್ವನಿ ತಣ್ಣಗಿತ್ತು , ಎಂದಿಗಿಂತಲೂ ಮಂದವಾಗಿತ್ತು. ಆದರೆ ಅದೃಶ್ಯವಾದ ಯಾವುದೋ ಒಂದು ಭಾವ ಅಲ್ಲಿ ಮಿಸುಕಾಡಿದಂತಿತ್ತು. . 

"ಪುಸ್ತಕ ಓದಲು ಸಾಧ್ಯವಿಲ್ಲ?" ತೆಳ್ಳಗಿನ ವ್ಯಕ್ತಿ ಕಮಿಟೋನ ಮಾತಿನಲ್ಲಿ ಯಾವುದೇ ವಾಕ್ಯ ರಚನಾ ದೋಷ ಇಲ್ಲವೆನ್ನುವದನ್ನು ಖಚಿತಪಡಿಸಿಕೊಳ್ಳುವವನಂತೆ  ಪುನರುಚ್ಚಾರ ಮಾಡಿದ. 

"ನಿನಗೆ ಮನೆಯಲ್ಲಿ ಕುಳಿತು ಓದಲು ಸಾಧ್ಯವಿಲ್ಲವೇನು ?" ದೈತ್ಯ ನುಡಿದ. 

"ಸಾಧ್ಯವಿದೆ" ಕಮಿಟೊ  "ನಾನು  ಇಲ್ಲೇ ಹತ್ತಿರದಲ್ಲಿ ವಾಸಿಸುತ್ತೇನೆ. "

"ಹಾಗಾದರೆ ನೀನ್ಯಾಕೆ ಮನೆಗೆ ಹೋಗಿ ಅಲ್ಲಿ ಓದಬಾರದು ?"

"ನನಗೆ ಇಲ್ಲಿ ಕುಳಿತು ಓದುವದು ಇಷ್ಟ " ಕಮಿಟೊ 

ಆ ಇಬ್ಬರು ಯುವಕರು ಪರಸ್ಪರ ಮುಖ ನೋಡಿಕೊಂಡರು. 

"ಆ ಪುಸ್ತಕ ನನಗೆ ಕೊಡು " ತೆಳ್ಳಗಿನವ ನುಡಿದ "ನಾನು ಓದಿ ಹೇಳುತ್ತೇನೆ "

"ಪುಸ್ತಕವನ್ನು ಸ್ವತಃ  ನಾನೇ ಓದುವದು ನನಗೆ ಇಷ್ಟವಾದ ಕೆಲಸ. ಅಲ್ಲದೆ ಯಾವುದಾದರೂ ಶಬ್ದವನ್ನು ನೀನು ತಪ್ಪಾಗಿ ಉಚ್ಚರಿಸಿದರೆ, ನನಗೆ ಅದಕ್ಕಿಂತ ಅಸಾಧ್ಯ ಕೋಪ ತರುವ ಕೆಲಸ ಇನ್ನೊಂದಿಲ್ಲ "

"ಇದೊಳ್ಳೆ ತಮಾಷೆ " ದೈತ್ಯ ನುಡಿದ. 

"ನಿನ್ನ ಹೆಸರೇನು ? " ಜುಟ್ಟಿನವ  ಕೇಳಿದ. 

"ನನ್ನ ಹೆಸರು ಕಮಿಟೊ.   ಅದನ್ನು ಬರೆಯುವದು ಎರಡು ಶಬ್ದಗಳಿಂದ - ದೇವರು ಎಂದು ಬರೆಯುವ ಮೊದಲ ಶಬ್ದ ಮತ್ತು ಕ್ಷೇತ್ರ ಎಂದು ಬರೆಯುವ ಎರಡನೇ ಶಬ್ದ.  'ದೇವರ ಕ್ಷೇತ್ರ'. ಹಾಗೆಂದು ಅದನ್ನು ಕಂಡಾ ಎಂದು ಉಚ್ಛರಿಸುವದಲ್ಲ. 'ಕಮಿಟೊ ' ಎಂದು ಉಚ್ಚರಿಸಬೇಕು "

"ನಾನು ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ " ದೈತ್ಯ ದೇಹಿ ನುಡಿದ. 

"ಒಳ್ಳೆಯದು. ಜ್ಞಾಪಕಶಕ್ತಿ ಯಾವತ್ತೂ ಉಪಯುಕ್ತ. " ಕಮಿಟೊ

"ಅದೆಲ್ಲ ಸರಿ , ಈಗ ನಾವು ಸ್ವಲ್ಪ ಹೊರಗೆ ನಡೆದರೆ ಹೇಗೆ ?" ತೆಳ್ಳನೆಯ ವ್ಯಕ್ತಿ ಕೇಳಿದ. " ನಾವು ಏನನ್ನು ಮಾಡಲು ಬಯಸುತ್ತೇವೆ ಎನ್ನುವದನ್ನು ಅಲ್ಲಿ ಕರಾರುವಕ್ಕಾಗಿ ನಿನಗೆ ಹೇಳಬಹುದು "

"ಸರಿ" ಕಮಿಟೊ ಉತ್ತರಿಸಿದ. "ಅದಕ್ಕೂ ಮೊದಲು ನೀವು ನಿಮ್ಮ ಬಿಲ್ ಪಾವತಿಸಬಹುದೇ. ನಮ್ಮಿ೦ದ ಬಾರಿಗೆ ತೊಂದರೆಯಾಗುವದು ಬೇಡ "

ಕಮಿಟೊ ಕಿನೋಗೆ ಬಿಲ್ ತರಲು ಹೇಳಿದ. ಅವನು ತನ್ನ ಪಾಲಿನ ಬಿಲ್ ಅನ್ನು ಯಾವತ್ತಿನಂತೆ ಕರಾರುವಕ್ಕಾಗಿ ಅಷ್ಟೇ ಹಣ  ಪಾವತಿಸಿದ.  ಜುಟ್ಟಿನವ ತುಸು ಜಾಸ್ತಿಯೇ ಹಣವನ್ನು ತೆಗೆದು ಟೇಬಲಿನ ಮೇಲೆ ಎಸೆದ. 

"ಚಿಲ್ಲರೆ ನೀನೇ  ಇಟ್ಟುಕೋ. " ಜುಟ್ಟಿನವ ಕೀನೋ ಗೆ ಹೇಳಿದ. "ಅಲ್ಲದೇ ಸ್ವಲ್ಪ ಉತ್ತಮ ದರ್ಜೆಯ ವೈನ್  ಗ್ಲಾಸನ್ನು ಖರೀದಿ ಮಾಡು. ಇಷ್ಟು ಬೆಲೆಬಾಳುವ ವೈನ್ ಅನ್ನು ನಿನ್ನ ಕಳಪೆ ಗ್ಲಾಸಿನಲ್ಲಿ ಕುಡಿದರೆ , ವೈನಿನ ರುಚಿಯೇ ಕೆಟ್ಟು ಹೋಗುತ್ತದೆ. "

"ಅತ್ಯಂತ  ಕೆಳದರ್ಜೆಯ ಜಾಗ " ಇನ್ನೊಬ್ಬ ಹೀಯಾಳಿಸಿದ. 

"ನಿಜ.    ಕೆಳದರ್ಜೆಯ ಜಾಗ ಮತ್ತು ಅದಕ್ಕೆ ತಕ್ಕಂತ ಗಿರಾಕಿಗಳು. " ಕಮಿಟೊ  ನುಡಿದ. "ನಿಮಗೆ ಪ್ರಶಸ್ತವಾದ ಜಾಗ ಇದಲ್ಲ. ಅದು ಬೇರೆ ಎಲ್ಲೋ ಇರಬೇಕು. ಎಲ್ಲಿ ಅನ್ನುವದು ನನಗೆ ಖಂಡಿತ ತಿಳಿದಿಲ್ಲ."

"ನೀನು  ಭಾರಿ ಬುದ್ಧಿವಂತ " ದೈತ್ಯ ನುಡಿದ " ನಿನ್ನ ಮಾತುಗಳನ್ನು ಕೇಳಿದರೆ ನನಗೆ ನಗು ಬರುತ್ತದೆ " 

"ನಾನು ಹೇಳಿದ್ದನ್ನು ಆಮೇಲೆ ಯೋಚಿಸಿ ನೋಡು. ನಂತರ ಮನಃ ತುಂಬಿ , ಎಷ್ಟು ಹೊತ್ತಿನವರೆಗೆ ಬೇಕಾದರೂ ನಗು " ಕಮಿಟೊ . 

"ನಾನು ಎಲ್ಲಿಗೆ ಹೋಗಬೇಕು ಎನ್ನುವದನ್ನು ನೀನು ಹೇಳುವ ಅಗತ್ಯವಿಲ್ಲ. " ದೈತ್ಯ ನುಡಿದ. ಅವನು ನಾಲಿಗೆಯನ್ನು ಹೊರಚಾಚಿ ಹಾವು ತನ್ನ ಬೇಟೆಯನ್ನು ನೋಡಿದಾಗ ಮಾಡುವಂತೆ ತುಟಿಯನ್ನು ನೆಕ್ಕತೊಡಗಿದ. 

ದೈತ್ಯ, ಬಾಗಿಲನ್ನು ತೆರೆದು ಹೊರಗೆ ಅಡಿಯಿಟ್ಟ. ಜುಟ್ಟಿನವ ಅವನನ್ನು ಹಿಂಬಾಲಿಸಿದ.  ಸುತ್ತಲಿನ ವಾತಾವರಣದಲ್ಲಿನ ಬಿಗಿಯನ್ನು ಗಮನಿಸಿದಂತೆ ಬೆಕ್ಕು ನಿಧಾನವಾಗಿ ತನ್ನ ಜಾಗದಿಂದ ಎದ್ದು ಹೊರನಡೆಯಿತು. 

"ನೀನು ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿಲ್ಲವೇ ?" ಕೀನೋ ಕಮಿಟೊನನ್ನು ಕೇಳಿದ. 

"ನೀನು ಭಯ ಪಡುವ ಅಗತ್ಯವಿಲ್ಲ ಮಿಸ್ಟರ್ ಕೀನೋ " ಕಮಿಟೊ ನಗುತ್ತ ಹೇಳಿದ.  "ನೀನು ಇಲ್ಲಿಯೇ ಇರು. ಸ್ವಲ್ಪವೇ ಸಮಯದಲ್ಲಿ ಇವೆಲ್ಲ ಮುಗಿದು ಹೋಗುತ್ತದೆ."

ಕಮಿಟೊ  ಹೊರ ನಡೆದು ಬಾಗಿಲನ್ನು ಹಾಕಿಕೊಂಡ. ಮಳೆ ಮೊದಲಿಗಿಂತ ತುಸು ರಭಸವಾಗಿಯೇ ಸುರಿಯುತ್ತಿತ್ತು. ಕೀನೋ ಸ್ಟೂಲಿನ ಮೇಲೆ ಕುಳಿತುಕೊಂಡು ಕಾಯತೊಡಗಿದ.  ಹೊರಗೆ ಸಹಜವಾದ ನಿಶ್ಚಲತೆಯಿತ್ತು ಮತ್ತು ಅವನಿಗೆ ಮಳೆಯ ಸದ್ದನ್ನು ಬಿಟ್ಟರೆ ಬೇರೆ ಯಾವ ಶಬ್ದವೂ ಕೇಳಿಸುತ್ತಿರಲಿಲ್ಲ.  ಕಮಿಟೊನ ಪುಸ್ತಕ ಯಜಮಾನನಿಗೆ ಕಾಯುತ್ತಿರುವ ನಾಯಿಯ ಹಾಗೆ ಮೌನವಾಗಿ ಕೌ೦ಟರಿನಲ್ಲಿ ತೆರೆದುಕೊಂಡು ಬಿದ್ದಿತ್ತು.  ಹತ್ತು ನಿಮಿಷಗಳಾಗಿರಬಹುದು , ಬಾಗಿಲು ತೆರೆದುಕೊಂಡಿತು . ಕಮಿಟೊ ಒಬ್ಬನೇ ದಾಪುಗಾಲಿಡುತ್ತ ಒಳಗೆ ಬಂದ . 

"ದಯವಿಟ್ಟು ಒಂದು ಟವೆಲ್ ಸಿಗಬಹುದೇ ?" ಕಮಿಟೊ ಕೇಳಿದ. 

ಕೀನೋ ಒಂದು ಶುಭ್ರ ಟವೆಲನ್ನು ನೀಡಿದ. ಕಮಿಟೊ ಅದರಿಂದ ತಲೆಯನ್ನು ಒರೆಸಿಕೊಂಡ. ನಂತರ ಕುತ್ತಿಗೆ , ಮುಖ ಮತ್ತು ಕೊನೆಗೆ ಎರಡೂ ಕೈಗಳು. "ಧನ್ಯವಾದಗಳು. ಈಗ ಎಲ್ಲವೂ  ಸರಿಯಾಯಿತು. " ಅವನು ನುಡಿದ. "ಅವರಿಬ್ಬರು ಇನ್ನು ಯಾವತ್ತೂ ಇತ್ತ ಕಡೆ ತಲೆ ಹಾಕುವದಿಲ್ಲ "

"ಏನಾಯಿತು ಅವರಿಗೆ ?"

ಅದು ಕೀನೊಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಕಮಿಟೊ ತಲೆಯಾಡಿಸಿದ. ಅವನು ಮರಳಿ ತನ್ನ ಮಾಮೂಲಿ ಜಾಗಕ್ಕೆ ಹೋಗಿ ಕುಳಿತುಕೊಂಡು ಉಳಿಸ ವಿಸ್ಕಿಯನ್ನು ಕುಡಿಯುತ್ತ ಮತ್ತೆ ಪುಸ್ತಕದಲ್ಲಿ ಮಗ್ನನಾದ. 

 ಕಮಿಟೊ ಬಾರಿನಿಂದ ಹೋದ ಮೇಲೆ ಕೀನೋ ಹೊರಗೆ ಹೋಗಿ ಸುತ್ತಮುತ್ತ ಪರಿಶೀಲನೆ ನಡೆಸಿದ.  ಓಣಿ ಸಂಪೂರ್ಣವಾಗಿ ನಿರ್ಜನವೂ, ಸ್ತಬ್ಧವೂ ಆಗಿತ್ತು.  ಅಲ್ಲಿ ಹೊಡೆದಾಟವಾದ ಗುರುತಾಗಲಿ , ರಕ್ತ ಚೆಲ್ಲಿದ ಕಲೆಯಾಗಲಿ ಇರಲಿಲ್ಲ. ಅಲ್ಲಿ ಏನಾಗಿರಬಹುದು ಎನ್ನುವದನ್ನು ಕಲ್ಪಿಸಿಕೊಳ್ಳುವದು ಅವನಿಗೆ ಸಾಧ್ಯವಾಗಲಿಲ್ಲ. ಅವನು ಬಾರಿಗೆ ಮರಳಿ ಬಂದು ಗಿರಾಕಿಗಳಿಗಾಗಿ ಕಾಯ ತೊಡಗಿದ. ಆದರೆ ಅವತ್ತು ರಾತ್ರಿ ಬೇರೆ ಯಾರು ಬರಲಿಲ್ಲ. ಬೆಕ್ಕೂ ಸಹ ಅವತ್ತು ವಾಪಸು ಬರಲಿಲ್ಲ.

ಅವನು  ಹೆಸರಿಲ್ಲದ ಒಂದು ವಿಸ್ಕಿಯನ್ನು ಗ್ಲಾಸಿಗೆ ಸುರಿದು ಅಷ್ಟೇ ಪ್ರಮಾಣದಲ್ಲಿ ನೀರನ್ನು ಬೆರೆಸಿ ಮೇಲೆ ಎರಡು ಸಣ್ಣ ಸಣ್ಣ ಐಸ್ ತುಂಡುಗಳನ್ನು ತೇಲಿ ನಿಧಾನಕ್ಕೆ ಹೀರಿದ. ನಿರೀಕ್ಷಿಸಿದಂತೆ ಅವನಲ್ಲಿ ಅಂತಹ ಬದಲಾವಣೆಯೇನೋ ಆಗಲಿಲ್ಲ. ಏನೇ ಇರಲಿ ಅವತ್ತು ರಾತ್ರಿ ಕಳೆಯಲು ಅವನಿಗೆ ಮದ್ಯದ ಅಮಲು ಬೇಕಿತ್ತು. 

ಈ ಘಟನೆ  ನಡೆದ ಸುಮಾರು ಒಂದು ವಾರದ ನಂತರ ಕೀನೋ ಅವನ ಬಾರಿಗೆ ಬರುತ್ತಿದ್ದ ಹೊಂಗಸೊಬ್ಬಳ ಜೊತೆಗೆ   ಮಲಗಿದ. ಅವನ ಹೆಂಡತಿ ಅವನನ್ನು ತೊರೆದ ಮೇಲೆ ಅವನು ಮತ್ತೊಬ್ಬಳೊಟ್ಟಿಗೆ ದೈಹಿಕ ಸಂಪರ್ಕಕ್ಕೆ ಬಂದಿದ್ದು ಇದೆ ಮೊದಲ ಸಲ. ಅವಳಿಗೆ ಸುಮಾರು ೩೦ ವರ್ಷಗಳಾಗಿರಬಹುದು ಅಥವಾ ತುಸು ಜಾಸ್ತಿಯೇ ವಯಸ್ಸಾಗಿರಬಹುದು. ಅವಳನ್ನು ಸುಂದರಿಯೆ೦ದು ಖಚಿತವಾಗಿ ಹೇಳುವದಕ್ಕೆ ಅವನಿಗೆ ಸಾಧ್ಯವಾಗದೆ ಹೋದರೂ ಅವಳಲ್ಲಿ ಹೇಳಲಾಗದ ವಿಚಿತ್ರ ಆಕರ್ಷಣೆಯೊಂದಿದೆ ಎನ್ನುವದನ್ನು ಅವನು ಕಂಡುಕೊಂಡ. 

 ಆ ಹೆಂಗಸು ಬಾರಿಗೆ ಹಿಂದೆಯೂ ಹಲವಷ್ಟು ಸಲ ಬಂದಿದ್ದಳು. ಆದರೆ ಪ್ರತಿ ಸಲವೂ ಅವಳೊಟ್ಟಿಗೆ  ಅವಳಷ್ಟೇ ವಯಸ್ಸಿನ ಆಮೆಯ ಚಿಪ್ಪಿನಂತ ಫ್ರೆಮಿನ ಕನ್ನಡಕ ಧರಿಸಿದ್ದ , ಹೋತದ ಗಡ್ಡದ  ಇನ್ನೊಬ್ಬ ವ್ಯಕ್ತಿಯೂ ಬರುತ್ತಿದ್ದ.  ಅವನ ಕೂದಲು ಯಾವಾಗಲೂ ಕೆದರಿಕೊಂಡಿರುತ್ತಿದ್ದವು ಮತ್ತು ಅವನು ಯಾವತ್ತಿಗೂ ಟೈ ಕಟ್ಟುತ್ತಿರಲಿಲ್ಲ. ಹೀಗಾಗಿ ಅವನು ಯಾವುದೇ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಯಲ್ಲ ಎಂದು ಕೀನೋ ಊಹಿಸಿದ.  ಆ ಹೆಂಗಸು ಧರಿಸುತ್ತಿದ್ದ ಅತ್ಯ೦ತ  ಬಿಗಿಯಾದ ಬಟ್ಟೆಯಿಂದ   ಅವಳ ಅಂಗ ಸೌಷ್ಟವ  ಸ್ಪಷ್ಟವಾಗಿ ಗೋಚರಿಸುತ್ತಿತ್ತು.  ಅವರು ಬಹುತೇಕ ಮೌನವಾಗಿ ಕುಳಿತು ಪಾನೀಯವನ್ನು ಹೀರುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಒಂದೆರಡು ಸಣ್ಣ ದನಿಯ ಮಾತು ಬಿಟ್ಟರೆ ಹೆಚ್ಚು ಕಡಿಮೆ ಅವರು ಮಾತನಾಡಿದ್ದೆ ಇಲ್ಲ. ಅವರು ಯಾವತ್ತೂ ಬಹಳಷ್ಟು ಹೊತ್ತು ಬಾರಿನಲ್ಲಿ ಇರುತ್ತಿರಲಿಲ್ಲ. ಅವರು ಪ್ರೇಮಸಲ್ಲಾಪದ ನಂತರ ತನ್ನ ಬಾರಿಗೆ ಭೇಟಿ ನೀಡುತ್ತಾರೆ ಅಥವಾ ಬಾರಿನಿಂದ ಹೋದ ನಂತರಅದರಲ್ಲಿ ತೊಡಗುತ್ತಾರೆ  ಎನ್ನುವದು ಕಿನೊನ ಇನ್ನೊಂದು ಊಹೆಯಾಗಿತ್ತು. ಯಾವುದು  ಮೊದಲು ಎಂದು ಅವನು ಕರಾರುವಕ್ಕಾಗಿ ಹೇಳಲಾರ. ಆದರೆ ಅವರು ಕುಡಿಯುವ ರೀತಿ ಯಾವಾಗಲೂ ಅವನಿಗೆ ಗಾಢ ದೈಹಿಕ ಸಂಬಂಧದ ನೆನಪನ್ನು ತರುತ್ತಿತ್ತು. ವಿಚಿತ್ರವೆಂದರೆ ಅವರಿಬ್ಬರೂ ಯಾವಾಗಲೂ ಭಾವನಾರಹಿತರಾಗಿಯೇ ಇರುತ್ತಿದ್ದರು. ಅದರಲ್ಲೂ ಆ ಮಹಿಳೆಯ ಮುಖದಲ್ಲಂತೂ ಕೀನೋ ನಗುವಿನ ಸುಳಿವನ್ನೇ ಗಮನಿಸಿರಲಿಲ್ಲ. ಅವಳು ಕೆಲವೊಮ್ಮೆ ಅವನ ಜೊತೆಗೆ ಅಷ್ಟೋ  ಇಷ್ಟೋ ಮಾತನಾಡುತ್ತಿದ್ದಳು. . ಬಹುತೇಕ ಸಂಗೀತದ ಬಗ್ಗೆ. ಅವಳಿಗೂ ಜಾಜ್ ಸಂಗೀತ ಪ್ರಿಯವಾಗಿತ್ತು " ಮನೆಯಲ್ಲಿ ನನ್ನ ಅಪ್ಪ ಈ ಹಾಡುಗಳನ್ನು ಕೇಳುತ್ತಿದ್ದ " ಅವಳು ಅವನಿಗೆ ಹೇಳಿದ್ದಳು " ಇಲ್ಲಿ ಈ ಹಾಡುಗಳನ್ನು ಕೇಳಿದಾಗಲೆಲ್ಲ ನನಗೆ ಹಳೆಯ ನೆನಪುಗಳು ಮರುಕಳಿಸುತ್ತವೆ "

ಅವಳ ಧ್ವನಿಯಿಂದ ಹಳೆಯ ನೆನಪುಗಳು  ಹಾಡಿನದೇ ಅಥವಾ ಅವಳಪ್ಪನದೇ ಎನ್ನುವದು ಅವನಿಗೆ ಸ್ಪಷ್ಟವಾಗಲಿಲ್ಲ . ಆದರೆ ಅದನ್ನು ಕೇಳುವ ಸಾಹಸಕ್ಕೆ ಅವನು ಕೈ ಹಾಕಲಿಲ್ಲ.

ಕೀನೋ  ಸಾಧ್ಯವಾದಷ್ಟು ಆ ಮಹಿಳೆಯಿಂದ ದೂರವಿರಲು ಪ್ರಯತ್ನಿಸುತ್ತಿದ್ದ. ಕೀನೋ ಅವಳೊಟ್ಟಿಗೆ ಸ್ನೇಹಭಾವದಿಂದ ಮಾತನಾಡಿದಾಗಲೆಲ್ಲ ಅವಳ ಜೊತೆಗೆ ಬಂದ ವ್ಯಕ್ತಿ ಅಸಹನೆ ವ್ಯಕ್ತಪಡಿಸುತ್ತಿದ್ದ. ಒಂದು ಸಲ ಅವನು ಮತ್ತು ಆ ಮಹಿಳೆ ಟೋಕಿಯೊದಲ್ಲಿರುವ ಹಳೆಯ ಕ್ಯಾಸೆಟ್ ಮಾರುವ ಅಂಗಡಿಯ ಬಗ್ಗೆ ಕೊಂಚ ಹೊತ್ತು ಹರಟುತ್ತ , ಪರಸ್ಪರ ವಿಷಯವನ್ನು ವಿನಿಮಯ ಮಾಡಿಕೊಳ್ಳುತ್ತ ನಿಂತಿದ್ದರು.  ಅದಾದ ಮೇಲೆ ಆ ವ್ಯಕ್ತಿ ಯಾವಾಗಲು ಅಸಹನೆಯಿಂದ ಕಿನೋನೆಡೆಗೆ ಸಂಶಯದ ನೋಟ ಬೀರುತ್ತಿದ್ದ.  ಸಾಮಾನ್ಯವಾಗಿ ಕೀನೋ ಯಾವುದೇ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳದೆ ಜಾಗರೂಕನಾಗಿರುತ್ತಿದ್ದ. ಪ್ರತಿಷ್ಠೆ ಮತ್ತು ಮತ್ಸರಗಳಷ್ಟು ಅಪಾಯಕಾರಿ ಬೇರೆ ಯಾವುದು ಇಲ್ಲ. ಇವೆರಡರಲ್ಲಿ ಒಂದಲ್ಲ  ಒಂದರಿಂದ ಕಿನೋಗೆ ಹಿಂದೆಲ್ಲ ಕಹಿ ಘಟನೆಗಳ ಅನುಭವವಾಗಿತ್ತು. 

ತನ್ನಲ್ಲಿರಿರುವ ಯಾವುದೋ ಒಂದು ಇತರರಲ್ಲಿ ಹುದುಗಿರುವ ಕಪ್ಪು ಮುಖವನ್ನು ಬಡಿದೆಬ್ಬಿಸುತ್ತದೆ ಎಂದು ಅವನಿಗೆ ಬಹಳ ಸಲ ಅನಿಸಿತ್ತು. 


ಅವತ್ತು ರಾತ್ರಿ ಮಾತ್ರ ಅವಳು ಏಕಾಂಗಿಯಾಗಿ ಬಾರಿಗೆ ಬಂದಿದ್ದಳು. ಬಾರಿನಲ್ಲಿ ಬೇರೆ ಯಾವ ಗಿರಾಕಿಗಳೂ ಇರಲಿಲ್ಲ. ಅವಳು ಬಾಗಿಲು ತೆರೆದಾಗ ತಣ್ಣನೆಯ ಗಾಳಿ ಒಳಗೆ ಬೀಸಿ ಬಂದಿತ್ತು.  ಅವಳು ಕೌ೦ಟರಿನಲ್ಲಿ ಕುಳಿತು ಬ್ರಾಂದಿ ತರಲು ಹೇಳಿದಳು ಮತ್ತು ಬಿಲ್ಲಿ ಹಾಲಿಡೇಯ ಹಾಡುಗಳನ್ನು ಕೋರಿದಳು .

 "ಆದಷ್ಟು ಹಳೆಯ ಹಾಡುಗಳಾದರೆ ಒಳ್ಳೆಯದು. "  ಕೀನೋ  ಗ್ರಾಮಾಫೋನಿನಲ್ಲಿ 'ಜಾರ್ಜಿಯಾ ಆನ್ ಮೈ ಮೈಂಡ್ ' ಹಾಡು ಇರುವ ಕೊಲಂಬಿಯಾ ಕ್ಯಾಸೆಟನ್ನು ಹಾಕಿದ. ಇಬ್ಬರೂ ಮೌನವಾಗಿ ಹಾಡನ್ನು  ಕೇಳತೊಡಗಿದರು. "ದಯವಿಟ್ಟು  ಕ್ಯಾಸೆಟ್ಟಿನ ಇನ್ನೊಂದು ಬದಿಯನ್ನೂ ಕೇಳಬಹುದೇ ?"  ಅವಳು ಕೇಳಿಕೊಂಡಳು . 

ಅವಳು ಇನ್ನೊಂದಿಷ್ಟು ಹಳೆಯ ಹಾಡುಗಳನ್ನು  ಕೇಳುತ್ತ ನಿಧಾನವಾಗಿ ಬ್ರಾಂದಿಯನ್ನು ಹೀರತೊಡಗಿದಳು.  'ಎರ್ರೋಲ್ ಗಾರ್ನರ್' ಅವರ “ಮೂಂಗ್ಲೋ,”  ‘ಬಡ್ಡಿ ಡೆಫ್ರಾಂಕೊ’ ಅವರ 'ಐ ಕಾಂಟ್ ಗೆಟ್ ಸ್ಟಾರ್ಟೆಡ್'.  ಮೊದಮೊದಲು ಕೀನೋ ಅವಳು ಆ ವ್ಯಕ್ತಿಗಾಗಿ ಕಾಯುತ್ತಿದ್ದಾಳೆ ಎಂದು ಭಾವಿಸಿದ. ಆದರೆ ಅವಳು ಒಮ್ಮೆಯೂ ಸಮಯ ಎಷ್ಟೆಂದು ನೋಡುವ ಗೊಡವೆಗೆ ಹೋಗಲಿಲ್ಲ.  ಅಲ್ಲಿ  ಕುಳಿತು, ಹಾಡುಗಳನ್ನು ಕೇಳುತ್ತ, ಬ್ರಾಂದಿಯನ್ನು ಹೀರುತ್ತಾ ತನ್ನಷ್ಟಕ್ಕೆ ತಾನೇ  ಕಳೆದು ಹೋಗಿದ್ದಳು.

"ನಿನ್ನ  ಜೊತೆಗಾರ  ಇವತ್ತು ಬರುವದಿಲ್ಲವೇ ?" ಕೊನೆಗೂ ರಾತ್ರಿ ಊಟದ ಸಮಯ ಸಮೀಪಿಸಿದಂತೆ ಅವಳನ್ನು ಕೇಳಲು ಕೀನೋ ನಿರ್ಧರಿಸಿದ. 

"ಅವನು ಬರುವದಿಲ್ಲ. ಅವನು ಬಹಳ ದೂರಲ್ಲಿದ್ದಾನೆ. " ಹೇಳಿದಳು. ಅವಳು ಕುಳಿತಲ್ಲಿಂದ ಎದ್ದು ಬೆಕ್ಕು ಮಲಗಿದ್ದಲ್ಲಿಗೆ ನಡೆದಳು. ನಿಧಾನವಾಗಿ ಬೆಕ್ಕಿನ ಬೆನ್ನನ್ನು ಸವರಿದಳು.  ಬೆಕ್ಕು ಮತ್ತಷ್ಟು ಮುದುರಿ ನಿದ್ರಿಸತೊಡಗಿತು. 

"ನಾವು ಪರಸ್ಪರರನ್ನು ಮತ್ತೆಂದೂ ಭೇಟಿಯಾಗಬಾರದು ಎಂದು ನಿರ್ಧರಿಸಿದ್ದೇವೆ " ಅವಳು ನುಡಿದಳು. 

ಕಿನೋಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಅವನು ಮೌನವಾಗಿದ್ದ. ಕೌ೦ಟರಿನ ಹಿಂದೆ ಸೆಟೆದು ಕುಳಿತ. 

"ನನಗೆ ಹೇಗೆ ಹೇಳಬೇಕೆಂದು ಗೊತ್ತಾಗುತ್ತಿಲ್ಲ" ಅವಳು ಮತ್ತೆ ನುಡಿದಳು. ಅವಳು ಬೆಕ್ಕಿನ ಬೆನ್ನನ್ನು ಸವರುವದನ್ನು ನಿಲ್ಲಿಸಿ ಮತ್ತೆ ತನ್ನ ಜಾಗಕ್ಕೆ ಬಂದಳು. "ಹಾಗೆ ನೋಡಿದರೆ ನಮ್ಮಿಬ್ಬರ ಸಂಬಂಧ ಸಹಜವಾದದ್ದಲ್ಲ "

"ಸಹಜವಾದದ್ದಲ್ಲ" ಕೀನೊಗೆ ಅವಳ ಮಾತಿನ ಅರ್ಥ ತಿಳಿಯದೆ  ಅವಳು ಹೇಳಿದ್ದನ್ನೇ ಮರುನುಡಿದ. 

ಅವಳು ಗ್ಲಾಸಿನಲ್ಲಿ ಅಳಿದುಳಿದ ಬ್ರಾಂದಿಯನ್ನು ಮುಗಿಸಿದಳು. "ನಾನು ನಿನಗೆ ಏನನ್ನೋ ತೋರಿಸಬೇಕು ಅಂದುಕೊಂಡಿದ್ದೇನೆ ಮಿಸ್ಟರ್ ಕೀನೋ "

ಅದು ಏನೇ ಆಗಿದ್ದರೂ ಅದನ್ನು ನೋಡುವದು ಕಿನೋಗೆ ಬೇಕಾಗಿರಲಿಲ್ಲ. ಅದು  ಅವನಿಗೆ ಖಚಿತವಾಗಿ ತಿಳಿದಿತ್ತು. ಆದರೆ ಅದನ್ನು ಶಬ್ದಗಳಲ್ಲಿ  ಹಿಡಿದಿಟ್ಟು  ಮಾತಿನ ರೂಪದಲ್ಲಿ ಹೇಳಲು ಅವನಿಗೆ ಸಾಧ್ಯವಾಗಲಿಲ್ಲ. 

ಅವಳು ತನ್ನ ಕೋಟನ್ನು ತೆಗೆದು ಸ್ಟೂಲಿನ ಮೇಲಿಟ್ಟಳು.  ಅವಳ ಕೈಗಳು ಬೆನ್ನ ಹಿಂದಿನ ಜಿಪ್ ಅನ್ನು ಬಿಚ್ಚಿದವು. 

ಅವಳು ತನ್ನ ಬೆನ್ನನ್ನು ಕಿನೋನೆಡೆಗೆ ತಿರುಗಿಸಿದಳು. ಅವಳ ಬೆನ್ನಿನ ಮೇಲೆ ಅಲ್ಲಲ್ಲಿ ಚಿಮುಕಿಸಿದಂತೆ ಕಪ್ಪು ಬಣ್ಣದ ಕಲೆಗಳಿದ್ದವು, ತರಚು ಗಾಯಗಳಿದ್ದವು. ಅವನಿಗೆ ಚಳಿಗಾಲದ ಆಕಾಶದಲ್ಲಿ ಕಾಣಿಸುವ ನಕ್ಷತ್ರಪುಂಜ ನೆನಪಿಗೆ ಬಂತು.  ಕ್ಷೀಣಿಸುತ್ತಿರುವ ನಕ್ಷತ್ರಗಳ ಸಾಲುಗಳು. 

ಹೆಂಗಸು ಏನನ್ನು ಹೇಳಲಿಲ್ಲ.ಕಿನೋಗೆ  ತನ್ನ ಬೆನ್ನನ್ನು ಮಾತ್ರ ತೋರಿಸಿದಳು.  ತಾನೇ ಕೇಳಿದ ಪ್ರಶ್ನೆಯ ಅರ್ಥವನ್ನು ಸಹ ಗ್ರಹಿಸಲಾಗದ ವ್ಯಕ್ತಿಯಂತೆ ಕೀನೋ ಮೌನವಾಗಿ ಕಲೆಗಳನ್ನು ದಿಟ್ಟಿಸಿದ. ಕೊನೆಗೂ ಅವಳು ಜಿಪ್ ಹಾಕಿಕೊಂಡು ಪುನಃ ಅವನತ್ತ ಮುಖವನ್ನು ತಿರುಗಿಸಿದಳು.  ಅವಳು ಮತ್ತೆ ತನ್ನ ಕೋಟನ್ನು ಧರಿಸಿದಳು ಮತ್ತು ಕೂದಲನ್ನು ಸರಿ ಪಡಿಸಿಕೊಂಡಳು. 

"ಅವು ಸಿಗರೇಟಿನಿಂದ ಸುಟ್ಟ ಕಲೆಗಳು " ಅವಳು ಸಲೀಸಾಗಿ ನುಡಿದಳು. 

ಕಿನೋನ ಬಾಯಿಯಿ೦ದ ಮಾತೇ ಹೊರಡಲಿಲ್ಲ. ಆದರೆ ಅವನು ಏನಾದರೂ ಹೇಳಬೇಕಿತ್ತು. " ಯಾರು ಅದನ್ನು ಮಾಡಿದವರು ?" ಅವನು ಒಣಗಿದ ಧ್ವನಿಯಲ್ಲಿ ಕೇಳಿದ. 

ಅವಳು ಉತ್ತರಿಸಲಿಲ್ಲ ಮತ್ತು ತಾನೂ ಸಹ ಯಾವುದೇ ಉತ್ತರವನ್ನೂ  ಬಯಸುತ್ತಿಲ್ಲ  ಎನ್ನುವದು ಕಿನೋಗೂ ಅರಿವಾಯಿತು. 

"ನನ್ನ ದೇಹದ ಇತರೆಡೆಗಳಲ್ಲೂ ಅಂತಹ ಕಲೆಗಳಿವೆ. " ನುಡಿದಳು. ಅವಳು ಭಾವನಾರಹಿತ ಧ್ವನಿಯಲ್ಲಿ ಹೇಳಿದಳು "ಇತರರಿಗೆ  ತೋರಿಸಲು ಕಷ್ಟಕರವಾಗುವಂತಹ ಜಾಗಗಳು."

ಕಿನೋಗೆ ಈ ಮಹಿಳೆಯಲ್ಲಿ ಅಸಾಮಾನ್ಯವಾದದ್ದು ಏನೋ ಒಂದು ಇದೆ ಎನ್ನುವದು ಮೊದಲಿನಿಂದಲೂ ಅರಿವಾಗಿತ್ತು.  ಅವನ ಅಂತರಾತ್ಮ ಅವಳೊಟ್ಟಿಗೆ ಬೇರೆಯದಂತೆ ಅವನನ್ನು ಪದೇ ಪದೇ ಎಚ್ಚರಿಸುತ್ತಿತ್ತು. ನಿಜಕ್ಕೂ ಅವನು ಅತ್ಯ೦ತ  ಜಾಗರೂಕ ಮನುಷ್ಯ. ದೈಹಿಕ ಸುಖವೊಂದೇ ಅವನ ಬಯಕೆಯಾಗಿದಿದ್ದರೆ  ಹಣ ಕೊಟ್ಟು ಅದನ್ನು ಅವನು ಪಡೆಯಬಹುದಿತ್ತು. ಅಲ್ಲದೆ ಅವನು  ಈ ಮಹಿಳೆಗೆ ಮಾರುಹೋಗಿದ್ದ ಎಂದೂ ಅಲ್ಲ. ಆ ರಾತ್ರಿಯ ಮಟ್ಟಿಗೆ ಅವಳಿಗೆ ದೈಹಿಕವಾಗಿ ಪುರುಷನೊಬ್ಬ ಬೇಕಾಗಿದ್ದ ಮತ್ತು ಅವನು ಆ ಪುರುಷನಾಗಿದ್ದ. ಅವಳು ಕಣ್ಣುಗಳು ಆಳವಾಗಿರಲಿಲ್ಲ.  ಅವಳ ಕಣ್ಣಿನ ರೆಪ್ಪೆಗಳು ವಿಚಿತ್ರವಾಗಿ ಅಗಲವಾಗಿದ್ದವು ಆದರೆ ಅವುಗಳಲ್ಲಿನ ನಿರ್ಣಾಯಕ ಹೊಳಪು ಯಾವುದೇ ಕಾರಣಕ್ಕೂ ಹಿಮ್ಮೆಟ್ಟುವದಿಲ್ಲ ಎನ್ನುವಂತಿತ್ತು.  ಅವುಗಳನ್ನು ಎದುರಿಸುವಷ್ಟು ಶಕ್ತಿ ಕಿನೋಗೆ ಇರಲಿಲ್ಲ. ಅವನು ಬಾರಿನ ಬಾಗಿಲನ್ನು ಹಾಕಿದ ಮತ್ತು ಅವರಿಬ್ಬರೂ ಮೇಲಿನ ಮಹಡಿಗೆ ನಡೆದರೂ. ಮಲಗುವ ಕೋಣೆಯಲ್ಲಿ ಅವಳು ತನ್ನ ಬಟ್ಟೆಗಳನ್ನು ಬಿಚ್ಚಿದಳು.  ತನ್ನ ಒಳ ಉಡುಪುಗಳನ್ನು ತೆಗೆದು ತೋರಿಸಲಾಗದ ಜಾಗಗಳಲ್ಲಿನ ಕಲೆಗಳನ್ನು ತೋರಿಸಿದಳು.  ಕೀನೋ ತನ್ನ ದೃಷ್ಟಿಯನ್ನು  ಅವುಗಳಿಂದ ತೆಗೆದು ಬೇರೆಡೆಗೆ ಹೊರಳಿಸಲು ವ್ಯರ್ಥ ಪ್ರಯತ್ನ ನಡೆಸಿದ.  ಅವನಿಗೆ ಅರ್ಥವಾಗಲಿಲ್ಲ. ಅರ್ಥ ಮಾಡಿಕೊಳ್ಳುವ ಅವಶ್ಯಕತೆಯೂ ಇರಲಿಲ್ಲ. - ಇಂತಹ ವಿಕೃತ ಕೆಲಸ ಮಾಡಿದ ಪುರಷನನ್ನು ಹಾಗೂ ಇದನ್ನೆಲ್ಲಾ ಇಷ್ಟು ಕಾಲ ಸ್ವ ಇಚ್ಛೆಯಿಂದ ಸಹಿಸಿಕೊಂಡಿದ್ದ ಸ್ತ್ರೀಯನ್ನು. ಇವೆಲ್ಲ ಕಿನೊನ  ಜಗತ್ತಿನಿಂದ ಸಾವಿರಾರು ಜ್ಯೋತಿವರ್ಷ ದೂರದಲ್ಲಿದ್ದ ಬರಡು ನೆಲದ ದೃಶ್ಯಗಳು.ಅವಳು ಕಿನೊನ ಕೈಗಳನ್ನು ಹಿಡಿದುಕೊಂಡು ಅವನ್ನು ತನ್ನ  ಮೈ ಮೇಲಿನ ಕಲೆಗಳ ಮೇಲೆಲ್ಲ ಸವರಿಕೊಂಡಳು. ಅವನು ಅವಳ ಮೈಯಲ್ಲಿರುವ ಕಲೆಗಳನ್ನು ಪೆನ್ಸಿಲಿನಿಂದ ಚುಕ್ಕೆಗಳನ್ನು ಜೋಡಿಸುವಂತೆ  ತಡಕಾಡತೊಡಗಿದ.  ಆ ಗುರುತಗಳು ಕಟ್ಟಿಕೊಡುತ್ತಿದ್ದ ಅವ್ಯಕ್ತ ಆಕಾರದ ಪರಿಚಯ  ತನಗಿದ್ದಂತೆ  ಭಾಸವಾಯಿತು.  ಆದರೆ ಅದು ಏನೆಂದು ಅವನಿಗೆ ಅರಿವಾಗಲಿಲ್ಲ. ಅವರು ನೆಲದ ಮೇಲೆ ಮಲಗಿ ಸುಖಿಸಿದರು. ಮಾತಿಲ್ಲ, ಕತೆಯಿಲ್ಲ. ದೀಪವಾರಿಸಲೂ ಸಮಯವಿಲ್ಲ.  ಅವಳ ನಾಲಿಗೆ ಅವನ ಗಂಟಲಿನೊಳಗೆ ಇಳಿದಂತೆ, ಉಗುರುಗಳು ಅವನ ಬೆನ್ನಿನಾಳದಲ್ಲಿ ನಾಟಿದಂತೆ. ದೀಪದ ಬೆಳಕಿನ ಕೆಳಗೆ ಮಾಂಸಕ್ಕೆ ಹಸಿದ ಮೃಗಗಳಂತೆ ಅವರಿಬ್ಬರೂ ಪರಸ್ಪರರ ದೇಹವನ್ನು ಆಕ್ರಮಿಸುತ್ತಿದ್ದರು.  ಮುಂಜಾನೆಯಾದಂತೆ ಇಬ್ಬರೂ ಸೋಫಾದ ಮೇಲೆ ಮಲಗಿ, ಆಳ ಕತ್ತಲೆಯೊಳಕ್ಕೆ ಎಳೆದು ಹಾಕಿದವರಂತೆ ಬಿದ್ದು ಮಲಗಿದರು. 

ಕೀನೋ ಎದ್ದಾಗ ಮಧ್ಯಾನ್ಹವಾಗಿತ್ತು ಹಾಗೂ ಅವಳು ಅಲ್ಲಿಂದ ಹೊರತು ಹೋಗಿದ್ದಳು. ರಾತ್ರಿ ನಡೆದದ್ದು ಒಂದು ಕನಸಿನಂತೆ ಅವನಿಗೆ ಭಾಸವಾಯಿತು. ಖಂಡಿತ ಅದು ಕನಸಾಗಿರಲಿಲ್ಲ. ಅವನ ಬೆನ್ನಿನಲ್ಲಿ ಅವಳ ಉಗುರಿನ ಗುರುತುಗಳಿದ್ದವು. , ಭುಜದ ಮೇಲೆ ಹಲ್ಲಿನಿಂದ ಕಚ್ಚಿದ ಗುರುತುಗಳಿದ್ದವು.  ಅವನ ಬಿಳಿ ದಿಂಬಿನಲ್ಲೂ ಹಲವಷ್ಟು ಉದ್ದ ಕೂದಲುಗಳು ಸುರುಳಿಯಾಗಿ ಬಿದ್ದಿದ್ದವು ಮತ್ತು ಬೆಡ್ ಶೀಟಿನಲ್ಲಿ  ಹಿಂದೆಂದೂ  ಅವನ ಗ್ರಹಿಕೆಗೆ ಬಾರದಿದ್ದ ಗಾಢ ವಾಸನೆಯಿತ್ತು. 

ಅದಾದ ನಂತರ ಹಲವಷ್ಟು ಬಾರಿ  ಆ ಮಹಿಳೆ ಬಾರಿಗೆ ಬಂದಳು ಆದರೆ ಪ್ರತಿ ಬಾರಿಯೂ ಹೋತದ ಗಡ್ಡದವನ ಜೊತೆಗೆ.  ಮೊದಲಿನಂತೆ ಅವರು ಕೌ೦ಟರಿನಲ್ಲಿ ಕುಳಿತು ಕೆಲವೊಮ್ಮೆ ಸಣ್ಣ ಧ್ವನಿಯಲ್ಲಿ ಮಾತನಾಡಿಕೊಂಡು ಒಂದೋ ಎರಡೋ ಕಾಕ್ಟೈಲ್ ಕುಡಿದು ಹೋಗುತ್ತಿದ್ದರು.  ಅವಳು ಕಿನೋನ ಬಳಿ ಸಂಗೀತದ ಬಗ್ಗೆ ಒಂದೆರಡು ಮಾತನಾಡುತ್ತಿದ್ದಳು.  ಅವಳ ಧ್ವನಿ ಮೊದಲಿನಂತೆ ಸಹಜವಾಗಿತ್ತು. ಅವತ್ತು ರಾತ್ರಿ ಅವರಿಬ್ಬರ ನಡುವೆ ಏನಾಯಿತು ಎನ್ನುವದು  ನೆನಪೇ ಇಲ್ಲ ಎನ್ನುವ ಹಾಗೆ.   ಆದರೂ ಅವಳ ಕಣ್ಣುಗಳಲ್ಲಿ ಹೌದೋ ಅಲ್ಲವೋ ಅನ್ನುವ ಹಾಗೆ ಪ್ರತಿಫಲಿಸುತ್ತಿದ್ದ ಉತ್ಕಟ ಬಯಕೆಯ  ಕಿಡಿ , ಆಳ ಗಣಿಯಲ್ಲಿ ಸಣ್ಣಗೆ ಉರಿಯುತ್ತಿರುವ ದೀಪದ ಹಾಗೆ ಕಾಣಿಸುತ್ತಿತ್ತು. ಅದು   ಅವನಿಗೆ ಖಚಿತವಾಗಿ ಗೋಚರಿಸುತ್ತಿತ್ತು ಮತ್ತು ಅದರ ಬೆಳಕಿನಲ್ಲಿ ಕಿನೋಗೆ ನಡೆದಿದ್ದೆಲ್ಲವೂ ಸ್ಪಷ್ಟವಾಗಿ ಜ್ಞಾಪಕಕ್ಕೆ ಬರುತಿತ್ತು. - ಅವನ ಬೆನ್ನಿನಲ್ಲಿ ನಾಟಿದ್ದ ಅವಳ ಉಗುರುಗಳು , ಅವಳ ಉದ್ದನೆಯ ಒದ್ದೆ ನಾಲಗೆ , ಅವನ ಹಾಸಿಗೆಯಲ್ಲಿ ಅವಳು ಬಿಟ್ಟು ಹೋದ ಸುವಾಸನೆ. 

ಅವನು ಮತ್ತು ಅವಳು ಮಾತನಾಡುವಾಗ , ಅವಳೊಟ್ಟಿಗೆ ಬಂದಿದ್ದ ಮನುಷ್ಯ ಎಚ್ಚರಿಕೆಯಿಂದ ಕಿನೋನ ವರ್ತನೆಯನ್ನು ಗಮನಿಸುತ್ತಿದ್ದ. ಆ ಹೆಂಗಸು ಮತ್ತು ಹೋತದ ಗಡ್ಡದ ವ್ಯಕ್ತಿ ಇಬ್ಬರೂ  ತಮಗೆ  ಮಾತ್ರ ತಿಳಿದಿರುವ ರಹಸ್ಯವೊಂದನ್ನು ಹಂಚಿಕೊಳ್ಳುವ ಹಾಗೆ  ಲೋಳೆಯೊಂದಕ್ಕೆ  ಪರಸ್ಪರ  ಜಿಗುಟಾಗಿ ಅಂಟಿಕೊಂಡಂತೆ  ಕಿನೋಗೆ ತೋರಿತು. 

ಆ ಬೇಸಿಗೆಯಲ್ಲಿ ಕೀನೋನ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಿತು. ಅಳಿದುಳಿದ ಕೆಲ ವಿಷಯಗಳನ್ನು ತೀರ್ಮಾನಿಸಲು ಅವನು ಮತ್ತವನ ಹೆಂಡತಿ ಅವನ ಬಾರಿನಲ್ಲಿ ಒಂದು ಮಧ್ಯಾನ್ಹ ಭೇಟಿಯಾದರು . 

ಕೋರ್ಟಿಗೆ  ಸಂಬಂಧಿಸಿದ ವಿಷಯಗಳನ್ನು ಇಬ್ಬರೂ ಕೆಲವೇ ಸಮಯದಲ್ಲಿ ಬಗೆ ಹರಿಸಿಕೊಂಡು ಪರಸ್ಪರರು ಕಾಗದ ಪತ್ರಗಳಿಗೆ ಸಹಿ ಮಾಡಿ ಮುಗಿಸಿದರು.  ಕೀನೊನ ಹೆಂಡತಿ  ನೀಲಿ ಬಣ್ಣದ ಹೊಸ ಉಡುಪನ್ನು ಧರಿಸಿದ್ದಳು.  ಅವಳು ಕೂದಲನ್ನು ಸಣ್ಣಗೆ ಕತ್ತರಿಸಿಕೊಂಡಿದ್ದಳು. ಅವಳು ಹಿಂದೆಂದಿಗಿಂತಲೂ ಹೆಚ್ಚು ಆರೋಗ್ಯಕರವಾಗಿ ಮತ್ತು ಲವಲವಿಕೆಯಿಂದ ಇದ್ದಂತೆ ಅವನಿಗೆ ತೋರಿತು. ಅವಳು ನಿಸ್ಸಂದೇಹವಾಗಿ ಹೊಸ ಜೀವನವನ್ನು ಉತ್ಸಾಹದಿಂದ ಪ್ರಾರಂಭಿಸಿದ್ದಳು. ಅವಳು ಬಾರಿನ ಸುತ್ತ ಒಮ್ಮೆ ಕಣ್ಣು ಹಾಯಿಸಿದಳು. "ಎಂತಹ ಅದ್ಭುತ ಸ್ಥಳ " ಉದ್ಗರಿಸಿದಳು.  "ಶಾಂತ , ಸ್ವಚ್ಛ , ಸ್ತಬ್ದ . ನಿನ್ನ ಹಾಗೆ ". ಅದಾದ ಮೇಲೆ ಒಂದು ದೀರ್ಘ ಮೌನ ಅವರ ನಡುವೆ.  "ಆದರೆ ಭಾವದ ತಂತುವನ್ನು ಮೀಟುವಂತಹುದು ಯಾವುದೂ ಇಲ್ಲಿಲ್ಲಅಲ್ಲವೇ ? "

ಇಷ್ಟು ಕಾಲ ಅವಳು ತನಗೆ ಹೇಳಬೇಕೆಂದುಕೊಂಡಿದ್ದು ಇವೆ ಮಾತುಗಳಿರಬೇಕು ಎಂದು ಕೀನೋ ಯೋಚಿಸಿದ.

"ಕುಡಿಯಲು ಏನಾದರು ತರಲೇ ?" ಅವನು ಕೇಳಿದ. 

"ಸ್ವಲ್ಪ ರೆಡ್  ವೈನ್ ಸಿಗಬಹುದೇ " ಅವಳು . 

ಕೀನೋ ಎರಡು ವೈನ್ ಗ್ಲಾಸನ್ನು ತೆಗೆದುಕೊಂಡು ಅವುಗಳಲ್ಲಿ ರೆಡ್ ವೈನ್ ಅನ್ನು ಸುರುವಿದ. ಅವರಿಬ್ಬರೂ ಮೌನದಲ್ಲಿ ಕುಳಿತು ವೈನ್ ಹೀರಿದರು.  ಅವರಿಬ್ಬರೂ ಖಂಡಿತವಾಗಿಯೂ ತಮ್ಮ ವಿಚ್ಛೇದನವನ್ನು ಆಚರಿಸುತ್ತಿರಲಿಲ್ಲ. 

 ಬೆಕ್ಕು ಮೈಮುರಿಯತೊಡಗಿತು ಮತ್ತು ಆಶ್ಚರ್ಯಕರವಾಗಿ ಎದ್ದು ಬಂದು ಕಿನೋನ ಮಡಿಲಿಲ್ಲಿ  ಮಲಗಿಕೊಂಡಿತು. ಕೀನೋ ನಿಧಾನವಾಗಿ ಅದರ ಕಿವಿಯ ಹಿಂಭಾಗವನ್ನು  ಸವರತೊಡಗಿದ. 

"ನನಗೆ  ನಿನ್ನ ಬಳಿ ಕ್ಷಮೆ  ಕೇಳಬೇಕಿದೆ " ಅವನ ಹೆಂಡತಿ ಕೊನೆಗೂ ನುಡಿದಳು. 

"ಯಾವುದಕ್ಕೆ ?" ಕೀನೋ ಪ್ರಶ್ನಿಸಿದ. 

"ನಿನಗೆ ನೋವನ್ನುಂಟು ಮಾಡಿದ್ದಕೆ " ಅವಳು " ನಿನಗೆ  ದುಃಖವಾಗಿದೆ ಅಲ್ಲವೇ ?"

"ಇರಬಹುದು" ಕೀನೋ ಸ್ವಲ್ಪ ಸಮಯ ಯೋಚಿಸಿ ಉತ್ತರಿಸಿದ " ನಾನೂ ಒಬ್ಬ ಸಾಮಾನ್ಯ ಮನುಷ್ಯ.  ಹೌದು. ನೋವಾಗಿದೆ. ಆದರೆ ಅದು ಸಹಿಸಲಸಾಧ್ಯವೇ ? ನನಗೆ ಗೊತ್ತಿಲ್ಲ. "

"ನಾನು ನಿನ್ನನ್ನು ಭೇಟಿ ಮಾಡಿ ನಿನ್ನ ಬಳಿ ಕ್ಷಮೆ ಕೇಳಬೇಕೆಂದುಕೊಂಡಿದ್ದೆ. "

ಕೀನೋ ತಲೆಯಾಡಿಸಿದ. "ನೀನು ನನ್ನ ಬಳಿ ಕ್ಷಮೆ ಕೇಳಿದ್ದೀಯ ಮತ್ತು ಅದನ್ನು ನಾನು ಒಪ್ಪಿಕೊಂಡಿದ್ದೇನೆ. ಇನ್ನು ಮೇಲೆ ನೀನು ಅದರ ಬಗ್ಗೆ ಚಿ೦ತೆ  ಮಾಡುವ ಅಗತ್ಯವಿಲ್ಲ "

" ನಮ್ಮಿಬ್ಬರ ನಡುವೆ ಏನು ನಡೆಯುತ್ತಿದೆ ಎನ್ನುವದನ್ನುನಿನಗೆ  ಹೇಳಬೇಕೆಂದು ಕೊಂಡಿದ್ದೆ. ಆದರೆ  ಕೊನೆಗೂ ನನಗೆ ಅದು ಸಾಧ್ಯವಾಗಲಿಲ್ಲ. "

" ನಾವು ಮತ್ತೆ ಅದೇ ಸ್ಥಳಕ್ಕೆ ಬಂದ ಹಾಗಾಯಿತು ?"

"ಹೌದು" ಅವಳು 

ಕೀನೋ ಒಂದು ಗುಟುಕು ವೈನ್ ಹೀರಿದ. 

"ಅದು ಯಾರ ತಪ್ಪು ಅಲ್ಲ. ಒಂದೋ ನಾನು ನಿಗದಿಯಾದ ದಿನಕ್ಕಿಂತ ಒಂದು ದಿನ ಮೊದಲೇ ಮನೆಗೆ ಬರಬಾರದಿತ್ತು ಅಥವಾ ನಾನು ಮುಂಚಿತವಾಗಿಯೇ ಬರುವ ಮುನ್ಸೂಚನೆ ಕೊಡಬೇಕಿತ್ತು. ಆಗ ಇವೆಲ್ಲ ಘಟಿಸುತ್ತಲೇ ಇರಲಿಲ್ಲ "

ಅವನ ಹೆಂಡತಿ ಪ್ರತಿಕ್ರಿಯಿಸಲಿಲ್ಲ. 

"ನಿನ್ನ ಮತ್ತು ಅವನ ನಡುವೆ ಸಂಬಂಧ ಪ್ರಾರಂಭವಾದದ್ದು ಯಾವಾಗ ? " ಕೀನೋ ಪ್ರಶ್ನಿಸಿದ. 

"ಅದರ ಬಗ್ಗೆ ಮಾತನಾಡುವದು ಉಚಿತವೆನ್ನಿಸುವದಿಲ್ಲ ನನಗೆ " ಅವಳು  

"ನಿನ್ನ ಮಾತಿನ ಅರ್ಥ, ಅದನ್ನು  ನಾನು ತಿಳಿದುಕೊಳ್ಳುವದು ಉಚಿತವಲ್ಲವೆಂದೇ ? ಬಹುಶ: ನಿನ್ನ  ಅಭಿಪ್ರಾಯ ಸರಿ ಇರಬಹುದು " ಕೀನೋ ಒಪ್ಪಿಕೊಂಡ. ಅವನು ಬೆಕ್ಕಿನ ಮೈಯನ್ನು ಸತತವಾಗಿ ಸವರುತ್ತಿದ್ದ. ಬೆಕ್ಕು ಗುರುಗುಡುತ್ತ ನಿದ್ರಿಸುತ್ತಿತ್ತು. ಇನ್ನೊಂದು ಹೊಸ ಬೆಳವಣಿಗೆ. 

"ಬಹುಶ: ನನಗೆ ಇದನ್ನು ಹೇಳುವ ಅಧಿಕಾರ ಇಲ್ಲವೇನೋ" ಅವನ ಹೆಂಡತಿ ನುಡಿದಳು  " ಆದರೆ ನನಗನ್ನಿಸುವ ಮಟ್ಟಿಗೆ ನೀನು ಆಗಿ ಹೋಗಿದ್ದನ್ನು ಮರೆತು ಇನ್ನೊಬ್ಬಳನ್ನು ಹುಡುಕಿಕೊಳ್ಳುವದು ಒಳ್ಳೆಯದು " 

"ಇರಬಹುದು" ಕೀನೋ . 

"ನನಗೆ ಖಂಡಿತವಾಗಿಯೂ ಗೊತ್ತು , ಈ  ಪ್ರಪಂಚದಲ್ಲಿ ನಿನಗೆ  ತಾಳೆಯಾಗುವ  ಒಬ್ಬ ಹೆಂಗಸಾದರು ಇರುತ್ತಾಳೆ. ಅವಳನ್ನು ಹುಡುಕುವದು ನಿನಗೆ ಕಷ್ಟವಾಗಲಾರದು. ನಾನು ಅಂತಹ ಮಹಿಳೆಯಲ್ಲ. ನಾನು ನಿನಗೆ ಮೋಸ ಮಾಡಿದೆ. ಆದರೂ ಹೇಳಬೇಕೆಂದರೆ ಮೊದಲಿನಿಂದಲೂ ನಮ್ಮ ನಡುವೆ  ಏನೋ ಒಂದು ಹೇಳಿಕೊಳ್ಳಲಾಗದ, ಸರಿ ಪಡಿಸಲಾರದ೦ತಹುದು ಇದ್ದೆ ಇತ್ತು. ಷರಟಿನ ಗುಂಡಿಯನ್ನು ಹೆಚ್ಚು ಕಡಿಮೆ ಮಾಡಿ ಹಾಕಿಕೊಂಡ ಹಾಗೆ. ನನಗೆ ಅನಿಸುತ್ತದೆ ಈಗ ನೀನು ಮೊದಲಿಗಿಂತ ಸಂತೋಷದ , ಸಹಜ ಬದುಕನ್ನು ಬದುಕಬಹುದು "

ಗುಂಡಿಗಳನ್ನು ತಪ್ಪಾಗಿ ಹಾಕಲಾಗಿದೆ ಕೀನೋ ಯೋಚಿಸಿದ. ಅವನು ಅವಳು  ಧರಿಸಿದ್ದ ಹೊಸ ಉಡುಪನ್ನು ದಿಟ್ಟಿಸಿದ. ಅವರಿಬ್ಬರೂ ಮುಖಾಮುಖಿಯಾಗಿ ಕುಳಿತಿದ್ದರು. ಹೀಗಾಗಿ ಅವಳ ಬೆನ್ನಿನ ಬಳಿ ಗುಂಡಿಗಳಿವೆಯೇ ಅಥವಾ ಜಿಪ್ ಇರಬಹುದೇ ಎನ್ನುವದನ್ನು ಅವನು ಗ್ರಹಿಸದಾದ. ಆದರೆ ಈ ಬಟ್ಟೆಗಳ ಆಚೆ ಏನಿರಬಹುದು ಎನ್ನುವ ಯೋಚನೆ ಅವನ ಪ್ರಯತ್ನವನ್ನು ಮೀರಿ ಹೊರ ಬಂದಿತು. ಅವಳು ಈಗ ಅವನ ಹೆಂಡತಿಯಲ್ಲ. ಹೀಗಾಗಿ ಅವಳ ದೇಹದ ಬಗ್ಗೆ ಕಲ್ಪನೆ ಮಾತ್ರ ಅವನಿಗೆ ಸಾಧ್ಯ.  ಅವನು ಕಣ್ಣು ಮುಚ್ಚಿದಾಗ ಅವಳ ಅಚ್ಚ ಬಿಳಿಯ ಬೆನ್ನಿನ ಮೇಲೆ ಅಸಂಖ್ಯಾತ ದಟ್ಟ ಕಂದು  ಬಣ್ಣದ ಕಲೆಗಳು ಸಣ್ಣ ಸಣ್ಣ ಹುಳುಗಳಂತೆ ಗೋಚರಿಸಿದವು. ಅವನು ಬೆಚ್ಚಿಬಿದ್ದು ತಲೆ ಕೊಡವಿದ. ಅವನ ಹೆಂಡತಿ ಇದನ್ನು ತಪ್ಪಾಗಿ ಗ್ರಹಿಸಿದಳು 

ಅವನ ಹೆಂಡತಿ ಸಾವಕಾಶವಾಗಿ ತನ್ನ ಕೈಯನ್ನು ಅವನ ಕೈ ಮೇಲಿಟ್ಟಳು " ನನ್ನನ್ನು ಕ್ಷಮಿಸಿಬಿಡು" . 


********* ********* *********

ಚಳಿಗಾಲ ಶುರುವಾಯಿತು ಮತ್ತು ಬೆಕ್ಕು ಮಾಯವಾಯಿತು. 

ಬೆಕ್ಕು ಕಾಣೆಯಾದದನ್ನು ಗಮನಿಸಲು ಕಿನೋಗೆ ಕೆಲ ದಿನಗಳು ಬೇಕಾದವು. ಹೆಸರಿಲ್ಲದ ಆ ಬೆಕ್ಕು ತನಗೆ ಬೇಕಾದಾಗ ಬಾರ್ ಗೆ ಬಂದು ಹೋಗುತ್ತಿತ್ತು. ಕೆಲವೊಮ್ಮೆ ವಾರಗಟ್ಟಲೆ ಅದು ಮರಳಿ ಬರುತ್ತಿರಲಿಲ್ಲ. ಹೀಗಾಗಿ ಮೊದ ಮೊದಲು ಅವನು ಅದರ ಬಗ್ಗೆ ಅಷ್ಟೇನೂ ತಲೆ ಕೆಡಿಸ್ಕೊಳ್ಳಲಿಲ್ಲ.  ಅವನಿಗೆ ಬೆಕ್ಕು ಪ್ರಿಯವಾಗಿತ್ತು ಮತ್ತು ಬೆಕ್ಕೂ ಸಹ ಅವನನ್ನು ನಂಬುತ್ತಿತ್ತು. ಅಲ್ಲದೇ ‘ಬಾರ್ ‘ಗೆ ಅದು ಶುಭ ಸಂಕೇತದ  ಹಾಗಿತ್ತು. ಬೆಕ್ಕು ‘ಬಾರ್’ ನ ಮೂಲೆಯಲ್ಲಿ ಮಲಗಿಕೊಂಡಿರುವವರೆಗೆ ತನಗೆ ಯಾವುದೇ ಕೇಡು ಆಗುವದಿಲ್ಲ ಎನ್ನುವದು ಕಿನೋನ ನಂಬಿಕೆಯಾಗಿತ್ತು. ಆದರೆ ಎರಡು ವಾರಗಳು ಕಳೆದ ನಂತರ ಕೀನೊಗೆ ಚಿ೦ತೆಯಾಯಿತು.  ಮೂರು ವಾರಗಳು ಕಳೆದ ಮೇಲೆ ಬೆಕ್ಕು ಮರಳಿ ಬರುವದಿಲ್ಲವೆಂದು ಕೀನೋನ ಅಂತರಾತ್ಮ ನುಡಿಯಿತು. 

ಬೆಕ್ಕು ಮಾಯವಾದ ಸಮಯದಲ್ಲೇ ಕೀನೋ ಬಾರ್ ನ ಸುತ್ತಮುತ್ತ ಹಾವುಗಳನ್ನು ಗಮನಿಸಿದ. 

ಅವನು ನೋಡಿದ ಮೊದಲ ಹಾವು ಬೂದು  ಬಣ್ಣದ ಉದ್ದನೆಯ ಹಾವಾಗಿತ್ತು. ಅದು ಬಾರಿನ ನ ಮುಂದಿದ್ದ ವಿಲ್ಲೋವ್ ಮರದಡಿಯಲ್ಲಿ ಆರಾಮವಾಗಿ ಮಲಗಿತ್ತು. ಕೀನೋ ಮನೆಗೆ ಸಾಮಾನು ತರುವಾಗ ಅದನ್ನು ಗಮನಿಸಿದ.  ಟೋಕಿಯೋದ ಮಧ್ಯ ಭಾಗದಲ್ಲಿ ಹಾವುಗಳು ಅಪರೂಪವೇ. ಅವನಿಗೆ ಆಶ್ಚರ್ಯವಾದರೂ ಅವನು ಅದರ ಬಗ್ಗೆ ಹೆಚ್ಚು ಚಿ೦ತಿಸಲಿಲ್ಲ.  ಅವನ ಕಟ್ಟಡದ ಹಿಂದೆ ಮ್ಯೂಸಿಯಂನ ಕೈ ತೋಟವಿತ್ತು.  ಬಹುಶ:  ಹಾವು ಅಲ್ಲಿಂದಲೇ ಬಂದಿರಬೇಕು. 

ಆದರೆ ಎರಡು ದಿನಗಳ  ನಂತರ  ಅವನು ಪೇಪರನ್ನು ತೆಗೆದುಕೊಳ್ಳಲು ಬಾಗಿಲನ್ನು ತೆರೆದಾಗ  ಅದೇ ಜಾಗದಲ್ಲಿ ಇನ್ನೊಂದು ಹಾವನ್ನು ನೋಡಿದ. ಇದು ಕಡು ನೀಲಿ ಬಣ್ಣದಲ್ಲಿತ್ತು, ಮೊದಲನೇ ಹಾವಿಗಿಂತ ಸ್ವಲ್ಪ ಚಿಕ್ಕದು, ತೆಳ್ಳಗಿನದು .  ಹಾವು ಕಿನೋನನ್ನು ಗಮನಿಸಿದಾಗ  ಅದು ಹೆಡೆಯನ್ನು ತುಸುವೇ ಎತ್ತಿ ಪರಿಚಯ ಇರುವಂತೆ  ಅವನನ್ನು ದಿಟ್ಟಿಸಿತು. ಕೀನೋ ಏನು ಮಾಡಬೇಕೆಂದು ತಿಳಿಯದೆ ಹಿಂಜರಿಯುತ್ತ ಒಳಗೆ ಹೋಗಿ  ಬಾಗಿಲನ್ನು ಹಾಕಿಕೊಂಡ.  ಈ ಘಟನೆ ಕೀನೊನಲ್ಲಿ ಸಣ್ಣ ಭೀತಿಯನ್ನು ಹುಟ್ಟು ಹಾಕಿತ್ತು. 

ಮೂರು ದಿನಗಳ ನಂತರ ಅವನು ಮೂರನೇ ಹಾವನ್ನು ಗುರುತಿಸಿದ. ಅದು ಸಹ ವಿಲ್ಲೋವ್ ಮರದ ಕೆಳಗೆ ಮಲಗಿತ್ತು.  ಈ ಹಾವು ಮೊದಲಿನ ಎರಡು ಹಾವುಗಳಿಗಿಂತ ಚಿಕ್ಕದು  ಮತ್ತು  ಕಪ್ಪಾಗಿತ್ತು.  ಕಿನೋಗೆ ಹಾವಿನ ಬಗ್ಗೆ ಅಂತಹ ವಿಶೇಷ ಮಾಹಿತಿ ಏನು ಇರಲಿಲ್ಲ. ಆದರೆ ಹಾವುಗಳು ಅಪಾಯಕಾರಿ ಎನ್ನುವದು ತಿಳಿದಿತ್ತು. ಅದು ಹೇಗೋ ಈ ಹಾವು ವಿಷಪೂರಿತವಾಗಿ ಕಾಣಿಸುತ್ತಿತ್ತು. ಕಿನೋನ ಉಪಸ್ಥಿತಿಯನ್ನು ಗಮನಿಸಿದ್ದೆ ಹಾವು ಸರಸರನೆ ಹರಿದು ಪೊದೆಗಳೆಡೆಯಲ್ಲಿ ಮಾಯವಾಯಿತು. ಒಂದು ವಾರದ ಕಾಲಾವಕಾಶದಲ್ಲಿ ಮೂರು ಹಾವುಗಳು , ಅದು ಹೇಗೆ ಲೆಕ್ಕ ಹಾಕಿದರೂ ಹೆಚ್ಚೇ ಅನ್ನಿಸುವ ಹಾಗೆ.  ವಿಚಿತ್ರವಾದದ್ದು ಏನೋ ನಡೆಯಿತ್ತಿದೆ. 

 

ಕೀನೋ ‘ಈಜು’ವಿನಲ್ಲಿರುವ ಅವನ ದೊಡ್ಡಮ್ಮಳಿಗೆ ಕರೆ ಮಾಡಿದ. ಉಭಯ ಕುಶಲೋಪರಿಯ ನಂತರ ಅವನು ಹಾವಿನ ವಿಷಯವನ್ನು ಪ್ರಸ್ತಾಪ ಮಾಡಿದ. ಅವಳು ಈ ಮೊದಲು  ಯಾವತ್ತಾದರೂ ಅವಳ ಕಟ್ಟಡದ ಬಳಿ ಹಾವನ್ನು ಗಮನಿಸಿದ್ದಳೆ ಎಂದು ಕೇಳಿದ.  

"ಹಾವುಗಳೇ?" ಅವನ ದೊಡ್ಡಮ್ಮ ಆಶ್ಚರ್ಯದಿಂದ ಕೇಳಿದಳು. "ನಾನು ಅಲ್ಲಿ ಹಲವಾರು ವರ್ಷ ವಾಸವಿದ್ದೆ. ಆದರೆ ನನಗೆ ಅಲ್ಲಿ ಯಾವತ್ತೂ ಹಾವನ್ನು ನೋಡಿದ ನೆನಪಿಲ್ಲ. ಅದು ಭೂಕ೦ಪಕದ ಮುನ್ಸೂಚನೆ ಇರಬಹುದೇ ? ಸಾಧಾರಣವಾಗಿ ನೈಸರ್ಗಿಕ ವಿಕೋಪದ ಬಗ್ಗೆ ಪ್ರಾಣಿಗಳಿಗೆ ಮೊದಲೇ ಸುಳಿವು ಹತ್ತಿ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸುತ್ತವೆ "

"ಅದು ನಿಜವೇ ಆಗಿದ್ದರೆ ನಾನು ಒಂದಷ್ಟು ಅಗತ್ಯ ಸಾಮಾನುಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳಬೇಕು" ಕೀನೊ. 

"ಅದು ಒಳ್ಳೆಯ ವಿಚಾರ. ಒಂದಲ್ಲ ಒಂದಲ್ಲ ಒಂದು ದಿನ ಟೋಕಿಯೊವನ್ನು ದೊಡ್ಡ ಭೂಕ೦ಪವಾಗಲಿದೆ " 

"ಆದರೆ ಹಾವಿಗೆ ಭೂಕ೦ಪದ ಮುನ್ಸೂಚನೆ ಸಿಗುತ್ತದೆಯೇ ?"

"ಅವುಗಳಿಗೆ ಯಾವುದರ ಮುನ್ಸೂಚನೆ ಇದೆ ಎಂದು ನನಗೆ ಗೊತ್ತಿಲ್ಲ " ಅವನ ದೊಡ್ಡಮ್ಮ ಹೇಳಿದಳು "ಆದರೆ ಹಾವುಗಳು ಬುದ್ಧಿವಂತ ಜೀವಿಗಳು. ಪುರಾಣಗಳಲ್ಲಿ ಹಲವಷ್ಟು ಬಾರಿ ಅವು ಜನರಿಗೆ ಹಾದಿ ತೋರಿಸಿವೆ. ಆದರೆ ಒಂದು ಹಾವು ನಿನಗೆ ಹಾದಿ ತೋರಿಸಿದಾಗ ಅದು ನಿನ್ನನು ಒಳ್ಳೆಯ ಹಾದಿಯಲ್ಲಿ ಕರೆದೊಯ್ಯುತ್ತಿದೆಯೇ ಅಥವಾ ಕೆಟ್ಟದರಲ್ಲೇ ಎನ್ನುವದು ತಿಳಿಯುವದಿಲ್ಲ.  ಹಲವಷ್ಟು ಸಲ ಅದು ಒಳ್ಳೆಯ ಮತ್ತು ಕೆಟ್ಟದರ ಸಂಗಮ. "

"ಅನಿಶ್ಚಿತವಾಗಿದೆ"  ಕೀನೋ 

"ಹೌದು. ಹಾವುಗಳು ಯಾವತ್ತಿಗೂ ಅನಿಶ್ಚಿತ ಜೀವಿಗಳು. ಪುರಾಣಗಳಲ್ಲಿ ಅತ್ಯಂತ ದೊಡ್ಡ ಮತ್ತು ಬುದ್ಧಿವಂತ ಹಾವು ತನ್ನ ಹೃದಯವನ್ನು ಬೇರೊಂದು ಸ್ಥಳದಲ್ಲಿ ಬಚ್ಚಿಡುತ್ತದೆ. ಹಾಗಾಗಿ ಅದನ್ನು ಕೊಲ್ಲುವದು ಕಷ್ಟ . ನೀನು ಹಾವನ್ನು ಕೊಲ್ಲಬೇಕೆಂದರೆ ಅದು ಹೃದಯವನ್ನು ಬಚ್ಚಿಟ್ಟಿರುವ ಸ್ಥಳವನ್ನು ಹುಡುಕಿ , ಅದು ಇಲ್ಲದ ಸಮಯ ನೋಡಿ , ಹೊಡೆದುಕೊಳ್ಳುತ್ತಿರುವ  ಹೃದಯವನ್ನು ಎರಡು ತುಂಡಾಗಿ ಕತ್ತರಿಸಬೇಕು. ಅದೇನೂ ಸುಲಭದ ಕೆಲಸವಲ್ಲ. "

ಇದೆಲ್ಲ ಅವನ ದೊಡ್ಡಮ್ಮಳಿಗೆ ಹೇಗೆ ಗೊತ್ತು?

"ಒಂದು ದಿನ ನಾನು ಈ ಪುರಾಣದ ಕತೆಗಳನ್ನು ಪ್ರಸಾರ ಮಾಡುವ ಟಿವಿ ಚಾನೆಲ್ ನೋಡುತ್ತಿದ್ದೆ. " ಅವಳು ವಿವರಿಸಿದಳು " ಯಾವುದೋ ಯೂನಿವರ್ಸಿಟಿಯ ಪ್ರೊಫೆಸರ್ ಇವೆಲ್ಲವನ್ನೂ ಹೇಳುತ್ತಿದ್ದ. ಕಳೆಯಲು ಸಮಯವಿದ್ದರೆ ಈ ಟಿವಿಗಿಂತ ಒಳ್ಳೆಯದು ಬೇರೆ ಯಾವುದು ಇಲ್ಲ. ನೀನು ಸ್ವಲ್ಪ ಟಿವಿ ನೋಡು"

ಕಿನೋಗೆ ಮನೆಯ ಸುತ್ತ ಹಾವುಗಳೇ ತುಂಬಿವೆ ಎಂದು ಭಾಸವಾಗತೊಡಗಿತು. ಅವನು ಅವುಗಳ ನಿಶ್ಯಬ್ದ ಹಾಜರಿಯನ್ನು ಗ್ರಹಿಸತೊಡಗಿದ.  ರಾತ್ರಿ ಅವನು ಬಾರ್ ನ ಬಾಗಿಲನ್ನು ಹಾಕುವಾಗ ಆ ಕತ್ತಲ ನಿಶ್ಶಬ್ದದಲ್ಲಿ ಅವನಿಗೆ ಅಲ್ಲಿ ಇಲ್ಲಿ ವಿರಳವಾಗಿ ಕೇಳಿ ಬರುವ ಸೈರೆನ್ ಶಬ್ದದ ಜೊತೆಗೆ ಹಾವಿನ ಹೊರಳುವಿಕೆಯ ಶಬ್ಧ ಸ್ಪಷ್ಟವಾಗಿ ಕೇಳತೊಡಗಿತು.  ಅವನು ಹಾವು ಒಳಗೆ ಬರಬಾರದು ಎಂದು ಬೆಕ್ಕಿಗಾಗಿ ನಿರ್ಮಿಸಿದ್ದ ಬಾಗಿಲಿಗೆ ಅಡ್ಡಲಾಗಿ  ಒಂದು ಮರದ ತುಂಡನ್ನು ಇಟ್ಟು ಅದಕ್ಕೆ ಮೊಳೆ ಹೊಡೆದ. 

************************************ **********************

 

ಒಂದು ರಾತ್ರಿ , ಹತ್ತು ಘಂಟೆಗೆ ತುಸು ಮೊದಲು ಕಮಿಟೊ ಪ್ರತ್ಯಕ್ಷನಾದ. ಅವನು ಎಂದಿನಂತೆ ಒಂದು ಬಿಯರ್ ಕುಡಿದು ನಂತರ ವಿಸ್ಕಿ ಹೀರಿ ಕ್ಯಾಬೇಜ್ ನಿಂದ ಮಾಡಿದ್ದ ತಿನಿಸನ್ನು ತಿಂದ. ರಾತ್ರಿ  ಅವನು ತಡವಾಗಿ ಬಂದಿದ್ದಾಗಲಿ , ಅಷ್ಟು ಹೊತ್ತು ಇದ್ದಿದ್ದಾಗಲಿ ಇದೆ ಮೊದಲು.  ಆಗಾಗ ಅವನು ಪುಸ್ತಕದಿಂದ ತಲೆಯೆತ್ತಿ ಏನೋ ಹುಡುಕಾಡುತ್ತಿರುವವನಂತೆ ಎದುರಿನ ಗೋಡೆಯನ್ನು ದಿಟ್ಟಿಸುತ್ತಿದ್ದ.  ಬಾರ್ ನ  ಬಾಗಿಲು ಹಾಕುವ ಸಮಯವಾಗುವವರೆಗೂ ಅವನು ಅಲ್ಲಿಯೇ ಕುಳಿತಿದ್ದ. 

"ಮಿಸ್ಟರ್. ಕೀನೊ"  ಬಿಲ್ ಪಾವತಿಸಿದ ನಂತರ ಕಮಿಟೊ  ಔಪಚಾರಿಕವಾಗಿ  ಹೇಳಿದ " "ಇದು ಈ  ಸ್ಥಿತಿಗೆ ಬಂದು  ತಲುಪಿತು ಎಂದು ತಿಳಿಸಲು ನನಗೆ ವಿಷಾದವಾಗುತ್ತಿದೆ "

"ಈ ಸ್ಥಿತಿ ?"  ಕೀನೋ ಹುಬ್ಬೇರಿಸಿದ. 

"ನೀನು ಬಾರನ್ನು ತಾತ್ಕಾಲಿಕವಾಗಿಯಾದರೂ ಮುಚ್ಚಬೇಕು "

ಕೀನೋ ಪ್ರತಿಕ್ರಿಯಿಸುವದು ಹೇಗೆಂದು ತಿಳಿಯದೆ  ಕಾಮಿಟೋನನ್ನು ದಿಟ್ಟಸಿದ.  ಬಾರ್ ಮುಚ್ಚುವದು ?

ಕಾಮಿಟೋ ಬಾರ್ ನ ಸುತ್ತ ದೃಷ್ಟಿ ಹಾಯಿಸಿದ. ನಂತರ ಮತ್ತೆ ಕಿನೋನತ್ತ ನೋಡಿ "ನಾನು ಹೇಳುತ್ತಿರುವದು ಏನೆಂದು ನಿನಗೆ ಅರ್ಥಾವಾಗುತ್ತಿಲ್ಲ ಅಲ್ಲವೇ ?"

"ಇಲ್ಲ "

"ನಾನು ಈ ಬಾರನ್ನು  ನಿಜಕ್ಕೂ ಇಷ್ಟಪಡುತ್ತೇನೆ. " ಕಮಿಟೊ ಅವನನ್ನು  ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಹೇಳಿದ.  "ಇದೊಂದು ಪ್ರಶಾಂತ ಸ್ಥಳ ಹೀಗಾಗಿ ನಾನು ಆರಾಮದಲ್ಲಿ ಕುಳಿತು , ಸಂಗೀತವನ್ನು ಕೇಳುತ್ತ ಓದಬಹುದಿತ್ತು.  ನೀನು ಇಲ್ಲಿ  ಬಾರ್  ತೆರೆದಾಗ ನನಗೆ ಬಹಳ ಸಂತೋಷವಾಗಿತ್ತು.  ದುರದೃಷ್ಟವಶಾತ್ ಈಗ ಕೆಲವೊಂದು ಅಗತ್ಯವಾಗಿ ಇರಲೇಬೇಕಾದಂತಹ ವಸ್ತುಗಳು ಇಲ್ಲಿಂದ  ಕಾಣೆಯಾಗಿವೆ "

"ಕಾಣೆಯಾಗಿದೆ ?" ಕಿನೋಗೆ ಅವನು ಹೇಳುತ್ತಿರುವದು ಯಾವುದರ ಬಗ್ಗೆ ಎಂದು ಅರ್ಥವಾಗಲಿಲ್ಲ. ಆ ಕ್ಷಣಕ್ಕೆ ಅವನಿಗೆ ಜ್ಞಾಪಕಕ್ಕೆ ಬಂದಿದ್ದು ಕಳೆದು ಹೋದ ಒಂದು ಟಿ ಕಪ್ಪು ಮಾತ್ರ. 

"ಕಂದು ಬೆಕ್ಕು ಸಧ್ಯಕ್ಕಂತೂ  ಮರಳಿ ಬರುವದಿಲ್ಲ. " ಕಮಿಟೊ 

"ಯಾಕೆಂದರೆ ಇಲ್ಲಿಂದ ಕೆಲವು ವಸ್ತುಗಳು ಕಾಣೆಯಾಗಿವೆ ?  ಕೀನೋ ಕೇಳಿದ. 

ಕಮಿಟೊ ಉತ್ತರಿಸಲಿಲ್ಲ. 

ಕೀನೋ ಕಮಿಟೊನ ದೃಷ್ಟಿಯನ್ನು ಅನುಸರಿಸಿ ಬಾರನ್ನೊಮ್ಮೆ ಅವಲೋಕನ ಮಾಡಿದ.  ಅಸಹಜವಾದದ್ದು ಏನೂ ಅವನಿಗೆ ಗೋಚರಿಸಲಿಲ್ಲ.  ಆದರೆ , ಬಾರು ಚೈತನ್ಯವಿಲ್ಲದೆ, ಬಣ್ಣಗೆಟ್ಟು ಶೂನ್ಯವಾಗಿದ್ದಂತೆ , ಖಾಲಿಯಾಗಿದ್ದಂತೆ ತೋರಿತು. ಅವನ ತರ್ಕಕ್ಕೆ ಮೀರಿದ ಭಾವ. 

ಕಮಿಟೊ ಮತ್ತೆ ಮಾತನಾಡತೊಡಗಿದ "ಮಿಸ್ಟರ್ ಕೀನೋ ಮೂಲತಃ ನೀನು ಸ್ವತಃ ಇತರರಿಗೆ ಕೇಡು ಬಯಸುವ ವ್ಯಕ್ತಿಯಲ್ಲ.  ಆದರೆ ಈ ಪ್ರಪಂಚದಲ್ಲಿ ಕೆಲವೊಮ್ಮೆ ಕೇಡನ್ನು ಬಯಸದೆ ಇರುವದಷ್ಟೇ ಸಾಕಾಗುವದಿಲ್ಲ.  ಕೆಲವರು ಆ ಒಂದು  ಖಾಲಿ ಜಾಗವನ್ನು, ಶೂನ್ಯವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ದುರ್ಬಳಕೆ ಮಾಡಿಕೊಳ್ಳುತ್ತಾರೆ. ನಾನು ಹೇಳುತ್ತಿರುವದು ಏನೆಂದು ಅರ್ಥವಾಗುತ್ತಿದೆಯೇ ?"

ಕೀನೊಗೆ  ಅರ್ಥವಾಗಲಿಲ್ಲ. 

"ಇದರ ಬಗ್ಗೆ ಬಲು ಎಚ್ಚರಿಕೆಯಿಂದ ಯೋಚಿಸು " ಕಮಿಟೊ ನೇರವಾಗಿ ಕಿನೋನ ಕಣ್ಣುಗಳ ಆಳಕ್ಕೆ ದಿಟ್ಟಿಸುತ್ತಾ ನುಡಿದ. "ಇದು ಅತ್ಯ೦ತ  ಮುಖ್ಯವಾದ ಪ್ರಶ್ನೆಯಾಗಿದ್ದು , ಇದರ ಬಗ್ಗೆ ನೀನು  ಗಂಭೀರ ಚಿಂತನೆಮಾಡುವದು ಅತ್ಯಗತ್ಯ. ಆದರೆ ಉತ್ತರ ತತ್ ಕ್ಷಣಕ್ಕೆ ನಿನಗೆ ಸಿಗದೇ ಇರಬಹುದು. "

"ನೀನು ಹೇಳುತ್ತಿರುವದು ಯಾವುದೋ ಒಂದು ದುಃಷಕೃತ್ಯ ನಡೆದಿರುವದು ನಾನು ತಪ್ಪನ್ನು ಮಾಡಿರುವದಕ್ಕಲ್ಲ ಬದಲಾಗಿ ನಾನು ಮಾಡಬೇಕಾದ ಕೆಲಸವನ್ನು ಮಾಡದೆ ಇರುವದಕ್ಕಾಗಿ ?  ಈ ಬಾರಿಗೆ ಅಥವಾ ನನಗೆ ತೊಂದರೆ ?"

ಕಮಿಟೊ  ತಲೆಯಾಡಿಸಿದ. " ನೀನು ಹಾಗೂ ಹೇಳಬಹುದು. ಆದರೆ ನಾನು ನಿನ್ನೊಬ್ಬನನ್ನು ಮಾತ್ರ ಅದಕ್ಕೆ ದೂಷಿಸುವ ಹಾಗಿಲ್ಲ.ಇಂತಹ ಒಂದು ಘಟನೆ ನಡೆದುಹೋಗಬಹುದು ಎನ್ನುವದನ್ನು ಮುಂಚಿತವಾಗಿಯೇ ಗುರುತಿಸದ  ನನ್ನ ಹೊಣೆಗಾರಿಕೆಯೂ ಇದರಲ್ಲಿ ಭಾಗವಾಗಿದೆ. ನಾನು ಇನ್ನಷ್ಟು ಲಕ್ಷವಹಿಸಬೇಕಿತ್ತು.  ಇದು ನನಗೆ ಮಾತ್ರವಲ್ಲ ಇಲ್ಲಿಗೆ  ಬರುವ ಪ್ರತಿಯೊಬ್ಬನಿಗೂ ಒಂದು ಪ್ರಶಸ್ತ  ಆರಾಮದಾಯಕ ಜಾಗವಾಗಿತ್ತು. " 

"ಹಾಗಾದರೆ ನಾನು ಏನು ಮಾಡಬೇಕು ?" ಕೀನೋ ಪ್ರಶ್ನಿಸಿದ. 

"ಬಾರನ್ನು ಸ್ವಲ್ಪ ಸಮಯ ಮುಚ್ಚಿ ಎಲ್ಲಿಯಾದರೂ ದೂರಕ್ಕೆ ಹೊರಟುಹೋಗು. ಅದರ ಹೊರತಾಗಿ ಈ ಹ೦ತದಲ್ಲಿ ನೀನು ಬೇರೆ ಏನು ಮಾಡುವ ಹಾಗಿಲ್ಲ. ನನಗನ್ನಿಸುವ ಹಾಗೆ ಇನ್ನೊಂದು ದೀರ್ಘ ಮಳೆ ಶುರುವಾಗುವ ಮೊದಲು ನೀನು ಇಲ್ಲಿಂದ ಹೊರಟು ಹೋಗುವದು  ಒಳ್ಳೆಯದು. ಹಾಗೆ ಇನ್ನೊಂದು  ವಿಷಯ  ಒಂದು ಸುದೀರ್ಘ ಪ್ರಯಾಣಕ್ಕೆ ಬೇಕಾಗುವಷ್ಟು ಹಣ ನಿನ್ನ ಬಳಿ ಇದೆಯೇ ?"

"ಒಂದಷ್ಟು ಕಾಲ ಹಣದ ಅಡಚಣೆಯೇನು ಬರಲಾರದು. " 

"ಒಳ್ಳೆಯದು. ಹಣ ಖಾಲಿಯಾದ  ಮೇಲೆ ಏನು ಮಾಡುವದು ಎನ್ನುವದನ್ನು ಆಗ ಯೋಚಿಸೋಣ "

"ಇಷ್ಟಕ್ಕೂ ನೀನು ಯಾರು ?" ಕೀನೋ 

"ನಾನು ಕಮಿಟೊ ಎನ್ನುವ ಹೆಸರಿನ ವ್ಯಕ್ತಿ ಅಷ್ಟೇ.  ಅದನ್ನು ಬರೆಯುವದು ಎರಡು ಶಬ್ದಗಳಿಂದ - ದೇವರು ಎಂದು ಬರೆಯುವ ಮೊದಲ ಶಬ್ದ ಮತ್ತು ಕ್ಷೇತ್ರ ಎಂದು ಬರೆಯುವ ಎರಡನೇ ಶಬ್ದ.  'ದೇವರ ಕ್ಷೇತ್ರ'. ಹಾಗೆಂದು ಅದನ್ನು ಕಂಡಾ ಎಂದು ಉಚ್ಛರಿಸುವದಲ್ಲ. 'ಕಮಿಟೊ ' ಎಂದು ಉಚ್ಚರಿಸಬೇಕು . ನಾನು ಇಲ್ಲೇ ಹತ್ತಿರದಲ್ಲಿ ಬಹು ಕಾಲದಿಂದ ವಾಸವಾಗಿದ್ದೇನೆ. 

ಕೀನೋ ಈಗ ತನ್ನ ಮುಂದಿನ ಪ್ರಶ್ನೆಯನ್ನೂ ಕೇಳಲು ನಿರ್ಧರಿಸಿದ " ಮಿಸ್ಟರ್ ಕಮಿಟೊ , ಈ ಮೊದಲು ಸುತ್ತಮುತ್ತ ಹಾವುಗಳು  ಕಾಣಿಸುತ್ತಿದ್ದವೇ?? "

ಕಮಿಟೊ ಉತ್ತರಿಸಲಿಲ್ಲ.  "ನೀನು ಹೀಗೆ ಮಾಡು. ಇಲ್ಲಿಂದ ಸಾಧ್ಯವಾದಷ್ಟು ದೂರಕ್ಕೆ ಹೊರಟು ಹೋಗು ಮತ್ತು ಯಾವತ್ತೂ ಒಂದೇ ಜಾಗದಲ್ಲಿ ಬಹಳ ದಿನ ಉಳಿಯಬೇಡ. ಪ್ರತಿ ಸೋಮವಾರ ಮತ್ತು ಗುರುವಾರ ನೀನು ಎಲ್ಲಿದ್ದರೂ ಒಂದು ಪತ್ರವನ್ನು ಕಳುಹಿಸು.  ನೀನು ತೊಂದರೆಯಲ್ಲಿ ಇಲ್ಲ ಎನ್ನುವದು ನನಗೆ ಪತ್ರದ ಮೂಲಕ ತಿಳಿಯುತ್ತದೆ. "

"ಪತ್ರ?"

"ಯಾವುದೇ ತೆರನಾದ ಪತ್ರ , ಕಾರ್ಡ . ಒಟ್ಟಿನಲ್ಲಿ ನೀನು ಇದ್ದಲ್ಲಿಂದ ಕಳುಹಿಸಿದರೆ ಆಯಿತು "

"ಆದರೆ ಯಾರ ವಿಳಾಸಕ್ಕೆ ಕಳುಹಿಸಬೇಕು ?"

"ನೀನು ನಿನ್ನ ದೊಡ್ಡಮ್ಮಳ ಮನೆಯಿರುವ  ಈಜುವಿಗೆ  ಕಳಿಹಿಸಿದರೆ ಸಾಕು. ಪತ್ರದ  ಮೇಲೆ ನಿನ್ನ ಹೆಸರಾಗಲಿ  ಅಥವಾ ಇನ್ಯಾವುದೇ ಸಾಲುಗಳನ್ನಾಗಲಿ ಬರೆಯಕೂಡದು. ನೀನು ಕಳುಹಿಸುತ್ತಿರುವ ವಿಳಾಸ ಮಾತ್ರ ಸಾಕು . ಇದು ಅತ್ಯಂತ ಮಹತ್ವದ ವಿಷಯ ಹಾಗಾಗಿ ನೀನು ಮರೆಯುವ ಹಾಗಿಲ್ಲ. "

ಕೀನೋ ಅವನೆಡೆಗೆ ಆಶ್ಚರ್ಯದಿಂದ ನೋಡಿದ "ನಿನಗೆ ನನ್ನ ದೊಡ್ಡಮ್ಮನ ಪರಿಚಯ ಇದೆಯೇ ?"

"ಹೌದು. ನಾನು ಅವಳನ್ನು ಚೆನ್ನಾಗಿ ಬಲ್ಲೆ. ನಿಜ ಹೇಳಬೇಕು ಎಂದರೆ ನಿನಗೆ ಯಾವುದೇ ತೊಂದರೆ ಆಗದಿರುವಂತೆ   ನಿನ್ನ ಮೇಲೆ ನಿಗಾ ವಹಿಸಲು   ಅವಳೇ ನನಗೆ ಹೇಳಿದ್ದಳು. ಬಹುಶ: ನಾನು ಕೆಲಸದಲ್ಲಿ ಸಫಲನಾಗಲಿಲ್ಲ. "

ಇವನು ಯಾರಿರಬಹುದು ಕೀನೋ ಯೋಚಿಸಿದ. 

“ಮಿಸ್ಟರ್ ಕೀನೋ , ಎಲ್ಲವೂ ಯಾವತ್ತು ಸರಿ ಹೋಗುತ್ತದೆಯೋ ಅವತ್ತು ನಾನು ನಿನಗೆ ವಿಷಯ ತಿಳಿಸುತ್ತೇನೆ. ಅಲ್ಲಿಯವರೆಗೆ ನೀನು ಈ ಜಾಗದಿಂದ ದೂರವಿರಬೇಕು. ಅರ್ಥವಾಯಿತೇ ?"


*********************************************************************************************

ಆ ರಾತ್ರಿ ಕೀನೋ ಒಂದು ಸುಧೀರ್ಘ ಪ್ರಯಾಣಕ್ಕೆ ಅನುವಾದ. ಇನ್ನೊಂದು ದೀರ್ಘ ಮಳೆ ಶುರುವಾಗುವ ಮೊದಲು ನೀನು ಹೊರಡುವದು ಉತ್ತಮ.  ಇದ್ದಕ್ಕಿದ್ದ ಹಾಗೆ ಬಂದೆರಗಿದ ಮಾತುಗಳು. ಆದರೆ ಅದರಿಂದ ಜಾರಿಕೊಳ್ಳುವ ಹಾಗಿರಲಿಲ್ಲ. ಕಮಿಟಾನ ಮಾತುಗಳಿಗೆ   ತರ್ಕಕ್ಕೆ ಮೀರಿದ  ಮನವೊಲಿಸುವ ಶಕ್ತಿಯಿತ್ತು.   ಕೀನೊಗೆ ಆ ಮಾತುಗಳಲ್ಲಿ ಎಳ್ಳಷ್ಟೂ ಸಂಶಯ ಇರಲಿಲ್ಲ. ಅವನು ಕೆಲ ಅಗತ್ಯ ವಸ್ತುಗಳನ್ನು ಹಿಂದೆಲ್ಲ ಪ್ರಯಾಣಕ್ಕೆ ಕೊಂಡೊಯ್ಯುತ್ತಿದ್ದ  ಒಂದು ಬ್ಯಾಗಿಗೆ ತುಂಬಿಕೊಂಡ.  ಮುಂಜಾವು ಶುರುವಾಗುತ್ತಿದ್ದಂತೆ ಅವನು ಬಾರಿನ ಬಾಗಿಲಿಗೆ ಬೋರ್ಡನ್ನು ನೇತು ಹಾಕಿದ "ಬಾರನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಡಚಣೆಗಾಗಿ ವಿಷಾದಿಸುತ್ತೇವೆ. "

********************************************************************************

"ಎಲ್ಲಿಯಾದರೂ ಸಾಧ್ಯವಾದಷ್ಟು ದೂರ - ಕಮಿಟೊ ಅವನಿಗೆ ಹೇಳಿದ್ದ.  ಆದರೆ ಹೋಗಿವದು ಎಲ್ಲಿಗೆ ಎನ್ನುವದು ಕಿನೋಗೆ ತಿಳಿದಿರಲಿಲ್ಲ. ಉತ್ತರಕ್ಕೆ ಹೋಗಲೇ ? ಇಲ್ಲ ದಕ್ಷಿಣಕ್ಕೆ ?  ಕೊನೆಗೆ ತಾನು ಶೂ ಮಾರುತ್ತಿದ್ದಾಗ ಹೋಗುತ್ತಿದ್ದ ಹಾದಿಯನ್ನೇ ಮತ್ತೆ ಅನುಸರಿಸಲು ನಿರ್ಧರಿಸಿದ.  ಅವನು ಒಂದು ಎಕ್ಸ್ಪ್ರೆಸ್ ಬಸ್ ಏರಿ ಟಕಮಾಟ್ಸುಗೆ ತೆರಳಿದ. ಅಲ್ಲಿಂದ ಶಿಕೊಕುಗೆ ಒಂದು ಸುತ್ತು ತಿರುಗಿ ಅಲ್ಲಿಂದ ಕ್ಯುಶು ಪಟ್ಟಣ . 

ಅವನು ಟಕಮಾಟ್ಸು  ನಿಲ್ದಾಣದ ಸಮೀಪದಲ್ಲಿರುವ ಒಂದು ಹೋಟೆಲಿನಲ್ಲಿ ಮೂರು ದಿನ ಉಳಿದುಕೊಂಡ. ಅಲ್ಲಿಅವನು ಪಟ್ಟಣದ ಸುತ್ತಲೂ ಅಲೆದಾಡಿದ ಮತ್ತು ಕೆಲ ಸಿನಿಮಾಗಳನ್ನು ವೀಕ್ಷಿಸಿದ.  ಹಗಲಿನಲ್ಲಿ ಸರ್ವೇ ಸಾಮಾನ್ಯ ಖಾಲಿ ಇರುತ್ತಿದ್ದ ಚಿತ್ರಮಂದಿರದಲ್ಲಿ ನೋಡಿದ ಸಿನಿಮಾಗಳು ಮನಸ್ಸಿಗೆ ಮುದ ನೀಡುತ್ತಿದ್ದವು.  ರಾತ್ರಿಯಾಗುತ್ತಿದ್ದಂತೆ ಅವನು ರೂಮಿಗೆ ಮರಳಿ ದೊಡ್ಡಮ್ಮ ಹೇಳಿದಂತೆ ಟಿವಿಯಲ್ಲಿ ಕೆಲ ಶೈಕ್ಷಣಿಕ ಕಾರ್ಯಕ್ರಮಗಳನ್ನು  ನೋಡುತ್ತಿದ್ದ. ಆದರೆ ಅದರಿಂದ ಅಂತಹ ಉಪಯುಕ್ತಕರವಾದ ವಿಷಯವೇನೂ ಅವನಿಗೆ ದೊರಕಲಿಲ್ಲ.   ಟಕಮಾಟ್ಸು ನಲ್ಲಿದ್ದ ಎರಡನೇ ದಿನ ಗುರುವಾರವಾಗಿತ್ತು. ಹಾಗಾಗಿ ಅವನು ಹತ್ತಿರದ ಅಂಗಡಿಯಿಂದ ಲಕೋಟೆಯೊಂದನ್ನು ತಂದು ಅದಕ್ಕೆ ಸ್ಟ್ಯಾ೦ಪ್ ಅಂಟಿಸಿ ಅವನ ದೊಡ್ಡಮ್ಮಳಿಗೆ ಕಳುಹಿಸಿದ.  ಕಮಿಟೊ ಹೇಳಿದ ಹಾಗೆ ಕೇವಲ ಅವಳ ಹೆಸರು ಮತ್ತು ವಿಳಾಸ ಎರಡನ್ನೇ ಬರೆದ. 

"ಅತ್ಯಂತ ಎಚ್ಚರಿಕೆಯಿಂದ ಯೋಚಿಸು" ಕಮಿಟೊ ಅವನಿಗೆ ಹೇಳಿದ್ದ. "ಇದು ಅತ್ಯ೦ತ  ಮುಖ್ಯವಾದ ಪ್ರಶ್ನೆಯಾಗಿದ್ದು , ಇದರ ಬಗ್ಗೆ ನೀನು  ಗಂಭೀರ ಚಿಂತನೆಮಾಡುವದು ಅತ್ಯಗತ್ಯ. ಆದರೆ ಉತ್ತರ ತತ್ ಕ್ಷಣಕ್ಕೆ ನಿನಗೆ ಸಿಗದೇ ಇರಬಹುದು"

ಆದರೆ  ಯಾವುದೇ ದಿಕ್ಕಿನಿಂದ  ವಿಚಾರ ಮಾಡಿದರು ಅವನಿಗೆ ಆ ಮಾತಿನ ಅರ್ಥವಾಗಲಿ , ಅವನು ಸಿಕ್ಕಿಹಾಕಿಕೊಂಡಿರಬಹುದಾದ ತೊಂದರೆಯಾಗಲಿ ಹೊಳೆಯಲಿಲ್ಲ. 

ಸ್ವಲ್ಪ ದಿನಗಳ ನಂತರ ಕೀನೋ ಕ್ಯುಶುನಲ್ಲಿರುವ ಕುಮಾಮೊಟೊ ನಿಲ್ದಾಣದ ಬಳಿಯಿರುವ ಕೆಲ ದರ್ಜೆಯ ಹೋಟೆಲವೊಂದರಲ್ಲಿ ಉಳಿದುಕೊಂಡ.  ತಗ್ಗಾದ ಮೇಲ್ಛಾವಣಿ ,  ಕಿರಿದಾದ ಇಕ್ಕಟ್ಟಾದ ಹಾಸಿಗೆ, ಸಣ್ಣ ಟಿವಿ , ಅತಿ ಚಿಕ್ಕದಾದ ಸ್ನಾನದ ಕೋಣೆ , ಸಣ್ಣ ಫ್ರಿಡ್ಜ್.  ಇವೆಲ್ಲವುಗಳ ಮಧ್ಯೆ ಅವನಿಗೆ ತಾನು ಗು೦ಯ್ ಗುಡುವ ಹೆಜ್ಜೇನಿನಂತೆ ಭಾಸವಾಯಿತು. ಅಷ್ಟಾದರೂ ಕೆಲವೊಮ್ಮೆ ಅತ್ಯಗತ್ಯ ವಸ್ತುಗಳಿಗಾಗಿ ಹತ್ತಿರದ ಅಂಗಡಿಗೆ ಹೋಗುವದನ್ನು ಬಿಟ್ಟರೆ ಅವನು ಅದೇ  ಕೋಣೆಯಲ್ಲಿ ದಿನವಿಡೀ ಕಳೆಯುತ್ತಿದ್ದ. ಅಂಗಡಿಯಲ್ಲಿ ಅವನು ಸ್ವಲ್ಪ ವಿಸ್ಕಿ, ನೀರಿನ ಬಾಟಲು ಮತ್ತು ಒಂದಷ್ಟು ಕುರುಕಲು ತಿಂಡಿ ಖರೀದಿಸಿದ.  ಕೊನೆಯಲ್ಲಿ ಹಾಸಿಗೆಯ ಮೇಲೆ ಬಿದ್ದುಕೊಂಡು ಪುಸ್ತಕ ಓದುತ್ತಿದ್ದ.  ಪುಸ್ತಕ ಓದು ಸಾಕು ಅನಿಸಿದಾಗ ಟಿವಿಯನ್ನು ನೋಡುತ್ತಿದ್ದ. ಟಿವಿ ಸಾಕು ಅನಿಸಿದಾಗ ಮತ್ತೆ ಪುಸ್ತಕ.  

ಅದು ಕುಮಾಮೊಟೊದಲ್ಲಿ ಅವನ ಮೂರನೆಯ ದಿನವಾಗಿತ್ತು. ಅವನ ಬ್ಯಾ೦ಕಿನಲ್ಲಿ ಇನ್ನು ಸಾಕಷ್ಟು ಹಣವಿತ್ತು. ಬಯಸಿದರೆ ಅವನು ಇದಕ್ಕಿಂತ ಉತ್ತಮ ದರ್ಜೆಯ ಹೋಟೆಲಿನಲ್ಲಿ ಇರಬಹುದಿತ್ತು. ಆದರೆ ಸಧ್ಯಕ್ಕೆ ಅವನಿರುವ ಸ್ಥಿತಿಯಲ್ಲಿ ಇದೆ ಪ್ರಶಸ್ತ ಸ್ಥಳ ಎಂದು ತೀರ್ಮಾನಿಸಿದ. 

ಹೀಗೆ ಇಷ್ಟು ಇಕ್ಕಟ್ಟಾದ ಜಾಗದಲ್ಲಿ ಇರುವದರಿಂದ ಅವನು ಯಾವುದೇ ಅನಗತ್ಯ ವಿಚಾರವನ್ನು ಮಾಡುವ ಅಗತ್ಯವಿರಲಿಲ್ಲ. ಅವನಿಗೆ ಬೇಕಾಗಿದ್ದೆಲ್ಲ ಕೈಯಳತೆಯಲ್ಲಿಯೇ ಸಿಗುತ್ತಿತ್ತು.  ಇದಕ್ಕಾಗಿ ಅವನು ಕೃತಜ್ಞನಾಗಿದ್ದ. ಅವನು ಹಂಬಲಿಸಿದ್ದು ಸಂಗೀತಕ್ಕೆ ಮಾತ್ರ. ಟೆಡ್ಡಿ ವಿಲ್ಸನ್, ವಿಕ್ ಡಿಕನ್ಸನ್, ಬಕ್ ಕ್ಲೇಟನ್- ಅವನು ಹಳೆಯ ಜಾಜ್ ಸಂಗೀತ , ಅದರಲ್ಲಿನ ಸರಳ ಸುಂದರ ನೇರ ಸ್ವರ ವಿನ್ಯಾಸಗಳಿಗೆ ಹಾತೊರೆಯುತ್ತಿದ್ದ. ಪ್ರತಿ ಪ್ರದರ್ಶನದಲ್ಲೂ ಅವರು ತೋರುತ್ತಿದ್ದ ತನ್ಮಯತೆ ಮತ್ತು ಅದ್ಭುತ ಆಶಾವಾದವನ್ನು ತಾನು ಸಹ ಅನುಭವಿಸಬೇಕೆಂದು ಅವನು ಬಯಸುತ್ತಿದ್ದ.  ಆದರೆ ಅವನ ಸಂಗೀತದ ಸಂಗ್ರಹ ಅವನಿಂದ ಅಸಾಧ್ಯ ದೂರದಲ್ಲಿತ್ತು. ಅವನು ತನ್ನ ಚಿಕ್ಕ , ಪ್ರಶಾಂತ ಬಾರನ್ನು ಜ್ಞಾಪಿಸಿಕೊಂಡ. ಇಕ್ಕಟ್ಟಾದ ಓಣಿ , ದೊಡ್ಡ ವಿಲ್ಲೋವ್ ಮರ . ಬಹುಶ: ಜನರು ಬಾರಿನ ಮುಂದೆ ನೇತು ಹಾಕಿದ್ದ ಬೋರ್ಡನ್ನು ನೋಡಿ ಮರಳಿ ಹೋಗುತ್ತಿರಬಹುದು. ಬೆಕ್ಕಿಗೇನಾಗಿರಬಹುದು ? ಅದು ಮತ್ತೆ ಮರಳಿ ಬಂದಿದ್ದೆ ಆದರೆ ಅದಕ್ಕೆ ಅದರ ಪುಟ್ಟ ಬಾಗಿಲು ಮುಚ್ಚಿರುವದು ಕಾಣಿಸುತ್ತದೆ.  ಮತ್ತು  ಹಾವುಗಳು ? ಇನ್ನು ನಿಶ್ಯಬ್ದವಾಗಿ ಮನೆಯನ್ನು ಸುತ್ತುವರೆಯುತ್ತಿರಬಹುದೇ?

ಎಂಟನೇ ಮಹಡಿಯಲ್ಲಿರುವ ಅವನ ಕೋಣೆಯ ಕಿಟಕಿಯಿಂದ ನೇರವಾಗಿ ದಿಟ್ಟಿಸಿದರೆ ಎದುರಿಗೆ ಯಾವುದೋ ಒಂದು ಸಂಸ್ಥೆಯ ಆಫೀಸು ಕಾಣಿಸುತ್ತಿತ್ತು. ಬೆಳಗಿನಿಂದ ಸಂಜೆಯ ತನಕ ಅವನು ಅಲ್ಲಿ ಕೆಲಸ ಮಾಡುತ್ತಿದ್ದ ಜನರನ್ನು ನೋಡುತ್ತಿದ್ದ.ಅವನಿಗೆ  ಆ ಕಂಪನಿಯ ವ್ಯವಹಾರವೇನೆಂದು ತಿಳಿದಿರಲಿಲ್ಲ. ಟೈ ಕಟ್ಟಿಕೊಂಡಿದ್ದ ಪುರುಷರು ಬಂದು ಹೋಗುತ್ತಿದ್ದರು. ಮಹಿಳೆಯರು ಕಂಪ್ಯೂಟರಿನ ಕೀಲಿಮಣೆಯಲ್ಲಿ ಏನನ್ನೋ ಟೈಪಿಸುತ್ತಿದ್ದರು ,  ದೂರವಾಣಿ ಕರೆಗೆ ಉತ್ತರಿಸುತ್ತಿದ್ದರು ಮತ್ತು ಕಾಗದ ಪತ್ರಗಳನ್ನು ಜೋಡಿಸಿಡುತ್ತಿದ್ದರು. ನೋಡುಗರಲ್ಲಿ ಕುತೂಹಲ ಕೆರಳಿಸುವ ಕೆಲಸವೇನಲ್ಲ.  ಅಲ್ಲಿ ಕೆಲಸ ಮಾಡುತ್ತಿರುವವರ ಗುಣ ಲಕ್ಷಣಗಳಾಗಲಿ, ಉಡುಪಾಗಲಿ ಸಾಮಾನ್ಯವಾಗಿತ್ತು.  ಕೀನೋ ಅವರನ್ನು ಘಂಟೆಗಟ್ಟಲೆ ನೋಡುತ್ತಿದ್ದುದಕ್ಕೆ ಏಕಮಾತ್ರ ಕಾರಣ ಎಂದರೆ - ಅವನಿಗೆ ಮಾಡಲಿಕ್ಕೆ ಬೇರೆ ಯಾವುದೇ ಕೆಲಸ ಇಲ್ಲದೆ ಇರುವದು. ಮತ್ತು ಅವನು ಅನಿರೀಕ್ಷಿತವೂ, ಆಶ್ಚರ್ಯಕರವೂ ಆದ ವಿಷಯವೊಂದು ಹೊಳೆಯಿತು - ಜನ ಕೆಲವೊಮ್ಮೆ ಅದೆಷ್ಟು ಸಂತೋಷದಿಂದ ಇರುವಂತೆ ಕಾಣುತ್ತಾರೆ. ಒಮ್ಮೊಮ್ಮೆ ಕೆಲವರು ನಗೆಯ ಬುಗ್ಗೆಗಳಾಗುತ್ತಿದ್ದರು.  ಕಾರಣವೇನಿರಬಹುದು ?  ಈ ಕೊ೦ಚವೂ ಆಕರ್ಷಕ ಅನಿಸದ   ಆಫೀಸಿನಲ್ಲಿ, ಪ್ರತಿನಿತ್ಯವೂ ಏಕತಾನದ , ಸ್ವಲ್ಪವೂ ಉತ್ಸಾಹವಿರದ ಕೆಲಸವನ್ನು  ಮಾಡುತ್ತಿದ್ದರೂ  ಈ ಜನ ಅದು ಹೇಗೆ ಇಷ್ಟು ಸಂತೋಷದಿಂದ ಇದ್ದಾರೆ ?  ಅಲ್ಲಿ ಅವನಿಗೆ ಅರ್ಥವಾಗದ ರಹಸ್ಯ ಏನಾದರು ಇದ್ದಿರಬಹುದೇ ? 

ಮತ್ತೆ ಅಲ್ಲಿಂದ ಹೊರಡುವ ಸಮಯವಾಗಿತ್ತು. ಒಂದೇ ಸ್ಥಳದಲ್ಲಿ ಬಹಳಷ್ಟು ಕಾಲ ಇರಬೇಡ, ಕಮಿಟೊ ಅವನಿಗೆ ಎಚ್ಚರಿಸಿದ್ದ. ಆದರೂ  ಈ ಇಕ್ಕಟ್ಟಾದ ಹೋಟೆಲಿನ ರೂಮಿನಿಂದ ಹೊರಡುವದಕ್ಕೆ ಅವನಿಗೆ ಸಾಧ್ಯವಾಗಲಿಲ್ಲ.  ಇಲ್ಲಿಂದ ಹೋಗುವದೆಲ್ಲಿ ಎಂದು ಅವನಿಗೆ ಹೊಳೆಯಲಿಲ್ಲ. 

ಜಗತ್ತು ಗುರುತುಗಳಿಲ್ಲದ ಮಹಾಸಾಗರವಾಗಿತ್ತು , ಪುಟ್ಟ ದೋಣಿಯಲ್ಲಿ ಕುಳಿತಿದ್ದ ಕೀನೋ  ಹಾದಿ ತೋರುವ ನಕಾಶೆ ಮತ್ತು ದಿಕ್ಸೂಚಿಯನ್ನು ಕಳೆದುಕೊಂಡಿದ್ದ. ಕ್ಯುಶುವಿನ ನಕಾಶೆ ಹೊರ ತೆಗೆದು ಹೊರಡುವದೆಲ್ಲಿ ಎಂದು ನೋಡುತ್ತಿದ್ದಾಗ ಅವನಿಗೆ ಪ್ರಯಾಣದಲ್ಲಿ ಆಗುವಂತೆ  ಹೊಟ್ಟೆ ತೊಳೆಸಿದಂತಾಗಿ ಬೆಚ್ಚಿ ಬಿದ್ದ.  ಅವನು ಹಾಸಿಗೆಯ ಮೇಲೆ ಅಂಗಾತನೆ ಬಿದ್ದುಕೊಂಡು ಪುಸ್ತಕವನ್ನು ಓದಿದ ಮತ್ತೆ ಸ್ವಲ್ಪ ಹೊತ್ತಿನಲ್ಲಿ ಎದ್ದು ಕುಳಿತು ಕಿಟಕಿಯಿಂದ ಆಫೀಸಿನಲ್ಲಿ ಕೆಲಸ ಮಾಡುವ ಜನರನ್ನು ನೋಡತೊಡಗಿದ.  

ಅವತ್ತು ಸೋಮವಾರ. ಹಾಗಾಗಿ ಅವನು ಕುಮಾಮೊಟೊದ ಕೋಟೆಯ ಚಿತ್ರವಿರುವ  ಕಾರ್ಡ್ ಒಂದನ್ನು ಕೊಂಡು ತಂದು ಅದರ ಮೇಲೆ ಅವನ ದೊಡ್ಡಮ್ಮನ ಹೆಸರು ಮತ್ತು ವಿಳಾಸವನ್ನು ಬರೆದು  ಸ್ಟ್ಯಾ೦ಪುಗಳನ್ನು ಲಗತ್ತಿಸಿದ. ಕಾರ್ಡನ್ನು ಸ್ವಲ್ಪ ಹೊತ್ತು ಹಾಗೆ ಹಿಡಿದುಕೊಂಡು , ಕೋಟೆಯನ್ನು ದಿಟ್ಟಿಸಿದ.  ಸರ್ವೇ ಸಾಧಾರಣವಾಗಿ ಕಾರ್ಡಿನ ಮೇಲೆ ಇರುವಂತ ಚಿತ್ರ - ನೀಲ ಆಕಾಶ , ಬಿಳಿ ಮೋಡಗಳು ಮತ್ತು ಮಧ್ಯೆ ಎದ್ದು ನಿಂತ ಕೋಟೆ. ಚಿತ್ರವನ್ನು ಯಾವ ಕೋನದಿಂದ ಎಷ್ಟು ಹೊತ್ತು ದಿಟ್ಟಿಸಿದರೂ ಕಿನೋಗೆ ಅವನ ಮತ್ತು ಆ ಕೋಟೆಯ ನಡುವಿರುವ ಸಂಬಂಧ ಏನು ಎನ್ನುವದು ತೋಚಲಿಲ್ಲ.  ನಂತರ ಇದ್ದಕ್ಕಿದ್ದ ಹಾಗೆ ಅವನು ಕಾರ್ಡನ್ನು ತಿರುಗಿಸಿ ಅದರಲ್ಲಿ ಅವನ ದೊಡ್ಡಮ್ಮನಿಗೆ ಸಂದೇಶವೊಂದನ್ನು  ಬರೆಯತೊಡಗಿದ :

"ಹೇಗಿದ್ದೀಯ ? ನಿನ್ನ ಬೆನ್ನು ನೋವು ಹೇಗಿದೆ ? ನಿನಗೆ ಗೊತ್ತಿರುವಂತೆ ನಾನು ಇನ್ನೂ ತಿರುಗಾಡುತ್ತಿದ್ದೇನೆ. ಕೆಲವೊಮ್ಮೆ ನಾನು ಅರೆಪಾರದರ್ಶಕವಾಗಿದ್ದೇನೆ ಎಂದು ನನಗೆ ಅನಿಸುತ್ತದೆ. ಆಗಷ್ಟೇ ಬಲೆಗೆ ಬಿದ್ದ ಸ್ಕ್ವಿಡ್ ಮೀನಿನಂತೆ ನನ್ನ ದೇಹದ ಒಳ  ರಚನೆ ಪಾರದರ್ಶಕವಾಗಿ ಎಲ್ಲವೂ  ಗೋಚರಿಸುತ್ತಿದೆಯೇನೋ ?  ಇದೊಂದನ್ನು ಹೊರತುಪಡಿಸಿದರೆ ನಾನು ಆರಾಮವಾಗಿದ್ದೇನೆ. ಸಾಧ್ಯವಾದರೆ ಯಾವತ್ತಾದರೂ ಒಂದು ದಿನ  ನಿನ್ನನ್ನು ಭೇಟಿ ಮಾಡುತ್ತೇನೆ. - ಕೀನೋ 

ಕೀನೋ ಹಾಗೆ ಇದ್ದಕ್ಕಿದ್ದ ಹಾಗೆ ಬರೆಯಲು ಕಾರಣ ಏನಿರಬಹುದು ಎನ್ನುವದು ಅವನಿಗೂ ತಿಳಿದಿರಲಿಲ್ಲ. ಕಮಿಟೊ ಖಡಾಖಂಡಿತವಾಗಿ ಬರೆಯಕೂಡದು ಎಂದು ಹೇಳಿದ್ದ. ಆದರೆ ಕಿನೋಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಹೇಗಾದರೂ ಮಾಡಿ ಮತ್ತೆ ವಾಸ್ತವದ ಬದುಕಿಗೆ ಬರಬೇಕು ಇಲ್ಲವಾದರೆ ನಾನು ನಾನಾಗಿರಲಿಕ್ಕೆ ಸಾಧ್ಯವಿಲ್ಲ.  ನಾನು ಅಸ್ತಿತ್ವವೇ ಇಲ್ಲದ ಮನುಷ್ಯನಾಗುತ್ತೇನೆ.  ಹಾಗಾಗಿ ಅವನು ಮತ್ತೆ ಮನಸ್ಸನ್ನು ಬದಲಿಸುವ ಮೊದಲೇ ಗಡಬಡಿಸಿ ಪತ್ರವನ್ನು ಪೋಸ್ಟ್ ಬಾಕ್ಸಿನೊಳಕ್ಕೆ  ಹಾಕಿದ. 

ಅವನಿಗೆ ಮತ್ತೆ ಎಚ್ಚರವಾದಾಗ ಹಾಸಿಗೆಯ ಬಳಿಯಿದ್ದ ಗಡಿಯಾರ ಎರಡು ಕಾಲು ಎಂದು ಸಮಯ ತೋರಿಸುತ್ತಿತ್ತು. ಯಾರೋ ಅವನ ಕೊನೆಯ ಬಾಗಿಲನ್ನು ಬಡಿಯುತ್ತಿದ್ದರು. ದೊಡ್ಡದಾಗಿ ಅಲ್ಲ ಆದರೆ ದೃಢವಾದ ಬಡಿತ , ಸಾಂದ್ರವಾದ ಶಬ್ದ -   ಮರಕೆಲಸದವರು ಸತತವಾಗಿ ಮೊಳೆಯನ್ನು ಹೊಡೆಯುತ್ತಿರುವಂತೆ.  ಆ ಶಬ್ದ ಕಿನೋನನ್ನು ಗಾಢ ನಿದ್ರೆಯಿಂದ, ಅವನ ಅಂತರಾತ್ಮಕ್ಕೆ ಶಬ್ದ ಸ್ಪಷ್ಟವಾಗಿ ಕೇಳುವವರೆಗೆ ಎಳೆದು ಎಬ್ಬಿಸಿತು. 

ಕಿನೋಗೆ ಆ ಬಡಿತದ ಅರ್ಥ ತಿಳಿದಿತ್ತು ಮತ್ತು ಈಗ ಅವನು ಎದ್ದು ಬಾಗಿಲನ್ನು ತೆರೆಯಬೇಕು ಎನ್ನುವದು ಅರ್ಥವಾಗಿತ್ತು. ಹೊರಗೆ ಬಡಿಯುತ್ತಿರುವದು ಯಾವುದೇ ಇರಬಹುದು ಅದಕ್ಕೆ ಹೊರಗಿನಿಂದಲೇ ಬಲವಂತವಾಗಿ ಬಾಗಿಲನ್ನು ನೂಕಿ ತೆರೆಯುವ ಶಕ್ತಿ ಇರಲಿಲ್ಲ. ಬಾಗಿಲು ಕಿನೊನ ಕೈಗಳಿಂದಲೇ ತೆರೆಯಬೇಕು. 

ಆ ಕ್ಷಣಕ್ಕೆ ಅವನಿಗೆ ಅರಿವಾಗಿತ್ತು - ಇದೆ ಭೇಟಿಗಾಗಿಯೇ ಅಲ್ಲವೇ ಅವನು ಇಷ್ಟು ದಿನ ಕಾದಿದ್ದು ಮತ್ತು ಭೇಟಿ ಸಂಭವಿಸಬಹುದು ಎಂದು ಹೆದರಿದ್ದು. ಇದು ದ್ವ೦ದ್ವ - ಎರಡು ವೈಪರೀತ್ಯಗಳ ನಡುವಿನ ಖಾಲಿ ಜಾಗ. "ನಿನಗೆ ನೋವಾಗಿದೆ ಅಲ್ಲವೇ ?" ಅವನ ಹೆಂಡತಿ ಕೇಳಿದ್ದಳು. " ನಾನು ಒಬ್ಬ ಮನುಷ್ಯ ಅಲ್ಲವೇ ? ನನಗೂ ನೋವಾಗಿದೆ. " ಅವನು ಉತ್ತರಿಸಿದ್ದ. ಆದರೆ ಅದು ನಿಜವಾಗಿರಲಿಲ್ಲ. ಅದರಲ್ಲಿ ಅರ್ಧವಾದರೂ ಅಸತ್ಯವಾಗಿತ್ತು.  "ನನಗೆ ಯಾವಾಗ ನೋವಾಗಬೇಕಾಗಿತ್ತೋ ಆಗ ನೋವಾಗಿರಲಿಲ್ಲ" ಕೀನೋ ತನ್ನಷ್ಟಕ್ಕೆ ತಾನೇ ಒಪ್ಪಿಕೊಂಡ.   ನಾನು ಯಾವಾಗ ನಿಜವಾದ ನೋವನ್ನು ಅನುಭವಿಸ ಬೇಕಿತ್ತೋ ಆಗ ನಾನು ಅದನ್ನು ಹತ್ತಿಕ್ಕಿದೆ. ನನಗೆ ಅದನ್ನು ಎದುರಿಸುವ ಶಕ್ತಿ ಇರಲಿಲ್ಲ. ಹೀಗಾಗಿ ನಾನು ಅದನ್ನು ಮುಂದೂಡಿದೆ. ಆದ್ದರಿಂದಲೇ ನನ್ನ ಹೃದಯ ಖಾಲಿ , ಶೂನ್ಯ. ಅಲ್ಲಿರುವದು ನಿರ್ವಾತ.  ಹಾವುಗಳನ್ನು ಅದನ್ನು ಆಕ್ರಮಿಸಿ ಅವುಗಳ ತಣ್ಣನೆಯ ಹೃದಯವನ್ನು ಬಚ್ಚಿಡಲು ಪ್ರಯತ್ನಿಸುತ್ತಿವೆ. 

"ಇದು ನನಗೆ ಮಾತ್ರವಲ್ಲ ಇಲ್ಲಿಗೆ  ಬರುವ ಪ್ರತಿಯೊಬ್ಬನಿಗೂ ಒಂದು ಪ್ರಶಸ್ತ  ಆರಾಮದಾಯಕ ಜಾಗವಾಗಿತ್ತು. " ಕಮಿಟೊ ಹೇಳಿದ್ದ. ಕಿನೋಗೆ ಈಗ ಆ ಮಾತುಗಳ ಅರ್ಥ ಹೊಳೆಯಿತು.

ಕೀನೋ  ಚಾದರವನ್ನು ಸುತ್ತಿಕೊಂಡ, ಕಣ್ಣುಗಳನ್ನು ಮುಚ್ಚಿದ ಮತ್ತು ಎರಡೂ ಕೈಗಳಿಂದ ಕಿವಿಯನ್ನು ಮುಚ್ಚಿಕೊಂಡ. "ನಾನು ನೋಡುವದಿಲ್ಲ ಮತ್ತು ಕೇಳುವದಿಲ್ಲ " ತನ್ನಷ್ಟಕ್ಕೆ ತಾನೇ ಹೇಳಿಕೊಂಡ.   ಆದರೆ ಶಬ್ದದ  ಕಂಪನದಲ್ಲಿ  ಮುಳುಗದಿರಲು ಸಾಧ್ಯವಾಗಲಿಲ್ಲ. ಪ್ರಪಂಚದ ಯಾವುದೇ ಮೂಲೆಗೆ ಹೋಗಿ , ಕಿವಿಯ ತುಂಬಾ ಮಣ್ಣನ್ನು ತುಂಬಿ ಕುಳಿತುಕೊಂಡರೂ ಅವನು ಜೀವಂತವಾಗಿರುವ ತನಕ ಆ ಶಬ್ದ ಅವನನ್ನು  ನಿರಂತರವಾಗಿ ಹುಡುಕಿಕೊಂಡು ಬರುತ್ತದೆ .  ಅದು ಹೋಟೆಲಿನ ಕೋಣೆಯ ಬಾಗಿಲಿನ ಮೇಲೆ ಬಡಿಯುವ ಶಬ್ದವಲ್ಲ ಬದಲಾಗಿ ಅವನ ಹೃದಯದ ಮೇಲೆ ಬಡಿಯುತ್ತಿರುವ ಶಬ್ದ.  ವ್ಯಕ್ತಿಯೊಬ್ಬನಿಗೆ  ಅದರಿಂದ ಪಾರಾಗುವ ಹಾದಿಗಳಿಲ್ಲ. 

ಎಷ್ಟು ಸಮಯ ಹಾಗೆಯೆ ಕಳೆಯಿತು  ಎಂದು ಅವನಿಗೆ ನಿಖರವಾಗಿ ತಿಳಿಯಲಿಲ್ಲ, ಆದರೆ ಬಾಗಿಲನ್ನು ಬಡಿಯುವದು ನಿಂತಿತ್ತು ಎನ್ನುವದು ಅರಿವಾಯಿತು.  ಅವನ ರೂಮಿನಲ್ಲಿ ಅಗಾಧ ನಿಶ್ಯಬ್ದ ಆವರಿಸಿತ್ತು. ಕೀನೋ ಇನ್ನೂ ಮುಸುಕಿನೊಳಗೆ ಇದ್ದ. ಅವನ ಎಚ್ಚರದಲ್ಲಿ ಅವನು ಇರಲೇ ಬೇಕಿತ್ತು.  ಅವನ ರೂಮಿನ ಹೊರಗಿರುವದು ಅಷ್ಟು ಸುಲಭಕ್ಕೆ ಬಿಟ್ಟು ಹೋಗುವಂತದ್ದಲ್ಲ.  ಅದಕ್ಕೆ  ಯಾವುದೇ ಅವಸರವಿರಲಿಲ್ಲ.

ಚಂದ್ರ ಇನ್ನೂ ಹೊರಬಂದಿರಲಿಲ್ಲ.  ಆಕಾಶದ ತುಂಬಾ ಕ್ಷೀಣಿಸುತ್ತಿರುವ ನಕ್ಷತ್ರಪುಂಜಗಳು.  ಜಗತ್ತು ಸ್ವಲ್ಪ ಸಮಯದವರೆಗೆ  ಅವುಗಳಿಗೆ ಸೇರಿತ್ತು. ಅವರ ವಿಧಾನ ಬೇರೆಯದೇ ಆಗಿತ್ತು. ಅವರು ಬಯಸಿದುದನ್ನು ಯಾವುದೇ  ರೀತಿಯಿಂದಲಾದರೂ  ಪಡೆಯಬಹುದು. ಕತ್ತಲೆಯ ಬೇರುಗಳು ಭೂಮಿಯ ಕೆಳಗೆ  ಎಲ್ಲೆಡೆಗೆ ಪಸರಿಸುತ್ತಿದ್ದವು. ಸಾವಕಾಶವಾಗಿ, ದುರ್ಬಲ ಬಿಂದುಗಳಿಗೆ ತಡಕಾಡುತ್ತಿದ್ದವು. ಒಂದು ಬಿಂದುವಿನಿಂದ ಪ್ರಾರಂಭಿಸಿ ಅವು ಅತ್ಯ೦ತ ಗಟ್ಟಿ ಕಲ್ಲುಬಂಡೆಯನ್ನೂ ಚೂರಾಗಿಸುವ ಶಕ್ತಿ ಹೊಂದಿದ್ದವು. 

ಕೊನೆಗೂ, ಕೀನೋ ಊಹಿಸಿದ್ದಂತೆ  ಬಡಿತ ಮತ್ತೆ ಪ್ರಾರಂಭವಾಯಿತು. ಆದರೆ ಈ ಸಲ ಬೇರೊಂದು ದಿಕ್ಕಿನಿಂದ. ಮೊದಲಿಗಿಂತ ಹತ್ತಿರ. 

ಬಡಿಯುತ್ತಿದ್ದವರು ಯಾರೇ ಆದರೂ ಅವರು ಅವನ ಕಿಟಕಿಯ ಹೊರಗೇ  ಇದ್ದರು. ಎಂಟು ಅಂತಸ್ತಿನ ಕಟ್ಟಡದ ಅಗಾಧ ಗೋಡೆಗಳನ್ನು ಹತ್ತಿ ಮಳೆಗೆ ಒದ್ದೆಯಾಗಿದ್ದ ಕಿಟಕಿಯ ಬಾಗಿಲುಗಳನ್ನು ಬಡಿದು ಟಪ್ ಟಪ್ ಎಂದು ಲಯಬದ್ಧವಾದ ಶಬ್ದವನ್ನು ಹೊಮ್ಮಿಸುತ್ತಿದ್ದರು

ಬಡಿತದ ಲಯ ಒಂದೇ ತೆರನಾಗಿತ್ತು. ಎರಡು. ಮತ್ತೆ ಎರಡು. ಸತತವಾಗಿ ತೆರಪಿಲ್ಲದೆ.  ಭಾವತೀವ್ರತೆಯಿಂದ ಹೃದಯವೊಂದು ಬಡಿದುಕೊಳ್ಳುತ್ತಿರುವ ಹಾಗೆ. 

ಕಿಟಕಿಯ ಪರದೆ ತೆಗೆದಿತ್ತು.  ಅವನು ಮಲಗುವಾಗ ಕಿಟಕಿಯ ಗಾಜಿನ ಮೇಲೆ ಮಳೆ ಹನಿಗಳು ರೂಪಿಸಿದ್ದ ಆಕೃತಿಗಳನ್ನು ನೋಡುತ್ತ ಮಲಗಿದ್ದ. ಮುಸುಕಿನಿಂದ ಮುಖವನ್ನು ಹೊರ ಹಾಕಿದರೆ ಏನು ಕಾಣಬಹುದು ಎಂದು ಅವನು ಸ್ಪಷ್ಟವಾಗಿ ಕಲ್ಪಿಸಿಕೊಳ್ಳಬಲ್ಲವನಾಗಿದ್ದ. ಇಲ್ಲ, ಅವನು ಕಲ್ಪಿಸಿಕೊಳ್ಳಲಾರ. ಏನನ್ನಾದರೂ ಕಲ್ಪಿಸಿಕೊಳ್ಳುವ ಅವನ ಶಕ್ತಿ ಆರಿಹೋಗಿತ್ತು. ‘ನಾನು ಅದರೆಡೆಗೆ ನೋಡಬಾರದು’ ತನ್ನಷ್ಟಕ್ಕೆ ತಾನೇ ಹೇಳಿಕೊಂಡ.  ಎಷ್ಟೇ ಖಾಲಿಯಿದ್ದರೂ ,ಶೂನ್ಯವಾಗಿದ್ದರೂ ಇದು ನನ್ನ ಹೃದಯ. ಅದರ ಮೂಲೆಯಲ್ಲಿ ಇನ್ನೂ ಸ್ವಲ್ಪ ಬೆಚ್ಚಗಿನ ಆರ್ದ್ರ ಭಾವವಿದೆ.  

ಸಮುದ್ರ ತೀರಕ್ಕೆ ತೇಲಿ ಬಂದು ಬಿದ್ದಿದ್ದ ಕಳೆಗಳು ಮತ್ತೆ ಎದ್ದು ಬರುವ ದೊಡ್ಡ ಅಲೆಗಾಗಿ ಕಾಯುತ್ತಿರುವಂತೆ  ಅವನಲ್ಲಿ  ನೆನಪುಗಳಿದ್ದವು. ಕತ್ತರಿಸಿದರೆ ರಕ್ತ ಚಿಮ್ಮುವಂತ ಭಾವನೆಗಳಿದ್ದವು.  ‘ನನ್ನ ತಿಳುವಳಿಕೆಯನ್ನು ಮೀರಿ ತಿರುಗಾಡಲು ಅವಕ್ಕೆ ಅವಕಾಶ ಕೊಡಲಾರೆ. ‘

"ನೆನಪುಗಳು ಸಹಾಯ ಮಾಡಬಹುದು" ಕಮಿಟೊ  ಹೇಳಿದ್ದ. ಇದ್ದಕ್ಕಿದ್ದ ಹಾಗೆ ಕಿನೋಗೆ ಒಂದು ವಿಚಾರ ಹೊಳೆಯಿತು "ಅದು ಹೇಗೋ ಕಮಿಟೊ  ಅವನ ಮನೆಯೆದುರು ಇರುವ ಹಳೆಯ ವಿಲ್ಲೋವ್ ಮರಕ್ಕೆ ಸಂಬಂಧಪಟ್ಟವನು.”  ಅದು ಹೇಗೆ  ಎನ್ನುವದಕ್ಕೆ  ಅವನ ಬಳಿ ಯಾವುದೇ ಸ್ಪಷ್ಟಿಕರಣಗಳಿರಲಿಲ್ಲ ಆದರೆ ಒಂದು ಸಲ ಈ ವಿಚಾರ ಹೊಳೆದದ್ದೇ ಅವನಿಗೆ ಉಳಿದವೆಲ್ಲವೂ ಸ್ಪಷ್ಟವಾಗತೊಡಗಿತು. 

ಕೀನೋ ಹಸಿರಿನಿಂದ ತುಂಬಿ ಬಾಗಿದ  ಮರದ ರೆಂಬೆಗಳನ್ನು ಕಲ್ಪಿಸಿಕೊಂಡ.  ಬೇಸಿಗೆಯಲ್ಲಿ ಅವು ತಂಪು ನೆರಳನ್ನು ಒದಗಿಸುತ್ತಿದ್ದವು. ಮಳೆಗಾಲದಲ್ಲಿ ಮಳೆಯ ಸಣ್ಣ ಸಣ್ಣ ಹನಿಗಳು ಬಂಗಾರದ ಚುಕ್ಕೆಗಳಂತೆ ಅದರ ಮೃದು ರೆಂಬೆಗಳ ಮೇಲೆ ಹೊಳೆಯುತ್ತಿದ್ದವು. 

ಗಾಳಿ ಬೀಸುವ ದಿನಗಳಲ್ಲಿ ಅದು  ಪ್ರಕ್ಷುಬ್ಧ ಹೃದಯದಂತೆ ಓಲಾಡುತ್ತಿತ್ತು ಮತ್ತು ಸಣ್ಣ ಸಣ್ಣ ಹಕ್ಕಿಗಳು ಅದರ ಮೇಲೆ  ಸುತ್ತ ಹಾರುತ್ತ , ಕೆಲವೊಮ್ಮೆ ಅದರ ಕೊಂಬೆಗಳ ಮೇಲೆ ಕ್ಷಣ ಕಾಲ ಕುಳಿತು ಮತ್ತೆ ಹಾರಿ ಹೋಗುತ್ತಿದ್ದವು. 

ಮುಸುಕಿನೊಳಗೆ ಹುಳುವಿನಂತೆ ಸುರುಳಿಯಾಗಿ ಮುದುಡಿ ಮಲಗಿ ಕೀನೋ ಕಣ್ಣುಮುಚ್ಚಿಕೊಂಡು ವಿಲ್ಲೋವ್ ಮರದ ಬಗ್ಗೆ ಯೋಚಿಸಿದ. ಒಂದೊಂದಾಗಿ ಅದರ ಗುಣಲಕ್ಷಣಗಳನ್ನು ಚಿತ್ರಿಸತೊಡಗಿದ - ಅದರ ಬಣ್ಣ , ಆಕೃತಿ ಮತ್ತು ಚಲನವಲನ. ಮತ್ತು ಅವನು ಮುಂಜಾವಿಗೋಸ್ಕರ  ಪ್ರಾರ್ಥಿಸತೊಡಗಿದ.   ಈಗ ಅವನಿಗೆ ಮಾಡಲು ಸಾಧ್ಯವಿರುವದು ಕೇವಲ ಕಾಯುವದು , ಬೆಳಗಿಗೆ , ಬೆಳಕಿಗೆ , ನಸುಕಿಗೆ ಏಳುವ ಹಕ್ಕಿಗಳಿಗೆ ಮತ್ತು ಅವುಗಳ ಕಲರವಕ್ಕೆ.  ಹಕ್ಕಿಗಳ ಮೇಲೆ , ಅವುಗಳ ರೆಕ್ಕೆ ಮತ್ತು ಕೊಕ್ಕುಗಳ  ಮೇಲೆ  ಭರವಸೆಯಿಡುವದರ ಹೊರತಾಗಿ ಅವನಿಗೆ ಬೇರೆ ಯಾವುದೇ ಹಾದಿಗಳಿರಲಿಲ್ಲ. ಅಲ್ಲಿಯವರೆಗೆ ಅವನು ತನ್ನ ಹೃದಯ ಸಂಪೂರ್ಣ ಶೂನ್ಯವಾಗದಂತೆ ನೋಡಿಕೊಳ್ಳಬೇಕಿತ್ತು.  ಇಲ್ಲದಿದ್ದರೆ ಶೂನ್ಯ , ಅದು ಸೃಷ್ಟಿಸುವ ನಿರ್ವಾತ  ಅವುಗಳನ್ನೂ  ಎಳೆದು ನುಂಗಿಹಾಕಬಲ್ಲದು. 

ವಿಲ್ಲೋವ್ ಮರವಷ್ಟೇ ಸಾಲದಿದ್ದಾಗ ಕೀನೋ ತೆಳ್ಳನೆಯ ಕಂದು ಬೆಕ್ಕನ್ನು ಅದರ ಮೀನಿನ ತಿನಿಸಿನ ಪ್ರೀತಿಯನ್ನು  ಅದರ ಜ್ಞಾಪಿಸಿಕೊಂಡ. 

ಅವನು ಬಾರಿನ ಮೂಲೆಯಲ್ಲಿ ಪುಸ್ತಕದಲ್ಲಿ ತಲ್ಲೀನನಾಗಿರುವ ಕಮಿಟೊನನ್ನು ,  ಯುವ ಓಟಗಾರರು ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿರುವದನ್ನು  , ಬೆನ್ ವೆಬ್ಸ್ ಟರ್  ನ ಹಾಡು ' ಮೈ ರೋಮಾನ್ಸ್ "  ಅನ್ನು ಕಲ್ಪಿಸಿಕೊಂಡ.  ನೀಲಿ ಉಡುಪು ಮತ್ತು ಸಣ್ಣಗೆ ಕತ್ತರಿಸಿದ್ದ ಕೂದಲಿನಲ್ಲಿ ಅವನ  ಹೆಂಡತಿಯನ್ನು ಜ್ಙಾಪಿಸಿಕೊಂಡ.  ಅವಳು ಹೊಸ ಮನೆಯಲ್ಲಿ ಸುಖ ಶಾಂತಿಯಿಂದ ಬಾಳುತ್ತಿರಲಿ ಎಂದು ಹಾರೈಸಿದ.   ಅಪ್ರಯತ್ನವಾಗಿ, ಅವಳ ದೇಹದ ಮೇಲೆ ಯಾವುದೇ ಗಾಯಗಳು ಇಲ್ಲದಿರಲಿ ಎಂದು ಆಶಿಸಿದ.  ಅವಳು ನನ್ನ ಬಳಿ ಕ್ಷಮೆ ಕೇಳಿದ್ದಾಳೆ ಮತ್ತು ನಾನು ಅದನ್ನು ಸ್ವೀಕರಿಸಿದ್ದೇನೆ ಎಂದು ಅವನು ಯೋಚಿಸಿದ.  ‘ನಾನು ಕೇವಲ ಮರೆಯುವದನ್ನಷ್ಟೇ ಅಲ್ಲ ಕ್ಷಮಿಸುವದನ್ನೂ ಕಲಿಯಬೇಕಿದೆ.’ 

ಆದರೆ  ಕಾಲದಚಲನೆಯನ್ನು ಸರಿಪಡಿಸಲಾಗಲಿಲ್ಲ.  ಉತ್ಕಟ ಬಯಕೆಯ ಅಗಾಧ ತೂಕ ಮತ್ತು ಪಶ್ಚಾತ್ತಾಪದಿಂದ ತುಕ್ಕಾದ ಅದರ ಆಧಾರ- ಕಾಲದ ಸಹಜ ಹರಿವಿಗೆ ಅಡ್ಡಿ ತರುತ್ತಿದ್ದವು.  ಸತತ ಮಳೆ , ಗಡಿಯಾರದ ಗೊಂದಲಮಯ ಮುಳ್ಳುಗಳು, ಪತ್ರಗಳನ್ನು  ವಿಂಗಡಿಸುತ್ತಿದ್ದ ಅನಾಮಧೇಯ ಅಂಚೆ ನೌಕರ ,ಇನ್ನೂ ಮಲಗಿಯೇ ಇದ್ದ ಹಕ್ಕಿಗಳು,  ಅವನ ಹೆಂಡತಿಯ  ಗಾಳಿಯಲ್ಲಿ ತೊನೆದಾಡುತ್ತಿದ್ದ ಎದೆ ,  ಪಟ್ಟು ಬಿಡದೆ ಸತತವಾಗಿ ಬಾಗಿಲನ್ನು ಬಡಿಯುತ್ತಿರುವದು. ಅವನನ್ನು ಜಟಿಲ  ಜಾಲದ ಆಳಕ್ಕೆ ಜಗ್ಗುತ್ತಿರುವ ಈ ಸತತ ನಿಯಮಿತ ಬಡಿತ.  ಟಪ್ ಟಪ್ ಟಪ್ ಟಪ್ ಮತ್ತೆ ಇನ್ನೊಂದು ಸಲ  ಟಪ್ ಟಪ್ . "  ದೃಷ್ಟಿಯನ್ನು ತೆಗೆಯಬೇಡ. ಅದನ್ನು ಸರಿಯಾಗಿ ದಿಟ್ಟಿಸಿ ನೋಡು " ಯಾರೋ ಅವನ ಕಿವಿಯಲ್ಲಿ ಪಿಸುಗುಟ್ಟಿದರು "ನಿನ್ನ ಹೃದಯ ಇರುವದೇ ಹೀಗೆ "

ವಿಲ್ಲೋವ್ ಮರದ ಕೊ೦ಬೆಗಳು ಬೇಸಿಗೆಯ ಆರಂಭದ ತಂಗಾಳಿಗೆ ತೂಗಾಡುತ್ತಿದ್ದವು.  ಈ ಸಣ್ಣ ಕತ್ತಲ ರೂಮಿನಲ್ಲಿ ಕೀನೋ ಒಳಗೆ ಯಾವುದೋ   ಆಳದಲ್ಲಿಈ ನಿಧಾನವಾಗಿ ಬೆಚ್ಚನೆಯ ಕೈಯೊಂದು  ಅವನತ್ತ ಚಾಚಿ ಬರುತ್ತಿತ್ತು . ಕಣ್ಣು ಮುಚ್ಚಿ ಅವನು ಅದರ ಮೃದು ಸ್ಪರ್ಶವನ್ನು ಅನುಭವಿಸಿದನು.  ಇಂತಹ ಸ್ಪರ್ಶ ಅನುಭವಿಸದೇ  ಮರೆತುಹೋಗುವಷ್ಟು ಕಾಲವಾಗಿತ್ತು. ಹೌದು , ನನಗೆ ನೋವಾಗಿದೆ. ಅತ್ಯ೦ತ ನೋವಾಗಿದೆ. ಘಾಸಿಯಾಗಿದೆ. ತನ್ನಷ್ಟಕ್ಕೆ ತಾನೇ ಹೇಳಿಕೊಂಡ ಮತ್ತು ಕಣ್ಣೀರಿಟ್ಟನು. 

ಮತ್ತು  ಹೊರಗೆ ಸತತವಾಗಿ ಸುರಿಯುತ್ತಿದ್ದ ಮಳೆ ಜಗತ್ತನ್ನು ತಣ್ಣಗಾಗಿಸಿತ್ತು. 

1 comment:

  1. Amazing. ನಿಮ್ಮ ಅನುವಾದದಲ್ಲಿ ಒಂದು ಮಾಂತ್ರಿಕತೆ ಇದೆ.
    *ಅನುವಾದವನ್ನು ಸಂಭ್ರಮಿಸೋಣ*
    ಸಣ್ಣಪುಟ್ಟ proofing mistakes ಬಿಟ್ಟರೆ, ಕತೆಯ ಬಂಧ, ಲಯ fantastic.
    Thanks for this wonderful translation.
    Hema
    9483953977

    ReplyDelete