Tuesday, July 14, 2020

ಮನುಷ್ಯನನ್ನು ತಿನ್ನುವ ಬೆಕ್ಕುಗಳು

ನಾವು ಸಮುದ್ರದ ದಂಡೆಯಲ್ಲಿರುವ ಅಂಗಡಿಯಲ್ಲಿ ಖರೀದಿಸಿದ ವೃತ್ತ ಪತ್ರಿಕೆಯಲ್ಲಿ , ಮಹಿಳೆಯೊಬ್ಬಳನ್ನು ಬೆಕ್ಕುಗಳು ತಿಂದಿವೆ ಎನ್ನುವ  ಸುದ್ದಿಯಿತ್ತು.  ಸುಮಾರು ೭೦ ವರ್ಷದವಳಾಗಿದ್ದ ಅವಳು ಅಥೆನ್ಸ್ ನಗರದ ಹೊರ ವಲಯದಲ್ಲಿರುವ ಒಂದು ಬೆಡ್ ರೂಮಿನ ತನ್ನ ಅಪಾರ್ಟ್ ಮೆಂಟೊ೦ದರಲ್ಲಿ  ಏಕಾಂಗಿಯಾಗಿ ಶಾಂತ ಜೀವನವನ್ನು ಕಳೆಯುತ್ತಿದ್ದಳು. ಅವಳ ಜೊತೆಗಿದ್ದವರೆಂದರೆ ಅವಳ ಮೂರು ಬೆಕ್ಕುಗಳು ಮಾತ್ರ. ಒಂದು ದಿನ ಇದ್ದಕ್ಕಿದ್ದ ಹಾಗೆ ಅವಳು ಸೋಫಾದಿಂದ ಕುಸಿದು ಬಿದ್ದಳು. ಬಹುಶ: ಹೃದಯ ಸ್ಥ೦ಭನವಾಗಿರಬೇಕು . ಕೆಳಗೆ ಬಿದ್ದ ನಂತರ ಅವಳು ಕೊನೆಯುಸಿರೆಳೆಯಲು ಎಷ್ಟು ಸಮಯ ತೆಗೆದುಕೊಂಡಳು ಎನ್ನುವದು ಯಾರಿಗೂ ಖಚಿತವಾಗಿ ತಿಳಿದಿರಲಿಲ್ಲ. ವೃದ್ಧೆಗೆ ಹತ್ತಿರದ ಸಂಬಂಧಿಕರಾಗಲಿ, ಆಗಾಗ ಬಂದು ಹೋಗುತ್ತಿದ್ದ ಮಿತ್ರರಾಗಲಿ ಇರಲಿಲ್ಲ. ಹೀಗಾಗಿ ಅವಳು ಸತ್ತು   ಒಂದು ವಾರವಾದ  ನಂತರ ಅವಳ ದೇಹವನ್ನು ಅಪಾರ್ಟ್ ಮೆಂಟಿನಿಂದ ಹೊರ ತೆಗೆಯಲಾಯಿತು. ಕಿಟಕಿ ಮತ್ತು ಬಾಗಿಲುಗಳೆಲ್ಲ ಮುಚ್ಚಿದ್ದ ಆ ಮನೆಯಲ್ಲಿ ಬೆಕ್ಕುಗಳು ಬಂಧಿಯಾಗಿದ್ದವು.  ಅಪಾರ್ಟ್ ಮೆಂಟಿನಲ್ಲಿ ತಿನ್ನಲಿಕ್ಕೆ ಏನೂ ಇರಲಿಲ್ಲ. ಅಡುಗೆ ಮನೆಯಲ್ಲಿರುವ ಫ್ರಿಡ್ಜಿನಲ್ಲಿ ಆಹಾರವೇನೋ ಇತ್ತು ಆದರೆ ಈ ಬೆಕ್ಕುಗಳು ಫ್ರಿಡ್ಜಿನ ಬಾಗಿಲು ತೆಗೆದುಕೊಂಡು ಒಳಗಿರುವದನ್ನು ಹೊರತೆಗೆಯುವಷ್ಟು ವಿಕಸನ ಹೊಂದಿರಲಿಲ್ಲ . ಹೊಟ್ಟೆಗಿಲ್ಲದೆ ಕಂಗಾಲಾಗಿದ್ದ ಅವು ಕೊನೆಗೆ ತಮ್ಮ ಯಜಮಾನ್ತಿಯ ದೇಹಕ್ಕೆ ಬಾಯಿ ಹಾಕಿದ್ದವು. 

ನಾನು ಈ ಸುದ್ದಿಯನ್ನು ನನ್ನ ಪಕ್ಕ ಕಾಲು ಚಾಚಿ ಆರಾಮ ಭಂಗಿಯಲ್ಲಿ ಕುಳಿತಿದ್ದ ಇಜುಮಿಗೆ ಓದಿ ಹೇಳಿದೆ. ವಾತಾವರಣ ತಿಳಿಯಾಗಿದ್ದ ದಿನಗಳಲ್ಲಿ ನಾವು ಸಮುದ್ರ ದಂಡೆಯತ್ತ ತೆರಳಿ ,  ಅಥೆನ್ಸ್ ನ ಆಂಗ್ಲ ದಿನಪತ್ರಿಕೆಯೊಂದನ್ನು ಕೊಂಡು , ಅಲ್ಲೇ  ಕಂದಾಯ ಇಲಾಖೆಯ ಕಟ್ಟಡದ ಹತ್ತಿರದಲ್ಲಿದ್ದ ಕಾಫಿ ಅಂಗಡಿಯಲ್ಲಿ ಎರಡು ಕಾಫಿಗೆ ಹೇಳುತ್ತಿದ್ದೆವು ಮತ್ತು ನಾನು ಪತ್ರಿಕೆಯಲ್ಲಿ ಯಾವುದಾದರೂ ಆಸಕ್ತಿದಾಯಕ ಸುದ್ದಿಯಿದ್ದರೆ ಅದನ್ನು ಜಪಾನೀ ಭಾಷೆಯಲ್ಲಿ ತರ್ಜುಮೆ ಮಾಡಿ ಇಜುಮಿಗೆ ಓದಿ ಹೇಳುತ್ತಿದ್ದೆ. ಇದು ದ್ವೀಪದಲ್ಲಿ ಹೆಚ್ಚು ಕಡಿಮೆ ನಮ್ಮ ಯಾವತ್ತಿನ ದಿನಚರಿಯಾಗಿತ್ತು. ಇಬ್ಬರಿಗೂ ಕುತೂಹಲ ಕೆರಳಿಸುವ ಸುದ್ದಿಯೇನಾದರೂ ಇದ್ದರೆ ಸ್ವಲ್ಪ ಕಾಲ ಅದರ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಇಜುಮಿ ಸರಾಗವಾಗಿ  ಇಂಗ್ಲಿಷ್ ಅನ್ನು ಓದ ಬಲ್ಲವಳಾಗಿದ್ದಳು ಮತ್ತು ಅವಳೇ ಸ್ವತಃ  ದಿನಪತ್ರಿಕೆಯನ್ನು ಓದಬಹುದಾಗಿತ್ತು. ಆದರೆ ಅವಳು ಪತ್ರಿಕೆಯನ್ನು ಓದಿದ್ದನ್ನು ನಾನು ಯಾವತ್ತೂ ನೋಡಿರಲಿಲ್ಲ.
  
" ನನಗೆ ಬೇರೆಯವರು ಓದುವದನ್ನು ಕೇಳಿಸಿಕೊಳ್ಳುವದೆಂದರೆ ಇಷ್ಟ" ಅವಳು ವಿವರಿಸಿದ್ದಳು. " ಈ ರೀತಿ ಬಿಸಿಲಿನಲ್ಲಿ ಕುಳಿತು, ಶುಭ್ರ ಆಗಸವನ್ನೋ, ಇಲ್ಲ ಸಮುದ್ರವ ನ್ನೋ ದಿಟ್ಟಿಸುತ್ತ ಇರುವಾಗ , ನನಗೋಸ್ಕರ ಯಾರಾದರೂ  ಏನನ್ನಾದರೂ ಓದಿ  ಹೇಳುತ್ತಿರಬೇಕು  ಎನ್ನುವದು  ಬಾಲ್ಯದ  ದಿನಗಳಿಂದ ನನ್ನ ಕನಸು.  ಅವರು ಓದುತ್ತಿರುವುದು ಏನೆಂಬುದು ನನಗೆ ಯಾವತ್ತೂ ಮುಖ್ಯವಲ್ಲ - ಪತ್ರಿಕೆ , ಕಾದಂಬರಿ , ಕವನ , ಕಥೆ ಏನಾದರೂ ಸರಿಯೇ. ಆದರೆ ಇಲ್ಲಿಯವರೆಗೆ ನನಗೆ ಹಾಗೆ ಓದಿ ಹೇಳಿದವರು ಯಾರು ಇಲ್ಲ. ಹಾಗಾಗಿ ಕಳೆದ ಎಲ್ಲ ವರ್ಷಗಳನ್ನು ತುಂಬಿಕೊಡುವದು ನಿನ್ನ ಕೆಲಸ. ಅಲ್ಲದೇ , ನಿನ್ನ ಧ್ವನಿ ನನಗೆ ಬಹಳ ಇಷ್ಟ.  "

ಅಲ್ಲಿ ಸಮುದ್ರ ಮತ್ತು ಆಗಸಗಳಿದ್ದವು ಮತ್ತು ಜೋರಾಗಿ ಓದುವದು ನನಗೆ ಪ್ರಿಯವಾದ ಕೆಲಸವಾಗಿತ್ತು. ನಾನು ಜಪಾನಿನಲ್ಲಿ ಇದ್ದಾಗ ಚಿತ್ರಕಥೆಗಳ ಪುಸ್ತಕವನ್ನು ನನ್ನ ಮಗನಿಗೆ ದೊಡ್ಡದಾಗಿ ಓದಿ ಹೇಳುತ್ತಿದ್ದೆ. ಜೋರಾಗಿ ಓದುವದು ಮನಸ್ಸಿನಲ್ಲಿಯೇ ಓದುವದಕ್ಕಿಂತ ಬಹಳ ಭಿನ್ನವಾದದ್ದು. ಓದುತ್ತಿರುವಾಗ ಅನಿರೀಕ್ಷಿತವಾದ, ಅನಿರ್ದಿಷ್ಟವಾದ ಹೊಂದಾಣಿಕೆಯಿಲ್ಲದ  ಹಲವಷ್ಟು ಭಾವಗಳು ಮನಸ್ಸಿನಲ್ಲಿ ಹುಟ್ಟುಕೊಳ್ಳುತ್ತಿದ್ದವು  ಮತ್ತು ಈ ಭಾವದೆಳೆಗಳು ಕೆಲವೊಮ್ಮೆ ನನ್ನ ಹಿಡಿತವನ್ನು ಮೀರಿ ಹೊರಗೆ ಇಣುಕುತ್ತಿದ್ದವು .

ಆಗಾಗ ಕಹಿ ಕಾಫಿಯನ್ನು ಹೀರುತ್ತಾ ನಾನು ಇಜುಮಿಗೆ  ಪತ್ರಿಕೆಯನ್ನು ಓದತೊಡಗಿದೆ.  ಮೊದಲು ಕೆಲ ಸಾಲುಗಳನ್ನು ನನ್ನಷ್ಟಕ್ಕೆ ನಾನೇ ಓದಿಕೊಂಡು , ಅವನ್ನು ಜಪಾನಿ ಭಾಷೆಗೆ ಹೇಗೆ ತರ್ಜುಮೆ ಮಾಡಬಹುದೆಂದು ಯೋಚಿಸಿ ತ ದ ನಂತರ ಇಜುಮಿಗೆ ಕೇಳಿಸುವಂತೆ ದೊಡ್ಡದಾಗಿ ಹೇಳುತ್ತಿದ್ದೆ.  

ಒಂದಷ್ಟು ಜೇನು ನೊಣಗಳು ನಮಗಿಂತ ಮೊದಲು ಕುಳಿತಿದ್ದವರು ಬಿಸಾಕಿದ್ದ ಬ್ರೆಡ್ ಗೆ ಅಂಟಿದ್ದ ಜ್ಯಾ೦ ಗೆ ಮುತ್ತಿಕೊಂಡಿದ್ದವು. ಇದ್ದಕ್ಕಿದ್ದ ಹಾಗೆ ಏನೋ ನೆನಪಿಸಿಕೊಂಡ೦ತೆ ಎಲ್ಲ ಜೇನು ನೊಣಗಳು ಏಕಕಾಲದಲ್ಲಿ ಒಮ್ಮೆಗೆ ಮೇಲಕ್ಕೆ ಹಾರಿ ಟೇಬಲಿನ ಮೇಲೆ ಖಾಲಿ ಅವಕಾಶದಲ್ಲಿ ವೃತ್ತವೊಂದನ್ನು ನಿರ್ಮಿಸಿ ಗುಂಯ್ ಎಂದು ಶಬ್ದ ಮಾಡುತ್ತಾ ಹಾರತೊಡಗಿದವು . ಕೆಲ ಕ್ಷಣಗಳ ನಂತರ ಮತ್ತೆ ಬೇರೇನೋ  ವಿಚಾರ ಹಾದುಹೋದಂತೆ ಮತ್ತೆ ಬ್ರೆಡ್ ಮೇಲೆ ಬಂದು ಕುಳಿತವು. ನಾನು ಸುದ್ದಿಯನ್ನು ಸಂಪೂರ್ಣವಾಗಿ ಓದಿ ಮುಗಿಸಿದ ನಂತರ, ಇಜುಮಿ ಟೇಬಲಿನ ಮೇಲೆ ಕೈ ಇಟ್ಟು ಮೌನವಾಗಿ ಕುಳಿತಿದ್ದಳು. ಅವಳ ಬಲಗೈ ಬೆರಳುಗಳು ಎಡಗೈ ಬೆರಳುಗಳ ಜೊತೆಗೆ ಬೆಸೆದುಕೊಂಡು ಗುಡಾರದ ಆಕೃತಿಯನ್ನು ನಿರ್ಮಿಸಿತ್ತು. ನಾನು ದಿನಪತ್ರಿಕೆಯನ್ನು ಕೆಳಗಿಟ್ಟು ಅವಳನ್ನು ದಿಟ್ಟಿಸಿದೆ. ಅವಳು ತನ್ನ ಕೈಬೆರಳುಗಳ ಸಂದಿಯಿಂದ ಹೊರಬರುವ ಸಣ್ಣ ಬೆಳಕಿನ ರೇಖೆಯ ಮೂಲಕ ಜೇನು ನೊಣಗಳನ್ನು  ನೋಡಿದಳು. 
"ಆಮೇಲೇನಾಯ್ತು ?" ಅವಳು ಕೇಳಿದಳು
"ಅಷ್ಟೇ"  ಪತ್ರಿಕೆಯನ್ನು ಮಡಚುತ್ತ ಉತ್ತರಿಸಿದೆ. ನಾನು ಜೇಬಿನಿಂದ ಕರವಸ್ತ್ರವನ್ನು  ಹೊರತೆಗೆದು ತುಟಿಯಂಚಿಗೆ ತಾಕಿದ್ದ ಕಾಫಿಯನ್ನು ಒರೆಸಿಕೊಂಡೆ.  " ಪೇಪರಿನಲ್ಲಿ ಇದ್ದುದ್ದು ಅಷ್ಟೇ ವಿಷಯ "
"ಆದರೆ ಕೊನೆಯಲ್ಲಿ ಆ ಬೆಕ್ಕುಗಳಿಗೆ ಏನಾಗಿರಬಹುದು ?"
ನಾನು ಕರವಸ್ತ್ರವನ್ನು ಮಡಚಿ ಜೇಬಿನಲ್ಲಿಟ್ಟುಕೊಂಡೆ. "ಗೊತ್ತಿಲ್ಲ , ಪೇಪರಿನಲ್ಲಿ ಅದರ ಬಗ್ಗೆ ಏನೂ ಬರೆದಿಲ್ಲ "
ಇಜುಮಿ ತುಟಿಯನ್ನು ಒಂದು ಕಡೆ ವಕ್ರವಾಗಿಸಿದಳು. ಅವಳಿಗಷ್ಟೇ ಅಂತರ್ಗತವಾಗಿರುವ ಅವಳದೇ ಅಭ್ಯಾಸ.  ಅವಳು ಯಾವುದೇ ವಿಷಯದ ಬಗ್ಗೆ ಅವಳ ಅಭಿಪ್ರಾಯವನ್ನು ಮಂಡಿಸುವ ಮೊದಲುಅವಳ ತುಟಿ ಒಮ್ಮೆ ವಕ್ರವಾಗಿ ಮತ್ತೆ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿತ್ತು. ನಾನು ಅವಳನ್ನು ಮೊತ್ತ ಮೊದಲು ಭೇಟಿಯಾಗಿದ್ದಾಗ ಅವಳ ಈ ಅಭ್ಯಾಸ ನನ್ನಲ್ಲಿ ವಿಚಿತ್ರ ಆಕರ್ಷಣೆಯನ್ನು ಹುಟ್ಟು ಹಾಕಿತ್ತು.

"ಪ್ರಪಂಚದ ಯಾವ ಮೂಲೆಗೆ ಹೋದರು ಈ ದಿನಪತ್ರಿಕೆಗಳು ಮಾತ್ರ ಒಂದೇ ರೀತಿ " ಅವಳು ಘೋಷಿಸಿದಳು. " ನಾವು  ಏನನ್ನು   ಓದಬೇಕೆಂದು ಬಯಸುತ್ತೇವೋ ಅದನ್ನು ಮುದ್ರಿಸುವದಿಲ್ಲ "
 
ಅವಳು ಪ್ಯಾಕಿನಿಂದ ಒಂದು ಸಿಗರೇಟನ್ನು ಹೊರತೆಗೆದು ತುಟಿಗಳ ನಡುವೆ ಇಟ್ಟುಕೊಂಡು ಬೆಂಕಿಯನ್ನು ಹಚ್ಚಿದಳು. ಪ್ರತಿ ದಿನ ಅವಳು  ಒಂದು ಪ್ಯಾಕ್ ಸಿಗರೇಟನ್ನು ಖಾಲಿ ಮಾಡುತ್ತಿದ್ದಳು. ಒಂದಕ್ಕಿ೦ತ ಹೆಚ್ಚಿಲ್ಲ, ಕಡಿಮೆಯಿಲ್ಲ. ಬೆಳಿಗ್ಗೆ ಒಂದು ಪ್ಯಾಕ್ ತೆಗೆದರೆ ಸಂಜೆಯ ಹೊತ್ತಿಗೆಲ್ಲ ಅದನ್ನು ಖಾಲಿ ಮಾಡುತ್ತಿದ್ದಳು. ನಾನು ಧೂಮಪಾನ ಮಾಡುತ್ತಿರಲಿಲ್ಲ. ನನ್ನ ಹೆಂಡತಿ ಗರ್ಭಿಣಿಯಾಗಿದ್ದಾಗ ಆ ಸಿಗರೇಟು ಸೇದುವ ಚಟವನ್ನು ಬಿಡಿಸಿದ್ದಳು. 

"ನನಗೆ ನಿಜವಾಗಿಯೂ ತಿಳಿಯಬೇಕಿರುವದು ಏನೆಂದರೆ  " ಇಜುಮಿ  ಸಿಗರೇಟಿನ ಹೊಗೆಯನ್ನು ಸುರುಳಿಯಾಕಾರದಲ್ಲಿ ಹೊರಗೆ ಬಿಡುತ್ತ ಹೇಳಿದಳು " ಆಮೇಲೆ ಬೆಕ್ಕುಗಳಿಗೆ ಏನಾಯಿತು ಎನ್ನುವದು. ಸರಕಾರೀ ಅಧಿಕಾರಿಗಳು -  ಬೆಕ್ಕುಗಳು ಮನುಷ್ಯರ ಮಾಂಸ ತಿಂದಿವೆ ಎಂದು ಅವನ್ನು ಕೊಂದರೆ? ಅಥವಾ 'ಬೆಕ್ಕುಗಳೇ  ಈಗಾಗಲೇ ನೀವು ಸಾಕಷ್ಟು ಕಷ್ಟ ಪಟ್ಟು ಜೀವ ಉಳಿಸ್ಕೊಂಡಿದ್ದೀರಿ , ಇಲ್ಲಿಂದ ಆರಾಮವಾಗಿ ಎಲ್ಲಾದರೂ ಹೋಗಿ ' ಎಂದು ಅವನ್ನು  ಹೋಗಲು ಬಿಟ್ಟರೆ ?  ನಿನಗೆ ಏನು ಅನ್ನಿಸುತ್ತದೆ ?"

ನಾನು ಟೇಬಲಿನ ಸುತ್ತ ಹಾರುತ್ತಿದ್ದ ಜೇನು ನೊಣಗಳನ್ನು ನೋಡುತ್ತಾ ಯೋಚಿಸತೊಡಗಿದೆ.  ನಿರಂತರವಾಗಿ ಬ್ರೆಡ್ ಮತ್ತು ಜ್ಯಾ೦ ಗೆ ಮುತ್ತಿಗೆ ಹಾಕುತ್ತಿದ್ದ ಜೇನು ನೊಣಗಳು ಮತ್ತು   ವೃದ್ಧ ಮಹಿಳೆಯ ದೇಹದ ಮಾಂಸವನ್ನು ತಿಂದ ಬೆಕ್ಕುಗಳು ಇವೆರಡೂ ಒಂದೇ ಎನ್ನುವ ಯೋಚನೆ ಮನಸ್ಸಿನಲ್ಲಿ ಹಾದು  ಬೆಚ್ಚಿಬಿದ್ದೆ. ದೂರದಲ್ಲಿ ಕೂಗುತ್ತಿದ್ದ ಸಮುದ್ರ ಕಾಗೆಯೊಟ್ಟಿಗೆ  ಜೇನು ನೊಣಗಳ ಗುಂಯ್ ಗುಡುವಿಕೆ ಬೆರೆತುಕೊಂಡು ಒಂದು ಕ್ಷಣದ ಮಟ್ಟಿಗೆ ನನ್ನ ಪ್ರಜ್ಞೆ, ವಾಸ್ತವ ಮತ್ತು ಕಾಲ್ಪನಿಕ ಪ್ರಪಂಚಗಳ ನಡುವಿನ   ವ್ಯತ್ಯಾಸವನ್ನು ಗುರುತಿಸದಾಯಿತು. ನಾನು ಎಲ್ಲಿದ್ದೆ ? ಇಲ್ಲಿಗೆ   ಬಂದುದೇಕೆ ? ನಾನು ಮಾಡುತ್ತಿರುವದೇನು ? ನನಗೆ ಸುತ್ತಲೂ ನಡೆಯುತ್ತಿರುವದೇನು ಏನು ಎನ್ನುವದು ಅರ್ಥವಾಗಲಿಲ್ಲ.
ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡು , ತಲೆಯೆತ್ತಿ ಆಗಸವನ್ನೊಮ್ಮೆ ನೋಡಿದೆ. ನಂತರ ಇಜುಮಿಯ ಕಡೆಗೆ ತಿರುಗಿ - "ನನಗೆ ಗೊತ್ತಿಲ್ಲ ". 
"ವಿಚಾರ ಮಾಡು. ಒಂದು ವೇಳೆ ಆ ಪಟ್ಟಣದ ಮೇಯರ್ ಅಥವಾ ಪೊಲೀಸ್ ಅಧಿಕಾರಿ ನೀನಾಗಿದಿದ್ದರೆ ಏನು ಮಾಡುತ್ತಿದ್ದೆ ?"
"ಅವುಗಳನ್ನು ಮನಃ ಪರಿವರ್ತನಾ ಕೇಂದ್ರಕ್ಕೆ ಕಳುಹಿಸಿ" ನಾನು ಹೇಳಿದೆ " ಸಸ್ಯಾಹಾರಿಗಳಾಗುವಂತೆ ಮಾಡಿದರೆ ಹೇಗೆ ?"
ಇಜುಮಿ ನಗಲಿಲ್ಲ. ಅವಳು ಸಿಗರೇಟಿನ ಹೊಗೆಯನ್ನು ಪಪ್ಪುಸದ ತುಂಬಾ ಎಳೆದುಕೊಂಡು ನಿಧಾನವಾಗಿ ಹೊರ ಗೆ ಬಿಡತೊಡಗಿದಳು. "ಪೇಪರಿನಲ್ಲಿದ್ದ ಸುದ್ದಿಯನ್ನು ಕೇಳಿದಾಗ ನನಗೆ , ನಾನು ಚಿಕ್ಕವಳಿದ್ದಾಗ ನನ್ನ ಕ್ಯಾಥೋಲಿಕ್ ಶಾಲೆಯಲ್ಲಿ ಕೇಳಿದ್ದ ಕತೆಯೊಂದು ಜ್ಞಾಪಕಕ್ಕೆ ಬಂದಿತು. ನಾನು ಅತ್ಯಂತ ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿದ್ದ ಕ್ಯಾಥೋಲಿಕ್ ಶಾಲೆಗೇ ಹೋಗಿದ್ದೆ ಎಂದು ನಿನಗೆ ಹೇಳಿದ್ದೇನೆ ?  ಶಾಲೆಗೆ ಸೇರಿದ್ದ ದಿನದಂದೇ ಅಲ್ಲಿದ್ದ ಮುಖ್ಯ ಸಿಸ್ಟರ್ ಒಬ್ಬಳು ನಮ್ಮನ್ನೆಲ್ಲ ಒಂದು ವಿಶಾಲವಾದ ಹಜಾರಕ್ಕೆ ಕರೆದೊಯ್ದು ನಮ್ಮನ್ನು ಉದ್ದೇಶಿಸಿ ಕ್ಯಾಥೋಲಿಕ್ ಸಂಪ್ರದಾಯದ ಬಗ್ಗೆ ಒಂದು ಭಾಷಣ ಮಾಡಿದ್ದಳು. ಅವಳು ನಮಗೆ ಬಹಳಷ್ಟು ವಿಷಯಗಳನ್ನು ಹೇಳಿದ್ದಳು. ಆದರೆ ನಾನು ನೆನಪಿನಲ್ಲಿಟ್ಟುಕೊಂಡಿರುವದು ಕೇವಲ ಒಂದನ್ನು ಮಾತ್ರ - ಸಮುದ್ರದಲೆಯ ಹೊಡೆತಕ್ಕೆ ಸಿಲುಕಿ ಚೂರುಚೂರಾಗಿ ದ್ವೀಪವೊಂದಕ್ಕೆ ಬಂದು ಬಿದ್ದಿದ್ದ  ಒಂದು ಹಡಗು ಮತ್ತು ಅದರಲ್ಲಿದ್ದ ಬೆಕ್ಕಿನ  ಕಥೆ"
"ಕುತೂಹಲಕಾರಿಯಾಗಿದೆ "
'ನೀವೊಂದು ನೌಕಾಘಾತದಲ್ಲಿ ಸಿಲುಕಿದ್ದೀರಿ ' ಸಿಸ್ಟರ್ ಹೇಳಿದ್ದಳು " ಹಡಗಿನಲ್ಲಿದ್ದವರಲ್ಲಿ ಬದುಕುಳಿದವರೆಂದರೆ ನೀವು ಮತ್ತು ಒಂದು ಬೆಕ್ಕು ಮಾತ್ರ. ನೀವು ಒಂದು ಹೇಳಹೆಸರಿಲ್ಲದ ನಿರ್ಜನ ದ್ವೀಪವೊಂದಕ್ಕೆ ಬಂದು ಬಿದ್ದಿದ್ದೀರಿ ಮತ್ತು ಅಲ್ಲಿ ತಿನ್ನುವದಕ್ಕೆ ಯಾವುದೇ ಆಹಾರವಿಲ್ಲ. ನಿಮ್ಮ ಜೊತೆಗೆ ಇರುವದು ಹತ್ತು ದಿನಗಳವರೆಗೆ ಸಾಕಾಗುವಷ್ಟು ಕುಡಿಯುವ ನೀರು ಮತ್ತು ಬಿಸ್ಕಿಟು ಮಾತ್ರ. " ಅವಳು ಮುಂದುವರೆಸಿದಳು " ಸರಿ ಈಗ ಎಲ್ಲರೂ ಕಣ್ಣು ಮುಚ್ಚಿಕೊಂಡು ನಿಮ್ಮನ್ನು ನೀವು ಇಂತಹ ಸನ್ನಿವೇಶದಲ್ಲಿ ಕಲ್ಪಿಸಿಕೊಳ್ಳಿ. ನೀವು ಏಕಾಂಗಿಯಾಗಿ ನಿರ್ಜನ ದ್ವೀಪದಲ್ಲಿದ್ದೀರಿ. ನೀವು ಮತ್ತು ಬೆಕ್ಕು ಮಾತ್ರ. ನಿಮ್ಮ ಹತ್ತಿರ ಯಾವುದೇ ಆಹಾರವಿಲ್ಲ.  ಗೊತ್ತಾಯಿತೇ?  ನಿಮಗೆ ಬಾಯಾರಿಕೆಯಾಗಿದೆ, ದಣಿವಾಗಿದೆ, ಹಸಿವೆಯಾಗಿದೆ  ಮತ್ತು ಕ್ರಮೇಣ ಹಸಿವೆಯಿಂದ ನೀವು ಸಾಯಬಹುದು. ಈಗ ನೀವೇನು ಮಾಡುತ್ತೀರಿ ? ನಿಮ್ಮ ಬಳಿ ಇರುವ ಸ್ವಲ್ಪವೇ ಸ್ವಲ್ಪ ಬಿಸ್ಕಿಟು ಮತ್ತು ಕುಡಿಯುವ ನೀರನ್ನು ಬೆಕ್ಕಿನ ಜೊತೆಗೆ ಹಂಚಿಕೊಳ್ಳುತ್ತಿರೋ ? . . .  ...  ನೀವು ಅದನ್ನು ಮಾಡಕೂಡದು. ಯಾಕೆಂದರೆ ನೀವೆಲ್ಲರೂ ದೇವರಿಂದ ಆರಿಸಲ್ಪಟ್ಟ ಅತ್ಯಮೂಲ್ಯ ಜೀವಗಳು. ಆದರೆ ಬೆಕ್ಕು ಹಾಗಲ್ಲ. ಹೀಗಾಗಿ ಬದುಕುವ ಹಕ್ಕು ನಿಮಗೆ ಮಾತ್ರ ಇದೆ. ಎಲ್ಲ ಆಹಾರವನ್ನು ನೀವು ಮಾತ್ರ ತಿನ್ನಬೇಕು . " . ಮಾತು ಮುಗಿಸಿ ಸಿಸ್ಟರ್ ನಮ್ಮತ್ತ ಗಂಭೀರವಾದ ನೋಟವನ್ನು ಬೀರಿದಳು. ನನಗೆ ಆಘಾತವಾಗಿತ್ತು. ಆಗ ತಾನೇ ಶಾಲೆಗೆ ಕಾಲಿಡುತ್ತಿರುವ ಮಕ್ಕಳಿಗೆ ಇಂತಹ ಕಥೆಯನ್ನು ಹೇಳುವ ಉದ್ದೇಶವೇನಿತ್ತು? ನಾನು ಯಾವ ತೆರನಾದ ಶಾಲೆಗೇ ಬಂದೆನೋ ಎಂದು ಚಿ೦ತೆಯಾಗಿತ್ತು .
 
ನಾನು ಮತ್ತು ಇಜುಮಿ ಗ್ರೀಕ್ ದ್ವೀಪವೊಂದರಲ್ಲಿ ಒಂದು ಸಣ್ಣ ಅಪಾರ್ಟ್ ಮೆ೦ಟಿನಲ್ಲಿ ವಾಸವಾಗಿದ್ದೆವು. ಇದು ಪ್ರವಾಸಕ್ಕೆ ಯೋಗ್ಯ ಕಾಲವಲ್ಲದ ಕಾರಣ ರೂಮಿನ ಬಾಡಿಗೆ ಜಾಸ್ತಿ ಇರಲಿಲ್ಲ. ನಾವು ಇಲ್ಲಿಗೆ ಬಂದಿಳಿಯುವದಕ್ಕೆ ಮೊದಲು ಈ ದ್ವೀಪದ ಹೆಸರನ್ನು ಯಾವತ್ತೂ ಕೇಳಿರಲಿಲ್ಲ. ಅದು ಟರ್ಕಿಯ ಗಡಿಯಂಚಿನಲ್ಲಿದ್ದ ದ್ವೀಪವಾಗಿತ್ತು.  ಪರಿಶುಭ್ರವಾದ ದಿನಗಳಲ್ಲಿ ಇಲ್ಲಿಂದ ಟರ್ಕಿಯ ಹಸಿರು ಗುಡ್ಡಗಳು ಕಾಣಿಸುತ್ತಿದ್ದವು.  ಗಾಳಿ ಜೋರಾಗಿ  ಬೀಸಿದಾಗಲೆಲ್ಲ ಟರ್ಕಿಯ ಕಬಾಬಿನ ವಾಸನೆ ಇಲ್ಲಿಗೂ ಬರುತ್ತದೆ ಎಂದು ಸ್ಥಳೀಯರು ತಮಾಷೆ ಮಾಡುತ್ತಿದ್ದರು. ನಿಜ ಹೇಳಬೇಕೆಂದರೆ ನಾವಿರುವ ದ್ವೀಪ ಇತರೆ ಗ್ರೀಕ್ ದ್ವೀಪಗಳಿಗಿಂತ ಟರ್ಕಿಗೇ ಹತ್ತಿರದಲ್ಲಿತ್ತು.    

ನಗರದ ಮಧ್ಯಭಾಗದಲಿದ್ದ ಚೌಕಿಯಲ್ಲಿ ಗ್ರೀಕ್ ಸ್ವಾತ೦ತ್ರ್ಯ ಯೋಧನೊಬ್ಬನ ಪ್ರತಿಮೆಯಿತ್ತು. ಅವನು ದ್ವೀಪವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಟರ್ಕಿಶ್ ಜನಗಳ ಮೇಲೆ ದಂಗೆ ಸಾರಿದ್ದ. ಆದರೆ ಟರ್ಕಿಗಳು ಅವನನ್ನು ಹಿಡಿದು ನೇಣಿಗೇರಿಸಿದ್ದರು. ಅವನನ್ನು ಹಿಡಿದು ನಗರದ ಮಧ್ಯಭಾಗದ ಚೌಕಿಯಲ್ಲಿ  ಚೂಪಾದ ಮರದ ಗೂಟಕ್ಕೆ ನೇತು ಹಾಕಿದ್ದರು. ಅವನ ಹಿಂಭಾಗಕ್ಕೆ ಚುಚ್ಚಿದ್ದ ಮೊನೆ ಸಾವಕಾಶವಾಗಿ ಅವನ  ಹಿಂಭಾಗದ ಮೂಲಕ ಬಾಯಿಯನ್ನು ಸೀಳಿ ಹೊರ ಬರುವವರೆಗೂ ಅವನನ್ನು ಹಾಗೆಯೇ ನೇತು ಹಾಕಿದ್ದರು. ಅತ್ಯಂತ ದಾರುಣ ಸಾವು. ಅವನನ್ನು ಗಲ್ಲಿಗೇರಿಸಿದ್ದ ಸ್ಥಳದಲ್ಲೇ ಈಗ ಪ್ರತಿಮೆಯನ್ನು ನಿಲ್ಲಿಸಲಾಗಿತ್ತು. ಪ್ರತಿಮೆ ಹೊಸದಾಗಿದ್ದಾಗ ಸುಂದರವಾಗಿತ್ತೇನೋ.  ಆದರೆ ಕ್ರಮೇಣ ಸಮುದ್ರದಿಂದ ಬೀಸುವ ಗಾಳಿ , ಮಳೆ ಮತ್ತು ಹಕ್ಕಿಯ ಹಿಕ್ಕೆಯ ಹೊಡೆತಕ್ಕೆ ಸಿಲುಕಿ ಪ್ರತಿಮೆ  ಮನುಷ್ಯನದು ಎಂದು ಗುರುತಿಸುವದಕ್ಕೆ ಕಷ್ಟವಾಗುವ ಹಾಗೆ ಬದಲಾಗಿತ್ತು .  ಅದನ್ನು ಹಾದು ಹೋಗುವಾಗ ಅಲ್ಲಿಯ ಜನ ಪ್ರತಿಮೆಯೆಡೆಗೆ ದೃಷ್ಟಿ ಹಾಯಿಸುತ್ತಿದ್ದುದೇ ಅಪರೂಪವಾಗಿತ್ತು ಮತ್ತು ಪ್ರತಿಮೆಯಲ್ಲಿದ್ದ ನಾಯಕ ಈ ಜನರು , ದ್ವೀಪ , ಸಮುದ್ರ ಕೊನೆಗೆ ಈ ಪ್ರಪಂಚದಿಂದಲೇ ದೂರವಾಗಿದ್ದವನಂತೆ ಎಲ್ಲದಕ್ಕೂ ಬೆನ್ನು ಹಾಕಿ ನಿರ್ಲಿಪ್ತವಾಗಿ ನಿಂತಿದ್ದ. 

ನಾನು ಮತ್ತು ಇಜುಮಿ ನಮ್ಮ ಹೋಟೆಲಿನ ಹೊರಗೆ ಕುಳಿತು  ಕಾಫಿ ಕುಡಿಯುತ್ತಲೋ ಇಲ್ಲ ತಣ್ಣಗಿನ ಬಿಯರನ್ನು ಹೀರುತ್ತಲೋ  ಸಮುದ್ರವನ್ನು ಮೌನದಲ್ಲಿ ನೋಡುತ್ತಿರುವಾಗ ಅಥವಾ ದೂರದ ಟರ್ಕಿಯ ಪರ್ವತಗಳನ್ನು ದಿಟ್ಟಿಸುತ್ತಿರುವಾಗ ನಾವು ಯೂರೋಪಿನ ತುತ್ತ ತುದಿಯಲ್ಲಿದ್ದೆವು. ಬೀಸುವ ಗಾಳಿ,  ಜಗತ್ತಿನ ತುದಿಯಲ್ಲಿ  ಬೀಸುವ ಗಾಳಿಯಾಗಿತ್ತು . ಇಲ್ಲಿಯ ವಾತಾವರಣವನ್ನು ಭೂತಕಾಲದ ಛಾಯೆಯೊಂದು ದಟ್ಟವಾಗಿ ಆವರಿಸಿತ್ತು.  ಅಸಂಗತವಾದ ವಾಸ್ತವವೊಂದು ನನಗರಿವಿಲ್ಲದಂತೆ ನನ್ನನ್ನು ನುಂಗಿ , ಸಹಜವಲ್ಲದ, ನನ್ನ ವ್ಯಾಪ್ತಿಯಲ್ಲದ, ಅಸ್ಪಷ್ಟವಾದ ಆದರೆ ಹಿತವಾದ ಯಾವುದೋ ಅನುಭೂತಿಯನ್ನು ಕಲ್ಪಿಸಿತ್ತು ಮತ್ತು ಅದರ ಛಾಯೆ ಇಲ್ಲಿಯ ಜನರ ಕಣ್ಣುಗಳಲ್ಲಿ, ಚರ್ಮದಲ್ಲಿ ಹೂತು ಹೋಗಿರುವಂತೆ ನನಗೆ ಭಾಸವಾಗುತ್ತಿತ್ತು. ನಾನು ಸಹ ಇಲ್ಲಿ ಘಟಿಸುತ್ತಿರುವ  ಈ ವರ್ತಮಾನದ ಒಂದು ಅವಿಭಾಜ್ಯ ಭಾಗ ಎನ್ನುವದು ನನ್ನ ಅರಿವನ್ನು ಮೀರಿ ಜಾರುತ್ತಿತ್ತು. ನಾನು ಅದೆಷ್ಟೇ ಪ್ರಯತ್ನಿಸಿದರೂ, ಇಲ್ಲಿಯ ಗಾಳಿಯನ್ನು ಅದೆಷ್ಟು ಬಾರಿ ಉಸಿರಾಡಿದರೂ  ಇಲ್ಲಿಯ  ಪ್ರಪಂಚದೊಡನೆ ಸಹಜವಾದ ತಂತನ್ನು ಮೀಟಲು ಹೆಣಗಾಡುತ್ತಿದ್ದೆ.
 
 ಎರಡು ತಿಂಗಳುಗಳ ಹಿಂದೆಯಷ್ಟೇ ನಾನು ನನ್ನ ಹೆಂಡತಿ ಮತ್ತು ನಾಲ್ಕು ವರ್ಷದ ಮಗನೊಟ್ಟಿಗೆ ಟೋಕಿಯೊದಲ್ಲಿರುವ ಮೂರು ಬೆಡ್ ರೂಮಿನ ಮನೆಯಲ್ಲಿ ವಾಸವಾಗಿದ್ದೆ.  ತುಂಬಾ ವಿಶಾಲವಾದ ಮನೆಯೇನಲ್ಲ. ಆದರೆ ನಮ್ಮ ಅಗತ್ಯಕ್ಕೆ ಸಾಕಾಗುವಷ್ಟು ಜಾಗ.  ನಾವಿಬ್ಬರು ಗಂಡ ಹೆಂಡತಿ ಒಂದು ರೂಮಿನಲ್ಲಿ , ಮಗನಿಗೆ ಇನ್ನೊಂದು ರೂ೦. ಉಳಿದ ಒಂದು ರೂಮ್ ನನ್ನ ಓದುವ ಕೋಣೆಯಾಗಿತ್ತು.  ಅಪಾರ್ಟ್ ಮೇ೦ಟ್  ಪ್ರಶಾಂತವಾಗಿತ್ತು.   ವಾರಾಂತ್ಯಗಳಲ್ಲಿ ನಾವೆಲ್ಲರೂ ಹತ್ತಿರದಲ್ಲೇ ಇದ್ದ ತಮಾ ನದಿಯ ತೀರದಲ್ಲಿ ಸುತ್ತಾಡಲು ಹೋಗುತ್ತಿದ್ದೆವು. ವಸಂತ ಕಾಲದಲ್ಲಿ ನದಿಯ ದಡದಲ್ಲಿರುವ ಚೆರ್ರಿ ಮರಗಳು ಹೂತುಂಬಿ ನಿಂತಿರುತ್ತಿದ್ದವು ಮತ್ತು ನನ್ನ ಮಗನನ್ನು ಬೈಕಿನಲ್ಲಿ ಹಿಂದೆ ಕುಳ್ಳಿರಿಸಿಕೊಂಡು ನಾನು ಟೋಕಿಯೋ ಬೇಸ್ ಬಾಲ್ ತಂಡದ  ಆಟಗಾರರು ತರಬೇತಿ ನಡೆಸುತ್ತಿರುವದನ್ನು ನೋಡಲು ಹೋಗುತ್ತಿದ್ದೆ. 

ನಾನು ಪುಸ್ತಕದ ಮೇಲು ಹೊದಿಕೆ ಮತ್ತು ಮುಖಪುಟವನ್ನು ವಿನ್ಯಾಸ ಮಾಡುವ  ಮಧ್ಯಮ ಗಾತ್ರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ವಿನ್ಯಾಸಗಾರ ಎನ್ನುವದು ನನಗೆ ಸರಿ ಹೊಂದುವದಿಲ್ಲವೇನೋ ಯಾಕೆಂದರೆ ನಾನು ಮಾಡುವ ಕೆಲಸ ಬಹುತೇಕ ಪುನರಾವರ್ತನೆಯೇ ಆಗಿತ್ತು. ಅಂಥವ ಕ್ರಿಯಾತ್ಮಕ ಕೆಲಸವೇನಲ್ಲ. ವಿಪರೀತ ಕೆಲಸವಿದ್ದಾಗಲೆಲ್ಲ ನಾನು ತಡ ರಾತ್ರಿಯ  ತನಕ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದೆ.  ಈ  ಏಕತಾನದ ಕೆಲಸ ಕೆಲವೊಮ್ಮೆ ನನಗೆ ಅತಿಯಾದ ಬೇಸರವನ್ನು ತಂದರೂ ಒಟ್ಟಾರೆಯಾಗಿ ಆಫೀಸು  ನನಗೆ ಅಭ್ಯಾಸವಾಗಿತ್ತು. ನಾನು ಇಲ್ಲಿ ಹಿರಿಯ ಕೆಲಸಗಾರನಾದ್ದರಿಂದ ಯಾವ ಕೆಲಸವನ್ನು ಮಾಡಬೇಕು ಎನ್ನುವ ಆಯ್ಕೆಯ ಸ್ವಾತಂತ್ರ್ಯವಿತ್ತು ಮತ್ತು ಬಹುತೇಕ ನಾನು ಹೇಳಿದ ಹಾಗೆಯೇ ಕೆಲಸ ಸಾಗುತ್ತಿತ್ತು. ನನ್ನ ಮೇಲಾಧಿಕಾರಿಯಾಗಲಿ , ಸಹ ಕೆಲಸಗಾರರಾಗಲಿ ತೊಂದರೆ ಕೊಡುವವರಾಗಿರಲಿಲ್ಲ ಸಂಬಳ ಸಹ ಪರವಾಗಿರಲಿಲ್ಲ. ಹಾಗಾಗಿ ಈ ಒಂದು ಘಟನೆ ಘಟಿಸದಿದ್ದರೆ ನಾನು ನನ್ನ ಭವಿಷ್ಯದ  ಮುಂದಿನ ದಿನಗಳನ್ನು ಬಹುಶ: ಅಲ್ಲಿಯೇ ಕಳೆಯುತ್ತಿದ್ದೆನೇನೋ  ಮತ್ತು ನನ್ನ ಬದುಕು ಉದ್ದನೆಯ ನದಿಯಂತೆ ಅಥವಾ ನದಿಯಲ್ಲಿ ಹರಿಯುವ ಹೆಸರಿಲ್ಲದ ನೀರಿನ೦ತೇ  ಶೀಘ್ರವಾಗಿ ಹರಿದು ಸಮುದ್ರವನ್ನು ಸೇರುತ್ತಿತ್ತು.

ಆದರೆ ನಾನು ಇಜುಮಿಯನ್ನು  ಭೇಟಿಯಾದೆ.  

ಇಜುಮಿ ನನಗಿಂತ ಹತ್ತು ವರ್ಷಕ್ಕೆ ಚಿಕ್ಕವಳು. ನಾವು ಒಂದು ವ್ಯವಹಾರದ ಸಮ್ಮೇಳನದಲ್ಲಿ ಭೇಟಿಯಾಗಿದ್ದೆವು. ನಾವಿಬ್ಬರು ಪರಸ್ಪರರನ್ನು ಮೊದಲ ಬಾರಿಗೆ ನೋಡಿದಾಗಲೇ ಇಬ್ಬರಲ್ಲೂ ಆಕರ್ಷಣೆ ಮೂಡಿತ್ತು. ಎಲ್ಲ ಸಲವೂ ಆಗುವಂಥ ಆಕರ್ಷಣೆಯಲ್ಲ . ಅದಾದ ನಂತರ ಹಲವು ಬಾರಿ ನಾವಿಬ್ಬರು ನಮ್ಮ  ಕೆಲಸದ ನಿಮಿತ್ತ ಭೇಟಿಯಾಗಬೇಕಾಯಿತು. ಕೆಲವೊಮ್ಮೆ ನಾನು  ಅವಳ ಕಚೇರಿಗೆ ಹೋಗುತ್ತಿದ್ದೆ ಇನ್ನು ಕೆಲವು ಸಲ ಅವಳು ನನ್ನ ಕಚೇರಿಗೆ ಬರುತ್ತಿದ್ದಳು. ನಮ್ಮ ಭೇಟಿ ಕ್ಷಿಪ್ರವಾಗಿರುತ್ತಿತ್ತು , ವ್ಯಾವಹಾರಿಕವಾಗಿರುತ್ತಿತ್ತು ಮತ್ತು ನಮ್ಮ ಜೊತೆಯಲ್ಲಿ ಸಹ ಕೆಲಸಗಾರರು ಯಾವಾಗಲೂ ಇರುತ್ತಿದ್ದರು. ನಮ್ಮ ಜಂಟಿ ಪ್ರಾಜೆಕ್ಟ್ ಮುಗಿದಾದ ಮೇಲೆ ನನಗೆ ಅರಿವಿಲ್ಲದಂತೆ ಒಂದು  ಅಸಾಧ್ಯ ಏಕಾಂತ ನನ್ನನ್ನು ಆವರಿಸಿತ್ತು . ಒಂದರ್ಥದಲ್ಲಿ ನನ್ನಿಂದ ಅವಿಭಾಜ್ಯವಾಗಿದ್ದೇನೋ ಕಳೆದುಹೋದ ಹಾಗೆ. ನನಗೆ ಯಾವತ್ತೂ ಹಾಗಾಗಿರಲಿಲ್ಲ ಮತ್ತು ಅವಳಿಗೂ ಹಾಗೆಯೇ ಅನಿಸಿರಬೇಕು. 

ಒಂದು ವಾರದ ನಂತರ ಯಾವುದೋ ಕಾರಣಕ್ಕೆ ಅವಳು ನನ್ನ ಕಚೇರಿಗೆ ಫೋನು ಮಾಡಿದ್ದಳು. ನಾನು ಒಂದು ಜೋಕ್ ಹೇಳಿದಾಗ ಅವಳು ನಕ್ಕಳು. "ಎಲ್ಲಿಯಾದರೂ ಆರಾಮಾಗಿ ಕುಳಿತು ಮಾತಾಡೋಣವೇ  " ನಾನು ಕೇಳಿದೆ. ಅವಳು ಒಪ್ಪಿದಳು .  ನಾವು ಒಂದು ಸಣ್ಣ ಬಾರಿಗೆ ಹೋದೆವು. ನಾವು ಮಾತನಾಡಿದ್ದು ಏನೆಂಬುದು ನನಗೆ ಸರಿಯಾಗಿ ನೆನಪಿಲ್ಲ.  ಆದರೆ  ಕೊನೆಯಿಲ್ಲದಂತೆ  ಮಾತನಾಡಲು  ಇಬ್ಬರ ನಡುವೆ ಮುಗಿಯದಷ್ಟು ಸರಕಿತ್ತು. ಅವಳು ಹೇಳಿದ್ದೆಲ್ಲವೂ  ನನಗೆ ಅರ್ಥವಾಗುತ್ತಿತ್ತು ಮತ್ತು ನನಗಿರಿವಿಲ್ಲದಂತೆ ನಾನು ಬೇರೆಯವರೊಟ್ಟಿಗೆ ಯಾವತ್ತಿಗೂ ವಿವರಿಸಲಾಗದ ಅದೆಷ್ಟೋ ವಿಷಯಗಳನ್ನು ಅವಳಿಗೆ ವಿವರಿಸಿದ್ದೆ. ನಾವಿಬ್ಬರೂ ವಿವಾಹಿತರಾಗಿದ್ದೆವು ಮತ್ತು ನಮ್ಮ ನಮ್ಮ ಸಂಸಾರಗಳಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ. ನಾವು ನಮ್ಮ ನಮ್ಮ ಜೊತೆಗಾರರನ್ನು ಇಷ್ಟಪಡುತ್ತಿದ್ದೆವು ಮತ್ತು ಗೌರವಿಸುತ್ತಿದ್ದೆವು. ಇಷ್ಟಾದರೂ, ನಾವಿಬ್ಬರೂ ಪರಸ್ಪರರ ಜೊತೆಗೆ ಮುಕ್ತವಾಗಿ , ಸ್ವಚ್ಛ೦ದವಾಗಿ ಯಾವುದೇ ವಿಷಯವನ್ನಾದರೂ ಹಂಚಿಕೊಳ್ಳ ಬಲ್ಲ ಆತ್ಮೀಯತೆಯನ್ನು ಕಂಡುಕೊಂಡಿದ್ದೆವು.  ಬಹುತೇಕರು ಇಂತಹ ಮುಕ್ತ ಆತ್ಮೀಯತೆಯನ್ನು ಹಂಚಿಕೊಳ್ಳ ಬಲ್ಲ ಇನ್ನೊಬ್ಬರನ್ನು ಯಾವತ್ತಿಗೂ ತಮ್ಮ ಜೀವನದಲ್ಲಿ ಕಂಡುಕೊಳ್ಳುವದೇ ಇಲ್ಲವೇನೋ.  ಈ ಸಂಬಂಧಕ್ಕೆ ಪ್ರೀತಿ ಎಂದು ಹಣೆ ಪಟ್ಟಿ ಕಟ್ಟುವದು ತಪ್ಪು.  ತನ್ಮಯತೇ ಎನ್ನಬಹುದೇನೋ. 

ನಾವು ನಂತರ ಆಗಾಗ  ಭೇಟಿಯಾಗಲು ಪ್ರಾರಂಭಿಸಿದೆವು. ಅವಳ ಗಂಡನಿಗೆ ತಡ ರಾತ್ರಿಯವರೆಗೂ ಕೆಲಸ ಇರುತ್ತಿತ್ತು. ಹೀಗಾಗಿ ಅವಳ ಇಚ್ಛೆಯಂತೆ ತಿರುಗಾಡುವದು ಸಾಧ್ಯವಿತ್ತು. ನಾವು ಜೊತೆಗಿದ್ದಾಗ ಸಮಯ ಓಡುತ್ತಿದೆಯೇನೋ ಅನಿಸುತ್ತಿತ್ತು.  ಕೊನೆಯ ಟ್ರೈನ್ ಗೆ ಇನ್ನೇನು ಕೆಲವೇ ಕ್ಷಣಗಳಿವೆ ಎನ್ನುವಾಗ ನಾವಿಬ್ಬರು ಕಷ್ಟಪಟ್ಟು ಪರಸ್ಪರರಿಗೆ ವಿದಾಯ ಹೇಳುತ್ತಿದ್ದೆವು. ನಮ್ಮಿಬ್ಬರ ನಡುವೆ ವಿನಿಮಯ ಮಾಡಿಕೊಳ್ಳಬೇಕಾದ ಭಾವನೆಗಳು, ವಿಷಯಗಳು ಸಮಯವನ್ನು ಮೀರಿ ಸಾಕಷ್ಟಿರುತ್ತಿದ್ದವು.

ಮೊದ ಮೊದಲು ನಾವಿಬ್ಬರು ದೈಹಿಕ ಸಂಬಂಧದ ಪ್ರಲೋಭನೆಗೆ ಒಳಗಾಗಿರಲಿಲ್ಲ. ನಮ್ಮ , ನಮ್ಮ  ಜೊತೆಗಾರರಿಗೆ ನಾವು  ವಿಧೇಯರಾಗಿರಲು ಪ್ರಯತ್ನಿಸುತ್ತಿದ್ದೆವು. ಆದರೆ ಕ್ರಮೇಣ ಒಬ್ಬರನ್ನೊಬ್ಬರು ಸ್ಪರ್ಶಿಸುವದು , ಬೆತ್ತಲೆಗೊಳಿಸುವದು , ಮುದ್ದಿಸುವದು , ತಬ್ಬಿಕೊಳ್ಳುವದು ಇವೆಲ್ಲವೂ ದೈಹಿಕ ಆಕರ್ಷಣೆಯನ್ನು ಮೀರಿದ , ನಮ್ಮಿಬ್ಬರ ನಡುವಿನ ಪವಿತ್ರ ಸಂಬಂಧದ ಸಹಜ ಭಾಗವೆನಿಸಿತ್ತು. ದೈಹಿಕ ಸುಖಕ್ಕಿಂತ ಮಿಗಿಲಾಗಿ ನಮ್ಮಿಬ್ಬರ ನಡುವೆ  ಹಾಸಿಗೆಯಲ್ಲಿ ಒಂದು ಪವಿತ್ರವೂ ಪ್ರಶಾಂತವೂ ಆದ,  ನಿರಾಭರಣ ಕೃತ್ಯವೊಂದು ಪ್ರತಿ ಬಾರಿ ಘಟಿಸಿದಂತೆ ಭಾಸವಾಗುತ್ತಿತ್ತು. ಒಬ್ಬರ ತೋಳಿನಲ್ಲಿ ಇನ್ನೊಬ್ಬರು ಬಂಧಿಯಾಗಿ ನಮಗಿಬ್ಬರಿಗೆ ಮಾತ್ರ ಅರ್ಥವಾಗುವಂತಹ  ತುಂಡರಿಸಿದ ಶಬ್ದಗಳನ್ನು  ಪರಸ್ಪರರ ಕಿವಿಯಲ್ಲಿ   ಪಿಸುಗುಡುತ್ತಿದ್ದೆವು .

ನಾವು ಸಾಧ್ಯವಾದಾಗಲೆಲ್ಲ ಭೇಟಿಯಾಗುತ್ತಿದ್ದೆವು. ನಮ್ಮ ಸಾಂಸಾರಿಕ ಜೀವನವನ್ನು ಒಂದೆಡೆಗೆ ತೂಗಿಸಿಕೊಂಡು ನಮ್ಮಿಬ್ಬರ ಈ ಸಂಬಂಧವನ್ನು  ಶಾಶ್ವತವಾಗಿ ನಿಭಾಯಿಸಬಹುದು ಎನ್ನುವದು ನಮ್ಮಿಬ್ಬರ ಅನಿಸಿಕೆಯಾಗಿತ್ತು. ನಮ್ಮ ಈ ಸಂಬಂಧ ಬೆಳಕಿಗೆ ಬರುವದು ಅಸಾಧ್ಯವೆಂಬುದು ನಂಬಿಕೆಯಾಗಿತ್ತು.  ಹೌದು, ನಾವು ಕೆಲವೊಮ್ಮೆ ಒಟ್ಟಿಗೆ ಮಲಗುತ್ತಿದ್ದೆವು ಆದರೆ ಇದು ಬೇರೆಯವರಿಗೆ ನೋವನ್ನುಂಟು ಮಾಡುವದೇನು ಅಲ್ಲ.   ಕೆಲವೊಮ್ಮೆ ನಾನು ಇಜುಮಿಯ ಜೊತೆಗೆ ರಾತ್ರಿ ಕಳೆದು , ತಡವಾಗಿ ಮನೆಗೆ ಬಂದಾಗ ಹೆಂಡತಿಗೆ ಯಾವುದಾದರೂ ಸುಳ್ಳು ಕಾರಣವನ್ನು  ಹೇಳಬೇಕಾದಾಗ ನನ್ನ ಆತ್ಮ ಸಾಕ್ಷಿಗೆ ಸಣ್ಣಗೆ ಚುಚ್ಚಿದಂತೆ ಆದರೂ ಇದೇನೂ ಮೋಸವಲ್ಲ ಎಂದು ಭಾವಿಸಿದ್ದೆ.  ಇಜುಮಿ ಮತ್ತು ನನ್ನ ನಡುವೆ ಸ್ಪಷ್ಟವಾಗಿ ವಿಭಾಗಿಸಲ್ಪಟ್ಟ ಆದರೆ ಅತ್ಯಾಪ್ತವಾದ ಸಂಬಂಧವಿತ್ತು. 

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನಮ್ಮಿಬ್ಬರ ಈ ಸಂಬಂಧ ಕೊನೆಯವರೆಗೂ ಯಾವುದೇ ಅಡಚಣೆಯಿಲ್ಲದೆ ನಡೆದುಕೊಂಡು ಹೋಗುತ್ತಿತ್ತೇನೋ ಅಥವಾ ನಮ್ಮ ನಮ್ಮ ಜೊತೆಗಾರರಿಗೆ ಸುಳ್ಳು ಕಾರಣಗಳನ್ನು ಕೊಡುವದು ಬೇಸರವಾಗಿ ಕೊನೆಗೊಂದು ದಿನ ನನ್ನ ಇಜುಮಿಯ ಸಂಬಂಧ ತಾನು ತಾನಾಗಿಯೇ ಮುರಿದು ಬಿದ್ದು , ನಾವು ಮತ್ತೆ ನಮ್ಮ ನಮ್ಮ ಮೊದಲಿನ ಜೀವನಕ್ಕೆ ಮರಳುತ್ತಿದ್ದೇವೇನೋ. ಒಟ್ಟಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯುತ್ತಿರಲಿಲ್ಲ.  ನನಗೆ ಇದನ್ನು ಈಗ ಸಾಬೀತು ಪಡಿಸಲು ಸಾಧ್ಯವಿಲ್ಲ. ಆದರೆ ವಿಧಿ ಲಿಖಿತವೇ ಬೇರೆಯಿತ್ತು ಅಥವಾ ನಮ್ಮಿಬ್ಬರ ನಡುವೆ ಹೀಗಾಗುತ್ತದೆ ಎಂದು ಮೊದಲೇ ಬರೆದಿತ್ತು.  ಅದು ಹೇಗೋ ಇಜುಮಿಯ ಗಂಡನಿಗೆ ನಮ್ಮಿಬ್ಬರ ನಡುವಿನ ಸಂಬಂಧದ ಸುಳಿವು ಸಿಕ್ಕಿತ್ತು. ಆಕೆಯನ್ನು ಎಡಬಿಡದೆ ಪ್ರಶ್ನಿಸಿ  ಎಲ್ಲ ವಿಷಯವನ್ನು ತಿಳಿದುಕೊಂಡ ಅವನು ನಮ್ಮ ಮನೆಗೆ ನುಗ್ಗಿದ್ದ. ದುರದ್ರಷ್ಟವಷಾತ್ , ಮನೆಯಲ್ಲಿ ನನ್ನ ಹೆಂಡತಿ ಒಬ್ಬಳೇ ಇದ್ದಳು  ಮತ್ತು ಪರಿಸ್ಥಿತಿ ನನ್ನ ಕೈಮೀರಿತ್ತು. ಇಜುಮಿ ಈಗಾಗಲೇ ಎಲ್ಲವನ್ನೂ ಒಪ್ಪಿಕೊಂಡಿದ್ದರಿಂದ ನಾನು ಯಾವುದೇ ಸಮಜಾಯಿಷಿ ಕೊಡುವ ಹಾಗಿರಲಿಲ್ಲ.  ನಡೆದಿರುವದನ್ನು ನನ್ನ ಹೆಂಡತಿಗೆ ವಿವರಿಸಲು ಯತ್ನಿಸಿದೆ. " ಇದು ಪ್ರೀತಿಯಲ್ಲ " ಅವಳಿಗೆ ಮನದಟ್ಟು ಮಾಡಲು ಹೆಣಗುತ್ತಾ ಹೇಳಿದೆ "  ಇದು ನಮ್ಮಿಬ್ಬರ ನಡುವಿರುವದಕ್ಕೆ ಹೊರತಾದ ಬೇರೆಯದೇ ಆದ ಸಂಬಂಧ. ಹಗಲು ರಾತ್ರಿಗಳ ಹಾಗೆ. ಇಷ್ಟು ದಿನವಾದರೂ ನಿನಗೆ ಇದರ ಬಗ್ಗೆ ಕಿಂಚಿತ್ ಸುಳಿವೂ ಇರಲಿಲ್ಲ ಅಲ್ಲವೇ ? ಅದರರ್ಥ ನನ್ನ ಅವಳ ನಡುವಿನದು ನೀನು ತಿಳಿದಿರುವದಕ್ಕಿಂತ ಬೇರೆಯದೇ ಆದಂತಹ ಬಾಂಧವ್ಯ. " 

ನನ್ನ ಹೆಂಡತಿ ಈ ವಿವರಣೆಯನ್ನು  ಒಪ್ಪಲಿಲ್ಲ. ಅವಳಿಗೆ ಇದೊಂದು ದೊಡ್ಡ ಆಘಾತವಾಗಿತ್ತು. ಅವಳು ನಿಂತಲ್ಲೇ ಮರಗಟ್ಟಿದ್ದಳು ಮತ್ತು ನನ್ನೊಡನೆ ಆ ಕ್ಷಣದಿಂದ  ಒಂದು ಮಾತನ್ನೂ ಆಡಲಿಲ್ಲ.  ಮಾರನೆಯ ದಿನ ಅವಳು ಮಗನೊಟ್ಟಿಗೆ ನಮ್ಮ ಮನೆಯನ್ನು ತೊರೆದು ಅವಳ ತವರಿಗೆ ಹೋದಳು.  ನಾನು ಹಲವಷ್ಟು ಬಾರಿ ಅವಳನ್ನು ಸಂಪರ್ಕಿಸುವ ಯತ್ನ ಮಾಡಿದೆ. ಅವಳು ಯಾವತ್ತೂ ನನ್ನ ದೂರವಾಣಿ ಕರೆಗೆ ಉತ್ತರಿಸಲಿಲ್ಲ. ಕೊನೆಗೊಂದು ದಿನ ಅವಳ ಅಪ್ಪ ಫೋನನ್ನು ತೆಗೆದುಕೊಂಡು " ಇನ್ನೊಮ್ಮೆ ಕರೆ ಮಾಡುವ ಧೈರ್ಯ ಮಾಡಬೇಡ. ಅವಳು ಮರಳುವದಿಲ್ಲ. ನಿನ್ನಂತಹ ಅಯೋಗ್ಯನೆಡೆಗೆ ಅವಳನ್ನು ನಾನು ಪುನಃ ಕಳುಹಿಸಲಾರೆ ". ಮೊದಲಿನಿಂದಲೂ ಅವಳಪ್ಪನಿಗೆ ನಮ್ಮ ಮದುವೆ ಇಷ್ಟವಿರಲಿಲ್ಲ. ಕೊನೆಗೂ ತಾನು ಊಹಿಸಿದಂತೆಯೇ ಆಯಿತಲ್ಲ ಎನ್ನುವ ಭಾವ ಅವನ ದನಿಯಲ್ಲಿತ್ತು.  

ಎಲ್ಲವನ್ನೂ ಕಳೆದುಕೊಂಡ ನಂತರ ನಾನು ಕೆಲ ದಿನ ರಜೆಯನ್ನು ಹಾಕಿ ಮನೆಯಲ್ಲಿ ಒಬ್ಬಂಟಿಯಾಗಿ ಉಳಿದೆ.  ಇಜುಮಿ ಕರೆ ಮಾಡಿದಳು. ಅವಳೂ ಒಂಟಿಯಾಗಿದ್ದಳು. ಅವಳ ಗಂಡ ಅವಳನ್ನು ತೊರೆದಿದ್ದ. ಹೋಗುವ ಮೊದಲು ಅವಳ ಮೇಲೆ ಹಲ್ಲೆ ಮಾಡಿದ್ದ. ಅವಳ ಬಳಿ ಇರುವ ಕೋಟಿನಿಂದ ಒಳ ಉಡುಪುಗಳವರೆಗೆ ಎಲ್ಲ ಬಟ್ಟೆಗಳನ್ನು  ಕತ್ತರಿಯಿಂದ  ಚೂರು ಚೂರಾಗಿ  ಕತ್ತರಿಸಿದ್ದ . ಅವನು ಎಲ್ಲಿಗೆ ಹೋದ ಎನ್ನುವದರ ಬಗ್ಗೆ ಅವಳಿಗೆ ಯಾವುದೇ ಮಾಹಿತಿಯಿರಲಿಲ್ಲ. "ನನಗೆ ಏನೂ ತೋಚುತ್ತಿಲ್ಲ " ಅವಳು ಹೇಳಿದಳು " ನನಗೆ ಏನು ಮಾಡಬೇಕೆಂದು ಹೊಳೆಯುತ್ತಿಲ್ಲ . . ಎಲ್ಲವೂ ನುಚ್ಚು ನೂರಾಗಿದೆ. ಅವನು ಮತ್ತೆಂದೂ ಮರಳಿ ಬರುವದಿಲ್ಲ ಮತ್ತು ಎಲ್ಲವೂ ಯಾವತ್ತಿಗೂ ಮೊದಲಿನಂತೆ ಸಹಜವಾಗಿರುವದಿಲ್ಲ. "  ಅವಳು ಫೋನಿನಲ್ಲಿ ಬಿಕ್ಕಿದಳು. ಅವಳು ಮತ್ತು ಅವಳ ಗಂಡ ತಮ್ಮ  ಶಾಲಾ ದಿನಗಳಿಂದಲೂ ಜೊತೆಗಿದ್ದವರು. ನನಗೆ ಅವಳನ್ನು ಸಮಾಧಾನಪಡಿಸಬೇಕು ಅನ್ನಿಸುತಿತ್ತು. ಆದರೆ ಹೇಳುವದೇನು ? 
"ಎಲ್ಲಿಯಾದರೂ ಹೊರಗೆ ಹೋಗಿ, ಜೊತೆಗೆ ಕುಳಿತುಕೊಂಡು ಮಾತಾಡೋಣ " ಕೊನೆಗೆ ಅವಳೇ ಹೇಳಿದಳು. 

ನಾನು ಶಿಭುಯಾ ನಲ್ಲಿರುವ ಬಾರೊಂದರಲ್ಲಿ ಕುಳಿತು ತಡ ರಾತ್ರಿಯವೆರೆಗೆ ಕುಡಿದೆವು. ಮೊತ್ತ ಮೊದಲ ಬಾರಿಗೆ ನಮ್ಮಿಬ್ಬರಲ್ಲಿ ಮಾತನಾಡಲು ವಿಷಯಗಳಿರಲಿಲ್ಲ. ನಸುಕಿನಲ್ಲಿ ನಾವು ಬಾರಿನಿಂದ ಹೊರಬಿದ್ದು  ಅಲ್ಲಿಂದ ನಡೆಯಲಿಕ್ಕೆ ತುಸು ಜಾಸ್ತಿಯೇ ಅನಿಸುವಷ್ಟು  ದೂರದಲ್ಲಿರುವ  ಹರಾಜಾಕುನಲ್ಲಿರುವ ಹೋಟೆಲಿಗೆ ನಡೆಯುತ್ತಾ ಹೋಗಿ ತಿಂಡಿ ತಿಂದು ಕಾಫಿ ಕುಡಿದೆವು.  ಆಗಲೇ ಅವಳು ಗ್ರೀಸ್ ಗೆ ಹೋಗುವ ವಿಚಾರವನ್ನು ಹೇಳಿದ್ದು .
"ಗ್ರೀಸ್ ?"  ನಾನು ಕೇಳಿದೆ.
"ನಾವು ಜಪಾನಿನಲ್ಲಿ ಇರುವ ಹಾಗಿಲ್ಲ. " ನನ್ನ ಕಣ್ಣುಗಳನ್ನು ಆಳವಾಗಿ ದಿಟ್ಟಿಸುತ್ತ ಅವಳು ನುಡಿದಳು.
ಗ್ರೀಸಿಗೆ ಹೋಗುವ ವಿಚಾರವನ್ನು ನಾನು ಮತ್ತೆ ಮನಸ್ಸಿನಲ್ಲೇ ಪ್ರಶ್ನಿಸಿದೆ. ವೋಡ್ಕಾದಿಂದ ಮಂದವಾಗಿದ್ದ ನನ್ನ ಮೆದುಳಿಗೆ ಯಾವುದೇ ತರ್ಕ ಹೊಳೆಯಲಿಲ್ಲ.
"  ಗ್ರೀಸಿಗೆ ಹೋಗಬೇಕೆಂದು ನನಗೆ ಮೊದಲಿನಿಂದಲೂ ಇತ್ತು. " ಅವಳು ಹೇಳಿದಳು " ಅದು ನನ್ನ ಕನಸು. ನಮ್ಮ ಮಧುಚಂದ್ರಕ್ಕೆ ಅಲ್ಲಿಗೆ ಹೋಗಬೇಕೆಂದುಕೊಂಡಿದ್ದೆವು . ಆದರೆ ನಮ್ಮಲ್ಲಿ ಅಷ್ಟೊಂದು ದುಡ್ಡಿರಲಿಲ್ಲ. ಹಾಗಾಗಿ ಈಗ ನಾವಿಬ್ಬರು ಹೋಗೋಣ  ಮತ್ತು ಅಲ್ಲಿ ನಮ್ಮ ನಮ್ಮ ಭೂತಕಾಲವನ್ನು ಬಿಟ್ಟು ಹಾಯಾಗಿ ಸುಮ್ಮನೆ ಬದುಕೋಣ. ಜಪಾನಿನಲ್ಲಿ ಇದ್ದಷ್ಟೂ ದಿನ  ಹಳೆಯದು ಮತ್ತೆ ಮತ್ತೆ ನೆನಪಾಗಿ ಮನಸ್ಸು ಖಿನ್ನಗೊಳ್ಳುತ್ತದೆ. "

ನನಗೆ ಗ್ರೀಸ್ ನಲ್ಲಿ ಅಂತಹ ವಿಶೇಷವಾದ ಆಸಕ್ತಿಯೇನೂ ಇರಲಿಲ್ಲ ಆದರೂ ಅವಳು ಹೇಳಿದುದ್ದಕ್ಕಾಗಿ ಒಪ್ಪಿಕೊಂಡೆ. ನಮ್ಮಿಬ್ಬರಲ್ಲಿ ಉಳಿತಾಯವೆಷ್ಟಿದೆ ಎಂದು ಲೆಕ್ಕ ಹಾಕಿದೆವು. ಇಬ್ಬರದೂ ಸೇರಿಸಿದರೆ ಸುಮಾರು ನಲವತ್ತು ಲಕ್ಷ ಜಪಾನೀ ಯೆನ್ - ಹತ್ತಿರ ಹತ್ತಿರ ನಲವತ್ತು ಸಾವಿರ ಡಾಲರ್.
" ನಲವತ್ತು ಸಾವಿರ ಡಾಲರ್ ಎಂದರೆ ಗ್ರೀಸಿನ ಯಾವುದೇ ಸಣ್ಣ ಪಟ್ಟಣದಲ್ಲಿ ಮೂರು ನಾಲ್ಕು ವರ್ಷ ಆರಾಮಾಗಿ ಬದುಕಲು ಸಾಕು"  ಇಜುಮಿ ಲೆಕ್ಕ ಹಾಕಿದಳು. "ರಿಯಾಯಿತಿಯಲ್ಲಿ ವಿಮಾನ ಟಿಕೇಟ್ ಕೊಂಡರೆ ಸುಮಾರು ನಾಲ್ಕು ಸಾವಿರವಾಗಬಹುದು. ಉಳಿದಿದ್ದು ಮೂವತ್ತಾರು ಸಾವಿರ. ಒಂದು ತಿಂಗಳಿಗೆ ಒಂದು ಸಾವಿರ ಡಾಲರ್ ಅಂದುಕೊಂಡರೂ ಮೂರೂ ವರ್ಷಕ್ಕೆ ಆರಾಮಾಗಿ ಸಾಕು ಅಥವಾ ಎರಡೂವರೆ ವರ್ಷ. ಏನು ಹೇಳುತ್ತೀಯಾ ? ಉಳಿದ ವಿಷಯವನ್ನು ಅಲ್ಲಿಗೆ ಹೋದ ಮೇಲೆ ನಿರ್ಧರಿಸಬಹುದು. "

ನಾನು ಸುತ್ತಲೂ ದೃಷ್ಟಿ ಹಾಯಿಸಿದೆ. ಮುಂಜಾನೆ ಸಮಯ.  ಹೋಟೆಲಿನಲ್ಲಿ  ಬಹುತೇಕ ಯುವ ಜೋಡಿಗಳೇ   ತುಂಬಿದ್ದರು. ಮೂವತ್ತರ ಮೇಲಿನವರು ಬಹುಶ: ನಾವಿಬ್ಬರೇ ಇರಬೇಕು ಮತ್ತು ಇರುವ ಎಲ್ಲವನ್ನು ಬಾಚಿಕೊಂಡು ಗ್ರೀಸ್ ಗೆ ಓದಿ ಹೋಗಬೇಕು ಎನ್ನುವದರ ಬಗ್ಗೆ ಮಾತನಾಡುತ್ತಿರುವವವರು ಖಂಡಿತವಾಗಿಯೂ ನಮ್ಮಿಬ್ಬರನ್ನು ಬಿಟ್ಟರೆ ಈ ಹೋಟೆಲಿನಲ್ಲಿ ಬೇರೆ ಯಾರೂ ಇರಲಿಕ್ಕಿಲ್ಲ. ಎಲ್ಲ ಅಸ್ತವ್ಯಸ್ತ. ನಾನು ಯೋಚಿಸಿದೆ. ನಾನು ನನ್ನ ಅಂಗೈಯನ್ನು ಸುದೀರ್ಘವಾಗಿ ದಿಟ್ಟಿಸಿದೆ.  ಈ ತಿರುವು ತೆಗೆದುಕೊಂಡಿದ್ದು ನನ್ನದೇ ಬದುಕೇ ?
"ಸರಿ " ಕೊನೆಗೆ ಉತ್ತರಿಸಿದೆ " ಹಾಗೆ ಮಾಡೋಣ "   

ಮಾರನೆಯ ದಿನ ಆಫೀಸಿನಲ್ಲಿ ರಾಜೀನಾಮೆ ಪತ್ರ ನೀಡಿದೆ. ಕಂಪನಿಯ ಬಾಸ್ ನನ್ನ ಬಗ್ಗೆ  ಹಲವಷ್ಟು ವದಂತಿಗಳನ್ನು ಕೇಳಿ ನನ್ನನ್ನು ದೀರ್ಘಕಾಲೀನ ರಜೆಯನ್ನು ತೆಗೆದುಕೊಳ್ಳುವಂತೆ ಕೇಳುವವರಿದ್ದರು. ನನ್ನ ಸಹೋದ್ಯೋಗಿಗಳಿಗೆ ನಾನು ಕೆಲಸ ಬಿಡುತ್ತಿದ್ದೇನೆ ಎನ್ನುವ ಗುಮಾನಿಯಿತ್ತು.  ಆದರೂ ಯಾರೊಬ್ಬರೂ ನನ್ನನ್ನು ಕೇಳುವ ಧೈರ್ಯ ಮಾಡಲಿಲ್ಲ. ಕೆಲಸವನ್ನು ಬಿಡುವದು ಅಂತಹ ಕಷ್ಟದ ಕೆಲಸವೇನು ಅಲ್ಲ ಎನ್ನುವದು ನನಗೆ ತಿಳಿಯಿತು. ಒಂದು ಬಾರಿ ಯಾವುದನ್ನಾದರೂ ಬಿಡಲೇ ಬೇಕು ಎಂದು ದೃಢವಾಗಿ ನಿರ್ಧರಿಸಿದ ಮೇಲೆ  ಬಿಡಲು ಅಸಾಧ್ಯವಾದದ್ದು  ಯಾವುದೂ ಇಲ್ಲ ಮತ್ತು ಒಮ್ಮೆ ಬೇಡವೆಂದು  ಹೊರ ಹಾಕಲು ಆರಂಭಿಸಿದ ಮೇಲೆ ನಿಮಗೆ ಎಲ್ಲವನ್ನೂ ಹೊರ ಹಾಕಬೇಕೆನಿಸುತ್ತದೆ.  ಜೂಜಿನಲ್ಲಿ ಸಕಲವನ್ನೂ ಪಣಕ್ಕೆ ಇಡುತ್ತೇವಲ್ಲ ಹಾಗೆ.  ಗಳಿಸಿದ್ದೆಲ್ಲವೂ  ಹೋದರೆ ಏನಾಯಿತು ಪಣಕ್ಕೆ ಯಾವುದು ಉಳಿದಿದೆಯೋ ಅದನ್ನೇ ಇಡುವದು. 
ನನಗೆ ಅತ್ಯಗತ್ಯ ಅನಿಸಿದ್ದೆಲ್ಲವನ್ನು ಒಂದು ಮಧ್ಯಮ  ಗಾತ್ರದ ಸೂಟ್ ಕೇಸಿನಲ್ಲಿ ಹಾಕಿಕೊಂಡೆ.  ಇಜುಮಿ ಸಹ ಸರಿ ಸುಮಾರು ಅದೇ ಗಾತ್ರದ ಸೂಟ್ ಕೇಸ್ ತಂದಿದ್ದಳು.

ವಿಮಾನ  ಈಜಿಪ್ಟಿನ ಮೇಲೆ ಹಾರುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ನನ್ನ ಸೂಟ್ ಕೇಸನ್ನು ಅಕಸ್ಮಾತಾಗಿ ಬೇರೆ ಯಾರೋ ತೆಗೆದುಕೊಂಡಿದ್ದಾರೆ ಎನ್ನುವ ಸಂಶಯ ಬಂದು ಸಣ್ಣಗೆ ನಡುಗಿದೆ.  ನನ್ನ ಸೂಟ್ ಕೇಸಿನ ಹಾಗೆ ಇರುವ ಸಾವಿರಾರು ಸೂಟ್ ಕೇಸ್ ಗಳು ಇದ್ದಿರಬಹುದು. ಬಹುಶ: ನಾನು ಗ್ರೀಸಿಗೆ ಹೋಗಿ ನನ್ನದು ಅಂದುಕೊಂಡಿರುವ ಸೂಟ್ ಕೇಸನ್ನು ತೆಗೆದು ನೋಡಿದರೆ ಅದರೊಳಗೆ ಬೇರೆಯವರ ವಸ್ತುಗಳಿರಬಹುದು. ಹೇಳಲಾರದ ಅಸಾಧ್ಯ ಭೀತಿ ನನ್ನ ಬೆನ್ನು ಹುರಿಯನ್ನು ಕೊರೆಯತೊಡಗಿತು.  ಆ ಒಂದು ಸೂಟ್ ಕೇಸು ಕಳೆದುಹೋದರೆ ನನ್ನ ಭೂತಕಾಲದ ಬದುಕಿಗೆ ನನ್ನನ್ನು ಜೋಡಿಸುವ ಯಾವ ಕೊಂಡಿಯೂ ಇರುವದಿಲ್ಲ - ಇಜುಮಿಯನ್ನು ಹೊರತುಪಡಿಸಿದರೆ . ನನಗೆ ಇದ್ದಕ್ಕಿದ್ದ ಹಾಗೆ ನನ್ನ ಅಸ್ತಿತ್ವವೇ ಅಳಿಸಹೋದಂತೆ ಭಾಸವಾಗತೊಡಗಿತು. ನನ್ನ ಹಿಡಿತಕ್ಕೆ ನಿಲುಕದ ಅವ್ಯಕ್ತತೆ . ವಿಮಾನದಲ್ಲಿ ಕುಳಿತಿರುವ ನಾನು, ನಾನಲ್ಲ. ಬಹುಶ : ನನ್ನ ಮೆದುಳು  ತಪ್ಪು ಗ್ರಹಿಕೆಯಿಂದ ನನ್ನಂತೆ ಇರುವ ಮತ್ಯಾರಿಗೊ ಅಂಟಿಕೊಂಡು ಬಿಟ್ಟಿದೆ.  ನನ್ನ ಮನಸ್ಸಿನಲ್ಲಿ ಕೋಲಾಹಲವೆದ್ದಿತು. ನಾನು ಮರಳಿ ಜಪಾನಿಗೆ ಹೋಗಿ ನನ್ನ ನೈಜ ದೇಹವನ್ನು ಸೇರಿಕೊಳ್ಳಬೇಕು. ಆದರೆ ಈಗ ಈ ಕ್ಷಣಕ್ಕೆ ನಾನು ಈ ಜೆಟ್ ವಿಮಾನದಲ್ಲಿ ಈಜಿಪ್ಟಿನ ಮೇಲೆ ಹಾರಿ ಹೋಗುತ್ತಿದ್ದೇನೆ ಮತ್ತು ನನಗೆ ಮರಳುವ ದಾರಿಯಿಲ್ಲ. ನಾನು ಈ ಕ್ಷಣಕ್ಕೆ ತಾತ್ಕಾಲಿಕವಾಗಿ ಅಂಟಿಕೊಂಡಿರುವ ಈ ದೇಹ ಪ್ಲಾಸ್ಟರಿನದು. ಒಮ್ಮೆ ಕೆರೆದರೆ , ಇಂಚಿ೦ಚಾಗಿ ನಾನು ಬಿಚ್ಚಿ ಹೋಗಿ ಕೊನೆಗೊಮ್ಮೆಏನೂ ಇಲ್ಲವಾಗುತ್ತೇನೆ. ನಾನು ನಡುಗತೊಡಗಿದೆ. ನನ್ನ ದೇಹದ ನಡುಕ ನನ್ನ ಹಿಡಿತವನ್ನು ಮೀರಿತ್ತು. ಈ ನಡುಕ ಹೀಗೆಯೇ ಮುಂದುವರೆದರೆ , ನನಗೆ ನಿಲ್ಲಿಸಲು ಸಾಧ್ಯವಾಗದಿದ್ದರೆ, ಇನ್ನೇನು ಕೊನೆಗೊಮ್ಮೆ ನನ್ನ ದೇಹ ಚೂರು ಚೂರಾಗಿ ಧೂಳಿನ ಕಣವಾಗುತ್ತದೆ. ತಣ್ಣನೆಯ ವಿಮಾನದೊಳಗೆ ನಾನು ಬೆವರತೊಡಗಿದೆ. ನನ್ನ ಅಂಗಿ ನನ್ನ ಚರ್ಮಕ್ಕೆ ಅಂಟಿಕೊಂಡಿತ್ತು - ಬೆವರಿನ ವಾಸನೆ.  ಇಷ್ಟೆಲ್ಲಾ ಆಗುವಾಗ ಇಜುಮಿ ನನ್ನ  ಕೈಯನ್ನು ಭದ್ರವಾಗಿ ಹಿಡಿಕೊಂಡಿದ್ದಳು ಮತ್ತು ಆಗಾಗ ನನ್ನನ್ನು ಹಗುರವಾಗಿ ತಬ್ಬಿಕೊಳ್ಳುತ್ತಿದ್ದಳು. ಅವಳು ಒಂದೇ ಒಂದು ಶಬ್ದವನ್ನೂ ಆಡಲಿಲ್ಲ ಆದರೆ ಅವಳಿಗೆ ನನ್ನ ಮನಸ್ಸಿನಲ್ಲಿ ನಡೆಯವದು ಅರ್ಥವಾಗುತ್ತಿತ್ತು. ನಡುಕ ಸುಮಾರು ಅರ್ಧ ಘಂಟೆಯವೆರೆಗೆ ಇತ್ತು. ನಾನು ಸಾಯಲು ಬಯಸುತ್ತಿದ್ದೆ - ಬಂದೂಕಿನ ನಳಿಕೆಯನ್ನು ಕಿವಿಯಲ್ಲಿ ಹಿಡಿದು ಗುಂಡು ಹಾರಿಸಿಕೊಳ್ಳುವದು - ನನ್ನ ಮೆದುಳು ಮತ್ತು ದೇಹ ಧೂಳಿನ ಕಣಗಳಾಗಿ ವಿಘಟನೆ ಹೊಂದಲಿ.

ಕೊನೆಗೊಮ್ಮೆ ನಡುಕ ನಿಂತಾಗ ನನ್ನ ದೇಹ ಆಶ್ಚರ್ಯಕರ ರೀತಿಯಲ್ಲಿ ಹಗುರವಾಗಿತ್ತು. ಬಿಗಿಯಾಗಿದ್ದ ನನ್ನ ಭುಜಗಳನ್ನು ಹಾರಿಸಿದೆ. ನಾನು ಸುಧೀರ್ಘ ನಿದ್ರೆಗೆ ಜಾರಿದೆ. ಮತ್ತೆ ಕಣ್ಣು ಬಿಟ್ಟಾಗ  ವಿಮಾನ ದ್ವೀಪದ ನೀಲ ಬಣ್ಣದ ಸಮುದ್ರದ ಮೇಲೆ ಹಾರುತಿತ್ತು. 

ದ್ವೀಪದಲ್ಲಿ ನಮಗೆ ಎದುರಾದ ಕ್ಲಿಷ್ಟ ಸಮಸ್ಯೆ ಎಂದರೆ  ಏನು ಮಾಡುವದೆಂದು . ನಮಗೆ ಕೆಲಸವಿರಲಿಲ್ಲ , ಹೊತ್ತು ಕಳೆಯಲು ಪರಿಚಿತರಿರಲಿಲ್ಲ. ದ್ವೀಪದಲ್ಲಿ ಸಿನಿಮಾ ಥಿಯೇಟರ್ ಆಗಲಿ , ಲೈಬ್ರರಿ ಆಗಲಿ,  ಟೆನಿಸ್ ಆಡುವ ಕೋರ್ಟ್ ಆಗಲಿ ಇರಲಿಲ್ಲ. ನಾವು ಜಪಾನನ್ನು ಏಕಾಏಕಿ ಬಿಟ್ಟಿದ್ದರಿಂದ ನನಗೆ ಗಡಿಬಿಡಿಯಲ್ಲಿ ಪುಸ್ತಕಗಳನ್ನು ತರುವದಕ್ಕೆ ಮರೆತುಹೋಗಿತ್ತು. ವಿಮಾನ ನಿಲ್ದಾಣದಲ್ಲಿ ಕೊಂಡಿದ್ದ ಪುಸ್ತಕಗಳನ್ನು ಈಗಾಗಲೇ ಎರಡೆರಡು ಬಾರಿ ಓದಿಯಾಗಿತ್ತು.  ಪ್ರವಾಸಿಗರಿಗಾಗಿ ಬಂದರಿನಲ್ಲಿ ಒಂದೆರಡು ಇಂಗ್ಲಿಷ್ ಪುಸ್ತಕಗಳನ್ನು ಇಟ್ಟಿದ್ದರು. ಆದರೆ ಯಾವುದು ನನಗೆ ಓದಬೇಕೆನಿಸಲಿಲ್ಲ. ಓದುವದು ನನ್ನ ಪ್ರಿಯ ಹವ್ಯಾಸವಾಗಿತ್ತು.  ಯಾವತ್ತಾದರೂ ಒಂದು ಸಂಪೂರ್ಣ ಬಿಡುವು ಸಿಕ್ಕರೆ ಓದಿನಲ್ಲಿ ಮುಳುಗಿ ಹೋಗಬೇಕು ಎಂದುಕೊಳ್ಳುತ್ತಿದ್ದೆ. ಈಗ , ಸಮಯವಿದೆ ಆದರೆ ಪುಸ್ತಕಗಳಿಲ್ಲ.  

ಇಜುಮಿ ಗ್ರೀಕ್ ಕಲಿಯಲು ಪ್ರಯತ್ನಿಸುತ್ತಿದ್ದಳು. ಅವಳು ಗ್ರೀಕ್ ಕಲಿಯಿರಿ ಎನ್ನುವ ಪುಸ್ತಕ ಕೊಂಡು ತಂದು ಅದರಲ್ಲಿದ್ದ ಶಬ್ದಗಳನ್ನು , ಸರಳ ವಾಕ್ಯಗಳನ್ನು ಸದಾ ಕಾಲ ಉರುಹೊಡೆಯುತ್ತಿದ್ದಳು. ಸತತ ಪ್ರಯತ್ನದ ನಂತರ ಅವಳ ಗ್ರೀಕ್, ಅಂಗಡಿಯವರಲ್ಲಿ ಏನನ್ನಾದರೂ ಕೇಳುವಷ್ಟು  ಅಥವಾ ಹೋಟೆಲಿನಲ್ಲಿ ಏನಾದರೂ ಆರ್ಡರ್ ಮಾಡುವಷ್ಟು ಸುಧಾರಿಸಿತು ಮತ್ತು ಇದರಿಂದಾಗಿಯೇ ನಮಗೆ ಒಂದಷ್ಟು ಜನರ ಪರಿಚಯವಾಯಿತು. ನಾನು ಯಾವತ್ತೋ ಕಲಿತಿದ್ದ ಫ್ರೆಂಚ್ ಅನ್ನು ಮತ್ತೆ ನೆನಪಿಸಿಕೊಳ್ಳತೊಡಗಿದೆ. ಯಾವತ್ತೋ ಒಂದು ದಿನ ಉಪಯೋಗಕ್ಕೆ ಬರಬಹುದೆಂಬುದು ನನ್ನ ಆಶಯವಾಗಿದ್ದರೂ ಈ ದ್ವೀಪದಲ್ಲಿ ಫ್ರೆಂಚ್ ಮಾತನಾಡುವ ಯಾರೊಬ್ಬರನ್ನು ನಾನು ನೋಡಿರಲಿಲ್ಲ. ನಗರಕ್ಕೆ ಹೋದಾಗ ಅಲ್ಲಲ್ಲಿ ಇಂಗ್ಲಿಷ್ ಮಾತನಾಡಬಹುದಾಗಿತ್ತು. ಕೆಲವರು ಇಟಾಲಿಯನ್ ಅಥವಾ ಜರ್ಮನ್ ಬಲ್ಲವರಿದ್ದರು. ಆದರೆ ಯಾರಿಗೂ ಫ್ರೆಂಚ್ ಬರುತ್ತಿರಲಿಲ್ಲ. 

ಮಾಡಲು ಯಾವುದೇ ಕೆಲಸವಿಲ್ಲದುದರಿಂದ ನಾವು ಎಲ್ಲೆಡೆಯೂ ತಿರುಗಾಡುತ್ತಿದ್ದೆವು. ನಾವು ಮೀನನ್ನು ಹಿಡಿಯಲು ವ್ಯರ್ಥ ಪ್ರಯತ್ನ ಮಾಡಿದೆವು. ಮೀನು ಇರಲಿಲ್ಲ ಎಂದಲ್ಲ. ಆದರೆ ನೀರು ಅದೆಷ್ಟು ತಿಳಿಯಾಗಿತ್ತು ಎಂದರೆ ಗಾಳಕ್ಕೆ ಕಟ್ಟಿದ್ದ ದಾರದಿಂದ ಹಿಡಿದು ಗಾಳವನ್ನು ಹಿಡಿದು ಕೂತಿದ್ದ ಮನುಷ್ಯರವೆರೆಗೆ ಎಲ್ಲವು ಮೀನಿಗೆ  ಸ್ಪಷ್ಟವಾಗಿ ಕಾಣುತ್ತಿತ್ತು . ಅಷ್ಟಾಗಿಯೂ ಗಾಳಕ್ಕೆ ಬಿದ್ದರೆ  ಅದೊಂದು ದಡ್ಡ ಮೀನಾಗಿರಬೇಕು.  ನಾನು  ಅಂಗಡಿಯಲ್ಲಿ ಒಂದಷ್ಟು ಬಣ್ಣಗಳನ್ನೂ , ಚಿತ್ರ ಬಿಡಿಸುವ ಹಾಳೆಯನ್ನೂ ತಂದು ಸುತ್ತಲಿನ ದೃಶ್ಯಗಳನ್ನೂ ಜನರನ್ನೂ ಚಿತ್ರಿಸತೊಡಗಿದೆ.  ಇಜುಮಿ ಪಕ್ಕದಲ್ಲಿ ನಾನು ಚಿತ್ರ ಬಿಡಿಸುವದನ್ನು ನೋಡುತ್ತಾ ಗ್ರೀಕ ಶಬ್ದಗಳನ್ನು ಉರುಹೊಡೆಯುತ್ತ ಕುಳಿತಿರುತ್ತಿದ್ದಳು.  ಕೆಲ ಸ್ಥಳೀಯರು ನಾನು ಚಿತ್ರ ಬಿಡಿಸುವದನ್ನು ನೋಡಲಿಕ್ಕೆ ಬರುತ್ತಿದ್ದರು. ಸಮಯ ಕಳೆಯಲು ಕೆಲವೊಮ್ಮೆ ನಾನು ಅವರ ರೇಖಾಚಿತ್ರಗಳನ್ನು ಬಿಡಿಸುತ್ತಿದ್ದೆ ಮತ್ತು ಇದೊಂದು  ತಕ್ಕ ಮಟ್ಟಿಗೆ ಜನಪ್ರಿಯವಾಗಿತ್ತು. ಕೆಲವೊಮ್ಮೆ ನಾನು ಅವರ ಭಾವಚಿತ್ರಗಳನ್ನು ನೀಡಿದಾಗ ಅವರು ನನಗೆ ಬಿಯರನ್ನು ಕುಡಿಯಲು ಕೊಡುತ್ತಿದ್ದರು. ಒಮ್ಮೆಯಂತೂ ಒಬ್ಬ ಮೀನುಗಾರ ನನಗೆ ಒಂದು ದೊಡ್ಡ ಆಕ್ಟೊಪಸ್ ಅನ್ನು ಉಡುಗೊರೆಯಾಗಿ ನೀಡಿದ್ದ.  

" ಈ ರೀತಿ ಭಾವಚಿತ್ರಗಳನ್ನು ಬಿಡಿಸಿಯೇ ನಾವು ಒಂದಷ್ಟು ಹಣ ಸಂಪಾದಿಸಬಹುದು " ಇಜುಮಿ ಯಾವಾಗಲೂ ಹೇಳುತ್ತಿದ್ದಳು. " ನೀನು ನಿಜಕ್ಕೂ ಸುಂದರವಾದ ಚಿತ್ರಗಳನ್ನು ರಚಿಸುತ್ತೀಯ ಮತ್ತು ನಾವು ಇದೊಂದು ವ್ಯಾಪಾರ ಮಾಡಬಹುದು. ಅದಲ್ಲದೆ ನೀನು ಜಪಾನಿ ಚಿತ್ರಗಾರ ಎಂದರೆ ಇನ್ನಷ್ಟು ಆಕರ್ಷಣೆ ಇರುತ್ತದೆ. "

ನಾನು ನಕ್ಕೆ ಆದರೆ ಅವಳು ಗಂಭೀರವಾಗಿದ್ದಳು.ಒಂದಷ್ಟು ಚಿತ್ರ ರಚಿಸುವ ಬ್ರಶ್ ಗಳನ್ನ ಹಿಡಿದು  ಗ್ರೀಸಿನ ದ್ವೀಪದಲ್ಲಿ ಅಡ್ಡಾಡುತ್ತ , ಜನರ ಚಿತ್ರ ರಚಿಸುತ್ತ , ಆಗಾಗ ಸಿಗುವ ಉಚಿತ ಬಿಯರನ್ನು ಕುಡಿಯುತ್ತ ಕಾಲ ಕಳೆಯುವದನ್ನು ನಾನು ಕಲ್ಪಿಸಿಕೊಂಡೆ.  ತೆಗೆದು ಹಾಕುವಂತಹ ಸಲಹೆಯೇನಲ್ಲ.     

"ಮತ್ತು ನಾನು ಜಪಾನಿನಿಂದ ಬರುವ ಪ್ರವಾಸಿಗರಿಗೆ ಮಾರ್ಗದರ್ಶಿಯಾಗಿರುತ್ತೇನೆ. " ಇಜುಮಿ ಮುಂದುವರೆಸಿದಳು  " ದಿನ ಕಳೆದಂತೆ ಜಪಾನಿನಿಂದ ಬರುವವರ ಸಂಖ್ಯೆಯೂ ಹೆಚ್ಚುತ್ತದೆ. ನಮ್ಮ ದಿನದ ಖರ್ಚಿಗೆ ಆಗುವಷ್ಟು ದುಡಿಮೆಯಾಗುತ್ತದೆ.  ಹಾಗಾಗಬೇಕು ಅಂದರೆ ನಾನು ಇನ್ನೂ ಸುಲಲಿತವಾಗಿ ಗ್ರೀಕ್ ಕಲಿಯಬೇಕು "

" ನಾವು ಏನನ್ನೂ ಮಾಡದೆಯೇ ಎರಡೂವರೆ ವರ್ಷ ಕಳೆಯಬಹುದು ಎಂದು ನಿನಗೆ ಅನಿಸುತ್ತದೆಯೇ ?" ನಾನು ಕೇಳಿದೆ.

" ಎಲ್ಲಿಯವರೆಗೆ ನಮ್ಮನ್ನು ಯಾರು ದೋಚುವದಿಲ್ಲವೋ ಅಥವಾ ನಾವಿಬ್ಬರು ಮಾರಣಾ೦ತಿಕ ಖಾಯಿಲೆಯಿಂದ ಬಳಲುವದಿಲ್ಲವೋ ಅಲ್ಲಿಯವರೆಗೆ ಸಾಧ್ಯ.  ಅನಿರೀಕ್ಷಿತ ಅವಘಢಗಳನ್ನು ಹೊರತು ಪಡಿಸಿದರೆ ಹೌದು ಸಾಧ್ಯ , ಆದರೂ ಎಲ್ಲದಕ್ಕೂ ಸಿದ್ಧವಾಗಿರುವದು ಒಳ್ಳೆಯದಲ್ಲವೇ  ?"
ಇಲ್ಲಿಯವರೆಗೆ ನಾನು ಯಾವತ್ತೂ ಆಸ್ಪತ್ರೆಗೆ ಹೋಗಿಲ್ಲ. ನಾನು ಹೇಳಿದೆ .
ಇಜುಮಿ ನನ್ನನ್ನು ದಿಟ್ಟಿಸಿದಳು . ತುಟಿಯನ್ನು ಕಚ್ಚುತ್ತ  " ಒಂದು ವೇಳೆ ನಾನು ಬಸಿರಾದರೆ ? " ಕೇಳಿದಳು "ಹೇಳು ಆಗ ಏನು ಮಾಡುತ್ತೀಯಾ ? ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಹೆಚ್ಚು ಕಡಿಮೆ ಆಗುವದು ಸಹಜ. ಆಗ ಕೈಯಲ್ಲಿರುವ ಹಣವೆಲ್ಲ ಖಾಲಿ "
" ಹಾಗೇನಾದರು ಆದರೆ ಮತ್ತೆ ಜಪಾನಿಗೆ ಹೋದರಾಯಿತು " ಉತ್ತರಿಸಿದೆ
"ನಿನಗೆ ಅರ್ಥವಾಗುತ್ತಿಲ್ಲ , ಅಲ್ಲವೇ ? ಅವಳು ಯಾವುದೇ ಭಾವನೆಯಿಲ್ಲದೆ ಹೇಳಿದಳು " ನಾವು ಮರಳಿ ಹೋಗುವಂತಿಲ್ಲ "
 
ಇಜುಮಿ ಅವಳ ಗ್ರೀಕ್ ಕಲಿಕೆಯನ್ನು ಮುಂದುವರೆಸಿದಳು ನಾನು ನನ್ನ ಚಿತ್ರಕಲೆಯನ್ನು. ಅದು ನನ್ನ ಜೀವನದ ಅತ್ಯಂತ ಪ್ರಶಾಂತವಾದ ಕಾಲ. ನಾನು ಸರಳವಾದುದ್ದನ್ನು ತಿನ್ನುತ್ತಿದ್ದೆವು ಮತ್ತು ಅತ್ಯಂತ ಕಡಿಮೆ ಬೆಲೆಯ ವೈನ್ ಕುಡಿಯುತ್ತಿದ್ದೆವು. ಪ್ರತಿ ದಿನ ಹತ್ತಿರದಲ್ಲೇ ಇದ್ದ ಒಂದು ಗುಡ್ಡವನ್ನು ಹತ್ತುತ್ತಿದ್ದೆವು. ಗುಡ್ಡದ ಮೇಲೆ ಒಂದು ಸಣ್ಣ ಹಳ್ಳಿಯಿತ್ತು ಮತ್ತು ಅಲ್ಲಿಂದ  ದ್ವೀಪದ ಸಮಸ್ತವೂ ಕಾಣಿಸುತ್ತಿತ್ತು. ಪ್ರತಿ ನಿತ್ಯದ ಈ ವ್ಯಾಯಾಮ ಮತ್ತು ತಾಜಾ ಹವೆ ನನ್ನ ದೇಹಕ್ಕೆ ಒಗ್ಗಿತ್ತು. ಸೂರ್ಯ ಮುಳುಗಿದ ಮೇಲೆ ದ್ವೀಪದಲ್ಲಿ ಮೌನ ಆವರಿಸುತ್ತಿತ್ತು ಮತ್ತು ಮೌನದಲ್ಲಿ ನಮ್ಮ ಪ್ರಣಯ ಆರಂಭವಾಗುತ್ತಿತ್ತು. ನಾವು ಅಂತ್ಯವಿಲ್ಲದ ವಿಷಯಗಳನ್ನು ಮಾತನಾಡುತ್ತಿದ್ದೆವು. ಅಲ್ಲಿ ಕೊನೆಯ ರೈಲು ತಪ್ಪುವ  ಚಿ೦ತೆ ಇರಲಿಲ್ಲ ಹಾಗೂ ಇವತ್ತು ಮನೆಯಲ್ಲಿ ತಡವಾಗಿದ್ದಕ್ಕೆ  ಯಾವ ಕಾರಣ   ಹೇಳಬೇಕು ಎನ್ನುವ ಯೋಚನೆಯಿರಲಿಲ್ಲ. ಬದುಕು ನಾವು ಅಂದುಕೊಂಡದ್ದಕ್ಕಿಂತ ಸುಂದರವಾಗಿತ್ತು.  

ನಿಧಾನಕ್ಕೆ  ಶರತ್ಕಾಲ ಶುರುವಾಗಿತ್ತು ಮತ್ತು ಚಳಿ ಸಣ್ಣಗೆ ಆವರಿಸುತ್ತಿತ್ತು. ಚಳಿಗಾಳಿ ಬೀಸುತ್ತಿತ್ತು. ಸಮುದ್ರದಲ್ಲಿ ಬಿಳಿಯ ಟೊಪ್ಪಿ ತೊಟ್ಟವರು ಕಾಣಿಸುತ್ತಿದ್ದರು.
 
ಈ ಸಮಯದಲ್ಲಿಯೇ ನಾವು ಮನುಷ್ಯರನ್ನು ತಿಂದಿದ್ದ ಬೆಕ್ಕುಗಳ ಸುದ್ದಿಯನ್ನು ಓದಿದ್ದು. ಅದೇ ಪೇಪರಿನಲ್ಲಿ ಜಪಾನಿನಲ್ಲಿ ಚಕ್ರವರ್ತಿಯ  ಹದಗೆಟ್ಟಿರುವದರ ಬಗ್ಗೆ ಸುದ್ದಿಯಿತ್ತು ಆದರೆ ನಾವು ಅದರೆಡೆಗೆ  ಹರಿಸದೆಯೇ ಅವತ್ತಿನ ಡಾಲರ್ ಬೆಲೆ ಎಷ್ಟಿದೆ ಎಂದು ನೋಡಿದೆವು. ಜಪಾನೀ ಯೆನ್ ಏರಿಕೆ ಆದಂತೆ ನಾವು ಶ್ರೀಮಂತರಾಗುತ್ತಿದ್ದೆವು.

"ಬೆಕ್ಕುಗಳ ಬಗ್ಗೆ ಹೇಳಬೇಕು ಅಂದರೆ "  ಕೆಲ  ದಿನಗಳ ನಂತರ ನಾನು ಮತ್ತೆ ಆ ಸುದ್ದಿಯನ್ನು ಎತ್ತಿದೆ " ನಾನು ಚಿಕ್ಕವನಾಗಿದ್ದಾಗ ನನ್ನ ಬಳಿ ಇದ್ದ ಬೆಕ್ಕು ಅತ್ಯಂತ ವಿಚಿತ್ರ ರೀತಿಯಲ್ಲಿ ಇದ್ದಕ್ಕಿದ್ದ ಹಾಗೆ ಒಂದು ದಿನ ಮಾಯವಾಗಿತ್ತು "

ವಿಷಯ ಇಜುಮಿಯ ಕುತೂಹಲವನ್ನು ಕೆರಳಿಸಿತು. ಅವಳು ಗ್ರೀಕ್ ಕಲಿಕೆಯ ಪುಸ್ತಕದಿಂದ ತಲೆಯೆತ್ತಿ ಕೇಳಿದಳು "ಹೇಗೆ?"

"ಬಹುಶ: ನಾನು ಎರಡೋ ಅಥವಾ ಮೂರನೇಯ ತರಗತಿಯಲ್ಲಿ ಇದ್ದೆ. ನಾವು ಕಂಪನಿ ಕೊಟ್ಟಿದ್ದ ಮನೆಯಲ್ಲಿ ಇದ್ದೆವು ಮತ್ತು ಮನೆಯ ಮುಂದೆ ದೊಡ್ಡ ಕೈತೋಟ ಇತ್ತು. ಕೈತೋಟದಲ್ಲಿ ಒಂದು ಪುರಾತನವಾದ ಪೈನ್ ಮರವಿತ್ತು. ಅದೆಷ್ಟು ಎತ್ತರವಾಗಿದ್ದಿತು ಎಂದರೆ   ತಲೆಯೆತ್ತು  ನೋಡಿದರೆ ಅದರ ತುದಿಯೇ ಕಾಣಿಸುತ್ತಿರಲಿಲ್ಲ. ಒಂದು ದಿನ ನಾನು ಕೈ ತೋಟದಲ್ಲಿ  ಕುಳಿತು ಓದುತ್ತಿದ್ದಾಗ ನಮ್ಮ ಕಂದು ಮಿಶ್ರಿತ ಬಣ್ಣದ ಬೆಕ್ಕು ತೋಟದಲ್ಲಿ ತನ್ನಷ್ಟಕ್ಕೆ ತಾನೇ ಎಗರುತ್ತಾ ಆಟವಾಡುತ್ತಿತ್ತು.  ಅದು ತನ್ನ ಆಟದಲ್ಲಿ ಅದೆಷ್ಟು ಮಗ್ನವಾಗಿತ್ತು ಎಂದರೆ ನಾನು ಅದನ್ನುಗಮನಿಸುತ್ತಿದ್ದೇನೆ ಎನ್ನುವದನ್ನು ಅದು ಮರೆತಿತ್ತು. ಅದನ್ನು ನೋಡುತ್ತಿದ್ದ  ಹಾಗೆ ನನಗೆ ಭಯವಾಗ ತೊಡಗಿತು.  ಬೆಕ್ಕು ಆವೇಶಕ್ಕೊಳಗಾದ ಹಾಗೆ ಜಿಗಿಯುತ್ತಿತ್ತು. ಅದರ ಮೈ ರೋಮಗಳು ನಿಟಾರನೆ ನಿಂತಿದ್ದವು. ನನಗೆ ಕಾಣಿಸದ ಅದೃಶ್ಯವಾದ ಯಾವುದೋ ಒಂದು  ಬೆಕ್ಕಿಗೆ ಗೋಚರಿಸುತ್ತಿರುವ ಹಾಗೆ.  ನಂತರ  ಬೆಕ್ಕು ಮರದ ಸುತ್ತ ವೇಗವಾಗಿ ಸುತ್ತಲಾರಂಭಿಸಿತು.   ಕೊನೆಗೆ ಇದ್ದಕಿದ್ದ ಹಾಗೆ ಬೆಕ್ಕು ಸುತ್ತುವದನ್ನು ನಿಲ್ಲಿಸಿ ತಲೆಯೆತ್ತಿ ಮರದ ತುತ್ತ ತುದಿಯನ್ನು ದಿಟ್ಟಿಸುತ್ತ ಮರವನ್ನು ಹತ್ತಲಾರಂಭಿಸಿತು. ನಾನು ತಲೆಯೆತ್ತಿ ನೋಡಿದಾಗ ಮರದ ಎತ್ತರದ ಕೊಂಬೆಗಳ ನಡುವೆ ಬೆಕ್ಕಿನ ಚಿಕ್ಕ ಮುಖ ಯಾವುದನ್ನೋ ಎವೆಯಿಕ್ಕದೆ ನೋಡುತ್ತಿರುವದು  ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ನಾನು ಅದರ  ಹೆಸರನ್ನು ಹಿಡಿದು ಕರೆಯಲಾರಂಭಿಸಿದೆ. ಆದರೆ ಅದು ನನ್ನ ಧ್ವನಿ ಕೇಳಿಸಿಲ್ಲವೇನೋ ಎನ್ನುವಂತಿತ್ತು. 
"ಬೆಕ್ಕಿನ ಹೆಸರೇನಾಗಿತ್ತು ?" ಇಜುಮಿ ಕೇಳಿದಳು 
"ಮರೆತು ಹೋಗಿದೆ " ನಾನು ಹೇಳಿದೆ " ನಿಧಾನವಾಗಿ ಸಂಜೆಯಾಗತೊಡಗಿತು. ಕತ್ತಲೆ ಆವರಿಸುತ್ತಿತ್ತು. ನಾನು ಬೆಕ್ಕು ಕೆಳಗೆ ಇಳಿದು ಬರುತ್ತದೆ ಎಂದು ತುಂಬಾ ಹೊತ್ತು ಕಾದು  ಕುಳಿತಿದ್ದೆ.  ಕೊನೆಗೊಮ್ಮೆ ದಟ್ಟ ಕತ್ತಲೆ ಹರಡಿತು ಮತ್ತು ಆ ಬೆಕ್ಕನ್ನು ನಾವು  ಮತ್ತೆ ಯಾವತ್ತೂ ನೋಡಲಿಲ್ಲ. "

"ಅದೇನು ವಿಚಿತ್ರವಲ್ಲ " ಇಜುಮಿ ನುಡಿದಳು " ಬೆಕ್ಕು ಅನೇಕ ಸಲ ಹಾಗೆಯೇ ಮಾಯವಾಗುತ್ತವೆ. ಅದರಲ್ಲೂ ಬೆದೆಗೆ ಬಂದಾಗ ತೀವ್ರ ಉದ್ವೇಗಕ್ಕೆ ಒಳಗಾಗುತ್ತವೆ ಮತ್ತು ಮರಳಿ ಮನೆಗೆ ಹೋಗುವದು ಹೇಗೆ ಅನ್ನುವದನ್ನು ಮರೆತು ಬಿಡುತ್ತವೆ. ಬಹುಶ : ಬೆಕ್ಕು ನೀನಿಲ್ಲದಾಗ ಮರದಿಂದ  ಕೆಳಗೆ ಇಳಿದು ಬಂದು ಬೇರೆಲ್ಲೋ ಹೋಗಿರಬಹುದು "

"ಇರಬಹುದೇನೋ " ನಾನು ಹೇಳಿದೆ " ನಾನಾಗ ಇನ್ನೂ ಚಿಕ್ಕವನು. ಹಾಗಾಗಿ ಬಹುಶ: ಬೆಕ್ಕು ಮರದ ಮೇಲೆ ಬದುಕಲು ನಿರ್ಧರಿಸಿದೆ  ಎಂದು ಕೊಂಡಿದ್ದೆ. ಅದು ಕೆಳಕ್ಕೆ ಬರದಿರಲು ಏನೋ ಬಲವಾದ ಕಾರಣವಿರಬೇಕು. ಪ್ರತಿ ದಿನ ನಾನು ತೋಟದಲ್ಲಿ ಕುಳಿತು ಮರವನ್ನು ದಿಟ್ಟಿಸುತ್ತಿದ್ದೆ , ಮರದ ಕೊಂಬೆಗಳೆಡೆಯಿಂದ ಬೆಕ್ಕಿನ ಮುಖ ಕಾಣಿಸಬಹುದು ಎನ್ನುವ ಆಶಾಭಾವ "
ಇಜುಮಿ ಕಥೆಯಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದಳು. ಅವಳು ಎರಡನೇ ಸಿಗರೇಟನ್ನು ಹಚ್ಚಿ ತಲೆಯೆತ್ತಿ ನನ್ನನ್ನು ನೋಡಿದಳು.
" ನಿನಗೆ ಯಾವತ್ತಾದರೂ ನಿನ್ನ ಮಗನ ನೆನಪು  ಬರುತ್ತದೆಯೇ ?"  ಕೇಳಿದಳು .
ನನಗೆ ಹೇಗೆ ಉತ್ತರಿಸುವದು ಎಂದು ಗೊತ್ತಾಗಲಿಲ್ಲ. " ಕೆಲವೊಮ್ಮೆ " ನಾನು ಪ್ರಾಮಾಣಿಕವಾಗಿ ಹೇಳಿದೆ . " ಯಾವಾಗಲೂ ಅಲ್ಲ . ಆದರೆ ಕೆಲವೊಮ್ಮೆ ಅವನ ನೆನಪು ಸುಳಿಯುತ್ತದೆ "
"ನಿನಗೆ ಅವನನ್ನು ನೋಡಬೇಕು ಅನಿಸುತ್ತದೆಯೇ  ?"
"ಕೆಲವೊಮ್ಮೆ "  ನಾನು ಉತ್ತರಿಸಿದೆ.  ಹಾಗೆ ನನಗೆ ಅನಿಸುತ್ತದೆ ಎಂದು ನಾನು ಭಾವಿಸಿಕೊಂಡಿದ್ದೆ. ನಾನು ಮಗನೊಟ್ಟಿಗೆ ಇದ್ದಾಗ ಈ ಜಗತ್ತಿನಲ್ಲಿ ನಾನು ಇಲ್ಲಿಯವರೆಗೆ ನೋಡಿದ್ದರಲ್ಲಿ ಸುಂದರವಾದದ್ದು ಎಂದರೆ ನನ್ನ ಮಗ ಅನಿಸುತ್ತಿತ್ತು. ನಾನು ತಡವಾಗಿ ಮನೆಗೆ ಮರಳಿದ್ದಾಗಲೆಲ್ಲ ಮೊದಲು ಮಗನ ಕೋಣೆಗೆ ಹೋಗಿ ಅವನ ನಿದ್ರಿಸಿದ ಮುಖವನ್ನು ನೋಡಿ ನಂತರ ನಮ್ಮ ಕೋಣೆಗೆ ಹೋಗುತ್ತಿದ್ದೆ.  ಅವನನ್ನು ಗಟ್ಟಿಯಾಗಿ ಅಪ್ಪಿ ಹಿಡಿಯಬೇಕು ಅನಿಸುತ್ತಿತ್ತು. ಈಗ ಅವನ ಬಗೆಗಿನ ಎಲ್ಲವೂ -  ಅವನ ಮುಖ , ಅವನ ಧ್ವನಿ , ಅವನ ಹಾವ ಭಾವ ಎಲ್ಲವು ದೂರದ ನಾಡಿನಲ್ಲಿತ್ತು.   ಈಗ ಅವನ ಬಗ್ಗೆ ಸ್ಪಷ್ಟವಾಗಿ ಜ್ಞಾಪಕಕ್ಕೆ ಬರುವದು ಎಂದರೆ ಅವನ ಸೋಪಿನ ಪರಿಮಳ ಮಾತ್ರ.  ಅವನಿಗೆ ಸ್ನಾನ ಮಾಡಿಸುವದು ನನ್ನ ಇಷ್ಟದ ಕೆಲಸವಾಗಿತ್ತು. ನನ್ನ ಹೆಂಡತಿ ಮಗನ ಕೋಮಲ ಚರ್ಮಕ್ಕೆ ಅಲರ್ಜಿಯಾಗದಿರಲಿ ಎಂದು ಅವನಿಗೆ ಮಾತ್ರ ಒಂದು ವಿಶೇಷ ಸೋಪನ್ನು ತರುತ್ತಿದ್ದಳು. ಈಗ ಮಗನೆಂದರೆ ಕೇವಲ ಸೋಪಿನ ಪರಿಮಳ ಮಾತ್ರ.
 
" ನಿನಗೆ ಜಪಾನಿಗೆ ಮರಳಿ ಹೋಗಬೇಕು ಅನ್ನಿಸುತ್ತಿದ್ದರೆ ನಾನು ತಡೆಯುವದಿಲ್ಲ." ಇಜುಮಿ ಹೇಳಿದಳು " ನನ್ನ ಬಗ್ಗೆ ಚಿ೦ತೆ ಮಾಡಬೇಡ. ನಾನು ಹೇಗೋ ಬದುಕುತ್ತೇನೆ. "

ನಾನು ತಲೆಯಾಡಿಸಿದೆ . ಅವಳು ಹೇಳಿರುವದು ಅಸಾಧ್ಯವಾದ ಮಾತು ಎನ್ನುವದು ನನಗೆ ಗೊತ್ತಿತ್ತು.

"ಬಹುಶ : ನಿನ್ನ ಮಗನೂ ದೊಡ್ಡವನಾದ ಮೇಲೆ ನಿನ್ನ ಬಗ್ಗೆ ಹಾಗೆಯೇ ಭಾವಿಸಬಹುದೇನೋ " ಇಜುಮಿ ನುಡಿದಳು "ನೀನು ಭಾವಿಸಿದಂತೆ, ಪೈನ್ ಮರದ ತುದಿಯಲ್ಲಿ ಇದ್ದಕ್ಕಿದ್ದ ಹಾಗೆ  ಮಾಯವಾದ ಬೆಕ್ಕು "

ನಾನು ನಕ್ಕೆ . "ಇರಬಹುದೇನೋ "

ಇಜುಮಿ ಸಿಗರೇಟನ್ನು ಆಯ್ಶ್ ಟ್ರೈ ನಲ್ಲಿ ಒತ್ತಿದಳು. " ನಡಿ.  ಮನೆಗೆ ಹೋಗಿ ಒಬ್ಬರನ್ನೊಬ್ಬರು ಮುದ್ದಿಸೋಣ  "
"ಇದಿನ್ನೂ ಹಗಲು" ನಾನು
"ಆದರೇನು ?"
"ಇಲ್ಲ ಏನಿಲ್ಲ "

 ಆಮೇಲೆ ಮಧ್ಯರಾತ್ರಿ ನನಗೆ ಎಚ್ಚರವಾದಾಗ ಇಜುಮಿ ಇರಲಿಲ್ಲ.  ನಾನು ಹಾಸಿಗೆಯ ಪಕ್ಕದಲ್ಲಿದ್ದ ಗಡಿಯಾರವನ್ನು  ನೋಡಿದೆ.  ಹನ್ನೆರಡು ಮೂವತ್ತು. ತಡಕಾಡುತ್ತಾ ಲ್ಯಾ೦ಪ್ ಹಚ್ಚಿದೆ. ರೂಮಿನ ಸುತ್ತ ದೃಷ್ಟಿ  ಹಾಯಿಸಿದೆ.   ನಾನು ಗಾಢ  ನಿದ್ರೆಯಲ್ಲಿದ್ದಾಗ ಯಾರೋ ಕದ್ದು ಒಳ ನುಗ್ಗಿ ಸುತ್ತಲೂ ನಿಶ್ಯಬ್ದವನ್ನು  ಹರಡಿಟ್ಟು  ಹೋದ ಹಾಗೆ ಎಲ್ಲವೂ ಸ್ತಬ್ದವಾಗಿದ್ದವು . ಆಯ್ಶ್ ಟ್ರೈ ನಲ್ಲಿ ಸುಟ್ಟಿದ್ದ ಎರಡು ಸಿಗರೇಟುಗಳು ಬಿದ್ದಿದ್ದವು. ಒಂದು ಪ್ಯಾಕ್ ಸಿಗರೇಟು ಖಾಲಿಯಾಗಿ ಬಿದ್ದಿತ್ತು. ನಾನು ಎದ್ದು ಹೊರಗೆ ಬಂದು ಹಾಲಿನಲ್ಲಿ ಹುಡುಕಾಡಿದೆ. ಇಜುಮಿ ಅಲ್ಲಿರಲಿಲ್ಲ. ಅವಳು ಅಡುಗೆ ಮನೆಯಲ್ಲಾಗಲಿ , ಬಚ್ಚಲು ಮನೆಯಲ್ಲಾಗಲಿ ಇರಲಿಲ್ಲ. ನಾನು ಬಾಗಿಲು ತೆರೆದು ಮನೆಯ ಹೊರಗೆ ಹುಡುಕಾಡಿದೆ. ವರಾಂಡದ ಬೆಳದಿಂಗಳಲ್ಲಿ  ಎರಡು ಪ್ಲಾಸ್ಟಿಕ್ ಕುರ್ಚಿಗಳು  ಕಾಣಿಸಿತು. " ಇಜುಮಿ " ನಾನು ಕೂಗಿ ಕರೆದೆ. ಉತ್ತರವಿಲ್ಲ. ನಾನು ಮತ್ತೊಮ್ಮೆ ಜೋರಾಗಿ ಅವಳನ್ನು  ಕೂಗಿ ಕರೆದೆ. ನನ್ನ ಹೃದಯ ಜೋರಾಗಿ ಹೊಡೆದುಕೊಳ್ಳತೊಡಗಿತು . ಅದು ನನ್ನದೇ ಹೃದಯದ ಶಬ್ದವೇ ? ಉಚ್ಚ ಸ್ವರದ ಅದು ಕೃತಕವಾಗಿತ್ತು.  ಸಮುದ್ರದ ಅಲೆಗಳ ಮೇಲಿನಿಂದ ಹಾದು  ಬಂದ ಸಣ್ಣನೆಯ ತಂಗಾಳಿ ಮನೆಯ ಹೊರಗಿನ  ಹುಲ್ಲಿನ ತುದಿಯನ್ನು ಅಲ್ಲಾಡಿಸಿತು. ನಾನು ಬಾಗಿಲನ್ನು ಹಾಕಿಕೊಂಡು ಮನೆಯ ಒಳಗೆ ಬಂದು , ಅಡುಗೆಯ ಮನೆಗೆ ಬಂದು ಒಂದು ಗ್ಲಾಸ್ ವೈನನ್ನು ಹೀರಿ  ನನ್ನನ್ನು ನಾನೇ ಸಮಾಧಾನ ಪಡಿಸಲು ಪ್ರಯತ್ನಿಸಿದೆ. 
 
ಪ್ರಕಾಶಮಾನವಾಗಿದ್ದ ಬೆಳದಿಂಗಳು ಅಡುಗೆ ಮನೆಯ ಕಿಟಕಿಯಿಂದ ಹಾದು  ಬಂದು ಗೋಡೆಯ ಮೇಲೆ ಚಿತ್ರ ವಿಚಿತ್ರವಾದ ನೆರಳುಗಳನ್ನು ನಿರ್ಮಿಸುತ್ತಿತ್ತು.  ಸುತ್ತಲಿನ ವಾತಾವರಣ  ಯಾವುದೋ ಹೊಸ ಪ್ರಯೋಗಾತ್ಮಕ ನಾಟಕವೊಂದರ ರಂಗಸಜ್ಜಿಕೆಯಂತೆ ಭಾಸವಾಗುತ್ತಿತ್ತು. ನನಗೆ ಇದ್ದಕ್ಕಿದ್ದ ಹಾಗೆ ಹೊಳೆಯಿತು. ಬೆಕ್ಕು ಪೈನ್ ಮರದ ತುತ್ತ ತುದಿಯಲ್ಲಿ ಮಾಯವಾಗಿದ್ದ ರಾತ್ರಿ ಕೂಡ ಹೀಗೆಯೇ ಇದ್ದಿತ್ತು. ಆಗಸದಲ್ಲಿ  ಮೋಡವಿರಲಿಲ್ಲ , ಹೊಳೆಯುತ್ತಿದ್ದ ಪೂರ್ಣ ಚಂದ್ರ. ಅವತ್ತು ಊಟವಾದ ಮೇಲೆ ನಾನು ಮತ್ತೆ ವರಾಂಡದಲ್ಲಿ ನಿಂತು ಬೆಕ್ಕಿಗಾಗಿ ಹುಡುಕಾಡಿದ್ದೆ. ರಾತ್ರಿ ಸರಿದಂತೆ ಬೆಳದಿಂಗಳು ಪ್ರಕಾಶಮಾನವಾಗುತ್ತಿತ್ತು . ವಿವರಿಸಲಾಗದ ಯಾವುದೋ  ಕಾರಣ -  ನನಗೆ ಪೈನ್ ಮರದಿಂದ ಕಣ್ಣನ್ನು ಕೀಳಲಾಗಲಿಲ್ಲ.  ಕ್ಷಣ ಕಾಲ ಮರದ ಕೊಂಬಿಯ ನಡುವೆ ನನಗೆ ಬೆಕ್ಕಿನ ಕಣ್ಣುಗಳು ಗೋಚರವಾಗಿತ್ತು ಅಥವಾ ಗೋಚರವಾದಂತಹ  ಭ್ರಮೆ.

ನಾನು ಜೀನ್ಸ್ ಮೇಲೆ ಸ್ವೇಟರನ್ನು ಧರಿಸಿದೆ, ಮೇಜಿನ ಮೇಲಿದ್ದ ನಾಣ್ಯಗಳನ್ನು ಜೇಬಿನಲ್ಲಿಟ್ಟುಕೊಂಡು ಹೊರ ನಡೆದೆ. ಬಹುಶ: ಇಜುಮಿಗೆ ನಿದ್ರೆ ಬರದೇ ಹೊರಗೆಲ್ಲೋ ಸುತ್ತಾಡಲು ಹೋಗಿರಬೇಕು. ಹೌದು , ಹಾಗೆಯೇ ಆಗಿರಬೇಕು. ಗಾಳಿ ಸಂಪೂರ್ಣವಾಗಿ ಸ್ತಬ್ದವಾಗಿತ್ತು. ರಸ್ತೆಗೆ ತಾಕುತ್ತಿದ್ದ ನನ್ನ ಬೂಟಿನ ಶಬ್ದ ಯಾವುದೋ ಸಿನಿಮಾದ ಹಿನ್ನೆಲೆ ಸಂಗೀತದಂತೆ ಕೇಳಿಸುತ್ತಿತ್ತು. ಇಜುಮಿ ಬಹುಶ: ಬಂದರಿನತ್ತ ಹೋಗಿರಬೇಕು. ಬಂದರಿಗೆ ಹೋಗಲು ಒಂದೇ ದಾರಿ. ಹಾಗಾಗಿ ಮಾರ್ಗ ಮಧ್ಯೆ ಅವಳನ್ನು ನಾನು ಕಾಣದೇ ಇರಲಿಕ್ಕೆ ಸಾಧ್ಯವಿಲ್ಲ. ಹಾದಿಯ ಅಂಚಿನಲ್ಲಿದ್ದ ಮನೆಗಳ ದೀಪಗಳು ಆರಿದ್ದವು. ರಸ್ತೆಯ ಮೇಲೆ  ಚೆಲ್ಲಿದ್ದ ಬೆಳದಿಂಗಳಿನಿಂದ ರಸ್ತೆ ಸಮುದ್ರದ ತಳದಂತೆ ತೋರುತ್ತಿತ್ತು. 

ಬಂದರಿಗೆ ಹೋಗುವ ದಾರಿಯಲ್ಲಿ ಅರ್ಧ ಸಾಗಿದಾಗ ನನಗೆ ದೂರದಲ್ಲೆಲ್ಲೋ ಸಣ್ಣಗೆ ಸಂಗೀತವೊಂದು ಕೇಳಿ ಮತ್ತೆ  ಸ್ತಬ್ಧವಾಯಿತು.  ಮೊದ  ಮೊದಲು ಗಾಳಿ ನನ್ನ ಕಿವಿಗೆ ತಾಕಿ ಸೃಷ್ಟಿಸುತ್ತಿರುವ ಭ್ರಮಾ ಶಬ್ದವೆಂದು ಅಂದುಕೊಂಡೆ. ಆದರೆ ಗಮನವಿಟ್ಟು ಕೇಳಿದಾಗ ರಾಗವಿನ್ಯಾಸವೊಂದು ನನ್ನ ಅನುಭವಕ್ಕೆ ಬಂದಿತು. ನಾನು ಉಸಿರನ್ನು ಬಿಗಿ ಹಿಡಿದು ಆಲಿಸಿದೆ. ಸಂದೇಹವೇ ಇಲ್ಲ . ಸಂಗೀತವಿದು. ಯಾರೋ ಯಾವುದೋ ವಾದ್ಯವನ್ನು ನುಡಿಸುತ್ತಿದ್ದಾರೆ .  ಧ್ವನಿವರ್ಧಕದ ಹಂಗಿಲ್ಲದ ಜೀವಂತ ಸಂಗೀತ. ಆದರೆ ಅದು ಯಾವ ವಾದ್ಯ ? 'ಜೊರ್ಬ ದ ಗ್ರೀಕ್'  ಸಿನಿಮಾದಲ್ಲಿ  ನಲ್ಲಿ ಆ೦ಟೊನಿ ಕ್ವಿನ್ ನುಡಿಸಿದ್ದ   ಮ್ಯಾ೦ಡೋಲಿನ್ ಇರಬಹುದೇ ?  ಅಥವಾ ಬೌಜೌಕಿ ? ನುಡಿಸುತ್ತಿರುವದೆಲ್ಲಿ ?
  
ಸಂಗೀತ ನಾವು ಪ್ರತಿ ದಿನ ಹತ್ತುತ್ತಿದ್ದ  ಗುಡ್ಡದ  ತುದಿಯಲ್ಲಿದ್ದ ಹಳ್ಳಿಯಿಂದ ಬರುತ್ತಿರುವ ಹಾಗೆ ತೋರಿತು. ನಾನು ಚೌಕಿಯಲ್ಲಿ ನಿಂತು ಯಾವ ಕಡೆ ಹೋಗುವದು, ಏನು ಮಾಡುವದು  ಎಂದು ಯೋಚಿಸಿದೆ.   ಬಹುಶ: ಇಜುಮಿ ಸಹ ಇಲ್ಲಿಯೇ ನಿಂತು ಸಂಗೀತವನ್ನು ಆಲಿಸಿರಬಹುದು ಮತ್ತು ಅವಳಿಗೆ ಈ ಸಂಗೀತ ಕೇಳಿಸಿದ್ದೆ ಹೌದಾಗಿದ್ದರೆ ಅವಳು ಅದನ್ನು ಹಿಂಬಾಲಿಸಿಕೊಂಡು ಹೋಗಿರುತ್ತಾಳೆ .

ನಾನು ತಿರುಗಿ ಗುಡ್ಡದತ್ತ ತಿರುಗಿ ನನಗೆ ಸುಪರಿಚಿತವಾಗಿದ್ದ ಆ ಹಾದಿಯಲ್ಲಿ ಗುಡ್ಡವನ್ನು ಹತ್ತತೊಡಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಮರಗಳಿರಲಿಲ್ಲ ಬದಲಾಗಿ ಆಳೆತ್ತರಕ್ಕೆ ಬೆಳೆದಿದ್ದ ಪೊದೆಗಳಿದ್ದವು. ನಾನು ಮುಂದೆ ಮುಂದೆ ಹೋದಂತೆಲ್ಲ ಸಂಗೀತ ಜೋರಾಗಿ , ರಾಗವನ್ನು ಗುರುತಿಸುವಷ್ಟು ಸ್ಪಷ್ಟವಾಗಿ ಕೇಳಿಸತೊಡಗಿತು.   ಅದಕ್ಕೆ ಹಬ್ಬವೊಂದರ  ಅಲಂಕಾರಿಕತೆಯಿತ್ತು.  ನಾನು ಊರ ಹಬ್ಬವಿರಬಹುದು ಎಂದುಕೊಂಡೆ. ಅವತ್ತು ಬೆಳಿಗ್ಗೆ ಬಂದರಿನಲ್ಲಿ ಒಂದು ಮದುವೆ ಸಮಾರಂಭವನ್ನು ನೋಡಿದ್ದೆವು. ಬಹುಶ: ಅದೇ ಸಮಾರಂಭದ ಮುಂದುವರಿಕೆಯಿರಬಹುದು.

ಆಗ ಯಾವುದೇ ಮುನ್ಸೂಚನೆಯಿಲ್ಲದೆ ನಾನು ಕಳೆದು ಹೋದೆ.

ಬಹುಶ : ಕಾರಣ ಬೆಳದಿಂಗಳಿರಬೇಕು ಅಥವಾ ಆ ಸಂಗೀತವಿರಬೇಕು. ನಾನಿಡುತ್ತಿದ್ದ  ಪ್ರತಿ ಹೆಜ್ಜೆಗೂ ನಾನು ಉಸುಕಿನಲ್ಲಿ ಇಂಚಿ೦ಚೆ  ಮುಳುಗುತ್ತಾ ನನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವಂತೆ ಭಾಸವಾಗತೊಡಗಿತು . ಅವತ್ತು ಈಜಿಪ್ಟ ಮೇಲೆ ವಿಮಾನದಲ್ಲಿ  ಉಕ್ಕಿ ಬಂದಿದ್ದು ಇದೇ ಭಾವನೆ.  ಬೆಳದಿಂಗಳಲ್ಲಿ ಹೆಜ್ಜೆ ಹಾಕುತ್ತಿರುವವನು ನಾನಲ್ಲ. ಇಲ್ಲಿ ನಿಂತಿರುವದು ನಾನಲ್ಲ ಬದಲಾಗಿ  ಪ್ಲಾಸ್ಟರಿನಲ್ಲಿ ನಿರ್ಮಿಸಿದ ನನ್ನ  ಪ್ರತಿಕೃತಿ. ನಾನು ಕೈಯಿಂದ ಮುಖವನ್ನು ಉಜ್ಜಿಕೊಂಡೆ. ಅದು ನನ್ನ ಮುಖವಲ್ಲ. ನನ್ನ ಕೈ ಕೂಡ ನನ್ನದಲ್ಲ . ನನ್ನ ಹೃದಯ ತೀವ್ರವಾಗಿ ಬಡಿಯುತ್ತ ರಕ್ತವನ್ನು ಅಸಾಧ್ಯ ವೇಗದಲ್ಲಿ ರಕ್ತನಾಳಕ್ಕೆ ದೂಡುತ್ತಿತ್ತು. ಈ ದೇಹ ಪ್ಲಾಸ್ಟರಿನ ಒಂದು ಗೊಂಬೆ. ವೂಡೂ ಮಾಟದಲ್ಲಿ ಬಳಸುವಂತಹದೇ ಒಂದು ಗೊಂಬೆ. ಯಾರೋ ಮಾಂತ್ರಿಕ ಇದಕ್ಕೆ ಜೀವ ತುಂಬಿದ್ದಾನೆ ಅಷ್ಟೇ.  ಈ ದೇಹಕ್ಕೆ ಜೀವಂತಿಕೆಯಿಲ್ಲ. ನನ್ನ ದೇಹ ಯಾ೦ತ್ರಿಕವಾಗಿ ಸಾಗುತ್ತಿತ್ತು. ಯಾವುದೋ ಆಟದ ಗೊಂಬೆ ನಾನು .

ಹಾಗಾದ್ರೆ ನಿಜವಾದ  ನಾನು ಎಲ್ಲಿ ? ನಾನು ಯೋಚಿಸಿದೆ.

ಇದ್ದಕ್ಕಿದ್ದ ಹಾಗೆ ಇಜುಮಿಯ ಧ್ವನಿ ಕೇಳಿಸಿತು. 'ನಿಜವಾದ ನಿನ್ನನ್ನು ಆ ಬೆಕ್ಕುಗಳು ತಿಂದು ಹಾಕಿವೆ.  ನೀನು ಈಗ  ಇಲ್ಲಿ ನಿಂತಿರುವಾಗ ಅಲ್ಲಿ ಆ ಹಸಿದ ಬೆಕ್ಕುಗಳು ಅಳಿದುಳಿದ ರಕ್ತ ಮಾಂಸ ಮಜ್ಜೆಗಳನ್ನೂ ತಿಂದು ಹಾಕಿವೆ .  ಈಗ ಉಳಿದಿರುವದು  ಕೇವಲ ಮೂಳೆಗಳು ಮಾತ್ರ. '

ನಾನು ಸುತ್ತಲೂ ನೋಡಿದೆ.  ಧ್ವನಿ  ಭ್ರಮೆ ಮಾತ್ರ.  ಸುತ್ತಲಿರುವದು ಆಳೆತ್ತರದ ಪೊದೆ ಮತ್ತು ಅವುಗಳ ನೆರಳುಗಳು ಮಾತ್ರ. ಧ್ವನಿಯಿರುವದು ನನ್ನ ತಲೆಯಲ್ಲಿ.

'ಈ ರೀತಿಯ  ಕೆಟ್ಟ ವಿಚಾರಗಳನ್ನು ನಿಲ್ಲಿಸಬೇಕು'  ನನ್ನಷ್ಟಕ್ಕೆ ಹೇಳಿಕೊಂಡೆ. ಸಮುದ್ರದಲ್ಲಿ ಎದ್ದು ಬರುವ ರಕ್ಕಸ ಅಲೆಯಿಂದ ತಪ್ಪಿಸಿಕೊಳ್ಳಲು ನಾನು ಕಲ್ಲೊಂದರ ಬುಡವನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಈ ಅಲೆ  ಕೂಡ ಹಾದು  ಹೋಗುತ್ತದೆ. ನಾನು ಅನಗತ್ಯವಾಗಿ ವಿಚಾರ ಮಾಡುತ್ತಿದ್ದೇನೆ ಮತ್ತು ಈಗ ನನಗೆ ಆಯಾಸವಾಗಿದೆ.  ಮಿಥ್ಯವಲ್ಲದ ಯಾವುದನ್ನಾದರೂ ಹಿಡಿದುಕೊ. ಅದು ಯಾವುದೇ ಇರಲಿ.  ಸತ್ಯವಾಗಿರುವ ಯಾವುದನ್ನಾದರೂ , ಕೃತಕವಲ್ಲದ ಯಾವುದನ್ನಾದರೂ ಹಿಡಿದುಕೊ. ನನಗೆ ನಾನೇ ಹೇಳಿಕೊಂಡೆ. ಜೇಬಿಗೆ ಕೈ ಹಾಕಿ ನಾಣ್ಯಗಳನ್ನು ತೆಗೆದೆ . ಅವು ಬೆವರಿನಿಂದ ಒದ್ದೆಯಾಗಿದ್ದವು. 

ನಾನು ಬೇರೆ ಏನನ್ನಾದರೂ ಯೋಚಿಸಲು ಪ್ರಯತ್ನಿಸಿದೆ.  ಜಪಾನಿನಲ್ಲಿದ್ದ ನನ್ನ ಅಪಾರ್ಟ್ ಮೆ೦ಟ್ ,  ನಾನು ಬಿಟ್ಟು ಬಂದಿದ್ದ ಕ್ಯಾಸೆಟ್ ಗಳು . ನಾನು ಬಹಳ ವರ್ಷಗಳಿಂದ ಸಂಗ್ರಹಿಸಿಟ್ಟುಕೊಂಡಿದ್ದ ಜಾಜ್ ಸಂಗೀತದ ಕ್ಯಾಸೆಟ್ . ಬಹುತೇಕ ಮರು ಮುದ್ರಣವಿಲ್ಲದ ಹಳೆಯ ಆ ಕ್ಯಾಸೆಟ್ ಗಳು ಈಗ  ಲಭ್ಯವಿರಲಿಲ್ಲ. ನಾನು ಸಾಕಷ್ಟು ಸಮಯ ಹಣ ಎರಡನ್ನೂ ವ್ಯಯಿಸಿ ಸಂಗ್ರಹ ಮಾಡಿದ್ದೆ. ಅಂಗಡಿಗಳನ್ನು ಸುತ್ತಿ, ಇನ್ನಿತರ ಸಂಗ್ರಹಗಾರರ ಜೊತೆಗೆ ಅದಲುಬದಲು ಮಾಡಿಕೊಂಡು ನಿಧಾನಕ್ಕೆ ನನ್ನ ಸಂಗ್ರಹಾಗಾರವನ್ನು ಬೆಳೆಸಿದ್ದೆ. ನನ್ನಲ್ಲಿರುವ ಬಹುತೇಕ ಕ್ಯಾಸೆಟುಗಳು ಅತ್ಯುನ್ನತ ದರ್ಜೆಯದಾಗಿರಲಿಲ್ಲ. ಆದರೆ ಆ ಹಳೆಯ , ಮಾಸಿದ ಕ್ಯಾಸೆಟುಗಳು ಕಟ್ಟಿಕೊಡುವ ಮಸುಕು ಮಸುಕಾದ ಆಪ್ತ ಲೋಕ ನನಗಿಷ್ಟವಾಗುತ್ತಿತ್ತು.  ಇರುವುದೆಲ್ಲವೂ ಅತ್ಯುನ್ನತ ದರ್ಜೆಯದಾಗಿದ್ದರೆ ಪ್ರಪಂಚ ಅತ್ಯಂತ ಬೇಸರ ತರಿಸುವದಿಲ್ಲವೇ ?  ನನ್ನ ಕ್ಯಾಸೆಟ್ ಸಂಗ್ರಹದ ಪ್ರತಿ ಕ್ಯಾಸೆಟ್ಟಿನ ವಿವರವೂ ನನ್ನ ಅಂಗೈಗೆ ಬಂದು, ಕೈ ಭಾರವಾಯಿತು.  

ಆದರೆ ಈಗ ಅವೆಲ್ಲವೂ ಶಾಶ್ವತವಾಗಿ ನನ್ನಿಂದ ದೂರವಾಗಿತ್ತು ಮತ್ತು ಅವೆಲ್ಲವನ್ನೂ ನಾನೇ ಸ್ವತಃ ನನ್ನಿಂದ ಅಳಿಸಿ ಹಾಕಿದ್ದೆ. ನನ್ನ ಜೀವನದಲ್ಲಿ ಮತ್ತೆಂದೂ ನಾನು ಆ ಕ್ಯಾಸೆಟುಗಳನ್ನು ಕೇಳಲಾರೆ.

ನಾನು ಮೊದಲ ಸಲ ಇಜುಮಿಗೆ ಮುತ್ತಿಕ್ಕಿದಾಗ ಮೂಗಿಗೆ ತಾಕಿದ ತಂಬಾಕಿನ ವಾಸನೆಯನ್ನು ನೆನಪಿಸಿಕೊಂಡೆ . ಅವಳ ತುಟಿಯ , ನಾಲಿಗೆಯ ಬೆಚ್ಚನೆಯ ಸ್ಪರ್ಶ. ನಾನು ಕಣ್ಮುಚ್ಚಿದೆ. ನನಗೆ ಅವಳ ಸಾನಿಧ್ಯ ಬೇಕು ಅನ್ನಿಸತೊಡಗಿತು. ನನಗೆ ಅವಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕಿತ್ತು. ಈಜಿಪ್ಟಿನ ಮೇಲೆ ವಿಮಾನ ಹಾರುವಾಗ ಅವಳು ಹಿಡಿದುಕೊಂಡಂತೆ ಆದರೆ ಮತ್ತೆಂದೂ ಬಿಡದಂತೆ  .

ಕೊನೆಗೂ ಅಲೆ ಹಾದು  ಹೋಯಿತು  ಅದರೊಟ್ಟಿಗೆ ಸಂಗೀತವೂ ಸಹ .

ಅವರು ವಾದ್ಯವನ್ನು ನುಡಿಸುವದನ್ನು ನಿಲ್ಲಿಸಿದರೇ ? ಇರಬಹುದೇನೋ . ಇಷ್ಟಕ್ಕೂ ರಾತ್ರಿ ಒಂದು ಗಂಟೆಯ ಸಮಯವಿದು ಅಥವಾ ಅಲ್ಲಿ ಯಾವುದೇ ಸಂಗೀತವಿರಲಿಲ್ಲವೇನೋ.  ನನ್ನ ಶ್ರವಣ ಶಕ್ತಿಯ ಮೇಲೆ ನನಗೆ ಅಪ ನಂಬಿಕೆ ಶುರುವಾಗಿತ್ತು. ನಾನು ಮತ್ತೆ ಕಣ್ಮುಚ್ಚಿ ನನ್ನ ಅಂತರಾತ್ಮವನ್ನು ತಡಕಾಡತೊಡಗಿದೆ. ಅಲ್ಲಿರುವ ಗಾಡಾಂಧಕಾರಕ್ಕೆ  ಒಂದು ತೆಳ್ಳನೆಯ ಕಪ್ಪು ರೇಖೆಯನ್ನು ಕೆಳಕ್ಕೆ ಹಾಕಿದೆ. ಆದರೆ ನನಗೆ ಯಾವುದೇ ಶಬ್ದ ಕೇಳಿಸಲಿಲ್ಲ. ಪ್ರತಿಧ್ವನಿ ಕೂಡ.
ನಾನು ಕೈಯತ್ತ ದೃಷ್ಟಿ ಹಾಯಿಸಿದಾಗಲೇ ನಾನು ಗಡಿಯಾರ ಕಟ್ಟಿಕೊಂಡಿಲ್ಲವೆಂದು ಅರಿವಾಗಿದ್ದು.  ನಿಡುಸಿರು ಬಿಡುತ್ತ ಎರಡೂ ಕೈಯನ್ನು ಜೇಬಿನಲ್ಲಿರಿಸಿದೆ. ನನಗೆ ಈಗ ಸಮಯದ ಪ್ರಾಮುಖ್ಯತೆ ಇರಲಿಲ್ಲ. ತಲೆಯೆತ್ತಿ ಆಕಾಶವನ್ನು ನೋಡಿದಾಗ ಮತ್ತೆ ಪೂರ್ಣ ಚಂದ್ರ ಕಾಣಿಸಿದ. ಅವನ ಹೊರ ಮೈಯನ್ನು  ಕಾಲ ತಿಂದು ಹಾಕಿತ್ತು.    ಈ ಬೆಳದಿಂಗಳು ಮನಸ್ಸಿನ ಜೊತೆಗೆ ಚೆಲ್ಲಾಟವಾಡುತ್ತದೆ ಮತ್ತು ಬೆಕ್ಕುಗಳನ್ನು ಮಾಯ ಮಾಡುತ್ತದೆ. ಬಹುಶ : ಇದೆ ಬೆಳದಿಂಗಳು ಇಜುಮಿಯನ್ನು ಮಾಯಗೊಳಿಸಿದ್ದು. ಬಹುಶ : ಅವತ್ತಿನಿಂದ ಇವತ್ತಿನವೆರೆಗೂ ನನ್ನ ಜೀವನದಲ್ಲಿ ನಡೆದ ಎಲ್ಲ ಘಟನೆಗಳು ನಾಜೂಕಿನಿಂದ ಹೆಣೆಯಲ್ಪಟ್ಟ ಪೂರ್ವ ನಿರ್ಧಾರಿತ ಬಲೆಗಳಿರಬೇಕು.    

ನಾನು ನನ್ನ ಕೈಯನ್ನು ಚಾಚಿದೆ , ಬೆರಳುಗಳನ್ನು ಎಳೆದು ಲಟ್ಟಿಗೆ ತೆಗೆದೆ.  ಹುಡುಕುವದನ್ನು ಮುಂದುವರೆಸಲೇ ಅಥವಾ ನಾನು ಎಲ್ಲಿಂದ ಬಂದೆನೋ ಅಲ್ಲಿಗೆ ವಾಪಸು ಹೋಗಲೇ ? ಇಜುಮಿ ಹೋದದ್ದು ಎಲ್ಲಿಗೆ ? ಅವಳಿಲ್ಲದೆಯೇ ಏಕಾಂಗಿಯಾಗಿ ನಾನು ಈ ದ್ವೀಪದಲ್ಲಿ ಹೇಗೆ ಬದುಕಲಿ ? ನನ್ನನ್ನು ಈ ಶಿಥಿಲವಾದ ನನ್ನನು ಹಿಡಿದಿಟ್ಟಿದ್ದು ಅವಳೇ ಅಲ್ಲವೇ .

ನಾನು ಬೆಟ್ಟ ಹತ್ತುವದನ್ನು ಮುಂದುವರೆಸಿದೆ. ಇಷ್ಟೇ ಹತ್ತಿದ್ದೇನೆ ಇನ್ನೇನು ಬೆಟ್ಟದ ತುದಿ ತಲುಪಿಯೇ ಬಿಡೋಣ. ಅಲ್ಲಿ ನಿಜವಾಗಿಯೂ ಸಂಗೀತವಿದೆಯೇ ? ಅಲ್ಲಿ ಸಂಗೀತವಿತ್ತು ಎನ್ನುವದಕ್ಕೆ ಸಣ್ಣ ಕುರುಹು ಇದ್ದರೂ ಸಾಕು , ನಾನು ಅದನ್ನು ನೋಡಲೇ ಬೇಕು.   ಐದೇ ನಿಮಿಷಗಳಲ್ಲಿ ನಾನು ಗುಡ್ಡದ ತುದಿ ತಲುಪಿದೆ. ಗುಡ್ಡದ  ಒಂದು ತುದಿಯಿಂದ ಇಳಿಜಾರು ಹಾದಿ  ಬಂದರಿಗೆ, ಸಮುದ್ರಕ್ಕೆ ಮತ್ತು ನಿದ್ರಿಸುತ್ತಿದ್ದ ಊರಿಗೆ ಚಾಚಿಕೊಂಡಿತ್ತು. ತೀರದ ದಾರಿಯುದ್ದಕ್ಕೂ ರಸ್ತೆ ದೀಪ ಉರಿಯುತ್ತಿತ್ತು. ಗುಡ್ಡದ ಇನ್ನೊಂದು ಕಡೆ ದಟ್ಟ ಕತ್ತಲು ಆವರಿಸಿತ್ತು .  ಅಲ್ಲಿ ಸಮಾರಂಭವೊಂದು ಜರುಗಿತ್ತು ಎನ್ನುವದಕ್ಕೆ ಯಾವುದೇ ಕುರುಹುಗಳಿರಲಿಲ್ಲ.

ನಾನು ಮರಳಿ ಕಾಟೇಜಿಗೆ  ಬಂದು  ಒಂದು ಗ್ಲಾಸಿಗೆ ಬ್ರಾಂಡಿ  ಸುರುವಿಕೊಂಡೆ.  ನಿದ್ರಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬೆಳಗಿನ ಜಾಮದವರೆಗೂ ಬೆಳದಿಂಗಳು ನನ್ನನ್ನು ಕಾಡುತ್ತಿತ್ತು. ಆಗ ಇದ್ದಕ್ಕಿದ್ದ ಹಾಗೆ ನನಗೆ ಹಸಿವಿನಿಂದ ತತ್ತರಿಸುತ್ತ , ಅಪಾರ್ಟ್ ಮೆ೦ಟಿನಲ್ಲಿ ಸಿಕ್ಕಿ ಬಿದ್ದಿದ್ದ ಆ  ಬೆಕ್ಕುಗಳ ನೆನಪಾಯಿತು. ನಾನು - ನಿಜವಾದ ನಾನು ಸತ್ತುಹೋಗಿದ್ದೆ ಮತ್ತು ಆ ಬೆಕ್ಕುಗಳು ಜೀವಂತವಾಗಿದ್ದವು - ನನ್ನ ಹೃದಯವನ್ನು ತಿನ್ನುತ್ತ ,  ಮಾಂಸವನ್ನು ತಿನ್ನುತ್ತ ,  ರಕ್ತವನ್ನು ಕುಡಿಯುತ್ತ. ದೂರದಲ್ಲಿ ಅವು ನನ್ನ ಮೆದುಳಿಗೆ ಬಾಯಿ ಹಾಕಿ ಅಗಿಯುವ ಶಬ್ದ ಕೇಳಿಸುತ್ತಿತ್ತು. ಮ್ಯಾಕ್ ಬೆತ್ ನಾಟಕದಲ್ಲಿನ ಮಾಟಗಾತಿಯರ ಹಾಗೆ ಆ ಮೂರೂ ಬೆಕ್ಕುಗಳು ನನ್ನನ್ನು ಸುತ್ತುವರೆದು , ನನ್ನ ತಲೆಗೆ ಬಾಯಿ ಹಾಕಿ ಮೆದುಳನ್ನು ಅಗಿಯುತ್ತಿದ್ದವು. ಅವುಗಳ ಒರಟು ನಾಲಿಗೆ ನನ್ನ ಮೃದು ಮನಸ್ಸನ್ನು ನೆಕ್ಕುತ್ತಿದ್ದವು ಮತ್ತು ಪ್ರತಿ ಬಾರಿ ನೆಕ್ಕಿದಾಗಲೂ ನನ್ನ ಅಂತರಾತ್ಮ ದೀಪದ ಹಾಗೆ ಕಂಪಿಸುತ್ತಿತ್ತು ಮತ್ತು  ಮಾಸಿ ಹೋಗುತ್ತಿತ್ತು. 


ಮೂಲ ಕಥೆ : ಮ್ಯಾನ್ ಈಟಿಂಗ್ ಕ್ಯಾಟ್

ಲೇಖಕರು : ಹರುಕಿ ಮುರಕಮಿ  

ಲೇಖಕರ ಪರಿಚಯ : ಜಪಾನಿ ಕಥೆಗಾರ ಹರುಕಿ ಮುರಕಮಿ ಜನಿಸಿದ್ದು ೧೯೪೯  ರ ಜನವರಿ ೧೨ ರಂದು ಜಪಾನಿನ ಕ್ಯೋಟೋದಲ್ಲಿ. ಅವರ ಕತೆಗಳು ಜಗತ್ತಿನ ೫೦ಕ್ಕೂ ಹೆಚ್ಚು ಭಾಷೆಗೆ ಅನುವಾದಗೊಂಡಿವೆ.  ಸಂಗೀತದ ಬಗ್ಗೆ ಅಪಾರ ಒಲವು ಹೊಂದಿರುವ ಮುರಕಮಿಯ ಕತೆಗಳಲ್ಲಿ ಏಕಾಂತದ ದಟ್ಟ  ಪಾತ್ರ ಚಿತ್ರಣಗಳನ್ನು , ಸಾಮಾನ್ಯತೆಯಿಂದ ಅಸಾಮಾನ್ಯತೆಗೆ ಸಾವಕಾಶವಾಗಿ ಜರುಗುವ ಘಟನೆಗಳನ್ನು ಕಾಣಬಹುದು. ,ಮ್ಯಾರಥಾನ್ ಓಟಗಾರರೂ ಆಗಿರುವ ಅವರಿಗೆ ವರ್ಲ್ಡ್ ಫ್ಯಾ೦ಟಸಿ ಪ್ರಶಸ್ತಿ , ಕಾಫ್ಕ ಪ್ರಶಸ್ತಿ , ಜೆರುಸಲೇಮ್ ಪ್ರಶಸ್ತಿ ಮುಂತಾದವು ಸಂದಿವೆ.